02046. ನಾಕುತಂತಿಯೊಂದು ಸಾಲು – ೯


02046. ನಾಕುತಂತಿಯೊಂದು ಸಾಲು – ೯


(ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ)

ಈ ಸಾಲಿಗೆ ಕೂಡ ಅದೆಷ್ಟೋ ವಿಭಿನ್ನಾರ್ಥಗಳ ಸಾಧ್ಯತೆ ಕಾಣಿಸುತ್ತಿದೆ. ಮೊದಲಿಗೆ ಇದರ ನೇರ, ಸರಳ ಸಾಧ್ಯತೆಯನ್ನು ಗಮನಿಸೋಣ. ಈ ಸಾಲಿನಲ್ಲಿ ಜೇನಿನ ಪ್ರಸ್ತಾಪ ಬಂದಿರುವುದರಿಂದ ಅದಕ್ಕೆ ಪೂರಕವಾಗಿಯೇ ಮೊದಲು ಅರ್ಥೈಸೋಣ – ಪದಪದವಾಗಿ.

‘ಮುಟ್ಟದ’ ಎಂದರೆ ಮುಟ್ಟಲಾಗದ (ಯಾಕೆಂದರೆ ನೆಲದಿಂದ ಎತ್ತರದಲ್ಲಿ, ಕೈಗೆ ಸಿಕ್ಕದ ಜಾಗದಲ್ಲಿದೆ ಜೇನುಗೂಡು); ‘ಮಾಟದ’ ಎಂದರೆ ಮಾಟವಾದ (ಯಾಕೆ ಮಾಟವಾಗಿದೆ, ವಿಶೇಷವಾಗಿದೆಯೆಂದರೆ – ಗುರುತ್ವಕ್ಕೆ ವಿರುದ್ಧವಾಗಿ ಮೇಲಿಂದ ಕೆಳಗೆ ಕಟ್ಟಿದ ವಿಶಿಷ್ಠ ವಿನ್ಯಾಸದ ಗೂಡದು) ; ‘ಹುಟ್ಟದ’ ಅಂದರೆ ‘ಹುಟ್ಟು + ಅದ’ = ಹುಟ್ಟು+ ಇದೆ = ಹುಟ್ಟೊಂದಿದೆ (ಜೇನಿನ ಹುಟ್ಟೊಂದು ಅಲ್ಲಿದೆ). ‘ಹುಟ್ಟಿಗೆ’ ಅಂದರೆ ಆ ಜೇನುಹುಟ್ಟಿಗೆ, ಆ ಜೇನುಗೂಡಿಗೆ ; ಜೇನಿನ ಥಳಿಮಳಿ = ಜೊಂಪೆ ಜೊಂಪೆ ಜೇನುಗಳ ಮುತ್ತಿಗೆ, ಆವರಿಸುವಿಕೆ – ಒಂದೆಡೆ ತಳಮಳದಿಂದ ಧಾಳಿಯಿಕ್ಕುವ ಸೈನ್ಯದ ಹಾಗೆ ಅನಿಸಿದರೆ, ಮತ್ತೊಂದೆಡೆ ಗೂಡಿನ ತುಂಬಾ ಜೇನಿನ ತಳಿಯ ಮಳೆಯೇ ಆಗಿಬಿಟ್ಟಿದೆಯೇನೋ – ಎನ್ನುವ ಹಾಗೆ ಗೂಡನ್ನು ಪೂರ್ತಿ ತಮ್ಮಲ್ಲೇ ಮುಚ್ಚಿಟ್ಟುಕೊಂಡಿವೆ. ‘ಸನಿಹ ಹನಿ’ ಅಂದರೆ ಸನಿಹದಲ್ಲೇ (ಜೇನಿನ ಹಿನ್ನಲೆಯಲ್ಲೇ) ಹನಿಯ ರೂಪದಲ್ಲಿ ಸಂಗ್ರಹವಾಗಿರುವ ಜೇನು ಎನ್ನುವ ಭಾವ. ಯಾಕೆ ಹಾಗೆ ಮುತ್ತಿವೆ ಅಂದರೆ – (ಗೂಡೊಳಗಿರುವ) ಜೇನಿನ ಹನಿಯನ್ನು ಕಾಯಲು.

ಕೈಗೆಟುಕದಂತೆ ದೂರದಲ್ಲಿ ಮಾಟವಾಗಿ ಕಟ್ಟಿದ, ಜೇನಿನ ಗೂಡನ್ನು ತಮ್ಮ ಮೈಯಿಂದಲೇ ಮುಚ್ಚಿಕೊಂಡ ರಾಶಿ ಜೇನುಹುಳುಗಳ ಹಿಂದೆ ಅಡಗಿದೆ ಸಿಹಿಯಾದ ಜೇನಿನ ಹನಿ. ಆ ಮಧುವಿನ ಮಧುರ ಅನುಭವ ಕೈಸೇರುವುದು, ಸುತ್ತುವರಿದ ಜೇನನ್ನು ನಿವಾರಿಸಿಕೊಂಡರಷ್ಟೇ ಸಾಧ್ಯ. ಕಾವ್ಯವೊಂದರ ಸೃಷ್ಟಿಯಲ್ಲೂ ಅಂತಿಮವಾಗಿ ಜೇನಿನ ಸಿಹಿಯಂತ ಕಾವ್ಯ ಹುಟ್ಟಬೇಕೆಂದರೆ ಅದು ಸುಮ್ಮನೆ ಕೈಗೆ ಸಿಗುವಂತದಲ್ಲ. ಎಟುಕಿಯೂ ಎಟುಕದ ಹಾಗೆ ಒಳಗೆಲ್ಲೋ ಕೂತು ಕಾಡುತ್ತಿರುತ್ತದೆ; ಹತ್ತಿರ ಹೋಗಿ ಹೆಕ್ಕಲು ಬಿಡದೆ, ಕಚ್ಚಿ ಓಡಿಸುವ ಜೇನಿನ ಹುಳುವಿನಂತಹ ಅಡೆತಡೆಗಳಿರುತ್ತವೆ. ಅದೆಲ್ಲವನ್ನು ದಾಟಿ ದಡ ಮುಟ್ಟಿದರೆ ಜೇನಿನ ಹನಿಯಂತೆ ಸಿಹಿಯಾದ ಕಾವ್ಯ ದ್ರವ್ಯ ಕೈಗುಟುಕುತ್ತದೆ , ಭವ್ಯ ಕವನದ ಸೃಷ್ಟಿಗೆ ನಾಂದಿಯಾಗುತ್ತದೆ. ಪ್ರತಿ ಕಾವ್ಯಸೃಷ್ಟಿಯಲ್ಲೂ ಕೈಗೆ ಸುಲಭದಲ್ಲೆಟುಕದ, ಬಚ್ಚಿಟ್ಟುಕೊಂಡ ನಿಗೂಢತೆಯೊಂದು ತನ್ನ ಸಿಹಿ ಮಾಧುರ್ಯದ ಆಮಿಷದೊಂದಿಗೆ ಕಾದುಕೊಂಡಿರುತ್ತದೆ – ಸ್ಫೂರ್ತಿದೇವಿಯ ರೂಪದಲ್ಲಿ ಕೆಣಕುತ್ತ . ಕಾವ್ಯಪುರುಷ ಆ ಪ್ರಕೃತಿಯನ್ನು ಅನ್ವೇಷಿಸುತ್ತ , ಮಥಿಸುತ್ತ, ಕಾಡುವ ಅಡೆತಡೆಗಳನ್ನು ಬದಿಗೆ ಸರಿಸುತ್ತ ಮುನ್ನಡೆದಾಗ ಸೂಕ್ತ ಮಿಲನದ ಹದ ಕೈಗೆಟುಕಿ ಪ್ರಕೃತಿ – ಪುರುಷ ಮಿಥುನವಾದಂತೆ ಕಾವ್ಯ ಬೀಜಾಂಕುರವಾಗುತ್ತದೆ. ಅದು ಚಿಗುರಿ, ಕವಲ್ಹೊಡೆದು ಹೂವು-ಹಣ್ಣಾದರೆ ಅದೇ ಕವನದ ಪ್ರತಿ ಸಾಲಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಈಗ ಇದೇ ಸಾಲನ್ನು ಜೀವಸೃಷ್ಟಿಯ ಮೂಲವಾದ ಮಿಥುನ ಕ್ರಿಯೆಗೆ ಅನ್ವಯಿಸಿ ನೋಡೋಣ. ಹಿಂದಿನ ಎಂಟನೇ ಸಾಲಿನ ವಿವರಣೆಗೆ ಪೂರಕವಾಗಿ ನೋಡಿದರೆ ಕಾಣುವ ಒಳನೋಟ ಹೇಗಿರಬಹುದೆನ್ನುವ ಹಿನ್ನಲೆಯಲ್ಲಿ ಪರೀಕ್ಷಿಸೋಣ.

(ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ)

‘ಮುಟ್ಟದ’ ಎಂದಾಗ ಇನ್ನೂ ಯಾರು ಮುಟ್ಟಿರದ, ಕನ್ನೆತನದ ಧ್ವನ್ಯಾರ್ಥ ಕಾಣಿಸಿಕೊಳ್ಳುತ್ತದೆ (ವರ್ಜಿನ್). ‘ಮಾಟದ’ ಎಂದಾಗ ಸೊಬಗಿನ, ಆಕರ್ಷಕ ಮಾಟದ ಎನ್ನುವ ಭಾವ ಮೂಡುತ್ತದೆ. ಕನ್ಯತ್ವದಲ್ಲಿನ ಮುಗ್ದತೆ, ಕುತೂಹಲ, ಭೀತಿ, ಅಚ್ಚರಿ ಎಲ್ಲದರ ಸಂಗಮ ಭಾವ ‘ಮುಟ್ಟದ ಮಾಟದ’ ಹಿನ್ನಲೆಯಲ್ಲಿರುವ ಸಾರ. ‘ಮುಟ್ಟದ ಮಾಟ’ವನ್ನು ಈ ಭಾವದಲ್ಲಿ ಅರ್ಥೈಸಿಕೊಳ್ಳಬೇಕಿದ್ದರೆ ತುಸು ಆಳದ ಅರ್ಥೈಸುವಿಕೆ ಅಗತ್ಯ. ಮಾಟ ಎನ್ನುವುದು ಇಲ್ಲಿ ಚಾಕಚಕ್ಯತೆ, ಚಾತುರ್ಯ ಎನ್ನುವ ರೀತಿಯಲ್ಲಿ ಬಳಕೆಯಾಗಿದೆ ಎಂದು ನನ್ನ ಅನಿಸಿಕೆ. ಜೀವಸೃಷ್ಟಿಯಲ್ಲಿ ಹೆಣ್ಣಿನ ಗರ್ಭದಲ್ಲಿ ನಿಯಮಿತವಾಗಿ ಉತ್ಪತ್ತಿಯಾಗುವ ಅಂಡಾಣು ಪ್ರಮುಖಪಾತ್ರ ವಹಿಸುವುದು ನಮಗೆಲ್ಲ ತಿಳಿದ ವಿಚಾರ. ಮಿಥುನ ಕ್ರಿಯೆಯಲ್ಲಿ ಪುರುಷದ ವೀರ್ಯಾಣು ಹೆಣ್ಣಿನ ಅಂಡಾಣುವಿನೊಡನೆ ಮಿಲನವಾದಾಗಲಷ್ಟೇ ಅಂಡಾಶಯವಾಗಿ ಜೀವಸೃಷ್ಟಿಗೆ ನಾಂದಿಯಾಗುವುದು. ಆದರಿಲ್ಲಿ ಮಾಟ, ಚತುರತೆ, ಚಾತುರ್ಯದ ಮಾತೆಲ್ಲಿ ಬರಬೇಕು? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಅದಕ್ಕೆ ಉತ್ತರವಿರುವುದು ಪುರುಷರೂಪಿ ವೀರ್ಯಾಣುಗಳ ವರ್ತನೆ ಮತ್ತು ಸಂಖ್ಯೆಯಲ್ಲಿ. ಮಿಥುನದ ಹೊತ್ತಲ್ಲಿ ಬಿಡುಗಡೆಯಾಗುವ ಕೋಟ್ಯಾಂತರ ವೀರ್ಯಾಣುಗಳಲ್ಲಿ ಅಂಡಾಣುವನ್ನು ನಿಖರ ರೀತಿಯಲ್ಲಿ ‘ಮುಟ್ಟಿ’ ಭವಿಷ್ಯದ ಭ್ರೂಣವಾಗುವ ಸಾಧ್ಯತೆಯಿರುವುದು ಕೇವಲ ಒಂದು ಚತುರ ವೀರ್ಯಾಣುವಿಗೆ ಮಾತ್ರ. ಎಲ್ಲಾ ವೀರ್ಯಾಣುಗಳು ಒಟ್ಟಿಗೆ ಗುರಿ ಮುಟ್ಟಲು ಸಾಧ್ಯವಿಲ್ಲ. ಇಲ್ಲಿ ಅಂಡಾಣುವಿನ ಚಾತುರ್ಯ (ಮಾಟವು) ವ್ಯಕ್ತವಾಗುವುದು, ಅದರ ಆಯ್ಕೆಯ ಬುದ್ಧಿವಂತಿಕೆಯಲ್ಲಿ. ಅಸಂಖ್ಯಾತ ಕಣಗಳ ಧಾಳಿಯ ನಡುವಲ್ಲೂ ನಿಭಾಯಿಸಲು ಸಾಧ್ಯವಾಗುವಷ್ಟನ್ನು ಮಾತ್ರ ಅನುಮತಿಸಿ ಮಿಕ್ಕದ್ದನ್ನು ನಿರಾಕರಿಸುತ್ತದೆ. ಅದೆಂತಹ ಅತಿಶಯದ ಚತುರತೆ ಎಂದರೆ, ಬೇಕೆಂದ ಹೊತ್ತಲಿ ಸೃಷ್ಟಿಕ್ರಿಯೆ ಸಾಧ್ಯವಾಗದು. ಸ್ತ್ರೀಯ ಋತುಚಕ್ರ ತನ್ನದೇ ಆದ ಕಾಲಗಣನೆ, ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಮಾಸದ ನಿಗದಿತ ಕಾಲದಲ್ಲಿ ಮಾತ್ರ ಅಂಡಾಣುವಿನ ಉತ್ಪತ್ತಿ ಸಾಧ್ಯ. ಸೃಷ್ಟಿಕ್ರಿಯೆಯೊಂದು ಅಡ್ಡಾದಿಡ್ಡಿ ಜನನಯಂತ್ರವಾಗದಂತೆ ನೈಸರ್ಗಿಕ ನಿಯಂತ್ರಣವಿರಿಸಿಕೊಂಡ ಚಾತುರ್ಯವಿದು. ಹೀಗಾಗಿ ಎಲ್ಲಾ ವೀರ್ಯಾಣುಗಳಿಗೂ ‘ಸುಲಭದಲ್ಲಿ ಮುಟ್ಟಲು ಸಾಧ್ಯವಾಗದ ರೀತಿಯ ಚತುರ ವ್ಯವಸ್ಥೆಯಿರುವ (ಮಾಟವಿರುವ)’ ಅಂಡಾಣುವಿನ ವರ್ಣನೆಯನ್ನು ಇಲ್ಲಿ ಊಹಿಸಿಕೊಳ್ಳಬಹುದು.

‘ಹುಟ್ಟದ ಹುಟ್ಟಿಗೆ’ ಎನ್ನುವಾಗ ಹಿಂದೆ ಅಥವಾ ಇದುವರೆಗೂ ಇರದಿದ್ದಂತಹ, ಇನ್ನೂ ಹುಟ್ಟಿರದಂತ ಹೊಸ ಹುಟ್ಟಿಗೆ ನಾಂದಿಯೆನ್ನುವ ಅನಿಸಿಕೆ ಮೂಡುತ್ತದೆ. ಇನ್ನೂ ಹೊರಜಗತ್ತಿನ ದೃಷ್ಟಿಯಲ್ಲಿ ಹುಟ್ಟಿಲ್ಲದಿದ್ದರು (= ಹುಟ್ಟದ), ಈಗಾಗಲೇ ಬೀಜಾಂಕುರ ಫಲಿತವಾದ ‘ಅಂಡಾಶಯ’ ರೂಪದಲ್ಲಿ ಹುಟ್ಟು ಪಡೆದಾಗಿರುವ ಹುಟ್ಟಿದು. ಅಂಡವು ಸೂಕ್ಷ್ಮರೂಪದಲ್ಲಿ ಹುಟ್ಟಾಗಿದ್ದರು, ಇನ್ನೂ ಬಾಹ್ಯಜಗದ ಪ್ರಕಟರೂಪದಲ್ಲಿ (ಶಿಶುವಿನ ರೂಪದಲ್ಲಿ) ಹುಟ್ಟು ಪೂರ್ತಿಯಾಗಿಲ್ಲದ ಕಾರಣ ಇದನ್ನು ‘ಹುಟ್ಟದ ಹುಟ್ಟಿಗೆ’ ಎಂದು ಕರೆಯಲಾಗಿದೆ (ಈಗಾಗಲೇ ಹುಟ್ಟಾಗಿದೆಯೆಂದು ಹೇಳಲಾಗದ, ಅಂತೆಯೇ ಇನ್ನೂ ಹುಟ್ಟಿಲ್ಲವೆಂದು ನಿರಾಕರಿಸಲಾಗದ ಸ್ಥಿತಿ – ಮಿಲನಾನಂತರ ಮಿಥುನದ ಫಲಿತ ಯಶಸ್ವಿಯಾದರೆ ಅಂಡ ಮತ್ತು ವೀರ್ಯಾಣುಗಳ ಸಂಯೋಗವೇ ಸೃಷ್ಟಿಯ ಮೊದಲ ಹೆಜ್ಜೆಯಾಗಿ ಗರ್ಭದೊಳಗೆ ಅಂಡಾಶಯ ರೂಪ ತಾಳುತ್ತದೆ. ಇದು ಇನ್ನೂ ಹುಟ್ಟದ – ಹುಟ್ಟಿನ ವಿವರಣೆಗೆ ಹೊಂದಿಕೆಯಾಗುವ ಸೃಷ್ಟಿಹಂತ ).

