01680. ಉದ್ದ ಕೇಶದ ಕ್ಲೇಷ! (ಲಘು ಹಾಸ್ಯ)


01680. ಉದ್ದ ಕೇಶದ ಕ್ಲೇಷ! (ಲಘು ಹಾಸ್ಯ)

_____________________________________________

ಬೇಡಪ್ಪ ಸಾಕು, ಸಾಕೀ ನೀಳ ಕೇಶ !

ಎರಡು ಗಳಿಗೆ ಹರ್ಷ, ಮಿಕ್ಕಂತೆ ಕ್ಲೇಷ

ನೀಳವೇಣಿ ಪಾದದಾಚೆಗೂ ನೂಲೇಣಿ

ನಿಭಾಯಿಸೆ ನೆಲಕೆ ಹಾಕಲೆಂತು ಏಣಿ ? ||

ಮೋಟು ಜಡೆಗುಂಟು ಮಾರುದ್ದ ಹೂವು

ಇಷ್ಟುದ್ದ ಕೇಶವಿರೆ ಹೊರೆ ಹೊತ್ತ ನೋವು!

ತರಲೆಂತು ಆನೆಗೆ ಅರೆ ಕಾಸ ಮಜ್ಜಿಗೆ ?

ಸಾಕಾಗದಲ್ಲ ತಂದಿಟ್ಟರು ಹೂ ಮಳಿಗೆ ! ||

ಬಾಚಲ್ಹೊರಡೆ ವೈಭವ, ಸೋತ ಕರವೆ

ಸಿಕ್ಕು ಬಿಡಿಸದೆ ಸಿಕ್ಕ ಸಿಕ್ಕಲಿ ಮಾಯವೆ..

ಉಪಚಾರಕದಕೆ ಬೇಕೊಬ್ಬ ಚಾರಿಣಿ ಸಖ್ಯ

ತರಲೆಂತು ಪರರ, ತನ್ನ ಸಾಕುವುದೆ ಅಶಕ್ಯ ! ||

ಸಾಲದೇನು, ಬದುಕಿತ್ತ ಸಾಲದ ಹೊರೆ ?

ಹೊರಲೆಂತು ಮೇಲೆ ಕೇಶ ಭಾರ ಭಳಿರೆ..

ಹೊತ್ತ ಬೇನೆ, ತಲೆ ನೋವಾಗಿ ಮುತ್ತಿದರು

ತೋರದೆ ನಗುತ, ಪ್ರದರ್ಶಿಸುವ ಜರೂರು ! ||

ಯಾರಿಗ್ಹೇಳುವುದು, ಮಜ್ಜನ ಚಿತ್ರಹಿಂಸೆ

ಎಣ್ಣೆ ಸೀಗೆ ಚುಜ್ಜಲಪುಡಿ ಸೋಪಿನ ವರಸೆ

ಒದ್ದೆ ತಲೆಯೊಣಗಲು ಕ್ಷಣಗಣನೆ ಮೊತ್ತ

ಸುರುಳಿ ಸುತ್ತಲೇ ಹಗೆ, ಜಡೆ ಹೆಣೆಯಲೆಂತ ? ||

ನೋಡುಗರ ಕಣ್ಣು, ಊರವರ ಮಾತಾಟ

ಕತ್ತರಿಸಲೆಂತು, ಬಿಸಿ ತುಪ್ಪದ ನುಂಗಾಟ

ಅರೆಗಳಿಗೆಯಾ ಹೊಗಳಿಕೆ, ಮೆಚ್ಚಿಗೆ ಮುದಕೆ

ಎಷ್ಟಪ್ಪ ಸಂಕಟ ಪ್ರಭುವೆ, ಇಷ್ಟುದ್ದ ಕೇಶಕೆ ! ||

– ನಾಗೇಶ ಮೈಸೂರು

೦೫.೦೪.೨೦೧೮

(ವಿಡಿಯೋ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಮೂಲ, Yamunab Bsyರವರು ಕಳಿಸಿದ್ದು – ಧನ್ಯವಾದಗಳು 👍😊🙏💐)

00829. ಇಳಿತದೆ ಕುಳಿತ! (ಉಬ್ಬರವಿಳಿತ ಈ ಎದೆ ಬಡಿತ – 02)


00829. ಇಳಿತದೆ ಕುಳಿತ! (ಉಬ್ಬರವಿಳಿತ ಈ ಎದೆ ಬಡಿತ – 02)
_______________________________________________

ಈ ಮಾನವ ದೇಹ ರಚನೆಯ ಅಪ್ರತಿಮ ಕಲಾಚಾತುರ್ಯದಲ್ಲಿ, ಹೃದಯದ ಸ್ಥಾನ ವಿಶಿಷ್ಟವಾದದ್ದು. ಉಬ್ಬರವಿಳಿತದ ಹಾಗೆ ಏರಿಳಿತದ ತಾಳ ಮೇಳದೊಡನೆ ಹೆಣಗುವ ಈ ಮಾನವ ಪಂಪು ಎಲ್ಲಿಯವರೆಗೆ ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವೊ ಅಲ್ಲಿಯತನಕ ದೇಹದ ದೈನಂದಿನ ಕಾರ್ಯಾಚರಣೆಗೆ ಅಡ್ಡಿಯಾಗುವುದಿಲ್ಲ. ಆದರೆ, ಅದನ್ನು ಆ ಸ್ತಿತಿಯಲ್ಲಿಡುವ ಕಾರ್ಯ ಅಷ್ಟು ಸುಲಭವಲ್ಲ. ನಾವು ಉಂಡು ತಿನ್ನುವ ಊಟದಿಂದಿಡಿದು, ಮಾಡುವ ಕೆಲಸ ಕಾರ್ಯಗಳು, ವ್ಯಾಯಾಮಾಯಮಗಳು – ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿರಬೇಕಾದ ಅಗತ್ಯವನ್ನು ತೆಳು ಹಾಸ್ಯದ ಲಯದಲ್ಲಿ, ಪ್ರಾಸದ ನೆರಳಲ್ಲಿ, ಹಾಡೊಂದರ ಪಲ್ಲವಿಗನುಗುಣವಾಗಿರುವಂತೆ ಹೊರಹೊಮ್ಮಿದ ಕಾವ್ಯ.

ಈ ಎರಡನೆ ಭಾಗದ ಕವನ ದಿನದಿನದ ಅನಿವಾರ್ಯ ಬದುಕಿನ ಶೈಲಿ ಹಾಗು ವಯಸಿನ ಸಹಜ ಮನೋವೃತ್ತಿಯ ಪರಿಣಾಮವಾಗಿ ಆಗಬಹುದಾದ ಪ್ರಕ್ರಿಯೆಗಳನ್ನು ಜೋಡಿಸುತ್ತ ಹೋಗುತ್ತದೆ. ಉಬ್ಬರದ ಇಳಿತದ ಸಾಂಕೇತಿಕತೆ ದೇಹದ ಪ್ರತಿಕ್ರಿಯಾತ್ಮಕತೆಯ ಇಳಿತದ ಸಂಕೇತವು ಆಗಿದೆ.

ಮುನ್ನೆಚ್ಚರಿಕೆಯೊತ್ತೊ, ಇಲ್ಲವೊ ಈ ಅನಿವಾರ್ಯಗಳು ಹೇಗೂ ಜೀವನವನ್ನು ಕಾಡಿಸುವುದು ಸತ್ಯ. ಅದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರುವ ಅಥವ ಸಾಧ್ಯವಿದ್ದಷ್ಟು ಎಚ್ಚರಿಕೆ ವಹಿಸಬೇಕಾದ ವಿಷಯಗಳನ್ನು ಎತ್ತಿ ತೋರುವ ಲಹರಿ ಇಲ್ಲಿ ಕಾಣುತ್ತದೆ. ಎಲ್ಲಾ ಮಿತಿ ಮೀರಿದರೆ ವೈದ್ಯರ ದಾರಿಯಂತೂ ಇದ್ದೆ ಇದೆಯೆಂಬ ಸಮಾಧಾನಿಸುವ ದನಿಯೂ ಕೊನೆಯಲ್ಲಿ ಕಾಣುತ್ತದೆ.

ಇಳಿತದೆ ಕುಳಿತ! (ಉಬ್ಬರವಿಳಿತ ಈ ಎದೆ ಬಡಿತ – 02)
______________________________________


(Picture from Internet)

ಹುಚ್ಚಿನ ದುಡಿಮೆ
ಹೆಚ್ಚು ಕಡಿಮೆ
ಅಂಗಾಂಗಗಳು ಕಂಗಾಲು
ಕೆಲಸದ ಒತ್ತಡ
ಹೃದಯಕೆ ಬಗ್ಗಡ
ಬದುಕಿನ ಶೈಲಿ ಸಮಪಾಲು 😒||

ವ್ಯಾಯಮ ಹೀನ
ದೈನಂದಿನ ಪಯಣ
ಟ್ರಾಫಿಕ್ಕಿನ ಜತೆ ಕಲ್ಯಾಣ
ಕೆಲಸ ಆರಾಮ
ದೇಹ ವಿರಾಮ
ಕಟ್ಟಿಡುವುದು ಹೇಗೊ ಈ ಪ್ರಾಣ ? 🤔 ||

ಸಮಯದ ಗೊಜ್ಜು
ನುಜ್ಜು ಗುಜ್ಜು
ಸಂಸಾರಕೆ ಬರಿ ಮಂದಹಾಸ
ಸಹಿಸುತ ಕಾದು
ಬೇಸತ್ತು ಬೈದು
ಬೇಡೆನ್ನುವರು ನಿನ್ನ ಸಹವಾಸ 😛 ||

ಕೆಲಸದಿ ಅಜ್ಜಿ
ಮನೆಯಲಿ ಬಜ್ಜಿ
ಉಬ್ಬರವಿಳಿತದ ಹೆಚ್ಚಾಟ
ಹೃದಯ ನಪಾಸು
ರಕುತ ವಾಪಸ್ಸು
ಬೈಪಾಸ್ ಸರ್ಜರಿ ಖರ್ಚಾಟ 😫 ||

ಇಷ್ಟೇ ಗುಟ್ಟು
ಹೃದಯದ ಮುಟ್ಟು
ಹರಿ, ಕರಿ, ವರಿಗಳ ಹೊಂಚಾಟ
ಬಾಯಿಗೆ ಕಟ್ಟು
ತುಸು ಕಸರತ್ತು
ತಪ್ಪಿಸೆ ಹೃದಯದ ಪರದಾಟ 😷 ||

ಇಷ್ಟಕು ಮೀರಿ
ಎಲ್ಲ ತಯಾರಿ
ಆಡಲು ಹೃದಯ ತುಂಟಾಟ
ಚಿಂತಿಸಬೇಡ
ವೈದ್ಯರ ನೋಡ
ಮದ್ದಲಿ ಮಣಿಸಲು ಚೆಲ್ಲಾಟ 💰||

—————————————————————————-
ನಾಗೇಶ ಮೈಸೂರು
—————————————————————————-

00828. ಉಬ್ಬರದ ಸೆಳೆತ! (ಉಬ್ಬರವಿಳಿತ ಈ ಎದೆ ಬಡಿತ – 01)


00828. ಉಬ್ಬರದ ಸೆಳೆತ! (ಉಬ್ಬರವಿಳಿತ ಈ ಎದೆ ಬಡಿತ – 01)
__________________________________________

ಈ ಮಾನವ ದೇಹ ರಚನೆಯ ಅಪ್ರತಿಮ ಕಲಾಚಾತುರ್ಯದಲ್ಲಿ, ಹೃದಯದ ಸ್ಥಾನ ವಿಶಿಷ್ಟವಾದದ್ದು. ಉಬ್ಬರವಿಳಿತದ ಹಾಗೆ ಏರಿಳಿತದ ತಾಳ ಮೇಳದೊಡನೆ ಹೆಣಗುವ ಈ ಮಾನವ ಪಂಪು ಎಲ್ಲಿಯವರೆಗೆ ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವೊ ಅಲ್ಲಿಯತನಕ ದೇಹದ ದೈನಂದಿನ ಕಾರ್ಯಾಚರಣೆಗೆ ಅಡ್ಡಿಯಾಗುವುದಿಲ್ಲ. ಆದರೆ, ಅದನ್ನು ಆ ಸ್ತಿತಿಯಲ್ಲಿಡುವ ಕಾರ್ಯ ಅಷ್ಟು ಸುಲಭವಲ್ಲ. ನಾವು ಉಂಡು ತಿನ್ನುವ ಊಟದಿಂದಿಡಿದು, ಮಾಡುವ ಕೆಲಸ ಕಾರ್ಯಗಳು, ವ್ಯಾಯಾಮಾಯಮಗಳು – ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿರಬೇಕಾದ ಅಗತ್ಯವನ್ನು ತೆಳು ಹಾಸ್ಯದ ಲಯದಲ್ಲಿ, ಪ್ರಾಸದ ನೆರಳಲ್ಲಿ, ಹಾಡೊಂದರ ಪಲ್ಲವಿಗನುಗುಣವಾಗಿರುವಂತೆ ಹೊರಹೊಮ್ಮಿದ ಕಾವ್ಯ.

ಈ ಮೊದಲಿನ ಭಾಗದ ಕವನ ದಿನದಿನದ ಆಹಾರ, ನಡುವಳಿಕೆಯ ರೀತಿಗಳು ಉಬ್ಬರದ ಏರಿಕೆಗೆ ಕಾರಣವಾಗಬಹುದಾದ ಬಗೆಯನ್ನು ಚಿತ್ರಿಸುತ್ತವೆ. ಯಾವ್ಯಾವ ಬಗೆಯ ಸೆಳೆತಗಳು ಉಬ್ಬರದ ಕಸಿವಿಸಿಗೆ ಕಾರಣವಾಗಬಹುದೆಂಬ ಕಿರು ಪಟ್ಟಿಯನ್ನು ಬಣ್ಣಿಸುತ್ತಾ ಸಾಗುತ್ತದೆ ಈ ಕವನದ ಲಹರಿ – ಒಂದು ಬಗೆಯಲ್ಲಿ, ಯಾವುದರ ಕುರಿತು ಮುನ್ನೆಚ್ಚರಿಕೆ ವಹಿಸಬೇಕೆನ್ನುವ ಬಗ್ಗೆ ಹಾಸ್ಯದ ಲಹರಿಯಲ್ಲೆ ಉಳಿವು ಕೊಡುತ್ತ.

(Picture source : Internet)

ಉಬ್ಬರದ ಸೆಳೆತ! (ಉಬ್ಬರವಿಳಿತ ಈ ಎದೆ ಬಡಿತ – 01)
________________________________________

ಉಬ್ಬರವಿಳಿತ
ನಮ್ ಹೃದಯದ ಬಡಿತ
ಚಣ ಜಣ ಹಾಡುವ ಸಂಗೀತ
ನಿಲ್ಲದ ಗಾನ
ರಕುತದ ಪಯಣ
ನಿಂತರೆ ಸಾವಿಗೆ ಸಂಕೇತ 😔 ||

ತಿಂದರೆ ಕೊಬ್ಬು
ನಮ್ ಹೃದಯಕೆ ಗಬ್ಬು
ನರ ನಾಡಿಗಳೆಲ್ಲ ಹೊಡೆದಾಟ
ಹರಿಯದೆ ರಕ್ತ
ಹೃದಯ ಅಶಕ್ತ
ಬರಬಹುದು ಹೃದಯಾಘಾತ 😔||

ಬೆಳಗಿನ ಸಮಯ
ಬಿಟ್ಟರೆ ತಿಂಡಿಯ
ಕೆಟ್ಟು ಹೋಗುವ ಅನುಪಾತ
ಗೋಳಿನ ಭಕ್ತ
ಹೃದಯ ವಿರಕ್ತ
ಕುಲಗೆಟ್ಟು ಕಾಣುವೆ ಹಿಮಪಾತ 😨||

ಹೆಚ್ಚಿನ ಎಣ್ಣೆ
ತುಂಬಿದ ದೊನ್ನೆ
ಮುಚ್ಚಿಸುವುದು ಕೊಳವೆಯ ತೂತ
ಕ್ಯಾತೆಟರ ತುರುಕೆ
ಹೃದಯದ ಗೊರಕೆ
ತಪ್ಪಿಸಬೇಕು ಒಳ ಊತ 😎 ||

ಮಾಂಸ, ಮಡ್ಡಿ
ತೊಗಲಿನ ಬಡ್ಡಿ
ಹೆಚ್ಚುವುದಂತೆ ಮುಂಗೋಪ
ಹೆಚ್ಚಿಸುತ ಬಡಿತ
ಹೃದಯ ಮಿಡಿತ
ಹುಚ್ಚಿಡಿಸಿ ಕೊನೆಗೆ ಸಂತಾಪ 🙄 ||

ಕುಡಿತದ ಕುಣಿತ
ಆಯಸ್ಸಿನ ಕಡಿತ
ಹೃದಯ ಕವಾಟಗಳು ಬಲಹೀನ
ಮುದುರಿಸಿ ಯುಕ್ತಿ
ಉಡುಗಿಸಿದರೆ ಶಕ್ತಿ
ಎಲ್ಲ ಪ್ರಯತ್ನಗಳು ಫಲಹೀನ 😟 ||

———————————————————————–
ನಾಗೇಶ ಮೈಸೂರು
———————————————————————–

00788. ಕುಂಭಕರ್ಣ ವೈಭವ


00788. ಕುಂಭಕರ್ಣ ವೈಭವ
_________________________________

ಬೆಳಗಾಗುತ್ತಿದ್ದಂತೆ ಎಬ್ಬಿಸಿ, ಸಿದ್ದ ಮಾಡಿಸಿ, ತಿಂಡಿ ತಿನಿಸಿ ಶಾಲೆಗೆ ದಬ್ಬುವ ತನಕ ಮಕ್ಕಳಿಗಿಂತ ಹೆಚ್ಚಿನ ಕಾಟ, ತೊಂದರೆ ಅನುಭವಿಸುವವರು – ಅಪ್ಪ, ಅಮ್ಮಗಳು. ಅದರಲ್ಲೂ ಕೆಲವು ಕುಂಭಕರ್ಣರನ್ನು ಎಬ್ಬಿಸುವ ತನಕದ ಪಾಡು, ದೇವರಿಗೆ ಪ್ರೀತಿ; ಅಂತಹ ಒಂದು ದೈನಂದಿನ ಯತ್ನದ ವರ್ಣನೆ – ಈ ಕವನ.
ನಮ್ಮನೆ ರಾಮಾಯಣವು ಸಹ, ಬಹಳ ಸುಪ್ರಸಿದ್ಧ
ಮಗರಾಯ ಕುಂಭಕರ್ಣನೊಂದಿಗೆ, ದಿನನಿತ್ಯ ಯುದ್ಧ
ರಣರಂಗಕೆ ಕಳಿಸಲವನ, ನಿದ್ದೆಯೆಬ್ಬಿಸೆ ಘನ ಘೋರ
ಶಾಲೇಲಿ ಕಲಿಯಲವನಿಗೆ, ಪಾಪ ವೇದನೆ ಅಪಾರ ||

ರಾತ್ರಿ ಮಲಗೆಂದರು ಬೇಗ, ಪವಡಿಸದ ಸುಕುವರ
ಬಿಸಿನೀರ ಹನಿ ಸಿಂಪಡಿಕೆ, ಆರಂಭ ಎಬ್ಬಿಸೆ ಪ್ರವರ
ಆತ್ಮ ರಕ್ಷಣೆಗೆಂದು ಕೂತ, ರಕ್ಷಣಾತ್ಮಕ ಸರಿ ದೂರ
ಮಳೆ ಸಿಂಚನ ತೊಡೆಯಲು, ಟರ್ಕಿ ಟವೆಲ್ಲಿನ ಚಾರ ||

ಬಿಸಿ ಕಾಫಿ ಲೋಟ, ಕೆಲವೊಮ್ಮೊಮ್ಮೆ ಆಡುವಾಟ
ಚುರುಗುಟ್ಟಿಸುವ ಬಿಸಿ, ಮೈಕೈಗೆ ಸರಿ ನೇವರಿಸಾಟ
ನಿದ್ದೆಗಣ್ಣಲೇ ಸೊರ ಸೊರ, ಇಳಿದರೂ ಬಿಸಿ ಕಾಫಿ
ಮುದುರಿ ಮೆತ್ತೆಗೆ ಮತ್ತೆ, ಒರಗಿಬಿಡುವನಾ ಪಾಪಿ ||

ಅಂಗಮರ್ದನ ಸೇವೆ ರಮಿಸೆ, ಹಿತ ಕೈ ಕಾಲ್ನೋವೆ
ತಲೆಯಿಂದುಂಗುಷ್ಟತನಕ, ನಡೆವ ಅವಿರತ ಸೇವೆ
ಎಚ್ಚರಾಗುವ ಬದಲು, ಬೆಚ್ಚಗಾಗಿಸಿ ಮರ್ದನ ತಾಡ
ಹಾಯಾದ ಸುಖ ನಿದ್ದೆ, ಮತ್ತೋಡುವ ಪರಿ ನೋಡ ||

ಎಡಬಲ ಎಳೆತ ಗುದ್ದು, ಮುದ್ದಾಡಿಸಿ ಒದ್ದಾಡಿಸುತ
ಕಲ್ಲು ಕೊರಡಂತೆ ಬಿದ್ದಿರಲು, ಜತೆ ಬೈಗುಳ ಬಿಗಿತ
ಕಿವಿ ಗುರುಗುಟ್ಟುವ ಗಾತ್ರದೆ, ಒಮ್ಮೊಮ್ಮೆ ಸಂಗೀತ
ಎದ್ದು ಕೂತರು ಚಾದರ, ಹೊದ್ದು ಒರಗಿ ಕೂತ ತಾತ ||

ಹೊದ್ದ ಚಾದರ ಕಿತ್ತೆಸೆದು, ಫಂಖವೋಡಿಸುತ ಕಾಟ
ಬೆರಳಲೇ ಹೊಟ್ಟೆ ಮೇಲಾನೆ, ರಥ ಕುದುರೆ ಓಡಾಟ
ಕಚಗುಳಿಸಿ ಕೆರಳಿಸಿ, ದೂರ್ವಾಸನವತಾರದ ಒರಟ
ಕಣ್ಣುಮುಚ್ಚಾಲೆ ಅರಚಿ ಪರಚಿ, ಪರಸ್ಪರರ ಜೂಟಾಟ ||

ಶತ ಸಾಹಸ ಮಾಡಿಸೆದ್ದರು, ಸರಿ ಮುಗಿಯದ ಕಥೆ
ಕಥೆ ಹೇಳಬೇಕೆಂದು ಪಟ್ಟು, ಹಿಡಿದು ಕೂತವನ ವ್ಯಥೆ
ಹೊಸ ಹೊಸತ ಕಲ್ಪನೆ, ಕಥೆ ದಿನ ಹುಟ್ಟಿಸಬೇಕಂತೆ
ಕಡೆಗೂ ಬಚ್ಚಲಿಗೆ, ಎಳೆದೊಯ್ಯುವಷ್ಟರಲ್ಲಿ ಉಸ್ಸಂತೆ ||

ಶಾಲೆಗೆ ಸಂಕಟ ಹೊರಡಲು, ಕಪಟ ಎಲ್ಲ ನಾಟಕ
ಹೊಟ್ಟೆ ನೋವಿಂದಿಡಿದು, ನೆಗಡಿ ಶೀತಗಳಾ ಜಾತಕ
ಸಜ್ಜಾಗಿಸಲು ಯೋಧ, ಕುಂಭಕರ್ಣ ಹರ ಸಾಹಸ
ಮರುದಿನ ಪುನರಾವರ್ತನೆ, ಸಹನೆ ತಾಳ್ಮೆ ಪರೀಕ್ಷ ||

——————————————————————-
ನಾಗೇಶ ಮೈಸೂರು
——————————————————————-
(Picture source : http://www.youtube.com)

00747. ಲಘು ಹರಟೆ,ಹಾಸ್ಯ : ಗುಬ್ಬಣ್ಣ ಇನ್ ಪೀಯೂಸಿ ಫೇಲ್ ಎಪಿಸೋಡ್ !


00747. ಲಘು ಹರಟೆ,ಹಾಸ್ಯ : ಗುಬ್ಬಣ್ಣ ಇನ್ ಪೀಯೂಸಿ ಫೇಲ್ ಎಪಿಸೋಡ್ !
_________________________________________________________

(Picture source :http://indiatoday.intoday.in/education/story/karnataka-puc-2-supplementary-exams/1/439371.html)

ಗುಬ್ಬಣ್ಣ ಧಢದಢನೆ ಓಡೋಡುತ್ತ ಬಂದು ಕಣ್ಮುಂದೆ ಸ್ವೀಟ್ ಬಾಕ್ಸೊಂದನ್ನು ಹಿಡಿದು “ತಗೊಳ್ಳಿ ಸಾರ್, ತಿಂದು ಬಿಟ್ಟು ಕಂಗ್ರಾಟ್ಸ್ ಹೇಳಿ ..” ಎಂದಾಗ ಯಾಕೆಂದರಿಯದೆ ಸ್ವಲ್ಪ ಗೊಂದಲಕ್ಕೆ ಬಿದ್ದು ಅವನ ಮುಖಾ ನೋಡಿದೆ.

” ತೊಗೊಳ್ಳಿ ಸಾರ್.. ಮೊದಲು.. ಆಮೇಲೆ ಹೇಳ್ತೀನಿ ಯಾಕೆ ಅಂತ..” ಅಂದು ಇನ್ನಷ್ಟು ಹತ್ತಿರಕ್ಕೆ ತಂದ ಒಳಗಿನ ಸುವಾಸನೆ ಮೂಗೊಳಕ್ಕೆ ನೇರ ಅಟ್ಟುವವನ ಹಾಗೆ. ಯಾಕಾದರೂ ಹಾಳಾಗಲಿ, ಸ್ವೀಟು ನನ್ನ ವೀಕ್ನೆಸ್ ತಾನೇ ಅಂದುಕೊಂಡವನೆ ದೊಡ್ಡದೊಂದು ತುಂಡು ಬರ್ಫಿ ಬಾಯಿಗಿಡುತ್ತಿದ್ದಂತೆ ಚಕ್ಕನೆ ನೆನಪಾಯ್ತು – ಅವತ್ತು ಸೆಕೆಂಡ್ ಪೀಯೂಸಿ ರಿಸಲ್ಟ್ ಡೇ ಅಂತ. ಗುಬ್ಬಣ್ಣನ ಮಗಳೂ ಎಗ್ಸಾಮ್ ತೊಗೊಂಡಿದ್ದು ಗೊತ್ತಿತ್ತು..

” ಗೊತ್ತಾಯ್ತು ಬಿಡೋ ಗುಬ್ಬಣ್ಣ.. ಮಗಳ ರಿಸಲ್ಟ್ ಬಂತೂ ಅಂತ ಕಾಣುತ್ತೆ.. ಫಸ್ಟ್ ಕ್ಲಾಸಾ ? ಡಿಸ್ಟಿಂಕ್ಷನ್ನಾ? ಈಗೆಲ್ಲಾ ನೈಂಟಿ ಅಂಡ್ ಎಬೌ ಇದ್ರೇನೆ ಅಪ್ಪಾ ಮೆಡಿಕಲ್ಲು , ಇಂಜಿನಿಯರಿಂಗೂ ” ಅಂದೆ ಗುಟ್ಟು ಬೇಧಿಸಿದವನ ಗತ್ತಿನಲ್ಲಿ.

ಮೊದಲೆ ತೆರೆದ ಹಲ್ಲುಗಳನ್ನು ಮತ್ತಷ್ಟು ಅಗಲವಾಗಿ ತೆರೆದು ನಗುತ್ತ , ” ಕ್ರಾಕ್ಜಾಕ್ ಫಿಫ್ಟಿ, ಫಿಫ್ಟಿ ಸಾರ್ ” ಅಂದ – ಅರ್ಧ ಮಾತ್ರ ಸರಿಯಾದ ಊಹೆ ಅನ್ನೊ ಇಂಗಿತದಲ್ಲಿ..

“ನನಗರ್ಥವಾಗಲಿಲ್ಲ ಗುಬ್ಸ್.. ಯಾವ ಫಿಫ್ಟಿ ರೈಟು ? ಯಾವ ಫಿಫ್ಟಿ ರಾಂಗು ? ” ಸ್ವಲ್ಪ ತೀರಾ ಪ್ರೀತಿ ಜಾಸ್ತಿಯಾದಾಗ ನಾನು ‘ಗುಬ್ಸ್’ ಅಂತ ಕರೆಯೋ ವಾಡಿಕೆ. ಅದೂ ತೀರಾ ಅತಿಯಾದಾಗ ‘ಗೂಬ್ಸ್..’ ಆಗುವುದು ಉಂಟು. ಆದರೆ ಅವನೆಂತ ಪರಮ ಯೋಗಿಯೆಂದರೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸೊ ಸ್ಥಿತಪ್ರಜ್ಞ ಗಿರಾಕಿ.

“ಪೀಯೂಸಿ ರಿಸಲ್ಟ್ ಸರಿ ಸಾರ್.. ಆದರೆ ಪಾಸು, ಕ್ಲಾಸು ತಪ್ಪು ಸಾರ್..!”

“ಅಂದ್ರೆ..?”

” ‘ಅಂದ್ರೆ’ ಅಂದ್ರೆ ? ಫೇಲೂ ಅಂತ..! ಮೂರು ಸಬ್ಜೆಕ್ಟ್ಟಲ್ಲಿ ಡುಮ್ಕಿ ಸಾರ್..! ಅದಕ್ಕೆ ಪಾರ್ಟಿ ಕೊಡಿಸಬೇಕು ಅಂತಾ ಇದೀನಿ..!!” ಅಂದ.

ನಾನು ಬೆಚ್ಚಿಬಿದ್ದೆ ..! ಎಲ್ಲಾ ಪಾಸಾಗುವುದಕ್ಕು ಸ್ವೀಟ್ ಕೊಡದೆ ಬರಿ ಕ್ಲಾಸು, ಡಿಸ್ಟಿಂಕ್ಷನ್ನು, ರ್ಯಾಂಕಿಗೆ ಮಾತ್ರ ಏನಾದರೂ ಹಂಚುವ ಕಾಲ.. ಇವನು ನೋಡಿದರೆ ಫೇಲಿಗೆ ಸ್ವೀಟು ಕೊಟ್ಟಿದ್ದೆ ಅಲ್ಲದೆ ಪಾರ್ಟಿ ಬೇರೆ ಕೊಡಿಸೋ ಮಾತಾಡ್ತಾ ಇದಾನೆ ? ಎಲ್ಲೋ ‘ಸ್ಕ್ರೂ’ ಸ್ವಲ್ಪ ಲೂಸಾಗಿರಬೇಕು ಅಂತ ಡೌಟ್ ಶುರುವಾಯ್ತು… ಆ ಅನುಮಾನದಲ್ಲೇ,

“ಗುಬ್ಬಣ್ಣಾ.. ಆರ್ ಯೂ ಸೀರಿಯಸ್, ಆರ್ ಜೋಕಿಂಗ್ ?” ಎಂದೆ.

” ಜೋಕೆಂತದ್ದು ಬಂತು ತೊಗೊಳ್ಳಿ ಸಾರ್.. ನಮ್ಮಪ್ಪರಾಣೆಗೂ ಸತ್ಯದ ಮಾತು..”

“ಬಟ್ ದೆನ್ ಐ ಡೊಂಟ್ ಅಂಡರಸ್ಟ್ಯಾಂಡ್.. ಎಲ್ಲೋ ಏನೋ ಮಿಸ್ ಹೊಡಿತಾ ಇದೆ ಗುಬ್ಬಣ್ಣ.. ಕಮಾನ್ ವಾಟ್ಸಪ್ಪ್ ..?”

ಒಂದರೆಗಳಿಗೆ ಗುಬ್ಬಣ್ಣ ಮಾತಾಡಲಿಲ್ಲ… ಸ್ವಲ್ಪ ಬಿಲ್ಡಪ್ ಕೊಡುವಾಗ ಹಾಗೆ ‘ಪಾಸ್’ ಕೊಡುವುದು ಅವನು ಕನ್ಸಲ್ಟೆಂಟ್ ಆದಾಗಿನಿಂದ ಕಲಿತ ದುರ್ವಿದ್ಯೆ… ಒತ್ತಾಯಿಸಿ ಕೇಳಲಿ ಅನ್ನೊ ಕುಟಿಲ ಬುದ್ದಿ ಅಂತ ಗೊತ್ತಿದ್ದರಿಂದ ನಾನು ಬೇಕಂತಲೇ ನಿರಾಸಕ್ತನಂತೆ ಸುಮ್ಮನಿದ್ದೆ, ಅವನೆ ಬಾಯಿ ಬಿಡುವ ತನಕ.

” ಸಾರ್..ಹಳೆಯ ಮತ್ತು ಈಗಿನ ಚರಿತ್ರೆ ಎಲ್ಲಾ ಅವಲೋಕಿಸಿ ನೋಡಿದ ಮೇಲೆ ನನಗೆ ಒಂದಂತೂ ಅರ್ಥವಾಯ್ತು ಸಾರ್.. ಇಡಿ ಜಗತ್ತಿನಲ್ಲಿ ಸುಪರ್ ಸಕ್ಸಸ್ ಆಗಿರೋರೆಲ್ಲರಲ್ಲು ಬರಿ ಫೇಲಾದವರೆ ಜಾಸ್ತೀ..” ರಾಮಬಾಣದಂತೆ ಬಂತು ಏನೊ ಪೀಠಿಕೆ ಹಾಕುವ ತರ..

“ಅದಕ್ಕೆ..?”

” ಅದಕ್ಕೆ ನಾನೂ ಡಿಸೈಡ್ ಮಾಡಿಬಿಟ್ಟೆ ಅವಳೇನಾದ್ರೂ ಫೇಲ್ ಆದ್ರೆ ತಲೆ ಕೆಡಿಸಿಸಿಕೊಳ್ಳದೆ ಸೆಲಬ್ರೇಟ್ ಮಾಡೋದೆ ಸರಿ.. ಅಂತ”

” ಗುಬ್ಬಣ್ಣ.. ನಿನಗೆ ತಿಕ್ಕಲಾ? ಓದದವರು, ಫೇಲಾದವರೆಲ್ಲ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್,ಅಬ್ರಹಾಂ ಲಿಂಕನ್, ಡಾಕ್ಟರ್ ರಾಜಕುಮಾರ್ ತರ ಸುಪರ್ ಸಕ್ಸಸ್ ಆಗಲ್ಲಾ ಲೈಫಲ್ಲಿ..”

” ಇರಬಹುದು ಸಾರ್.. ಆದ್ರೆ ಸಕ್ಸಸ್ ಆಗೊ ಛಾನ್ಸ್ ಆದ್ರೂ ಇರುತ್ತಲ್ಲಾ ?”

” ಏನು ಮಣ್ಣಾಂಗಟ್ಟೆ ಛಾನ್ಸ್ ? ಕೋಟ್ಯಾಂತರ ಜನ ಫೇಲಾದವರಲ್ಲಿ ನಾಲ್ಕೈದು ಜನ ಸುಪರ್ ಸಕ್ಸಸ್ ಆಗ್ಬಿಟ್ರೆ ಫೇಲಾದೊರೆಲ್ಲ ಬಿಲ್ಗೇಟ್ಸ್ , ಸ್ಟೀವ್ ಜಾಬ್ಸ್ ಆಗ್ಬಿಡಲ್ಲ ಗೊತ್ತಾ”

“ಗೊತ್ತು ಸಾರ್… ಒಪ್ಕೋತೀನಿ… ಹಾಗಂತ ಪಾಸಾದವರೆಲ್ಲ ಏನ್ ಅಂಬಾನಿ, ಟಾಟಾ, ಬಿರ್ಲಾಗಳಾಗ್ಬಿಟ್ಟಿದಾರ ? ಸೂಟು, ಬೂಟು, ಸ್ಕರ್ಟು, ಟೈ ಹಾಕ್ಕೊಂಡು ಹೈಟೆಕ್ ಹೊಲ ಗದ್ದೆ ಫೀಲ್ಡಲ್ಲಿ ಸೊಫಿಸ್ಟಿಕೇಟೆಡ್ ಕೂಲಿ ಕೆಲಸಕ್ಕೆ ತಾನೇ ಹೋಗ್ಬೇಕು ? ”

ನನಗೇನೊ ಮಲ್ಟಿ ನ್ಯಾಷನಲ್ ಕಂಪನಿಲಿ ಸಾವಿರಗಟ್ಟಲೆ, ಲಕ್ಷಗಟ್ಟಲೆ ಸಂಬಳ ತೊಗೊಳ್ಳೊ ವೈಟ್ ಕಾಲರ್ ಗುಂಪನ್ನೆಲ್ಲ ಸಾರಾಸಗಟಾಗಿ ಒಟ್ಟಾಗಿ ಸೇರಿಸಿ ಸೊಫಿಸ್ಟಿಕೇಟೆಡ್ ಕೂಲಿಗಳು ಅಂದಿದ್ದು ಬಿಲ್ಕುಲ್ ಇಷ್ಟವಾಗಲಿಲ್ಲ.. ಅದರಲ್ಲೂ ಅವನೂ, ನಾನು ಇಬ್ಬರೂ ಅದೇ ಮಂದೆಯಲ್ಲೆ ಮೇಯುತ್ತಿರೊ ಕುರಿಗಳು ಅಂತ ಗೊತ್ತಿದ್ದೂ. ಆದರು ಮೊದಲು ಅವನ ಆರ್ಗ್ಯುಮೆಂಟಿಗೆ ಕೌಂಟರ್ ಆರ್ಗ್ಯುಮೆಂಟ್ ಹಾಕುತ್ತ,

” ಅಂಬಾನಿ ಟಾಟಾ ಬಿರ್ಲಾಗಳೆಲ್ಲರ ಪೀಳಿಗೆಯವರು ಪಾಸಾಗಿ ಬಂದು ಸಕ್ಸಸ್ ಆಗ್ತಾ ಇಲ್ವಾ ಈಗಲೂ ? ನೋಡು ಹೇಗೆ ನಡೆಸ್ಕೊಂಡು ಹೋಗ್ತಾ ಇದಾರೆ ಅವರ ಪರಂಪರೆನಾ?”

” ಅವರು ಬಿಡಿ ಸಾರ್.. ಪಾಸ್ ಮಾಡಿದ್ರು ಲೆಕ್ಕವಿಲ್ಲ , ಫೇಲಾದ್ರು ಲೆಕ್ಕವಿಲ್ಲ.. ಅವರ ಅಪ್ಪಂದಿರು, ತಾತಂದಿರು ಮಾಡಿಟ್ಟಿರೊದು ನೋಡ್ಕೊಳೋಕೆ ಇನ್ನು ಹತ್ತು ಜನರೇಷನ್ ಬೇಕು..ನಮ್ಮ, ನಿಮ್ಮಂತಹ ಬಡಪಾಯಿಗಳಲ್ಲಿ ಹೇಳಿ ಸಾರ್, ಆದಷ್ಟು ಜನ ಪಾಸಾಗಿ ಆ ಥರ ಸಕ್ಸಸ್ಸು ಆಗಿರೋರು ? ಎಲ್ಲಾ ಹೋಗಿ ಅವರ ಅಥವಾ ಆ ತರದ ಕಂಪನಿಗಳಲ್ಲೆ ಕೂಲಿನಾಲಿ ಕೆಲಸಕ್ಕೆ ಸೇರ್ಕೊಂಡಿರೊರೆ ತಾನೆ ?” ಎಂದ.

ಅವನು ಹೇಳಿದ್ದು ಒಂದು ರೀತಿ ನಿಜವೇ ಅನಿಸಿತು.. ಹೆಸರಿಗೆ ನೆನಪಿಸಿಕೊಳ್ಳೋಣ ಅಂದ್ರೂ ಒಂದೆರಡೂ ನೆನಪಾಗ್ತಾ ಇಲ್ಲಾ – ಇನ್ಫೋಸಿಸ್ ತರದ ಹಳೆಯ ಕುದುರೆಗಳನ್ನ ಬಿಟ್ಟರೆ.. ಆದರೂ ತೀರಾ ಜುಜುಬಿ ಬೇಸಾಯಕ್ಕೆ ಹೋಲಿಸಿ, ಕೂಲಿನಾಲಿ ಅಂತ ಖಂಡಂ ಮಾಡೋದು ತೀರಾ ಅತಿಯೆನಿಸಿತು. ಆ ಉರಿಯಲ್ಲೆ ” ಅದೇನೆ ಆಗ್ಲಿ ಗುಬ್ಬಣ್ಣ.. ಅದನ್ನ ಕೂಲಿ ಮಟ್ಟಕ್ಕೆ ಹೋಲಿಸೋದು ನನಗೆ ಹಿಡಿಸೊಲ್ಲ ನೋಡು.. ದೇ ಆರ್ ಆಲ್ ರೆಸ್ಪೆಕ್ಟೆಡ್ ಜಾಬ್ಸ್.. ಹಾಗೆಲ್ಲ ಅವಹೇಳನ ಮಾಡೋದು ತಪ್ಪು..”

” ಸಾರ್..ನಾ ಎಲ್ಲಿ ಅವಹೇಳನ ಮಾಡಿದೆ ? ಇರೋ ವಿಷಯ ಹೇಳಿದೆ ಅಷ್ಟೆ.. ಯಾವುದೋ ದೇಶದ, ಯಾರೋ ಗಿರಾಕಿ ಆರ್ಡರು ಕೊಡ್ತಾನೆ.. ಅದನ್ನ ಬಾಡಿ ಸೈಜಿನ ಅಳತೆ ತೊಗೊಂಡು ಬಟ್ಟೆ ಹೊಲಿಯೊ ಟೈಲರುಗಳ ತರ ನಿಮ್ಮ ಈ ಪಾಸಾದ ಹುಡುಗರು ಪ್ರೊಗ್ರಾಮಿಂಗ್ ಅಂತಲೊ, ನೆಟ್ವರ್ಕಿಂಗ್ ಹೆಸರಲ್ಲೊ, ಆರ್ಕಿಟೆಕ್ಚರ್ ನೆಪದಲ್ಲೊ – ಯಾವುದೋ ಒಂದು ಹೆಸರಲ್ಲಿ ಮಾಡೊ ಕೆಲಸ ಕೂಲಿ ತರ ಅಲ್ದೆ ಇನ್ನೇನು ಸಾರ್..? ದಿನಗೂಲಿ ತರ ಅಲ್ದೆ ತಿಂಗಳ ಸಂಬಳ, ಬೋನಸ್ಸು ಅದೂ ಇದೂ ಅಂತ ಕೊಟ್ರೂ , ಅದೂ ಮಾಡಿದ ಕೆಲಸಕ್ಕೆ ಕೂಲಿ ಕೊಟ್ಟ ಹಾಗೆ ಲೆಕ್ಕಾ ತಾನೆ ?” ಅಂತ ಸಾರಾಸಗಟಾಗಿ ಇಡೀ ವರ್ಕಿಂಗ್ ಕಮ್ಯುನಿಟಿಯನ್ನೆ ಕೂಲಿ ಕೆಲಸದ ಹಣೆಪಟ್ಟಿಯಡಿ ಹಾಕಿ ಕೂರಿಸಿಬಿಟ್ಟ!

ಆದರು ನಾನು ಪಟ್ಟು ಬಿಡದೆ, “ಹಾಗಂತ ವಾದಕ್ಕೆ ಹೌದು ಅಂತ ಒಪ್ಕೊಂಡ್ರೂನು, ವ್ಯವಸಾಯಕ್ಕೂ ಮಾಡ್ರನ್ ಇಂಡಸ್ಟ್ರಿಗು ಹೋಲಿಸೋದು ಸರಿಯಿಲ್ಲ ಬಿಡು.. ಮಳೆ ನೀರು ನಂಬಿಕೊಂಡು ಉತ್ತಿಬಿತ್ತಿ ಬೆಳೆಯೊ ರೈತನೇನು ಕಮ್ಮಿ ಕೂಲಿನಾ? ಅವನ ಹೊಲದಲ್ಲಿ ಅವನೂ ಕೂಲಿನೆ ತಾನೆ ? ಅಲ್ಲಿರೋ ರಿಸ್ಕು ಕಡಿಮೆದೇನಲ್ಲಾ ಗೊತ್ತಾ?” ಎಂದೆ..

ಗುಬ್ಬಣ್ಣ ನನಗಿಂತಲೂ ಜಿಗುಟು.. ” ಅಯ್ಯೋ ಬಿಡಿ ಸಾರ್, ಅದಕ್ಯಾಕೆ ನಮ್ಮಲ್ಲಿ ಜಗಳ.. ಬೇಸಾಯ ಮಾಡ್ಕೊಂಡು ಹೋಗೋನು ಒಂತರ ಸೀ ಇ ಓ ಇದ್ದಂಗೆ ಅಂದ್ರೂ ಯಾರು ತಾನೆ ಕೇಳ್ತಾರೆ ? ಎಲ್ಲಾ ಬಣ್ಣದ ಜಗತ್ತನೆ ನೋಡ್ತಾರೆ.. ಅದಕ್ಕೆ ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗ್ತಾರೆ, ಬೆಂಕಿಪೊಟ್ನದ ತರ ರೂಮುಗಳಲ್ಲಿ ಇದ್ಕೊಂಡು ಶಿಫ್ಟು, ಟೈಮು ಅನ್ನೊ ಮುಖ ನೋಡದೆ ಹಗಲು ರಾತ್ರಿ ಕೂಲಿಗಿಂತ ಹೆಚ್ಚಾಗಿ ದುಡಿತಾರೆ.. ಕಾರು, ಮೊಬೈಲು, ಫೇಸ್ಬುಕ್ಕು, ಟ್ವಿಟ್ಟರು, ವಾಟ್ಸಪ್ಪು ಅಂತ ಯಾವುದೋ ಲೋಕದಲ್ಲಿ ಕಳೆದುಹೋಗಿ, ಏನೊ ಹುಡುಕ್ಕೊಂಡು ನರಳ್ತಾ ಇರ್ತಾರೆ.. ನಾ ಹೇಳಿದ್ದು ವ್ಯವಸಾಯ ಅನ್ನೊ ಲೆಕ್ಕದಲ್ಲಿ ಮಾತ್ರ ಅಲ್ಲ.. ಓದಿದವರೆಲ್ಲ ಹೋಗಿ ಇನ್ನೊಬ್ಬರಡಿ ಕೆಲಸಕ್ಕೆ ಸೇರ್ತಾರೆ ಹೊರತು ತಾವೇ ಹೊಸದಾಗಿ ಕೆಲಸ ಸೃಷ್ಟಿಮಾಡೊ ಎಂಟರ್ಪ್ರೂನರ್ಸ್ ಆಗಲ್ಲ ಅನ್ನೊ ಅರ್ಥದಲ್ಲಿ ಹೇಳಿದೆ ಸಾರ್.. ನೋಡ್ತಾ ಇರಿ.. ಹೀಗೆ ಆದ್ರೆ ಹಳ್ಳಿ ಕಡೆ ಬೇಸಾಯಕ್ಕು ಕೂಲಿಗೆ ಯಾರೂ ಸಿಗದೆ ಎಲ್ಲಾ ತುಟ್ಟಿಯಾಗಿಬಿಡುತ್ತೆ… ಈ ಜನರೆ ಬೈಕೊಂಡು ಕಾಸು ಕೊಡಬೇಕು ಅದಕ್ಕೆಲ್ಲ” ಎಂದು ದೊಡ್ಡ ಭಾಷಣ ಬಿಗಿಯುತ್ತ, ಎಲ್ಲಿಂದೆಲ್ಲಿಗೊ ಕೊಂಡಿ ಹಾಕಿಬಿಟ್ಟ ಗುಬ್ಬಣ್ಣ..

“ಸರಿ ಬಿಟ್ಟಾಕು ಗುಬ್ಬಣ್ಣ.. ನಿನ್ ಮಗಳಂತು ವ್ಯವಸಾಯ ಅಂತ ಹೋಗದ ಡೌಟ್.. ಬೇರೇನು ಮಾಡ್ತಾಳೆ ಅಂತೇಳು..” ಎನ್ನುತ್ತಾ ಮಾತನ್ನ ಮತ್ತೆ ಮೊದಲಿನ ಟ್ರಾಕಿಗೆ ತಿರುಗಿಸಿದೆ..

” ಅಯ್ಯೊ ತಲೆ ಕೆಡಿಸ್ಕೊಳೊದು ಯಾಕೆ ಬಿಡಿ ಸಾರ್..ಸೆಂಟ್ರಲ್ ಗೌರ್ಮೆಂಟುದು ನೂರೆಂಟು ಸ್ಕೀಮುಗಳಿದಾವಂತೆ – ಸ್ಕಿಲ್ ಇಂಡಿಯಾ, ಮೇಕಿನ್ ಇಂಡಿಯಾ ಹಾಗೆ, ಹೀಗೆ ಅಂತ. ಯಾವದಾದರು ಒಂದು ಹಿಡ್ಕೊಂಡು ಹೊಸ ಕಂಪನಿ ಶುರು ಮಾಡಿದ್ರೆ ಅವಳೆ ಸೀ ಇ ಓ ಆಗ್ಬೋದು.. ಹೇಗೆ ಸಾವಿರಾರು ಕಾಲೇಜುಗಳು ಬೇಕಾದಷ್ಟು ಕೆಲಸದವರನ್ನ ಹುಟ್ಟುಸ್ತಾನೆ ಇರ್ತಾರೆ ಪ್ರತಿವರ್ಷ.. ಹಳ್ಳಿಲಿ ಬೇಸಾಯಕ್ಕೆ ಕೂಲಿಗಳು ಸಿಗದೆ ಇರಬಹುದು… ಕಂಪನಿ ಕೆಲಸಕ್ಕೆ ಆಳುಗಳು ಸಿಗೋದು ಕಷ್ಟವಿರಲ್ಲ.. ಹೇಗೊ ನಡೆಯುತ್ತೆ. ಅದೃಷ್ಟ ಚೆನ್ನಾಗಿದ್ರೆ ಅವಳೂ ಕ್ಲಿಕ್ ಆಗ್ಬೋದು, ಯಾರಿಗ್ಗೊತ್ತು. ಇನ್ನು ನೂರಾರು ಸ್ಮಾರ್ಟು ಸಿಟಿಗಳು ಬರ್ತವಂತಲ್ಲಾ ಎಲ್ಲಾದರು ಒಂದು ಕೈ ನೋಡ್ಕೊಂಡ್ರಾಯ್ತು !” ಎಂದ..

ಈ ಕಾಲದಲ್ಲಿ ಯಾರು ಏನಾಗ್ತಾರೊ ಹೇಳೋದೇ ಕಷ್ಟ ಅನಿಸಿ ನಾನು ಸಹ ‘ಹೂಂ’ಗುಟ್ಟಿದೆ… ” ಏನೇ ಆಗ್ಲಿ ಹಾಗೆನಾದ್ರೂ ಆದರೆ ನಮ್ಮಂತೋರಿಗು ಕೆಲಸ ಕೊಡಿಸಪ್ಪ ಅಲ್ಲಿ.. ನಾವು ಬದುಕ್ಕೊತೀವಿ”

“ಸರಿ ಸಾರ್..ಇನ್ನು ಸ್ವೀಟ್ ಹಂಚೋದಿದೆ ನಾ ಹೊರಟೆ” ಎಂದವನನ್ನೆ ಬಿಟ್ಟಬಾಯಿ ಬಿಟ್ಟುಕೊಂಡೆ ಅವಾಕ್ಕಾಗಿ ನೋಡುತ್ತ ನಿಂತುಕೊಂಡೆ , ಮತ್ತೇನು ಹೇಳಲೂ ತೋಚದೆ..


(Picture source : http://dezinequest.com/home.php)

********
(ಸೂಚನೆ: ಇಲ್ಲಿ ಬರುವ ಅಭಿಪ್ರಾಯ, ಮಾತುಕಥೆಗಳೆಲ್ಲ ಗುಬ್ಬಣ್ಣನ ಸ್ವಂತದ್ದು.. ಅದಕ್ಕೂ ಲೇಖಕನಿಗೂ ಯಾವುದೆ ರೀತಿಯ ಸಂಬಂಧವಿರುವುದಿಲ್ಲ ಎಂದು ಈ ಮೂಲಕ ಸೃಷ್ಟಿಕರಿಸಲಾಗಿದೆ)

– ನಾಗೇಶ ಮೈಸೂರು

00727. ಗುಬ್ಬಣ್ಣ, ಸೋಮಯಾಗ, ಸರ್ಟಿಫಿಕೇಟು ಇತ್ಯಾದಿ ( ಹಾಸ್ಯ ಬರಹ – ಲಘು ಹರಟೆ)


00727. ಗುಬ್ಬಣ್ಣ, ಸೋಮಯಾಗ, ಸರ್ಟಿಫಿಕೇಟು ಇತ್ಯಾದಿ ( ಹಾಸ್ಯ ಬರಹ – ಲಘು ಹರಟೆ)
______________________________________________________________


ಗುಬ್ಬಣ್ಣ ಸಕ್ಕತ್ ಗಡಿಬಿಡಿಯಲ್ಲಿ ಓಡಾಡುತ್ತಿದ್ದ ಕಾರಣ ಕೈಗೆ ಸಿಗೋದೆ ಕಷ್ಟವಾಗಿಹೋಗಿತ್ತು.

ಮೂರ್ನಾಲ್ಕು ಸಾರಿ ಪೋನ್ ಮಾಡಿದ್ರೂ ಆಸಾಮಿ ‘ಸಾರ್ ಸ್ವಲ್ಪ ಬಿಜಿ ಇದೀನಿ, ಆಮೇಲೆ ಪೋನ್ ಮಾಡ್ತೀನಿ’ ಅಂತ ಪೋನ್ ಕಟ್ ಮಾಡಿ ಇನ್ನೂ ರೇಗುವಂತೆ ಮಾಡಿಬಿಟ್ಟಿದ್ದ. ಸರಿ ಹಾಳಾಗಲಿ, ಅವನ ಗೊಡವೆಯೇ ಬೇಡ ಅಂತ ಬೈದುಕೊಂಡೆ ಲಿಟಲ್ ಇಂಡಿಯಾದ ಬಫೆಲೋ ರೋಡಲ್ಲಿ ತರಕಾರಿ ತಗೊಳೋಕೆ ಅಡ್ಡಾಡ್ತಾ ಇದ್ದಾಗ ಅಲ್ಲೆ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸ್ತಾ ಇದ್ದ ಅವನೇ ಕಣ್ಣಿಗೆ ಬೀಳಬೇಕೆ?

‘ಈಗ ಸಿಕ್ಕಿದಾನಲ್ಲ , ಬೆಂಡೆತ್ತೋದೆ ಸರಿ’ ಅನ್ಕೊಂಡು ಅವನಿಗೆ ಗೊತ್ತಾಗದ ಹಾಗೆ ಹಿಂದಿನಿಂದ ಹೋಗಿ ಕತ್ತಿನ ಪಟ್ಟಿ ಹಿಡ್ಕೊಂಡಿದ್ದೆ, ಮೊದಲು ಬೆನ್ನ ಮೇಲೊಂದು ಬಲವಾದ ಗುದ್ದು ಹಾಕಿ.

ಬೆಚ್ಚಿಬಿದ್ದ ಗುಬ್ಬಣ್ಣ ರೇಗಿಕೊಂಡು ಹಿಂದೆ ತಿರುಗಿದವನೆ ನನ್ನ ಮುಖ ನೋಡಿ ಅರ್ಧ ಶಾಂತನಾದ – ಪೆಚ್ಚುನಗೆಯ ಟ್ರೇಡ್ಮಾರ್ಕ್ ಹಲ್ಲು ಗಿಂಜುತ್ತ. ಎರಡು ಕೈಯಲ್ಲಿರುವ ಬ್ಯಾಗಲ್ಲಿ ಅರಿಶಿನ, ಕುಂಕುಮ, ಧೂಪ, ಗಂಧದಕಡ್ಡಿ, ಹೋಮದ ಕಡ್ಡಿ – ಹೀಗೆ ಏನೇನೊ ಪೂಜಾ ಸಾಮಾನುಗಳು. ಅಷ್ಟೇನು ನಾಸ್ತಿಕನಲ್ಲದ ಗುಬ್ಬಣ್ಣ ಹಬ್ಬ ಹರಿದಿನ ಯಾವುದೂ ಅಲ್ಲದಿರುವ ಈ ಹೊತ್ತಲ್ಲೇಕೆ ಇಷ್ಟೊಂದು ಪೂಜೆ ಸಾಮಾನು ಹಿಡಿದಿದ್ದಾನೆ ? ಎಲ್ಲೊ ಹೆಂಡ್ತಿ ಆರ್ಡರಿರಬೇಕು ಅಂದುಕೊಂಡು ಬಾಯಿ ತೆಗೆಯೊ ಹೊತ್ತಿಗೆ ಸರಿಯಾಗಿ ಅವನೇ ಬಾಯ್ಬಿಟ್ಟ.

‘ ಸಾರ್.. ನಿಮಗೆ ಇಲ್ಲೆಲ್ಲಾದರೂ ಚಿಕನ್ ಸಿಕ್ಕೋ ಜಾಗ ಗೊತ್ತಾ ? ‘ ಅಂದ – ದಂಢಿಯಾಗಿ ಚಿಕನ್ ಮಾರೊ ಅಂಗಡಿ ಎದುರಲ್ ನಿಂತುಕೊಂಡಿದ್ದರೂ .

ನಾನು ರೇಗೊ ಸ್ವರದಲ್ಲೆ, ‘ಅದರ ಮುಂದೇನೆ ನಿಂತಿದೀಯಾ.. ಕಾಣೋದಿಲ್ವಾ?’ ಅಂದೆ.

‘ ಅಯ್ಯೋ .. ಆ ಚಿಕನ್ ಅಲ್ಲಾ ಸಾರ್.. ಅಲೈವ್ ..ಅಲೈವ್.. ಜೀವ ಇರೋ ಕೋಳಿ ಬೇಕು ..’

‘ಅಯ್ಯೋ ಗುಬ್ಬಣ್ಣಾ , ಏನೋ ಸಮಾಚಾರ ? ಪೋನಲ್ಲೂ ಕೈಗೆ ಸಿಗ್ತಾ ಇಲ್ಲಾ, ಇಲ್ಲಿ ನೋಡಿದ್ರೆ ಪೂಜೆ ಸಾಮಾನ್ ಅಂಗಡೀನೆ ಕೈಲ್ ಇಟ್ಕೊಂಡಿದೀಯಾ.. ಸಾಲದ್ದಕ್ಕೆ ದನ, ಕೋಳಿ, ಕುರಿಗಳನ್ನೂ ‘ಜೂ’ನಲ್ಲಿ ಮಾತ್ರ ನೋಡೋಕೆ ಆಗೋ ಈ ಸಿಂಗಾಪುರದಲ್ಲಿ ಜೀವ ಇರೊ ಕೋಳಿ ಎಲ್ಲಿ ಅಂತ ಹುಡುಕ್ತಾ ಇದೀಯಾ.. ಇಲ್ಲಿ ತಿನ್ನೋ ಕೋಳೀನೂ ‘ರೆಡೀ ಟು ಕುಕ್’ ಪ್ಯಾಕಿಂಗ್ ನಲ್ಲಿ ಇಂಪೋರ್ಟ್ ಆಗೇ ಬರೋದು ಅಂತ ಗೊತ್ತು ತಾನೆ ?’ ಎಂದೆ.

‘ ಅಯ್ಯೊ ಲೆಕ್ಕಾಚಾರಕ್ಕೆ ನಿಜವಾಗಲೂ ಜೀವ ಇರೊ ಕುರಿಯೊ, ಮೇಕೆಯೊ ಬೇಕು ಸಾರು.. ಅದು ಇಲ್ಲಿ ಸಿಗಲ್ವಲ್ಲಾ ಅಂತಲೇ ಕನಿಷ್ಠ ಕೋಳಿಗೆ ಹುಡುಕ್ತಿರೋದು..’

‘ ಗುಬ್ಬಣ್ಣ ಕಟ್ ದ ಕ್ರಾಪ್…ಫಟಫಟಾ ಅಂತ ಹೇಳಿಬಿಡು.. ವಾಟ್ಸ್ ಅಫ್ ?’ ಎಂದೆ, ಸುಮ್ಮನೆ ಅನವಶ್ಯಕ ಚರ್ಚೆ ಬೇಡ ಅಂದುಕೊಂಡೆ.

ಗುಬ್ಬಣ್ಣ ಕಿವಿಯ ಹತ್ತಿರ ಮುಖ ತಂದು ಪಿಸುದನಿಯಲ್ಲಿ ಏನೊ ದೊಡ್ಡ ಗುಟ್ಟು ಹೇಳುವವನ ಹಾಗೆ ನುಡಿದ -‘ ಸಾರ್.. ಜೋರಾಗಿ ಮಾತಾಡ್ಬೇಡಿ..ಸುಮ್ನೆ ಕೇಳಿಸ್ಕೊಳ್ಳಿ ಅಷ್ಟೆ – ‘ಸೋಮಯಾಗ’ ಮಾಡ್ತಾ ಇದೀನಿ ..!’ ಅಂತ ದೊಡ್ಡ ಬಾಂಬೆ ಸಿಡಿಸಿಬಿಟ್ಟ..

ನಾನು ಪಕ್ಕದಲ್ಲೆ ಬಾಂಬ್ ಬಿದ್ದವನಂತೆ ಬೆಚ್ಚಿಬಿದ್ದರು ಸಾವರಿಸಿಕೊಂಡು ಮುಖ ನೋಡಿದೆ ಜೋಕೆನಾದರೂ ಮಾಡುತ್ತಿದ್ದಾನಾ ಅಂತ.. ಈಚೆಗೆ ತಾನೆ ಹೆಡ್ಲೈನ್ಸ್ ನ್ಯೂಸಿನ ಸುದ್ದಿಯಾಗಿ, ಸೋಶಿಯಲ್ ಮೀಡಿಯಾದಲ್ಲೆಲ್ಲಾ ದಾಂಧಲೆ ಎಬ್ಬಿಸಿದ್ದ ಯಾಗದ ಗೀಳು ಇವನಿಗ್ಯಾಕೆ ಹತ್ತಿಕೊಂಡಿತು ಅನ್ನೊ ಅನುಮಾನದಲ್ಲೆ.

‘ ಜೋಕೇನೂ ಅಲ್ಲಾ ಸಾರ್… ಸೀರಿಯಸ್ಸೆ.. ನ್ಯೂಸು ನೋಡಿರಬೇಕಲ್ಲಾ ನೀವೂನು ? ಯಾವ ಹೋಮ, ಯಾಗ , ಪೂಜೆ ಏನು ಮಾಡಿದ್ರೂ ಒಂದು ಮೂಲೆ ಐಟಂ ಹಾಕ್ತಾ ಇದ್ದೋರು ಈ ಯಾಗಕ್ಕೆ ಮಾತ್ರ ಫಸ್ಟ್ ಪೇಜು ಹೆಡ್ಲೈನಲ್ಲಿ ಹಾಕೋ ಲೆವೆಲ್ಲಿದೆ ಅಂದರೆ ಇದು ಎಂಥ ಮಹಾನ್ ಯಾಗ ಇರ್ಬೇಕು ? ಇದನ್ನ ಇಲ್ಲೂ ಒಂದ್ಸಾರಿ ಮಾಡಿ, ಇಂಟನೆಟ್ಟಲ್ಲಿ ಒಂದೆರಡು ಪಿಕ್ಚರು ಹಾಕಿದ್ರೆ ಸಾಕು ನೋಡಿ, ಓವರ್ನೈಟ್ ವರ್ಡ್ ಫೇಮಸ್ಸು..!’

ನನಗೀಗ ಅನುಮಾನದ ಬದಲು ಗಾಬರಿ ಹೆಚ್ಚಾಯ್ತು, ಏನು ಮಾಡೋಕೆ ಹೊರಟಿದಾನೆ ಇವನು ಅಂತ…’ ಗುಬ್ಬಣ್ಣಾ.. ಇದು ತುಂಬಾ ಕಾಂಪ್ಲಿಕೇಟೆಡ್ ಮ್ಯಾಟರು ಕಣೊ.. ಅಲ್ಲೆಲ್ಲ ಸಿಕ್ಕಾಪಟ್ಟೆ ವಾರ್ ಆಫ್ ವರ್ಡ್ಸ್ ನಡೆದುಹೋಗಿದೆ. ಒಂತರ ಓವರ್ನೈಟ್ ಟಾಕ್ ಆಫ್ ದಿ ಟೌನ್ ಆಗೋಗಿದೆ.. ಅಲ್ಲದೆ ತೀರಾ ಪೊಲಿಟಿಕಲ್ ಮ್ಯಾಟರು ಬೇರೆ… ರಾಜಕಾರಣಿ, ಬುದ್ಧಿಜೀವಿಗಳಿಂದ ಹಿಡಿದು ಎಲ್ಲಾ ತರದವರು ಇನ್ವಾಲ್ವ್ ಆಗಿರೊ ಮ್ಯಾಟರು.. ಆರಾಮಾಗಿ ಕನ್ಸಲ್ಟೆನ್ಸಿ ಮಾಡ್ಕೊಂಡಿರೊ ನಿಂಗ್ಯಾಕೊ ಈ ಬೇಡದ ಉಸಾಬರಿ ? ಅದೆಲ್ಲಾ ಆ ರಾಜಕೀಯದವರಿಗೆ ಬಿಡೋದಲ್ವಾ ?’ ಎಂದು ಮಿನಿ ಉಪದೇಶ ಕೊಟ್ಟೆ, ಅವನು ಡೀಟೆಲ್ಸ್ಗೆ ಹೋಗೊ ಮೊದಲೆ.

‘ ಅದೇ ಸಾರ್ ಈಗ ಬಂದಿರೋದು.. ಎಷ್ಟು ದಿನಾಂತ ಈ ಹಾಳು ಕನ್ಸಲ್ಟಿಂಗಿನಲ್ಲಿ ಗುಂಪಲ್ಲಿ ಗೋವಿಂದ ಅಂತ ಕಾಲ ಹಾಕೋದು ? ಏನಾದ್ರೂ ಮಾಡಿ ಓವರ್ನೈಟ್ ಫೇಮಸ್ ಆಗ್ಬಿಡಬೇಕು.. ಆಮೇಲೆಲ್ಲಾ ಸುಲಭ – ಸಿಂಪಲ್ಲಾಗಿ ನಮ್ ಗುರುಗಳನ್ನ ಫಾಲೋ ಮಾಡ್ತಾ ಹೋದ್ರಾಯ್ತು.. ಸಿ ಎಂ ಲೆವೆಲ್ಲಿಗಲ್ಲದೆ ಹೋದ್ರು ಮೇಯರಾದ್ರೂ ಆಗ್ಬೋದು’ ಅಂತ ಮತ್ತೊಂದು ಬಾಂಬ್ ಹಾಕಿದ.

ಅದೇನು ಮೇಯರು ಅಂದನೊ ಮೇಯೋರು ಅಂದನೊ ಸರಿಯಾಗಿ ಸ್ಪಷ್ಟವಾಗದಿದ್ರು ಇದ್ದಕ್ಕಿದ್ದಂತೆ ಬಂದ ಗುರೂಜಿ ಡೈಲಾಗು ಕೇಳಿ ಇನ್ನೂ ಕನ್ಫ್ಯೂಸ್ ಆಯ್ತು..,’ಅದ್ಯಾರೊ ನನಗೆ ಗೊತ್ತಿಲ್ದೆ ಇರೊ ನಿನ್ನ ಹೊಸ ಗುರು..? ಯಾವುದಾದರು ಹೊಸ ಸ್ವಾಮಿಜಿ ಬೆನ್ನು ಹತ್ತಿದೀಯಾ ಹೇಗೆ ?’ ಅಂದೆ.

‘ಬಿಡ್ತು ಅನ್ನಿ ಸಾರ್.. ಸ್ವಾಮಿಗಳನ್ನೆಲ್ಲ ಯಾಕೆ ತರ್ತೀರಾ ಇಲ್ಲಿಗೆ ? ನಾ ಹೇಳಿದ್ದು ನಮ್ಮ ದಿಲ್ಲಿ ಗುರು ಕೇಜ್ರೀವಾಲ್ ಸಾಹೇಬ್ರನ್ನ.. ಗೌರಮೆಂಟ್ ಚಾಕರಿ ಮಾಡ್ಕೊಂಡು ಕೂತಿದ್ರೆ ಅವರು ಈ ಲೆವಲ್ಲಿಗೆ ಬರೋಕಾಗ್ತೀತಾ ? ಭ್ರಷ್ಟಾಚಾರ, ಲೋಕಾಯುಕ್ತ ಅಂತ ಶುರುಮಾಡ್ಕೊಂಡು ನೇರ ಸೀಎಂ ಸೀಟಿಗೆ ನೆಗೆದುಬಿಡ್ಲಿಲ್ವಾ ?… ನನಗು ಅಂತಾದ್ದೊಂದು ಸ್ಪ್ರಿಂಗ್ ಬೋರ್ಡ್ , ಲಾಂಚಿಂಗ್ ಪ್ಯಾಡ್ ಸಿಕ್ಬಿಟ್ರೆ ನೆಮ್ಮದಿಯಾಗಿ ದೊಡ್ಡ ಪೋಸ್ಟ್ ಹಿಡ್ಕೊಂಡು ರಾಜಕೀಯ ಮಾಡ್ತಾ ಆರಾಮಾಗಿರಬಹುದು..’ ಅಂದ ಗುಬ್ಬಣ್ಣ.

ನನಗದು ಸ್ವಲ್ಪ ಹೊಸ ಟ್ವಿಸ್ಟ್. ಗುಬ್ಬಣ್ಣ ಆಮ್ ಆದ್ಮೀನೂ ಅಲ್ಲ, ಆ ಪಕ್ಷದ ಫ್ಯಾನೂ ಅಲ್ಲಾ.. ಅಂತಾದ್ರಲ್ಲಿ ಏಕ್ದಂ ಗುರುಗಳು ಹೇಗಾಗ್ಬಿಟ್ರೂ ಅಂತ ಗೊತ್ತಾಗಲಿಲ್ಲ. ಅವನನ್ನೆ ಕೇಳಿಬಿಟ್ಟೆ, ಸುಮ್ನೆ ಯಾಕೆ ತಲೆ ಕೆಡಿಸಿಕೊಳ್ಳೋದು ಅಂತ..

‘ ಗುಬ್ಬಣ್ಣ..ನಿಂಗೂ ಆ ಪಕ್ಷಕ್ಕೂ ಎಣ್ಣೆ – ಸೀಗೆ ಕಾಯಿ …ಅಂತಾದ್ರಲ್ಲಿ..?’

‘ಅದು ಹೇಗೆ ಗುರು ಆಗ್ಬಿಟ್ರೂ ಅಂತಾನ? ಅದೊಂದು ತರ ಏಕಲವ್ಯ-ದ್ರೋಣಾಚಾರ್ಯರ ಗುರು-ಶಿಷ್ಯ ಸಂಬಂಧ ಸಾರ್..ಎಲ್ಲಾ ಸ್ಟ್ರಾಟೆಜಿ ಸಾರ್ ಸ್ಟ್ರಾಟೆಜಿ..’

‘ಏನು ಸ್ಟ್ರಾಟೆಜಿ ಮಣ್ಣು ? ಬರೀ ಡಿಗ್ರಿ ಸರ್ಟಿಫಿಕೇಟು ತರದ ಚಿಲ್ಲರೆ ವಿಷಯಗಳನ್ನೆ ದೊಡ್ಡ ಪಬ್ಲಿಸಿಟಿ ಮಾಡ್ಕೊಂಡು ಕೂರೋದು ದೊಡ್ಡಾ ಸ್ಟ್ರಾಟೆಜೀನಾ? ನನಗೇನೊ ಚೈಲ್ಡಿಶ್ ಅನ್ನಿಸ್ತಪ್ಪಾ ..’ ಅಂದೆ..

‘ ಅಲ್ಲೆ ಸಾರ್ ಇರೋದು ಸೀಕ್ರೇಟು.. ನೋಡಿ ನಮ್ ಗುರುಗಳು ಯಾರ್ಯಾರದೋ ಸರ್ಟಿಫಿಕೇಟ್ ಕೇಳಿದ್ರಾ ? ನೇರ ಹಾವಿನ ಹುತ್ತಕ್ಕೆ ಕೈ ಹಾಕೊ ಹಾಗೆ ಪ್ರೈಮಿನಿಸ್ಟರ್ ಕ್ವಾಲಿಫಿಕೇಷಂಗೆ ಅಟ್ಯಾಕ್ ಮಾಡ್ಬಿಟ್ರು..’

‘ ಅದೇ ನಾ ಹೇಳಿದ್ದು.. ಅದು ಸಿಲ್ಲಿ ಅಲ್ವಾ.. ? ಎಲ್ಲಾ ಬಿಟ್ಟು ಮೈನರ್ ಪರ್ಸನಲ್ ಮ್ಯಾಟರೂ..’ ಅಂತ ರಾಗ ಎಳಿತಿದ್ದವನನ್ನ ಅಲ್ಲೆ ತಡೆದು ಹೇಳಿದ ಗುಬ್ಬಣ್ಣಾ..

‘ ಸಾರ್.. ಅದೇ ನಿಮಗರ್ಥ ಆಗಲ್ಲ ಅಂದಿದ್ದು.. ಸಗಣಿಯವನ ಜತೆ ಸರಸಕ್ಕಿಂತ ಗಂಧದವನ ಜತೆ ಗುದ್ದಾಟ ಲೇಸು ಅಂತಾರೆ.. ನಮ್ ಗುರು ಮಾಡಿದ್ದೂ ಅದನ್ನೆ.. ಹಾಗೆ ಮಾಡಿದ್ದೆ ತಡ ಏನಾಯ್ತು ನೋಡಿ?’

‘ ಏನಾಯ್ತು..?’

‘ ಇಡೀ ಸೋಶಿಯಲ್ ಮೀಡೀಯಾ, ಪೇಪರುಗಳಲೆಲ್ಲ ಅದೆ ಸುದ್ದಿ.. ಇಂಟರ್ನೆಟ್ಟಲ್ಲಂತೂ ಐನ್ ಸ್ಟೈನ್ ನಿಂದ ಹಿಡಿದು ಗಾಂಧೀಜಿವರೆಗೆ ಎಲ್ಲರ ಡಿಗ್ರಿ ಸರ್ಟಿಫೀಕೇಟು ನಮ್ ಗುರುಗಳೇ ವೆರಿಫೈ ಮಾಡಿದ ಫೋಟೊ..!’

‘ಅದೆ ಹೇಳಿದ್ದು.. ತುಂಬಾ ಚೀಪಾಗಿ ಬಿಡಲಿಲ್ವಾ ಅಂತಾ..? ‘

‘ ಎಲ್ಲಿ ಸಾರ್ ಚೀಪೂ ? ಈಗ ಲೀಡರ್ಶಿಪ್ ವಿಷಯಕ್ಕೆ ಬಂದರೆ ಇಡೀ ದೇಶದಲ್ಲೇ ಯಾರ ಹೆಸರು ಸಾರು ಕೇಳೋದು ?’

‘ ಇನ್ಯಾರು ನಮ್ಮ ಪ್ರಧಾನ ಮಂತ್ರಿ ಮೋದಿಯವರದು ತಾನೆ?’

‘ ಅವರದು ಬಿಟ್ಟರೆ ನೆಕ್ಸ್ಟು ಕೇಳಿಸೋದು ?’

‘ ಅದು ಬಿಡು ಗುಬ್ಬಣ್ಣ.. ಎಲ್ಲಾ ಚೌಚೌ ಬಾತು.. ಸುಮಾರು ಹೆಸರು ಇದಾವೆ.. ಒಂತರ ಒನ್ ಟು ನೈನ್ ಬಿಟ್ಟು ಟೆನ್ ನಿಂದ ಲೆಕ್ಕ ಹಾಕ್ಬೇಕು ಅಷ್ಟೆ..’

‘ ಕರೆಕ್ಟ್ .. ಈಗ ನಂಬರ ಒನ್ ಇರೋ ಮೋದಿ ಅವರ ಹೆಸರಿನ ಜೊತೆ ಗುದ್ದಾಟಕ್ಕೆ ಇಳಿದರೆ, ಅವರನ್ನ ಬಿಟ್ಟರೆ ಜನರಿಗೆ ಯಾರ ಹೆಸರು ನೆನಪಿಗೆ ಬರುತ್ತೆ ಹೇಳಿ ?’ ಎಂದು ಪಾಸ್ ಕೊಟ್ಟ ಗುಬ್ಬಣ್ಣ..

‘ ಅರೆ ಹೌದಲ್ವಾ.. ? ಇದೊಂದು ತರ ನಾನೇ ನೆಕ್ಸ್ಟ್ ಅಲ್ಟರ್ನೇಟೀವ್ ಅಂತ ಇಂಡೈರೆಕ್ಟ್ ಮೆಸೇಜು ಕೊಟ್ಟ ಹಾಗೆ ಅಲ್ವಾ ? ಗುಡ್ ಆರ್ ಬ್ಯಾಡ್ ಎಲ್ಲಾ ನಿಮ್ ಗುರುಗಳ ಹೆಸರನ್ನೆ ಬಳಸ್ತಾ , ಅದನ್ನೆ ಫೇಮಸ್ ಮಾಡ್ತಾರೆ.. ಆಗ ಆಟೋಮ್ಯಾಟಿಕ್ ಆಗಿ ಪಾಪ್ಯುಲರ್ ಆಗ್ಬೋದು.. ಸ್ಮಾರ್ಟ್ ಮಾರ್ಕೆಟಿಂಗ್ ಸ್ಟ್ರಾಟೆಜಿ ಅಲ್ವಾ..!’

‘ಅದಕ್ಕೆ ಸಾರ್..ನಾನು ಈಗ ಅದನ್ನೆ ಮಾಡೋಕೆ ಹೊರಟಿರೋದು…. ಈಗ ಹೇಳಿ ಜೀವಂತ ಕುರಿ ಕೋಳಿ ಎಲ್ಲಿ ಸಿಗ್ತಾವೆ ಅಂತ’ ಅಂದ ಗುಬ್ಬಣ್ಣ.

‘ವಾಟ್ ಎವರ್ ಇಟ್ ಇಸ್ .. ಕೋಳಿ, ಕುರಿ, ಹಸು ಎಲ್ಲಾ ಜೀವಂತ ಸಿಗೋದೂ ಅಂದ್ರೆ ಸಿಂಗಾಪುರದ ಜೂನಲ್ಲಿ ಮಾತ್ರವೇ.. ಬೇಕೂಂದ್ರೆ ಬೆಕ್ಕು ಸಿಗುತ್ತೆ ನೋಡು.. ಅಂದಹಾಗೆ ಅದೆಲ್ಲ ರಿಯಲ್ ಪ್ರಾಣಿಗಳ ಚಿತ್ರ ಅಲ್ಲಾ, ಫೋಟೋ ಶಾಪ್ ಟ್ರಿಕ್ಕು ಅಂತಿದ್ರಲ್ಲ ಗುಬ್ಬಣ್ಣಾ..?’

‘ ಯಾಗದ ಮಧ್ಯೆ ಅಪಶಕುನದ ಮಾತು ಯಾಕಾಡ್ತಿರಾ ಬಿಡಿ ಸಾರ್.. ಅದು ಫೋಟೋಶಾಪ್ ಟ್ರಿಕ್ಕಾ ? ಅದಾದರೆ ನನ್ಮಗಳಿಗೆ ಫಸ್ಟ್ ಕ್ಲಾಸಾಗಿ ಬರುತ್ತೆ.. ಅದರಲ್ಲೇ ಏಮಾರಿಸ್ಬೋದು, ನಿಜವಾದ್ದು ಬೇಡಾ ಅಂತೀರಾ ?’

‘ ಹೂಂ ಮತ್ತೆ.. ‘

‘ ಒಳ್ಳೆ ಐಡಿಯಾ ಸಾರ್..ಖರ್ಚೂ ಉಳಿಯುತ್ತೆ.. ಹಾಗೆ ಮಾಡಿಬಿಡ್ತೀನಿ ಕೀಪ್ ವಾಚಿಂಗ್ ಮೈ ಫೇಸ್ಬುಕ್ ಸಾರ್.. ವರ್ಡ್ ಫೇಮಸ್ ಆಗೋಗ್ತೀನೊ ಏನೊ!?’ ಅಂದ.

‘ ಆದ್ರೆ ಗುಬ್ಬಣ್ಣಾ…ಈ ತರ ಮಹಾಯಾಗ ಮಾಡೋಕೆ ಏನಾದ್ರೂ ದೊಡ್ಡ ಕಾರಣ ಇರ್ಬೇಕಲ್ವಾ? ಮಳೆ ಬರಿಸೋಕೊ, ಬರ ತೊಲಗಿಸೋಕೊ ..ಇತ್ಯಾದಿ. ನೀ ಮಾಡೊ ಕಾರಣ ಏನು ಅಂದ್ರೆ ಏನು ಹೇಳ್ತಿಯಾ ?’

ಈ ಕ್ವೆಶ್ಚನ್ನಿಗೆ ಗುಬ್ಬಣ್ಣ ಸ್ವಲ್ಪ ಬೋಲ್ಡ್ ಆದ ಹಾಗೆ ಕಾಣಿಸ್ತು.. ಅದರ ಬಗ್ಗೆ ಇದುವರೆಗೂ ಯೋಚಿಸಿರಲಿಲ್ಲವೇನೊ..

‘ ಹೌದಲ್ಲಾ ಸಾರ್.. ನಾ ಅದನ್ನ ಯೋಚ್ನೆನೆ ಮಾಡಿರಲಿಲ್ಲ.. ನೀವೆ ಒಂದು ಐಡಿಯಾ ಕೊಡಿ ಸಾರ್..’

‘ ಅದಪ್ಪ ವರಸೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ನ ಹೆಂಡ್ತೀ ಅಂದ ಹಾಗೆ..’

‘ ಅಯ್ಯೋ ಬಿಡೀ ಸಾರ್ ..ನಾ ಬ್ರಾಹ್ಮಣನೂ ಅಲ್ಲಾ, ನೀವು ಹೆಂಗಸೂ ಅಲ್ಲಾ.. ಆ ಮಾತ್ಯಾಕೆ? ಏನಾದ್ರೂ ಐಡಿಯಾ ಕೊಡಿ ಅಂದ್ರೆ..’ ಎಂದು ರಾಗವೆಳೆದ..

‘ ಸರಿ.. ಒಂದು ಒಳ್ಳೆ ಐಡಿಯಾ ಇದೆ ನೋಡಿ ಟ್ರೈ ಮಾಡ್ತೀಯಾ ?’

‘ ಏನಂತ ಹೇಳಿ ಸಾರ್..’

‘ ಈಗ ನೇತ್ರಾವತಿ ನೀರಿನ ಹಂಚಿಕೆ ಬಗ್ಗೆ ಸದ್ದು ಕೇಳಿಸ್ತಾ ಇದೆ.. ಇನ್ನೂ ಯಾರದೂ ಸರಿಯಾದ ಲೀಡರ್ಶಿಪ್ ಕಾಣ್ತಾ ಇಲ್ಲಾ ಆ ಚಳುವಳಿಗೆ..’

‘ ಅದಕ್ಕೂ ನಾ ಮಾಡೊ ಸೋಮಯಾಗಕ್ಕೂ ಏನು ಸಂಬಂಧ ಸಾರ್..?’

‘ ಅದೇ ಹೇಳ್ತಾ ಇದೀನಿ ತಡ್ಕೊ.. ನೇತ್ರಾವತಿ ವಿವಾದ ಶಾಂತಿಪೂರ್ವಕವಾಗಿ ಬಗೆಹರಿಲಿ ಅಂತ ಕಾರಣ ಹೇಳಿ ಸೋಮಯಾಗ ಮಾಡು.. ಅದಕ್ಕೆ ಪಬ್ಲಿಸಿಟೀನು ಸಿಗುತ್ತೆ.. ಜೊತೆಗೆ ಯಾರಿಗ್ಗೊತ್ತು..? ನಿನ್ನೆ ಲೀಡರ್ ಮಾಡ್ಕೊಂಡ್ರು ಮಾಡ್ಕೊಂಡ್ರೆ.. ನೀನು ಏಕ್ದಂ ಲಾಂಚ್ ಆಗಿಬಿಡ್ತೀಯಾ ಎಲ್ಲಾ ನ್ಯೂಸುಗಳಲ್ಲಿ..’

‘ ಪಬ್ಲಿಸಿಟೀ ಆಗುತ್ತೆ ಅಂತೀರಾ?’

‘ಮತ್ತೆ ? ಪುಟುಗೋಸಿ ಕಾಲೇಜಲ್ಲಿ ಭಾಷಣ ಮಾಡಿ ನ್ಯಾಷನಲ್ ಲೀಡರುಗಳಾಗೊ ಕಾಲ ಇದು, ಗೊತ್ತಾ?’

‘ನಿಜಾ ಸಾರ್..ಇದು ಬ್ರಿಲಿಯಂಟ್ ಐಡಿಯಾ..ಹಾಗೆ ಮಾಡ್ತೀನಿ..’ ಎಂದ ಉತ್ಸಾಹದಿಂದ ಗುಬ್ಬಣ್ಣ..

‘ಗುಡ್ ಲಕ್’ ಎಂದೆ ನಾನು..

‘ ಸರಿ ಸಾರ್ ಯಾವುದಕ್ಕೂ ಒಂದೆರಡು ಕೇಜಿ ಚಿಕನ್ ಕಟ್ಟಿಸಿಕೊಂಡೆ ಹೋಗ್ತೀನಿ.. ರಿಯಲಿಸ್ಟಿಕ್ಕಾಗಿರಲಿ ಪಿಕ್ಚರು’ ಅಂದವನೆ ಆ ಸ್ಟಾಲಿನತ್ತ ಹೆಜ್ಜೆ ಹಾಕಿದ.

ಶೀಘ್ರದಲ್ಲೆ ಗುಬ್ಬಣ್ಣ ಎಲ್ಲರಿಗು ಡಿಗ್ರಿ ಸರ್ಟಿಫಿಕೇಟ್ ವೆರಿಫೈ ಮಾಡಿಕೊಡ್ತಾ ಇರೊ ಫೋಟೊಗಳನ್ನ ಇಂಟರ್ನೆಟ್ಟಲ್ಲಿ ನೋಡ್ಬೇಕಾಗುತ್ತೊ ಏನೊ ಅಂದುಕೊಂಡು ನಾನು ತರಕಾರಿ ಅಂಗಡಿಯತ್ತ ಹೆಜ್ಜೆ ಹಾಕಿದೆ.

(ಮುಕ್ತಾಯ)

Thanks and best regards,
Nagesha MN

00716. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)


00716. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)
_____________________________________________
(ಹಿಂದೊಮ್ಮೆ ಬರೆದಿದ್ದ ಬರಹ)


ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು – ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ ಆರ್ಥಿಕ ಸ್ವಾತ್ಯಂತ್ರದ ಗರಿಯೂ ಬಿಚ್ಚುತ್ತಾ ಹೋಗಿ ಸುಂದರ ಬದುಕಿನ ಆಸೆಯ ಹಕ್ಕಿಯೂ ನಿಧಾನವಾಗಿ ನೆಲದಿಂದ ಮೇಲೆದ್ದು ಹಾರಾಡತೊಡಗುತ್ತದೆ. ಸುಂದರ ಬದುಕು ಒಂದು ಕೈನ ಚಪ್ಪಾಳೆಯಿಂದ ಸಾಧ್ಯವಾಗುವುದಿಲ್ಲವಲ್ಲ? ತಾವಾಗಿ ಹುಡುಕಿದ್ದೊ ಅಥವಾ ಮನೆಯವರಿಂದ ಆರೋಪಿಸಿದ್ದೊ – ಸಾಂಗತ್ಯವೊಂದರ ಜತೆಗಾಗಿ ಮನದಲ್ಲಿ ತಹತಹನೆ, ಕುತೂಹಲ; ಭವಿಷ್ಯದತ್ತ ಆಸೆ ತುಂಬಿದ ಆಶಾವಾದ ಚಿಗುರಿ ಗಿಡವಾಗಿ ಹೂಬಿಡತೊಡಗಿ ಮೈ ಮನವೆಲ್ಲ ಹೂವಂತೆ ಅರಳುವ ಹೊತ್ತು.

ಒಟ್ಟಾರೆ ನಾಟಕೀಯತೆಯ ಜತೆಗೊ ಅಥವಾ ಮಾಮೂಲಿನ ಸದ್ದುಗದ್ದಲವಿಲ್ಲದ ತರದಲ್ಲೊ ಗಂಡು ಹೆಣ್ಣುಗಳೆರಡರ ಜತೆ ಸೇರಿ ಸಂಸಾರವೆನ್ನುವ ಚಕ್ರಕ್ಕೆ ಚಾಲನೆ ಸಿಕ್ಕಾಗ ಹೊಸ ಬದುಕಿನ ಆರಂಭ. ಹೊಸತಲ್ಲಿ ಎಲ್ಲವೂ ಸುಂದರವೆ ಆದರೂ ನಿಜವಾದ ಹೂರಣ ಹೊರ ಬೀಳಲು ಕೊಂಚ ಹೊತ್ತು ಹಿಡಿಯುತ್ತದೆ. ಕೃತಕ ಧನಾತ್ಮಕ ವೇಷಧಾರಣೆಗಳೆಲ್ಲ ಕಳಚಿ, ಸ್ವಾಭಾವಿಕ ಧನ – ಋಣಾತ್ಮಕ ಅಂಶಗಳ ನೈಜ್ಯ ಚಿತ್ರ ಅನಾವರಣೆಗೊಳ್ಳುತ್ತಾ ಹೋಗುತ್ತದೆ. ಈ ಸಮಯವೆ ಬಂಧಗಳನ್ನು ಕಟ್ಟುವ ಅಥವಾ ಉರುಳಿಸುವ ಸಂದಿಗ್ದ ಕಾಲ. ಸುಖಿ- ಅಸುಖಿ ಭವಿತ ಸಂಸಾರದ ನಿಜವಾದ ಬುನಾದಿ ಬೀಳುವುದು ಇಲ್ಲಿಂದಲೆ. ಕೆಲವು ಅದೃಷ್ಟಶಾಲಿಗಳಿಗೆ ಹಾಲು ಜೇನು ಬೆರೆತಂತೆ ಹೊಂದಾಣಿಕೆ ತಂತಾನೆ ಪ್ರಸ್ತುತಗೊಳ್ಳುತ್ತ, ಗಟ್ಟಿಯಾಗುತ್ತ ಹೋಗುತ್ತದೆ. ಮತ್ತೆ ಕೆಲವರಲ್ಲಿ ಸಣ್ಣಪುಟ್ಟ ಏರುಪೇರುಗಳಿದ್ದರೂ, ಹೆಚ್ಚು ಕಡಿಮೆ ಸಹನೀಯ ಶೃತಿಲಯದಲ್ಲಿ ಸಾಗುತ್ತದೆ ಜೀವನ. ಆದರೆ ನಿಜವಾದ ಬಿಕ್ಕಟ್ಟು ಬರುವುದು ಈ ಹೊಂದಾಣಿಕೆ ಕಾಣಿಸದ ಜೋಡಿಗಳಲ್ಲಿ. ಅಲ್ಲಿ ಸಣ್ಣ ಪುಟ್ಟ ವಿಷಯಗಳೆ ದೊಡ್ಡವಾಗಿ ಅಸಹನೀಯ ಹೊಂದಾಣಿಕೆಗಳೊಡನೆ ದಿನದೂಡುವುದೊ ಅಥವಾ ವಾಗ್ಯುದ್ಧ, ವೈರುಧ್ಯಗಳ ನರಕದಲ್ಲಿ ಬಿದ್ದು ಪ್ರತಿದಿನ ಜೀವನದಲ್ಲಿ ಹೆಣಗುತ್ತಲೆ ಸಾಗುವುದೊ ಆಗುತ್ತದೆ. ಸರ್ವ ಸಂಪೂರ್ಣ ಪಕ್ವತೆಯುಳ್ಳ ಸಂಸಾರಗಳು ಇಲ್ಲವೆ ಇಲ್ಲವೆನ್ನುವಷ್ಟು ಅಪರೂಪವಾದರೂ ಸರಾಸರಿ ಲೆಕ್ಕದಲ್ಲಿ ಸಹನೀಯತೆ-ಅಸಹನಿಯತೆಯ ಅಂದಾಜು ಮಟ್ಟದ ಅಕ್ಕಪಕ್ಕದಲ್ಲೆ ಜೋತಾಡುವುದು ಸಾಮಾನ್ಯವಾಗಿ ಕಾಣುವ ಚಿತ್ರಣ.

ಸಹನೀಯ ಹಿತಕರ ವ್ಯಾಪ್ತಿಯೊಳಗಿನ ಪುಣ್ಯವಂತ ಗಂಡಸರ ಯಶಸ್ಸಿನ ಹಿಂದೆ ಆ ಹೆಂಡತಿಯರ ಪಾತ್ರ ಕಂಡೂ ಕಾಣದ ಮಹತ್ತರವೆಂದೆ ಹೇಳಬೇಕು. ಅಂತಹ ಯಶಸ್ವಿ ಗಂಡು ಮನ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪ್ಪಾಯಿ…” ಎಂದು ಹಾಡಿ, ಕುಣಿದು ಕೃತಾರ್ಥರಾಗುತ್ತಾರೆ. ಆದರೆ ಆ ಭಾಗ್ಯವಿಲ್ಲದ ಗಂಡಸರ ಪಾಡೇನು? ಕಾಟ ಕೊಟ್ಟು ಕಾಡುವ ಹೆಂಡತಿಗಳ ಕೈಲಿ ಸಿಕ್ಕಿ ಒದ್ದಾಡುವವರಿಗೆ ಯಾರು ಹಾಡಬೇಕು? (ಅವರಾಗಿಯೆ ಹಾಡುವಂತ ಮನಸ್ಥಿತಿಯಿರುವುದು ಅನುಮಾನ, ಮತ್ತು ಅಪರೂಪ ಬಿಡಿ!).

ಈಗಾಗಾಲೆ ಹಾಡಿದ್ದಾರೊ ಇಲ್ಲವೊ ಗೊತ್ತಿಲ್ಲ – ಬಹುಶಃ ಕೆಲವು ನೊಂದವರು ಬಾತ್ರೂಮುಗಳಲ್ಲಿ ಹಾಡಿಕೊಂಡಿರಬಹುದೊ ಏನೊ. ಏನಾದರಾಗಲಿ ಅಂತಹವರಿಗೆ ಸುಲಭವಾಗಲೆಂದು ಇಲ್ಲೊಂದು ಹಾಡಿದೆ – ಕನ್ನಡನಾಡಲ್ಲಿ ಸುಪ್ರಸಿದ್ಧವಾದ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ..” ಧಾಟಿಯಲ್ಲಿ. ಅದನ್ನು ತಮ್ಮ ಇಂಪಾದ ಕಂಠದಲ್ಲಿ ಹಾಡಿ ಅಮರಗೊಳಿಸಿದ ಮೈಸೂರು ಅನಂತಸ್ವಾಮಿಯವರ ರಾಗದಲ್ಲೆ ಹಾಡಿಕೊಂಡು ಆನಂದಿಸಿ!

