01728. ಪ್ರೇಮಿಗಳ ಭೇಟಿಗಿಲ್ಲ ಹೊತ್ತು ಗೊತ್ತು.. !


01728. ಪ್ರೇಮಿಗಳ ಭೇಟಿಗಿಲ್ಲ ಹೊತ್ತು ಗೊತ್ತು.. !

____________________________________________

ಯಾಕವಸರ ? ಯಾಕವಸರ ?

ಪದೆ ಪದೇ ನೋಡುವೆ ಗಡಿಯಾರ !

ಮಾಡಲೆಷ್ಟೊಂದಿದೆ ಸ್ವೈರ ವಿಹಾರ..

ಮಾತಾಡಲಿದೆ ಕಲ್ಪನೆಯಾಚೆ ದೂರ ! ||

ಬಿಡೆಯಾ ಕಿರಿಕಿರಿ? ಬಾರಿ ಬಾರಿ

ಹೇಳದೆ ಕೇಳದೆ ಬಂದ ಗುಟ್ಟ ಸವಾರಿ

ಮತ್ತೆ ಸುಳ್ಳು ಕಾರಣ ಹೇಳೆ ಅದುರಿ

ಬಡಿದುಕೊಂಡು ಎದೆಯಾಗಿದೆ ನಗಾರಿ ! ||

ಏನಾದರೊಂದು ನೆಪ ಹೇಳಿ ಮಣಿಸು

ಒಡೆಯಬೇಡ ಈ ಗಳಿಗೆ ಸುಂದರ ಕನಸು

ಹೀಗೆ ಬಂದು ಹಾಗೆ ಹೋಗೆ ಕೈ ತಿನಿಸು

ಬಾಯಿಗಿಲ್ಲದೆ ಹೋದರೆ ಮನಸೆ ಮುನಿಸು ||

ನೋಡಬೇಡ ಈ ಕ್ಷಣದ ಸೌಖ್ಯ ಕ್ಷಣಿಕ

ಚಿಂತಿಸೊಮ್ಮೆ ನಾಳೆಗು ಬೇಕಿಲ್ಲವೆ ಈ ಸುಖ ?

ಹೋಗಲೊಲ್ಲದ ಮನಸಹುದು ಕ್ಷುಲ್ಲಕ

ಎರವಾಗಬಾರದಲ್ಲವೆ ನಾಳೆಗಿಂದಿನ ಪುಳಕ ? ||

ನಾಳೆ ನಾಳೆಗಿರಲಿ ಇಂದಿನ ಮಾತಾಡು

ನಿಜ ಪ್ರೀತಿಯ ದಾರಿಗಿದೆ ನೂರಾರು ಜಾಡು

ಮರೆತೆಲ್ಲವ ಜತೆಗಿರಬಾರದೆ ಅರೆಗಳಿಗೆ ?

ಹಂಬಲಿಸಿದೆ ಜೀವ ನಿನಗೆ, ಲೆಕ್ಕಿಸದಿರೆ ಹೇಗೆ ? ||

ಇನ್ಹೇಗೆ ಹೇಳಲೊ ಕಾಣೆ, ನಿನಗರ್ಥವಾಗದಲ್ಲ

ಸರಿ, ಇನ್ನೈದೇ ನಿಮಿಷ ಮೀರಿ ನಾ ನಿಲ್ಲುವುದಿಲ್ಲ

ದೂಷಿಸೀಯಾ ಜೋಕೆ ಬರದಂತಾದರೆ ಮತ್ತೆ

ನಿನ್ನದೇ ಹೊಣೆ ಬಲವಂತದೆ ದಾಟಿಸಿರುವೆ ಸಂಹಿತೆ ||

ಐದಾಗಿ ಐವತ್ತು ಪ್ರೇಮಿಗಳದೇನೊ ಜಗತ್ತು

ಕೊನೆಗೇನೊ ಕಾರಣ ಹುಡುಕೆ ಚತುರ ಕಸರತ್ತು

ಸುಳ್ಳ ಮನೆ ದೇವರಾಗಿಸೆ ಇದುವೆ ತರಬೇತಿ

ಸರಿ ತಪ್ಪು ಜಿಜ್ಞಾಸೆ ಕಂಗೆಡಿಸಿಯೂ ಬಿಡದಲ್ಲ ಪ್ರೀತಿ! ||

– ನಾಗೇಶ ಮೈಸೂರು

೧೭.೦೫.೨೦೧೮

(Picture source: internet / social media)

02085. ಮಾತೊಂದಿರಿಯುವ ಹೊತ್ತು..


