01451. ಯಾಕನುಮಾನ? ಇಹ ಹನುಮಾನ


01451. ಯಾಕನುಮಾನ? ಇಹ ಹನುಮಾನ
____________________________________


ಯಾಕನುಮಾನ? ಇಹ ಹನುಮಾನ
ಕಾಪಾಡದೆ ಬಿಡ ಕಾರ್ಯಾ ಕಾರಣ
ಸ್ವಾಮಿಕಾರ್ಯ ನಿಭಾಯಿಸೊ ನಿಷ್ಣಾತ
ಹುಲುಮಾನವ ಬೇಡಿಕೆ ಅವಗಿಲ್ಲ ಲೆಕ್ಕ ||

ಯಾಕನುಮಾನ? ಇಹ ಹನುಮಾನ
ಹಣ್ಣೆಂದು ಭ್ರಮಿಸಿ ರವಿಯತ್ತ ಜಿಗಿದ
ಎಣೆಯಿಲ್ಲ ಅಂಜನಾಸುತ ಪರಾಕ್ರಮ
ವಿನಯ ಭಕ್ತಿ ಶೌರ್ಯ ಅಪೂರ್ವ ಸಂಗಮ ||

ಯಾಕನುಮಾನ? ಇಹ ಹನುಮಾನ
ಬಿಡಲಿಲ್ಲ ಸಂಕಷ್ಟದೆ ಸುಗ್ರೀವ ಸಖ್ಯ
ಹಿಡಿದ ಕಾರ್ಯ ಮುಗಿಸೇ ತೀರುವವ
ಆ ನಂಬಿಕೆಯಲೆ ಚೂಡಾಮಣಿ ಪಡೆದ ||

ಯಾಕನುಮಾನ? ಇಹ ಹನುಮಾನ
ನೂರಾರು ಯೋಜನ ಆಗಲಿಲ್ಲ ಕಠಿಣ
ಹೂಂಕರಿಸುತ ಹಾರಿ ಸಾಗರಲಂಘನ
ಸುಟ್ಟರೂ ಲಂಕೆ ಸೀತಾಮಾತೆ ಕ್ಷೇಮ ||

ಯಾಕನುಮಾನ? ಇಹ ಹನುಮಾನ
ಲಂಕಿಣಿ ಸುರಸೆ ಮಹಿರಾವಣ ನಗಣ್ಯ
ಹೊತ್ತು ತಂದನವ ಸಂಜೀವಿನಿ ಪರ್ವತ
ಮನುಜರ ಯಾತನೆ ಕಿರುಬೆರಳ ಗಾತ್ರ! ||

ಯಾಕನುಮಾನ? ಇಹ ಹನುಮಾನ
ನಂಬಿದವರಿಗವನು ಕೈಬಿಡದ ನೆಂಟ
ಎದೆ ಮಂದಿರದೆ ಶ್ರೀ ರಾಮನ ಹೊತ್ತು
ಅವನೊಡನೇ ಕಾದ ಅದ್ಭುತ ಸಂಬಂಧ ||

ಯಾಕನುಮಾನ? ಇಹ ಹನುಮಾನ
ಕಲಿಯುಗದಲ್ಲು ಇರುವ ಚಿರಂಜೀವ
ಭಜಿಸವನ ನಾಮ ಆಜೀವ ಕಾಯುವ
ಕನ್ನಡ ಕುಲಕೋಟಿಗವ ಆರಾಧ್ಯ ದೈವ ||

– ನಾಗೇಶ ಮೈಸೂರು
(Nagesha Mn)
(Picture video screen shot taken from Bhaskaraks Ksbhaskara – thanks Bhaskara 😍👌👍🙏😊)