01558. ಬಾ ಸಂಕ್ರಮಣಕೆ


01558. ಬಾ ಸಂಕ್ರಮಣಕೆ

___________________________

ಸಂಕ್ರಾತಿ ಹೊಸಿಲಲಿ

ಸಂಭ್ರಮವ ಚೆಲ್ಲಿ

ಎಳ್ಳು ಬೆಲ್ಲವ ಬೀರೆ

ನೀ ಬರುವೆಯೇನೆ ? ||

ಚುಮುಗುಟ್ಟೊ ಚಳಿಯಲಿ

ಬೆಚ್ಚಗಾಗಿಸೆ ದಿನಗಳ

ಬರುವಂತೆ ಆ ದಿನಕರ

ಹೊಂಬಿಸಿಲಾಗಿ ಬರುವೆಯಾ? ||

ಭಾವಗಳ ಸಂಭ್ರಮಕೆ ಜತೆ

ಹಬ್ಬದುಡುಗೆಯ ಮೋಡಿ

ತೊಟ್ಟೊಡವೆ ನಕ್ಕ ಮೊಡವೆ

ನಕ್ಕು ಬಂದಪ್ಪುವೆಯ ಮನಸಾ ? ||

ಕಬ್ಬಿನ ಸಿಹಿ ತುಟಿ ಮಾತಲಿಟ್ಟು

ಕಣ್ಣೋಟ ಬಡಿಸುತಲಿ ಪ್ರಳಯ

ಉಣಿಸಿರಲೇನೊ ಮತ್ತು ತಲ್ಲೀನ

ವಿಲೀನದಲಾಗುತ ಅಂತರ್ಧಾನ !? ||

ಬಾ, ಒಳ್ಳೊಳ್ಳೆ ಮಾತಾಡಲಿದೆ ತಿಂದು

ನೀನೆ ಎಳ್ಳು ನೀನೆ ಬೆಲ್ಲ ಎಲ್ಲವು ನೀನೆ

ತಬ್ಬಿಬ್ಬಾಗಿಸದೆ ಸಂಕ್ರಮಣದೆ ಪರಸ್ಪರ

ಮಿಂದು ಮನ ಸಂಗಮಿಸಲದೆ ಸಂಕ್ರಾಂತಿ ||

– ನಾಗೇಶ ಮೈಸೂರು

೧೩.೦೧.೨೦೧೮

(Picture source : hallikatte.com)