ಕೊ.ಕೊ: ಈ ರೀತಿ ಕಾಟ ಕೊಡುವ ಹೆಂಗಸರು ಕನ್ನಡನಾಡಿನವರಲ್ಲ – ಬೇರೆ ಕಾಲ, ದೇಶ, ಪ್ರಾಂತ್ಯಕ್ಕೆ ಸೇರಿದವರು. ನಮ್ಮ ಕನ್ನಡದ ಹೆಣ್ಣುಗಳು ಅಪ್ಪಟ ಬಂಗಾರ. ಆದ ಕಾರಣ ಕನ್ನಡದ ಹೆಣ್ಣು ಮಕ್ಕಳು ಹಾಡನ್ನು ಓದಿ ತಮ್ಮ ಮೇಲೆ ಆರೋಪಿಸಿಕೊಂಡು , ತಪ್ಪಾಗಿ ಅರ್ಥೈಸಿಕೊಂಡು ಕೋಪಿಸಿಕೊಳ್ಳಬಾರದೆಂದು ಕೋರಿಕೆ!

ಕಾಡುವ ಹೆಂಡತಿ ಮನೆಯೊಳಗಿದ್ದರೆ…
_______________________________

ಕಾಡುವ ಹೆಂಡತಿ ಮನೆಯೊಳಗಿದ್ದರೆ
ಕರಗದಿರುವುದೆ ಕೋಟಿ ರುಪಾಯಿ
ಅಂಥ ಹೆಂಡತಿಯೊಬ್ಬಳು ಹತ್ತಿರವಿದ್ದರೆ
ಲೂಟಿ ಶಾಂತಿ, ಮನಸೆ ಬಡಪಾಯಿ || ಕಾಡುವ ||

ದಿನ ಹಗಲೆ ಇರುಳೆ ಯಾರಿಗೆ ಲೆಕ್ಕ
ಸಾಲಂಕೃತ ಕೋಟಲೆ ದುಃಖ
ಒಂದೆ ಸಮ ಜತೆ ಕಾಡುವ ಕಾಟ
ಸಹಿಸಿ ಬಾಳುವುದಲ್ಲ ಹುಡುಗಾಟ || ಕಾಡುವ ||

ಬೇಡವೆಂದರೂ ದೂರ ತಳ್ಳುವಂತಿಲ್ಲ
ಕಟ್ಟಿಕೊಂಡ ಜನ್ಮಗಳ ಪಾಪ
ದೂರ ತಳ್ಳಲೆಲ್ಲಿ ದೂರ ಹೇಳಲೆ ಕಷ್ಟ
ಸಿಡಿದು ಸಿಗಿಯುವ ಘನ ಕೋಪ || ಕಾಡುವ ||

ಛೀಮಾರಿಗೆಲ್ಲ ಏಮಾರೊ ಸರಕಲ್ಲ
ನಿರ್ದಯೆ ನಿರ್ದಾಕ್ಷಿಣ್ಯತೆ ಒಡವೆ
ಗಂಡನೆನ್ನುವ ಪ್ರಾಣಿ ಯಾವ ಲೆಕ್ಕಕಿಲ್ಲ
ಕೇಡ ಮಾಡಲೇಕವನ ಗೊಡವೆ || ಕಾಡುವ ||

ಹಬ್ಬ ಹರಿದಿನ ಹುಣ್ಣಿಮೆ ಹೋಳಿಗೆಗಿಂತ
ಬೈಗುಳದಡಿಗೆಯೆ ಪ್ರಚಂಡ
ಮಾಡದಿದ್ದರು ಸದ್ಯ ಕಾಡದಿದ್ದರೆ ಸಾಕು
ಎಂದು ಮೌನ ತಬ್ಬಿದವ ಗಂಡ || ಕಾಡುವ ||

ಅಪ್ಪಿ ತಪ್ಪಿ ಎಂದೊ ಮಾಡಿದ ಅಡಿಗೆ
ಪಾತ್ರೆ ಪಗಡಿಯೆಲ್ಲ ಚೆಲ್ಲಾಪಿಲ್ಲಿ
ವಾರಗಟ್ಟಲೆ ಪೇರಿಸಿದ ಮುಸುರೆಗಳೆ
ಗಂಡ ತೊಳೆಯದೆ ಆಗದೆ ಖಾಲಿ || ಕಾಡುವ ||

ಮನೆಗೊಬ್ಬಳೆ ಗೃಹಿಣಿ ಬೇರಿಲ್ಲದ ಕಾಟ
ಟೀವಿ ಧಾರವಾಹಿಗಳೆ ಪ್ರಖರ
ಕೂತ ಸೋಫಾವೆ ಹಾಸಿಗೆ, ಮೆತ್ತೆಗೆ ದಿಂಬೆ
ಊಟಕೆ ಹೊತ್ತಾದರು ಒಲೆಗೆ ಚೌರ || ಕಾಡುವ ||

ಇಂಥ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಬದುಕೆಲ್ಲ ಪೂರ್ತಿ ನರಕಾನೆ
ಹುಲಿಯಂತ ಗಂಡು ಇಲಿಯಾಗಿಬಿಡುವ
ಜೀವಂತ ಶವವಾಗುತ ತಾನೆ || ಕಾಡುವ ||

– ನಾಗೇಶ ಮೈಸೂರು
(ಮೂಲ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಮತ್ತು ಕವಿತೆಯ ಕ್ಷಮೆ ಬೇಡುತ್ತ 🙏)

(ಚಿತ್ರಕೃಪೆ : ಉದಯವಾಣಿ ಹಳೆಯ ಪುಟವೊಂದರಿಂದ : http://www.udayavani.com/kannada/news/ಕವನಗಳು/51551/ಹೆಂಡತಿಯ-ಹಾಡು)

00603. ಲಘು ಹರಟೆ: ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’!


00603. ಲಘು ಹರಟೆ:
ಗುಬ್ಬಣ್ಣ ಇನ್ ‘ಎನ್ನಾರೈ ರಿಟರ್ನ್ & ಸ್ಮಾರ್ಟ್ ಸಿಟಿ’!
__________________________________________

ಗುಬ್ಬಣ್ಣ ಅವತ್ಯಾಕೋ ತುಂಬಾ ‘ಖರಾಬ್ ಅಂಡ್ ಗರಂ’ ಮೂಡಿನಲ್ಲಿ ಮರಿ ಹಾಕಿದ ಬೆಕ್ಕಿನ ತರ ಬೀಟ್ ಹೊಡಿತಿದ್ದ ಲಿಟಲ್ ಇಂಡಿಯಾ ಒಳಗಿರೋ ಕರ್ಬಾವ್ ಸ್ಟ್ರೀಟಲ್ಲಿ.. ಅದೂ ಬೆಳ್ಳಂಬೆಳಿಗ್ಗೆ ಯಾರೂ ಓಡಾಡದೆ, ಬರಿ ಪಾರಿವಾಳಗಳು ಮಾತ್ರ ಅಕ್ಕಿಕಾಳು ಹೆಕ್ಕೋ ಹೊತ್ನಲ್ಲಿ..

ಈ ‘ಬೀದಿನಾಮ’ಗಳು ಎಲ್ಲೂ ಕೇಳಿದ ಹಾಗಿಲ್ಲವಲ್ಲ ಅಂತ ಅನ್ಸಿದ್ರೆ ಅದರಲ್ಲೇನು ವಿಶೇಷ ಇಲ್ಲ ಬಿಡಿ – ಯಾಕೆಂದ್ರೆ ಗುಬ್ಬಣ್ಣನ ಠಿಕಾಣೆ ಇರೋದೇ ಸಿಂಗಪುರ ಅನ್ನೋ ಪುಟ್ಟ ‘ರೆಡ್ ಡಾಟ್ನಲ್ಲಿ’. ಸಿಂಗಪುರವೆ ರೆಡ್ ಡಾಟ್ ಆದ ಮೇಲೆ ಇನ್ನು ಅದರಲ್ಲಿರೋ ‘ಲಿಟಲ್ ಇಂಡಿಯಾ’ ಅನ್ನೋ ಮೈಕ್ರೋ ಡಾಟ್ ಕೇಳಬೇಕೆ ? ಸಿಂಗಪುರ ಮ್ಯಾಪಲ್ಲೇ ಲೆನ್ಸ್ ಹಾಕ್ಕೊಂಡು ಹುಡುಕಬೇಕು ಅನ್ನೋ ಹಾಗಿರುತ್ತೆ.. ಇನ್ನು ಅದರೊಳಗಿರೊ ‘ಕರ್ಬಾವ್ ಸ್ಟ್ರೀಟ್’ ಅನ್ನೋ ‘ನ್ಯಾನೋ ಡಾಟ್’ ಬಗ್ಗೆ ಹೇಳೊ ಹಾಗೆ ಇಲ್ಲ ಅಂತ ಮೂಗು ಮುರಿಬೇಡಿ. ಸುತ್ತಮುತ್ತಲ ಜಾಗನ ಸಿಂಗಪುರದಲ್ಲಿ ‘ಕಲ್ಚರಲ್ ಹೆರಿಟೇಜ್ ಸೈಟ್’ ಅಂತ ಗುರ್ತಿಸಿರೋದ್ರಿಂದ ಇದೊಂದು ಇಂಪಾರ್ಟೆಂಟ್ ಟೂರಿಸ್ಟ್ ಸ್ಪಾಟ್.. ಅದರ ಪಕ್ಕದಲ್ಲೇ ಮನೆ ಇರೋ ನನಗೆ ‘ರಿಯಲ್ ಎಸ್ಟೇಟ್’ ಪಾಯಿಂಟಿನಿಂದ ಈ ‘ನ್ಯಾನೋ ಡಾಟ್’ ಇನ್ನೂ ತುಂಬಾ ಇಂಪಾರ್ಟೆಂಟು..!

ಅದೇನೆ ಕಲ್ಚರ್ ಹೆರಿಟೇಜ್ ಸೈಟೆ ಇದ್ದರು, ಬೆಳಂಬೆಳಿಗ್ಗೆ ಆರಕ್ಕೆಲ್ಲ ವಲ್ಚರ್ ತರ ಹಾರ್ಕೊಂಡ್ ಬಂದು ‘ಅರ್ಜೆಂಟು ಬೇಗ ಕೇಳಗ್ಬನ್ನಿ ಸಾರ್’ ಅಂತ ಮೊಬೈಲಲ್ಲಿ ಅವಾಜ್ ಹಾಕಿ ವಾರದ ಕೊನೆಯ ಬೆಳಗಿನ ಸಕ್ಕರೆ ನಿದ್ದೆಗೂ ಕಲ್ಲು ಹಾಕಿದ್ದ ಗುಬ್ಬಣ್ಣನಿಗೆ ಮನಸಾರೆ ‘ಸಹಸ್ರನಾಮ’ ಹಾಕಿ ಶಪಿಸುತ್ತಲೇ ನಿದ್ದೆಗಣ್ಣಲ್ಲಿ ಕಣ್ಣಿಜ್ಜಿಕೊಳ್ಳುತ್ತ ಎದ್ದು ಬಂದಿದ್ದೆ. ದೂರದಿಂದಲೆ ಮೂಡು ಗೆಸ್ ಮಾಡಿದ್ದ ಗುಬ್ಬಣ್ಣ ನಾನು ಬಾಯಿ ಬಿಡೋ ಮೊದಲೇ ಕಣ್ಮುಂದೆ ಬಿಸಿಬಿಸಿ ‘ತೇತಾರೈ’ ಪ್ಯಾಕೆಟನ್ನು ತಂದು – ‘ ಮೊದಲು ಟೀ, ಆಮೇಲೆ ಮಾತು’ ಅನ್ನುತ್ತ ಏನಕ್ಕೊ ತೆರೆದಿದ್ದ ಬಾಯನ್ನು ಮುಚ್ಚಿಸಿ, ಇನ್ನೇನಕ್ಕೊ ತೆರೆಯುವಂತೆ ಮಾಡಿಬಿಟ್ಟ.. ಅವನ ಹುನ್ನಾರ ಅರ್ಥವಾದರೂ ತೇತಾರೈ ನನ್ ವೀಕ್ನೆಸ್ ಆದ ಕಾರಣ ನಾನೂ ನನ್ನ ‘ರೇಗಿಂಗ್’ ಪ್ರೋಗ್ರಾಮ್ ಅನ್ನು ತಾತ್ಕಾಲಿಕವಾಗಿ ಮುಂದೂಡಿ ಬಿಸಿಬಿಸಿ ಟೀ ಚಪ್ಪರಿಸತೊಡಗಿದೆ..

ಕುಡಿಯುತ್ತಾ ಇಬ್ಬರೂ ಹಾಗೆ ತೇಕಾ ಮಾರ್ಕೆಟ್ಟಿನ ಕಡೆ ನಡೆದು, ಆನಂದ ಭವನ್ ಎದುರಿನ ಕಲ್ಲು ಬೆಂಚಿನ ಮೇಲೆ ಕೂರುವಷ್ಟು ಹೊತ್ತಿಗೆ ನನ್ನ ಸಿಟ್ಟಿನ ಉತ್ಸಾಹ ಅರ್ಧ ಮಾಯಾವಾಗಿದ್ದರು, ಮಿಕ್ಕರ್ಧದಲ್ಲೇ ಭುಸುಗುಟ್ಟುತ್ತ ಕೇಳಿದೆ..

” ಅಲ್ವೋ ದ್ರ್ಯಾಬೆ, ಮೊದಲೇ ಬಿಜಿನೆಸ್ ಟ್ರಿಪ್ಪಲ್ಲಿ ಸತ್ತು ಸುಣ್ಣವಾಗಿ ಮಧ್ಯರಾತ್ರೀಲಿ ಮನೆ ಸೇರ್ಕೊಂಡಿದೀನಿ.. ಶನಿವಾರ ಇವತ್ತು ಬೆಳಿಗ್ಗೆ ಲೇಟಾಗೆದ್ರೂ ನಡೆಯುತ್ತೆ ಅನ್ಕೊಂಡು ಬೆಳಗಿನ ಜಾವದ ಹೊತ್ತಿಗೆ ನಿದ್ದೆ ಬಂತೊ ಇಲ್ವೋ ಅಂತ ಕಣ್ಮುಚ್ಚೋ ಅಷ್ಟರಲ್ಲಿ ದರಿದ್ರ ಪೋನ್ಮಾಡಿ ಎಬ್ಬಿಸಿದ್ದೀಯಲ್ಲ್ಲಾ? ಏನಂತ ರಾಜಕಾರ್ಯ ?”

“ಅಯ್ಯೋ ಅರ್ಜೆಂಟಂದ್ರೆ ಅರ್ಜೆಂಟು ಸಾರ್.. ನೇಷನ್ಸ್ ಕಾಲ್ ಇಸ್ ಕಾಲಿಂಗ್… ನಾವು ಡಿಲೇನೆ ಮಾಡಂಗಿಲ್ಲ ..ಮಾಡಿದ್ರೆ ನಾವು ಎಚ್ಚೆತ್ತು ಕಣ್ಬಿಡೋಕೆ ಮುಂಚೆ ಆಪರ್ಚುನಿಟಿ ಬೇರೆಯವರ ಪಾಲಾಗ್ಬಿಡುತ್ತೆ.. ಅದಕ್ಕೆ ಬುಲಾಯ್ಸಿದೆ..” ಎಂದ.

ನಾನೆಲ್ಲೋ ಯಾವುದೋ ತೀರಾ ಎಮರ್ಜೆನ್ಸಿ ಕೇಸಾದ್ರು ಹಿಡ್ಕೊಂಡ್ಬಂದು ಎಬ್ಬಿಸಿರ್ತಾನೆ ಅಂದ್ಕೊಂಡಿದ್ರೆ, ಗುಬ್ಬಣ್ಣ ಯಾವುದೋ ಪ್ಯಾಟ್ರಿಯಾರ್ಟಿಕ್ ಸ್ಲೋಗನ್ ಜಪ ಮಾಡ್ತಾ ಇರೋದು ಕಂಡು ಮೈಯೆಲ್ಲಾ ಉರಿದೋಯ್ತು.

“ಗುಬ್ಬಣ್ಣಾ ಡೊಂಟ್ ಮೇಕ್ ಮಿ ಲೂಸ್ ಟೆಂಪರ್ .. ಮೊದಲೇ ನಿದ್ದೆಯಿಲ್ದೆ ಕಣ್ಣೆಲ್ಲ ಕೆಂಪಾಗಿದೆ.. ಈಗ ಸುಮ್ನೆ ಇಲ್ದೆ ಇರೋ ಸ್ಟೋರಿ ಮೇಕಿಂಗ್ ಶುರು ಮಾಡಿದ್ಯೋ ನಿನ್ನ ಮೇಡಿನ್ ಇಂಡಿಯ ಬಾಡಿ, ಮೇಡ್ ಇನ್ ಸಿಂಗಪುರ್ ಕ್ಯಾಸ್ಕೆಟ್ ಹುಡುಕ್ಕೊಂಡ್ ಹೋಗ್ಬೇಕಾಗುತ್ತೆ ನೋಡು..” ಅಂದೆ ಒಳಗಿದ್ದ ಕೋಪವನ್ನು ಆದಷ್ಟು ಗದರಿಕೆಯ ದನಿಯಲ್ಲಿಯೆ ವ್ಯಕ್ತಪಡಿಸುತ್ತ..

ಇದಕ್ಕೆಲ್ಲ ಬಗ್ಗೋ ಆಸಾಮಿಯೇ ಗುಬ್ಬಣ್ಣ ? ದಿನಕ್ಕೆ ನನ್ನಂಥಾ ಹತ್ತು ಕುರಿ ಮೇಯಿಸೊ ಪೈಕಿ…

” ಸಾರ್.. ಇದು ನನ್ನ ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ.. ಇಫ್ ದಟ್ ಇಸ್ ಅಟ್ ಸ್ಟೇಕ್ , ಯೂ ಸ್ಟಿಲ್ ಸೇ ದ ಸೆಂ ಥಿಂಗ್ ?” ಎಂದು ರಾಮಬಾಣ ಹೂಡಿಬಿಟ್ಟ.. !

ಬೇರೆ ಯಾವ ಟ್ರಿಕ್ಕು ವರ್ಕ್ ಆಗದೆ ಇರ್ಬೋದು. ಆದರೆ ‘ಮಕ್ಕಳ ಫ್ಯೂಚರ ‘ ಅಂತ ಅಂದು ನೋಡಿ ? ಎಲ್ಲಾ ಅಪ್ಪ ಅಮ್ಮಂದಿರೂ ಗಪ್ಚಿಪ್ ! ಅದರಲ್ಲೂ ಇಂಡಿಯಾ ಪೇರೆಂಟ್ಸ್…? ಮಾತಾಡೊ ಹಾಗೆ ಇಲ್ಲಾ. ನಾನು ಇರೋದು ಸಿಂಗಪುರ ಆದರು ಒಳಗೆಲ್ಲ ಅಪ್ಪಟ ಭಾರತಿಯ, ಅಪ್ಪಟ ಕನ್ನಡಿಗ.. ಅಂದ್ಮೇಲೆ ಹೇಳೋದೇನು ಬಂತು ? ಫ್ರಿಡ್ಜಲ್ಲಿಟ್ಟ ಸ್ಯಾಂಡ್ವಿಚ್ಚಿನ ಹಾಗೆ ಮೆತ್ತಗಾದ ದನಿಯಲ್ಲಿ ಕೇಳಿದೆ..

” ಹಾಗಲ್ವೋ ಗುಬ್ಬಣ್ಣ.. ಸಿರಿಯಸ್ ಆಗಿ ವಿಷ್ಯ ಏನು ಅಂತ ಹೇಳಬೇಕಲ್ವಾ ? ಒಂದು ಗಂಟೆ ಲೇಟಾಗಿ ಮಾತಾಡಿದ್ರೆ ಗಂಟೇನು ಹೋಗ್ತಾ ಇರ್ಲಿಲ್ಲಾ ಅಲ್ವಾ” ಎಂದೆ..

” ಗಂಟೆಯಲ್ಲ ಗಳಿಗೇನು ಇರೋಕಾಗಲ್ಲ ಸಾರ್..ಅಷ್ಟೊಂದು ಕ್ರಿಟಿಕಲ್.. ನೀವಾದ್ರೆ ವಾಸಿ ಇಲ್ಲೇ ಇದ್ದು ಈಗ ಎದ್ದು ಬರ್ತಾ ಇದೀರಾ.. ನಾ ನೋಡಿ ಇಲ್ಲಿಂದ ಒಂದು ಗಂಟೆ ದೂರದಲ್ಲಿರೋನು.. ನಾಕೂವರೆಗೆ ಎದ್ದು ಐದು ಗಂಟೆ ಟ್ರೈನ್ ಹಿಡಿದು ಬಂದಿದೀನಿ..”

“ಓಕೆ ಓಕೆ ಸಾರಿ ಗುಬಣ್ಣ ವಿಷ್ಯ ಏನೂ ಅಂತ ಹೇಳು..” ಈಗ ಪುಸಲಾಯಿಸೋದು ನನ್ನ ಬಾರಿ..

“ಸಾರ್.. ಈಗ ನಾವೆಲ್ಲಾ ಎನ್ನಾರೈಗಳೆಲ್ಲ ಒಂದು ಅರ್ಜೆಂಟ್ ನಿರ್ಧಾರ ತೊಗೊಂಡ್ಬಿಡ್ಬೇಕು… ನಮ್ ಮಕ್ಕಳ ಫ್ಯೂಚರ್ಗೋಸ್ಕರ..”

” ಏನು ನಿರ್ಧಾರ ?”

” ಕನಿಷ್ಠ ಫಿಫ್ಟಿ ಪರ್ಸೆಂಟಷ್ಟು ಜನ ಏನಾದ್ರೂ ಸರಿ ವಾಪಸ್ ಇಂಡೀಯಾಗೆ ವಾಪಸ್ ಹೋಗಿ ಸೆಟಲ್ ಆಗ್ಬಿಡ್ಬೇಕು..ಅದೂ ದೊಡ್ಡ ಸಿಟಿಗಳಲ್ಲಲ್ಲ..”

” ಯಾಕೋ ?”

” ಅದಕ್ಕೆ ಸಾರ್.. ಜನರಲ್ ನಾಲೆಡ್ಜು ಇರ್ಬೇಕು ಅನ್ನದು.. ನಿಮಗೆ ನಿಮ್ಮ ಏರಿಯಾದ ಜಿಯಾಗ್ರಫಿ ನಾಲೆಡ್ಜೆ ಇರಲ್ಲ , ಇನ್ನು ಜೆನರಲ್ ನಾಲೆಡ್ಜು ಎಲ್ಲಿಂದ ಬರಬೇಕು ಬಿಡಿ.. ಹೋಗ್ಲಿ ಈಚೆಗೆ ನಮ್ ಸೆಂಟ್ರಲ್ ಗವರ್ಮೆಂಟಿಂದ ಏನೇನಲ್ಲ ಸ್ಕೀಮು ಅನೌನ್ಸ್ ಮಾಡಿದಾರೆಂತಾದ್ರು ಗೊತ್ತಾ ?”

” ಅದೆಲ್ಲಿ ಎಲ್ಲಾ ಗೊತ್ತಿರುತ್ತೋ..? ಅಲ್ಲಿ ಇಲ್ಲಿ ಓಡಾಡೊ ಸುದ್ದಿಯಿಂದ ಕರ್ನಾಟಕದಂತ ಕಡೆ ‘ಕತ್ತಲೆ ಭಾಗ್ಯ’ , ‘ಬಡ್ಜೆಟ್ಟಿಲ್ಲದೆ ಗ್ಯಾಡ್ಜೆಟ್ಟು’ , ‘ಅವಾರ್ಡೆ ರಿವಾರ್ಡು’, ‘ ಲದ್ದಿಯೇ ಸಿದ್ದಿ’ ಅಂತ ಅನ್ನೋ ವಿನೂತನವಾದ, ಇನ್ನೋವೇಟಿವ್ ಐಡಿಯಾ ಮಾಡ್ತಿರೋದು ಗೊತ್ತಾಯ್ತು.. ಅದು ಬಿಟ್ರೆ ಸೆಂಟ್ರಲ್ ‘ಸ್ವಚ್ಚ ಭಾರತ’, ‘ಸ್ಕಿಲ್ ಇಂಡಿಯ’ ಅಂತೇನೊ ಮಾಡ್ತಾ ಇದಾರೆ ಅಂತ ಕೇಳಿದೆ..”

” ಸದ್ಯ ಸ್ಟೇಟ್ದಾದ್ರು ಅಷ್ಟಿಷ್ಟು ತಿಳ್ಕೊಂಡಿದೀರಲ್ಲ ? ಮೊನ್ನೆ ಬಡ್ಜೆಟ್ಟಲ್ಲಿ ‘ಟಾರ್ಚಿನ ಭಾಗ್ಯ’ ಅಂತಲು ಒಂದು ಶುರು ಮಾಡಿ ಮನೆಗೊಂದು ಟಾರ್ಚು ಕೊಡಬೇಕಂತ ಪ್ಲಾನ್ ಮಾಡಿದಾರಂತೆ… ಟಾರ್ಚ್ ಕಂಪನಿ, ಬ್ಯಾಟರಿ ಕಂಪನಿ ಇಬ್ಬರೂ ಬದುಕಿಕೊಂಡುಬಿಟ್ರು ಬಿಡಿ.. ನಾ ಹೇಳ್ತಾ ಇರೋದು ಅದಲ್ಲ.. ಸೆಂಟ್ರಲ್ ಡೆವಲಪ್ಮೆಂಟ್ ಸ್ಕೀಮುಗಳು.. ‘ಸ್ಕಿಲ್ ಇಂಡಿಯಾ’, ‘ಮೇಕ್ ಇನ್ ಇಂಡಿಯ’, ‘ಹಂಡ್ರೆಡ್ ಸ್ಮಾರ್ಟ್ ಸಿಟೀಸ್’ ಅಂತೆಲ್ಲಾ ಅನೌನ್ಸ್ ಮಾಡಿದಾರೆ ತರ ತರಾವರಿ ಸ್ಕೀಮುಗಳು..”

“ಹೂ ಗುಬ್ಬಣ್ಣ ಕೇಳಿದ್ದೆ ಕೇಳಿದ್ದೆ…. ಆದರೆ ಎಲ್ಲಾ ಓಕೆ, ಎನ್ನಾರೈ ವಾಪಸ್ ಯಾಕೆ ? ”

” ಅಯ್ಯೋ ಎಲ್ಲಾ ಈ ಸ್ಮಾರ್ಟು ಸಿಟಿ ದೆಸೆಯಿಂದ ಸಾರ್…”

ನನಗೆ ಅರ್ಥವಾಗಲಿಲ್ಲ.. ಸ್ಮಾರ್ಟ್ ಸಿಟಿ ಆದ್ರೆ ಕರ್ನಾಟಕದಲ್ಲಿ ಒಂದು ಬೆಂಗಳೂರು ಬದಲು ಹತ್ತು ಬೆಂಗಳೂರಾಗುತ್ತಲ್ವಾ ? ಒಳ್ಳೇದೆ ತಾನೇ ?

” ಗುಬ್ಬಣ್ಣ..ಬಿಡಿಸಿ ಹೇಳೊ…”

” ಅಯ್ಯೋ ನಿಮ್ಮದು ಯಾವಾಗಲು ಟ್ಯೂಬ್ ಲೈಟೆ.. ಸಿಂಪಲ್ ಆಗಿ ಹೇಳ್ತೀನಿ ಕೇಳಿ.. ಈವತ್ತು ನೀವು ಬೆಂಗಳೂರಿಗೆ ಹೋದ್ರೆ ಏನನ್ಸುತ್ತೆ ?”

” ಅನ್ಸೋದೇನು ? ಯಾವುದೋ ಬೇರೆ ರಾಜ್ಯಕ್ಕೋ , ದೇಶಕ್ಕೆ ಹೋದ ಹಾಗೆ ಫೀಲು ಆಗುತ್ತೆ… ನಮ್ ಬೆಂಗಳೂರೇನಾ ಇದು ಅನ್ನೋ ಹಾಗೆ.. ಕನ್ನಡ ಬಿಡು, ಆ ನೂರಾರು ಮಲ್ಟಿ ನ್ಯಾಷನಲ್ ಕಂಪನಿಗಳು , ಟ್ರಾಫಿಕ್ಕು, ಅಲ್ಲಿನ ಲಿವಿಂಗ್ ಕಾಸ್ಟು , ರೆಸ್ಟೋರೆಂಟು ರೇಟುಗಳು – ಒಂದೇ , ಎರಡೇ ? ಭಗವಂತಾ..! ಪ್ರತಿ ಸಾರಿ ಹೋದಾಗ್ಲೂ ಎಷ್ಟೊತ್ತಿಗೆ ಅಲ್ಲಿಂದ ಹೊರಟು ನಮ್ಮೂರಿಗೆ ಹೋಗಿ ತಲುಪ್ತೀನೊ ಅನ್ನೋ ಹಾಗೆ ಆಗ್ಬಿಡುತ್ತೆ..”

” ನೋಡಿದ್ರಾ ಹೇಗೆ ಗಿಣಿ ಬಿಡೋ ಹಾಗೆ ಬಾಯ್ಬಿಟ್ರಿ ? ಅದು ನಮ್ಮೂರೇನಾ ಅನ್ನೋ ಅನುಮಾನ ಬನ್ಬಿಡುತ್ತೆ ಅಲ್ವಾ ? ಸಾಲದ್ದಕೆ ಅಷ್ಟೊಂದು ಕಂಪನಿ ಇಂಡಸ್ಟ್ರಿಗಳಿದ್ರೂ, ಅದು ಅರ್ಧಕ್ಕರ್ಧ ಫಾರೀನ್ ಕಂಪನಿ ಹೊಟ್ಟೆ ತುಂಬಿಸ್ತಾ ಇರೋದು.. ಅಲ್ಲಿ ಠಾಕುಠೀಕು ಕೆಲಸ, ಕೇಳಿದಷ್ಟು ಸಂಬಳ ಸಿಗುತ್ತೆ ಅನ್ನೋದು ಬಿಟ್ರೆ ಬಿಗ್ ಶೇರು ದೇಶದಿಂದಾಚೆಗೇನೆ.. ಅದೆಲ್ಲ ಯಾಕೆ ಆಗಿದ್ದು ಗೊತ್ತಾ?”

” ಯಾಕೆ ?”

” ಯಾವುದೇ ಕಂಟ್ರೋಲ್ ಇಡದೆ ಯಾರು ಬಂದು ಏನಾದ್ರೂ ಮಾಡ್ಕೊಂಡ್ ಹೋಗ್ಲಿ ಅಂತ ಸುಮ್ನೆ ಇದ್ಬಿಟ್ಟಿದ್ದುಕ್ಕೆ..!”

“ಅದೇನೊ ನಿಜವೇ ಅನ್ನು…” ನಾನು ಹೌದೆನ್ನುವ ಹಾಗೆ ತಲೆಯಾಡಿಸಿದೆ..

“ಈಗಲೂ ಹಾಗೆ ಕೂತ್ರೆ ಈಗ ಮಾಡಕೆ ಹೊರಟಿದಾರಲ್ಲ ಸ್ಮಾರ್ಟ್ ಸಿಟಿಗಳು, ಅಲ್ಲೂ ಏನಾಗುತ್ತೆ ಗೊತ್ತಾ…? ”

ಆಗ ನನಗೆ ಫಕ್ಕನೆ ಹೊಳೆದಿತ್ತು ಗುಬ್ಬಣ್ಣನ ಲಾಜಿಕ್ !

” ಗೊತ್ತಾಯ್ತು ಗುಬ್ಬಣ್ಣ… ಈಗ ಬೆಂಗಳೂರಿಗೆ ಏನಾಗಿದೆಯೋ ಅದೇ ಈ ಸ್ಮಾರ್ಟ್ ಸಿಟಿಗಳಿಗೂ ಆಗೋಗುತ್ತೆ ಒಂದಷ್ಟು ವರ್ಷಾ ಕಳದ್ರೆ.. ಅಯ್ಯೋ ದೇವ್ರೇ! ಈಗ ಬೆಂಗಳೂರು ಬೇಡ ನಮ್ಮೂರು ಅಂತ ಹೇಳ್ಕೊಂಡು ಈ ಊರುಗಳಿಗೆ ಹೋಗಿ ಉಸ್ಸಪ್ಪಾ ಅಂತೀವಿ.. ಇನ್ನು ಇವು ಸ್ಮಾರ್ಟ್ ಸಿಟಿಗಳಂತಾ ಆಗ್ಬಿಟ್ರೆ ಅವೂ ಬೆಂಗಳೂರು ತರಾನೆ ಗಬ್ಬೆದ್ದು ಅಲ್ಲಿಗೂ ಹೋಗದ ಹಾಗೆ ಮಾಡ್ಬಿಡುತ್ತೆ ಅಂತೀಯಾ?” ಎಂದೆ ಗಾಬರಿಯ ದನಿಯಲ್ಲಿ..

” ಆಗೋದೇನು ಬಂತು ? ಜನ ನೋಡ್ತಾ ನಿಂತಿದ್ರೆ ಅದೇ ಆಗೋದು.. ಅಲ್ಲಂತೂ ಯಾರು ಅದನ್ನೆಲ್ಲ ಯೋಚಿಸೊಕು ಹೋಗಲ್ಲ.. ಕೆಲಸ ಬರುತ್ತೆ, ಇಂಡಸ್ಟ್ರೀಸ್ ಬರುತ್ತೆ, ಎಲ್ಲಾ ಸೌಕರ್ಯ ಬರುತ್ತೆ ಅಂತ ಖುಷಿಯಾಗಿ ಕೂತ್ಬಿಡ್ತಾರೆ.. ಆಗ ಇವೇ ಕಂಪನಿಗಳು, ಇದೇ ಕಲ್ಚರು, ಇದೇ ವಾತಾವರಣ ಅಲ್ಲಿಗೂ ಕಾಲಿಡ್ತಾ ನೋಡ್ನೋಡೊದ್ರಲ್ಲಿ ಅವನ್ನು ಬೆಂಗಳೂರಿನ ಹಾಗೆ ಮಾಡಿಬಿಡ್ತವೆ – ಅದೂ ರಾಕೆಟ್ ಸ್ಪೀಡಲ್ಲಿ.. ಅಲ್ಲಿಗೆ ನಮ್ ಹಳ್ಳಿ ಹೈಕಳೆ ಹೋಗಿ ಕೆಲಸ, ಗಿಲಸ ಅಂತ ಸೇರ್ಕೊಂಡ್ ಅದಕ್ಕೆ ಹೆಲ್ಪ್ ಮಾಡ್ತಾರೆ, ಅದೇ ಪೀಜಾ ಹಟ್, ಮೆಕ್ಡಿಗಳಲ್ಲಿ ಕೆಲಸ ಮಾಡ್ತಾ…! ನಿಮಗೆ ಈಗ ಹೋಗೋಕೆ ನಿಮ್ಮೂರಾದ್ರು ಇದೆ, ನಿಮ್ಮ ಮಕ್ಕಳ ಜೆನರೇಷನ್ನಿಗೆ ಅದೂ ಮಾಯಾ… ಬರಿ ಮಿನಿ ವರ್ಶನ್ ಆಫ್ ಬೆಂಗಳೂರೆ ಗಟ್ಟಿ..!”

” ಸರಿ ಗುಬ್ಬಣ್ಣ.. ಐ ಅಗ್ರೀ ಪ್ರಾಬ್ಲಮ್ ಇಸ್ ಸೀರಿಯಸ್… ಆದ್ರೆ ಸಲ್ಯೂಶನ್ ಏನು ? ನಾವ್ಯಾಕೆ ವಾಪಸ್ ಹೋಗ್ಬೇಕು?”

” ಅಲ್ಲೇ ಇರದು ಸಾರ್ ಪಾಯಿಂಟೂ… ನಾವುಗಳೆಲ್ಲ ಸುಮ್ನೆ ಹೋಗದಲ್ಲ ..ಹೇಗೂ ಇಲ್ಲೆಲ್ಲಾ ಒಳ್ಳೆ ಎಕ್ಸ್ಪೀರಿಯೆನ್ಸ್ ಆಗಿದೆ.. ಎಂಟರ್ಪ್ರೈನರ್ಶಿಪ್ ಕ್ವಾಲಿಟಿ ಇರೋ ಒಂದಷ್ಟು ಜನ ನೇರ ಆ ನಮ್ ಸ್ಮಾರ್ಟ್ ಸಿಟಿ ಊರುಗಳಿಗೋಗಿ, ನಮ್ ಗವರ್ಮೆಂಟ್ ಕೊಡ್ತೀರೊ ಸಹಾಯ, ಇಟ್ಟಿರೋ ಸ್ಕೀಮು ಎಲ್ಲಾ ಅಡ್ವಾಂಟೇಜ್ ತೊಗೊಂಡು ನಾವೇ ಇಂಡಸ್ಟ್ರಿಗಳನ್ನ ಶುರು ಮಾಡ್ಬೇಕು.. ಎಲ್ಲಾ ಸೆಗ್ಮೆಂಟಲ್ಲು ನಿಧಾನವಾಗಿ, ಸಣ್ಣದಾಗಿಯಾದರು ಸರಿ ಶುರು ಮಾಡಿ ಅಲ್ಲಿನ ಲ್ಯಾಂಡ್ಸ್ಕೇಪ್ ಅಡ್ಡದಾರಿ ಹಿಡಿಯದ ಹಾಗೆ ನೋಡ್ಕೊಬೇಕು.. ಬೇರೆ ದೊಡ್ಡ ಕಂಪನಿಗಳು ಬಂದ್ರು ಬ್ಯಾಲೆನ್ಸ್ ಮಾಡೋ ತರ ಪಾಲಿಸಿ ಮಾಡೋಕೆ ಇನ್ ಫ್ಲುಯೆನ್ಸ್ ಮಾಡ್ಬೇಕು.. ಹಾಗೆ ಮಾಡಿ ನಾವು ಫೌಂಡೇಶನ್ ಹಾಕಿದ್ರೆ ನಮ್ ಮಕ್ಕಳಿಗೆ ಅದನ್ನೇ ದೊಡ್ಡದು ಮಾಡಿ ಬೆಳೆಸೋಕೆ ದಾರಿ ತೋರಿಸ್ದಂಗೆ ಆಗುತ್ತೆ..”

” ಒಂದು ತರ ಚೈನಾದಲ್ಲಿ ಮಾಡಿ ಫಾರಿನ್ ಜೊತೆ ಲೋಕಲ್ ಇಂಡಸ್ಟ್ರೀನು ಬೆಳೆಸಿದ್ರಲ್ಲ ಹಾಗೆ… ಗುಬ್ಬಣ್ಣ, ನೀ ಹೇಳದೇನೊ ಕೇಳಕೆ ತುಂಬಾ ಚೆನ್ನಾಗಿದೆ ಆದರೆ ಒಂದು ಅನುಮಾನ..”

“ಏನೂ?”

“ಇದಕ್ಕೆ ಇಲ್ಲಿಂದ ಎನ್ನಾರೈಗಳೆ ಯಾಕೆ ಹೋಗ್ಬೇಕು? ಅಲ್ಲೇ ಲಕ್ಷಾಂತರ, ಕೋಟ್ಯಾಂತರ ಜನ ಇದಾರೆ.. ಅದರಲ್ಲೂ ಇರೋಬರೋ ಕಂಪನಿ ತುಂಬ ಐಟಿ ಜನಗಳೆ ಇದಾರೆ..ವರ್ಷಕ್ಕೆ ಲಕ್ಷಗಟ್ಲೆ ಇಂಜೀನಿಯರುಗಳು ಬರ್ತಾನೆ ಇರ್ತಾರೆ… ಅವರುಗಳೇ ಆಪರ್ಚುನಿಟಿ ತೊಗೊಂಡು ಮಾಡೋವಾಗ ನಮಗೆ ಛಾನ್ಸ್ ಎಲ್ಲಿ ಸಿಗುತ್ತೆ ?”

” ಅಯ್ಯೋ ಸಾರ್.. ಅಲ್ಲೇ ನೀವ್ ತಪ್ಪು ತಿಳ್ಕೊಂಡಿರೋದು… ಅವರೆಲ್ಲ ಪೂರಾ ಬ್ರೈನ್ ವಾಷಡ್ ಬೈ ಸಿಸ್ಟಂ ಸಾರ್.. ಕಂಪನಿಗಳಿಗೆ ಕೆಲಸ ಮಾಡೋಕೆ ಬೇಕಾದ ರಾ ಮೆಟೀರಿಯಲ್ ತರ ರೆಡಿ ಮಾಡ್ಬಿಟ್ಟಿರ್ತಾರೆ ಅವರನ್ನ , ಕಾಲೇಜಿಂದ್ಲೆ.. ಪುಸ್ತಕದ ಬದನೇಕಾಯಿ ತರ ಓದಿ ಓದಿ ರಿಟನ್ ಟೆಸ್ಟ್ , ಇಂಟರ್ವ್ಯೂ ಪಾಸ್ ಮಾಡೋದು, ಕೆಲಸ ಗಿಟ್ಟಿಸೋದು, ಆನ್ ಸೈಟ್ ಆಪರ್ಚುನಿಟಿ ನೋಡೋದು, ಸಂಬಳ ಕಮ್ಮಿ ಅನ್ನಿಸ್ತಾ ಇನ್ನೊಂದ್ ಕಡೆ ಜಂಪ್ ಮಾಡದು, ಪೀಜಾ, ಬರ್ಗರ, ವೀಕೆಂಡ್ ಮೂವಿ ಅಂತ ‘ಜುಂ’ ಅನ್ಕೊಂಡು ಓಡಾಡ್ಕೊಂಡಿರೊದು, ಲೋನಲ್ಲಿ ಬೇಗ ಕಾರು, ಫ್ಲಾಟು ತೊಗೊಂಡು ಸೆಟಲ್ ಆಗೋದು – ಈ ಲೈಫ್ ಸ್ಟೈಲಿಗೆ ಹುಡುಕೊ ಜನ ರಿಸ್ಕು ತೊಗೊಂಡ್ ಇಂಡಸ್ಟ್ರಿ ಮಾಡ್ತಾರ ? ನಿಮಗೆಲ್ಲೋ ಕನಸು.. ಅದೆಲ್ಲ ಮಾಡೋಕೆ ಪ್ಯಾಶನ್ ಇರ್ಬೇಕು ಸಾರ್..ತಪಸ್ ಮಾಡಿದ ಹಾಗೆ..”

“ಅದೇನೆ ಇದ್ರೂ ಮಾಡ್ಬೇಕು ಅನ್ನೋ ಮನಸಿರೋರು ಬೇಕಾದಷ್ಟು ಜನ ಇರ್ತಾರೆ ಗುಬ್ಬಣ್ಣ ..”

“ರಿಟನ್ ಟೆಸ್ಟು , ಇಂಟರ್ವ್ಯೂ ಪಾಸ್ಮಾಡಿದ್ರೆ ಸಿಗೋ ಸುಲಭದ ಕೆಲಸ ಬಿಟ್ಟು ಯಾರು ಹೋಗ್ತಾರೆ ಸಾರ್ ಈ ಡೈರೆಕ್ಷನ್ಲಿ ? ಹೋಗ್ತೀವಂದ್ರು ಬಿಡೋ ಪೆರೇಂಟ್ಸ್ ಎಷ್ಟು ಜನ ಇದಾರೆ ? ಎಷ್ಟೊ ಜನ ಮಾಡೊ ಮನಸಿನವರಿದ್ರೂ ಪಾಪ ಮನೆ ಪರಿಸ್ಥಿತಿ ಬಿಟ್ಟಿರಲ್ಲ ಸಾರ್.. ನಮಗಾದ್ರೆ ಆ ಸ್ಟೇಜೆಲ್ಲಾ ದಾಟಿರೋದ್ರಿಂದ ರಿಸ್ಕ್ ತೊಗೋಬೋದು.. ನಮ್ಮ ಮುಂದಿನ ಜನರೇಶನ್ನನ್ನ ಮತ್ತೆ ಕರ್ಕೊಂಡು ಹೋಗಿ ರೂಟ್ಸಿಗೆ ತಲುಪಿಸೋಕು ಅವಕಾಶ ಆಗುತ್ತೆ.. ಆ ನಮ್ ಊರುಗಳನ್ನೆಲ್ಲ ಬೆಂಗಳೂರು ತರ ತಬ್ಬಲಿ ಆಗದೆ, ನಮ್ಮೂರಾಗೆ ಇದ್ದು, ಜತೆಗೆ ಪ್ರಗತಿ ಕೂಡ ಆಗೋ ಹಾಗೆ ನೋಡ್ಕೊಳಕೊಂದು ಛಾನ್ಸ್….. ನಾವು ಮಾಡಿ ಸಕ್ಸಸ್ ಆದ್ರೆ, ಆಗ ಅವರೂ ರಿಸ್ಕ್ ತೊಗೋತಾರೆ , ಜತೆಗೆ ಸಾಥ್ ಕೊಡ್ತಾರೆ.. ಆಗ ನಮ್ ದೇಶ ನಮ್ ದೇಶವಾಗಿಯೆ ಉಳಿಯುತ್ತೆ.. ಇನ್ ಸ್ಪೈಟ್ ಆಫ್ ಡೆವಲಪ್ಮೆಂಟ್..” ಅಂತ ದೊಡ್ಡ ಭಾಷಣವನ್ನೇ ಕೊಟ್ಟುಬಿಟ್ಟ ಗುಬ್ಬಣ್ಣ..!

ಅವನ ಭಾಷಣದ ಪ್ರಭಾವವೋ , ಸ್ಮಾರ್ಟ್ ಸಿಟಿಯ ನೆಪದಲ್ಲಿ ಹುಟ್ಟೂರಿಗೆ ಮರಳುವ ಪ್ರಲೋಭನೆಯೊ ಅಂತೂ ನನಗೂ ಏನೋ ಹುಮ್ಮಸ್ಸು ಬಂದು,

” ನಿಜ, ಅಲ್ಲಿಗೆ ಹೋಗೋದೇ ಸರಿ ನಡೀ ಗುಬ್ಬಣ್ಣ…ಒಂದು ಕೈ ನೋಡೆ ಬಿಡೋಣ… ‘ಜೈ ಡೆವಲಪ್ಮೆಂಟ್, ಜೈ ಸ್ಕಿಲ್ ಇಂಡಿಯಾ, ಜೈ ಸ್ಮಾರ್ಟ್ ಸಿಟಿ’ ”

ಅಂತ ನಾನೂ ಒಂದು ಸ್ಲೋಗನ್ ಕೂಗಿಕೊಂಡೆ ಇನ್ನೊಂದು ಟೀಗೆ ಆರ್ಡರು ಮಾಡಿದೆ, ಇನ್ನೇನು ಆ ಗಳಿಗೆಯೇ ಲಾಸ್ಟ್ ಟೀ ಕುಡಿದು ಇಂಡಿಯಾಗೆ ಹೊರಟುಬಿಡುವ ಅವಸರವಿದ್ದವನ ಹಾಗೆ..

“ಸಾರ್.. ನನಗೂ ಇನ್ನೊಂದ್ ತೇತಾರೈ…” ಎಂದವನೇ, ಗುಬ್ಬಣ್ಣ ಮೊಬೈಲಿನಲ್ಲಿ ಸುತ್ತಮುತ್ತಲ ಏರಿಯಾದಲ್ಲಿದ್ದ ಮಿಕ್ಕ ಸನ್ಮಿತ್ರರಿಗೆ ಕಾಲ್ ಮಾಡತೊಡಗಿದ – ಫಿಫ್ಟಿ ಪರ್ಸೆಂಟ್ ಕೋಟಾದ ಮಿಕ್ಕ ಭಾಗಕ್ಕೆ ಅರ್ಜಿ ತುಂಬಿಸಿಕೊಳ್ಳಲು !

– ನಾಗೇಶ ಮೈಸೂರು

00591. ಫೆಸ್ಬುಕ್ಕಿನ ನೊಂದಣಿ..


00591. ಫೆಸ್ಬುಕ್ಕಿನ ನೊಂದಣಿ..
___________________

 
ಇದೇ ನೋಡು ಫೇಸು ಬುಕ್ಕು
ನೀ ಹಾಕಿದಂಗೆ ಅವತಾರ ಲುಕ್ಕು
ಮಕ್ಕಳಾಟದಂಗೆ ಹಾಕಿ ಲೈಕು
ಉದ್ದ ಕಾಮೆಂಟಿಗೆ ಹಾಕೋಕೆ ಬ್ರೇಕು !

ಗುಡ್ ಮಾರ್ನಿಂಗ್ ಮೆಸೇಜು ಬೋರ್ಡು
ಯುವ ಮನಸಿನ ಮಸಾಜು ನೋಡು
ಬೇಕು ಬೇಡದ್ದೆಲ್ಲಾ ಆಗುತ್ತೆ ಫೀಡು
ಭಯವಾಗುವುದು ಮಾತ್ರ ಅದರ ಸ್ಪೀಡು !

ಎಲುಬಿಲ್ಲದ ನಾಲಿಗೆ ಬರಿ ನಗಾರಿ
ಬಾಯೊಳಗಾದರು ಬೀಗದ ದಾರಿ
ಇಲ್ಲಂತು ಖಾಲಿ ಗೋಡೆಯ ಪಿತೂರಿ
ಲಂಗು ಲಗಾಮಿಲ್ಲ ಬಂದದ್ದೆಲ್ಲ ತೂರಿ !

ಇರಲಿ ಪರಗಣ ವಿರೋಧಿ ಬಣ ಮೊತ್ತ
ಎಲ್ಲರಿಗೊಂದೆ ಮಣೆಯ ನಿಷ್ಪಕ್ಷಪಾತ
ಹಾರಿಸಬಹುದೆಲ್ಲಾ ಬಾವುಟ ಪತಾಕೆ
ಅವರವರೋದುತ ಅವರದೆ ಎಡತಾಕೆ !

ಯಾರು ಗೆದ್ದರೊ ಸೋತರೊ ಸದ್ದೆಲ್ಲ
ಮುಚ್ಚಿಹಾಕುತ ನಡೆಯೂ ತರವೆಲ್ಲ
ಒಂದು ಮುಗಿಸಿದರಿನ್ನೊಂದು ತಿಗಣಿ
ಗೆದ್ದಿದ್ದು ಮಾತ್ರ ಫೆಸ್ಬುಕ್ಕಿನ ನೊಂದಣಿ !

– ನಾಗೇಶ ಮೈಸೂರು

00517. ಸಿಂಗಾಪುರದ ಚಳಿಗಾಲ


00517. ಸಿಂಗಾಪುರದ ಚಳಿಗಾಲ
_____________________________

ಸಾಮಾನ್ಯವಾಗಿ ಸಿಂಗಪುರವೆಂದರೆ ಎಲ್ಲರ ಮನಸಿನಲ್ಲಿ ಉದ್ಭವಿಸುವ ಕಲ್ಪನೆ – ಋತುಕಾಲಗಳಿಲ್ಲದ ವರ್ಷವೆಲ್ಲಾ ಒಂದೆ ಋತುಮಾನದ ಹವಾಗುಣವಿರುವ, ಸಮಭಾಜಕವೃತ್ತದ ಆಚೀಚಿನ ಬಿಸಿಲಿನ ದೇಶ. ಇಲ್ಲಿ ಸದಾ ಬಿಸಿಲು, ಹೆಚ್ಚು ಬಿಸಿಲು ಮತ್ತಷ್ಟು ಹೆಚ್ಚು ಬಿಸಿಲು; ಟಿವಿ ಪ್ರದರ್ಶನದ ನಡುವಿನ ವಾಣಿಜ್ಯ ಪ್ರಕಟಣೆ / ಜಾಹೀರಾತುಗಳಂತೆ ಆಗ್ಗಾಗ್ಗೆ ಮಳೆ – ನಿಲ್ಲುತ್ತಿದ್ದಂತೆ ಮತ್ತೆ ಬಿಸಿಲು / ಸೆಕೆಗಳ ಬೆವರೂಡಿಸುವಾಟ. ಅಂತ ಕಡೆ ಚಳಿಗಾಲದ ಮಾತೆಂದರೆ ತುಸು ಅಚ್ಚರಿಯಲ್ಲವೆ? ಆ ಕೃತಕ ಚಳಿಗಾಲ ಸಿಂಗಾಪುರದಲಿ ವರ್ಷವಿಡಿ ಹೇಗೆ ತಾಂಡವವಾಡುತ್ತದೆ ಎಂಬುದರ ಕಿರು ಪರಿಚಯ ಈ ಕವನದ ಮೂಲಕ. ಜಾಗತಿಕ ತಾಪಮಾನ ಏರಿಳಿತದ ಹಿನ್ನಲೆಯಲ್ಲಿ ಸಿಂಗಪುರದ ಹವಾಮಾನವು ಈಚಿನ ದಿನಗಳಲ್ಲಿ ಸಾಕಷ್ಟು ಏರುಪೇರಾಗಿದ್ದರೂ, ಕವನದ ಒಟ್ಟಾರೆ ಆಶಯ ಕೃತಕ ಪರಿಸರದ ಸುತ್ತ ಗಿರಕಿ ಹೊಡೆಯುವುದರಿಂದ, ಕವನದ ಪ್ರಸ್ತುತತೆಗೆ ಧಕ್ಕೆಯಾಗದೆಂಬ ಮತ್ತು ಈ ಕವನಾಸ್ವಾದನೆಗೆ ಅಡ್ಡಿಯಾಗದೆಂಬ ಅನಿಸಿಕೆ / ಭಾವದೊಂದಿಗೆ ಇಲ್ಲಿ ಪ್ರಸ್ತುತಗೊಳಿಸಲಾಗಿದೆ.

  
(picture from wikipedia: https://en.m.wikipedia.org/wiki/File:1_singapore_f1_night_race_2012_city_skyline.jpg)

ಹೆಜ್ಜೆಯಿಟ್ಟಲ್ಲೆಲ್ಲ ಉಂಟು
ಏರ್ಕಂಡಿಶನ್ನಿನ ಜತೆ ನಂಟು
ಹೊರಗೆ ಎಷ್ಟಿದ್ದರೂ ಬಿಸಿಲು
ಒಳಗೆ ಚಳಿಚಳಿ ತೆವಲು ||

ಆಫೀಸಿನಲ್ಲಿ ಕುಳಿತು ಕೆಲಸ
ಆರಂಭ ಸಹನೀಯ ವಾತ
ಕೆಲ ತಾಸು ಕಳೆದು ಮಾತರಿಶ್ವ
ಜಾಕೆಟ್ಟುಗಳ ಹೊಚ್ಚಿಸುವ ಅಶ್ವ ||

ಶಾಪಿಂಗು ಮಾಲಲು ಏಸಿ
ಬೆಚ್ಚಗಿದ್ದರೆ ತುಸು ವಾಸಿ
ಓಡಾಡುತ ಆದರು ಬಿಕನಾಸಿ
ಹೊರ ಬಂದು ಬಿಸಿಲಿಗೆ ಅರಸಿ ||

ಚಿತ್ರ ಮಂದಿರವಂತೂ ಬೇಡ
ತಂಪು ತುಂಬಿಟ್ಟ ಮೋಡ
ಹೊದಿಕೆಯಿರದೆ ಮತ್ತೆ
ನಡುಗಿ ಜ್ವರ ಬರುವ ಮಾತೆ ||

ಮನೆಗಳಲು ಏಸಿ
ಮಾಳಿಗೆಗೂ ಏಸಿ
ಜಾಗತಿಕ ಬೆಚ್ಚಗಾಗುವಿಕೆ
ಹವಾಗುಣ ಚದುರಿಸಿ ||

ಏಸಿ ಇರದಿದ್ದರೂ ಬೇಕು
ಮನೆಯಲಿ ಹೊದಿಕೆ
ಚಳಿಗಾಲ ಇರದೇ ಇದ್ದರು
ಬೇಕು ಬೆಚ್ಚಗಾಗುವಿಕೆ ||

ಹೀಗೆ ಸಿಂಗಾಪುರಕು ಬೇಕು
ದಪ್ಪ ಹೊದಿಕೆ ಮುದುರಿಕೆ
ವರ್ಷ ಪೂರ್ತಿ ನಡೆಸೋ
ದಿನ ಚಳಿಗಾಲದ ಸಿದ್ದತೆ ||

– ನಾಗೇಶ ಮೈಸೂರು

00516. ಚಾಳೀಸಿನ ಬಾಳು


00516. ಚಾಳೀಸಿನ ಬಾಳು
__________________________

ಈಗಿನ ಜಗದ ದೈನಂದಿನ ಬದುಕಿನಲ್ಲಿ ಹೆಚ್ಚೂ ಕಡಿಮೆ ಎಲ್ಲರಲ್ಲು ಕಾಣಬಹುದಾದ ಸಾಮಾನ್ಯ ಅಂಶ – ಚಾಳೀಸು ಧಾರಣೆ. ಸುಲೋಚನೆ ಅಥವ ಕನ್ನಡಕ ಧರಿಸದವರೆ ಅಪರೂಪವೆನ್ನಬಹುದಾದ ಈ ಕಾಲಧರ್ಮದ ಕುರಿತ ಛೇಡನೆ, ಈ ಜೋಡಿ ಪದ್ಯ.

ಮೊದಲದರ ಗುರಿ ಚಿಕ್ಕ ವಯಸ್ಸಿನಲ್ಲೆ ಚಾಳೀಸು ಧರಿಸುವ ಸ್ಥಿತಿಗಿಳಿದ ಮಕ್ಕಳ ಹಾಗೂ ಅದನ್ನುಂಟು ಮಾಡುವ ಪರಿಸ್ಥಿತಿಯ ಸುತ್ತ ಗಿರಕಿ ಹೊಡೆಯುತ್ತದೆ.

ಎರಡನೆಯ ಭಾಗ ವಯಸ್ಕರ ಸುತ್ತ ಗಿರಕಿ ಹೊಡೆಯುತ್ತಾ ಹಾಗೆ ಎರಡರಲ್ಲೂ ಆರು ತಿಂಗಳಿಗೆ ಪರೀಕ್ಷೆ ಮಾಡಿಸಿಕೊಳ್ಳಬೇನ್ನುವ ನಿರೀಕ್ಷೆ, ಹೆಚ್ಚೆಚ್ಚು ಬೆಲೆಯ ಹೆಚ್ಚುವರಿ ಸುವಿಧತೆಗಳ ಆಕರ್ಷಣೆಗೆ ಬಲಿಯಾಗುವ ಅನಿವಾರ್ಯತೆ ಮತ್ತು ಸುತ್ತುವರಿದ ವಾಣಿಜ್ಯತೆಗಳನ್ನು ತಟ್ಟಿಸುವ ಕವನ ಲಹರಿ ಇಲ್ಲಿದೆ.

01. ಚಾಳೀಸಿನ ಬಾಳು – ಬಾಲ್ಯಕೆ ಕಣ್ಹಾಳು!
_____________________________________

  
(picture source wikipedia : https://en.m.wikipedia.org/wiki/File:Reading-Glasses.jpg)

ಈ ಚಾಳೀಸಿನ ಬಾಳು
ಪೂರ ಮನೆ ಹಾಳು
ಮಕ್ಕಳಿಂದ ಮುದಿ ತನಕ
ಸಂಸಾರವೆ ಕನ್ನಡಕ ||

ಈಗ ಮಕ್ಕಳು ನರ್ಸರಿಗಳಲೆ
ಕಣ್ಣೇರಿಸಿ ಮರಿ ಕನ್ನಡಕ
ಬೇಡವೆಂದರು ವೀಡಿಯೋ ಟೀವಿ
ಐದಾರು ವರ್ಷಕೆ ಕಣ್ಮುದುಕ ||

ಕೂತರೆ ಹಿಂದಿನ ಬೆಂಚು
ಕಣ್ಕಾಣದ ಬೋರ್ಡು
ದೂರದಲಿ ಕಟ್ಟಿದ ಫಲಕ
ಏನೊ ಕಲಸಿದ ಬರಹ ||

ಹೆಸರಷ್ಟೇ ಸುಲೋಚನೆ
ಖರ್ಚಿನ ಆಲೋಚನೆ
ವರ್ಷಕೊಮ್ಮೆ ಟೆಸ್ಟಾರ್ಚನೆ
ಜೇಬಿನ ಕ್ಷೌರಕೆ ಕರಣೆ ||

ಒಂದೆರಡಲ್ಲ ತರ ತರ ಕವಣೆ
ಕಣ್ಣಿಗೂ ಮೀರಿ ದುಬಾರಿ ತಾನೆ
ಪ್ರೋಗ್ರೆಸ್ಸಿವ್ ಆಂಟಿಗ್ಲೇರ್ ಕೊನೆ
ಎಲ್ಲಕು ಹೆಚ್ಚಾಗುವ ಬೆಲೆ ಬವಣೆ ||

-ನಾಗೇಶ ಮೈಸೂರು
02. ಚಾಳೀಸಿನ ಬಾಳು – ವಯಸೆ ಗೋಳು
____________________________________

  
(picture source wikipedia :https://en.m.wikipedia.org/wiki/File:Szem%C3%BCveg_-_1920-as_%C3%A9vek.JPG)

ಗಂಡ ಹೆಂಡತಿ ಕಾಲೇಜಿನಲೆ
ಅಪ್ಪಿಕೊಂಡ ಕಣ್ಣ ಸುಖ
ಓದು ಬರೆಯಲು ಕೂತಾಗಲೆ
ಮುಖವಪ್ಪುತ ಕೂರೆ ಸಖ ||

ವಯಸಿನ ಲೀಲೆ ನಲವತ್ತು
ಪೇಪರು ಓದಲು ಎಡವಟ್ಟು
ಕನ್ನಡಕದಲೆ ಓದಲು ಕಷ್ಟ
ಹೊಸ ಕನ್ನಡಕದ ಸಂಕಷ್ಟ ||

ಅಪ್ಪ ಅಮ್ಮ ವಯಸಾಗಿ ಬಲು
ಕಾಣದ ದೃಷ್ಟಿಗೆ ಕನ್ನಡಕ
ವಯೋಧರ್ಮ ಮೈಮನ ನಗ್ಗಲು
ಕಣ್ಣಿನ ಜತೆಗೆ ದನಿ ನಡುಕ ||

ಹತ್ತಿರಕೊಂದು ದೂರಕೊಂದು
ಕಂಪ್ಯುಟರಿಗೆ ಇನ್ನೊಂದು
ಛಾಯಾಚಿತ್ರ ಸ್ಟೈಲ್ಗಿನ್ನೊಂದು
ತಂಪಿಗುಡುಕು ಮತ್ತೊಂದು ||

ಎರಡೆರಡು ಚಾಳೀಸ ಚಾಳಿ
ಹತ್ತಿರ ದೂರ ನೋಟ ಗಾಳಿ
ಹೊಸ ತಾಂತ್ರಿಕತೆ ಧಾಳಿ
ಪ್ರೋಗ್ರೆಸ್ಸಿವಿನ ಮಹಾಕಾಳಿ ||

ಹೀಗೆ ಚಾಳೀಸಿನ ಬಾಳು
ಎಲ್ಲ ಮನೆ ಮನ ತೆವಲು
ಬೇಕಿರಲಿ ಬಿಡಲಿ ಕೊನೆಗೆ
ಕಣ್ಣಿನ ಟೋಪಿಯ ಹಾಗೆ ||

– ನಾಗೇಶ ಮೈಸೂರು

00502. ಚಿತ್ತ ಜಿಹ್ವಾ ಚಪಲ!(ಜಿದ್ದಿನ ಜಿಡ್ಡು ದೇಹದ ಜಡ್ಡು)


00502.  ಚಿತ್ತ ಜಿಹ್ವಾ ಚಪಲ!(ಜಿದ್ದಿನ ಜಿಡ್ಡು ದೇಹದ ಜಡ್ಡು)
_________________________________________

ಬಾಯೃಚಿಯನ್ನು ಗೆಲ್ಲಬಲ್ಲ ಸಂತರು, ಜಿಹ್ವಾ ಚಾಪಲ್ಯವನ್ನು ನಿಯಂತ್ರಿಸಬಲ್ಲ ಅಸಾಧಾರಣ ಶೂರರು ಎಲ್ಲೆಡೆಯೂ ಕಾಣಸಿಗದ ಅಪರೂಪದ ಸರಕೆಂದೆ ಹೇಳಬಹುದು. ರುಚಿಯಾಗಿದೆಯೆಂದೊ, ಯಾರೊ ಬಲವಂತಿಸಿದರೆಂದೊ, ಇದೊಂದೆ ಬಾರಿ ತಿಂದು ನಾಳೆಯಿಂದ ನಿಯಮ ಪಾಲಿಸುವುದೆಂದೊ, ಆಸೆ ತಡೆಯಲಾಗದೆಂದೊ – ಒಟ್ಟಾರೆ ಒಂದಲ್ಲ ಒಂದು ಕಾರಣಕ್ಕೆ ಜಿಹ್ವಾಚಪಲದ ಸೆಳೆತಕ್ಕೆ ಬಲಿಯಾಗುವವರೆ ಎಲ್ಲ. ಅದರ ವಿಶ್ವರೂಪದ ತುಣುಕನ್ನು ಪರಿಚಯಿಸುವ ಮೊದಲ ಭಾಗ ಈ ಕವನ.

  
(Picture source : https://en.m.wikipedia.org/wiki/File:Trimyristin-3D-vdW.png)

ಜಿಡ್ಡುಜಿಡ್ದಾಗಿದೆ ಕೈ
ಬಲು ಜಡ್ದಾಗಿದೆ ಮೈ
ಲಡ್ಡು ಹಿಡಿದ್ಹೋಗಿದೆ ಮೂಳೆ
ಇನ್ನಷ್ಟು ಕಳೆಯೋದಿದೆ ನಾಳೆ ||

ರುಚಿರುಚಿಯಾಗಿದೆ
ಬಲು ಶುಚಿಯಾಗಿದೆ
ತೇಲಿದೆ ಎಣ್ಣೆ ಮುಚ್ಚು ಕಣ್ಣೆ
ಬಾಯೃಚಿ ಮುಂದೆ ಗಂಡು ಹೆಣ್ಣೆ ||

ಗರಿಗರಿಯಾಗಿದೆ
ಕರಿ ಸರಿ ಕರಿದಾಗಿದೆ
ಹೀರಿಬಿಟ್ಟು ಜೀವಸತ್ವ ಗುಟ್ಟು
ಬಣ್ಣ ಮೈಮಾಟವೆ ನೀರೂರಿಸಿಟ್ಟು ||

ನಳ ನಳಪಾಕ
ಮಾಡುವರ ಪುಳಕ
ಬಾಯ್ಮಾತಿಗೆ ಸಾಕ ಜಳಕ
ಖುಷಿಯಾಗುವಂತೆ ತಿನ್ನಬೇಕ ||

ಬಗೆ ಬಗೆ ತಿಂಡಿ
ತಿನ್ನಲು ಜೀವಹಿಂಡಿ
ಮುಂದಿಟ್ಟು ನಂಟು ನಲ್ಮೆ
ಒತ್ತಾಯಿಸಿ ಬಲು ಕೆಳೆ ಬಲ್ಮೆ ||

————————————————————-
ನಾಗೇಶ ಮೈಸೂರು
————————————————————-

00479. ನೆಗಡಿ ಸಾರ್, ನೆಗಡಿ..


00479. ನೆಗಡಿ ಸಾರ್, ನೆಗಡಿ..
_______________________

(Published in Suragi – 28.01.2016 :http://surahonne.com/?p=10711)

  
(Picture source: https://en.m.wikipedia.org/wiki/File:Canine-nose.jpg)

ಮೂಗು ಕಟ್ಟಿ ಸೊಂಡಿಲ
ಭಾರ ಮುಖದ ಮೇಲಾ
ಯಾಕೆ ಬಂತೀ ನೆಗಡಿ ?
ಚಳಿರಾಯನೊಡನಾಡಿ.. ||

ಮಾತಾಡಿಕೊಂಡಂತೆ ಜೋಡಿ
ಸುರಕ್ಷೆಯ ಪದರ ಜರಡಿ
ಹಿಡಿದರು ಏರಿತೇ ಮಹಡಿ..!
ಶಿರದಿಂದುಂಗುಷ್ಠ ಗಡಿಬಿಡಿ ||

ಗಂಟಲಿತ್ತಲ್ಲಾ ನಿರಾಳ ..
ಕಂಬಿಯೊಳಗೇನ ತುರುಕಿದರಾ ?
ಕಟ್ಟಿಕೊಂಡಂತೆ ಗಷ್ಠ ಕಸಿವಿಸಿ
ದೊಡ್ಡಿ ಬಾಗಿಲಿಗೆ ಬೀಗ ಜಡಿಸಿ ||

ಉಗುಳ ನುಂಗಲಿಕ್ಕಿಲ್ಲ ಸರಾಗ
ಕೆಮ್ಮುತೆ ಉಗುಳಬಿಡದಾ ರೋಗ
ಮುಖದೆ ಮೂಗುಂಟೆ ಅನುಮಾನ
ಕಾಟಕೆ ತಾನಾದಂತೆ ಅವಸಾನ ||

ಬಿಸಿ ಕುಡಿದರು ಬಿರುಸೇಕೊ
ತಂಪು ಮುಟ್ಟಲೆ ಭೀತಿಯುಕ್ಕೊ
ಮುರಿದು ಕೂರಿಸಿತೆಲ್ಲಾ ಸೊಕ್ಕು
ಸೀನುತೆ ಬಾಲ ಮುದುಡಿದ ಬೆಕ್ಕು ||

00462. ಆಲ್ಕೋಹಾಲಿನ ಸಂಜೆಗಳು…(01 & 02)


00462. ಆಲ್ಕೋಹಾಲಿನ ಸಂಜೆಗಳು…(01 & 02)
_______________________________________________

ಕಾಲಯಾನದ ಅಧುನಿಕ ರಥವನೇರಿ ಸಾಗಿದ ಮನುಕುಲ, ಕಾಲಕ್ಕೆ ತಕ್ಕಂತೆ ಕುಣಿ ಎನ್ನುವ ಹಾಗೆ ಆಲ್ಕೋಹಾಲಿನ ಕುಡಿತದ ಕುರಿತ ಮೊದಲಿದ್ದ ಮಡಿವಂತಿಕೆಯನ್ನು ಸಾಮಾಜಿಕ ಬಂಧಗಳ ನೆಲೆಗಟ್ಟಿನಲ್ಲಿ ತರ್ಪಣ ಬಿಟ್ಟು ಸಾಗಿದ್ದು ಹಳೆಯ ಕಥೆ. ಆದರೆ ಆ ಹೆಸರಡಿಯಲ್ಲಿ ಗೆಳೆಯರೊ, ಬಂಧುಗಳೊ, ಸಂಗಾತಿಗಳೊ ಜತೆ ಸೇರಿದಾಗ ಹೊರಬೀಳುವ ಸತ್ಯ, ಗುಟ್ಟುಗಳು, ನೋವು – ದುಮ್ಮಾನಗಳು, ಪ್ರಣಯ – ವಿರಹದ ಕಥೆಗಳು, ರಾಜಕೀಯ, ಸಿನಿಮಾ..ಹೀಗೆ ಎಲ್ಲದರ ವಿಶ್ವರೂಪವನ್ನೆ ಬಿಚ್ಚಿಟ್ಟುಬಿಡುತ್ತವೆ, ಈ ಆಲ್ಕೋಹಾಲಿನ ಸಂಜೆಗಳು. ಅದರ ವೈವಿಧ್ಯ ರೂಪಗಳನ್ನು ಬಿಚ್ಚಿಡುವ ಚಿತ್ರಣ ಈ ಕವನದಲ್ಲಿ. ಮೊದಲ ಭಾಗ (ಪ್ರೇರೇಪಿಸಿ ಪಿಸುಗುಟ್ಟು…..) ತೀರಾ ಹತ್ತಿರದವರೊಂದಿಗೆ ಆರಾಮವಾಗಿ ಪಿಸುಗುಟ್ಟುವ ಸ್ತರದ ವಿಷಯಗಳನ್ನು ಕುರಿತು ಚರ್ಚಿಸಿದರೆ, ಎರಡನೆ ಭಾಗ ರಹಸ್ಯದ ನೆರಳಡಿ ನಡೆಸುವ ಲೀಲೆಗಳಿಗೆ ಮೀಸಲಾದ ಕಾವ್ಯ.

01. ಪ್ರೇರೇಪಿಸಿ ಪಿಸುಗುಟ್ಟು..
____________________

ಮಾಂತ್ರಿಕ ವೇಗದ
ಯಾಂತ್ರಿಕ ಬದುಕಲಿ
ಹಿಡಿದು ಅಟ್ಟಾಡಿಸುವ
ನೂರೆಂಟು ನಂಜುಗಳು
ಆಲ್ಕೋಹಾಲಿನ ಸಂಜೆಗಳು ||

ಮಿನಿ ಬಾರು ಪಬ್ಬಿನಲಿ
ಗಡಂಗುಗಳ ಮಬ್ಬಿನಲಿ
ಕೊಬ್ಬಿದ್ಹೆಣ್ಣ ಟೈಟ್ಸ್ಕರ್ಟಿನಲಿ
ಬಿಕರಿಯಾಗಿ ಮದಿರೆಗಳು
ಆಲ್ಕೋಹಾಲಿನ ಸಂಜೆಗಳು ||

ಈಗೆಲ್ಲ ಸ್ಟೈಲು ಲೆವೆಲ್ಲು
ಕಾಸಷ್ಟೆ ಅಲ್ಲ ತೆವಲು
ಜತೆಗೂಡೆ ಬೇಕು ಜಾಗ
ಮಾತು ಬರಬೇಕಿರದೆ ನಿಗಾ
ಆಲ್ಕೋಹಾಲಿನ ಸಂಜೆಗಳು ||

ಕೈ ಕೊಟ್ಟ ಬೆಡಗಿ ಕಥೆ
ಅಳಿಸಿದ ನೋವಿಗೆ ಸತ್ತೆ
ಹಿಡಿದೆತ್ತಿದ ಹುಡುಗಿ ಲತೆ
ಉಣಿಸಿದಾ ಹಾಲು ಸವಿಗಾಳು
ಆಲ್ಕೋಹಾಲಿನ ಸಂಜೆಗಳು ||

ಆಫೀಸಿನ ರಾಜ ತಂತ್ರ
ರಾಜಕೀಯಗಳ ಕುತಂತ್ರ
ಸಹೋದ್ಯೋಗಿ ಮನ್ವಂತರ
ಬಿಚ್ಚಿಡಲೆಲ್ಲ ರಸಭರಿತ ತೆಗಳು
ಆಲ್ಕೋಹಾಲಿನ ಸಂಜೆಗಳು ||

02. ಬಂಜೆಯಾಗದೆ ಗುಟ್ಟು….
___________________________________________

ರಾಸಲೀಲೆಗಳ ರಸಯಾನ
ಗುಟ್ಟಾದ ಪ್ರಣಯ ಚುಂಬನ
ಯಾರ ಹೃದಯ ಸ್ಪಂದನ
ಇನ್ನಾರದೋ ಎದೆ ಸ್ಥಂಭನಗಳು
ಆಲ್ಕೋಹಾಲಿನ ಸಂಜೆಗಳು ||

ರಾಜಕೀಯದ ರಾಜ ನಿಪುಣತೆ
ಮುತ್ಸದ್ಧಿಗಳ ಒಳ ಮಾತುಕತೆ
ರೆಸಾರ್ಟು ರಾಜಕೀಯದ ಮಾತೆ
ಎಲ್ಲಕು ಬೀರಾ ನೀರಾ ನದಿಗಳು
ಆಲ್ಕೋಹಾಲಿನ ಸಂಜೆಗಳು ||

ಅಪರೂಪದ ಭೇಟಿಗೂ ಸೈ
ಆತ್ಮೀಯರ ತರಾಟೆಗೂ ಸರಿ
ಮೈಮನ ಬಿಚ್ಚದ ಬದುಕು
ತೆರೆದ್ಹಗುರಾಗಲು ಬೇಕು
ಆಲ್ಕೋಹಾಲಿನ ಸಂಜೆಗಳು ||

ರಾತ್ರಿ ರಾಣಿಯ ಸುತ್ತ
ಬದಲಿಸಿ ಕೊಡಲೆ ಮುತ್ತ
ಹಿಗ್ಗಿಸಿ ಹಿಗ್ಗುತ ಸತತ
ನೃತ್ಯ ಮೋದ ಕಿಕ್ಕಾಗಿ ಮಸ್ತಿ
ಆಲ್ಕೋಹಾಲಿನ ಸಂಜೆಗಳು ||

ಜೀವನ ಚಕ್ರ ತುಂಬಾ ವಿಚಿತ್ರ
ಕುಡಿಯುವ ಮದ್ಯ ಎಲ್ಲ ಸಚಿತ್ರ
ಹರುಷ ದುಃಖ ನೆಪಗಳ ಪಕ್ಕಾ
ಕೂತು ಕುಡಿದು ಮಾತಾಗಿ ತಿರುಳು
ಆಲ್ಕೋಹಾಲಿನ ಸಂಜೆಗಳು ||

– ನಾಗೇಶ ಮೈಸೂರು

00460.ಕುಂಭಕರ್ಣ ವೈಭವ (ಮಕ್ಕಳಿಗೆ)


00460.ಕುಂಭಕರ್ಣ ವೈಭವ (ಮಕ್ಕಳಿಗೆ)
_________________________________

ಬೆಳಗಾಗುತ್ತಿದ್ದಂತೆ ಎಬ್ಬಿಸಿ, ಸಿದ್ದ ಮಾಡಿಸಿ, ತಿಂಡಿ ತಿನಿಸಿ ಶಾಲೆಗೆ ದಬ್ಬುವ ತನಕ ಮಕ್ಕಳಿಗಿಂತ ಹೆಚ್ಚಿನ ಕಾಟ, ತೊಂದರೆ ಅನುಭವಿಸುವವರು – ಅಪ್ಪ, ಅಮ್ಮಗಳು. ಅದರಲ್ಲೂ ಕೆಲವು ಕುಂಭಕರ್ಣರನ್ನು ಎಬ್ಬಿಸುವ ತನಕದ ಪಾಡು, ದೇವರಿಗೆ ಪ್ರೀತಿ; ಅಂತಹ ಒಂದು ದೈನಂದಿನ ಯತ್ನದ ವರ್ಣನೆ – ಈ ಕವನ.

ನಮ್ಮನೆ ರಾಮಾಯಣವು ಸಹ ಬಹಳ ಸುಪ್ರಸಿದ್ಧ
ಮಗರಾಯ ಕುಂಭಕರ್ಣನೊಂದಿಗೆ ದಿನನಿತ್ಯ ಯುದ್ಧ
ರಣರಂಗಕೆ ಕಳಿಸಲವನ ನಿದ್ದೆಯೆಬ್ಬಿಸೆ ಘನ ಘೋರ
ಶಾಲೇಲಿ ಕಲಿಯಲವನಿಗೆ ಪಾಪ ವೇದನೆ ಅಪಾರ ||

ರಾತ್ರಿ ಮಲಗೆಂದರು ಬೇಗ ಪವಡಿಸದ ಸುಕುವರ
ಬಿಸಿನೀರ ಹನಿ ಸಿಂಪಡಿಕೆ ಆರಂಭ ಎಬ್ಬಿಸೆ ಪ್ರವರ
ಆತ್ಮ ರಕ್ಷಣೆಗೆಂದು ಕೂತ ರಕ್ಷಣಾತ್ಮಕ ಸರಿ ದೂರ
ಮಳೆ ಸಿಂಚನ ತೊಡೆಯಲು ಟರ್ಕಿ ಟವೆಲ್ಲಿನ ಚಾರ ||

ಬಿಸಿ ಕಾಫಿ ಲೋಟ ಕೆಲವೊಮ್ಮೊಮ್ಮೆ ಆಡುವಾಟ
ಚುರುಗುಟ್ಟಿಸುವ ಬಿಸಿ ಮೈಕೈಗೆ ಸರಿ ನೇವರಿಸಾಟ
ನಿದ್ದೆಗಣ್ಣಲೇ ಸೊರ ಸೊರ ಇಳಿದರೂ ಬಿಸಿ ಕಾಫಿ
ಮುದುರಿ ಮೆತ್ತೆಗೆ ಮತ್ತೆ ಒರಗಿಬಿಡುವನಾ ಪಾಪಿ ||

ಅಂಗಮರ್ದನ ಸೇವೆ ರಮಿಸೆ ಹಿತ ಕೈ ಕಾಲ್ನೋವೆ
ತಲೆಯಿಂದುಂಗುಷ್ಟತನಕ ನಡೆವ ಅವಿರತ ಸೇವೆ
ಎಚ್ಚರಾಗುವ ಬದಲು ಬೆಚ್ಚಗಾಗಿಸಿ ಮರ್ದನ ತಾಡ
ಹಾಯಾದ ಸುಖ ನಿದ್ದೆ ಮತ್ತೋಡುವ ಪರಿ ನೋಡ ||

ಎಡಬಲ ಎಳೆತ ಗುದ್ದು ಮುದ್ದಾಡಿಸಿ ಒದ್ದಾಡಿಸುತ
ಕಲ್ಲು ಕೊರಡಂತೆ ಬಿದ್ದಿರಲು ಜತೆ ಬೈಗುಳ ಬಿಗಿತ
ಕಿವಿ ಗುರುಗುಟ್ಟುವ ಗಾತ್ರದೆ ಒಮ್ಮೊಮ್ಮೆ ಸಂಗೀತ
ಎದ್ದು ಕೂತರು ಚಾದರ ಹೊದ್ದು ಒರಗಿ ಕೂತ ತಾತ ||

ಹೊದ್ದ ಚಾದರ ಕಿತ್ತೆಸೆದು ಫಂಖವೋಡಿಸುತ ಕಾಟ
ಬೆರಳಲೇ ಹೊಟ್ಟೆ ಮೇಲಾನೆ ರಥ ಕುದುರೆ ಓಡಾಟ
ಕಚಗುಳಿಸಿ ಕೆರಳಿಸಿ ದೂರ್ವಾಸನವತಾರದ ಒರಟ
ಕಣ್ಣುಮುಚ್ಚಾಲೆ ಅರಚಿ ಪರಚಿ ಪರಸ್ಪರರ ಜೂಟಾಟ ||

ಶತ ಸಾಹಸ ಮಾಡಿಸೆದ್ದರು ಸರಿ ಮುಗಿಯದ ಕಥೆ
ಕಥೆ ಹೇಳಬೇಕೆಂದು ಪಟ್ಟು ಹಿಡಿದು ಕೂತವನ ವ್ಯಥೆ
ಹೊಸ ಹೊಸತ ಕಲ್ಪನೆ ಕಥೆ ದಿನ ಹುಟ್ಟಿಸಬೇಕಂತೆ
ಕಡೆಗೂ ಬಚ್ಚಲಿಗೆ ಎಳೆದೊಯ್ಯುವಷ್ಟರಲ್ಲಿ ಉಸ್ಸಂತೆ ||

ಶಾಲೆಗೆ ಸಂಕಟ ಹೊರಡಲು ಕಪಟ ಎಲ್ಲ ನಾಟಕ
ಹೊಟ್ಟೆ ನೋವಿಂದಿಡಿದು ನೆಗಡಿ ಶೀತಗಳಾ ಜಾತಕ
ಸಜ್ಜಾಗಿಸಲು ಯೋಧ ಕುಂಭಕರ್ಣ ಹರ ಸಾಹಸ
ಮರುದಿನ ಪುನರಾವರ್ತನೆ ಸಹನೆ ತಾಳ್ಮೆ ಪರೀಕ್ಷ ||

– ನಾಗೇಶ ಮೈಸೂರು

00458. ನವರಸ ಲಲಿತಾ (ಶೃಂಗಾರ-ರಸ-ಸಂಪೂರ್ಣಾ)


00458. ನವರಸ ಲಲಿತಾ (ಶೃಂಗಾರ-ರಸ-ಸಂಪೂರ್ಣಾ)
______________________________________

ಜಗನ್ಮಾತೆ ಲಲಿತೆಯ ಸಹಸ್ರ ನಾಮಗಳಲ್ಲಿ ಒಂದು ‘ಶೃಂಗಾರ ರಸ ಸಂಪೂರ್ಣ’.. ಈ ಹೆಸರಿನ ವಿವರಣೆಯ ವ್ಯಾಖ್ಯಾನವನ್ನು ಓದುವಾಗ ಪ್ರಾಸಂಗಿಕವಾಗಿ ಮಾತೆ ಲಲಿತೆಯ ನವರಸಗಳನ್ನಾವರಿಸಿದ ಸ್ವರೂಪದ ಕುರಿತ ವರ್ಣನೆಯನ್ನು ಕವನವಾಗಿಸಿದ್ದೆ (ಸಂಪದದಲ್ಲಿ). ಈ ವಿವರಣೆಯ ವಿಶಿಷ್ಟತೆಯೆಂದರೆ ನವರಸದ ಜತೆಗೆ ಅದೆಲ್ಲಕ್ಕು ಕಲಶವಿಟ್ಟಂತೆ, ಮಿಕ್ಕೆಲ್ಲ ಭಾವಗಳನ್ನಧಿಗಮಿಸುವ ‘ಎದೆ ತುಂಬಿದ ರಸಭಾವ’ವು ಹತ್ತನೆಯ ವರ್ಣನಾತೀತ ರಸದ ರೂಪದಲ್ಲಿ ಅನಾವರಣಗೊಳ್ಳುವುದು. ಆ ಹತ್ತು ರಸಗಳ ಸಂಕ್ಷಿಪ್ತ ಚೌಪದಿ ರೂಪ ಈ ಕೆಳಗಿದೆ. ಈ ಎಲ್ಲ ರಸಗಳು ಶ್ರೀ ಲಲಿತೆಗೆ ಸಂಬಂಧಿಸಿದ ವಿವರಣೆಯನ್ನೆ ಆಧರಿಸಿ ಆಯಾ ರಸದ ವರ್ಣನೆಗೊಂದು ಮೂರ್ತ ರೂಪ ಕೊಡಲೆತ್ನಿಸುವುದು ಇಲ್ಲಿನ ವಿಶೇಷ.

೦೧. ಅದ್ಭುತ

ಅತ್ಯಾಶ್ಚರ್ಯ ಸಾಕಾರವಾಗಿ ಲಲಿತ, ಪರಬ್ರಹ್ಮ ಕಲ್ಪನಾತೀತ
ಸಗುಣ ನಿರ್ಗುಣ ಸಂಕಲಿತ, ಏಕೀಭವಿತ ಅರ್ಧನಾರಿ ಅದ್ಭುತ
ಪುಷ್ಪವೊಂದರಲೆ ಗಂಡು ಹೆಣ್ಣಂತೆ ಸಹಜ, ಶಿವಶಕ್ತಿ ನಿಜ ರೂಪ
ಅತಿಶಯ ಪುರುಷ ಪ್ರಕೃತಿ ಸಂಗಮ, ಪ್ರತಿಬಿಂಬಿತ ಅಪರೂಪ ||

೦೨. ಕರುಣ

ಕುಂಡಲಿನೀ ಸಹಸ್ರಾರಕೇರಿಸುವ್ಹಾದಿ, ಸಾಧಕನಾಗಿ ನಿತ್ರಾಣ
ಹಠಯೋಗದಿ ಮುನ್ನಡೆದರು, ಕಾಠಿಣ್ಯವಾಗಿಸುತೆ ಗತಪ್ರಾಣ
ಮೊರೆಯಿಡೆ ಕರುಣಾಮರ ಲಲಿತೆ, ನಿರ್ಜೀವದಲು ಶಕ್ತಿ ರಸ
ಮರುಕ ಕನಿಕರ ದಯೆ ಹರಸುತ್ತ, ಸ್ಪುರಿಸುವ ಕರುಣಾ ರಸ ||

೦೩. ಬೀಭತ್ಸ

ಜಗದೆಲ್ಲಕು ಮೂಲಾಧಾರ, ಬ್ರಹ್ಮಾಂಡ ನಡೆಸಿ ಲಲಿತೆ ಸ್ವರ
ಅನುರಣಿತ ಪ್ರತಿ ಕ್ಷಣಕು, ಸೃಷ್ಟಿ ಸ್ಥಿತಿ ಲಯಗಳ ಅವತಾರ
ಸತ್ಯವರಿಯದೆ ಅಜ್ಞಾನದ ಮುಸುಕಲಿ, ಬಂಧಿತಗೆ ಜುಗುಪ್ಸೆ
ದೇವಿಯ ಕಾಡುವ ಭೀಭತ್ಸ ಭಾವ, ಜ್ಞಾನಿಗಳಾಗಿಸೆ ಅಪೇಕ್ಷೆ ||

೦೪. ರುದ್ರ

ಮರದ ನೆರಳಂತೆ ತಂಪು, ದೇವಿ ಸನ್ನಿಧಿ ಪ್ರಶಾಂತ ಸಾಗರ
ಉರಿ ಬಿಸಿಲಂತೆ ರೌದ್ರ, ಸಿಟ್ಟು ಸೆಡವು ರೋಷದ ಅವತಾರ
ಪ್ರಕೃತಿ ರೂಪಿಣಿ ಹೊರತಾಗದೆ ಹೆಣ್ಣಾಗಿ, ಪ್ರಕಟಿಸುತ ರುದ್ರ
ಜಟೆಯಲಿ ಗಂಗೆಗೆ ಹರಿ ಹಾಯ್ದ ರೋಷಕೆ, ಸಂವತ್ಸರ ರೌದ್ರ ||

೦೫. ವೀರ

ಜೀವಿ ಪ್ರಾಪಂಚಿಕತೆ ವ್ಯಾಮೋಹ, ಲೌಕಿಕ ವ್ಯಸನ ಭಂಡಾರ
ಎಡಬಿಡದೆ ಕಾಡಿಸಿ ಅರಿಷಡ್ವರ್ಗ, ದುಷ್ಟಮನದ ಭಂಡಾಸುರ
ದುಷ್ಟದಮನ ಪರಾಕ್ರಮ, ಸಗಣ ಸಮೇತ ಹೋರಾಟಾ ದಿನ
ತನ್ನೊಳಗ ಗೆಲ್ವ ಶೌರ್ಯ ಕಲಿತನ, ವೀರರಸವೆ ದೇವಿ ಧ್ಯಾನ ||

೦೬. ಶಾಂತ

ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ ಆವರ್ತನ ಚಕ್ರ
ಮಹಾ ಪ್ರಳಯ ತಾಂಡವ ನೃತ್ಯಕೆ, ಸಾಕ್ಷೀ ಭೂತ ಶಕ್ತಿ ಮಾತ್ರ
ಅಗ್ನಿಪರ್ವತದೊಡಲಿಂದ ಜತನ, ಹಿರಣ್ಯಗರ್ಭ ಪಡೆಯಲವನ
ಪಂಚೇಂದ್ರಿಯ ಜಿತ ಪ್ರಶಾಂತ ನರ್ತನ, ಶಾಂತವಾಗಿಸಿ ಶಿವನ ||

೦೭. ಶೃಂಗಾರ

ಸೃಷ್ಟಿಯೆ ಈ ಜಗದಾ ವಿಸ್ಮಯ, ಅಲಂಕಾರ, ಭೂಷಣಪ್ರಾಯ
ಪ್ರಣಯಾನುರಾಗಗಳೆ, ಭಾವಜವಿಲಾಸದ ಶೃಂಗಾರ ಸಮಯ
ಭಾವಜಾಂತಕನೂ ಹೊರತಿಲ್ಲ, ವಿಲಾಸಾ ರಸಿಕತೆಗೆ ಸಕ್ರೀಯ
ಶಿವಶಕ್ತಿ ಪರಬ್ರಹ್ಮದೇಕೀಭವ ರೂಪ, ಜಗ ಸಾರುವ ಉಪಾಯ ||

೦೮. ಹಾಸ್ಯ

ಶೃಂಗಾರ ಲಾಸ್ಯದೆ ಸರಸ, ಜತೆ ಸೇರಿಸುತ ಹಾಸ್ಯ ಸಲ್ಲಾಪ
ತ್ರಿಕಾರ್ಯದೇಕತಾನತೆ ನಡುವೆ, ಚಿಮ್ಮಿಸಿದ ಹರ್ಷೋಲ್ಲಾಸ
ಗಹನ ಗಂಭೀರ ಜ್ಞಾನ, ಹಾಸ್ಯ ರಸದಿ ಕಠಿಣತೆಗೆ ಸೋಪಾನ
ಸುಲಿದ ಬಾಳೆಯಂತೆ ಸುಲಲಿತ, ಹಾಸ್ಯರಸ ಪರವಶ ಮನ ||

೦೯. ಭಯಾನಕ

ಬಾಹ್ಯ ರೂಪಾಂತರದಂತೆ ನಡೆನುಡಿ, ದೇವಿ ಲಲಿತೆಗೂ ಕಾಡಿ
ಹೆಣ್ಣಾಗಿ ಏಕಾಂತದಲಿ, ಸರ್ಪಭೂಷಣನೊಡಗೂಡಿದ ಗಾರುಡಿ
ನಿರ್ಭಿತಿಯಲ್ಹರಿದಾಡುವ, ಸರ್ಪಸಂತತಿಗೆ ಭಯಾನಕ ಮುದ್ರೆ
ಸಹಸ್ರಾರ ಮಿಲನಕೆಲ್ಲೆಡೆ ತೊಡಕೆ, ಸಾಧಕನಿಗೆಚ್ಚರಿಸಿರೆ ಭದ್ರೆ ||

೧೦. ಎದೆ ತುಂಬಿದ ರಸ ಭಾವ

ರಸಾನುಭೂತಿ ಮಧುರ ಸಂಗಮ, ಸಮ್ಮಿಲನಾ ಜಗಕೆ ಉಗಮ
ಶಿವ ಶಕ್ತಿ, ಪುರುಷ ಪ್ರಕೃತಿ, ಭಕ್ತ ಸಾಧಕರೆಲ್ಲರ ಸಾತ್ವಿಕ ಪ್ರೇಮ
ಪರಮಾನಂದಾಮೃತ ಸ್ರವಿಸುತ ಸಹಜ, ರಸಮಯ ಸಾನಿಧ್ಯ
ಎದೆ ತುಂಬಿ ಹರಿವ ಭಾವ ಸಂಚರಣೆ, ವರ್ಣನಾತೀತ ಸಮೃದ್ಧ ||

00455. ಲಘುಹಾಸ್ಯ / ಹರಟೆ: ಗುಬ್ಬಣ್ಣ ಮತ್ತು ಗುಣಿತಾಕಾಕ್ಷರಗಳು..


00455. ಲಘುಹಾಸ್ಯ / ಹರಟೆ: ಗುಬ್ಬಣ್ಣ ಮತ್ತು ಗುಣಿತಾಕಾಕ್ಷರಗಳು..
________________________________________________________

ಮಟಮಟ ಮಧ್ಯಹ್ಮದ ಸುಡು ಬಿಸಿಲಲ್ಲಿ ಬೋರಾಗಿ ಪೇಪರು ತಿರುವುತ್ತಾ ಕೂತಿದ್ದರು ಯಾಕೊ ಮನಸೆಲ್ಲ ಇನ್ನೆಲ್ಲೊ ಇತ್ತು.. ಇಂಥಹ ಸಮಯದಲ್ಲಿ ಗುಬ್ಬಣ್ಣನಾದರು ಇದ್ದಿದ್ದರೆ ಹಾಳು ಹರಟೆ ಹೊಡೆಯುತ್ತಾ ಕಾಲಾಯಾಪನೆ ಮಾಡಬಹುದಿತ್ತಲ್ಲ ಎನಿಸಿ ಮೊಬೈಲ್ ಕೈಗೆತ್ತಿಕೊಂಡು ಕಾಲ್ ಮಾಡಿದೆ. ಗುಬ್ಬಣ್ಣ ಯಾಕೊ ಪೋನ್ ಎತ್ತುವಂತೆ ಕಾಣಲಿಲ್ಲ ಅನಿಸಿದಾಗ ಒಂದು ವಾಟ್ಸಪ್ ಮೆಸೇಜ್ ಕಳಿಸಿದೆ – ‘ಗುಬ್ಬಣ್ಣ, ವಾಟ್ಸ್ ಅಪ್?’ ಎನ್ನುವ ತುಂಡು ಸಂದೇಶವನ್ನೆ ರವಾನಿಸುತ್ತಾ.. ಆದಾಗಿ ಐದು ನಿಮಿಷ ಕಳೆದರು ಆ ಕಡೆಯಿಂದ ಸದ್ದೆ ಇಲ್ಲ. ಸರಿ ಯಾವುದಾದರು ಟೀವಿ ಚಾನಲ್ಲನ್ನಾದರು ಹುಡುಕುತ್ತ ರಿಮೋಟನ್ನು ಗೋಳಾಡಿಸೋಣ ಎಂದುಕೊಂಡು ಮೇಲೇಳುವ ಹೊತ್ತಿಗೆ ಸರಿಯಾಗಿ ವಾಟ್ಸಪ್ಪಿನ ಇನ್ ಕಮಿಂಗ್ ಮೆಸೇಜ್ ಬಂದಿತ್ತು – ಗುಬ್ಬಣ್ಣನಿಂದಲೆ..