ಇನ್ನು ‘ಜೇನಿನ ಥಳಿಮಳಿ ಸನಿಹ ಹನಿ’ ಮೂಲ ಉದ್ದೇಶವಾದ ಸೃಷ್ಟಿಯ ಜತೆಜತೆಗೆ ಮಿಲನದ ಸವಿಯನ್ನು ಸುಖಾನುಭವವಾಗಿ ರೂಪಿಸಿದ ಅನುಭಾವ. ಸುಲಭದಲ್ಲಿ ಮುಟ್ಟಲಾಗದ ಅದ್ಭುತ ಮಾಟದ (ಚಾತುರ್ಯದ) ಅಂಡಾಣು ಕೂಡ, ತನ್ನಂತಾನೆ ಹುಟ್ಟ ಸೃಜಿಸಲು ಸಾಧ್ಯವಾಗದು. ಅದಕ್ಕೆ ವೀರ್ಯಾಣುವಿನ ಸಹಯೋಗ ಬೇಕು. ಆ ಹುಟ್ಟಿಗೆ ಮೂಲಭೂತ ವೇದಿಕೆಯನ್ನು ಸಿದ್ದಪಡಿಸಿ ಸೂಕ್ತ ಹೊಂದಾಣಿಕೆಗೆ ಕಾಯುತ್ತಿರುವ ಅಂಡಾಣುವಿನ ಮೇಲೆ, ಪುರುಷಭಾವದ ವೀರ್ಯಾಣುವಿನ ಥಳಿಮಳಿಯಾಗಿ, ಹನಿ ಹನಿಯಾಗಿ ಸನಿಹ ಸೇರುತ್ತದೆ. ಹಿಂದೆ ವಿವರಿಸಿದಂತೆ ಅದರಲ್ಲಿ ಮಿಲನದ ಯಶ ಸಿಗುವುದು ಒಂದೇ ವಿರ್ಯಾಣುವಿಗೆ ಮಾತ್ರ. ಇನ್ನು ಈ ಮಿಲನ ಪ್ರಕ್ರಿಯೆಯನ್ನು ಆಕರ್ಷಕವಾಗಿರಿಸಲು ಅದಕ್ಕೆ ಸುಖಾನುಭವದ ‘ಜೇನಿನ’ ಲೇಪನವನ್ನು ಸೇರಿಸಿಬಿಟ್ಟಿದೆ.

ಹೀಗಾಗಿ ಎರಡು ಜೀವಗಳು ಪರಸ್ಪರ ಒಂದಾಗುತ್ತ ಮಧುರ ಮಿಲನದ ರಸಯಾತ್ರೆಗೆ ಹೊರಟಾಗ ಸಿಕ್ಕುವ ಅನುಭೂತಿಯೇ ಅದ್ಭುತ. ಆ ಮಾದುರ್ಯ, ಮಾರ್ದವತೆಯಿಂದಾಗಿ ಇಂತಹ ಅದ್ಭುತಕ್ಕೆ ಸಹಜವಾಗಿಯೇ ಜೇನಿನ ಸಿಂಚನದ ಲೇಪ ಸಿಕ್ಕಂತಾಗಿಬಿಟ್ಟಿರುತ್ತದೆ. ಅಂತಹ ಅಪರೂಪದ ಸಾಮೀಪ್ಯದ ಪ್ರತಿಹನಿಯು ರಸಭರಿತ, ವರ್ಣನಾತೀತ. ಫಲಿತವಾಗಿ ಇಂಥದ್ದೇ ಗುಣಗಳನ್ನು ಆರೋಪಿಸಿಕೊಂಡು ಬರುವ ಅದ್ಭುತ ಕಾವ್ಯ ಕೂಡ ಅಷ್ಟೇ ಮಟ್ಟದ ಮಾಧುರ್ಯದಿಂದ ಕೂಡಿರುತ್ತದೆ (ಕಾವ್ಯ ಸೃಷ್ಟಿಯಲ್ಲಿ). ಮಿಥುನದ ಆಯಾಮದಲ್ಲಿ ‘ಮುಟ್ಟಲಾಗದ ಮಾಟದ ಹುಟ್ಟದ ಹುಟ್ಟು’ ಇನ್ನು ಜನಿಸದ ಭ್ರೂಣರೂಪಿ ಶಿಶುವಿನ ಸಂಕೇತವಾಗುತ್ತದೆ (ಇನ್ನೂ ಹುಟ್ಟಿಲ್ಲ, ಆದರೆ ಈಗಾಗಲೇ ಜೀವವಿರುವ ಭ್ರೂಣವಾಗಿ ಗರ್ಭದೊಳಗೆ ಕುಳಿತಿದೆ). ಅದರ ರೂಪುಗೊಳ್ಳುವಿಕೆಯ, ಜನುಮದ, ಆಗಮನದ ನಿರೀಕ್ಷೆಯೇ ಜೇನಿನ ಹನಿ ಧಾರೆಯಾಗಿ ಹರಿದಂತೆ. ಗರ್ಭಧಾರಣೆಯಿಂದ ಜೀವಜನುಮದ ಪ್ರತಿಹಂತವು ಜೇನಿನ ಸಿಂಚನ, ಜೇನಿನ ಹನಿಯ ಸಾನಿಧ್ಯ, ಸನಿಹದ ನಿರಂತರ ಭಾವದ ಪ್ರತೀಕ.

ಹೀಗೆ ಈ ಒಂಭತ್ತನೇ ಸಾಲು ಸಾರಾಂಶದಲ್ಲಿ, ಪ್ರಕೃತಿ ಮತ್ತು ಪುರುಷ ಸತ್ವಗಳು ವೀರ್ಯಾಣು ಮತ್ತು ಅಂಡಾಣುಗಳ ರೂಪದಲ್ಲಿ ಸಮ್ಮಿಳಿತವಾಗಿ ಅಂಡಾಶಯದ ಸ್ವರೂಪದಲ್ಲಿ ಹುಟ್ಟಿಗೆ ನಾಂದಿಯಾಗುವುದನ್ನು ವಿವರಿಸುತ್ತದೆ – ಆ ಪ್ರಕ್ರಿಯೆಯನ್ನು ಜೀನಿನ ಮಧುರತೆಯ ಸುಖಾನುಭವದೊಂದಿಗೆ ಸಮೀಕರಿಸುತ್ತ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

02045. ಮಂಕುತಿಮ್ಮನ ಕಗ್ಗ ೬೦ ರ ಟಿಪ್ಪಣಿ – ಜಗವೊಂದೆ ಬೊಮ್ಮನ ಶ್ವಾಸ, ದೇಶ-ಕಾಲ ಮನುಕುಲ ವಿನ್ಯಾಸ..


02045. ಮಂಕುತಿಮ್ಮನ ಕಗ್ಗ ೬೦ ರ ಟಿಪ್ಪಣಿ – ಜಗವೊಂದೆ ಬೊಮ್ಮನ ಶ್ವಾಸ, ದೇಶ-ಕಾಲ ಮನುಕುಲ ವಿನ್ಯಾಸ..

http://kannada.readoo.in/2017/05/೬೦-ಜಗವೊಂದೆ-ಬೊಮ್ಮನ-ಶ್ವಾಸ-ದ

02044. ತುತ್ತಿನ ಚೀಲದಲಿತ್ತು ಮುತ್ತು..


02044. ತುತ್ತಿನ ಚೀಲದಲಿತ್ತು ಮುತ್ತು..
______________________________


ತುತ್ತಿನ ಚೀಲದಲಷ್ಟು, ಮುತ್ತುಗಳದೇಕಿದೆಯೋ ?
ಮುತ್ತ ಕಂಡಾದರು, ತುತ್ತಿನ ಬೆಲೆ ಕಾಣಲೆಂದು.

ಬೆಲೆಯೇನೋ ಬಂತು ಮುತ್ತಿಗೆ, ತುತ್ತಿನ ಕಥೆಯೇನು ?
ಕಿತ್ತು ಬಿಸುಡುವ ಗೊಂಚಲು, ಕೊಟ್ಟಷ್ಟು ಕೇಳಿದ ಬೆಲೆ.

ಇದೆಂತ ಘೋರ ಅನ್ಯಾಯ, ಹೆತ್ತೊಡಲಿಗೆ ಕಲ್ಲೆಸೆತ ?
ಉದರದೆ ಕಿತ್ತು ತಿನ್ನುವ ಕೂಸು, ಕರುಳ ಬಳ್ಳಿಗಳದದೆ ಕಥೆ.

ಕೆತ್ತಲಾಗದಲ್ಲ ಜತನದೇ, ಮುತ್ತಿನಾಸೆಗೆ ಮಾತೆಗೆ ಗುದ್ದೆ ?
ಕೆತ್ತಿದ್ದು ಮಾತೆಯಲ್ಲ, ಕೆತ್ತನೆ ಮಾತ್ರ ಅವಳಾ ಕುಶಲತೆ.

ಕೆತ್ತಿ ಕಟ್ಟಿದ ಮುತ್ತು, ಕೊಟ್ಟುಬಿಡುವಳೇಕೋ ಸುಲಭದಲ್ಲಿ ?
ಕೊಡಲಿಲ್ಲವವಳು ಬಿಡದೆ, ಚಿಪ್ಪನೇ ಕೆತ್ತಿದರು ಲಾಲಸಿಗರು.

ಪ್ರಸವದಂತಲ್ಲ ವೇದನೆ, ಅಪರಿಮಿತ ಯಾತನೆ ಹೌದಲ್ಲಾ?
ಕತ್ತರಿಸುವ ಕರವೆ ಸೋಲುವ ಜಿಗುಟು, ಬಿಡದ ಸ್ವಾರ್ಥ ಒಗಟು.

