01603. ಕಪ್ಪು ಬಿಳಿ, ತಪ್ಪು ಸರಿ…


01603. ಕಪ್ಪು ಬಿಳಿ, ತಪ್ಪು ಸರಿ…

___________________________

ಕಪ್ಪು ಕೃಷ್ಣಕೆ ರಾಧಿಕೆ ಹಂಬಲ

ಮಜ್ಜನಗೈದು ಹುಣ್ಣಿಮೆಯಾಗೆ

ಸಜ್ಜನ ಸಾಧು ಮನದ ವಿಚಾರ

ಬಿತ್ತರ ಜಗಕೆ ಹೊರಗಣ ನೋಟ ||

ಕಸ್ತೂರಿ ಘಮಘಮ ತನದೆಂದು

ಪಸರಿತ ಲೀಲೆಗಳಾಗಿಸಿ ಚಂದ

ಗೌರವ ತಂದಿಕ್ಕಿ ಗೌರಿಯ ಹೆಣ್ಣು

ಗೌರವೆ ಮೆಟ್ಟಿಲು ತೆರೆಸೆ ಒಳಗಣ್ಣು ||

ತನದೆನಲಿಲ್ಲ ತನದಲ್ಲವೆನಲಿಲ್ಲ

ತಲ್ಲೀನತೆಯವಳ ಜಗ ಮೊಗೆದ

ಅವನಾದ ಕಡು ವಾಸ್ತವ ಕಪ್ಪಾಗಿ

ಅವಳುದ್ದೇಪನ ಲೇಪನ ಹೊಳಪು ||

ಗರಿಯುಟ್ಟ ಕೊಳಲಿತ್ತ ಗಾನ ರಮ್ಯ

ಗಾಯನ ನಾಟ್ಯ ಮೋದಾಮೋದ

ಮರೆಸಿ ಜಗವ ತನ್ನೊಬ್ಬನನಿರಿಸುತ

ಕಪ್ಪುಸೀರೆ ರಾರಾಜಿಸೆ ಬಿಳಿಯಂಚು ||

ಕಪ್ಪಿನ ತಪ್ಪೆಲ್ಲ ಬಿಳಿಯಲಿ ಕರಗುತ

ಬಿಳಿಯ ತಪ್ಪು ಒಪ್ಪು ಕಪ್ಪಲಿ ಲೀನ

ಸಂತೃಪ್ತಿ ಮರೀಚಿಕೆ ಬೆನ್ನಟ್ಟೆ ಐಹಿಕ

ಮಾಯಾಜಿಂಕೆ ಹಿಂದೆಮ್ಮ ಪಯಣ ||

– ನಾಗೇಶ ಮೈಸೂರು

೧೫.೦೨.೨೦೧೮

(Nagesha Mn)

(Picture source : Internet / social media received via FB friends – thank you 🙏👍😊)

02126. ಬಂದೆಯೋ ಸರಿ…!


02126. ಬಂದೆಯೋ ಸರಿ…!
_____________________


ಶ್ರಾವಣ..
ದಣಿವಾರಿಸಿಕೊಳ್ಳೋಣ ಬಾ..
ಆಷಾಢಕೆ ಹೋದವಳು ನೀ
ಹೊರಡು, ಹಿಂತಿರುಗೀಗ ;
ವರ್ಷ ವರ್ಷ ತವರಿನ ನೆಪ
ತುಂತುರೇ ಸಾಕು, ಬಂದುಬಿಡು.

ಬೇಡ ಶ್ರಾವಣದ ಭೋರ್ಗರೆತ
ಸುರಿದಾಗುವುದೆಲ್ಲ ವ್ಯರ್ಥ;
ಏಕಾಂತದ ಮಬ್ಬಿನಲಿ ಸ್ಖಲಿಸಿ
ಅವಿರತ ಮಳೆಯಾದಾಗ –
ಜತೆಗಿರಬೇಕು ನೀ ಜೀಕುತ
ಪ್ರೇಮದುಯ್ಯಾಲೆ ಸಂಗೀತ.

ಅಲ್ಲೇನು ಅಪ್ಪಾಲೆ ತಿಪ್ಪಾಲೆ ?
ಇಲ್ಲಿ ಕೆಸರ ರಾಡಿ ಎರಚಲು..
ನೆನೆನೆನೆದು ಹಬೆಯಾಡುವ ಒಡಲು
ಕುದಿಸುತಿದೆ ಕಾಫಿಗೆ ಎಸರಿಟ್ಟು..!
ಬರುವೆಯೋ ಬಾರೆಯೋ ಮತ್ತದೇ
ಅನುಮಾನಗಳ ದೀಪಾವಳಿ ಪಟಾಕಿ..

