Dependency as a Risk Identifier



By: Nagesha Mysore Nanjundashetty

(a conversation between father & daughter)


‘What are you puzzled with? You seem to be lost somewhere?’


Rima scratched her head and stared at me with a blank look written all over her eyes. When I see
that look, I know she is more than troubled by something unusual; probably something new which
she is not comfortable with.


‘ Seems something new is bothering you?’


‘A kind of…’ came short response in a half hearted voice smeared with a low tone…


‘ Guess I can help.. at least I give a try, if you wish..’


‘ Not sure if you can..’


‘why?’


‘ because I don’t know myself what exactly is the problem or rather how to explain my problem..’


I looked at her for a moment. That moment of silence was to give her some more space and hope
she continue and say something. But she didn’t.. the stare in her eyes continued the way it was.


‘ Look Rima, it is not uncommon that you get into such confusing situation.. at least I am almost
always get in and out of that everyday…’


‘Really?! Is it so common? I thought it is so rare and unique..’


‘Why don’t we put it to test by trying it out? Don’t worry about where to start and what to say. Don’t
try to find a perfect way to frame your thoughts. Just start casually and we figure out what is
bothering you..’


‘Start with anything in mind? Even with something that might not me related to what is bothering
me?’


‘Let me help it a bit. Start with how did the day start for you..’


‘Are you serious dad?’


‘ you bet on it..!’


She paused for a while and said… ‘ ok.. in that case I did it as usual like every other day. Wake up
from bed and did daily rituals as usual..and then..’


‘Wait dear.. just give me a space to ask some question in between.. you had good sleep when you get up?’


‘ not really.. not sound sleep like every day.. at least I woke up three times a least, last night..’


‘Really? I am surprised! My angel always get good sleep when ever she go to bed. What went wrong
last night?’


‘Oh! I cant figure out what went wrong but I was thinking about an assignment task that I should
handle this morning..’


‘Was it bothering you so much..?’


‘ Not really.. in fact, the assignment topic is new and unique but consciously , I was not thinking
about it at all. I knew it is a new challenge but I didn’t even thinking loud about it..’


‘ May be it was bothering in your sub-consciousness without your knowledge? Why don’t you tell me
about your challenging assignment you need to handle today? That may lead us to clear the air?’


She again paused and stared at the window. That is her style of thinking what to say. I give her few
moments so that she gathers on some content.


‘ Do you remember about the project work I am doing about as part of my research?’


‘ You told me about it.. you are cooking something related to the topic ‘Risk’ – right?’


She seemed astonished. Perhaps she did not expect me to be remembering in that detail. That
actually helped her to be charged a bit and I saw her eyes brightened further.


‘Then it is easy.. yes, I am working on this topic and our team was asked to research and pool all
theory behind risk and risk management in projects. We did that quite well and prepared a nice
research document..’


‘ That seems nice. Did you get in to any obstacle?’


‘Not an obstacle.. rather probably yes?’


‘ Tell me more..’


‘ We had submitted our research report to review. Our professor yesterday called us and told all we
have done is just copy paste from google search..’
I thought, that is how most reports are made today; especially the academic reports. ‘ so he was not
happy about it?’


‘ not like that.. he said it is good compilation and nice packaging. But he wanted to know, based on
our study and understanding what value we are bringing individually for the topic – apart from the
theoretical literature from google..’


I thought this professor must be a good one. He is challenging them to think and learn rather than
copy paste. But I cannot say it loud to my dear girl.


‘ I see..’


‘ He said, we should think loud about it independently and individually and add a chapter on our perspective which is not found in our study so far.. and we should not do it together; each one of us should come with our own perspectives adding to the core report we have prepared. It should not be a bookish stuff again, but rather should have some practical relevance..’

Now I started getting a feel of why she was so troubled. Now she has to think and do something
which she knows only in theory; but she has to cook something like a pro, not like a book worm.


‘Dear.. I think I can help..’


It was clear that she did not believe that I mean it..


‘It’s ok dad, I will find some way to handle it..’


‘Listen to me dear… just try me.. anyway, you are not going to lose anything, if you do. If it is not
fitting you can always discard..’


She again went silent with a blank stare at her eyes but the face reflecting a half hearted question
mark. I should make a move quickly and get into the core of the topic.. else, she will distract herself
away from what I am saying. So, I jumped directly to the core..


‘ I think I can help you figure out a not so common way of how a risk can be systematically identified.
Though once identified, how they are managed, how a risk life cycle works – you can find a lot of
literature and experience in the field, but I guarantee you that not much insight or tools and
techniques exists to systematically identify the risk in the first place. It purely go by the experience
and expertise of the team members. A new project manager with less experience many times has to
burn his fingers and learn..’


‘Dad.. are you serious? Are you sure you have such an approach which nobody or not many knows?’


‘Tough to believe it right? Though it is pure common sense driven it is not so common practice I
would say. And amazing thing about the approach is – once it is initiated and stabilized you can find
opportunities to automate them, integrate AI into it and derive deeper insights from them using the
data analytics approaches / tools in the field..’


She seemed to gain some interest when I specifically touched upon the core topic which is bothering her.. ‘ dad you sound interesting but are you sure you have something unique that is new and uncommon?’


I sensed her hesitation .. ‘dear, as I mentioned, you are not going to lose anything.. just hear it and
decide if it makes sense or not. Then you take a call..’


She nodded in agreement. I see the sense of reluctance fading away further – when she slanted her head in interest, a stance indicating her curiosity when she is really keen to know.


‘ Ok let us debate on it and see how we can do it. With the conversation on going, you will be able to
grasp the gist of it, which you later articulate and present the way you want. I will just give you the
conceptual frame work..’


‘Agree.. you know, I don’t want you to spoon feed, dad..let me build my own story’ told my smart girl.

‘Ok.. let me start with a question – tell me, why or how a risk happens?’


‘ I guess it is due to uncertainty? We are not sure of something and we flag it as risk..?’


‘You know, we recognize them sometimes intuitively and sometimes by its occurrence. When we do that, most of the time they might be the symptoms that we are recognizing but the core reason behind may not be obvious..’


‘as you have told me many times – according to theory of constraints (TOC) philosophy, it is better to
discover core issue and address it, rather fighting out with many many symptoms at large…right?’


‘wow! As usual , that is my smart girl – you identified the core element correctly and also your
understanding about TOC point blank. You are right -uncertainty is one of the key reason behind the
occurrence of risks. You know that uncertainty is the most common thing one need to deal with in
almost all project initiatives. If you are a project manager how do you usually deal with it?’


She thought for a while and answered: ‘guess we make some assumptions to deal with the
uncertainties?’


‘Right… that is what most of the people would do. Try and figure out reasonable assumptions, by
considering the constraints and challenges..’


‘But dad, then what is so unique here? If this what most of the project managers do, there is nothing
special about it right?’


‘have a little patience my darling, I am coming to it. I just wanted to make sure we keep all related
aspects in view and proceed. As we noticed in the beginning uncertainty is the main contributor for
the risk – you agree?’


‘Yes, that is the key factor. Let us agree on that and proceed..’


‘Then help me to answer this question – why is there uncertainty? why it happens?’


‘Is it because of constraints?’


‘No dear – constraints rather impose certainty because you know the exact constraint within which you should operate. For example, if budget is a constraint, you already know what is the cost limits the project has to deliver. If time line is the constraint, you know by when you must deliver – and so on.. some constraints may contribute to uncertainty but they are not the key drivers of uncertainty’


‘Then what is that key driver of uncertainty?’


‘ you want me to tell you or you figure out? I will again give a clue – it again stems from the principles of TOC..’


‘ Are you talking about the dependent events – concept of TOC, dad?’


I could not avoid looking at my girl with great admiration. ‘You almost nailed it my girl. In this real
world every thing, every process for example work in collaboration. One feeds the other creating a
chain of events. In other words each event is an outcome of something else and each event will be a
trigger for another event or occurrence.. do you agree?’


‘ Dad are you saying ‘dependency’ is the key driver causing uncertainty?’


‘Exactly! Once again my smart girls figured it out quick! Dependency exists basically because we have
dependent events in real world.. in fact a lot of them.. some times, rather most of the times there
are more than one dependency looping among them selves making it a complex web..’


‘ I guess I am able to see where you are coming from..! are you telling me that figure out a way to
find dependencies and address or monitor them closely to discover risks?’


‘ haha.. not bad again!.. yes. Do you agree that by focusing on dependencies you are able to predict
the risks much more systematically?’


‘ But dad, that may be correct if we have a way to identify the dependencies in the first place.
Secondly, there would be so many dependencies around – how one can figure out everything in a
fool proof way?’


‘ Rima.. think about it. When you do a project plan , define work packages, activities and tasks don’t
you sequence them respecting their order of occurrence and also their dependencies?’


‘ yes I do.. in fact I always did it with some tools like MS project..’


‘No matter which tool you use but you will be able to identify the dependency and link them
accordingly… once they are visible , you can evaluate each one of them for their potential risks and list them to track through the risk life cycle..’


‘ You mean to say we have to review all dependencies like that? There may be so many of them!’


‘ Hear me first.. yes there could be many but all of them need not be of same severity or importance..’


‘but still we have to analyze all of them..’


‘ Offcourse if you are automating or finding a data analytics or AI sort of solution you can do it.
Speaking theoretically you can even do it manually – though it looks tedious and cumbersome..’


‘Dad you are sounding like we don’t need to do it for all. Is it so?’


‘Yes that is what I think..’


‘but how?’


‘think my little guzzle! You are smarter than me’


‘Give me a hint again..!’


‘ It is the same hint – think of the concept and apply a little bit of TOC.. then you will see it..’
She went silent for next 5 to 10 minutes. I am sure her mind must have been juggling with all
possibilities and attempting to figure out the conceptual dimension of it. Then she opened her eyes and gazed at me.


‘Dad.. is it because of the relationship between core problem and its symptoms?’


‘Can you elaborate..?’


‘I mean, if you focus and find out the core problem which may be the mother of hundreds of
resulting symptoms, then instead of fire fighting with endless symptoms, we can focus all our energy
on core problem which basically absorbs all those symptoms even before they occur..’


‘That concept I understand and we both know it. But how do you apply that in this scenario of
limiting your focus on limited number of dependencies?’


‘Don’t you see dad ? it logically flows!’


‘ But how? Explain me’


‘Come on dad.. if you connect all events based on dependency, they become a chain right? Does it
mean each and ever link in the chain need to be addressed? If you trace from the last one and go
backwards to its root dependency, you just focus and address that root dependency- that ensures all
other linked dependencies, which are like symptoms will automatically disappear. Right?’


‘Smart… Very smart! So, now you see the connection? If you identify the core dependency– which is nothing but first level dependency, figure out the risks that could be arising out of those
dependencies and take action to fix them, that ensures the downstream risks of that dependency
will be absorbed or eliminated – in the worst case simplified..’


‘So dad, you suggest to use dependency at level 1 and use it as a driver to identify and manage the
risk, ensuring the symptoms are out of the door from beginning itself..’


‘Yes darling.. continue the approach keeping this concept in mind. Even if the risk is not managed
properly and it results in next level dependency or risk, you can use the same concept and continue.
Once the risk is listed, then you follow the typical risk life cycle tasks – like identify its probability, its
impact to give it a rating like – high, medium, low and track its severity like – Red, Amber, Green and
define measures to handle it. You track them until they are resolved; some may not be resolved and
become issues but you deal with them in a similar manner..’


‘Does it mean to say we can figure out all risks using this approach dad?’ she looked more confident
now and looked like figuring out the loop holes..


‘Dear, you know we are not living in a perfect world. Just like everything, uncertainty is also not static or fixed. Surprises may occur changing the assumptions and reality. That may impact the
dependencies as well. So, you need to keep on factoring them and adjusting accordingly. But then, it will become a review on the main baseline that you have identified. So, the approach remains more
or less same – but you keep tweaking the flow based on the influencing factors that occur in the
surroundings. If no impact seen, then in principle you continue with your baseline. If there is some
impact– tweak the baseline to a updated version and continue with the same approach..’


‘Wow dad! I think this is really something different than what usually they expect to see.. I will take
this hypothesis and present from my side.. but meanwhile, thank you very much dad for leading me to this.. in fact, now I am curious to hear more from you on the phrase you are mentioning..’


‘Which phrase?’


‘ That Risk Life cycle management..’


‘Oh no.. ! that will be another long discussion.. definitely not for today..!’


‘ Yes it is for another day dad.. today I have to summarize all we had figured out and put it in a
presentable way to make my dear professor happy and thrilled.. hope he gets impressed with this
dimension we are bringing..’


‘ I guess he would definitely appreciates it because he would be intuitively knowing it.. how do you
plan to present it?’


‘hmm.. I am thinking of a special way to do it. If I make it like a theoretical paper document, the
readers miss the point or it may become another boring theory for them’


‘So..?’


‘How about this? The way we had this conversation now – I write the same like a story or episode
and attach it with a introductory note. Reader reads it like a interesting conversation between a
father and his daughter – like we had, just now. If reader is in agreement with our view and
understands the concept like we do, they could think of figuring out ways to realize it in reality.. if he is not in agreement – also fine; he just have a nice experience of reading a story and just he can just leave it at that stage!’


‘Great! Do you think you can remember all those points we discussed? If you need me to review your
story let me know!’


‘No dad.. not needed. You know your girl is very smart! once we started our key conversation, I
already started voice recording in my mobile phone.. ! I just need to listen to it once or twice before I write it as a story..’


‘You smart devil!..’ I screamed at her softly, sounding appreciation of her mindfulness, which
inevitably got was reflected through my eyes.


