01383. ಕುಡ್ಕರ ಹಾಡು, ಪಾಡು..


01383. ಕುಡ್ಕರ ಹಾಡು, ಪಾಡು..
____________________________


ಬಿಡೊ ಎಣ್ಣೆ ಹಾಕೊ ಹೊತ್ನಲ್ಲಿ ಮಂಜಾ
ಎಳ್ನೀರು ಕುಡಿಯೊ ಸುದ್ಧಿ ಆಡ್ ಬ್ಯಾಡ
ವಡೆ ಬಜ್ಜಿ ಬೊಂಡ, ಕಾಫಿ ಟೀ ಜತೆ ಮಸ್ತು
ತೊಗೊ ಕೋಳಿ ಕಾಲು, ಮತ್ತೇನ್ಲಾ ಸುದ್ಧಿ ಹೊಸ್ದು ? ||

ಯಾವನಿಗ್ಬೇಕೊ ಬಿಡೊ ಇನ್ಯಾರ್ದೊ ಸುದ್ಧಿ ?
ನಮ್ದೆ ನೂರೆಂಟಿದ್ರು ಇನ್ನು ಕಲ್ತಿಲ್ಲಾ ಬುದ್ಧಿ !
ಕೂತ್ಕಳಲೆ ತೊಗೊ ಭರ್ತಿ ಇನ್ನೊಂದ್ಪಾಕೀಟು
ಉಪ್ಪುಪ್ಪು ಉಪ್ಪಿನ್ಕಾಯಿ ನೆಕ್ಕೊಂಡೇ ಸಕತ್ತು ! ||

ಅವ್ಳಾಡ್ತಾಳೆ ಅವ್ತಾರ ಲೌಡಿ ಬಲ್ಜೋರು
ಕತ್ತಿನ್ಪಟ್ಟಿ ಇಡ್ಕೊಂಡಾಡಿಸ್ತಾಳೆ ಪೊಗರು
ಬಾರಣ್ಣ ಬೈದಾಡ್ಕೊಂಡು ಮಾನ ತೆಗ್ಯೋಣ
ಮನೇಗ್ಹೋದ್ಮೇಲ್ಬಿಚ್ಚಂಗಿಲ್ಲ ಹಾಳ್ಬಾಯಿಗ್ಬೀಗ ! ||

ನಿಂದೇ ವಾಸಿ ಕಟ್ಕೊಂಡೆಣ್ತಿ ವದ್ರೂ ಹಕ್ಕೈತೆ
ಕೇಳ್ನನ್ಕತೆ ನಮ್ಮತ್ತೆ, ಬಂದ್ವಕ್ಕರ್ಸ್ಕೊಂಡವ್ಳೆ
ಕಿವಿ ಕಚ್ತಾಳೆ ಚುಚ್ತಾಳೆ ಕಳ್ಬಾಟ್ಲಿಗು ಎಡ್ವಟ್ಟು
ಕಳ್ಕುಡ್ದಂಗೆ ಕುಣ್ದಾಡ್ತಾಳೆ, ಇವ್ಳನ್ನ ಛೂ ಬುಟ್ಟು ! ||

ಬಿಟ್ಟಾಕ್ಮಂಜಾ ಬಲ್ಗರ್ತಿರ್ಸುದ್ಧಿ, ಎಂಗವ್ಳೆ ಸುಂದ್ರಕ್ಕ ?
ಶ್ಯಾನೆ ದಿನ್ವಾಯ್ತು ಹೋಗ್ದೇನೆ , ಯಾಕೊ ನೆಪ್ಪಾಗ್ತವ್ಳೆ !
ಹೂನ್ಲೆ ಸಿದ್ಧ ಅವ್ಳೇನೆ ಸರಿ, ನಡಿ ಅವುಳ್ದೇನೆ ನಿಯ್ಯತ್ತು
ಬಡ್ಕೋಳ್ಳಿ ಹಾಳ್ಕೆಂಚಿ ಬೋರಿ, ಬಾ ಮನೆಗ್ಚಕ್ಕರಿವತ್ತು ||


– ನಾಗೇಶ ಮೈಸೂರು
(Nagesha Mn)
(Picture source: Internet / social media)

01198. ಯಾರದು ಗೊತ್ತೇ ಈ ಹಾಡು?