ಪೋಣಿಸಿದ ಮುತ್ತಾಗಿ ಹಾರ, ಪ್ರಕಟಿಸದಲ್ಲ ಯಾತನೆ ಸಾರ ?
ಬಿಡುಗಡೆ ಹರ್ಷದೆ ಮಗ್ನ, ಮನವರಿಕೆಯಾಗದೆ ಹೋಯ್ತೆ ಬಂಧನ.

ರಕ್ಷಣೆಯ ಬಂಧವ ತೊರೆದು, ಪಡೆಯಿತಾದರೂ ಏನನು ಮುತ್ತು ?
ಸ್ವೇಚ್ಛೆಯ ಹವಣಿಸಿ ನಡೆದಿತ್ತು, ಸಿಕ್ಕಿತು ಶಿಸ್ತಲ್ಲಿ ನಲುಗುವ ಚಾಕರಿ.

ಕವಚ ಮುರಿದು, ಮಾಂಸ ಹರಿದು, ಲಕ್ಷಣರೇಖೆ ದಾಟಿದ್ದು ತಪ್ಪೇನು ?
ಬಿಡು ಯಾರು ತಪ್ಪು-ಸರಿ, ಛಿಧ್ರ ಕವಚ ಮಾಂಸ ಮುತ್ತಿನ ವಂಶ.

– ನಾಗೇಶ ಮೈಸೂರು

(Picture source : internet / social media)

02042. ನಾಕುತಂತಿಯೊಂದು ಸಾಲು – ೭


02042. ನಾಕುತಂತಿಯೊಂದು ಸಾಲು – ೭
________________________________

ಏಳನೇ ಸಾಲು : ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ.


________________________________________________________________

ಸಲಿಗೆಯ ಸುಲಿಗೆಯ – ಸಲಿಗೆಯಿದ್ದ ಕಡೆ ಬಲವಂತದಿಂದಾದರೂ ಬೇಕಿದ್ದ ಪಡೆಯುವ ;
– ‘ಸುಲಿಗೆಯೆನಿಸುವ ಮಟ್ಟದ ಅಪೇಕ್ಷೆಯನ್ನು ಕೂಡ’ ತನ್ನ ಹಕ್ಕು ಎನ್ನುವಂತೆ ಪಡೆದೇ ತೀರುವಷ್ಟು ಸಲಿಗೆ.
(ಆ ಸಲಿಗೆಯೆಂತದ್ದೆಂದರೆ, ಸುಲಿಗೆಯೂ ಸುಲಿಗೆಯೆನಿಸದೆ ಸಹಜವೆನಿಸುವಂತೆ ತೋರಿಕೊಳ್ಳುವುದು)

ಸಲಿಗೆಯ ಸುಲಿಗೆಯ ಬಯಕೆಯ – ಬೇಕಿದ್ದ ಬಯಕೆಯನು ಬಲವಂತದಿಂದಲಾದರೂ ಪಡೆದೇ ತೀರುವ ಸ್ವೇಚ್ಛೆ, ಸಲಿಗೆ
(ತನಗದೆಷ್ಟು ಸಲಿಗೆಯಿದೆ ಎನ್ನುವುದನ್ನು ಹೆಮ್ಮೆಯಿಂದ, ಬಿಂಕದಿಂದ ತೋರ್ಪಡಿಸಿಕೊಳ್ಳುವ ಬಯಕೆ )

‘ಸಲಿಗೆಯ ಸುಲಿಗೆಯ ಬಯಕೆಯ’ ಒಲುಮೆ – ಒಲುಮೆ (ಯೆಂಬ ನವಿರಾದ, ಸೌಮ್ಯಭಾವ) ತನಗಿರುವ ಸಲಿಗೆಯಲ್ಲಿ, ತಾನು ಬಯಸಿದ್ದನ್ನು ಪಡೆದೇ ಪಡೆವ ಹಠದಲ್ಲಿ (ಆಸೆ, ಬಯಕೆಯಲ್ಲಿ) ಹೊರಟ ಭಾವ.
(ಆ ಸಲಿಗೆಯ ಸುಲಿಗೆಯ ಬಯಕೆ ಇರುವುದು ಯಾರಲ್ಲಿ ? – ಒಲುಮೆಯಲ್ಲಿ )

ಒಲುಮೆ ಬಯಲಿನ : ಮನದ ಒಲವೆಂಬ ವಿಶಾಲ ಆಕಾಶದಂತಹ ಬಯಲಿನಲ್ಲಿ..

ಸಿರಿಯುಡುಗಿ (1) – ಆ ಚಾತುರ್ಯದ ಮುಂದೆ ಮಿಕ್ಕೆಲ್ಲಾ ತರದ ಸಿರಿಯು ಸ್ಪರ್ಧಿಸಲಾಗದೆ ಉಡುಗಿಹೋಗಿ..
ಸಿರಿಯುಡುಗಿ (2) – ಆ ಚತುರ ಕಲೆಯಲ್ಲಿ ನಿಷ್ಣಾತೆಯಾದ, ಅದನ್ನೇ ಉಡುಗೆಯಂತೆ ತೊಟ್ಟ..(ಸಿರಿ + ಉಡುಗೆ / ಉಡುಗಿ)

ಬಯಲಿನ ನೆಯ್ಗೆಯ – ಬಯಲಿನಲ್ಲಿ ಇರುವ, ಕಣ್ಣಿಗೆ ಸುಲಭದಲ್ಲಿ ಗೋಚರಿಸದ (ಜೇಡ ನೇಯ್ದ) ಬಲೆ.

ಬಯಲಿನ ನೆಯ್ಗೆಯ ಸಿರಿಯುಡುಗಿ (1) – ಕಣ್ಣಿಗೆ ಕಾಣಿಸದಂತೆ, ಅರಿವಿಗೆ ನಿಲುಕದಂತೆ ಚಾಣಾಕ್ಷತೆ, ಜಾಣ್ಮೆಯಿಂದ ಸುತ್ತಲೂ ಒಲವಿನ ಬಲೆಯನ್ನು ನೇಯ್ದು, ಬಲೆಗೆ ಬೀಳಿಸಿಕೊಳ್ಳುವ ಚತುರೆ;
ಬಯಲಿನ ನೆಯ್ಗೆಯ ಸಿರಿಯುಡುಗಿ (2) – ಬಯಲಲಿ ನೇಯ್ದ ಹೊಳೆವ ಸಿರಿ ಬಲೆಯನ್ನೇ ಉಡುಗೆಯಂತೆ ತೊಟ್ಟ..
________________________________________________________________

ನನ್ನ ಟಿಪ್ಪಣಿ:

(ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ;)

ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ:

ಸಲಿಗೆಯಿಂದ ಸುಲಿಗೆ ಮಾಡಬಯಸುವ ಬಯಕೆಯನ್ನು ಹೊತ್ತುಕೊಂಡು ಬಂದಿರುವ ಸೌಮ್ಯರೂಪಿ ಒಲುಮೆ. ಇಲ್ಲಿ ಒಲುಮೆ ಎಂದಾಗ ಮೂಡುವ ಭಾವ ಮೃದುಲ. ಒಲುಮೆಯಿದ್ದ ಕಡೆ ಪರಸ್ಪರರಲ್ಲಿ ಸಲಿಗೆಯಿರುವುದು ಸಹಜ ತಾನೇ ? ಇಲ್ಲಿ ಒಲುಮೆ ಕೂಡ ಒಂದು ರೀತಿ ಸೌಮ್ಯರೂಪದ ಪ್ರತೀಕವೇ. ಆದರೆ ಇದು ಕೇವಲ ಪಟ್ಟಕದ ಒಂದು ಮುಖ ಮಾತ್ರವಷ್ಟೇ. ನವಿರು ಭಾವದ ಸೌಮ್ಯರೂಪ ಒಂದು ತುದಿಯಾದರೆ, ಅದನ್ನು ಸರಿದೂಗಿಸುವ ಸಲುವಾಗಿ ಮತ್ತೊಂದು ತುದಿಯಲ್ಲಿ ತುಸು ಒರಟುತನದ ಭಾವ ಕಾಣಿಸಿಕೊಳ್ಳುತ್ತದೆ – ಸುಲಿಗೆ ಮತ್ತು ಬಯಕೆ ಎನ್ನುವ ಪದಗಳ ಬಳಕೆಯಲ್ಲಿ. ಒಲುಮೆಯ ಸಲಿಗೆಯಿರದಿದ್ದಾಗ ಇಬ್ಬರು ವ್ಯಕ್ತಿಗಳು ತಮ್ಮ ನಡುವೆ ಒಂದು ಗೌರವ ಸರಿದೂರವನ್ನು ಏರ್ಪಡಿಸಿಕೊಂಡು , ಮಿತಿ ಕಾಯ್ದುಕೊಳ್ಳುವುದರಿಂದ ಅದು ಬಯಕೆಯ ಮತ್ತಾವ ಸ್ತರಕ್ಕೂ ವಿಸ್ತರಿಸಿಕೊಳ್ಳುವುದಿಲ್ಲ. ಆದರೆ, ಆ ಬಂಧವಿದ್ದವರ ನಡುವೆ ಸಲಿಗೆಯು ವಿಸ್ತರಿಸಿಕೊಳ್ಳುತ್ತ ಬಯಕೆಯ ರೂಪ ತಾಳುವುದು ಸಹಜವೇ.

