01606. ವೀಣೆ ಹಿಡಿದ ಪುಟ್ಟ ಬೆರಳು..


01606. ವೀಣೆ ಹಿಡಿದ ಪುಟ್ಟ ಬೆರಳು..

__________________________________

ಪುಟ್ಟ ಮುದ್ದು ಶಾರದೆ

ನೀ ಹಿಡಿದ ವೀಣೆ ಯಾರದೆ?

ಚಂದದ ನೋಟ ನೀ ನುಡಿಸೆ

ರಾಗ ಶ್ರುತಿ ಎಂತಿದ್ದರು ಸೊಗಸೆ ! || ೦೧ ||

ಮಾತೆಯವಳು ಸರಸ್ವತಿ

ವಿದ್ಯೆಗಧಿದೇವತೆ ಬೊಮ್ಮನ ಸತಿ

ನೀ ಕೂತಾಗಿಹೆ ಸಾಕ್ಷಾತ್ ದೇವಿ

ಏನ ನುಡಿಸಿದರದೆ ಚರಣ ಪಲ್ಲವಿ || ೦೨ ||

ಶಿಸ್ತಿನ ಸಿಂಗಾರದ ಗೊಂಬೆ

ಘನ ರೇಷಿಮೆಯುಟ್ಟ ಬಾಲೆ ಅಂಬೆ

ನೆರಿಗೆಯ ಸೊಬಗಲಿದೆ ದೃಷ್ಟಿಬೊಟ್ಟು

ಮಿಡಿಸೀ ಸುಸ್ವರ ಪುಟ್ಟ ಬೆರಳ ಮೀಟು || ೦೩ ||

ನಿನ್ನಾ ಮೀರಿದ ವೀಣಾಗಾತ್ರ

ಪುಟ್ಟ ವಯಸಲೇನಿದು ದೊಡ್ಡ ಪಾತ್ರ?

ಯಕ್ಷ ಕಿನ್ನರ ಗಂಧರ್ವ ಲೋಕದ ಕೂಸು

ತಲೆದೂಗುತ ಆಲಿಪೆವೇನಾದರು ನುಡಿಸು || ೦೪ ||

ಝೆಂಕರಿಸಮ್ಮ ನೀ ನಾಕುತಂತಿ

ಮೀಟಿಹ ನೀನೆ ಬದುಕಿಗ್ಹಚ್ಚಿದ ಪ್ರಣತಿ !

ಸಂಸ್ಕಾರ ಸಂಪ್ರದಾಯ ಅಚ್ಚುಕಟ್ಟು ನೆಲೆ

ಮೇಳೈಸಿ ಪರಂಪರೆ ಯುಗಾಂತರ ಹಿನ್ನಲೆ || ೦೫ ||

– ನಾಗೇಶ ಮೈಸೂರು

೧೬.೦೨.೨೦೧೮

(Nagesha Mn)

(Picture source: Internet / multi media – received via Yamunab Bsy – thank you 🙏👍😊)