01198. ಯಾರದು ಗೊತ್ತೇ ಈ ಹಾಡು?
________________________________


ಯಾರಾದರೂ ಒಮ್ಮೆ ಕೇಳಬಾರದೇ ಈ ಹಾಡು ?
ಸುಳ್ಳು ನಗೆ ಮುಚ್ಚಿಟ್ಟ ಬಗೆ, ವೇದನೆಯ ಜಾಡು..
ಹೇಳಲಾಗದ ಸಂತೆ, ಹಾಳು ಮನಸಿನೊಳಗಂತೆ
ಕಿಕ್ಕಿರಿದು ನೆರೆದ ಪರಿ, ತುಂಬಿ ತುಳುಕೇ ಹಾಡಲಿ..||

ಕಾಣುವರೆಲ್ಲರು ರಾಗ, ಹಾಡುವ ದನಿಯಾವೇಗ
ಮೀಟಿದಾಗ ಮನಸ, ಗ್ರಹಿಸಿ ಪದ ವೈಭವ ಸೊಗ
ಮೆಚ್ಚಿ ಕರತಾಡನ ಶುದ್ಧ, ತುಟಿಯಂಚಲುಲಿವ ಪದ
ಕವಿ ಕಾಣದಿದ್ದರು ಕಾವ್ಯ, ತೆರೆಸುತಿರೆ ಹೃದಯ ಕದ..||

ಮೈಮರೆತ ಗುಂಗಲಿ ತಲ್ಲೀನ, ಆವರಿಸಿತೇನೊ ಲೀನ
ಅರಿವಾಗಲೆಂತು ಬರೆದ, ಕವಿಯೊಡಲ ತಲ್ಲಣ ಸದ್ದು ?
ಸಜ್ಜನ ಸಂಭಾವಿತ ಮರುಳ, ಬಿಚ್ಚಿಡದೆ ವಾಸ್ತವ ಘೋರ
ಕಟ್ಟುವ ಕಲ್ಪನೆ ಮಹಲಲಿ, ಬೇಸ್ತು ಬೀಳುವವರೆ ಎಲ್ಲಾ..||

ಹೇಳಲದೆ ಸಂಕೋಚ, ಹೇಳದಿರೆ ಮುಸುಕಿನ ಗುದ್ದಾಟ
ಲಜ್ಜಿತನೆ ಕೀಳರಿಮೆಗೆ ಸಿಕ್ಕು ಬಲಿಯಂತೆ ವಾಮನನಡಿ
ನಲುಗಿದರು ಮುಲುಗಿದರು, ಪುಳಕಿತ ಹರ್ಷೋದ್ಗಾರ
ಮೆಚ್ಚುಗೆಯಲಿ ನುಚ್ಚುನೂರು, ಕಷ್ಟ ಕಾರ್ಪಣ್ಯಗಳ ದೂರು..||

ಕವಿಗಳದೆಷ್ಟೊ ಕೋಟಿ, ಬೆಳಕಿಗೆ ಬರದ ಕಾವ್ಯದ ಲೂಟಿ
ಅಜ್ಞಾತವಾಸದೆ ಬೇಯುತ, ಬರೆಬರೆದು ಚಿಗುರೊ ಸ್ಪೂರ್ತಿ
ಓದುವರಿಲ್ಲ, ಹಾಡುವರಿಲ್ಲ, ಕೇಳುವರಿಲ್ಲ ಕಾನನ ಧೂಮ
ಬಯಲಾಗುವುದುಂಟೆ ಬದುಕಲಿ? ಕವಿಯದಲ್ಲ ಪರಾಧೀನ ||

– ನಾಗೇಶ ಮೈಸೂರು
(Nagesha Mn)
(Picture source: Internet / social media)

02065. ಯಾರದೋ ಹಾಡು..