ಬಂದುಬಿಡು ಮುಗಿಲುದರ ಒಡೆಯುತಿದೆ
ಮನದ ಮೋಡ ಸ್ಪೋಟವಾಗುವ ಖಚಿತ
ವಲ್ಲಿಯ ಮುಗಿಲ ತುಂಬಾ ಕಾಣದ ಬಿಳಿ ಚಿಕ್ಕೆ
ಮಲ್ಲಿಗೆಯ ನೆನಪಾಗಿಸಿದೆ ನಿನ್ನ ನಗೆ
ನಂಚಿಕೊಳ್ಳಲಿದೆ ನಿನ್ನೊಡನೆ ಶ್ರಾವಣ
ಹಂಚಿಕೊಳ್ಳಲಿದೆ ಕಾಮನ ಮನ್ಮಥಬಾಣ !

ಯಾವ ಶ್ರಾವಣ ಬಿಡು ನೀನಿಲ್ಲದೆ
ಧುಮ್ಮಿಕ್ಕಲವಳು ಹೊರಜಗದೇ,
ನೀ ಕುಣಿದಾಡು ಬಾ ನನ್ನೆದೆ ರಂಗಮಂಚದೆ..
ತಣಿಸಲವಳು ಮಳೆಯಾಗಿ ಇಳೆ
ತಣಿಸುವೆ ನಿನ್ನ ಶ್ರಾವಣ ನಾನಾಗಿ
ನೀರುಣಿಸುವೆ ದಾಹ ತೀರಿಸಿ ಫಸಲಾಗಿಸಿ..

– ನಾಗೇಶ ಮೈಸೂರು
೨೪.೦೭.೨೦೧೭

(Picture source: internet / social media)

01166. ಐದು – ಆರು – ಸ್ವರ್ಣ – ಸರಿ


01166. ಐದು – ಆರು – ಸ್ವರ್ಣ – ಸರಿ


ಮುತ್ತೈದೆ ಭಾಗ್ಯಗಳಂತೆ ಐದು
ಗಂಡೊಂದು ಹೆಣ್ಣಾಗುವ ಆರು
ಐದಾರರ ಭಾಗ್ಯಕೆ ಸ್ವರ್ಣ ಗೌರಿಗೆ
ಸರಿ ಪೂಜಿಸೆ ಕಾಯ್ವಳಂತೆ ಬಿಡದೆ !

– ನಾಗೇಶ ಮೈಸೂರು
೦೫.೦೩.೨೦೧೭
(Picture : internet / social media)
#chouchoupadi

01008. ಕಾಡುವ ಪರಿ, ನೋಡುವ ಸರಿ


01008. ಕಾಡುವ ಪರಿ, ನೋಡುವ ಸರಿ
_______________________________


ದುರಿತ ಮಕ್ಕಳ ಸೈನ್ಯ
ಕಷ್ಟ ಕಾರ್ಪಣ್ಯ ಕಾಲಾಳು
ಚಂಡಿ ಚಾಮುಂಡಿ ಅವತಾರ
ಬಂಡಿ ಬಂಡಿ ತುಂಬಾ ಗೋಳು

ಬಾಳ ಬವಣೆ ಸಂತಾನ
ದಶ ದಿಕ್ಕುಗಳ ಶರವರ್ಷ
ಕ್ಷಣಗಣನೆಯೊಳಗತಿಕ್ರಮಣ
ಶಸ್ತಾಸ್ತ್ರ ಶಾಸ್ತ್ರಗಳೆಲ್ಲ ನಿಷ್ಕ್ರೀಯ

ಜಲ ಕಂಡೊಡೆ ಹುಸಿಬಿಂಬ
ನೆಲವೆಂದಿತ್ತೆಡೆ ಹೆಜ್ಜೆ ಕುಸಿತ
ಮಾರುತ ಧಾಳಿ ಅಸಹನೀಯ
ಭರಿಸಲೆಂತೋ ನಿತ್ಯ ಜಯಾಪಜಯ

ಎತ್ತ ನೋಡಿದರತ್ತ ದಿಗ್ಭ್ರಮೆ
ಅನಿರೀಕ್ಷಿತಗಳ ಸುರಿಮಳೆ
ಕಾದು ಕಾದೂ ಸೋತ ತೋಳು
ಶರಣಾಗಿ ಕುಸಿವ ಗಳಿಗೆ ಸನ್ನಿಹಿತ..

