01084. ಸುಮ್ನೆ ಕೂತ ಹೊತ್ನಲ್ಲಿ, ಸುಮ್ನಿರದೆ ಕೊರೆದದ್ದು…😊


01084. ಸುಮ್ನೆ ಕೂತ ಹೊತ್ನಲ್ಲಿ, ಸುಮ್ನಿರದೆ ಕೊರೆದದ್ದು…😊

ಏನರ್ಥ ಏನರ್ಥ ? 
__________________________


ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ಶಕುನಿ, ದೌರ್ಜನ್ಯ ಅಮೂರ್ತ
ಶಕುನಿಗಾರಿಕೆ ಕಲೆಗೆ, ಗರ ಬೀಳಿಸೊ ಬೆರಗೆ
ದಾಳಗಳುರುಳಿಸಿ ಮಾವ, ಅಹಂಭಾವ ಮೇಲೆತ್ತಿಸಿದ..

ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ಸುಯೋಧನ, ಅಸಹನೆ ಸೇಡಿನ ಕಿಡಿ
ದುಷ್ಟ ಚತುಷ್ಟಯದೆ, ನಿಷ್ಠರಾದ ಜನ ಮಂದೆ
ಒಪ್ಪಿತೊ ಬಿಟ್ಟಿತೊ ನಗಣ್ಯ, ಸ್ನೇಹಕೂಟ ಮಣಿಸಿತ್ತೆಲ್ಲರ..

ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ಕರ್ಣ, ಸ್ವಾಮಿನಿಷ್ಠೆ ಚಲಾವಣೆ ನಾಣ್ಯ
ಸ್ನೇಹದ ಕಟ್ಟಲಿ ಬದ್ಧ, ಅನುಜನ ವಧೆಗೂ ಸಿದ್ಧ
ಅನುಮಾನಿಸಲಿಲ್ಲ ಕೊಟ್ಟ, ದಾನವೆ ಉರುಳಾಗಿ ಕೊಂದರು..!


ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ಕಂಸ, ದುಷ್ಟ ಪ್ರತಿಪಾದಕ
ಕಂಸದಿಂದಾಚೆಗೆ ಕಂಸ, ದಾಟಿದ್ದೆ ಆದ ನಿರ್ವಂಶ
ಉಪಕಾರಿ ರಾಕ್ಷಸ ಗಣ, ಕ್ಷಯವಾಗಿಸಿದ ಬೆನ್ನಟ್ಟಿಸಿ !

ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ರಾವಣ, ಕಾಡಿತ್ತಷ್ಟೆ ಸ್ತ್ರೀ ಮೋಹ
ಹತ್ತು ತಲೆ ಇಪ್ಪತ್ತು ಕೈ, ಹೊತ್ತದ್ದು ಒಂದೇ ಮೈ
ಹತ್ತುತಲೆ ಅತಿ ಬುದ್ಧಿ, ಮಿತಿಯಾಗಿಸಿ ಬದುಕನು..

ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ಹಿರಣ್ಯ, ಕಾರುಣ್ಯವಿಲ್ಲದ ಸ್ವಾರ್ಥ
ಮರೆಯದಿದ್ದರೆ ಮನುಜ, ತಾನೆಂಬ ಸರಳ ನಿಜ
ಚಕ್ರೇಶ್ವರ ಪ್ರಹ್ಲಾದ ಪಿತ, ಆಗುತ್ತಿದ್ದ ಅದ್ಭುತ ದೈತ್ಯ..


ನಾಗರಿಕತೆ ಧೂರ್ತ, ಏನರ್ಥ ಏನರ್ಥ ?
ಧೂರ್ತನಲ್ಲ ಯಾರು, ಅರಿತಿಲ್ಲ ಬದುಕಿನ ಅರ್ಥ
ಉತ್ಕೃಷ್ಟ ನಿಕೃಷ್ಟನ ಗಣನೆ, ಸನ್ನಿವೇಶದ ಪರಿಗಣನೆ
ಅಶನವಸನ ಬಿಟ್ಟೆಲ್ಲ ಮಿಥ್ಯ, ಅರಿಯೆ ಸೌಖ್ಯ ಗಮ್ಯ ನಿಚ್ಚಳ !

ನಾಗರಿಕತೆ ಪೂರ್ತ, ಏನರ್ಥ ಏನರ್ಥ ?
ತಾನೆಂಬ ಪರಿಧಿ ದಾಟಿ, ನಾವೆಂಬ ನಾವೆ ಪಯಣ
ನಾವೆಲ್ಲಿ ನೀವೆಲ್ಲಿ ಹೋಲಿಕೆ, ಮುಠ್ಠಾಳತನ ಸರಮಾಲಿಕೆ
ಒಂದೇ ಹಡಗಲಿ ಚಲಿಸೆ, ತೇಲಿ ಮುಳುಗಿ ಜೊತೆಯಲ್ಲೆ.

– ನಾಗೇಶ ಮೈಸೂರು
೨೧.೦೧.೨೦೧೭
(Picture source: Creative Commons)