00765. ನಾಲಿಗೆ, ಕಿವಿ ಕುಣಿದಾಟ..


00765. ನಾಲಿಗೆ, ಕಿವಿ ಕುಣಿದಾಟ..
________________________


ಬರೆದರೆಲ್ಲ ಕಣ್ಣು ಮೂಗು ಬಾಯಿ
ಕಮಲ ನಯನ, ಸಂಪಿಗೆ ಮೂಗು,
ತೊಂಡೆ ತುಟಿ, ದಾಳಿಂಬೆ ಹಲ್ಲು
ಹೀಗೆ ಎಲ್ಲಾ ಮೆಚ್ಚುವುದು ಹೊರಗೆ
ಅಂತ ಪಾಪ ನಾಲಿಗೆ ಕೊರಗೆ !

ಎಷ್ಟಿದ್ದರು ತಾನೆ ಏನು ಬಣ್ಣ ಬೋಗಸ್
ಅನಿಸೊ ಮಾತಾಡೊ ಜಿಹ್ವೆಯ ಲಾಜಿಕ್
ನೋಡೊ ರೂಪಕ್ಕೊಂದು ಸುಂದರ ಮೈಕಟ್ಟು
ಗೋಧಿ ಬಣ್ಣ ಇರಲಿ ಬಿಡಲಿ ಕೊಡೊ ಜುಟ್ಟು
ಬೀಗ ಹಾಕಿ ತುಟಿ ದಂತದ ಕೋಟೆಯೊಳಗೆ..

ಸಾಕು ಸುಮ್ಮನಿರಯ್ಯ ಕೇಳಿದ್ದೀನಿ ಪುರಾಣ
ಆಡಿದರೆ ಸಾಕ ? ಬೇಕು ಕೇಳುವ ಜನರೀಗ
ಆಡಿದ್ದಕ್ಕೊಂದಾಡಿ ಅನಾಡಿ ತಂದಿಕ್ಕೊ ಜೋಗಿ
ಕಟ್ಟಿದ ಕೆಳೆ ನಂಟಿಗು, ನಿನ್ನ ಮಾತಲ್ಲೆ ಹಚ್ಚೊ ಕಿಡಿ
ಒಳಿತು ಕೆಡುಕು ಎಲ್ಲಾ ಮೌನದಲೆ ಭರಿಸಿರುವೆ..

ಆಡುವವನೊಬ್ಬನೆ ನಾಲಿಗೆ, ಮಾಡುವ ದಾಂಧಲೆ
ಎಡಬಿಡಂಗಿ ಢೋಂಗಿ, ಸರಿ ತಪ್ಪೆಲ್ಲ ಅವರಿವರ ಮೇಲೆ..
ಕೇಳುವವರಿಬ್ಬರಿದ್ದರೂ, ಯಾಕೊ ಮೌನದಲೆ ಆಲಿಸುತ
ಕೊಟ್ಟಂತೆ ಉತ್ತೇಜನ, ನಾಲಿಗೆಯ ಹರಿಯಾಬಿಡುತ
ಕೂತಂತೆ ವಸ್ತ್ರಾಪಹರಣದ ಹೊತ್ತಲಿ ಭೀಷ್ಮ, ದ್ರೋಣ..

ಅದೆಲ್ಲಿತ್ತೊ ಅಲ್ಲಿಯವರೆಗೂ ಮೌನದಲಿ ಅಂತಃಕರಣ
ಸಾಕು ಸುಮ್ಮನಿರೆಂದು ಮುಚ್ಚಿಸಿತು ಇಬ್ಬರ ವಾದವನ್ನು
ಆಡಬೇಕು ನಾಲಿಗೆ, ಆಡುವ ಮೊದಲು ಕೇಳಿ ಕಿವಿಗೆ
ಕೇಳಬೇಕು ಕಿವಿ, ಮಾತಾಗುವ ಮೊದಲು ನಾಲಿಗೆಗೆ
ಜೊತೆಯಾಗಿರೆ ಸಖ್ಯ ಕಣ್ಣು ಮೂಗು ಬಾಯಿ ನಿರ್ಲಕ್ಷ್ಯ !

– ನಾಗೇಶ ಮೈಸೂರು

(Picture source : https://www.emaze.com/@AZIQLCZ/Psychology)