ಸಣ್ಣಕಥೆ: ಗಣಪತಿ ಚಪ್ಪರ..

‘ಸಿದ್ರಾಜಣ್ಣ.. ಯಾರೂ ಕಾಣ್ತಾ ಇಲ್ಲ..’ ಬೀದಿಯ ಎರಡೂ ಕೊನೆಗೆ ಕಣ್ಣು ಹಾಯಿಸಿ ಮೆಲ್ಲಗೆ ಪಿಸುಗುಟ್ಟಿದ ಚಿಕ್ಕಣ್ಣ..
ರಾತ್ರಿ ಹನ್ನೊಂದು ದಾಟಿಯಾಗಿತ್ತು.. ಕತ್ತಲು ಮುಸುಕಿ ಏನೂ ಕಾಣುತ್ತಿರಲಿಲ್ಲ.. ಜೊತೆಗೆ ಬೀದಿ ದೀಪಗಳಿಲ್ಲದೆ ‘ಗವ್ವೆನ್ನುವ’ ಗಾಢ ಕತ್ತಲ ರಾತ್ರಿ..
ಅದರ ಹಿಂದಿನ ದಿನ ರಾತ್ರಿಯಷ್ಟೆ ಆ ರಸ್ತೆಗೆ ಬಂದು, ಅಲ್ಲಿದ್ದ ಒಂದೇ ಒಂದು ಬೀದಿ ದೀಪದ ಬಲ್ಬಿಗೆ ಲಗೋರಿಯಂತೆ ಗುರಿಯಿಟ್ಟು ಕಲ್ಲು ಹೊಡೆದು ಪುಡಿ ಮಾಡಿದನೆಂಬ ಸಾಹಸವನ್ನು ಯಾರೊಡನೆಯು ಹೇಳುವಂತಿರಲಿಲ್ಲ ಸಿದ್ರಾಜು.. ಅವತ್ತು ಜೊತೆಗೆ ಬಂದಿದ್ದ ದೇವ್ರಾಜನಿಗು ಸಹ, ಯಾರಲ್ಲಾದರು ಬಾಯ್ಬಿಟ್ಟರೆ ಪೋಲಿಸರ ಕೈಗೆ ಸಿಕ್ಕಿ ಲಾತ ತಿನ್ನಬೇಕಾಗುತ್ತದೆಂದು ಹೆದರಿಸಿದ್ದು ಮಾತ್ರವಲ್ಲದೆ, ಅವನು ಬಲವಾಗಿ ನಂಬಿದ್ದ ಶನಿದೇವರ ಹೆಸರಿನಲ್ಲಿ ಆಣೆ ಮಾಡಿಸಿಕೊಂಡುಬಿಟ್ಟಿದ್ದ ಕಾರಣ ಅವನ ಬಾಯಿಯನ್ನು ಕಟ್ಟಿಹಾಕಿದಂತಾಗಿತ್ತು..
ಹಾಗೇನಾದರು ಬಾಯ್ಬಿಟ್ಟರೆ, ರಾಜಾ ವಿಕ್ರಮಾದಿತ್ಯನಿಗೆ ಕಾಡಿದ ಹಾಗೆ ಸಾಕ್ಷಾತ್ ಶನಿದೇವರೆ ದೇವ್ರಾಜನನ್ನು ಮತ್ತವನ ಕುಟುಂಬವನ್ನು ಕಾಡದೆ ಬಿಡುವುದಿಲ್ಲ ಎಂಬ ಹೆದರಿಕೆಯೆ ಅವನ ಹರಕು ಬಾಯನ್ನು ಮುಚ್ಚಿಸುವುದರಲ್ಲಿ ಯಶಸ್ವಿಯಾಗಿತ್ತು..
ಅವನ ಆ ಹರಕು ಬಾಯಿಯ ಕಾರಣದಿಂದಲೆ ಇವತ್ತಿನ ಸಾಹಸಕ್ಕೆ ಅವನಿರುವುದು ಬೇಡ ಎಂದು ನಿರ್ಧರಿಸಿ , ಅವನಿಗೆ ಗೊತ್ತಾಗದಂತೆ ಬಂದಿದ್ದರು – ಮಿಕ್ಕ ಮೂವರೊಡನೆ.. ಆದರೆ ಈ ಜಾಗದಲ್ಲಿ ಮಾತ್ರ ಚಿಕ್ಕಣ್ಣನೊಬ್ಬನೆ ಜೊತೆಯಾಗಿ ಬಂದಿದ್ದ.. ಮಿಕ್ಕವರು ರಾಜ, ಕುಮಾರ, ಸ್ವಾಮಿ – ಒಂದು ಫರ್ಲಾಂಗ್ ದೂರದಲ್ಲಿ ರಸ್ತೆ ಬದಿಯಲ್ಲಿ ಗುಟ್ಟಾಗಿ ಕಾಯುತ್ತಿರಬೇಕೆಂದು ತಾಕೀತು ಮಾಡಲಾಗಿತ್ತು.. ಅವರಿಗು ತಾವು ಮಾಡಹೊರಟಿರುವ ಸಾಹಸದ ಸಂಪೂರ್ಣ ವಿವರದ ಅರಿವಿರಲಿಲ್ಲ.. ಚಿಕ್ಕಣ್ಣ ಬಂದು ಏನೋ ಹೇಳುತ್ತಾನೆ, ಅದರಂತೆ ನಡೆದುಕೊಳ್ಳಬೇಕೆಂದಷ್ಟೆ ಗೊತ್ತಿದ್ದುದ್ದು..