02085. ಮಾತೊಂದಿರಿಯುವ ಹೊತ್ತು..

https://kannada.pratilipi.com/read?id=6671345000644608

ಮಾತೊಂದಿರಿಯುವ ಹೊತ್ತು
____________________


ಕುಟುಕಿ ಕುಟುಕಿ ಆಡೋ ಕಟಕಿಯ ಮಾತು
ಕೀಟಲೆಯಲ್ಲ ಕಿತ್ತು ಕಿತ್ತು ತಿನ್ನುವ ರಣಹದ್ದು
ಸರಹದ್ದು ಮೀರಿದ ಸಹನೆ ಕಳುವಾಗಿ ಚಿತ್ತ
ಲೋಕವ್ಯಾಪಾರದಲ್ಲು ಅಲೆದಿತ್ತು ಅಲೆಮಾರಿ ||

ಕಾಣಲೆಂದು ಹೊರಡೆ ತಪ್ಪು ಹುಡುಕೋ ಯಾತ್ರೆ
ಸರಿ ಸೀರೆಯಲ್ಲೂ ತಪ್ಪು ನೆರಿಗೆಗಳದೇ ಜಾತ್ರೆ
ಮೊಣಕೈಗೆ ಚಿಲಕ ಬಡಿದಂತೆ ಅಗಣಿತ ಎಣಿಕೆ
ಕ್ಷುಲ್ಲಕವೂ ಭಲ್ಲೆ ಇರಿದಂತೆ ಧಾಳಿಯ ಕುಣಿಕೆ ||

ಮಾತಿನ ಭರ್ಜಿ ಬರುವುದೆಲ್ಲಿಂದಲೋ ಅಮೂರ್ತ
ತುದಿ ಸವರಿ ಗರಳ ಬಂದಿರಿಯುವಾಗ ಕರಾಳ
ಕಿತ್ತೊಗೆದು ತಾಳ್ಮೆ ಮುಳ್ಳಿನ ಬೇಲಿಯಾಗುತ ಸಿದ್ಧ
ಮಾತಿಗೆ ಮಾತಾಗುವ ಚಿಲ್ಲರೆ ಪದಗಳ ವಾಗ್ಯುದ್ಧ ||

ನಾ ಸರಿ ನೀ ಸರಿ ಸಂಸಾರದಲಿಲ್ಲ ಸರಿಗಮ ಪರಿ
ಗಾನವಿರುವಷ್ಟೇ ಹುಯಿಲು ಊಳಿಡುವ ನಾಯ್ತೋಳ
ಬಳಸಲಿಲ್ಲ ತೋಳ ಕಳಿಸಲಿಲ್ಲ ನಗೆ ವಿಧಿ ಮನೆಹಾಳ
ಎಂದೆಲ್ಲರ ಹಳಿಯುತಲೇ ಉರುಳಿದೆ ಬಾಳ ಬಂಡಿ ಖಾಲಿ ||

ಕುಟುಕು ಜೀವ ಉಳಿದಿದೆ ಕುಟುಕದೆ ಬಿಟ್ಟರೆ ಸಾಕಿನ್ನು
ಕುಕ್ಕಿ ತಿನ್ನಬೇಕಿದೆ ಹೆಕ್ಕಿ ಕಾಳಕ್ಕಿ ಅನ್ನ ಸಿಕ್ಕಿದ್ದೇ ಭವತಿ
ಭಿಕ್ಷಾಂದೇಹಿ ಬದುಕಿಗು ಕಸುವಿರಬೇಕು ಜೋಳಿಗೆ ಹೊರೆ
ಬಿಟ್ಟಭಿಮಾನ ನಾಚಿಕೆ ಬೇಡುವುದೇನು ಕಡಿಮೆ ಮಾತೆ ? ||