‘ನಥಿಂಗ್ ಅಪ್ ಸಾರ್ ಆಲ್ ಡೌನ್… ಲೈಬ್ರರಿಲಿದೀನಿ’

ಯಥಾರೀತಿ ನಾ ಪೂರ್ತಿ ಕನ್ಫ್ಯೂಸ್… ನಾ ಕೇಳಿದ್ದೆ ಒಂದಾದರೆ ಬರುವ ಉತ್ತರವೆ ಇನ್ನೊಂದು..

‘ಗುಬ್ಬಣ್ಣಾ…. ಬೀ ಸೀರಿಯಸ್.. ಐ ಅಮ್ ನಾಟ್ ಟಾಕಿಂಗ್ ಎಬೌಟ್ ಸ್ಟಾಕ್ ಅಂಡ್ ಷೇರು ಮಾರ್ಕೆಟ್ ಅಪ್ ಅಂಡ್ ಡೌನ್..ಎಲ್ಲಿ ಹಾಳಾಗೋಗಿದ್ದೀಯಾ ಎಂದೆ ಅಷ್ಟೆ.. ಯಾವ ಲೈಬ್ರರೀಲಿದೀಯಾ ? ಅಂಗ್ ಮೋ ಕಿಯೊ ಬ್ರಾಂಚಾ? ಸಕತ್ ಬೋರಾಗ್ತಿದೆ ನಾನು ಅಲ್ಲಿಗೆ ಬರ್ತೀನಿ ತಾಳು’ ಎಂದು ಉದ್ದದ ಮೆಸೇಜ್ ಕಳಿಸಿದೆ.. ಹಾಳು ಹೊಸ ಪೀಳಿಗೆಯ ಹುಡುಗರ ಹಾಗೆ ತುಂಡು ಸಂದೇಶ ಕಳಿಸಲು ಬರದಿದ್ದಕ್ಕೆ ನನ್ನನ್ನೆ ಶಪಿಸಿಕೊಳ್ಳುತ್ತಾ..

‘ಇಲ್ಲಾ ಸಾರ್ ಮೀಟಿಂಗ್ ಆಗಲ್ಲ.. ಆಂಗ್ ಮೋ ಕಿಯೊಲಿಲ್ಲ..ಕನ್ನಡ ಲೈಬ್ರರಿಲಿದೀನಿ..’

ಸಿಂಗಪುರದಲ್ಲೆಲ್ಲಿಂದ ಬರ್ಬೇಕು ಕನ್ನಡ ಲೈಬ್ರರಿ ? ಮತ್ತೊಂದು ಟ್ರೈನು ಹತ್ತಿಸ್ತಾ ಇದಾನೆ ಪಾರ್ಟಿ ಅನ್ಕೊಂಡು, ‘ ಗುಬ್ಬಣ್ಣ.. ನೊ ಮೋರ್ ಡ್ರಾಮಾ ಪ್ಲೀಸ್.. ಸಿಂಗಪುರದಲ್ಲೆಂತ ಕನ್ನಡ ಲೈಬ್ರರಿ ..? ರೀಲು ಬಿಡೋಕು ಒಂದು ಲಿಮಿಟ್ ಇರ್ಬೇಕು..ಎಲ್ಲಿದ್ದೀಯಾ ಹೇಳು.. ಸಿಟಿ ಬ್ರಾಂಚಾ ?’ ಎಂದೆ.

‘ ಅಯ್ಯೊ.. ನೋ ಸಾರು.. ನಿಜ್ಜ ಕನ್ನಡ ಲೈಬ್ರರಿಲಿ ಕೂತಿದೀನಿ..ಮೈಸೂರಲ್ಲಿದೀನಿ.. ಸಿಂಗಪುರದಲ್ಲಿಲ್ಲಾ.. ‘ ಎಂದು ಹೊಸ ಬಾಂಬ್ ಬೇರೆ ಹಾರಿಸಿದ..!

ನನಗೆಲ್ಲ ಅಯೋಮಯ.. ಯಾವ ಮೈಸೂರು ? ಯಾವ ಕನ್ನಡ ಲೈಬ್ರರಿ ? ಎಲ್ಲಿಯ ಗುಬ್ಬಣ್ಣ ? ಎಲ್ಲಿಯ ಸಿಂಗಪುರ? ಯಾವುದಕ್ಕು ಲಾಜಿಕಲ್ ಕನೆಕ್ಷನ್ನೆ ಕಾಣಲಿಲ್ಲ ನನಗೆ…

‘ ಸರಿ ವಾಟ್ಸಪ್ಪಲ್ಲೆ ಕಾಲ್ ಮಾಡ್ತೀನಿ ತೊಗೊ.. ಐ ವಾಂಟ್ ಮೋರ್ ಡೀಟೈಲ್ಸ್ ..’ ಎಂದೆ

‘ ತಾಳಿ.. ಸಾರ್..ರೀಡಿಂಗ್ ಜೋನಲ್ಲಿದೀನಿ ಪೋನು ಸೈಲೆಂಟ್ ಮೋಡಲ್ಲಿದೆ..ಈಚೆಗೆ ಬಂದು ಪಿಂಗ್ ಮಾಡ್ತೀನಿ..’ ಎನ್ನುವ ಸಂದೇಶ ರವಾನಿಸಿದ ಗುಬ್ಬಣನ ಮರು ಸಂದೇಶವನ್ನು ಕಾದು ಕುಳಿತೆ..ಐದೆ ನಿಮಿಷದಲ್ಲಿ ಮತ್ತೆ ಸಂದೇಶ ಬಂತು ‘ಕಾಲ್ ಮಾಡಿ ಸಾರ್’ ಅಂತ

‘ಗುಬ್ಬಣ್ಣ.. ವಾಟ್ ಇಸ್ ದಿಸ್ ನಾನ್ಸೆನ್ಸ್ ? ಮೈಸೂರಿಗೆ ಯಾವಾಗ ಹೋದೆ ? ಏನಿದು ಕನ್ನಡ ಲೈಬ್ರರಿ ಮೇಲೆ ಧಾಳಿ ಮಾಡಿದ್ದು ? ಇದ್ಯಾವ ಪ್ರಾಜೆಕ್ಟು ನಿಂದು ? ಮೊನ್ನೆ ಮೊನ್ನೆ ತಾನೆ ಇಲ್ಲೆ ಇದ್ದೆಯಲ್ಲಾ? ಯಾವಾಗ ಹೋಗಿದ್ದು ಮೈಸೂರಿಗೆ ? ‘ ಎಂದು ಮುಂಗಾರು ಮಳೆಯ ಹಾಗೆ ಪ್ರಶ್ನೆಯ ವರ್ಷಧಾರೆ ಸುರಿಸಿದೆ ಪೋನಲ್ಲೆ..

‘ ಅಯ್ಯೊ ಎಲ್ಲಾ ಅರ್ಜೆಂಟಲ್ಲಿ ಆಗಿದ್ದು ಸಾರ್.. ನಾಟ್ ಪ್ಲಾನ್ಡ್… ನಮ್ಮ ಪ್ರಾಜೆಕ್ಟ್ ಕಸ್ಟಮರ್ ಒಬ್ಬರು ಜರ್ಮನಿಯಿಂದ ಬಂದವರು.. ಹೀ ಈಸ್ ಆನ್ ಎ ರಿಸರ್ಚ್ ಪ್ರಾಜೆಕ್ಟ್ ಇನ್ ಕನ್ನಡ.. ಅವರಿಗೆ ಹೆಲ್ಪ್ ಬೇಕೂ ಅಂದಿದ್ದಕ್ಕೆ ಲಾಂಗ್ ವೀಕೆಂಡಲ್ಲಿ ಜತೆಗೆ ಬಂದೆ..’ ಅಂದ

ಗುಬ್ಬಣ್ಣ ಹೇಳಿದ್ದೆಲ್ಲ ಎಷ್ಟೊ ಸಲ ನಂಬಬೇಕೊ ಬಿಡಬೇಕೊ ಗೊತ್ತಾಗೋದೆ ಇಲ್ಲಾ.. ಅಷ್ಟು ಅನುಮಾನ ಬಂದು ಬಿಡುತ್ತೆ.. ಜರ್ಮನಿ ಕಸ್ಟಮರ್, ಸಿಂಗಪುರಕ್ಕೆ ಬಂದು, ಕನ್ನಡ ರಿಸರ್ಚಿಗೆ ಮೈಸೂರಿಗೆ ಹೋಗ್ತಾ ಗುಬ್ಬಣ್ಣನ್ನ ಕರ್ಕೊಂಡು ಹೋಗದು ಅಂದ್ರೆ – ಸಂಥಿಂ ಟೆರ್ರಿಬಲಿ ರಾಂಗ್..

‘ಗುಬ್ಬಣ್ಣ ಇದೆಲ್ಲ ಗೊಂಡಾವನ ಥಿಯರಿ ಇದ್ದ ಹಾಗಿನ ಬುರುಡೆ ಬೇಡ.. ಕಮ್ ಕ್ಲೀನ್ ವಿತ್ ಟ್ರುಥ್.. ನನ್ನ ಕಿವಿಗೆ ಹೂ ಇಡೋದು ಬೇಡ.. ಜರ್ಮನಿಗೂ ಕನ್ನಡಕ್ಕು ಎಲ್ಲಿಯ ಲಿಂಕು..? ಏನೊ ಯಾವುದೊ ಐಟಿ ಪ್ರಾಜೆಕ್ಟಿಗೆ ಬೆಂಗಳೂರಿಗೊ, ಮೈಸೂರಿಗೊ ಬಂದಿದಾರೆ ಅಂದ್ರೆ ನಂಬಬಹುದು.. ಇದು ಟೋಟಲಿ ಅಬ್ಸರ್ಡ್..’ಎಂದೆ ತುಸು ಎತ್ತರಿಸಿದ ದನಿಯಲ್ಲಿ..

ಅತ್ತ ಕಡೆಯಿಂದ ಅರೆಗಳಿಗೆಯ ಮೌನ.. ಏನೊ ಹುಡುಕುತ್ತಿರುವ ಹಾಗೆ.. ಆಮೇಲೆ ಉತ್ತರದ ಬದಲು ಮತ್ತೊಂದು ಪ್ರಶ್ನೆ ತೂರಿ ಬಂತು..’ ಸಾರ್.. ಅದ್ಯಾರೊ ಕಿಟ್ಟೆಲ್ ಅಂತಿದಾರಂತೆ ಗೊತ್ತಾ ? ಜರ್ಮನ್ ಅಂತೆ..’

ಈಗ ನಾನೆ ಅರೆಗಳಿಗೆ ಮೌನವಾದೆ.. ಜರ್ಮನಿಗು ಕನ್ನಡ / ಕರ್ನಾಟಕಕ್ಕು ಏನೂ ಸಂಬಂದ ಅಂತ ಕೇಳಬಾರದಿತ್ತು.. ಜಾರ್ಜ್ ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಅನ್ನೊ ಹೆಸರು ಎಲ್ಲಾ ಕನ್ನಡಿಗರಿಗು ಗೊತ್ತಿಲ್ಲದೆ ಇರಬಹುದು.. ಆದರೆ ಅವರ ಅಚ್ಚಗನ್ನಡದ ಮೊದಲ ಕನ್ನಡ ಪದಕೋಶದ ಕುರಿತು ಗೊತ್ತಿರುವವರಾರು ಕನ್ನಡಕ್ಕು ಜರ್ಮನಿಗು ಏನು ಸಂಬಂಧ ಅಂತ ಕೇಳೋ ಧೈರ್ಯ ಮಾಡಲ್ಲ… ನಾನು ಅದನ್ನ ಮೊದಲ ಬಾರಿಗೆ ನೋಡಿದಾಗ ‘ ಏನ್ರಯ್ಯಾ ಇದು ? ಈ ಪದಕೋಶದ ಪುಸ್ತಕ ಹೊತ್ತುಕೊಂಡು ಬರೋಕೆ ಒಂದು ಜಟಕಾ ಗಾಡಿ ಮಾಡಬೇಕಲ್ರಪ್ಪಾ ? ಇನ್ನು ಇದನ್ನ ತಂದು ಓದೊ ಮಾತೆಲ್ಲಿ ಬರ್ಬೇಕು ?’ ಅಂತ ಛೇಡಿಸಿದ್ದೆ. ಅದನ್ನ ಕೇಳಿ ರಾಮು ಮಾಮ ‘ಜಟಕಾಗಿಂತ ಆಟೊ ವಾಸಿ, ಬರುತ್ತೇ ಅನ್ನೊ ಗ್ಯಾರಂಟಿ ಇರುತ್ತೆ.. ಜಟಕಾ ಅದ್ರೆ ಯಾವುದೊ ಮುದಿ ಕುದುರೆಗೆ ತಗಲ್ಹಾಕಿರ್ತಾರೆ ಗಾಡಿನ.. ಅದು ‘ಉಸ್ಸಪ್ಪಾ’ ಅಂತ್ ಎಳ್ಕೊಂಡ್ ಬರೋದ್ರಲ್ಲಿ ಅಲ್ಲೆ ಮಧ್ಯದಲ್ಲಿ ಗೊಟಕ್ ಅಂದ್ಬಿಟ್ಟಿರುತ್ತೆ.. ಈ ಪುಸ್ತಕದ ಭಾರಕ್ಕೆ..’ ಅಂತ ಒಗ್ಗರಣೆ ಹಾಕಿದ್ದ..

ಆಗ ಪುಸ್ತಕದ ಸೈಜಿಗೆ ಹಾಸ್ಯ ಮಾಡೋಕಿಂತ ಹೆಚ್ಚಾಗಿ ವಿದೇಶಿಯರಾಗಿದ್ದೂ ಹಳ್ಳಿ ಹಳ್ಳಿ, ಕಾಡುಮೇಡು, ಊರುಕೇರಿ ಸುತ್ತಿ ಕನ್ನಡ ಪದಗಳ ಅರ್ಥ ಪತ್ತೆ ಹಚ್ಚಿ ಕನ್ನಡಕ್ಕಿಂತಹ ಒಂದು ನಿಘಂಟು ಮಾಡಿಕೊಟ್ಟರಲ್ಲ ಅನ್ನೊ ಅಚ್ಚರಿ, ಮೆಚ್ಚುಗೆ ಬೆರೆತ ಯಾವುದೊ ಕಾರಣವಿಲ್ಲದ ಒಣ ಅಸಹನೆಯು ಸೇರಿಕೊಂಡು ಹೀಗೆ ಜೋಕುಗಳ ರೂಪದಲ್ಲಿ ಹೊರಹೊಮ್ಮುತ್ತಿತ್ತೊ ಏನೊ ..? ಬಹುಶಃ ನಮ್ಮವರು ಮಾಡದೆ ವಿದೇಶಿಯವರು ಮಾಡಿದರಲ್ಲ – ಅನ್ನುವ ಈರ್ಷೆಯಿಂದೊಡಗೂಡಿದ ಮೆಚ್ಚುಗೆಯ ಭಾವವು ಕಾರಣವಾಗಿದ್ದಿರಬೇಕು..

‘ ಗೊತ್ತಿರಲ್ಲ ಅಂತ ಕಾಣುತ್ತೆ ಬಿಡಿ ಸಾ.. ನಮ್ಮವರೆ ನಮಗೆ ಗೊತ್ತಿರಲ್ಲಾ ಇನ್ನು ವಿದೇಶದವರು, ಅದರಲ್ಲು ಜರ್ಮನಿಯವರು ಎಲ್ಲಿ ಗೊತ್ತಿರ್ತಾರೆ..? ಅವರಾರೊ ಕನ್ನಡಕ್ಕೆ ದೊಡ್ಡ ನಿಘಂಟು ಮಾಡಿಕೊಟ್ಟೊದ್ರಂತೆ ಅಂದ ಕಾಲತ್ತಿಲೆ.. ಇವರು ಅವರ ಕಟ್ಟಾ ಅಭಿಮಾನಿ ಅಂತೆ ಸಾರ್… ಅದಕ್ಕೋಸ್ಕರ ಕನ್ನಡದಲ್ಲಿ ಏನೊ ರಿಸರ್ಚ್ ಮಾಡಬೇಕೂ ಅಂತ ಏನೊ ಸಬ್ಜೆಕ್ಟ್ ತೊಗೊಂಡಿದಾರಂತೆ .. ಸಾರ್.. ನಾ ಕನ್ನಡದ ಎಕ್ಸ್ಪರ್ಟ್ ಅಲ್ಲಾ ಅಂದ್ರು ಕೇಳ್ದೆ ನನ್ನ ಜತೆಗೆಳ್ಕೊಂಡ್ ಬಂದಿದಾರೆ ಸಾರ್.. ನನಗೆ ಕನ್ನಡ ಮಾತಾಡಕ್ ಬರುತ್ತೆ ಅಂತ ಗೊತ್ತಾಗಿ…’

‘ ಅಯ್ಯೊ ಗುಬ್ಬಣ್ಣ.. ಕಿಟ್ಟೆಲ್ ಅಂದ್ರೆ ಗ್ರೇಟ್ ಪರ್ಸನಾಲಿಟಿ ಕಣೊ.. ಕನ್ನಡದವರೂ ಮಾಡದೆ ಇದ್ದ ಕೆಲಸಾನ ಅವರು ಮಾಡಿ ಬಿಟ್ಟಿದ್ದಾರೆ ಆ ಕಾಲದಲ್ಲೆ.. ಅವರ ನೆನಪಿಗೆ ಅಂತ ಬೆಂಗಳೂರಿನ ಒಂದು ಬೀದಿಗೆ ಅವರ ಹೆಸರನ್ನೆ ಇಟ್ಬಿಟ್ಟು ಗೌರವ ತೋರಿಸಿದಾರೆ.. ಅಂತವ್ರು ಗೊತ್ತಿಲ್ಲ ಅಂತ ಹೇಳಿ ಯಾವ ನರಕಕ್ಕೆ ಹೋಗ್ಲಿ ? ಅದು ಬಿಡು, ಇದೇನಿದು ರಿಸರ್ಚುಕಥೆ ? ನೀನ್ಯಾವ ರಿಸರ್ಚ್ ಮಾಡ್ತಿಯಪ್ಪ ಕನ್ನಡದಲ್ಲಿ? ‘ ಎಂದೆ ನಾನು ಕುತೂಹಲದ ದನಿಯಲ್ಲಿ…

‘ ಅಯ್ಯೊ ನಾನ್ಯಾವ ರಿಸರ್ಚ್ ಮಾಡ್ತೀನಿ ತಕ್ಕೊಳಿ ಸಾರ್… ಕಸ್ಟಮರ್ ಕರೆದ್ರಲ್ಲಾ ಇಲ್ಲಾ ಅನ್ನೊಕ್ಕಾಗಲ್ಲ ಅಂತ ಬಂದೆ ಅಷ್ಟೆ.. ಹಾಗು ಅವರಿಗೆ ಬಡ್ಕೊಂಡೆ ಸಾರ್ ಬೇಕಿದ್ರೆ ನಮ್ ಫ್ರೆಂಡೊಬ್ಬರು ಇದಾರೆ.. ಕನ್ನಡ, ಗಿನ್ನಡ ಅಂತ ಏನೊ ಬರ್ಕೊಂಡ್ ಹಾರಾಡ್ತಾ ಇರ್ತಾರೆ.. ಅವರನ್ನ ಕರ್ಕೊಂಡ್ ಹೋಗಿ ಸರಿಹೋಗುತ್ತೆ ಅಂತ.. ಕೇಳ್ಬೇಕಲ್ಲಾ ಅವರು..?’ ಎಂದ ಗುಬ್ಬಣ್ಣ.. ನನಗು ತಿಳಿಯದ ಆ ‘… ಔರ್ ವೊ ಕೌನ್ ?’ ಅನ್ನೊ ಕುತೂಹಲದಲ್ಲಿ.. ‘ ನೀನು ಹೇಳೊದೇನೊ ಸರಿ.. ಆದರೆ ಆ ಮಿಸ್ಟರಿ ಕ್ಯಾರಕ್ಟರು ಯಾರು ಅಂತ್ಲೆ ಗೊತ್ತಾಗ್ಲಿಲ್ವೆ..?’ ಅಂದೆ.

‘ ನನಗೆ ಗೊತ್ತಿರೊ ಹಾಗೆ ಕನ್ನಡ ಬರೆಯೋರು ಇನ್ನಾರಿದಾರೆ ಸಾರ್, ನಿಮ್ಮನ್ನ ಬಿಟ್ರೆ ? ನಿಮ್ಮನ್ನೆ ತಗಲ್ಹಾಕಿ ಕಳಿಸೋಣ ಅನ್ಕೊಂಡಿದ್ದೆ.. ಆದರೆ ಆ ಪಾರ್ಟಿ ಸದ್ಯಕ್ಕೆ ಕನ್ನಡ ಮಾತಾಡೊಕ್ ಗೊತ್ತಿದ್ರೆ ಸಾಕು.. ಅದ್ರಲ್ಲೂ ನೀವು ಪರಿಚಯ ಇರೊ ಪಾರ್ಟಿ ನೀವೆ ಬನ್ನಿ ಅಂತ ಪಟ್ಟು ಹಿಡಿದ್ರು.. ವಿಧಿಯಿಲ್ದೆ ಬಂದೆ ‘ ಅಂದ ಗುಬ್ಬಣ್ಣ ನಿಟ್ಟುಸಿರು ಬಿಡುತ್ತಾ..

ಅವನೇನು ನನ್ನ ಕನ್ನಡ ಸೇವೆಯನ್ನ ಹೊಗಳುತ್ತಿದ್ದಾನೊ ಇಲ್ಲ ತನ್ನ ದುರದೃಷ್ಟವನ್ನು ಹಳಿದುಕೊಳ್ಳುತ್ತಲೆ ತೆಗಳುತ್ತಿದ್ದಾನೊ ಗೊತ್ತಾಗದೆ ಪಿಳಿಪಿಳಿ ಕಣ್ ಬಿಡುತ್ತಲೆ, ‘ ಸಿಕ್ಕಿದ್ದೆ ಛಾನ್ಸ್ ಅಂತ ಬಾರಿಸೋದೆ ಅಲ್ವಾ ? ಎಂಜಾಯ್ ದ ಟ್ರಿಪ್’ ಅಂದೆ..

‘ಏನು ಎಂಜಾಯೊ ಕಾಣೆ ಸಾರ್… ಸುಮ್ನೆ ಜತೆಗಿದ್ರೆ ಸಾಕು ಅಂತ ಕರ್ಕೊಂಡು ಬಂದೊರು ಈಗ ಕನ್ನಡದ ವ್ಯಾಕರಣದ ಪ್ರಶ್ನೆ ಕೇಳೋಕ್ ಶುರು ಮಾಡ್ಕೊಂಡಿದಾರೆ.. ಮೊದಲೆ ನನ್ನ ಕನ್ನಡವೆ ಅಧ್ವಾನ. ಅದರಲ್ಲಿ ವ್ಯಾಕರಣ ಅಂದ್ರಂತು ಮಾತಾಡಂಗೆ ಇಲ್ಲಾ.. ನಾನೆ ನಿಮಗೆ ಕಾಲ್ ಮಾಡಿ ಆ ಡೌಟೆಲ್ಲಾ ಕೇಳೋಣಾಂತಿದ್ದೆ.. ಅಷ್ಟಕ್ಕೆ ನೀವೆ ಪಿಂಗ್ ಮಾಡಿದ್ರಲ್ಲಾ..’ ಎಂದ ಗುಬ್ಬಣ್ಣ..

ಕಾಗುಣಿತ ವ್ಯಾಕರಣದಲ್ಲೆಲ್ಲ ಗುಬ್ಬಣ್ಣ ಭಾರಿ ವೀಕು.. ಅದರಲ್ಲೂ ಕನ್ನಡ ವ್ಯಾಕರಣ ಅಂದ್ರೆ ಮಾತನಾಡೊ ಹಾಗೆ ಇಲ್ಲಾ.. ನನಗೆ ಒಳಗೊಳಗೆ ಖುಷಿಯಾಯ್ತು ಅವನು ಪರದಾಡುತ್ತಿರುವ ಸೀನನ್ನು ಊಹಿಸಿಕೊಳ್ಳುತ್ತಲೆ. ಕನ್ಸಲ್ಟಿಂಗ್ ಕೆಲಸದಲ್ಲಿ ಎಲ್ಲರನ್ನು ಏಮಾರಿಸಿ ಮಾತಾಡಿ ತಲೆ ಸವರಿದಂತಲ್ಲಾ ಕನ್ನಡ ವ್ಯಾಕರಣ… ಹೈಸ್ಕೂಲಿನಲ್ಲಿ ಗುಂಡಪ್ಪ ಮೇಸ್ಟ್ರು ಕೈಯಿನ ರೂಲು ದೊಣ್ಣೆಯಲ್ಲಿ ‘ಕನ್ನಡನಾಡಲ್ಲಿ ಹುಟ್ಟಿ ಕನ್ನಡ ವ್ಯಾಕರಣಕ್ಕೆ ಅವಮಾನ ಮಾಡ್ತೀಯಾ.. ನಿನ್ನ ಬಲೀ ಹಾಕಿ ಬಿಡ್ತೀನಿ ತಾಳು..’ ಅಂತ ಎಕ್ಕಾಮುಕ್ಕಾ , ಎಗ್ಗು ಸಿಗ್ಗಿಲ್ಲದೆ ಲಾತ ತಿಂದಿರೊ ರೆಕಾರ್ಡು ಇವತ್ತಿಗು ಗುಬ್ಬಣ್ಣನ ಹೆಸರಲ್ಲೆ ಇರೋದು..

ಆ ಫ್ಲಾಶ್ ಬ್ಯಾಕಿಗೆ ಹೋದರೆ ನನಗೆ ನೆನಪಾಗುತ್ತಿದ್ದುದ್ದು ಅವನ ಸಂಧಿ ಸಮಾಸಗಳ ಉವಾಚವೆ.. ಪಾರಿವಾಳ ಸಾಕುವ ಹುಚ್ಚಿನಲ್ಲಿ ಮೈಸೂರಿನ ಗಲ್ಲಿಗಲ್ಲಿ ಸಂದಿಗೊಂದಿಯೆಲ್ಲ ಸುತ್ತಿ ಅಲೆಯುತ್ತಿದ್ದವನ ಬಾಯಲ್ಲಿ ಬರುತ್ತಿದ್ದ ಹೆಸರುಗಳೆಲ್ಲ ಬರಿ ಜಾಕ್, ತಿರುವಾಲ್, ಜಂಗ್ಲೀ ಅನ್ನೊ ಕಪೋತ ನಾಮಧೇಯಗಳೆ. ಅದು ಬಿಟ್ಟರೆ ಮಿಕ್ಕೆಲ್ಲ ಗಲ್ಲಿ, ಸಂದಿಗಳ ಹೆಸರು ಆ ಪಾರಿವಾಳ ಸಾಕುವ ಅಥವಾ ಮಾರುವ ಓಣಿಗಳು ಮಾತ್ರವೆ.. ಗುಂಡಪ್ಪ ಮೇಸ್ಟ್ರು ಕೆಂಗಣ್ಣು ಬಿಟ್ಟುಕೊಂಡೆ ಒಮ್ಮೆ, ‘ಕೆಂಗಣ್ಣು ಪದ ಸಮಾಸವಾಗುತ್ತೊ, ಸಂಧಿಯಾಗುತ್ತೊ ಹೇಳು’ ಅಂತ ಗದರಿಸಿದಾಗ, ಅದು ‘ಕೋಪ ಲೋಪ ಸಂಧಿ ಸಾರ್’ ಅಂತ ಒದೆ ತಿಂದಿದ್ದ.. ಕೆಂಪಾದ + ಕಣ್ಣು = ಕೆಂಗಣ್ಣು ಸಂಧಿಯಲ್ಲ, ಸಮಾಸ ಎಂದಾಗ, ಅದು ವೆಜ್ ಸಮೋಸನೊ, ನಾನ್ ವೆಜ್ಜ್ ಸಮೋಸನೊ ಅಂತ ಕೇಳಿ ಇನ್ನು ನಾಲಕ್ಕು ಇಕ್ಕಿಸಿಕೊಂಡಿದ್ದ.

ಇದೆಲ್ಲ ಹಿನ್ನಲೆ ನೆನಪಾಗಿಯೆ ಖುಷಿಯಾಗಿದ್ದು.. ಆಗೆಲ್ಲ ಸ್ಕೂಲಲ್ಲಿ ಓತ್ಲಾ ಒಡೆದು ಹೆಂಗೊ ಜಸ್ಟ್ ಪಾಸ್ ಮಾಡಿ ಮುಂದಕ್ಕೆ ಹೋಗಿಬಿಟ್ಟರಾಯ್ತಾ? ಈಗ ಉತ್ತರ ಕೊಡಲಿ ನೋಡೋಣ ? .. ಗೊತ್ತಾಗುತ್ತೆ.. ‘ಕನ್ನಡ ಕಲಿತರೆ ಮಲ್ಲಿಗೆ ಇಡ್ಲಿ, ಕಲಿಯದಿದ್ದರೆ ನೀರಿಳಿಯದ ಗಂಟಲಿಗೆ ತುರುಕಿದ ಕಡುಬು..’ – ಅಂತ…..ಹೀಗೆಲ್ಲಾ ಒಳಗೊಳಗೆ ಖುಷಿ ಪಟ್ಟುಕೊಂಡೆ, ಮೇಲೆ ಮಾತ್ರ ಸಹಾನುಭೂತಿಯ ನಗೆ ತೊಟ್ಟು , ‘ ನೀ ಮಾಡೊಕಾಗದ್ದೇನಿರುತ್ತೊ ಗುಬ್ಬಣ್ಣ.. ಮೊದಲೆ ನೀನು ಕನ್ಸಲ್ಟೆಂಟ್ ಅಲ್ವಾ ? ಹೇಗೊ ಏಮಾರಿಸ್ತಿಯಾ ಬಿಡು’ ಅಂದೆ..

‘ ಬೇರೆ ಕಡೆ ಆಗ್ತಿತ್ತೇನೊ …ಆದ್ರೆ ಈ ಕೇಸಲ್ಲಿ ಆಗಲ್ಲ ಸಾರ್.. ಪೂರ ಕನ್ನಡದ ಕಾಗುಣಿತ, ವ್ಯಾಕರಣ, ಒತ್ತಕ್ಷರದ ಬೇಸಿಕ್ ಗೆ ಹೊರಟುಬಿಟ್ಟರೆ ನಾನೆಲ್ಲಿಂದ ಆನ್ಸರ ಮಾಡಲಿ..? ನನ್ನ ಕನ್ನಡ ಭಾಷಾ ಪಾಂಡಿತ್ಯ ನಿಮಗಾಗಲೆ ಗೊತ್ತು..’

‘ ಅಂಥಾದ್ದೇನು ಕೇಳಿಬಿಟ್ಟ್ರೊ ಗುಬ್ಬಣ್ಣ..? ಏನು ನಾಮಪದ, ಸರ್ವನಾಮ, ವಿಭಕ್ತಿ ಪ್ರತ್ಯಯಗಳನ್ನೆಲ್ಲದರ ಜತೆ ಅಲಂಕಾರಾದಿ ಲಘು ಗುರು ಎಣೆಸಾಟವನ್ನೆಲ್ಲ ಒಟ್ಟಾಗಿಸಿ ಕೇಳಿ ತಲೆ ಕೆಡಿಸ್ಬಿಟ್ರಾ?’ ಎಂದೆ..

‘ ಅಯ್ಯೊ..ಅದೆಲ್ಲಾ ಕೇಳಿದ್ರೆ ವಾಸಿಯಿರ್ತಿತ್ತು ಸಾರ್.. ಈ ಮನುಷ್ಯ ಅದೆಲ್ಲಾ ಬಿಟ್ಟು ಒಂದು ಒತ್ತಕ್ಷರದ ಮೂಲ ಕುರಿತು ಪ್ರಶ್ನೆ ಕೇಳಿ ಎಲ್ಲಾ ದಾರಿ ತಪ್ಪಿಸಿಬಿಟ್ಟ.. ನೀವೆ ಹೇಳಿ ಸಾರ್.. ನಾವು ಹೇಗೊ ಹೆಣಗಾಡಿ ಅಷ್ಟೊ ಇಷ್ಟೊ ಕನ್ನಡ ಕಲ್ತು ಎಕ್ಸಾಮ್ ಪಾಸ್ ಮಾಡಿ ಆ ಕಡೆ ಮುಖಾನು ಹಾಕ್ದೆ ಏನೊ ಹೊಟ್ಟೆ ಪಾಡಿನ್ ಕಸುಬು ಮಾಡ್ಕೊಂಡಿರೊ ಜನ.. ನಮಗೆ ಆ ಒತ್ತಕ್ಷರದ ಲಾಜಿಕ್ಕು , ಮೂಲ ಎಲ್ಲಾ ಹೇಗೆ ಗೊತ್ತಿರುತ್ತೆ..?’

ನನಗೆ ಇನ್ನು ಸಿಚುಯೇಶನ್ ಕ್ರಿಸ್ಟಲ್ ಕ್ಲಿಯರ್ ಅಂತ ಅನಿಸಲಿಲ್ಲ.. ‘ ಒತ್ತಕ್ಷರದಲ್ಲಿ ಎಂತದ್ದೊ ಮೂಲ, ಮಣ್ಣು ಮಸಿ ? ಯಾವುದೊ ಒಂದಕ್ಷರಕ್ಕೆ ಅರ್ಧ ಅಕ್ಷರ ಒತ್ತು ಕೊಡೋದು ತಾನೆ ? ಅದರಲ್ಲೇನು ಗ್ರೇಟ್ ಸೈನ್ಸ್, ಆರ್ಟ್ಸ್ ಇರೋದು ?’

‘ ನಾನು ಹಾಗೆ ಅನ್ಕೊಂಡಿದ್ದೆ ಸಾರ್.. ಆದರೆ ಅವನು ನನ್ನೆ ಉಲ್ಟಾಪಳ್ಟ ಪ್ರಶ್ನೆ ಕೇಳಿ ಎಲ್ಲಾ ಉಡೀಸ್ ಮಾಡ್ಬಿಟ್ಟಾ ಸಾರ್.. ಸಾಲದ್ದಕ್ಕೆ ಅವನ ಪ್ರಶ್ನೆಗೆ ಉತ್ತರ ಕೊಡಕಾಗದೆ ನಮ್ಮ ಭಾಷೆಲಿ ನಮ್ ತಿಳುವಳಿಕೆ ಇಷ್ಟೇನಾ ಅಂತ ಪೂರ ನಾಚಿಕೆನೂ ಆಗೋಯ್ತು ಸಾರ್..’

ಆಗಬೇಕಾದ್ದೆ.. ಯಾರೊ ಪರದೇಶಿಗೆ ಕನ್ನಡದ ಮೇಲಿರೊ ಮೋಹ, ಜ್ಞಾನ ನಮಗಿಲ್ಲ ಅಂದ್ರೆ ಅದು ತೀರಾ ಅಬ್ಸರ್ಡ್..ಆದರು ಆ ಟಾಫಿಕ್ ಏನೂಂತ ಮೊದಲು ಕ್ಲಾರಿಫೈ ಮಾಡ್ಕೊಬೇಕು ಅಂದ್ಕೊಂಡು ..’ ಏನಪ್ಪ ಅಂಥಾ ಉಲ್ಟಾಪಲ್ಟಾ ಕ್ವೆಶ್ಚನ್ ಅವನು ಕೇಳಿಬಿಟ್ಟಿದ್ದು.. ?’ ಅಂದೆ.

‘ ಸಾರ್.. ಮೊದಲು ನಮ್ಮ ಒತ್ತಕ್ಷರದ ಕಾನ್ಸೆಪ್ಟ್ ನೋಡಿದ್ದೆ , ಸುಪರ್ ಅಂತ ಕುಣಿದಾಡಿ ಹೊಗಳಿಟ್ಟುಬಿಟ್ಟ ಆ ಮಾರಾಯ .. ‘ಲಗ್+ನ’ = ಲಗ್ನ, ‘ರತ್+ನ’ = ರತ್ನ, ‘ಮುಕ್+ತಾ’ = ಮುಕ್ತಾ… ಅಂತಾ ಯಾವುದೆ ಒತ್ತಕ್ಷರದ ಪದ ತಗೊಂಡ್ರು, ಮೊದಲ ಭಾಗದ ಕೊನೆಯಕ್ಷರಕ್ಕೆ ಸೇರಿಕೊಳ್ಳುವ ಅರ್ಧ ಒತ್ತಕ್ಷರ ಆ ಪದಕ್ಕೆ ಕೊನೆ ಸೌಂಡ್ ಕೊಡುತ್ತೆ.. ಅಲ್ವಾ ಸಾರ್..?’

‘ಹೂಂ.. ರತ್ನ ಲಿ , ‘ತ+ನ’= ತ್ನ ಆಗೊ ಹಾಗೆ..’

‘ ಅದೇ ಅಕ್ಷರದ ಒತ್ತಾದ್ರೆ ಇನ್ನು ಸುಲಭ ಸಾರ್.. ಉದಾಹರಣೆಗೆ ‘ಕನ್ನಡ’ ಪದದಲ್ಲಿ ‘ನ’ ಗೆ ‘ನ’ ಒತ್ತಕ್ಷರ ಬಂದು ‘ನ್ನ’ ಆಗುತ್ತಲ್ಲಾ, ಹಾಗೆ..’

‘ಸರೀ..?’

‘ಆದರೆ ಈ ‘ರ’ ಒತ್ತಕ್ಷರ ಬಂದ್ರೆ ಮಾತ್ರ ಯಾಕೆ ಈ ಲಾಜಿಕ್ಕು ವರ್ಕ್ ಆಗಲ್ಲ ಅಂತ ಅವರ ಪ್ರಶ್ನೆ..!’

ನನಗಲ್ಲೇನು ತರ್ಕ ಮಿಸ್ಸಾಗಿದೆಯೊ ಕಾಣಿಸಲಿಲ್ಲ..’ ಅಲ್ವೊ ಗುಬ್ಬಣ್ಣ ..ಅಲ್ಲೇನು ಮಿಸ್ಸಿಂಗ್ ಎಲಿಮೆಂಟ್ ಕಾಣ್ತಿಲ್ಲ್ವಲ್ಲೊ.. ಉದಾಹರಣೆಗೆ ತ್ರಿಪುರ ತಗೊ.. ‘ತಿ+ರಿ= ತ್ರಿ ‘ ಆಗುತ್ತೆ.. ಹಾಗೆ ‘ಕಿ+ ರಿ= ಕ್ರಿ’ ಅನ್ನೊ ಲಾಜಿಕ್ಕಲ್ಲಿ ಕ್ರೀಡೆ, ಕ್ರಿಯೆ ಅನ್ನೊ ಪದಗಳು ಹುಟ್ಟುತ್ತೆ.. ಇದರಲ್ಲೇನು ವಿಶೇಷ ಇದೆಯೊ ?’

‘ ವಿಶೇಷ ಏನಿದೆಯೊ ಗೊತ್ತಾಗುತ್ತೆ ಹಾಗೆಯೆ ನಿಮ್ಮ ಲಾಜಿಕ್ ನ ‘ಕೀರ್ತಿ’, ‘ ಕರ್ನಾಟಕ’ ‘ಅರ್ಧ’ ತರದ ಪದಗಳಲ್ಲಿ ಅಪ್ಲೈ ಮಾಡಿ ವಿವರಿಸಿ ನೋಡೋಣಾ..?’

‘ ಹೂ ತೊಗೊ ಅದಕ್ಕೇನಂತೆ.. ಮೊದಲಿಗೆ ಕರ್ನಾಟಕವನ್ನೆ ತೊಗೊ, ‘ಕರ್+ನಾಟಕ = ಕರ್ನಾಟಕ’, ‘ಕೀರ್+ತಿ = ಕೀರ್ತಿ’, ‘ಅರ್+ಧ = ಅರ್ಧ’ .. ಅದರಲ್ಲೇನು ವಿಶೇಷ ? ‘

‘ನೋಡಿದ್ರಾ ನೀವೂ ಮಿಸ್ ಮಾಡ್ಕೊಂಡ್ರಿ ನನ್ ತರಾನೆ… ಬೇರೆ ಕಡೆಯೆಲ್ಲ ಒತ್ತಕ್ಷರ ಮೂಲ ಅಕ್ಷರದ ಪಕ್ಕದಲ್ಲೆ ಬರುತ್ತೆ – ‘ಗ’ ಜತೆ ‘ನ’ ಸೇರಿ- ‘ಗ್ನ’ ಆದ ಹಾಗೆ.. ಆದರೆ ‘ರ’ ಒತ್ತಕ್ಷರದಲ್ಲಿ ಮಾತ್ರ ಈ ಫಾರ್ಮುಲ ಎಡವಟ್ಟಾಗಿಬಿಡುತ್ತೆ.. ತ್ರಿಪುರದಲ್ಲಿ ಸರಿಯಾಗಿ ‘ತಿ+ರಿ’ ಆಗಿ ‘ತ್ರಿ’ ಬಂದಿದೆ.. ಆದರೆ ಅದೆ ‘ಕರ್ನಾಟಕ’ ಪದದಲ್ಲಿ ಯಾಕೆ ‘ರ’ ಒತ್ತಕ್ಷರ ‘ಕ’ ಆದಮೇಲೆ ಬರದೆ, ‘ನಾ’ ಆದ ಮೇಲೆ ಬರುತ್ತೆ ? ಸರಿಯಾಗಿ ಬರೆದರೆ ‘ಕರ್-ನಾಟಕ’ ಅಥವಾ ‘ಕರ್-ಣಾಟಕ’ ಆಗ್ಬೇಕಲ್ವಾ ? ಹಾಗೆ ಬರೆದರೆ ‘ಕರ್ನಾಟಕ’ ವನ್ನ ‘ಕನಾರ+ಟಕ’ ಅಂತ ಬರೆದ ಹಾಗಾಗಲಿಲ್ಲವ ? ಹಾಗೆಯೆ ಅರ್ಧ ಹೋಗಿ ‘ಅಧ+ರ= ಅಧ್ರ’ ಅಂದ ಹಾಗೆ ಆಗ್ಲಿಲ್ಲಾ ? ಕರೆಕ್ಟಾಗಿ ಬರೆದರೆ ‘ಅರ್+ಧ=ಅರ್-ಧ’ ಅಂತ ತಾನೆ ಆಗ್ಬೇಕು…?’ ಅದೇ ಲಾಜಿಕ್ಕಲ್ಲಿ ಕೀರ್ತಿ ಕೂಡ ‘ಕೀರ್-ತಿ’ ತಾನೆ ಆಗ್ಬೇಕು.. ಎಲ್ಲೆಲ್ಲಿ ‘ರ’ ಒತ್ತಕ್ಷರ, ಪದದ ಮಧ್ಯ ಬರುತ್ತೊ ಅಲ್ಲೆಲ್ಲಾ ಇದೆ ತರ ಇದೆಯಲ್ಲಾ ಯಾಕೆ ಅಂತ ಅವನ ಪ್ರಶ್ನೆ ಸಾರ್..’

ಯೋಚಿಸಿ ನೋಡಿದೆ.. ನನಗೂ ಉತ್ತರ ಗೊತ್ತಿರಲಿಲ್ಲ…. ಅವನ ಪ್ರಶ್ನೆಯ ಲಾಜಿಕ್ ಮಾತ್ರ ಸರಿಯೆ ಇದೆಯಲ್ಲಾ? ಅನಿಸಿತು.. ನಮಗ್ಯಾಕೆ ಇದು ಇಷ್ಟು ದಿನ ತೋಚಲೆ ಇಲ್ಲಾ ? ಸುಮ್ಮನೆ ವಿವೇಚಿಸದೆ ಒಪ್ಪಿಕೊಂಡುಬಿಟ್ಟಿದ್ದೀವ ಹೇಗೆ?

‘ಹೌದಲ್ಲೊ ಗುಬ್ಬಣ್ಣ… ಈ ಲಾಜಿಕ್ಕಲ್ಲೇನೊ ಎಡವಟ್ಟಿರೊ ಹಾಗೆ ಕಾಣುತ್ತಲ್ಲೊ…?’

‘ ನೋಡಿದ್ರಾ ಸಾರ್..? ಕನ್ನಡ ಪಂಟರು ನಿಮಗೆ ಹೀಗನಿಸಿದ್ರೆ , ಇನ್ನು ನಮ್ಮ ಪಾಡೇನು ಹೇಳಿ?’

‘ ಇದೊಂದೆ ತಾನೆ ? ಯಾರಿಗಾದರು ಗೊತ್ತಿರುತ್ತೆ ಕೇಳಿ ಹೇಳ್ತೀನಿ.. ಅಂದ್ರಾಗ್ತಿತ್ತು..’ ನಾನಿನ್ನು ಡಿಫೆನ್ಸಿವ್ ಷಾಟ್ ಮೂಡಲ್ಲೆ ಇದ್ದೆ..

‘ಅಯ್ಯೊ ಹಾಗನ್ಕೋಬೇಡಿ ಸಾರ್.. ನಾನೂ ಹಾಗೆ ತೇಲಿಸೋಣಾ ಅಂತ ಹೊರಟ್ರೆ ಇನ್ನೊಂದು ಮೂಲ ಹಿಡಿದು ಅಳ್ಳಾಡಿಸಿಬಿಡೋದೆ – ಅದರಲ್ಲೂ ‘ಓಂ’ ಪದದ ಉದಾಹರಣೆ ಹಿಡ್ಕೊಂಡು?’

‘ ಅದ್ಯಾವುದೊ ಇನ್ನೊಂದು ಮೂಲ..?’ ಫೌಂಡೇಷನ್ನೆ ಅಲುಗಾಡಿಸುತ್ತಿರೊ ಭೀತಿಯಲ್ಲಿ ನಾನು ಸ್ವಲ್ಪ ಜೋರಾದ ಗಾಬರಿ ದನಿಯಲ್ಲೆ ಕೇಳಿದೆ..

‘ ಸಾರ್.. ನಾವು ಸ್ವರಗಳನ್ನೆಲ್ಲ ವ್ಯಂಜನಕ್ಕೆ ಜೋಡಿಸಿ ತಾನೆ ಕಾಗುಣಿತ ಮಾಡೋದು ? ‘ಕ್+ ಅ= ಕ’…, ‘ಕ್+ ಆ= ಕಾ’………ಹಾಗೆಯೆ ಸ್ವರ + ಅನುಸ್ವಾರದ ಜತೆಯ ಕಾಂಬಿನೇಷನ್ನಿಗೆ – ‘ಕ್+ಅಂ=ಕಂ’, ‘ಕ್+ಆಃ=ಕಃ’ ತನಕ?’

‘ಹೌದೌದು… ಹಾಗೆ ತಾನೆ ‘ಕ’ ನಿಂದ ‘ ಕ್ಷ’ ವರೆಗು ಕಾಗುಣಿತ ಬರೋದು ?’

‘ಹೂಂ.. ಅದರಲ್ಲಿ ‘ಓಂ’ ಎಲ್ಲಿಂದ ಬಂತು ತೋರ್ಸು ಅಂದ್ರು..!’

ನಾ ಗಾಬರಿಗೆ ಬೆಚ್ಚಿ ಬಿದ್ದೆ…. ‘ಓಂ’ ಅನ್ನ ಒಡೆದರೆ ‘ಓ + ಅಂ’. ಅಲ್ಲಿ ಅನುಸ್ವಾರ, ವ್ಯಂಜನ ಮಿಕ್ಸ್ ಇಲ್ಲಾ! ಇದೇನು ಸಂಸ್ಕೃತದಿಂದ ಬಂದಿರೊ ಅಕ್ಷರ ಅಂತ ವಿಶೇಷಾನ ? ಅಥವಾ ಇದೂ ಮಿಸ್ಸಿಂಗ್ ಲಿಂಕೊ ? ನಾವು ಕಲೀತಿರೊ ಕನ್ನಡದಲ್ಲಿ ಇದಾವುದು ಹೇಳಿಕೊಟ್ಟ ನೆನಪೆ ಇಲ್ಲವಲ್ಲ ?

‘ ಗುಬ್ಬಣ್ಣಾ.. ಅವರ್ಯಾರೊ.. ಮರಿ ಕಿಟ್ಟೆಲ್ಲೆ ಇರೊ ಹಾಗೆ ಕಾಣ್ತಾ ಇದೆ.. ಯಾರೊ ಅವರ ವಂಶದವರೆ ಇರಬೇಕು ವಿಚಾರಿಸಿದೆಯಾ ? ‘

‘ ಯಾರಾದ್ರೂ ಆಗ್ಲಿ ಬಿಡಿ ಸಾರ್… ಅದು ಅಷ್ಟಕ್ಕೆ ನಿಲ್ಲಲಿಲ್ಲ… ಇಂಗ್ಲಿಷಲ್ಲಿ ‘ಇ+ಅಂ=ಇಂ’, ‘ಉಂಡ’ದಲ್ಲಿ ‘ಉ+ಅಂ=ಉಂ’ , ‘ಐಂದ್ರಾಜಾಲ’ದಲ್ಲಿ ‘ಐ+ಅಂ=ಐಂ’ – ಇವ್ಯಾವ್ದು ಯಾಕೆ ಲಿಸ್ಟಲಿಲ್ಲಾ ಅಂತ ಪ್ರಶ್ನೆ ಅವರದು..’

‘ ಅರ್ಥಾತ್, ಸ್ವರ ಮತ್ತು ಅನುಸ್ವಾರ ಕಾಂಬಿನೇಷನ್ ಅಕ್ಷರ ಮಾತ್ರ ಯಥೇಚ್ಛವಾಗಿ ಬಳಸ್ತಾ ಇದೀವಿ.. ಆದರೆ ಯಾಕೆ ಅದೆಲ್ಲು ಕಾಣಿಸಲ್ಲ – ಅಕ್ಷರಮಾಲೆಲಾಗ್ಲಿ, ಕಾಗುಣಿತದಲ್ಲಾಗ್ಲಿ ಅಂತ ಅವರ ಕ್ವೈರಿ ಅನ್ನು..’

‘ ಹೂ ಸಾರ್.. ಈ ಕನ್ನಡ ಸ್ವರಗಳು ‘ಅಃ’ ಅಂದ್ರೆ ವಿಸರ್ಗದ ಜತೆಗು ಸೇರಿಕೊಂಡು ಇನ್ನು ಓಃ, ಇಃ, ಈಃ, ಉಃ, ಔಃ ತರದ ಹದಿನಾಲ್ಕು ಅಕ್ಷರಗಳಾಗಿರೊ ಛಾನ್ಸ್ ಇದೆ ಅಂತ ವಾದ ಬೇರೆ ಶುರು ಮಾಡಿದಾರೆ ಸಾರ್..’

‘ಹಾಂ…!’

‘ಸ್ವರ ಮತ್ತು ಅನುಸ್ವಾರ, ವಿಸರ್ಗದ ಕಾಂಬಿನೇಷನ್ನಿನಲ್ಲಿ ಹದಿನಾಲ್ಕು + ಹದಿನಾಲ್ಕು ಹೊಸ ಅಕ್ಷರ ಕನ್ನಡ ಕಾಗುಣಿತಕ್ಕೆ ಫಾರ್ಮಲ್ ಆಗಿ ಸೇರಿಸಬೇಕು ಅಂತ ಹೊಸ ಆರ್ಗುಮೆಂಟ್ ತೊಗೊಂಡಿದಾರೆ ಸಾರ್.. ಅದೇ ರಿಸರ್ಚ್ ಟಾಫಿಕ್ ಅಂತೆ…!’

ನನಗ್ಯಾಕೊ ಇದು ನಮ್ಮಂತಹ ಪುಡಿ ಪಂಡಿತರ ಅಳತೆಗೆ ಮೀರಿದ ಟಾಪಿಕ್ಕು ಅನಿಸಿತು..ಅದೇ ತರ್ಕದಲ್ಲಿ ನುಡಿದೆ, ‘ ಗುಬ್ಬಣ್ಣ.. ಇದು ನಾನು ನೀನು ಆರ್ಗ್ಯು ಮಾಡೋಕಾಗೊ ವಿಷಯ ಅಲ್ಲ… ನಾ ಒಂದು ಐಡಿಯಾ ಕೊಡ್ತೀನಿ ಕೇಳು.. ಎಲ್ಲ ಡೀಟೈಲ್ಸ್ ತಗೊಂಡ್ ನೀನು ಹೊರಡು.. ನಾನು ಮೈಸೂರಲ್ಲಿರೊ ಒಬ್ಬ ಕನ್ನಡ ವಿದ್ವಾಂಸರ ಅಡ್ರೆಸ್ ಕೊಡ್ತೀನಿ.. ಅವರಿಬ್ಬರಿಗು ಕನೆಕ್ಷನ್ ಮಾಡಿಸಿಬಿಡು.. ಅವರವರಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಲಿ..’

‘ ನಂಗೂ ಅದೇ ಸರಿ ಅನ್ಸುತ್ತೆ ಸಾರ್.. ಆದ್ರೆ ನಂಗೂ ಡೌಟು ಯಾಕೆ ‘ರ’ ಒತ್ತು ಹಾಗೆ ಅಂತ… ಹಾಗೆ ‘ಓಂ’ ಅಕ್ಷರದ ವಿಚಾರನೂ….’

‘ಗುಬ್ಬಣ್ಣಾ…..?’

‘ ಗೊತ್ತಾಯ್ತು ಸಾರ್… ಆಳ ಗೊತ್ತಿಲ್ಲದ ಬಾವಿಗೆ ಇಳಿಯೊ ಅಡ್ವೆಂಚರ್ ಬೇಡ ಅಂತೀರಾ..’

‘ ಗುಡ್… ಅವ್ರೆಲ್ಲ ರಿಸರ್ಚ್ ಮಾಡಿ ಪೇಪರ ಪಬ್ಲಿಷ್ ಮಾಡ್ಲಿ.. ಹೇಗು ಥ್ಯಾಂಕ್ಯೂ ಲಿಸ್ಟಲ್ಲಿ ನಿನ್ನ ಹೆಸರೂ ಇರುತ್ತೆ… ಅವರ ಜತೆ ಈಗ ಹೆಣಗೋದು ಕಷ್ಟ ಅದರ ಬದಲು ಅವರಿಗೆ ನಾ ಹೇಳಿದ ಕನೆಕ್ಷನ್ ಕೊಡಿಸಿಬಿಡು..’

‘ ಆಯ್ತು ಸಾರ್…ಆದ್ರೆ ಇದು ಅಷ್ಟಕ್ಕೂ ನಿಲ್ಲೊ ಹಾಗೆ ಕಾಣ್ಲಿಲ್ಲಾ ಸಾರ್…’

‘ ಯಾಕೆ ? ಇನ್ನು ಏನಾದರು ಹೊಸ ಬಾಂಬ್ ಹಾಕಿದ್ರಾ ನಿಮ್ ಕಸ್ಟಮರು..?’

‘ ಹೊಸದೂಂತ ಅಲ್ಲ… ಈ ಅನುಸ್ವಾರ, ವಿಸರ್ಗದ ಕಾಂಬಿನೇಷನ್ ಬರಿ ಅ ಆ ಇ ಈ ಸ್ವರಗಳ ಜತೆಮಾತ್ರ ಅಲ್ಲಾ, ವ್ಯಂಜನಗಳ ಜತೆಗು ಇದೆ.. ಅರ್ಥಾತ್ ಪ್ರತಿ ಕಾಗುಣಿತಾಕ್ಷರದ ಜತೆಗು ಇದೆ, ಆದರೆ ಅದನ್ನು ಕೂಡಾ ನಾವು ಸ್ಪಷ್ಟವಾಗಿ ತೋರ್ಸಿಲ್ಲಾ ಎಲ್ಲೂವೆ ಅಂತ ಆರ್ಗ್ಯುಮೆಂಟ್ ಸಾರ್..’

‘ ಕಂ, ಕಃ, ಗಂ, ಗಃ, ಚಂ, ಚಃ ಅಂತ ಅದನ್ನ ಆಗಲೆ ತೋರಿಸಿದಿವಲ್ಲಯ್ಯ ? ಪ್ರತಿ ಕಾಗುಣಿತದ ಕೊನೆ ಎರಡು ಅಕ್ಷರ ಅವೆ ಅಲ್ವಾ ?’ ನಾನು ತುಸು ರೇಗಿದ ದನಿಯಲ್ಲೆ ಕೂಗಿದೆ..

‘ ನಾನು ಡಿಟೊ ಇದೆ ಟೋನಲ್ಲಿ ಹೀಗೆ ಹೇಳಿದೆ ಸಾರ್.. ಅವರು ಕುಂಡ, ಗುಂಡ, ಕಾಂಡ, ಚಾಂಡಾಲ, ಸುಂಕ, ಚುಂಬನ….. ಹೀಗೆ ಪದಗಳ ಮೇಲೆ ಪದ ತೋರಿಸಿ ಅಲ್ಲೆಲ್ಲ ಕುಂ, ಗುಂ, ಕಾಂ, ಚಾಂ, ಸುಂ, ಚುಂ ತರದ ಕಾಗುಣಿತಾಕ್ಷರಗಳೆಲ್ಲ ಅನುಸ್ವಾರದ ಜತೆ ಸೇರಿ ಹೊಸ ಅಕ್ಷರವಾಗಿರೋದನ್ನ ವಿವರಿಸಿ – ಎಲ್ಲಾಯ್ಯಾ ಅವೆಲ್ಲ ಅಕ್ಷರಗಳು ? ಲಿಸ್ಟಲ್ಲೆ ಇಲ್ಲಾ ‘ ಅಂತ ಜಾಡಿಸಿಬಿಟ್ರು..’

ಭಗವಂತ..! ಈ ಲೆಕ್ಕದಲ್ಲಿ ಹೋದರೆ ಇರೊ 34 ವ್ಯಂಜನಗಳ ಮಿಕ್ಕುಳಿದ ಎಲ್ಲಾ 14 ಕಾಗುಣಿತಾಕ್ಷರಕ್ಕು ಪಕ್ಕದಲ್ಲೊಂದು ಸೊನ್ನೆ ಸುತ್ತುವುದು ಸಾಧ್ಯ ಅಂತಾಯ್ತು.. ಅದೇ ಲಾಜಿಕ್ಕನ್ನ ವಿಸರ್ಗಕ್ಕೂ ವಿಸ್ತರಿಸಿಬಿಟ್ರೆ 34 X 14 ಕಾಗುಣಿತಾಕ್ಷರದ ಜತೆಗೆ ಪಕ್ಕ ಎರಡು ಸೊನ್ನೆ ಹಾಕೋದು ಸಾಧ್ಯ ಅನ್ನೊ ವಾದಾನು ಶುರುವಾಗುತ್ತೆ… ಓಹ್ ಮೈ ಗಾಡ್…

ಅಲ್ಲಿಗೆ ಹದಿನಾಲ್ಕು + ಹದಿನಾಲ್ಕು = ಇಪ್ಪತ್ತೆಂಟು ಹೊಸ ಅಕ್ಷರ ಮಾತ್ರ ಅಲ್ಲ.. ಇನ್ನು ಮುವತ್ತನಾಲ್ಕು ವ್ಯಂಜನಾಕ್ಷರ ಇಂಟು ಹದಿನಾಲ್ಕು = ನಾನೂರ ಎಪ್ಪತ್ತಾರು ಅಕ್ಷರಗಳ ಲೆಕ್ಕಾ..! ಅದಕ್ಕೆ ಮೊದಲಿನ ಇಪ್ಪತ್ತೆಂಟು ಸೇರಿಬಿಟ್ಟರೆ ಒಟ್ಟು ಐನೂರ ನಾಲ್ಕು ಅಕ್ಷರಗಳು… ಅದರಲ್ಲಿ ಅನುಸ್ವಾರ ಮಾತ್ರ ಲೆಕ್ಕ ಇಟ್ಟು ವಿಸರ್ಗಕ್ಕೆ ಸೋಡಾ ಚೀಟಿ ಕೊಟ್ಟರು… ಇನ್ನು ಅನುಸ್ವಾರದ ಆ ನಾನೂರ ಎಪ್ಪತ್ತಾರು ಅಕ್ಷರಗಳನ್ನು ಸೇರಿಸಿದರೆ – ಐನೂರನಾಲ್ಕು ಪ್ಲಸ್ ನಾನೂರ ಎಪ್ಪತ್ತಾರು = ಒಂಭೈನೂರ ಎಂಭತ್ತು ಅಕ್ಷರಗಳಾಗಿ ಹೋಗುತ್ತೆ.. ಶಿವ , ಶಿವಾ!!

‘ಗುಬ್ಬಣ್ಣ ನಾ ಆಗ್ಲೆ ಹೇಳಿದ ಹಾಗೆ ಮೊದಲು ಆ ವಿದ್ವಾಂಸರ ಕೈಗೆ ಒಪ್ಪಿಸಿ ಕೈ ತೊಳ್ಕೊ.. ನಾವಿನ್ನು ಡೀಪ್ ಹೋದರೆ ನಮಗೆ ಎಲಿಮೆಂಟರಿ ನಾಲೆಡ್ಜು ಇಲ್ವೇನೊ ಅಂತ ಅನುಮಾನ ಬರೋಕೆ ಶುರುವಾಗಿಬಿಡುತ್ತೆ… ವಿ ಡೊಂಟ್ ನೋ ವಾಟ್ ವಿ ಡೊಂಟ್ ನೋ..!’
ಎಂದು ಗಾಬರಿಯಲ್ಲೆ ಉಸುರುತ್ತ, ಹಾಗೆಯೆ ಮಾತಿನ ಟ್ರಾಕ್ ಬದಲಿಸಲು ‘ಹೇಗೂ ಹೋಗೋದು ಹೋಗಿದೀಯಾ… ಹಾಗೆ ಬರ್ತಾ ಅಣ್ಣಾವ್ರು ಹಾಡಿರೊ ಮಂಕುತಿಮ್ಮನ ಕಗ್ಗ ಸಿಡಿ ತೊಗೊಂಡ್ ಬಾ.. ಕೂತ್ಕೊಂಡು ಒಟ್ಟಿಗೆ ಕೇಳೋಣ…’ ಅಂದೆ.

‘ಅಣ್ಣಾವ್ರೂ ಕಗ್ಗ ಹಾಡಿದಾರಾ ?!’ ಅಚ್ಚರಿ , ಗಾಬರಿ ಎರಡು ಬೆರೆಸಿ ಕೇಳಿದ ಗುಬ್ಬಣ್ಣಾ..

‘ ಮತ್ತೆ ? ತುಂಬಾ ಜನಕ್ಕೆ ಗೊತ್ತಿಲ್ಲ ಅಷ್ಟೆ.. ಹುಡುಕಿ ತೊಗೊಂಡು ಬಾ ..’ ಎನ್ನುತ್ತಿದ್ದ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ದನಿ ನಡುವೆಯೆ ತೂರಿ ಬಂತು..’ ಸಾರ್.. ಸ್ಮಾರ್ಟ್ ಪೋನ್ ಬ್ಯಾಟರಿ ಔಟ್.. ಪವರ್ ಬ್ಯಾಂಕೂ ಡೆಡ್.. ಈಗ ಲೈನ್ ಕಟ್ ಆಗುತ್ತೆ …’

ಹಾಗೆನ್ನುತ್ತಿದ್ದ ಹಾಗೆಯೆ ಲೈನ್ ಕಟ್ಟಾಯ್ತು.. ಹೇಗೊ ಬೋರಾದಾಗ ಗುಬ್ಬಣ್ಣ ಮಾತಿಗೆ ಸಿಕ್ಕನಲ್ಲ ಎಂದು ನಿರಾಳವಾಗಿ, ನಾನು ಅಕ್ಷರಮಾಲೆಯ ಇ-ಪುಸ್ತಕವೇನಾದರು ಸಿಗುತ್ತಾ ನೋಡೋಣ ಎಂದು ಗೂಗಲಿಸತೊಡಗಿದೆ..

– ನಾಗೇಶ ಮೈಸೂರು
(https://nageshamysore.wordpress.com)

00441. ಲಘು ಹಾಸ್ಯ, ಹರಟೆ : ಅಸಹಿಷ್ಣುತೆ – ಮನೆ ಮನೆ ಕಥೆ!


00441. ಲಘು ಹಾಸ್ಯ, ಹರಟೆ : ಅಸಹಿಷ್ಣುತೆ – ಮನೆ ಮನೆ ಕಥೆ!
(ಗುಬ್ಬಣ್ಣನ ಅಸಹಿಷ್ಣುತೆಯ ನಿಲುಮೆಯ ಕೊಂಡಿ : http://nilume.net/2015/12/02/%e0%b2%85%e0%b2%b8%e0%b2%b9%e0%b2%bf%e0%b2%b7%e0%b3%8d%e0%b2%a3%e0%b3%81%e0%b2%a4%e0%b3%86-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%95%e0%b2%a5%e0%b3%86/)

ಯಾಕೊ ಗುಬ್ಬಣ್ಣ ಪತ್ತೆಯಿಲ್ಲದೆ ಮಾಯಾವಾಗಿಹೋಗಿದ್ದ ಒಂದು ತಿಂಗಳಿಂದ. ಆಗೀಗ ಮಧ್ಯೆ ಬರಿ ಒಂದೆರಡು ಮೆಸೇಜ್ ಮಾತ್ರ ಕಳಿಸಿ ‘ವೆರಿ ಬಿಜಿ’ ಅಂತೊಂದು ಚೋಟು ಸುದ್ಧಿ ಹಾಕಿ ಇನ್ನು ಕುತೂಹಲ ಜಾಸ್ತಿ ಮಾಡಿಬಿಟ್ಟಿದ್ದ. ‘ಪ್ರಾಜೆಕ್ಟುಗಳೆಲ್ಲ ಕ್ಯಾನ್ಸಲ್ಲಾಗಿ ಇದ್ದಕ್ಕಿದ್ದಂತೆ ಫುಲ್ ಫ್ರೀ ಟೈಮ್ ಸಿಕ್ಕಿಬಿಟ್ಟಿದೆ; ಸ್ವಲ್ಪ ಬ್ರೇಕು ಸಿಕ್ಕಿದಾಗಲೆ ಅಲ್ಲಿ ಇಲ್ಲಿ ಓಡಾಡಿಕೊಂಡು ಬಿಡಬೇಕು ಸಾರ್.. ಈಗಲಾದರು ನೋಡೊ ಜಾಗವೆಲ್ಲ ನೋಡಿಬಿಡಬೇಕು ಅನ್ಕೊಂಡಿದೀನಿ’ ಅಂತಿದ್ದ. ‘ಹೇಳಿದ ಹಾಗೆ ಎಲ್ಲಾದರು ಟೂರು ಹೊಡಿತಿದಾನ ?’ ಅನ್ಕೊಂಡೆ, ಕ್ರಿಸ್ಮಸ್ಸಿನ ರಜೆ ಹತ್ತಿರವಾಗುವಾಗಲಾದರೂ ಸಿಕ್ತಾನ ನೋಡೋಣ ಅನ್ಕೊಂಡು ‘ವಾಟ್ಸಪ್ ಗುಬ್ಬಣ್ಣ ? ಮೆರಿ ಕ್ರಿಸ್ಮಸ್’ ಎಂದು ಮತ್ತೊಂದು ತುಂಡು ಸುದ್ದಿ ಕಳಿಸಿದೆ.

ಈ ಮೆಸೇಜಿಗೆ ಗುಬ್ಬಣ್ಣ ಖಂಡಿತವಾಗಿ ರೆಸ್ಪಾಂಡ್ ಮಾಡ್ತನೆ ಅಂತ ಭರವಸೆಯಿತ್ತು. ಯಾವ ಹಬ್ಬಹರಿದಿನಕ್ಕು ನಾನು ‘ವಿಷ್’ ಮೆಸೇಜ್ ಕಳಿಸಿದವನಲ್ಲ.. ಗುಬ್ಬಣ್ಣ ಹಬ್ಬ ಹರಿದಿನಕ್ಕೆ ವಿಷಸ್ ಕಳಿಸಿದಾಗಲೂ ಬರಿ ‘ಥ್ಯಾಂಕ್ಸ್’ ಅನ್ನೊ ರಿಪ್ಲೈ ಬರೆದರೆ ಅದೇ ಹೆಚ್ಚು. ಅಂತಹವನಿಗೆ ಅವನು ಆಚರಣೆ ಮಾಡದ ಹಬ್ಬಗಳಿಗೆಲ್ಲ ಬೇಕಂತಲೆ ವಿಷಸ್ ಕಳಿಸಿ ಸ್ವಲ್ಪ ರೇಗುವಂತೆ ಮಾಡುತ್ತಿದ್ದೆ.. ಅವಕ್ಕೆಲ್ಲ ಕಳಿಸಿದ್ದಕ್ಕಲ್ಲ ಅವನಿಗೆ ಕೋಪ ; ‘ನಮ್ಮ ಹಬ್ಬಗಳಿಗೆ ಕಳಿಸದೆ, ಕಳಿಸಿದ್ದಕ್ಕು ರೆಸ್ಪಾಂಡ್ ಮಾಡದೆ ಸಂಬಂಧಿಸದೆ ಇರೋದಕ್ಕೆ ಮಾತ್ರ ಉದ್ದುದ್ದ ಮೆಸೇಜ್ ಕಳಿಸಿ ವಿಷ್ ಮಾಡುವೆನಲ್ಲಾ?’ ಅಂತ. ಹಾಗೆ ಕಳಿಸಿದಾಗೆಲ್ಲ ಉರಿದೆದ್ದು ಬೀಳುವುದು, ರೇಗುವುದು ಮಾಮೂಲಾದ ಕಾರಣ, ಬೇಕೆಂತಲೆ ಆ ಮೆಸೇಜ್ ಕಳಿಸಿದ್ದು!

ಇನ್ನೇನು ‘ಫಟಾಫಟ್’ ಖಾರವಾದ ರಿಪ್ಲೈಯೊ, ಕಾಲೋ ಬರುತ್ತೆ ಅಂದುಕೊಳ್ಳುತ್ತಿರುವಾಗಲೆ ‘ಟ್ರಿನ್’ ಸದ್ದಿನೊಡನೆ ಬಂದಿತ್ತು ಗುಬ್ಬಣ್ಣನ ರಿಪ್ಲೈ ಮೆಸೇಜು. ಏನು ಬೈದಿರಬಹುದೆಂದು ಆತುರದಲ್ಲಿ ನೋಡಿದರೆ, ಅಲ್ಲೇನಿದೆ ? ಬರಿ ‘ಸ್ಮೈಲಿಂಗ್ ಫೇಸ್’ನ ಸ್ಮೈಲಿ ಮಾತ್ರ..! ‘ಯಾಕೊ ಇದು ಗುಬ್ಬಣ್ಣನ ಮಾಮೂಲಿ ಲಾಂಗ್ವೇಜ್ ಇದ್ದಂತಿಲ್ಲವಲ್ಲಾ ?’ ಅಂದುಕೊಂಡೆ ‘ ಕ್ರಿಸ್ಮಸ್ ವಿಷಸ್ ಟು ಯುವರ್ ಫ್ಯಾಮಿಲಿ, ಫ್ರೆಂಢ್ಸ್ ಅಂಡ್ ರಿಲೇಟಿವ್ಸ್ ಟೂ..’ ಎಂದು ಮತ್ತೊಂದು ಉದ್ದದ ಮೆಸೇಜು ಹಾಕಿದೆ ವಾಟ್ಸಪ್ಪಿನಲ್ಲೆ. ಈ ಬಾರಿ ಡೆಫನೈಟ್ಟಾಗಿ’ ರೇಗುತ್ತಾನೆ ಅಂದುಕೊಳ್ಳುತ್ತಿದ್ದಂತೆ ಬಂದಿತ್ತು ಮೆಸೇಜು ಒಂದೆರಡು ಹೂವಿನ ಚಿತ್ರದ ಜೊತೆ..’ ಥ್ಯಾಂಕ್ಯೂ ಅಂಡ್ ಸೇಮ್ ಟು ಯೂ ಸಾರ್..!’ ಅಂತ.

ಇನ್ನು ನನಗೆ ತಡೆಯಲಾಗಲಿಲ್ಲ. ಅಲ್ಲಿಂದಲೆ ನೇರ ಪೋನಾಯಿಸಿ ಮಾತಲ್ಲೆ ಗುರಾಯಿಸಿದೆ, ‘ಗುಬ್ಬಣ್ಣ…ವಾಟ್ಸಪ್ಪ್ ? ಸಮ್ ಥಿಂ ರಾಂಗ್ ವಿಥ್ ಯು ? ಏನೀ ಹೊಸ ವೇಷ ?’ ಎನ್ನುತ್ತ ಅಸಮಾಧಾನದ ದನಿಯಲ್ಲಿ.

ಅತ್ತಕಡೆಯಿಂದ ಗುಬ್ಬಣ್ಣ ನಕ್ಕ ದನಿಯ ಜತೆಗೆ..’ ಏನಿಲ್ಲ ಸಾರ್..ವೇಷ ಗೀಷ ಏನಿಲ್ಲ.. ಜಸ್ಟ್ ಪ್ರಾಕ್ಟೀಸಿಂಗ್ ಟಾಲರೆನ್ಸ್.. ಈಗ ಎಲ್ಲಾ ಕಡೆ ಸಹಿಷ್ಣುತೆ, ಅಸಹಿಷ್ಣುತೆಯದೆ ಟಾಪಿಕ್ ಅಲ್ವಾ ? ‘ ಎಂದ.

ದಟ್ ಇಸ್ ಅನ್ ಬಿಕಮಿಂಗ್ ಆಫ್ ಗುಬ್ಬಣ್ಣ… ಇದ್ಯಾವಾಗಿಂದ ಶುರುನಪ್ಪಾ? ಮೊದಲಿಗೆ ಅಸಹಿಷ್ಣುತೆ ಇದ್ದುದಾದರೂ ಯಾವಾಗ ? ಗುಬ್ಬಣ್ಣ ಅವನ್ನೆಲ್ಲ ಆಚರಿಸೊಲ್ಲ ಅಂದ್ರೆ ಅರ್ಥ ಅದನ್ನು ಸಹಿಸೋದಿಲ್ಲ ಅಂತೇನು ಅಲ್ಲ. ಇನ್ ಫ್ಯಾಕ್ಟ್ ಅವನ ಮುಕ್ಕಾಲು ಪಾಲು ಶಾಪಿಂಗ್ ನಡೆಯೋದೆ ಕ್ರಿಸ್ಮಸ್ ಸೀಸನ್ನಿನಲ್ಲಿ – ಆವಾಗಾದ್ರೆ ಬೆಸ್ಟ್ ಡಿಸ್ಕೌಂಟ್ ಸಿಗುತ್ತೆ ಅನ್ನೊ ಆರ್ಗ್ಯುಮೆಂಟಲ್ಲಿ ವರ್ಷದ ಶಾಪಿಂಗಿನ ಮುಕ್ಕಾಲು ಭಾಗ ಡಿಸೆಂಬರಿನಲ್ಲೆ ಮಾಡುವ ಹವ್ಯಾಸ ನನಗೂ ತಗುಲಿಸಿದ ಮಹಾನುಭಾವ ಅವನು. .. ಅರ್ಥಾತ್ ಸಹಿಷ್ಣುತೆ , ಅಸಹಿಷ್ಣುತೆಯ ಲೆಕ್ಕಾಚಾರಕ್ಕಿಂತ ಸುಪರ್ ಡಿಸ್ಕೌಂಟ್ ಸೇಲಿನ ದೃಷ್ಟಿಯಿಂದಾದರು ಯಾವಾಗ ಕ್ರಿಸ್ಮಸ್ ಬರುವುದೊ ಎಂದೆ ಕಾಯುವ ಆಸಾಮಿ. ಅವನಿಗಿರುವ ಪರ ಮತ ಬಾಂಧವ ಮಿತ್ರರಿಗೆಲ್ಲ ತಪ್ಪದೆ ಗ್ರೀಟಿಂಗ್ ಕಳಿಸುತ್ತಾನೆ, ಇ ಮೇಯ್ಲಿನಲಾದರು. ಎಲ್ಲ ಮತಧರ್ಮಗಳತ್ತವೂ ಗೌರವದಿಂದಲೆ ಪ್ರವರ್ತಿಸುವ ಪ್ರವೃತ್ತಿಯಿಂದಾಗಿ ಎಲ್ಲಾ ತರದ ಕಸ್ಟಮರುಗಳಿಗು ಅವನು ಚಿರಪರಿಚಿತನೆ. ಅದು ಬಿಟ್ಟರೆ, ಸ್ವಂತದಾಚರಣೆಯ ವಿಷಯಕ್ಕೆ ಬಂದರೆ ಮಾತ್ರ, ಎಷ್ಟು ದೂರ ಬೇಕೊ ಅಷ್ಟು ದೂರದಿಂದಲೆ ವ್ಯವಹಾರ.. ಅಂತಹ ಪರಮ ಸಹಿಷ್ಣುವಾಗಿದ್ದು ‘ರೋಲ್ ಮಾಡೆಲ್’ ನಂತಿದ್ದವನು ಈಗ ಟಾಲರೆನ್ಸ್ ಮಾತಾಡುವನೆಂದರೆ ಏನೊ ಎಡವಟ್ಟೆಂದು ತಾನೆ ಲೆಕ್ಕ ?

‘ಗುಬ್ಬಣ್ಣ.. ಇದು ಸ್ವಲ್ಪ ಅತಿಯಾಯ್ತು.. ನೀನ್ಯಾವಾಗಪ್ಪ ಅಸಹಿಷ್ಣುತೆ ತೋರಿಸಿದ್ದು ? ಸದಾ ಸರ್ವದಾ ಸಹಿಷ್ಣುವಾಗಿ ತಾನೆ ಇರೋದು ? ಈಗ್ಯಾಕೆ ಈ ಹೊಸ ಸ್ಲೋಗನ್ ಪ್ರಾಕ್ಟೀಸ್ ಮಾಡಬೇಕು ನೀನು ..?’

‘ಅಯ್ಯೊ.. ಕಾಲ ಪೂರ್ತಿ ಕೆಟ್ಟೋಯ್ತು ಸಾರ್.. ಎಕ್ಕುಟ್ಟೋಗಿದೆ. ಮೊದಲೆಲ್ಲ ಬರಿ ಮಾಮೂಲಿ ಗೆಶ್ಚರು ತೋರಿಸಿದ್ದರೆ ಸಾಕಾಗಿತ್ತು.. ಎಲ್ಲಾ ತಂತಾವೆ ಅರ್ಥ ಮಾಡಿಕೊಂಡು ವ್ಯವಹರಿಸ್ತಾ ಇದ್ರು.. ಆದರೆ ಯಾವಾಗ ನಮ್ಮ ಬುದ್ಧಿ ಜೀವಿಗಳ , ವಿಚಾರವಾದಿ ಸಾಹಿತಿಗಳ ದೆಸೆಯಿಂದ ಈ ಸಹಿಷ್ಣುತೆ ಕಾಂಟ್ರೊವರ್ಸಿ ಶುರುವಾಯ್ತೊ, ಎಲ್ಲಾ ಕಡೆನು ಬರಿ ಅನುಮಾನದಿಂದಲೆ ನೋಡ್ತಾರೆ ಸರ್..’

‘ಅಂದ್ರೆ..?’

‘ ಮೊದಲು ಈ ಡಿಸ್ಕಶನ್ ಇಲ್ದೆ ಇದ್ದಾಗ ಏನೊ ಒಂದು ತರ ‘ಅನ್-ರಿಟನ್ ಅಂಡರಸ್ಟ್ಯಾಂಡಿಂಗ್’ ಮೇಲೆ ಎಲ್ಲಾ ನಡೀತಿತ್ತು ಸಾರ್.. ಬಾಯಿಬಿಟ್ಟು ಹೀಗೆ ಅಂತ ಹೇಳಲಿ, ಬಿಡಲಿ ಎಲ್ಲರೂ ಅವರವರಿಗೆ ತೋಚಿದ ಮಿತಿಲಿ ಗೆರೆ ಹಾಕಿಕೊಂಡು ನಡೆಯೋರು.. ಅದು ನಿಯತ್ತಾಗೆ ನಡ್ಕೊಂಡ್ ಹೋಗ್ತಾ ಇತ್ತು..’

‘ ಈಗ..?’

‘ ಈಗೇನು ಬಿಡಿ ಸಾರ್.. ಈ ಚರ್ಚೆ ಶುರುವಾಗಿದ್ದೆ ಎಲ್ಲಾ ಗಾಬರಿ ಬಿದ್ದು ‘ಎಲ್ಲಾ ಸರಿಯಿದೆಯಾ, ಇಲ್ವಾ? ಯಾಕೆ ಬೇಕು ಗ್ರಾಚಾರ, ಟೈಮು ಸರಿಯಿಲ್ಲ’ ಅಂತ ಸಿಕ್ಕಸಿಕ್ಕಿದ ಕಡೆಯೆಲ್ಲ ಸಹಿಷ್ಣುತೆ-ಅಸಹಿಷ್ಣುತೆ ಹುಡುಕೋಕೆ ಶುರು ಮಾಡ್ಕೊಂಡ್ಬಿಟ್ಟಿದಾರೆ ಸಾರ್.. ಅದಾಗಿದ್ದೆ, ಮೊದಲು ಮಾಮೂಲಾಗಿದ್ದರಲ್ಲು ಈಗ ಏನೊ ಅಸಹಿಷ್ಣುತೆ ಕಾಣೋಕೆ ಶುರುವಾಗಿಬಿಟ್ಟಿದೆ…’

ಗುಬ್ಬಣ್ಣನ ಮಾತು ಕೇಳುತ್ತಿದ್ದಂತೆ ನನ್ನ ಬುದ್ಧಿ ಜೀವಿ, ವಿಚಾರವಾದಿಯ ಟೋಪಿ ಚಕ್ಕನೆ ಮುಂಚೂಣಿಗೆ ಬಂತು. ಹೇಳಿ ಕೇಳಿ ಎಷ್ಟೆ ಲಾಬಿ, ಮಸಲತ್ತಿನ ಉದ್ದೇಶವಿದ್ದರು ಬುದ್ದಿಜೀವಿ ಅನಿಸ್ಕೊಂಡೊರಲ್ಲು ಸ್ವಲ್ಪವಾದರು ನಿಜಾಯತಿ, ಸತ್ಯದ ಕಾಳಜಿ ಇದ್ದೇ ಇರಬೇಕು. ಆ ಸಣ್ಣಗಿನ ಪ್ರಾಮಾಣಿಕ ಧೋರಣೆಯಿರದಿದ್ರೆ ಈ ರೀತಿಯ ಹೋರಾಟಕ್ಕೆ ಚಾಲನೆ ಕೊಡೋಕೆ ನೈತಿಕ ಸ್ಥೈರ್ಯ, ಧೈರ್ಯ ಎರಡೂ ಬರಲ್ಲ. ಕನಿಷ್ಠ ‘ಸೆಲ್ಫ್ ಇಂಟ್ರೆಸ್ಟೂ, ತಾತ್ವಿಕ ಸೈದ್ಧಾಂತಿಕ ನೆಲೆಗಟ್ಟು’ ಎರಡು ಯಾವುದೊ ಒಂದು ಪ್ರೊಪೊಷನ್ನಿನಲ್ಲಿ ಇರಲೆ ಬೇಕು.. ಎಷ್ಟಿರಬಹುದು ಆ ಅನುಪಾತ ಅನ್ನೋದು ಬೇರೆ ವಿಚಾರವಾದರು..

ಅದೇ ಇಂಟಲೆಕ್ಚುವಲ್ ಟೋಪಿ ಹಾಕಿದ ಗತ್ತಿನಲ್ಲೆ ಕೇಳಿದೆ..

‘ ಅಲ್ವೊ ಗುಬ್ಬಣ್ಣ.. ನಿ ಹೇಳ್ತಿರ ತರ ನೋಡಿದ್ರೆ, ಇದುವರೆಗು ಇರದಿದ್ದ ಡೈಮೆನ್ಶನ್ ಒಂದನ್ನ ಈ ಗುಂಪಿನವರೆ ಈಗ ಹುಟ್ಟು ಹಾಕಿದಾರೆ ಅಂತ ಆರೋಪಿಸಿದ ಹಾಗಿದೆಯಲ್ಲೊ ? ಏನೆ ಆಗಲಿ ಅವರಲ್ಲು ತಾವು ಮಾಡ್ತಿರೋದು ಒಂದು ನಿಜವಾದ ಹೋರಾಟ ಅನ್ನೊ ಸ್ವಲ್ಪ ಕನ್ವಿಕ್ಷನ್ ಆದ್ರೂ ಇರ್ಬೇಕಲ್ವಾ? ನಮ್ಮಾ ನಿಮ್ಮಂತಹವರ ಪಾಡು ಬಿಡು, ಅವರಿಗಾದ್ರೆ ನೂರೆಂಟು ಕಡೆ ನೋಡಿ ಆಡೊ ಜನ ಇರ್ತಾರೆ ಗೊತ್ತಾ? ‘

ಗುಬ್ಬಣ್ಣ ಅತ್ತ ಕಡೆಯಿಂದ ನಿಡುಸುಯ್ದದ್ದು ಕೇಳಿಸಿತು..’ ಸಾರ್.. ಅವರದೆಲ್ಲ ಜಿನೈನು ಹೋರಾಟಾನೊ, ಲಾಬಿ ಹೋರಾಟಾನೊ, ಸ್ಪಾನ್ಸರ್ಡ್ ಹೋರಾಟನೊ ನನಗೆ ಗೊತ್ತಿಲ್ಲ.. ಆದರೆ ಇಷ್ಟು ದಿನ ಆ ತರದ ಹುಳ ಇರದವರ ತಲೆಲೂ ಹುಳ ಬಿಡೋದ್ರಲ್ಲಿ ಈ ಡೆವಲಪ್ಮೆಂಟ್ ಸಕ್ಸಸ್ ಆಯ್ತು ಅಂತ ಮಾತ್ರ ಗೊತ್ತು.. ಇದೊಂದು ತರ ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಪರಿಷತ್ತುಗಳ ಎಲೆಕ್ಷನ್ ಬಂದಾಗ ಆದ ಹಾಗೆ ..’ ಅಂದ.

ಗುಬ್ಬಣ್ಣ ಹೀಗೇನೆ..ಆ ಕನ್ಸಲ್ಟಿಂಗ್ ಜಗದ ಇನ್-ಫ್ಲುಯೆನ್ಸಿಂದ ಎಲ್ಲಿಂದೆಲ್ಲಿಗೊ ಕನೆಕ್ಷನ್ ಮಾಡಿ ಕನ್ಫ್ಯೂಸ್ ಮಾಡಿಸಿಬಿಡುತ್ತಾನೆ, ಅವನ ಕಸ್ಟಮರುಗಳನ್ನು ಏಮಾರಿಸಿದ ಹಾಗೆ. ಆದರೆ ನಾನು ಅವನ ಕಸ್ಟಮರ ಅಲ್ಲವಲ್ಲ ?

‘ಗುಬ್ಬಣ್ಣ.. ನೋ ಮೋರ್ ಕನ್ಸಲ್ಟಿಂಗ್ ಟ್ರಿಕ್ಸ್ ಆನ್ ಮೀ ಪ್ಲೀಸ್.. ಏನಿದ್ದರು ಕಮ್ ಸ್ಟ್ರೈಟ್ ಟು ದಿ ಪಾಯಿಂಟು.. ಅಲ್ಲಯ್ಯಾ, ನಾವಾಡ್ತಿರೋದು ಮಾತು ಸಹಿಷ್ಣುತೆ ಬಗ್ಗೆ.. ಅದಕ್ಕೆಲ್ಲಿಂದಲೊ ಪಂಚಾಯ್ತಿ ಪರಿಷತ್ ಅಂತ ಕೊಕ್ಕೆ ಇಡ್ತೀಯಲ್ಲಾ ನೀನು ? ಅದಕ್ಕು ಇದಕ್ಕು ಎಲ್ಲಿದಯ್ಯಾ ಕನೆಕ್ಷನ್ ?’ ದಬಾಯಿಸುತ್ತಲೆ ಸ್ವಲ್ಪ ಜೋರಾಗಿ ಕೇಳಿದೆ.

ಗುಬ್ಬಣ್ಣ ಎಂದಿನ ಶಾಂತ ದನಿಯಲ್ಲೆ, ‘ ಸ್ವಲ್ಪ ಕಾಮ್ ಡೌನ್ ಸಾರ್.. ನೀವು ಯಾಕೊ ಸಹಿಷ್ಣುತೆ ವಾದದ ಪರ-ವಿರೋಧಿ ಬಣಗಳವರ ಹಾಗೆ ಫ್ಯಾಕ್ಟ್, ಬ್ಯಾಕ್ ಗ್ರೌಂಡು ನೋಡದೆ ಪಟ್ಟಂತ ಜಂಪ್ ಮಾಡ್ತೀರಲ್ಲಾ ? ನಾ ಹೇಳಿದ್ದು ಬರಿ ಅನಾಲಜಿ ಅಷ್ಟೆ… ಆ ಕೇಸಲ್ಲಿ ಆದ ಎಫೆಕ್ಟೆ ಈ ಕೇಸಲ್ಲು ಆಗಿದ್ದು ಅಂತ ವಿವರಿಸೋದಕ್ಕೆ..’ ಎಂದ

ನಾನು ಸ್ವಲ್ಪ ಶಾಂತವಾಗಿ, ‘ಅದೇನಪ್ಪಾ ಅಂತ ಅನಾಲಜಿ ? ರೈಸ್ ಪಲಾವ್, ಮೊಸರು ಬಜ್ಜಿಲಿದ್ದೋನು ಪೊಲಿಟಿಕಲ್ ಅನಾಲಜಿ ತನಕ ಬರೋ ಹಾಗೆ ಮಾಡಿದ ಅಂತಹಾ ಸಿಮಿಲಾರಿಟಿ ?’ ಎಂದೆ ಅರ್ಧ ವ್ಯಂಗ್ಯ, ಅರ್ಧ ಕುತೂಹಲ ಬೆರೆತ ದನಿಯಲ್ಲಿ.

‘ ಮತ್ತೇನು ಸಾರ್..? ಈ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಇತ್ಯಾದಿಗಳೆಲ್ಲ ಬರೋಕೆ ಮೊದಲು ಇದ್ದದ್ದೆ ಬರಿ ಸ್ಟೇಟ್ ಎಲೆಕ್ಷನ್ ಮತ್ತೆ ಸೆಂಟ್ರಲ್ ಎಲೆಕ್ಷನ್ ಮಾತ್ರ.. ಅದಕ್ಕೆಂತ ಹೊಡೆದು ಬಡಿದಾಡೊರೇನಿದ್ರೂ ಬರೀ ಆ ಲೆವಲ್ಲಲ್ಲಿ ಮಾತ್ರ ಸೆಣಸಾಡೋರು.. ಅದೇನೆ ಮಾಡಿದ್ರೂ ಎಲೆಕ್ಷನ್ ಆಫೀಸು, ತೋಟದ ಮನೆ, ಎಸ್ಟೇಟ್ ರೆಂಜಲ್ಲಿ ನಡೀತಿತ್ತೆ ಹೊರತು ಮನೆ ತನಕ ಕಾಲಿಡ್ತಿರಲಿಲ್ಲ..’

ವಿಧಾನಸಭಾ, ಲೋಕಸಭಾ ಎಲೆಕ್ಷನ್ನಿನ ಹಿನ್ನಲೆಯಿಟ್ಟುಕೊಂಡು ಅವನಾಡಿದ ಮಾತು ಕೇಳುತ್ತಲೆ ‘ಹೂಂ’ಗುಟ್ಟಿದೆ, ಗುಬ್ಬಣ್ಣ ತನ್ನ ಮಾತು ಮುಂದುವರೆಸಲೆಂದು.

‘ ಅದೇ ನೋಡಿ ಸಾರ್.. ಈ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸಿದ್ದಾಂತ ಬಂದಿದ್ದೆ ಎಲ್ಲಾ ತಳಕಂಬಳಕ ಆಗೋಯ್ತು.. ಅದುವರೆಗು ಮನೆ ಹೊರಗಿದ್ದ ರಾಜಕೀಯ ನೇರ ಮನೆಯೊಳಕ್ಕು ಕಾಲಿಟ್ಟು ತಂದೆ ಮಕ್ಕಳು, ಗಂಡ ಹೆಂಡತಿ, ಅಣ್ಣ ತಮ್ಮ, ಅಕ್ಕ ತಂಗಿ ಅನ್ನೋದನ್ನು ನೋಡದೆ ಒಬ್ಬೊಬ್ಬರನ್ನ ಒಂದೊಂದು ಪಾರ್ಟಿ ಮಾಡಿಸಿ ಅವರವರ ಮಧ್ಯದಲ್ಲೆ ಇನ್ವಿಸಿಬಲ್ ಗೋಡೆ ಏಳೋ ಹಾಗೆ ಮಾಡಿಬಿಡಲಿಲ್ವಾ ಸಾರ್..?’

ನನಗೂ ಅವನ ಮಾತಿನಲ್ಲಿ ನಿಜವಿದೆ ಅನ್ನಿಸ್ತು.. ಆ ಶುರುವಾದ ಮೊದಲ ದಿನಗಳಲ್ಲಿ ಮನೆ ಮನೆಗಳಲ್ಲೆ ನಡೆದ ಹೊಡೆದಾಟ, ಕೊಲೆ, ಹಲ್ಲೆ ಕುರಿತು ಕೇಳಿದ್ದೂ ಅಲ್ಲದೆ ಹೇಗೆ ಒಗ್ಗಟ್ಟಾಗಿದ್ದ ಒಂದೆ ಮನೆ ಹೋಳಾಗಿ ಒಡೆದು ಪಾರ್ಟಿ ಪಂಗಡದ ಹೆಸರಲ್ಲಿ ಹರಿದು ಹಂಚಿಹೋಗಿತ್ತು ಎನ್ನುವ ದೃಷ್ಟಾಂತಗಳನ್ನು ಓದಿದ್ದೆ..

‘ ಹೂ ಕಣೋ ಗುಬ್ಬಣ್ಣ.. ನೀ ಹೇಳೊದು ನಿಜವೆ.. ಅಲ್ಲಿವರೆಗು ಸ್ಟ್ರೀಟ್ ಲೆವೆಲ್ಲಿನಲ್ಲಿದ್ದ ಪಾಲಿಟಿಕ್ಸ್ ನೇರ ಬೆಡ್ ರೂಮು, ಬಾತ್ ರೂಮ್ , ಕಿಚನ್ನು, ಡೈನಿಂಗ್ ಹಾಲಿಗೆ ಬಂದಿದ್ದು ಆವಾಗಿಂದಲೆ ಅನ್ನೋದು ನಿಜ… ಒಂದು ರೀತಿ ಅದು ಇನ್ನೊಂದು ತರದ ಡಿವೈಡ್ ಅಂಡ್ ರೂಲ್ ಅಂತಾಗಿ, ಗಂಡ ಹೆಂಡ್ತೀರನ್ನು ಪಾರ್ಟಿಯಾಗಿಸಿಬಿಡ್ತು ಅಂತ ಕೇಳಿದೀನಿ..’

