01387. ಮಳೆ ಹನಿ ಸಾಲದ ಲೆಕ್ಕ


01387. ಮಳೆ ಹನಿ ಸಾಲದ ಲೆಕ್ಕ
______________________________


ಲೆಕ್ಕ ಹಾಕುತ ಕುಳಿತೆ
ಮಳೆ ಹನಿ ಮೊತ್ತ
ಗಗನವಿತ್ತ ಸಾಲ ಭುವಿಗೆ..
ಯುಗಯುಗಾಂತರ ಯಾರಿಟ್ಟಿಹರೊ ?
ಅಸಲು ಬಡ್ಡಿ ಚಕ್ರಬಡ್ಡಿಯೆ ಕರಾಳ.. ||

ತೀರಲಿಲ್ಲ ಅಸಲು ಸಹಜ
ಕಟ್ಟಲಿಲ್ಲ ಬಡ್ಡಿಗು ವನವಾಸ
ಬದುಕಬೇಕಲ್ಲ ಸಾಲ ನಿರಂತರ
ತುಂತುರಲ್ಲೆ ಬಾಕಿ ಏರುತ್ತಾ ದರ
ಈ ಲೇವಾದೇವಿ ಚುಕ್ತಾ ಮಾಡುವವರಾರು ? ||

ಎಲ್ಲಾ ಅವರವರ ಬದುಕಲಿ ವ್ಯಸ್ಥ
ಸ್ವಂತ ಸ್ವಸ್ಥಕೆ ಅಲ್ಲೆ ಮೊಗೆಯುತ್ತ
ಹನಿ ಸಾಲವೆಲ್ಲ ಸಿಕ್ಕೆಲ್ಲೆಡೆ ಚೆಲ್ಲಾಪಿಲ್ಲಿ
ತಿರುಗಿ ಕೊಡರಲ್ಲ ತುಂಬಿರೆ ಸರಿ ಪೆಟಾರಿ
ಏರಿ ಸಾಲದ ಮೊತ್ತ ಇಳೆ ಮೇಲೆ ಸವಾರಿ ||

ಕಾದ ಕೊಟ್ಟವ ಈಗಾದ ಕೆಟ್ಟವ
ಕೊಟ್ಟದ್ದನೆ ಸುರಿಸಿ ಮಾಡಿಹ ನಿರ್ಜೀವ
ಮೋಡದಾರ್ಭಟ ಮುಸುಕಿ ಧೂರ್ತ
ಅಸಲು ಬಡ್ಡಿ ಹನಿಯಲೆ ಮುಳುಗಿಸುತ
ಸೇಡಿಗಿಳಿದು ವಸೂಲಿ ಧ್ವಂಸ ಮಾಡುತ.. ||

– ನಾಗೇಶ ಮೈಸೂರು
(Nagesha Mn)
(picture source: from Readoo Kannada)

02159. ಕಗ್ಗ ೭೨ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ: ಜಗದ-ನಂಟಿನಂಟಿನ-ವ್ಯಾಪ್ತಿ


02159. ಕಗ್ಗ ೭೨ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

ಜಗದ-ನಂಟಿನಂಟಿನ-ವ್ಯಾಪ್ತಿ:

http://kannada.readoo.in/2017/08/ಜಗದ-ನಂಟಿನಂಟಿನ-ವ್ಯಾಪ್ತಿ

00950. ಹನಿ ಮಾದಕತೆ..


00950. ಹನಿ ಮಾದಕತೆ..
______________________________


ಮಳೆ ಹನಿ ಮೊಗ್ಗು
ಸುರಿಯೆ ಇಳೆಗೆ ಹಿಗ್ಗು
ಮನದೊಳಗೊಂದು ಗುನುಗು
ಬಂದಂತೇನೊ ಸುಗ್ಗಿ ಕೈಗೊಂದು ಪೆಗ್ಗು ||

ಮಬ್ಬು ಮಸುಕು ಕಿಟಕಿ
ಜಾರುವ ಹನಿಯಾ ಕಟಕಿ
ಅದುರಿಸಿ ನಡುಕ ಶೀತಲ ಭಾವ
ಋತುಮಾನದ ಚಳಿ ಮದಿರಾ ಸಂಭವ ||