– ನಾಗೇಶ ಮೈಸೂರು
೩೦.೦೬.೨೦೧೭

01107. ಸೆರಗು ಜಾರುವ ಹೊತ್ತು…


01107. ಸೆರಗು ಜಾರುವ ಹೊತ್ತು…
___________________________


(ಅವಳು)
ಸೆರಗು ಜಾರುವ ಹೊತ್ತು
ದೂರ ಸರಿ ಮಹನೀಯ
ಸಭ್ಯತೆಯಲ್ಲ ದೂರದೆ
ನಿಂತು ನೋಡುವ ವಿಷಯ..

(ಅವನು)
ದೂರದಿರು ದುರುಳತನ
ಮರೆಗೆ ನಿಂತಿಹೆನಲ್ಲ ?
ಮರೆಯಲೆಂತೂ ಮೋಹಕ
ಸೊಬಗಿನದೀ ಯೌವ್ವನ !

(ಅವಳು)
ಬಿಡು ಮಾತಿನ ಜಾಣತನ
ಜಾರಿಸಬೇಡ ಮನಸ
ಅಮಲ ನೈದಿಲೆ ವಯಸು
ಅರಿಯದು ಕಪಟ ಕುಟಿಲ..


(ಅವನು)
ನಿನ್ನಾಣೆ ಕುಹಕವಿದಲ್ಲ
ಧೂರ್ತತೆ ಪರಿಹಾಸ್ಯವೆ ?
ಮರೆಗೆ ಹೋಗೆಂದರೂ ಮನಸು
ಹೋಗಬಿಡದ ಹಾಳು ವಯಸು..

(ಅವಳು)
ಎಲ್ಲಿ ಸಜ್ಜನಿಕೆ ಹೆಗ್ಗುರುತು?
ನಾರಿ ಗೌರವದ ಕುರುಹು
ನಾನಿಲ್ಲಿ ಒಡನಾಡಿ ಪ್ರಕೃತಿ
ಬಿಡು ನನ್ನ ಪಾಡಿಗೆ ಪುರುಷ..

(ಅವನು)
ಆಸ್ವಾದನೆ ಪುರುಷ ಪ್ರಕೃತಿ
ಕಾಣವುದೇನಲ್ಲಿ ಪ್ರಕೃತಿಗೆ ವಿಕೃತಿ ?
ನೀನಪರಾವತಾರ ಬಿಡು ನಾಚಿಕೆ
ಪುರುಷ ಪ್ರಕೃತಿ ಸಂಗಮ ಸೃಷ್ಟಿಚಿತ್ತ


(ಅವಳು)
ಜಾರಿಸದಿರೆನ್ನ ಮಾತ ಬಲೆಯಲಿ
ಸಿಕ್ಕ ಮೀನಾಗೆ ಚಡಪಡಿಕೆ ಬದುಕು
ತುಂಬುಕೊಳದಲೀಜಾಡುವ ಪ್ರಾಯ
ಕೆರಳಿಸಬೇಡ ಇನ್ನೂ ಅರಳದ ಕಾಮನೆ

(ಅವನು)
ಜಾರಿದರೇನು? ಆಳವಿಲ್ಲ ಮೊಳಕಾಲುದ್ದ
ಮುಳುಗದಂತೆ ಜೋಡಿ ವಿಹರಿಸೆ ಸಕಾಲ
ಕಾಮನೆಯಲ್ಲ ಭಾವನೆ ಪಕ್ವತೆಗೆ ಸನ್ನದ್ಧ
ಹೆಜ್ಜೆಯಿಟ್ಟರೆ ಹೆದರದೆ ಸುಗ್ಗಿ ಕಾಲಡಿ ನಿತ್ಯ..

