00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..


00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..
______________________________________________

ಇವತ್ತು ನನ್ನ ‘ಮನದಿಂಗಿತಗಳ ಸ್ವಗತ’ ಬ್ಲಾಗು ಪಿಸುಗುಟ್ಟಿತು – ಹತ್ತು ಸಾವಿರ ಕ್ಲಿಕ್ಕು ಎಂದು. ಸರಿಸುಮಾರು ನಾಲ್ಕು ಸಾವಿರ ಅತಿಥಿಗಳಿಗೆ ಹೊಂದಿಸಿದರೆ ಪ್ರತಿಯೊಬ್ಬರಿಗೆ ಸರಾಸರಿ ೨.೫ ಕ್ಲಿಕ್ಕುಗಳು. ಬರಿ ಅನಿಸಿದ್ದೆಲ್ಲ ಹಾಕುವ ಮನದ ಮೂಲೆಯ ತೊಟ್ಟಿಗೊಂದು ಮೂರ್ತರೂಪ ಎಂದುಕೊಂಡು ಬ್ಲಾಗ್ ಆರಂಭಿಸಿದ ನನ್ನ ಮಟ್ಟಿಗೆ ಇದೊಂದು ಮೊದಲ ಮೈಲಿಗಲ್ಲು. ನನ್ನಂತಹ ಸಾಧಾರಣ ಬ್ಲಾಗಿನ ಬರಹಗಾರನಿಗೆ ನೀವೆಲ್ಲ ಓದುಗರಿತ್ತ ಅಪಾರ ಗೌರವದ ಕುರುಹು. ಅದಕ್ಕೆ ಧನ್ಯವಾದ ಮತ್ತು ಕೃತಜ್ಞತೆಗಳು.   

ಆದರೆ ಈ ಹತ್ತು ಸಾವಿರ ನಿಜಕ್ಕೂ ತುಂಬ ಸಣ್ಣ ಸಾಧನೆ. ನಾನೇ ಕಂಡಹಾಗೆ ಕನ್ನಡದಲ್ಲೇ ಲಕ್ಷಾಂತರ ಕ್ಲಿಕ್ಕುಗಳನ್ನು ದಾಟಿದ ಎಷ್ಟೊ ಬ್ಲಾಗುಗಳನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ. ಆ ಮಟ್ಟಕ್ಕೆ ಏರುವ ತಾಕತ್ತು ನನ್ನ ಬ್ಲಾಗಿಗಿಲ್ಲ ಅನಿಸುತ್ತಿದೆ (ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ – ರಾಜ್ ಹಾಡು ನೆನಪಾಗುತ್ತಿದೆ 😊). ಹಾಗೆ ಅಂದುಕೊಳ್ಳುತ್ತ ಕೂತ ಹೊತ್ತಲ್ಲಿ ಮನಸಿಗೆ ಬಂದ ಮಾತುಗಳಿಗೆ ಹಾಯ್ಕು ಧಾಟಿಯಲ್ಲಿ ಲಘು ಹಾಸ್ಯದ ಲೇಪನದಲ್ಲಿ ಸಾಲು ಕಟ್ಟತೊಡಗಿದೆ – ‘ಇರುವುದೆಲ್ಲವ ಬಿಟ್ಟು ಇಲ್ಲದುದರ ಕಡೆ ತುಡಿಯುವುದು ಬೇಡ’ ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತಲೇ, ಅದನ್ನು ಅಧಿಗಮಿಸುವ ಪದ- ಅಚಾತುರ್ಯ ನಡೆಸುತ್ತ.. ಆ ಲಹರಿ ಈ ಕೆಳಗೆ 😊

(೦೧)
ಮುಗ್ಗುರಿಸುತ್ತ
ಮನದಿಂಗಿತ ಸ್ವಗತ
ಹತ್ತು ಸಾವಿರ 😁

(೦೨)
ಐನೂರು ಪೋಸ್ಟು
ನೂರಿಪ್ಪತ್ತು ಪುಟಕು
ಶುಲ್ಕ ಸಮಯ 😊

(೦೩)
ಸಾವಿರ ಲಕ್ಷ
ಸಾಗರದಾಚೆ ಸಖ್ಯ
ಹೇಗಪ್ಪ ಸಾಧ್ಯ ? 😟

(೦೪)
ಮೊಟ್ಟ ಮೊದಲು
ಸಾವಿರ ದಾಟಿ ನೋಟ
ಬೋನಸ್ ಮಾಸ 👍

(೦೫)
ಸ್ವಗತ ಬ್ಲಾಗು
ಕಂಪನಿ ವಹಿವಾಟು
ಮಾಡಿ ದುಪ್ಪಟ್ಟು 😀

(೦೬)
ಬಂದರು ಖುಷಿ;
ಇರದೇ ಹೋದರಲ್ಲ
ಖೇದ ಸಂಗತಿ 😭

(೦೭)
ಮಾರ್ಕೆಟಿಂಗಿಗೆ
ತಾಕತ್ತಿಲ್ಲ ಬ್ಲಾಗಿಗೆ
ಬಾಯಲೆ ಮಾಡಿ 😂

(೦೮)
ಒಳ್ಳೊಳ್ಳೆ ಎಳ್ಳು
ಸಿಗುತ್ತೆ ಸೋಸೆ ಜೊಳ್ಳು
ಆಗೋಲ್ಲ ಮೋಸ 😎

(೦೯)
ಅಟ್ಟ ಏರಾಯ್ತು
ಏರಿಸಿ ಬೆಟ್ಟಕೆ ಮತ್ತೆ
ತಡವಿನ್ನೇಕೆ ? 🤓

(೧೦)
ಮರೆಯೊ ಮುನ್ನ
ಕೈ ಹಿಡಿದಿರಿ ನನ್ನ
ನಮ್ರ ನಮನ 🙏👍

-ನಾಗೇಶ ಮೈಸೂರು