02065. ಯಾರದೋ ಹಾಡು..
_______________________

ಕಾಡಿನ ಜಾಡು ಕಂಗಾಲಾಗಿ ಹೋಗಿದೆ
ಹೆಜ್ಜೆಯಿಕ್ಕುವವರಿಲ್ಲದೆ ಪಾಳು ಬಿದ್ದು..
ಕುರುಚಲು ಚುಚ್ಚುವ ಬಿರುಸಿದ್ದೆಡೆ ಮೆತ್ತೆ
ಸೊಂಪು ಹುಲುಸು ಹುಲ್ಲುಗಾವಲು ತುಂಬಾ..

ದಟ್ಟೈಸಿದ ದಿಟ್ಟತನದಡಿ ಮುಚ್ಚಿದ ಹಾದಿ
ಕಾದು ಕೂತಿದೆ ಶೋಧನೆ ಅನ್ವೇಷಣೆ ಹಾರೆ
ಯಾಕೋ ಮರೆತಂತಿದೆ ಜಗ ಎಡತಾಕುವರಿಲ್ಲ
ಹುಲ್ಲಬಣದ ಸುತ್ತಣ ಜಿಗ್ಗು ಲಂಟಾನ ಸುಳಿವಿಲ್ಲ..

ಹರಿತವಿಲ್ಲ ಅಲುಗು ಹುಲ್ಲದು ಸುಪ್ಪತ್ತಿಗೆ
ಅಭೇದ್ಯ ಕಾನನವಲ್ಲ ಮರಗಿಡಗಳ ಗೋಜಿಲ್ಲ
ಸರಳ ಸುಲಲಿತ ನಡೆದಿದ್ದೇ ಹಾದಿ ಮುನ್ನುಗ್ಗೆ
ಹುಡುಕುವುದೇಕೋ ಜಟಿಲ ದುರ್ಗಮ ಅಭೇದ್ಯ..

ಅದು ಮಾನವ ಸಹಜ ದೌರ್ಬಲ್ಯ ಎಟುಕಿದ್ದು
ಜಿಲ್ಲೆನ್ನದು ಹೃದಯ ಬಯಸುತ್ತ ಎಟುಕದ ಶೂನ್ಯ
ಅಡವಿಯ ನಿಗೂಢತೆ ರಮ್ಯಾ ಕುತೂಹಲ ಬಂಧಿ
ಯಾಕರಿವಾಗದು? ಮೊತ್ತದಲೆಲ್ಲ ಅದೇ ಮೂಲದ ತಿದಿ..

ಅರಸುವ ಜೀವಕೆ ಕಾದಿದೆ ಪ್ರಕೃತಿ ನೈಜದ ಸೆರಗು
ಬೆಡಗು ಬಿನ್ನಾಣ ವೈಯ್ಯಾರ ಗತಕಾಲದಡಿ ನೆನಪು
ನಿಜದ ಫಲವತ್ತತೆ ಉತ್ತು ಬಿತ್ತು ಬೆಳೆವಾ ಹಂಬಲಕೆ
ಕಾದ ನೆಲವಾಗುವೆ ನೇಗಿಲು ಹಿಡಿದು ಬರುವ ಯೋಗಿಗೆ..

– ನಾಗೇಶ ಮೈಸೂರು
12.06.2017

00897. ಹೀಗೊಂದು ತಿರುಪೆ ಹಾಡು


00897. ಹೀಗೊಂದು ತಿರುಪೆ ಹಾಡು
__________________________


ತಿರುಪೆ ನಾವ್ ತಿರುಪೆ
ನಖಶಿಖಾಂತ ಹುರುಪೆ
ತಿರುಪೆ ಎತ್ತುವ ಘನತೆ
ತಿರುಪೆ ಬಡವನ ಖಾತೆ ||

ತಿರುಪೆ ತುಂಬಿಸೆ ಒಡಲ
ಬೇಕಿರಲಿ ಬಿಡಲಿ ಮಡಿಲ
ಎಲ್ಲೊ ತಲೆ ತಿರುಪೆ ಸಡಿಲ
ತಿಪ್ಪೆ ಸಾರಿಸೊ ಜ(ನ)ಗಳ ||