‘Thank you once again dad.. you are my real hero’ my guzzle ran away like a swan and disappeared
into her room.


With a fulfilled sense of pride and satisfaction, I walked to the kitchen to brew a new cup of coffee.

Author: Nagesha Mysore Nanjundashetty

ಕಥೆ: ಪ್ರಲೋಭನೆ


(ಇತ್ತೀಚೆಗೆ ಬುಕ್ ಬ್ರಹ್ಮ – ನಾವಿಕ ಸಹಯೋಗದಲ್ಲಿ, ವಿಶ್ವ ಕನ್ನಡ ಸಮಾವೇಶದ ವೇದಿಕೆಯಡಿ ನಡೆದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಸಣ್ಣ ಕಥೆ)

ಕಥೆ: ಪ್ರಲೋಭನೆ
______________



‘ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ‘

ಹಿನ್ನಲೆಯಲ್ಲಿ ಬರುತ್ತಿದ್ದ ಹಾಡಿಗೆ ದನಿಗೂಡಿಸುತ್ತ ಸ್ನಾನದ ಮನೆಯಿಂದ ಮಡಿಯುಟ್ಟುಕೊಂಡೆ ಹೊರಬಂದರು ಸಾವಿತ್ರಮ್ಮ. ಒದ್ದೆ ಕೂದಲನ್ನು ಟವಲಿನ ಬಟ್ಟೆಯಿಂದಲೆ ಗಂಟು ಕಟ್ಟಿಕೊಂಡು, ಹುಷಾರಾಗಿ ಅಕ್ಕಪಕ್ಕದ ಯಾವುದೂ ಮೈಕೈಗೆ ತಗುಲದಂತೆ ಸಾವರಿಸಿಕೊಂಡು ಮೊದಲು ಅಡಿಗೆ ಮನೆಯತ್ತ ಧಾವಿಸಿದರು – ಪೂಜೆಗೆ ಮುನ್ನ ಮಡಿಯಡಿಗೆ ಮಾಡಿಟ್ಟುಬಿಡುವ ಅವಸರದಲ್ಲಿ. ಹಾಗೆ ಹೋಗುತ್ತಲೆ, ಅಂಗಳದಲ್ಲಿ ಪೇಪರು ಓದುತ್ತಾ ಕುಳಿತಿದ್ದ ಪತಿರಾಯರಿಗೆ ಯಥಾರೀತಿಯ ಆಕಾಶವಾಣಿಯನ್ನು ರವಾನಿಸಿದರು..

‘ಏನೂಂದ್ರೆ..? ನಂದು ಸ್ನಾನ ಆಯ್ತು.. ಮಡಿಯುಟ್ಟುಕೊಂಡು ನೈವೇದ್ಯದ ಅಡಿಗೆ ಮಾಡಿಟ್ಟುಬಿಡುತ್ತೇನೆ.. ಅಷ್ಟರೊಳಗೆ ನಿಮ್ಮ ಸ್ನಾನವನ್ನು ಮುಗಿಸಿಬಿಡಿ.. ಪೂಜೆಗೆ ಟೈಮು ಸರಿಯಾಗುತ್ತೆ.. ಇವತ್ತು ಏಕಾದಶೀ ಬೇರೆ.. ವಿಶೇಷ ಪೂಜೆ, ಉಪವಾಸ ಎಲ್ಲಾ ಮಾಡಬೇಕು..’ ಎಂದು ನೆನಪಿಸಿ ತಮ್ಮ ಅಡಿಗೆ ಕಾರ್ಯದಲ್ಲಿ ತಲ್ಲೀನರಾದರು..

ಹೆಂಡತಿಯ ಮಾತು ಕೇಳುತ್ತಿದ್ದಂತೆ ರಾಜಶೇಖರ ರಾಯರು ಪೇಪರ್ ಓದುತ್ತಲೆ ತಲೆಯೆತ್ತದ ಭಂಗಿಯಲ್ಲಿ, ‘ ಹೀಟರ್ ಪೂರ್ತಿ ಕಾದಿದೆಯೇನೆ? ನೀನು ಸ್ನಾನಕ್ಕೆ ಹೋದರೆ ಅಲ್ಲಿರೊ ನೀರೆಲ್ಲ ಒಂದೆ ಗುಟುಕಿಗೆ ಸ್ವಾಹಾ ಆಗಿರುತ್ತೆ.. ಇನ್ನು ಮತ್ತೆ ಬಿಸಿಯಾಗೋಕೆ ಅರ್ಧ ಗಂಟೇನಾದ್ರು ಬೇಕು..’ ಎಂದು ಮತ್ತೆ ಪೇಪರಿನ ಓದಿನಲ್ಲಿ ಮುಳುಗಲೆತ್ನಿಸಿದ ಪತಿಯ ಅಭ್ಯಾಸ ಬಲ್ಲ ಸಾವಿತ್ರಮ್ಮ, ಈಗ ಎಬ್ಬಿಸದಿದ್ದರೆ ಇನ್ನು ಆ ಪೇಪರಿನ ಅಂಗುಲಂಗುಲವನ್ನು ಓದಿ ಮುಗಿಸುವತನಕ ಮೇಲೇಳುವ ಜೀವವಿದಲ್ಲ ಎಂದು ಗೊತ್ತಿದ್ದ ಅನುಭವದಿಂದ, ಅಲ್ಲಿಂದಲೆ ಮತ್ತೊಮ್ಮೆ ಜೋರಾದ ಗುಟುರು ಹಾಕಿದರು..

‘ಸುಮ್ನೆ ನೆಪ ಹೇಳ್ಕೊಂಡು ಕೂತಿರ್ತಿರೊ ಇಲ್ಲ ಎದ್ದು ಸ್ನಾನಕ್ಕೆ ಹೋಗ್ತಿರೊ? ನಂದು ಸ್ನಾನ ಆಗಿ ಎಷ್ಟೊತ್ತಾಯ್ತು..! ನಿಮ್ಮದೇನು ಬರಿ ಬೋಳಮ್ಮನ ಸ್ನಾನ ತಾನೆ? ಒಂದು ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರಿದ್ದರು ಸಾಕು ನಿಮಗೆ.. ಏಳಿ ಪೇಪರ್ ದಿನವೆಲ್ಲ ಇಲ್ಲೆ ಇರುತ್ತೆ ಓದೋರಂತೆ…’ ಎಂದು ಗಡುಸು ದನಿಯಲ್ಲಿ ಹೇಳಿದಾಗ ವಿಧಿಯಿಲ್ಲದೆ ಪೇಪರ್ ಮಡಚಿಟ್ಟು ಸ್ನಾನದ ಮನೆಯತ್ತ ಒಲ್ಲದ ಮನದಲ್ಲೆ ನಡೆದರು ರಾಯರು.. ಅವರು ಸ್ನಾನಾದಿ ಐಹಿಕಗಳನ್ನೆಲ್ಲ ಮುಗಿಸಿ ಬರುವ ಹೊತ್ತಿಗೆ ನೈವೇದ್ಯಕ್ಕೆ ಬೇಕಾದ ತಿಂಡಿಯನ್ನು ಸಿದ್ದಮಾಡಿಟ್ಟು, ದೇವರ ಮನೆಯಲ್ಲಿ ಪೂಜೆಗೆ ಅಣಿ ಮಾಡತೊಡಗಿದ್ದರು ಸಾವಿತ್ರಮ್ಮ.. ಮಡಿ ಪಂಚೆಯನ್ನುಟ್ಟು ತಲೆಯೊರೆಸಿಕೊಂಡು ಬಂದ ರಾಯರು, ಎಂದಿನಂತೆ ಪೂಜಾ ವಿಧಾನಗಳನ್ನು ಅನುಕ್ರಮವಾಗಿ ಸಂಪದಗೊಳಿಸುತ್ತ, ಮೆಲುವಾದ ದನಿಯಲ್ಲಿ ಮಂತ್ರಗಳನ್ನು ಜಪಿಸತೊಡಗಿದರು.. ಅಭ್ಯಾಸ ಬಲದಿಂದೆಂಬಂತೆ ಸಾವಿತ್ರಮ್ಮನವರು ದೀಪದ ಬತ್ತಿ ಸರಿ ಮಾಡಿ, ಅದಕ್ಕೆ ತುಪ್ಪವನ್ನು ಸುರಿಯುತ್ತಲೆ ಜೋರಾದ ದನಿಯಲ್ಲಿ ದೇವರ ನಾಮಗಳನ್ನು ಹಾಡತೊಡಗಿದರು.. ಅಂತೂ ಎಂದಿನಂತೆ ಎಲ್ಲಾ ಸಾಂಗವಾಗಿ ಮುಗಿಯುವ ಹೊತ್ತಿಗೆ ರಾಯರ ಹೊಟ್ಟೆಯು ತಾಳ ಹಾಕುತ್ತ ನೈವೇದ್ಯ ರೂಪದ ಪ್ರಸಾದ ಸ್ವೀಕರಿಸಲು ಸಿದ್ಧವಾಗಿತ್ತು. ಏಕಾದಶಿಯಾದ ಕಾರಣ ಸಾವಿತ್ರಮ್ಮ ನಿಗದಿ ಮಾಡಿದ ಆಹಾರವಷ್ಟೆ ಲಭ್ಯವಿದ್ದರು, ಅವರು ಗುಟ್ಟಾಗಿಟ್ಟುಕೊಂಡಿದ್ದ ಕುರುಕು ತಿಂಡಿಗಳು ಎಂದಿನಂತೆ ತಮ್ಮನ್ನು ಕಾಪಾಡುವುದೆಂದು ಅರಿತಿದ್ದರಿಂದ ಅವಳು ಕೊಟ್ಟಷ್ಟನ್ನು ಮಾತ್ರವೆ ತಿನ್ನುವ ವಿಧೇಯತೆಯನ್ನು ಪ್ರದರ್ಶಿಸುವುದು ಚೆನ್ನಾಗಿ ಆಭ್ಯಾಸವಾಗಿತ್ತು.. ಫಲಾಹಾರದ ನಂತರ ಕ್ಷೀರಾಮೃತದ ಸೇವನೆಯೊಂದಿಗೆ ಪೂಜೆ ಮುಗಿದು ರಾಯರು ಮತ್ತೆ ಅಂಗಳದಲ್ಲಿದ್ದ ತಾತನ ಕಾಲದ ಆರಾಮ ಕುರ್ಚಿಗೊರಗಿ ಮತ್ತೆ ಪೇಪರು ಓದುವುದರಲ್ಲಿ ತಲ್ಲೀನರಾದರು..

ರಾಯರದು ಮಧ್ಯಮ ವರ್ಗದ ಸಾಧಾರಣ ಕುಟುಂಬ. ವಯಸಿನಲ್ಲಿದ್ದಾಗ ಓದಿನ ಕಡೆ ಗಮನ ಕೊಟ್ಟು ಸಾಕಷ್ಟು ಉತ್ತಮ ಅಂಕದಲ್ಲೆ ಪಾಸಾಗಿದ್ದರು, ಅದ್ಯಾಕೊ ಒಂದು ಸಂಸ್ಥೆಯಡಿ ನಿರಂತರವಾಗಿ ಕೆಲಸ ಮಾಡುವುದು ಅವರ ಹಣೆಯಲ್ಲಿ ಬರೆದಿರಲಿಲ್ಲ.. ತಮ್ಮ ಜಾಯಮಾನಕ್ಕೊಗ್ಗದ ಹಲವಾರು ವೃತ್ತಿಗಳಲ್ಲಿ ಒಂದು ಕೈ ನೋಡಿ, ಕೊನೆಗೆ ಇದಾವುದು ತನಗಲ್ಲವೆಂದು, ಸ್ವಂತವಾಗಿ ಏನಾದರು ಮಾಡುವ ಸಾಹಸಕ್ಕಿಳಿದಿದ್ದರು.. ಅಲ್ಲು ಸುಮಾರು ಕಡೆ ಕೈಯಾಡಿಸಿ, ಕೊನೆಗೀಗ ಖಾಸಗಿಯಾಗಿ ಸಲಹೆಗಾರ, ತರಬೇತುದಾರ, ಕೋಚ್, ಮೆಂಟರ್, ಕನ್ಸಲ್ಟೆಂಟ್, ಟ್ರೈನರ್ ಇತ್ಯಾದಿ ಬಗೆಯ ನಾನಾವತಾರಗಳನ್ನು ಎತ್ತಿ ಜೀವನ ಸಾಗಿಸುತ್ತಿದ್ದರು. ಸ್ವಲ್ಪ ಅಪ್ಪನ ಮನೆ ಕಡೆ ಆಸ್ತಿ, ಜಮೀನು ಜೊತೆಗೆ ಸಾಕಷ್ಟು ಅನುಕೂಲವಾಗಿದ್ದ ಸಾವಿತ್ರಮ್ಮನ ತವರು ಮನೆಯ ಸಾಮರ್ಥ್ಯದಿಂದ ಎಡವಿ ಬೀಳದೆ ಸಾಕಷ್ಟು ಸರಾಗವಾಗಿಯೆ ಉರುಳಿಕೊಂಡು ಬಂದಿತ್ತು ಜೀವನ ಚಕ್ರ. ಅದಕ್ಕೊಂದು ಮುಖ್ಯ ಕಾರಣ – ರಾಯರಿಗಿದ್ದ ಮಾತಿನ ಬಲ.. ಆ ಬಲದಿಂದ ಎಂಥಹ ಎದುರಾಳಿಯನ್ನಾದರು ತಮ್ಮೆಡೆಗೆ ಒಲಿಸಿಕೊಳ್ಳುವ ಕಲೆ ರಕ್ತದಿಂದಲೆ ಬಂದಂತಿತ್ತು.. ಇದು ಸಾಲದೆಂಬಂತೆ ನಾಕಾರು ವರ್ಷಗಳಿಂದ ರಾಜ್ಯದ ಹೆಸರಾಂತ ಪತ್ರಿಕೆಯೊಂದರಲ್ಲಿ ನಿಯಮಿತವಾಗಿ ಲೇಖನಗಳನ್ನು ಬರೆಯುವ ಅವಕಾಶ ಸಿಕ್ಕಿ, ಬರಹದ ಜಗತ್ತಿನಲ್ಲು ತುಸು ಖ್ಯಾತಿಯನ್ನು ತಂದುಕೊಟ್ಟಿದ್ದಲ್ಲದೆ, ನಿಯಮಿತ ಆದಾಯದ ಮೂಲವನ್ನು ಸಹ ಹುಟ್ಟುಹಾಕಿತ್ತು..

