00725. ಲೈಕು, ಕಾಮೆಂಟು, ಇತ್ಯಾದಿ


00725. ಲೈಕು, ಕಾಮೆಂಟು, ಇತ್ಯಾದಿ
___________________________


ಅವಳೆಂದಳು
ಎಂತಹ ಖದೀಮ ಜಗ ?
ರಾತ್ರಿಯೆಲ್ಲಾ ನಿದ್ದೆಗೆಟ್ಟೂ
ಕಣ್ಣೆಗೆ ಎಣ್ಣೆ ಬಿಟ್ಟು ಬರೆದರೂ
ಯಾರೂ ಉಸಿರೆತ್ತುವುದಿಲ್ಲ
ಲೈಕುಗಳಿಲ್ಲ ಕಾಮೆಂಟಿಲ್ಲ , ಗೊತ್ತಾ ?

ಅವನೆಂದ
ಅದೆ ಜಗದೊಳಗೀಗ
ಓದುಗರು ಬರೆವ ಜನರು
ಎಲ್ಲಾ ಬರೆಯುವವರು
ಹೊತ್ತೆಲ್ಲಿದೆ ಓದಿ ಆಸ್ವಾದಿಸೆ ?
ಇನ್ನು ಲೈಕು ಕಾಮೆಂಟಿಗೆ… ? ಸರಿ ಸರಿ..

ಆದರು ಬೀಳುವುದಷ್ಟೊಂದು
ಲೈಕು ಕಾಮೆಂಟುಗಳಲ್ಲೆಲ್ಲ
ಗುಟ್ಟೆ ಅರಿವಾಗದಲ್ಲ ?
– ಸುಲಭ ಸರಳದ ಮಾತುಗಳವು
ಓದೆ ತಲೆ ಕೆರಿಯಬೇಕಿಲ್ಲ
ಹೆಜ್ಜೆಯ ಓಟದ ಸದ್ದು ಅವಕೆ !

ಎಲ್ಲರು ಓದುವರು ಓಡುವರು
ಕಾಲದ ಹಿಂದೆ ದೇಕುತ್ತಾ
ಕಂಡಾಗೊಮ್ಮೆ ಕಣ್ಣು ಹಾಯಿಸಿ
ಒತ್ತಿ ಲೈಕು, ಮುಂದುವರೆಯುತ್ತ
ಬಿಡುವಿದ್ದಾಗ ಓದೊ ಹಂಬಲ ಚಿತ್ತ ;
ಹೊಸತಿನ ಸತತ ಬಿಡದೆ ಕಾಡುತ್ತ..

ಬಿಡು ಚಿಂತೆ ಓದಲಿ ಬಿಡಲಿ
ಬರೆವುದು ಮನಸಿನ ಪ್ರವೃತ್ತಿ
ಬಿಡುಗಡೆಯಾದರೆ ಸಾಕು ಒತ್ತಡ
ಮತ್ತೇನೂ ಬೇಡದೆ ಜಾಸ್ತಿ
ನಡುವೆ ಬಿದ್ದರೆ ಹೆಜ್ಜೆ ಗುರುತು
ಸಂಭ್ರಮಿಸಿ ಮುನ್ನಡೆ ಸಾಕಷ್ಟೆ ಸಂತೃಪ್ತಿ..

– ನಾಗೇಶ ಮೈಸೂರು

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

8 thoughts on “00725. ಲೈಕು, ಕಾಮೆಂಟು, ಇತ್ಯಾದಿ”

          1. ದಾರಿಯೆನ್ನುವ ಗಾಂಧಾರಿಯ
            ಕಣ್ಣ ಕಟ್ಟಿಬಿಟ್ಟಿದೆ ಗಾಢಾಂಧಕಾರ
            ಕಾಸಿನ ಝಣಝಣ ಕೇಳುತ
            ನಡೆಯಬಿಡದ ಕರ್ಮ ಸಿದ್ಧಾಂತ
            ಅತ್ತ ದಾರಿ ಇತ್ತ ಪುಲಿ ‘ನರ’ಹರಿಯೆ
            ಬರುವುದಾವ ದಾರಿಯ ಕಡೆಗೆ ತಿಳಿಯೆ !

            Like

          2. ನೇರವಾದ ದಾರಿಯಲ್ಲಿ ನಡೆ
            ಕೊನೆ ಮುಟ್ಟುವೆನೆಂಬ
            ಭರವಸೆಯ ಹೊತ್ತು
            ಆಗ ಇಲಿನೂ ಇಲ್ಲ
            ಪುಲಿನೂ ಇಲ್ಲ
            ಝಣ ಝಣ ಕಾಂಚಾಣ
            ತಾನಾಗೆ ಒಲಿದು ಬರುವುದು
            ಮಂಕುತಿಮ್ಮ☺

            Liked by 1 person

ನಿಮ್ಮ ಟಿಪ್ಪಣಿ ಬರೆಯಿರಿ