‘ ಅಯ್ಯೊ ಅಷ್ಟು ಮಾತ್ರವಲ್ಲ ಸಾರ್.. ನಮ್ ಜನಗಳೇನು ಕಮ್ಮಿನಾ? ಅವರೂ ಕಿಲಾಡಿಗಳೆ.. ಮೊದಮೊದಲು ಅವರಿಗು ಕನ್ಫ್ಯುಷನ್ನು ಭಯ ಭೀತಿ ಇತ್ತೇನೊ ? ಆದ್ರೆ ಎಲ್ಲಾ ಸ್ವಲ್ಪ ಹಳೆಯದಾದ್ಮೇಲೆ ಅದರಲ್ಲೆ ಛಾನ್ಸೂ ಕಾಣಿಸಿಬಿಡ್ತು..’

‘ ಛಾನ್ಸೂ ಅಂದ್ರೆ..?’

‘ ಇನ್ನೇನು ಸಾರ್..? ಈಗಿನ ರಾಜಕೀಯದಲ್ಲಿ ಯಾವಾಗ ಯಾವ ಪಾರ್ಟಿ ಅಧಿಕಾರಕ್ಕೆ ಬಂದು ಎಷ್ಟು ದಿನ ರಾಜ್ಯಭಾರ ಮಾಡುತ್ತೊ ಹೇಳದು ಕಷ್ಟ.. ಅಧಿಕಾರದಲ್ಲಿದೆ ಅಂತ ಒಂದುಪಕ್ಷದ ಕಡೆ ವಾಲ್ಕೊಂಡ್ರೆ, ಅಧಿಕಾರ ಹೋದಾಗ ಆಪೋಸಿಷನ್ ಆಗಿರೊ ಎಡವಟ್ಟು , ಇರುಸುಮುರುಸು ..’

‘ಅದಕ್ಕೆ..?’

‘ ಅದಕ್ಕೆ ಮೊದಲೆ ಪ್ರೀ-ಎಲೆಕ್ಷನ್ ಅಲೈಯೆನ್ಸ್ ಮಾಡ್ಕೊಂಡ್ಬಿಡೋದು… ಗಂಡ ಒಂದು ಪಾರ್ಟಿಲಿ ನಿಂತ್ರೆ ಹೆಂಡತಿ ಆಪೋಸಿಷನ್ನಲ್ಲಿ.. ಅಣ್ಣ ಒಂದಾದ್ರೆ ತಮ್ಮ ಇನ್ನೊಂದು.. ಹೀಗೆ ಯಾರೆ ಅಧಿಕಾರಕ್ಕೆ ಬಂದ್ರು ಕುಟುಂಬದ ಯೋಗಕ್ಷೇಮ ಮಾತ್ರ ಸೇಫ್..!’

‘ಅರೆ ಗುಬ್ಬಣ್ಣ.. ಇದೊಂದು ತರ ‘ಸಿಂಧಿಯಾ’ ಫ್ಯಾಮಿಲಿ ವ್ಯವಹಾರ ಇದ್ದ ಹಾಗೆ ಇದೆಯಲ್ಲಾ ? ತಾಯಿದೊಂದು ಪಾರ್ಟಿಯಾದ್ರೆ, ಮಗ ಅದರ ಆಪೋಸಿಟ್… ಸ್ಟೇಟಲ್ಲಾದ್ರು ಸರಿ, ಸೆಂಟ್ರಲ್ಲಾದ್ರೂ ಸರಿ ಯಾರಾದರೊಬ್ಬರ ಪಾರ್ಟಿ ಅಧಿಕಾರದಲ್ಲಿದ್ದೆ ಇರುತ್ತೆ… ಸ್ಮಾರ್ಟ್ ಟ್ರಿಕ್ ಅಲ್ವಾ?’ ಎಂದೆ ಏನೊ ಡಿಸ್ಕವರಿ ಮಾಡಿದ ಎಗ್ಸೈಟ್ ಮೆಂಟಲ್ಲಿ.

‘ ಅದ್ಯಾವ ಮಹಾ ಡಿಸ್ಕವರಿ ಬಿಡಿ ಸಾರ್.. ಅದೊಂದು ಓಪನ್ ಸೀಕ್ರೆಟ್.. ನಾ ಹೇಳಿದ್ದೇನು ಅಂದ್ರೆ ಆವಾಗ ಆದ ಹಾಗೆ, ಅಸಹಿಷ್ಣುತೆ ಅವಾರ್ಡ್ ವಾಪಸಿ ರಾಜಕೀಯದಿಂದ ಈ ಟಾಪಿಕ್ಕು ಕೂಡ ನ್ಯೂಸು ಪೇಪರು, ವಿಧಾನಸಭಾ ಲೋಕಸಭಾ ಲಾಬಿ ಲೆವಲ್ ಬಿಟ್ಟು, ಸ್ಟ್ರೀಟ್ ಲೆವಲ್ ಗೆ ಬಂದು, ಫೆಸ್ಬುಕ್, ವಾಟ್ಸಪ್, ಟ್ವಿಟ್ಟರುಗಳಂತಹ ಸೋಶಿಯಲ್ ಮೀಡಿಯಾಗಳಲ್ಲೆಲ್ಲ ಗಬ್ಬೆಬ್ಬಿಸಿ ಈಗ ನೇರ ಮನೆ ಮನೆಯ ಪೂಜಾ ರೂಮಿನ ಬಳಿ ಬಂದು ಕೂತುಬಿಟ್ಟಿದೆ ಸಾರ್.. ಸಹಿಷ್ಣುತೆ, ಅಸಹಿಷ್ಣುತೆ ಅನ್ನೊ ವಾದದ ಹೆಸರಲ್ಲಿ..’

‘ ಅಯ್ಯೊ.. ಇದೇನು ಹಾಳು ರಾಜಕೀಯಾನೊ ಗುಬ್ಬಣ್ಣ.. ಹಾಗೇನಾದ್ರೂ ಆದ್ರೆ ಅವರು ಅನ್ಕೊಂಡಿರೊ ಪರ್ಪಸ್ಸಿಗೆ ವಿರುದ್ಧವಾಗಿ ನಡೆದ ಹಾಗಲ್ವಾ? ಬೇರೆ ಏನಿರದಿದ್ರೂ ‘ಮನೆ ಮನೆ ಫೈಟು’ ಹುಟ್ಟು ಹಾಕೋದು ಅವರ ಉದ್ದೇಶವಿರಲ್ಲಾ ಅಲ್ವಾ? ಎಲ್ಲಾ ಜನರಿಗು ಅವೇರ್ನೆಸ್ ಬರಲಿ ಅನ್ನೊ ಮೋಟಿವ್ ಇರುತ್ಯೆ ಹೊರತು ಅಸಹಿಷ್ಣುತೆ, ಧರ್ಮದ ಹೆಸರಲ್ಲಿ ಮನೆ ಮನೆ ಜಗಳ ಹುಟ್ಟು ಹಾಕೋದಲ್ಲಾ ಅನ್ಸುತ್ತೆ..’

‘ ಅವರುದ್ದೇಶ ಮೋಟೀವ್ ಏನೇ ಇರ್ಲಿ ಸಾರ್.. ಈಗ ಆ ವಾದದ ಚರ್ಚೆಯ ಹೆಸರಲ್ಲಿ ಯಂಗಿಂದ ಹಿಡಿದು ಒಲ್ಡ್ ಮೈಂಡುಗಳ ತನಕ ಇದ್ದಕ್ಕಿದ್ದಂಗೆ ಈ ಅನುಮಾನದ ಬೀಜ ಬಿತ್ತಿರೋದಂತೂ ನಿಜ ಸಾರ್.. ಈಗ ಇದರಿಂದ ಎಲ್ಲರಿಗು ಒಂತರ ಡೌಟ್ ಬಂದ ಹಾಗೆ ಹಾಗ್ಬಿಟ್ಟಿದೆ, ಅವರೇನು ಸಹಿಷ್ಣುನಾ, ಅಸಹಿಷ್ಣುನಾ ಅಂತ. ಅವೆರಡರ ಬಗ್ಗೇನು ತಲೆ ಕೆಡಿಸಿಕೊಳ್ಳದೆ ಅವರ ಪಾಡಿಗೆ ಅವರಿದ್ದವರೂ ಕೂಡ ಈಗ ಯಾವುದಾದರು ಒಂದು ಕ್ಯಾಂಪಿನಲ್ಲಿ ಐಡೆಂಟಿಫೈ ಮಾಡ್ಕೊಳ್ಳಲೆ ಬೇಕು ಅನ್ನೊ ಹಾಗೆ ಮಾಡಿಬಿಡ್ತಾ ಇದೆ ಈ ಟ್ರೆಂಡ್.. ಈ ಮೊದಲು ಜಾತಿ ಧರ್ಮ ಅಂತೆಲ್ಲ ತಲೇನು ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಡ್ಯೂಟಿ ನಿಭಾಯಿಸ್ತಾ ಇದ್ದೋರಲ್ಲೂ ಈಗೊಂದು ತರ ಹೊಸ ಹುಳಾ ಬಿಟ್ಟ ಹಾಗಾಗಿ ಎಲ್ಲದರಲ್ಲು ಅನುಮಾನ ಹುಟ್ಟು ಹಾಕಿಬಿಡ್ತಾ ಇದೆ.. ಇದು ಪಾಸಿಟೀವ್ ಟ್ರೆಂಡ್ ಅಲ್ಲಾಂತ ನನ್ನ ಫಿಯರು ಸಾರ್..’

ನಾನು ಸ್ವಲ್ಪ ಅವನ ಡೈಮೆನ್ಷನ್ನಲ್ಲೆ ಯೋಚಿಸಿದೆ.. ಒಂದು ವೇಳೆ ಆ ತರದ ಎರಡು ಕ್ಯಾಂಪ್ ಆದರು ಏನಾಗಿಬಿಡಬಹುದು ಅಂತ. ಒಂದು ಕಡೆ ವಿಚಾರವಾದಿ ಥಿಂಕಿಂಗ್ ಅವೇರ್ನೆಸ್ ಹೆಚ್ಚಾಗಿ ಅವರನ್ನ ಫಾಲೋ ಮಾಡೊ ಗುಂಪು ಹೆಚ್ಚಾಗಬಹುದು – ಅದು ವಿಚಾರವಾದಿ ಇಂಟಲೆಕ್ಚುವಲ್ ಪ್ರಟರ್ನಿಟಿಗೆ ಆಪ್ತವಾಗೊ, ಖುಷಿ ಕೊಡೊ ವಿಚಾರ.. ಆದರೆ ಅದೇ ಕತ್ತಿಯ ಮತ್ತೊಂದು ಅಲುಗಿನ ತುದಿ ಅನ್ನೊ ಹಾಗೆ ಅದರ ಆಪೋಸಿಟ್ ಆಗಿ ಥಿಂಕ್ ಮಾಡುತ್ತ ಇನ್ನೊಂದು ಕ್ಯಾಂಪ್ ಸೇರೋರು ಕೂಡಾ ಹೆಚ್ಚಾಗ್ತಾರೆ, ಭಾವನಾತ್ಮಕವಾಗಿ ಆಲೋಚಿಸಿ ತಾರ್ಕಿಕವಾಗಿಯೊ, ಅತಾರ್ಕಿಕವಾಗಿಯೊ ಅಸಹಿಷ್ಣುತೆಗೆ ಕುಮ್ಮುಕ್ಕು ಕೊಡೋರು – ಮೊದಲೆಲ್ಲ ಅದರ ಬಗ್ಗೆ ತಲೆ ಕೆಡಿಸ್ಕೊಳ್ದೆ ಇರೋರು ಈಗ ಒಂದು ಸ್ಟ್ಯಾಂಡ್ ತೊಗೊಳಕೆ ಶುರು ಮಾಡೋದ್ರಿಂದ. ಜನಗಳ ಎಜುಕೇಷನ್ ಲೆವಲ್, ರಾಜಕೀಯದ ನಿಗೂಢ ತಿಳಿಯದ ಮುಗ್ದ ಹಳ್ಳಿ ಜನರ ವಿಚಾರ – ಇವೆಲ್ಲಾ ಲೆಕ್ಕ ಹಾಕಿದ್ರೆ, ಇವರೆಲ್ಲ ಆ ಆಪೊಸಿಟ್ ಕ್ಯಾಂಪಿಗೆ ಸೇರಿಕೊಂಡುಬಿಟ್ರೆ ಈಗಿರೋದಕ್ಕಿಂತ ಹೆಚ್ಚು ಪೋಲರೈಸ್ ಆಗೋದ್ರಲ್ಲಿ ಅನುಮಾನವಿಲ್ಲ.. ಮೊದಲಾದ್ರೆ ಬರಿ ಎಲೆಕ್ಷನ್ ಟೈಮಲ್ಲಿ ಮಾತ್ರ ಪುಂಡು ಪುಢಾರಿ ರಾಜಕಾರಣಿಗಳು ಬಂದು ಮೈಂಡ್ ಕರಪ್ಟ್ ಮಾಡೋರು.. ಈಗ ಈ ಹೊಸ ಡೈಮೆನ್ಷನ್ನಲ್ಲಿ ಇಂಟಲೆಕ್ಚುವಲ್ಲುಗಳೂ, ವಿಚಾರವಾದಿಗಳೂ ಸೇರಿಕೊಂಡಾಗೆ ಆಯ್ತು – ಎಲೆಕ್ಷನ್ ಇರಲಿ ಬಿಡಲಿ, ಎಲ್ಲಾ ಸಮಯದಲ್ಲಿ…

‘ ಸ್ವಲ್ಪ ದೂರಕ್ಕೆ ಆಲೋಚಿಸಿದ್ರೆ ನೀನನ್ನೋದು ನಿಜ ಗುಬ್ಬಣ್ಣ.. ಎಲೆಕ್ಷನ್ ರಾಜಕೀಯ ಮನೆ ಮನೆ ಕಥೆಯಾದ ಹಾಗೆ ಸಹಿಷ್ಣುತೆ – ಅಸಹಿಷ್ಣುತೆ ಮನೆ ಮನೆ ಟಾಪಿಕ್ ಆಗಿಬಿಟ್ರೆ ಈಗ ಮಾಮೂಲಿಯಾಗಿ ಜಾತಿ ಮತ ನೋಡ್ದೆ ಬಂದು ಹೋಗೊ ಜನರೂ ಒಂದು ತರ ಅನುಮಾನದಲ್ಲೆ ಹ್ಯಾಂಡ್ ಶೇಕ್ ಮಾಡೊ ಹಾಗೆ ಆಗಿ ಬಿಡುತ್ತೆ… ಆಗ ಪಾಸಿಟೀವ್ ಆಗಿ ಇನ್-ಫ್ಲುಯೆನ್ಸ್ ಆದಷ್ಟೆ ನೆಗೆಟೀವ್ ಆಗ್ತಾರೆ. ದಟ್ ಇಸ್ ನಾಟ್ ಎ ಗುಡ್ ಡೆವಲಪ್ಮೆಂಟ್.. ಶಾರ್ಟ್ ಟರ್ಮ್ ಗೈನಿಗೆ ಲಾಂಗ್ ಟರ್ಮ್ ಕಾಮ್ಪ್ರೊಮೈಸ್ ಮಾಡ್ಕೊಂಡ ಹಾಗೆ..’ ನನ್ನ ಆಲೋಚನೆಗೊಂದು ಮಾತಿನ ರೂಪ ಕೊಡಲೆತ್ನಿಸುತ್ತ ಹೇಳಿದೆ.

ಒಂದರೆಗಳಿಗೆ ಗುಬ್ಬಣ್ಣ ಮಾತಾಡಲಿಲ್ಲ.. ಅಮೇಲೆ ಪ್ರವಾದಿ, ಪಾದ್ರಿಯ ಅವತಾರದಲ್ಲಿ ಅವನ ದನಿ ಕೇಳಿ ಬಂತು , ‘ಅದೇನೊ ಗೊತ್ತಿಲ್ಲಾ ಸಾರ್ ‘ಅವರೇನು ಮಾಡುತ್ತಿದ್ದಾರೊ ಅವರಿಗೇ ಗೊತ್ತಿಲ್ಲ, ಅವರನ್ನು ಮನ್ನಿಸಿ ಕ್ಷಮಿಸಿ ಬಿಡು ದೇವಾ’ – ಅನ್ನೊ ಹಾಗಾಗ್ಬಿಟ್ಟಿದೆ ಸಾರ್.. ಆದರೆ ವಿಷಾದನೀಯ ಅಂದ್ರೆ ಅದ್ಯಾವುದರ ಬಗ್ಗೆನು ತಲೆ ಕೆಡಿಸಿಕೊಳದಿದ್ದ ನಮ್ಮ, ನಿಮ್ಮಂತಹವರು ಡೈರೆಕ್ಟ್ ಆಗೊ, ಇನ್ಡೈರೆಕ್ಟ್ ಅಗೊ ಈಗ ಇದರಲ್ಲಿ ಇನ್ವಾಲ್ವ್ ಆಗೊ ಹಾಗಾಯ್ತಲ್ಲಾ.. ‘ಅಸಹನೀಯತೆ, ಮನೆ ಮನೆ ಕಥೆ’ ಅನ್ನೊ ಹಾಗೆ..’

ನಾವು ದೇಶದಿಂದ ಹೊರಗಿದ್ದು ನಮಗೆ ಈ ಸಹಿಷ್ಣುತೆ, ಅಸಹಿಷ್ಣುತೆ, ಅವಾರ್ಡ್ ವಾಪ್ಸಿ ಸುದ್ದಿಯ ಬಿಸಿ ಮುಟ್ಟಿದೆಯೆಂದರೆ ಅವನ ಮಾತು ನಿಜವೆ ಅನಿಸಿತು.. ಆದರೂ ಅದು ತೀರಾ ತೀವ್ರಾ ಅನ್ನೊ ತರದ ಇನ್ವಾಲ್ವ್ ಮೆಂಟೇನೂ ಅಲ್ಲವೆನಿಸಿತು.. ಅದೇ ದೃಷ್ಟಿಕೋನದಲ್ಲಿ ಯೋಚಿಸುತ್ತ, ‘ಹೋಗಲಿ ಬಿಡೊ ಗುಬ್ಬಣ್ಣ.. ಔಟ್ ಆಫ್ ಸೈಟ್, ಔಟ್ ಆಫ್ ಮೈಂಡನ್ನೊ ಹಾಗೆ ಈ ಕಾಣದ ದೇಶದಲ್ಲಿರೋದ್ರಿಂದ ನಮಗೆ ಅದರ ಎಫೆಕ್ಟೂ ಕಮ್ಮಿ ಅನ್ಕೋಬೋದು.. ಎಲ್ಲಾ ಜನಾ ನೋಡ್ತಾನೆ ಇರ್ತಾರೆ ಅಲ್ವಾ? ಅವರೆ ಸಮಯ ಸಂಧರ್ಭ ನೋಡಿ ಸರಿ ತಪ್ಪು ವಿವೇಚಿಸಿ ಕಾಲ್ ತೊಗೊತಾರೆ ಬಿಡು. ಸಹಿಷ್ಣುತೆನೊ, ಅಸಹಿಷ್ಣುತೆನೊ – ಯಾವುದರ ಗಾಳಿ ಹೆಂಗೆ ಬೀಸುತ್ತೊ ಹಂಗಾಗುತ್ತೆ..’ ಅಂದೆ.

‘ಅದೇನಾಗುತ್ತೊ ಏನು ಕಥೆಯೊ ಬಿಡಿ ಸಾರ್… ಇನ್ಮೇಲೆ ನಮ್ಮ ಜನರ ಹತ್ರನೂ ಮಾಮೂಲಿಯಾಗಿ ವ್ಯವಹರಿಸೋದೆ ಕಷ್ಟ ಆಗುತ್ತೆ.. ಎಲ್ಲರನ್ನು ಸಹಿಷ್ಣುನಾ, ಅಸಹಿಷ್ಣುನಾ – ಬ್ಯಾಡ್ಜು ಹಾಕಿದಾರೊ ಇಲ್ವೊ ಅಂತ ನೋಡ್ಕೊಂಡೆ ಮಾತಾಡಿಸ್ಬೇಕೊ ಏನೊ – ಒಂದು ತರ ಟೆರರಿಸ್ಟು ಸಸ್ಪೆಕ್ಟುಗಳನ್ನ ಬ್ರಾಂಡ್ ಮಾಡಿದ ಹಾಗೆ.. ಇನ್ಮೇಲೆ ನಾವೂ ಕೂಡ ‘ಸಹಿಷ್ಣು’ ಅಂತ ಸರ್ಟಿಫಿಕೇಷನ್ ಮಾಡಿಸಿ ಹಿಡ್ಕೊಂಡೆ ಓಡಾಡೊ ಕಾಲ ಬಂದರೂ ಬರುತ್ತೆ ಅನ್ಸುತ್ತೆ..!’

‘ ಅಯ್ಯೊ ಅಲ್ಲಿ ತನಕ ಯಾಕೆ ಹೋಗ್ತಿ ಬಿಡು ಗುಬ್ಬಣ್ಣ, ಇಲ್ಲಿ ನಾವಿರೊ ಊರುಗಳಲ್ಲಿ ಅದಾವುದರ ಗಾಳಿನೂ ಬೀಸದೆ ಸ್ವಚ್ಚವಾಗಿರೊ ತರ ನೋಡ್ಕೋಳೋಣ.. ಕನಿಷ್ಠ ನಮಗಾದರೂ ಅದರ ಉಸಾಬರಿ ಇಲ್ಲದ ಹಾಗೆ..’ ಎಂದೆ ಸಂತೈಸುವ ದನಿಯಲ್ಲಿ..

ಈಗ ಮತ್ತೆ ಅತ್ತ ಕಡೆಯಿಂದ ನಿಡುಸುಯ್ದ ಸದ್ದು ಕೇಳಿಸಿತು..’ ಅದೆಲ್ಲಾ ಆಗೋ ಹೋಗೋ ಮಾತಿನ ತರ ಕಾಣ್ತಿಲ್ಲ ಸಾರ್.. ಈಗೆಲ್ಲಾ ಸೋಶಿಯಲ್ ಮೀಡಿಯಾ ಪ್ರಪಂಚ .. ಅಂಟಾರ್ಟಿಕಾಲಿ ಉಸಿರಾಡಿದ್ರೆ, ಅಮೇರಿಕಾಲಿ ಸದ್ದು ಕೇಳಿಸುತ್ತೆ.. ನಾವೆಷ್ಟೆ ಹೊರಗೆ ಅನ್ಕೊಂಡ್ರು ಅದು ಯಾವ್ದೊ ತರದಲ್ಲಿ ಬಂದು ರೀಚ್ ಆಗೆ ಆಗುತ್ತೆ.. ನಮ್ಮನೇಲಿ ಆಗ್ತೀರೊ ಹಾಗೆ..’ ಎಂದ ಗುಬ್ಬಣ್ಣ ನಿರಾಶೆಯ ದನಿಯಲ್ಲಿ.

ಹೀಗೆ ಗುಬ್ಬಣ್ಣನ ಯಾವುದಾದರೊಂದು ಟ್ವಿಸ್ಟು ಸದಾ ಬರುತ್ತಿದ್ದರಿಂದ ನಾನು ಅಚ್ಚರಿಗೊಳ್ಳದೆ, ‘ನಿಮ್ಮ ಮನೇದೇನಪ್ಪ ಹೊಸ ಟ್ವಿಸ್ಟು ?’ ಎಂದೆ.

‘ಇನ್ನೇನಿರುತ್ತೆ ಸಾರ್ ? ಅವರೂ ಫೇಸ್ಬುಕ್ಕು, ವಾಟ್ಸಪ್ಪಲ್ಲಿ ನೋಡ್ತಾ ಇರ್ತಾರಲ್ಲ ? ಆ ನಿಜವಾದ ಸಹಿಷ್ಣುತೆ-ಅಸಹಿಷ್ಣುತೆ ಮೀನಿಂಗ್ ಮತ್ತು ಅಲ್ಲಿ ನಿಜವಾಗಿ ನಡೀತಿರೊ ಎಪಿಸೋಡುಗಳನ್ನೆಲ್ಲ ಕೈ ಬಿಟ್ಬಿಟ್ಟು ಆ ಪದಗಳನ್ನ ಮಾತ್ರ ಹಿಡಿದು ನನ್ನ ಜನ್ಮ ಜಾಲಾಡಿಸೋಕೆ ಶುರು ಮಾಡಿದಾರೆ…’

‘ ನನಗರ್ಥವಾಗ್ಲಿಲ್ಲ ಗುಬ್ಬಣ್ಣ..?’

‘ ಅರ್ಥವಾಗೋಕೇನಿದೆ ಸಾರ್ ಮಣ್ಣು ? ದೇ ಆರ್ ಅಟಾಕಿಂಗು ಡೈರೆಕ್ಟಲಿ ಆನ್ ಮೈ ಟಾಲರೆನ್ಸ್ ಲೆವೆಲ್..’

‘ ಸ್ವಲ್ಪ ಬಿಡಿಸಿ ಹೇಳೊ ಗುಬ್ಬಣ್ಣಾ..?’ ಹೆಚ್ಚುಕಮ್ಮಿ ಬೇಡುವ ದನಿಯಲ್ಲೆ ನುಡಿದೆ..

‘ ಅಲ್ಲಾ ಸಾರ್ ಈ ಮೊದಲು ಒಂದು ಲೋಟ ಕಾಫೀನೂ ಸೇರಿದ ಹಾಗೆ ಏನೆ ಬೇಕಾದರೂ ಗತ್ತಿನಲ್ಲಿ ಆರ್ಡರ್ ಮಾಡಿ ಜಬರ್ದಸ್ತಿನಿಂದ ಕಾಯ್ತಾ ಕೂತಿರ್ತಿದ್ದೆ.. ಒಂದು ಗಳಿಗೆ ತಡವಾದ್ರೂ ಅವಾಜ್ ಹಾಕಿ ಕೈ ಕಟ್ಟಿಕೊಂಡು ಓಡಿ ಬರೋ ಹಾಗೆ ಮಾಡ್ತಿದ್ದೆ.. ಸ್ವಲ್ಪ ಜಾಸ್ತಿ ತಡಾ ಆದ್ರಂತು ಪೂರ್ತಿ ಕೂಗಾಡಿಬಿಡ್ತಿದ್ದೆ..’

‘ ಸರಿ ಅದಕ್ಕು ಸಹಿಷ್ಣುತೆ-ಅಸಹಿಷ್ಣುತೆ ಮ್ಯಾಟರಿಗು ಏನು ಸಂಬಂಧ ? ‘ ನನ್ನನುಮಾನ ಇನ್ನು ಅಲ್ಲೆ ಗಿರಕಿ ಹೊಡೆಯುತ್ತಾ ಇತ್ತು..

‘ ಈ ಎಪಿಸೋಡುಗಳೆಲ್ಲ ಶುರುವಾದ ಮೇಲೆ ತಾಯಿ ಮಗಳಿಬ್ಬರು ನನಗೆ ಬಿಲ್ಕುಲ್ ‘ ಕಾಯುವ ಸಹಿಷ್ಣುತೆಯೆ’ ಇಲ್ಲಾ ಅಂತ ಜಬ್ಬೋದಕ್ಕೆ ಶುರು ಮಾಡ್ಬಿಟ್ಟಿದಾರೆ.. ಸಾರ್. ಕಾಫಿ ಕೇಳಲಿ, ಊಟ ಮಾಡುವಾಗಾಗಲಿ, ಹೊರಗೆ ಹೊರಡೋಕೆ ಅವಸರಿಸಿದಾಗಾಗಲಿ, ಯಾವುದೆ ಮಾತಿಗೆ ದನಿಯೆತ್ತಿದರೂ ಸರಿ, ನನಗೆ ‘ಸಂಸಾರ ಸಹಿಷ್ಣುತೆ’ ಯೆ ಇಲ್ಲಾ ಅಂತ ಬೆಂಡೆತ್ತುತಿದಾರೆ ಸಾರ್..’ ಯಾಕೊ ಗುಬ್ಬಣ್ಣನ ದನಿ ಅಳುತ್ತಿರುವ ಹಾಗೆ ಕೇಳಿಸಿತು ನನಗೆ.. ಅವನ ಹೆಂಡತಿ ಯಾವ ಸೋಶಿಯಲ್ ಮೀಡೀಯಾದಲ್ಲಿರದಿದ್ದರೂ, ಮಗಳು ಅದರಲ್ಲೆಲ್ಲಾ ತುಂಬಾ ಬಿಜಿ. ತಾಯಿ ಮಗಳಿಬ್ಬರೂ ಒಂದು ಟೀಮು ಆದ ಕಾರಣ ಬೇಕಾದ, ಬೇಡದ ಎಲ್ಲಾ ಸುದ್ದಿಗಳು ಅವರಿಬ್ಬರ ನಡುವೆ ಶೀಘ್ರವಾಗಿ ರವಾನೆಯಾಗುವುದಂತು ಚೆನ್ನಾಗಿ ಗೊತ್ತಿರೊ ವಿಷಯವೆ. ಆದರೆ ಇದು ಹೈಟ್ ಆಫ್ ಕ್ರಿಯೇಟಿವಿಟಿ – ಸಹಿಷ್ಣುತೆಯ ಡೆಫನೇಷನ್ನನ್ನೆ ತಮಗೆ ಬೇಕಾದ ಹಾಗೆ ತಿರುಚಿ, ಬೇಕಾದ ಹಾಗೆ ಬಳಸಿಕೊಳ್ಳೊದು…! ಗುಬ್ಬಣ್ಣ ಹೇಳಿದ ಹಾಗೆ ಈ ವಾದದ ಕೊಸರು ಇಲ್ಲಿಗೂ ಕಾಲಿಟ್ಟ ಹಾಗೆ ಕಾಣಿಸುತ್ತಿದೆ, ಯಾವುದೊ ರೂಪಾಂತರದಲ್ಲಿ..

‘ ಆದ್ರೆ ಇದು ಮ್ಯಾನೇಜಬಲ್ ಟಾಲರೆನ್ಸ್ ಬಿಡೊ ಗುಬ್ಬಣ್ಣಾ.. ಆ ಜಾತಿ ಧರ್ಮದ ಸಹಿಷ್ಣುತೆ – ಅಸಹಿಷ್ಣುತೆ ಮಧ್ಯೆ ಹೆಣಗಾಡೋಕಿಂತ ಇದು ನೂರಾರು ಪಾಲು ವಾಸಿ…’

‘ಏನು ವಾಸಿ ತೊಗೊಳ್ಳಿ ಸಾರ್.. ನಾನು ಏನಾದರು ಮಾತಾಡೋಕೆ ಹೋದ್ರು, ದೂರೋಕೆ ಹೋದ್ರು, ಕೊನೆಗೆ ಸಕಾರಣವಾಗಿಯೆ ತಪ್ಪು ಸರಿ ಹೇಳೊಕೆ ಹೋದ್ರು ‘ ವಾದ-ಅಸಹಿಷ್ಣುತೆ’ ಅಂತ ಹೇಳಿ ಹೊಸಹೊಸ ಟೈಟಲ್ ಕೊಟ್ಟು ಬಾಯಿ ಮುಚ್ಚಿಸ್ತಾರೆ.. ಮೊನ್ನೆ ಅವರ ಇಡಿ ತವರು ಮನೆಯವರನ್ನ ನಮ್ಮ ಖರ್ಚಲ್ಲಿ ಇಲ್ಲಿಗೆ ಕರೆಸೊ ಪ್ಲಾನ್ ಹಾಕ್ತಾ ಇದ್ರು.. ಅಲ್ಲೇನೊ ಅಡ್ಡ ಹೇಳೋಕ್ ಹೋದ್ರೆ ಅದಕ್ಕೆ ‘ನಂಟಸ್ತಿಕೆ ಅಸಹಿಷ್ಣುತೆ’ ಅಂತ ಹೇಳಿ ಬಾಯ್ಮುಚ್ಚಿಸ್ತಿದಾರೆ.. ಈ ನಡುವೆ ಏನು ಮಾತಾಡಕು ಹೋದ್ರು ಎಲ್ಲಾದಕ್ಕು ಒಂದು ಅಸಹಿಷ್ಣುತೆ ಥಿಯರಿ ಹಾಕಿ, ನನ್ನ ಮಾತಾಡಬಿಡದೆ ಬಲವಂತ ಮೌನ ವ್ರತ ಹಿಡಿಯೊ ಹಾಗೆ ಮಾಡಿಬಿಟ್ಟಿದಾರೆ ಸಾರ್.. ಒಂತರ ನಾನೀಗ ‘ಬಲವಂತ ಸಹಿಷ್ಣು’ ಆಗ್ಬಿಟ್ಟೀದೀನಿ ಮನೆಯೊಳಗೆ..’

‘ ಇರ್ಲಿ ಬಿಡೊ ಗುಬ್ಬಣ್ಣ..ಇವೆಲ್ಲ ಟೆಂಪರರಿ.. ಈ ವಿವಾದವೆಲ್ಲ ತಣ್ಣಗಾದ ಮೇಲೆ ಅವರೂ ಎಲ್ಲಾ ಮರೆತು ಸ್ವಲ್ಪ ಸಹಿಷ್ಣುತೆ ರೂಢಿಸ್ಕೋತಾರೆ.. ಆಗ ‘ ಗುಬ್ಬಣ್ಣ – ಸಹಿಷ್ಣುತೆ’ ಮತ್ತೆ ವಾಪಸ್ಸು ಬರುತ್ತೆ… ಅಲ್ಲಿ ತನಕ ಸ್ವಲ್ಪ ‘ ಸಹಿಷ್ಣು’ ವಾಗಿರೋದನ್ನ ಅಭ್ಯಾಸ ಮಾಡಿಕೊ..’ ಎಂದು ನಾನೂ ಸ್ವಲ್ಪ ‘ಟಾಲರೆನ್ಸ್’ ಉಪದೇಶ ಮಾಡಿದೆ..

‘ಇನ್ನು ನೀವೊಬ್ಬರು ಬಾಕಿಯಿದ್ರಿ ಇದನ್ನ ಹೇಳೊಕೆ…. ನನಗೀಗ ಅರ್ಥವಾಗ್ತಿದೆ.. ಅಕ್ಬರನಂತಹ ಬಾದಶಹರು ಯಾಕೆ ಒಂದು ಮತ ತರಬೇಕೂಂತ ಆಸೆ ಪಡ್ತಿದ್ರೂ ಅಂತ.. ಹಾಗಾದ್ರೂ ಎಲ್ಲಾ ‘ಸಮಸಹಿಷ್ಣು’ ಗಳಾಗ್ಲಿ ಅಂತ್ಲೆ ಇರಬೇಕು..’

‘ ಅದು ಅವನ ಕಾಲದಲ್ಲು ಆಗ್ಲಿಲ್ಲ, ಈವಾಗಲೂ ಆಗೋದಿಲ್ಲ ಗುಬ್ಬಣ್ಣಾ.. ಅದನ್ನೆಲ್ಲಾ ಬಿಟ್ಟು ಹಾಕು.. ಸಾಯಂಕಾಲ ಮನೆ ಹತ್ರ ಬಾ.. ಲಿಟಲ್ ಇಂಡಿಯಾದಲ್ಲಿ ಸಾಯಂಕಾಲ ಒಂದು ಸೆಮಿನಾರ್ ಇದೆ – ಸಿಂಗಪೂರು ಹ್ಯೂಮನ್ ರಿಸೋರ್ಸು ಮಿನಿಸ್ಟ್ರಿಯವರು ಆರ್ಗನೈಸು ಮಾಡಿರೋದು.. ‘ಹೌ ಟು ಬಿಲ್ಡ್ ಎ ಟಾಲರೆಂಟ್ ಸೊಸೈಟಿ ಇನ್ ಸ್ಪೈಟ್ ಆಫ್ ಅಡ್ವರ್ಸಿಟೀಸ್’ ಅಂತ. ಅಟೆಂಡ್ ಮಾಡೋಣ ಇಬ್ರೂ.. ಇಂತಹ ಸಿಚುಯೇಷನ್ನಲ್ಲಿ ಡೀಲ್ ಮಾಡೋಕೆ ಕ್ಲೂ ಸಿಕ್ರೂ ಸಿಗಬಹುದು..’ ಎಂದೆ..

‘ ಅಯ್ಯೊ.. ಅಲ್ಲೂ ಬರಿ ಟಾಲರೆನ್ಸ್ ಮಾತೇನಾ ? ಸಾರ್ ಬಿಟ್ಬಿಡಿ ನನ್ನ.. ಐ ಯಾಮ್ ಆಲ್ರೆಡಿ ಟೂ ಮಚ್ ಟಾಲರೆಂಟ್ ನೌ’ ಎಂದವನೆ ಪೋನಿಟ್ಟುಬಿಟ್ಟ ಗುಬ್ಬಣ್ಣ…

ಅವನ ಮನಸ್ಥಿತಿ ಅರ್ಥವಾದರೂ, ಡಿಫೆನ್ಸೀವ್ ದೃಷ್ಟಿಯಿಂದ ಯಾವುದಕ್ಕು ನಾನು ಆ ಸೆಮಿನಾರು ಅಟೆಂಡು ಮಾಡುವುದೆ ಒಳ್ಳೆಯದು ಅಂದುಕೊಂಡೆ ನಾನೂ ಅತ್ತ ನಡೆದೆ, ಪ್ರೋಗ್ರಾಮಿಗೆ ಹೆಸರು ರಿಜಿಸ್ಟರ್ ಮಾಡಿಸುವ ಬೂತು ಎಲ್ಲಿಟ್ಟಿದ್ದಾರೆ ಹುಡುಕುತ್ತಾ..

– ನಾಗೇಶ ಮೈಸೂರು
(nageshamysore.wordpress.com)

00431.’ಶಾಪಿಂಗ್’ ಗುಬ್ಬಣ್ಣ …!


00431.’ಶಾಪಿಂಗ್’ ಗುಬ್ಬಣ್ಣ …!
_________________________
(ಶಾಪಿಂಗ್ ಗುಬ್ಬಣ್ಣ – ಈಗ ಸುರಗಿಯಲ್ಲಿ : http://surahonne.com/?p=10534)

ಗೇಟಿನತ್ತ ಬಂದು ಕರೆಗಂಟೆಯೊತ್ತಿ ‘ಗುಬ್ಬಣ್ಣಾ’ ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ ‘ಧಡ ಬಡ’ ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾಗಲೆ, ಅತ್ತ ಕಡೆಯಿಂದ ದಢಾರನೆ ಏನೋ ಬಂದು ಅಪ್ಪಳಿಸಿದ ಸದ್ದಾಯ್ತು.. ಆ ಸದ್ದಿನ್ನು ಮಾಯವಾಗುವ ಮೊದಲೆ ಬಾಗಿಲ ಆ ಬದಿಯಿಂದ ಮತ್ತೆ ದೊಪ್ಪನೆ ಏನೊ ಕುಸಿದು ಬಿದ್ದ ಸದ್ದು… ಬಾಗಿಲಿಗಪ್ಪಳಿಸಿದ ಸದ್ದಿನಿಂದಲೆ ಅದು ಗುಬ್ಬಣ್ಣನ ಮಹಾಸತಿ, ಪತಿದೇವರ ಮೇಲಿನ ಅಪರಿಮಿತ ಪ್ರೀತಿಯಿಂದ ಎಸೆದ ಪಾತ್ರೆಯೊ-ಪಗಡಿಯೊ ಇರಬೇಕೆಂದು ಖಚಿತವಾಗಿತ್ತು. ಆದರೆ ಈಗಾಗಲೆ ಈ ಆಟದಲ್ಲಿ ಪಳಗಿದ ಗುಬ್ಬಣ್ಣ ಅಷ್ಟು ಸುಲಭಕ್ಕೆ ಸಿಕ್ಕಿಬೀಳುವನೆ ? ತನ್ನ ಪುಷ್ಪಕ ವಿಮಾನದಂತಹ ದೇಹವನ್ನು ಅತ್ತಿತ್ತ ಓಲಾಡಿಸಿ ಹೇಗೊ ಎಗರಿ ತಪ್ಪಿಸಿಕೊಂಡಿರುತ್ತಾನೆ. ಅದಕ್ಕೆ ಬಾಗಿಲಿಗೆ ಬಂದು ನೇರವಾಗಿ ಹೊಡೆದಿರಬೇಕು – ಆ ಪಾಕಾಯುಧ….!

ಇನ್ನು ಆ ಎರಡನೆಯ ‘ದೊಪ್ಪನೆ’ ಸದ್ದೇನು ? ಪಾತ್ರೆ ಗುರಿ ತಪ್ಪಿ ಬಾಗಿಲಿಗೆ ಬಡಿದು ನುಗ್ಗಾದ ಆಕ್ರೋಶದಲ್ಲಿ, ಮಹಾಕಾಳಿಯವತಾರ ತಾಳಿ ಗುಬ್ಬಣ್ಣನಿಗೊಂದು ‘ಪುಟ್ಬಾಲ್-ಕಿಕ್’ ಕೊಟ್ಟಿರಬೇಕು… ‘ಕಮಕ್ – ಕಿಮಕ್’ ಅನ್ನದೆ ಕಸದ ಪೊಟ್ಟಣದಂತೆ ಬಂದು, ‘ದೊಪ್ಪನೆ’ ಕುಸಿದು ಬಿದ್ದಿರುತ್ತಾನೆ ಆ ಮಹಾದೇಹಿ…! ಒಟ್ಟಾರೆ ಅಲ್ಲೊಂದು ರಣರಂಗವೆ ನಡೆದುಹೋಗಿರಬೇಕು, ನಾನು ಬಂದ ಹೊತ್ತಲ್ಲಿ…

ಆ ‘ಅಂತರಂಗದ ಖಾಸಗಿ ಕ್ರಿಕೆಟ್’ ನಡೆದಿರುವ ಹೊತ್ತಲ್ಲಿ ಬಾಗಿಲು ತಟ್ಟಿ, ಒಳಹೋಗಿ ಅಡ್ಡಿಮಾಡುವುದು ಸರಿಯೆ ? ಅಥವಾ ಯಾರ ಕಡೆಗೂ ಓಲಲಾಗದೆ ಧರ್ಮಸಂಕಟಕ್ಕೊಳಗಾಗುವ ಬದಲು ಅಲ್ಲಿಂದ ಕಾಲು ಕಿತ್ತು, ಹೇಳದೆ ಕೇಳದೆ ಪರಾರಿಯಾಗುವುದು ಸರಿಯೆ ? ಎಂಬ ಜಿಜ್ಞಾಸೆಯಲ್ಲಿರುವಾಗಲೆ ತಟ್ಟನೆ ಬಾಗಿಲು, ತೆರೆದುಕೊಂಡುಬಿಟ್ಟ ಕಾರಣ ಆ ಆಲೋಚನೆ ಕೈಬಿಟ್ಟು ಬಲವಂತವಾಗಿ ಅಲ್ಲೆ ನಿಲ್ಲಬೇಕಾಯ್ತು. ಆದರೆ ಈ ಬಾರಿ, ಒಳಗೆ ಕರೆದು ಕಾಜಿ ನ್ಯಾಯ ಮಾಡಲು ಕೇಳುವರೆಂಬ ಅನಿಸಿಕೆಗೆ ವಿರೋಧವಾಗಿ, ಮತ್ತೇನೊ ಒಂದು ಮೂಟೆಯಂತ ವಸ್ತು ಉರುಳಿಕೊಂಡು ನನ್ನ ಕಾಲಬುಡದಲ್ಲೆ ಬಿದ್ದಂತಾಯ್ತು – ಕಣ್ಣಗಲಿಸಿ ನೋಡಿದರೆ – ಸಾಕ್ಷಾತ್ ಗುಬ್ಬಣ್ಣ !

ಈ ಅನಿರೀಕ್ಷಿತ ಧಾಳಿಗೆ ಕಂಗೆಟ್ಟು ಗಾಬರಿಯಿಂದ ತಲೆಯೆತ್ತಿ ನೋಡಿದರೆ – ಮಹಾಕಾಳಿಯವತಾರದಂತೆ ಬಾಗಿಲಲ್ಲಿ ಪೊರಕೆ ಹಿಡಿದ ಗುಬ್ಬಣ್ಣನ ಶ್ರೀಮತಿ..! ತಲೆಗೊಂದು ಬಿಳಿಟೋಪಿ ಹಾಕಿಬಿಟ್ಟರೆ ಆಮ್ ಆದ್ಮಿ ಪಾರ್ಟಿಯ ಪ್ರಚಾರಕಳೆಂಬಂತೆ ಕಾಣುತ್ತಿದ್ದಳೆನಿಸಿ ಆ ವಿಷಗಳಿಗೆಯಲ್ಲೂ ಮುಚ್ಚಿಡಲಾಗದ ನಗು ಬಿಗಿದಿದ್ದ ತುಟಿಯ ಸಂದಿಯಲ್ಲಿ ತೂರಿ, ಸದ್ದಾಗಿ ಹೊರ ಬಿದ್ದಿತ್ತು.. ಮೊದಲೆ ಸೂಜಿ ಬಿದ್ದರು ಕೇಳಿಸುವ ಹಾಗಿದ್ದ ಹೊತ್ತು; ಆ ಕಿಸಕ್ಕನೆಯ ನಗು ತನ್ನ ಗಡಿಯಾಚೆ ನೆಗೆದು ಗುಬ್ಬಣ್ಣನ ಸತಿಯ ಕರ್ಣಗಳೊಳಗ್ಹೊಕ್ಕು ಅದೇನು ಮತಿ ಮಂಥನ ಕೋಲಾಹಲ ನಡೆಸಿಬಿಟ್ಟಿತ್ತೊ, ಏನೊ? ಮುಂದೇನಾಯ್ತೆಂದು ಅರಿವಾಗುವಷ್ಟರಲ್ಲಿ ಕೈಲಿದ್ದ ಪೊರಕೆ ನನ್ನತ್ತ ಹಾರಿ ಬರುವ ದೃಶ್ಯವನ್ನು ಇಂದ್ರೀಯ ಪ್ರಜ್ಞೆ ತಟ್ಟನೆ ಗ್ರಹಿಸಿಬಿಟ್ಟಿತ್ತು… ಅದಾವ ಸುಪ್ತಪ್ರಜ್ಞೆಯೊ ಎಚ್ಚರಿಸಿದಂತೆ ಒಂದೆ ಏಟಿಗೆ ಹಿಂದಕ್ಕೆ ನೆಗೆದಿದ್ದರು ಕಾಲಡಿಯೆ ಬಂದು ಬಿದ್ದಿತ್ತು, ಕೊಂಚದರಲ್ಲಿಯೆ ತಪ್ಪಿಸಿಕೊಂಡ ಅವಘಡದ ಇಂಗಿತವನ್ನೀಯುತ್ತ. ಅದರ ಬೆನ್ನ ಹಿಂದೆಯೆ ಗುಡುಗಿನಂತೆ ದನಿಸಿತ್ತು ಕರ್ಕಶವಾದ ದನಿಯಲ್ಲಿ…

‘ ಹಾಳು ಗಂಡಸುಗಳೆ ಹೀಗೆ.. ಎಲ್ಲಾ ಒಂದೆ ಜಾತಿ.. ಒಟ್ಟಾಗಿ ಎಲ್ಲಾದರು ಹಾಳಾಗಿಹೋಗಿ….’ ಎಂದು ಭುಸುಗುಟ್ಟುತ್ತಲೆ ಬಾಗಿಲು ಮುಚ್ಚಿಕೊಂಡು ಒಳಹೋಗಿಬಿಟ್ಟಳು… ಆಘಾತದಿಂದ ಸಾವರಿಸಿಕೊಳ್ಳುತ್ತಲೆ, ಗುಬ್ಬಣ್ಣನತ್ತ ನಡೆದು ಮೇಲೇಳಲು ಅನುವಾಗುವಂತೆ ಕೈ ನೀಡಿದೆ. ಈಗಾಗಲೆ ಗಲಾಟೆಗೆ ಅಕ್ಕಪಕ್ಕದ ಫ್ಲಾಟಿನ ಜನ ಏನು ವಿಶೇಷವೆನ್ನುವಂತೆ ಇಣುಕಿ ನೋಡುತ್ತಿದ್ದ ಮುಜುಗರವು ಸೇರಿ, ಆದಷ್ಟು ಬೇಗನೆ ಅಲ್ಲಿಂದ ಕಾಲು ಕಿತ್ತರೆ ಸಾಕೆನಿಸಿ ಅವನನ್ನು ದರದರನೆ ಎಳೆದುಕೊಂಡೆ ಹೊರಟೆ. ಏಳಂತಸ್ತಿನ ಮೆಟ್ಟಿಲು ಇಳಿದುಹೋಗುವುದು ತ್ರಾಸದಾಯಕವೆ ಆದರು, ಮರೆಯಿಂದ ನೋಡುತ್ತಿರುವ ಕಣ್ಣುಗಳ ಮನೆಗಳನ್ನು ದಾಟಿ ಲಿಫ್ಟಿನ ನೆಲೆ ತಲುಪುವುದಕ್ಕಿಂತ ಅವನ ಫ್ಲಾಟಿಗೆ ಅಂಟಿಕೊಂಡಂತಿದ್ದ ಮೆಟ್ಟಿಲುಗಳೆ ವಾಸಿಯೆನಿಸಿ, ಬೊಜ್ಜುದೇಹದ ಡೊಳ್ಳುಹೊಟ್ಟೆಗಳನ್ನು ತಾಳಬದ್ಧವಾಗೆಂಬಂತೆ ಮೇಲೆ ಕೆಳಗೆ ಕುಣಿಸುತ್ತಾ, ಏದುಸಿರು ಬಿಡುತ್ತ ಕೊನೆಯಮೆಟ್ಟಿಲು ತಲುಪಿದಾಗ ‘ಉಸ್ಸಪ್ಪ’ ಎನ್ನುತ್ತ ಇಬ್ಬರೂ ಅಲ್ಲೆ ಕುಳಿತುಬಿಟ್ಟೆವು, ಅರೆಗಳಿಗೆ ಸುಧಾರಿಸಿಕೊಳ್ಳುವಂತೆ.

ಒಂದೆರೆಡು ಬ್ಲಾಕು ದಾಟಿದರೆ, ಅಲ್ಲೆ ‘ಹಾಕರ ಸೆಂಟರ್’ ನ ‘ಕಾಫಿ ಶಾಪ್’. ಹೆಚ್ಚು ಜನರಿರದ ಕಡೆಯ ಟೇಬಲೊಂದನ್ನು ಆರಿಸಿ ಎರಡು ಮಗ್ ‘ಟೈಗರ್ ಬಿಯರ್’ ಆರ್ಡರು ಮಾಡಿದೆ… ಎಂದಿನಂತೆ ಮಾಮೂಲಿನ ತರಹ ಕಾಫಿ, ಟೀ ಕುಡಿದು ಜಾಗ ಖಾಲಿ ಮಾಡುತ್ತಿದ್ದ ಹಾಗೆ ಇವತ್ತು ಸಾಧ್ಯವಿಲ್ಲವೆಂದು ಗುಬ್ಬಣ್ಣನ ಅರ್ಧಾಂಗಿಯ ‘ನರಸಿಂಹಿಣಿಯವತಾರ’ವನ್ನು ನೋಡಿದಾಗಲೆ ಗೊತ್ತಾಗಿ ಹೋಗಿತ್ತು. ಮೇಲೇನೂ ಏಟು ಬಿದ್ದಂತೆ ಕಾಣಿಸದಿದ್ದರು ಒಳಗೊಳಗಿನ ಮೂಗೇಟುಗಳಿಂದ ಜರ್ಝರಿತನಾಗಿ ಹೋಗಿದ್ದ ಗುಬ್ಬಣ್ಣನಿಗೆ ‘ಸರ್ವ ರೋಗಾನಿಕಿ ಸಾರಾಯಂ ಮದ್ದು’ ಎಂದೆ ನಿರ್ಧರಿಸಿ ಅದನ್ನೆ ಆರ್ಡರು ಮಾಡಿದ್ದೆ… ಟೇಬಲಿನ ಮೇಲಿದ್ದ ಗ್ಲಾಸಿನಿಂದ ಯಾಂತ್ರಿಕವಾಗಿ ‘ಚಿಯರ್ಸ್’ನೊಂದಿಗೆ ಅವನೊಂದೆರಡು ‘ಸಿಪ್’ ಕುಡಿಯುವ ತನಕ ಸುಮ್ಮನಿದ್ದು, ನಂತರ ಮೆಲುವಾಗಿ , ‘ ಏನೋ ಇದು ಗುಬ್ಬಣ್ಣಾ, ನಿನ್ನ ಅವಸ್ಥೆ? ‘ ಎಂದೆ.

ಗುಬ್ಬಣ್ಣನ ಅಳುಮೊರೆ ಬಿಕ್ಕಿಬಿಕ್ಕಿ ಅಳುವುದೊಂದು ಬಾಕಿ.. ಪೆಚ್ಚಾಗಿ, ನನ್ನ ಕಣ್ಣೆದುರಿನಲ್ಲೆ ಆದ ಅವಮಾನದಿಂದ ನಾಚಿ, ಕುಗ್ಗಿಹೋಗಿದ್ದ ಗುಬ್ಬಣ್ಣ, ‘ಎಲ್ಲಾ ನನ್ನ ಗ್ರಹಚಾರಾ ಸಾರ್.. ಕಟ್ಟಿಕೊಂಡಿದ್ದಕ್ಕೆ ಅನುಭವಿಸಬೇಕಲ್ಲ..?’ ಎಂದ.

ನಾನು ಕೊಂಚ ಅಚ್ಚರಿಯಿಂದಲೆ ಅವನತ್ತ ನೋಡುತ, ಅರೆಗಳಿಗೆ ಮಾತಾಡದೆ ಕುಳಿತೆ.. ‘ಆದರ್ಶ ದಂಪತಿಗಳು’ ಎಂದೇನಲ್ಲವಾದರೂ, ಅವರಿಬ್ಬರ ನಡುವೆ ಅಂತಹ ಜಗಳ, ಕಿತ್ತಾಟಗಳೂ ಇರಲಿಲ್ಲವೆನ್ನಬೇಕು… ಅದರಲ್ಲೂ ತೀರಾ ಹೊಂದಿಕೊಂಡು ಹೋಗುವ ಗುಬ್ಬಣ್ಣನ ‘ದುರ್ಬಲ’ ಗುಣದಿಂದಾಗಿ ತಿಕ್ಕಾಟ, ಜಗಳಗಳಾಗಲಿಕ್ಕೆ ಇದ್ದ ಅವಕಾಶವೂ ಕಡಿಮೆ. ಅಂತಹದ್ದರಲ್ಲಿ ಈ ದಿನದ ಮಹಾಭಾರತ ನಡೆದಿದೆಯೆಂದರೆ ಗುಬ್ಬಣ್ಣ ಖಂಡಿತಾ ತನ್ನದೆ ಆದ ಲಕ್ಷ್ಮಣರೇಖೆಯನ್ನು ದಾಟಿರಬೇಕು – ಹೆಂಡತಿಯ ಸಹನೆಯನ್ನೆ ಪರೀಕ್ಷಿಸುವಷ್ಟು ಅನಿಸಿತು.

‘ ಅಲ್ಲಯ್ಯ ಒಬ್ಬರಿಗೊಬ್ಬರು ಹೊಡೆದಾಡಿ, ಎಸೆದಾಡುವಂತಹ ವಿಷಯ ಏನಯ್ಯ ? ಅದರಲ್ಲೂ ನೀನಂತು ಸಾಧು ಹಸುವಿನ ಹಾಗೆ ಹೇಳಿದ್ದೆಲ್ಲ ಮಾಡಿಕೊಡೊ ಮಹಾನುಭಾವ?’

‘ಅಲ್ಲಿಂದಲೆ ಎಲ್ಲಾ ಪ್ರಾಬ್ಲಮ್ ಶುರುವಾಗಿದ್ದು ಸಾರ್… ಒಂದು ವಾರದ ಹಿಂದೆ ಹೊಸದಾಗಿ ಮದುವೆಯಾದ ಅವಳ ತಂಗಿ ಮತ್ತು ತಂಗಿ-ಗಂಡ ಇಬ್ಬರೂ ಹನಿಮೂನಿಗೆ ಅಂತ ಸಿಂಗಪುರಕ್ಕೆ ಬಂದು ನಮ್ಮ ಮನೆಯಲ್ಲೆ ಇದ್ದರು ಸಾರ್…’

ಕಥೆಗೇನೊ ಹೊಸ ತಿರುವು ಸಿಗುತ್ತಿರುವುದು ಕಂಡು ನನಗೂ ಕುತೂಹಲ ಗರಿ ಕೆದರಿತು.. ‘ಗುಬ್ಬಣ್ಣ ಹನಿಮೂನೇನೊ ಓಕೆ, ಸಿಂಗಪುರ ಯಾಕೆ ? ‘ ಎಂದೆ.

‘ ಸಿಂಗಪುರ ಓಕೆ – ನಮ್ಮ ಮನೇನೆ ಯಾಕೆ? ಅಂತ ಕೇಳಿ ಸಾರ್…’ ಉರಿದುಬಿದ್ದ ದನಿಯಲ್ಲಿ ಮಾರುತ್ತರ ಗುಬ್ಬಣ್ಣನ ಬಾಯಿಂದ..!

ಅದೂ ನ್ಯಾಯವೇನೆ – ಅಷ್ಟೊಂದು ಹೋಟೆಲ್ಲು, ರಿಸಾರ್ಟು ಅಂತ ನೂರೆಂಟು ಚಾಯ್ಸ್ ಇರುವಾಗ ಬೆಂಕಿ ಪೊಟ್ಟಣದಂತ ಬೆಡ್ರೂಮುಗಳಿರೊ ಗುಬ್ಬಣ್ಣನ ಮನೇನೇ ಯಾಕೆ ಬೇಕಿತ್ತೊ ? ಆದರೆ ಸಿಂಗಪುರದ ಹೋಟೆಲು, ರೆಸಾರ್ಟ್ ರೇಟು ಗೊತ್ತಿರುವ ಬುದ್ದಿವಂತರಾರು ಸ್ವಂತದ ಖರ್ಚಿನಲ್ಲಿ ಬಂದು ಅಲ್ಲಿ ತಂಗುವ ತಪ್ಪು ಮಾಡುವುದಿಲ್ಲ – ಬಿಜಿನೆಸ್ ಟ್ರಿಪ್ಪುಗಳ ಅಥವಾ ಪ್ಯಾಕೇಜು ಟ್ರಿಪ್ಪುಗಳ ಹೊರತಾಗಿ ಅನ್ನೋದು ಮತ್ತೊಂದು ಓಪನ್ ಸೀಕ್ರೇಟ್…

‘ ಅಕ್ಕ ಭಾವ ಇದ್ದಾರೆ, ಹೋಟೆಲ್ಲು ಗೀಟೆಲ್ಲು ಅಂತ ಹೋದರೆ ತಪ್ಪು ತಿಳ್ಕೋತಾರೆ ಅಂತ ನೇರ ಮನೆಗೆ ಬಂದಿರ್ತಾರೆ ಗುಬ್ಬಣ್ಣ..’ ನಾನು ಸಮಾಧಾನಿಸುವ ದನಿಯಲ್ಲಿ ನುಡಿದೆ.

‘ ಅಷ್ಟು ಬೇಕಿದ್ದರೆ ಮಧ್ಯೆ ಬಂದು ಹೋಗಬಹುದಿತ್ತು ಬಿಡಿ ಸಾರ್.. ಹೊಸದಾಗಿ ಹನಿಮೂನಿಗೆ ಬಂದಿರೊ ಜೋಡಿ ಅಂತ ಅವರಿಗೆ ನಮ್ಮ ಮಾಸ್ಟರ್ ಬೆಡ್ರೂಮ್ ಬಿಟ್ಟುಕೊಟ್ಟು , ನಾವು ಮೂರು ಜನ ಇಲಿಬಿಲದ ಹಾಗಿರೊ ರೂಮಿನಲ್ಲಿ ಒಂದು ವಾರ ತಿಣಕಾಡಿದ್ದೀವಿ…’

‘ಹೋಗಲಿ ಬಿಡೊ ಗುಬ್ಬಣ್ಣ, ಜನ್ಮಕ್ಕೊಂದು ಹನಿಮೂನು.. ಪದೇಪದೇ ಬರ್ತಾರ? ಆದರೆ ನನಗೆ ಇನ್ನೂ ಶಾಪಿಂಗಿಗು ಇದಕ್ಕು ಇರೊ ಕನೆಕ್ಷನ್ ಗೊತ್ತಾಗಲಿಲ್ಲ…?’

‘ಈಗಿನ ಕಾಲದ ಹುಡುಗರು ನಮ್ಮ ಹಾಗಲ್ಲ ಸಾರ್.. ಆ ಹುಡುಗ ಇದ್ದ ಒಂದು ವಾರವು ಪ್ರತಿದಿನ ಹೆಂಡತಿ ಜೊತೆ ಶಾಪಿಂಗಿಗೆ ಹೋಗುವುದೇನು? ಕಣ್ಣಿಗೆ ಕಂಡಿದ್ದೆಲ್ಲ ಕೊಡಿಸಿದ್ದೇನು? ದಿನವೂ ಅವಳ ಹಿಂದೆ ಶಾಪಿಂಗ್ ಬ್ಯಾಗುಗಳನ್ನು ಹೊತ್ತುಕೊಂಡು ವಿಧೇಯತೆ ಪ್ರದರ್ಶಿಸಿದ್ದೇನು ? ಸಾಲದ್ದಕ್ಕೆ ತಂದಿದ್ದರಲಿ ಒಂದು ಬ್ಯಾಗು ನನ್ನ ಹೆಂಡತಿ ಮಗಳಿಗೆ ಬೇರೆ…..!’ ಎಂದ ಗುಬ್ಬಣ್ಣನ ಉರಿಯುವ ದನಿಯಲ್ಲಿ ಬೀರಿನ ಗ್ಲಾಸಿಗೂ ಮೀರಿದ ಘಾಟು ಹಬೆಯಾಡಿತ್ತು.

ಆದರೆ ವಿಷಯ ಶಾಪಿಂಗಿನ ಸುತ್ತಲೆ ಸುತ್ತುತ್ತಿದೆ ಅನ್ನುವುದರ ಹೊರತಾಗಿ, ನನಗಿನ್ನು ಆ ‘ಮಿಸ್ಸಿಂಗ್ ಲಿಂಕ್’ ಏನು ಎನ್ನುವ ‘ಕ್ಲೂ’ ಸಿಕ್ಕಿರಲೇ ಇಲ್ಲ. ಬಹುಶಃ ಬೋರ್ಡಿಂಗ್, ಲಾಡ್ಜಿಂಗ್ ಲೆಕ್ಕಾಚಾರದ ಬಡ್ಜೆಟ್ಟೆಲ್ಲ ಉಳಿತಾಯವಾದ ಕಾರಣ ಅದೆಲ್ಲವನ್ನು ಶಾಪಿಂಗಿಗೆ ಬಳಸಿಕೊಳ್ಳಬಹುದೆಂಬ ಚಾಣಾಕ್ಷ್ಯ ಯೋಜನೆ ಹಾಕಿಯೆ ಗುಬ್ಬಣ್ಣನ ಮನೆಗೆ ಬಂದು ತಂಗುವ ಪ್ಲಾನ್ ಮಾಡಿರಬೇಕೆಂದು ಮಾತ್ರ ಹೊಳೆದಿತ್ತು !

ಆದರು ಅದರಲ್ಲಿ ಅವನ ಹೆಂಡತಿಯಿಂದ ಪುಟ್ಬಾಲಿನ ಹಾಗೆ ಒದೆಸಿಕೊಳ್ಳುವ ಮಟ್ಟಕ್ಕೆ ಹೋಗುವಂತಹ ಯಾವ ಕನೆಕ್ಷನ್ನೂ ಸುತರಾಂ ಕಾಣಲಿಲ್ಲ – ಹೆಂಗಸರಲ್ಲಿರಬಹುದಾದ ಸಾಮಾನ್ಯ ಈರ್ಷೆಯನ್ನು ಬಿಟ್ಟರೆ. ಅಲ್ಲದೆ ಗುಬ್ಬಣ್ಣನೆ ನಿಯ್ಯತ್ತಿನಿಂದ ಅವಳಿಗೆ ಬೇಕಾದ್ದೆಲ್ಲಾ ಶಾಪಿಂಗ್ ಪ್ರತಿವಾರದ ಕೊನೆಯಲ್ಲೆ ಮಾಡುವುದರಿಂದ ಈರ್ಷೆಗೆ ಕಾರಣವೂ ಕಾಣಲಿಲ್ಲ.. ಗುಬ್ಬಣ್ಣನೆ ದಿನಸಿ ತರಕಾರಿ ತರುವ ಗಿರಾಕಿಯಾದರು ಯಾಕಷ್ಟು ರುದ್ರರೂಪ ತಾಳುವಂತಾಯ್ತು ? ಎಂದು ತಲೆ ಕೆರೆದುಕೊಳ್ಳುತ್ತಲೆ ಗುಬ್ಬಣ್ಣನ ಹೆಚ್ಚಿನ ವಿವರಣೆಗೆ ಕಾಯತೊಡಗಿದೆ..

‘ ಸಾಲದ್ದಕ್ಕೆ ಪ್ರತಿದಿನವೂ ಅವನದೆ ದಿನಸಿ, ತರಕಾರಿ ತಂದುಕೊಡುವ ಜಟಾಪಟಿ ಬೇರೆ.. ಅವನೇ ಹೋಗಿ ಬೇಕಾದ್ದು ತಂದರೆ, ಬೇಕಾದ ಅಡಿಗೆ ಮಾಡಿಸಿಕೊಂಡು ತಿನ್ನಬಹುದಲ್ಲಾ ಅನ್ನೊ ಐಡಿಯಾ ಅವರದು.. ಅದೆಲ್ಲ ನಮ್ಮವಳಿಗೆಲ್ಲಿ ಗೊತ್ತಾಗಬೇಕು ? ಏನು ಅವರನ್ನು ಹೊಗಳಿದ್ದೆ ಹೊಗಳಿದ್ದು…’ ಅವನೊಡಲಿನ ಕೋಪ ಈಗ ಕಿವಿಯ ಮೂಲಕವೂ ಹೊಗೆಯಾಗಿ ಧುಮುಗುಟ್ಟಿ ಧುಮುಕುವಷ್ಟು ಪ್ರಖರವಾಗಿತ್ತು. ನನಗೂ ಆ ಪಾಯಿಂಟ್ ಅರ್ಥವಾಗಲಿಲ್ಲ..

‘ ಅದರಲ್ಲಿ ಹೋಗಳೋದೇನೊ ಗುಬ್ಬಣ್ಣ ? ಮನೆ ಜವಾನನಿಗಿಂತ ಹೆಚ್ಚಾಗಿ ನೀನು ನಿಯ್ಯತ್ತಿನಿಂದ ಆ ಕೆಲ್ಸ ಮಾಡ್ತಾ ಇದೀಯಲ್ಲೊ ….’

‘ ಅಲ್ಲೆ ಸಾರ್ ಬಂದಿದ್ದು ಎಡವಟ್ಟು… ಮಾಡೋದೇನೊ ನಾನೆ ಆದ್ರೂ, ‘ಅವರನ್ನ ನೋಡಿ ಕಲ್ತುಕೊಳ್ಳಿ, ಎಷ್ಟು ಅಚ್ಚುಕಟ್ಟಾಗಿ ಮಾಡ್ತಾರೆ’ ಎಂದು ಚೆನ್ನಾಗಿ ಹಂಗಿಸಿಬಿಟ್ಟಳು..’

‘ಅದೇಕೊ..?’

‘ಸಾರ್.. ತರೋನು ನಾನೆ ಆದ್ರೂ, ನಿಮಗೆ ನನ್ನ ತರಕಾರಿ, ದಿನಸಿ ಜ್ಞಾನ ಗೊತ್ತೆ ಇದೆ.. ಅಕ್ಕಿ, ಬೇಳೆ, ಕ್ಯಾರೆಟ್, ಟಮೊಟೊ, ಆಲೂಗಡ್ಡೆ, ಈರುಳ್ಳಿ ತರದ ಮಾಮೂಲಿ ಐಟಂ ಬಿಟ್ಟರೆ ಮಿಕ್ಕಿದ್ದೆಲ್ಲಾದರ ಜ್ಞಾನ ಅಷ್ಟಕಷ್ಟೆ…’

ಅದರಲ್ಲಿ ನನ್ನ ಜ್ಞಾನವೇನು ಅವನಿಗಿಂತ ಹೆಚ್ಚಿಗಿರಲಿಲ್ಲ. ಲಿಟಲ್ ಇಂಡಿಯಾದಲ್ಲಿನ ವಾಸ ಅಂತಹ ತೊಂದರೆಯಿಂದ ಪಾರು ಮಾಡಿತ್ತು – ಒಂದಲ್ಲದಿದ್ದರೆ ನಾಲ್ಕು ಸಾರಿ ಹೋಗಿ ಬರುವ ಅನುಕೂಲವಿದ್ದುದರಿಂದ.

‘ ಅದು ಗಂಡಸರ ಮಾಮೂಲಿ ವೀಕ್ನೆಸ್ ಅಲ್ಲವೇನೊ ಗುಬ್ಬಣ್ಣ..? ಅದರಲ್ಲಿ ಹಂಗಿಸೋದೇನು ಬಂತೊ ?’

‘ ಅದೇ ಸಾರ್ ಅವನು ಮಾಡಿದ ಎಡವಟ್ಟು.. ಅವನೇನು ಗಂಡು ಜಾತಿಯೊ, ಹೆಣ್ಣು ಜಾತಿಯೊ ಗೊತ್ತಿಲ್ಲಾ.. ಆದರೆ ಅಡಿಗೆಮನೆ ಎಲ್ಲಾ ವಿಷಯಾನು ಪಕ್ಕಾ ತಿಳ್ಕೊಂಡ್ಬಿಟ್ಟಿದಾನೆ.. ನಾನ್ಯಾವತ್ತೊ ಜೀರಿಗೆ ಬದಲು ‘ಸೋಂಪನ್ನ’ ತಂದಿದ್ದನ್ನು ನೆನೆಸಿ ಅಣಕಿಸಿಬಿಟ್ಟಳು ಅವ್ರ ಮುಂದೇನೆ..’

‘ ಈಗಿನ ಸ್ಕೂಲ್ ನಮ್ಮ ಹಾಗಲ್ಲ ಗುಬ್ಬಣ್ಣ.. ಹೋಮ್ ಸೈನ್ಸ್ ಅದೂ-ಇದೂ ಅಂತ ಇವೆಲ್ಲಾ ವಿಷಯಾನು ಪಾಠದಲ್ಲೆ ಹೇಳಿಕೊಟ್ಟಿರ್ತಾರೆ.. ಅದೇನು ರಾಕೆಟ್ ಸೈನ್ಸ್ ಅಲ್ಲ… ಆದ್ರೆ ನೀನು ಗೂಗಲ್ ಮಾಡಿ ನೋಡೋದಲ್ವ ಮೊಬೈಲಲ್ಲೆ – ಜೀರಿಗೆ, ಸೋಂಪು ಹೇಗಿರುತ್ತೆ ಅಂತ ? ಅದಕ್ಕೂ ಬೈಸ್ಕೊಳ್ಳೊದ್ಯಾಕಪ್ಪಾ ?’ ಎಂದೆ.

ಗುಬ್ಬಣ್ಣ ನನ್ನ ಮುಖವನ್ನೆ ಮಿಕಿಮಿಕಿ ನೋಡಿದ ಗ್ಲಾಸಿನ ಬೀರು ಚಪ್ಪರಿಸುತ್ತ… ನಂತರ ‘ಜೀರಿಗೆಗೆ ಇಂಗ್ಲೀಷಲ್ಲಿ ಏನಂತಾರೆ..?’ ಎಂದ.

ಅಲ್ಲಿಗೆ ಅವನ ಪ್ರಶ್ನೆ ಮತ್ತು ಕಷ್ಟ ಎರಡೂ ಅರ್ಥವಾಯ್ತು. ಗೂಗಲ್ಲಿನಲ್ಲಿ ಇಂಗ್ಲೀಷಿನಲ್ಲಿದ್ದರೆ ಹುಡುಕುವುದು ಸುಲಭ.. ಕನ್ನಡದಲ್ಲಿ ಹುಡುಕೋದು, ಪೋಟೊ ತೆಗೆದು ಮ್ಯಾಚ್ ಮಾಡಿ ನೋಡೋದು ಇವೆಲ್ಲ ಗುಬ್ಬಣ್ಣನ ಜಾಯಮಾನಕ್ಕೆ ಒಗ್ಗದ ವಿಷಯಗಳು.

‘ ಮೆಣಸಿಗೆ ಪೆಪ್ಪರು, ಏಲಕ್ಕಿಗೆ ಕಾರ್ಡಮಮ್ ಅಂತ ಪ್ರತಿಯೊಂದಕ್ಕು ಇಂಗ್ಲಿಷಿನ ಹೆಸರೆ ಹುಡುಕಬೇಕು ಸಾರ್.. ಕೆಲವು ಅಂಗಡಿಗಳಲ್ಲಿ ಆ ಲೇಬಲ್ಲೂ ಇರಲ್ಲ. ಮೆಂತ್ಯ, ಧನಿಯಾ, ಪುದೀನಾ, ಪಾಲಕ್ ಅಂತ ಲಿಸ್ಟ್ ಹಾಕಿಕೊಟ್ಟುಬಿಟ್ಟರೆ ಅವಳ ಕೆಲಸ ಮುಗಿದು ಹೋಯ್ತು…. ಆ ಶಾಪುಗಳಲ್ಲಿ ಹೋಗಿ ನಾನು ಪಡುವ ಕಷ್ಟ ದೇವರಿಗೆ ಗೊತ್ತು…’

ನನಗೂ ಅದರ ಕಷ್ಟ ಗೊತ್ತಿದ್ದ ಕಾರಣ ನಾನು ತಲೆಯಾಡಿಸಿದೆ. ಮೊನ್ನೆಮೊನ್ನೆಯವರೆಗೆ ಮಾಮೂಲಿ ಏಲಕ್ಕಿ ಮಾತ್ರ ಗೊತ್ತಿದ್ದ ನನಗೆ ಯಾರೊ ಬಂದವರು ‘ಬ್ಲಾಕ್ ಏಲಕ್ಕಿ’ ಕೊಡಿಸಿ ಎಂದು ಕೇಳಿದಾಗ ಪೆದ್ದುಪೆದ್ದಾಗಿ ಏಲಕ್ಕಿ ಒಳಗೆಲ್ಲ ಕಪ್ಪಾಗೆ ಇರೋದು, ಸಿಪ್ಪೆ ಮಾತ್ರ ಬ್ರೈಟ್ ಕಲರ್ ಎಂದು ಹೇಳಿ ಅದನ್ನೆ ಕೊಡಿಸಿದ್ದೆ. ಆಮೇಲೆ ಅನುಮಾನ ಬಂದು ಗೂಗಲಿಸಿದರೆ ಕಪ್ಪು ಏಲಕ್ಕಿ ಅಂತ ಬೇರೆ ಜಾತಿಯೆ ಇದೆಯೆಂದು ಗೊತ್ತಾಗಿತ್ತು! ಇಟ್ ಆಲ್ ಹ್ಯಾಪೆನ್ಸ್ ; ದೈ ನೇಮ್ ಆಫ್ ದ ಗೇಮ್ ಇಸ್ ‘ ಶಾಪಿಂಗ್’…!

‘ಅದೇನೇ ಆದ್ರೂ ಅಷ್ಟಕ್ಕೆಲ್ಲ ಪುಟ್ಬಾಲ್, ಬ್ಯಾಸ್ಕೆಟ್ಬಾಲ್, ಗೋಳಿಬಾರ್ ಮಟ್ಟಕ್ಕೆ ಹೋಗ್ಬಾರದೊ ಗುಬ್ಬಣ್ಣ.. ಐ ಪಿಟಿ ಯೂ’ ಎಂದೆ ಮತ್ತೆ ಮೂಲಚರ್ಚೆಯತ್ತ ವಾಪಸ್ಸು ವಿಷಯಾಂತರಿಸುತ್ತ.

‘ಛೆ..ಛೆ.. ಅಷ್ಟಕ್ಕೆಲ್ಲ ಇಷ್ಟೊಂದು ರಾದ್ದಾಂತ ನಡೆಯೊಲ್ಲ ಬಿಡಿ ಸಾರ್.. ಎಲ್ಲಾ ಶುರುವಾಗಿದ್ದರ ಹಿನ್ನಲೆ ಹೇಳಿದೆ ಅಷ್ಟೆ.. ಅವರಿರೊತನಕ ಬರಿ ಗೊಣಗಾಟ ಮಾತ್ರ ಇತ್ತು… ಆ ಒಂದು ವಾರದಲ್ಲಿ ಅಕ್ಕತಂಗಿ ಅದೇನೇನು ಮಾತಾಡ್ಕೊಂಡ್ರೊ – ಅವ್ರು ಹೋದ ಮೇಲೂ ಒಂದೆ ವರಾತ ಹಚ್ಚಿಕೊಂಡು ಬಿಟ್ಟಿದ್ಲು…ನನಗೇನು ಗೊತ್ತಾಗೊಲ್ಲ, ಶುದ್ಧ ಪೆದ್ದು.. ನೆಟ್ಟಗೆ ಒಂದು ಶಾಪಿಂಗ್ ಮಾಡೋಕು ಬರೋಲ್ಲ.. ಒಂದು ಸಾರಿನೂ ಶಾಪಿಂಗ್ ಅಂತ ಕರಕೊಂಡು ಹೋಗಿ ಏನಾದರೂ ಕೊಡಿಸಿದ್ದೇ ಇಲ್ಲಾ.. ನನ್ನ ತಂಗಿ ಗಂಡನೆ ವಾಸಿ – ಬಟ್ಟೆಬರೆ, ಒಡವೆ, ಮೇಕಪ್ಪು, ಕಾಸ್ಮೇಟಿಕ್ಸ್ ನಿಂದ ಹಿಡಿದು ದಿನಸಿ, ತರಕಾರಿವರೆಗು ಎಲ್ಲಾದಕ್ಕು ಸೈ.. ಅಂತಹ ಗಂಡು ಸಿಕ್ಕಬೇಕಂದ್ರೆ ಪುಣ್ಯ ಮಾಡಿರ್ಬೇಕು.. ಹಾಳು ಜನ್ಮದ ಪಾಪ.. ಸಿಂಗಾಪುರದಲ್ಲಿದ್ದು ಹಳ್ಳಿಮುಕ್ಕಳ ಹಾಗೆ ಬದುಕಬೇಕು… ಹಾಗೆ ಹೀಗೆ ಅಂತ ನಿಂತಲ್ಲಿ ಕೂತಲ್ಲಿ ಬೆಂಡೆತ್ತೋಕೆ ಹಚ್ಕೊಂಡ್ಬಿಟ್ಟಳು ಸಾರ್..’

ನನಗೆ ಸೂಕ್ಷ್ಮವಾಗಿ ವಿಷಯದ ವಾಸನೆ ಹತ್ತತೊಡಗಿತು… ತಂಗಿಯ ಸಂಸಾರ ನೋಡಿ ಗುಬ್ಬಣ್ಣನ ಕುಟುಂಬಕ್ಕೆ ಒಂದು ರೀತಿ ‘ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ‘ ಹತ್ತಿಕೊಂಡುಬಿಟ್ಟಿರಬೇಕು.. ‘ಇಂಡಿಯಾದಿಂದ ಬಂದ ಅವರ ಮುಂದೆ ತಾನೆ ಹಳ್ಳಿ ಗುಗ್ಗುವಿನಂತೆ ಕಾಣುತ್ತೇನಲ್ಲ – ಅದೂ ಸಿಂಗಪುರದಂತಹ ಪರದೇಶದಲಿದ್ದುಕೊಂಡೂ’ ಎನಿಸಿ ಕೀಳರಿಮೆಯಲ್ಲಿ ಸೊರಗಿಹೋಗಿರಬೇಕು.. ಅದಕ್ಕೆ ಇಷ್ಟೊಂದು ‘ಹಿಸ್ಟರಿಕ್’ ರಿಯಾಕ್ಷನ್ ಅಂದುಕೊಂಡೆ ಮನಸಿನಲ್ಲೆ.

‘ ಹೆಂಗಸರ ಸೂಕ್ಷ್ಮಮನಸು ಗಂಡಸರಿಗೆ ಅರ್ಥವಾಗೋದು ಕಷ್ಟ ಗುಬ್ಬಣ್ಣ… ನೀನು ಒಂದೆರಡು ಸಾರಿ ಶಾಪಿಂಗು ಅಲ್ಲಿ ಇಲ್ಲಿ ಅಂತ ಸುತ್ತಾಡಿಸಿ, ಆ ಆಸೆ ತೀರಿಸಿಬಿಡೋದಲ್ವ ? ಒಂದು ಸಾರಿ ಆ ‘ಅಹಂ’ಗೆ ತೃಪ್ತಿಯಾಗಿಬಿಟ್ಟರೆ ಆಮೇಲೆ ಎಲ್ಲಾ ತಾನಾಗೆ ಒರಿಜಿನಲ್ ಸ್ಥಿತಿಗೆ ವಾಪಸ್ಸು ಬರೋದು ಸುಲಭ..’. ಎಂದೆ ಭಾರಿ ಅನುಭವಸ್ಥನ ಪೋಜಿನಲ್ಲಿ. ಪಕ್ಕದಲ್ಲಿ ನಮ್ಮ ಶ್ರೀಮತಿಯಿರದಿದ್ದಾಗ ಪರರ ಶ್ರೀಮತಿಯರ ಮನಸ್ಥಿತಿಯ ಬಗ್ಗೆ ಮಾತಾಡುವುದು ತುಂಬಾ ಆರಾಮದ ಕೆಲಸ… ನಮ್ಮ ಹುಳುಕನ್ನು ಹೊರಬಿಡಲು ಅಲ್ಲಿ ಯಾರು ಇರುವುದಿಲ್ಲ ಅನ್ನುವ ಧೈರ್ಯ !

‘ ನಾನೂ ಹಾಗನ್ಕೊಂಡೆ, ಥೇಟ್ ನಿಮ್ಮ ಹಾಗೇ ಯೋಚಿಸಿ ಏಮಾರಿದ್ದು ಸಾರ್.. ಆಗಿದ್ದಾಗಲಿ ಅಂತ ಒಂದೆರಡು ದಿನ ರಜೆ ಹಾಕಿ ಸಿಂಗಪುರದ ಶಾಪಿಂಗ್ ಮಾಲೆಲ್ಲ ಸುತ್ತಿಸಿಬಿಟ್ಟೆ ಸಾರ್.. ಅಡ್ವಾನ್ಸ್ ದೀಪಾವಳಿ ಅಂದುಕೊಂಡು ಬೇಕೂಂದಿದ್ದೆಲ್ಲ ಕೊಡಿಸುತ್ತ…’

‘ ಅಷ್ಟಾದ ಮೇಲೆ ಇನ್ನೇನಂತೆ ಪ್ರಾಬ್ಲಮ್..?’

‘ ಸಾರ್.. ಶಾಪಿಂಗ್ ಏನೊ ಮಾಡೋಕ್ ಹೊರಟರು ಹೇಗೆ ಮಾಡ್ಬೇಕು ಅಂತ ಗೊತ್ತಿರಬೇಕಲ್ವ ? ಶಾಪಿಂಗು, ಬಾರ್ಗೈನಿಂಗ್ ಎಲ್ಲಾನೂ ಆರ್ಟು ಸಾರ್ ಆರ್ಟೂ’

ಗುಬ್ಬಣ್ಣನ, ನನ್ನ ದಿನಸಿ-ತರಕಾರಿ ಜ್ಞಾನ ನೋಡಿದರೆ ಅದು ‘ಆರ್ಟೂ’ ಅನ್ನೋದರಲ್ಲಿ ಯಾವ ಸಂದೇಹವೂ ಇರಲಿಲ್ಲ.. ಆರ್ಟನ್ನ ತಿಳಿಯೊ ಸೈನ್ಸೂ ಕೂಡ ನಮಗಿರಲಿಲ್ಲ ಅನ್ನೋದು ಬೇರೆ ವಿಷಯ..!

‘ಅಂದರೆ..?’

‘ ಸಾರ್ ಅವಳ ತಂಗಿ ಸ್ವಲ್ಪ ಈಗಿನ ಕಾಲದೋಳು.. ನಮ್ಮವಳು ಅದರಲೆಲ್ಲ ಸ್ವಲ್ಪ ಔಟ್ ಡೇಟೆಡ್.. ನಿಜ ಹೇಳ್ಬೇಕೂಂದ್ರೆ ಅದರಲ್ಲೆಲ್ಲಾ ಇಂಟ್ರೆಸ್ಟೂ ಇರ್ಬೇಕಲ್ವಾ ..? ಶಾಪಿಂಗ್ ಹೊರಟರೆ ಮೊದಲು ಏನು ಬೇಕು ಅಂತ ಗೊತ್ತಿರ್ಬೇಕಲ್ವಾ ? ಅದೇ ಇಲ್ಲ! ನನ್ನನ್ನೆ, ಏನು ಕೊಡಿಸುತ್ತೀರಾ ಕೊಡಿಸಿ ಅಂತ ಕೇಳೋದೆ?’

‘ಅಲ್ಲಿಗೆ ಕೆಲಸ ಇನ್ನು ಸುಲಭ ಆಗ್ಲಿಲ್ವಾ ?’

‘ ಎಲ್ ಬಂತು ತಗೋಳ್ಳಿ ಸಾರ್… ಅವಳ ಮಾತಿನರ್ಥ – ತಂಗಿ ಗಂಡ ಹೇಗೆ ಎಲ್ಲಾ ತಿಳ್ಕೊಂಡು ತಾನೆ ಕೊಡಿಸ್ತಾನೊ, ಹಾಗೆ ನೀವೂ ಕೊಡಿಸಿ ಅಂತ.. ನಾವೆಲ್ಲ ಸೀರೆ, ರವಿಕೆ, ಬಳೆ, ಗೆಜ್ಜೆ ಜಮಾನದವರು… ಆ ಕಾಸ್ಮೆಟಿಕ್, ಮೇಕಪ್ ಶಾಪಿನಲ್ಲಿ ನಮಗೇನು ಗೊತ್ತಿರುತ್ತೆ ಸಾರ್..? ‘ ತಾನೂ ಕೂಡ ಔಟ್ ಡೇಟೆಡ್ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತ ನುಡಿದ ಗುಬ್ಬಣ್ಣ. ಆ ಲೆಕ್ಕದಲ್ಲಿ ನಾನು ‘ಡಬ್ಬಲ್ ಔಟ್ ಡೇಟೆಡ್’ ಅನ್ನೋದು ಇನ್ನೊಂದು ಟಾಪ್ ಸಿಕ್ರೇಟ್ಟು …!

‘ ಅದಕ್ಯಾವ ಜ್ಞಾನ ಬೇಕೊ ಗುಬ್ಬಣ್ಣ..? ಶಾಪಿನಲ್ಲೆ ಹೋಗಿ ಲಿಪ್ ಸ್ಟಿಕ್ಕು, ಮಸ್ಕಾರ ತೋರ್ಸಿ ಅನ್ನೋದ್ ತಾನೆ..?’

‘ ನನಗೆ ಬಾಸಿಗೆ, ಹೆಂಡತಿಗೆ, ಕಸ್ಟಮರುಗಳಿಗೆ ಮಸ್ಕಾ-“ನ’ಮಸ್ಕಾ’ರ” ಹೊಡೆದು ಗೊತ್ತೆ ಹೊರತು, ಈ ಮಸ್ಕಾರ ಎಲ್ಲಾ ಹೇಗೆ ಗೊತ್ತಾಗುತ್ತೆ ಹೇಳಿ ಸಾರ್.. ? ಹಾಳಾಗಲಿ ಅಂತ ನೀವು ಹೇಳಿದಂಗೆ ಮಾಡಿದರೆ, ನಮ್ಮ ಮನೆಯವಳು ಸುಮ್ಮನಿರದೆ ‘ಇಲ್ಲಾ ನೀವೆ ಸೆಲೆಕ್ಟ್ ಮಾಡಿ’ ಅಂತ ಕೇಳೋದೆ ?’

ಅಲ್ಲಿಗೆ ಗುಬ್ಬಣ್ಣನ ಶಾಪಿಂಗ್ ಪರಿಜ್ಞಾನ ಎಷ್ಟಿದೆಯೋ ನೋಡಿಯೆಬಿಡಬೇಕೆಂದು ಹಠ ತೊಟ್ಟಿಯೆ ಹೊರಟಿರಬೇಕು… ಗುಬ್ಬಣ್ಣ ಗೋಲಾಕಾರದ ಹೊಟ್ಟೆ ಹೊತ್ತುಕೊಂಡು ಲಿಪ್ಸ್ಟಿಕ್ಕು, ಮಸ್ಕಾರ, ಪೌಡರು, ಫೇಶಿಯಲ್ ಅಂತ ಪರದಾಟದ ವ್ಯಾಪಾರ ನಡೆಸುವ ದೃಶ್ಯ ಕಣ್ಣಿಗೆ ಬಂದಂತಾಗಿ ಫಕ್ಕನೆ ನಗುಬಂತು… ‘ ಗೊತ್ತಾಯ್ತು ಬಿಡೊ ಗುಬ್ಬಣ್ಣ… ಅದರಲ್ಲರ್ಧಕ್ಕರ್ಧ ಹೆಸರುಗಳೂ ಗೊತ್ತಿರೊಲ್ಲ ನಿನಗೆ.. ಇನ್ನು ಯಾವುದಕ್ಕೆ ಯಾವುದು ತೊಗೊಬೇಕು, ಏನು ತೊಗೊಬೇಕು ಅನ್ನೋದು ಜೀರಿಗೆ-ಸೋಂಪಿನ ವ್ಯವಹಾರವಿದ್ದ ಹಾಗೆಯೆ..ಇದು ಬಿಲ್ಕುಲ್ ಬಾವಿಗೆ ತಳ್ಳಿ ಆಳ ನೋಡೊ ಕುತಂತ್ರ..’ ಎಂದೆ ನಗುವನ್ನು ಒಳಗೊಳಗೆ ತಡೆಯುತ್ತ..

‘ ನಾನು ಅದೇ ಲೈನು ಹಿಡಿದು ಆರ್ಗ್ಯುಮೆಂಟಿಗೆ ಹೋದೆ ಸಾರ್… ಅದೆಲ್ಲಾ ನನಗೆಲ್ಲಿ ಗೊತ್ತಿರುತ್ತೆ ? ಅಂತ. ಅದಕ್ಕು ಅವಳ ಪ್ರತ್ಯಸ್ತ್ರ ಸಿದ್ದವಾಗಿತ್ತು ಸಾರ್… ಮೊದಲಿಗೆಲ್ಲ ಬರಿ ಹೆಂಗಸರ ಬ್ಯೂಟಿ ಪಾರ್ಲರುಗಳು ಇದ್ದ ಹಾಗೆ ಈಗ ಗಂಡಸರ ಪಾರ್ಲರುಗಳು ಇದೆಯಂತಲ್ಲ.. ? ನಾನು ಅಲ್ಲೆಲ್ಲಾ ಹೋಗಿ-ಬಂದು ಮಾಡಿದ್ದರೆ ನನಗೂ ಅದೆಲ್ಲ ಗೊತ್ತಿರುತ್ತಿತ್ತು ಅಂತ ನನ್ನೆ ಮೂದಲಿಸಿಬಿಟ್ಟಳು..!’

‘ ಅದನ್ನೂ ನಿನ್ನ ಕೋ-ಬ್ರದರೆ ಹೇಳಿರಬೇಕು..?’ ಎಂದೆ. ಹೌದೆನ್ನುವಂತೆ ತಲೆಯಾಡಿಸಿದ ಗುಬ್ಬಣ್ಣ. ನಾನು ಕೂದಲು ಕತ್ತರಿಸಲಷ್ಟೆ ಕ್ಷೌರಿಕನ ಅಂಗಡಿಗೆ ಹೋಗಿ ಬರುತ್ತಿದ್ದೇನೆ ಹೊರತು ಯಾವತ್ತೂ ಈ ‘ಮೆಟ್ರೊಸೆಕ್ಸುವಲ್’ ಪಾರ್ಲರಿನತ್ತ ತಲೆ ಹಾಕಿದವನಲ್ಲ. ಹೀಗಾಗಿ ಅದರ ಬಗೆ ನನಗಿದ್ದ ಪರಿಜ್ಞಾನವೂ ಗುಬ್ಬಣ್ಣನಿಗಿದ್ದಷ್ಟೆ. ಆದರೂ ಆ ವಿಷಯದಲ್ಲಿ ಗುಬ್ಬಣ್ಣನನ್ನು ಜಾಡಿಸಿದ್ದು ಬಹಳ ‘ಅನ್ ಫೇರ್’ ಅನಿಸಿತು; ಅದೂ ಅವನ ತಲೆಯಲ್ಲಿ ಕೂದಲೆ ಇಲ್ಲದ ಸ್ಥಿತಿ ಒಂದು ಕಾರಣವಾದರೆ, ಯಾವ ಮೇಕಪ್ಪೂ ಬೇಡದ ಅನ್ ಫೇಡಿಂಗ್, ಒರಿಜಿನಲ್, ಗ್ಯಾರಂಟೀಡ್ ಕಲರ್ – ಅಪ್ಪಟ ಕಪ್ಪು ಬಂಗಾರದ ಮೈಬಣ್ಣ ಮತ್ತೊಂದು ಕಾರಣ…!

‘ಕೊನೆಗೆ ಹೇಗೆ ನಡೆಯಿತು ಶಾಪಿಂಗು ?’

‘ ಹೇಗೇನು ಬಂತು…? ಹಿಂದೆ ಮುಂದೆ ಗೊತ್ತಿರದ ವಸ್ತು ಖರೀದಿ ಮಾಡಬೇಕಾದ್ರೆ, ಹೇಗೆ ಮಾಡ್ತೀವೊ ಹಾಗೆ..’

‘ ಅಂದ್ರೆ..?’

‘ ಈಗ ನೀವು ಟೀವಿನೊ, ಫ್ರಿಡ್ಜೊ ಕೊಳ್ಳೊದಿದ್ರೆ ಏನು ಮಾಡ್ತೀರಾ ಸಾರ್ ?’

‘ಒಂದೆರಡು ಶೋ ರೂಮಲ್ಲಿ ಸುತ್ತುತ್ತೀವಿ, ಎಲ್ಲಿ ಕಡಿಮೆ ರೇಟಿದೆ, ಡಿಸ್ಕೌಂಟಿದೆ ಅಂತ…’

‘ಕರೆಕ್ಟ್… ನಮ್ಮೆಜಮಾನತಿಯೂ ಅದೇ ಅಪ್ಪಣೆ ಕೊಡಿಸಿದ್ದು ಸಾರ್.. ಈ ಐಟಂಮುಗಳ ಬಗ್ಗೆ ನಮಗೇನು ಗೊತ್ತಿಲ್ಲ.. ಮೊದಲು ನಾಲ್ಕೈದು ಅಂಗಡೀಲಿ ವಿಚಾರಿಸಿ ನೋಡೋಣ ಅಂತ…’

‘ ಅಯ್ಯೊ ಗುಬ್ಬಣ್ಣ ಇವೆಲ್ಲಾ ಬ್ರಾಂಡೆಡ್ ಐಟಮ್ಮುಗಳಲ್ಲವೇನೊ ? ಒಂದು ಅಂಗಡೀಲಿ ಮಾರೊ ಬ್ರಾಂಡು ಇನ್ನೊಂದು ಅಂಗಡೀಲಿ ಸಿಗೊಲ್ವಲ್ಲೊ ? ಸಿಕ್ಕಿದರು ಬೆಲೆ ಒಂದೆ ಇರುತ್ತೆ ಸ್ಟಾಂಡರ್ಡು..’