(ಉಪಸಂಹಾರ)
ಸೆರಗು ಜಾರಿತೊ ಬಿಟ್ಟಿತೊ ಇರುಳು ಕಾಲಿಟ್ಟು
ಮರುಳು ಮಾಡಿತೊ ಬಿಟ್ಟಿತೊ ನೆರಳು ಹಾಸಿತ್ತು
ಸೇರಿದರೊ ಜಾರಿದರೊ ಪ್ರಕೃತಿ ಪುರುಷದ ಪಾಡು
ಯುಗಯುಗ ಅನುರಣಿತ ಮತ್ತದೆ ಕಥೆ ಕಾವ್ಯ ಹಾಡು.


– ನಾಗೇಶ ಮೈಸೂರು
೨೭.೦೧.೨೦೧೭
(Picture source : internet / social media postings / published online elsewhere )

01039. ಬೊಜ್ಜ ಹೊತ್ತು ಸಾಗುವ ಹೊತ್ತು..


01039. ಬೊಜ್ಜ ಹೊತ್ತು ಸಾಗುವ ಹೊತ್ತು..
_____________________________


ಇಪ್ಪತ್ತೈದು ವರ್ಷದ ಬೊಜ್ಜು ಗೆಳೆಯ
ಹೊರೆ ಹೊತ್ತೆ ಸಾಗಿದ್ದು ಗಾಣದೆತ್ತು
ಯಾರಿಗೊ ಯಾರಾರಿಗೊ ದೂಷಣೆ ನಿಷ್ಫಲ
ತೋರುಬೆರಳೊಂದು, ಮಿಕ್ಕ ಮೂರೂ ನಿನ್ನತ್ತಲೆ..

ಹೇಳುವುದು ಸುಲಭ ಮಾಡುವುದೇ ಕಷ್ಟ
ದೂಷಣೆಗಿಳಿಯದೆ ದೂಷಿಸಿಕೊಂಡೆ ಸ್ವಂತ
ಸಂತನಾಗಲಿಲ್ಲ ಅನಂತವಾಯ್ತಷ್ಟೆ ಪಟ್ಟಿ
ಕಣ್ಣಿಗೆ ಕಟ್ಟಿದ ಹೊತ್ತಲು ಕೊರಮರ ಭೀತಿ

ಹೊತ್ತು ಮಹನೀಯನಾದ ಪುನೀತ ಭಾವ
ಕರಗದಿದ್ದೀತೆ ವಯಸ್ಸಿನ ಜೊಜ್ಜ ತದುಕೆ
ಹುಡುಕ್ಹುಡುಕಿ ನಿರ್ಲಿಪ್ತನಾಗಿ ಗೆದ್ದೆನೆಂಬ ಅಹಂ
ಕುಗ್ಗಿ ನಿಕೃಷ್ಟ ನಿಸ್ತೇಜ ತೇಜೋಕಾಂತಿ ಭ್ರಮೆ

ವಯಸಾಯಿತೀಗೀಗ ಆಳಿಗೊಂದೊಂದು ಕಲ್ಲು
ತಪ್ಪೆಲ್ಲಾ ನಿನದೆ ಎಂದುಸುರುವ ಪ್ರತಿ ಸೊಲ್ಲ ಧಾರ್ಷ್ಟ್ಯ
ನಂಬಿಸುತಿದೆ ಬುಡಮೇಲಾಗಿಸಿ ನಂಬಿಕೆಯ ಲಂಗರ
ಮೊದಲಿಪ್ಪತ್ತೈದರ ಉತ್ಸಾಹಕು ತಿಂಗಳ ಮುಟ್ಟ ಸಂಕಟ

ಬೇರೇನ ಬೇಡಲಿ ಯಾರದೊ ಹೊಸವರ್ಷದ ಹೊಸ್ತಿಲು
ಕದ ತಟ್ಟುತ ಬಡಿದೆಬ್ಬಿಸುತಿದೆ ಒಕ್ಕಲೆಬ್ಬಿಸಿ ಪರಂಪರೆ
ಅದೇ ಬೊಜ್ಜನ್ಹೊತ್ತು ಸಾಗಲಿದೆ ಮತ್ತಿಪ್ಪತ್ತೈದು, ಐವತ್ತು
ಹಗುರಾಗಿಸದಿದ್ದರೆ ಬಿಡು, ಹೊರುವ ಶಕ್ತಿಯಾದರೂ ಕೊಡು !

