01499. ಕವಿತೆ ಇದ್ದರೆ ಸಾಕು..


01499. ಕವಿತೆ ಇದ್ದರೆ ಸಾಕು..

_____________________________

ಕವಿತೆ ಇದ್ದರೆ ಸಾಕು

ಕವಿಗಿನ್ನೇನು ಬೇಕು ?

ಧಾರಾಕಾರ ಕವಿತೆಗಳು

ಕವಿ ತೆಗಳ ಓದದಿದ್ದರು ! ||

ಕವಿತೆ ಅವಳಿದ್ದರೆ ಸಾಕು

ಕವಿಗಿನ್ನೇನು ಜತೆ ಬೇಕು ?

ಮನಭಾವದ ಮಿಲನೋತ್ಸವ

ಶಿಶುವಿನಂತೆ ಪ್ರಸವ ಕಾವ್ಯ ||

ಕವಿತೆ ಕವಿಯುಟ್ಟಂತೆ ಸೀರೆ

ಹೊಕ್ಕವಳೊಳಗಾಗುವ ತದ್ಭವ

ತಂಗಾಳಿ ಸೆರಗು ಮುಂಗುರುಳಲೆ

ಜೊಂಪೆ ಜೊಂಪೆ ತತ್ಸಮ ಕವಿತೆ ||

ಕ’ವಿ’ತೆಯೊಳಗವಿತಿಹನೆ ಕತೆ

ನಡು ‘ವಿ’ಸ್ಮಯ ಹೊರದೂಡೆ

ಕತೆಯಾಗಲಲ್ಲಿ ಕವಿ ನಿರುಪಾಯ

ವಿದಾಯ ಗೀತೆ ಬರೆವಾ ಸಮಯ ||

ಕವಿತೆ ಲೋಕದ ಕನ್ನಡಿ

ಬಿಚ್ಚಿಡೆ ನೈಜ ಕಲ್ಪನೆ ಲಹರಿ

ತನ್ನಂದ ತಾನೆ ಕಾಣದ ನೀರೆ

ಚಂದ ಕವಿತೆ ಕಾಣದು ತನ್ನನ್ನೆ ||

ಕವಿಗಿಲ್ಲ ಸುಖ ದುಃಖ

ಭಾವನೆ ಪುಂಖಾನುಪುಂಖ

ಸಂಭಾವನೆ ಆಸ್ವಾದಿಸೆ ಘನತೆ

ಅಭಾವದಲು ಸೃಜಿಸುವ ಕವಿತೆ ||

– ನಾಗೇಶ ಮೈಸೂರು

(Nagesha Mn)

(Picture source : Internet / social media / Creative Commons)

01460. ಸಾಕಪ್ಪ ಸಾಕು ಅಡಿಗೆ


01460. ಸಾಕಪ್ಪ ಸಾಕು ಅಡಿಗೆ
_______________________


ಅಡಿಗೆ ಅಡಿಗೆ ಅಡಿಗೆ
ಮಾಡಬೇಕು ಅಡಿಗಡಿಗೆ
ಸಿಕ್ಕಿದರೆ ಕಂಡು ಹಿಡಿದವನ
ಮಾಡಬೇಕು ಸಾಷ್ಟಾಂಗ ನಮನ ||

ಬೆಳಗೆದ್ದು ಬಿಸಿ ಪೇಯ
ಬೇಕೆಲ್ಲರಿಗು ಮಹನೀಯ
ಇದ್ದರೇನು ಚಳಿಮಳೆಬಿಸಿಲು
ತಿಂಡಿ ಜತೆ ಮತ್ತೊಮ್ಮೆ ಫಸಲು ||

ಸಾಲಾಗಿ ಮನೆ ಮಂದಿ
ಮಾಡಿ ಹಂಚಬೇಕು ಬುದ್ಧಿ
ಮಾಡಿದ್ದು ಮುಗಿವ ಮೊದಲೆ
ತಿನ್ನದಿರೆ ಉಪವಾಸದ ಕೋಟಲೆ ||

ಮುಗಿಯಿತಪ್ಪ ಉಸ್ಸಪ್ಪ
ಸರಿ ಪಾತ್ರೆ ತೊಳೆದೆತ್ತಿಟ್ಟಪ್ಪ
ಉಸಿರಾಡಲಿಲ್ಲವೆ ಪುರುಸೊತ್ತು
ಮಧ್ಯಾಹ್ನದಡಿಗೆ ಊಟದ ಹೊತ್ತು ! ||

ಮತ್ತದೆ ಹಳೆ ರಾಮಾಯಣ
ಸಾಯಂಕಾಲ ಚಹಾಪುರಾಣ
ರಾತ್ರಿಯಡಿಗೆ ಮಾಡಲೇನ ಶಿವನೆ
ನಿಂತು ಪಾತ್ರೆ ತೊಳೆದು ಬೆನ್ನಿನ ಬೇನೆ ||

ಸಾಲದ್ದಕ್ಕೆ ಟೀವಿ ಪುರಾಣ
ಅಕ್ಕಪಕ್ಕ ಗುಸುಗುಟ್ಟೊ ಧ್ಯಾನ
ಮಡಿ ಮಜ್ಜನ ಪೂಜೆ ಪುನಸ್ಕಾರ
ಸಾಕಪ್ಪಾ ಸಾಕು ಹಾಳು ಸಂಸಾರ ||


– ನಾಗೇಶ ಮೈಸೂರು
(Nagesha Mn)

(Picture source : internet / social media)

02164. ಸರಳವಿರು ಸಾಕು..