ಅವರಿಗಿದ್ದ ಒಬ್ಬನೆ ಮಗ ಶಂಕರ. ದೊಡ್ಡ ಮಗಳು ಪಲ್ಲವಿ ಈಗಾಗಲೆ ಮದುವೆಯಾಗಿ ಅಮೇರಿಕಾದಲ್ಲಿ ಗಂಡನ ಜೊತೆ ನೆಲೆಸಿದ್ದಳು. ಶಂಕರ ಮಾತ್ರ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಕಷ್ಟು ಸಂಪಾದನೆಯಾಗುವ ಮ್ಯಾನೇಜ್ಮೆಂಟಿನ ಗೌರವಯುತ ಹುದ್ದೆಯಲ್ಲಿದ್ದ. ಅವನಿಗಿನ್ನು ಮದುವೆಯಾಗದ ಕಾರಣ ಅಪ್ಪ ಅಮ್ಮನೊಟ್ಟಿಗೆ ಅದೇ ಮನೆಯಲ್ಲೆ ವಾಸಿಸುತ್ತಿದ್ದ. ಆದರೆ ಅವನ ಆದಾಯದ ಆಧಾರವಿಲ್ಲದೆಯೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು ರಾಯರು.

ಎಂದಿಗಿಂತ ತಡವಾಗೆದ್ದು ಬಂದ ಮಗ ಅಪ್ಪನೆದುರಿನ ಜಗುಲಿಯ ಮೇಲೆ ಕುಳಿತಾಗ ಸಾವಿತ್ರಮ್ಮ ಅವನಿಗೆ ಬೆಳಗಿನ ಕಾಫಿ ತಂದಿತ್ತರು.. ಇಷ್ಟೊತ್ತಿಗೆಲ್ಲ ಕೆಲಸಕ್ಕೆ ಹೊರಡಬೇಕಿದ್ದ ಮಗ ಇನ್ನು ರೆಡಿಯೆ ಆಗಿಲ್ಲವಲ್ಲ ಎನಿಸಿ, ‘ಯಾಕೊ ಶಂಕರಾ? ರಜಾನ? ಹುಷಾರಾಗಿದಿಯಾ?’ ಎಂದರು.

‘ಹೂ ಓಕೆ ಇದೀನಪ್ಪ.. ನಿನ್ನೆ ರಾತ್ರಿ ಟೀಮ್ ಡಿನ್ನರ್ ಇತ್ತು ತುಂಬಾ ಲೇಟಾಯ್ತು .. ಎಚ್ಚರವಾಗಲಿಲ್ಲ ಅಷ್ಟೆ..’ ಎಂದ..

‘ಅದು ಸರಿ.. ಅದೇನೊ ಇಂಟರ್ ಪರ್ಸನಲ್ ಸ್ಕಿಲ್ಸ್ ಟ್ರೈನಿಂಗ್ ಸೆಶನ್ ಮಾಡ್ಬೇಕಾಗುತ್ತೆ ಅಂದಿದ್ಯಲ್ಲ? ಡೇಟ್ ಡಿಸೈಡ್ ಆಯ್ತೇನೊ?’

‘ಹೂ.. ಆಗಿದೆ ಅಪ್ಪ.. ನಿಮಗೆ ಡೈರೆಕ್ಟ್ ಮೇಲ್ ಕಳಿಸ್ತೀನಿ ಅಂದ್ರು ಎಚ್. ಆರ್. ಈ ಸಾರಿ ರೇಟ್ ಜಾಸ್ತಿ ಮಾಡಿದೀರಾ ಅಂಥ ಗೊಣಗ್ತಾ ಇದ್ರು..’

‘ಇರ್ಲಿ ಬಿಡೋ.. ನಮ್ ಕೈಲಾಗೋವಾಗ ಮಾಡ್ಕೊಂಡ್ ಬಿಡಬೇಕು.. ಅವರೇನು ಸುಮ್ನೆನಾ ಕೊಡ್ತಾರೆ? ನಮ್ ಸ್ಕಿಲ್ ನೋಡಿ ತಾನೆ ಕೊಡೋದು ‘ ಅಂದರು ರಾಯರು.

ಅವರ ಸ್ವಭಾವ ಅರಿತಿದ್ದ ಶಂಕರ ಮತ್ತೆ ವಾದಿಸಲು ಹೋಗಲಿಲ್ಲ.. ಅವನಿಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತಿತ್ತು.. ತನ್ನ ತಂದೆ ಅದು ಹೇಗೆ ಅಷ್ಟು ಪ್ರಾಕ್ಟಿಕಲ್ ಮನುಷ್ಯನಾಗಲು ಸಾಧ್ಯವಾಯ್ತು? ಎಂದು. ಕೆಲವೊಮ್ಮೆ ಅದು ಕ್ರೂರತೆಯ ಅಂಚಿನತ್ತ ವಾಲಿತೇನೊ ಅನಿಸಿದ್ದೂ ಉಂಟು. ಆದರೆ ಆಗೆಲ್ಲ ಅವರೆ ಏನಾದರು ಸಮಜಾಯಿಷಿ ಕೊಟ್ಟುಬಿಡುತ್ತಿದ್ದರು.. ಕೆಲಸಕ್ಕೆ ಸೇರಿದ ಹೊಸತರಲ್ಲಿ ಅವನ ಅದೆಷ್ಟೊ ದ್ವಂದ್ವಗಳನ್ನು ತೊಡೆದು ಹಾಕಿಲು ಯತ್ನಿಸಿದ್ದು ಅವನ ಮನದಲ್ಲಿ ಇನ್ನೂ ಅಚ್ಚೊತ್ತಿದಂತಿದೆ.. ಇಂದಿಗು ರಾಯರ ವ್ಯಕ್ತಿತ್ವ ಎಂತದ್ದೆಂದು ಅವನಿಗೆ ನಿರ್ಧರಿಸಲು ಸಾಧ್ಯವಾಗಿಲ್ಲ..

ಹಿಂದೊಮ್ಮೆ ರಾಯರು ಅವನದೆ ಕಂಪನಿಯ ಟ್ರೈನಿಂಗಿನಲ್ಲಿ ತರಬೇತುದಾರರಾಗಿ ಬಂದಾಗ , ಅದರ ಭಾಗವಾಗಿ ಕೆಲವು ಗ್ರೂಪ್ ಎಥಿಕೇಟ್ (ಸಮೂಹ ನೀತಿ ಸಂಹಿತೆ)ಗಳನ್ನು ಕಲಿಸಿದ್ದರು. ಅದರಲ್ಲಿ ಬಿಸಿನೆಸ್ ಲಂಚ್ , ಡಿನ್ನರುಗಳಲ್ಲಿ ಹೇಗಿರಬೇಕು, ರೆಸ್ಟೋರೆಂಟಿನಲ್ಲಿ ಹೇಗೆ ವರ್ತಿಸಬೇಕು, ಹೇಗೆ ಪೋರ್ಕು- ಸ್ಪೂನು-ಚಾಕು ಬಳಸಬೇಕು, ಯಾವ ರೀತಿ ಮಾತಾಡಬೇಕು – ಎಂದೆಲ್ಲ ಕಲಿಸಿಕೊಟ್ಟಿದ್ದರು.. ಆಗ ತಂದೆಯ ಬೇರೆಯದೆ ಸ್ವರೂಪವನ್ನು ಕಂಡು ಬೆಕ್ಕಸ ಬೆರಗಾಗಿ ಹೋಗಿದ್ದ ಶಂಕರ.. ಅವನ ಜೊತೆಗಿದ್ದ ಕೆಲವು ವಿದೇಶಿ ಸಹೋದ್ಯೋಗಿಗಳು ರಾಯರ ಕುರಿತು ಮೆಚ್ಚುಗೆ ತೋರಿಸಿದಾಗ ಇದು ‘ತಾನು ಕಾಣದ ಅಪ್ಪನ ವ್ಯಕ್ತಿತ್ವ’ ಎಂದು ಮನದಟ್ಟಾಗಿತ್ತು.. ಆದರೆ ಅದೇ ದಿನ ರಾತ್ರಿ ಮನೆಯಲ್ಲಿ ಊಟಕ್ಕೆ ಕೂತಾಗ ಸಂಪ್ರಾದಾಯಿಕ ಊಟವನ್ನು ಕೈಯಲ್ಲೆ ಚಪ್ಪರಿಸಿಕೊಂಡು, ಬೆರಳು ನೆಕ್ಕುತ್ತ ಉಂಡ ರಾಯರನ್ನು ಕಂಡು ಅಚ್ಚರಿಯಿಂದ ದಿಟ್ಟಿಸಿದ್ದ..

‘ಅಯ್ಯೊ ಪೆದ್ದು .. ಕೇಳಿಲ್ವೇನೊ.. ಆಚಾರ ಹೇಳೊಕೆ ಬದನೆಕಾಯಿ ತಿನ್ನೋಕೆ ಅಂಥ? ಅಲ್ಲಿನ ಎಥಿಕೇಟ್ಸ್ ಎಲ್ಲಾ ವೃತ್ತಿ ಧರ್ಮ.. ಅವರು ಕೊಡೊ ಸಂಭಾವನೆಗೆ ತಕ್ಕ ಹಾಗೆ ನಡೀಬೇಕು.. ಆದರೆ ಮನೇಲಿ? ವಿ ಶುಡ್ ಬಿ ಇನ್ ಅವರ್ ಕಂಫರ್ಟ್ ಜೋನ್.. ನಮ್ಮ ಊಟನೆಲ್ಲ ವೆಸ್ಟರನ್ ಸ್ಟೈಲಲ್ಲಿ ತಿನ್ನೋಕಾಗುತ್ತೇನೊ? ಹೀಗೆ ಬೆರಳು ನೆಕ್ಕೊಂಡು ತಿಂದ್ರೇನೆ ಸುಖ..’ ಅನ್ನುತ್ತ ನಕ್ಕಿದ್ದರು.

ಮತ್ತೊಮ್ಮೆ, ಹೀಗೆ ಮಂಕಾಗಿ ಕೂತಿದ್ದ ಶಂಕರ ಆಫೀಸಿನ ಕುರಿತಾದ ಯಾವುದೊ ನೈತಿಕತೆಯ ದ್ವಂದ್ವಕ್ಕೆ ಸಿಕ್ಕಿ.. ತುಂಬಾ ಡಲ್ಲಾಗಿ ಕೂತಿದ್ದವನನ್ನು ಕೆದಕಿ ಏನಾಯಿತೆಂದು ವಿಚಾರಿಸಿಕೊಂಡು , ಆಮೇಲೆ ಅವರೆ ಕಾರ್ಯತಂತ್ರವನ್ನು ಸೂಚಿಸಿದ್ದರು..

‘ನೋಡೊ ಶಂಕ್ರ.. ನೀನು ಕೆಲಸ ಮಾಡ್ತೀರೊ ದೊಡ್ಡ ಕಂಪನಿ ವಾತಾವರಣದಲ್ಲಿ ‘ಯು ಶುಡ್ ಬಿ ಪೊಲಿಟಿಕಲಿ ಕರೆಕ್ಟ್..’ ನೀನು ನೈತಿಕವಾಗಿ ಸರಿಯೊ , ತಪ್ಪೊ ಅಂಥ ಯೋಚಿಸ್ತಾ ಹೋದ್ರೆ, ಯು ವಿಲ್ ನೆವರ್ ಪ್ರೋಗ್ರೆಸ್.. ನೋಡು ನೀನು ಈಗ ಹೇಳಿದ ಸನ್ನೀವೇಶನೆ ತೊಗೊ.. ನಿನ್ನ ಮನಸಿಗೆ ಸರಿ ಅನಿಸೊ ನೈತಿಕ ದಾರಿ ಹಿಡಿದರೆ ಅದರ ಪರಿಣಾಮದ ಏಟು ಬೀಳೋದು ಯಾರಿಗೆ?’

‘ನನಗೆ.. ನನ್ನ ಭವಿಷ್ಯಕ್ಕೆ.. ನನ್ನ ಪ್ರಮೋಶನ್ ಬೆಳವಣಿಗೆಗೆಲ್ಲ ತೊಡಕಾಗಬಹುದು… ಆದರೆ ಹಾಗಂತ ನಾನು ಅನೈತಿಕವಾಗಿ ನಡಕೊಂಡ್ರೆ, ಆ ಗಿಲ್ಟ್ ಫೀಲಿಂಗ್ ನನ್ನ ಬಿಡುತ್ತಾ? ಆ ಕೆಟ್ಟ ಕರ್ಮ ನನ್ನ ಸುತ್ತಿಕೊಳಲ್ವೆ?’