‘ ಅದನ್ನೆಲ್ಲ ಹೆಂಗಸರಿಗೆ ಹೇಳಿ ಅರ್ಥ ಮಾಡಿಸೋಕೆ ಎಲ್ಲಾಗುತ್ತೆ ಸಾರ್..? ಅದು ಚಿನ್ನ, ಬೆಳ್ಳಿ, ರೇಷ್ಮೆ ಸೀರೆ ಖರೀದಿ ತರ ಅಂದ್ಲು ನಮ್ಮವಳು. ಸದ್ಯ ಈರುಳ್ಳಿ ಬೆಳ್ಳುಳ್ಳಿ ವ್ಯಾಪಾರದ ತರ ಅನ್ನಲಿಲ್ಲ ಪುಣ್ಯಕ್ಕೆ.. ಕೊನೆಗೆ ಆದದ್ದೇನೊ ತರಕಾರಿ ಅಂಗಡಿ ವ್ಯಾಪಾರದ ತರಾನೆ ಬಿಡಿ.. ನಾಯಿ ಸುತ್ತಿದಂಗೆ ಅಂಗಡಿ ಅಂಗಡಿ ಸುತ್ತಿ ಕನ್ ಫ್ಯೂಸ್ ಮಾಡ್ಕೊಂಡಿದ್ದಷ್ಟೆ ಲಾಭ… ಸಾಲದ್ದಕ್ಕೆ ಅದೇನು ಬೆಲೆ ಸಾರ್ ಈ ಚೋಟುದ್ದದ ಐಟಮ್ಮುಗಳಿಗೆ ? ಒಳಗಿರೋದು ನೋಡಿದ್ರೆ ಐದು-ಹತ್ತು ಎಮ್ಮೆಲ್ಲು, ಬೆಲೆ ಮಾತ್ರ ಐವತ್ತು, ನೂರರ ಡಾಲರ್ ಲೆಕ್ಕದಲ್ಲಿ..!’

ಬೆಲೆ ವಿಷಯದಲ್ಲಿ ಗುಬ್ಬಣ್ಣ ಎಷ್ಟೆ ಸೆನ್ಸಿಟೀವ್ ಆದ್ರು, ಮೇಕಪ್ಪು ಐಟಂ ವಿಷಯದಲ್ಲಿ ಅವನು ಏನೂ ಮಾಡಲಾಗದು ಅನಿಸಿತು…’ ಆ ಇಂಡಸ್ಟ್ರಿನೇ ಹಾಗೆ ಕಣೊ ಗುಬ್ಬಣ್ಣ.. ಅದು ಲಾಜಿಕ್ಕಿಗಿಂತ ಹೆಚ್ಚು ಸೆಂಟಿಮೆಂಟಲ್ಲೆ ನಡೆಯೊ ವ್ಯವಹಾರ ಅಲ್ವೆ?’ ಎಂದೆ ಸಮಾಧಾನಿಸುವ ದನಿಯಲ್ಲಿ.

‘ ಅದು ಬಿಡಿ ಹಾಳಾಗಲಿ.. ಒಂದು ಸಾರಿ ಹೆಚ್ಚಾದರು ತೆತ್ತು ಕೊಳ್ಳೋಣ ಅಂದ್ರೆ, ಈ ಹೆಂಗಸರ ಜತೆ ಹೋದಾಗ ಅದೂ ಆಗಲ್ಲ ಸಾರ್.. ಫಿಕ್ಸೆಡ್ ರೇಟು ಅಂಗಡಿಲಿ ಬಾರ್ಗೈನ್ ಮಾಡಬೇಕಂತೆ.. ಇಲ್ಲಾ ಆ ಅಂಗಡಿ ಸರಿಯಿಲ್ಲ, ಇನ್ನೊಂದು ಮಾಲ್ ಕಡೆ ಹೋಗೋಣ ಅಂತ ಅಲೆದಾಡಿ ಅಲೆದಾಡಿ ನನ್ನ ನಾಲ್ಕು ಕೇಜಿ ಕಡಿಮೆಯಾಗೋಯ್ತು ಸಾರ್….’

‘ ಅರೆ ಗುಬ್ಬಣ್ಣ..ಇದು ಹೊಸ ಡೈಮೆನ್ಷನ್ ಅಲ್ವಾ ? ‘ಶಾಪಿಂಗ್ ಸುತ್ತಾಟದಿಂದ ತೂಕ ನಿಭಾವಣೆ’ ಅಂತ ಹೊಸ ಥಿಯರಿನೆ ಶುರು ಮಾಡಿಬಿಡಬಹುದಲ್ಲೊ?’ ಎಂದೆ ನಾನು ಚುಡಾಯಿಸುವ ದನಿಯಲ್ಲಿ.

‘ ಸಾರ್… ಬೇಕಾದ್ರೆ ಕೇಳಿದ್ದಕ್ಕಿಂತ ಎರಡರಷ್ಟು ದುಡ್ಡು ಕೊಟ್ಟುಬಿಡ್ತೀನಿ.. ಆದರೆ ಹೆಂಗಸರ ಜತೆಯಲ್ಲಿ ಶಾಪಿಂಗ್ ಹೋಗೊ ಶಿಕ್ಷೆ ಮಾತ್ರ ನನ್ನ ಶತ್ರುವಿಗೂ ಬೇಡ… ಒಂದು ಕೊಳ್ಳೋಕೆ ಅಂತ ಹೋಗಿ ಅದರಲ್ಲಿ ನೂರೆಂಟು ತರ ಹುಡುಕಿಸಿ, ಕೊನೆಗೆ ಯಾವುದನ್ನೂ ಕೊಳ್ಳದೆ ಮುಂದಿನ ಅಂಗಡಿಗೆ ಹೋಗೊ ಲೆಕ್ಕಾಚಾರದಲ್ಲಿ ಸುಮಾರು ಇಪ್ಪತ್ತು ಅಂಗಡಿ ಸುತ್ತಬೇಕು ಸಾರ್.. ಅದರಲ್ಲಿ ಐದತ್ತು ಸಾರಿ ನೋಡಿದ್ದ ಅಂಗಡಿಗೆ ಮತ್ತೆ ಬಂದು ಹೋಗೋದು ಬೇರೆ….’

ನಾನು ಸಂತಾಪ ಸೂಚಿಸುವವನಂತೆ ಲೊಚಗುಟ್ಟಿದೆ ‘ನಿಜ ನಿಜ’..

‘ ಸಾಲದ್ದಕ್ಕೆ ಪ್ರತಿ ಠಿಕಾಣಿಯಲ್ಲೂ – ‘ನನಗೆ ಯಾವುದು ತೊಗೋಬೇಕೊ ಗೊತ್ತಾಗ್ತಾ ಇಲ್ಲಾರೀ.. ನೀವೆ ಹೇಳ್ರಿ’ ಅಂತ ಪಲ್ಲವಿ ಬೇರೆ… ಹಾಳಾಗ್ಹೋಗ್ಲಿ ಅಂತ ಯಾವುದೊ ಒಂದು ತೋರಿಸಿದ್ರೆ, ‘ಥೂ ಅದು ದರಿದ್ರ ಕಲರ್, ಮಣ್ಣು ಮಸಿ’ ಅಂತೆಲ್ಲ ಹೇಳಿ ಅದನ್ನು ಅಲ್ಲೆ ಹಾಕಿ ಇನ್ನೇನೊ ನೋಡೋದು..’

‘ ಗುಬ್ಬಣ್ಣ ಬೇರೆಯವರಿಗೆ ಏನಾದರು ಕೊಳ್ಳೊ ಸಜೆಶನ್ ಕೊಡುವಾಗ, ನೀನೊಂದು ಸಣ್ಣ ಸೈಕಾಲಜಿ ಉಪಯೋಗಿಸಬೇಕೊ..’

‘ ಹೆಂಗಸರು ಒಪ್ಪೊವಂತ ಸೈಕಾಲಜಿ ಏನು ಸಾರ್ ಅದು ?’

‘ ..ನೀನು ಯಾವತ್ತು ನಿನಗೇನು ಹಿಡಿಸುತ್ತೊ ಅದನ್ನ ಸಜೆಸ್ಟ್ ಮಾಡ್ಬಾರದೊ… ಸೂಕ್ಷ್ಮವಾಗಿ ಅವರನ್ನೆ ಗಮನಿಸ್ತಾ ಅವರಿಗೆ ಯಾವುದು ಇಷ್ಟ ಆಗ್ತಾ ಇದೆ – ಅದರಲ್ಲು ಅವರ ಅರೆಮನಸು ಮಾಡ್ತಿರೊ ಐಟಂ ಮೇಲೆ ಕಣ್ಣು ಹಾಯಿಸ್ತಾ ಇರ್ಬೇಕು… ಸಾಮಾನ್ಯ ಅದನ್ನ ಕೈಯಲ್ಲಿ ಹಿಡ್ಕೊಂಡೊ, ಹತ್ತಿರದಲ್ಲಿ ಎತ್ತಿಟ್ಕೊಂಡೊ, ಕಣ್ಣಲ್ಲಿ ತಿರುತಿರುಗಿ ನೋಡ್ತಾನೊ – ಹೀಗೆ ಏನಾದ್ರೂ ಕ್ಲೂ ಕೊಡ್ತಾನೆ ಇರ್ತಾರೆ… ಆ ಐಟಂ ತೋರಿಸಿ ಎಗ್ಗು ಸಿಗ್ಗಿಲ್ಲದ ಹಾಗೆ ಹಾಡಿ ಹೊಗಳಿಬಿಡಬೇಕು ನೋಡು … ಅವರ ಅರೆಬರೆ ಅನಿಸಿಕೆಗೆ ಬಲ ಬಂದಂತಾಗಿ ಅದನ್ನೆ ತೊಗೊಳ್ಳೊ ಮನಸು ಮಾಡ್ತಾರೆ..’ ನಾನೊಂದು ಪುಟ್ಟ ಲೆಕ್ಚರನ್ನೆ ಕೊಟ್ಟೆ. ಅದು ನಾನೆ ಬಳಸದ ಅಪ್ರೋಚು ; ಪರರಿಗೆ ಪುಕ್ಕಟೆ ಸಲಹೆ ಕೊಡೋದು ಯಾವಾಗಲೂ ಸುಲಭ ..!

‘ ಆ ಹೊತ್ತಲ್ಲಿ ಸದ್ಯ ಏನೊ ಕೊಂಡು ಮುಗಿಸಿ ಹೋದರೆ ಸಾಕಪ್ಪ ಅನಿಸೊ ಪರಿಸ್ಥಿತಿ ಸಾರ್.. ಅವರ ಸೈಕಾಲಜಿ ಇರಲಿ, ನಾನೆ ಯಾರಾದರು ಸೈಕಾಲಜಿಸ್ಟನ್ನ ನೋಡಬೇಕೇನೊ ಅನಿಸಿಬಿಟ್ಟಿತ್ತು..’

‘ ಯಾಕೋ…?’

‘ ಸಾರ್.. ಇವಳು ಹೋದ ಕಡೆಯೆಲ್ಲ ‘ಬೇಡಾ’ ಅಂದಿದ್ದು ಒಂದು ಐಟಮ್ಮು.. ಆದರೆ ಅದೆ ಹೊತ್ತಲ್ಲಿ ಸುತ್ತಮುತ್ತ ಇದ್ದ ಡ್ರೆಸ್ಸು, ಚಪ್ಪಲಿ, ಅದೂ ಇದೂ ಅಂತ ಕಣ್ಣಿಗೆ ಬಿದ್ದಿದ್ದೆಲ್ಲ ‘ತುಂಬಾ ಅಗ್ಗಾರಿ’ ಅಂತ ಕೊಂಡಿದ್ದು, ಕೊಂಡಿದ್ದೆ; ನಾನು ಅವಳ ಹಿಂದೆ ಬ್ಯಾಗಿನ ಮೇಲೆ ಬ್ಯಾಗು ಜೋಡಿಸಿಕೊಂಡು ಓಡಿದ್ದು ಓಡಿದ್ದೆ.. ಕೊನೆಗೆ ಅವಳು ಮೂರು ಸಾರಿ ಟಾಯ್ಲೆಟ್ಟಿಗೆ ಹೋದಾಗಲೂ ಬಾಗಿಲಲ್ಲಿ ಅಬ್ಬೆ ಪಾರಿ ತರ ಬ್ಯಾಗುಗಳ ಸಮೇತ ಪೆಚ್ಚುಪೆಚ್ಚಾಗಿ ನಿಂತಿದ್ದೆ.. ಬಂದು ಹೋಗೊ ಹೆಂಗಸರೆಲ್ಲ ಒಂತರಾ ನೋಡಿ ನಕ್ಕೊಂಡು ಹೋಗೋರು, ಸಾರ್… ಸಾಲದ್ದಕ್ಕೆ ಅಲ್ಲೆ ನಮ್ಮ ಒಬ್ಬ ಕಸ್ಟಮರ್ ಲೇಡಿಯೂ ಬಂದಿರಬೇಕೆ ? ನೋಡಿಯೂ ನೋಡದ ಹಾಗೆ ಮುಖ ತಿರುಗಿಸಿ ನಿಂತುಕೊಳ್ಳೋದ್ರಲ್ಲಿ ಜೀವ ಬಾಯಿಗೆ ಬಂದಿತ್ತು..’

‘ ಸರಿಸರಿ ಬಿಡು ಆದದ್ದೇನೊ ಆಯ್ತು.. ಆದರೆ ಇನ್ನು ಕೊಂಕಣ ಸುತ್ತಿ ಮೈಲಾರಕ್ಕೆ ಬರೋದ್ರಲ್ಲೆ ಇದ್ದೀವಿ.. ಪುಟ್ಬಾಲ್ ಮ್ಯಾಚ್ ಲೈವ್ ಟೆಲಿಕಾಸ್ಟ್ ಯಾಕಾಯ್ತು ಅಂತ ಈಗಲೂ ಗೊತ್ತಾಗ್ಲಿಲ್ಲಾ..’

‘ ಅಲ್ಲಿಗೆ ಬರ್ತಾ ಇದೀನಿ ಸಾರ್.. ಹೀಗೆ ನಾನು ಸುತ್ತಿ ಸುತ್ತಿ ಬೇಸತ್ತು, ಕೊನೆಗೆ ಇದಕ್ಕೊಂದು ಪುಲ್ ಸ್ಟಾಪ್ ಹಾಕ್ಬೇಕಂತ ಒಂದು ಐಡಿಯಾ ಕೊಟ್ಟೆ ಸಾರ್..’

‘ ಏನಂತ..?’

‘ ಈ ಬ್ರಾಂಡೆಡ್ ಶಾಪೆಲ್ಲ ಹೀಗೆ ತುಂಬಾ ರೇಟು ಜಾಸ್ತಿ, ಮೋಸನೂ ಜಾಸ್ತಿ.. ಆದರೆ ಮೋಸ ಅನ್ನೋಕೆ ಆಗದ ರೀತಿ ಅವರ ವ್ಯವಹಾರ ಇರುತ್ತೆ.. ಅದಕ್ಕೆ ಯಾವುದಾದರು ಚಿಕ್ಕಚಿಕ್ಕ ಅಂಗಡಿಗಳಿಗೆ ಹೋಗೋಣ, ಅಲ್ಲಾದ್ರೆ ಬೆಲೆ ಹೋಲಿಸೋದು ಸುಲಭ ‘ ಎಂದೆ.. ನನ್ನ ದುರದೃಷ್ಟಕ್ಕೆ ‘ಸರಿ ಆಗಲಿ’ ಅಂದುಬಿಟ್ಟಳು..’

‘ ಸರಿ ಅಂದದ್ದು ದುರದೃಷ್ಟವೆ?’ ನಾನು ಕೊಂಚ ಅವಕ್ಕಾದ ದನಿಯಲ್ಲೆ ಕೇಳಿದೆ.

‘ ಪೂರ್ತಿ ಕೇಳಿ ಸಾರ್.. ನಿಮಗೆ ಗೊತ್ತಾಗುತ್ತೆ… ‘ಸರಿ ಎಲ್ಲಿಗೆ ಹೋಗೋಣ?’ ಅಂದ್ಲು.. ನನಗೆ ತಟ್ಟನೆ ತೇಕಾ ಮಾರ್ಕೆಟ್ಟಿನಲ್ಲಿರೊ ಸಾಲು ಅಂಗಡಿಗಳಲ್ಲಿ ಒಂದೆರಡು ಕಡೆ ಕಾಸ್ಮೆಟಿಕ್, ಮೇಕಪ್ಪ್ ಐಟಂ ಇಟ್ಟಿರೊ ಮೂರ್ನಾಲ್ಕು ಅಂಗಡಿಗಳಿರೋದು ನೆನಪಾಯ್ತು.. ಅಲ್ಲಿ ಹೋದ್ರೆ ಹಾಗೆ ಲಿಟಲ್ ಇಂಡಿಯಾದಲ್ಲಿ ‘ತುಳಸಿ’ ರೆಸ್ಟೋರೆಂಟಿನಲ್ಲಿ ಊಟವೂ ಆಗುತ್ತೆ ಅಂತ ಪುಸಲಾಯಿಸಿದೆ..’

‘ ಆಹಾ..’

‘ಅವಳಿಗು ಸುತ್ತಿಸುತ್ತಿ ಸುಸ್ತಾಗಿತ್ತೇನೊ? ದೊಡ್ಡ ಮನಸು ಮಾಡಿದವಳ ಹಾಗೆ ಒಪ್ಪಿದಳೂನ್ನಿ… ಅಂತು ಮೊದಲು ಗಡದ್ದು ಊಟ ಮುಗಿಸಿ, ಆ ತೇಕಾ ಹತ್ತರ ಕರೆದೊಯ್ದೆ ಸಾರ್.. ಪುಣ್ಯಕ್ಕೆ ಅಲ್ಲಿ ಒಂದೆ ಕಡೆ ಎಲ್ಲಾ ತರದ ಕಂಪನಿ ಮಾಲು ಇತ್ತು.. ಬೆಲೇ ಹೆಚ್ಚೆ ಅನಿಸಿದ್ರೂ, ನಾವು ಮಾಲಲ್ಲಿ ನೋಡಿದ್ದ ಬೆಲೆಗೆ ಹೋಲಿಸಿದ್ರೆ ಏನೇನು ಅಲ್ಲಾ ಅನಿಸ್ತು..’

‘ ಅಲ್ಲಿಗಿನ್ನೇನು? ಸರ್ವಂ ಶುಭಪ್ರದಂ ಆದಂತಲ್ವಾ?’

‘ಶಾಪಿಂಗಿಗೇನೊ ಅದು ಶುಭಪ್ರದಂ ಆಯ್ತು ಸಾರ್.. ಕಣ್ಣಿಗೆ ಕಂಡಿದ್ದನ್ನೆಲ್ಲ ಅಗ್ಗವಾಗಿದೆ ಅಂತ ಹೊತ್ಕೊಂಡು ಬಂದಳು…’

‘ ಆಮೇಲೇನಾಯ್ತು ಮತ್ತೆ?’

‘ ಅದೇನು ಗ್ರಹಚಾರವೊ ಸಾರ್… ಅದೇನು ಮೇಕಪ್ಪು ಇವಳ ಚರ್ಮಕ್ಕೆ ಅಲರ್ಜಿಯೊ, ಅಥವಾ ಅಲ್ಲಿ ತಂದ ಮಾಲು ಕಳಪೆಯೊ – ತಂದು ಹಾಕಿದ ಒಂದೆ ದಿನದಲ್ಲಿ ಪುಲ್ ಸೈಡ್ ಎಫೆಕ್ಟ್ ಸಾರ್.. ಹಾಕಿದ್ದಲ್ಲೆಲ್ಲ ರಾಶಸ್ಸು, ಮುಖ, ಮೂತಿಯೆಲ್ಲ ಊದಿಕೊಂಡು ಕೆಂಪು ಕೋಡಂಗಿಯ ಹಾಗಾಗಿಬಿಟ್ಟಿದೆ..’ ಮೂತಿಯುಬ್ಬಿಸಿಕೊಂಡು ಖೇದ ವಿಷಾದವೆ ಮೈಯಾದವನ ಪೋಸಿನಲ್ಲಿ ಉತ್ತರಿಸಿದ್ದ ಗುಬ್ಬಣ್ಣ..!

ಸಡನ್ನಾಗಿ ನನ್ನತ್ತ ಕಸಬರಿಕೆ ಎಸೆದ ಹೊತ್ತಲ್ಲಿ ಸೆರಗು ಮುಚ್ಚಿಕೊಂಡಿದ್ದ ಗುಬ್ಬಣ್ಣನ ಶ್ರೀಮತಿಯ ಅವತಾರ ನೆನಪಾಯ್ತು. ಮುಖ ಮುಚ್ಚಿಕೊಂಡಿದ್ದರ ಗುಟ್ಟು ಆಗ ಗೊತ್ತಾಗಿರಲಿಲ್ಲ, ಆದರೆ ಈಗ ಗೊತ್ತಾಗಿತ್ತು. ಜತೆಗೆ ಮಸುಕು ಮಸುಕಾಗಿ ಪುಟ್ಬಾಲ್ ಮ್ಯಾಚಿನ ಹಿನ್ನಲೆ ಕಾರಣ ಕೂಡ..!

ಆ ಹಿನ್ನಲೆಯ ಜತೆಗೆ ನಡೆದ್ದಿದ್ದೆಲ್ಲವನ್ನು ಲಾಜಿಕಲ್ಲಾಗಿ ಜೋಡಿಸುತ್ತಾ ಹೋದಂತೆ, ನನಗೆ ಪೂರ್ತಿ ಚಿತ್ರಣ ಸಿಕ್ಕಿದಂತಾಯ್ತು..’ ಸರಿ ಗೊತ್ತಾಯ್ತು ಬಿಡು.. ಆಫ್ಟರಾಲ್ ಒಂದು ನೆಟ್ಟಗಿರೊ ಮೇಕಪ್ಪು ಸೆಟ್ಟು, ಕಾಸ್ಮೆಟಿಕ್ಸ್ ಕೊಡಿಸೋಕು ಬರದ ಗಂಡ ಅಂತ ತಿರುಗಿ ನಿನ್ನನ್ನ ಎಕ್ಕಾಮುಕ್ಕಾ ಜಾಡಿಸಿರಬೇಕು..’

‘ ಬಿಲ್ಕುಲ್ ಸಾರ್.. ನಾನು ಅಲರ್ಜಿ, ಗಿಲರ್ಜಿ ಅಂತ ಹೇಳೊ ಮೊದಲೆ, ಅಗ್ಗದ ಮಾಲು ಸಿಗುತ್ತೆ ಅಂತ ಯಾವ್ಯಾವುದೊ ಕಚಡಾ ಅಂಗಡಿಗೆ ಕರಕೊಂಡು ಹೋಗಿ, ಏನೇನೊ ಕೊಡ್ಸಿ ನನ್ನ ಮೇಲ್ ಸೇಡ್ ತೀರಿಸ್ಕೋತಾ ಇದೀರಾ? ಮೂರ್ಕಾಸು ಉಳ್ಸೋಕ್ ಹೋಗಿ ಮುದ್ದು ಮುದ್ದಾಗಿದ್ದ ನನ್ನ ಮುಖಾನೆಲ್ಲಾ ಬಜ್ಜಿ, ಬೊಂಡಾ, ವಡೆ ಎತ್ತೊ ಜಾಲರಿ ತರ ಮಾಡಿ ಏನೂ ಗೊತ್ತಿಲದವರ ಹಾಗೆ ನಾಟಕ ಆಡ್ತೀರ ಅಂತ – ಬೆಂಡೆತ್ತಿಬಿಟ್ಟಳು..’

‘ ಆ ಅತಿರಥ – ಮಹಾರಥ ಕದನ ನಡೆಯುತ್ತಿದ್ದ ಹೊತ್ತಿಗೆ ನಾನು ಬಂದೆ ಅನ್ನು’

‘ ಹೌದು ಸಾರ್..’

ಅಲ್ಲಿಗೆ ಒಂದು ಭಯಂಕರ ಅವಘಡದಿಂದ ಕೂದಲೆಳೆಯಂತರದಲ್ಲಿ ಪಾರಾಗಿದ್ದೇನೆನಿಸಿತು. ಇಲ್ಲವಾಗಿದ್ದರೆ ಅವಳೆಸೆದಿದ್ದ ಪಾತ್ರೆ ಬಡಿಯಲು ಗುಬ್ಬಣ್ಣನೆ ಆಗಬೇಕೆ ? ಎದುರು ಸಿಕ್ಕಿದ ಯಾರಾದರೂ ನಡೆದೀತು..

‘ ಗುಬ್ಬಣ್ಣಾ..’

‘ ಯೆಸ್ ಸಾರ್…’

‘ ಅದೇನಾದರೂ ಆಗಲಿ.. ಈ ಸಾರಿ ಒಂದು ಕೆಲಸ ಮಾಡಿಬಿಡೋಣ’ ಮುಂಜಾಗರೂಕತಾ ಕ್ರಮವಾಗಿ ಜತೆಗೆ ನನ್ನನ್ನು ಸೇರಿಸಿಕೊಂಡೆ ನುಡಿದೆ.. ಯಾರ ಶ್ರೀಮತಿ ಯಾವಾಗ ‘ಸು-ಮತಿ’, ಯಾವಾಗ ‘ಕು-ಮತಿ’ ಆಗುತ್ತಾಳೆಂದು ಯಾರಿಗೆ ಗೊತ್ತು? ಹೇಳಿ ಕೇಳಿ ಮಾಯೆಯ ಅಪರಾವತಾರ ಹೆಣ್ಣು..!

‘ ಏನು ಕೆಲಸ ಸಾರ್..’

‘ ಇಬ್ಬರೂ ಹೋಗಿ ಸ್ವಲ್ಪ ಮೆಟ್ರೊ ಸೆಕ್ಶುವಲ್ ಟ್ರೈನಿಂಗ್ ತೆಗೆದುಕೊಂಡು ಬಿಡೋಣ.. ಕಾಲ ಹೀಗೆ ಇರುತ್ತೆ ಅಂತ ಹೇಳೊಕೆ ಬರೋಲ್ಲ..’ ಎಂದೆ.

‘ ಅದು ವಂಡರ್ಪುಲ್ ಐಡಿಯಾ ಸಾರ್.. ನಿಮಗೆ ಯಾವುದಾದರು ಜಾಗ ಗೊತ್ತಾ ? ‘ ಸ್ವಲ್ಪ ತೊದಲುತ್ತಲೆ ನುಡಿದ ಗುಬ್ಬಣ್ಣ. ಅದು ಬಿಯರಿನ ಪ್ರಭಾವ ಪೂರ್ತಿ ಒಳಗಿಳಿದ ಸೂಚನೆ.

‘ ಅದಕ್ಕೇನು ಗೂಗಲಿಸಿದರಾಯ್ತು, ನೂರಾರು ಜಾಗ ಸಿಗ್ತಾವೆ.. ನಿನ್ನ ಡ್ರಿಂಕ್ಸ್ ಮುಗಿಸು… ಹೇಗು ನಿನ್ನೆಜಮಾನತಿ ನಿನ್ನೀವತ್ತು ಮನೆಗೆ ಸೇರ್ಸೋಲ್ಲ.. ನಮ್ಮನೇಲೆ ಬಂದಿದ್ದು ನಾಳೆ ಹೋಗೋವಂತೆ’ ಎನ್ನುತ್ತ ನಾನು ಗ್ಲಾಸ್ ಎತ್ತಿದೆ, ಮಿಕ್ಕರ್ಧವನ್ನು ಮುಗಿಸಲು.

ಗುಬ್ಬಣ್ಣನೂ ತನ್ನ ನಡುಗುವ ಕೈಯಲ್ಲೆ ಗ್ಲಾಸ್ ಎತ್ತಿ ಹಿಡಿದು ‘ ಗನ್ಬೇ’ ಎಂದ .

ನಾನೂ ‘ ಚಿಯರ್ಸ…ಬಾಟಂಸಪ್ಪ್’ ಎಂದೆ, ನಮ್ಮಂತಹ ಪರದೇಶಿಗಳ ‘ಮನದೇವರು’ ಗೂಗಲೇಶ್ವರನ ಧ್ಯಾನ ಮಾಡುತ್ತ…!

– ನಾಗೇಶಮೈಸೂರು

00430. ಬೆಳಗಾಗಿ ನಾನೆದ್ದು ಯ್ಯಾರ್ಯಾರ…


00430. ಬೆಳಗಾಗಿ ನಾನೆದ್ದು ಯ್ಯಾರ್ಯಾರ…:

https://prabuddategekenidde.wordpress.com/2015/12/08/0013-%e0%b2%ac%e0%b3%86%e0%b2%b3%e0%b2%97%e0%b2%be%e0%b2%97%e0%b2%bf-%e0%b2%a8%e0%b2%be%e0%b2%a8%e0%b3%86%e0%b2%a6%e0%b3%8d%e0%b2%a6%e0%b3%81-%e0%b2%af%e0%b3%8d%e0%b2%af%e0%b2%be%e0%b2%b0%e0%b3%8d/

(https://prabuddategekenidde.wordpress.com/)
_____________________________________________________________________
ಹಿನ್ನಲೆ: ನನ್ನ ಗದ್ಯಮುಖಿ ಬರಹಗಳಿಗೊಂದು ಬೇರ್ಪಡಿಸಿದ ಬ್ಲಾಗು..!
_____________________________________________________________________
ಈಚೆಗೆ ಗಮನಿಸಿದಂತೆ ನನ್ನ ಬ್ಲಾಗಿನಲ್ಲಿ 400ಕ್ಕು ಮೀರಿ ಬರಹಗಳು ಸೇರಿಕೊಂಡುಬಿಟ್ಟಿವೆ – ಸಣ್ಣಕಥೆ, ಪ್ರಬಂಧ, ಕಾವ್ಯ ಬರಹ, ಲೇಕನ, ಕವನ, ಹರಟೆ, ಹಾಸ್ಯ ಇತ್ಯಾದಿ. ಎಲ್ಲವು ಕಲಸು ಮೇಲೋಗರವಾಗಿರುವುದು ಒಂದಾದರೆ ನನ್ನ ಸಮಯಾಭಾವ ಮತ್ತು ಸೋಮಾರಿತನದಿಂದ ಅದಕ್ಕೊಂದು ವ್ಯವಸ್ಥಿತ ರೂಪ ನೀಡಲು ಸಾಧ್ಯವಾಗಿಲ್ಲವೆನ್ನುವುದು ನಿಜವೆ. ಇದರ ಜತೆಗೆ ಮೊದಲಿಗೆ ಸುಮಾರು ಬರಹಗಳು ಪೋಸ್ಟ್ ಆಗಿ ಹಾಕದೆ ಪೇಜಿನಲ್ಲಿ ಹಾಕಿದ ಕಾರಣ ಅವು ಓದುಗರಿಗೆ ಇ ಮೇಲ್ ಮೂಲಕ ಪ್ರಕಟವಾಗಲೆ ಇಲ್ಲ ಮತ್ತು ಸರ್ಚ್ ಎಂಜಿನ್ನಿನಲ್ಲು ಸುಲಭದಲ್ಲಿ ಸಿಗುವುದಿಲ್ಲ. ಇದನ್ನೆಲ್ಲ ಪರಿಗಣಿಸಿ ಕನಿಷ್ಠ ಗದ್ಯ ಇರುವ ಬರಹಗಳನ್ನೆಲ್ಲ ಒಗ್ಗೂಡಿಸಿ ಒಂದು ಬ್ಲಾಗಿನಲ್ಲಿ ಹಾಕಿ, ಸರಿಯಾಗಿ ವಿಂಗಡಿಸಿದರೆ ಸೂಕ್ತ ಅನಿಸಿತು – ಪೋಸ್ಟ್ ರೂಪದಲ್ಲಿ. ನಂತರ ಕವನಗಳನ್ನು ಮತ್ತೊಂದು ಬ್ಲಾಗಿಗೆ ಸೇರಿಸಬಹುದು ಮತ್ತು ಪರಿಭ್ರಮಣದಂತಹ ಕಾದಂಬರಿಯನ್ನೆ ಬೇರೆ ಬ್ಲಾಗಿನಲ್ಲಿ ಹಾಕಿಬಿಡಬಹುದು ಮತ್ತೇನನ್ನು ಮಿಶ್ರ ಮಾಡದೆ (ಮಂಕುತಿಮ್ಮನ ಕಗ್ಗದ ಟಿಪ್ಪಣಿಯ ಹಾಗೆ). ಅದೆಲ್ಲಕ್ಕು ಸಾಮಾನ್ಯ ಕೊಂಡಿಯಾಗಿ ಈ ಮನದಿಂಗಿತಗಳ ಸ್ವಗತದ ಬ್ಲಾಗ್ ಸಂಪರ್ಕ ಸೇತುವೆಯಾಗಿ ಎಲ್ಲವನ್ನು ಸಮಷ್ಟಿಯಲ್ಲಿ ಹಿಡಿದಿಡುವ ಕೆಲಸ ನಿಭಾಯಿಸಬಹುದು.. ಈ ಆಲೋಚನೆ ಬಂದದ್ದೆ ಅದನ್ನು ಕಾರ್ಯ ರೂಪಕ್ಕೆ ತರಲು ನಿರ್ಧರಿಸಿ ತಕ್ಷಣದಿಂದಲೆ ಆರಂಭಿಸಿಬಿಟ್ಟೆ, ಒಂದೊಂದಾಗಿ ಲೇಖನಗಳನ್ನು, ಬರಹಗಳನ್ನು ವರ್ಗಾಯಿಸಲು. ಪ್ರತಿ ಬಾರಿ ವರ್ಗಾಯಿಸಿ ಪೋಸ್ಟ್ ಮಾಡಿದಾಗಲೂ ಇಲ್ಲಿ ಅಪ್ಡೇಟ್ ಮಾಡಿ ಬರಹದ ಲಿಂಕು ಕೊಡುತ್ತೇನೆ ಒಂದೊಂದಾಗಿ ಎಲ್ಲಾ ವರ್ಗಾವಣೆ ಆಗುವ ತನಕ. ನನ್ನ ಹಳೆ ಬರಹ ನೋಡಿರದಿದ್ದರೆ ಅದನ್ನು ನೋಡುವ ಅವಕಾಶದ ಈ ಮುಖೇನ 😀

ಅಂದ ಹಾಗೆ ಇವೆಲ್ಲಾ ಬಹುತೇಕ ಒಂದಲ್ಲಾ ಒಂದು ಪ್ರಕಟವಾಗಿರುವಂತದ್ದೆ – ಹೆಚ್ಚಿನವು ಸಂಪದದಲ್ಲಿ ಪ್ರಕಟಿಸಿಕೊಂಡಂತವು. ಪೋಸ್ಟ್ ಮಾಡಿದ ಹಾಗೆ ಬರಹದ ಹೆಸರನ್ನ ಈ ಕೆಳಗೆ ಸೇರಿಸುತ್ತಾ ಹೋಗುತ್ತೇನೆ 😊
(https://prabuddategekenidde.wordpress.com/)

0013. ಬೆಳಗಾಗಿ ನಾನೆದ್ದು ಯ್ಯಾರ್ಯಾರ…
0012. ಹಾರುತ ದೂರಾದೂರ…..!
0011. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ!
0010. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…!
0009. ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ
0008. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01″(ತೊಡಕು ಸಿದ್ದಾಂತ)
0007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03)
0006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02)
0005. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01)
0004.ಮೆಲ್ಲುಸಿರೆ ಸವಿಗಾನ….!
0003. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…!
0002. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?
0001. ಏನಾಗಿದೀದಿನಗಳಿಗೆ

00429. ಹಾರುತ ದೂರಾದೂರ…..!


00429. ಹಾರುತ ದೂರಾದೂರ…..!

https://prabuddategekenidde.wordpress.com/2015/12/06/00012-%e0%b2%b9%e0%b2%be%e0%b2%b0%e0%b3%81%e0%b2%a4-%e0%b2%a6%e0%b3%82%e0%b2%b0%e0%b2%be%e0%b2%a6%e0%b3%82%e0%b2%b0/

(https://prabuddategekenidde.wordpress.com/)

ಹಿನ್ನಲೆ
_____________________________
ನನ್ನ ಗದ್ಯಮುಖಿ ಬರಹಗಳಿಗೊಂದು ಬೇರ್ಪಡಿಸಿದ ಬ್ಲಾಗು..!

ಈಚೆಗೆ ಗಮನಿಸಿದಂತೆ ನನ್ನ ಬ್ಲಾಗಿನಲ್ಲಿ 400ಕ್ಕು ಮೀರಿ ಬರಹಗಳು ಸೇರಿಕೊಂಡುಬಿಟ್ಟಿವೆ – ಸಣ್ಣಕಥೆ, ಪ್ರಬಂಧ, ಕಾವ್ಯ ಬರಹ, ಲೇಕನ, ಕವನ, ಹರಟೆ, ಹಾಸ್ಯ ಇತ್ಯಾದಿ. ಎಲ್ಲವು ಕಲಸು ಮೇಲೋಗರವಾಗಿರುವುದು ಒಂದಾದರೆ ನನ್ನ ಸಮಯಾಭಾವ ಮತ್ತು ಸೋಮಾರಿತನದಿಂದ ಅದಕ್ಕೊಂದು ವ್ಯವಸ್ಥಿತ ರೂಪ ನೀಡಲು ಸಾಧ್ಯವಾಗಿಲ್ಲವೆನ್ನುವುದು ನಿಜವೆ. ಇದರ ಜತೆಗೆ ಮೊದಲಿಗೆ ಸುಮಾರು ಬರಹಗಳು ಪೋಸ್ಟ್ ಆಗಿ ಹಾಕದೆ ಪೇಜಿನಲ್ಲಿ ಹಾಕಿದ ಕಾರಣ ಅವು ಓದುಗರಿಗೆ ಇ ಮೇಲ್ ಮೂಲಕ ಪ್ರಕಟವಾಗಲೆ ಇಲ್ಲ ಮತ್ತು ಸರ್ಚ್ ಎಂಜಿನ್ನಿನಲ್ಲು ಸುಲಭದಲ್ಲಿ ಸಿಗುವುದಿಲ್ಲ. ಇದನ್ನೆಲ್ಲ ಪರಿಗಣಿಸಿ ಕನಿಷ್ಠ ಗದ್ಯ ಇರುವ ಬರಹಗಳನ್ನೆಲ್ಲ ಒಗ್ಗೂಡಿಸಿ ಒಂದು ಬ್ಲಾಗಿನಲ್ಲಿ ಹಾಕಿ, ಸರಿಯಾಗಿ ವಿಂಗಡಿಸಿದರೆ ಸೂಕ್ತ ಅನಿಸಿತು – ಪೋಸ್ಟ್ ರೂಪದಲ್ಲಿ. ನಂತರ ಕವನಗಳನ್ನು ಮತ್ತೊಂದು ಬ್ಲಾಗಿಗೆ ಸೇರಿಸಬಹುದು ಮತ್ತು ಪರಿಭ್ರಮಣದಂತಹ ಕಾದಂಬರಿಯನ್ನೆ ಬೇರೆ ಬ್ಲಾಗಿನಲ್ಲಿ ಹಾಕಿಬಿಡಬಹುದು ಮತ್ತೇನನ್ನು ಮಿಶ್ರ ಮಾಡದೆ (ಮಂಕುತಿಮ್ಮನ ಕಗ್ಗದ ಟಿಪ್ಪಣಿಯ ಹಾಗೆ). ಅದೆಲ್ಲಕ್ಕು ಸಾಮಾನ್ಯ ಕೊಂಡಿಯಾಗಿ ಈ ಮನದಿಂಗಿತಗಳ ಸ್ವಗತದ ಬ್ಲಾಗ್ ಸಂಪರ್ಕ ಸೇತುವೆಯಾಗಿ ಎಲ್ಲವನ್ನು ಸಮಷ್ಟಿಯಲ್ಲಿ ಹಿಡಿದಿಡುವ ಕೆಲಸ ನಿಭಾಯಿಸಬಹುದು.. ಈ ಆಲೋಚನೆ ಬಂದದ್ದೆ ಅದನ್ನು ಕಾರ್ಯ ರೂಪಕ್ಕೆ ತರಲು ನಿರ್ಧರಿಸಿ ತಕ್ಷಣದಿಂದಲೆ ಆರಂಭಿಸಿಬಿಟ್ಟೆ, ಒಂದೊಂದಾಗಿ ಲೇಖನಗಳನ್ನು, ಬರಹಗಳನ್ನು ವರ್ಗಾಯಿಸಲು. ಪ್ರತಿ ಬಾರಿ ವರ್ಗಾಯಿಸಿ ಪೋಸ್ಟ್ ಮಾಡಿದಾಗಲೂ ಇಲ್ಲಿ ಅಪ್ಡೇಟ್ ಮಾಡಿ ಬರಹದ ಲಿಂಕು ಕೊಡುತ್ತೇನೆ ಒಂದೊಂದಾಗಿ ಎಲ್ಲಾ ವರ್ಗಾವಣೆ ಆಗುವ ತನಕ. ನನ್ನ ಹಳೆ ಬರಹ ನೋಡಿರದಿದ್ದರೆ ಅದನ್ನು ನೋಡುವ ಅವಕಾಶದ ಈ ಮುಖೇನ 😀

ಅಂದ ಹಾಗೆ ಇವೆಲ್ಲಾ ಬಹುತೇಕ ಒಂದಲ್ಲಾ ಒಂದು ಪ್ರಕಟವಾಗಿರುವಂತದ್ದೆ – ಹೆಚ್ಚಿನವು ಸಂಪದದಲ್ಲಿ ಪ್ರಕಟಿಸಿಕೊಂಡಂತವು. ಪೋಸ್ಟ್ ಮಾಡಿದ ಹಾಗೆ ಬರಹದ ಹೆಸರನ್ನ ಈ ಕೆಳಗೆ ಸೇರಿಸುತ್ತಾ ಹೋಗುತ್ತೇನೆ 😊
(https://prabuddategekenidde.wordpress.com/)

0012. ಹಾರುತ ದೂರಾದೂರ…..!
0011. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ!
0010. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…!
0009. ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ
0008. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01″(ತೊಡಕು ಸಿದ್ದಾಂತ)
0007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03)
0006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02)
0005. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01)
0004.ಮೆಲ್ಲುಸಿರೆ ಸವಿಗಾನ….!
0003. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…!
0002. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?
0001. ಏನಾಗಿದೀದಿನಗಳಿಗೆ

00426. ಅಸಹಿಷ್ಣುತೆ – ಮನೆ ಮನೆ ಕಥೆ !(ನಿಲುಮೆ)


ಅಸಹಿಷ್ಣುತೆ – ಮನೆ ಮನೆ ಕಥೆ !(ನಿಲುಮೆ)
_______________________________

ಗುಬ್ಬಣ್ಣನ ಅಸಹಿಷ್ಣುತೆಯ ಹೊಸ ಪ್ರಹಸನವೊಂದು ಈಗ ನಿಲುಮೆಯಲ್ಲಿ ಪ್ರಕಟವಾಗಿದೆ. ಅದರ ಕೊಂಡಿ ಈ ಕೆಳಗಿದೆ.

http://nilume.net/2015/12/02/%e0%b2%85%e0%b2%b8%e0%b2%b9%e0%b2%bf%e0%b2%b7%e0%b3%8d%e0%b2%a3%e0%b3%81%e0%b2%a4%e0%b3%86-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%95%e0%b2%a5%e0%b3%86/

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

00418.ಲಘು ಹರಟೆ: ವಿಶ್ವ ಪುರುಷರ ದಿನ..!(ಗುಬ್ಬಣ್ಣ)


00418.ಲಘು ಹರಟೆ: ವಿಶ್ವ ಪುರುಷರ ದಿನ..!(ಗುಬ್ಬಣ್ಣ)
____________________________

ಬೂನ್ ಕೆಂಗ್ ಟ್ರೈನ್ ಸ್ಟೇಷನ್ನಿನ ಹತ್ತಿರದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು, ಪಕ್ಕದ ಸ್ವಯಂಚಾಲಿತ ಯಂತ್ರದಿಂದ ಬ್ಯಾಂಕಿನ ಪಾಸ್ ಬುಕ್ಕಿಗೆ ಎಂಟ್ರಿ ಹಾಕಿಸುತ್ತಿದ್ದೆ. ಹಿಂದೆ ಯಾರೊ ‘ಸಾರ್..’ ಎಂದು ಭುಸುಗುಟ್ಟಿದಂತಾಯ್ತು. ಅದು ಮೊದಲೆ ಹೆಚ್ಚು ಜನಸಂದಣಿಯ ಜಾಗ; ಜತೆಗೆ ನಾನು ವಾಸವಿರುವ ಲಿಟಲ್ ಇಂಡಿಯಾದಿಂದ ಎರಡು ಸ್ಟೇಷನ್ ಆಚೆಯಿರುವ, ವಾರದ ಕೊನೆಯ ವಾಕಿಂಗ್ ನೆಪದಲ್ಲಿ ನಡೆದು ಬಂದರೂ ಮೂವತ್ತು ನಿಮಿಷ ಹಿಡಿಯುತ್ತಿದ್ದ, ದೂರದ ಜಾಗ. ಆ ಸುತ್ತಮುತ್ತಲಲ್ಲಿ ನನಗಾವ ಪರಿಚಿತರು ಇರದಿದ್ದ ಕಾರಣ ಆ ಕರೆಗೆ ಗಮನ ಕೊಡದೆ ಮತ್ತೆ ಪಾಸ್ ಬುಕ್ಕಿನತ್ತ ಕಣ್ಣು ನೆಟ್ಟಿದ್ದೆ. ಎಂಟ್ರಿ ಮುಗಿಸಿ ಪಾಸ್ ಬುಕ್ ವಾಪಸೆತ್ತಿಕೊಂಡು ತಿರುಗಿ ಮೆಟ್ಟಿಲಿಳಿಯಲು ಹೊರಡುವ ಹೊತ್ತಿಗೆ ಸರಿಯಾಗಿ, ಮತ್ತೆ ಕೇಳಿಸಿತು ಗೊಗ್ಗರಾದ, ಅಳುವಿನ ದನಿಯಲ್ಲಿ, ‘ಸಾರ್ರ್ರ್..’

‘ಅರೆ! ಅಳುವ ದನಿಯಂತಿದ್ದರು ನಮ್ಮ ಗುಬ್ಬಣ್ಣನ ದನಿಯಿರುವಂತಿದೆಯಲ್ಲಾ?’ ಎನಿಸಿ ತಿರುಗಿ ನೋಡಿದರೆ ಸಾಕ್ಷಾತ್ ಅವನೇ !! ಅಳುಬುರುಕನಂತೆ ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದಾನೆ – ಗಡ್ಡ ಮೀಸೆಯನ್ನು ಬೋಳಿಸದೆ ಕುರುಚಲು ಪಾರ್ಥೇನಿಯಮ್ಮಿನ ಹಾಗೆ ಅಸ್ತ್ಯವ್ಯಸ್ತ ಕೆದರಿದ ಕೂದಲು ಬಿಟ್ಟುಕೊಂಡು ಎದುರು ನಿಂತವನನ್ನು ಕಂಡು ಸ್ವಲ್ಪ ಗಾಬರಿಯೂ ಆಯ್ತು.

‘ ಏನೊ ಗುಬ್ಬಣ್ಣ ಇದು, ನಿನ್ನವಸ್ಥೆ? ‘ಊರು ಹೋಗು, ಕಾಡು ಬಾ’ ಅನ್ನೋ ಹಾಗೆ ಪೂರಾ ಕೇರಾಫ್ ಪುಟ್ಪಾತಾದವರ ತರ ಬಂದು ನಿಂತಿದ್ದಿಯಲ್ಲೊ… ಎಲ್ಲಾ ನೆಟ್ಟಗಿದೆ ತಾನೆ ?’ ಎಂದೆ.

‘ಅಯ್ಯೊ.. ಏನು ನೆಟ್ಟಗಿರೋದು ಬಿಡಿ ಸಾರ್… ಪೂರ್ತಿ ಚಿಂದಿ ಚಿತ್ರಾನ್ನಾ ಆಗಿ ಕೂತಿದ್ದೀನಿ…. ಬದುಕಿರೋದೆ ಬೇಡಾ ಅನಿಸಿಬಿಟ್ಟಿದೆ’ ಎಂದ ಹತಾಶ ದನಿಯಲ್ಲಿ.

ಆಫೀಸಿನಲ್ಲೊ, ಮನೆಯಲ್ಲೊ ಏನಾದರು ಸಣ್ಣಪುಟ್ಟ ಎಡವಟ್ಟಾದರು, ಆಕಾಶವೆ ತಲೆಯ ಮೇಲೆ ಬಿದ್ದವರಂತೆ ಪೂರ್ತಿ ಕುಸಿದು ಹೋಗುವುದು ಗುಬ್ಬಣ್ಣನಿಗೆ ಮಾಮೂಲೆ. ಹಾಗಾದಾಗೆಲ್ಲ ಆ ಶೋಕವನ್ನು ಹಂಚಿಕೊಂಡು ವ್ಯಥೆ ಪಡುತ್ತಾ ಯಾರ ಜತೆಗಾದರೂ ಗೋಳಾಡಿಕೊಂಡರಷ್ಟೆ ಆ ಉದ್ವೇಗ ತುಸು ಶಮನವಾಗುತ್ತಿದ್ದುದ್ದು. ಸಿಂಗಪುರದಲ್ಲಿ ‘ಹೂಂ’ ಅಂದ ತಕ್ಷಣ ಅವನ ಗೋಳು ಕೇಳುವ ಬಾಂಧವರು ಯಾರು ಸಿಗುತ್ತಾರೆ ? ಇವತ್ತಿನ ಹಾಗೆ ವಾರದ ಕೊನೆಯಾದರೆ ನಾನೆ ಸಿಕ್ಕಿಬೀಳುತ್ತಿದ್ದೆ. ಮಾಮೂಲಿ ವಾರದ ದಿನವಾದರೆ, ವಿಧಿಯಿಲ್ಲದೆ ‘ಮೊಬೈಲಾಸುರ’ನ ಮೊರೆ ಹೋಗಬೇಕಾಗುತ್ತಿತ್ತು. ತೀರಾ ಕ್ಷುಲ್ಲಕ ವಿಚಾರವನ್ನು ‘ಬೆಟ್ಟ ತಲೆಯ ಮೇಲೆ ಬಿದ್ದವರ’ ಹಾಗೆ ವಿಲೋಮಾನುಪಾತದಲ್ಲಿ ಉಬ್ಬಿಸಿ ಸಂಕಟ ಪಡುವ ಅವನ ರೀತಿ ನನಗೇನು ಹೊಸದಲ್ಲದ ಕಾರಣ, ಸಮಾಧಾನದ ದನಿಯಲ್ಲೆ ‘ಬದುಕೋದೆ ಬೇಡ ಸಾಯಬೇಕು ಅಂತಲೆ ತೀರ್ಮಾನ ತೆಗೆದುಕೊಂಡಿದ್ದರೆ, ಇಲ್ಲೆ ಹತ್ತಿರದಲ್ಲೆ ಕೇಯಫ್ಸಿ ಇದೆ.. ಅಲ್ಲೊಂದು ರೌಂಡ್ ಚಿಕನ್ನು, ಕಾಫಿ ಕೊಡಿಸಿಬಿಡು; ಆಮೇಲೆ ಧಾರಳವಾಗಿ ನೆಮ್ಮದಿಯಿಂದ ಪ್ರಾಣ ಬಿಡು.. ಹೊಟ್ಟೆ ತುಂಬಿರುವಾಗ ಸತ್ತರೆ, ಜೀವ ಹೋಗುವಾಗ ಸಂಕಟವಾಗುವುದಿಲ್ಲವಂತೆ..’ ಎಂದೆ.

ಸಾಧಾರಣ ಸಣ್ಣಪುಟ್ಟ ಜೋಕಿಗೂ ‘ಗುರ್ರೆಂದು’ ಹಾಯುವ ಪ್ರಾಣಿ ಗುಬ್ಬಣ್ಣ, ಇಂದು ಮಾತ್ರ ಯಾಕೊ ತೀರಾ ‘ಆಫ್’ ಮೂಡಿನಲ್ಲಿದ್ದಂತೆ ಕಂಡಿತು. ವಿಷಾದವೆ ಮೈವೆತ್ತ ದನಿಯಲ್ಲಿ, ನನ್ನ ದನಿಯ ತೆಳು ಹಾಸ್ಯದ ವ್ಯಂಗ್ಯವನ್ನು ಗಮನಿಸದೆ, ‘ ನಾನೆ ಬಾತಿಗೂ ಕಾಸಿಲ್ಲದೆ, ನೊಣ ಹೊಡೀತಾ ಇದೀನಿ.. ನಿಮಗೆಲ್ಲಿ ಕೇಯಫ್ಸಿಯಲ್ಲಿ ಕೊಡಿಸಲಿ ಬಿಡಿ, ಸಾರ್… ಸದ್ಯಕ್ಕೆ ನನಗೆ ಯಾರಾದರೂ ಒಂದು ಚೂರು ಇಲಿ ಪಾಷಾಣವೊ, ಫಾಲಿಡಾಲೊ ಕೊಟ್ಟರೆ ಸಾಕಾಗಿದೆ..’ ಎಂದ.

ಸಾಧಾರಣ ತೀರಾ ಕುಗ್ಗಿ ಕುಸಿದು ಹೋದಾಗಷ್ಟೆ ಗುಬ್ಬಣ್ಣ, ‘ಬಾತಿಗೂ ಕಾಸಿಲ್ಲದ..’ ವರಸೆ ತೆಗೆಯುತ್ತಿದ್ದುದ್ದು. ಬಾತು ಎಂದರೆ ಬಾತುಕೋಳಿಯೇನಲ್ಲ ಬಿಡಿ… ಅವನ ಬ್ರಹ್ಮಚರ್ಯದ ದಿನಗಳಲ್ಲಿ ತಳ್ಳುಗಾಡಿಯಲ್ಲಿ ಎರಡು ಮೂರು ರೂಪಾಯಿಗೆಲ್ಲ ಸಿಗುತ್ತಿದ್ದ ‘ಪಲಾವ್ ಬಾತನ್ನ’ ದ ದಯೆಯಿಂದಾಗಿ, ಸಿಗುತ್ತಿದ್ದ ಅಷ್ಟಿಷ್ಟು ಕಾಸಿನಲ್ಲೆ ತಿಂಗಳೆಲ್ಲ ನಿಭಾಯಿಸುತ್ತಿದ್ದನಂತೆ ಗುಬ್ಬಣ್ಣ, ತಿಂಗಳ ಕೊನೆಯೂ ಸೇರಿದಂತೆ. ಎಂದೊ ಒಮ್ಮೊಮ್ಮೆ, ತಿಂಗಳ ಕೊನೆಯಲ್ಲಿ ಆ ಎರಡು ಮೂರು ರೂಪಾಯಿಗೂ ಬಿಕ್ಕಟ್ಟಾಗಿ, ಮೃಷ್ಟಾನ್ನವಿರಲಿ ‘ಖಾಲಿ ಬಾತಿಗೂ ಕಾಸಿಲ್ಲವಲ್ಲ..’ ಅನ್ನುವ ಸ್ಥಿತಿ ಬಂದುಬಿಡುತ್ತಿತ್ತಂತೆ. ಅದೇ ಗತ ವೈಭವದ ನೆನಪಿನಲ್ಲಿ ಮೂಡು ಕೆಟ್ಟಾಗೆಲ್ಲ ‘ ಬಾತಿಗೂ ಕಾಸಿಲ್ಲ’ ಎನ್ನುವುದು ಅವನ ಅಭ್ಯಾಸ. ಸಿಂಗಪುರದಲ್ಲಿ ಕಾಸಾದರೂ ಯಾಕೆ ಬೇಕು? ಹೋದ ಕಡೆಯೆಲ್ಲ ಕಾರ್ಡಲ್ಲೆ ನಿಭಾಯಿಸಬಹುದು. ಆದರೂ ಅವನ ಆ ಮಾತಿಂದ ಸ್ವಲ್ಪ ‘ತೀರಾ ಹದಗೆಟ್ಟ ಪರಿಸ್ಥಿತಿ’ ಉದ್ಭವಿಸಿರುವಂತೆ ಭಾಸವಾಗಿ, ತೀರ ಕೆಣಕಲು ಹೋಗದೆ,

‘ಸರಿ.. ಹಾಳಾಗಲಿ ಬಾ, ನಾನೆ ಕೊಡಿಸುತ್ತೇನೆ. ಕೇಯಫ್ಸಿಯ ಚಿಕನ್ನು ತಿಂದ ಮೇಲೆ ಬೇಕಾದರೆ ಲಿಟಲ್ ಇಂಡಿಯಾಗೆ ಇಬ್ಬರೂ ಒಟ್ಟಿಗೆ ಹೋಗಿ ‘ಮುಸ್ತಫ’ ಮಾಲಿನಲ್ಲಿ ಇಲಿ ಪಾಷಾಣ, ಫಾಲಿಡಾಲ್ ಸಿಗುತ್ತಾ ಅಂತ ಹುಡುಕೋಣ… ಸಿಕ್ಕಿದರೆ ಅಲ್ಲಿ ಮಾತ್ರ ಸಿಗಬೇಕಷ್ಟೆ… ಬೇರೆಲ್ಲೂ ಸಿಕ್ಕೊ ಚಾನ್ಸೆ ಇಲ್ಲ.. ಮೊದಲೆ ಇಲ್ಲಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಫಾಲಿಡಾಲ್ ಇರಲಿ, ‘ಆಲ್ಕೋಹಾಲು’ ಕೊಡಲ್ಲ’ ಎಂದೆ.

‘ ಆಲ್ಕೋಹಾಲ್’ ಅನ್ನುತ್ತಿದ್ದಂತೆ ಯಾಕೊ ಮುದುಡಿದಂತಿದ್ದ ಮುಖ ಸ್ವಲ್ಪ ಅರಳಿದಂತೆ ಕಂಡರು, ಅದನ್ನು ಕುಡಿಯಲು ಕೂಡ ‘ ಹೋಂ ಮಿನಿಸ್ಟ್ರಿ’ ಪರ್ಮಿಶನ್ ಬೇಕೆಂದು ನೆನಪಾಯ್ತೇನೊ, ಮತ್ತೆ ಮುದುಡಿದ ತಾವರೆಯಂತೆ ಮಂಕಾಗಿ ಹೋಯ್ತು. ಅದೇ ಗುಂಗಿನಲ್ಲೆಂಬಂತೆ, ‘ಅಲ್ಲಾ ಸಾರ್.. ಪ್ರತಿ ವರ್ಷ ವರ್ಷ ಮಾರ್ಚ್ ಎಂಟು ಬಂತು ಅಂದ್ರೆ ಸಾಕು, ‘ವಿಶ್ವ ಮಹಿಳೆಯರ ದಿನ’ ಅಂತ ಸೆಲೆಬ್ರೇಟ್ ಮಾಡ್ತಾರೆ… ಆದರೆ ಯಾಕೆ ಸಾರ್ ಅದೇ ರೀತಿ ‘ವಿಶ್ವ ಪುರುಷರ ದಿನ ‘ ಅಂತೆ ಸೆಲಬ್ರೇಟ್ ಮಾಡಲ್ಲಾ? ‘ ಎಂದ ದುಗುಡದ ಬಿಕ್ಕುವ ದನಿಯಲ್ಲಿ.

ಅಲ್ಲಿಗೆ ಮ್ಯಾಟರ್ ಯಾಕೊ ಸ್ವಲ್ಪ ಸೀರಿಯಸ್ಸಾಗಿಯೆ ಇದೆ ಅನಿಸಿತು – ಮನೆಯಲ್ಲೇನೊ ಮೂರನೆಯ ‘ಮಹಾಯುದ್ಧ’ ನಡೆಸಿಯೆ ಬಂದಿರಬೇಕು. ಪೂರ್ತಿ ಧಾಳಿ ಮಾಡಿ ‘ಶೇಪ್ ನಿಕಾಲ್’ ಮಾಡಿ ಕಳಿಸಿಬಿಟ್ಟಿರಬೇಕು ಅವನ ಸತಿ ಶಿರೋಮಣಿ ಅನಿಸುತ್ತಿದ್ದಂತೆ ಯಾಕೊ ಅನುಕಂಪ ಉಕ್ಕುಕ್ಕಿ ಬಂತು. ಹೇಳಿ ಕೇಳಿ ನಾವು ಗಂಡುಪ್ರಾಣಿಗಳೆಲ್ಲದರ ಹಣೆಬರಹವೆಲ್ಲ ಒಂದೆ ರೀತಿ ತಾನೆ ? ಕೆಲವು ಪುಣ್ಯವಂತರಿಗೆ ಕಡಿಮೆ ದಬ್ಬಾಳಿಕೆಯ ಅನುಭವವಾದರೆ, ಮತ್ತೆ ಕೆಲ ದುರದೃಷ್ಟವಂತರಿಗೆ ‘ತೀವ್ರ ನಿಗಾ ಘಟಕ’ದಲ್ಲಿಡಬಹುದಾದ ಅನುಭವ. ಎಲ್ಲಾ ಅವರವರು ಪಡೆದು ಬಂದದ್ದು – ಪಾಲಿಗೆ ಬಂದದ್ದು ಪಂಚಾಮೃತ…. ಆ ಸ್ವಾನುಭೂತಿಯ ಸಹಾನುಕಂಪದಲ್ಲೆ, ‘ಯಾಕೊ ವಿಶ್ವ ಪುರುಷರ ದಿನದ ಮಾತಾಡುತ್ತಿದ್ದೀಯಾ?.. ಇವತ್ತು ನೋಡಿದರೆ ‘ವಿಶ್ವ ಮಹಿಳಾ ದಿನ’… ಇವತ್ತು ಏನಿದ್ದರು ಮಹಿಳೆಯರ ಕಲ್ಯಾಣ, ಶ್ರೇಯೋಭಿವೃದ್ಧಿಯ ಮಾತಷ್ಟೆ ಆಡಬೇಕೆ ಹೊರತು ಪುರುಷರದಲ್ಲ.. ಇದ್ದಕ್ಕಿದ್ದಂತೆ ಆ ಟಾಪಿಕ್ ಯಾಕೊ ಬಂತು ?’ ಎಂದು ಕೇಳಿದೆ.

‘ ಇದೇ ಸಾರ್.. ಎಗ್ಸಾಕ್ಟ್ಲಿ ಇದೇ ಮಾತು ಅವರದೂನು ಸಾರ್… ಇವತ್ತು ಮಹಿಳೆಯರ ದಿನವಂತೆ.. ಅದಕ್ಕೆ ಇವತ್ತಾದರೂ ಅವರಿಗೆ ಸಹಾನುಭೂತಿ ತೋರಿಸಿ, ಅವರ ಕಲ್ಯಾಣಾಭಿವೃದ್ಧಿಯ ಬಗ್ಗೆ ಮಾತಾಡಬೇಕಂತೆ ಸಾರ್… ಬರಿ ಮಾತಾಗಿದ್ದರೆ ಬಿಡಿ, ಗಂಟೆಗಟ್ಟಲೆ ಆಡೋಣಾ… ಆದರೆ ಅದನ್ನು ಕಾರ್ಯಗತ ಮಾಡಿ ಉದಾಹರಣೆಯಲ್ಲೂ ತೋರಿಸಬೇಕಂತೆ ಸಾರ್.. ಇಲ್ಲವಾದರೆ ಆ ಗಂಡಸರೆಲ್ಲ ಬೂಟಾಟಿಕೆ ದಾಸರು.. ಡೊಂಗಿಯವರು..ಮಹಿಳೆಯರ ಬಗೆ ನಿಜವಾದ ಕಾಳಜಿ ಇರದವರು ಎಂದೆಲ್ಲ ಶಂಖ ಊದಿ ಒಂದೇ ಸಮನೆ ನನ್ನ ತಲೆ ತಿಂದು ಬಿಟ್ಟರು ಸಾರು..’

‘ತಲೆ ತಿಂದುಬಿಟ್ಟರು’ ಎಂದು ಬಹುವಚನ ಬಳಸುತ್ತಿರುವುದನ್ನು ನೋಡಿದರೆ ಒಬ್ಬರಿಗಿಂತ ಹೆಚ್ಚು ಜನ ಅಟ್ಯಾಕ್ ಮಾಡಿರುವಂತೆ ಕಾಣುತ್ತಿದೆಯಲ್ಲಾ ? ಅಥವಾ ‘ಮಹಿಳಾ ದಿನ’ ಅನ್ನುವ ಗೌರವದಿಂದ ಬಹುವಚನ ಬಳಸುತ್ತಿದ್ದಾನೆಯೆ ? ಒಂದು ವೇಳೆ ಹೆಂಡತಿಯರು ಗಂಡಂದಿರನ್ನು ಬಹುವಚನದಲ್ಲಿ ‘ರೀ…’ ಎನ್ನುವ ಹಾಗೆ, ಸಮಾನತೆಯ ವಾದವನ್ನೊಡ್ಡಿ ‘ಸತಿಯನ್ನೂ ಬಹುವಚನದಲ್ಲೆ ಸಂಬೋಧಿಸಬೇಕು ‘ ಎಂದೇನಾದರೂ ಠರಾವು ಪಾಸು ಮಾಡಿಬಿಟ್ಟಿದ್ದಾರೊ, ಹೇಗೆ – ವಿಶ್ವ ಮಹಿಳಾ ದಿನದ ಪ್ರಯುಕ್ತ ?’ ಅನಿಸಿತು. ಅದೆ ಅನಿಸಿಕೆಯಲ್ಲೆ, ‘ ನಿನ್ನ ಹೆಂಡತಿಯನ್ನ ಯಾವಾಗಿಂದ ಬಹುವಚನದಲ್ಲಿ ಕರೆಯೋಕೆ ಶುರು ಮಾಡಿದೆ ಗುಬ್ಬಣ್ಣ ? ವಿಮೆನ್ಸ್ ಡೆ ಅಂತಾನಾ?’ ಎಂದು ಕೇಳಿಯೆಬಿಟ್ಟೆ.

‘ ಅಯ್ಯೊ… ಅದೆಲ್ಲಿ ಬಂತು ಬಿಡಿ ಸಾರ್… ಹಾಗೆ ಬಹುವಚನದಲ್ಲಿ ಕರೆಯೋಕು ಸ್ವಾತಂತ್ರ ಇಲ್ಲ ಮನೇಲಿ.. ಹಾಕೆ ಕರೆದರೆ ಹೆಂಡತಿಗೆ ಅಶ್ರೇಯಸ್ಸು, ಅಪಶಕುನ, ಅಮಂಗಳ ಅಂತೆಲ್ಲ ಹೇಳಿ ಬಾಯಿ ಮುಚ್ಚಿಸಿಬಿಡುತ್ತಾಳೆ – ಏನೊ ಭಾರಿ ಮರ್ಯಾದೆ, ಗೌರವ ಕೊಡೊ ಹಾಗೆ..’

‘ ಮತ್ತೆ ‘ಅವರು’ ಅಂದಿದ್ದು ಯಾರಿಗೆ ? ನಿನ್ನ ಹೆಂಡ್ತಿ ಜತೆ ಮಗಳೂ ಸೇರ್ಕೊಂಡ್ ಬಿಟ್ಟಿದ್ದಾಳೊ ಏನು ಕಥೆ?’

‘ ಅವಳು ಸೇರ್ಕೊಂಡಿದ್ದಾಳೆ ಅನ್ನೋದು ನಿಜಾನೆ ಆದ್ರೂ ಅದನ್ನ ಹೇಗೊ ನಿಭಾಯಿಸಬಹುದಿತ್ತು ಸಾರ್.. ಅವರಿಬ್ಬರೂ ಯಾವಾಗಲೂ ಜತೇಲೆ ಇರೋ ಡಾಕಿನಿ-ಶಾಕಿನಿಯರು ತಾನೆ ?’

‘ ಏಯ್ ಗುಬ್ಬಣ್ಣ.. ಕೊಂಚ ಹುಷಾರೊ.. ಅದೂ ಹೇಳಿ ಕೇಳಿ ‘ವಿಶ್ವ ಮಹಿಳಾ ದಿನ’.. ಅವತ್ತೆ ಫೌಲ್ ಲಾಂಗ್ವೇಜ್ ಬಳಸಿ ಅವಹೇಳನ ಮಾಡ್ತಾ ಇದೀಯಾ ಅಂತ ಕೇಸು ಗೀಸು ಹಾಕಿಬಿಟ್ಟಾರು..! ಈಗಂತೂ ಏನೇನು ‘ಲಾ’ ಗಳಿದೆಯೊ, ಯಾವ್ಯಾವ ‘ಸೆಕ್ಷನ್ನು’, ‘ಕ್ಲಾಸ್’ ಗಳಿವೆಯೊ ಒಂದೂ ಗೊತ್ತಾಗೊಲ್ಲ.. ಗಂಡ ಹೆಂಡ್ತಿ ಮಕ್ಕಳು ಅಂತ ಮುಖಾಮೂತಿ ನೋಡದೆ ಒದ್ದು ಒಳಗೆ ಹಾಕ್ಬಿಡ್ತಾರೆ.. ! ಸಾಲದ್ದಕ್ಕೆ ಅದೇಲ್ಲಿರ್ತಾರೊ ಕಾಣೆ.. ಎಲ್ಲಾ ಊರಿನ, ಎಲ್ಲಾ ಟೀವಿ ಚಾನಲ್ ಗಳವರು ಬೇರೆ ಬಂದು ವಕ್ಕರಿಸಿಕೊಂಡುಬಿಡ್ತಾರೆ ‘ ಬ್ರೇಕಿಂಗ್ ನ್ಯೂಸ್ – ಮನೆ ಮಹಿಳೆಯರ ಮೇಲೆ ಪುರುಷನ ದೌರ್ಜನ್ಯ.. ಪುಂಡ ಗಂಡ ಸದ್ಯಕ್ಕೆ ಪೋಲೀಸರ ಅತಿಥಿ!’ ಅಂತೆಲ್ಲ ಹೆಡ್ಲೈನ್ ಕೊಟ್ಟು, ಪೋಟೊ, ವೀಡಿಯೋ ಎಲ್ಲಾ ಪದೆ ಪದೇ ತೋರಿಸಿ ಮಾನ ಮರ್ಯಾದೆನೆಲ್ಲ ಹರಾಜ್ ಹಾಕಿಬಿಡ್ತಾರೆ…’ ಅರ್ಧ ನಿಜವಾದ ಭೀತಿಯಲ್ಲೆ ಉಸುರಿದೆ ಮೆಲುವಾದ ದನಿಯಲ್ಲಿ. ಆದರೆ ಗುಬ್ಬಣ್ಣ ಕೇರ್ ಮಾಡುವ ಮೂಡಿನಲ್ಲಿ ಇದ್ದಂತೆ ಕಾಣಲಿಲ್ಲ…

‘ ಅವೆಲ್ಲಾ ಇಂಡಿಯಾದಲ್ಲಿ ನಡೆಯುತ್ತೆ ಸಾರ್.. ಸಿಂಗಪುರದಲ್ಲಿ ಯಾರು ಕೇಳ್ತಾರೆ ? ಟೀವಿಯವರನ್ನೆ ಒದ್ದು ಒಳಗೆ ಹಾಕ್ತಾರೆ ಅಷ್ಟೆ… ಸದ್ಯ ಅದೂ ಇದ್ದುಬಿಟ್ಟಿದ್ರೆ ದೇವ್ರೆ ಗತಿ..’

‘ಹೋಗ್ಲಿ ಬಿಡು… ಈಗ್ಲಾದ್ರೂ ಸರಿಯಾಗಿ ಹೇಳು… ತಾಯಿ ಮಗಳ ತಾಪತ್ರಯ ಅಲ್ಲಾಂದ್ರೆ ಬೇರೆ ಯಾವುದು ? ಇನ್ನಾವುದಾದರೂ ‘ಚಿನ್ನವೀಡು’ ಇಲ್ಲಾ ತಾನೆ?’ ಎಂದೆ ಸ್ವಲ್ಪ ಪ್ರಚೋದಿಸುವ ದನಿಯಲ್ಲಿ..

‘ಈ ಊರಲ್ಲಿ ಇರೋ ಗುಬ್ಬಿಗೂಡಂತ ‘ವೀಡಿ’ಗೆ ಬಾಡಿಗೆ ಕೊಟ್ಟು ನಿಭಾಯಿಸೋದೆ ಕಷ್ಟ.. ಇನ್ನು ಚಿನ್ನವೀಡೆಲ್ಲಿ ಬರಬೇಕು ತಗೊಳ್ಳಿ ಸಾರ್.. ತಾಯಿ ಮಗಳಿಬ್ಬರು ಏನು ಕಮ್ಮಿ ಕೋಟಲೆಯೇನಲ್ಲ ಬಿಡಿ.. ಆದರೆ ಅವರಿಬ್ಬರ ಜತೆಗೆ ಅವರಮ್ಮ ಮತ್ತೆ ಜತೆಗೆ ನಮ್ಮಮ್ಮನೂ ಸೇರಿಕೊಂಡುಬಿಟ್ಟಿದ್ದಾರೆ.. ಗ್ರಹ, ತಾರೆ, ನಕ್ಷತ್ರ, ಉಲ್ಕೆ, ಧೂಮಪಾತಗಳೆಲ್ಲ ಒಂದೆ ಕಡೆ ವಕ್ಕರಿಸಿಕೊಂಡ ಹಾಗೆ..’

ಆಗ ನನಗೂ ತಟ್ಟನೆ ನೆನಪಾಗಿತ್ತು ಕೆಲವು ವಾರದ ಹಿಂದೆ ಗುಬ್ಬಣ್ಣ ಹೇಳಿದ್ದ ಸುದ್ದಿ. ಅದೊಂದು ದಾರುಣ, ಕರುಣಾಜನಕ ಸ್ಥಿತಿಯೆಂದೆ ಹೇಳಬಹುದೇನೊ ! ಸರಿ ಸುಮಾರು ವರ್ಷಗಳಿಂದ ಸಿಂಗಪುರ ನೋಡಲು ಮಗನ ಮನೆಗೆ ಬರುವ ಆಸೆ ಇಟ್ಟುಕೊಂಡಿದ್ದ ಅವರಮ್ಮನನ್ನು ಹಾಗೂ ಹೀಗೂ ಮಾಡಿ ಒಂದು ಪಾಸ್ಪೋರ್ಟ್ ಮಾಡಿಸಿ, ವೀಸಾ ಕೊಡಿಸಿ ಕರೆಸಿಕೊಂಡಿದ್ದ ಗುಬ್ಬಣ್ಣ.. ಆದರೆ ಅದೇನು ಗ್ರಹಚಾರವೊ ; ಅವನ ಹೆಂಡತಿಗೂ ಅವನಮ್ಮನಿಗು ಸದಾ ಎಣ್ಣೆ ಸೀಗೆಕಾಯಿ.. ಮೂರು ಹೊತ್ತು ಯಾವುದಾದರೊಂದು ಜಟಾಪಟಿ ಕುಸ್ತಿಯಲ್ಲೆ ಇಬ್ಬರೂ ನಿರತ. ಸಂಜೆ ಮನೆಗೆ ಬರುವಷ್ಟು ಹೊತ್ತಿಗೆ ಇಬ್ಬರು ತಲೆಗೊಂದಷ್ಟು ದೂರು ಹಿಡಿದುಕೊಂಡೆ ಕಾದು ತಲೆ ತಿಂದುಬಿಡುತ್ತಿದ್ದರು.. ಅವರಿಬ್ಬರ ಕಾಟದಲ್ಲಿ ಯಾರ ಪರವೂ ವಹಿಸಿಕೊಳ್ಳಲಾಗದೆ ಸುಸ್ತಾಗಿ ಹೋಗಿದ್ದ ಗುಬ್ಬಣ್ಣ..

‘ ಅವರಿಬ್ಬರೂ ಹಾವೂ ಮುಂಗೂಸಿಯ ತರ ಅಂತ ಮೊದಲೆ ನೀನೆ ಹೇಳಿದ್ದಿಯಲ್ಲ ? ‘ ಎಂದೆ.

‘ಅಯ್ಯೊ ಭಯಂಕರ ಸಾರ್.. ನಮ್ಮಮ್ಮನನ್ನು ಯಾಕಾದ್ರೂ ಕರೆಸಿಕೊಂಡೆನೊ? ಅನಿಸುವಷ್ಟು.. ಇಲ್ಲಿರುವತನಕ ಇಬ್ಬರ ಪಕ್ಷವನ್ನು ವಹಿಸದೆ ತಟಸ್ಥ ನೀತಿ ಅನುಸರಿಸೋಣ ಅಂದುಕೊಂಡಿದ್ದೆ. ಆದರೆಲ್ಲಿ ಸಾರ್..ಸಾಧ್ಯ ? ನಮ್ಮಮ್ಮನಿಗೆ ಬಾಯಿ ಕೊಡಲು ತನಗಾಗುವುದಿಲ್ಲ ಅಂತ ನೆಪ ಹೇಳಿ ಹೋದ ವಾರ ನನ್ನ ಹೆಂಡತಿ, ಅವರಮ್ಮನನ್ನು ಕರೆಸಿಕೊಂಡುಬಿಟ್ಟಿದ್ದಾಳೆ ತನ್ನ ಸಪೋರ್ಟಿಗೆ…! ಈಗ ನೋ ‘ಡೈರೆಕ್ಟ್ ಕಾಂಟೆಸ್ಟ್’ ಏನಿ ಮೋರ್, ಸಾರ್.. ‘ಎಲ್ಲಾ ಮಲ್ಟಿ ಕಾರ್ನರು’ ಕಾಂಟೆಸ್ಟೆ!’

‘ ಅವರಮ್ಮನೂ’ ಬಂದಿರುವ ವಿಷಯ ನನಗೂ ಹೊಸತು. ಅಲ್ಲಿಗೆ ನಾಲ್ಕು ಹೆಂಗಸರ ಮಧ್ಯೆ ಸಿಕ್ಕಿಹಾಕಿಕೊಂಡ ಅವನೊಬ್ಬನ ವಿಷಾದ ಕಥಾನಕ ಕಣ್ಮುಂದೆ ಕಟ್ಟಿದಂತಾಯ್ತು… ‘ ಅದೂ ಒಂದು ತರ ಒಳ್ಳೆಯದೆ ಅಲ್ವೇನೊ ಗುಬ್ಬಣ್ಣ..? ಅವರವರೆ ಕಚ್ಚಾಡಿಕೊಂಡು ಸುಮ್ಮನಾಗಲಿ ಅಂತ ಸುಮ್ಮನಿದ್ದುಬಿಡುವುದಲ್ಲವಾ? ‘ ಎಂದೆ.

ಗುಬ್ಬಣ್ಣ ಒಂದರೆಗಳಿಗೆ ಮೌನತಳೆದು ನಂತರ, ‘ಅಲ್ಲೆ ಸಾರ್ ಬಂದಿರೋದು ನಿಜವಾದ ತೊಡಕು..’ ಎಂದ. ನನಗೆ ತೊಡಕೇನೆಂದು ಅರ್ಥವಾಗಲಿಲ್ಲ. ಆ ಭಾವದಲ್ಲೆ ‘ ಅಂದರೆ?’ ಎಂದೆ.

‘ ದಿನಾ ಒಂದಲ್ಲಾ ಒಂದು ವಿಷಯಕ್ಕೆ ದಿನಾ ಕಚ್ಚಾಡುತ್ತಿದ್ದವರು ಈಗ ಇದ್ದಕ್ಕಿದ್ದಂತೆ ಒಂದಾಗಿಬಿಟ್ಟಿದ್ದಾರೆ ಸಾರ್… ವಿಶ್ವ ಮಹಿಳಾ ದಿನದ ಪ್ರಯುಕ್ತಾ…!’

‘ಆಹ್..! ‘ ಎಂದೆ ನಾನು ಅವಾಕ್ಕಾದ ದನಿಯಲ್ಲಿ.

‘ ಅವರಮ್ಮ ಬಂದ ಮೇಲೆ ತಾಯಿ, ಮಗಳು ಒಂದು ಕಡೆ, ನಮ್ಮಮ್ಮ ಇನ್ನೊಂದು ಕಡೆ, ಇಬ್ಬರ ಮಧ್ಯೆ ಒಗ್ಗರಣೆಗೆ ನನ್ನ ಮಗಳು ಬೇರೆ – ‘ಮೂರು ಕೊಟ್ಟರೆ ಅತ್ತ, ಆರು ಕೊಟ್ಟರೆ ಇತ್ತ..’ ಅನ್ನುವಂತೆ… ಮನೆಯೆ ಕುರುಕ್ಷೇತ್ರ ಮಾಡಿಬಿಡುತ್ತಿದ್ದರು. ನನಗೂ ನೋಡಿ ನೋಡಿ ಸಾಕಾಗಿ, ಹೊರಡಬೇಕಿದ್ದ ದಿನಕ್ಕಿಂತ ಎರಡು ವಾರ ಮುಂಚಿತವಾಗಿಯೆ ‘ಅಮ್ಮಾ, ನೀನು ವಾಪಸ್ಸು ಹೋಗಿಬಿಡು ಅಂದೆ.. ಅವಳು ಅತ್ತೂ ಕರೆದು ಗೋಳಾಡಿ ಕೊನೆಗೆ, ‘ ಆಯ್ತು ಮಗಾ.. ಹೆಂಗೂ ಬೇಗ ಹೋಗೂಂತಿದಿಯಾ.. ಸಾಯೋ ಕಾಲ್ದಲ್ಲಿ ಒಂದಾಸೆ – ನಾಕೆಳೆ ಬಂಗಾರದ ಸರ ಹಾಕೊಂಡಿರಬೇಕು, ಸಾಯೋತನಕ ಅಂತ.. ಅದೊಂದು ಕೊಡಿಸಿಬಿಡು, ನೆಮ್ಮದಿಯಾಗಿ ಹೋಗ್ಬಿಡ್ತೀನಿ.. ನಾ ಸತ್ತ ಮೇಲೆ ಅದು ಹೆಂಗಿದ್ರೂ ನಿಂದೆ ತಾನೆ..?’ ಅಂತೆಲ್ಲಾ ತಲೆ ಸವರಿ ಒಪ್ಪಿಸಿಬಿಟ್ಟಳು.. ಅದು ಏನಾಯ್ತೊ, ಹೇಗಾಯ್ತೊ ಗೊತ್ತಿಲ್ಲಾ ಸಾರ್…ನಮ್ಮಿಬ್ಬರಲ್ಲೆ ಗುಟ್ಟಾಗಿದ್ದ ಈ ವಿಷಯ ‘ಆಪೋಸಿಶನ್ ಪಾರ್ಟಿಗೂ’ ಗೊತ್ತಾಗಿ ಹೋಗಿದೆ ಸಾರ್.. ಈಗ ಇದ್ದಕ್ಕಿದ್ದ ಹಾಗೆ ‘ವಿಶ್ವ ಮಹಿಳೆಯರ ದಿನ’ ಅಂತ ಎಲ್ಲಾ ಒಂದಾಗಿಬಿಟ್ಟಿದ್ದಾರೆ ಸಾರ್..’

ಹೆಂಗಸರ ವಿಷಯದಲ್ಲಿ ಗುಟ್ಟೆಲ್ಲಿ ಬಂತು? ಆ ಮುದುಕಿಯೆ ಬೇಕಂತಲೆ ಬಿನ್ನಾಣ ಮಾಡಿ ಒಡವೆ ಹಾಕಿಕೊಂಡು ತೋರಿಸಿಕೊಂಡಿರಬೇಕು, ಅವರಿಗೆಲ್ಲ ಹೊಟ್ಟೆ ಉರಿಸುವ ಸಲುವಾಗಿ. ಪೆದ್ದು ಗುಬ್ಬಣ್ಣನಿಗೆ ಅದೆಲ್ಲಾ ತಂತ್ರದರಿವಾಗದೆ ‘ಹೇಗೊ ಗೊತ್ತಾಗಿಬಿಟ್ಟಿದೆ’ ಅಂದುಕೊಂಡಿದ್ದಾನೆ..

‘ಅರೆ..! ಗುಗ್ಗು ಕಣೊ ನೀನು ಗುಬ್ಬಣ್ಣಾ.. ಅವರೆಲ್ಲಾ ಗಲಾಟೆ ನಿಲ್ಸಿ ಒಂದಾಗಿದಾರೆ ಅಂದ್ರೆ ಖುಷಿ ಪಡೋದು ಬಿಟ್ಟು ಹರಳೆಣ್ಣೆ ಮುಖ ಯಾಕೊ ಮಾಡ್ಕೋತಿ?’ ಎಂದೆ ನಾನು ಅಚ್ಚರಿಯಿಂದ.

‘ ಅಯ್ಯೊ.. ಅವರೆಲ್ಲ ಸಾಮಾನ್ಯದವರು ಅಂದ್ಕೋಬೇಡಿ ಸಾರ್… ಅವರು ಒಂದಾಗಿರೋದು ಆ ಲೆಕ್ಕದಲ್ಲಲ್ಲಾ… ಅದು ಹೇಗೆ ಮನೆ ಹೆಂಗಸರಲ್ಲೆ ಒಬ್ಬರಿಗೆ ಬಂಗಾರದ ಒಡವೆ ಮಾಡಿಸಿಕೊಟ್ಟು ಮಿಕ್ಕವರನ್ನು ಕಡೆಗಣಿಸಲು ಸಾಧ್ಯ?’ ಅನ್ನೊ ಲಾಜಿಕ್…! ಈ ವಿಷಯದಲ್ಲಿ ಮಾತ್ರ ನಾಲ್ಕು ಜನವೂ ಒಟ್ಟಾಗಿ ಬಿಟ್ಟು ಒಂದೆ ತರದ ಒಂದೆ ತೂಕದ, ಒಂದೆ ಡಿಸೈನಿನ ನಾಲ್ಕು ಚೈನು ಕೇಳ್ತಾ ಇದಾರೆ ಸಾರ್ …. 😦 ಒಂದಕ್ಕೆ ಉಭ ಶುಭ ಅನಲಾಗದೆ ಎದುಸಿರು ಬಿಡ್ತಾ ಇದೀನಿ.. ಇವರು ನಾಲ್ಕು ಅಂದರೆ ನಾನೆಲ್ಲಿ ಹೋಗಲಿ ಸಾರ್..’ಗಂಟಲುಬ್ಬಿಸಿ ಅಳುವಿನ ದನಿಯಲ್ಲಿ ನುಡಿದ ಗುಬ್ಬಣ್ಣ..

ನನಗೀಗ ಗುಬ್ಬಣ್ಣನ ಕಷ್ಟ ಪೂರ್ತಿ ಅರಿವಾಯ್ತು.. ಒಂದು ತಿಂಗಳಿಂದ ಆಗಲೆ ಗುಬ್ಬಣ್ಣನೆ ಎಲ್ಲಾದಕ್ಕು ಮನೆಯಾಳಿನಂತೆ ಆಗಿಬಿಟ್ಟಿದ್ದಾನೆ. ‘ನಿಮ್ಮಮ್ಮ ಇರುವತನಕ ನಾನು ಒಲೆ ಹಚ್ಚಲ್ಲ’ ಎಂದು ಸತಿ ಶಪಥವಾದ ಮೇಲಂತೂ ದಿನವೂ ಅವನಿಗೆ ಹೊರಗೆ ಊಟ, ಜತೆಗೆ ಮನೆಯವರಿಗೆಲ್ಲ ಪಾರ್ಸೆಲ್ ಕಟ್ಟಿಸಿಕೊಂಡು ಬರುವ ದುರ್ವಿಧಿ… ಅಲ್ಲಲ್ಲಿ ಅಡಿಗೆ ಮಾಡಿದರೂ ಮನೆ ಹತ್ತಿರದ ಮಾರ್ಕೆಟ್ಟು, ದಿನಸಿ ಅಂಗಡಿಗು ಗುಬ್ಬಣ್ಣನದೆ ಕೈಂಕರ್ಯ. ಹೀಗಾಗಿ ಅವರೆಲ್ಲರ ನಡುವೆ ಸಿಕ್ಕಿ ಈಗಾಗಲೆ ಹೈರಾಣಾಗಿಹೋಗಿದ್ದಾನೆ ಗುಬ್ಬಣ್ಣ.. ಇದರ ಜತೆಗೆ ಈಗ ಚಿನ್ನದ ಸರ ಬೇರೆ…!

‘ ನಾಲ್ಕು ಜನ ಸೇರಿ ಈಗ ನನ್ನ ತಿಥಿಯಾಗುವುದೊಂದು ಬಾಕಿ ಸಾರ್.. ಹಾಳಾದ ‘ವಿಶ್ವ ಪುರುಷರ ದಿನ’ ಅಂತೇನಾದ್ರೂ ಇದ್ರೆ ನೋಡಿ ಹೇಳಿ ಸಾರ್..’

‘ಹಾಗಂತ ಹೆಸರಿಗೆ ಒಂದು ದಿನವೇನೊ ಇದೆ ಗುಬ್ಬಣ್ಣ, ನವೆಂಬರ್ ಹತ್ತೊಂಭತ್ತಕ್ಕೆ… ಆದರೆ ಮಹಿಳಾ ದಿನದ ಹಾಗೆ ಯಾರೂ ಹೆಚ್ಚು ಆಚರಿಸೊ ಹಾಗೆ ಕಾಣ್ಲಿಲ್ಲ.. ಅಷ್ಟೆ..’

‘ ಅದೇ ಸಾರ್.. ನಾವ್ ಮಾಡೊ ತಪ್ಪು.. ನಾವು ಜೋರಾಗಿ ಸೆಲೆಬ್ರೇಟ್ ಮಾಡ್ಬೇಕು ಸಾ.. ಆಗಲೆ ನಮಗು ಸ್ವಲ್ಪ ಬಲ ಬರೋದು.. ಮಹಿಳಾ ದಿನ, ಅಮ್ಮನ ದಿನ, ಅಪ್ಪನ ದಿನ ಅಂತೆಲ್ಲ ಏನೇನೊ ದಿನ ಬರುತ್ತೆ. ಗಂಡಂದಿರ ದಿನ, ಗಂಡಸರ ದಿನ ಅಂತ ಮಾತ್ರ ಎಲ್ಲೂ ಕಾಣುವುದಿಲ್ಲ…. ನಮ್ಮ ಮನೆಯ ಈ ಹೆಂಗಸರಂತೂ, ಅಂತ ಒಂದು ದಿನವೆ ಇಲ್ಲಾ ಅಂತಾ ವಾದಿಸ್ಕೊಂಡು ಕೂತಿದಾರೆ ಸಾರ್…’

‘ ಅದೇನ್ ಮಹಾ ವಿಷಯ ಗುಬ್ಬಣ್ಣ..? ಗೂಗಲ್ ಮಾಡಿದರೆ ನಿನಗೆ ಸಿಗ್ತಾ ಇತ್ತು.. ಅದಿರಲಿ, ಅವರಿಗ್ಯಾಕೆ ಅದು ಅಷ್ಟೊಂದು ಇಂಟ್ರೆಷ್ಟು?’ ನಾನೆಂದೆ ಕುತೂಹಲದಲ್ಲಿ.

‘ ಅವರಿಗೇನೂ ಇಲ್ಲಾ ಬಿಡಿ ಸಾರ್.. ನಾನು ನಯವಾಗಿಯೆ ‘ವಿಶ್ವ ಮಹಿಳಾ ದಿನ ಮಹಿಳೆಯರು ಬಯಸಿದ್ದು ಕೊಡಿಸಬೇಕು ಆನ್ನೋದು ನಿಮ್ಮ ಲಾಜಿಕ್ ಆದರೆ , ನಾನು ಹೇಗೆ ಮಹಿಳಾ ದಿನ ನೀವು ಕೇಳಿದ್ದು ತೆಗೆದುಕೊಡಲು ಒಪ್ಪುತ್ತೇನೊ, ಹಾಗೆ ನೀವು ಪುರುಷರ ದಿನ ನಾನು ಕೇಳಿದ್ದು ಕೊಡಿಸಬೇಕು.. ಹಾಗಿದ್ದರೆ ಚಿನ್ನದ ಸರ, ಇಲ್ಲದಿದ್ರೆ ಇಲ್ಲಾ ‘ ಅಂದುಬಿಟ್ಟೆ ಸಾರ್.. ಆದಕ್ಕೆ, ಅಂತಹ ಒಂದು ದಿನವೆ ಇಲ್ಲ ಅಂತ ಒಂದೆ ಸಮ ವಾದಿಸುತ್ತಿದ್ದಾರೆ… ಈಗ ನೀವು ಡೇಟ್ ಸಮೇತ ಡೀಟೇಲ್ಸ್ ಹೇಳಿದ್ದೀರಾ… ಅದನ್ನೆ ಹಿಡಿದುಕೊಂಡು ಎಲ್ಲರಿಗೂ ಬೆಂಡು ತೆಗೆದುಬಿಡುತ್ತೇನೆ.. ಆಗ ಈ ಚಿನ್ನದ ಸರದ ಪ್ರಸಂಗಕ್ಕೆ ಒಂದು ‘ಪುಲ್ ಸ್ಟಾಪ್’ ಹಾಕಬಹುದೇನೊ ‘ ಎಂದ.

‘ ಆಹಾ..’

‘ ಅಷ್ಟೆ ಅಲ್ಲಾ ಸಾರ್.. ಅವತ್ತೊಂದು ದಿನವಾದರು ಎಲ್ಲಾ ಜವಾನಿಕೆ ಕೆಲಸ ಬಿಟ್ಟು ಫ್ರೀಯಾಗಿ, ಯಾವುದಾದರೂ ಕ್ಲಬ್ಬಲ್ಲೊ, ಪಬ್ಬಲ್ಲೊ ಕಾಲ ಹಾಕಬಹುದು ಸಾರ್..’ವಿಶ್ವ ಪುರುಷರ’ ದಿನದ ಲೆಕ್ಕದಲ್ಲಿ..’

‘ಎಂತಾ ಕಾಲ ಬಂದು ಹೋಯ್ತೊ ಗುಬ್ಬಣ್ಣ.. ಸೀತಾ, ದ್ರೌಪತಿಯಂತಹ ಪತಿವ್ರತೆಯರ ಈ ನಾಡಿನಲ್ಲಿ ಹೆಂಗಸರಿಗೆ ಹೆದರಿ, ಮುದುರಿ ಕೂರುವ ಕಾಲ ಬಂದೋಯ್ತಲ್ಲೊ…?’

‘ನಿಜ ಸಾರ್… ನಾವು ನಮ್ಮ ರೈಟ್ಸ್ ಗೆ ಹೋರಾಡಬೇಕು ಸಾರ್.. ಸಂಘಟಿತರಾಗಿ ಮುನ್ನಡೆಯಬೇಕು ಸಾರ್.. ಅದಕ್ಕೆ ಪುರುಷ ದಿನಕ್ಕೆ ‘ಜೈ’ ಅನ್ನಿ ಸಾರ್..ಜೋರಾಗಿ..’… ನಾನು ಜೋರಾಗಿಯೆ ಜೈಕಾರ ಹಾಕಿದೆ, ಅಲ್ಲಾರಿಗೆ ತಾನೆ ಕನ್ನಡ ಬರುತ್ತದೆ ? ಎನ್ನುವ ಆತ್ಮವಿಶ್ವಾಸದಲ್ಲಿ. ಆದರೂ ಒಮ್ಮೆ ಸುತ್ತಮುತ್ತ ಕಣ್ಣಾಡಿಸಿದ್ದೆ , ಯಾರಾದರು ಕೇಳಿಸಿಕೊಂಡಿದ್ದರೆ ಎನ್ನುವ ಭೀತಿಯಲ್ಲೆ.

