00237. ಕೋಳಿಕೆ ರಂಗನಾಟ…

00237. ಕೋಳಿಕೆ ರಂಗನಾಟ…
_____________________________

ನಾಳೆ ಅಂದರೆ ಇಪ್ಪತ್ತೊಂಭತ್ತು ಜುಲೈ ಕನ್ನಡಕ್ಕೊಬ್ಬನೆ ಕೈಲಾಸಂ ಎಂದೆ ಹೆಸರಾದ ಟೀ.ಪಿ. ಕೈಲಾಸಂ ಜನ್ಮದಿನವೆಂದು ಯಾಥಾರೀತಿ ನೆನಪಿಸಿ ಹೋಗಿತ್ತು ಕನ್ನಡ ಬಳಗದ ಸ್ನೇಹಿತರ ನೆನಪಿನೋಲೆ. ನಾವು ಓದುತ್ತಿದ್ದ ಕಾಲದಲ್ಲೆ ದಂತ ಕಥೆಯಾಗಿ ಹೋಗಿದ್ದ ಕೈಲಾಸಂ ನೆನಪುಗಳು ಆಗೆಲ್ಲಾ ಕಾಡುತ್ತಿದ್ದುದ್ದು ಅವರ ವಿಶೇಷ ರೀತಿಯ ಹಾಡುಗಳಿಂದಲೆ – ಅದರಲ್ಲೂ ಕೋಳೀಕೆ ರಂಗನಂತೂ ಕೇಳಿ ಮೆಚ್ಚದವನೆ ಇಲ್ಲವೆನ್ನುವಷ್ಟರ ಮಟ್ಟಿಗೆ. ದುರದೃಷ್ಟಕ್ಕೆ ನಾವಿದ್ದ ತಾಂತ್ರಿಕ ಅಧ್ಯಯನದಲ್ಲಿ ಕನ್ನಡದ ಕುರಿತಾದ ಒಡನಾಟ, ಅಭಿರುಚಿಗಳ ಅಭಿವ್ಯಕ್ತಿಯ ಸಾಧ್ಯತೆಗಳು ತೀರಾ ಕಡಿಮೆಯೆ ಎನ್ನಬೇಕು. ಸದ್ಯ ಆ ಹೊತ್ತಿನಲ್ಲೆಲ್ಲ ನಮ್ಮ ನೆರವಿಗೆ ಬಂದದ್ದು ಆಗ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಆಡಿಯೊ ಕ್ಯಾಸೆಟ್ಟುಗಳು; ಅನಂತ ಸ್ವಾಮಿ, ಅಶ್ವಥರ ಸುಮಾರು ಕ್ಯಾಸೆಟ್ಟುಗಳು ಆಗಾಗಲೆ ಮಾರುಕಟ್ಟೆಯಲ್ಲಿ ದಾಂಗುಡಿಯಿಟ್ಟು ಕನ್ನಡ ಸೌರಭವನ್ನು ಎಲ್ಲೆಡೆಗೂ ಪಸರಿಸುತಿದ್ದ ಕಾಲ. ಅದರಲ್ಲಿ ಅನಂತ ಸ್ವಾಮಿಯವರ ಕೆಲವು ಕ್ಯಾಸೆಟ್ಟುಗಳಲ್ಲಿದ್ದ ಕೈಲಾಸಂ ಹಾಡುಗಳೊ ನಮ್ಮ ಅಚ್ಚುಮೆಚ್ಚಿನ ಗಾನಗಳು.