‘ಸರಿ ಚಿಕ್ಕಣ್ಣ.. ನಾನು ಹೇಳಿದ್ದೆಲ್ಲ ಗ್ಯಾಪ್ಕ ಐತೆ ತಾನೆ..?’ ಕೇಳಿದ ಸಿದ್ರಾಜಾ..
‘ಹೂ ಕಣಣ್ಣ.. ಚೆನ್ನಾಗಿ ಗ್ಯಾಪ್ಕ ಐತೆ..’
‘ಎಲ್ಲಿ ಒಂದ್ಸಾರಿ ವದರ್ಬಿಡು ನೋಡೋಣ..?’
‘ಹೂಂ.. ನಾನು ಇಲ್ಲಿ ನಿಂತ್ಕಂಡು ಯಾರಾದ್ರು ವೊಯ್ತಾರ, ಬತ್ತಾರ ನೋಡ್ಕೊಂಡು ಹೇಳ್ತಾ ಇರ್ಬೇಕು.. ಯಾರೂ ಇಲ್ಲ ಅಂದಾಗ ಸಿಗ್ನಲ್ ಕೊಡಬೇಕು.. ಆಗ ನೀನು ಮೇಲಿಂದ ಗರಿ ಕಟ್ ಮಾಡಿ ಎಸಿತೀಯಾ.. ಅದನ್ನ ಕೆಳಗೆ ಬೀಳ್ತಾ ಇದ್ದಂಗೆ ಇಡ್ಕೊಂಡು, ಎಳ್ಕೊಂಡೋಗಿ ಅವ್ರು ಮೂರು ಜನಾನು ನಿಂತಿರೊ ಕಡೆ ಅವರ ಕೈಗೆ ಕೊಟ್ಬುಟ್ಟು, ‘ತಕ್ಕೊಂಡ್ ಮನೆ ಕಡೆ ಓಡ್ರುಲಾ’ ಅಂತ ಹೇಳಿ ವಾಪಸ್ ಬರ್ಬೇಕು..’ ತಾನು ಮನವರಿಕೆ ಮಾಡಿಕೊಂಡಿದ್ದನ್ನು ಚಾಚೂ ತಪ್ಪದ ಹಾಗೆ ಪುನರುಚ್ಚರಿಸಿದ ಚಿಕ್ಕಣ್ಣ..
ಎಲ್ಲ ಸರಿಯಾಗಿ ನೆನಪಿಟ್ಟುಕೊಂಡಿದಾನೆ ಎಂದು ನಿರಾಳವಾಯ್ತು ಸಿದ್ರಾಜನಿಗೆ.. ಚಿಕ್ಕವನಾದರು ಕಿಲಾಡಿ ಮತ್ತು ಧೈರ್ಯವಂತ ಅನ್ನುವ ಕಾರಣದಿಂದಾಗಿಯೆ ಅವನನ್ನು ಕರೆದುಕೊಂಡು ಬಂದಿದ್ದ..
‘ಏಯ್ ಚಿಕ್ಕಾ..’
‘ಸರೀಗ್ ಹೇಳಿದ್ನಾ ಸಿದ್ರಾಜಣ್ಣ..?’
‘ಸರೀಗೆ ಹೇಳಿದ್ದೀಯಾ.. ಒಂದ್ ಗ್ಯಾಪ್ಕ ಇಟ್ಕೊ..’
‘ಏನು?’
‘ನಾನು ತೆಂಗಿನ ಮರದ ಮೇಲೆ ಹತ್ತಿ ಗರಿ ಕಟ್ ಮಾಡೋವಾಗ ಯಾರಾದ್ರು ಓಡ್ಸೋಕೆ ಬಂದ್ರೆ, ನಾನು ಇಳಿಯೋತನ್ಕ ಕಾಯ್ಬೇಡ..’
‘ಮತ್ತೆ?’
‘ಮೊದ್ಲು ನೀನು ಪೋಟ್ ವೊಡುದ್ಬುಡು.. ವೋಗ್ತಾ ಆ ಮೂರು ಜನಕ್ಕು ಸಿಗ್ನಲ್ ಕೊಟ್ಟು , ಎಲ್ಲಾ ರಾಮಂದ್ರದತ್ರ ಓಡೋಗ್ಬುಡಿ..’
‘ನೀನು..?’
‘ನಾನು ಅಲ್ಲಿಗೆ ಬತ್ತೀನಿ ಆಮ್ಯಾಕೆ..’
‘ಸರಿ ಸಿದ್ರಾಜಣ್ಣ.. ಶುರು ಅಚ್ಕಳವಾ?’ ಎಂದು ಮುಖ್ಯ ಕಾರ್ಯಕ್ಕೆ ನಾಂದಿ ಹಾಡಿದ ಚಿಕ್ಕಣ್ಣ..