‘ ಸರಿ ನಿಮ್ಮಮ್ಮನಿಗೆ ಕೊಡಿಸಿದ ಸರಕ್ಕೇನು ಮಾಡ್ತೀಯಾ?’ ಎಂದೆ ಅದರ ಗತಿಯೇನಾಯ್ತೊ? ಅನ್ನೊ ಕುತೂಹಲದಲ್ಲಿ..

‘ ಈ ಗಲಾಟೆ ಶುರುವಾಗಿದ್ದೆ, ಮೊದಲು ವಾಪಸ್ ಕಿತ್ತಿಟ್ಕೊಂಡೆ ಸಾರ್.. ಜಿ.ಎಂ.ಟಿ ಜುವೆಲರ್ಸಲ್ಲಿ ಕೊಡಿಸಿದ್ದು, ಹೇಗೂ ವಾರದೊಳಗೆ ವಾಪಸ್ ಕೊಟ್ರೆ ವಾಪಸ್ ತೊಗೋತಾರೆ, ಸ್ವಲ್ಪ ಕಮಿಷನ್ ಹಿಡ್ಕೊಂಡು.. ನಾಳೇನೆ ಹೋಗಿ ರಿಟರ್ನ್ ಮಾಡಿಬಿಡ್ತೀನಿ ‘ ಎಂದ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಹೊಸ ಧೈರ್ಯದಲ್ಲಿ.. ವಿಶ್ವ ಪುರುಷರ ದಿನ ಅನ್ನೋದೊಂದು ಅಸ್ತಿತ್ವದಲ್ಲಿದೆ ಅನ್ನೋದೆ ಅವನಿಗೆ ನೂರಾನೆ ಬಲ ತಂದ ಹಾಗೆ ಕಾಣಿಸಿ, ‘ ಸರಿ ಬಿಡೋ ಗುಬ್ಬಣ್ಣ..ಅಲ್ಲಿಗೆ ಯಾರಿಗೂ ಕೊಡಿಸಲಿಲ್ಲಾ ಅಂತಾದ್ರೆ, ಮ್ಯಾಟರ್ ಅಷ್ಟು ಸೀರಿಯಸ್ಸಾಗಲ್ಲ.. ಒಬ್ಬರಿಗೆ ಕೊಡಿಸಿ, ಇನ್ನೊಬ್ಬರಿಗೆ ಕೊಡಿಸಲಿಲ್ಲ ಅಂದ್ರೆ ಮಾತ್ರ ತಾಪತ್ರಯ..’ ಎಂದೆ ತುಸು ಸಮಾಧಾನದ ದನಿಯಲ್ಲಿ. ಈ ಸೀನರಿಯೋದಲ್ಲಿ ಗುಬ್ಬಣ್ಣನಿಗೆ ಬರಿ ಚೂರುಪಾರು ಮೂಗೇಟು ಬೀಳಬಹುದೆ ಹೊರತು, ಪ್ರಾಣಾಂತಿಕ ಪೆಟ್ಟೇನೂ ಆಗುವುದಿಲ್ಲಾ..

‘ ಸರಿ ಬನ್ನಿ ಸಾರ್.. ಒಳ್ಳೆ ಗುಡ್ ನ್ಯೂಸ್ ಕೊಟ್ಟಿದ್ದೀರಾ…. ಅದೆ ನೆಪದಲ್ಲಿ ಕೇಯಫ್ಸಿಯಲ್ಲೊಂದು ಮೀಲ್ಸ್ ಹೊಡೆದೇ ಬಿಡೋಣ ..’ ಎಂದ ಗುಬ್ಬಣ್ಣ ತಾನೆ ‘ಮೆನ್ಸ್ ಲಿಬ್’ ನ ಆಧುನಿಕ ವಕ್ತಾರನಾದವನ ಗತ್ತಿನಲ್ಲಿ..

ಚಿಕನ್ನುಗಳಂತೆ ಆಡುವ ಪುರುಷರಿಗೆ ಕೇಯಫ್ಸಿ ಚಿಕನ್ ತಿಂದ ಮೇಲಾದರು ಸ್ವಲ್ಪ ಲಯನ್ನುಗಳಾಗುವ ಹುರುಪು ಬಂದೀತೆಂದುಕೊಂಡು ಗುಬ್ಬಣ್ಣನ ಜತೆ ನಾನೂ ಹೆಜ್ಜೆ ಹಾಕಿದ್ದೆ, ಕುರಿಯಂತೆ ತಲೆತಗ್ಗಿಸಿ ಗುಬ್ಬಣ್ಣನನ್ನು ಹಿಂಬಾಲಿಸುತ್ತಲೆ!

(ಕಾಲ್ಪನಿಕ ಹರಟೆ – ‘ಮಹಿಳೆ ಮತ್ತು ಪುರುಷರ ಸಂಯುಕ್ತ ಕ್ಷಮೆ ಕೋರಿ!’)

00409. ಲಘು ಹರಟೆ: ಗುಬ್ಬಣ್ಣನ ‘ಅವಾರ್ಡ್ ವಾಪ್ಸಿ’ ಪ್ರೋಗ್ರಾಮ್’ ವರ್ಸಸ್ ‘ದೀಪಾವಳಿ ದಿವಾಳಿ’ !


00409. ಲಘು ಹರಟೆ:
ಗುಬ್ಬಣ್ಣನ ‘ಅವಾರ್ಡ್ ವಾಪ್ಸಿ’ ಪ್ರೋಗ್ರಾಮ್’ ವರ್ಸಸ್ ‘ದೀಪಾವಳಿ ದಿವಾಳಿ’ !
______________________________________

ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ – ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ ‘ಮನೆದೇವರ’ ಆಜ್ಞಾನುಸಾರ. ಅಲಂಕರಣದ ಬರಿ ಪ್ಲಾಸ್ಟಿಕ್ಕಿನದೊ ಅಥವಾ ಮತ್ತಾವುದೊ ಲೋಹದ್ದೊ ಬಿಟ್ಟರೆ ಮಣ್ಣಿನ ಪುಟ್ಟ ಹಣತೆ ಕಣ್ಣಿಗೆ ಬೀಳಲೆ ಇಲ್ಲ. ಸರಿ ‘ಬಫೆಲೊ ಸ್ಟ್ರೀಟ್’ ಬಿಟ್ಟು ಸ್ವಲ್ಪ ಒಳಗಿನ ಬೀದಿಗಳಲ್ಲಿಯಾದರು ಅಡ್ಡಾಡಿ ನೋಡೋಣವೆಂದು ವೀರಮ್ಮ ಕಾಳಿಯಮ್ಮನ್ ಟೆಂಪಲ್ ದಾಟಿ, ಎದುರುಗಡೆಯ ‘ವೀರಾಸಾಮಿ ಸ್ಟ್ರೀಟ್’ ನಲ್ಲಿದ್ದ ಪುಟ್ಟ ಅಂಗಡಿಗಳತ್ತ ಇಣುಕತೊಡಗಿದ್ದೆ.

ಅಲ್ಲೆ ಪಟ್ಟನೆ ಕಂಡಿತೊಂದು ಪುಟಾಣಿ ಅಂಗಡಿ. ಸದ್ದು ಮಾಡದ ಮತಾಪು, ಸುರುಸುರು ಬತ್ತಿಗಳಂತಹ ‘ನಿಶ್ಯಬ್ದ’ ಪಟಾಕಿಗಳ ಜತೆಗೆ ತರತರದ ಮಣ್ಣಿನ ಹಣತೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದ ಅಂಗಡಿಯಲ್ಲಿ ಸುಣ್ಣ ಬಣ್ಣ ಬಳಿಯದ , ಪ್ಲೇನ್ ಮಣ್ಣಿನ ಸಾಂಪ್ರದಾಯಿಕ ಹಣತೆಗಳನ್ನು ಆರಿಸತೊಡಗಿದ್ದೆ, ನಕ್ಷತ್ರಾಕಾರ ಇತ್ಯಾದಿಗಳ ಹೊಸ ಫ್ಯಾಷನ್ ಹಣತೆಗಳನ್ನು ಪಕ್ಕಕ್ಕಿರಿಸುತ್ತ. ಮನದಲ್ಲಿ ಹಾಗೆಯೆ, ‘ಆಹಾ..! ಪಕ್ಕ ಹತ್ತಿರದಲ್ಲೆ ಫಸ್ಟ್ ಕ್ಲಾಸ್ ‘ತೇ ತಾರೈ’ ಮಾರುವ ಚಿಕ್ಕ ರೆಸ್ಟೋರೆಂಟು ಇದೆ, ಆಗಲೆ ಗಮ್ಮನೆ ಸುವಾಸನೆಯೂ ತೇಲಿ ಬರುತಿದೆ.. ಖರೀದಿ ಮುಗಿಸಿ ಒಂದು ದೊಡ್ಡ ಗ್ಲಾಸ್ ಪುಲ್ ಕುಡಿದು ಹೋಗೋದೆ ಸರಿ’ ಎಂದು ಯೋಚಿಸುತ್ತ ಆ ಫ್ಲೇವರ್ಡ್ ಟೀಯ ನೆನಪಿಗೆ ಬಾಯಿ ಚಪ್ಪರಿಸುತ್ತ ಹಣತೆ ಆರಿಸುವ ಕೆಲಸ ಮುಗಿಸಿದ್ದೆ. ಜತೆಯಲ್ಲೆ ಸ್ವಲ್ಪ ‘ಸೌಂಡ್ ಲೆಸ್’ ಪಟಾಕಿ ಮತ್ತು ಮಿಕ್ಕಿದ್ದ ಸಣ್ಣ ಪುಟ್ಟ ಐಟಂ ಖರೀದಿಸಿ ನಿರಾಳ ಮನದಲ್ಲಿ ಆ ರೆಸ್ಟೋರೆಂಟಿನತ್ತ ಹೆಜ್ಜೆ ಹಾಕಿ ಬೀದಿಗೆ ಹೊಂದಿಕೊಂಡಂತೆ ಹಾಕಿದ್ದ ಟೇಬಲ್ ಮುಂದೆ ಕುಳಿತು, ‘ಒನ್ ತೇ ತಾರೈ…ಕೊಡುಂಗೋ’ ಎಂದೆ.

‘ ವಣ್ಣಲ್ಲ ರಂಡು ಕೊಡುಂಗೊ ಸಾರ್.. ರಂಡು ತೇತಾರೈ..’ ಎಂದು ಹಿಂದಿನಿಂದ ಕೇಳಿ ಬಂದ ಚಿರಪರಿಚಿತ ದನಿಗೆ ತಲೆ ತಿರುಗಿಸಿ ನೋಡಿದರೆ, ಮತ್ತಾರು ? ಸಾಕ್ಷಾತ್ ಗುಬ್ಬಣ್ಣನೇ ನಿಂತಿದ್ದನಲ್ಲಿ !

‘ ಒಹೋ.. ಹ್ಯಾಪಿ ದಿವಾಲಿ ಗುಬ್ಬಣ್ಣ..! ವೀಕೆಂಡಲ್ಲಿ ದೀಪಾವಳಿ ಶಾಪಿಂಗಾ? ಏನು ಕೈಯೆಲ್ಲಾ ಇನ್ನೂ ಖಾಲಿ..ಈಗ ಬಂದಿರೋ ಹಾಗಿದೆ ? ಯಾವ್ದು ಬ್ಯಾಗೂ, ಶಾಪಿಂಗ್ ಕಾರ್ಟೂ ಕಾಣ್ತಾ ಇಲ್ವಲ್ಲಾ ..? ಫ್ಯಾಮಿಲಿ ಜತೆ ಬಂದಿದ್ದೀಯಾ? ‘ ಎನ್ನುತ್ತಾ ಸುತ್ತ ಮುತ್ತ ಕುಟುಂಬದವರೇನಾದರೂ ಕಾಣುತ್ತಾರ ಅಂತ ಆಚೀಚೆ ನೋಡಿದೆ..

‘ ಅಯ್ಯೋ ಬಿಡಿ ಸಾರ್.. ಯಾರು ಬಂದಿಲ್ಲ ನಾ ಒಬ್ನೆ… ಅದೂ ಅಲ್ದೆ ಪ್ರತಿ ಸಾರಿ ಹಾಗೆ ಈ ಸಾರಿ ದೀಪಾವಳಿಲಿ ‘ದಿವಾಳಿ’ ಆಗೊ ಮಾತೆ ಇಲ್ಲ .. ಬಿಲ್ಕುಲ್ ಡಿಸೈಡ್ ಮಾಡ್ಬಿಟ್ಟಿದ್ದೀನೀ… ನೋ ವೇಸ್ಟ್ ಎಕ್ಸ್ ಪೆನ್ಸಸ್ ..’ ಅಂದ ಗುಬ್ಬಣ್ಣ.

ಇದು ಸ್ವಲ್ಪ ಹೊಸ ಟ್ವಿಸ್ಟ್.. ಯಾಕೆಂದರೆ ದೀಪಾವಳಿ ಬಂತೂಂದ್ರೆ, ಅವರ ಫ್ಯಾಮಿಲಿ ಪೂರ ಹೊಸ ಬಟ್ಟೆ, ಒಡವೆ ಅದೂ ಇದೂ ಅಂತ ಇಡೀ ವರ್ಷದ ಎಲ್ಲಾ ಹಬ್ಬಗಳ ಸೇಡನ್ನ ಒಂದೇ ಸಾರಿ ತೀರಿಸಿಕೊಳ್ಳೊ ಹೊತ್ತು. ಆ ಸೆಲಬ್ರೇಷನ್ನೆ ಇಲ್ಲಾ ಅಂದ್ರೆ ಎಲ್ಲೆ ಏನೊ ಸಿರಿಯಸ್ಸಾಗಿ ಎಡವಟ್ಟಾಗಿದೆ ಅಂತ ಅರ್ಥ..

‘ಗುಬ್ಬಣ್ಣ.. ಐ ಕಾಂಟ್ ಬಿಲೀವ್ ಮೈ ಇಯರ್ಸ್.. ನಿಮ್ ಮನೇಲಿ, ಅದೂ ದೀಪಾವಳಿ ಆಚರಣೆ ಇಲ್ಲಾ ಅಂದ್ರೇನು ? ನಂಬೋಕಾಗಲ್ಲ ಬಿಡಪ್ಪಾ.. ನೀ ಸೆಲಬ್ರೇಟ್ ಮಾಡ್ದೆ ಇರ್ಬೋದು, ಆದರೆ ನಿಮ್ ಮನೆಯವರು ಬಿಡಬೇಕಲ್ಲಾ ? ಏನಾದ್ರೂ ಮಾಡೆ ಮಾಡಿಸ್ತಾರೆ..’ ಎಂದೆ ಈ ವಾರ ತಾನೆ ನಮ್ಮ ಮನೆಗೆ ಖರ್ಚಾಗಿದ್ದ ಸಾವಿರಾರು ‘ದೀಪಾವಳಿ ಡಾಲರು’ಗಳನ್ನೆ ನೆನೆಯುತ್ತ..

‘ ಪ್ರತಿ ವರ್ಷ ಹಾಗಿತ್ತೊ ಏನೊ.. ? ಈ ಸಾರಿ ಮಾತ್ರ ಹಾಗಿರಲ್ಲ ಸಾರ್.. ಕಂಡೀಷನ್ನಾಗಿ ಡಿಸೈಡ್ ಮಾಡಿಬಿಟ್ಟಿದ್ದೀನಿ.. ಅದೂ ಅಲ್ದೆ ಹಬ್ಬಕ್ಕೆ ಈ ಊರಲಿದ್ರೆ ತಾನೆ ಸೆಲಬ್ರೇಷನ್ನು..? ಇಲ್ಲೆ ಇರಲ್ಲ ಅಂದ್ಮೇಲೆ ಸೆಲಬ್ರೇಷನ್ ಎನ್ ಬಂತು, ಮಣ್ಣಾಂಗಟ್ಟೆ..?’ ಎಂದು ಆತ್ಮವಿಶ್ವಾಸದಿಂದ ನುಡಿದವನ ಮಾತಿಗೆ ಇನ್ನು ಕುತೂಹಲ ಕೆದರಿ, ‘ ಹೌದಾ? ಹಾಗಾದ್ರೆ ಎಲ್ಲಿಗಪ್ಪಾ ಹೋಗೋದು ಊರುಬಿಟ್ಟು..? ಏನಾದ್ರೂ ಹಾಲಿಡೇ ಟೂರು ಹಾಕಿದ್ದೀರಾ ಹೇಗೆ – ಅಲ್ಲೆ ಸೆಲಬ್ರೇಟ್ ಮಾಡೋದು ಅಂತ ? ಟೂರು ಗೀರೂ ಅಂದ್ರೇನು ಕಮ್ಮಿಯಾಗುತ್ತಾ ? ಅದೂ ಡಬ್ಬಲ್ ದಿವಾಳಿ ಮಾಡೊ ಲೆಕ್ಕಾಚಾರ ಅಲ್ವಾ..?’ ಎಂದೆ.

‘ ಅಲ್ಲೆಲ್ಲು ಇಲ್ಲಾ ಸಾರ್.. ಊರಿಗೆ , ಊರಿಗೆ ಹೋಗ್ತಾ ಇದೀವಿ ಹಬ್ಬಕ್ಕೆ.. ಇವಳ ತವರು ಮನೆಗೆ ಪೋನ್ ಮಾಡಿ ಹೇಳ್ಬಿಟ್ಟಿದೀನಿ ಎಲ್ಲಾ ಅಲ್ಲಿಗೆ ಹಬ್ಬಕ್ಕೆ ಬರ್ತೀವೀ ಅಂತ..!’ ಎಂದು ಹೊಸ ಬಾಂಬ್ ಉಡಾಯಿಸಿದ ಗುಬ್ಬಣ್ಣ..!

‘ಬಾ ಬಾ’ ಎಂದು ಬಲವಂತದಿಂದ ಕರೆಯುತ್ತಿದ್ದರೂ, ಹೋದರೆ ಅಷ್ಟು ಖರ್ಚು, ಇಷ್ಟು ಖರ್ಚು, ಹೋದವರಿಗೆಲ್ಲ ಗಿಪ್ಟು, ದುಡ್ಡು ಅಂತೆಲ್ಲಾ ಸುರೀಬೇಕು ಎಂದೆಲ್ಲ ಕಾರಣದಿಂದ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಗುಬ್ಬಣ್ಣ ಈ ಬಾರಿ ತಾನೆ ಸುದ್ದಿ ಕಳಿಸಿ ‘ಸಂಸಾರ ಸಮೇತ ಬರುತ್ತಿದ್ದೇನೆ’ ಅನ್ನಬೇಕಾದರೆ ಅಚ್ಚರಿಯಾಗದೇ ಇದ್ದೀತೆ? ಅದರಲ್ಲು ಒಂದು ಸಾರಿ ವಿಮಾನ ಹತ್ತಬೇಕೆಂದರೂ ಮೂರು ಜನರ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಕೈ ಬಿಡುತ್ತದೆ ಅನ್ನುವ ಕಾರಣಕ್ಕೆ ವರ್ಷಕ್ಕೊಂದೆ ಬಾರಿ ಊರಿಗೆ ಹೋಗಿ ಬರುವ ಹವ್ಯಾಸವಿಟ್ಟುಕೊಂಡಿರುವ ಪ್ರಾಣಿ ಗುಬ್ಬಣ್ಣ.. ಅಂದ ಮೇಲೆ ಏನೊ ರೆವ್ಯುಲೂಷನರಿ ರೀಸನೀಂಗೇ ಇರಬೇಕು ಈ ಬಾರಿಯ ಟ್ರಿಪ್ಪಿಗೆ ಅಂದುಕೊಳ್ಳುತ್ತಲೆ ಕೇಳಿದೆ..

‘ ಅಲ್ಲವೊ ಗುಬ್ಬಣ್ಣ.. ಒಂದು ಕಡೆ ದೀಪಾವಳಿಗೆ ದಿವಾಳಿಯಾಗೊ ಪ್ರೋಗ್ರಾಮ್ ಸಸ್ಪೆಂಡ್ ಮಾಡಿದೀನಿ ಅಂತೀಯಾ.. ಈ ಕಡೆ ಸಂಸಾರ ಪೂರ ಹಬ್ಬಕ್ಕೆ ಊರಿಗೆ ಹೋಗ್ತಾ ಇದೀವಿ ಅಂತಲೂ ಹೇಳ್ತೀಯಾ.. ಎರಡೂ ಒಂದಕ್ಕೊಂದು ಮ್ಯಾಚೇ ಆಗಲ್ವಲ್ಲೊ ? ಬೇರೆಲ್ಲ ಬಿಡು.. ಬರಿ ಫ್ಲೈಟ್ ಖರ್ಚೇ ನೀ ಇಲ್ಲಿ ಮಾಡುತ್ತಿದ್ದ ‘ದಿವಾಳಿ’ ಖರ್ಚಿಗಿಂತ ಜಾಸ್ತಿ ಆಗುತ್ತಲ್ಲೊ..’ ಎಂದೆ.

ಆ ಮಾತು ಕೇಳುತ್ತಿದ್ದಂತೆ ಪಕಪಕನೆ ನಕ್ಕ ಗುಬ್ಬಣ್ಣ, ‘ಅದೆಲ್ಲ ಹಿಂದೆ ಸಾರ್.. ಈಗವೆಲ್ಲಾ ಮುಗಿದ ಕಥೆ… ಬರ್ತೀವಿ ಅಂತ ಸುಮ್ನೆ ಪೋನ್ ಮಾಡಿ ಹೇಳ್ತೀನಾ ? ಅದರರ್ಥ ಬರೋ ಪ್ಲೇನ್ ಚಾರ್ಜೆಲ್ಲಾ ಅವರೆ ನೋಡ್ಕೋಬೇಕು ಸಾರ್.. ಕಡಾ ಖಂಡೀಷನ್ ಆಗಿ ಹೇಳಿಬಿಟ್ಟಿದೀನಿ! ‘ ಎಂದ.

ಹಾಗೆಂದವನ ಮುಖವನ್ನೆ ಅನುಮಾನದಿಂದ ನೋಡುತ್ತ, ‘ ರಿಯಲೀ ?? ಏನ್ ಗುಬ್ಬಣ್ಣ ಆನೆ ಹೊಟ್ಟೆಲಿ ಕೋಳಿ ಮೊಟ್ಟೆ ಬರ್ಸೊ ಮಾತಾಡ್ತಾ ಇದೀಯಾ… ಇದೆಲ್ಲಾ ಆಗೋದುಂಟೆ ? ಇವೆಲ್ಲ ಅವ್ರು ಎಂಟರ್ಟೈನ್ ಮಾಡ್ತಾರಾ..? ಅದು ಮದುವೆ ಆಗಿ ಹತ್ತು ಹದಿನೈದು ವರ್ಷ ಕಳೆದು ಈಗೆಲ್ಲ ‘ಹಳೆ ಬಾಟ್ಲಿ, ಖಾಲಿ ಸೀಸಾ’ ಅನ್ನೊ ಹಾಗೆ ಆಗಿರೋವಾಗ.. ?’ ಎಂದೆ.

‘ ನಾನು ಮೊದಲಾಗಿದ್ದರೆ ಆಗೋಲ್ಲ ಅಂತಾನೆ ಹೇಳ್ತಿದ್ದೆ, ಹಾಗನ್ಕೊಂಡೆ ಸುಮ್ಮನಿದ್ಬಿಡ್ತಿದ್ದೆ ಸಾರ್.. ಆದ್ರೆ ಈಗಲ್ಲ ಬಿಡಿ..’ ಗುಬ್ಬಣ್ಣನದಿನ್ನು ಅದೇ ಆತ್ಮವಿಶ್ವಾಸದ ಗಟ್ಟಿಯುತ್ತರ.

‘ ಈಗೇನಪ್ಪಾ ಅಂತಹ ಗ್ರೌಂಡ್ ಕಂಡೀಷನ್ ಚೇಂಜ್ ಆಗ್ಬಿಟ್ಟಿರೋದು ? ಏನ್ ನಿಮ್ಮತ್ತೆ ಮಾವನಿಗೆ ಲಾಟ್ರಿಯೇನಾದರೂ ಹೊಡಿತಾ – ನೀ ಕೇಳಿದ್ದೆ ತಡ ಸರ್ಕಾರಿ ಗ್ರಾಂಟ್ ತರ ಮಂಜೂರು ಮಾಡಿ, ‘ಅಪ್ರೂವ್ಡ್’ ಅಂಥ ಆರ್ಡರ್ ಪಾಸ್ ಮಾಡೋಕೆ…?’ ಎಂದೆ ಸ್ವಲ್ಪ ಕೆಣಕುವ ದನಿಯಲ್ಲೆ. ಆದರೂ ಒಳಗೊಳಗೆ ಅಳುಕು – ಅದೇನಾದರೂ ನಿಜವೇ ಆಗಿಬಿಟ್ಟಿದ್ದರೆ ಗುಬ್ಬಣ್ಣನ ಆ ಸೌಭಾಗ್ಯಕ್ಕೆ ಹುಟ್ಟುವ ಹೊಟ್ಟೆಕಿಚ್ಚನ್ನು ನಿಭಾಯಿಸೋದು ಹೇಗೆ ಅಂತ..

‘ ಅಯ್ಯೋ ಲಾಟ್ರೀನೂ ಇಲ್ಲಾ, ಎಂತದ್ದು ಇಲ್ಲಾ ಬಿಡಿ ಸಾರ್.. ಹೆಚ್ಚು ಕಮ್ಮಿ ಅವರ ಜೀವನವೆಲ್ಲ ಲಾಟ್ರಿ ಹೊಡ್ಕೊಂಡೆ ಬರ್ತಿದ್ರೊ ಏನೊ.. ಪುಣ್ಯಕ್ಕೆ ಕೈಲಿದ್ದ ಗವರ್ಮೆಂಟ್ ಕೆಲಸ ಸಂಬಳ, ಗಿಂಬಳ ಅಂತೆಲ್ಲಾ ಸೇರಿ ಸಾಕಷ್ಟು ದುಡ್ಡು ಮಾಡಿಟ್ಟಿದಾರೆ.. ಬಿಚ್ಚೋಕೆ ಜುಗ್ಗತನ , ನಮ್ಮನ್ನೆ ಬೇಟೆಯಾಡೋಕ್ ನೋಡ್ತಾರೆ ಅಷ್ಟೆ..’

‘ಅದ್ಸರಿ ಗುಬ್ಬಣ್ಣ.. ಆರ್ಗ್ಯುಮೆಂಟಿಗೆ ಅವರ ಹತ್ರ ದುಡ್ಡು ಇದೆ ಅಂತ್ಲೆ ಇಟ್ಕೋಳೋಣ .. ಆದ್ರೆ ಅವ್ರು ಅದನ್ಯಾಕೆ ನಿನಗೆ ಕೊಡ್ಬೇಕು, ಖರ್ಚು ಮಾಡ್ಬೇಕು ಅಂತ ನೀ ಲಾಜಿಕಲ್ ರೀಸನಿಂಗ್ ಹೇಳ್ತಾ ಇಲ್ವಲ್ಲಾ ?’ ಎಂದೆ ಮತ್ತೆ ಅವನ ಮಾತನ್ನು ಟ್ರಾಕಿಗಿಳಿಸಲು ಯತ್ನಿಸುತ್ತ.

ಅದೇ ಗಳಿಗೆ ಗುಬ್ಬಣ್ಣ ಬಾಯಿಬಿಡಲನುವಾಗುವುದಕ್ಕೆ ಸರಿಯಾಗಿ ಆರ್ಡರ್ ಮಾಡಿದ್ದ ತೇತಾರೈ ಬಂತು.. ಗುಬ್ಬಣ್ಣ ಲೋಟವನ್ನೆತ್ತಿ ಒಂದು ಗುಟುಕು ಚಪ್ಪರಿಸಿದವನೆ, ‘ ಹಾ ಟೀ ಅಂದ್ರೆ ಇದೂ ಸಾರ್.. ಸ್ವಲ್ಪ ಸಕ್ಕರೆ ಜಾಸ್ತಿ ಅನ್ನೋದ್ ಬಿಟ್ರೆ ಸುಪರ್ ಅಲ್ವಾ?’ ಎಂದವನೆ ಮುಂದುವರೆಸುತ್ತ, ‘ ಸಾರ್.. ನಾನು ಹೇಳ್ತಿರೊ ಲಾಜಿಕ್ ಸಿಂಪಲ್ ಸಾರ್…. ನನ್ನ ಈ ಡಿಮ್ಯಾಂಡಿಗೆ ಮುಖ್ಯ ಪ್ರೇರಣೆ ನಮ್ಮ ನಾಡಿನ ಬುದ್ಧಿ ಜೀವಿಗಳು ಅನಿಸಿಕೊಂಡ ಕೆಲವು ಮಹಾನ್ ಸಾಹಿತಿಗಳು, ರೈಟರ್ಸ್ ಸಾರ್..’ ಅಂದ.

ನಾ ಫಕ್ಕನೆ ಬೆಚ್ಚಿ ಬಿದ್ದೆ.. ಎಲ್ಲಿಯ ಗುಬ್ಬಣ್ಣ ? ಎಲ್ಲಿಯ ಸಾಹಿತಿ ಲೋಕ ? ಯಾವ ಬುದ್ಧಿ ಜೀವಿ ಸಾಂಗತ್ಯ? ಎಲ್ಲವೂ ಅಯೋಮಯವಾಗಿ ಕಂಡಿತು.. ನಾನು ಬಾಯಿ ತೆರೆದು ಏನೊ ಕೇಳುವಷ್ಟರಲ್ಲೆ ಮತ್ತೆ ಬಾಯಿ ಹಾಕಿದ ಗುಬ್ಬಣ್ಣ , ‘ಗೊತ್ತು ಸಾರ್.. ನಿಮಗೀ ಅನುಮಾನ ಬಂದೇ ಬರುತ್ತೆ ಅಂತ.. ಗೋಕುಲಾಷ್ಟಮಿ, ಇಮಾಂಸಾಬಿ ಸಂಬಂಧ ಅಂಥ ಡೈಲಾಗ್ ಹೊಡೆಯೋಕ್ ಮುಂಚೆ ತಡ್ಕೋಳಿ ಸ್ವಲ್ಪ.. ನಾನು ಹೇಳ್ತಿರೋದು ಅವರ ಸಾಹಿತ್ಯ, ಬರೆದ ಕಥೆ, ಕವನ, ಪುಸ್ತಕ ಇತ್ಯಾದಿ ವಿಚಾರಗಳಲ್ಲ…’

‘ಮತ್ತೆ..? ಇನ್ಯಾವ ವಿಚಾರ ?’

‘ ಅದೇ ಸಾರ್.. ಈಚೆಗೆ ತುಂಬಾ ಪಾಪ್ಯುಲರ್ ಆಗಿ ಸೋಷಿಯಲ್ ಮೀಡಿಯಾದಿಂದ ಹಿಡಿದು ಪುಟ್ಪಾತ್, ಕಲ್ಬೆಂಚ್ ಡಿಸ್ಕಷನ್ ವರೆಗು ಹಬ್ಕೊಂಡು, ಕವನ, ಚುಟುಕ, ಕಾರ್ಟೂನು ಅಂತ ನೂರಾರು ಅವತಾರ ತಾಳಿರೊ – ‘ಅವಾರ್ಡ್ ವಾಪ್ಸಿ’ ಪ್ರಕರಣ.. ಅಸಹಿಷ್ಣುತೆಯನ್ನು ಪ್ರತಿಭಟಿಸಿ ಕೊಟ್ಟಿದ್ದ ಅವಾರ್ಡೆಲ್ಲಾ ವಾಪಸ್ ಮಾಡ್ತಾ ಇದಾರಲ್ಲ ಆ ವಿಚಾರ..’

‘ ಗುಬ್ಬಣ್ಣ ಈಗಲೂ ನಾನು ಅದೇ ತರದ ಇನ್ನೊಂದು ಡೈಲಾಗ್ ಹೊಡೀಬೇಕಾಗುತ್ತೆ ನೋಡು.. ಅಲ್ಲಯ್ಯಾ ಅದಕ್ಕು ನಿನ್ನ ಡಿಮ್ಯಾಂಡಿಗು ಎಲ್ಲಿದಯ್ಯಾ ಸಂಬಂಧ ? ಅದೇನೊ ‘ಪಕ್ಕದವನ ಮನೇಲಿ ಮಗೂ ಹುಟ್ಟುದ್ರೆ ನಮ್ಮ ಮನೇಲಿ ತೊಟ್ಟಿಲು ತೂಗಿದ್ರೂ’ ಅನ್ನೋ ಹಾಗೆ… ನೋ ರಿಲವೆನ್ಸ್ ಐ ಸೀ ಗುಬ್ಬಣ್ಣಾ.. ಸಾರೀ..’ ಎಂದೆ..

ನನ್ನ ಮಾತಿನ ಧಾಟಿಯಿಂದಲೆ ನನ್ನ ಸಹನೆಗೆಡುತ್ತಿರುವುದನ್ನು ಅರಿತ ಕಿಲಾಡಿ ಗುಬ್ಬಣ್ಣ, ಇನ್ನು ಎಳೆದಾಡಿಸುವುದು ಸರಿಯಲ್ಲವೆಂದುಕೊಂಡೊ ಏನೊ..’ .. ನಾ ಪೂರ್ತಿ ಹೇಳೋದಕ್ಕೆ ಬಿಡಿ ಸಾರ್.. ನೀವು ಬಿಡೋ ತನಕ ನಾ ಹೇಗೆ ತಾನೆ ಹೇಳೋಕಾಗುತ್ತೆ ? ಈ ಸಾಹಿತಿಗಳಿಗೆಲ್ಲ ನಿಮಗೆ ಗೊತ್ತಿರೋ ಹಾಗೆ ಹಣಕ್ಕಿಂತ ರೆಕಗ್ನಿಷನ್ ಮುಖ್ಯಾ.. ಹೌದು ತಾನೆ ? ಆ ರೆಕಗ್ನಿಷನ್ ಅಫಿಶಿಯಲ್ಲಾಗಿ ಬರೋದೆ ಅವಾರ್ಡ್ ಮುಖಾಂತರ ಅಲ್ವಾ? ಹೀಗಿದ್ರೂನೂ ಅಂಥಾ ದೊಡ್ಡ ದೊಡ್ಡ ಮನುಷ್ಯರೆಲ್ಲಾ ವರ್ಷಾನುಗಟ್ಲೆ ಹಿಂದೆಯಿಂದ ಕೊಟ್ಟಿದ್ದ ಅವಾರ್ಡುಗಳನ್ನೆ ಮುಖಾ ಮೂತಿ ನೋಡ್ದೆ ಯದ್ವಾತದ್ವಾ ವಾಪಸ್ಸು ಮಾಡೋದು ನೋಡಿ ನನಗೂ ಅದರಲ್ಲೊಂದು ಪಾಠ ಇದೆ ಕಲಿಯೋಕೆ, ಅದರಲ್ಲು ನಮ್ಮಂತಹ ಜನ ಸಾಮಾನ್ಯರಿಗೆ ಅನ್ನಿಸ್ತು ಸಾರ್…. ‘ ಎಂದ ಏನೊ ಜ್ಞಾನೋದಯವಾದ ಗುರುವರ್ಯನ ಹಾಗೆ ಪೋಸು ಕೊಡುತ್ತ..

‘ ಏನು ಅಂತಹ ಪಾಠಾ ? ಸ್ವಲ್ಪ ನಮ್ಮಂತಹ ಪಾಮರರಿಗೂ ತಿಳಿಸೊ ಅಪ್ಪಣೆಯಾಗಲಿ..’ ಎಂದೆ ಮತ್ತೆ ಕೆಣಕುತ್ತ..

‘ಅದೇ ಸಾರ್.. ಹೀಗೆ ದೊಡ್ಡದೊಡ್ಡ ವಿಚಾರವಾದಿಗಳೆ ತಮಗೆ ಅಮೂಲ್ಯ ಅನಿಸಿದ್ದು ಬಿಟ್ಟುಕೊಡ್ತಾ ಇದಾರೆ, ತಮಗೆ ಬೇಕಾದ ಮತ್ತೊಂದರ ಸಲುವಾಗಿ – ಉದಾಹರಣೆಗೆ ಅಸಹಿಷ್ಣುತೆ ಹೆಸರಿನಲ್ಲಿ ಕಳುವಾಗ್ತಿರೊ ವ್ಯಕ್ತಿ ಸ್ವಾತಂತ್ರದ ಸಲುವಾಗಿ.. ಅಂದ್ಮೇಲೆ ನಾವೂ ಅವರ ಆದರ್ಶಾನೆ ಅನುಕರಿಸ್ತಾ ಯಾಕೆ ಕೆಲವು ಅನುರೂಪಿ ತತ್ವಗಳನ್ನ ಅಳವಡಿಸ್ಕೊಬಾರದು ? ಅನ್ನಿಸ್ತು..’

‘ ಆಹಾ..’

‘ ನಮಗೂ ನಮ್ಮ ವ್ಯಕ್ತಿ ಸ್ವಾತಂತ್ರ ಅನ್ನೋದು ಕಳುವಾಗೋದು ಮದ್ವೆ ಆದ್ಮೇಲೆ ಅಲ್ವಾ ಸಾರ್… ಅದಕ್ಕೊಸ್ಕರ ನಮ್ಮನ್ನೆ ಟ್ರೇಡ್ ಮಾಡ್ಕೊಂಡು, ಅನುಸರಿಸ್ಕೊಂಡು, ಎಷ್ಟೆಲ್ಲಾ ಕಾಂಪ್ರಮೈಸೆ ಮಾಡ್ಕೊಂಡು ಬದುಕ್ತಿದ್ದೀವಲ್ವಾ?’

‘ ಅದಕ್ಕೆ..?’

‘ ಅದರ ಬೆಲೆ ಎಲ್ಲರಿಗು ಅರ್ಥ ಮಾಡಿಸ್ಬೇಕಲ್ವಾ ಸಾರ್..? ಅದಕ್ಕೆ ಮೊನ್ನೆ ಪೋನ್ ಮಾಡ್ದಾಗ ನಮ್ಮ ಮಾವನ ಮೇಲೆ ಎಕ್ಕಾಮುಕ್ಕಾ ಎಗರಾಡಿಬಿಟ್ಟೆ ಸಾರ್.. ಅವರಿಗೂ ಈ ‘ಅವಾರ್ಡ್ ವಾಪ್ಸಿ’ ಬಗ್ಗೆ ನೋಡಿ ಗೊತ್ತಿತ್ತಲ್ಲಾ? ನಾನೂ ಅದೇ ಟಾಫಿಕ್ ಎತ್ಕೊಂಡು ನನ್ನ ಮದುವೆಲಿ ಕೊಟ್ಟಿದ್ದ ಖಾಲಿ ಕಾಶಿಯಾತ್ರೆ ಪಂಚೆ, ಗಿಂಡಿ, ಉಂಗುರದಂತ ಐಟಮ್ಮೆಲ್ಲ ನನ್ನ ಲೆವಲ್ಲಿಗೆ ಸರಿಯಾದ ಮರ್ಯಾದೇನೆ ಅಲ್ಲಾ.. ಆ ಗೊತ್ತಿಲ್ಲದ ಕಾಲದಲ್ಲಿ ಏಮಾರ್ಸಿ, ತಲೆ ಕೆಡಿಸಿ ನಿಮ್ ಮಗಳನಾ ನನ್ನ ಕುತ್ತಿಗೆ ಕಟ್ಟಿಬಿಟ್ಟು ನನ್ನ ಲೈಫನ್ನೆ ‘ಡೀರೈಲ್’ ಮಾಡಿಬಿಟ್ಟಿದೀರಾ.. ಇದನ್ನ ಪ್ರತಿಭಟಿಸೊ ಸಲುವಾಗಿ ನಾನು ಅದೆಲ್ಲಾ ಉಡುಗೊರೆ ವಸ್ತುಗಳನ್ನ ‘ಅವಾರ್ಡ್ ವಾಪ್ಸಿ’ ಸ್ಕೀಮಲ್ಲಿ ವಾಪಸು ಕೊಡ್ತಾ ಇದೀನಿ – ಅಂದೆ ಸಾರ್..’ ಗುಬ್ಬಣ್ಣ ತನ್ನ ಲಾ ಪಾಯಿಂಟಿನ ಮೊದಲ ಲಾಜಿಕಲ್ ತುಣುಕು ಹೊರಗೆ ಬಿಟ್ಟ..

ನನಗೆ ಈ ‘ಕುತ್ತಿಗೆಗೆ ಕಟ್ಟಿದ್ದು’ ಲಾಜಿಕ್- ಸರಿಯಾಗಿ ಅರ್ಥವಾಗಲಿಲ್ಲ.. ಕುತ್ತಿಗೆ ತಾಳಿ ಕಟ್ಟೋದು ಮದುವೆ ಗಂಡು, ಅರ್ಥಾತ್ ಗುಬ್ಬಣ್ಣ.. ಆದ್ರೆ ಮಾವನೆ ಹೆಂಡ್ತಿಯನ್ನ ಕುತ್ತಿಗೆಗೆ ಕಟ್ಟೊ ಶಾಸ್ತ್ರ ಎಲ್ಲೂ ನೋಡಿಲ್ವಲ್ಲಾ ? ‘ಅದೇನ್ ಗುಬ್ಬಣ್ಣನ ಕಡೆ ಸ್ಪೆಷಲ್ ಸಂಪ್ರದಾಯಾನಾ ?’ ಅಂತ ಕೇಳಬೇಕೆನಿಸಿದರೂ ಅದು ಬರಿ ಟೆಕ್ನಿಕಲ್ ಪಾಯಿಂಟ್ ಅಷ್ಟೆ, ಅಲ್ದೆ ಅದರಿಂದ ವಿಷಯಾಂತರನೂ ಆಗುತ್ತೆ ಅನಿಸಿ ಅದನ್ನಲ್ಲೆ ಕೈ ಬಿಟ್ಟು ಮೂಲ ವಿಷಯವನ್ನೆ ಕೆದಕಿದೆ..

‘ ಅಯ್ಯೊ ಗುಬ್ಬಣ್ಣ.. ಅವೆಲ್ಲಾ ಇನ್ನು ಎಲ್ಲಿರುತ್ತೊ..? ಪಂಚೆ ಗಿಂಚೆ ಎತ್ತಿಟ್ಕೊಂಡಿದ್ರೂ ಬೂಷ್ಟು ಕಟ್ಕೊಂಡ್ ಹಾಳಾಗಿರುತ್ತೊ ಏನೊ.. ಇನ್ನು ಆಗ ಕೊಟ್ಟಿದ ಉಂಗುರ ಈಗ ಕಿರು ಬೆರಳಿಗೂ ಆಗಲ್ಲಾ’ ಸುಮಾರು ಐದಾರು ಪಟ್ಟು ದೊಡ್ಡದಾಗಿರಬಹುದಾದ ಅವನ ಬೆರಳನ್ನೆ ನೋಡುತ್ತ ಮುಂದುವರೆಸಿದೆ..’ ಅದೂ ಸಾಲದು ಅಂತ ನೀ ಕೊಟ್ಟೆ ವಾಪಸ್ಸು ಅಂತಾನೆ ಇಟ್ಕೊ.. ಅವರಿಗೇನು ಖುಷೀಲಿ ತೊಗೋತಾರೆ ಬಂದಷ್ಟು ಚಿನ್ನ ಬರ್ಲೀ ಅಂತಾ’

‘ ಅದು ನನಗೂ ಗೊತ್ತು ಸಾರ್.. ನಾನಷ್ಟು ಅನಾಡೀ ನಾ? ಅದಕ್ಕೆ ಸರಿಯಾಗಿ ಹೇಳ್ಬಿಟ್ಟೆ ಸಾರ್.. ಪುಕ್ಕಟೆ ಸಿಕ್ತು ಅಂತ ಖುಷೀಲಿ ಎದ್ದು ಬಿದ್ದು ತೊಗೊಂಬಿಡ್ಬೇಡಿ.. ಇದು ಬರಿ ಅಡ್ವಾನ್ಸ್ ಮಾತ್ರಾ ಅಂದೆ..’

‘ಹಾಂ ?’

‘ ಹೂಂ ಸಾರ್..’

‘ ಇನ್ನು ಖುಷಿಯಾಗಿ ‘ಇನ್ನೇನು ? ಮದುವೆ ಬೆಳ್ಳಿ ಸಾಮಾನು, ರೇಷ್ಮೇ ಸೀರೆ, ಮಗಳಿಗೆ ಹಾಕಿದ ಬಂಗಾರ.. ಎಲ್ಲಾನೂ ‘ಅವಾರ್ಡ್ ವಾಪ್ಸಿ’ ಮಾಡ್ತೀರಾ? ‘ ಅಂತ ಕೇಳಿರ್ಬೇಕು …’

‘ ಎಗ್ಸಾಕ್ಟಲಿ ಸಾರ್.. ವರ್ಡು ಟು ವರ್ಡು ಹೀಗೆ ಕೇಳಿದ್ರೂ..’

‘ ನೀ ಪೆದ್ದು ಪೆದ್ದಂಗೆ ಅದಕೂ ಹೂ ಅಂದ್ಯಾ?’

‘ ಹೂ ಅಂದೆ ಸಾರ್.. ಆದ್ರೆ ಪೆದ್ದು ಪೆದ್ದಾಗಿ ಅನ್ಲಿಲ್ಲಾ.. ಹೌದು ಅದೂ ರಿಟರ್ನ್ ಆಗುತ್ತೆ.. ಆದ್ರೆ ಅದು ಸೆಕೆಂಡ್ ಅಡ್ವಾನ್ಸ್ ಆಗುತ್ತೆ ಅಂದೆ..’ ಎಂದ ಗುಬ್ಬಣ್ಣ..

ನನಗೆ ಇದು ಅನ್ ಎಕಪೆಕ್ಟೆಡ್ ಟರ್ನ್.. ‘ಗುಬ್ಬಣ್ಣ ಸೀಮ್ಸ್ ಟು ಬಿ ಅಪ್ ಟು ಸಮ್ ಥಿಂಗ್’ – ಅಂತ ಮೊದಲ ಬಾರಿಗೆ ಅನುಮಾನ ಬಂತು..

‘ ಅವರಿಗು ನನ್ನ ಹಾಗೆ ಕುತೂಹಲ ಜಾಸ್ತಿಯಾಗಿ – ಈ ಅಡ್ವಾನ್ಸ್ ವಿಷಯಾ ಸಾಕು.. ಫೈನಲ್ ಸೆಟಲ್ಮೆಂಟ್ ವಿಷಯಕ್ಕೆ ಬನ್ನಿ ಅಂದ್ರಾ ?’ ಎಂದೆ.

‘ ಸಾರ್.. ನೀವೇನಾದ್ರೂ ನಮ್ಮ ಮಾವನಿಗೆ ರಿಲೇಷನ್ನಾ ? ಮತ್ತೆ ಅವರು ಕೇಳಿದ ಹಾಗೆ ವರ್ಡು ಟು ವರ್ಡು ಹೇಳ್ತಿದೀರಾ?’ ಎಂದು ಮತ್ತೆ ಟ್ರಾಕ್ ಬದಲಿಸ ಹೋದ ಗುಬ್ಬಣ್ಣನನ್ನು ತಡೆದು, ‘ ಅದು ಸೆಕೆಂಡರಿ ಟಾಪಿಕ್ .. ಫಸ್ಟ್ ಕನ್ಕ್ಲೂಡ್ ದಿಸ್ ಟಾಫಿಕ್’ ಎಂದೆ..

‘ ಸರಿ ಸಾರ್.. ಹೇಳ್ಬಿಡ್ತೀನಿ.. ಅವ್ರೂ ನಿಮ್ಮ ಹಾಗೆ ಕೇಳಿದ್ರೂ.. ನಾನು ಹೇಳ್ದೆ ‘ಅಡ್ವಾನ್ಸ್ ಎಲ್ಲಾ ವಾಪಸ್ ಕೊಟ್ ಮೇಲೆ ಉಳಿದಿದ್ದೇನು ? ನಿಮ್ಮ ಮಗಳು, ಮೊಮ್ಮಗಳು ತಾನೆ ? ಅವರಿಬ್ಬರನ್ನು ಅದೇ ‘ಅವಾರ್ಡ್ ವಾಪ್ಸಿ’ ಸ್ಕೀಮಲ್ಲಿ ವಾಪಸ್ ಮಾಡಿಬಿಡ್ತೀನಿ… ಇಷ್ಟು ವರ್ಷದ ಮೈಂಟೆನೆನ್ಸ್ ಚಾರ್ಜು ಇತ್ಯಾದಿ ಎಲ್ಲಾ ಸೆಪರೇಟು ಬಿಲ್ ಲಾಯಾರು ಮುಖಾಂತರ ಕಳಿಸ್ತೀನಿ’ ಅಂದೆ ಸಾರ್.. ಸಿರಿಯಸ್ಸಾಗಿ .’ ಎಂದು ದೊಡ್ಡ ಬಾಂಬ್ ಶೆಲ್ ಹಾಕಿದ ಗುಬ್ಬಣ್ಣ..!

ನಾನೂ ಭೂಕಂಪವಾದವನಂತೆ ಎಗರಿಬಿದ್ದು ‘ ಹಾಂ!’ ಎಂದು ಉದ್ಗಾರ ತೆಗೆದೆ, ಕೈಲಿದ್ದ ತೇತಾರೆಯ ಮಿಕ್ಕ ಚೂರನ್ನು ಕೈ ಮೇಲೆಲ್ಲಾ ಚೆಲ್ಲಿಕೊಳ್ಳುತ್ತ.. ಅದನ್ನು ಒರೆಸಿಕೊಳ್ಳಲು ಜೋಬಿನಿಂದೊಂದು ನ್ಯಾಪ್ಕಿನ್ ಕೊಡುತ್ತ ಗುಬ್ಬಣ್ಣ, ‘ ಬಿಲ್ಕುಲ್ ಅವರೂ ಹೀಗೆ ಬೆಚ್ಚಿ ಬಿದ್ದಿರಬೇಕು ಸಾರ್..’ಕಾಫಿ ಯಾಕ್ರಿ ಮೈ ಮೇಲ್ ಚೆಲ್ಕೊಂಡ್ರಿ’ ಅಂತ ನಮ್ಮತ್ತೆ ವಾಯ್ಸ್ ಕೇಳಿಸ್ತಿತ್ತು.. ‘

‘ಸರಿ ಹಾಳಾಯ್ತು.. ಆಮೇಲೇನಾಯ್ತು.. ಹೇಳು..’

‘ ಸಾರ್ ಟು ಮೇಕ್ ದ ಲಾಂಗ್ ಸ್ಟೋರಿ ಶಾರ್ಟ್ – ನಾ ಹೇಳಿದ್ದು ಸೀರಿಯಸ್ಸಾಗಿನೆ, ಬರಿ ಜೋಕ್ ಅಲ್ಲಾ ಅಂತ ಅವರಿಗು ಗೊತ್ತಾಯ್ತು ಸಾರ್..’

‘ಓಹೋ..!’

‘ ಕೊನೆಗೊಂದು ಕಾಂಪ್ರಮೈಸಿಗೆ ಬಂದವರ ಹಾಗೆ.. ‘ಪೋನಲ್ಲೆಲ್ಲಾ ಬೇಡಾ.. ಅದೇನೇನು ವಾಪಸ್ ಮಾಡ್ಬೇಕೂಂತಿದಿರೊ ಎಲ್ಲಾನೂ ಕರ್ಕೊಂಡು ಇಲ್ಲಿಗೆ ಬನ್ಬಿಡಿ ಹಬ್ಬಕ್ಕೆ.. ಎಲ್ಲಾ ಇಲ್ಲೆ ಕೂತು ಮಾತಾಡೋಣ.. ಏನೇನು ಶಾಂತಿಯಾಗ್ಬೇಕೊ ಎಲ್ಲಾ ಮಾಡಿಸೋಣ.. ‘ ಅಂದ್ರೂ ಸಾರ್..

‘ಸರೀ ನೀ ಹೂ ಅಂದು ಹೊರಟ್ಬಿಟ್ಯಾ? ‘

‘ಸುಮ್ನೆ ಎಲ್ ಹೊರಡ್ತೀನಿ ಸಾರ್..? ಟಿಕೆಟ್ ಖರ್ಚೇನು ಅವರ ತಾತನ ಮನೆಯದಾ?.. ನಾನಂತು ಅದಕ್ಕೆಲ್ಲಾ ದುಡ್ಡು ಹಾಕಿ ವೇಸ್ಟ್ ಮಾಡಲ್ಲಾ.. ಬೇಕೂಂತಿದ್ರೆ ಅವರೆ ಖರ್ಚು ಮಾಡಿ ಕರೆಸ್ಕೊಳ್ಳಲಿ ಅಂದೆ’

‘ ಹೂಂ ಅಂತ ಒಪ್ಕೊಂಡ್ಬಿಟ್ರಾ?’

‘ ಹೂ ಸಾರ್.. ಒಪ್ಕೊಳೋದೇನು ಬಂತು ? ಆಗ್ಲೆ ಬುಕ್ ಮಾಡಿ ಆನ್ಲೈನ್ ಟಿಕೆಟ್ಟು ಕಳಿಸ್ಬಿಟ್ಟಿದಾರೆ.. ನಾವು ಹೋಗೊದಷ್ಟೆ ಬಾಕಿ..’ ಎಂದ ಗುಬ್ಬಣ್ಣ ಠೀವಿಯ, ಸಂತಸದ ದನಿಯಲ್ಲಿ..

ನಾನು ತಲೆ ಚೆಚ್ಚಿಕೊಳ್ಳುತ್ತ , ‘ ಕರ್ಮ ಕರ್ಮ … ರಾಮ್ರಾಮಾ… ! ಸರಿ ಹೋಗು ಹೋಗಿ ಬಾ.. ಅಲ್ಲೇನು ನಿನಗೆ ದೀಪಾವಳಿ ಆಗುತ್ತೊ ಮಾರಿ ಹಬ್ಬಾ ಕಾದಿರುತ್ತೊ ಯಾರಿಗ್ಗೊತ್ತು.. ನಿನ್ನ ಅದೃಷ್ಟವಿದ್ದಂತಾಗಲಿ’ ಎಂದೆ ಸಂತಾಪಭರಿತ ಕನಿಕರದ ದನಿಯಲ್ಲಿ..

ನಾನು ಹಾಗನ್ನುತ್ತಿದ್ದಂತೆ ಯಾಕೊ ಗುಬ್ಬಣ್ಣನ ಸಂತಸದ ಬಲೂನಿಗೆ ಪಿನ್ನು ಚುಚ್ಚಿದಂತಾಗಿ, ‘ ಯಾಕೆ ಸಾರ್..? ಎನಾದ್ರೂ ಎಡವಟ್ ಮಾಡ್ಕೊಂಡ್ನಾ?’ ಅಂದ ತುಸು ಖಿನ್ನತೆ, ಆತಂಕದ ದನಿಯಲ್ಲಿ.

‘ ಇಲ್ವಾ ಮತ್ತೆ? ಅಲ್ಲಯ್ಯಾ.. ದೀಪಾವಳಿಗ್ ಮುಂಚೆ ದಿವಾಳಿಯಾಗೊ ಇಂತ ದೊಡ್ಡ ದೊಡ್ಡ ಐಡಿಯಾಗೆ ತಲೆ ಕೊಡೊಕ್ ಮುಂಚೆ ಒಂದ್ಸಾರಿ ನನ್ನ ಜತೆ ಆಗು ಹೋಗು ಡಿಸ್ಕಸ್ ಮಾಡ್ಬಾರ್ದಾ? ಪೆದ್ದಂಭಟ್ಟ.. ಊರಿಗೆ ಬಾ ಅಂದಾಗಲೆ ಅನುಮಾನ ಬರ್ಬೇಕೂ.. ಏನಿದ್ರೂ ಇಲ್ಲೆ ಸೆಟಲ್ ಮಾಡಿ ಅನ್ನೋದಲ್ವಾ? ಹೋಗ್ಲಿ ಅವರೆ ಟಿಕೆಟ್ ಹಾಕಿ ಕರೆಸ್ಕೊಳೊಕೆ ಹೊರಟಿದಾರೇಂದ್ರೆ ಭಾರಿ ಪ್ಲಾನೇ ಹಾಕಿರ್ಬೇಕು.. ಬರ್ಲಿ ನನ್ ಮಗ ಮೊದ್ಲು ಒದ್ದು ಬುದ್ಧಿ ಕಲ್ಸೋಣಾ ಅಂತಾ’

‘ ಅಯ್ಯೊ.. ಹಾಗೆಲ್ಲಾ ಹೆದರಿಸ್ಬೇಡಿ ಸಾರ್.. ಹೀಗೆ ‘ ಅವಾರ್ಡ್ ವಾಪ್ಸೀ’ ಸ್ಕೀಮ್ ಹಾಕಿದ್ರೆ ಹೆದರ್ಕೊಂಡು ಇನ್ನೊಂದಷ್ಟು ಹೊಸದಾಗಿ ಏನಾದ್ರೂ ಕೊಡ್ತಾರೆ.. ಹೇಗೂ ರಿಟೈರಾಗಿ ವಾಪಸ್ ಇಂಡೀಯಾಗೆ ಹೋಗ್ಬೇಕಾದ್ರೆ ಒಂದು ಸೈಟೊ ಮನೇನೊ ಗಿಟ್ಟುತ್ತೆ..ರಿಟೈರ್ಮೆಂಟ್ ಪ್ಲಾನ್ ಸರಿಹೋಗುತ್ತೆ ಅಂತ ದೊಡ್ಡ ವಿಶನ್ ಇಟ್ಕೊಂಡ್ ಹೀಗ್ ಮಾಡ್ದೆ ಅಷ್ಟೆ..’

‘ ಅಯ್ಯೊ ಮನೆ ಹಾಳು ಬುದ್ಧಿಯವನೆ.. ಅದೆಲ್ಲಾ ಬೇಕೂಂದ್ರೆ ಯಾರಾದ್ರೂ ಅವಾರ್ಡ್ ವಾಪ್ಸಿ ಐಡಿಯಾ ಮಾಡ್ತಾರೇನೊ..? ಇವೆಲ್ಲಾ ಸೆಂಟಿಮೆಂಟಲ್ ಮ್ಯಾಟರ್ಸ್.. ಲವ್ ಬರೋ ಹಾಗೆ ರಿಲೇಷನ್ಷಿಪ್ ಇಟ್ಕೊಂಡು ಗಿಟ್ಟಿಸ್ಕೊ ಬೇಕೂ.. ನೀ ಮಾಡಿರೊ ತರಕ್ಕೆ ಈಗ ಏನಾಗುತ್ತೆ ಗೊತ್ತಾ? ‘

‘ ಏನಾಗುತ್ತೆ ಸಾರ್..’

‘ ಅವರು ಯಾವುದಾದರು ಲಾಯರನ್ನ ಕನ್ಸಲ್ಟ್ ಮಾಡಿರ್ತಾರೆ.. ನಿನ್ ಮೇಲ್ ಯಾವ್ಯಾವ ಕೇಸ್ ಹಾಕ್ಬೋದ್ ಅಂತ.. ನೀನು ಸಿಂಗಪುರದಲ್ಲಿದ್ರೆ ನಿನ್ನ ಮೇಲಿನ ಕ್ರಮ ಅವರ ಜುಡಿಸ್ಟ್ರಿಕ್ಷನ್ನಿಗೆ ಬರಲ್ಲಾ.. ಅದಕ್ಕೆ ಸ್ಕೀಮು ಹಾಕಿ ನಿನ್ನ ಮೊದಲು ಅಲ್ಲಿಗೆ ಕರೆಸ್ಕೋತಾ ಇದಾರೆ.. ಅಲ್ಲಿಗೆ ಹೋದ್ಮೇಲೆ ಎಲ್ಲಾ ಅವರ ಜೋನೇ.. ಏನ್ ಮಾಡಿದ್ರೂ ನಡೆಯುತ್ತೆ..’

‘ ಏನ್ ಮಾಡ್ತಾರೇಂತೀರಾ ಸಾರ್..’ ಹೆಚ್ಚು ಕಮ್ಮಿ ಅಳುವ ದನಿಯಲ್ಲಿ ಗುಬ್ಬಣ್ಣ ಕೇಳಿದ..

‘ ಏನು ಮಾಡೊದೇನು ಬಂತೂ? ನೀ ಹೆಂಗೆ ಅವಾರ್ಡ್ ವಾಪ್ಸೀ ಅಂತ ಅವರ ಮಗಳು ಮೊಮ್ಮಗಳನ್ನ ಕೊಡೋಕ್ ಹೋದ್ಯೊ ಅವರೂ ಹಾಗೇನೆ ಅದೇ ಲಾಜಿಕ್ಕಲ್ಲಿ ‘ ನೀನು ಅವರ ಮಗಳಿಗೆ ಸಿಕ್ಕಿದ್ದ ಅವಾರ್ಡು.. ಈಗ ಕಸ್ಟಮರ್ ಸ್ಯಾಟಿಸ್ ಫ್ಯಾಕ್ಷನ್ ಇಂಡೆಕ್ಸಿನಲ್ಲಿ ಫೇಲ್ಯೂರು ನೋಟಿಸ್ ಬಂದಿರೋದ್ರಿಂದ ಅವರೂ ನಿನ್ನನ್ನ ನಿಮ್ಮಪ್ಪ ಅಮ್ಮನಿಗೆ ‘ ಅವಾರ್ಡ್ ವಾಪ್ಸಿ ಸ್ಕೀಮಲ್ಲೆ’ ಕೊಟ್ಟುಬಿಡ್ತೀವಿ ಅಂತಾರೆ..’

‘ ಅಯ್ಯೊ.. ನನಗೆ ಅಪ್ಪ ಅಮ್ಮನೆ ಬದುಕಿಲ್ವಲ್ಲಾ ಸಾರ್? ಯಾವಾಗಲೊ ಶಿವನ ಪಾದ ಸೇರ್ಕೊಂಡ್ರು..’ ಹತಾಶೆಯ ದನಿಯಲ್ಲಿ ನುಡಿದ ಗುಬ್ಬಣ್ಣ..

‘ ಅದಿನ್ನು ಡೇಂಜರೂ.. ಈಗ ಅವರ ಉತ್ತರಾಧಿಕಾರಿಯಾಗಿ ಎಲ್ಲಾ ಡ್ಯಾಮೇಜ್ ಸೇಟಲ್ಮೆಂಟೆಲ್ಲ ನಿನ್ನ ತಲೆಗೆ ಬರುತ್ತೆ….’

‘ ಡ್ಯಾಮೇಜು ಎಂತಾದೂ ಸಾರ್.. ?’

‘ ಇನ್ನೆಂತದ್ದು.. ? ನೀನು ಪರ್ಮನೆಂಟ್ ‘ಸೇಲ್ ಡೀಡ್’ ಅಂತ ತಪ್ಪು ತಿಳ್ಕೊಂಡು ಅವರ ಮಗಳನ್ನ ಮದ್ವೆ ಆಗಿದೀಯಾ.. ಆದರೆ ಅದು ಆಕ್ಚುವಲೀ ‘ಲೀಸಿಗೆ’ ಅರ್ಥಾತ್ ಭೋಗ್ಯಕ್ಕಷ್ಟೆ ಕೊಟ್ಟ ಪ್ರಿವಿಲೇಜು.. ಆದರೆ ಬಳಕೆಯಲ್ಲಿ ಅದನ್ನ ಪೂರಾ ಡ್ಯಾಮೇಜು ಮಾಡಿ, ಸಾಲದ್ದಕ್ಕೆ ಮಗಳೂ ಅನ್ನೊ ‘ಅನ್ ಆಥರೈಸ್ಡ್ ಕನ್ಸ್ಟ್ರಕ್ಷನ್ನು’ ಮಾಡ್ಕೊಂಡಿದ್ದೂ ಅಲ್ದೆ, ಈಗ ಅವಾರ್ಡ್ ವಾಪ್ಸಿ ಅನ್ನೊ ನೆಪದಲ್ಲಿ ಎಲ್ಲಾ ಕಳಚಿ ಕೈ ತೊಳ್ಕೊಂಡು ಜವಾಬ್ದಾರಿಯಿಂದ ತಪ್ಪಿಸ್ಕೊಳೋಕ್ ನೋಡ್ತಾ ಇದಾನೆ, ವರದಷಿಣೆ ಕಿರುಕುಳ ಕೊಡ್ತಾ ಇದಾನೆ ಅಂತೆಲ್ಲ ನೂರೆಂಟು ಪೀನಲ್ ಕೋಡ್ ನಂಬರ್ ಹುಡುಕಿ ಕೇಸ್ ಜಡೀತಾರೆ.. ಅಲ್ಲಿಗೆ ನೀನು ಮತ್ತೆ ಸಿಂಗಾಪುರಕ್ಕೆ ವಾಪಸ್ಸು ಬರೋದನ್ನೂ ಕೂಡಾ ಮರ್ತುಬಿಡಬೇಕು..’

‘ಅಯ್ಯೊ ಅದ್ಯಾಕೆ ಮರೀಬೇಕು ಸಾರೂ..?’

‘ಮತ್ತೆ? ನೀನು ಇಲ್ಲಿ ರೆಸಿಡೆನ್ಸ್ ಸ್ಟೇಟಸ್ ಆದ್ರೂ, ಪಾಸ್ಪೋರ್ಟು ಇಂಡಿಯಾದು ತಾನೆ ? ಅಲ್ಲೇನೊ ಕ್ರಿಮಿನಲ್ ಕೇಸ್ ಬಿತ್ತು ಅಂದ್ರೆ, ಇಲ್ಲಿ ಸುಮ್ನೆ ಕೂತ್ಕೋತಾರಾ? ಯಾವುದೋ ಎಡವಟ್ಟು ಗಿರಾಕಿ ಇರಬೇಕು ಅನ್ಕೊಂಡು ಮೊದಲು ಸ್ಟೇಟಸ್ ಕಿತ್ತಾಕ್ತಾರೆ.. ಅಲ್ಲಿಗೆ ನಿನಗೆ ಪರಪ್ಪನ ಅಗ್ರಹಾರದ ಜೈಲೆ ಗತಿ.. ಮುದ್ದೇ, ನೀರು ಸಾರನ್ನ, ಪೋಲೀಸ್ ಬೆತ್ತದಲ್ಲಿ ಕುಂಡಿಗೇಟು.. ರಾಮಾ ರಾಮಾ ..ನಿಂಗೆ ಇವೆಲ್ಲಾ ಬೇಕಾ ?’ ಎಂದೆ ಮತ್ತಷ್ಟು ಭೀಕರವಾಗಿ ವರ್ಣಿಸುತ್ತಾ..

ಆ ಮಾತು ಮುಗಿಯುತ್ತಿದ್ದಂತೆ ಪೂರ್ತಿ ಮ್ಲಾನವದನನಾಗಿ ಕೂತುಬಿಟ್ಟ ಗುಬ್ಬಣ್ಣಾ, ಅರ್ಧ ಕುಡಿದ ತೇತಾರೆಯನ್ನೂ ಹಾಗೆ ಬಿಟ್ಟು.. ಸ್ವಲ್ಪ ಹೊತ್ತಾದ ಮೇಲೆ ತಲೆಯೆತ್ತಿ,

‘ ಹಾಗಾದ್ರೆ ನನ್ನಿನೇನ್ ಮಾಡು ಅಂತೀರಾ ಸಾರ್?’ ಎಂದ ದೈನ್ಯದ ದನಿಯಲ್ಲಿ..

‘ ಮಾಡೋದೇನು..? ಚೆನ್ನಾಗಿ ಯೊಚ್ನೆ ಮಾಡು.. ನನಗೇನೊ ಇಂಡಿಯಾ ಟ್ರಿಪ್ ದೀಪಾವಳಿ ಬಂಪರಿಗಿಂತ, ಸಿಂಗಪೂರು ದೀಪಾವಳಿ ಸೇಲಲ್ಲಿ ‘ದಿವಾಳಿ’ ಆಗೋದೆ ಸೇಫ್ ಅನ್ಸುತ್ತೆ..’ ಎಂದೆ, ನಿರ್ಧಾರವನ್ನು ಅವನಿಗೆ ಬಿಡುತ್ತಾ. ಆಗ ತಟ್ಟನೆ ಮೇಲಕ್ಕೆದ್ದ ಗುಬ್ಬಣ್ಣ,

‘ ಸರೀ ಸಾರ್.. ನಾ ಹೋಗ್ಬರ್ತೀನಿ ‘ ಎಂದ..

‘ ಎಲ್ಲಿಗೆ.. ಮನೆಗಾ..? ಯಾಕೆ ಇಷ್ಟು ಅವಸರದಲ್ಲಿ..?’

‘ ಹೂಂ ಸಾರ್.. ಮನೆಗೆ… ಇವತ್ತೊಂದೆ ದಿನ ವೀಕೆಂಡ್ ರಜೆ ಉಳ್ಕೊಂಡಿರೋದು.. ಮನೆಗೆ ಹೋಗಿ ಅವರಿಬ್ಬರನ್ನ ಇವತ್ತೆ ಕರ್ಕೊಂಡು ಹೋಗಿ ದೀಪಾವಳಿ ಶಾಪಿಂಗ್ ಮುಗಿಸಿಬಿಡ್ತೀನೀ.. ‘

‘ ಮತ್ತೆ.. ಇಂಡಿಯಾ ಟ್ರಿಪ್..?’

‘ ಇಲ್ಲಾ ಸಾರ್..ಕ್ಯಾನ್ಸಲ್ ಮಾಡಿಬಿಡ್ತೀನಿ.. ನಾನೆ ಅವರಿಗೊಂದಷ್ಟು ದುಡ್ಡು-ಗಿಪ್ಟು ಕಳಿಸಿ ಕೈ ತೊಳ್ಕೊಂಡ್ ಬಿಡ್ತೀನಿ.. ಸಾರಿ ಹೇಳ್ಬಿಟ್ಟು..’ ಎಂದ. ದನಿಯಲ್ಲಿ ಭಯಂಕರ ರೀ ಇಂಬರ್ಸ್ಮೆಂಟ್ ಪ್ಲಾನ್ ಫ್ಲಾಪ್ ಆದ ಬಗ್ಗೆ ಮಹಾನ್ ನಿರಾಶೆ ಎದ್ದು ಕಾಣುತ್ತಿತ್ತು.

‘ ಅಲ್ ದ ಬೆಸ್ಟ್ ಗುಬ್ಬಣ್ಣಾ.. ಹ್ಯಾಪೀ ದೀಪಾವಳಿ.. ಇನ್ನು ಅರ್ಧಾ ತೇತಾರೈ ಹಾಗೆ ಉಳ್ಕೊಂಡಿದೆ ಕುಡಿದು ಹೋಗು ಹೋಗ್ಲೀ…? ‘

‘ ಥ್ಯಾಂಕ್ಸ್ ಸಾರ್.. ಹ್ಯಾಪಿ ದೀಪಾವಳಿ.. ಟೀ ಬೇಡಾ ಸಾರ್.. ಅವರಿಬ್ಬರನ್ನ ಕರ್ಕೊಂಡು ಬಂದ ಮೇಲೆ ಮತ್ತೆ ಒಟ್ಟಿಗೆ ಬಂದು ಇಲ್ಲೇ ಕುಡೀತೀವಿ.. ಈಗಾಗ್ಲೆ ಗುದುಗುಟ್ಟಿಸಿಕೊಂಡು ಗಡಿಗೆ ಮುಖ ಮಾಡ್ಕೊಂಡ್ ಕೂತಿದಾಳೆ .. ಅವಕ್ಕೆಲ್ಲ ಸ್ವಲ್ಪ ಶಾಂತಿ ಆಗ್ಬೇಕು ಮೊದಲು..’ ಎಂದವನೆ ನಾಗಾಲೋಟದಲ್ಲಿ ದೌಡಾಯಿಸಿದ ಬಸ್ಟಾಪಿನತ್ತ..

ಅದಾದ ಮೇಲೆ ಹಬ್ಬದ ದಿನ ಇಡೀ ಫ್ಯಾಮಿಲಿ ಮೂವಿ ಫ್ಲೇಕ್ಸಿನಲ್ಲಿ ಪಾಪ್ ಕಾರ್ನು ತಿನ್ನುತ್ತ ಪಿಕ್ಚರಿಗೆ ಹೋಗುತ್ತಿರುವುದು ಕಂಡು ‘ ಗುಬ್ಬಣ್ಣನ ಅವಾರ್ಡ್ ವಾಪ್ಸಿ ಪ್ರೋಗ್ರಾಮ್’ ಎಲ್ಲಾ ಸುಖಾಂತವಾಗಿರಬೇಕೆಂದು ಅನಿಸಿ ನಿರಾಳವಾಯ್ತು.. ದೂರದಿಂದಲೆ ‘ಹ್ಯಾಪಿ ದೀಪಾವಳಿ ‘ ಎಂದು ಮತ್ತೊಮ್ಮೆ ನುಡಿದು ನಾ ಮನೆಯತ್ತ ನಡೆದೆ, ಮಗನ ಜತೆ ಸಿಂಗಪುರದ ಸದ್ದು ಮಾಡದ ಪಟಾಕಿಗಳನ್ನು ಉರಿಸಿ, ದೀಪಾವಳಿ ಆಚರಿಸೋಣವೆಂದು..

(ಎಲ್ಲರಿಗು ಗುಬ್ಬಣ್ಣ ಅಂಡ್ ಕೋ ನ ದೀಪಾವಳಿ ಶುಭಾಶಯಗಳು !)

Thanks and best regards,
Nagesha MN

00406. ಲಘುಹರಟೆ: ಗಡಿಯಾಚೆಯ ರಾಜ್ಯೋತ್ಸವ…! (0009)


00406. ಲಘುಹರಟೆ: ಗಡಿಯಾಚೆಯ ರಾಜ್ಯೋತ್ಸವ…!
______________________________

(2015, ನವೆಂಬರ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ ಸಿಂಚನದಲ್ಲಿ ಪ್ರಕಟಿತ)

ನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು ತಲೆಯೆತ್ತಿ ಮೇಲೆ ನೋಡಿದರೆ ಅರೆ! ವಿಶಾಲ ಕರ್ನಾಟಕದ ಹೆಮ್ಮೆಯ ಹಳದಿ ಕೆಂಪಿನ ಬಣ್ಣದ ಕನ್ನಡ ಬಾವುಟ..! ಗಾಳಿಯಲ್ಲಿ ಬಿಚ್ಚಿಕೊಂಡು ಪಟಪಟನೆ ಹಾರಾಡುತ್ತ ಲಯಬದ್ದವಾಗಿ ನಲಿಯುತ್ತಿದ್ದ ರೀತಿಗೆ ಸಾಕ್ಷಾತ್ ಕನ್ನಡ ರಾಜರಾಜೇಶ್ವರಿಯೆ ಖುಷಿಯಿಂದ ನಲಿದಿರುವಂತೆ ಭಾಸವಾಯ್ತು. ಆ ಖುಷಿ ತಂದ ಹೆಮ್ಮೆಯ ಎದೆ ತುಂಬಿದ ಭಾವಕ್ಕೆ ಉಕ್ಕಿ ಜಾಗೃತವಾದ ಕನ್ನಡಾಭಿಮಾನ ನನಗರಿವಿಲ್ಲದ ಹಾಗೆ ಒಂದು ‘ಸೆಲ್ಯೂಟ್’ ಆಗಿ ಬದಲಾಗುತ್ತಿದ್ದಂತೆ ದೂರದಿಂದ ಕೇಳಿಸಿತ್ತು ಪರಿಚಿತ ದನಿಯೊಂದು..

” ಏನ್ ಸಾರ್.. ಕನ್ನಡಾಂಬೆಗೆ ಸಾಫ್ ಸೀದಾ ಸಲಾಮ್ ಮಾಡ್ತಾ ಇದೀರಾ ? ಕನ್ನಡ ರಾಜ್ಯೋತ್ಸವ ಅಂತ ನಿಮಗೂ ನೆನಪಿಗೆ ಬಂದು ಬಿಟ್ಟಿತಾ? ” ಎಂದ ಅರ್ಧ ಕನ್ನಡ ಮಿಕ್ಕರ್ಧ ನಾನ್-ಕನ್ನಡ ಬೆರೆತ ದನಿ ಕೇಳಿಸಿತು. ಬೆಂಗಳೂರಿನಲ್ಲಿ ತುಂಬಿಕೊಂಡಿರುವ ಕನ್ನಡಾ-ನಾನ್ ಕನ್ನಡ ಜನರ ಹಾಗೆ, ಎಲ್ಲಾ ಅರ್ಧಂಬರ್ಧ ಭಾಷೆ ಬೆರೆಸಿ ಕಲಸು ಮೇಲೋಗರ ಮಾಡಿ, ಕಾಕ್ ಟೈಲ್ ಮಾಡಿ ಹೇಳಬೇಕೆಂದರೆ ಅದು ಗುಬ್ಬಣ್ಣನೆ ಇರಬೇಕು ಅನಿಸಿತು. ಯಾಕೆಂದರೆ ನಾನು ಹಿಂದೊಮ್ಮೆ ಮಾತನಾಡುತ್ತ ‘ನನ್ನ ಮಗ ಸಿಂಗಪುರದಲ್ಲೆ ಬಟ್ಲರು ಕನ್ನಡ ಕಲಿಯುತ್ತಿದ್ದಾನೆ’ ಎಂದಿದ್ದಕ್ಕೆ, ನನ್ನ ಮಾತನ್ನು ತಿದ್ದಿದ ಗುಬ್ಬಣ್ಣ ‘ಅದು ಬಟ್ಲರು ಕನ್ನಡ ಅಲ್ಲಾ ಸಾರ್.. ಬೆಂಗಳೂರು ಕನ್ನಡಾ ಅನ್ನಿ..’ ಎಂದು ಜ್ಞಾನೋದಯ ಮಾಡಿಸಿದ್ದ. ನಾನು ಏನೂ ಅರ್ಥವಾಗದೆ ಮಿಕಮಿಕ ಕಣ್ಣಾಡಿಸಿದ್ದನ್ನು ನೋಡಿ,

“ಯಾಕ್ ಸಾರ್.. ಕಣ್ಕಣ್ಣು ಬಿಡ್ತೀರಾ ? ನಾನ್ ಮಾತಾಡೋ ಕನ್ನಡಾ ನೋಡಿದ್ರೆ ಗೊತ್ತಾಗಲ್ವಾ? ಬಟ್ಲರು ಕನ್ನಡಕ್ಕು ಬೆಂಗಳೂರು ಕನ್ನಡಕ್ಕೂ ಇರೊ ವ್ಯತ್ಯಾಸ? ಹೋಗ್ಲಿ ಬೆಂಗಳೂರು ವಿಷಯ ಬಿಡಿ ಸಾರು.. ಪರದೇಶದಲ್ಲಾಡೊ ಕನ್ನಡ ತಾನೆ ಏನು ಕಮ್ಮಿ ಅಂತಿರ ? ಅದಕ್ಕೆ ತಾನೆ ಅದನ್ನ ‘ಪರದೇಶಿ ಕನ್ನಡ’ ಅನ್ನೋದು…?” ಎನ್ನುತ್ತ ಹತ್ತಿರಕ್ಕೆ ಬಂದಾ ಗುಬ್ಬಣ್ಣ.

” ಸಾಕ್ ಸುಮ್ನಿರೊ ಗುಬ್ಬಣ್ಣ.. ಹಾಗೆಲ್ಲ ಹೊರನಾಡು, ಹೊರದೇಶದ ಕನ್ನಡಿಗರ ಬಗ್ಗೆ ಕಳಪೆ ಮಾತಾಡಬೇಡ.. ಹಾಗೆ ಉದಾಹರಣೆಗೆ ನೋಡೊದಾದ್ರೆ ನಮ್ಮ ಸಿಂಗಪುರದ ಕನ್ನಡಿಗರ ಕನ್ನಡಾಭಿಮಾನನೆ ನಾಡಿನ ಅಚ್ಚಗನ್ನಡಿಗರ ಅಭಿಮಾನಕ್ಕಿಂತ ಒಂದು ತೂಕ ಜಾಸ್ತಿ, ಗೊತ್ತಾ? ಊರು ದೇಶ ಬಿಟ್ಟು ಹೊರಗೆ ಬಂದಿದ್ರೂ ನಮ್ಮ, ನಾಡು, ನಮ್ಮ ಭಾಷೆ, ನಮ್ಮೂರು, ನಮ್ಮ ಜನ ಅಂತಾ ಒದ್ದಾಡ್ತಾ ರಾಜ್ಯೋತ್ಸವ, ದೀಪಾವಳಿ ಅಂತೆಲ್ಲ ಹಬ್ಬ ಮಾಡ್ಕೊಂಡು ಕನ್ನಡಾಭಿಮಾನ ತೋರಿಸ್ತಾರೆ ಗೊತ್ತಾ? ಅಷ್ಟೇ ಯಾಕೆ ಸಿಂಗನ್ನಡಿಗ ಎಂದ್ರೆ ‘ಸಿಂಹ – ಕನ್ನಡಿಗ’ ಅರ್ಥಾತ್ ಸಿಂಹದೆದೆಯ ಕನ್ನಡಿಗರು ಅಂತರ್ಥ ಗೊತ್ತಾ? ” ಎಂದೆ, ಅವನನ್ನೆ ಲೇವಡಿ ಮಾಡುತ್ತ.

” ಏನ್ ಸಿಂಗವೊ, ಏನೊ ಬಿಡಿ ಸಾರ್.. ನೀವು ಹೇಳಿದ ಹಾಗೆ ‘ಕನ್ನಡ ಕಲಿ’, ‘ಬನ್ನಿ ಮಾತಾಡೋಣ’ ಅಂತೆಲ್ಲ ಕನ್ನಡದ ಬಗ್ಗೆ ಏನಾದ್ರೂ ಮಾಡ್ತಾನೆ ಇರ್ತಾರೆ ಅನ್ನೋದು ನಿಜವೆ.. ಆದ್ರೆ ನಾನು ಈ ಮಾತು ಹೇಳೋಕ್ ಒಂದು ಕಾರಣ ಇದೆ ಸಾರ್..” ಬಡಪೆಟ್ಟಿಗೆ ಬಗ್ಗದವನಂತೆ ತನ್ನ ಪಟ್ಟು ಹಿಡಿದೆ ನುಡಿದ ಗುಬ್ಬಣ್ಣ.

” ಏನಪ್ಪಾ ಅಂತಾ ಮಹಾನ್ ಕಾರಣ…? ಈ ತರ ಪ್ರೋಗ್ರಾಮ್ಸ್ ಇನ್ಯಾವ್ ದೇಶದ ಕನ್ನಡ ಸಂಘದವರು ಅರೆಂಜ್ ಮಾಡ್ತಾರೆ ತೋರ್ಸು ನೋಡೋಣ..? ದುನಿಯಾದಲ್ಲೆ ಯುನಿಕ್ಕೂ ಗೊತ್ತಾ ಈ ಪ್ರೋಗ್ರಾಮು..?” ”

” ಅದು ಮಾತ್ರ ‘ಏಕ್ ಮಾರ್.. ದೋ ತುಕಡಾ’ ತರ ಮಾತು ಬಿಲ್ಕುಲ್ ನಿಜ ಬಿಡಿ ಸಾರ್.. ಆದರೆ ನಾನು ಹೇಳೋಕೆ ಹೊರಟಿದ್ದು ಮತ್ತೊಂದು ವಿಷಯ..”

” ಅದೇನಪ್ಪಾ ಅಂಥಾ ವಿಷಯ ?”

” ಸಾರ್ ಹೀಗೆ ಮೊನ್ನೆ ನಮ್ ಏರಿಯಾದಲ್ಲಿದ್ದ ಕನ್ನಡ ಮಾತಾಡೊ ಫ್ಯಾಮಿಲಿಗಳ್ದೆಲ್ಲ ಒಂದು ‘ಗೆಟ್ ಟುಗೆದರ್’ ಪ್ರೋಗ್ರಾಮ್ ಅಟೆಂಡ್ ಮಾಡೋಕೆ ಹೋಗಿದ್ದೆ ಸಾರ್..”

“ಸರೀ..? ಹೋಗಿ ಕನ್ನಡ ಪ್ರಾಕ್ಟೀಸ್ ಮಾಡ್ಕೊಳಕ್ ಅದು ಪರ್ಫೆಕ್ಟ್ ಛಾನ್ಸ್ ಅಲ್ವಾ..? ”

” ನಾನು ಹಾಗೇ ಅನ್ಕೊಂಡು ಪ್ರೋಗ್ರಾಮ್ಗೇನೊ ಹೋದೆ ಸಾರ.. ಹೋದದ್ದಕ್ಕೆ ಸರಿಯಾಗಿ ಒಳ್ಳೆ ತಿಂಡಿ, ಕಾಫಿ, ಸ್ವೀಟು ಎಲ್ಲಾನು ಬೊಂಬೊಟಾಗೆ ಅರೇಂಜ್ ಮಾಡಿದ್ರೂನ್ನಿ..” ಆ ತಿಂಡಿ ತೀರ್ಥಗಳಲ್ಲೆ ಅರ್ಧ ಹೋದ ಕೆಲಸ ಆದಂತೆ ಎನ್ನುವವನಂತೆ ರಾಗವೆಳೆದ ಗುಬ್ಬಣ್ಣ.

” ಅಯ್ಯೊ..ಇನ್ನೇನ್ ಮತ್ತೆ ? ತಿಂಡೀನು ಅರೆಂಜ್ ಮಾಡಿದ್ರೂ ಅಂದ್ಮೇಲೆ ನಿನ್ನದಿನ್ನೇನಪ್ಪ ಕಂಪ್ಲೈಂಟೂ..?”

” ಅದೇ ಸಾರ್.. ಬೇಜಾರು ಆಗಿದ್ದು..ತಿಂದು ಮುಗಿಸಿ ಎಲ್ಲಾ ಸ್ವಲ್ಪ ಕನ್ನಡದಲ್ಲಿ ಮಾತಾಡ್ತಾರೆ, ಆನಂದವಾಗಿ ಕೇಳೋಣ ಅಂದ್ರೆ – ಶುರುಲೇನೊ ಎಲ್ಲಾ ‘ನಮಸ್ಕಾರಾ, ಚೆನ್ನಾಗಿದೀರಾ? ‘ ಅಂತ್ಲೆ ಶುರು ಹಚ್ಕೊಂಡ್ರು..”

“ಮತ್ತೆ?”

” ಮತ್ತಿನ್ನೇನು ? ಒಂದೆರಡು ವಾಕ್ಯ ಆಡೋಕಿಲ್ಲ… ಇರೋ ಬರೊ ಕನ್ನಡವೆಲ್ಲ ಡ್ರೈ ಆದವರಂಗೆ ಎಲ್ಲಾ ಇಂಗ್ಲಿಷು, ಹಿಂದಿ, ಗಿಂದಿ ಅಂತ ‘ವಾಟ್ ಯಾರ್ ? ಯೂ ನೋ ವಾಟ್?’ ಅಂತೆಲ್ಲಾ ಏನೇನೊ ವರ್ಶನ್ ಶುರು ಮಾಡಿಬಿಡೋದಾ? ನನಗೆ ಅದನ್ನು ನೋಡಿ ಯಾವ ಕನ್ನಡ ಅಂತ ಹೇಳ್ಬೇಕೂಂತ್ಲೆ ಗೊತ್ತಾಗ್ಲಿಲ್ಲ.. ಅದಕ್ಕೇನು ಬಟ್ಲರ ಕನ್ನಡಾ ಅನ್ಬೇಕೊ, ಬೆಂಗ್ಳೂರು ಕನ್ನಡ ಅನ್ಬೇಕೊ, ಪರದೇಶಿ ಕನ್ನಡ ಅನ್ಬೇಕೊ ಗೊತ್ತಾಗದೆ ಕನ್ಫ್ಯೂಸ್ ಆಗಿ ಪುಲ್ ಡೌಟಾಗೋಯ್ತು ಸಾರ್..” ಎನ್ನುತ್ತಲೆ ತನ್ನ ಕನ್ನಡಾಂಗ್ಲ ಭಾಷಾ ಸಾಮರ್ಥ್ಯವನ್ನು ತನ್ನರಿವಿಲ್ಲದವನಂತೆ ಬಿಚ್ಚಿಕೊಂಡ ಗುಬ್ಬಣ್ಣ..

ನಾನು ಒಂದು ನಿಮಿಷ ಮಾತಾಡಲಿಲ್ಲ. ಗುಬ್ಬಣ್ಣ ಹೇಳೊದರಲ್ಲೂ ಸ್ವಲ್ಪ ಸತ್ಯವೇನೊ ಇದೆ ಅನಿಸಿದರು, ಅದು ಬರಿ ‘ಅರ್ಧಸತ್ಯ’ ಮಾತ್ರ ಅನಿಸಿತು..

“ಗುಬ್ಬಣ್ಣ.. ಈ ವಿಷಯದಲ್ಲಿ ಮಾತ್ರ ನೀನು ಹೇಳೋದು ಪೂರ್ತೀ ನಿಜವಲ್ಲಾ ಬಿಡೋ.. ವಿದೇಶಗಳಲ್ಲಿರೊ ಜನರೆಲ್ಲಾ ವರ್ಷಾನುಗಟ್ಲೆಯಿಂದ ಊರು, ಕೇರಿ, ದೇಶ ಬಿಟ್ಟು ಬಂದು ಸೇರ್ಕೊಂಡಿರೋರು ತಾನೆ?”

” ಹೌದು..?”

” ಅಂದ್ಮೇಲೆ.. ಅವರ ಮಕ್ಕಳು ಮರಿಯೆಲ್ಲ ಇಲ್ಲೆ ಹುಟ್ಟಿ, ಇಲ್ಲೆ ಬೆಳೆದು, ಇಲ್ಲೆ ಸ್ಕೂಲಿಗೆ ಹೋಗ್ತಾ ಇರ್ತಾರೆ ತಾನೆ ?”

” ನಾನು ಇಲ್ಲಾಂದ್ನಾ ಸಾರ್..?”

” ಅಂದ್ಮೇಲೆ ಅವರೆಲ್ಲ ಊರಲ್ಲಿರೋರ ತರ ಕನ್ನಡ ಕಲಿಯೋಕಾಗ್ಲಿ, ಮಾತಾಡೋಕಾಗ್ಲಿ ಆಗುತ್ತಾ ಗುಬ್ಬಣ್ಣಾ..?”

” ಇಲ್ಲಾ ಅನ್ನೋದೇನೊ ನಿಜಾ ಸಾರ್.. ಆದ್ರೆ ಊರಲ್ಲಿರೋರು ಏನು ಕಮ್ಮಿಯಿಲ್ಲಾ ಬಿಡಿ, ಟುಸುಪುಸ್ ಇಂಗ್ಲೀಷ್ ಬರ್ಲಿ ಅಂತ ಕಾನ್ವೆಂಟಿಗೆ ತಗೊಂಡು ಹೋಗಿ ಹಾಕ್ತಾರೆ.. ಅಲ್ ಕಲಿಯೊ ಕನ್ನಡಾನೂ ಅಷ್ಟರಲ್ಲೆ ಇದೆ..”

” ಅಲ್ಲಿ ಮಾತಿರ್ಲಿ..ಇಲ್ಲಿದನ್ನ ಕೇಳೊ ಗುಬ್ಬಣ್ಣಾ.. ಆ ಮಕ್ಕಳ ಜತೆ ಮಾತಾಡ್ಬೇಕಂದ್ರೆ ಇಂಗ್ಲೀಷಲ್ ತಾನೆ ಮಾತಾಡ್ಬೇಕು ? ಅವುಕ್ಕು ಎಲ್ಲಾ ಚೆನ್ನಾಗಿ ಅರ್ಥ ಆಗ್ಲೀ ಅಂತ ಗಂಡ ಹೆಂಡ್ತೀನು ಇಂಗ್ಲಿಷಲ್ಲೆ ಮಾತಾಡ್ಕೋಬೇಕು ಅಲ್ವಾ ?..”

“ಹೌದು ಸಾರ್..ಅದೇನೊ ನಿಜಾ..” ತನ್ನ ಮನೆಯ ಸ್ವಂತ ಅನುಭವವನ್ನೆ ನೆನೆಸಿಕೊಳ್ಳುತ್ತ ಅದನ್ನೆ ಮೆಲುಕು ಹಾಕುವವನಂತೆ ಕಣ್ಣು ಮಾಡಿ ನುಡಿದ ಗುಬ್ಬಣ್ಣಾ.

” ಅಂದ್ಮೇಲೆ..ದಿನಾ ಆಡಿ ಆಡಿ ಪ್ರಾಕ್ಟೀಸ್ ಇರದ ಭಾಷೇನಾ ಯಾವಾಗಲೊ ಪ್ರೋಗ್ರಾಮ್, ಮೀಟಿಂಗಲ್ಲಿ ಹುಣ್ಣಿಮೆ ಅಮಾವಾಸೆಗೊಂದ್ಸಲ ಸೇರ್ಕೊಂಡಾಗ ಫ್ಲೂಯೆಂಟಾಗಿ ಆಡೋಕ್ ಆಗ್ಬಿಡುತ್ತಾ? ಬೀ ರೀಸನಬಲ್ ಗುಬ್ಬಣ್ಣಾ.. ಈ ತರ ಫಂಕ್ಷನ್ ಗೆ ಬಂದು ಹೋಗಿ ಮಾಡಿ ಅಭ್ಯಾಸ ಆದ್ರೆ ತಾನೆ ಸ್ವಲ್ಪ ಭಾಷೆ ಬಳಸೋಕ್ ಛಾನ್ಸ್ ಸಿಗೋದು..?” ಎಂದೆ ಅಂತಹ ಕನ್ನಡಿಗರ ಬಗೆ ಕಾಳಜಿಯುತ ‘ಸಿಂಪಥಿ’ ತೋರಿಸುತ್ತಾ..

” ನೀವು ಹೇಳಿದ್ದೆ ನಿಜವಾಗಿದ್ರೆ ಅಡ್ಡಿಯಿಲ್ಲ ಸಾರ್.. ಆದ್ರೆ ಸುಮಾರು ಜನಕ್ಕೆ ಕನ್ನಡ ಕಲಿಯೊ ಇಂಟ್ರೆಸ್ಟೆ ಇಲ್ಲಾ ಸಾರ್..ಕೆಲವರಿಗಂತೂ ಕಲಿಯೋದು ಅಂದ್ರೆ ಕೇವಲ… ಕಲ್ತೇನುಪಯೋಗ ? ಇಂಗ್ಲೀಷಾದ್ರೆ ಎಲ್ಲಾ ಕಡೆ ಕೆಲಸಕ್ಕೆ ಬರುತ್ತೆ ಅಂತಾರೆ..”