ತಳ ಕುಸಿದ ಮೇಲಿನ್ನೇನು ?
ತಲುಪಿದಾಳ ತಲಾತಲ
ಮಿಕ್ಕುಳಿದುದೆಲ್ಲ ಊರ್ಧ್ವಕೆ
ಪಯಣಿಸಲೇಬೇಕು ಕಂಗೆಡದಿರು..

– ನಾಗೇಶ ಮೈಸೂರು
(Picture from Creative Commons )
22.11.2016

00740. ಎಲೇಲಿ ಸಿಕ್ಕಿದ್ದು ನೊಣದ ಹೆಣಾ..


00740. ಎಲೇಲಿ ಸಿಕ್ಕಿದ್ದು ನೊಣದ ಹೆಣಾ..
_________________________________

ನಿಮ್ಮೆಲೆಲಿ ನೊಣ ಸತ್ತು ಬಿದ್ದಿದ್ರೆ ನೀವೇನು ಮಾಡ್ತೀರಾ ? ಆ ನೊಣ ನೈತಿಕತೆ, ನಿಸ್ವಾರ್ಥ, ಪಾಪ, ಪುಣ್ಯ ಅಂತೆಲ್ಲಾ ಅಂತ ಬೋರ್ಡ್ ಹಾಕ್ಕೊಂಡ್ ಬಿದ್ದಿದ್ರೆ ಏನ್ ಮಾಡ್ತೀರಾ ?

ಹೆಣ ಬಿದೈತ್ರಿ ಎಲೆಯಾಗೆ
ನೊಣದ ಹೆಣ ಬಿದ್ದೈತೆ ಸತ್ತು..

ನೋಟು ಚಿಲ್ಲರೆ ಕಾಸು ಚೆಲ್ಲಿ
ಬಡಿಸಿದಡಿಗೆ ಗಮ ಗಮ
ಉಣ್ಣೊದೆಂಗ್ರಿ ಬಾಯ್ನೀರು
ನೊಣದ ಹೆಣ ಬಿದ್ದಾ ಮೂಲೆ..

ಹೋಟಲ್ನಾಗೆ ಆಗಿದ್ರೆ ಸುಮ್ನೆ
ಮುಖಕ್ಕೊಡದಂಗೆ ಬಿಸಾಡ್ಬೋದಿತ್ತು
ಕರ್ದೂಟ ಹಾಕಿದ್ರೂನು
ಪಕ್ಕದ ಎಲೆಗೆ ಹಾರ್ಕೋಬೋದಿತ್ತು
ಹಾಳು, ನಾನೇ ಮಾಡಿದ ಅಡಿಗೆ
ಸಾರಿಗ್ಯಾಕೆ ಹಾರ್ಕೊಂಡಿತ್ತು ಮುಂಡೇದು..

ಬಾಡೂಟ ಬಾವಣಿಕೆ ಹಂದಿ
ಹೊಡೆದ ಮಾಂಸದ ಪಾಲು ಕಡಿದು
ಕರ್ದು ಹುರ್ದ ಸಾಂಬಾರದ ಗಮ
ನೀರೂರಿಸಿಕೊಂಡು ಬಾಯಲಿ ಹಸಿದು
ಎಲೆಗಾಕೋ ಹೊತ್ತಲ್ಲಿ ಎಲ್ಲಿತ್ತೋ ಹಾಳ್ನೊಣ
ಹಂದಿಗಂಟಿತ್ತೊ, ವಾಸ್ನೆ ಹಿಡ್ಕೊಂಡ್ಬಂದಿತ್ತೊ..

ಹಂದಿ ನೊಣ ಎರ್ಡೂ ಮಾಂಸದ ಮುದ್ದೆ
ಕಣ್ಮುಚ್ಕೊಂಡು ತಿಂದೇಳಲೆ ಅಂತು ಮನ್ಸು
ತಿನ್ನೊದೆಂಗೆ ನೊಣ ಬಿದ್ದ ಸಾರು ?
ತಡ್ದಿತ್ತ ಏನೋ ಕೈ ಹಿಡ್ದಂಗೆ
ಕ್ಷುಲ್ಲಕ ನೊಣ ಕ್ಷುದ್ರ ಹೋಗ್ ತಟ್ಟಿಯಿಂದಾಚ್ಗೆ
ಎತ್ತೆಸ್ದು ಕೂತ್ಕೊಂಡಿದ್ದೆ ಆದ್ರೂ ತಪಸ್ಸು ಮನಸ್ನಾಗೆ..