ಮತ್ತೊಮ್ಮೆ ಸುತ್ತ ಮುತ್ತ ನೋಡಿದ ಸಿದ್ರಾಜ, ‘ಸರಿ ಬಾ’ ಎನ್ನುತ್ತ ಆ ಪುಟ್ಪಾತಿನ ಬದಿಯಲ್ಲೆ ಅಂಟಿಕೊಂಡಂತಿದ್ದ ಕಾಂಪೌಡಿನ ಪಕ್ಕದಲ್ಲೆ ನಡೆಯತೊಡಗಿದ.. ಕಾಂಪೌಂಡಿನ ಆಚೆ ಬದಿಯಲ್ಲಿ ಉದ್ದಕ್ಕು , ಎತ್ತರವಾಗಿ ಬೆಳೆದಿದ್ದ ತೆಂಗಿನ ಮರಗಳು.. ಗಾಜಿನ ಮೊನೆಗಳನ್ನು ಹರಡಿದ್ದ ಕಾಂಪೌಂಡಿನ ಮೇಲಿಂದ ಯಾವುದನ್ನು ಹತ್ತಿದರೆ, ಗರಿಗಳನ್ನು ಸುಲಭವಾಗಿ ತರಿದು ರಸ್ತೆಯ ಕಡೆ ಎಸೆಯಬಹುದೊ, ಅಂಥಹ ಮರವನ್ನೆ ಆರಿಸಿಕೊಳ್ಳಬೇಕಿತ್ತು.. ಗರಿ ಕಾಂಪೌಂಡಿನ ಒಳಗೇ ಬಿದ್ದರೆ ಸುಖವಿರಲಿಲ್ಲ.. ಅದಕ್ಕಾಗೆ ಸರಿಯಾದ ಮರವನ್ನು ಹುಡುಕುತ್ತಿತ್ತು ಸಿದ್ರಾಜನ ಹದ್ದಿನ ಕಣ್ಣು..
‘ಅಣ್ಣೋ.. ಇಲ್ನೋಡಣ್ಣ.. ಮೂರ್ನಾಲ್ಕು ಮರದ ಗರಿಗಳು ಇತ್ಕಡೆಗೆ ವಾಲ್ಕೊಂಡವೆ.. ಇವುನ್ನತ್ಬೌದಾ ನೋಡಣ್ಣ..’ ಎಂದು ಒಂದು ಗುಂಪಿನತ್ತ ಬೆಟ್ಟು ಮಾಡಿ ತೋರಿಸಿದ ಚಿಕ್ಕ.. ಸಿದ್ರಾಜನಿಗು ಅವು ಸೂಕ್ತವಾಗಿವೆ ಅನಿಸಿತು.. ‘ಸರಿ ಕಣ್ಲಾ.. ಆ ಮರಕ್ಕೆ ಅತ್ತವಾ..’ ಅಂದವನೆ ಹನುಮಂತನ ಹಾಗೆ ಲಾಘವದಲ್ಲಿ, ಕಾಂಪೌಂಡಿನ ಮೇಲ್ತುದಿಯ ಬದಿಯಲ್ಲಿ ಕೈಯಿಟ್ಟವನೆ, ಒಂದು ಸಣ್ಣ ‘ಹೈ ಜಂಪ್’ ಹೊಡೆದು ಕಾಂಪೌಂಡಿನ ಆ ಬದಿಗೆ ಸೇರಿಕೊಂಡ.. ಹಾಗೆ ಜಿಗಿಯುವಾಗಲು, ಸೊಂಟದ ಮೇಲೆ ಒಂದು ಕೈಯಿ ಬಿಗಿಯಾಗಿ ಇಟ್ಟುಕೊಂಡೆ ನೆಗೆದಿದ್ದ – ಅಲ್ಲಿ ಸೊಂಟಕ್ಕೆ ಕಟ್ಟಿಕೊಂಡಿದ ಗರಿ ಕತ್ತರಿಸುವ ಮಚ್ಚು ಬಿದ್ದು ಹೋಗದ ಹಾಗೆ..
ಅಲ್ಲಿಂದ ಮುಂದಿನ ಕೆಲಸ ಸರಾಗವಾಯ್ತು.. ಇಂಥಹ ನೂರಾರು ಮರ ಹತ್ತಿ ಅನುಭವವಿದ್ದ ಸಿದ್ರಾಜ, ಉಡದಂತೆ ತೆಂಗಿನ ಮರದ ಕಾಂಡವನ್ನು ಅಪ್ಪಿ ಹಿಡಿದವನೆ, ಕಪ್ಪೆಯಂತೆ ಕುಪ್ಪಳಿಸಿಕೊಂಡು ಮರದ ಮೇಲಕ್ಕೆ ಸಾಗತೊಡಗಿದ.. ಕೆಲವೇ ನಿಮಿಷಗಳಲ್ಲಿ ಮೇಲ್ತುದಿ ತಲುಪಿದವನೆ, ಸೊಂಟದಿಂದ ಮಚ್ಚಿನಿಂದ ಅಲ್ಲಿದ್ದ ಗರಿಯ ಬುಡದತ್ತ ಸಾಧ್ಯವಾದಷ್ಟು ನಿಶ್ಯಬ್ಧವಾಗಿ ಕೊಚ್ಚಿ ಬೇರ್ಪಡಿಸತೊಡಗಿದ.. ಮೊದಲೆ ಹರಿತವಾಗಿದ್ದ, ಕೊಡಲಿಯಂಥಹ ಮಚ್ಚು.. ಜೊತೆಗೆ ಸಾಮು ಮಾಡಿ ಶಕ್ತಿಯುಕ್ತವಾಗಿದ್ದ ತೋಳುಗಳು.. ಎರಡು, ಮೂರೇಟಿಗೆ ಗರಿ ತನ್ನ ಬುಡ ಕತ್ತರಿಸಿಕೊಂಡು ಗುರುತ್ವದ ಸೆಳೆತಕ್ಕೆ ಸಿಕ್ಕಿ ನೆಲದತ್ತ ಧಾವಿಸಿ, ಕಾಂಪೌಂಡನ್ನು ತರಚಿಕೊಂಡೆ ಕೆಳಗೆ ಬಂದು ಬಿತ್ತು.. ಮೊದಲ ಗರಿಯ ಅಂದಾಜು ಸಿಕ್ಕುತ್ತಿದ್ದಂತೆ ಮುಂದಿನ ಕೆಲಸ ಇನ್ನೂ ಸುಲಭವಾಗಿ, ಮಿಕ್ಕ ಗರಿಗಳನ್ನು ಕಚಕಚನೆ ಕೊಚ್ಚತೊಡಗಿದ ಸಿದ್ರಾಜ..