ಆಗೆಲ್ಲ ಕೈಲಾಸಂ ಬಗೆ ಹೆಚ್ಚೇನೂ ಓದಿ ತಿಳಿದುಕೊಂಡಿರದಿದ್ದರೂ ಗೆಳೆಯರ ನಡುವಣ ಸಾಹಿತ್ಯಿಕ ಸಂಭಾಷಣೆಗಳಲೆಲ್ಲ ಅವರೊಬ್ಬ ವಿಭಿನ್ನ ತರದ ವ್ಯಕ್ತಿಯಾಗಿ ಹೊರಹೊಮ್ಮುತ್ತಿದ್ದುದು ಮಾತ್ರ ನಿಜ – ಅದರಲ್ಲೂ ದಂತ ಕಥೆಗಳ ರೂಪದಲ್ಲಿ. ‘ಅವರ ಕನ್ನಡಾ ಅಂದ್ರೆ ಕಬ್ಬಿಣದ ಕಡಲೆಯಂತೆ, ಯಾವ ನನ್ಮಗನೂ ಅಷ್ಟು ಸುಲಭವಾಗಿ ಅರ್ಥಮಾಡಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲವಂತೆ; ಅವರ ಹೆಸರನ್ನೆ ಸಿಗರೇಟಿನ ಹೊಗೆಯಲ್ಲಿ ಬರೆದು ತೋರಿಸೊ ಮಹಾನ್ ‘ಧೂಮ ಸೇತು’ ವಂತೆ; ಅವರು ಏನೂ ಬರೆದೆ ಇಲ್ಲವಂತೆ… ಆಗಾಗ ಅವರಾಡುತ್ತಿದ್ದ ಮಾತುಗಳನ್ನೆ ಅವರ ಹಿಂದೆ ಬಿದ್ದ ಗೆಳೆಯರು ಕಷ್ಟ ಪಟ್ಟು ಬರೆದುಕೊಂಡಿದ್ದಕ್ಕೆ ಈಗವೆಲ್ಲ ನಮಗೂ ಸಿಗಲೂ ಸಾಧ್ಯವಾಯ್ತಂತೆ; ಕಾನ್ಸ್ಟಾಂಟಿನೋಪಲ್ ಹಾಡನ್ನ ಕೇಳುತ್ತಲೆ ಕೈ ಚಿಟಿಕೆ ಹೊಡೆಯೋದರ ಒಳಗೆ ‘ಕೋಳಿಕೆ ರಂಗ’ವನ್ನಾಗಿಸಿ ಉದುರಿಸಿದ್ದಂತೆ’ – ಹೀಗೆ ಸಾಕಷ್ಟು ಅಂತೆ ಕಂತೆಗಳ ಜತೆಗೆ ನಮ್ಮ ಊಹಾಪ್ರಪಂಚದ ಮತ್ತಷ್ಟು ಉಪ್ಪುಕಾರಗಳನ್ನು ಹಚ್ಚಿಕೊಂಡು, ಕೈಲಾಸಂ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗೇರಿಸಿ ಎತ್ತರಕ್ಕೇರಿಸಿಕೊಂಡು ಖುಷಿ ಪಡುತ್ತಿದ್ದೆವು. ಸದ್ಯಕ್ಕೆ ಆಗ ಯಾರು ನಮ್ಮನ್ನು ಕೈಲಾಸಂ ಕುರಿತಾದ ಸಾಹಿತ್ಯದ ಕುರಿತಾಗಲಿ, ಅದನ್ನು ಓದಿದ್ದೀರ ಇಲ್ಲವಾ ಎಂದು ಪ್ರಶ್ನಿಸಲಿಲ್ಲವಾಗಿ ಬಚಾವಾಗಿದ್ದೆವು. ಇಲ್ಲದಿದ್ದರೆ ನಮ್ಮ ಬಂಡವಾಳವೆಲ್ಲ ಬರಿ ಆ ಕ್ಯಾಸೆಟ್ಟಿನಲ್ಲಿ ಕೇಳಿದ್ದ ಹಾಡುಗಳು ಮಾತ್ರ ಎಂದು ಯಾರದರೂ ಸುಲಭದಲ್ಲಿ ಹಿಡಿದು ಹಾಕಿಬಿಡಬಹುದಿತ್ತು – ಐದೆ ಕ್ಷಣಗಳಲ್ಲಿ !