– ನಾಗೇಶ ಮೈಸೂರು
೩೧.೧೨.೨೦೧೬
(Picture from Creative Commons)
Happy New Year – 2017!

00882.ಮಳೆಯಾಗಿವೆ ಹೊತ್ತು


00882.ಮಳೆಯಾಗಿವೆ ಹೊತ್ತು
_____________________________


ಮಳೆಯಾಗುವ ಹೊತ್ತು, ಮಾತಿಗೇನು ಗೊತ್ತು ?
ನೀರಸ ಪದಗಳ ಸುತ್ತು, ಆರೋಪಿಸಿ ಕಿಮ್ಮತ್ತು
ಮಳೆ ಹನಿಯ ಗಮ್ಮತ್ತು ಮಳೆಯಾದವರಿಗೆ ಗೊತ್ತು
ಕೈ ಹಿಡಿದು ಮೌನದಿ ಕೂತ ಮನಸುಗಳ ಮಾತು ||

ಹನಿಹನಿಯ ಪ್ರೋಕ್ಷಣ ತುಂತುರಾಗುತ ಭೀಕರ ಕ್ಷಣ
ಉನ್ಮಾದದೇನೊ ತಲ್ಲಣ ಮನ ಗಣಿಸದುತ್ತರ ದಕ್ಷಿಣ
ಯಾಕೊ ಏನೊ ಸಂಭ್ರಮ ಹುರುಪೆಬ್ಬಿಸುತ ಮಬ್ಬಾಗಿ
ಕಾಳಮೇಘವು ಕೂಡಿ ಸಂಜೆಗತ್ತಲೆಯ ಕೊಡೆಯಂತಾಗಿ ||

ರಪ್ಪೆಂದು ಬಡಿದಾ ರೋಷ ಯಾರ ಕೋಪವೊ ಜಗದೀಶ
ಕೊಚ್ಚಿ ಹಾಕುತ ರಚ್ಚೆ ಮೊರೆತ ಬಿಡದೇನು ಅವಶೇಷ
ಸ್ಥಬ್ಧವೆಲ್ಲ ನಿಶ್ಯಬ್ದ ನಿಸರ್ಗವೆ ಆಲಿಸುತ ವರ್ಷ ಕಾರಣ
ತಣ್ಣನೆ ಹೃದಯದಲೇನೋ ಪುಳಕ ಬೆಚ್ಚಗಾಗಿ ಭಾವನಾ ||

ಮಳೆ ನಿಲಬಾರದು ಧರಣಿ ಅತ್ತು ಕರೆದರೂ ಅನವರತ
ಕದಲಲಾಗದ ಮೃದುಲ ಸಂವೇದನೆ ಕಟ್ಟಿ ಬಂಧಿಸುತ
ಕಡಲಾಗಲಿ ಕೂತಲ್ಲೆ ತೇಲಿ ಭಾವನೆಗಳ ಸ್ವೈರ ವಿಹಾರ
ಮನವೇರುವ ನೌಕೆ ಸಾಗಲಿ ಗಡಿ ಎಲ್ಲೆಗಳಾಚೆ ದೂರ ||

ನೋಡದಿರೆ ಕೆಣಕುತ ಬಿಡಲೊಲ್ಲೆ ನಿನ್ನಾ ಸಾಂಗತ್ಯ
ನನ್ನೊಳಗಿನ ತುಂತುರು ನೀನಾಗಿರುವೆ ನಿಚ್ಚಳ ಸತ್ಯ
ನಾವೇರುವ ನೌಕೆ ಮೋಡದ ನಾಡಿನ ಬಾನಾಡಿ ದಾರಿ
ಮೇಘದ ಚಾಪೆಯ ಮೀರಿ ಮಳೆಯ ಮೇಲೆಮ್ಮ ಸವಾರಿ ||

– ನಾಗೇಶ ಮೈಸೂರು
30.08.2016
(picture from internet – creative commons)