ಕೆಲವೊಮ್ಮೆ ಬಯಕೆಯ ತೀವ್ರತೆ ತನ್ನ ಹದ್ದು ಮೀರಿ ಸುಲಿಗೆಯ ಮಟ್ಟಕ್ಕೂ (ತುಸು ಬಲವಂತದಿಂದ ಬೇಕಾದ್ದನ್ನು ಪಡೆಯುವ ಮಟ್ಟ) ಏರಿಬಿಡುವುದು ಅಪರೂಪವೇನಲ್ಲ. ಸೌಮ್ಯ-ಸಾತ್ವಿಕ ಪ್ರೇಮದ ಭಾವ ಅಧಿಕಾರಯುತ ಕಾಮನೆಯ ಒರಟುತನಕ್ಕೆ (ಸುಲಿಗೆಗೆ) ಹವಣಿಸಿ, ಅದನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗುವುದು ಆ ಸಲಿಗೆಯ ಮತ್ತೊಂದು ಮುಖ. ಸೃಷ್ಟಿಕಾರ್ಯದ ಹಿನ್ನಲೆಯಲ್ಲಿ ನೋಡಿದಾಗ, ಇದು ಮಿಥುನದ ಕಾಮನೆಯನ್ನು ಪೂರ್ಣಗೊಳಿಸಲು ಹೊರಟ ರತಿಯಾತ್ರೆಯ ಮುನ್ನುಡಿಯಂತೆ ಕಾಣುತ್ತದೆ. ಒಲುಮೆಯ ಸಲಿಗೆ ಸ್ವೇಚ್ಛೆಯಾಗಿ, ಆ ಸ್ವೇಚ್ಛೆಯ ಹಕ್ಕನ್ನು ಬಳಸಿಕೊಂಡು ತನ್ನಿಚ್ಛೆ ಬಂದಂತೆ ಸುಲಿಗೆ ಮಾಡಲ್ಹೊರಡುವ ಬಯಕೆಯನ್ನೇ ಮಿಥುನದ ಕಾಮನೆ ಎಂದು ಅರ್ಥೈಸಬಹುದು. ಒಂದೆಡೆ ಇದು ಸಲಿಗೆಯನ್ನು ದುರುಪಯೋಗ ಪಡಿಸಿಕೊಂಡ ಭಾವವಾದರೆ ಮತ್ತೊಂದೆಡೆ ಆ ಸಲಿಗೆ ಹೇಗೆ ಕಾಠಿಣ್ಯವನ್ನು ಸಡಿಲಿಸಿ ಮಧುರಾನುಭವದ ಸುಲಲಿತ ಸುರತವಾಗಿಸುತ್ತದೆ, ತನ್ಮೂಲಕ ಸೃಷ್ಟಿಗೆ ನಾಂದಿ ಹಾಡುವ ಕಾರ್ಯದಲ್ಲಿ ತನ್ನ ಕೈ ಜೋಡಿಸುತ್ತದೆ ಎನ್ನುವುದು ಗಮನೀಯ ಅಂಶ.

ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ – ಒಲುಮೆಯೆನ್ನುವುದು ಕಾಡುವ ಬಯಕೆಯಾದಾಗ, ಪರಸ್ಪರ ಸಲಿಗೆಯ ಗೌರವ ಭಾವ ತನ್ನ ಬೇಲಿಯ ಮಿತಿ ದಾಟಿ ಸಂಗಾತಿಯ ಸುಲಿಗೆಯ ಮಟ್ಟಕ್ಕೂ ಹೋಗಿಬಿಡುತ್ತದೆ – ತನ್ನ ಬಯಕೆಯ ಪೂರೈಕೆಗಾಗಿ. ತನ್ನ ಸಂಗಾತಿಯಲ್ಲಿರುವ ಸಲಿಗೆ ಆ ಮಟ್ಟಿಗಿನ ಸ್ವೇಚ್ಛೆಯನ್ನು ನೀಡುತ್ತದೆಯೆನ್ನುವ ಇಂಗಿತ ಒಂದೆಡೆಯಾದರೆ, ಬಯಕೆಯ ತೀವ್ರತೆ ಯಾವ ಮಟ್ಟಕ್ಕೂ ಉದ್ದೀಪಿಸಿಬಿಡಬಹುದೆನ್ನುವ ಭಾವ ಮತ್ತೊಂದೆಡೆ. ಕಾವ್ಯಾವತಾರದಲ್ಲಿ, ಆವರಿಸಿಕೊಂಡ ಕಾವ್ಯದೇವಿಯ ಸ್ಫೂರ್ತಿಯ ಆವಾಹನೆ-ಪ್ರೇರಣೆಯಾದಾಗಲೂ, ಇಂಥದ್ದೇ ಸಲಿಗೆ ಭಾವೋತ್ಕರ್ಷದ ಸುಲಿಗೆ ಮಾಡಿ ಕಾವ್ಯಕನ್ನಿಕೆಯ ಸೃಷ್ಟಿಗೆ ಕಾರಣೀಭೂತವಾಗುತ್ತದೆಯೆನ್ನುವುದು ಇದೇ ಆಯಾಮದ ಮತ್ತೊಂದು ಮಜಲು.

ಬಯಲಿನ ನೆಯ್ಗೆಯ ಸಿರಿಯುಡುಗಿ

ಪ್ರಕೃತಿಯ ಸಾಕಾರ ರೂಪಾದ ಹುಡುಗಿಯಾದರೋ, ಬಯಲಿನಲ್ಲಿ ಕಣ್ಣಿಗೆ ಕಾಣದ ಜೇಡರ ಬಲೆಯ ನೇಯ್ಗೆಯಂತಹ ಸಂಕೀರ್ಣ ಮನಸ್ಸಿನವಳು. ಆ ಬಲೆಯ ಹಾಗೆಯೆ ಬರಿಯ ಕಣ್ಣಿಗೆ ಗೋಚರವಾಗದ ಅವಳ ಮನಸಿನ ಭಾವನೆ, ತಾಕಾಲಾಟಗಳು ಬೆಳಕಿನ ಕೋಲೊಂದರಡಿ ಫಕ್ಕನೆ ಮಿಂಚಿ ಮಾಯವಾಗುವ ಅದೇ ಬಲೆಯ ತೆಳ್ಳನೆ ಎಳೆಗಳಂತೆ, ಅವಳ ಕಣ್ಣಿನ ಕಾಂತಿಯಾಗಿ ಮಿಂಚಿ ಮಾಯವಾಗುತ್ತಿವೆ – ಅದೇನೆಂದು ಗ್ರಹಿಸಲು ಬೇಕಾದ ಬಿಡುವನ್ನೂ ನೀಡದೆ. ಅವಳಲ್ಲಿ ಅವಳದೇ ಆದ ಗೊಂದಲ, ಸಂಶಯ, ಸೌಂದರ್ಯ, ಲಾವಣ್ಯ, ಹೆಮ್ಮೆ ಇತ್ಯಾದಿಗಳ ಸಿರಿಯೆ ತುಂಬಿಕೊಂಡಿದೆ. ಆ ಗೊಂದಲದಲ್ಲಿ ಸಿಕ್ಕವಳ ಅರೆಬರೆ ಮನದ ಸಲಿಗೆಯನ್ನು ಸುಲಿಗೆ ಮಾಡಿ ತಾನು ಬಯಸಿದ್ದನ್ನು ತನ್ನದಾಗಿಸಿಕೊಳ್ಳುವ ಹುನ್ನಾರ – ಒಲುಮೆಯು ಗುಟ್ಟಿನಲ್ಲಿ ಪೋಷಿಸುತ್ತಿರುವ ಪುರುಷರೂಪಿಯದು. ಅದೇ ರೀತಿ, ತಾನು ಬಯಸಿದ ಪುರುಷನಲ್ಲಿ, ಇಂತಹ ಬಯಕೆ-ಕಾಮನೆ ಹೊತ್ತುಬರುವ ಹುಡುಗಿಯಾದರೂ (ಕಾವ್ಯ ಸೃಷ್ಟಿಯಲ್ಲಿ – ಕಾವ್ಯ ಕನ್ನಿಕೆಯಾದರೂ) ಎಂತಹವಳು ? ಎಂದರೆ ಸಿಗುವ ಉತ್ತರ ‘ಬಯಲಿನ ನೆಯ್ಗೆಯ ಸಿರಿಯುಡುಗಿ’… ಅದೆಂತಹ ಸಿರಿಯುಡುಗಿ ಎನ್ನುವುದನ್ನ ಕೆಳಗೆ ನೋಡೋಣ.