ಎರಡನೆ ಗರಿಯೂ ಕೆಳಗೆ ಬೇಳುತ್ತಿದ್ದಂತೆ, ಅವೆರಡನ್ನು ಅದರ ಹಾವಿನ ಹೆಡೆಯಾಕಾರದ ಬುಡದಲ್ಲಿ ಹಿಡಿದು ಕಂಕುಳಲ್ಲಿ ಸಿಕ್ಕಿಸಿಕೊಂಡವನೆ, ಸಾಧ್ಯವಾದಷ್ಟು ಸದ್ದಾಗದಂತೆ ಓಡತೊಡಗಿದ ಚಿಕ್ಕಣ್ಣ.. ಹಸಿರು ಗರಿಯಾದ ಕಾರಣ ಅದರ ಚರಪರ ಸದ್ದನ್ನು ನಿಲ್ಲಿಸುವಂತಿರಲಿಲ್ಲ.. ಹೀಗಾಗಿ ಓಡುವುದನ್ನೆ ಸ್ವಲ್ಪ ನಿಧಾನಗತಿಯಲ್ಲಿ ನಡೆಸಬೇಕಿತ್ತು.. ಆದಷ್ಟು ಬೇಗನೆ ಆ ಮೂವರು ನಿಂತಿದ್ದ ಕಡೆಗೆ ನಡೆದವನೆ ಕುಮಾರನನ್ನು ಕರೆದು, ಅವೆರಡು ಗರಿಗಳನ್ನು ಎಳೆದುಕೊಂಡು ರಾಮಂದ್ರದ ಹಿಂದಿರುವ ಗಲ್ಲಿಯಲ್ಲಿ ಹಾಕಿ ಬರಲು ಸೂಚಿಸಿದ ನಂತರ, ಅಲ್ಲೆ ಇದ್ದ ರಾಜಾ, ಸ್ವಾಮಿಯನ್ನು ಜತೆಗೆ ಕರೆದುಕೊಂಡು ಹೊರಟ..
ಅವರು ಮತ್ತೆ ವಾಪಸ್ಸು ಬರುವ ಹೊತ್ತಿಗೆ ಈಗಾಗಲೆ ಮತ್ತೆ ಆರು ಗರಿಗಳು ಕತ್ತರಿಸಿ ಬಿದ್ದಿದ್ದವು.. ತುಂಬಿಕೊಂಡಂತಿದ್ದ ಆ ಮರಗಳು ಪೂರ್ತಿ ಖಾಲಿ ಕಾಣಬಾರದೆಂದು ಇದ್ದ ಹದಿನಾರು ಗರಿಗಳಲ್ಲಿ ಎಂಟನ್ನು ಮಾತ್ರ ತರಿದು ಬೀಳಿಸಿದ್ದನಾದರು, ಅದಾಗಲೆ ಬೋಳು ಬೋಳಾದಂತೆ ಅನಿಸುತ್ತಿತ್ತು , ಆ ಕತ್ತಲಲ್ಲು.. ಇವರು ಬರುವ ಹೊತ್ತಿಗೆ ಸರಿಯಾಗಿ ಆ ಮೊದಲ ಮರದಿಂದ ಕೆಳಗಿಳಿದು ಬಂದ ಸಿದ್ರಾಜ, ಗರಿಯ ಜೊತೆಗೆ ತಾನು ಕೆಡವಿದ್ದ ಒಂದಷ್ಟು ಎಳನೀರನ್ನು ಹುಡುಕಿ ತಂದು ಗರಿಯ ಹತ್ತಿರ ಪೇರಿಸಿಟ್ಟ.. ಈಗ ಆ ಮೂವರಿಗು ಏನು ಮಾಡಬೇಕೆಂದು ಗೊತ್ತಾಗಿತ್ತು.. ಒಬ್ಬೊಬ್ಬರು ಎರಡೆರಡು ಗರಿಯ ಜೊತೆಗೆ ಗಂಟು ಕಟ್ಟಿದ ಎರಡೆರಡು ಎಳನೀರನ್ನು ಕುತ್ತಿಗೆಗೆ ನೇತು ಹಾಕಿಕೊಂಡವರೆ ಅಲ್ಲಿಂದ ಹೊರಡಲನುವಾದರು..