” ಇಲ್ಲಾ ಗುಬ್ಬಣ್ಣ ಅಂತಾ ಫೀಲಿಂಗ್ ಇರೋರು ಬೆಂಗಳೂರಂಥಾ ಕಡೆ ಇರ್ಬೋದೇನೊ.. ಆದ್ರೆ ಇಲ್ಲಿ ಕಲೀಬೇಕೂಂತ, ಕಲಿಸಬೇಕೂಂತ ಜಿನೈನ್ ಇಂಟ್ರೆಸ್ಟ್ ಇರೋರೆ ಜಾಸ್ತಿ.. ಅವರ ಪ್ರಯತ್ನನೂ ಫಲ ಕೊಡಕೆ ಟೈಮ್ ಹಿಡಿಯುತ್ತೆ ಗುಬ್ಬಣ್ಣ, ಇಂಥ ವಾತಾವರಣದಲ್ಲೂ ಹೆಣಗಾಡ್ಕೊಂಡು ಅಷ್ಟಿಷ್ಟು ಉಳಿಸಿ ಬೆಳೆಸೋಕ್ ನೋಡ್ತಾರಲ್ಲ, ಅದು ದೊಡ್ಡದು ಅಲ್ವಾ ?.”

ಯಾಕೊ ಗುಬ್ಬಣ್ಣನಿಗೆ ನಾನು ಹೇಳಿದ್ದು ನಂಬಿಕೆ ಬಂದಂತೆ ಕಾಣಲಿಲ್ಲ..

” ನೀವೇನೊ ಹಾಗಂತಿರಾಂತ ನಾನು ನಂಬ್ತೀನಿ ಅಂತ್ಲೆ ಇಟ್ಕೊಳ್ಳಿ ಸಾರ್.. ಆದ್ರೆ ಅದು ನಿಜಾ ಅನ್ನೋಕೆ ಸಾಕ್ಷಿ ಬೇಕಲ್ಲಾ ? ಇಂಥಾ ಕಡೆ ಪ್ರೋಗ್ರಾಮಲ್ಲಿ ಸೇರಿ ಮಾತಾಡ್ದಾಗ ತಾನೆ ಉಳಿಸಿ, ಬೆಳೆಸೊ ಅವಕಾಶ ಆಗೋದು? ದೊಡ್ಡವರ ಕಥೆಯೆ ಹೀಗಾದ್ರೆ, ಇನ್ನು ಮಕ್ಕಳ ಕಥೆಯಂತೂ ಹೇಳೊ ಹಾಗೆ ಇಲ್ಲಾ…. ಈಗಲೆ ಹೀಗಾದ್ರೆ ಇನ್ನು ಮುಂದಕ್ಕೆ ದೇವರೆ ಗತಿ!” ಎಂದ.

” ಗುಬ್ಬಣ್ಣಾ.. ನೀನು ಅಷ್ಟೊಂದು ಡಿಸಪಾಯಿಂಟ್ ಆಗ್ಬೇಡಾ.. ಇನ್ ಫ್ಯಾಕ್ಟ್ ಫೂಚರ್ ಜೆನರೇಶನ್ ಈಸ್ ಬೆಟರ್ ದೆನ್ ದಿ ಕರೆಂಟ್ ಗೊತ್ತಾ?”

” ಅದು ಹೇಗೆ ಹೇಳ್ತಿರಾ ಸಾರ್, ಅಷ್ಟು ಗ್ಯಾರಂಟಿಯಾಗಿ ?”

” ಈಗ ನನ್ ಮಗನ್ ಉದಾಹರಣೆ ತಗೊಂಡ್ ನೋಡೋಣ.. ನಾನು ಯಾವತ್ತು ಅವನಿಗೆ ಕನ್ನಡ ಕಲ್ತುಕೊ ಅಂತ ಬಲವಂತ ಮಾಡ್ದೋನೆ ಅಲ್ಲಾ..ಅವನೇನ್ ಮಾಡ್ತಾ ಇದಾನೆ ಗೊತ್ತಾ?”

” ಏನ್ ಮಾಡ್ತಾ ಇದಾನೆ?”

“ಇದ್ದಕ್ಕಿದ್ದಂಗೆ ಅವ್ನೆ ಕನ್ನಡ ಕಲಿಯೋಕ್ ಶುರು ಮಾಡ್ಕೊಂಡ್ಬಿಟ್ಟಿದಾನೆ..!”

” ಆಹ್..?”

” ಹೂ ಗುಬ್ಬಣ್ಣ.. ಸಾಲದ್ದಕ್ಕೆ ಈಗ ಸಿಕ್ಸಿಕ್ಕಿದ್ದಕ್ಕೆಲ್ಲ ಕನ್ನಡದಲ್ಲಿ ಅರ್ಥ ಹುಡುಕಿ ಹೇಳೊ ಅಭ್ಯಾಸ ಬೇರೆ ಶುರುವಾಗ್ಬಿಟ್ಟಿದೆ…”

” ಅಂದ್ರೆ?”

” ಅವನಿಗೆ ಬಟರ್ ಚಿಕನ್ ಅಂದ್ರೆ ಪಂಚ ಪ್ರಾಣ ಅಂತಾ ಗೊತ್ತಲ್ಲ್ವಾ?”

“ಹೂಂ..ಗೊತ್ತೂ”

” ಈಗ ಅವನಿಗೆ ಬೇಕಾದಾಗೆಲ್ಲ ಬಟರು ಚಿಕನ್ನು ಅಂತಿದ್ದೊನು, ಈಗ ಇದ್ದಕ್ಕಿದ್ದ ಹಾಗೆ ‘ಬೆಣ್ಣೆ ಕೋಳಿ” ಅಂತ ಶುರು ಮಾಡ್ಕೊಂಡಿದಾನೆ..!”

” ಬಟರ್ ಚಿಕನ್ನಿಗೆ, ಬೆಣ್ಣೆ ಕೋಳಿನಾ ?!”

” ಅಷ್ಟು ಮಾತ್ರವಲ್ಲ ..ಆಡೊ ಪ್ರತಿಯೊಂದು ಪದಕ್ಕು ಕನ್ನಡ ಪದ ಯಾವುದು ಅಂತ ತಲೆ ತಿನ್ನೋಕ್ ಶುರು ಮಾಡ್ಬಿಟ್ಟಿದ್ದಾನೆ.. ಫ್ರೈಯ್ಡ್ ರೈಸಿಗೆ ಹುರಿದನ್ನ ಅಂತೆ, ಬ್ರೇಕ್ಫಾಸ್ಟಿಗೆ ಮುರಿದ ಉಪವಾಸ – ಅಂತೆಲ್ಲ ಶುರು ಮಾಡ್ಕೊಂಡಿದಾನೆ..”

“ಶಿವ..ಶಿವಾ..”

” ಅವನ್ ಆಡಿದ್ ಸರಿಯೊ ತಪ್ಪೊ, ಆದ್ರೆ ನಮಗಿಂತ ಜಾಸ್ತಿ ಕನ್ನಡ ಪ್ರಜ್ಞೆ ಅವನಿಗಿದೆಂತಾ ಖುಷಿ ಪಡ್ಬೇಕು.. ನೆಕ್ಸ್ಟ್ ಜೆನರೇಷನ್ ನಾವು ಅನ್ಕೊಂಡಷ್ಟು ಗಬ್ಬೆದ್ದೋಗಿಲ್ಲ ಬಿಡೊ ಗುಬ್ಬಣ್ಣ..” ಎನ್ನುತ್ತಲೆ ಮಾತಿನ ಟ್ರಾಕ್ ಮುಗಿಸಿ, “ಅದಿರ್ಲಿ ಗುಬ್ಬಣ್ಣಾ.. ನೀನೇನು ಇಲ್ಲಿ.. ಇದ್ಯಾವ ಜಾಗಾಂತನೂ ಗೊತ್ತಿಲ್ಲ… ನೀನ್ಯಾವಾಗ ಬಂದೆ..?” ಎಂದೆ.

” ಅಯ್ಯೋ ಬಿಡಿ ಸಾರ್.. ನಾನು ಡ್ಯೂಟಿ ಮೇಲೆ ಬಂದಿದೀನಿ.. ಬಂದಿದ್ದುಕ್ ಸರಿಯಾಗಿ ಸ್ವಾಮಿ ಕಾರ್ಯಾನು ಆಯ್ತು, ಸ್ವಕಾರ್ಯಾನು ಆಯ್ತು..ಇಲ್ಲೆ ಫಸ್ಟ್ ಕ್ಲಾಸಾಗಿ ರಾಜ್ಯೋತ್ಸವ ಸೆಲೆಬ್ರೇಷನ್ನು ಆಯ್ತು.. ಬರೋದ್ ಬಂದ್ರಿ..ಒಂದರ್ಧ ಗಂಟೆ ಮೊದಲೆ ಬರೋದಲ್ವಾ?.. ಎಲ್ಲಾ ರಾಜ್ಯೋತ್ಸವದ ಬಾವುಟ ಹಾರಿಸಿ, ನಿತ್ಯೋತ್ಸವ, ಜಯ ಕರ್ನಾಟಕ ಮಾತೆಗಳನ್ನೆಲ್ಲಾ ಹಾಡಿ ಸ್ವೀಟ್ ಹಂಚಿಬಿಟ್ ಹೋದ್ಮೇಲೆ ಬಂದಿದೀರಲ್ಲಾ ? ಮೊದಲೆ ಬಂದಿದ್ರೆ ಎಲ್ಲಾ ಸುಪರ್ ಸ್ಟಾರ್ ಗೆಸ್ಟುಗಳನ್ನೆಲ್ಲಾ ನೋಡ್ಬೋದಾಗಿತ್ತು..”

“ಹೌದಾ.. ಯಾರಾರು ಬಂದಿದ್ರೊ ಗುಬ್ಬಣ್ಣಾ? ಮೊದ್ಲೆ ಹೇಳ್ಬಾರದಾಗಿತ್ತ.. ನಾನು ಬರ್ತಿದ್ದ ಟೈಮ್ ಅಡ್ಜಸ್ಟ್ ಮಾಡ್ಕೊಂಡ್ ಬರ್ತಿದ್ದೆ… ಹೇಳ್ದೆ ಕೇಳ್ದೆ ಬನ್ಬಿಟ್ಟು ಈಗ ನನಗೆ ಕಿಚಾಯಿಸ್ತಿಯಲ್ಲಾ?”

” ನಾನೇನ್ ಮಾಡ್ಲಿ ಸಾರ್..? ಇದು ಅಫಿಶಿಯಲ್ ಪ್ರಾಜೆಕ್ಟ್ ಕೆಲಸ.. ವರ್ಷ ವರ್ಷ ರಾಜ್ಯೋತ್ಸವದ ಆಚರಣೆ ಆಗೋದು ಆಟೋಮ್ಯಾಟಿಕ್ಕಾಗಿ ನಡೆಯೊ ತರಹ ಒಂದು ಸಾಫ್ಟ್ ವೇರ್ ಇಂಪ್ಲಿಮೆಂಟ್ ಮಾಡೋಕೆ ಆರ್ಡರು ಬಂದಿತ್ತು ಈ ಕಂಪನೀದು.. ಅದಕ್ಕೆ ಅಂತ ಬಂದ್ರೆ ಇಲ್ಲಿ ಸೆಲಬ್ರೇಟ್ ಮಾಡೋದು ಗೊತ್ತಾಯ್ತು.. ಎಲ್ಲಾರನ್ನ ಮೀಟ್ ಮಾಡೊ ಛಾನ್ಸ್ ಸಿಕ್ಕಿತು..”

” ಅದೇನು ಗುಬ್ಬಣ್ಣಾ, ಆಚರಣೇನಾ ಅಟೋಮೇಟ್ ಮಾಡೋಕ್ ಹೊರಟಿರೋದು ನಮ್ ರಾಜ್ಯ ಸರ್ಕಾರಾನಾ? ಅಂದ್ಮೇಲೆ ದೊಡ್ಡ ಪ್ರಾಜೆಕ್ಟೆ ಅಲ್ವಾ? ಎಲ್ಲಾ ದೊಡ್ಡ ದೊಡ್ಡ ಹೆಸರುಗಳೇ ಬಂದಿರಬೇಕಲ್ಲಾ?”

ಅದನ್ನು ಕೇಳಿ ಪಕಪಕ ನಕ್ಕ ಗುಬ್ಬಣ್ಣ, ” ಅಯ್ಯೊ ಬಿಡೀ ಸಾರ್..ನಮ್ಮ ಸರ್ಕಾರದವರೆಲ್ಲ ಕನ್ನಡಕ್ಕೋಸ್ಕರ ಇಷ್ಟೆಲ್ಲಾ ಮಾಡ್ತಾರ..? ಅದೂ ಇಲ್ಲಿಗೆ ಬಂದ್ ಸೇರ್ಕೊಂಡಿರೊ ಮಹಾನುಭಾವರ ದಯೆಯಿಂದ ಏನೊ ಅಷ್ಟೊ ಇಷ್ಟೊ ನಡೀತಾ ಇದೆ ಇಲ್ಲೂನುವೆ ಅಷ್ಟೆ..”

” ಏನು ಬರಿ ಒಗಟಲ್ಲೆ ಮಾತಾಡ್ತಿಯಲ್ಲೊ ಗುಬ್ಬಣ್ಣಾ..? ಹೋಗ್ಲೀ ಅದ್ಯಾವ ಕಂಪನಿ, ಅದ್ಯಾವ ಮಹಾನುಭಾವರು ಬಂದಿದ್ದವರು ಅಂತ ಹೇಳೊ..?”

” ಬೇರೆ ಯಾರಿಗೆ ಇಂತಹ ಶಕ್ತಿ, ಆಸಕ್ತಿ, ಶ್ರದ್ದೆ ಇರುತ್ತೆ ಸಾರ್? ಬಂದಿದ್ದವರೆಲ್ಲಾ ಮಹಾನ್ ಘಟಾನುಘಟಿಗಳೆ..ಕಂಪನಿ ಹೆಸರು ಅಮರಾವತಿ ಅಂಡ್ ಕೋ.., ಕೇರಾಫ್ ಸ್ವರ್ಗ ಲೋಕಾ ಸಾರ್.. ವರನಟ ಡಾಕ್ಟರ ರಾಜಕುಮಾರ್, ವಿಷ್ಣುವರ್ಧನ್, ನರಸಿಂಹರಾಜು, ಅಶ್ವಥ್, ಬಾಲಕೃಷ್ಣ, ನಾಗೇಂದ್ರರಾಯರು, ಬಿ.ಆರ್. ಪಂತುಲು, ಚಿ.ಉದಯಶಂಕರ್ ಹೀಗೆ ಸಾಲು ಸಾಲಾಗಿ ಇಡೀ ಕನ್ನಡ ಚಿತ್ರರಂಗವೆ ಬಂದು ಸೇರಿತ್ತು ಸಾರ್.. ಅವರೆಲ್ಲಾ ಲಾಬಿ ಮಾಡಿ ಕರ್ನಾಟಕದಲ್ಲಂತೂ ಕನ್ನಡಿಗರು ಸರಿಯಾಗಿ ರಾಜ್ಯೋತ್ಸವಾ ಮಾಡ್ತಾ ಇಲ್ಲಾ, ಇಲ್ಲಾದರು ಅದರ ಆಚರಣೆ ಆಗ್ಲೆ ಬೇಕೂಂತ ದೇವರಾಜ ಇಂದ್ರನ ಹತ್ತಿರ ಹಠ ಹಿಡಿದು ಈ ಬಾವುಟ ಹಾರಿಸಿದಾರೆ ನೋಡಿ ಸಾರ್.. ಇದಲ್ಲವೆ ನಿಜವಾದ ಕನ್ನಡಾಭಿಮಾನ..?”

ನನಗೆ ಎಲ್ಲಿಲ್ಲದ ಹಾಗೆ ರೇಗಿಹೋಯ್ತು.. ‘ಬೆಳಬೆಳಗ್ಗೆಯೆ ಎದ್ದು ನನಗೆ ಓಳು ಬಿಡುತ್ತಿದ್ದಾನಲ್ಲಾ?’ ಎಂದು. ಅದೂ ಎಲ್ಲಾ ಬಿಟ್ಟು ನನ್ನ ಕಿವಿಗೆ ಹೂ ಇಡಲು ಬರುತ್ತಿದ್ದಾನಲ್ಲಾ ಅಂತ ಭಾರಿ ಕೋಪವೂ ಬಂತು.. ನನ್ನನ್ನೇನು ಗುಗ್ಗು, ಬುದ್ಧು ಅಂದುಕೊಂಡು ಏಮಾರಿಸುತ್ತಿದ್ದಾನ? ಅನಿಸಿ ಅದೇ ಕೋಪದಲ್ಲಿ “ಗುಬ್ಬಣ್ಣಾ..” ಎಂದು ಜೋರಾಗಿ ಅರಚಿ ಅವನತ್ತ ಬಲವಾಗಿ ಕೈ ಬೀಸಿದೆ. ಅಪಘಾತದ ಮುನ್ನೆಚ್ಚರಿಕೆ ಸಿಕ್ಕಿ ತಟ್ಟಕ್ಕನೆ ಪಕ್ಕಕ್ಕೆ ಸರಿದು ಬಚಾವಾಗಲಿಕ್ಕೆ ಯತ್ನಿಸಿದ ಗುಬ್ಬಣ್ಣ.. ಅದೇನು ಯಶಸ್ವಿಯಾಯಿತೊ ಇಲ್ಲವೊ ‘ಫಳೀರ್’ ಎಂದ ಸದ್ದು ಮಾತ್ರ ಕೇಳಿಸಿತು..ಜತೆಗೆ ಹೊಡೆದ ರಭಸಕ್ಕೊ ಏನೊ ಹೈ ವೋಲ್ಟೇಜ್ ಶಾಖ ಹುಟ್ಟಿಕೊಂಡಂತೆ ಏನೊ ಬಿಸಿ ಬಿಸಿ ಚೆಲ್ಲಿಕೊಂಡ ಭಾವ..

………………….

” ಥೂ ಏನ್ರೀ ಇದು… ಈಗ ತಾನೆ ಇಟ್ಟು ಹೋಗಿದ್ದ ಬಿಸಿ ಕಾಫೀನ ಒದ್ದು ಬೀಳಿಸಿದ್ದು ಅಲ್ದೆ ಇಡೀ ರಗ್ಗಿನ ಮೇಲೆಲ್ಲಾ ಚೆಲ್ಲಿಕೊಂಡಿದ್ದಿರಲ್ಲಾ..? ನಿಮಗೆ ಅದ್ಯಾವ ನಿದ್ದೆಗಣ್ಣೊ, ಅದ್ಯಾವ ಕನಸೊ? ಹಾಳು ರಾಜ್ಯೋತ್ಸವದ ದಿನವಾದರು ನೆಟ್ಟಗೆ ಎಳಬಾರದಾ” ಎನ್ನುತ್ತ ಕೂಗುತ್ತಿದ್ದ ನನ್ನ ನೈಂಟಿ ಕೇಜಿ ತಾಜಮಹಲಿನ ದನಿ ಕಿವಿಗೆ ಬೀಳುತ್ತಿದ್ದಂತೆ ಬೆಚ್ಚಿ ಬಿದ್ದು ಮೇಲೆದ್ದು ಕುಳಿತೆ..

ಬಿಸಿ ಕಾಫಿ ಚೆಲ್ಲಿಕೊಂಡು ಇನ್ನು ಚುರುಗುಡುತ್ತಿದ್ದ ಕಾಲನ್ನು ಸವರಿಕೊಳ್ಳುತ್ತಾ, ” ಜೈ ಕರ್ನಾಟಕ ಮಾತೆ, ಜೈ ಭುವನೇಶ್ವರಿ, ಜೈ ಕನ್ನಡಾಂಬೆ” ಎನ್ನುತ್ತ ಮೇಲೆದ್ದು ನಡೆದೆ, ಕನಸಿನಲ್ಲು ಬಂದು ಕಾಡುವ ಗುಬ್ಬಣ್ಣ ಕೈಗೆ ಸಿಕ್ಕಿದರೆ ಹಾಗೆ ಸೀಳಿ ಹಾಕುವ ಕೋಪದಲ್ಲಿ…!

(ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು…!)
ಗುಬ್ಬಣ್ಣ, ಹಾಸ್ಯ, ಗಡಿಯಾಚೆ, ರಾಜ್ಯೋತ್ಸವ, ಹರಟೆ, ಲಘು, ನಾಗೇಶ, ಸಿಂಚನ, ಮೈಸೂರು, ನಾಗೇಶಮೈಸೂರು, nageshamysore,nagesha,mysore

00394. ಗುಬ್ಬಣ್ಣನ “ವನ್ ಡೇ…ಮಾತರಂ..!” (0008)


ಲಘು ಹರಟೆ:
00394. ಗುಬ್ಬಣ್ಣನ “ವನ್ ಡೇ…ಮಾತರಂ..!” (Sampada 01.11.2015)
_____________________________________________

ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು ಕೈಲಿ ಬೀಸಣಿಗೆ ಗಾಳಿ ಹಾಕಿಕೊಳ್ಳುತ್ತ ಟೇಬಲ್ಲಿನ ಮೇಲಿದ್ದ ಪ್ಲೇಟಿನಿಂದ ಕಡಲೆ ಕಾಯಿ ಬೀಜ, ಚಿಪ್ಸ್ ತಿನ್ನುತ್ತಿದ್ದೆ ಡ್ರಿಂಕ್ಸಿನ ಗ್ಲಾಸ್ ಜತೆಗೆ ನಂಚಿಕೊಳ್ಳುತ್ತಾ. ಅಪರೂಪಕ್ಕೆ ‘ಬಿಯರಿನ ಜತೆಗೊಂದು ನೈಂಟಿ’ಗೆ ಪರ್ಮಿಟ್ ಕೊಟ್ಟ ಮನೆ ದೇವತೆಯ ಕೃಪಾಕಟಾಕ್ಷಕ್ಕೂ, ತುಂಬಾ ದಿನಗಳ ಮೇಲೆ ಆ ಹೊತ್ತಿನಲ್ಲಿ ಇಂಡಿಯಾ ಸೂಪರ್ ಆಗಿ ಆಡುತ್ತಿದ್ದ ರೀತಿಗು, ಸೀರಿಯಲ್ ‘ಕಿಲ್ಲರ್’ ಧಾರಾವಾಹಿಗಳಿಗೆ ‘ಖೊಕ್’ ಬಿದ್ದರೂ ಕಿರಿಕಿರಿ ಮಾಡದೆ ಟಿವಿ ನೋಡಲು ಬಿಟ್ಟುಕೊಟ್ಟು, ಸಪ್ಲೈ ಡಿಪಾರ್ಟ್ಮೆಂಟ್ ಜವಾಬ್ದಾರಿ ವಹಿಸಿಕೊಂಡ ನನ್ನ ‘ನೈಂಟಿ ಕೇಜಿ ತಾಜಮಹಲ್’ ಧಾರಾಳಕ್ಕೊ, ‘ಇದ್ದರೆ ಇಂತಹ ಭಾನುವಾರ ಇರಬೇಕಪ್ಪಾ’ ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಹೊರಗಿನಿಂದ ಕಂಚಿನ ಕಂಠದಂತಹ ನಿರ್ದಿಷ್ಠ ದನಿಯೊಂದು ಕೇಳಿಸಿತ್ತು..

“ವನ್…ಡೇ…. ಮಾತರಂ..”

ಅದು ನಿಸ್ಸಂಶಯವಾಗಿ ಗುಬ್ಬಣ್ಣನ ದನಿಯೆಂದರಿವಾಗಿ ಬೆಚ್ಚಿ ಬಿದ್ದವನಂತೆ ಮೊದಲು ಆ ನೈಂಟಿಯನ್ನೆತ್ತಿಕೊಂಡು ಒಂದೆ ಗುಟುಕಿಗೆ ‘ಸ್ವಾಹಾ’ ಮಾಡಿಬಿಟ್ಟೆ, ಹನಿಯ ಪಸೆಯೂ ಒಂದು ಚೂರು ಉಳಿಯದಂತೆ. ಸಿಂಗಪುರದಲ್ಲಿ ಮೊದಲೆ ‘ಡ್ರಿಂಕ್ಸ್’ ಎಂದರೆ ಪ್ರೀಮಿಯಮ್.. ಅದರಲ್ಲು ಹಾಟ್ ಡ್ರಿಂಕ್ಸ್ ಅಂದರೆ ಕೇಳುವ ಹಾಗೆಯೆ ಇಲ್ಲ. ಇನ್ನು ಗುಬ್ಬಣ್ಣನಿಗಂತು ಅದೆಂದರೆ ಪ್ರಾಣ; ಕಣ್ಣಿಗೆ ಬಿದ್ದರೆ ಸಾಕು, ಒಂದೇ ಗ್ಲಾಸ, ಎರಡಿದೆಯಾ, ಬೇರೆಯವರು ಕುಡಿಯುತ್ತಿರುವ ಲೋಟವಾ ಅಲ್ಲವಾ? ಇದ್ಯಾವುದನ್ನೂ ಲೆಕ್ಕಿಸದೆ ಕುಡಿದ ಮತ್ತಿನಲ್ಲಿರುವವನಂತೆ ಒಂದೆ ಏಟಿಗೆ ಎತ್ತಿ ಕುಡಿದು ಮುಗಿಸಿಬಿಡುತ್ತಾನೆ -‘ತುಂಬಾ ಚೆನ್ನಾಗಿತ್ತು ಸಾರ್.. ಯಾರು ತಂದ್ಕೊಟ್ಟಿದ್ದು ?’ ಎಂದು ಲೇವಡಿ ಬೇರೆ ಮಾಡುತ್ತಾ. ಅವನ ಲೆಕ್ಕದಲ್ಲಿ ಸಿಂಗಪುರದಲ್ಲಿ ಅಷ್ಟು ದುಡ್ಡು ಕೊಟ್ಟು ಕುಡಿಯುವವರೆಲ್ಲರು ಮುಠ್ಠಾಳರು; ಪುಕ್ಕಟೆ ಸಿಕ್ಕಿದಾಗ ಭಂಡತನದಿಂದಾದರು ಸರಿಯೆ, ಕುಡಿಯದೆ ಇದ್ದವರೂ ಇನ್ನೂ ಮುಠ್ಠಾಳರು. ಅವನ ಈ ಸಿದ್ದಾಂತದ ಅರಿವಿದ್ದ ಕಾರಣದಿಂದಲೆ ನಾನು ಹುಷಾರಾಗಿ ಆ ಅಪರೂಪದ ಭಾಗ್ಯವನ್ನು ಜಾರಗೊಡದೆ, ಲಪಟಾಯಿಸಬಿಡದೆ ಒಂದೇಟಿಗೆ ಮುಗಿಸಿಬಿಟ್ಟಿದ್ದು – ನಿಧಾನಕ್ಕೆ ಆಸ್ವಾದಿಸಿ ಕುಡಿಯುವ ರಸಾಸ್ವಾದನೆಗೆ ಭಂಗವಾದರು ಸಹ; ಆಸ್ವಾದನೆಗೆ ಭಂಗವುಂಟಾದರೂ, ರಸವಾದರೂ ದಕ್ಕೀತಲ್ಲ ಎನ್ನುವ ‘ಸ್ವಸ್ವಾರ್ಥ’ ಮನೋಭಾವವೆ ಅಲ್ಲಿ ಮುಖ್ಯ..!

ಬಿರುಗಾಳಿಯಂತೆ ನೇರ ಒಳಬಂದವನೆ ಗುಬ್ಬಣ್ಣ ಮತ್ತೆ , “‘ವನ್..ಡೇ…ಮಾತರಂ’ಎಷ್ಟಾಯ್ತು ಸಾರು ಸ್ಕೋರು?” ಎಂದ.. ಆದರೆ ಹಾಗೆ ಕೇಳುತ್ತಿದ್ದಂತೆಯೆ ಮೇಲೆ ಕೆಳಗೆ ಆಡುತ್ತಿದ್ದ ಮೂಗಿನ ಹೊಳ್ಳೆಗಳು ಅವನಿಗೇನೊ ವಾಸನೆಯ ಸುಳಿವು ಸಿಕ್ಕಿದೆಯೆನ್ನುವ ಸೂಚನೆ ನೀಡುತ್ತಿರುವುದು ಅರಿವಾಗಿ, ‘ಸದ್ಯ, ಸ್ವಲ್ಪದರಲ್ಲಿ ಪಾರಾದೆ’ ಎಂದುಕೊಳ್ಳುತ್ತಲೆ ಸ್ಕೋರು ಹೇಳಿದೆ. ‘ಬಾಯಿ ಬಿಟ್ಟರೆ ಬಣ್ಣಗೇಡು’ ಅನ್ನುವಂತೆ ಏನೊ ಭಾರಿ ಹೆಮ್ಮೆಯಲ್ಲಿ ಸ್ಕೋರು ಹೇಳ ಹೊರಟವನಿಗೆ ಬಾಯಿಯ ಘಾಟು, ವಾಸನೆಯ ರೂಪದಲ್ಲಿ ಅಲೆಯಲೆಯಾಗಿ ಪ್ರವಹಿಸಿ ಅವನ ನಾಸಿಕಾಗ್ರದ ಆವಾಹಕಗಳನ್ನು ಪ್ರೇರೇಪಿಸಿ ಗುಟ್ಟು ಬಿಟ್ಟುಕೊಡಬಹುದೆಂಬ ಸತ್ಯ ಫಕ್ಕನೆ ಅರಿವಾಗದೆ ಹೋಯ್ತು..

” ವನ್.. ಡೇ… ಮಾತರಂ.. ಏನ್ಸಾರ್ ಇದು ಚೀಟೀಂಗೂ ? ಇದು ಡೆಫನೈಟ್ಲಿ ಮ್ಯಾಚ್ ಫಿಕ್ಸಿಂಗ್… ಐ ಸೆನ್ಸ್ ಸಮ್ ಥಿಂಗ್ ರಾಂಗ್ ಹಿಯರ್” ಅಂದ. ಹುಲಿ ವಾಸನೆ ಹಿಡಿದ್ಬಿಟ್ಟಿದೆ ಅಂತ ನನಗೂ ಗೊತ್ತಾಗೋಯ್ತು…ಇನ್ನು ಮುಚ್ಚಿಟ್ಟು ಸುಖವಿಲ್ಲ…

” ಚೀಟಿಂಗೂ ಇಲ್ಲಾ ಫಿಕ್ಸಿಂಗು ಇಲ್ಲಾ ಗುಬ್ಬಣ್ಣ… ಜಸ್ಟ್ ಕೋ ಇನ್ಸಿಡೆನ್ಸ್ ಅಷ್ಟೆ.. ಹೋಮ್ ಮಿನಿಸ್ಟ್ರಿಯಿಂದ ಒಂದ್ ನೈಂಟಿಗೆ ಪರ್ಮಿಟ್ ಸಿಕ್ತು.. ಅದನ್ನೆ ಇವತ್ತು ತಾನೆ ಮುಗಿಸಿದೆ.. ಮನಸು ಬದಲಾಯಿಸೋದ್ರೆ ಕಷ್ಟ ಅಲ್ವಾ..?” ಎಂದೆ ತುಸು ‘ಹುಸಿ’ ಅಪರಾಧಿ ದನಿಯಲ್ಲಿ..

” ಇವತ್ತು ತಾನೇ ಅನ್ನೋದು ತೀರಾ ಮೋಸಾ ಸಾರ್.. ಈಗ ಬರ್ತಾ ಇರೋ ಸ್ಮೆಲ್ ನೋಡಿದ್ರೆ ‘ಈಗ ತಾನೇ’ ಮುಗಿಸಿರೊ ಹಾಗಿದೆ.. ನನಗೆ ವಾಸನೆಲೆ ಗೊತ್ತಾಗ್ಬಿಡತ್ತೆ, ಎಷ್ಟೊತ್ತಾಗಿರಬೇಕು ಬಾಟಲ್ ಓಪನ್ ಮಾಡಿ ಅಂತ..”

“ಏನಿವೇ ಸಾರಿ ಗುಬ್ಬಣ್ಣ.. ಟೈಮು ಯಾವುದೇ ಆದ್ರೂ ಅದು ಖಾಲಿ ಅನ್ನೋದು ಮಾತ್ರ ಸತ್ಯಾ.. ಟೂ ಲೇಟ್ ನೌ.. ಬಾ ಕೂತ್ಕೊಂಡು ಬಿಯರ ಹಾಕ್ತಾ ಇಂಡಿಯಾ-ಪಾಕಿಸ್ತಾನ್ ಮ್ಯಾಚ್ ನೋಡ್ತಾ ‘ವನ್..ಡೇ…ಮಾತರಂ’ ಮಾಡೋಣ..” ಎಂದೆ ಸಮಾಧಾನಿಸುವ ದನಿಯಲ್ಲಿ. ಸದ್ಯಾ ಬೀರಾದರು ಸಿಗುವುದೆನ್ನುವ ಆಸೆಗೆ ಸ್ವಲ್ಪ ತಣ್ಣಗಾಗುವನೇನೊ ಎನ್ನುವ ಆಸೆಯಲ್ಲಿ..

” ಇಲ್ಲಾ ಸಾರ್.. ಮ್ಯಾಚ್ ಫಿಕ್ಸಿಂಗ್ ಅಂತ ಅನುಮಾನ ಬಂದ್ಮೇಲೆ, ಪರಿಹಾರವಾದರೇನೇ ಮನಸಿಗೆ ಸಮಾಧಾನ.. ನಾನು ಇನ್ವೆಸ್ಟಿಗೇಟ್ ಮಾಡಿ ನೋಡಿಬಿಡೋದೆ ಸರಿ..” ಎಂದು ಆ ಗ್ಲಾಸಿನ ಹತ್ತಿರ ಹೋಗಲಿಕ್ಕೆ ಹವಣಿಸುತ್ತಿರುವ ಹೊತ್ತಿಗೆ ಪಾಕಾಶಾಲೆಯಿಂದ ಬಿಸಿಬಿಸಿಯಾದ, ಗರಿಗರಿಯಾದ ಬಜ್ಜಿ, ಪಕೋಡ, ಬೊಂಡಗಳ ತಟ್ಟೆಯೊಂದನ್ನು ಹೊತ್ತುಕೊಂಡ ನನ್ನ ಶ್ರೀಮತಿಯ ಪ್ರವೇಶವಾಯಿತು – ‘ಥರ್ಡ್ ಅಂಪೈರಿನ’ ಹಾಗೆ. ಅದೇನು ಪುಣ್ಯಕ್ಕೊ ಇಂದು ಬಹಳ ಒಳ್ಳೆಯ ಮೂಡಿನಲ್ಲಿದ್ದಂತಿತ್ತು.. ಇಲ್ಲದಿದ್ದರೆ ನಾನಾಗಿ ಕೇಳದೆಯೆ ಬಜ್ಜಿ, ಬೊಂಡ ಬರುವುದೆಂದರೆ ಒಂದೊ, ಅವಳ ತವರಿನಿಂದ ಯಾರೊ ಬಂದಿರಬೇಕು ಅಥವಾ ಅವಳ ರೇಷ್ಮೆ ಸೀರೆಗೊ, ಚಿನ್ನದ ಒಡವೆಗೊ ಇಂಡೆಂಟು ಹಾಕುವ ಹುನ್ನಾರದ ಹಿನ್ನಲೆ ಇರಬೇಕು.. ಅದೇನೆ ಇದ್ದರೂ ಗುಬ್ಬಣ್ಣನ ಗಮನ ಬೇರೆ ಕಡೆ ತಿರುಗಿಸೋಕೆ ‘ಪರ್ಫೆಕ್ಟ್ ಡಿಸ್ಟ್ರಾಕ್ಷನ್’ ಅಂದ್ರೆ ಈ ತರದ ಕರಿದ ತಿಂಡಿಯ ಐಟಂಗಳೆ.. ನಾನು ಸ್ವಲ್ಪ ಸಮಾಧಾನದ ನಿಟ್ಟುಸಿರಿಟ್ಟೆ. ಅದೇ ಹೊತ್ತಿಗೆ ಅವಳನ್ನು, ಅವಳ ಕೈಲಿದ್ದ ತುಂಬಿ ತುಳುಕುವ ತಟ್ಟೆಯನ್ನು ನೋಡುತ್ತಿದ್ದಂತೆ ಉದ್ವಿಗ್ನನಾಗಿ ಹೆಚ್ಚುಕಡಿಮೆ ಕಿರುಚಿದ್ದ ಗುಬ್ಬಣ್ಣಾ, “ಅಂಪೈರ್….ಹೌ ಇಸ್ ದಟ್..” ಎಂದು ಬೌಲರ್ ಇಶಾಂತ್ ಶರ್ಮನ ಶೈಲಿಯಲ್ಲಿ. ಪುಣ್ಯಕ್ಕೆ ಅವಳು ಅಂಪೈಯರನ ಶೈಲಿಯಲ್ಲಿ ಕೈ ಬೆರಳೆತ್ತಿ ‘(ಗೆಟ್) ಔಟ್’ ಎನ್ನಲಿಲ್ಲ… 

ಅವನ ದನಿಗೆ ಬೆಚ್ಚಿಬಿದ್ದಂತಾದ ನನ್ನ ‘ಹಾಫಾಂಗಿ’ ತಕ್ಷಣವೆ ಸಾವರಿಸಿಕೊಂಡು, ” ಏನು ಗುಬ್ಬಣ್ಣನಾ ? ಸರಿ ಸರಿ..ಇವರಿಗೆ ಸರಿಯಾದ ಜೊತೆಯೊಂದು ಬೇಕಾಗಿತ್ತು.. ನೀವು ಸರಿ ಸಮಯಕ್ಕೆ ಬಂದಿರಿ ಬಿಡಿ” ಎಂದು ಛೇಡಿಸುತ್ತ ತನ್ನ ಕೈಲಿದ್ದ ತಟ್ಟೆಯನ್ನು ಟೀಫಾಯ್ ಮೇಲಿರಿಸಿದಳು. ಹಾಗಿರಿಸುತ್ತಲೆ ಅಲ್ಲೆ ಪಕ್ಕದಲ್ಲಿದ್ದ ಖಾಲಿ ಲೋಟ ಕೈಗೆತ್ತಿಕೊಳ್ಳಲು ಬಗ್ಗಿದವಳೆ, ” ರೀ.. ಏನ್ರೀ ಇದು ? ಈಗ ತಾನೆ ಬಂದು ಹೋದಾಗ ಡ್ರಿಂಕ್ಸ್ ಲೋಟ ಭರ್ತಿಯಿತ್ತು.. ಅಡಿಗೆಮನೆಗ್ ಹೋಗಿ ಬರೋಷ್ಟರಲ್ಲಿ ಪೂರ್ತಿ ಖಾಲಿ…?! ಲೈಸೆನ್ಸ್ ಸಿಕ್ಕಿದ್ದೆ ತಡ ರಾಶ್ ಡ್ರೈವಿಂಗೇನ್ರಿ ? ” ಎಂದು ಬಿಟ್ಟು ಗುಬ್ಬಣ್ಣನ ಮುಂದೆಯೆ ಏಕಾಏಕಿ ‘ಮ್ಯಾಚ್ ಫಿಕ್ಸಿಂಗ್’ ನ ಸೀಕ್ರೇಟ್ ರಟ್ಟು ಮಾಡಿಬಿಟ್ಟಳು.. ಅದುವರೆವಿಗು ಕಷ್ಟ ಪಟ್ಟು ಬಿಲ್ಡ್ ಮಾಡಿದ್ದ ಇನಿಂಗ್ಸನ್ನು ‘ರನ್ನೌಟ್’ ಆಗುವ ಮೂಲಕ ವಿಕೆಟ್ ಚೆಲ್ಲಿಕೊಂಡ ಹಾಗೆ.. ಗುಬ್ಬಣ್ಣ ತಟ್ಟನೆ ತಲೆಯೆತ್ತಿದವನೆ ನನ್ನ ಕಣ್ಣುಗಳನ್ನೆ ನೇರ ದೃಷ್ಟಿಯಿಂದ ನೋಡತೊಡಗಿದ್ದ.. ನಾನು ಮತ್ತೆತ್ತಲೊ ಕಣ್ಣು ತಿರುಗಿಸಿದ್ದೆ – ‘ಹ್ಯಾಂಡಲ್ ದ ಬಾಲ್’ ಮೂಲಕ ಔಟಾದ ತಿಳಿಗೇಡಿಯ ಹಾಗೆ.

ಹಾಳು ಪ್ರಾಜೆಕ್ಟಲ್ಲಿ ಅನಿರೀಕ್ಷಿತ ಹೊತ್ತಲ್ಲಿ ಅನೂಹ್ಯವಾಗಿ ಬಂದೊದೆಯುವ ಮರ್ಫಿಯ ಹಾಗೆ, ಅದುವರೆಗು ಒಳ್ಳೆ ಬಿಲ್ಡಪ್ ಕೊಡುತ್ತಿದ್ದ ‘ಅರೆ-ಮತಿ’ಯೆ ಔಟ್ ಮಾಡಿಸಿದ ಬೇಸರಕ್ಕೆ ಬಯ್ಯುವಂತೆಯೂ ಇಲ್ಲದೆ ಪೆಚ್ಚು ನಗೆ ನಗುತ್ತ ಮ್ಯಾಚಿನತ್ತ ನೋಡತೊಡಗಿದ, ಅವಳ ಮಾತೆ ಕೇಳಿಸದವನಂತೆ. ಆದರೆ ಗುಬ್ಬಣ್ಣ ಬಿಡಬೇಕಲ್ಲಾ?

” ನೋಡುದ್ರಾ ಸಾರ್ ..? ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಹೆಂಗೆ ಸಿಕ್ಕೊಂಡ್ಬಿಡ್ತು ? ಅನುಭವಾ ಸಾರ್ ಅನುಭವಾ.. ಇಲ್ದಿದ್ರೆ ಇಷ್ಟು ಸಲೀಸಾಗೆ ಹೇಗೆ ಕಂಡು ಹಿಡೀತಿದ್ದೆ ನಾನು ? ನಮ್ ದೇವರ ಸತ್ಯ ನಮಗ್ ಗೊತ್ತಿಲ್ವಾ ಅನ್ನೊ ಹಾಗೆ.. ಇನ್ನು ಏನ್ ನೆಪ ಹೇಳೋದ್ ಬ್ಯಾಡಾ.. ಕಾಂಪನ್ಸೇಶನ್ ಪ್ಲಾನ್ ಬಿಚ್ಚಿಡಿ ಈಗ..” ಎಂದ. ಅವನ ಪ್ಲಾನಿನ ಮರ್ಜಿಗೆ ಬಿದ್ದು ಹೋದರೆ ಸಿಂಗಪುರದ ಆ ತುಟ್ಟಿ ಮದ್ಯದಂಗಡಿಯಲ್ಲಿ ಒಂದು ಪೂರ್ತಿ ‘ಎಕ್ಸ್ಪೆನ್ಸಿವ್’ ಬಾಟಲು ಪೀಕಬೇಕಾಗುತ್ತೆ.. ನನಗೇನೆ ನಾನು ದುಡ್ಡು ಕೊಟ್ಟು ಕುಡಿದವನಲ್ಲ, ಇನ್ನು ಗುಬ್ಬಣ್ಣನಿಗೆ ಕುಡಿಸುವುದೆ ? ಬಿಲ್ಕುಲ್ ಆಗದ ಮಾತು !

“ಗುಬ್ಬಣ್ಣ ಮ್ಯಾಚ್ ಇಂಟ್ರಸ್ಟಿಂಗ್ ಸ್ಟೇಜಲ್ಲಿದೆ ನೋಡೋಣ ಬಾರೊ.. ಈ ಮ್ಯಾಚ್ ಫಿಕ್ಸಿಂಗ್ ಗಿಕ್ಸಿಂಗ್ ಎಲ್ಲಾ ಆಮೇಲೆ ನಿರ್ಧರಿಸೋಣ..” ಎನ್ನುತ್ತ ಸಮಾಧಾನಿಸಿದೆ. ಅವನ ಮುಂದೆ ತಳ್ಳಿದ್ದ ಬೊಂಡ, ಬಜ್ಜಿಯಾದಿ ಕುರುಕು ತಿಂಡಿಗಳ ಮೇಲೆ ಗಮನ ಹರಿಸುತ್ತಾ, ” ಏನ್ ಸಾರು ಇಲ್ಲೂ ಅದೇ ಗೋಳು ಬರಿ ಸಸ್ಯಾಹಾರವೆ ಇದೆ ?” ಎಂದು ಅಪಶೃತಿ ನುಡಿದ. ನಮ್ಮ ಮನೆಯಲ್ಲಿ ಎಲ್ಲಾ ವೆಜ್ಜೆ, ಯಾರು ಯಾವ ಕಾಲದಲ್ಲೂ ನಾನ್ವೆಜ್ಜು ಮಾಡಿದವರಲ್ಲ, ತಿಂದವರಲ್ಲ.. ಅದು ಗೊತ್ತಿದ್ದು ಯಾಕೆ ಗುಟುರು ಹಾಕುತಿದ್ದಾನೆ ? ಎಂದು ನನ್ನಲ್ಲೆ ಅಂದುಕೊಂಡೆ ಅವನ ಮುಂದೆ ಬಿಯರ್ ಗ್ಲಾಸ್ ತಳ್ಳಿದೆ, ‘ಸಾರಾಯಂ ಸರ್ವ ರೋಗಾನಿಕಿ ಮದ್ದು’ ಎನ್ನುವ ಹಾಗೆ.

” ಇಷ್ಟೊಂದು ಎಗ್ಸೈಟಿಂಗ್ ಮ್ಯಾಚು, ಅದೂ ಸಂಡೆ ನಡೆಯುವಾಗ ಬೀರಿನ ಜತೆಗೆ ‘ವಿಶೇಷ ಐಟಂ’ ಇರಬೇಕು ಸಾರ್.. ಮೊದಲೆ ಹೇಳಿದ್ದಿದ್ದರೆ ಬರುವಾಗಲೆ ಏನಾದರು ಕಟ್ಟಿಸಿಕೊಂಡು ಬಂದುಬಿಡುತ್ತಿದ್ದೆನಲ್ಲಾ, ‘ಭರ್ಜರಿ ರಾಜಾ’ ದಿಂದ” ಎಂದ.

‘ಭರ್ಜರೀ ರಾಜಾ’ ಅನ್ನೋದು ‘ಬರ್ಗರ ಕಿಂಗ್’ನ ಕನ್ನಡೀಕರಿಸಿದ ರೂಪ.. ನವೆಂಬರು ಹತ್ತಿರವಾಗುತ್ತಿದ್ದಂತೆ ಗುಬ್ಬಣ್ಣನ ಕನ್ನಡ ಪ್ರೇಮವು ಜಾಗೃತವಾಗುವುದೇನು ಹೊಸತಲ್ಲ… ಆದರೆ ಈಗ ‘ವನ್ ಡೇ ಮಾತರಂ’ ಒನ್ ಡೆ ಮ್ಯಾಚ್ ನಡೆಯುವಾಗ ಈ ಕನ್ನಡ ಪ್ರೇಮ ಸ್ವಲ್ಪ ಗೋಕುಲಾಷ್ಟಮಿ, ಇಮಾಂಸಾಬಿ ಲೆಕ್ಕಾಚಾರ..

” ಅಲ್ಲೀಗ ಮಾರಾಟದ ಭರ್ಜರಿ ಭೇಟೆ ನಡೆದಿದೆ ಸಾರ್… ಒಂದು ಏಕ ಮಾಳಿಗೆ ಕೋಳಿ ಸೊಪ್ಪಿನ ರೊಟ್ಟಿ ಕೊಂಡ್ರೆ ಇನ್ನೊಂದು ಪುಕ್ಕಟ್ಟೆ” ಇದ್ಯಾವುದಪ್ಪ, ‘ಏಕ ಮಾಳಿಗೆ ಕೋಳಿ ಸೊಪ್ಪಿನ ರೊಟ್ಟಿ’ ಅಂತ ತಿರುಗ ತಲೆ ಕೆಡಿಸಿಕೊಬೇಡಿ – ಯಾಥಾರೀತಿ ಬರ್ಗರಿಗಿಟ್ಟ ಹೆಸರು ಅದು. ಮಾಳಿಗೆ ಅನ್ನೋದು ಬನ್ನುಗಳೆರಡರ ನಡುವೆ ಇರುವ ಅಟ್ಟಣೆ ಒಂದು ಮಾಳಿಗೆಯದ, ಎರಡು ಮಾಳಿಗೆಯದ ಅನ್ನುವುದರ ಮೇಲೆ ಅದರ ಗುಣ ವಿಶೇಷ ನಿಗದಿತವಾಗುತ್ತೆ…

“ಯಾಕೆ ಪೀಡ್ಜಾ ಹಟ್ಟು, ಮೆಕ್ಡೊನಾಲ್ಡ್ಸ್, ಕೇಎಫ್ಸಿ ಆದರೆ ಆಗಲ್ವಾ ? ಅಲ್ಲೂ ವಾರವಾರನು ಪ್ರಮೋಶನ್, ಡಿಸ್ಕೌಂಟೂ ಇರುತ್ತಲ್ಲ?” ಎಂದೆ ನಾನು. ಆ ಹೊತ್ತಿಗೆ ವಿರಾಟ್ ಕೋಹ್ಲಿ ಒಂದು ಪೋರ್ ಹೊಡೆದದ್ದು ಕಾಣಿಸಿತು..

“ಅಲ್ಲು ಹುರಿದ ಕೋಳಿ ತಾನೆ ಸಾರ್ ಸಿಗೋದು ? ಅಲ್ಲಿ ನೋಡಿ ನಮ್ಮ ವಿರಾಟ ಕೋಳಿಯೂ ಒಂದು ‘ಚೌತಿ’ ಹೊಡೆದುಬಿಟ್ಟ..”

ನನಗ್ಯಾಕೊ ಪೂರ್ತಿ ಅನುಮಾನ ಶುರುವಾಗಿಹೋಯ್ತು – ‘ಬಿಯರೇರುವುದಕ್ಕೆ ಮುಂಚೆ ಯಾವತ್ತು ಗುಬ್ಬಣ್ಣ ಹೀಗೆ ಮಾತಾಡಿದವನಲ್ಲ.. ಅಂತದ್ದರಲ್ಲಿ ಈಗ ಕೋಹ್ಲಿಯನ್ನ, ಕೋಳಿ ಅನ್ನುತ್ತಿದ್ದಾನೆ, ಕೇಯಫ್ಸಿ ಫ್ರೈಡ್ ಚಿಕನ್ನನ್ನು ಹುರಿದ ಕೋಳಿ ಅನ್ನುತ್ತಿದ್ದಾನೆ, ಬೌಂಡರಿ ಹೊಡೆದ ಅನ್ನದೆ ಚೌತಿ ಬಾರಿಸಿದ ಅನ್ನುತ್ತಿದಾನೆ; ಆಗಲೆ ನೋಡಿದರೆ ‘ಭರ್ಜರಿ ರಾಜಾ’ ಎಂದು ‘ಬರ್ಗರ ಕಿಂಗ್’ ಜಾತಕವನ್ನೆ ಏಮಾರಿಸಿಬಿಟ್ಟ.. ಅದೆಲ್ಲ ಸಾಲದಂತೆ ಸೊಟ್ಟ ಸೊಟ್ಟಾಗಿ ‘ವನ್ ಡೇ ಮಾತರಂ, ವನ್ ಡೇ ಮಾತರಂ’ ಅಂತಾ ಬೇರೆ ಒಂದೆ ಸಮನೆ ಬಡಕೋತಾ ಇದಾನೆ – ಏನು ಬರುವಾಗ್ಲೆ ಲಿಟಲ್ ಇಂಡಿಯಾದಲ್ಲಿ ಒಂದು ಪೆಗ್ ‘ರಮ್ಮು’ ಏರಿಸಿಕೊಂಡೆ ಬಂದುಬಿಟ್ಟನಾ, ಹೇಗೆ ?’ ಎಂದೆಲ್ಲಾ ಅನುಮಾನದ ನೂರೆಂಟು ಪ್ರಶ್ನೆಗಳು ಧುತ್ತೆಂದು ಎದುರಾಗುವ ಹೊತ್ತಿನಲ್ಲೆ ಮತ್ತೊಂದು ಮುತ್ತಿನ ವಾಗ್ಜರಿ ಉದುರಿಬಿದ್ದಿತ್ತು ಗುಬ್ಬಣ್ಣನ ಹೊಸ ‘ಕಲಾಕಾರ’ ಅವತಾರದಲ್ಲಿ..

” ಏನು ದಾಂಡಿಗರು ನಮ್ಮವರೂಂತೀನಿ? ಒಂದೂ ಗೂಟ ಕಳೆದುಕೊಳ್ಳದ ಹಾಗೆ ಓಟ ಪೇರಿಸ್ತಿದಾರಲ್ಲಾ? ಹೀಗೆ ಆಡ್ತಿದ್ರೆ ಮುನ್ನೂರು ದಾಟೋದು ಗಟ್ಟಿ..” ಎಂದ ಗೆಲ್ಲೋಕೆ ಬೇಕಾದ ಮುನ್ನೂರೂ ಚಿಲ್ಲರೆ ರನ್ನುಗಳ ಲೆಕ್ಕ ಹಾಕುತ್ತಾ..

ನನಗೇನೊ ಅನುಮಾನವಾಗಿ ಚಕ್ಕನೆ ಗೋಡೆಯ ಮೇಲಿದ್ದ ಕ್ಯಾಲೆಂಡರಿನತ್ತ ನೋಡಿದೆ.. ತಾರೀಖು ನೋಡುತ್ತಿದ್ದಂತೆ ಏನೊ ಜ್ಞಾನೋದಯವಾದಂತಾಗಿ ಗುಬ್ಬಣ್ಣನ ಅಸಾಧಾರಣ ವರ್ತನೆಗೊಂದು ಸುಳಿವು ಸಿಕ್ಕಂತಾಯ್ತು..

” ಲೋ ಗುಬ್ಬಣ್ಣಾ… ನವೆಂಬರ್ ಒಂದನೆ ತಾರೀಖು ಇನ್ನು ಒಂದು ವಾರ ದೂರದಲ್ಲಿದೆಯೊ.. ಈಗಿನಿಂದಲೆ ಇಷ್ಟೊಂದು ಅಭಿಮಾನ ಬಂದು ಬಿಟ್ರೆ ಹೇಗೊ ? ಅಕ್ಟೋಬರ ಮೂವ್ವತ್ತರ ರಾತ್ರಿಗೊ, ನವೆಂಬರ ಒಂದರ ಬೆಳಿಗ್ಗೆಗೊ ಜಾಗೃತಿಯಾದರೆ ಸಾಕೊ.. ಈಗ ಸದ್ಯಕ್ಕೆ ನೀನೆ ಹೇಳುತ್ತಿರುವ ಈ ಕ್ರಿಕೆಟ್ಟಿನ ‘ವನ್ ಡೇ ಮಾತರಂ’ ಸಾಕು.. ಮ್ಯಾಚ್ ನೋಡ್ತಾ ಎಂಜಾಯ್ ಮಾಡು ಬಾ, ಬೀಯರಿನ ಜತೆಯಲ್ಲಿ…”ಅಂದೆ.

ಗುಬ್ಬಣ್ಣ ಯಾಕೊ ಇನ್ನು ಕೆಂಪಾಗಿ ಗುರುಗುಟ್ಟುವಂತೆ ಕೆಕ್ಕರಿಸಿಕೊಂಡೆ ನನ್ನತ್ತ ನೋಡತೊಡಗಿದ.. ನನ್ನ ‘ಗೆಸ್’ ತಪ್ಪಾಗಿದ್ದಾಗೆಲ್ಲ ಅವನು ಹೀಗೆ ‘ಗುರಾಯಿಸುವುದರಿಂದ’ ನನಗು ನಾನು ಹೇಳಿದ್ದು ‘ಹಾಫ್’ ಸತ್ಯವೊ, ‘ಕ್ವಾಟರ್’ ಸತ್ಯವೊ ಇರಬೇಕೆಂದರಿವಾಗಿ ‘ಮತ್ತೇನು ?’ ಎನ್ನುವಂತೆ ಅವನತ್ತಲೆ ಮರು’ಗುರಾಯಿಸಿದೆ’, ಹುಬ್ಬು ಮೇಲೇರಿಸುತ್ತ.

” ಅದಕ್ಕೆ ಸಾರ್.. ನಾನು ಹೇಳಿದ್ದು, ನೀವೆಲ್ಲ ಬರಿ ‘ವನ್ ಡೇ ಮಾತರಂ’ ಜನ ಅಂತ’ ಎಂದು ಹೇಳಿ ವಿಷಯವನ್ನೆ ಮತ್ತಷ್ಟು ಗೋಜಲಾಗಿಸಿದ.

ಗುಬ್ಬಣ್ಣನಿಗೆ ಕ್ರಿಕೆಟ್ಟೆಂದರೆ ಪ್ರಾಣ.. ಅದರಲ್ಲಿ ವನ್ ಡೆ ಮ್ಯಾಚೆಂದರೆ ಪಂಚ ಪ್ರಾಣ.. ಅದರಲ್ಲು ಇಂಡಿಯಾ- ಪಾಕಿಸ್ಥಾನ್ ಮ್ಯಾಚು ಬೇರೆ – ದೇಶಭಕ್ತಿ ಉಕ್ಕಿ ಹರಿಯಲು ಇನ್ನಾವ ಕಾರಣ ಬೇಕು ? ಇದುವರೆವಿಗು ಆ ಕಾರಣದಿಂದಲೆ ನಿಜವಾದ ‘ವಂದೇ ಮಾತರಂ’ ಅನ್ನೆ ತುಸು ರೂಪಾಂತರಿಸಿ ವಂಡೆ ಕ್ರಿಕೆಟ್ಟಿನ ‘ವನ್ ಡೇ ಮಾತರಂ’ ಅನ್ನುತ್ತಿದ್ದನೆ? ಅಂದುಕೊಂಡಿದ್ದವನಿಗೆ, ಈಗ ಸ್ವಲ್ಪ ಅನುಮಾನ ಶುರುವಾಯ್ತು..

” ಏನೊ ಗುಬ್ಬಣ್ಣ.. ನೀನು ಹೇಳ್ತಾ ಇರೋ ತರ ನೋಡಿದ್ರೆ, ನೀನು ಹೇಳ್ತಾ ಇರೋದು ಕ್ರಿಕೆಟ್ ವನ್ ಡೇ ಮಾತರಂ ಅಲ್ಲಾ ಅನಿಸ್ತಿದೆ.. ಕನ್ನಡ ರಾಜ್ಯೋತ್ಸವದ ಭುವನೇಶ್ವರಿನೇನಾದರು ಮನಸಿನಲ್ಲಿಟ್ಟುಕೊಂಡು ‘ವಂಡೇ ಮಾತರಂ’ ಅನ್ನುತ್ತಿದ್ದಿಯಾ, ಹೇಗೆ ? ನಾವು ವಂದೇ ಮಾತರಂ ಸಾಮಾನ್ಯ ಹೇಳೋದು ಸ್ವಾತಂತ್ರ ದಿನಕ್ಕೊ, ಗಣರಾಜ್ಯಕ್ಕೊ ಅಲ್ವಾ?” ಎಂದು ಅನುನಯಿಸುವ ದನಿಯಲ್ಲೆ ಕೇಳಿದ್ದೆ. ಕನ್ನಡದಲ್ಲಿರೊ ‘ಡ’ ತೆಗೆದು ವಂದೆನಲ್ಲಿರೊ ‘ದ’ ಗೆ ಹಾಕಿ ‘ಹೊಸ ಕನ್ನಡ ವರ್ಡು ಸಾರ್ ಇದೂ’, ಅನ್ನೊ ಕಿಲಾಡಿ ಗುಬ್ಬಣ್ಣ. ಆದರೂ ಅವನು ಕುಡಿದೆ ಬಂದಿರಬೇಕೆನ್ನುವ ಗುಮಾನಿ ಮಾತ್ರ ಕಡಿಮೆಯಾಗಿರಲಿಲ್ಲ.. ಅದನ್ನು ನಾನಂತು ಪರೀಕ್ಷಿಸಿ ಹೇಳುವಂತಿರಲಿಲ್ಲ.. ನಾನೆ ಗುಂಡು ಹಾಕಿಕೊಂಡು ಕೂತಿರುವಾಗ ಅವನ ವಾಸನೆ ನಾನು ಹಿಡಿಯುವುದೆಲ್ಲಿ?

“ಅದನ್ನೆ ಸಾರ್.. ನಾನು ಹೇಳ್ತಿರೋದು.. ಯಾರಿಗೂ ಒಂದು ಚೂರು ಅಭಿಮಾನಾನೆ ಇಲ್ಲ.. ನಮ್ ದೇಶ, ನಮ್ ಭಾಷೆ, ನಮ್ ಸಂಸ್ಕೃತಿ, ನಮ್ ಆಚಾರ ವಿಚಾರ – ಎಲ್ಲಾ ಬರಿ ವನ್ ಡೇ ಮ್ಯಾಚ್ ತರ ವನ್ ಡೇ ಮಾತರಂ ಆಗ್ಬಿಟ್ಟಿದೆ.. ಮ್ಯಾಚ್ ದಿನ ಐವತ್ತೈವತ್ ಓವರ್ ನೋಡ್ಕೊಂಡ್ ಹಾರ್ಕೊಂಡ್, ಕುಣ್ಕೊಂಡ್ ‘ಧಾಂ ಧೂಂ’ ಅನಿಸೊ ಹಾಗೆ ಮಾಡಿ ಆಮೇಲೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೊ ತರ ಪೂರ್ತಿ ಬಿಟ್ ಹಾಕಿ ನೆಕ್ಸ್ಟ್ ವನ್ ಡೆ ಕಾಯ್ತಾರಲ್ಲಾ? ಹಾಗೆ ” ಎಂದು ಕಿಡಿಗಾರಿದ ಗುಬ್ಬಣ್ಣ.

ನಾನು ಸ್ವಲ್ಪ ಮತ್ತೇರಿದ್ದ ಧೈರ್ಯದಲ್ಲೆ ದನಿಯೇರಿಸುತ್ತಾ,”ಗುಬ್ಬಣ್ಣ ಕಮ್ ಟು ದಿ ಪಾಯಿಂಟ್.. ನಿನ್ನ ಮಾತರಂ, ಕ್ರಿಕೆಟ್ ವನ್ ಡೇ ಮಾತರಂ ಅಲ್ಲಾ ಅನ್ನೋದಾದ್ರೆ ಇನ್ನೇನೂಂತಾ?” ಎಂದೆ.

” ಸಾರ್ ವನ್ ಡೇ ಮ್ಯಾಚ್ ನೋಡ್ತಾ , ಅದನ್ನೆ ನಾವ್ ಗಾಡ್ ಅನ್ನೊ ತರಹ ನೋಡೊದ್ರಿಂದ ಅಲ್ಲೂ ಅಪ್ಲೈ ಆಗುತ್ತೆ ಸಾರ್.. ಆದರೆ ನಾನು ಹೇಳಿದ ವನ್ ಡೇ ಮಾತರಂ ಅದಲ್ಲಾ ..”

“ಮತ್ತೆ?”

” ನಾವ್ ಮಾಡೊ ಸೆಲೆಬ್ರೆಷನ್ನೆಲ್ಲ ಈಗ ಬರಿ ವನ್ ಡೇ ಮ್ಯಾಚ್ ತರನೇ ಆಗಿಬಿಟ್ಟಿದೆ ಅನ್ನೊ ರೀತೀಲಿ ಹೇಳಿದ್ದು..”

“ಅಂದ್ರೆ..”

” ಇನ್ನೂ ಗೊತ್ತಾಗಿಲ್ವಾ ಸಾರ್? ಎಲ್ ಗೊತ್ತಾಗುತ್ತೆ ? ಮ್ಯಾಚ್ ಫಿಕ್ಸಿಂಗ್ ಮಾಡೊಕ್ ಹೋಗಿ ಪೂರ್ತಿ ನೈಂಟೀನೂ ಒಂದೆ ಏಟಿಗೆ ಒಳಗೆ ಸೇರಿಸಿದೀರಾ… ನಾನು ಹೇಳಿದ್ದು ನಾವೀಗ ಹೊಸದೊಂದು ಸ್ಲೋಗನ್ ‘ಕಾಯಿಲ್’ ಮಾಡಬೇಕೂಂತ..”

“ಏನ್ ಸ್ಲೋಗನ್..?”

“ವನ್.. ಡೆ..ಮಾತರಂ..” ಅಂತ..

“ಯಾಕೊ..?”

“ವರ್ಷ ಪೂರ್ತಿ ಕ್ರಿಕೆಟ್ಟು ಸೇರಿದಂತೆ ಎಲ್ಲಾ ಹಬ್ಬಾ ಹರಿದಿನ, ರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ, ಎಲ್ಲಾ ತರದ ಜಯಂತಿಗಳಿಗು ಅದೊಂದೆ ಸ್ಲೋಗನ್ ಯೂಸ್ ಮಾಡ್ಬೋದ್..”

” ಹಾಂ…!”

” ಹೇಗಿದ್ರು ನಮ್ ಆಡಂಬರ, ತೋರಾಟಾ, ಹೋರಾಟ ಎಲ್ಲಾ ಬರಿ ಒಂದು ದಿನದ ಪ್ರತಾಪಾ ಮಾತ್ರಾ ತಾನೆ ? ಅದಕ್ಕೆ ‘ವನ್ ಡೇ’ ಅನ್ನೋದು ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತೆ ನೋಡಿ.. ಹಾಗೆ ಇನ್ನು ಮಾತರಂ ಅಂದ್ರೇನು ? ತಾಯಿ ಸಮಾನ ಅಂತ ತಾನೆ ? ಎಲ್ಲಾ ಹಬ್ಬದಲ್ಲು ಯಾವದಾದರು ತಾಯಿ ಪೂಜೆ ಇದ್ದೇ ಇರುತ್ತಲ್ಲಾ ? ಒಂದು ವೇಳೆ ಇರದಿದ್ರೂ ಆ ತಾಯಿ ತಾನೆ ‘ಬ್ರಹ್ಮ’ದ ಮತ್ತೊಂದು ರೂಪಾ? ಅಲ್ಲಿಗೆ ಎಲ್ಲಾರೂ ತಾಯಿ ಅಂದ ಹಾಗೇ ತಾನೆ ಲೆಕ್ಕಾ?”

“ಓಹೋ..!”

” ಸೋ.. ಎಲ್ಲದಕ್ಕು ಸೇರಿಸಿಕೊಂಡು ಒಂದೆ ಸ್ಲೋಗನ್ನಲ್ಲಿ ನಿಭಾಯಿಸ್ಬೋದು.. ಒಂತರಾ ದೇಶ ಭಕ್ತೀನೂ ಆಗುತ್ತೆ.. ಮುಂದಿನ ವಾರ ರಾಜ್ಯೋತ್ಸವಕ್ಕೂ ಕನ್ನಡ ತಾಯಿ ಭುವನೇಶ್ವರಿಯ ಹಬ್ಬಾ ತಾನೆ? ಅಲ್ಲಿಗೂ ಅದನ್ನೆ ಹೇಳ್ಬೋದು..ಅಲ್ಲಿ ‘ದ’ ಕಾರದ ಬದಲು ಕನ್ನ’ಡ’ದ ‘ಡ’ ಕಾರ ಹಾಕಿ ‘ವಂಡೆ’ ಮಾತರಂ ಅಂದುಬಿಟ್ರೂ ಆಯ್ತೂ..”

“ಓಹ್.. ಅದಕ್ಕೊ ತಾವು ಇಷ್ಟೊತ್ತು ಅಚ್ಚಗನ್ನಡದಲ್ಲಿ ದಾಂಡಿಗ, ಗೂಟ ರಕ್ಷಕ, ಕ್ಷೇತ್ರಪಾಲಕ, ಚೌತಿ, ಷಷ್ಠಿ, ಹುರಿದ ಕೋಳಿ, ಭರ್ಜರಿ ರಾಜ ಅಂತೆಲ್ಲಾ ಅಪ್ಪಣೆ ಕೊಡಿಸುತ್ತಿದ್ದುದ್ದು..?”

ಪೆಚ್ಚುಪೆಚ್ಚಾಗಿ ಹಲ್ಲು ಕಿರಿಯುತ್ತ, ” ರಾಜ್ಯೋತ್ಸವನಾದರೂ ‘ವನ್ ಡೇ ಮಾತರಂ’ ಬದಲು ‘ವೀಕ್ಫುಲ್ ಮಾತರಂ’  ಆಗ್ಲಿ ಅಂತ ಸಾರ್..” ಅಂದ.

ನಾನು, ” ಗುಬ್ಬಣ್ಣ, ನಿನ್ನ ಈ ಥಿಯರಿ ಯಾವುದಕ್ಕಾದರೂ ಅಪ್ಲೈ ಆಗ್ಬೋದು.. ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಬಿಲ್ಕುಲ್ ಆಗಲ್ಲ..” ಅಂದೆ.

ಗುಬ್ಬಣ್ಣ ಅರ್ಧ ಗಾಬರಿ, ಅರ್ಧ ಕೋಪದಿಂದ , ” ಯಾಕೆ ಹಾಗಂತೀರಾ ಸಾರ್..” ಎಂದ ಅಳು ಮೂತಿ ಮಾಡಿಕೊಂಡು.

” ನೀನು ಪೆಗ್ಗು ಏರೋಕ್ ಮೊದ್ಲೆ ಗುಗ್ಗು ಆಗಿಬಿಟ್ಟಿದ್ದಿಯಲ್ಲೊ ಗುಬ್ಬಣ್ಣಾ..? ‘ವನ್ ಡೇ ಮಾತರಂ’ ಆಗ್ಲಿ, ‘ವಂದೇ ಮಾತರಂ’ ಆಗ್ಲಿ ಎರಡರಲ್ಲೂ ಕನ್ನಡ ಪದಗಳೆ ಇಲ್ವಲ್ಲೊ ? ಮೊದಲೆ ಕರ್ನಾಟಕದಲ್ಲಿ, ಬೆಂಗಳೂರಲ್ಲಿ ಕನ್ನಡ ಎಲ್ಲಿದೆ ಅಂತ ‘ಲೆನ್ಸ್’ ಹಾಕ್ಕೊಂಡ್ ಹುಡುಕ್ಬೇಕು.. ನೀನು ಅದನ್ನ ಕನ್ನಡ ಹಬ್ಬದ ಸ್ಲೋಗನ್ನಲ್ಲು ತೆಗೆದು ಹಾಕಿ ಕನ್ನಡಮ್ಮನ ಪೂರ್ತಿ ತಬ್ಬಲಿ ಮಾಡೋಕ್ ಹೊರಟ ಹಾಗಿದೆ..? ಇಲ್ಲಾ ಬಿಡು.. ಇಲ್ಲಿ ಮಾತ್ರ ನಮ್ ಸ್ಲೋಗನ್ ‘ಜೈ ಕರ್ನಾಟಕ ಮಾತೇ’ನೊ, ‘ಜೈ ಭುವನೇಶ್ವರೀ ಮಾತೇ’ನೊ ಆಗಿರಬೇಕೆ ಹೊರತು, ನಿನ್ನ ‘ವನ್..ಡೇ…ಮಾತರಂ’ ಅಲ್ಲ. ಅದರಲ್ಲು ‘ವಂದೇ’ ಅಂದ್ರೆ ನಮಸ್ಕಾರ, ಜೈಕಾರದ ಅರ್ಥ ಬರೋದು, ನಿನ್ನ ‘ವನ್ ಡೇ’ ಥಿಯರಿ ಅಲ್ಲಾ.. ಅದೇನಿದ್ರೂ ಮಿಕ್ಕಿದ್ದೆಲ್ಲಾದುಕ್ಕು ಆಗ್ಬೋದು – ಕನ್ನಡ ಮಾತ್ರ ಯುನಿಕ್ಕೇ!” ಎಂದೆ..

” ಹಾಗಾಂತೀರಾ.. ನಾನು ಏನೊ ‘ಯುನಿಕ್’ ರಿಸರ್ಚ್ ಮಾಡ್ದೆ ಅಂತಾ ತುಂಬಾ ಖುಷಿ ಪಟ್ ಬಿಟ್ನಲ್ಲಾ ಸಾರ್..” ಎಂದ ಗುಬ್ಬಣ್ಣ ಮತ್ತೆ ಪೆಚ್ಚು ಮೋರೆ ಹಾಕುತ್ತ.

ಅದೇ ಹೊತ್ತಿಗೆ ಸರಿಯಾಗಿ ಸಿಕ್ಸರ್ ಹೊಡೆದ ಕೋಯ್ಲಿ ವಿನ್ನಿಂಗ್ ರನ್ಸ್ ಬಾರಿಸಿ, ವಿಕೆಟ್ ಕಿತ್ತುಕೊಂಡು ಓಡತೊಡಗಿದ್ದ ಫೀಲ್ಡಿನಲ್ಲಿ.

” ಹೋಗ್ಲಿ ಬಿಡೊ ಗುಬ್ಬಣ್ಣ.. ಅಲ್ನೋಡ್ ನಿನ್ ಈ ‘ವನ್..ಡೇ…ಮಾತರಂ’ ಅಂತೂ ಕೆಲಸ ಮಾಡ್ತಾ ಇದೆ.. ವಿರಾಟ್ ಕೋಳಿ ಗೆಲ್ಲಿಸ್ಬಿಟ್ಟ..”

ಮ್ಯಾಚನ್ನು ಅದುವರೆವಿಗು ಸರಿಯಾಗಿ ಗಮನಿಸದೆ ಇದ್ದ ಗುಬ್ಬಣ್ಣ, ಅದನ್ನು ನೋಡುತ್ತಿದ್ದಂತೆ ಅದುವರೆಗಿದ್ದ ಖೇದವೆಲ್ಲಾ ಮಾಯವಾದವನಂತೆ ರೋಮಾಂಚಿತನಾಗಿ, ” ಓಹ್..! ಗೆದ್ದೆ ಬಿಟ್ರಲ್ಲಾ ಸಾರ್..?’ವನ್…ಡೇ…ಮಾತರಂ…!'” ಎಂದವನೆ ಇನ್ನು ಅರ್ಧ ಮಿಕ್ಕಿದ್ದ ಬಿಯರ್ ಗ್ಲಾಸಿಗೆ ಕೈ ಹಾಕಿದ.. 

ಅಲ್ಲಿಗೆ ಅರ್ಧ ರಿಪೇರಿ ಆದ ಹಾಗೆ ಲೆಕ್ಕ ಎಂದುಕೊಂಡು ನಾನೂ, ” ಜೈ ಕರ್ನಾಟಕ ಮಾತೆ” ಎಂದು ಒಂದು ಅಡ್ವಾನ್ಸ್ ಸ್ಲೋಗನ್ ಹಾಕಿ ಕುರುಕಲು ತಿಂಡಿಯ ತಟ್ಟೆಗೆ ಕೈ ಹಾಕಿದೆ..

– ನಾಗೇಶಮೈಸೂರು
(ಕನ್ನಡ ರಾಜ್ಯೋತ್ಸವಕ್ಕೆ ಗುಬ್ಬಣ್ಣ & ಕೋ ನ ಹಾರ್ದಿಕ ಶುಭಾಶಯಗಳೊಂದಿಗೆ ” ಜೈ ಭುವನೇಶ್ವರಿ ಮಾತೆ!”)

ಲಘು, ಹರಟೆ, ಗುಬ್ಬಣ್ಣ, ಹಾಸ್ಯ, ಒಂದೆ, ವನ್, ಡೆ, ಮಾತರಂ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, nageshamysore, nagesha mysore

00370. ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)


00370. ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ) (sampada22.10.2015)
_________________________________________________

(ನಮ್ಮ ಊರುಗಳಲ್ಲಿ ಕಾಯಿಲೆ ಬಿದ್ದಾಗ ಆಗುವ ಅನುಭವ ಯಾರಿಗೂ ಹೊಸತಲ್ಲದಿದ್ದರು, ಹೊರದೇಶಗಳಲ್ಲಿನ ಇದರ ಅನುಭವದ ಮಾಹಿತಿ ಎಲ್ಲರಿಗು ಇರುವುದಿಲ್ಲ. ಅದರ ತುಣುಕೊಂದನ್ನು ಪರಿಚಯಿಸುವ ತೆಳು ಹಾಸ್ಯದ ಲಘು ಹರಟೆ / ಲಲಿತ ಪ್ರಬಂಧ – ‘ವಿದೇಶಿ ವೈದ್ಯಾಯಣ’ ) 

   

(ಚಿತ್ರಕೃಪೆ: ಸ್ವಯಂಕೃತಾಪರಾಧ)

ಯಾಕೊ ಈಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾಯಿಲೆ ಬೀಳಲೂ ಭಯವಾಗುತ್ತದೆ. ಒಂದು ವೇಳೆ ಬಿದ್ದರೂ, ಅದರ ನಿವಾರಣೆಗೆಂದು ವೈದ್ಯರ ಹತ್ತಿರ ಹೋಗಲಿಕ್ಕೆ ಇನ್ನೂ ಹೆಚ್ಚು ಭಯ – ಸಣ್ಣ ಪುಟ್ಟ ರೋಗದ ಚಿಹ್ನೆಗಳನ್ನು ಹೇಳಿಕೊಂಡರೂ ಸಾರಾಸಗಟಾಗಿ ಎಲ್ಲಿ ನೂರೆಂಟು ತರದ ಪರೀಕ್ಷೆಗಳನ್ನು ಮಾಡಿಸಲು ಬರೆದುಕೊಟ್ಟು ಹೆದರಿದವರ ಮೇಲೆ ಕಪ್ಪೆ ಎಸೆಯುವರೊ ಅನ್ನುವುದರ ಜತೆ ಆ ಟೆಸ್ಟಿಂಗುಗಳಿಗೆ ಲ್ಯಾಬುಗಳಲ್ಲಿ ತೆರಬೇಕಾದ ಕಾಂಚಾಣದ ಅಂಕಶಾಸ್ತ್ರ ಮತ್ತೊಂದೆಡೆಯಿಂದ ಭುಸುಗುಟ್ಟುತ್ತಿರುತ್ತದೆ. ಹೀಗಾಗಿ ಯಾವುದೆ ಅನಾರೋಗ್ಯದ ಚಿಹ್ನೆ ಕಾಣಿಸಿಕೊಂಡರು ಮೊದಲು ಮೊರೆ ಹೋಗುವುದು ‘ಸ್ವಯಂವೈದ್ಯ’ದ ಪರಿಣಿತಿಗೆ. ಅದಕ್ಕೇನು ಕಾರಣವಿಲ್ಲವೆಂದೇನಲ್ಲ; ಈಗಿನ ದಿನಗಳಲ್ಲಿ ಎಲ್ಲರ ಅನುಭವವೂ ಹೆಚ್ಚು ಕಡಿಮೆ ಹೀಗೆ ಇರುತ್ತದೆ. ಜಡ್ಡಾಗಿ ಮಲಗಿದಾಗ ಒಂದಷ್ಟು ನೋವು ನಿವಾರಕ ಮಾತ್ರೆಗಳೊ ಅಥವಾ ಇನ್ನಾವುದೊ ಬೇರು-ಕಷಾಯವನ್ನೊ ತೆಗೆದುಕೊಂಡು ಹೊದ್ದು ಮಲಗುವುದು ಮಾಮೂಲಿ ಪ್ರಥಮ ಚಿಕಿತ್ಸೆಯೆಂದೆ ಹೇಳಬಹುದು. ಒಂದರ್ಧ ದಿನದಲ್ಲಿ ಮೈಯೆಲ್ಲಾ ಬೆವರಿ, ತಲೆಯೆಲ್ಲಾ ಹಗುರವಾದಂತೆನಿಸತೊಡಗಿದರೆ ಜಡ್ಡಿನ ಗೊಡ್ಡುದನ ಬಿದ್ದೆದ್ದು ಓಡಿತೆಂದೆ ಅರ್ಥ – ಸದ್ಯ ಇಷ್ಟರಲ್ಲೆ ಮುಗಿಯಿತಲ್ಲ ಎಂದು ನಿಟ್ಟುಸಿರು ಬಿಡಬಹುದು. ಅದರಲ್ಲೆ ಒಂದೆರಡು ದಿನದಲ್ಲಿ ನೆಟ್ಟಗಾಯಿತೊ ಸರಿ.. ಆದರೆ ನಿಜವಾದ ಕಥೆ ಆರಂಭವಾಗುವುದು ಈ ‘ಜಡ್ಡಿನ ಗೊಡ್ಡುದನ’ ದಿಢೀರ್ ಚಿಕಿತ್ಸೆಗೆ ಬಗ್ಗದೆ ಹೋದಾಗಲೆ.. ಅದರಲ್ಲಿ ನಿಭಾಯಿಸಲಾಗದೆ ತೊಳಲಾಟ ಹೆಚ್ಚಾದಾಗಷ್ಟೆ ದವಾಖಾನೆಯತ್ತ ಹೆಜ್ಜೆ ಹಾಕುವುದು – ಅದೂ ಅಂಜುತ್ತ, ಅಳುಕುತ್ತಲೆ ಎನ್ನಿ !

ಇತ್ತೀಚೆಗೆ ಊರಿಗೆ ಹೋಗಿದ್ದಾಗ, ಸ್ವಲ್ಪ ಹೆಚ್ಚು ಕಡಿಮೆ ಇದೇ ರಾಗದಲ್ಲಿ ಪೇಚಾಡಿಕೊಳ್ಳುತ್ತ ತಮ್ಮ ಖೇದ-ವೇದನೆಯನ್ನು ತೋಡಿಕೊಂಡ ರಾಮು ಮಾಮನ ಮಾತು ಕೇಳಿದಾಗ ತಟ್ಟನೆ ‘ ಅರೆ ಹೌದಲ್ಲ? ಆ ನಮ್ಮ ಬಾಲ್ಯದ ಹಳೆಯ ವೈದ್ಯ ದಿನಗಳಿಗು, ಈಗಿನ ಹೈಟೆಕ್ ವೈದ್ಯ ಜಾಗೃತಿಗು ಅಜಗಜಾಂತರವಲ್ಲವೆ?’ ಅನಿಸಿತ್ತು. ವಾರ್ಷಿಕ ರಜೆಗೆಂದು ಊರಿಗೆ ಬಂದಾಗ, ಸಣ್ಣಪುಟ್ಟ ಕಾಯಿಲೆ ಬಿದ್ದು ಅದೆ ಗೊತ್ತಿರುವ ಹಳೆಯ ಡಾಕ್ಟರರ ಹತ್ತಿರವೆ ಹೋದರು, ಮೊದಲಿನ ಮತ್ತು ಈಗಿನ ವಿಧಾನದಲ್ಲಿರುವ ವ್ಯತ್ಯಾಸ ರಾಚಿ ಹೊಡೆದಂತೆ ಎದ್ದು ಕಾಣಿಸುತ್ತಿತ್ತು. ದವಾಖಾನೆಯಲ್ಲೆ ಅಷ್ಟಿಷ್ಟು ಔಷಧಿ ನೀಡಿ, ಫೀಸು ಪಡೆದು ಒಂದೆ ಕಂತಿನಲ್ಲಿ ಸಾಗ ಹಾಕುತ್ತಿದ್ದ ಪ್ರಚಂಡ ಡಾಕ್ಟರಿಗೆ ಬದಲು ರೋಗ ಲಕ್ಷಣ ವಿಚಾರಿಸಿ, ನಾಡಿ ನೋಡಿ ಔಷಧಿಗೆಂದು ಚೀಟಿ ಬರೆದು ಮೆಡಿಕಲ್ ಶಾಪಿಗೆ ಓಡಿಸುವ ಪಕ್ಕಾ ‘ವೃತ್ತಿಪರ ಡಾಕ್ಟರಿಕೆ’ ಕಾಣತೊಡಗಿತ್ತು. ರಾಮು ಮಾಮನ ಮಾತಿನಲ್ಲಿ ಕಾಣಿಸಿಕೊಂಡ ಮಿಕ್ಕ ಹಲವು ಅಂಶಗಳು ಈ ಮೂಲ ಬೆಳವಣಿಗೆಯ ತಾರ್ಕಿಕ ಕವಲ ಶಾಖೆಗಳೆ ಅನಿಸುವಾಗಲೆ ತಟ್ಟನೆ, ಈ ವಿಧಾನಕ್ಕು ನಾನು ವಿದೇಶದಲ್ಲಿದ್ದು ಅನುಕರಿಸಬೇಕಾದ ರೂಪಕ್ಕು ಇರುವ ಸಾಮ್ಯತೆ, ವ್ಯತ್ಯಾಸಗಳು ಗೋಚರವಾಗತೊಡಗಿ ಹೆಚ್ಚುಕಡಿಮೆ ಎಲ್ಲಾ ‘ವಾಣಿಜ್ಯಮಯ’ ಆಯಾಮದತ್ತಲೆ ನಡೆದ ಧಾವಂತಗಳೆನಿಸಿತ್ತು. ಆಗಲೆ ಆ ವಿದೇಶಿ ಪದ್ದತಿಯ ವಿಧಿ ವಿಧಾನಗಳ ನೆನಪನ್ನು ಕೆದಕಿ ತುಲನಾತ್ಮಕವಾಗಿ ಅವಲೋಕಿಸತೊಡಗಿದ್ದು.

ಮೊನ್ನೆ ಹೀಗೆ ಒಂದು ಬಾರಿ ಸ್ವಯಂವೈದ್ಯಕ್ಕೆ ಬಗ್ಗದ ಜ್ವರದ ದೇಹವನ್ನೆತ್ತಿಕೊಂಡು ದವಾಖಾನೆಯೊಂದಕ್ಕೆ ಹೊರಟೆ. ಹಾಳು ಮೆಡಿಕಲ್ ಇನ್ಶೂರೆನ್ಸ್ ಹಾವಳಿಯಿಂದಾಗಿ ಹತ್ತಿರವಿರುವ ಅಥವಾ ಮನಸಿಗೆ ಬಂದ ಯಾವುದೊ ಕ್ಲಿನಿಕ್ಕಿಗೆ ಹೋಗುವಂತಿಲ್ಲ. ಕಂಪನಿಯ ಜತೆ ಕರಾರು ಮಾಡಿಕೊಂಡಿರುವ ‘ಸರಪಳಿ’ ಕ್ಲಿನಿಕ್ಕುಗಳ ‘ಅಧಿಕೃತ ಶಾಖೆ’ಗೆ ಹೋಗಬೇಕು. ಮೊದಲೆ ನಿಲ್ಲಲೂ ತ್ರಾಣವಿಲ್ಲದೆ ತೂರಾಡುತ್ತಲೆ, ಟ್ಯಾಕ್ಸಿ-ಬಸ್ಸು-ಟ್ರೈನು – ಹೀಗೆ ಯಾವುದನ್ನೆ ಹತ್ತಿದರು ಬಿಡದೆ ಕಾಡಿ ನಡುಗಿಸುವ ಏಸಿಯನ್ನು ಬೈದುಕೊಳ್ಳುತ್ತಲೆ, ಹತ್ತಿರದ ಶಾಖೆಯೊಂದನ್ನು ತಲುಪಿದ್ದೆ – ಬೇರೆಯ ಹೊತ್ತಿನಲ್ಲಿ ಏಸಿಯೆ ಸಾಲದು ಎಂದು ಅಡ್ಡಾದಿಡ್ಡಿ ಬೈದುಕೊಂಡಿದ್ದನ್ನೂ ಮರೆತು. ಈ ದೇಶದಲ್ಲಿನ ಹವಾಗುಣಕ್ಕೆ ಏಸಿಯಿರದಿದ್ದರೆ ಬದುಕುವುದೆ ಆಗದು ಅನ್ನುವಷ್ಟು ಅನಿವಾರ್ಯತೆಯಿದ್ದರೂ, ಈ ಹುಷಾರು ತಪ್ಪಿದ ಹೊತ್ತಿನಲ್ಲಿ ಮಾತ್ರ ಅದರ ಇಡೀ ವಂಶಾವಳಿಯನ್ನೆ ಶಪಿಸುವಷ್ಟು ಕೋಪ ಬರುತ್ತದೆ – ಅದರ ಪೂರ್ವಜನಾದ ಫ್ಯಾನನ್ನು ಸೇರಿಸಿ…! ಇನ್ನು ದವಾಖಾನೆ ತಲುಪಿದ ಮೇಲೇನೂ ಕಡಿಮೆಯೆ? ಅಲ್ಲಿಯೂ ಇದೇ ಏಸಿಯ ಹಾವಳಿ. ಹೋಗಿ ಇನ್ಶೂರೆನ್ಸಿನ ಉಮೇದುವಾರಿಕೆ / ಚಂದಾದಾರಿಕೆಯ ಕಾರ್ಡ್ ತೋರಿಸಿ ರಿಜಿಸ್ಟರ್ ಮಾಡಿಸಿ ಆ ಕೃತಕ ಚಳಿಯಲ್ಲೆ ಕಾದು ಕೂರಬೇಕು, ಸರದಿ ಬರುವ ತನಕ. ಅಲ್ಲಂತೂ ಸದಾ ಹನುಮನ ಬಾಲದ ಸಾಲೆ; ಆ ಉದ್ದ ಸಾಲಿನ ಅರ್ಥ ಅಲ್ಲಿನ ಡಾಕ್ಟರ ಒಳ್ಳೆಯ ನುರಿತವನಿರಬೇಕೆಂದು ಪರ್ಯಾಯಾರ್ಥವಾಗುವುದರಿಂದ, ನೂಕುನುಗ್ಗಲಿಲ್ಲದ ಬೇರೆ ಕ್ಲಿನಿಕ್ಕಿಗೆ ಹೋಗುವ ಧೈರ್ಯವಾಗುವುದಿಲ್ಲ. ಸ್ವಲ್ಪ ಹೆಚ್ಚೆ ಕಾದರೂ ಸರಿ, ಆರೋಗ್ಯದ ವಿಷಯದಲ್ಲಿ ಯಾಕೆ ರಿಸ್ಕು ತೆಗೆದುಕೊಳ್ಳಬೇಕು ಹೇಳಿ?