ಲೆಕ್ಕಾಚಾರ ಹಾಕ್ತಾ ಕೂತಿತ್ತು ಜೋಬು
ವಾರಕ್ಕಾಗೋ ಸಾರು ಬಾಡೂಟ ಜಬರ್ದಸ್ತು
ಮೂರ್ಕಾಸಿನ ನೊಣ ಬಿದ್ರೆ ಎಸ್ಯೋದುಂಟಾ ಶಿವನೆ ?
ತಿನ್ನೋ ಜನಕೆಲ್ಲಾನು ಒಂದೆ ಅಲ್ವಾ ಎಲ್ಲಾ ?
ಎತ್ತೆಸ್ಯೋ ನೊಣ ಮನಸಿಂದ ಬಸ್ಯಾ
ಕುದಿಸಿರೊ ಸಾಂಬಾರ್ಲಿರಲ್ಲ ರಾಗ ದ್ವೇಸಾ ದೋಷಾ..

ಪೇಪರ್ ಚೂರ್ನಾಗೆತ್ತಿ ನೊಣದಾ ಹೆಣವಾ
ಅಂಗಳ್ದಾಚೆಗೆಸ್ದೆ ಹಂಗೆ ಮಣ್ಮಾಡ್ಬಂದೆ
ಕಂಕ್ಳಲ್ಲಿತ್ತಲ್ಲ ಪಾಕೀಟು ತೆಗ್ದು ಬುಟ್ಕೊಂಡೆ ಕಣಣ್ಣ
ತೇಗೊ ಬಾಡೂಟ ಗಡದ್ದು, ಯಾವ್ನೊಣ, ಯಾರ್ಹೆಣ ?

ಹೆಣಗಳು ಬಿದ್ದಿರ್ತಾವ್ರಿ ಮನದಾಗೆ, ಮನೆಯಾಗೆ
ಎತ್ತೆಸೆದು ಉಣ್ತಾರೆ ಮಂದಿ, ಇದು ತುಟ್ಟಿ ಕಾಲ..

– ನಾಗೇಶ ಮೈಸೂರು

(Picture source: http://www.freepik.com)

00626. ಮುನಿಸಿನ ಮಹತಿ, ಮಿಡಿದಾ ಗೆಳತಿ…


00626. ಮುನಿಸಿನ ಮಹತಿ, ಮಿಡಿದಾ ಗೆಳತಿ…
______________________________

(Poem for 3k picture poem – 35) 
(Picture from 3K – https://www.facebook.com/photo.php?fbid=10209407274363249&set=gm.1689965874596227&type=3)
ಯಾಕೋ ಮೂತಿ ತಿರುವೀ ಕೂತಾ
ಗಣಿತ, ನಿಮಗೇನಾದರು ಗೊತ್ತಾ ?
ಗೋಣಾಡಿಸೊ ರಾಜಕೀಯ ಗಹನ
ಪ್ರೀತಿ ಪ್ರೇಮ ಪ್ರಣಯ ನಾನಾ ಕಾರಣ !

ಒಪ್ಪಬೇಕಂತವನ ರಾಜಾ, ಸರಿ ಮಾತು
ಆಗೆಬಿಡಲೆಂತೊ, ಬಹು ಪತ್ನೀ ವಲ್ಲಭಾ ?
ಪಟ್ಟದ ರಾಣಿಯ ಅಟ್ಟ ಕೊಟ್ಟರೇನು ಬಂತು
ಎತ್ತರ ಕೊಂಬೆ ಒಂಟಿ ಬದುಕು ಬದುಕೇನು ?

ಯಾರಿಗೆ ಬೇಕು ಬಿಡು, ಅಟ್ಟದ ಮೇಲ್ಗೂಡು
ಅಟ್ಟಣಿಗೆಯಲಿಟ್ಟು ಕಟ್ಟಿ ಹಾಕಿ ಕೈ ಕಾಲು
ಹೊಡೆದಾದರು ಹುಳು ಹುಪ್ಪಟೆ ಒಂದೆ ತಟ್ಟೆ
ಹಂಚಿ ತಿಂದರೂ ಸರಿ, ಇನ್ನೊಬ್ಬಳೆಂದರೆ ಕೆಟ್ಟೆ !