‘ಬಡ್ಡೆತ್ತವಾ.. ಹುಸಾರು.. ಎಳ್ನೀರು ಅಂತ ಕುಡ್ದುಗಿಡ್ದು ಬಿಟ್ಟೀರಾ! ಎಲ್ಲಾ ಲೆಕ್ಕ ಐತೆ ನನ್ನತ್ರ.. ನಾ ಬರೊಗಂಟಾ ಹಂಗೆ ಮಡ್ಗಿರಬೇಕು..ಗರಿ ಆ ಗಲ್ಲಿಲಿ ಎಸೆದು ತಿರ್ಗಾ ಬನ್ನಿ..’ ಎಂದ ಸಿದ್ರಾಜನ ಮಾತಿಗೆ ತಲೆಯಾಡಿಸಿ ರಸ್ತೆಯಲ್ಲಿ ಚರಪರ ಸದ್ದಾಗಿಸುತ್ತ ಗರಿಯೆಳೆದುಕೊಂಡು ಕತ್ತಲಲ್ಲಿ ಮಾಯವಾದರು..
ಅವರತ್ತ ಹೋದಂತೆ , ಚಿಕ್ಕಣ್ಣನ ಜೊತೆ ಮತ್ತೊಂದು ಹತ್ತಡಿ ದೂರದಲ್ಲಿದ್ದ ಇನ್ನೊಂದು ಮರವನ್ನು ಹುಡುಕಿ, ಅದರ ಮೇಲೆ ಹತ್ತಿದವನೆ ಮತ್ತಷ್ಟು ಗರಿಗಳನ್ನು , ಎಳನೀರನ್ನು ಕೆಡವತೊಡಗಿದ.. ಕೆಡವಿದಂತೆಲ್ಲ, ಅದನ್ನೆಳೆದುಕೊಂಡು ಎದುರು ಬದಿಯ ಪುಟ್ಪಾತಿನಲ್ಲಿ ತಂದು ಹಾಕತೊಡಗಿದ ಚಿಕ್ಕಣ್ಣ.. ಅಲ್ಲು ಎಂಟು ಗರಿಗಳು ಮತ್ತು ಹತ್ತು ಎಳನೀರು ಬುರುಡೆಗಳನ್ನು ಕಡಿದು ಹೆಚ್ಚು ಸದ್ದಾಗದಂತೆ ಮಣ್ಣಿನ ಗುಡ್ಡೆಯೊಂದರ ಮೇಲೆ ಎಸೆದ ಸಿದ್ರಾಜ, ‘ಇನ್ನು ಹೆಚ್ಚು ಕೀಳಲಾಗದು ಆ ಮರದಿಂದ’ ಎನಿಸಿದಾಗ , ಅಲ್ಲಿಂದ ಕೆಳಗಿಳಿದು ಬಂದವನೆ ಎಳನೀರನು ಜೋಡಿ ಕಟ್ಟತೊಡಗಿದ..
‘ಸಾಕಲ್ವೇನ್ಲಾ ಗರಿಗಳು?’
‘ಹು ಕಣಣ್ಣ.. ಚಪ್ರ ಆಕಕ್ ಇನ್ನೆಷ್ಟು ಬೇಕು..? ಇದುನ್ನೆ ಸರ್ಯಾಗಿ ಎಣ್ದು ಹಾಕುದ್ರೆ ಪೆಂಡಾಲ್ ಪೂರ್ತಿ ಆಗಿ, ಬಾರ್ಡರ್ಗು ಅರ್ಧರ್ಧ ಕಟ್ಕೊಬೋದು.. ಮುಂದಾಗಡೆ ಕಮಾನು ತರನು ಕಟ್ಕೋಬೋದು..’
‘ಸರಿ ಸರಿ.. ಎಲ್ಲಾ ಜೋಡಿಸ್ಕೊ.. ಅವ್ರು ಬರ್ತಿದ್ದಂಗೆ ತೊಗೊಂಡು ವೋಗವಾ.. ಬೊಂಬೆಲ್ಲ ರೆಡಿಯಾಯ್ತಾ?’
‘ಶಿವಣ್ಣ ಮಾಲಿಂಗಣ್ಣಂಗೆ ಹೇಳಿ ಇಪ್ಪತ್ ಬೊಂಬು ಕೊಡುಸ್ದಾ ಸಿದ್ರಾಜಣ್ಣ.. ಮಾಲಿಂಗಣ್ಣ ದಿನುಕ್ಕೆಂಟಾಣೆ ಬಾಡ್ಗೆ ಕೇಳುದ್ನಂತೆ.. ಅದುಕ್ಕೆ ಶಿವಣ್ಣ ಇದ್ಕೊಂಡು, ಬಾಡ್ಗೆ ಗೀಡ್ಗೆ ಬ್ಯಾಡ – ಇದುನ್ನೆ ನಿನ್ನ ಸೇವಾರ್ಥ ಅಂಥ ಬರ್ಕೋತೀವಿ.. ದೇವುರ್ ಕೆಲಸ.. ಇಲ್ಲ ಅನ್ನಬ್ಯಾಡ..ಆಂದಿದ್ದುಕ್ಕೆ ಒಪ್ಕೊಂಡ್ನಂತೆ..’ ಚಿಕ್ಕಣ್ಣ ತನಗೆ ಗೊತ್ತಿದ್ದ ವರದಿಯ ಸಾರಾಂಶವನ್ನು ಒಪ್ಪಿಸಿದ..
‘ಸರಿ ಬುಡು.. ಅಲ್ಲಿಗೆ ಸರಿ ಹೋಯ್ತಲ್ಲ..? ಇನ್ನೇನು ಬೇಕಂತೆ..?’