ತೆರೆದೀಯ ಕದ ಚಿಲಕ
ಕೊರೆವ ತಂಗಾಳಿಯ ಪುಳಕ
ಆಸ್ವಾದಿಸಲೆಲ್ಲಿ ಕೊರೆವಾಗ ಚಳಿ
ಮತ್ತೆ ಸುರೆಯದೆ ಕೈಲಿ ಹೊದ್ದು ಕಂಬಳಿ ||

ನೋಡುತ ನಿಲ್ಲು ಗಾಜಲ್ಲಿ
ನೇವರಿಸುತ ಪೇಯ ಕೈಯಲ್ಲಿ
ಹನಿ ಪೋಣಿಸಿದ ಹಾರ ದನಿಯಾಗಿ
ಕಣ್ಣು ಕಿವಿಗಾಗುತ ತಂಪು ಪುಳಕವೆ ಕೂಗಿ ||

ಉದುರಿದೊಂದೊಂದು ಹನಿ
ಕವಿತೆಯಾಗುತ ಮನ ಸಂದಣಿ
ಶರಾಬು ಗರೀಬನಿಗೂ ಸ್ಫೂರ್ತಿ ಸಿಕ್ಕೆ
ಇನ್ನೂ ಮಾದಕ ಪ್ರೀತಿಗೆ ಸಿಕ್ಕ ಹೆಣ್ಣಿನ ತೆಕ್ಕೆ ||


– ನಾಗೇಶ ಮೈಸೂರು
(Picture source This work is licensed under a Creative Commons Attribution-NonCommercial-ShareAlike 3.0 Unported License)

00928. 🐄 ಹನಿ – ಕಹಾನಿ 🐅


00928. 🐄 ಹನಿ – ಕಹಾನಿ 🐅
_________________________

ನೀರಿಲ್ಲದ ದಿನಗಳಿವು
ಪದಗಳಿಗೂ ಬರ
ಹನಿ ನೀರಾವರಿ ಕಾಲ
ಅದಕೀ ಹನಿಗೆ ಸಕಾಲ ..


(01)
ಕನ್ನಡ ಜನ
ಪುಣ್ಯಕೋಟಿ ಗೋವಿನ
ಘನ ಸಂತಾನ 🐄

(02)
ಕಾವೇರಿ ಗೋವು
ತಲೆಯರ್ಧ ನಮಗೆ
ಮಿಕ್ಕಿದ್ದವರಿಗೆ 😳

(03)
ಸಿದ್ಧರಾಗೋಣ
ಭ್ರಮ ನಿರಸನಕೆ
ಯಾರಿಗೆ ಗೊತ್ತು ? 🙄

(04)
ಸಂಕಟಗಳೆ
ಅವಕಾಶದ ಮೂಲ
ಚಿಂತನೆ ಶುರು ? 🤔

(05)
ಇಲ್ಲೇ ಬೆಳೆದು
ಇಲ್ಲೇ ಬಿಕರಿ ಮಾಲು
ಸ್ವಾವಲಂಬನೆ. 🏡

(06)
ಮಾತು ಬಲ್ಲವ
ರಾಜಕೀಯ ಗೆದ್ದಾಗ
ಮೂಕ ಪ್ರೇಕ್ಷಕ 😔

(07)
ಯಾಕಿಷ್ಟು ಕಿಚ್ಚು ?
ಕುಡಿವ ನೀರಿಲ್ಲದೆಡೆ
ಉದ್ಯಮ ಖಾಲಿ! 🌵

(08)
ಉದ್ಯಮಗಳೇ
ಜಲವುಂಟು ನಮ್ಮಲಿ
ಇಲ್ಲಿಗೆ ಬನ್ನಿ ! 🌆

(09)
ಕಾಕತಾಳೀಯ
ಅಂದುಕೊಂಡರು ಮನ
ಒಳಗೊಪ್ಪದು.😟

(10)
ಯಾರದೋ ಮಗ
ನಿರ್ಲಕ್ಷಿಸೆ ಮತ್ತಲಿ
ನಮ್ಮ ಕರುಳೆ..😭

– ನಾಗೇಶ ಮೈಸೂರು
25.09.2016

00785. ಹನಿ ಹಾರಕದೆಲ್ಲಿಯ ದಾರ ?


