02164. ಸರಳವಿರು ಸಾಕು..


02164. ಸರಳವಿರು ಸಾಕು..

______________________________

ಯಾಕೆ ಮೆಚ್ಚಿಸುವ ಹಂಬಲ ನಿನಗೆ ?

ಬಿಡು ನಿನ್ನ ಸರಳತೆಯೆ ಸಾಕೇ ನನಗೆ

ಯಾಕೆ ಬಳಲುವೆ? ತೊಳಲುವೆ ಉಡುತ ?

ತರತರ ದಿರುಸು ಒಡವೆ ವಸ್ತ್ರ ವೈಭವ.

ನಿಜ ನಿನ್ನ ಹೊನ್ನಿನ ಮೈಬಣ್ಣದ ಬೆರಗಿಗೆ

ಮೆರುಗು ಮಿನುಗು ಸಿಂಗರಿಸೆ ಸೊಬಗು

ಸೌಂದರ್ಯದ ರಂಗು ತೊಗಲಿನಾಳವಷ್ಟೆ

ಮನದಾಳ ಸ್ವಚ್ಚವಿರೆ ಮಿಕ್ಕೆಲ್ಲವು ನಗಣ್ಯವೆ..

ನಿಕೃಷ್ಟವಲ್ಲ ಅಲ್ಲ ನಿರಾಸಕ್ತಿಯೂ ನಿನ್ನಲಿ

ನಿರಾಭರಣ ಸುಗುಣ ಸುಂದರಮನ ನೆಚ್ಚು

ನೀನರಿಯುತಿರೆ ನನ್ನ ಅರಿವಾಗಿಸುತ ನಿನ್ನ

ಸರಳ ಹಂಬಲಿಕೆ, ಅವಲಂಬಿಸುತಿರೆ ಸಾಕೆ..

ಅಹುದು ತೋರಿಕೆಯ ಜಗದ ಬದುಕಿದು

ಬೇಕವರ ನೋಟ ತಣಿವಷ್ಟು ಅಡಂಬರ

ಹೊರಟರೆ ಜಗವ ಮೆಚ್ಚಿಸುವ ಜಾತ್ರೆಗೆ

ನನ್ನಾಣೆ ಯಾತ್ರೆ ಮುಗಿಯದೀ ಜನ್ಮದಲಿ..

ನಿನಗಾಗಿ ಬದುಕು ನಿನ್ನ ಮೆಚ್ಚಿಸು ಸಾಕು

ನಮಗಾಗಿ ಬದುಕು ನಾವಷ್ಟೇ ಮೆಚ್ಚಬೇಕು

ಬಿಡು ಮಿಕ್ಕವರ ಚಿಂತೆ ಬಿಡುವಿಲ್ಲದ ಸಂತೆ

ನನಗಂತೂ ಸಾಕು ನೀನಿರುವಂತೆ ಸಹಜ..

– ನಾಗೇಶ ಮೈಸೂರು

(Picture source: internet / social media)