ಬಯಲೆಂದರೆ ವಿಶಾಲವೆಂದು (ಅಂತಹ ವಿಶಾಲವಾದ ಅಥವಾ ಅರ್ಥಮಾಡಿಕೊಳ್ಳಲಾಗದ ಚಂಚಲತೆಯುಳ್ಳ ಅಗಾಧ ವಿಸ್ತಾರವಿರುವ ಮನಸ್ಸತ್ತ್ವದ ರೂಪವೆಂದು) ಅರ್ಥೈಸಬಹುದು. ಬಯಲಲ್ಲಿ ನೆಯ್ಗೆಯೆಂದರೆ ಬಯಲಲ್ಲಿ ಕಂಡೂ ಕಾಣದ ಹಾಗೆ ಬಲೆ ಕಟ್ಟುವ ಜೇಡರ ಬಲೆ ಎನ್ನಬಹುದು. ತನ್ನ ಕಾರ್ಯಸಾಧನೆಗೆ, ಪುರುಷ-ಸಂತೃಪ್ತಿಯ ಹುನ್ನಾರ ಹೂಡಿ ಆ ನೆಪದಲ್ಲೇ ಗಂಡನ್ನು ವಶೀಕರಿಸಿಕೊಂಡುಬಿಡುವ ಯೋಜನೆಯಲ್ಲಿ ನೇಯ್ದ ಬಲೆಯದು. ಯಾರ ಕಣ್ಣಿಗೂ ಸುಲಭದಲ್ಲಿ ಕಾಣದ, ಸೂಕ್ತಯೋಜನೆಯ ಬಲೆಯನ್ನು ರೂಪಿಸಿಕೊಂಡೆ ಸನ್ನದ್ಧಳಾಗಿ ಬರುವ ಹುಡುಗಿಯೆಂದು ಕೂಡ ನಿಷ್ಪತ್ತಿಸಬಹುದು. ಮತ್ತೊಂದು ಅರ್ಥದಲ್ಲಿ, ಆ ಬರುವ ಆವೇಗ, ಅವಸರ ಹೇಗಿರುತ್ತದೆಯೆಂದರೆ, ಬರುವ ದಾರಿಗಡ್ಡವಾಗಿರುವ ಕಂಡೂ ಕಾಣಿಸದ ಅಡ್ಡಿ ಆತಂಕಗಳ (ಬಯಲಿನ ನೆಯ್ಗೆಯ / ಬಲೆಯ ರೂಪದಲ್ಲಿರುವ) ಸತ್ವವು ಉಡುಗಿಹೋಗುತ್ತದೆಯಂತೆ! ಕಾವ್ಯದ ಸ್ಫೂರ್ತಿ ಹರಿದುಬಂದಾಗಲೂ, ಏನೆಲ್ಲಾ ಅಡ್ಡಿಆತಂಕಗಳಿದ್ದರು ಅದನ್ನಧಿಗಮಿಸಿ ಬರುವ ಕಾವ್ಯದೇವಿಯ ಲಾಸ್ಯಕ್ಕೂ ಇದನ್ನು ಪ್ರತೀಕವಾಗಿ ಬಳಸಬಹುದು.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture : Wikipedia)

02041. ಮಂಕುತಿಮ್ಮನ ಕಗ್ಗ ೫೯. ದೈವದದ್ಭುತದರಿವು, ಮನುಜ ಮಹನೀಯತೆಯಲಿದೆ ಸುಳಿವು !


02041. ಮಂಕುತಿಮ್ಮನ ಕಗ್ಗ ೫೯. ದೈವದದ್ಭುತದರಿವು, ಮನುಜ ಮಹನೀಯತೆಯಲಿದೆ ಸುಳಿವು !

http://kannada.readoo.in/2017/05/ದೈವದದ್ಭುತದರಿವು-ಮನುಜ-ಮಹನ

02040. ಲೆಕ್ಕವಿಡಲೊಂದು ಅಮ್ಮನ ದಿನ..


02040. ಲೆಕ್ಕವಿಡಲೊಂದು ಅಮ್ಮನ ದಿನ..
_________________________________


ಯಾಕೋ, ಅಮ್ಮನ ದಿನ ಗುಮ್ಮನ ಗುಸುಕ ಮನಸು ?
ಅಮ್ಮನ ನೆನೆಯಲೊಂದೇ ದಿನವಾದಾಗ ಇದೆ ಕೇಸು.

ಅಮ್ಮನ ನೆನೆದಿಲ್ಲವೇ ಅನವರತ, ನೆನೆವಂತೆ ಭಗವಂತನ ?
ಊದುಗಡ್ಡಿ ದೀಪ ಮಂಗಳಾರತಿ, ಬಿಟ್ಟೇನು ಕೇಳನವನ.

ಮಾಡಿಲ್ಲವೆ ಕರೆ ದೂರವಾಣಿ, ದಿನ ಬಿಟ್ಟು ದಿನ – ವಾರ ?
ಮಾತಿಗೂ ಮೀರಿದ ಸಾಮೀಪ್ಯ, ಬೇಡಿಕೆ ಪಟ್ಟಿ ಅಪಾರ.

ಬದುಕಿನ ಸಂತೆಯ ಜೂಜಲಿ ಹೆಣಗಿರೆ, ಸಿಕ್ಕಲೆಲ್ಲಿ ಬಿಡುವು ?
ಅವಳಾ ಬದುಕಿನ ಸಂತೆಯ ತುಂಬ, ಮೌನ ಸಿಟ್ಟು ಸೆಡವು.

ಬಡಿದು-ಚಚ್ಚಿ-ಬೆಳೆಸಿ, ಕಳಿಸಿದ್ದವಳಲ್ಲವೇ ಈ ಬದುಕಿಗೆ ?
ಬದುಕಿನ ಆಯ್ಕೆಯ ಹೊತ್ತು, ನಿನ್ನದೆ ಸ್ವಾತಂತ್ರವಿತ್ತು ನಿನಗೆ.

ಅವಳಾಶೆಗೆ ತಾನೇ ಓದಿ ಬರೆದು, ಹಿಡಿದದ್ದೀ ಕೆಲಸ, ಮೊತ್ತ ?
ನೀ ವಂಚಿಸುತಿರುವೆ ನಿನಗೆ, ಅಲ್ಲಿದ್ದುದ್ದು ನಿನದೇ ಸ್ವಾರ್ಥ.

ಸರಿ ಹೋಗಲಿ ಬಿಡು ವಿವಾದ, ಮಾಡಲಾದರೂ ಏನೀಗ ?
ಮಾಡುವುದೇನು ಬೇಡ, ಹೋಗಿ ನೋಡು ಅವಳಿಹ ಜಾಗ.

ದೇಶಾಂತರ ಎತ್ತಲೊ ಮೂಲೆಯಲಿರುವೆ, ಹೋಗಲೆಂತು ?
ಮೂರು ಗಳಿಗೇ ಮಾತಲಿ, ಮುಗಿಯದು ಕರ್ತವ್ಯದ ಗಂಟು.

ಕೊಲದೆ ಬಿಡುವೆಯ ಸಾಕಿನ್ನು, ಚುಚ್ಚುವ ಮಾತನು ಬೆರೆಸಿ ?
ನಾನಲ್ಲ ನಿನ್ನಂತರಾತ್ಮ ಸರತಿ, ಚುಚ್ಚುತಿದೆ ನಿನ್ನಾತ್ಮಸಾಕ್ಷಿ.

– ನಾಗೇಶ ಮೈಸೂರು
೧೩.೦೫.೨೦೧೭
(ಮೇ ೧೪: ಅಮ್ಮಂದಿರ ದಿನ)

(Picture source : Creative Commons)

02039. ನಾಕುತಂತಿಯೊಂದು ಸಾಲು – ೬


02039. ನಾಕುತಂತಿಯೊಂದು ಸಾಲು – ೬
________________________________

(ನಾಕುತಂತಿ ಭಾಗ-೨)


ನಾಕುತಂತಿಯ ಎರಡನೇ ಭಾಗದಲ್ಲಿ ಕಂಡು ಬರುವ ಮುಖ್ಯ ಸಂವೇದನೆ ಸೃಷ್ಟಿಯ ತಾಂತ್ರಿಕ ವಿವರಣೆಯ ಕುರಿತದ್ದು. ಎರಡು ‘ನಾನು’ಗಳು (ಪುರುಷ – ಪ್ರಕೃತಿ) , ‘ನಾನು-ನೀನು’ ಎನ್ನುವ ಸಮಷ್ಟಿ ಭಾವದತ್ತ ನಡೆಸುವ ಪಯಣದ ಸೂಕ್ಷ್ಮರೂಪಿ ಕಥನ ಇಲ್ಲಿ ಅಡಕವಾಗಿದೆಯೆಂದು ನನ್ನ ಭಾವನೆ. ಏನನ್ನಾದರೂ ಸೃಷ್ಟಿಸಬೇಕಿದ್ದಲ್ಲಿ ನಡೆಸಬೇಕಾದ ಪ್ರಕ್ರಿಯೆ, ಹಾದುಹೋಗಬೇಕಾದ ಹಂತ, ಪ್ರಮುಖ ಘಟ್ಟಗಳ ಸೂಕ್ಷ್ಮಒಳನೋಟ ಇಲ್ಲಿನ ಮುಖ್ಯ ಅಂಶ. ಕವನದ ಮೊದಲ ಭಾಗದಲ್ಲಿ ಸೃಷ್ಟಿಯ ಹಿನ್ನಲೆ, ಉದ್ದೇಶದ ಮುಖ್ಯ ಭೂಮಿಕೆಯಿದ್ದರೆ ಎರಡನೇ ಭಾಗದಲ್ಲಿ ಅದು ಸಾಧಿತವಾಗುವ ಬಗೆಯ ತಾಂತ್ರಿಕ ಒಳನೋಟ ಪ್ರಮುಖವಾಗುತ್ತದೆ. ಈ ಸೃಷ್ಟಿಕ್ರಿಯೆಯ ವಿವರಣೆಯನ್ನು ಕಾವ್ಯಸೃಷ್ಟಿಯಂತಹ ಸೃಜನಾತ್ಮಕ ಪ್ರಕ್ರಿಯೆಗೆ ಬಳಸಿದಷ್ಟೇ ಸಹಜವಾಗಿ, ಜೀವಸೃಷ್ಟಿಯ ಮೂಲತಂತುವಾದ ಮಿಥುನದ ತಾಂತ್ರಿಕ ವಿವರಣೆಗೂ ಬಳಸಬಹುದೆನ್ನುವುದು ನಿಜಕ್ಕೂ ಸೋಜಿಗ. ಒಟ್ಟಾರೆ ಎಲ್ಲಾ ಸೃಷ್ಟಿಗಳ ಮೂಲದಲ್ಲಿ ಮಿಡಿವ ಅವೇ ನಾಕುತಂತಿಗಳ ಕಾರಣದಿಂದಾಗಿ, ಪ್ರತಿಯೊಂದರ ತಾಂತ್ರಿಕ ವಿವರಣೆಯನ್ನು ಅದೇ ಸಾಂಕೇತಿಕ ನೆಲೆಗಟ್ಟಿನಲ್ಲೆ ಅರ್ಥೈಸಿಕೊಳ್ಳಬಹುದು. ಆ ಎರಡೂ ಮಜಲನ್ನು ಸೇರಿದಂತೆ ಮತ್ತಷ್ಟು ಆಯಾಮಗಳನ್ನು ವಿಶ್ಲೇಷಿಸುವ ಒಂದು ಯತ್ನ ಮುಂದಿನ ಸಾಲುಗಳಲ್ಲಿ…