00785. ಹನಿ ಹಾರಕದೆಲ್ಲಿಯ ದಾರ ?
____________________________

ಮಳೆಗೆ ಮಳೆಯೇ ಸ್ಪೂರ್ತಿ..😊


ಮಳೆಹನಿ ಪೋಣಿಸುತಿದೆ ಹಾರ
ಕಾಣಿಸದೇಕೊ ಜೋಡಿಸೊ ದಾರ
ಹನಿಹನಿ ತುಂತುರು ಕಳಚಿ ಜಾರಿ
ಬಿಸಿಲ ಮೇಲೇರಿ ಕುದುರೆ ಸವಾರಿ..

ಪ್ರತಿಹನಿ ಪ್ರೀತಿಯ ಸಾಹಿತ್ಯ ದನಿ
ಭೋರ್ಗರೆವ ಅಬ್ಬರದಲು ಉರವಣಿ
ನೋಡುತಲದೆ ಪದೆ ವಿಸ್ಮಿತ ಸಂದಣಿ
ಮೂಕ ಭಾವ ಮಾತಾಗಿಸಿ ಲಾವಣಿ..

ಮೋಡದ ನಾಡಲಿ ಅತ್ತವರಾರೊ ?
ಇಳೆ ಸಾಂಗತ್ಯಕೆ ಪರಿತಪಿಸಿದರೊ ?
ಭಾನು ಭುವಿಯ ನಡುವಿನ ಸೇತುವೆ
ಜಲರಾಶಿ ಕಟ್ಟಿದ ಅದ್ಭುತ ಪ್ರಸಂಗವೆ !

ಅಭಿಸಾರಿಕೆ ಯಾರೊ ಅಲ್ಲಿಂದಿಳಿದು
ಹನಿ ಮೇಲೆ ಹೆಜ್ಜೆ ಇಟ್ಟು ಬಂದ ಸದ್ದು
ಮಾಡುತ ಗುಡುಗು ಸಿಡಿಲಾಗಿ ಮಿಂಚು
ದಾರಿ ತಪ್ಪದಂತೆ ದೀಪ ಹಚ್ಚೋ ಸಂಚು !

ಬಿಕ್ಕಿದರೆ ಮುಗಿಲು ಯಾರೊ ಅತ್ತಂತೆ
ಎದೆಯೊಳಗದೇನೊ ಭಾವಗಳ ಸಂತೆ
ತಳಮಳ ತುಡಿತ ನೆನದವಳ ಸ್ವಗತ
ಪುಳಕದ ಹಾರ ತನ್ನಲೆ ತಾನೇ ನಗುತ..

– ನಾಗೇಶ ಮೈಸೂರು

(Picture source : http://www.123rf.com/stock-photo/raindrops.html)

00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)


00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)
_______________________________

ಪ್ರತಿ ನಂಟಿಗು ಅವರವರದೇ ವ್ಯಾಖ್ಯೆ, ವಿಮರ್ಶೆ, ಅರ್ಥ – ಮನದ ಗುಣಿತಕನುಸಾರವಾಗಿ. ಹಾಯ್ಕು ಮಾದರಿಯ ಈ ಹನಿಗಳಲ್ಲಿ ಕೆಲವೊಂದನ್ನು ಕಟ್ಟಿಡುವ ಅರೆ-ಸಫಲ ಯತ್ನ.. 😊


(೦೧)
ನಂಟಿನ ಮನ
ಅವರವರ ವ್ಯಾಖ್ಯೆ
– ಮನದ ಗಂಟೆ.

(೦೨)
ನಂಟಿಗೆ ಬೇಕು
ಬೇವು ಬೆಲ್ಲದ ಕಾಲ
– ಅರಿಸುವಾಟ.

(೦೩)
ನಂಟಸ್ತಿಕೆಗೆ
ಅಂತಸ್ತೈಶ್ವರ್ಯ ಲೆಕ್ಕ
– ಮಿಕ್ಕಿದ್ದಾಮೇಲೆ.

(೦೪)
ನಂಟಿನ ಗಂಟು
ಅಂದುಕೊಂಡಿದ್ದೆ ಹೆಚ್ಚು
– ಆಗದೆ ಕಿಚ್ಚು.