ಒಡ್ಡುವುದೆಲ್ಲ ಬರಿ ತಿರುಪೆ
ಕೊಡುವುದೆಲ್ಲ ಸರಿ ಭಿಕ್ಷೆ
ಗರೀಬರೆ ಸರಕಾರ ಜನತೆ
ಮಕ್ಕಳು ಮರಿ ಪುರುಷ ವನಿತೆ ||

ಗಮನಕೆ ಮಕ್ಕಳ ತಿರುಪೆ
ಅಂತಸ್ತಿಗೆ ಹೆತ್ತವರ ತಿರುಪೆ
ಪ್ರೀತಿಗೆ ಪಡ್ಡೆ ಹುಡುಗರು
ಗಲ್ಲಿ ಬೀದಿ ತಿರುಪೆ ಗುರು ||

ಕಿರಿ ದೇಶ ಹಿರಿ ದೇಶಕೆ
ಹಿರಿದು ಮತ್ತೊಂದರ ತೆಕ್ಕೆ
ಎಲ್ಲಾ ಒಂದೊಂಥರ ತಿರುಪೆ
ಹೆಸರು ಕೊಟ್ಟರಾಯ್ತು ತಪ್ಪೆ ||

ನೊಂದವರ ಕಲ್ಯಾಣ ತಿರುಪೆ
ಪರಿಹಾರ ನಿಧಿಯು ತಿರುಪೆ
ಉಳ್ಳವರು ಕೊಟ್ಟರು ತಿರುಪೆ
ಮನವಿಗೂ ತೀರ್ಪೆ ತಿರುಪೆ ||

ತಿರುಪೆ ಎತ್ತುವ ದಾಕ್ಷಿಣ್ಯ
ಕೋರುವ ಜನ ಮೌನ
ಕೊಡುವರಿದ್ದು ಬೇಡುವರಿಲ್ಲ
ಬೇಕಿದ್ದವರಿಗೆ ದನಿಯಿಲ್ಲ ||

ಓಟಿಗೆತ್ತುವರು ತಿರುಪೆ
ವಶೀಲಿಬಾಜಿಗೂ ತಿರುಪೆ
ಓಲೈಕೆಗೂ ಮಾತ ತಿರುಪೆ
ಒಳಿತು ಬಿಗಿಯಾಗೆ ತಿರುಪೆ ||

ಈ ಬದುಕೇ ಅವನಿತ್ತ ತಿರುಪೆ
ತೀರ್ಪೀವ ಅವಸರ ಯಾಕೆ ?
ಮಾಡಲಿಬಿಡಿ ಜನ ಸರಕಾರ
ಆಯ್ಕೆಯ ದಿನ ನಿಮ್ಮದೆ ಸ್ವರ ||

– ನಾಗೇಶ ಮೈಸೂರು
06.09.2016
(ಎಲ್ಲಾ ಕಡೆ ತಿರುಪೆ ತಿರುಪೆ ಅಂತಿದಾರೆ , ಅದಕ್ಕೆ ಇಲ್ಲೊಂದು ತಿರುಪೆ ಹಾಡು 😊 )

(Picture from Internet / Facebook)

00800. ನಾನಾಗೆ ಬಿಡುಗಡೆ….


00800. ನಾನಾಗೆ ಬಿಡುಗಡೆ….
________________________________


ನನ್ನ ಪಾಡಿಗೆ ನಾನು ಹಾಡಿಕೊಂಡಿರುವೆನು ಹಕ್ಕಲಿ
ಯಾರು ಹುಡುಕರು ಹುಳುಕನೆಂಬ ಹುಂಬತನದಲಿ
ಪರಿಪಕ್ವವಿಲ್ಲದ ಪ್ರಸಂಗ, ಯಕ್ಷ ಕಿನ್ನರರಿಲ್ಲದ ಕುಣಿತ
ಮನಸ್ವೇಚ್ಛೆ ಮನಸೋ ಇಚ್ಛೆ, ತಾಳ ಮೇಳ ನಾನಾಗಿ..