‘ಯೆಸ್ ಮೈ ಸನ್.. ಪಾಪ ಪ್ರಜ್ಞೆ ಅನ್ನೋದು ಸುಮ್ಮನೆ ಬಿಡೋದಿಲ್ಲ.. ಅದಕ್ಕೆ ನೀನು ಶ್ರೀ ಕೃಷ್ಣನ ರೋಲ್ ಮಾಡೆಲ್ ಆಗಿ ತಗೊಂಡು ಕಾರ್ಯ ತಂತ್ರ ಮಾಡಬೇಕು.. ನಿನಗು ಗಿಲ್ಟ್ ಬರಬಾರದು.. ಜೊತೆಗೆ ನಿನ್ನ ನಿರ್ಧಾರ ನಿನ್ನ ಭವಿಷ್ಯಕ್ಕು ಕೊಡಲಿ ಹಾಕೊ ತರ ಇರಬಾರದು..’

‘ಅಂದ್ರೆ..?’

‘ಅಂದ್ರೆ.. ಕೃಷ್ಣ ಪಾಂಡವರ ಪಕ್ಷ.. ಬಟ್ ಅವನು ಯಾವಾಗಲು ತಪ್ಪು ತೋರಿಸಲಾಗದ ರೀತಿ ಅವನ ನಡೆ ಇರುತ್ತಿತ್ತು. ಹೀ ವಾಸ್ ಆಲ್ವೇಸ್ ಪೊಲಿಟಿಕಲಿ ರೈಟ್.. ಯುದ್ಧಕ್ಕೆ ಮೊದಲು ರಾಯಭಾರಿಯಾಗಿ ಸಂಧಾನ ಮಾಡಲಿಲ್ಲವೆ..? ಯುದ್ಧದಲ್ಲಿ ಆಯುಧ ಹಿಡಿಯದೆ ಇದ್ದರು ಅವನ ಕಾರ್ಯ ತಂತ್ರದಿಂದ ತಾನೆ ಏಳು ಅಕ್ಷೋಹಿಣಿ ಪಾಂಡವರು ಹನ್ನೊಂದು ಅಕ್ಷೋಹಿಣಿ ಕೌರವರನ್ನ ಸೋಲಿಸಿದ್ದು..?’

‘ನಾನು ಈಗ ಹೇಗೆ ನಿಭಾಯಿಸಬೇಕು ಅಂಥ ನೀವೆ ಹೇಳಿ‘ ಎಂದು ಕೈ ಚೆಲ್ಲಿದ ಶಂಕರನ ಕಿವಿಯಲ್ಲಿ ಏನು ಮಾಡಬೇಕೆಂದು ಹೇಳಿದಾಗ ಮತ್ತೆ ಅಚ್ಚರಿಯಲ್ಲಿ ಅವರತ್ತ ನೋಡಿದ್ದ ಶಂಕರ. ತದನಂತರ ಅದು ಅವರು ಹೇಳಿದ ಹಾಗೆಯೆ ಆಗಿದ್ದು ಕಂಡು ‘ಇವರು ಸಹ ಶ್ರೀ ಕೃಷ್ಣನ ತೂಕದವರೆ ..’ ಎಂದು ತೀರ್ಪು ನೀಡಿತ್ತವನ ಮನಸು.. ಅಲ್ಲಿಂದಾಚೆಗೆ ಅವರೆ ಅವನ ಪ್ರೈವೇಟ್ ಕೋಚ್ , ಮೆಂಟರ್, ಕನ್ಸಲ್ಟೆಂಟು ಆಗಿದ್ದು ಸಹಜವೇ ಆಗಿತ್ತು..

*********
ಅಂದೊಂದು ದಿನ ಭಾನುವಾರ ಎಂದಿನಂತೆ ರಾಯರು ಅಂಗಳದಲ್ಲಿ ಪೇಪರ್ ಓದುತ್ತ ಕುಳಿತಾಗ ಯಾರೊ ಹತ್ತಾರು ಜನರ ಗುಂಪೊಂದು ಮನೆಯ ಬಾಗಿಲ ಹತ್ತಿರ ನೆರೆದಿದ್ದು ಕಂಡಿತ್ತು.. ಅವರಲ್ಲೊಬ್ಬ, ಅವರ ಮುಂದಾಳಾಗಿ ಗೇಟಿನ ಚಿಲುಕ ತೆಗೆದು ಒಳಬರಲು ಹವಣಿಸುತ್ತಿದ್ದಾಗ ರಾಯರು ಕೂತಲ್ಲಿಂದಲೆ ಕೇಳಿದರು.. ’ಯಾರಪ್ಪ ಅದು? ಏನು ಬೇಕಿತ್ತು?’

‘ಸಾರ್ ನಿಮ್ಮ ಹತ್ರ ಸ್ವಲ್ಪ ಮಾತಾಡ್ಬೇಕಿತ್ತು..’

‘ಸರಿ.. ನಾನೇ ಬರ್ತಿನಿ ಇರಿ ಗೇಟ್ ಹತ್ರ..’ ಎಂದು ಎದ್ದು ಬಂದಿದ್ದರು..

ಎಲ್ಲರು ಕಾಂಪೌಂಡಿನ ಒಳಗೆ ಬಂದ ಮೇಲೆ ಅವರ ಮಾತಿನ ಗಲಾಟೆಗೆ ಶಂಕರನು ಹೊರಬಂದಿದ್ದ.. ಅಡಿಗೆ ಮನೆಯಲ್ಲಿದ್ದ ಸಾವಿತ್ರಮ್ಮನೂ ಹೊರಬಂದಿದ್ದರು..

ಅವರ ಮಾತಿನ ಜಟಾಪಟಿಯಲ್ಲಿ ಗೊತ್ತಾದದ್ದೇನೆಂದರೆ, ರಾಯರು ವಾರ ವಾರವು ಬರೆಯುತ್ತಿದ್ದ ಅಂಕಣದಲ್ಲಿ ಇತ್ತೀಚೆಗೆ ಬರೆದ ನಾಸ್ತಿಕತೆಯ ಕುರಿತಾದ ಲೇಖನವೊಂದು ಅವರನ್ನೆಲ್ಲ ಸಿಟ್ಟಿಗೆಬ್ಬಿಸಿಬಿಟ್ಟಿದೆ.. ಅದಕ್ಕೆ ಪ್ರತಿಭಟನೆ ಸೂಚಿಸಲು ಅವರಲ್ಲಿಗೆ ಬಂದಿದ್ದಾರೆ..

‘ನೋಡಿ ಸಾರ್.. ನೀವು ವಿಚಾರವಾದಿಗಳೆ ಇರಬಹುದು.. ನಾಸ್ತಿಕರೆ ಇರಬಹುದು.. ದೇವರು ದಿಂಡರು ಅಂಥ ನಂಬದೆ ಇರಬಹುದು.. ಹಾಗಂತ ನಮ್ಮ ನಂಬಿಕೆಗಳನ್ನ ಯಾಕೆ ಪ್ರಶ್ನಿಸ್ತೀರ? ನಮ್ಮ ಸಂಸ್ಕೃತಿ, ಆಚರಣೆಗಳನ್ನ ಮೂಢನಂಬಿಕೆ ಅದೂ ಇದೂ ಅಂತೇಕೆ ಅವಹೇಳನ ಮಾಡ್ತೀರಾ? ನಾವು ಮಾಡೊ ಪೂಜೆ, ಆಚರಣೆ ನಮ್ಮಿಷ್ಠ .. ನೀವು ಯಾರು ಅದನ್ನೆಲ್ಲ ಕೇಳೋರು?’ ಅವರ ಮುಂದಾಳತ್ವ ವಹಿಸಿದ್ದವನು ಪ್ರಶ್ನಿಸಿದ..

ಅವನ ಪ್ರಶ್ನೆಗೆ ‘ಅದು ಹಾಗಲ್ಲಾ..’ ಎಂದೇನೊ ವಿವರಿಸಹೊರಟ ರಾಯರ ಮಾತು ಮುಂದುವರಿಯಬಿಡದೆ ಮತ್ತೊಬ್ಬ ಜೋರು ದನಿಯಲ್ಲಿ ನುಡಿದಿದ್ದ.. ’ ಇವರು ಬರಿ ದೇವರು ಧರ್ಮ ಅಂಥ ಮಾತ್ರ ಹೀಯಾಳಿಸಿ ಬರೆಯೋದಲ್ಲ.. ಹೀ ಇಸ್ ಪೊಲಿಟಿಕಲಿ ಬಯಾಸ್ಡ್.. ಏನೆ ಬರೆದರು ಆ ಒಂದು ಪಕ್ಷದ ಪರವಾಗಿ, ಈ ಪಕ್ಷದ ವಿರೋಧವಾಗಿಯೆ ಬರೆಯೋದು .. ಸೂಕ್ಷ್ಮವಾಗಿ , ಪರೋಕ್ಷವಾಗಿ ಅಜೆಂಡಾ ಇಟ್ಕೊಂಡೆ ಬರೆಯೋದು.. ‘ ಎಂದ ಕೆಂಪಾದ ಮುಖದಲ್ಲಿ..

ಅವನ ಹಿಂದೆಯೊ ಒಬ್ಬರ ನಂತರ ಒಬ್ಬರು ತಲೆಗೊಂದೊಂದರಂತೆ ಮಾತಾಡಲು ಆರಂಭಿಸಿದರು.ಆವರಾರು ರಾಯರಿಗೆ ಮಾತನಾಡಲು ಬಿಡಲೆ ಇಲ್ಲ.. ಅದುವರೆಗು ಎಲ್ಲವನ್ನು ಸುಮ್ಮನೆ ನೋಡುತ್ತಿದ್ದ ಶಂಕರನಿಗೆ ಇದ್ಯಾಕೊ ಎಡವಟ್ಟಾಗುವಂತಿದೆ ಎನಿಸಿ ತಾನು ಮಧ್ಯ ಪ್ರವೇಶಿಸಬೇಕೆಂದು ನಿರ್ಧರಿಸಿದ.. ಹಾಗೆಂದುಕೊಂಡು ಸ್ವಲ್ಪ ಮುಂದೆ ಬರುವಷ್ಟರಲ್ಲಿ ಗುಂಪಿನಿಂದ ತಟ್ಟನೆ ಹಾರಿ ಬಂದ ಕಲ್ಲೊಂದು ಅವನತ್ತಲೆ ಧಾವಿಸಿ ಬಂದಾಗ ತಪ್ಪಿಸಿಕೊಳ್ಳಲು ತುಸು ಬಾಗಿದರು, ಆ ಕಲ್ಲು ಅವನ ಎಡ ಹಣೆಗೆ ತಗುಲಿ ಗಾಯ ಮಾಡಿ ಅಂಗಳದ ಮೂಲೆಯಲ್ಲಿ ಬಿದ್ದಿತು.. ಜಿಲ್ಲೆಂದು ಹಾರಿದ ರಕ್ತವನ್ನು ಕೈಯಿಂದ ಮುಚ್ಚಿಕೊಳ್ಳಲು ಹವಣಿಸುವಾಗಲೆ, ‘ಲೋ ಶಂಕರ ಪೋಲಿಸಿಗೆ ಪೋನ್ ಮಾಡೋ.. ನಿಮ್ಮಪ್ಪನಿಗೆ ಸಿಕ್ಕಾಪಟ್ಟೆ ಹೊಡಿತಿದಾರಲ್ಲೊ..!’ ಎಂದ ಸಾವಿತ್ರಮ್ಮನ ದನಿ ಕೇಳಿಸಿ , ರಕ್ತ ಒಸರುತ್ತಿದ್ದ ಹಣೆಯನ್ನು ಒತ್ತಿ ಹಿಡಿದುಕೊಂಡೆ ಮನೆಯೊಳಗಿದ್ದ ಪೋನಿನತ್ತ ಧಾವಿಸಿದ್ದ..

ಅವನು ಸ್ಟೇಶನ್ನಿಗೆ ಪೋನು ಮಾಡಿ ಬರುವಷ್ಟರಲ್ಲೆ, ‘ಪೋಲಿಸ್’ ಎಂಬ ಶಬ್ಧ ಕೇಳಿಯೊ ಏನೊ ಅಲ್ಲಿ ಬಂದಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದರು.. ಹೋಗುವ ಮುನ್ನ ರಾಯರನ್ನು ಚೆನ್ನಾಗಿ ಥಳಿಸಿಯೆ ಹೋಗಿದ್ದರಾಗಿ, ರಾಯರಿನ್ನು ಶಾಕ್ ನಲ್ಲಿದ್ದವರಂತೆ ಥರ ಥರ ನಡುಗುತ್ತಿದ್ದರು.. ಅವರ ಹಣೆಗು ಕಲ್ಲೊಂದರ ಪೆಟ್ಟು ಬಿದ್ದು ರಕ್ತ ಸುರಿಯುತ್ತಿತ್ತು..

‘ಅಮ್ಮ.. ನಾನು ಮೊದಲು ಅಪ್ಪನನ್ನ ಆಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ.. ಸ್ಟೇಶನ್ನಿಂದ ಯಾರಾದ್ರು ಬಂದ್ರೆ ಅಲ್ಲಿಗೇ ಕಳಿಸು..’ ಎಂದವನೆ ಕಾರಿನತ್ತ ಧಾವಿಸಿದ್ದ..