‘ದೊಡ್ದೆರಡು ಚಿಕ್ದೆರಡು ಬಾಳೆ ಕಂಬ ಬೇಕಂತೆ.. ಸಣ್ಣಕ್ಕ ಅವಳ ತೋಟದಲ್ಲೈತೆ ಕೊಡ್ತೀನಿ ಅಂದವಳೆ..’
‘ಸರಿ.. ಈ ಎಳ್ನೀರ್ನೆಲ್ಲ ಪೂಜೆಗಿಡವ.. ತೀರ್ಥ ಕೊಟ್ಟಂಗೆ ಕೊಡಬೌದು.. ಎಲ್ಲಾ ಸರಿ ಗಣ್ಪತಿ ವಿಗ್ರಹದ್ದು ಸೇವಾರ್ಥಾ ಯಾರದು?’
‘ಅಣ್ಣೋ ಗಣೇಶನ್ನ ಆಗ್ಲೆ ಕುಂಬಾರ್ ಕೊಪ್ಲಲ್ಲಿ ಬುಕ್ ಮಾಡವ್ರೆ.. ತಿಂಗ್ಳಾ ಮೊದಲೆ ಅಡ್ವಾನ್ಸ್ ಕೊಟ್ ಬಂದಿದ್ರು.. ಕಲೆಕ್ಸನ್ ದುಡ್ಡಲೆ ತತ್ತೀವಿ ಅಂತಿದ್ರು.. ಈ ಸಾರಿ ದೊಡ್ ಗಣ್ಪತಿನೆ ಮಾಡುಸ್ತಾವ್ರಂತೆ ಕಣಣ್ಣ.. ಹೋದ್ಸಾರಿಗಿಂತ ಎರಡಡಿ ಜಾಸ್ತಿನೆ ಅಂತೆ..’ ಉದ್ವೇಗ, ಉತ್ಸಾಹದಲ್ಲಿ ನುಡಿದ ಚಿಕ್ಕ..
‘ಸರಿ ಬಿಡು .. ಅಲ್ಲಿಗೆ ಎಲ್ಲ ಇದ್ದಂಗಾಯ್ತು.. ಮೈಕ್ ಬೇಕಾದ್ರೆ ನಾನು ವಯಿಸ್ಕೋತೀನಿ.. ದಿನ್ದಿನದ ಪೂಜೆಗು ಯಾರ್ದಾದ್ರು ಸೇವಾರ್ಥ ಇರುತ್ತೆ.. ಈ ಸಾರಿ ಗ್ರಾಂಡಾಗೆ ಮಾಡಾಣ, ಗಣೇಸುನ್ನಾ..’ ಎನ್ನುತ್ತ ಬೀಡಿ ಹಚ್ಚಿಕೊಂಡ ಸಿದ್ರಾಜ..
ಅಷ್ಟು ಹೊತ್ತಿಗೆ ಮಿಕ್ಕ ಆ ಮೂವರು – ರಾಜಾ, ಕುಮಾರ, ಸ್ವಾಮಿ, ವಾಪಸ್ಸು ಬರುತ್ತಿರುವುದು ಕಾಣಿಸಿತು. ಅಲ್ಲಿಗೆ ಐದು ಜನರಾಯ್ತು – ಹತ್ತು ಗರಿಗೆ ಸರಿಹೋಯ್ತು.. ಎಳನೀರ ಬುರುಡೆಗಳು ಹೇಗು ಕತ್ತಲ್ಲಿ ನೇತಾಡುತ್ತವೆ..
ಎಲ್ಲರು ಬಂದು ಗರಿಗಳನ್ನು ಬುರುಡೆಯನ್ನು ಎತ್ತಿಕೊಳ್ಳುವ ಹೊತ್ತಿಗೆ ನಡುನಡುವೆ ಒಂದೆರಡು ವಾಹನಗಳು ಹಾದು ಹೋಗಿದ್ದವು.. ಸಿದ್ರಾಜ ಬೇಗ ಹೊರಡಲು ಅವಸರಿಸತೊಡಗಿದ.. ಅಷ್ಟೊತ್ತಿಗಾಗಲೆ ಮಧ್ಯರಾತ್ರಿಯೂ ದಾಟಿತ್ತು.. ಅದೇ ಹೊತ್ತಿಗೆ ಅಲೆಲ್ಲಿಂದಲೊ ದೂರದಿಂದ ಬೀಟ್ ಪೋಲಿಸಿನವರ ಸಿಳ್ಳೆಯ ಸದ್ದು ಕೇಳಿಸಿತು..
‘ಏಯ್ ಬಡ್ಡೆತ್ತವಾ.. ಬೀಟ್ ಪೋಲಿಸ್ ಬತ್ತಿರಂಗಯ್ತೆ… ಎತ್ಕೊಂಡ್ ಓಡ್ರೋ ಬಿರ್ಬಿರ್ನೆ..’ ಎಂದದ್ದೆ ತಡ ಎಲ್ಲಾ ಎಡ ಬಲ ನೋಡದೆ ತಂತಮ್ಮ ಗರಿಗಳನ್ನು ಎಳೆದುಕೊಂಡು, ಎಳನೀರು ಬುರುಡೆಗಳನ್ನು ನೇತು ಹಾಕಿಕೊಂಡವರೆ ವಾಟೆ ಕಿತ್ತರು.. ಆ ಗಡಿಬಿಡಿಯಲ್ಲಿ ಅವರಲ್ಲೆ ಬಿಟ್ಟು ಹೋದ ಒಂದೆರಡು ಬುರುಡೆಗಳನ್ನು ಎತ್ತಿ ನೇತು ಹಾಕಿಕೊಂಡು, ತಾನು ಎರಡು ಗರಿಗಳನ್ನು ಎಳೆದುಕೊಂಡು ಅವರನ್ನು ಹಿಂಬಾಲಿಸಿದ ಸಿದ್ರಾಜ..
