01532. ಕಾಲದ ಹಕ್ಕಿಗೆ..


01532. ಕಾಲದ ಹಕ್ಕಿಗೆ..

_______________________

ಹಕ್ಕೇನಿದೆ ನಿನ್ನ ದೂರಲು

ಹದಿನೇಳರ ಹರೆಯದ ಹಕ್ಕಿ?

ಹಕ್ಕಿಯಾಗಿ ಹಕ್ಕಿಗಾಗಿ ಹಾರಿದೆ

ಕತ್ತಲನಟ್ಟಿ, ಬೆಳಕ ಬೆನ್ನಟ್ಟಿ..||

ಕೂತಿದ್ದುಂಟು ದೇಕಿ ದಣಿದು

ಅನಿಸಿದ್ದುಂಟು ಬರಿ ಕಗ್ಗತ್ತಲು

ಕಾಡಿರಲಾರೊ ಪಾತಾಳ ಭೈರವಿ

ಹರಿದೆಲ್ಲಿಂದಲೊ ದ್ಯುತಿ ಪ್ರವಾಹ ! ||

ತಮ ದುರ್ಗಮದಲು ಕಿಡಿ ಕಿಂಡಿ

ಸೆಳೆ ತೆರೆದು ಕದ ನಿರಾಳ ತಂಗಾಳಿ

ತೇಪೆ ಹಚ್ಚಿದ ರಂಗು ಹೊಂಬಿಸಿಲು

ಹಚ್ಚಿ ಬೆಳಗಿದ ಜ್ಯೋತಿ ದಾರಿ ದೀಪ ||

ಕಾಲದ ಹಕ್ಕಿ ಹಾರಿ ಗಾಯ ಮಾಯ

ಮಾಯದ ಗುರುತಿಗೆ ಪ್ರೀತಿ ಲೇಪನ

ಬೆಸೆದ ಹೃದಯ ಸಂವಾದ ಸಾಂಗತ್ಯ

ನಿಂತ ನೀರಲ್ಲ ಬದುಕು ಭ್ರೂಣ ಬಾಲ ||

ದಾಟಿಲ್ಲವಿನ್ನು ಕಾನನ ಕಾಲು ದಾರಿ ಸ್ಪಷ್ಟ

ಅಭೇದ್ಯವಿತ್ತೆನಿಸಿದ ಸರಕೀಗ ಸಹನೀಯ

ಹದಿನೆಂಟರ ಹೊತ್ತಗೆ ಹೊತ್ತಂತೆ ಆಶಯ

ಪ್ರಖರ ಭರವಸೆ ಕಾಂತಿ ಹಕ್ಕಿ ಕಾಲುಂಗುರ ||

– ನಾಗೇಶ ಮೈಸೂರು

(Nagesha Mn)

(ಹೊಳೆನರಸೀಪುರ ಮಂಜುನಾಥ ರವರ ವಾರಾಂತ್ಯದ ಚಿತ್ರಕ್ಕೆ ಹೊಸೆದ ಕವನ..)