00723. ಫೇಲಾದವರಿಗೆಲ್ಲ ಅಭಿನಂದನೆಗಳು..


00723. ಫೇಲಾದವರಿಗೆಲ್ಲ ಅಭಿನಂದನೆಗಳು..
_______________________________


ಈ ಬಾರಿಯ ಪರೀಕ್ಷೆಯಲ್ಲಿ
ಫೇಲಾದವರಿಗೆಲ್ಲ ಅಭಿನಂದನೆಗಳು..
ಅವಹೇಳನವಲ್ಲ ನಿಜಕು
ಹೃತ್ಪೂರ್ವಕ ನಮನಗಳು..
ಮೊದಲಿಗೆ ಕುಕ್ಕುವ ಕಂಗಳ ನಡುವಲೆ
ತಲೆಯೆತ್ತಿ ನಡೆವ ನಿಮ್ಮೆದೆಗಾರಿಕೆಗೆ
ಮನಃಪೂರ್ವಕ ನಮನಗಳು
– ಅದು ನಾಯಕತ್ವದ ಹೆಗ್ಗುರುತು..

ಕಲಿತು ಮುನ್ನುಗಿದವರೆಷ್ಟೊ
ಉರು ಹೊಡೆದು ಪಾಸಾದವರು ಅಷ್ಟು
ಹಳ್ಳಕೆ ಬೀಳದೆ ಅನುಭವಕೆ ಶರಣಾಗಿ
ಮತ್ತೆ ಪರೀಕ್ಷೆ ಎದುರಿಸುವ ನಿಮ್ಮ
ಸಹನೆ ಸಹಿಷ್ಣುತೆ ಧೈರ್ಯಕೆ ಪ್ರಣಾಮಗಳು..
ಆಡುವ ಜನರ ನಡುವೆ ಕಲ್ಲಾಗಿ ನಿಲುತ
ಕಲಿತಿದ್ದನೆ ಮತ್ತೆ ಸರಿಯಾಗಿ ಕಲಿವ
– ಅನುಭವದ ಬೆಲೆ ಈಗಲೇ ಕಲಿತಿದ್ದಕ್ಕೆ..

ಪಾಸಾದವರೆಷ್ಟೊ ಮಂದಿ ಭಯಭೀತರು
ಸೋಲು ಕಂಡರೆ ಕಪ್ಪೆ ಹಾವೆಸದ ಲೆಕ್ಕ..
ಆ ಭೀತಿಗೆ ಹುಡುಕುವರು ಸುರಕ್ಷಾ ಹಾದಿ
ಸೋಲುಂಡನುಭವವಾದ ನಿಮಗೆಲ್ಲಿದೆ ಆ ಭೀತಿ ?
ಸೋಲು ಗೆಲುವಿನ ಮೆಟ್ಟಿಲು, ಆತ್ಮವಿಶ್ವಾಸ
ಸೋತ ರುಚಿ ಇದ್ದವ ತಾನೇ ತಡೆಯಬಲ್ಲ ಸೋಲನು ?
ಸೋತನುಭವ ಅನುಭೂತಿ ಅನುಭಾವಕೂ ಮಿಗಿಲು
– ಗೆದ್ದೇ ಗೆಲುವಿರಿ ಜಗವ, ನಿಮಗೆಂಥ ದಿಗಿಲು ?

ಆದರೂ ಗೆಲ್ಲುವ ಹಾದಿಯ ತುಂಬಾ
ಚೆಲ್ಲುವರಿದ್ದಾರೆ ಮುಳ್ಳು ಜಲ್ಲಿ ಟೀಕೆ
ಇರಲಿ ಲೆಕ್ಕಿಸದೆ ಮುನ್ನಡೆವ ಛಾತಿ..
ಅನುಭವ ಕಟ್ಟಿಕೊಟ್ಟ ಗಂಟು ಕಾಣಿಸದಾರಿಗು
ನಿಮ್ಮ ಗಮ್ಯ ತಲುಪಿ ಗೆಲುವ ನಗೆ ಬೀರುವ ತನಕ
ಹುಷಾರು..! ಅವರಿವರ ಮಾತ ಕೊಂಕಿಗೆ
ಇಂದೇ ಜೀವ ಬಿಟ್ಟೀರಾ, ಆ ಪೆದ್ದು ನುಡಿಗಳಿಗೆ..
ಸೋಲದ ಹೇಡಿತನಕಿಂತ ಸೋತು ಗೆಲ್ಲುವ ಛಲ ಮೇಲು !

– ನಾಗೇಶ ಮೈಸೂರು

(Picture source : https://media.licdn.com/mpr/mpr/p/4/005/072/0cd/0de8de1.jpg)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

2 thoughts on “00723. ಫೇಲಾದವರಿಗೆಲ್ಲ ಅಭಿನಂದನೆಗಳು..”

ನಿಮ್ಮ ಟಿಪ್ಪಣಿ ಬರೆಯಿರಿ