‘ಏನ್ರಲಾ ಈ ಸಾರಿ ಭಾರಿ ದೊಡ್ ಗಣ್ಪತಿ ಕೂರುಸುಬುಟ್ಟಿವ್ರಿ.. ಯಾರುದ್ಲ ಇವತ್ ಪೂಜೆ ಸೇವಾರ್ಥಾ..’ ಚಂದವಾಗಿ ಸಿಂಗರಿಸಿದ ಚಪ್ಪರದೊಳಗೆ ಬರುತ್ತ ಕೇಳಿದ ಶಿವಣ್ಣ.. ಅಲ್ಲಿದ್ದವರಲ್ಲಿ ಅವನೇ ಸ್ವಲ್ಪ ಸೌಂಡ್ ಪಾರ್ಟಿ ‘ಹಣಕಾಸಲ್ಲಿ’.. ಕೊನೆಯಲ್ಲೇನೆ ಹೆಚ್ಚು ಕಮ್ಮಿಯಾದರು ಧಾರಾಳವಾಗಿ ಖರ್ಚು ಮಾಡುವವನೆಂದರೆ ಅವನೆ.. ಚೆನ್ನಾದ ಚಪ್ಪರ, ಹೂವಿನ ಅಲಂಕಾರ, ಎಳನೀರು ತೀರ್ಥದ ಸೇವೆ, ಬಾಳೆ ದಿಂಡು-ಮಾವಿನೆಲೆಯ ತೋರಣ – ಇದೆಲ್ಲದರ ಮಧ್ಯೆ ‘ಗಜಮುಖನೆ ಗಣಪತಿಯೆ..’ ಎಂದು ಮೊಳಗುತ್ತಿರುವ ಮೈಕಾಸುರನ ವೈಭವ..
ಅವತ್ತಿನ ಪೂಜಾರಿಕೆಯ ಜವಾಬ್ದಾರಿ ವಹಿಸಿಕೊಂಡಿದ್ದ ನಿಂಗರಾಜ, ‘ಇವತ್ತು ದೊಡ್ಡವಂದೆ ಪೂಜೆ ಸಿವಣ್ಣ.. ವುಳಿಯನ್ನ, ಮೊಸರನ್ನ, ವಡೆ , ವುಸ್ಲಿ, ಕಡುಬು ಎಲ್ಲಾ ಮಾಡ್ಸವ್ಳೆ.. ಕೆಲ್ಸ ಮುಗಿಸ್ಕಂಡ್ ಸಂಜೀಗ್ ಬಂದು ಪೂಜೆ ಮಾಡ್ಸಿ ಪ್ರಸಾದ ಅಂಚ್ತೀನಿ ಅಂದ್ಲು.. ಇನ್ನೇನು ಬತ್ತಾಳೆ ಕಣಣ್ಣೊ..’ ಅನ್ನುತ್ತಿದ್ದಂತೆ ಸ್ಕೂಲೊಂದರಲ್ಲಿ ಆಯಾ ಆಗಿ ಕೆಲಸ ಮಾಡುವ ದೊಡ್ಡವ್ವ ಬರುತ್ತಿರುವುದು ಕಾಣಿಸಿತು.. ಬರುತ್ತಲೆ ಯಾರನ್ನೊ ಬೈದುಕೊಂಡೆ ಬಂದಳು..
‘ಅವುಕ್ ಬರ್ಬಾರದ್ ಮೊಲ್ಲಾಗ್ರ ಬರಾ.. ಇಂಗಾ ಮಾಡಾದು ಅಬ್ಬುದ್ ದಿನಾ? ಸ್ವಲ್ಪಾದ್ರು ಧರ್ಮ ಕರ್ಮ ನ್ಯಾಯ ನೀತಿ ನೋಡ್ಬಾರ್ದ? ಹಾಳ್ ನನ್ ಮಕ್ಳು ಅಬ್ಬದ್ ದಿನಾನು ನನ್ ಕೈಲಿ ಕೆಟ್ ಮಾತಾಡುಸ್ತಾವೆ..’ ಎಂದು ಮಂತ್ರಾರ್ಚನೆಯೊಂದಿಗೆ ಚಪ್ಪರದೊಳಗೆ ಬಂದವಳ ವಾಗ್ಜರಿಗೆ ತಡೆ ಹಾಕುತ್ತ ಕೇಳಿದ ಶಿವಣ್ಣ.. ‘ಅಯ್ಯೊ ಅಬ್ಬದ್ ದಿನ ಸುಮ್ಕಿರು ದೊಡ್ಡವ್ವಾ.. ಏನಾಯ್ತು ಅಂತ ಇಂಗ್ ಬೈತಾ ಇದೀಯಾ? ಯಾರಿಗ್ ಬೈತಿದಿಯಾ?’