ಮೈಸೂರು ಮಹಾರಾಜರ ಸೇವಾರ್ಥದಿಂದ ಇಂಗ್ಲೆಂಡಿಗೆ ಹೋಗಿ ಅಧ್ಯಯನ ಮಾಡುವ ಅವಕಾಶ ಪಡೆದ ಕೈಲಾಸಂ ತಮಗ್ಹಿಡಿಸಿದ ಆ ವಾತಾವರಣದಲ್ಲಿ ತಮ್ಮಿರುವಿಕೆಯನ್ನು ಎಷ್ಟು ಸಾಧ್ಯವೊ ಅಲ್ಲಿಯವರೆಗೆ ಏನಾದರೂ ಕಲಿಯುವ ನೆಪವೊಡ್ಡಿ ವಿಸ್ತಾರಿಸಿಕೊಂಡೆ ಹೋಗಿದ್ದರಂತೆ. ಕಡೆಗೂ ವಾಪಸ್ಸು ಬಂದು ಕೆಲಸ ಹಿಡಿದರೂ ಅಲ್ಲಿ ನಿಲ್ಲದ ಮನಸನ್ನು ತಹಬಂದಿಗೆ ತರಲಾಗದೆ ಕೊನೆಗೂ ತಮ್ಮ ಮನಸಿಗೆ ಅತೀವವಾಗಿ ಪ್ರಿಯವಾಗಿದ್ದ ನಾಟಕ ರಚನೆ ಇತ್ಯಾದಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪೂರ್ಣವಾಗಿ ಮುಳುಗಿಹೋಗುವ ಉದ್ದೇಶದಿಂದ ಕೆಲಸಕ್ಕೆ ತಿಲಾಂಜಲಿಯಿತ್ತುಬಿಟ್ಟರಂತೆ – ತಂದೆಯವರ ಮುನಿಸಿಗೂ ಪಾತ್ರರಾಗುತ್ತ. ಒಟ್ಟಾರೆ ಆ ನಿರ್ಧಾರ ಕನ್ನಡ ಸಾಹಿತ್ಯ ಲೋಕಕ್ಕೆ ವರವಾಗಿ ಪರಿಣಮಿಸಿದ್ದು ಈಗ ಇತಿಹಾಸ.

ನನಗೆ ತಿಳಿದಷ್ಟು ಮಟ್ಟಿಗಿನ ಪರಿಧಿ ಪರಿಮಿತಿಯಲ್ಲೆ ಆ ‘ಕನ್ನಡಕ್ಕೊಬ್ಬನೆ ಕೈಲಾಸಂ’ನ ಕುರಿತು ಈ ಪುಟ್ಟ ಕವನದೊಂದಿಗೆ ಹುಟ್ಟು ಹಬ್ಬದ ದಿನದ ನಮನ ಸಲ್ಲಿಸುತ್ತಿದ್ದೇನೆ 🙂

ಟೀ.ಪಿ. ಕೈಲಾಸಂ ನಮನ
_______________________

ಮಕ್ಕಳ್ ಸ್ಕೂಲ್ ಮನೇಲಲ್ವೆ?
ಎಲ್ಲೊ ಸದ್ದು ಕೇಳ್ದಂಗಿತ್ತು ;
ಅಮ್ಮಾವ್ರ ಗಂಡಾಂದ್ರು ತಪ್ಪೇನಿಲ್ವೆ –
ಯಾರೊ ಸುದ್ದಿ ಹೇಳ್ದಂಗಿತ್ತು;
ಮಾತ್, ಕಡ್ಲೆಬೀಜ ಕಬ್ಬಿಣದಲ್ಲೆ
ಹಲ್ಗ್ಯಾರೊ ಗುದ್ದಿ ಇಟ್ಟಂಗಿತ್ತು..
ಯ್ಯಾವೂರಣ್ಣ ಹೆಸರೇನೊ ಅಂದ್ರೆ
ಬರಿ ಸಿಗರೇಟ್ನಲ್ಲೆ ಸುಟ್ಟಂಗಿತ್ತು ! ||