ಅಂತಃಪುರ ಜನ ಜನಾನ – ಬೇಡದ ತಾಣ
ಹುಡುಕುವೆ ಏಕಾಂತ ರಾಜಕಾರ್ಯ ಬಿಡ
ಹುಣ್ಣಿಮೆ ಹೋಳಿಗೆಗೊಮ್ಮೆ ಜತೆಯಾಗಿದ್ದು
ಪಕ್ಕದಲಿದ್ದು ದೂರ, ಯಾಕೆ ಬೇಕೋ ದರ್ದು ?

ನೋಡೀ ದೂರದ ಅಂತರ ಗುಟ್ಟಲೆ ಕತ್ತು
ತಿರುವಿದ ಹೊತ್ತಲಿ ಕಣ್ಣು ಕಣ್ಣು ಮಾತಾಗೆ
ಮುನಿಸೆಲ್ಲ ಸೊರಗಿ ಕಲ್ಲು ಕರಗೊ ಹೊತ್ತು
ಹಠಬಿಟ್ಟು ಬಾ ಜಾಣ ಸುಮ್ಮನೆ ಬಿಟ್ಟು ಕ್ಯಾಣ !

– ನಾಗೇಶ ಮೈಸೂರು

00625. ನಾ ಸರಿ, ನೀ ಸರಿ..


00625. ನಾ ಸರಿ, ನೀ ಸರಿ..
__________________________
  
(Picture source: http://www.gp-training.net/training/communication_skills/ta/lifeposi.gif)

ನಾನು ಸರಿ, ನೀನು ಸರಿ
ಇಬ್ಬರು ಸರಿ ಸರಾಸರಿ
ಇರದಿದ್ದರೆ ದೂರ ದುಬಾರಿ
ದೂರ ಸರಿವುದೆ ಸರಿ ದಾರಿ ! ||

ನೀನಿಲ್ಲ ಸರಿ, ನಾನಿಲ್ಲ ಸರಿ
ಸರಿ..ಸರಿ ಆಕ್ರಂದನ ಭಾರಿ
ಕಂದನ ಅಸಹಾಯಕತೆ ಪರಿ
ಹುಟ್ಟಿದ ಗಳಿಗೆಯ ಸವಾರಿ.. ||

ನಾನಿಲ್ಲ ಸರಿ, ನೀವೆಲ್ಲ ಸರಿ
ಪಾರ್ಕು ಸಿನೆಮ ಎಲ್ಲೋ ಹೊರಟಿರಿ
ಹುಡುಕಿ ನನ್ನಿಲ್ಲೇ ಬಿಟ್ಟೋಗುವ ದಾರಿ
ಅಲ್ಲಾ, ಬೆಳೆಯುವುದೇಕಿಷ್ಟು ದುಬಾರಿ ? ||

ನೀವಿಲ್ಲ ಸರಿ, ನನದೇ ಸರಿ !
ಸರಿಯಿರಿ ಬಿಟ್ಟು ನನ್ನಾ ದಾರಿ
ನನ್ನ ಮೀಸೆ ನನ್ನ ದೇಶ ಕಾಣಿರಿ
ನಾನರಿತೆ ಸತ್ಯ ರೋಮ ನಿಮಿರಿ.. ||

ನನದೂ ಸರಿ, ನಿಮದೂ ಸರಿ
ಜ್ಞಾನೋದಯವಾಗೇ ಕುದುರಿ
ತಲುಪೆ ಬುದ್ಧ ಅಪಕ್ವತೆ ಮೀರಿ
ತಲುಪರೆಲ್ಲ ಬದುಕೇ ಪರಾರಿ..! ||

– ನಾಗೇಶ ಮೈಸೂರು
(೨೯.ಮಾರ್ಚ್.೨೦೧೬)

(ಸೂಚನೆ: ವ್ಯಕ್ತಿತ್ವ ವಿಕಸನ ತತ್ವದ ‘ಟ್ರಾನ್ಸ್ಯಾಕ್ಷನ್ ಅನಾಲಿಸಿಸ್’ನಲ್ಲಿ ಬರುವ ‘ಐ ಯಂ ಓಕೆ ಯು ಆರ್ ಓಕೆ’ ಸೈದ್ದಾಂತಿಕ ಹಿನ್ನಲೆಯಲ್ಲಿ ಓದಿ)