ಸರಿ ಹಾಳಾಗಲಿ ಎಂದು ಬೈದುಕೊಂಡೆ ಕಾದು ಕೂತಿದ್ದಾಯ್ತು – ಕ್ಷಣಕ್ಷಣವೂ ಯುಗದಂತನಿಸಿದ ಅಹಲ್ಯಾ ಪ್ರತೀಕ್ಷೆಯಂತೆ. ಸರಿ ಸುಮಾರು ಒಂದು ಗಂಟೆ ಕಾದ ನಂತರ ಕೊನೆಗು ಸರದಿಯ ಕರೆ ಬಂದಾಗ ಮನದಲ್ಲೆ ದೈವಕ್ಕೆ ವಂದಿಸಿ ಒಳಗೆ ನಡೆದರೆ ಅಲ್ಲಿನ ಕಥೆಯೆ ಬೇರೆ ! ಅಲ್ಲಿನ ವೈದ್ಯ ಮಹಾಶಯ ‘ ಏನಾಗಿದೆ ನಿಮಗೆ?’ ಎಂದು ಆರಂಭಿಸಿ ನನ್ನನ್ನೆ ಪ್ರಶ್ನೆ ಕೇಳತೊಡಗುವುದೆ? ಏನಾಗಿದೆ ಎಂದು ಕಂಡು ಹಿಡಿಯಲು ತಾನೆ ನಾವು ವೈದ್ಯರ ಹತ್ತಿರ ಹೋಗುವುದು? ಹಿಂದೆಲ್ಲಾ ನಮ್ಮೂರಿನ ಡಾಕ್ಟರುಗಳ ಬಳಿ ಹೋದರೆ ಇಷ್ಟೆಲ್ಲಾ ತಾಪತ್ರಯವೆ ಇರುತ್ತಿರಲಿಲ್ಲ. ‘ಏನಾಗಿದೆಯೋ ನಿನಗೆ?’ ಎಂಬ ಲೋಕಾಭಿರಾಮದ ಪ್ರಶ್ನೆಯೊಂದಿಗೆ ಆರಂಭಿಸುತ್ತಿದ್ದರು. ಅದಕ್ಕೆ ಉತ್ತರಿಸಲು ಬಾಯಿ ಬಿಚ್ಚುವ ಮೊದಲೆ ಕೈ ಹಿಡಿದು ನಾಡಿ ನೋಡಿ, ಸ್ಟೆತಾಸ್ಕೋಪನ್ನು ಎದೆ ಬೆನ್ನ ಮೇಲೆಲ್ಲಾ ಹರಿದಾಡಿಸಿ, ಗಂಟಲನ್ನು ಆಕಳಿಸಿಸಿ, ನಾಲಿಗೆ ನೋಡಿ ನಾವು ಏನಾದರೂ ಹೇಳುವ ಮೊದಲೆ ಜ್ವರ, ಕೆಮ್ಮು, ನೆಗಡಿಯಾದಿಗಳ ಕಿತಾಪತಿಯನ್ನು ಪತ್ತೆ ಮಾಡಿಕೊಂಡು ಬಿಡುತ್ತಿದ್ದರು. ಆಮೇಲೇನಿದ್ದರೂ ಸಾರಿಗೆ ಒಗ್ಗರಣೆ ಹಾಕಿದ ಹಾಗೆ ‘ಡಾಕ್ಟರೆ ಸ್ವಲ್ಪ ಹೊಟ್ಟೆ ನೋವಿದೆ?’ ‘ ರಾತ್ರಿಯಿಂದ ಯಾಕೊ ತೀರಾ ಸುಸ್ತು ಡಾಕ್ಟರೆ, ಮೂರ್ನಾಲ್ಕು ಸಾರಿ ಭೇಧಿನೂ ಆಯ್ತು..’ ‘ಕೈ ಕಾಲೆ ಬಿದ್ದು ಹೋದಂಗಾಗಿದೆ ಡಾಕ್ಟರೆ’ ಎಂದೆಲ್ಲಾ ಸೇರಿಸಿದರೆ ತಾವಾಗಲೆ ಕೊಡಬಯಸಿದ ಔಷಧಿಗೆ ಇನ್ನೊಂದಷ್ಟು ಸೇರಿಸಿ ಕೊಟ್ಟರೆ ಮುಗಿಯಿತು, ಮತ್ತೆ ಅವರ ಹತ್ತಿರ ಹೋಗುವ ಅವಶ್ಯಕತೆಯೆ ಬರದಂತೆ ಔಷಧಿ ಕೆಲಸ ಮಾಡಿಬಿಟ್ಟಿರುತ್ತಿತ್ತು. ಇನ್ನೂ ಕೆಲವೊಮ್ಮೆ ಅವರ ಔಷಧಿಗಿಂತ ಮಾತಿನ ಮಾತ್ರೆಯೆ ಹೆಚ್ಚು ಕೆಲಸ ಮಾಡಿಬಿಡುತ್ತಿತ್ತು… ಜತೆಗೆ ಅಂಜಂಜುತ್ತಲೆ ‘ಊಟ ಏನು ತಿನ್ನ ಬಹುದು ಡಾಕ್ಟ್ರೆ..?’ ಎಂದು ಪೆಚ್ಚುಮುಖದಲ್ಲೆ ಕೇಳಿದರೂ ‘ ನಿಂಗೇನಾಗಿದಿಯೊ? ಕಲ್ಲು ಗುಂಡು ಇದ್ದ ಹಾಗಿದ್ದೀಯ.. ಏನು ಬೇಕಾದ್ರೂ ತಿನ್ನು ಹೋಗೊ.. ಯು ಆರ್ ಪರ್ಫೆಕ್ಟ್ ಲಿ ಆಲ್ರೈಟ್.. ಕೋಳಿ-ಕುರಿ-ಮೀನು ಏನು ಬೇಕಾದ್ರೂ ತಿನ್ನು ಹೋಗು, ಸ್ವಲ್ಪ ಎಣ್ಣೆ, ಮಸಾಲೆ ಕಮ್ಮಿ ಹಾಕ್ಕೊಂಡು…’ ಅನ್ನುವ ಅವರ ಮಾತನ್ನು ಅಕ್ಷರ ಸಹಿತ ಪಾಲಿಸದೆ ಪಥ್ಯ ಮಾಡಿಕೊಂಡರೂ, ಆ ಮಾತಿನ ಧೈರ್ಯಕ್ಕೆ ಅರ್ಧ ಕಾಯಿಲೆ ವಾಸಿಯಾಗಿ ಹುಮ್ಮಸ್ಸು ಬಂದುಬಿಟ್ಟಿರುತ್ತಿತ್ತು . ‘ಇಷ್ಟೊಂದು ಜಡ್ಡಲ್ಲಾ ಶಿವನೆ?’ ಎಂದು ಹೋದವನು ‘ಇಷ್ಟೇನಾ ಇದರ ಕತೆ?’ ಎನ್ನುವಂತಾಗಿ ಎದೆಯುಬ್ಬಿಸಿಕೊಂಡು ಬರುವಂತಾಗಿ ಬಿಡುತ್ತಿತ್ತು. ಆ ಮಾತಿನ ಧೈರ್ಯದಲ್ಲೆ ಆಸೆ ತಡೆಯಲಾಗದೆ, ನಾಲಿಗೆ ರುಚಿ ಕೆಟ್ಟಿದೆಯೆಂದು ನೆಪ ಹೇಳಿಕೊಂಡು ಮನೆಯಲ್ಲಿ ಬೇಡ ಅಂದರು ಕಾರ, ಮಸಾಲೆಯನ್ನೆಲ್ಲ ಸೇರಿಸಿಕೊಂಡು ಗಡದ್ದಾಗೆ ತಿಂದಿದ್ದು ಉಂಟು.. ಅಷ್ಟಿದ್ದರೂ ಆ ಔಷಧಿಯ ರಾಮಬಾಣಕ್ಕೆ ಜಡ್ಡಿನ ಕುರುಹೆ ಇಲ್ಲದಂತೆ ಸಂಪೂರ್ಣ ಮಂಗಮಾಯ… ಅರ್ಧಂಬರ್ಧ ಔಷಧಿ ಖಾಲಿಯಾಗುವ ಮೊದಲೆ ಜಡ್ಡಿತ್ತು ಎನ್ನುವ ಗುರುತು ಇಲ್ಲದವರಂತೆ ಆಟದ ಬಯಲಿನಲ್ಲಿರುತ್ತಿದ್ದೆವು ಆ ದಿನಗಳಲ್ಲಿ ! ಈಗ ಆಗಿನ ಡಾಕ್ಟರುಗಳೂ ಇಲ್ಲ, ಆಗಿದ್ದ ವಯಸ್ಸೂ ಇಲ್ಲ, ಸದೃಢ ದೇಹವೂ ಇಲ್ಲಾ. ಆಗಿನ ಕಾಯಿಲೆಗಳೂ ಇಲ್ಲಾ ಅನ್ನುವುದು ಬೇರೆ ವಿಷಯ ಬಿಡಿ 🙂

ಮೊದಲಿಗೆ, ಈ ದೇಶದ ವೈದ್ಯರ ಹತ್ತಿರ ಹಾಗೆ ಕೈ ಹಿಡಿದು ನೋಡಿ ರೋಗ ಪತ್ತೆ ಮಾಡುವ ಪದ್ದತಿಯೆ ಇಲ್ಲ. ಎಲ್ಲಾ ಲಕ್ಷಣಗಳನ್ನು ನೀವೆ ಬಾಯಿ ಬಿಟ್ಟು ಹೇಳಬೇಕು – ಯಾವುದೂ ಮರೆಯದಂತೆ. ಏನಾದರು ಏಮಾರಿದಿರೊ ಅಷ್ಟೆ – ಬರಿ ಜ್ವರವೆಂದರೆ ಅಷ್ಟಕ್ಕೆ ಮಾತ್ರೆ ಕೊಟ್ಟು ಸಾಗಹಾಕಿಬಿಡುತ್ತಾರೆ ! ನನಗೆಷ್ಟೊ ಬಾರಿ ನನ್ನ ಹೆಸರೆ ಸರಿಯಾಗಿ ನೆನಪಿರುವುದಿಲ್ಲ, ಇನ್ನೂ ಆಗಿಗೊಮ್ಮೆ ಬರುವ ರೋಗ ಲಕ್ಷಣ, ಚಿಹ್ನೆಗಳನ್ನು ಒಂದೂ ಮರೆಯದಂತೆ ಹೇಗೆ ವಿವರಿಸುವುದು? ಸಾಲದ್ದಕ್ಕೆ ಹೇಳಬೇಕಾದ್ದನ್ನು ಮೊದಲು ಕನ್ನಡದಲ್ಲಿ ಆಲೋಚಿಸಿ ನಂತರ ಅದನ್ನು ಮೆದುಳಿನ ಕಂಪ್ಯೂಟರಿಗೆ ರವಾನಿಸಿ ಇಂಗ್ಲೀಷಿಗೆ ಭಾಷಾಂತರಿಸಿಕೊಳ್ಳಬೇಕು (ಉದಾಹರಣೆಗೆ ಗಂಟಲಲ್ಲಿ ಕಫ ಇದೆಯೆಂದೊ, ಮೂಗು ಕಟ್ಟಿದೆಯೆಂದೊ…..). ಜ್ವರ, ನೆಗಡಿ, ಕೆಮ್ಮಿಗೇನೊ ಚಕ್ಕನೆ ಸಿಗುವ ಅನುವಾದ, ಕಫದಂತಹ ಹೆಸರಿಗೆ ಚಕ್ಕನೆ ಸಿಗುವುದಿಲ್ಲ. ನಾನಂತೂ ‘ಬ್ಲಾಕ್ಡ್ ಥ್ರೋಟ್’ ಅಂತ ಹೇಳಿಕೊಂಡು ನಿಭಾಯಿಸಿದ್ದೆ ಹೆಚ್ಚು. ಒಮ್ಮೆ ಯಾರೊ ಒಬ್ಬ ವೈದ್ಯ ಮಹಾಶಯ ‘ ವಾಟ್ ಇಸ್ ದ ಕಲರ್ ಆಫ್ ದ ಸ್ಪೂಟಂ – ಯೆಲ್ಲೊ, ಗ್ರೀನ್ ಆರ್ ಗ್ರೇ ?’ ಎಂದು ಕೇಳಿದಾಗಲೆ ‘ಸ್ಪೂಟಂ’ ಅನ್ನೊ ಮೆಡಿಕಲಿ ಫಿಟ್ ಪದ ಬಳಸಬಹುದು ಅನ್ನೊ ಜ್ಞಾನೋದಯವಾಗಿದ್ದು… ಅಂತೂ ಹೇಗೊ ಹೆಣಗಿ ರೋಗ ಲಕ್ಷಣದ ವರದಿ ಸಲ್ಲಿಸಿಬಿಟ್ಟರೆ ಮುಗಿಯಿತು – ನಿಮ್ಮ ಎರಡೆ ನಿಮಿಷದ ಭೇಟಿ ಮುಗಿದಂತೆ ಲೆಕ್ಕ. ಆಮೇಲೆ ಹೊರಗೆ ಬಂದು ಇನ್ನರ್ಧ ಗಂಟೆ ಕಾಯಬೇಕು ಔಷಧಿಯ ಪೊಟ್ಟಣ ಕೊಡುವ ತನಕ. ಎರಡು ನಿಮಿಷದ ವೈದ್ಯರ ಭೇಟಿಗೆ ಎರಡು ಗಂಟೆ ಕಾಯಬೇಕೆನ್ನುವುದು ತೀರಾ ಅನ್ಯಾಯವಾದರು, ಬೇರೆ ದಾರಿಯಾದರೂ ಎಲ್ಲಿದೆ? ಸಾಲದ್ದಕ್ಕೆ ಇನ್ಶೂರೆನ್ಸ್ ಕಾರ್ಡಿನ ಗಿರಾಕಿಗಳೆಂದರೆ ಸಾಲದ ಗಿರಾಕಿಗಳಂತೆ ಸ್ವಲ್ಪ ಅಸಡ್ಡೆಯೂ ಇರುವುದೋ ಏನೊ – ನಗದು ಗಿರಾಕಿಗಳಿಗೆ ಹೋಲಿಸಿದರೆ !

ಒಂದು ಕಡೆ ಒಂದೆರಡೆ ನಿಮಿಷದಲ್ಲಿ ಮುಗಿದುಹೋಗುವ ವ್ಯವಹಾರದ ಸಲುವಾಗಿ ಗಂಟೆಗಟ್ಟಲೆ ಕಾಯಬೇಕಲ್ಲಾ ಎನ್ನುವ ಉರಿಯಾದರೆ ಮತ್ತೊಂದೆಡೆ ಅಷ್ಟು ಕಾದರು ಬರಿ ಒಂದೆರಡು ಗಳಿಗೆಯ ಕ್ಷಣಗಣನೆಯಲ್ಲಿ ಎಲ್ಲಾ ಮುಗಿದು ಹೋಗುವುದಲ್ಲ ಎನ್ನುವ ಆತಂಕ… ಆ ಕ್ಷಿಪ್ರ ಮೂಹೂರ್ತದಲ್ಲಿ ಆ ವೈದ್ಯ ಮಹಾಶಯನೇನು ನೆಟ್ಟಗೆ ಪರೀಕ್ಷಿಸುತ್ತಿದ್ದಾನಾ? ಅಥವಾ ಉದ್ದನೆಯ ‘ಕ್ಯೂ’ವನ್ನು ಸಾಧ್ಯವಾದಷ್ಟು ಬೇಗ ಸಾಗಹಾಕಲು ಕಾಟಾಚಾರಕ್ಕೆ, ಯಾಂತ್ರಿಕವಾಗಿ ತನ್ನ ಕೆಲಸ ನಿಭಾಯಿಸುತ್ತಿದ್ದಾನಾ? ಎಂಬೆಲ್ಲಾ ಆತಂಕಗಳು ಸೇರಿಕೊಂಡು ಮನಸನ್ನು ಮತ್ತಷ್ಟು ಉದ್ವಿಗ್ನವಾಗಿಸಿ ಕಾಡತೊಡಗುತ್ತವೆ . ಸಾಲದ್ದಕ್ಕೆ ನಾವೇ ನಮಗಿರುವ ಎಲ್ಲಾ ರೋಗಲಕ್ಷಣಗಳನ್ನು ವಿವರಿಸಬೇಕೆನ್ನುವ ಆತಂಕವೂ ಜತೆ ಸೇರಿಕೊಂಡು, ಆ ಹೊತ್ತಿನ ಗಾಬರಿಯಲ್ಲಿ ಹೇಳಬೇಕೆಂದು ಒಂದೇ ಸಮನೆ ಉರು ಹೊಡೆದುಕೊಂಡು ನೆನಪಿನಲಿಟ್ಟುಕೊಂಡಿದ್ದ ಜಡ್ಡಿನ ಚಹರೆಗಳಲ್ಲೆಲ್ಲ ಕಲಸುಮೇಲೋಗರವಾಗಿ ಆ ವೈದ್ಯಮೂರ್ತಿಯ ಮುಂದೆ ಕುಳಿತು ಮಾತಾಡುವ ಹೊತ್ತಿಗೆ ಸರಿಯಾಗಿ ಹೇಳಬೇಕೆಂದುಕೊಂಡದ್ದರಲ್ಲಿ ಅರ್ಧಕ್ಕರ್ಧ ಮರೆತಂತೆಯೊ, ಉಲ್ಟಾಪಲ್ಟಿಯೊ ಆಗಿಬಿಟ್ಟಿರುತ್ತದೆ. ಕೊನೆಗೆ ಮನೆಗೆ ವಾಪಸ್ಸಾಗುವ ಹೊತ್ತಿಗೆ ಸರಿಯಾಗಿ ನಡುದಾರಿಯಲ್ಲಿ, ಹೇಳಬೇಕೆಂದು ಪದೆ ಪದೆ ನೆನಪಿಸಿಕೊಳ್ಳುತ್ತಿದ್ದ ಮುಖ್ಯ ಚಹರೆಯೊಂದನ್ನು ಹೇಳಲಿಲ್ಲವೆಂದು ತಟ್ಟನೆ ನೆನಪಾಗಿ, ‘ಅರೆರೆ ! ಇದನ್ನು ಹೇಳಲೆ ಮರೆತುಬಿಟ್ಟೆನಲ್ಲಾ!?’ ಎಂದು ಖೇದವಾಗುವುದು ಸಾಮಾನ್ಯ ಅನುಭವ. ಇದರ ನಡುವೆಯೆ ವೈದ್ಯರ ಮುಂದೆ ಕುಳಿತಿದ್ದ ಹೊತ್ತಿನಲ್ಲಿ ಆತ ನನ್ನನ್ನೆ ಏನಾಗಿದೆ ಎಂದು ಕೇಳಿದಾಗೆಲ್ಲ ಚಕ್ಕನೆ ‘ಇವನು ನುರಿತ ವೈದ್ಯನಾ ಅಥವಾ ಅರೆಬರೆ ಬೆಂದವನಾ’ ಎನ್ನುವ ಅನುಮಾನದ ಭೂತವು ಬಂದು ಸೇರಿಕೊಂಡು ನೆನಪಿನಲ್ಲಿದ್ದ ಅಷ್ಟಿಷ್ಟರಲ್ಲೂ ಖೋತಾ ಆಗುವಂತೆ ಮಾಡಿಬಿಡುತ್ತದೆ.. ಹೇಳಿ ಕೇಳಿ ಅದನ್ನೆಲ್ಲಾ ಕೂಲಂಕುಷವಾಗಿ ಪರೀಕ್ಷಿಸಿ, ವಿಚಾರಿಸಿ, ವಿಶ್ಲೇಷಿಸಿ ಪತ್ತೆ ಮಾಡಬೇಕಾದ ಹೊಣೆ ಅವನದಿರಬೇಕಲ್ಲವೆ?

ಹಾಗೆಂದು ಬಂದ ಹೊಸದರಲ್ಲೊಮ್ಮೆ ನನ್ನ ಸಹೋದ್ಯೋಗಿ ಮೋಹನನಲ್ಲು ಗೋಳಾಡುತ್ತ ಅದೇ ದೂರು ಹೇಳಿಕೊಂಡಿದ್ದೆ. ಅದಕ್ಕವನು ಯಾವುದೊ ಬಲಿಪಶುವನ್ನು ನೋಡುವಷ್ಟೆ ಕನಿಕರ ಭಾವದಿಂದ ನೋಡುತ್ತ, ‘ಅಯ್ಯೊ, ಅವರನ್ನೆಲ್ಲ ಅಷ್ಟೊಂದು ಪೆದ್ದುಗಳು, ಗುಗ್ಗುಗಳು ಅಂದುಕೊಳ್ಳಬೇಡಿ… ನೀವು ಹೇಳಿದ್ದಷ್ಟನ್ನೆ ಬರೆದುಕೊಂಡು ಅದಕ್ಕೆ ಮಾತ್ರ ಔಷಧಿ ಕೊಟ್ಟರೆ ಅವರಿಗೆ ಸೇಫು. ನಾಳೆ ಏನಾದರು ಹೆಚ್ಚು ಕಡಿಮೆಯಾಗಿ ಪೇಷೆಂಟುಗಳು ಕೋರ್ಟು ಗೀರ್ಟು ಕೇಸು ಗೀಸು ಅಂತ ತರಲೆ ಮಾಡಿದರೆ, ಈ ರೆಕಾರ್ಡು ತೋರಿಸಿ ರೋಗಿ ಹೇಳಿದ ಲಕ್ಷಣಕ್ಕೆ ಔಷಧಿ ಕೊಟ್ಟಿದ್ದೆಂದು, ರೋಗಿಯೆ ಸರಿಯಾದ ಲಕ್ಷಣ ಹೇಳಿಕೊಳ್ಳದಿದ್ದರೆ ವೈದ್ಯರಾಗಿ ಅದರಲ್ಲಿ ತಮ್ಮ ತಪ್ಪೇನು ಇಲ್ಲವೆಂದು ವಾಧಿಸಿ ಜಾರಿಕೊಂಡುಬಿಡಬಹುದಲ್ಲಾ? ಅದಕ್ಕೆ ಅವರ ಎಲ್ಲಾ ಪ್ರಕ್ರಿಯೆಗಳು ಅವರು ಬಲಿಪಶುಗಳಾಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಸೃಜಿಸಲ್ಪಟ್ಟಿರುತ್ತದೆ.. ನಿಮ್ಮ ಸೇಫ್ಟಿ ನೀವು ನೋಡಿಕೊಳ್ಳಬೇಕೆಂದರೆ ಎಲ್ಲಾ ಚಹರೆ, ಲಕ್ಷಣಗಳನ್ನು ಸರಿಯಾಗಿ ಹೇಳುವುದು ನಿಮ್ಮ ಹಣೆಬರಹವೆ ಹೊರತು ವೈದ್ಯರ ಜವಾಬ್ದಾರಿಯಲ್ಲ’ ಎಂದು ಉಪದೇಶಿಸಿದ್ದ. ಅವನು ಹೇಳಿದಂತೆ ಈ ವೈದ್ಯ ಮಹಾನುಭಾವನೂ
ನಾವು ಹೇಳಿದ ಲಕ್ಷಣ ಚಿಹ್ನೆಗಳನ್ನೆ ಬರೆದಿಟ್ಟುಕೊಂಡು ಪ್ರತಿಯೊಂದಕ್ಕೂ – ತಲೆನೋವಿದೆಯೆಂದಿದ್ದಕ್ಕೊಂದು, ಜ್ವರಕ್ಕೊಂದು, ನೆಗಡಿಗೊಂದು, ಕೆಮ್ಮಿಗೊಂದು, ಮೈಕೈ ನೋವಿಗೊಂದು ಎಂದೆಲ್ಲ ಮಾತ್ರೆ ಔಷಧಿ ಕೊಡುವ ಪರಿ ಗಮನಿಸಿ, ಅಲ್ಲಿಂದ ಮುಂದೆ ಪ್ರತಿ ಬಾರಿಯೂ ಎಚ್ಚರಿಕೆ ವಹಿಸಿಕೊಂಡು ಒಂದು ಚೀಟಿ ಬರೆದಿಟ್ಟುಕೊಂಡೆ ಹೋಗುತ್ತಿದ್ದೆ – ಯಾವ ಲಕ್ಷಣವು ಮರೆತು ಹೋಗದ ಹಾಗೆ.. ಹೇಳುವುದನ್ನು ಮರೆತರೆ ಆ ಔಷಧಿ ಕೊಡುವುದಿಲ್ಲವಲ್ಲಾ ?

ಅದು ಅಷ್ಟಕ್ಕೆ ಮುಗಿದರೆ ‘ಹಾಳಾಗಲಿ’ ಎಂದು ಬೈದುಕೊಂಡು ಸುಮ್ಮನಿದ್ದುಬಿಡಬಹುದಿತ್ತು – ಆದರೆ ಅದು ಇಡೀ ಪುರಾಣದ ಒಂದು ಮಗ್ಗುಲು ಮಾತ್ರವಷ್ಟೆ. ಮೊದಲಿಗೆ ನೆಗಡಿ, ಗಂಟಲು ನೋವು, ಮೈಕೈ ನೋವು, ಜ್ವರದ ರೂಪದಲ್ಲಿ ಕಾಣಿಸಿಕೊಂಡ ಜಡ್ಡಿಗೆ ವೈದ್ಯೇಂದ್ರರೇನೊ ನಿಯ್ಯತ್ತಾಗಿ ಆಯಾಯ ಲಕ್ಷಣಕ್ಕೆ ತಕ್ಕ ಮದ್ದಿನ ಮಾತ್ರೆ ಕೊಟ್ಟುಬಿಡುತ್ತಾರೆ ನಿಜ. ಸಾಲದ್ದಕ್ಕೆ ಜತೆಗೊಂದಷ್ಟು ‘ಆಂಟಿ ಬಯಾಟಿಕ್’ ಮಾತ್ರೆಗಳನ್ನು ಜತೆಗೆ ಸೇರಿಸಿ ಅದರ ಕೋರ್ಸನ್ನು ತಪ್ಪದೆ ಮುಗಿಸಬೇಕೆಂದು ಎಚ್ಚರಿಕೆ ಕೊಟ್ಟು ಸಾಗ ಹಾಕಿಬಿಡುತ್ತಾರೆ (ಅದಕ್ಕೂ ನೀವು ತುಂಬಾ ನೋವಿದೆಯೆಂದೊ, ಸುಸ್ತಾಗುತ್ತಿದೆಯೆಂದೊ, ಎರಡು ದಿನದಿಂದಲೂ ನರಳುತ್ತಿರುವೆನೆಂದೊ ಬಾಯಿ ಬಿಟ್ಟು ಹೇಳಬೇಕು. ಇಲ್ಲವಾದರೆ ಸರಿ ಸುಮಾರು ಎಲ್ಲಾ ಕೇಸುಗಳಲ್ಲೂ ಬರಿ ಮಾಮೂಲಿ ಔಷಧಿಯಷ್ಟೆ ದಕ್ಕುವುದು). ‘ಆಂಟಿ ಬಯಾಟಿಕ್’ ಬಲವದೆಷ್ಟು ತೀವ್ರವಾಗಿ ಇರುತ್ತದೆಂದರೆ, ತೆಗೆದುಕೊಳ್ಳಲಾರಂಭಿಸಿದ ಅರ್ಧ ದಿನದಲ್ಲೆ ಜಡ್ಡಿನ ಲಕ್ಷಣವೆ ಮಂಗಮಾಯವಾಗಿಬಿಟ್ಟಿತೇನೊ ಎನ್ನುವ ಭ್ರಮೆ ಹುಟ್ಟಿಸುವಷ್ಟು ತೀಕ್ಷ್ಣಶಕ್ತಿಯದು. ಅದರ ಬಲದಲ್ಲಿ ‘ನಿಜವಾಗಿಯೂ ಜಡ್ಡಾಗಿತ್ತಾ?’ ಎಂದು ನಮಗೆ ಅನುಮಾನವಾಗುವಷ್ಟು ಹುರುಪು ತರಿಸಿಟ್ಟುಬಿಡುತ್ತದೆ ದೇಹದ ಪೂರಾ. ಒಂದು ಹೊತ್ತು ಆ ಮಾತ್ರೆ, ಔಷಧಿ ನಿಲ್ಲಿಸದ ಹೊರತು ಆ ಹುಸಿ ಉತ್ಸಾಹವೆಲ್ಲ ಆ ಔಷಧದ ಪ್ರಭಾವ, ಪರಾಕ್ರಮ ಎಂದು ಅರಿವೆ ಆಗುವುದಿಲ್ಲ. ಒಂದೇ ದಿನದ ‘ಮೆಡಿಕಲ್ ಲೀವ್’ನಲ್ಲೆ ನಿಭಾಯಿಸಿ ಮರುದಿನವೆ ಕೆಲಸಕ್ಕೆ ಹಾಜಾರಾಗಿ, ಔಷಧಿ ಸೇವಿಸುತ್ತಲೆ ಕೆಲಸ ಮಾಡಿಕೊಂಡು ಏನೂ ಆಗದವರಂತೆ ಸೋಗು ಹಾಕಿಕೊಂಡಿದ್ದುಬಿಡಬಹುದು – ಒಳಗೊಳಗೆ ಏನೊ ಹರುಷವಿಲ್ಲವೇನೊ ಎಂದನಿಸುವ ಅನುಮಾನ ಕಾಡುತ್ತಿದ್ದರೂ ಸಹ. ಸಾಧಾರಣ ಹೈ ಡೋಸೇಜಿನ ಆ ಮಾತ್ರೆ, ಔಷಧಿಗಳು ಒಂದು ವಾರದ ಹೊತ್ತಿಗೆ ಮುಗಿದಾಗಲೆ , ‘ಅರೆರೆ ..? ಯಾಕೊ ಇನ್ನು ಸುಸ್ತಾಗುವಂತೆ ಕಾಣುತ್ತಿದೆಯಲ್ಲಾ?’ ಅನಿಸುವುದು. ಅದು ಸಾಲದೆನ್ನುವಂತೆ ಜ್ವರ, ನೆಗಡಿ, ವಾಸಿಯಾದಂತೆನಿಸಿದರೂ ಯಾಕೊ ಅತಿಸಾರವಾಗುತ್ತಿದೆಯಲ್ಲಾ? ಅನಿಸುವುದಕ್ಕು ಶುರು.. ಅಲ್ಲದೆ ಕೆಮ್ಮಿನ ಔಷಧಿ ಮುಗಿದರೂ ಯಾಕೊ ಒಣಕೆಮ್ಮು ಮಾತ್ರ ಕೈಬಿಡದೆ ಬೆನ್ನು ಹತ್ತುತ್ತ ಕನಿಷ್ಠ ಎರಡು ಮೂರು ವಾರವಾದರೂ ಕಾಡುತ್ತಲೆ ಇರುವುದು… ಆಗಲೆ ಅನುಮಾನ ಶುರು – ಈ ಔಷಧಿಗಳು ಮೂಲ ದೋಷ ಹುಡುಕಲೊಲ್ಲದ ಡಾಕ್ಟರನ ದೌರ್ಬಲ್ಯಕ್ಕೆ, ಹೊರ ಲಕ್ಷಣಕ್ಕೆ ಮಾತ್ರ ನೀಡಿದ ಮದ್ದೆ? ಎಂದು. ಒಂದು ಲಕ್ಷಣಕ್ಕೆ ಮದ್ದು ಕೊಟ್ಟು ಅದನ್ನಿನ್ನೊಂದಾಗಿ ಬದಲಿಸಿದರೆ ಆಮೇಲೆ ಅದಕ್ಕೆ ಬೇರೆ ಮದ್ದು ಕೊಡಬಹುದಲ್ಲಾ? ಹೀಗೆ ಒಂದೊಂದಾಗಿ ಕಾಣಿಸಿಕೊಂಡ ಹೊಸ ಲಕ್ಷಣಕ್ಕೆ ಔಷಧಿ ಕೊಡುತ್ತಾ ಹೋದರೆ ಯಾವುದಾದರೂ ಒಂದು ಹಂತದಲ್ಲಿ ಚಿರಪರಿಚಿತ ವ್ಯಾಧಿ ಲಕ್ಷಣಕ್ಕೆ ತಿರುಗಿದಾಗ ವಾಸಿಯಾಗುವ ಸಾಧ್ಯತೆ ಇದ್ದೇ ಇರುತ್ತದಲ್ಲಾ? ಇನ್ನೊಮ್ಮೊಮ್ಮೆ ಅನಿಸಿಬಿಡುತ್ತದೆ ‘ಛೇ! ಇರಲಾರದೇನೊ? ಬಹುಶಃ ವಯಸಾಗುತ್ತಿದ್ದಂತೆ ನಮ್ಮ ದೇಹವೆ ದುರ್ಬಲವಾಗಿಬಿಡುತ್ತಿದೆ’ ಎಂದು. ಆದರೆ ಗೆಳೆಯ ಮೋಹನ ಮಾತ್ರ ಇದನ್ನು ಒಪ್ಪುವುದೇ ಇಲ್ಲ. ಅದಕ್ಕೆ ಅವನದೆ ಆದ ಬೇರೆ ಸಿದ್ದಾಂತವೆ ಇದೆ ಎನ್ನಿ!

ಇಲ್ಲೆಲ್ಲ ಯಾವಾಗ ಕಾಯಿಲೆ ಬಿದ್ದರೂ ನಿಗದಿ ಪಡಿಸಿದ ಚಿಕಿತ್ಸಾಲಯಗಳಿಗೆ ಮಾತ್ರವೆ ಹೋಗಬೇಕೆಂದು ಹೇಳಿದ್ದೆನಲ್ಲವೆ? ಅದಕ್ಕೆ ಕಾರಣವೇನೆಂದರೆ ನಾವು ಕೆಲಸ ಮಾಡುವ ಕಂಪನಿಗಳು ಕಾಯಿಲೆ ಬಿದ್ದಾಗ ನಮ್ಮ ವೈದ್ಯೋಪಚಾರವನ್ನು ನಿಭಾಯಿಸುವ ಹೊಣೆಯನ್ನು ಇನ್ಶೂರೆನ್ಸಿನ ಕಂಪನಿಗಳಿಗೆ ವಹಿಸಿಬಿಟ್ಟಿರುತ್ತವೆ. ಹೀಗಾಗಿ ನಮ್ಮ ಆರೋಗ್ಯದ ನಿಭಾವಣೆಯ ಖರ್ಚೆಲ್ಲಾ ನಮ್ಮ ಕಂಪನಿಯ ಬದಲು ಇನ್ಶ್ಯೂರೆನ್ಸ್ ಕಂಪನಿಯ ತಲೆಗೆ ಬರುವುದು. ಅದಕ್ಕೆ ನಮ್ಮ ಕಂಪನಿ ದೊಡ್ಡ ಮೊತ್ತದ ‘ಉದ್ಯೋಗಿಗಳ ಸಮೂಹ ವಿಮೆ’ ಮಾಡಿಸಿ ಅದಕ್ಕೆ ತಗಲೊ ಮೊತ್ತದ ವಾರ್ಷಿಕ ಪ್ರೀಮಿಯಂ ಕಟ್ಟಿಬಿಟ್ಟರೆ ಆಯ್ತು. ಹೀಗಾಗಿ ಆ ವಿಮಾ ಕಂಪನಿಗಳು ಗುರುತಿಸಿದ ಅದೆ ದವಾಖಾನೆಗಳಿಗೆ ಹೋಗಬೇಕು; ಯಾಕೆಂದರೆ ಆ ಚಿಕಿತ್ಸಾಲಯಗಳು ಮಾತ್ರವೆ ಅವರೊಡನೆ ಪೂರ್ವ ನಿಯೋಜಿತ ಒಪ್ಪಂದ ಮಾಡಿಕೊಂಡಿರುವಂತಹವು. ಆ ವೈದ್ಯರುಗಳು ವಿಮೆಯ ಕಂಪನಿಗಳಿಗೆ ಮೋಸವಾಗದ ಹಾಗೆ ಬಿಗಿ ನೀತಿ ಅನುಸರಿಸುತ್ತ, ನಿಜವಾಗಿಯೂ ಅವಶ್ಯವಾದ ಚಿಕಿತ್ಸೆಗಳನ್ನು ಮಾತ್ರ ನೀಡುತ್ತ ಆ ಸವಲತ್ತಿನ ದುರ್ಬಳಕೆ ಆಗದಂತೆ ನೋಡಿಕೊಳ್ಳುವಂತಹವರು. ಅವರು ಮೆಡಿಕಲ್ ಸರ್ಟಿಫಿಕೇಟ್ ನೀಡಿದರೆ ಮಾತ್ರ ಕೆಲಸಕ್ಕೆ ಮೆಡಿಕಲ್ ರಜೆ ಹಾಕಲು ಸಾಧ್ಯ. ಹೀಗಾಗಿ ಕಂಪನಿಗಳೂ ಕೂಡ ಕಳ್ಳ ರಜೆ ಹಾಕುವವರ ಮೇಲೆ ಒಂದು ಕಣ್ಣಿಡಲು ಸಾಧ್ಯ – ಅದೇ ವೈದ್ಯರ ಮೂಲಕ. ಹೀಗೆ ಕಂಪನಿಗಳ, ವಿಮಾ ಸಂಸ್ಥೆಗಳ, ವೈದ್ಯರ ಮತ್ತು ಕೆಲಮಟ್ಟಿಗೆ ಉದ್ಯೋಗಿಗಳ ಮೇಲೆ ಪರಸ್ಪರ ಅವಲಂಬನೆ, ನಿಯಂತ್ರಣಗಳನ್ನು ಒಂದೆ ವ್ಯವಸ್ಥೆಯಲ್ಲಿ ಒದಗಿಸುವ ಕಾರಣ ಎಲ್ಲರೂ ಅದಕ್ಕೆ ಹೊಂದಿಕೊಂಡೆ ನಡೆಯಬೇಕಾಗುತ್ತದೆ – ನಂಬಿಕೆಗಿಂತ ಮಾಹಿತಿ ನೈಜಾಂಶಗಳ ಮೇಲೆ ನಡೆಯುವ ಸೂತ್ರವಾದರೂ ಸಹ.

ಆದರೆ ಹೇಳಿ ಕೇಳಿ ಇದು ಗ್ರಾಹಕರ ಯುಗ. ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕಂಪನಿಯು ಗ್ರಾಹಕರನ್ನು ಮೆಚ್ಚಿಸಿ ತಮ್ಮ ತೆಕ್ಕೆಗೆ ಎಳೆದುಕೊಂಡು ಅವರನ್ನು ಅಲ್ಲೆ ನಿರಂತರವಾಗಿ ನಿರ್ಬಂಧಿಸಿಟ್ಟುಕೊಳ್ಳಲು ಏನೆಲ್ಲಾ ತರಹಾವರಿ ಸರ್ಕಸ್ಸುಗಳನ್ನು ಮಾಡುತ್ತಲೇ ಇರುತ್ತವೆ – ಗುಣಮಟ್ಟ ಹೆಚ್ಚಿಸುತ್ತ, ಸೇವೆಯ ವ್ಯಾಪ್ತಿ ವಿಸ್ತರಿಸುತ್ತ, ಸೋಡಿ ನೀಡುತ್ತಾ, ಮಾರಾಟ ದರ ತಗ್ಗಿಸುತ್ತಾ ಇತ್ಯಾದಿ, ಇತ್ಯಾದಿ. ಹೀಗಾಗಿ ಕಂಪನಿಯ ಮೇಲೆ ಗ್ರಾಹಕರನ್ನು ಮೆಚ್ಚಿಸುವ ಸೂಕ್ತ ಕ್ರಮ ಕೈಗೊಳ್ಳುವ ನಿರಂತರ ಒತ್ತಡ ಇದ್ದೇ ಇರುತ್ತದೆ. ಅದರಲ್ಲೂ ಶೇರು ಮಾರುಕಟ್ಟೆಯಲ್ಲಿರುವ ಕಂಪನಿಯಾದರಂತು ಸದಾ ಶೇರುದಾರರ ಕೆಂಗಣ್ಣಿನಡಿಯಲ್ಲಿಯೆ ಇರುವುದರಿಂದ ಸದಾಸರ್ವದಾ ಲಾಭದ ಹವಣಿಕೆಯಲ್ಲೆ ಇರಬೇಕಾದ ಅನಿವಾರ್ಯವಿರುತ್ತದೆ. ಹೀಗಾಗಿ ಕಂಪನಿಗಳು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ದಕ್ಷತೆ ಮತ್ತು ಕ್ಷಮತೆಯನ್ನು ಹೆಚ್ಚಿಸುವ ಅವಕಾಶಗಳಿಗಾಗಿ ಹುಡುಕುತ್ತಲೆ ಇರುತ್ತದೆ. ಅದರಲ್ಲಿ ಬಲು ಮುಖ್ಯವಾದ ಸಲಕರಣೆಯೆಂದರೆ ‘ಅಂತರಿಕ ವೆಚ್ಚ ನಿಯಂತ್ರಣ’ ನಿಭಾವಣೆ… ಅರ್ಥಾತ್ ಕಂಪನಿಯೊಳಗಿನ ಖರ್ಚು ವೆಚ್ಚಗಳಿಗೆಲ್ಲ ಯಾವುದಾದರೂ ರೀತಿಯ ಕಡಿವಾಣ ಹಾಕುವ ನಿರಂತರ ಯತ್ನ ನಡೆದೆ ಇರುತ್ತದೆ ಒಂದಲ್ಲಾ ಒಂದು ರೀತಿ; ಮೂಲ ಸರಕಿನ ದರ ಕುಗ್ಗಿಸುತ್ತಲೊ, ಸರಕು ಸಾಗಾಣಿಕೆ ವೆಚ್ಚ ತಗ್ಗಿಸುತ್ತಲೊ, ಸಂಬಳದ ಹೆಚ್ಚಳಕ್ಕೆ ಅಂಕುಶ ಹಾಕುತ್ತಲೊ, ಇನ್ಶೂರೆನ್ಸಿನಂತಹ ವೆಚ್ಚಗಳ ಮೇಲೂ ನಿಗಾವಹಿಸಿ ಮಿತಿ ನಿರ್ಬಂಧಕಗಳನ್ನು ಅಳವಡಿಸುತ್ತಲೊ – ಹೀಗೆ ಪ್ರಯತ್ನಗಳು ನಡೆದೆ ಇರುತ್ತವೆ. ಅದರ ಪರಿಣಾಮವಾಗಿಯೆ ಇನ್ಶೂರೆನ್ಸ್ ಕಂಪನಿಗಳ ಮೇಲೂ ಪ್ರೀಮಿಯಂ ವೆಚ್ಚ ತಗ್ಗಿಸುವ ಬಲವಾದ ಒತ್ತಡವೇರಲ್ಪಡುತ್ತದೆ – ದರ ತಗ್ಗಿಸುವ ಅಥವಾ ದರ ಹೆಚ್ಚಿಸದ ಹಾಗೆ ಬೇಡಿ ಹಾಕುತ್ತ. ಇನ್ಶೂರೆನ್ಸಿನ ಮಾರಾಟ ವಿಲೇವಾರಿ ಮಾಡುವ ಗುಂಪು ಅದೇ ರೀತಿಯ ಮತ್ತೊಂದು ಕಂಪನಿಯಾದ ಕಾರಣ ಅವರದೂ ಅದೇ ಕಥೆಯೆ – ಅವರೂ ತಮ್ಮ ವೆಚ್ಚ ನಿಭಾಯಿಸುವ ಹವಣಿಕೆಯಲ್ಲಿ ತಮ್ಮ ವರ್ತಕ ಕಂಪನಿಗಳ ಮೇಲೆ ಆ ಒತ್ತಡವನ್ನು ರವಾನಿಸಿಬಿಡುತ್ತವೆ. ಆ ವರ್ತಕ ಕಂಪನಿಗಳ ಪ್ರಕ್ಷೇಪಿತ ತುದಿಯೆ ಈ ವೈದ್ಯರ ಕ್ಲಿನಿಕ್ಕುಗಳಲ್ಲವೆ? ಆ ಒತ್ತಡ ಅವರ ಹಂತಕ್ಕೆ ಮುಟ್ಟಿತೆಂದರೆ ಅದರರ್ಥ ಅವರು ಪ್ರತಿ ಪೇಷೆಂಟಿಗೆ ಚಾರ್ಜು ಮಾಡುವ ಫೀಸಿನ ದರವನ್ನು ಖೋತಾ ಮಾಡಬೇಕೆಂದೆ ತಾನೆ ? ಮೊದಲು ತಲೆಗೆ ಐವತ್ತು ಡಾಲರು ಚಾರ್ಜು ಮಾಡುವ ಕಡೆ ಈಗ ಮೂವತ್ತು ಮಾಡಬೇಕೆಂದರೆ ಅದು ಹೇಗೆ ತಾನೆ ಸಾಧ್ಯಾ? ಆಗುವುದಿಲ್ಲ ಎಂದು ಗಿರಾಕಿಯನ್ನು ಕೈ ಬಿಡುವಂತಿಲ್ಲ – ಹಾಗೆ ಮಾಡಿದರೆ ಇಡೀ ಕಂಪನಿಯ ರೋಗಿಗಳೆ ಕೈ ತಪ್ಪಿ ಹೋಗಿ, ಒಂದು ದೊಡ್ಡ ಗುಂಪೆ ಕೈ ಜಾರಿ ಹೋಗುವುದಲ್ಲ ? ಗಿರಾಕಿ ಬಿಡುವಂತಿಲ್ಲ, ಸಿಗುವ ಕಾಸು ಗಿಟ್ಟುವಂತಿಲ್ಲ. ಹೆಚ್ಚು ಗಿರಾಕಿಗಳು ಬರುವುದರಿಂದ ಒಟ್ಟಾರೆ ನಷ್ಟವಾಗುವುದಿಲ್ಲವೆಂದು ಇನ್ಶೂರೆನ್ಸ್ ಕಂಪನಿ ಪಟ್ಟು ಹಿಡಿದು ಕೂತಿರುತ್ತದೆ. ತೀರಾ ಬಿಗಿ ನಿಲುವು ತಾಳಿದರೆ ಗಿರಾಕಿ ಜಾರಿ ಬೇರೆ ಕಂಪನಿಯ / ಕ್ಲಿನಿಕ್ಕಿನ ಕೈ ಸೇರಿಕೊಳ್ಳುತ್ತದೆ. ಬಿಟ್ಟರು ಕಷ್ಟ, ಉಳಿಸಿಕೊಂಡರೆ ಇನ್ನೂ ಕಷ್ಟ – ಎನ್ನುವ ಉಭಯಸಂಕಟ.

ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮ ವೈದ್ಯ ಮಹಾಶಯರುಗಳು ಏನು ಮಾಡಬೇಕು? ಅಲ್ಲೆ ನೋಡಿ ನಮ್ಮ ಮೋಹನ ಭಾಗವತರ ಮನೋಹರ ಉವಾಚ ಧುತ್ತೆಂದು ಅವತರಿಸಿಬಿಡುವುದು..! ಅವರ ಉದ್ಘೋಷದ ಸಾರಾಂಶ ಇಷ್ಟೆ ; ನಮ್ಮ ವೈದ್ಯೋತ್ತಮರು ಸಂಕಟದಲ್ಲಿ ಸಿಕ್ಕಿಬಿದ್ದುದು ನಿಜವೇ ಆದರು ಅದರಿಂದ ಹೊರಬರುವ ಉಪಾಯ ಹುಡಕಲಾಗದ ದಡ್ಡರೇನಲ್ಲವಂತೆ… ಇನ್ಶೂರೆನ್ಸ್ ಕಂಪನಿಗಳು ಚಾಪೆ ಕೆಳಗೆ ತೂರಿದರೆ ಇವರು ರಂಗೋಲೆಯಡಿ ಸುಸುಳುವ ಚಾಣಾಕ್ಷರು! ಹೇಗಿದ್ದರೂ ದರ ನಿಗದಿಯಾಗುವುದು ಪ್ರತಿ ಬಾರಿಯ ಭೇಟಿಗೆ ತಾನೆ? ಒಂದು ಭೇಟಿಗೆ ಮೂವತ್ತಾದರೇನಾಯ್ತು? ಒಂದು ಭೇಟಿಯಲ್ಲಿ ವಾಸಿಯಾಗಿಸುವ ಬದಲು ಎರಡು ಭೇಟಿಯಲ್ಲಿ ವಾಸಿಯಾಗುವ ಹಾಗೆ ಮಾಡಿದರೆ ಆಯ್ತಲ್ಲಾ! ಪ್ರತಿ ಭೇಟಿಗೆ ಮೂವತ್ತೆ ಆದರು ಒಟ್ಟು ಅರವತ್ತು ದಕ್ಕಿಸಿಕೊಂಡಂತಾಗಿ ಮೊದಲಿಗಿಂತ ಹತ್ತು ಹೆಚ್ಚೆ ಸಂಪಾದಿಸಿದಂತಾಗಲಿಲ್ಲವೆ ? ಹಾಗೆ ಮಾಡುವುದೇನೂ ಕಷ್ಟವಿಲ್ಲವಂತೆ… ಮೊದಲ ಬಾರಿ ಅರೆಬರೆ ಸಾಮರ್ಥ್ಯದ ಅಥವಾ ಕಡಿಮೆ ಡೋಸೇಜಿನ ಮದ್ದು ನೀಡಿದರಾಯ್ತಂತೆ – ‘ಕಾಸಿಗೆ ತಕ್ಕ ಕಜ್ಜಾಯ’ ಎನ್ನುವ ಹಾಗೆ… ಅದು ಮುಗಿಯಲು ಹೇಗೂ ಒಂದಷ್ಟು ದಿನಗಳು ಬೇಕು. ಅಷ್ಟಕ್ಕೆ ವಾಸಿಯಾದರೆ ಸರಿ.. ಆಮೇಲೂ ವಾಸಿಯಾಗದಿದ್ದರೆ ಆ ರೋಗಿ ಹೇಗೂ ಎರಡನೆ ಭೇಟಿಗೆ ಮತ್ತೊಮ್ಮೆ ಬರಲೇಬೇಕಲ್ಲ ? ಆ ಎರಡನೆ ಭೇಟಿ ಹೊಸ ಭೇಟಿಯ ಲೆಕ್ಕವೆ ಆದರೂ ಅದೇ ರೋಗಿಯ ಮೂಲಕ ಬಂದ ಕಾರಣ ಮಾಮೂಲಿನ ಐವತ್ತಕ್ಕಿಂತ ಹೆಚ್ಚೆ ಗಿಟ್ಟಿದಂತಾಗಲಿಲ್ಲವೆ? ಒಂದೆ ಬಾರಿ ಕೈ ಸೇರದೆ ಎರಡು ಕಂತಿನಲ್ಲೆ ಪಡೆದರು ಒಟ್ಟಾರೆ ಲಾಭವಂತು ಬಂದಂತಾಯ್ತಲ್ಲವೆ? ಮಧ್ಯ ಒಂದಷ್ಟು ಅಂತರ ಬರುವಂತಾದರೂ ಅದಕ್ಕೆ ಪರಿಹಾರಾರ್ಥವಾಗಿ ಹೇಗು ಹತ್ತು ಹೆಚ್ಚೆ ಸಿಗುವಂತಿದೆಯಲ್ಲಾ? ಪಾಪ, ಮೊದಲ ಭೇಟಿಗೆ ವಾಸಿಯಾಗದ ರೋಗಿ ಇನ್ನಷ್ಟು ದಿನ ನರಳಬೇಕೆನ್ನುವುದನ್ನು ಬಿಟ್ಟರೆ ಎಲ್ಲಾ ರೀತಿಯಿಂದಲೂ ಇದು ಕ್ಷೇಮಕರ – ರೋಗಿಯೂ ಸೇರಿದಂತೆ; ಯಾಕೆಂದರೆ ತೀರಾ ಬಲಾಢ್ಯ ಡೋಸೇಜ್ ಕೊಟ್ಟು ಅವನ ದೇಹವನ್ನೆ ‘ಟೆಸ್ಟಿಂಗ್ ಲ್ಯಾಬೋರೇಟರಿ’ ಮಾಡಿಕೊಳ್ಳುವ ಬದಲು, ರೋಗ ನಿರೋಧಕತೆಯನ್ನು ಕುಗ್ಗಲಿಕ್ಕೆ ಬಿಡದ ‘ಲೋ ಡೋಸೇಜ್’ ಕೊಡುವುದು ರೋಗಿಯ ಸುರಕ್ಷೆಯ ದೃಷ್ಟಿಯಿಂದ ಉತ್ತಮ. ರೋಗಿಗಂತು ಹೇಗೂ ಅದು ಗೊತ್ತಾಗುವ ಸಾಧ್ಯತೆಯಿಲ್ಲ. ಒಂದು ವೇಳೆ ಅನುಮಾನ ಬಂದರೂ ಏನು ಮಾಡುವಂತಿಲ್ಲ – ಮೊದಲ ಬಾರಿಯ ಮದ್ದು ಕೆಲಸ ಮಾಡಲಿಲ್ಲದ ಕಾರಣ ಎರಡನೆ ಬಾರಿ ‘ಸ್ಟ್ರಾಂಗ್’ ಮೆಡಿಸಿನ್ ಕೊಡುತ್ತಿದ್ದೇನೆಂದು ಹೇಳಿದರೆ ಅವರು ತಾನೆ ಏನು ಮಾಡಲಾದೀತು ? ಅಬ್ಬಬ್ಬಾ ಎಂದರೆ ಏನು ತಾನೆ ಮಾಡಿಯಾರು..? ಈ ಡಾಕ್ಟರು ಬೇಡ ಎಂದು ಇನ್ನೊಬ್ಬ ಡಾಕ್ಟರನ ದವಾಖಾನೆ ಮೆಟ್ಟಿಲು ಹತ್ತಬಹುದು. ಆದರೆ ಅವನ ಪಾಡೂ ಇದೇ ಆದ ಕಾರಣ ಇಡಿ ವ್ಯವಸ್ಥೆ ತನ್ನಂತಾನೆ ಸರಿದೂಗಿಸಿಕೊಂಡು ಹೋಗುತ್ತದೆ – ಅವನ ಬೇಸತ್ತ ಪೇಷೆಂಟು ಇವನತ್ತ ಬರುವ ಹಾಗಾದಾಗ! ‘ವ್ಯವಹಾರಾತುರಾಣಾಂ ನಃ ಭಯಃ , ನಃ ಲಜ್ಜಾಃ’ ಎಂದು ಅವರದೆ ನಾಣ್ಣುಡಿ ಮಾಡಿಕೊಂಡು ‘ಸಹಕಾರವೆ ಜೀವನ’ ಎಂದು ಡ್ಯೂಯಟ್ಟು ಹಾಡುತ್ತ ದಿನ ನಿಭಾಯಿಸಬಹುದಲ್ಲವೆ? ಹೀಗಾಗಿಯೆ ಈಚೆಗೆ ಯಾವುದೇ ಕಾಯಿಲೆಗೆ ದವಾಖಾನೆಗೆ ಹೋದರೂ ಎರಡೆರಡು ಬಾರಿ ಎಡತಾಕುವಂತಾಗಿರುವುದು ಎಂದು ಹೊಸ ಸಿದ್ದಾಂತವನ್ನೆ ಮಂಡಿಸಿಬಿಟ್ಟಿದ್ದರು ‘ಮೋಹನ ಭಾಗವತರು’. ಈಚೆಗೆ ಮೊದಲಿನಷ್ಟು ಸಲೀಸಾಗಿ ಒಂದೆ ಭೇಟಿಯಲ್ಲಿ ವಾಸಿಯಾಗದ ಅನುಭವ ನನಗೂ ಆಗಿದ್ದರೂ ಅದಕ್ಕೆ ದಿನಕ್ಕೊಂದರಂತೆ ಹೊಸದಾಗಿ ಹುಟ್ಟಿಕೊಳ್ಳುವ ವೈರಸ್, ಬ್ಯಾಕ್ಟೀರಿಯಗಳು ಕಾರಣವೆಂದುಕೊಂಡಿದ್ದೆನೆ ಹೊರತು ಡಾಕ್ಟರರ ಚಮತ್ಕಾರಿ ಕೈವಾಡ ಕಾರಣವೆಂದು ನಂಬಲು ಸಾಧ್ಯವಾಗಲಿಲ್ಲ . ಹೀಗಾಗಿ ಅವನ ಸಿದ್ದಾಂತವನ್ನು ನಯವಾಗಿಯೆ ಅಲ್ಲಗಳೆಯುತ್ತ ಬದಿಗೆ ಸರಿಸಿದ್ದೆ – ವೃತ್ತಿಪರ ವೈದ್ಯವೃತ್ತಿಯಲ್ಲಿರುವವರು ಹಾಗೆಲ್ಲ ಮಾಡಲಾರರು ಎಂದು ವಾದಿಸುತ್ತ.

ಹಾಗೆಂದಾಗ ಅವನೊಂದರೆಗಳಿಗೆ ನನ್ನ ಮುಖವನ್ನೆ ನೋಡಿ ನಂತರ ‘ನಾನೂ ಹಾಗೆ ಅಂದುಕೊಂಡಿದ್ದೆ, ಸ್ವಂತ ಪ್ರತ್ಯಕ್ಷ ಅನುಭವಾಗುವತನಕ’ ಎಂದ. ಅನುಭವ ಅಂದ ತಕ್ಷಣ ಕುತೂಹಲ ಕೆರಳಿ ‘ಏನಾಯ್ತು ಅಂತಹಾ ಅನುಭವ?’ ಎಂದೆ. ಆಗ ಅವನು ಹೇಳಿದ್ದು ಕೇಳಿ ನಂಬುವುದೊ ಇಲ್ಲವೆ ಡೋಂಗಿ ಬಿಡುತ್ತಿದ್ದಾನೊ ಎಂದು ನಿರ್ಧರಿಸಲಾಗದಿದ್ದರು ಆ ನಂತರ ಎಲ್ಲ ಡಾಕ್ಟರರತ್ತ ಒಂದು ಅನುಮಾನದ ದೃಷ್ಟಿಯಿಂದಲೆ ನೋಡುವಂತಾಗಿದ್ದು ಮಾತ್ರ ಅಪ್ಪಟ ಸತ್ಯ. ಅವನು ಹೇಳಿದ್ದಾದರು ಇಷ್ಟೆ; ಕಳೆದ ಬಾರಿ ಈ ತರಹದ್ದೆ ಕ್ಲಿನಿಕ್ಕೊಂದರ ಒಳ ಹೊಕ್ಕ ಮೋಹನ ಹೋದ ತಕ್ಷಣ ಆ ಇನ್ಶೂರೆನ್ಸ್ ಕಾರ್ಡ್ ಕೊಡಲು ಮರೆತುಬಿಟ್ಟನಂತೆ, ರಿಜಿಸ್ಟರ್ ಮಾಡಿಸುವ ಹೊತ್ತಿನಲ್ಲಿ. ಹೋದ ತಕ್ಷಣ ಕಾರ್ಡನ್ನು ದಾಖಲಿಸಿ ‘ ಕ್ಯೂ’ ನಂಬರ ಪಡೆದ ಮೇಲಷ್ಟೆ ನಮ್ಮ ಸರತಿಗೆ ಕಾಯುವುದು ಅಲ್ಲಿನ ಸಾಮಾನ್ಯ ಪದ್ದತಿ. ಈ ಬಾರಿಯೂ ಅದೆ ಪ್ರಕಾರ ಸರತಿಯ ಸಂಖ್ಯೆ ಪಡೆದು ಡಾಕ್ಟರರನ್ನು ಭೇಟಿಯಾಗಿ ನಂತರ ಮತ್ತೆ ಕಾದು ಕುಳಿತಿದ್ದನಂತೆ ತನ್ನ ನಂಬರನ್ನು ಕರೆಯುವುದನ್ನೆ ಕಾಯುತ್ತ – ವೈದ್ಯರು ನಿರ್ದೇಶಿಸಿದ ಪ್ರಕಾರ ಔಷಧಿಯ ಪೊಟ್ಟಣ ಕಟ್ಟಿಕೊಡುವುದನ್ನೆ ಕಾದು; ಈ ಬಾರಿಯ ಕರೆ ಬಂದಾಗ ಹೋಗಿ ಪೊಟ್ಟಣವನ್ನು ಪಡೆಯುವ ಹೊತ್ತಿಗೆ ಸರಿಯಾಗಿ, ಆ ಕೌಂಟರಿನಲ್ಲಿದ್ದ ವ್ಯಕ್ತಿ ಐವತ್ತು ಡಾಲರು ಕೊಡಲು ಹೇಳಿದಾಗಷ್ಟೆ ಅವನಿಗೆ ನೆನಪಾದದ್ದು ತಾನು ಕಾರ್ಡ್ ಕೊಡಲು ಮರೆತುಬಿಟ್ಟನೆಂದು. ಆಗ ತಡಬಡಾಯಿಸುತ್ತ ಕ್ಷಮೆ ಯಾಚಿಸುತ್ತ ಪರ್ಸಿನಿಂದ ಕಾರ್ಡೆತ್ತಿ ಕೊಟ್ಟಿದ್ದೆ ತಡ ಆ ಕೌಂಟರಿನ ಮೋಹಿನಿ ಹೌಹಾರಿ, ಕೈಗಿತ್ತಿದ್ದ ಔಷಧದ ಪೊಟ್ಟಣವನ್ನು ಅವನ ಕೈಯಿಂದ ಅವಸರವಸರವಾಗಿ ಕಿತ್ತು ವಾಪಸ್ಸಿಟ್ಟುಕೊಂಡು, ಅವಸರವಸರವಾಗಿ ಮತ್ತೆ ಒಳ ಹೊಕ್ಕು ಡಾಕ್ಟರ ಜತೆಗೇನೊ ಗುಸುಗುಸು ನಡೆಸಿ ಮತ್ತಾವುದೊ ಬೇರೆಯ ಔಷಧಿ ಕಟ್ಟಿಕೊಟ್ಟು ಬಿಟ್ಟಳಂತೆ! ಸಾಲದ್ದಕ್ಕೆ ಮೊದಲು ಕೊಟ್ಟಿದ್ದ ದೊಡ್ಡ ಪೊಟ್ಟಣ ಹೋಗಿ ಈ ಬಾರಿ ಅದರ ಅರ್ಧಕ್ಕರ್ಧ ಸೈಜಿನ ಚಿಕ್ಕ ಪ್ಯಾಕೆಟ್ಟು ಬೇರೆ… ಆ ಘಟನೆಯ ನಂತರವಷ್ಟೆ ಅವನಿಗರಿವಾಯಿತಂತೆ ದುಡ್ಡು ತೆತ್ತರೆ ಒಂದು ಔಷಧಿ, ಇನ್ಶೂರೆನ್ಸ್ ಕಾರ್ಡಿಗೆ ಮತ್ತೊಂದು ಔಷಧಿ ಎಂದು. ಅಲ್ಲದೆ ಆಫೀಸಿನಲ್ಲಿ ಇತ್ತೀಚೆಗೆ ತಾನೆ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸಿದ್ದು ಯಾಕೆಂದು ಅರಿವಾಗದೆ ಗೊಂದಲದಲ್ಲಿದ್ದವನಿಗೆ, ಬಹುಶಃ ಮೊದಲಿಗಿಂತ ಅಗ್ಗದ ಪ್ರೀಮಿಯಂ ಸಿಕ್ಕಿತೆಂದು ಬದಲಾಯಿಸಿರಬಹುದೆಂದು ಬೇರೆ ಜ್ಞಾನೋದಯವಾಯಿತಂತೆ… ಅವನು ಹೇಳಿದ್ದು ಅದೆಷ್ಟು ನಿಜವೊ, ಸುಳ್ಳೊ – ಆದರೆ ಅದನ್ನು ಕೇಳಿದ ಮೇಲೆ ನನ್ನಲ್ಲೂ ಅನುಮಾನದ ವೃಕ್ಷಕ್ಕೆ ಬೀಜಾಂಕುರವಾದಂತಾಗಿ, ಇದ್ದರೂ ಇರಬಹುದೇನೊ ಎನ್ನುವ ಗುಮಾನಿಯೂ ಬರತೊಡಗಿತು ಎಂಬುದು ಸುಳ್ಳಲ್ಲ !

ನಿಜವಾಗಿಯು ಕಾಯಿಲೆ ಬಿದ್ದಾಗ ಸರಿಯಾದ ಔಷಧಿಗಾಗಿ ಪರಿತಪಿಸುತ್ತ ಅನುಭವಿಸುವ ಪರಿ ಒಂದು ಪಜೀತಿಯಾದರೆ, ಮಾಮೂಲಿ ಗಿರಾಕಿಗಳಂತೆ ಬಂದು ಹೋಗುವ ಮೆಲುವಾದ ತಲೆನೋವು, ಮೈ ಕೈ ನೋವು, ಜ್ವರ, ನೆಗಡಿಯಂತಹ ಭಾಧೆಗಳದು ಇನ್ನೊಂದು ಕಥೆ. ಇವು ಬಂದು ವಕ್ಕರಿಸಿಕೊಂಡ ಹೊತ್ತಿಗೆ ವೈದ್ಯರ ಹತ್ತಿರ ಹೋಗುವ ಮೊದಲು ತುಸು ಕೈ ಮದ್ದಿನಲ್ಲೊ, ಮನೆ ಮದ್ದಿನಲ್ಲೊ ಅಥವಾ ಸಾರಿಡಾನ್, ಅನಾಸಿನ್, ಕ್ರೋಸಿನ್ ಜಾತಿಯ ಯಾವುದಾದರು ಫ್ಯಾರಾಸ್ಯೂಟಾಮಲ್ಲಿನಂತಹ ಮಾತ್ರೆ ನುಂಗಿ ಮಲಗೆದ್ದು ವಾಸಿ ಮಾಡಿಕೊಳ್ಳುವ ಸಾಧ್ಯತೆಗಳೇನು ಕಮ್ಮಿಯಿಲ್ಲ. ಅದೂ ಅಲ್ಲದೆ ವೈದ್ಯರ ಹತ್ತಿರ ಹೋದಾಗ ಸಾಮಾನ್ಯ ಅವರ ಕೊಡುವ ಔಷಧದ ಡೋಸೇಜ್ ತುಂಬಾ ಹೆಚ್ಚಿನದಾದ ಕಾರಣ ಅದು ದೇಹದ ನೈಸರ್ಗಿಕ ಪ್ರತಿರೋಧ ಶಕ್ತಿಯನ್ನು ಕುಂದಿಸಿಬಿಡಬಹುದೆನ್ನುವ ಭೀತಿಯೂ ಸೇರಿಕೊಂಡಿರುವುದರಿಂದ ಸಾಧ್ಯವಾದರೆ ದವಾಖಾನೆಯ ಮುಖ ನೋಡದಿರುವುದೆ ಒಳಿತು ಎನ್ನುವ ಮನೋಭಾವ ಅಪರೂಪವೂ ಅಲ್ಲ. ಒಂದೆರಡು ದಿನಗಳಲ್ಲಿ ತಂತಾನೆ ವಾಸಿಯಾದರೆ ಆ ಔಷಧಿಗಳ ರಾಶಿಯಿಂದ ತಪ್ಪಿಸಿಕೊಳ್ಳಬಹುದಲ್ಲ ಎನ್ನುವ ಮುಂಜಾಗರೂಕತೆ ಸಮಯೋಚಿತವೂ ಹೌದು. ಔಷದೋಪಚಾರ ಉಚಿತವೆ ಆದರು ಕೊನೆಗೆ ಸೇವಿಸಬೇಕಾದವರು ನಾವೆ ತಾನೆ? ಆದರೆ ಹಾಗೆ ನಿಭಾಯಿಸಿಕೊಳ್ಳಲೂ ಆಗದ ವಿಚಿತ್ರ ಪರಿಸ್ಥಿತಿ – ಅಲ್ಲೂ ಅಡ್ಡ ಬರುವುದು ಕಂಪನಿ ನಿಯಮಗಳೆ ! ಇಲ್ಲಿನ ಸಾಮಾನ್ಯ ನಿಯಮವೆಂದರೆ ಮೆಡಿಕಲ್ ರಜೆ ಹಾಕಿಕೊಳ್ಳಬೇಕೆಂದರೆ – ಒಂದೆ ಒಂದು ದಿನವಾದರೂ ಸರಿ , ಡಾಕ್ಟರರ ಹತ್ತಿರ ಮೆಡಿಕಲ್ ಸರ್ಟಿಫಿಕೇಟ್ ಬರೆಸಿಕೊಂಡು ತರಲೇಬೇಕು. ಡಾಕ್ಟರ ಹತ್ತಿರವೆ ಹೋಗದಿದ್ದರೆ ಸರ್ಟಿಫಿಕೇಟು ಸಿಗುವುದಾದರು ಎಂತು? ನಮ್ಮ ಊರುಗಳ ಹಾಗೆ ಇಲ್ಲಿ ಕಾಸು ತೆತ್ತು ಪೋರ್ಜರಿ ಪತ್ರ ಕೊಡುವ ಸಾಧ್ಯತೆಯೂ ಇಲ್ಲ – ಕೊಟ್ಟವರು, ತೆಗೆದುಕೊಂಡವರು ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಕಂಬಿ ಎಣಿಸುವ ಪಾಡಾಗಬಾರದಲ್ಲ…? ಏನೊ ಒಂದು ದಿನದ ರೆಸ್ಟು ತೆಗೆದುಕೊಂಡರೆ ಎಲ್ಲಾ ಸರಿಯಾಗಿಬಿಡುತ್ತದೆ ಎಂದು ನಂಬಿಕೆಯಿದ್ದರೂ, ರಜೆ ಹಾಕಲು ವೈದ್ಯರ ಶಿಫಾರಸು ಪತ್ರ ಬೇಕೇ ಬೇಕು. ಅದು ಬೇಕೆಂದರೆ ವೈದ್ಯರ ಭೇಟಿ ಮಾಡಿ ಕಾಯಿಲೆ ಹೇಳಿ ಮದ್ದು ಪಡೆದರಷ್ಟೆ ಸಾಧ್ಯ. ಆ ಔಷಧದ ಸಹವಾಸ ಬೇಡವೆಂದು ಹೊರಟರೆ ರಜೆ ಸಿಗುವುದಿಲ್ಲ. ರಜೆಗಾಗಿ ಔಷಧಿ ತೆಗೆದುಕೊಳ್ಳುವುದೆಂದರೆ ಮತ್ತೊಂದು ಬಗೆಯ ಪ್ರಾಣ ಸಂಕಟ. ಆದರೆ ಮೋಹನನಂತಹ ಗಿರಾಕಿಗಳಿಗೆ ಆ ಸಂಕಟವೂ ಇಲ್ಲವೆನ್ನಿ. ನೇರವಾಗಿ ಡಾಕ್ಟರ ಬಳಿ ಹೋದವನೆ ಇರುವುದರ ಜತೆಗೆ ಇನ್ನಷ್ಟು ಸೇರಿಸಿಯೆ ಹೇಳಿ, ಕೊಟ್ಟದ್ದೆಲ್ಲಾ ಔಷಧಿ ಪಡೆದು ಬರುತ್ತಾನಂತೆ – ಹೆಚ್ಚು ಹೇಳಿದಷ್ಟು ಮೆಡಿಕಲ್ ಸರ್ಟಿಫಿಕೇಟ್ ಸಿಗುವುದು ಸುಲಭವಾದ ಕಾರಣ ಈ ಕಿಲಾಡಿತನ. ಸರ್ಟಿಫಿಕೇಟ್ ಸಿಕ್ಕ ಮೇಲೆ ಇನ್ನೇನು, ರಜೆ ಹಾಕಲು ಅಡ್ಡಿಯೇನೂ ಇಲ್ಲವಲ್ಲಾ? ಕೊಟ್ಟ ಔಷಧಿ ಸೇವಿಸಿದರೆ ಉಂಟು, ಇರದಿದ್ದರೆ ಕಸದ ಬುಟ್ಟಿಗೆ ಒಗೆದರಾಯ್ತು ಅಥವಾ ಎಮರ್ಜೆನ್ಸಿ ಬಳಕೆಗೆ ಎತ್ತಿಟ್ಟುಕೊಂಡರೂ ಆಯ್ತು!

ಬೇರೆಲ್ಲಾ ಕಥೆ ಏನೆ ಇದ್ದರೂ ಈ ಔಷಧಿಗಳು ರಾಮಬಾಣದ ಹಾಗೆ ಒಂದೆ ಏಟಿಗೆ ಕೆಲಸ ಮಾಡಿ ತಕ್ಷಣದ ‘ರಿಲೀಫ್’ ಕೊಡುವುದಂತೂ ಸತ್ಯ. ಅದು ಪೂರ್ತಿ ವಾಸಿಯಾಯಿತೊ ಅಥವಾ ವಾಸಿಯಾದಂತೆ ನಟಿಸಿತೊ ಎನ್ನುವ ಗೊಂದಲಕ್ಕಿಂತಲು, ಈ ಬಿಡುವಿರದ, ತಲೆ ಕೆರೆದುಕೊಳ್ಳಲು ಪುರುಸೊತ್ತಿಲ್ಲದ ಕಾಲದಲ್ಲಿ ತಕ್ಷಣದ ಉಪಶಮನ ನೀಡುವ ಮದ್ದೆ ಅಮೃತಕ್ಕೆ ಸಮನಿದ್ದಂತಲ್ಲವೆ? ಯಾವುದೆ ‘ಬದಿ ಪರಿಣಾಮಗಳಿರದ’ ಸುರಕ್ಷಿತ ಆದರೆ ನಿಧಾನ ಪ್ರಭಾವದ ಚಿಕಿತ್ಸಾ ಕ್ರಮಕ್ಕಿಂತ, ತುಸು ‘ಸೈಡ್ ಎಫೆಕ್ಟ್’ ಇದ್ದರೂ ಕೂಡಲೆ ಶಮನ ಶಾಂತಿ ನೀಡುವ ಈ ಆಧುನಿಕ ಜಗದ ಮಾಂತ್ರಿಕ ಗುಂಡುಗಳಿಗೆ ಇಡಿ ಮನುಕುಲವೆ ಶರಣಾಗಿರುವುದರಲ್ಲಿ ಅತಿಶಯವೇನೂ ಇಲ್ಲ. ಬದಲಾಗುವ ಕಾಲ, ಬದಲಾಗುವ ಜನ-ಮನ-ಮನೋಭಾವಗಳಿಗನುಸಾರ ಜೀವನ ಕ್ರಮಗಳೂ ಬದಲಾದ ಹಾಗೆ ಅವರ ಪ್ರಾಶಸ್ತ್ಯದ ವಿಧಿ, ವಿಧಾನಗಳು, ಪರಿಗಣನೆಗಳು ಬದಲಾಗುತ್ತ ಹೋಗುವುದು ಅನಿವಾರ್ಯ ಪ್ರಕ್ರಿಯೆ. ಆದರೂ ಯಾವ ಕಾಲಮಾನದಲ್ಲಿದ್ದರು ಸರಿ ಮೂಲ ಕಾರಣವನ್ನು ಹುಡುಕಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದೆ ಸರಿಯಾದ ಚಿಕಿತ್ಸಾ ಕ್ರಮ ಎನ್ನುವ ಮಾತು ಮಾತ್ರ ಎಲ್ಲಾ ಕಾಲಕ್ಕು ಸತ್ಯ. ಅದರ ಸುಳಿವು ಸಿಗದೆ ಹೋದಾಗ ಬರಿಯ ಕುರುಹುಗಳಿಗೆ ಮದ್ದು ನೀಡಿ ನಿವಾರಿಸುತ್ತಲೊ, ಮತ್ತೊಂದಾಗಿ ಪರಿವರ್ತಿಸುತ್ತಲೊ ನಡೆವ ‘ಟ್ರಯಲ್ ಅಂಡ್ ಎರರ್’ ವಿಧಾನ ಎಷ್ಟೆ ಸಾರ್ವತ್ರಿಕವಾಗಿ ಪ್ರಚಲಿತವಿದ್ದರೂ ಅದಕ್ಕೆ ತಗಲಬಹುದಾದ ವೆಚ್ಚ, ಶ್ರಮ, ದುರಸ್ತಿ ಮಾಡಲಾಗದ ಪ್ರತಿಕೂಲ ಫಲಿತಾಂಶದ ಸಾಧ್ಯತೆ ಇವೆಲ್ಲ ಲೆಕ್ಕ ಹಾಕಿದರೆ ಮೂಲದೋಷದ ಚಿಕಿತ್ಸೆ ಸಾಮಾನ್ಯವಾಗಿ ಸರಳವೂ, ಕಡಿಮೆ ವೆಚ್ಚದ್ದೂ, ಕಡಿಮೆ ಯಾತನೆಯದು ಮತ್ತು ಶೀಘ್ರ ಗುಣವಾಗುವಂತದ್ದು ಎನ್ನುವುದರಲ್ಲಿ ಸಂದೇಹವೆ ಇಲ್ಲ. ಯಾವ ವೈದ್ಯಕೀಯ ವಿಧಾನದ ಚಿಂತನಾ ವಿಧಾನವಾದರು ಸರಿ (ಸ್ಕೂಲ್ ಆಫ್ ಥಾಟ್), ಚಿಕಿತ್ಸೆಯಾದರೂ ಸರಿ – ಮೂಲದೋಷ ಹುಡುಕಿ ನೀಡುವ ಚಿಕಿತ್ಸೆಯಾದರೆ ಅದು ಖಂಡಿತ ಪರಿಣಾಮಕಾರಿಯಾಗುತ್ತದೆನ್ನುವುದರಲ್ಲಂತು ಎರಡು ಮಾತಿಲ್ಲ. ‘ಅದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವ ವೈದ್ಯ ಸಿಗುವಂತೆ ಮಾಡಪ್ಪ’ ಎಂದು ದೈವಕ್ಕೆ ಮೊರೆಯಿಡುವುದಷ್ಟೆ ನಾವು ಮಾಡಬಹುದಾದ ಸುಲಭದ ಕಾರ್ಯ!

(ನುಣುಚು ಹನಿ : ಈ ಲಘು ಲಹರಿಯಲ್ಲಿ ಬರುವ ಪಾತ್ರ, ಸಂದರ್ಭ, ವಿವರಣೆ, ಉದಾಹರಣೆಗಳೆಲ್ಲ ಕಪೋಲಕಲ್ಪಿತ!)

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

00348. ಲಘು ಹರಟೆ: ಗುಬ್ಬಣ್ಣನ “ಕತ್ತಲೆ ಭಾಗ್ಯ”


00348. ಲಘು ಹರಟೆ: ಗುಬ್ಬಣ್ಣನ “ಕತ್ತಲೆ ಭಾಗ್ಯ”
____________________________________

ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನ ಬೇಗೆಗೆ ಬೆವರಿಳಿಯದಂತೆ ‘ಏಸಿ’ ಹಾಕಿಕೊಂಡು, ಖಿನ್ನ ವದನನಾಗಿ ಕಣ್ಣೆದುರಿನ ಕಂಪ್ಯೂಟರು ಪರದೆಯನ್ನೆ ನೋಡುತ್ತ ಕುಳಿತಿದ್ದಂತೆ ಏಕಾಏಕಿ ಗುಬ್ಬಣ್ಣನ ಆಗಮನವಾಯ್ತು ಅವನದೆ ಶೈಲಿಯ ವಂದನೆಗಳೊಂದಿಗೆ…

” ಸಾರ್ ನಡು ಹಗಲಿನ ಕಡು ವಂದನೆಗಳು…”

ಗುಬ್ಬಣ್ಣನಿಗೆ ಇದ್ದಕ್ಕಿದ್ದಂತೆ, ಅದರಲ್ಲು ನವೆಂಬರಿನ ಆಸುಪಾಸಿನಲ್ಲಿ ತಟ್ಟನೆ ಕನ್ನಡ ಪ್ರೇಮ ಜಾಗೃತವಾಗಿಬಿಟ್ಟಾಗ ಉದುರುವ ಕನ್ನಡಾಮೃತಧಾರೆಯ ಪರಿ ಹೀಗೆ… ಅಪರಿಚಿತ ತರವಾದರು ಅಪರೂಪವೇನಲ್ಲ.. ಆದರೂ ಸಾರ್ ಅನ್ನುವುದು ಹೇಗೊ ನುಸುಳಿಕೊಂಡುಬಿಟ್ಟಿರುತ್ತದೆ..ಬಹುಶಃ ಅದು ಕನ್ನಡವೆ ಅಂದುಕೊಂಡುಬಿಟ್ಟಿರಬೇಕು..

” ಬಾರೊ ಗೂಬಣ್ಣ.. ಏನೊ ಇಷ್ಟು ದೂರ, ಅದೂ ಮಟ ಮಟ ಮಧ್ಯಾಹ್ನವೆ..?”

………………….

(Please click the page link below to read the complete article:  

https://nageshamysore.wordpress.com/00348-%e0%b2%b2%e0%b2%98%e0%b3%81-%e0%b2%b9%e0%b2%b0%e0%b2%9f%e0%b3%86-%e0%b2%97%e0%b3%81%e0%b2%ac%e0%b3%8d%e0%b2%ac%e0%b2%a3%e0%b3%8d%e0%b2%a3%e0%b2%a8-%e0%b2%95%e0%b2%a4%e0%b3%8d%e0%b2%a4/)

Thanks and best regards,

Nagesha MN

00345. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)


00345. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)
______________________________________________________

(ಸಿಂಗಪುರ ಕನ್ನಡ ಸಂಘದ ‘ಸಿಂಗಾರ 2015’ ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.)

ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್ಬದ ಕುರಿತು. ಈ ಬಾರಿಯಾದರೂ ಸ್ವಲ್ಪ ‘ಜೋರಾಗಿ’ ಆಚರಿಸಿ ಪಾರ್ಟಿ ಕೊಡಿಸಲಿ ಎಂಬುದು ಅವನಾಸೆ. ನನಗೊ ಹುಟ್ಟಿದಾಗಿನಿಂದ ಇಲ್ಲಿಯತನಕ ಹುಟ್ಟಿದ ಹಬ್ಬ ಆಚರಿಸಿಕೊಂಡ ನೆನಪೆ ಇಲ್ಲ ಅನ್ನುವುದು ಬೇರೆ ಮಾತು ಬಿಡಿ – ಪ್ರಾಯಶಃ ನನಗೆ ಗೊತ್ತಾಗದ ವಯಸಿನಲ್ಲಿ ಹೆತ್ತವರು ಮಾಡಿಕೊಂಡ ‘ನಾಮಕರಣದ’ ಆಚರಣೆಯನ್ನು ಹೊರತುಪಡಿಸಿದರೆ! ನಾವು ಬೆಳೆದ ವಾತಾವರಣ ಎಷ್ಟು ಸೊಗಡಿನದಾಗಿತ್ತು ಎಂದರೆ, ಹುಟ್ಟಿದ ದಿನವೆನ್ನುವುದೆ ಯಾರಿಗು ನೆನಪಿನಲ್ಲಿರುತ್ತಿರಲಿಲ್ಲ. ಹೈಸ್ಕೂಲಿನ ಮಟ್ಟಕ್ಕೆ ಬಂದು ‘ಹ್ಯಾಪಿ ಬರ್ತಡೆ ಟು ಯೂ’ ಎಂದು ಇಂಗ್ಲೀಷಿನಲ್ಲಿ ಹೇಳಿ ಎಲ್ಲರ ಮುಂದೆ ‘ಗ್ರೇಟ್’ ಅನಿಸಿಕೊಳ್ಳಬಹುದು ಎಂದು ಅರಿವಾಗುವತನಕ ಅದರ ಹೆಚ್ಚುಗಾರಿಕೆಯ ಕಡೆ ಗಮನವೆ ಹರಿದಿರಲಿಲ್ಲ ಎನ್ನಬೇಕು… ಹಾಗೆ ಗ್ರೀಟು ಮಾಡುತ್ತಲೆ ಹುಡುಗಿಯರಿಗೊಂದು ‘ಗ್ರೀಟಿಂಗ್ ಕಾರ್ಡ್’ ಕೊಡಬಹುದಲ್ಲವ? ಎನ್ನುವ ಜ್ಞಾನೋದಯವಾಗುವ ವಯಸ್ಸಲ್ಲಿ….

(Click the link below to read the rest of the article..https://nageshamysore.wordpress.com/00345-%e0%b2%a8%e0%b2%b2%e0%b2%b5%e0%b2%a4%e0%b3%8d%e0%b2%a4%e0%b2%bf%e0%b2%82%e0%b2%a6-%e0%b2%90%e0%b2%b5%e0%b2%a4%e0%b3%8d%e0%b2%a4%e0%b2%95%e0%b3%8d%e0%b2%95%e0%b3%86-%e0%b2%95%e0%b2%be/)

thanks and best regards,
Nagesha MN

00338. ನೆಗಡಿಯದಿ ಭಾನಾಗಡಿ


00338. ನೆಗಡಿಯದಿ ಭಾನಾಗಡಿ
__________________________
(published in suragi: http://surahonne.com/?p=9009)

ಬಡವ ಸಿರಿವಂತನೆನ್ನುವ ಬೇಧವೆಣಿಸದೆ ಕಾಡುವ ನೆಗಡಿ ಯಾರಿಗೆ ತಾನೆ ಅಪರಿಚಿತ? ಬೇಡದ ಅತಿಥಿಯಾಗಿ ಬಂದು, ಬಲವಂತದಿಂದ ವಾರವಾದರು ತಳವೂರಿ ಕಾಡಿ ಕಂಗೆಡಿಸಿ ನಂತರವಷ್ಟೆ ಮರೆಯಾಗುವ ಇದರ ಪರಾಕ್ರಮದೆದುರು ಎಲ್ಲರೂ ದುರ್ಬಲರೆ. ಇದರ ಸಾಮರ್ಥ್ಯಕ್ಕೆ ಸೋತು, ಎದುರು ನಿಲ್ಲಲಾಗದಿದ್ದರು ಸರಿ ಕಡೆಗೆ ಕಥೆ, ಕವನ, ಪ್ರಬಂಧವಾದರು ಬರೆದು ಸೇಡು ತೀರಿಸಿಕೊಳ್ಳುತ್ತೇವೆಂದು ಹೊರಟ ಬರಹಗಾರರದೆಷ್ಟೊ..? ಏನೊ ಕಷಾಯ ಮಾಡಿ ಕುಡಿದು ಅದನ್ನು ನಿವಾರಿಸಿ ಜಯಿಸಿಬಿಡುವೆವೆಂದು ಹೊರಟವರು ಇನ್ನೆಷ್ಟೊ ? ಅಧುನಿಕ ವೈದ್ಯಕ್ಕೆ ಜಗ್ಗದಿರುವುದೆ? ಎಂದು ಹೊರಟವರೇನು ಕಮ್ಮಿಯಿಲ್ಲ…

click the link below to read the rest of the article: https://nageshamysore.wordpress.com/00338-%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b2%a6%e0%b2%bf-%e0%b2%ad%e0%b2%be%e0%b2%a8%e0%b2%be%e0%b2%97%e0%b2%a1%e0%b2%bf/ 

thanks and best regards,
Nagesha Mysore

00337. ಲಘು ಹರಟೆ:’ಮೇಡ್ ಇನ್ ಚೈನಾ’ ಟು ‘ಮೇಕ್ ಇನ್ ಇಂಡಿಯಾ’


ಲಘು ಹರಟೆ:00337.’ಮೇಡ್ ಇನ್ ಚೈನಾ’ ಟು ‘ಮೇಕ್ ಇನ್ ಇಂಡಿಯಾ’

________________________________________________

ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು – ಕನಿಷ್ಠ ತಿಂಗಳಿಗೆರಡು ಬಾರಿಯಾದರೂ ಹೋಗುತ್ತಿದ್ದ. ಈ ಬಾರಿಯ ‘ಅಕ್ಟೋಬರ ಗೋಲ್ಡನ್- ವೀಕ್ ಹಾಲಿಡೆ’ ಸಮಯದಲ್ಲಿ ಒಂದು ವಾರ ಬ್ರೇಕು ಇದ್ದ ಕಾರಣ ಊರಲ್ಲೆ ಆರಾಮವಾಗಿರುವ ಅವಕಾಶ ಸಿಕ್ಕಿ, ಪೋನಾಯಿಸಿದ…

“ಹಲೋ ಸಾರ್..ಊರಲ್ಲೆ ಇದ್ದಿರ್ರಾ…”……..

…………

(Click the page link below for the complete article: 

https://nageshamysore.wordpress.com/00337-%e0%b2%b2%e0%b2%98%e0%b3%81-%e0%b2%b9%e0%b2%b0%e0%b2%9f%e0%b3%86-%e0%b2%ae%e0%b3%87%e0%b2%a1%e0%b3%8d-%e0%b2%87%e0%b2%a8%e0%b3%8d-%e0%b2%9a%e0%b3%88%e0%b2%a8%e0%b2%be-%e0%b2%9f%e0%b3%81/)

Thanks and best regards,

Nagesha MN

00328. ಕುಡುಕರ ರಾಜ್ಯದ ‘ಕಂಡಲ್ಲಿ ಗುಂಡು’ (ಕುಡುಕರ ಹಾಡು)


00328. ಕುಡುಕರ ರಾಜ್ಯದ ‘ಕಂಡಲ್ಲಿ ಗುಂಡು’ (ಕುಡುಕರ ಹಾಡು)_________________________________________________

ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ ‘ಕಂಡಲ್ಲಿ ಗುಂಡು’ ತರಹದ ಪಾಲಿಸಿ ನೆನಪಾಗುವುದು ಸಹಜ. ಆದರೆ ಸುರಾಪ್ರಿಯರಿಂದ ‘ಗುಂಡು’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಕುಡುಕರ ಸಂಜೀವಿನಿ ‘ಮದಿರೆ’ಯ ಕತೆಯೆ ಬೇರೆ. ಇಲ್ಲಿ ಕ್ಲಬ್ಬು, ಬಾರು, ಗಡಂಗುಗಳು ಕಂಡಾಗೆಲ್ಲ ‘ಗುಂಡು’ ಹಾಕುವ ಸ್ವೇಚ್ಛೆ ಕುಡುಕ ಬಂಧುಗಳದು. ಕಟ್ಟಾ ಅಭಿಮಾನಿಗಳಿಗಂತು ಅದಕ್ಕೆ ಹಗಲೂ, ಇರುಳೆಂಬ ಪರಿವೆಯೂ ಇರಬೇಕಿಲ್ಲ. ಮಾರುವ ಜಾಗ ತೆರೆದಿದ್ದರೆ ಸರಿ, ಜತೆಗೊಬ್ಬರು ಸಿಕ್ಕರಂತು ಇನ್ನೂ ಸರಿ..! ಅದರಲ್ಲೂ ಪೋಲಿ ಐಕಳ ಗುಂಪುಗಳು ಒಟ್ಟಾಗಿ ಧಾಳಿಯಿಕ್ಕಲು ಹೊರಟುಬಿಟ್ಟರೆ ಮಾತನಾಡುವಂತಿಲ್ಲ. ಈ ಕುಡುಕರ ರಾಜ್ಯದ ‘ಕಂಡಲ್ಲಿ ಗುಂಡು’ ಕುಡಿವ ದಣಿಗಳಿಗೆಷ್ಟು ಅಪಾಯಕರವೊ, ತೆರಿಗೆ ಹಾಕಿ ಆದಾಯದ ಸುಲಭ ದಾರಿ ಮಾಡಿಕೊಳ್ಳುವ ಪ್ರಭೃತಿಗಳಿಗಷ್ಟೆ ಆಪ್ಯಾಯಮಾನಕರ. ಬರಿ ಆಗೀಗೊಮ್ಮೆ ಶಿಷ್ಟಾಚಾರಕ್ಕೆ ಕುಡಿವ ನಡುವರ್ಗದವರು ಈ ಗುಂಪಿಗೆ ಸೇರದವರಾದರು ಅವರು ಆಗಿಗೊಮ್ಮೆ ಗುಂಡೇರಿಸಿ ರಂಗಾಗುತ್ತ ತಮ್ಮ ಕೈಲಾದ ಕರಸೇವೆ ಮಾಡುತ್ತಲೆ ಇರುತ್ತಾರೆ….

(Click the link below to read complete article.. https://nageshamysore.wordpress.com/00328-%e0%b2%95%e0%b3%81%e0%b2%a1%e0%b3%81%e0%b2%95%e0%b2%b0-%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%95%e0%b2%82%e0%b2%a1%e0%b2%b2%e0%b3%8d%e0%b2%b2%e0%b2%bf-%e0%b2%97/)

Thanks and best regards,

Nagesha MN

00325. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)


00325. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)
_____________________________________________

ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು – ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ ಆರ್ಥಿಕ ಸ್ವಾತ್ಯಂತ್ರದ ಗರಿಯೂ ಬಿಚ್ಚುತ್ತಾ ಹೋಗಿ ಸುಂದರ ಬದುಕಿನ ಆಸೆಯ ಹಕ್ಕಿಯೂ ನಿಧಾನವಾಗಿ ನೆಲದಿಂದ ಮೇಲೆದ್ದು ಹಾರಾಡತೊಡಗುತ್ತದೆ. ಸುಂದರ ಬದುಕು ಒಂದು ಕೈನ ಚಪ್ಪಾಳೆಯಿಂದ ಸಾಧ್ಯವಾಗುವುದಿಲ್ಲವಲ್ಲ? ತಾವಾಗಿ ಹುಡುಕಿದ್ದೊ ಅಥವಾ ಮನೆಯವರಿಂದ ಆರೋಪಿಸಿದ್ದೊ – ಸಾಂಗತ್ಯವೊಂದರ ಜತೆಗಾಗಿ ಮನದಲ್ಲಿ ತಹತಹನೆ, ಕುತೂಹಲ; ಭವಿಷ್ಯದತ್ತ ಆಸೆ ತುಂಬಿದ ಆಶಾವಾದ ಚಿಗುರಿ ಗಿಡವಾಗಿ ಹೂಬಿಡತೊಡಗಿ ಮೈ ಮನವೆಲ್ಲ ಹೂವಂತೆ ಅರಳುವ ಹೊತ್ತು….

(To read the rest, please click on the page link: https://nageshamysore.wordpress.com/00325-%e0%b2%95%e0%b2%be%e0%b2%a1%e0%b3%81%e0%b2%b5-%e0%b2%b9%e0%b3%86%e0%b2%82%e0%b2%a1%e0%b2%a4%e0%b2%bf-%e0%b2%ae%e0%b2%a8%e0%b3%86%e0%b2%af%e0%b3%8a%e0%b2%b3%e0%b2%97%e0%b2%bf%e0%b2%a6%e0%b3%8d/)

Thanks and best regards,

Nagesha MN

00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)


00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)
_________________________________________________________________

ಜೂನ್ ಇಪ್ಪತ್ತೊಂದನ್ನು ‘ಅಂತರರಾಷ್ಟ್ರೀಯ ಯೋಗ’ ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್ತರಿಸತೊಡಗಿದಾಗ ಅದರ ದನಿ ಇತರೆ ದೇಶಗಳಂತೆ ಸಿಂಗಪುರದಲ್ಲು ಮಾರ್ದನಿಸಿದ ಕಾಲ.. ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಔನ್ನತ್ಯಕ್ಕೇರಿಸಲು ಸರಕಾರ ಕೈಗೊಂಡ ಕ್ರಮಗಳ ಕುರಿತಾದ ವರದಿ ಓದುತ್ತ ಕುಳಿತಿದ್ದಾಗ ಯಾಕೊ ತಟ್ಟನೆ ನನಗು, ಯೋಗ ಕಲಿಯಲು (ಪುನರ್) ಆರಂಭಿಸಬೇಕೆಂಬ ಆಕಾಂಕ್ಷೆ ಪ್ರಕಟವಾಗಿ, ಅದು ಪ್ರಬಲವಾದ ಬಯಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳತೊಡಗಿತು. ವಿಪರ್ಯಾಸವೆಂದರೆ ಆ ಬಯಕೆಗೆ ಎರಡೂ – ಪ್ರೇರಕ ಹಾಗು ಮಾರಕ ಶಕ್ತಿಯಾಗಿದ್ದುದ್ದು ಒಂದೆ ಮೂಲವೆ; ಹಾಳು ಭೂತಾಯಿಯನ್ನೆ ಬಸಿರಲಿಟ್ಟುಕೊಂಡು ಕಾಪಾಡುತ್ತಿರುವಂತೆ ಬಿಂಕ ತೋರಿಸುವ ಗುಢಾಣದ ಹೊಟ್ಟೆ! (click the link page below to read the remaining part of the story…)

https://nageshamysore.wordpress.com/00322-%e0%b2%a8%e0%b2%bf%e0%b2%a4%e0%b3%8d%e0%b2%af-%e0%b2%9c%e0%b3%80%e0%b2%b5%e0%b2%a8%e0%b2%95%e0%b3%8d%e0%b2%95%e0%b3%86-%e0%b2%af%e0%b3%8b%e0%b2%97-%e0%b2%97%e0%b3%81%e0%b2%ac%e0%b3%8d/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00312. ಏಪ್ರಿಲ್ ಪೂಲ್..!


00312. ಏಪ್ರಿಲ್ ಪೂಲ್..!
____________________

‘ಟ್ರಿನ್… ಟ್ರಿನ್..’ ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ‘ ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?’ ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು ‘ ಹಲೊ..’ ಎಂದೆ. ಯಾರಿರಬಹುದೆನ್ನುವ ಅನುಮಾನ ನಿಸ್ಸಂಶಯವಾಗಿ ತೊಲಗಿ ಹೋಗುವ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ಗುಟುರು ದನಿ ಕೇಳಿಸಿತ್ತು.

‘ ಸಾರ್.. ನಾನು ಗುಬ್ಬಣ್ಣ.. ನಮಸ್ಕಾರ ಸಾರ್.. ನಿದ್ದೆಯಿಂದೆಬ್ಬಿಸಿಬಿಟ್ಟೆಂತ ಕಾಣುತ್ತೆ..’ ಎಂದ ಪೆಚ್ಚು ನಗೆ ನಟಿಸುತ್ತ. ನನ್ನ ‘ ಹಲೊ’ ಎನ್ನುವ ಮಾತಿಂದಲೆ ನಿದ್ದೆಯಾಳದಿಂದೆದ್ದು ಬಂದದ್ದನ್ನು ಗಮನಿಸಿ, ಅದಕ್ಕೆ ನನ್ನಿಂದ ಬೆಂಡು ಎತ್ತಿಸಿಕೊಳ್ಳುವ ಮೊದಲೆ ತಾನೆ ಆಡಿ ತಪ್ಪಿಸಿಕೊಳ್ಳುವ ಸ್ಕೆಚ್ ಹಾಕುತ್ತಾ ಇದ್ದಾನೆ ಖದೀಮ…

https://nageshamysore.wordpress.com/00312-%e0%b2%8f%e0%b2%aa%e0%b3%8d%e0%b2%b0%e0%b2%bf%e0%b2%b2%e0%b3%8d-%e0%b2%aa%e0%b3%82%e0%b2%b2%e0%b3%8d/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00134. ದೇವರು ನಮಗೆ ಹಾಕಿದ ಟೋಪಿ


00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ)
_____________________________________

ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯದಲ್ಲಂತೂ ವಯಸಿನ ಅಪ್ರಬುದ್ಧತೆಯ ಹೆಸರಿನಲ್ಲಿ ಎಲ್ಲಾ ನಿರ್ಧಾರಗಳನ್ನು ಹಿರಿಯರೆ ಕೈಗೊಳ್ಳುವುದೊ , ಅಥವಾ ಅವರ ಪ್ರಭಾವಲಯದ ಮಿತಿಯಿಂದ ಹೊರಬರದೆ ಅದಕ್ಕೆ ಪೂರಕವಾಗಿರುವಂತೆಯೆ ಮಕ್ಕಳು ನಿರ್ಧಾರ ತೆಗೆದುಕೊಳ್ಳುವುದೊ ಸಾಮಾನ್ಯವಾಗಿ ಕಂಡು ಬರುವ ಭಾವ. ಸರಿಯೋ ತಪ್ಪೊ ಎನ್ನುವ ಜಿಜ್ಞಾಸೆಯೊಂದು ಕಡೆಯಾದರೆ ಸಾಂದರ್ಭಿಕವಾಗಿ ಸರಿ ತಪ್ಪುಗಳ ತುಲನೆಯು ಬೇರೆ ಬೇರೆ ರೂಪ ತಾಳುವ ಅನಿವಾರ್ಯತೆಯ ಮತ್ತೊಂದು ಪರ್ಯಾಯ. ಕೊನೆಗೆಲ್ಲ ತಪ್ಪನ್ನು ದೇವರ ಮೇಳೆ ಆರೋಪಿಸಿ ಅವನಿಂದಲೆ ಎಲ್ಲಾ ಆದದ್ದು ಎಂದು ಅವನನ್ಬೆ ದೂಷಿಸುತ್ತಾ ಜಾಣತನದಿಂದ ಜಾರಿಕೊಳ್ಳುವ ಪರಿ. ಇದರ ಎರಡು ವಿಭಿನ್ನ ರೂಪಗಳನ್ನು (ಬಾಲ್ಯದ ಮತ್ತು ಪ್ರಾಯದ ಹೊದರಿನಲ್ಲಿ) ಬಿಂಬಿಸುವ ಜೋಡಿ ಕವನಗಳು – ದೇವರು ನಮಗೆ ಹಾಕಿದ ಟೋಪಿ….(ಮಿಕ್ಕಿದ್ದು ಕೊಂಡಿಯಲ್ಲಿ)

https://nageshamysore.wordpress.com/00134-%e0%b2%a6%e0%b3%87%e0%b2%b5%e0%b2%b0%e0%b3%81-%e0%b2%a8%e0%b2%ae%e0%b2%97%e0%b3%86-%e0%b2%b9%e0%b2%be%e0%b2%95%e0%b2%bf%e0%b2%a6-%e0%b2%ac%e0%b2%be%e0%b2%b2%e0%b3%8d%e0%b2%af%e0%b2%a6/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು