01091. (ಸಾಫ್ಟವೇರ್) ಹುಡುಗರ ಪಾಡು..


01091. (ಸಾಫ್ಟವೇರ್) ಹುಡುಗರ ಪಾಡು..
__________________________________
(ಭಾನುವಾರದ ಗುಂಗಿಗೊಂದು ಗುಂಡಿನ ಹಾಡಿರದಿದ್ದರೆ ಹೇಗೆ ? ಅದರಲ್ಲೂ ಐಟಿ ಕೆಲಸದಲ್ಲಿ ನಿದ್ದೆಗೆಟ್ಟು ಕೆಲಸಮಾಡಿ ಕಂಗಾಲಾಗುವ ಸಾಫ್ಟವೇರ್ ಬಾಯ್ಗಳಿಗೆ..😛😜)


ಜಾಲಿ ಬಾರಿದೆ, ಅಲ್ಲಿ ಕೋಳಿ ಬೀರಿದೆ
ವಯಸ ಜೋಶಿದೆ, ಜೇಬ ತುಂಬ ಕಾಸಿದೆ
ಸಾಫ್ಟ್ವೇರು ಕೈ ಕೊಟ್ಟಿದೆ, ವೀಕೆಂಡು ಕಾಲಿಟ್ಟಿದೆ
ತುಟ್ಟಿಕಾಲ ಗೆಲ್ಲೆ ನಿದ್ದೆ, ನಡಿ ಬಾರಿಗೆ ಮಾತಲೆ ಮದ್ದೆ ||

ಮುದ್ದೆ ಗಿದ್ದೆ ಬಾರಿಸೊ ಜನ, ಅಲ್ಲಿ ನೆರೆದಿದೆ
ಪಾಕೀಟು ಕುಡಿದು, ಉಪ್ಪ ನೆಂಚೊ ಕಾರುಬಾರಿದೆ
ಮಂಕು ದೀಪದ ಖಾಸಗಿ ಕೋಣೆ, ನಮ್ಮಂತವರ ಪಾಲು
ಟಿಪ್ಸು ಕೊಟ್ಟು ಕುಡಿವ ಮಂದಿ, ಯಾರಿಗಿಲ್ಲ ಪ್ರೀತಿ ಹೇಳು ||

ಚಿಪ್ಸು ನಟ್ಸು ಮಂಚೂರಿ ಚಾಯ್ಸು, ಓಪನಿಂಗಿಗೆ
ಡಾಕ್ಟರ್ ಸ್ಪೆಷಲ್ಲು ಆಫೀಸರ್ ಚಾಯ್ಸ್, ಬೀರ ಒಲ್ಲರಿಗೆ
ಚಳಿಯಿದ್ದರೇನು ನಡುಕದಲೆ, ಒಳಗಿಳಿಸೆ ಟೆರೇಸ ಮೇಲೆ
ಚಳಿ ಬಿಟ್ಟು ಮಾತು ಶುರು, ಯಾರು ಶಿಷ್ಯ ಯಾರು ಗುರು?! ||

ಕೆಲಸದಲ್ಲಿ ಬಾಸು ಗೀಸು, ಬಾರಲ್ಲೆಲ್ಲ ಮರೆಸು
ಪ್ರಾಜೆಕ್ಟು ಮುನಿಸು ಗಿನಿಸು, ಪರಮಾತ್ಮ ನಿವೇದಿಸು !
ಹುಡುಗಿ ಪಡುಗಿ ಮಾತು, ಕೇಳೋರ್ದೆ ಸಂತೆಲಿ ಸೀರೆ
ಹಾಳ್ಕುಡಿದ ಹೊತ್ತಿನ ಕುದುರೆ, ಮತ್ತೇರಿಸಿ ಗುಟ್ಟೆಲ್ಲ ಚಿಲ್ಲರೆ ||

ಶುರುವಾಗಿದ್ಶುಕ್ರವಾರ, ಕುಡಿತ ಮುಗ್ದಿದ್ಭಾನುವಾರ
ಮಧ್ಯೆ ದೋಸ್ತಿ ಪಾರ್ಟಿ ಗೀರ್ಟಿ, ಮೂರೇ ದಿನ ದರ್ಬಾರ
ಮಿಕ್ಕಿದ್ದೆರಡು ಹ್ಯಾಂಗೋವರು, ನಿದ್ದೆ ಕಣ್ಣಲ್ಲಿ ಮಾಡಿದ್ದು ಚೂರು
ಮುಗ್ದಿಲ್ಲ ಪ್ರೋಗ್ರಾಮ್ಪೆಂಡಿಂಗು, ಮತ್ತೆ ವೀಕೆಂಡು ಬಾರಿನ ಗುಂಗು ||


– ನಾಗೇಶ ಮೈಸೂರು
೨೧.೦೧.೨೦೧೭
(Picture source: Creative Commons)