***********

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದರು ರಾಯರಿನ್ನು ಪೂರ್ತಿ ಚೇತರಿಸಿಕೊಂಡಿರಲಿಲ್ಲ.. ಆ ಆಘಾತ ಅವರನ್ನು ಪೂರ್ತಿ ಕುಗ್ಗಿಸಿಬಿಟ್ಟಿತ್ತು.. ಪೋಲಿಸ್ ಕಂಪ್ಲೈಂಟು ಆದ ಮೇಲು, ಸೋಶಿಯಲ್ ಮೀಡಿಯಾಗಳಲ್ಲಿ ಸುದ್ಧಿವಾಹಿನಿಗಳಲ್ಲಿ ಪ್ರಚಾರವಾಗಿ ಅವರ ಪ್ರತಿಷ್ಠೆಗೆ ದೊಡ್ಡ ಏಟನ್ನೆ ಕೊಟ್ಟಿತ್ತು ಆ ಘಟನೆ.. ಅದುವರೆಗೆ ಮರೆಯಲ್ಲೆ ಏನೊ ಮಾಡಿಕೊಂಡಿದ್ದ ರಾಯರಿಗೆ ಈ ಅನಿರೀಕ್ಷಿತ ಬೆಳವಣಿಗೆ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಘಾಸಿ ಮಾಡಿತ್ತು..

ಅದುವರೆಗು ಅವರು ಬರೆದುದ್ದಾವುದನ್ನು ಅಷ್ಟಾಗಿ ಓದದಿದ್ದ ಶಂಕರ , ಈ ಘಟನೆಯ ನಂತರ ಸಾವಿತ್ರಮ್ಮನನ್ನು ಕೇಳಿ, ಅವರ ಬರಹಗಳನ್ನೆಲ್ಲ ಒಗ್ಗೂಡಿಸಿ ಓದಿದ್ದ.. ಓದುತ್ತ-ಓದುತ್ತ ಅವನಿಗೆ ನಿಜಕ್ಕು ಆಘಾತವೆ ಆಗಿತ್ತು. ಅಂತರಂಗದಲ್ಲಿ ಅಪ್ಪಟ ಆಸ್ತಿಕನಲ್ಲದಿದ್ದರು, ನಾಸ್ತಿಕನೇನು ಅಲ್ಲದ ಅಪ್ಪ ಹೀಗೇಕೆ ಬರೆಯುತ್ತಿದ್ದರೆಂದು ಅವನಿಗೆ ಅರ್ಥವಾಗಲಿಲ್ಲ.. ಈ ಬರಹಗಳಿಗೆಲ್ಲ ಗೌರವ ಸಂಭಾವನೆ ಅಂಥ ಕೊಟ್ಟರು ಅದೇನು ದೊಡ್ಡ ಮೊತ್ತವಾಗುವುದಿಲ್ಲ .. ಅದಕ್ಕೇಕೆ ಇಷ್ಟೊಂದು ರಿಸ್ಕು ತೆಗೆದುಕೊಂಡರು ಎಂದವನಿಗೆ ಅರ್ಥವಾಗಲಿಲ್ಲ.. ಅವರು ಸ್ವಲ್ಪ ಪರವಾಗಿಲ್ಲ ಎನ್ನುವಂತಾದಾಗ , ಅವರನ್ನೆ ನೇರವಾಗಿ ಕೇಳಿದ್ದ..

‘ಆಫ್ಟರಾಲ್ ಅವರು ಕೊಡೊ ೫೦೦-೧೦೦೦ ರೂಪಾಯಿ ಅರೆಕಾಸಿಗೋಸ್ಕರ ಇಷ್ಟೆಲ್ಲ ರಿಸ್ಕ್ ತೊಗೋಬೇಕಾ? ದಟ್ ಟೂ ಎಗೆನೆಸ್ಟ್ ಯುವರು ರೂಟ್ಸ್, ಕಲ್ಚರ್ ಅಂಡ್ ಪೀಪಲ್..?!’

ಅವನ ಮಾತಿಗೆ ಅರೆಗಳಿಗೆ ಮೌನವಾಗಿದ್ದ ರಾಯರು – ‘ಅದು ಅರೆಕಾಸಲ್ಲ ಕಣೋ..’ ಎಂದರು

‘ಮತ್ತೆ?’

ಅವರು ಮಾತಾಡದೆ ಡ್ರಾನಲ್ಲಿದ್ದ ಫೈಲೊಂದನ್ನು ತಂದು ನೋಡಲು ಹೇಳಿದ್ದರು. ಅದನ್ನು ತೆರೆದು ಅದರಲ್ಲಿದ್ದ ಎಂಟ್ರಿಗಳನ್ನು ನೋಡಿ ನಿಜಕ್ಕು ಅವಾಕ್ಕಾಗಿ ಹೋಗಿದ್ದ ಶಂಕರ..

ಅಲ್ಲಿ ನಮೂದಿಸಿದ್ದ ಅಂಕಿಗಳು ಅವನ ಸಂಬಳವನ್ನು ಮೀರಿದ ಅಂಕಿಗಳು.. !

ಗೌರವ ಧನವಾಗಿ ಬಂದದ್ದು ಸಣ್ಣ ಅಂಕಿಗಳೆ ಆದರು , ಅದಾವುದಾವುದೊ ಸಂಸ್ಥೆಗಳ ನಿರ್ದೇಶಕತ್ವ, ಸದಸ್ಯತ್ವ ಇತ್ಯಾದಿಗಳ ಸಂಭಾವನೆಯ ರೂಪದಲ್ಲಿ ಬರುತ್ತಿದ್ದ ಹಣ ಅಷ್ಟೊಂದಿರಬಹುದೆಂದು ಅವನು ಕನಸು ಮನಸಿನಲ್ಲು ಎಣಿಸಿರಲಿಲ್ಲ.. ಜೊತೆಗೆ, ಈ ಸಂಸ್ಥೆಗಳ ನಂಟಿನ ಬಲದಿಂದ ಸಿಕ್ಕುವ ಅಧಿಕಾರದಿಂದಾಗಿ, ಬರಬಹುದಾದ ಮೇಲು ಸಂಪಾದನೆ ರಾಮನ ಲೆಕ್ಕದ್ದಲ್ಲ, ಕೃಷ್ಣನ ಲೆಕ್ಕದ್ದು ! ಅದು ಇದೆಲ್ಲವನ್ನು ಮೀರಿಸಿರಬಹುದೇನೊ..? ಅಪ್ಪ ಸುಲಭವಾಗಿ ಮನೆ ಸಾಲ ತೀರಿಸಿ, ಊರಲ್ಲಿ ಗದ್ದೆ ಜಮೀನು ಕೊಂಡಾಗ ಆ ಹಣವೆಲ್ಲಿಂದ ಬಂದಿರಬಹುದೆಂಬ ವಿಸ್ಮಯಕ್ಕೆಲ್ಲ ಅಂದು ಅವನಿಗೆ ಉತ್ತರ ಸಿಕ್ಕಿತ್ತು.. ಆ ಹೊತ್ತಿನಲ್ಲಿದ್ದ ನೂರಾರು ಪ್ರಶ್ನೆಗಳಲ್ಲಿ ಕೆಲವನ್ನಾದರು ಕೇಳಬೇಕೆಂದು ತಂದೆಯತ್ತ ತಿರುಗಿ.. ‘ಅಪ್ಪಾ..’ ಎಂದ ಶಂಕರ..

ರಾಯರು ಮಾತಾಡಲಿಲ್ಲ.. ಮತ್ತೆ ನಿದ್ದೆ ಮಾಡಿಬಿಟ್ಟರೇನೊ ಎಂದುಕೊಂಡು, ‘ಅಪ್ಪ.. ಅಪ್ಪ..’ ಎಂದು ಮೆಲುವಾಗಿ ಭುಜ ಅಲುಗಾಡಿಸಿದ ಶಂಕರ.. ರಾಯರು ಯಾಕೊ ಪ್ರತಿಸ್ಪಂದಿಸಲಿಲ್ಲ… ಬದಲಿಗೆ ಅವರ ತಲೆ ಒಂದು ಕಡೆಗೆ ವಾಲಿಕೊಂಡು ಬಿದ್ದಿತು.. ಪರೀಕ್ಷೆ ಮಾಡಲು ಬಂದ ಡಾಕ್ಟರ್, ‘ ಸಾರಿ ಇಟ್ ಇಸ್ ಟೂ ಲೇಟ್ ..’ ಎನ್ನುತ್ತ ಬ್ಯಾಗೆತ್ತಿಕೊಂಡು ಹೋಗಿದ್ದರು..

*************

‘ಹಲೋ.. ಶಂಕರ್ ರಾವ್?’

‘ಹೇಳಿ ಮಾತಾಡ್ತಾ ಇದೀನಿ..’

‘ಸಾರ್.. ನಮಸ್ಕಾರ. ನಾನು ನಿಮ್ಮ ತಂದೆಯವರು ಬರೀತಿದ್ದ ನ್ಯೂಸ್ ಪೇಪರ್ ಎಡಿಟರ್ ಪರಮೇಶನ್ ಮಾತಾಡ್ತಾ ಇರೋದು..’

‘ ಮಾತಾಡಿ’

‘ ಹೀಗಾಗಬಾರದಿತ್ತು.. ಮೈ ಹಾರ್ಟ್ ಫೆಲ್ಟ್ ಕಂಡೊಲೆನ್ಸ್…’

‘ಥ್ಯಾಂಕ್ಯೂ..’

‘ಬೈ ದ ವೇ.. ನಿಮ್ಮನ್ನೊಂದು ಮಾತು ಕೇಳ್ಬೇಕಿತ್ತು..’

’ಕೇಳಿ..’

‘ಐ ನೋ ದಿಸ್ ಇಸ್ ನಾಟ್ ದ ರೈಟ್ ಟೈಮ್.. ಬಟ್ ಏನೆ ಆದರು ಲೈಫ್ ಶುಡ್ ಮೂವ್ ಆನ್.. ಅದಕ್ಕೆ ಕೇಳ್ತಿದೀನಿ….’

‘ಏನದು ನೇರವಾಗಿ ಹೇಳಿ‘

‘ಏನಿಲ್ಲ.. ನಿಮ್ಮ ತಂದೆ ಅವರು ಬರೆಯೊ ಬಗ್ಗೆ ಎಷ್ಟು ಹೇಳಿದ್ರೊ ಗೊತ್ತಿಲ್ಲ.. ವಿ ಲಾಸ್ಟ್ ಎ ವಂಡ್ರಪುಲ್ ರೈಟರ್ ಇನ್ ಹಿಮ್… ಬಟ್ ವೀ ಆಲ್ಸೊ ಶುಡ್ ಮೂವ್ ಆನ್ ಅಲ್ವಾ..’

‘ಅದಕ್ಕೆ..?’

‘ಅದಕ್ಕೆ ನಿಮ್ಮ ತಂದೆ ಬರಿತಿದ್ದ ಕಾಲಮ್ ನೀವು ಬರೆಯೋಕೆ ಆಗುತ್ತಾ ಅಂಥ? ಅದಕ್ಕೆ ಬೇಕಾದ ಸಪೋರ್ಟ್ ನಾವು ಮಾಡ್ತೀವಿ.. ಯು ಜಸ್ಟ್ ಫಾಲೊ ವಾಟ್ ಯುವರ್ ಫಾದರ್ ಡಿಡ್.. ಅವರ ರೀತಿಲೆ ಮುಂದುವರೆಸಿದರೆ ಸಾಕು..’

‘ಸಾರಿ.. ಸಾರ್ .. ನನಗೆ ಅವರ ತರ ಅನುಭವ ಇಲ್ಲ.. ಜೊತೆಗೆ ಬರೆಯೋದು ನನಗೆ ಅಷ್ಟೊಂದು ಅಭ್ಯಾಸವಿಲ್ಲ..’

‘ಮಿ. ಶಂಕರ್… ಪೂರ್ತಿ ಕೇಳಿ ಮೊದಲು… ನಾವು ನಿಮ್ಮ ತಂದೆಗೆ ಕೊಟ್ಟಿದ್ದ ಅದೇ ಪ್ಯಾಕೇಜ್ ಆಫರ್ ಮಾಡ್ತೀವಿ… ನಿಮ್ಮ ಮ್ಯಾನೇಜ್ಮೆಂಟ್ ಕುರಿತ ಇಂಗ್ಲೀಷ್ ಆರ್ಟಿಕಲ್ಸನ್ನ ನಾನು ಓದಿದ್ದೀನಿ.. ನಿಮಗೆ ಬರೆಯೊ ಟ್ಯಾಲೆಂಟ್ ಇದೆ.. ಬೇಕಾದ್ರೆ ಇಂಗ್ಲೀಷಲ್ಲೆ ಬರೀರಿ .. ಟ್ರಾನ್ಸ್ಲೇಟ್ ಮಾಡಿಸಿ ಹಾಕಿದರೆ ಆಯ್ತು.. ನಿಮ್ಮ ಫಾಧರ್ ಗೆ ಏನೇನು ಬೆನಿಫಿಟ್ಸ್ ಇತ್ತೊ ಅದೆಲ್ಲವನ್ನ ನಿಮಗೂ ಸಿಗೊ ಹಾಗೊ ಮಾಡೋಣ.. ಯು ವಿಲ್ ಹ್ಯಾವ್ ಎ ಬಿಗ್ ಅಂಡ್ ಗುಡ್ ಫ್ಯೂಚರ್ .. ಯೋಚಿಸಿ ನೋಡಿ..’

ಅವರು ಹೇಳುತ್ತಿದ್ದಂತೆ, ಸಾವಿನ ಮುನ್ನ ತಂದೆ ತೋರಿಸಿದ್ದ ಫೈಲಿನ ಅಂಕಿಗಳೆ ಕಣ್ಮುಂದೆ ಕುಣಿಯತೊಡಗಿದವು ಶಂಕರನಿಗೆ.. ಮತ್ತೊಂದೆಡೆ, ಇದು ನೈತಿಕವೆ? ಸರಿಯೆ? ತಪ್ಪೆ? ದೊಡ್ಡ ರಿಸ್ಕ್ ಅಲ್ಲವೆ? ಎಂಬಿತ್ಯಾದಿ ಆಲೋಚನೆಗಳು ಏಕಕಾಲದಲ್ಲಿ ಧಾಳಿಯಿಯಿಟ್ಟವು..