(೦೫)
ಗೀಳಾಗಿ ನಂಟು
ಕಾಡುವ ಅನುಪಾತ
– ವಿಲೋಮ ದೂರ.

(೦೬)
ನಂಟಿಗರ್ಥವೆ
ನನದೆನ್ನುವ ಸ್ವಾರ್ಥ
– ಉಬ್ಬರವಿಳಿತ

(೦೭)
ಗಂಟು ಹಾಕಿದ್ದು
ನಂಟೇ ಆದರು ಮೊತ್ತ
– ಗೌರವ ಸೂಕ್ತ.

(೦೮)
ತಪಿಸಿ ನಂಟ
ಹುಡುಕಾಡಿಸೊ ಚಿತ್ತ
– ಸಿಕ್ಕಾಗ ಧೂರ್ತ.

(೦೯)
ನಂಟಿನ ಹಿತ
ಮುದದಷ್ಟೆ ಬೇಸರ
– ಇರಲಿ ನಿಗಾ.

(೧೦)
ನಂಟಿಗೆ ಗುಟ್ಟ
ರಟ್ಟಾಗಿಸೊ ನಂಬಿಕೆ
– ಗುಟ್ಟಾಗಿರಲಿ.

– ನಾಗೇಶ ಮೈಸೂರು

00748. ಬಂಧಕೊಂದಷ್ಟು ತುಣುಕುಗಳು..


00748. ಬಂಧಕೊಂದಷ್ಟು ತುಣುಕುಗಳು..
_______________________________

(೦೧)
ನೀ ದೂರಾಗಿ
ಕರ್ಕಶ ಸದ್ದಾದ ಮಾತು
ಎಷ್ಟೊ ವಾಸಿಯಿತ್ತು;
ಭೀಕರವೀಗ ಅದ ಮೀರಿಸೊ
ಕೊಲ್ಲುವ ಮೌನದ ಮೌನ.

(೦೨)
ಒಪ್ಪಿಕೊಳ್ಳುವ
ಮೊದಲಿತ್ತೆಲ್ಲಿ ಅರಿವೆ ?
ಅರಿವಾದರೇನೀಗ ಬೆತ್ತಲೆ
ಮುಚ್ಚಲೊಲ್ಲದ ಅರಿವೆ
ಮೈ ಮರೆವೆ..

(೦೩)
ಎಲ್ಲಿತ್ತು ಬೇಧ ?
ಅರ್ಧನಾರೀಶ್ವರರಂತೆ
ನಮ್ಮಿಬ್ಬರ ನಡುವೆ ಸೀಮೆ ;
ನಾರಿ ಈಶ್ವರರ ಛೇಧಿಸಿ
ವಿಭಜಿಸಿದ್ದು ಮಾತ್ರ
ಸ್ತ್ರೀಲಿಂಗ ಪುಲ್ಲಿಂಗದ ಮಹಿಮೆ..

(೦೪)
ಹತ್ತಿರವಾಗುತ್ತ ಪರಸ್ಪರ
ಹೊಕ್ಕುತಿಬ್ಬರ ಆವರಣ ಸಂಭ್ರಮ
ಅಸಾಧಾರಣ ಮಿಲನ ;
ಉಸಿರುಗಟ್ಟಿಸೊ ಮೊದಲೆ
ಹಿಂದೆತ್ತಿಕ್ಕದೆ ಒಂದಡಿ ಹೆಜ್ಜೆ ನಡಿಗೆ
ದೂರಾಗಿ ವಿದಾಯಕೆ ಕಾರಣ..

(೦೫)
ಅವರವರ
ಪರ್ಸನಲ್ ಸ್ಪೇಸ್
ಅವರವರಿಗೆ ಅಪ್ಯಾಯ…
ಬಿಟ್ಟುಕೊಂಡರು ಪ್ರೀತಿಗೆ ಒಳಗೆ
ಬೇಲಿಯಾಚೆಯೆ ಸುಳಿದಾಡುತಿರು
ಕಾಯುತ ಆಗಾಗಿಣುಕುವ ಸರಿ ಗಳಿಗೆಗೆ..

– ನಾಗೇಶ ಮೈಸೂರು