ರಾಗ ತಾಳ ಪಲ್ಲವಿ ಸರಾಗವಿರದಿರಲಿನಂತೆ ?
ಹೆಕ್ಕುತ್ತಿವೆ ಬಿಕ್ಕುತ್ತಿವೆ ಕಕ್ಕುತ್ತಿವೆ ಪಲುಕುಗಳು
ಯಾವ ಮೋಹನ ಮುರಳಿ ರಾಗವಿರದಿರಲೇನು
ಅಂತರಂಗದ ಸುರುಳಿ ಹಾಡಲಡೆತಡೆ ಇದೆಯೆ ?

ಕರ್ಕಶವೊ ನವಿರೋ ನಾದ ನಿನಾದದ ಪೊಗರೊ
ನಿರ್ಭಿಡೆಯಲ್ಹಾಡಲನುಮತಿ ಒಳಗಿನ ತಿಲ್ಲಾನ
ಹೂಂಕರಿಸಿ ಧಿಕ್ಕರಿಸಿ ಅಡ್ಡಗೋಡೆಯ ಸವರಿ
ಪದ ಭಾವವಾಗುತಿರೆ ವಿಸ್ಮಯ ಜಗ ತೆರೆಯುತ..

ಪುಡಿಪುಡಿಯಾಗುತ ನಂಬಿಕೆ ಅಂಧಕಾರದ ಶ್ರದ್ಧೆ
ಸರಿ ತಪ್ಪುಗಳ ಮೇಳ ಕಾಲದ ಗಣಿತ ಅವಿರತ
ಬದಲಾಗುವ ಜಗದ ನಿಯಮದೊಳಗೆಲ್ಲ ಸವಾರಿ
ಇಂದು ತಪ್ಪೆಂದುದೆ ಮುಂದೆ ಸರಿ ಬಿಡು ಗೊಂದಲ..

ಸರಿದಂದು ಮನಃ ಪರದೆ ಸರ್ವತಂತ್ರ ಸ್ವತಂತ್ರ
ಲೆಕ್ಕಿಸದೆ ನಸು ನಗುತ ಎಲ್ಲರಲೂ ಕಾಣೊ ಸತ್ಯ
ಯಾರದೂ ತಪ್ಪಿಲ್ಲ ಯಾರ ನೂನ್ಯತೆಯೂ ಅದಲ್ಲ
ನಾನು ಸರಿ ನೀನು ಸರಿ ಅವರಿವರೆಲ್ಲರೂ ಸರಿಯೆ..

– ನಾಗೇಶ ಮೈಸೂರು

(Picture source from: http://quoteaddicts.com/topic/feeling-liberated/)

00663. ಬೇಸಿಗೆಗೊಂದು ಹಾಡು..


00663. ಬೇಸಿಗೆಗೊಂದು ಹಾಡು..
_________________________
(Picture source : http://www.bostonpublicschools.org/domain/1729)

  
ಬೇಸಿಗೆಗ್ಯಾಕೊ ಹೇಸಿಗೆ ?
ಬೈಯ್ಯೋದ್ಯಾಕೋ ಋತು ಕೂಸಿಗೆ
ನೀರಿಲ್ಲದ ನಿತ್ರಾಣ ಭೂಮಿ
ನೆನೆಸಲೆ ಬೆವರಿನ ಹೊಳೆ ಹೊಮ್ಮಿ !

ಬೆವರಿಗದ್ಯಾಕೋ ದಿಗಿಲು ?
ಸುರಿದಾವೆ ಹರಿಯದೆಯೂ ಮುಗಿಲು
ಬಿರಿದು ದೇಹದ ಕಸು ಸೋಸಿ
ರುಚಿಗಿಷ್ಟು ಉಪ್ಪಿಕ್ಕಿವೆ ಕಡಲನೆ ಬಾಚಿ !

ಕಾಣೆಯೊ ನೀ ಬಿಸಿಲಾಟ
ಎಕ್ಕಾ ಜೋಕರು ಪಕ್ಕಾ ಬಯಲಾಟ
ಬಿರುಸಲೆ ಒಣಗಿಸುತೆಲ್ಲ ಆವಿ
ಮೇಲೇರಿಸಿ ಮರುಮಳೆಯಾಗಿಸೆ ಛಾವಿ !