‘ಮಿ. ಶಂಕರ್? ಯಾಕೆ ಸೈಲೆಂಟ್ ಆಗಿ ಬಿಟ್ರಿ? ಗೊತ್ತು – ಇದನ್ನ ತಕ್ಷಣವೆ ನಿರ್ಧರಿಸೋದು ಕಷ್ಟ ಅಂಥ.. ನನಗೆ ಅರ್ಥವಾಗುತ್ತೆ.. ಬೇಕಿದ್ರೆ ಸ್ವಲ್ಪ ಟೈಮ್ ತೊಗೊಂಡು ಯೋಚಿಸಿ ಹೇಳಿ…’

‘ಛೇ .. ಛೇ ಹಾಗೇನು ಇಲ್ಲ ಸಾರ್..’

‘ದೆನ್..?’

‘ಏನಿಲ್ಲ.. ನಾನು ವರ್ಕಿಂಗ್ ಆದ ಕಾರಣ, ಕಾಂಟ್ರಾಕ್ಚುವಲಿ ಹೇಗೆ ಹ್ಯಾಂಡಲ್ ಮಾಡೋದು ಅಂಥ ಯೋಚಿಸ್ತಿದ್ದೆ..’

‘ಡೊಂಟ್ ವರಿ .. ಅದಕ್ಕೆ ನಮ್ಮ ಕಂಪನಿ ಲಾಯರ್ ಹೆಲ್ಪ್ ಮಾಡ್ತಾರೆ.. ಯು ಜಸ್ಟ್ ಸೇ ಎಸ್..’

ಆ ಹೊತ್ತಲಿ ಯಾಕೊ ಶಂಕರನ ಅಂತರಾಳದಲ್ಲಿ ಒಳದನಿಯೊಂದು ಚೀರಿಕೊಳ್ಳತೊಡಗಿತ್ತು..’ಬೇಡ ಶಂಕರ.. ಬೇಡ.. ಇದು ನೈತಿಕತೆಯಲ್ಲ.. ದಿಸ್ ಇಸ್ ನಾಟ್ ಎ ಎಥಿಕಲ್ ಡೀಲ್.. ಇದು ಪ್ರಲೋಭನೆ.. ಅವರು ನಿನ್ನನ್ನ ಅವರ ಜಾಲಕ್ಕೆ ಸಿಲುಕಿಸಿ, ಅವರ ಬಂಡವಾಳ ಬೇಯಿಸ್ಕೊತಾರೆ.. ಅವರಿಗೆ ಬೇಕಾದ ಹಾಗೆ ಬರಿಬೇಕಾಗುತ್ತೆ.. ಯು ವಿಲ್ ಲೂಸ್ ಯುವರ್ ರಿಯಲ್ ಐಡೆಂಟಿಟಿ.. ಮುಖವಾಡ ಹಾಕಿದ ಬದುಕಾಗುತ್ತೆ ನಿಂದು.. ಬೇಡ ಅಂಥ ಹೇಳಿಬಿಡು.. ಸೇ ನೋ…. ಸೇ ನೋ.. ‘

ಒಂದರೆಗಳಿಗೆ ಮಾತಾಡದೆ ಮೌನವಾಗೆ ಚಿಂತಿಸುತ್ತಿದ್ದ ಶಂಕರ.. ಗೋಡೆಯ ಮೇಲಿದ್ದ ಕ್ಯಾಲೆಂಡರಿನಲ್ಲಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುತ್ತಿದ್ದ.. ಪಕ್ಕದಲ್ಲೆ ಗಂಧದ ಹಾರ ಹಾಕಿದ್ದ ನಗುಮುಖದ ಅಪ್ಪನ ಪೋಟೊ.. ‘ನಿನ್ನ ಕರ್ಮ ನೀನು ಮಾಡು..’ ಎನ್ನುತ್ತಿರುವಂತಿತ್ತು.

‘ಸಾರ್..’

‘ಹೇಳಿ .. ಶಂಕರ್…’

‘ನಿಮ್ಮ ಆಫರಿನ ವಿವರವೆಲ್ಲ ಕಳಿಸಿ… ಹಾಗೆ ನಿಮ್ಮ ಕಂಪನಿ ಲಾಯರ್ ಕಾಂಟಾಕ್ಟ್ ನಂಬರ್ ಕೊಡಿ.. ಆರ್ಟಿಕಲ್ ಯಾವಾಗಿಂದ ಆರಂಭಿಸೋಣ?’

– ಅತ್ತ ಕಡೆಯಿಂದ ಯಾವ ದನಿ ಬರದಿದ್ದರು ತುಟಿಯಂಚಿನ ನಗುವೊಂದು ನಿಶ್ಯಬ್ದ ತರಂಗವಾಗಿ ಬಂದು ಎದೆಗಪ್ಪಳಿಸಿದಂತೆ ಭಾಸವಾಯ್ತು ಶಂಕರನಿಗೆ..!

(ಮುಕ್ತಾಯ)

– ನಾಗೇಶ ಮೈಸೂರು
೨೧.೦೭.೨೦೨೩

ಕಿರುಗತೆ: ಬಂದಳು ಶ್ರಾವಣಿ


ಕಿರುಗತೆ: ಬಂದಳು ಶ್ರಾವಣಿ
—————————————

ಆಷಾಢನೇಕೊ ತುಂಬಾ ಸಂಭ್ರಮದಲ್ಲಿದ್ದ.. !

ಶ್ರಾವಣಿ ಬರುತ್ತಿರುವ ಸುದ್ಧಿಯೆ ಅವನಿಗೆ ಮೃಷ್ಟಾನ್ನ ಭೋಜನದಷ್ಟು ಸಂತಸ ತಂದಿತ್ತು. ಇನ್ನು ದಿನದಿನವು ಏನೊ ನೆನಪಿನ ಜಾಡಿನಲ್ಲಿ ತುಂತುರ ಕಂಬನಿ ಹಾಕುತ್ತ ಕೂರುವ ಅಗತ್ಯವಿಲ್ಲ.. ಶ್ರಾವಣಿ ಬಂದಳೆಂದರೆ ತುಂತುರಿಗೆಲ್ಲ ತಾವಿಲ್ಲ.. ಭೋರ್ಗರೆಯುವ ಮುಸಲಧಾರೆಯೆ ಇಳಿದು ಬಂದ ಹಾಗೆ.. ಆದರೆ ಅವಳದೊಂದು ಲಯವಿದೆ, ಲಾಲಿತ್ಯವಿದೆ, ಮಾಧುರ್ಯವಿದೆ.. ಹರನ ಜಟೆಯಿಂದೆದ್ದ ಗಂಗೆಯೆ ಆದರು, ಇಳೆಯ ಮುಟ್ಟುವಾಗ ಅಪ್ಪಳಿಸದೆ ನೇವರಿಸುವ ಸೂಕ್ಷ್ಮಪ್ರಜ್ಞೆಯೂ ಇದೆ. ಆಷಾಢನಿಗಂತು ಅದೊಂದು ಕಾತುರಪೂರ್ಣ ಸಮಾಗಮದ ಸಂಭ್ರಮ.. ಮಿಲನೋತ್ಸವದ ಮಹಾ ಘಟಬಂಧ.

ಶ್ರಾವಣಿಯೇನು ಸುಮ್ಮನೆ ಬರುವವಳಲ್ಲ.. ಅವಳು ಬರುವ ಉತ್ಸಾಹವೆ ಒಂದು ಉತ್ಸವದಂತೆ.. ನೀರವವಾಗಿ ಖಾಲಿಯೊಡೆಯುತಿದ್ದ ಬದುಕೆಲ್ಲ ಇದ್ದಕ್ಕಿದ್ದಂತೆ ಹಬ್ಬದ ವಾತಾವರಣವಾಗಿ, ಸುತ್ತಮುತ್ತೆಲ್ಲ ಜೀವ ತಳೆದು ಬಿಡುತ್ತವೆ.. ಹಬ್ಬ ಎಂದಾಗ ನೆನಪಾಗುತ್ತದೆ – ಶ್ರಾವಣಿ ಬರುವುದೆ ಹಬ್ಬದುಡುಗೆಯನ್ನುಟ್ಟುಕೊಂಡೆ.. ಅದೇನು ಒಂದೆ? ಎರಡೆ? ಸಾಲು ಸಾಲು ಹಬ್ಬಗಳನ್ನು ಮಡಿಲಲ್ಲಿಟ್ಟುಕೊಂಡೆ ಬರುತ್ತಾಳೆ.. ಎಲ್ಲ ಹಬ್ಬಗಳು, ವಾರ, ತಿಥಿ, ನಕ್ಷತ್ರಗಳು ಅವಳ ತುದಿನಾಲಿಗೆಯಲಿ. ಯಾವ ಹಬ್ಬಕ್ಕೆ ಎನು ಆಚರಣೆ ಮಾಡಬೇಕು? ಯಾವ ಅಡಿಗೆ ಮಾಡಬೇಕು? ಯಾವ ಕ್ರಮ ಅನುಸರಿಸಬೇಕು? – ಎಲ್ಲವೂ ಅವಳಿಗೆ ಕರತಲಾಮಲಕ.. ಬರುತ್ತಿದ್ದ ಹಾಗೆ ನಾಗರ ಪಂಚಮಿ, ಗರುಡ ಪಂಚಮಿ ಎಂದು ಹುತ್ತಕ್ಕೆ ತನಿಯೆರೆಯುವ ಚರ್ಯೆಯಿಂದಲೆ ಆರಂಭ.. ಶ್ರೀಹರಿಯ ವಾಹನನಾದ ವೈನತೇಯನನ್ನು ನಮಿಸುವ, ರಮಿಸುವ ಉತ್ಸಾಹ.. ಅದು ಮುಗಿಯುತೆಂದು ಕೂರುವಂತಿಲ್ಲ – ತಟ್ಟನೆ ಅದ್ದೂರಿಯ ರೇಷ್ಮೆ ಸೀರೆಯನುಟ್ಟು, ಎಲ್ಲ ಒಡವೆ ಒನಪುಗಳಿಂದ ಸಿಂಗರಿಸಿಕೊಂಡು ವೈಭವಯುತವಾಗಿ ಪ್ರತ್ಯಕ್ಷಳಾಗಿ – ‘ಇದೋ ಶ್ರಾವಣ ಶುಕ್ರವಾರದ ವರಲಕ್ಷ್ಮಿ ನಾನೆ ಬಂದಿರುವೆ ನೋಡು’ – ಎನ್ನುತ್ತಾಳೆ.. ವರಲಕ್ಷ್ಮಿ ವ್ರತದ ಸಂಭ್ರಮ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಕಾಣಿಕೆ ನೀಡುವ ಓಡಾಟ ಇನ್ನು ಮುಗಿದೆ ಇಲ್ಲ ಅನ್ನುವಷ್ಟರಲ್ಲಿ ಮತ್ತವಳ ಕಿರು ಕಥನಗಳ ಭರಾಟೆ – ಉಪಾಕರ್ಮಾ, ನೂಲು ಹುಣ್ಣಿಮೆ, ರಕ್ಷಾಬಂಧನ, ರಾಯರ ಆರಾಧನೆ ಎಂದು ಒಂದರ ಹಿಂದೊಂದರಂತೆ ಬೆನ್ನಟ್ಟಿ ಉಸಿರಾಡಲೂ ಪುರುಸೊತ್ತಿಲ್ಲದಂತೆ ಅದರಲ್ಲೆ ಮುಳುಗಿಹೋಗುತ್ತಾಳೆ..

ಅಷ್ಟಕ್ಕಾದರು ನಿಂತು ಸುಧಾರಿಸುತ್ತಾಳೆಯೆ ಶ್ರಾವಣಿ? ಅದವಳ ಜಾಯಮಾನವೆ ಅಲ್ಲ.. ‘ಮುಗಿಯಿತೇನೆ?’ಅನ್ನುವುದಕ್ಕಿಲ್ಲ – ‘ಬಂತಲ್ಲಾ ಜನ್ಮಾಷ್ಟಮಿ’ ಅನ್ನುತ್ತ ಕೃಷ್ಣಸಖಿಯಾಗಿಬಿಡುತ್ತಾಳೆ.. ಇದರ ನಡುವೆ ವಾರವಾರವು ಮಂಗಳ ಗೌರಿ ವ್ರತ ಬೇರೆ. ‘ಸದ್ಯ ಇನ್ನಾದರು ಎಲ್ಲಾ ಮುಗಿಯಿತಲ್ಲ ನಿನ್ನ ಶ್ರಾವಣದ ಸಂಭ್ರಮ? ’ ಎಂದರೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತಾಳೆ -‘ ಎಲ್ಲಿ ಮುಗಿಯಿತು?’ ಎನ್ನುವ ಭಾವದಲ್ಲಿ.. ‘ಇನ್ನೂ ಮುಗಿದಿಲ್ಲವಾ?’ ಎಂದರೆ ‘ಇನ್ನೇನು ನಮ್ಮ ಜೊತೆಯಿರಲು ತಂಗೀ ಭಾದ್ರಪದ ಬರುತ್ತಿದ್ದಾಳಲ್ಲ?’ ಎಂದು ಮುಗುಳ್ನಗುತ್ತಾಳೆ.