ಐದನೇ ಸಾಲು : ಗೋವಿನ ಕೊಡುಗೆಯ ಹಡಗದ ಹುಡುಗಿ ಬೆಡಗಿಲೆ ಬಂದಳು ನಡು ನಡುಗಿ
________________________________________________________________

ಗೋವಿನ ಕೊಡುಗೆ = ಹಾಲು, ಹಾಲಿನಂತೆ ಪರಿಶುದ್ಧ, ಹಾಲಿನಂತೆ ಶುದ್ಧ ಮನಸು, ಹಾಲಿನ ಬಣ್ಣ ; ಕರು,ಶಿಶು)
ಗೋವಿನ ಕೊಡುಗೆಯ = ಗೋವಿನಂತದ್ದೇ ಕೊಡುಗೆ ನೀಡಬಲ್ಲ (= ಶಿಶುವಿನ ಜನನಕ್ಕೆ ವೇದಿಕೆಯಾಗಿ, ಅದನ್ನು ಲಾಲಿಸಿ, ಪಾಲಿಸಿ ಹಾಲೂಡಿಸಿ ಪೋಷಿಸುವ ಮಾತೃರೂಪಿ ಹೆಣ್ಣು)
ಹಡಗದ ಹುಡುಗಿ = ಭವ್ಯತೆಯನ್ನು ಹಡಗಿನ ಗಾತ್ರ-ಗಂಭೀರ ಸ್ವಭಾವ-ಚಂಚಲತೆ-ಅಗಾಧತೆಗೆ ಹೋಲಿಸುವಿಕೆ.
ಬೆಡಗಿಲೆ ಬಂದಳು = ಬೆಡಗಿನಲೆ; ಸ್ತ್ರೀ ಸಹಜ ಬೆಡಗು-ವೈಯ್ಯಾರ ತೋರುತ್ತ ಬರುವುದು.
ಬೆಡಗು = ಒಗಟಿನ ಸ್ವರೂಪ (ಒಗಟಿನಂತೆ ಸುಲಭದಲ್ಲಿ ಬಿಡಿಸಲಾಗದ ಹೆಣ್ಣು ಮನಸು).
ನಡು ನಡುಗಿ = ನಡುಗುವಿಕೆ; ಆತಂಕದ ಅನಾವರಣದೊಂದಿಗೆ, ಏನಾಗುವುದೋ ಎನ್ನುವ ಭೀತಿಯ ಜತೆಗೆ ಮುಂದೆಜ್ಜೆಯಿಡುವುದು; ನಡು (ಸೊಂಟ) ನಡುಗಿ ಎಂದಾಗ ಬಳುಕುವ ನಡುವಿನ ಜತೆ ಬರುವ ಲಾಲಿತ್ಯದ ಉಲ್ಲೇಖವು ಹೌದು.
________________________________________________________________

ನನ್ನ ಟಿಪ್ಪಣಿ:

(ಗೋವಿನ ಕೊಡುಗೆಯ ಹಡಗದ ಹುಡುಗಿ ಬೆಡಗಿಲೆ ಬಂದಳು ನಡು ನಡುಗಿ)

ಗೋವಿನ ಕೊಡುಗೆಯ ಹಡಗದ ಹುಡುಗಿ :

ಗೋವೆನ್ನುವುದು ತಾಯಿಯ ಹಾಗೆ ಎಂದು ಹಿಂದೆಯೇ ನೋಡಿದ್ದೇವೆ. ಗೋವಿನ ಕೊಡುಗೆಯ ಎಂದಾಗ ಮಾತೆಯಿಂದ ಸೃಜಿಸಲ್ಪಟ್ಟ, ನೀಡಲ್ಪಟ್ಟ ಎನ್ನುವ ಅರ್ಥ ಸ್ಪುರಿಸುತ್ತದೆ. ತಾಯಿಯ ಮೂಲಕ ತಾನೇ ಮುಂದಿನ ಸಂತಾನ ಸೃಷ್ಟಿಯಾಗುವುದು ? ಹಾಗೆಯೇ ಗೋವಿನ ಕೊಡುಗೆ ಎಂದರೆ ಏನು ? ಎಂದು ಪ್ರಶ್ನಿಸಿದರೆ ತಟ್ಟನೆ ಮನಸಿಗೆ ಬರುವ ಮತ್ತೊಂದು ಉತ್ತರ ‘ಹಾಲು’ ಎನ್ನುವುದು. ಈ ಹಿನ್ನಲೆಯಲ್ಲಿ ನೋಡಿದರೆ ಹಾಲಿನಂತಹ ಬಣ್ಣದ, ಹಾಲಿನಂತಹ ಮನಸಿನ, ಹಾಲಿನಂತಹ ಸ್ವಚ್ಛತೆಯ ಪ್ರತೀಕದಂತಿದ್ದ ಹೆಣ್ಣು ಎನ್ನುವ ಭಾವ ಹೊರಡುತ್ತದೆ. ಇದ್ದನ್ನೇ ಕಾವ್ಯ ರಚನೆಗೆ ಸ್ಫೂರ್ತಿಯಾಗಿ ಬರುವ ಸ್ವಚ್ಛ ಮನಸಿನ ಕಾವ್ಯಕನ್ನಿಕೆಗೂ ಸಮೀಕರಿಸಬಹುದು. ಕಾವ್ಯವಾಗುವ ಹೊತ್ತಲ್ಲಿ ಬರುವ ಶುದ್ಧಸ್ಫೂರ್ತಿ, ಬರುವಾಗ ಕೇಳಿದ್ದೆಲ್ಲ ಕೊಡುವ ಕಾಮಧೇನುವಿನ ಕೊಡುಗೆಯಂತೆ ಪುಂಖಾನುಪುಂಖವಾಗಿ ಬರುವುದು ಸಹಜವೇ ಸರಿ.

‘ಗೋವಿನ ಕೊಡುಗೆಯ ಹಡಗದ ಹುಡುಗಿ’ ಎಂದಾಗ ಕಾಮಧೇನುವಿನಂತಹ ಕೇಳಿದ್ದು ಕೊಡಬಲ್ಲ, ಹಡಗಿನಂತಹ ಕಾಣಿಕೆಯಾಗಿ ಬಂದ ಹುಡುಗಿ ಎಂದರ್ಥೈಸುವುದು ಒಂದು ಬಗೆ (ಹಡಗು ಎಂದಾಗ ಅದರ ದೊಡ್ಡ ಆಕಾರ, ಗಾತ್ರ, ಸಂಕೀರ್ಣತೆ ಕಣ್ಮುಂದೆ ನಿಲ್ಲುತ್ತದೆ ; ಅಂತದ್ದೇ ದೊಡ್ಡ ಮನಸತ್ತ್ವದ, ಸಂಕೀರ್ಣ ಸ್ವರೂಪದ ಹೆಣ್ಣು ಅರ್ಥೈಸಬಹುದು). ‘ಹಡಗದ ಹುಡುಗಿ’ ಎಂದಾಗ ಹಡಗಿನಂತ ವ್ಯಕ್ತಿತ್ವದ ಹುಡುಗಿ ಎನ್ನಬಹುದು ; ಅಪಾರ ಜಲದ ಮೇಲೆ ತನ್ನೊಡಲಿನ ಭಾರಕ್ಕೆ ತಾನೇ ಮುಳುಗಿಹೋಗುವಂತೆ ಕಾಣುತ್ತಿದ್ದರು, ಯಾವುದೋ ಅಸೀಮ ಗಾಂಭೀರ್ಯದಿಂದ, ಮುಳುಗದೆ ಸ್ಥಿಮಿತದಲ್ಲಿ ಸಾಗುವ ಹಡಗು ಒಂದು ರೀತಿಯಲ್ಲಿ ತುಂಬು ಯೌವನದ ಸಂಕೇತವೆನಿಸುತ್ತದೆ. ತುಂಬಿ ತುಳುಕುವ ಯೌವನ ಹೊತ್ತ ಹಾಲಿನಂತ ( ಸ್ವಚ್ಛ ಮನಸಿನ, ಮುಗ್ದ) ಹುಡುಗಿ, ತನ್ನ ವಯೋಸಹಜ ಬಿಂಕ, ಬಿನ್ನಾಣ, ಬೆಡಗನ್ನು ಅನಾವರಣಗೊಳಿಸುತ್ತಾ , ವೈಯಾರದ ನಡು ಕುಣಿಸುತ್ತ, (ಹಡಗಿನ ಹಾಗೆ, ಮುಳುಗದೆ ಸಮತೋಲನದಲ್ಲಿ ತೇಲುತ್ತ) , ಕಂಪನದಿಂದ ನಡುಗುವ ನಡುವನು ಸಂಭಾಳಿಸಿಕೊಂಡು – ಆಹ್ಲಾದಕರವಾಗಿ ಸುಳಿದು ಬಂದಳು ಎನ್ನುವ ಭಾವ ಹೊರಡಿಸುತ್ತದೆ. ಒಟ್ಟಾರೆ ಈ ಸಾಲು ಪುರುಷವನ್ನರಸಿ ಹೊರಟ ಪ್ರಕೃತಿಯ ಪ್ರತೀಕವಾಗಿ ನಿಲ್ಲುತ್ತದೆ.