ಪರ್ದೇಶುಕ್ಕೆಲ್ಲೊ ಹೋದಂಗಿತ್ತು
ಓದ್ಕೊಂಡಾಡ್ಕೊಂಡು ಬಂದಂಗಿತ್ತು
ಕಾನ್ಸ್ಟ್ಯಾಂಟಿನೋಪಲ್ ಅಂದಂಗಿತ್ತು
ಕೋಳಿಕೆರಂಗನೊದ್ದು ತಂದಂಗಿತ್ತು ||

ಇಲ್ಲೆ, ದೊಡ್ರಳ್ಳಿಲೀ ಹುಟ್ದಂಗಿತ್ತು
ಬ್ಯಾಡರಳ್ಳಿ ಸುತ್ಮುತ್ಲೆ ಬೆಳ್ದಂಗಿತ್ತು
ಹಾರ್ನಳ್ಳಿಲೆ ಮದ್ವೆ ಆದಂಗಿತ್ತು
ತಿಪ್ಪಾರಳ್ಳಿಲೂ ಮೊಖ ಕಂಡಂಗಿತ್ತು ||

ಹಳ್ಳಿ ಕಿಲಾಡಿ ಹುಂಜ ಅಂದಂಗಿತ್ತು
ದೊಡ್ಡ ಚೌಕದ್ ಮುಂದೆ ನಿಂತಂಗಿತ್ತು
ಬಾಯಿಗ್ ಬಂದಂಗೆ ಮಾತಾಡ್ದಂಗಿತ್ತು
ಬರ್ಕೋಂಡೋರ್ಯಾರೊ ಹಾಡ್ದಂಗಿತ್ತು ||

ಹೊಗೆಯಲ್ ಹೆಸರ ಬರ್ದಂಗಿತ್ತು
ಗೋಳ್ನಗೆಯಲ್ ಬದುಕ ಕಡದಂಗಿತ್ತು
ಭೂಗೋಳದ್ ಸಾವಾಸ ಬಿಟ್ಟಂಗಿತ್ತು
ನಾಟ್ಕದ್ ಬದ್ಕ ಕಟ್ಕೊಂಡಂಗಿತ್ತು ||

ಅಪ್ಪಂಗ್ ಗೋಲಿ ಹೊಡ್ದಂಗಿತ್ತು
ಸ್ವದೇಶಿ ಕೈಲಿ ಹಿಡ್ದಂಗಿತ್ತು
ಇಂಗ್ಲೀಷಲ್ಲು ದಿಲ್ ಬರ್ದಂಗಿತ್ತು
ಐವತ್ರಲ್ಲೂ ಐನೂರಿನ ಗಮ್ಮತ್ತು ||

ಕನ್ನಡಕೊಬ್ಬನೆ ಅಂದ್ರಲ್ಲ ಎಲ್ಲಾ
ಅವತ್ ಹೊಸ್ದಿದ್ದೆಲ್ಲ ಬರಿ ಹೊಸ್ತೆ ಎಲ್ಲ
ತಿಪ್ಪರ್ಲಾಗಕು ಅರ್ಥವಾಗದೆ ಸುಲಭ
ಟಿಪಿಕಲ್ ಟೀಪಿ ಕೈಲಾಸಂ ಆಗರ್ಭ ||

———————————————————————————–
ನಾಗೇಶ ಮೈಸೂರು, ಸಿಂಗಪುರ
———————————————————————————–

ಕನ್ನಡಕ್ಕೊಬ್ಬನೆ, ಕೈಲಾಸಂ, ಟಿಪಿಕಲ್, ಟೀಪಿ, ಮಕ್ಕಳ್, ಸ್ಕೂಲ್, ಮನೇಲಲ್ವೆ, ನಾಗೇಶ, ನಾಗೇಶಮೈಸೂರು, ನಾಗೇಶ ಮೈಸೂರು, nagesha, nageshamysore, nagesha mysore

ನಿಮ್ಮ ಟಿಪ್ಪಣಿ ಬರೆಯಿರಿ