‘ಒಬ್ಬಳ ಕಾಟಕೆ ಸಾಕಾಗಿ ಹೋಗಿದೆ, ನಿಂಗೆ ಇಬ್ಬರು ಹೆಂಡಿರೆ ಸದಾಶಿವಾ?’ ಎನ್ನುವ ಹಾಡಿನಂತೆ ಇನ್ನು ಈ ಅಕ್ಕತಂಗಿಯರು ಸೇರಿಕೊಂಡರೆ ಮುಗಿದೇ ಹೋಯ್ತು.. ‘ಶ್ರಾವಣಿ ಅಕ್ಕ – ನಿಂಗೆ ಸುಸ್ತಾಗಿ ಹೋಗಿದೆ ಸ್ವಲ್ಪ ಸುಧಾರಿಸಿಕೊ.. ನಾನು ಬಂದಿದ್ದೀನಲ್ಲ – ಎಲ್ಲ ನೋಡ್ಕೋತೀನಿ‘ – ಎನ್ನುತ್ತ ಸೆರಗು ಕಟ್ಟಿ ನಿಲ್ಲುತ್ತಾಳೆ ಭಾದ್ರಪದೆ. ಥೇಟ್ ಶ್ರಾವಣಿಯಂತೆ ಅವಳ ಅವತಾರ ಸಹ. ಸ್ವರ್ಣಗೌರಿ ವ್ರತ ಮತ್ತು ವಿನಾಯಕ ಚತುರ್ಥಿಯಿಂದ ಶುರು ಮಾಡುತ್ತಾಳೆ ತನ್ನ ಅವತಾರವನ್ನ. ಅಲ್ಲಿಂದ ಋಷಿ ಪಂಚಮಿ, ಅನಂತ ಪದ್ಮನಾಭ ವ್ರತ, ಮಹಾಲಯ ಅಮಾವಾಸೆ, ನವರಾತ್ರಿ ಪೂಜೆ, ಸರಸ್ಪತಿ ಪೂಜೆ, ಗೊಂಬೆ ಹಬ್ಬ, ಆಯುಧ ಪೂಜೆ, ವಿಜಯದಶಮಿ ಎನ್ನುತ್ತ ಇನ್ನೊಂದಷ್ಟು ಕಲೆಹಾಕಿ ಪೂರ್ಣ ಧಾಂಧಲೆ ಎಬ್ಬಿಸಿಬಿಡುತ್ತಾಳೆ.. ಇನ್ನೇನು ಇವರ್ಯಾರು ಅಕ್ಕತಂಗಿಯರು ಶಾಂತರಾಗುವುದೆ ಇಲ್ಲವೆ? ಎನಿಸುವ ಹೊತ್ತಿಗೆ ಆಗಲೆ ಕಾಲಡಿ ಬಂದು ಬಿದ್ದಿರುತ್ತದೆ – ದೀಪಾವಳಿಯ ಪಟಾಕಿ ಸಂಭ್ರಮ – ‘ನರಕ ಚತುರ್ದಶಿ, ನೀರು ತುಂಬುವ ಹಬ್ಬ, ಬಲಿ ಪಾಡ್ಯಮಿ’ – ಎನ್ನುತ್ತ ಹಣತೆಯ ಬೆಳಕಿನ ಸ್ವಗತಗಳಲ್ಲಿ ಜೋತಾಡಿಸಿಬಿಡುತ್ತಾರೆ..
ಸಾಲು ಸಾಲು ದೀಪಗಳಂತೆ ಸಾಲು ಸಾಲು ಸಂಭ್ರಮ..

ಆಷಾಢನಾದ ನನಗೆ ಮಾತ್ರ ಇದಕ್ಕೆಲ್ಲ ಆರಂಭದ ಬತ್ತಿ ಹಚ್ಚಿ, ತೈಲ ತುಂಬಿ ಶುಭಾರಂಭ ಮಾಡುವ ಶ್ರಾವಣಿಯ ಮೇಲೇ ದಟ್ಟ ಪ್ರೀತಿ-ಪ್ರೇಮ-ಪ್ರಣಯ-ಮತ್ತು ಪರಿಣಯ.. ಅವಳಿಗಾಗಿ ಕಾದು ಕೂತು ಎಂದೂ ನಿರಾಶನಾಗಿದ್ದೇ ಇಲ್ಲ.

ಅದಕ್ಕೆ ಎಂದಿನಂತೆ ಲವಲವಿಕೆಯಿಂದ – ‘ಬಾ ಬಾರೆ ಶ್ರಾವಣಿ… ಆಷಾಢನ ಸಂಭ್ರಮದ ಕರೆಯಿದು, ಮೊರೆಯಿದು..! ತವರಿಂದ ಪತಿ ಗೃಹವನ್ನು ಸೇರುವ ನಿನ್ನ ಉತ್ಸಾಹ ಇನ್ನೂ ಅದಮ್ಯವಾಗಲಿ…!’ಎನ್ನುತ್ತಾನೆ..

ಇದುವರೆಗು ಅವಳು ತನ್ನ ಭೇಟಿಯನ್ನು ತಪ್ಪಿಸಿದ್ದೇ ಇಲ್ಲ..!.

  • ನಾಗೇಶ ಮೈಸೂರು
    ೧೯.೦೮.೨೦೨೩

(Picture source: internet / social media)

ಸಣ್ಣಕಥೆ: ಹುರ್ರೆ..!



(Picture source: internet / social media)

‘ವರ್ಕ್ ಔಟ್ ಆಗುತ್ತೆ ಅಂತೀಯಾ?’ ಅನುಮಾನದಲ್ಲೆ ಕೇಳಿದಳು ವಿದೂಷಿ..

‘ಆಗುತ್ತೊ ಇಲ್ವೊ ಟ್ರೈ ಅಂತು ಮಾಡ್ಬೇಕಲ್ವಾ?’ ಎಲ್ಲೊ ನೋಡುತ್ತ, ಏನೊ ಆಲೋಚಿಸುತ್ತಲೆ ಉತ್ತರಿಸಿದ ಜೀಮೂತ.

‘ಸರಿ.. ನೀನು ಹೇಗೆ ಹೇಳ್ತಿಯೊ ಹಾಗೆ..’ ಎಂದು ಮೌನದ ಸೆರಗಿಗಂಟಿಕೊಂಡವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಹೇಳಿದ – ‘ ನೋಡು ವಿಧೂ.. ಇದು ನಮ್ಮಿಬ್ಬರ ಇಷ್ಟಾನಿಷ್ಟದ ಪ್ರಶ್ನೆಯಲ್ಲ.. ಅವರಿಬ್ಬರು ಇದನ್ನ ಹೇಗೆ ತೊಗೋತಾರೊ ಗೊತ್ತಿಲ್ಲ.. ಈ ಕಡೆ ಅರ್ಥವಾಗದಷ್ಟು ತೀರಾ ಚಿಕ್ಕವರು ಅಲ್ಲಾ , ಎಲ್ಲಾ ಗೊತ್ತಾಗೊಷ್ಟು ಪಕ್ವತೆ ಇರೊ ದೊಡ್ಡವರು ಅಲ್ಲ..’

‘ಅದು ಗೊತ್ತು… ಆದರು ಅವರಿಗೋಸ್ಕರನಾದ್ರು ನಾವೊಂದು ದಾರಿ ಹಿಡಿಲೇ ಬೇಕಲ್ವ? ಇಲ್ಲಾಂದ್ರೆ ಈ ಡೆಡ್ ಲಾಕ್ ಮುರಿಯೋದಾದ್ರು ಹೇಗೆ?’

ಜೀಮೂತನಿಗು ಅದು ಸ್ಪಷ್ಟವಿತ್ತು.. ಅರೆಗಳಿಗೆ ಅವನೂ ಏನು ಮಾತಾಡಲಿಲ್ಲ.. ಸುಮಾರು ಕ್ಷಣಗಳ ಮೌನದ ನಂತರ ಅವನೇ ಮಾತಾಡಿದ.. ‘ ಓಕೆ ವಿದೂ.. ಇದು ನಾವು ಎಷ್ಟೆ ಚರ್ಚಿಸಿದರು ತಂತಾನೆ ನಿರ್ಧಾರವಾಗೊ ವಿಷಯ ಅಲ್ಲ.. ಲೆಟ್ ಅಸ್ ಟ್ರೈ ಅವರ್ ಬೆಸ್ಟ್.. ಈ ಸಂಡೆ ಅವರಿಬ್ಬರನ್ನು ಹೊರಗೆ ಕರೆದುಕೊಂಡು ಹೋಗೋಣ.. ಕ್ಷೇಮ ನಿನ್ನ ಜೊತೆ ಬರಲಿ.. ಬೆಳಗಿನಿಂದ ಸಂಜೆ ತನಕ ಹೇಗಿರ್ತಾಳೆ ನೋಡೋಣ.. ನಿನ್ನ ಜೊತೆಲಿ ಆರಾಮವಾಗಿದ್ರೆ, ದಟ್ ಮೇ ಬಿ ಅವರ್ ಫಸ್ಟ್ ವಿನ್..’

‘ಹಾಗೆಯೆ ನೀನು ಶುಭನ ಜೊತೆ ಇರ್ತೀಯಾ.. ದಿನವೆಲ್ಲ.. ರೈಟ್..?’

‘ಯೆಸ್… ನಮ್ಮಿಬ್ಬರಿಗು ಇದು ಸುಲಭವಾಗಿ ಸಾಧ್ಯವಾದರೆ, ಆಮೇಲೆ ಕೊನೆಯ ಪರೀಕ್ಷೆ.. ದ ಲಾಸ್ಟ್ ಲಿಟ್ಮಸ್ ಟೆಸ್ಟ್..’

‘ಏನದು..?’

‘ಅವರಿಬ್ಬರನ್ನ ಕರೆದುಕೊಂಡು ನಾವು ಮೊದಲ ಸಾರಿ ಭೇಟಿಯಾದ ಈ ಪಾರ್ಕಿಗೆ ಬರೋಣ.. ಒಟ್ಟಾಗಿ. ಅವರಿಬ್ಬರು ಜೊತೆಯಿದ್ದಾಗ ಹೇಗಿರ್ತಾರೆ , ನಮ್ಮ ಜೊತೆಯನ್ನ ಹೇಗೆ ಅಕ್ಸೆಪ್ಟ್ ಮಾಡ್ತಾರೆ ಅಂಥ ಗೊತ್ತಾಗುತ್ತೆ..’

‘ಅದು ಸರಿ.. ಈ ಸಂಡೆ ಹೋಗೋಕೆ ಅವರನ್ನ ಒಪ್ಪಿಸೋದು ಹೇಗೆ?’

‘ಅದು ಸಿಂಪಲ್.. ಹೇಗು ನಾವವರಿಗೆ ಅಪರಿಚಿತರಲ್ಲ.. ಕ್ಷೇಮನಿಗೆ ಪ್ರಾಣಿ, ಪಕ್ಷಿಗಳು ಅಂದ್ರೆ ತುಂಬಾ ಇಷ್ಟ.. ಟೇಕ್ ಹರ್ ಟು ಜೂ ಆರ್ ಬರ್ಡ್ಸ್ ಪಾರ್ಕ್.. ಇನ್ನು ಅವಳಿಗೆ ಯಾವ ಚಾಕಲೇಟ್ ಇಷ್ಟ, ಯಾವ ಐಸ್ಕ್ರೀಮ್ ಇಷ್ಟ ಅಂತ ನಿನಗೇ ಗೊತ್ತಲ್ಲ..’

‘ಅದೇನೊ ಸರಿ.. ಆದರು ಅವಳು ಅಪ್ಪನಿಲ್ಲದೆ ಒಬ್ಬಳೆ ಬರ್ತಾಳ ಅನ್ನೋದು ಪ್ರಶ್ನೆ.. ಏನಿವೇ ಟ್ರೈ ಮಾಡೋಣ..’ ಎಂದ ವಿದೂಷಿ, ಹಾಗೆ ಮುಂದುವರೆದು, ‘ ಹಾಂ.. ಅಂದ ಹಾಗೆ ಶುಭನಿಗೆ ಜೂ ಗೀ ಎಲ್ಲಾ ನಡೆಯಲ್ಲ.. ಹೀ ಲವ್ಸ್ ವಾಟರ್ ಸ್ಪೋರ್ಟ್ಸ್ .. ಯಾವುದಾದರು ಥೀಮ್ ಪಾರ್ಕಿಗೆ ಕರೆದುಕೊಂಡು ಹೋಗು..’

‘ನೀನಿರದೆ ಇದ್ರು ಬರ್ತಾನಲ್ವ ಯಾವುದೆ ಪ್ರಾಬ್ಲಮ್ ಇರದೆ..?’

‘ಯು ಆರ್ ಎ ಗ್ರೋನ್ ಅಪ್ ಕಿಡ್.. ಯು ಶುಡ್ ಗೊ ವಿತ್ ಅಡಲ್ಟ್ ಮೆನ್ ಅಂಥ ಬ್ರೈನ್ ವಾಶ್ ಮಾಡ್ತೀನಿ ಇವತ್ತು.. ರೆಡಿಯಾಗ್ತಾನೆ ಬಿಡು..’ ಎಂದು ನಕ್ಕಳು ವಿದೂಷಿ. ಅವಳ ನಗೆಯ ಜತೆ ತನ್ನ ನಗೆ ಸೇರಿಸುತ್ತ ಅವಳ ಕೈ ಹಿಡಿದುಕೊಂಡ ಜೀಮೂತ..