ಹಡಗು ಚಲಿಸುವುದು ಚಂಚಲವಾದ ಜಲರಾಶಿಯ ಮೇಲಾದ ಕಾರಣ, ನೀರಿನ ಏರಿಳಿತಕ್ಕನುಗುಣವಾಗಿ ತಾನೂ ತುಯ್ದಾಡುತ್ತ ಸಾಗುತ್ತದೆ. ಹಡಗಿಗೆ ಹೊಯ್ದಾಟವಿಲ್ಲದ ಭವ್ಯ ಸ್ಥಿರಾಕಾರವಿದ್ದರೂ ಅದು ತೇಲುವ ನೀರಿನ ಚಂಚಲ ಗುಣ ಅದಕ್ಕೂ ವರ್ಗಾಯಿಸಿಕೊಂಡುಬಿಡುತ್ತದೆ. ಆ ಚಂಚಲತೆಯ ಜತೆಯಲ್ಲೇ ತೇಲಿಕೊಂಡು ನಡೆಯುವುದು ಹಡಗಿನ ಸಹಜ ಸ್ವಭಾವ. ಹುಡುಗಿಯನ್ನು ಹಡಗಿಗೆ ಹೋಲಿಸಿದಾಗ ಅವಳ ಅಂತರಂಗ (ಮನಸು), ಹಡಗನ್ನು ತೇಲಿಸುವ ಜಲರಾಶಿಯಂತೆ ವರ್ತಿಸುತ್ತದೆ. ಮನಸು ಶರಧಿಯಂತೆ ಚಂಚಲವಾದ ಕಾರಣ ಹುಡುಗಿಯಲ್ಲೂ ಅದರ ಪರಿಣಾಮ ವರ್ಗಾವಣೆಯಾಗಿ ಅವಳ ನಡೆನುಡಿಗಳಲ್ಲಿ ವ್ಯಕ್ತವಾಗುತ್ತದೆ. ಸ್ಥಿರತೆ-ಶಂಕೆ-ನಂಬಿಕೆ-ಅಳುಕು-ಆತಂಕ-ಉಲ್ಲಾಸ-ಉತ್ಸಾಹ-ಖೇದ-ಆಮೋದ-ಶಕ್ತಿ-ಸಾಮರ್ಥ್ಯ ಇತ್ಯಾದಿ ಸ್ತ್ರೀ ಭಾವಗಳೆಲ್ಲವನ್ನು ಸಾಂಕೇತಿಕವಾಗಿ ಒಂದೇ ಹೋಲಿಕೆಯಲ್ಲಿ ಕಟ್ಟಿಕೊಡಬಲ್ಲ ಸ್ವರೂಪ – ಹಡಗಿನದು. ಹೀಗಾಗಿಯೇ ಅದರ ಹೋಲಿಕೆ ಇಲ್ಲಿ ಗಮನೀಯ ಮತ್ತು ಮಾರ್ಮಿಕವೆನಿಸುತ್ತದೆ.

ಬೆಡಗಿಲೆ ಬಂದಳು ನಡು ನಡುಗಿ :

ಈ ಹುಡುಗಿ ಬರುವಾಗ ಸುಮ್ಮನೆ ಬರುತ್ತಾಳೆಯೇ ? ಮೊದಲೇ ಹೆಣ್ಣು – ಅಂದ ಮೇಲೆ ಸ್ತ್ರೀತನಕ್ಕೆ ತಕ್ಕ ಹಾಗೆ ಬೆಡಗು, ಬಿನ್ನಾಣಗಳ ಸಮೇತ ತನ್ನ ಯೌವನದ ಬಳ್ಳಿಯಂತ ನಡುವನ್ನು ಬಳುಕಿಸಿಕೊಂಡೆ (ನಡುಗಿಸಿಕೊಂಡೆ) ಬರುತ್ತಾಳೆ; ಅಥವಾ ತನ್ನೆಲ್ಲಾ ವಯ್ಯಾರದ ನಡುನಡುವೆಯೂ ಮುಚ್ಚಿಡಲಾಗದ ಭೀತಿ ಮಿಶ್ರಿತ ಭಾವನೆಗಳನ್ನು ಪ್ರದರ್ಶಿಸುತ್ತ ಬರುತ್ತಾಳೆಂದು ಅರ್ಥೈಸಬಹುದು. ಹಾಗೆಯೇ ಗೋವಿನಂತಿದ್ದ ಸಾಧು ವ್ಯಕ್ತಿತ್ವಕ್ಕೂ ಕಾಮನೆಯ ಅಮಲೇರಿದಾಗ ಉಕ್ಕಿಬರುವ ಪ್ರೇರಣೆಯ ವ್ಯಕ್ತರೂಪ ಎಂದೂ ಅರ್ಥೈಸಬಹುದು.

ನಡುಗುವಿಕೆ ಎಂದಾಗ, ಆತಂಕದಲ್ಲಿ ಏನಾಗುವುದೋ ಎನ್ನುವ ಭೀತಿಯಲ್ಲೇ ಮುಂದೆಜ್ಜೆಯಿಡುವ ಭಾವ; ನಡು (ಸೊಂಟ) ನಡುಗಿ ಎಂದಾಗ, ಬಳುಕುವ ನಡುವಿನ ಜತೆ ಬರುವ ಲಾಲಿತ್ಯದ ಉಲ್ಲೇಖವು ಹೌದು. ಬಳುಕುವ ನಡುವಿನೊಡನೆ ಯಾವುದೋ ಭೀತಿ, ಅನುಮಾನ, ಆತಂಕದಲ್ಲಿ ಒಳಗೊಳಗೇ ನಡುಗುತ್ತ ಬರುವ ಚಿತ್ರಣ. ಸಖನ ಜೊತೆ ಅದರಲ್ಲೂ ಪ್ರಥಮ ಮಿಲನದ ಹೊತ್ತಲಿ ಇರುವ ಭಾವಗಳ ಸಮಾವೇಶ ಈ ಸಾಲು. ಕಾವ್ಯವೊಂದರ ಸೃಷ್ಟಿಯಲ್ಲೂ ಕಾವ್ಯಕನ್ನಿಕೆ (ಸ್ಫೂರ್ತಿ) ಇದೇ ಸ್ತ್ರೀಸಹಜ ಗುಣಗಳೊಂದಿಗೆ ಕಾಡುತ್ತ ಆವಾಹನೆಯಾಗುತ್ತಾಳೆ – ಸೃಷ್ಟಿಗೆ ಮುನ್ನುಡಿ ಬರೆಯುತ್ತ.

ಒಟ್ಟಾರೆ, ಸೃಷ್ಟಿಯೊಂದರ ತಾಂತ್ರಿಕ ಪ್ರಕ್ರಿಯೆಯ ಮುನ್ನುಡಿಯಲ್ಲಿರುವ ಕುತೂಹಲ ಮತ್ತು ಆತಂಕಗಳೆಲ್ಲದರ ಸಂಗ್ರಹಿತ ಭಾವ ಈ ಸಾಲಿನಲ್ಲಿ ಮೂಡಿಬಂದಿದೆ. ಹಾಗೆ ಮತ್ತೊಂದು ಗಮನೀಯ ಅಂಶ – ಇಲ್ಲಿ ಹೆಣ್ಣು ಗಂಡಿನೆಡೆಗೆ ಬರುತ್ತಿರುವ ಚಿತ್ರಣ; ನಮ್ಮ ಪುರಾತನ ಜ್ಞಾನದಲ್ಲಿ ಪ್ರಕೃತಿ ಚಲನಶೀಲ ಸ್ವರೂಪ; ಪುರುಷ ಜಡಚೇತನ. ಹೆಣ್ಣನ್ನು ಪ್ರಕೃತಿಯ ಸಂಕೇತವಾಗಿ ಉಲ್ಲೇಖಿಸುವುದರಿಂದ ಆ ಚಲನೆಯ ಅಂಶವು ಸಾಂಕೇತಿಕವಾಗಿ ಮೂಡಿ ಬಂದಿದೆ – ಹೆಣ್ಣಿನ ಬರುವಿಕೆಯ ಚಿತ್ರಣದಲ್ಲಿ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture : Wikipedia)