02164. ಸರಳವಿರು ಸಾಕು..

______________________________

ಯಾಕೆ ಮೆಚ್ಚಿಸುವ ಹಂಬಲ ನಿನಗೆ ?

ಬಿಡು ನಿನ್ನ ಸರಳತೆಯೆ ಸಾಕೇ ನನಗೆ

ಯಾಕೆ ಬಳಲುವೆ? ತೊಳಲುವೆ ಉಡುತ ?

ತರತರ ದಿರುಸು ಒಡವೆ ವಸ್ತ್ರ ವೈಭವ.

ನಿಜ ನಿನ್ನ ಹೊನ್ನಿನ ಮೈಬಣ್ಣದ ಬೆರಗಿಗೆ

ಮೆರುಗು ಮಿನುಗು ಸಿಂಗರಿಸೆ ಸೊಬಗು

ಸೌಂದರ್ಯದ ರಂಗು ತೊಗಲಿನಾಳವಷ್ಟೆ

ಮನದಾಳ ಸ್ವಚ್ಚವಿರೆ ಮಿಕ್ಕೆಲ್ಲವು ನಗಣ್ಯವೆ..

ನಿಕೃಷ್ಟವಲ್ಲ ಅಲ್ಲ ನಿರಾಸಕ್ತಿಯೂ ನಿನ್ನಲಿ

ನಿರಾಭರಣ ಸುಗುಣ ಸುಂದರಮನ ನೆಚ್ಚು

ನೀನರಿಯುತಿರೆ ನನ್ನ ಅರಿವಾಗಿಸುತ ನಿನ್ನ

ಸರಳ ಹಂಬಲಿಕೆ, ಅವಲಂಬಿಸುತಿರೆ ಸಾಕೆ..

ಅಹುದು ತೋರಿಕೆಯ ಜಗದ ಬದುಕಿದು

ಬೇಕವರ ನೋಟ ತಣಿವಷ್ಟು ಅಡಂಬರ

ಹೊರಟರೆ ಜಗವ ಮೆಚ್ಚಿಸುವ ಜಾತ್ರೆಗೆ

ನನ್ನಾಣೆ ಯಾತ್ರೆ ಮುಗಿಯದೀ ಜನ್ಮದಲಿ..

ನಿನಗಾಗಿ ಬದುಕು ನಿನ್ನ ಮೆಚ್ಚಿಸು ಸಾಕು

ನಮಗಾಗಿ ಬದುಕು ನಾವಷ್ಟೇ ಮೆಚ್ಚಬೇಕು

ಬಿಡು ಮಿಕ್ಕವರ ಚಿಂತೆ ಬಿಡುವಿಲ್ಲದ ಸಂತೆ

ನನಗಂತೂ ಸಾಕು ನೀನಿರುವಂತೆ ಸಹಜ..

– ನಾಗೇಶ ಮೈಸೂರು

(Picture source: internet / social media)

00927. ಸಾಕು ಬಿಡಿರೆಲ್ಲ..


00927. ಸಾಕು ಬಿಡಿರೆಲ್ಲ..
_______________________


ನನ್ನ ಪಾಡಿಗೆ ನಾನು
ನೋಡಿರುವೆನೇನನೋ ಸುಮ್ಮನೆ
ಭೂತ ಭವಿತ ನಡುವಿನ ಪ್ರಸ್ತುತ
– ಚಿತ್ತದ ಮೊತ್ತ .
ಆರೋಪಿಸಲೇಕೆ ನಿನ್ನ
ಭಾವದೋಣಿಗಳ ಯಾನ ?
ನನ್ನ ಜಲ ನನ್ನ ನೆಲ
ನಾನೇ ನನ್ನ ಸಂಕುಲ.
ಬಿಟ್ಟು ಬಿಡೆನ್ನ ಪಾಡಿಗೆ
ನಕ್ಕಳುವ ಕಲಿಕೆಯ ಗೂಡಿಗೆ
ದಣಿದು ಕಂಗೆಟ್ಟಾಗ ಬರುವೆ
ತಾವಿಟ್ಟರೆ ಸಾಕರೆಗಳಿಗೆ;
ಯಾರಿಗೆ ಗೊತ್ತು ?
ಆಗಿರಬಹುದಾಗ ಮೊತ್ತ
ನಾವೆ ನೆಲ ಜಲ ಅನಿಲ
ಅಗ್ನಿಯಾಕಾಶ ಕಾಯಗಳ
ಘನೀಕೃತ ಪಂಚಭೂತ
ಇಲ್ಲವೆ ಅಪ್ರಸ್ತುತ ಅದ್ಭುತ
ಇಲ್ಲೇ ಎಲ್ಲೋ ಲೀನ
ಆಗಿಹೋಗಿಹ ತಲ್ಲೀನ !

– ನಾಗೇಶ ಮೈಸೂರು
25.09.2016
(Picture source from internet / Facebook)
ಪವನ್ ಕುಮಾರ ಪೋಸ್ಟಿನ ಚಿತ್ರಕ್ಕೆ ನಾನು ಕೆತ್ತಿದ ಸಾಲುಗಳು 😁