‘ಅಯ್ಯೊ ಯಾರ್ಗೆಂಥಾ ಬೈಲೊ ಸಿವಣ್ಣ..? ಗೊತ್ತಿದ್ರೆ ಇಡ್ದು ಚಚ್ಚಾಕ್ ಬುಡ್ತಿದ್ದೆ.. ಅವ್ಯಾವೊ ಕಳ್ ಮುಂಡೇವು ರಾತ್ರಿ ನಮ್ ಇಸ್ಕೂಲ್ ಕಾಂಪೌಂಡಲ್ ನುಗ್ಗಿ ನಾನೇ ನೀರ್ ಆಕಿ ಬೆಳ್ಸಿದ್ದ ತೆಂಗಿನ ಮರದ್ ಗರಿನೆಲ್ಲ , ಎಳ್ನೀರು ಸಮೇತ ಕೊಚ್ಕೊಂಡ್ ವೋಗ್ಬುಟ್ಟವ್ರೆ ಕಣಪ್ಪಾ.. ತುಂಬ್ಕೊಂಡ್ ಬಸ್ರಿ ಇದ್ದಂಗಿದ್ ಮರ್ಗಳು ಈಗ ಬೋಳ್ಬೋಳಾಗಿ ಗಂಡ್ ಸತ್ತ ಮುಂಡೆ ನನ್ನಂಗಾಗ್ಬುಟ್ಟವೆ ಕಣೋ.. ಅವ್ರು ಕೈ ಸೇದೋಗಾ..’ ಎನ್ನುತ್ತ ತನ್ನ ನಾಮಾರ್ಚನೆಯನ್ನು ಮುಂದುವರೆಸುವುದರಲ್ಲಿದ್ದಾಗ, ತಮ್ಮ ಚಪ್ಪರದ ಗರಿಯ ಕಥೆ ಅರಿತಿದ್ದ ನಿಂಗರಾಜ, ‘ಅಯ್ ಸುಮ್ಕಿರು ದೊಡ್ಡವ್ವ.. ಗಣೇಶನ್ ಚಪ್ರ ಅಂದ್ರೆ ದೇವಸ್ಥಾನ ಇದ್ದಂಗೆ ಇಲ್ಲಿ ಕೆಟ್ ಮಾತ್ ಆಡ್ಬಾರ್ದು.. ನೀ ಹೇಳ್ದಂಗೆ ಪೂಜೆಗ್ ರೆಡಿ ಮಾಡಿವ್ನಿ.. ಪ್ರಸಾದನು ರೆಡಿ ಐತೆ.. ನಿ ‘ವೂ’ ಅಂದ್ರೆ ಪೂಜೆ ಮಾಡದೇಯಾ.. ಇಲ್ದಿದ್ರೆ ಟೈಮ್ ಮೀರೊಯ್ತದೆ ನೋಡು’ ಎಂದು ಅವಳ ಮಾತಿನ ‘ಠೀವಿ’ ಚಾನೆಲ್ ಬದಲಿಸಿದ..
‘ವೂ.. ಅದು ಸರಿಯೆ ನೀ ಮಾಡಪ್ಪ ಪೂಜೆ.. ಏಳು ಮಂತ್ರಾವ.. ಎಲ್ಲಾ ಆ ಗಣ್ಪತಪ್ಪಾನೆ ನೋಡ್ಕೊಳ್ಲಿ..’ ಎನ್ನುತ್ತಿದ್ದಂತೆ, ನಿಂಗರಾಜ , ‘ ಏಯ್ , ಎಲ್ಲಾ ಬನ್ರೊಲೈ.. ಪೂಜೆ ಸುರುವಾಗ್ತೈತೆ ‘ ಎಂದವನೆ ‘ಶುಕ್ಲಾಂ ಬರಧರಂ ವಿಷ್ಣುಂ..’ ಎಂದು ಶ್ಲೋಕವನ್ನಾರಂಭಿಸುತ್ತಿದ್ದಂತೆ ಸಿದ್ರಾಜಾ, ಚಿಕ್ಕಣ್ಣ, ರಾಜಾ, ಕುಮಾರ, ಸ್ವಾಮಿಯೂ ಸೇರಿದಂತೆ ಸುತ್ತಮುತ್ತಲವರೆಲ್ಲ ತೊಳೆದುಕೊಂಡ ಮುಖದಲ್ಲಿ ದೊಡ್ಡದಾಗಿ ವಿಭೂತಿ ಗಟ್ಟಿ ಧರಿಸಿ, ನಡುವೆ ಕುಂಕುಮ ಹಚ್ಚಿಕೊಂಡು, ಒಬ್ಬೊಬ್ಬರಾಗಿ ಆ ಹಸಿರು ಚಪ್ಪರದ ಆವರಣದೊಳಗೆ ಕಾಲಿಡತೊಡಗಿದರು – ಅಲ್ಲಿ ದೊನ್ನೆಗಳಲ್ಲಿರಿಸಿದ್ದ ಹುಳಿಯನ್ನ, ಮೊಸರನ್ನ, ಉಸ್ಲಿ , ವಡೆ, ಸಿಹಿಗಡಬುಗಳನ್ನೆ ತುದಿಗಣ್ಣಲ್ಲಿ ತುಂಬಿಕೊಳ್ಳುತ್ತ..!
(ಶುಭಂ)
– ನಾಗೇಶ ಮೈಸೂರು
೧೨.೦೯.೨೦೨೧
(Picture: Singapore Veeramma Kaliamman Temple)