ಸಾಕು ನಿಲಿಸಪ್ಪ ದೂಷಣೆ
ಜನ ಬದುಕಲಿ ಎಳನೀರು ಹರಳೆಣ್ಣೆ
ನೆತ್ತಿಗೆ ತಂಪೆರೆವ ಪಾಡಲಿ
ಮರ್ದನ ಅಭ್ಯಂಜನ ಗೀತೆ ಹಾಡಲಿ !

ನಿಲಿಸಪ್ಪಾ ಸಾಕು ಹರಟೆ
ಬರಿ ವಾತಾಯನದೊಳಗಿನ ಮಾತೆ
ಗೊತ್ತೇ ಅನುಭವಿಸುವ ಕಷ್ಟ ?
ಚಳಿ ಮಳೆ ಬೇಸಿಗೆ ನರಗೆ ಸಂಕಟ !

– ನಾಗೇಶ ಮೈಸೂರು

00627. ಯಾರೂ ಕೇಳದ ಹಾಡು…


00627. ಯಾರೂ ಕೇಳದ ಹಾಡು…
____________________

  

ಯಾರೂ ಕೇಳದ ಹಾಡದು
ಗುನುಗುಕೊಂಡಿದೆ ತನಗೇ ತಾನೆ
ಕೇಳುವರಿದ್ದು ಮನೆಗೇಕೊ ಗದ್ದಲ
ಕೇಳುವರಿಲ್ಲ ಮನದಲಿ ನಿಶ್ಚಲ ||

ಮಧುರವಿತ್ತೆಂದೆ ಮಧುಗೀತೆ
ಹಾಡಿದ್ದೆ ಹಾಡುತ್ತ ಹಾಡುತಿದೆ
ಕೇಳದ ಮನಸು ಅನ್ಯಮನಸ್ಕ
ಯಾಕೋ ಮತ್ತದನೆ ಹಾಕುವುದೇ ! ||

ನಿರಾಳವಾಗಿಸಲದು ಹಾಡು
ಕೇಳದೆ ಆಗುವುದೆಂತೊ ಸಾಂತ್ವನ
ಸೂತಕ ಹಿಡಿದ ಎದೆಯೊಳಗೆ
ಜಾತಕವೇಕೊ ಬಿಡದು ಅರೆಗಳಿಗೆ ||

ಆದಿತಲ್ಲಿಲ್ಲೊಂದು ಮಿಂಚಿನ ಸೆಲೆ
ಸಾಲದಾವುದೊ ತಟ್ಟನೆ ಸೆಳೆದು
ಕರವಶ ಪರವಶ ಭಾವದ ಚಿತ್ತ
ಚಂಚಲವೆಂದಾಯ್ತೊ ಗೊತ್ತಾಯ್ತಾ ? ||

ಇದು ಬದುಕಿನ ಶ್ರುತಿ ಲಯ ರಾಗ
ಗಾಯನ ವಾದನವಿದ್ದೂ ಸರಾಗ
ಬದುಕಲಿ ಬದುಕಿರದಿದ್ದರೆ ಜಗ ಜಾತ್ರೆ
ಸಂತೆಯ ಮನಕೆ ತಟ್ಟದು ಬೆರಗು ||

– ನಾಗೇಶ ಮೈಸೂರು

(Picture source: https://www.google.com.sg/imgres?imgurl=http://vignette1.wikia.nocookie.net/promised-land/images/7/7e/Song.png/revision/latest%253Fcb%253D20141120113911&imgrefurl=http://www.myricketyroad.com/2015/12/07/is-this-song-about-you/&h=827&w=975&tbnid=S5_TXrcxotCMIM:&docid=xPq7pV294JjDeM&ei=G8P8VoGLJuLwmAW4v5rYCw&tbm=isch&ved=0ahUKEwjBhPHAperLAhViOKYKHbifBrsQMwgjKAIwAg)