ಹಿಲ್ ವ್ಯೂ ಅಪಾರ್ಟ್ಮೆಂಟಿನ ಒಂದೇ ಪ್ಲೋರಿನಲ್ಲಿದ್ದ ಎದುರು ಬದುರಿನ ಫ್ಲಾಟಿನಲ್ಲಿದ್ದವರು ವಿದೂಷಿ ಮತ್ತು ಜೀಮೂತ.. ನೆರೆಹೊರೆಯಾಗಿ ಪರಸ್ಪರ ಪರಿಚಯವಿರದಿದ್ದರು ಇಬ್ಬರು ಮಕ್ಕಳ ಜೊತೆ ಆಟವಾಡಿಸಲೊ, ಸ್ವಿಮಿಂಗ್ ಪೂಲಿಗೊ, ಜಿಮ್ಮಿಗೊ ಬಂದಾಗ ಪರಸ್ಪರ ದರ್ಶನವಾಗಿದ್ದು ಪರಿಚಯವಾಗಿ ಈಗ ಸ್ನೇಹಕ್ಕೆ ತಿರುಗಿತ್ತು.. ಕ್ಷೇಮ ಶುಭ ಹೋಗುತ್ತಿದ್ದ ಶಾಲೆ ಒಂದೇ ಆದ ಕಾರಣ , ಒಂದೇ ಬಸ್ಸಿನಲ್ಲಿ ಹೋಗಿ ಬರುತ್ತಿದ್ದ ಪರಿಚಯವೂ ಸೇರಿಕೊಂಡಿತ್ತು.. ತಿಂಗಳುಗಟ್ಟಲೆಯ ಪರಿಚಯ ಮಕ್ಕಳ ಹುಟ್ಟು ಹಬ್ಬಕ್ಕೆ ಒಂದು ಕಡೆ ಸೇರುವಂತೆ ಮಾಡಿ, ಈಚೆಗೆ ಆಗಾಗ ಬಂದು ಕಾಫಿ , ಟೀ ಕುಡಿದು ಹೋಗುವ ಮಟ್ಟಕ್ಕೆ ಮುಟ್ಟಿತ್ತು.. ಇವನು ಬಿಜಿನೆಸ್ ಟ್ರಿಪ್ ಹೋದಾಗ ಮಗನನ್ನು ಅವಳ ಆರೈಕೆಯಲ್ಲಿ ಬಿಟ್ಟು ಹೋಗುವುದು, ಅವಳು ಹೋದಾಗ ಕ್ಷೇಮನ ಯೋಗಕ್ಷೇಮಕ್ಕೆ ಇವನು ಸಹಕರಿಸುವುದು – ಹೀಗೆ ಗಾಢವಾಗುತ್ತಿದ್ದ ಸ್ನೇಹ ಇನ್ನೂ ಆಳವಾದ ಮಟ್ಟಕ್ಕೆ ಮುಟ್ಟಿದ್ದು ಕೂಡ ಅವರರಿವಿಲ್ಲದೆಯೆ ನಡೆದು ಹೋಗಿತ್ತು.. ಒಂದು ದಿನ ಮಕ್ಕಳಿಬ್ಬರು ಆಚೆ ಬಾಲ್ಕನಿಯಲ್ಲಿ ಆಡಿಕೊಳ್ಳುತ್ತಿದ್ದ ಹೊತ್ತಲ್ಲಿ, ತಟ್ಟನೆ ಪ್ರಸ್ತಾಪಿಸಿದ್ದ ಜೀಮೂತ.

‘ವಿದೂಷಿ… ನಿಮ್ಮನ್ನೊಂದು ಮಾತು ಕೇಳಬೇಕೂಂತ ತುಂಬಾ ದಿನದಿಂದ ಅನಿಸ್ತಾ ಇದೆ.. ತಪ್ಪು ತಿಳಿಯೋದಿಲ್ಲ ಅಂದ್ರೆ ಕೇಳಲಾ?’ ಎಂದಾಗ ಅವನೇನು ಕೇಳಬಹುದೆಂಬ ಸೂಕ್ಷ್ಮ ಊಹೆಯಿಂದಲೆ ಮೆಲ್ಲಗೆ ಬೆವರುತ್ತಲೆ ಹೇಳಿದ್ದಳು – ‘ಹೂಂ.. ಕೇಳಿ..’

‘ತಪ್ಪು ತಿಳಿಯಬೇಡಿ.. ನಾನು ಕೇಳಿದ್ದು ನಿಮಗೆ ಓಕೆ ಆಗದಿದ್ದರು ನಾವು ಈಗ ಇರುವಂತೆಯೆ ಮುಂದುವರೆಸಿಕೊಂಡು ಹೋಗಬೇಕು.. ಆಯ್ತಾ.. ? ದಿಸ್ ಶುಡ್ ನಾಟ್ ಚೆಂಜ್..’

‘ಅದೇನು ಪೀಠಿಕೆ ಬಿಟ್ಟು ವಿಷಯಕ್ಕೆ ಬನ್ನಿ ಜೀಮೂತ್..’

‘ನೀವೆ ನೋಡ್ತಾ ಇದೀರಾ.. ಹೌ ವಿ ಆರ್ ಏಬಲ್ ಟು ಹೆಲ್ಪ್ ಈಚ್ ಅದರ್.. ನಿಮಗೆ ಗೊತ್ತು ಕ್ಷೇಮ ಹುಟ್ಟಿದ ಆರೇ ತಿಂಗಳಿಗೆ ಅವರಮ್ಮ ನಮ್ಮನ್ನೆಲ್ಲ ಬಿಟ್ಟುಹೋದಳು.. ಆಗಿನಿಂದ ಅವಳಿಗೆ ನಾನೆ ಅಪ್ಪ ಅಮ್ಮ.. ಎಲ್ಲಾ..’

‘ಗೊತ್ತು.. ನಾನೆ ನೋಡ್ತಿದಿನಲ್ಲ..’

‘ಹಾಗೆಯೆ ಐ ನೋ ದಟ್ ಯು ಲಾಸ್ಟ್ ಯುವರ್ ಹಸ್ಬಂಡ್ ಇನ್ ಎನ್ ಆಕ್ಸಿಡೆಂಟ್.. ಆಗಿನಿಂದ ನೀವೆ ಶುಭನನ್ನ ನೋಡಿಕೊಳ್ತಾ ಇರೋದು..’

ಹೌದೆನ್ನುವಂತೆ ತಲೆಯಾಡಿಸಿ – ‘ಅದಕ್ಕೇನೀಗ?’ ಎನ್ನುವಂತೆ ಅವನತ್ತ ನೋಡಿದಳು..

‘ಅದೇನೆ ಆದರು, ವಿತ್ ಅವರ್ ವರ್ಕಿಂಗ್ ಕಮಿಟ್ಮೆಂಟ್ಸ್, ನಾವು ಒಬ್ಬೊಬ್ಬರ ಪಾತ್ರವನ್ನ ಸಮರ್ಥವಾಗಿ ತುಂಬಬಹುದೆ ಹೊರತು ಇಬ್ಬಿಬ್ಬರದಲ್ಲ.. ‘

‘ಸೋ..’

‘ಸೋ.. ನಾವಿಬ್ಬರು ಹೇಗು ಹೊಂದಾಣಿಕೆ ಮನದೋರು.. ನಾವಿಬ್ಬರು ಒಂದಾದರೆ, ಇಬ್ಬರಿಗು ಒಂದು ಪೂರ್ಣ ಕುಟುಂಬ , ಸಂಸಾರ ಸಿಕ್ಕಿದಂತಾಗುತ್ತಲ್ಲವಾ? ವೀ ಕುಡ್ ಬಿ ಎ ಕಂಪ್ಲೀಟ್ ಫ್ಯಾಮಿಲಿ ಫಾರ್ ದೇರ್ ಸೇಕ್.. ಯೋಚಿಸಿ ನೋಡಿ.. ನಿಮಗು ಇದು ಓಕೆ ಅನಿಸಿದರೆ ವಿ ಕ್ಯಾನ್ ಟೇಕ್ ಇಟ್ ಫಾರ್ವರ್ಡ್..’

ಈ ಮಾತಾಗಿ ಒಂದಷ್ಟು ವಾರಗಳ ನಂತರ ವಿದೂಷಿಯು ತನ್ನ ಸಮ್ಮತಿಯನ್ನು ಸೂಚಿಸಿದ್ದಳು – ತನ್ನ ಮನೆಯವರ ಜತೆ ಚರ್ಚಿಸಿ ಒಪ್ಪಿಗೆ ಪಡೆದ ಮೇಲೆ.. ಜೀಮೂತನ ಅಣ್ಣನೊಬ್ಬನ ಹೊರತಾಗಿ ಬೇರೆ ಯಾರು ಇಲ್ಲದ ಕಾರಣ, ಅಲ್ಲಷ್ಟು ತೊಡಕಿರಲಿಲ್ಲ..

ಈಗ ಆ ಯೋಜನೆಯನ್ನು ಕಾರ್ಯಗತಗೊಳಿಸುವ ಮುಂದಿನ ಅಂಗವಾಗಿ ಮಕ್ಕಳಿಬ್ಬರನ್ನು ಅದಕ್ಕೆ ಸಮ್ಮತಿಸುವಂತೆ ಮಾಡಬೇಕಿತ್ತು.. ಅದಕ್ಕೆ ಈ ಸಂಡೇ ಪ್ಲಾನಿನ ಐಡಿಯಾ ಎಲ್ಲಾ ಬಂದಿದ್ದು..

‘ಕ್ಷೇಮ ಜೊತೆ ಮಾತಾಡಿ ರೆಡಿ ಮಾಡಿದೆಯ ಜೀಮೂ..?’

‘ಹೂಂ.. ಶೀ ಇಸ್ ವೆರಿ ಎಕ್ಸೈಟೆಡ್.. ಟೀಚರ ಜೊತೆ ಸ್ಕೂಲ್ ಟ್ರಿಪ್ ಹೋದ ಹಾಗೆ ಇರುತ್ತಲ್ವಾ ಅಂತಿದ್ಲು..’

‘ಶುಭನ ಜೊತೆ ಜಾಸ್ತಿ ಮಾತಾಡಲಿಲ್ಲ.. ನೀವು ಥೀಮ್ ಪಾರ್ಕಿಗೆ ಕರ್ಕೊಂಡ್ ಹೋಗ್ತೀರಾ.. ಜೊತೆ ಹೋಗಿ ಬಾ.. ಅಲ್ಲೆಲ್ಲ ನಾನು ಕರ್ಕೊಂಡು ಹೋಗೋಕೆ ಆಗಲ್ಲ..’ ಎಂದೆ

‘ಏನಂದ ಅದಕ್ಕೆ..?’

‘ಕ್ಷೇಮಾನು ಬರ್ತಾಳಲ್ವಾ..? ಅಂಥ ಕೇಳಿದ.. ನಾನೇನು ಉತ್ತರಿಸಲಿಲ್ಲ..’

‘ಓಕೆ.. ನೋಡೋಣ ಏನಾಗುತ್ತೊ .. ಅಲ್ ದ ಬೆಸ್ಟ್..’

‘ಯೂ ಟೂ..’


ಅವರು ಹತ್ತಿರವಾದ ಮೇಲೆ ಮೊದಲ ಬಾರಿ ಬಂದು ಭೇಟಿಯಾಗಿದ್ದ ಪಾರ್ಕಿನ ಜಾಗವದು.. ಅವರಿಬ್ಬರೆ ಅಲ್ಲಿಗೆ ಅನೇಕ ಸಾರಿ ಬಂದು ಹೋಗಿದ್ದಾರೆ.. ಆದರೆ ಈ ಬಾರಿ ಮಾತ್ರ ಇಬ್ಬರಲ್ಲು ಏನೊ ಒಂದು ರೀತಿಯ ವಿಲಕ್ಷಣ ಭಾವ, ಕಂಪನದ ಅನುಭೂತಿ..

‘ನಿನ್ನೆ ಜೂ ನಲ್ಲಿ ಹೇಗಿದ್ಲು ಕ್ಷೇಮಾ?’

‘ಅಲ್ಲೇನೊ ಓಕೆ ಇದ್ಲು .. ಇಲ್ಲಿ ಈವತ್ತು ಹೇಗಿರ್ತಾಳೊ ನಂಗೊತ್ತಿಲ್ಲ.. ಅದು ನಾವು ಹೇಳೊದನ್ನ ಕೇಳಿದ ಮೇಲೆ… ಶುಭ ಹೇಗಿದ್ದ..?’

‘ಅವನು ಚೆನ್ನಾಗಿ ಎಂಜಾಯ್ ಮಾಡಿದ.. ಐ ಥಿಂಕ್ ಹಿ ಲೈಕ್ಡ್ ಮೈ ಕಂಪನಿ.. ಆದರೆ ಇವತ್ತು ನಾವು ಹೇಳೊ ಮಾತು ಹೇಗೆ ತೊಗೋತಾನೊ ನನಗು – ನಾಟ್ ಶ್ಯೂರ್..’ ಎಂದ ಜೀಮೂತ ತುಸು ಕಳವಳದ ದನಿಯಲ್ಲೆ..

‘ಅವರಿಗೆ ವಿಷಯ ಹೇಗೆ ಹೇಳೋದು..?’

‘ನನಗೂ ಅದೇ ಗೊತ್ತಾಗ್ತಿಲ್ಲ… ನಿಮ್ಮಿಬ್ಬರಿಗು ನಾವು ಇನ್ಮುಂದೆ ಅಪ್ಪ ಅಮ್ಮಾ ಆಗ್ತೀವಿ.. ನೀವಿಬ್ರು ಅಣ್ಣ ತಂಗಿ – ಬ್ರದರ್ ಸಿಸ್ಟರ್ ಆಗಿ ಒಟ್ಟಿಗೆ ಇರಬೋದು.. ಓಕೇನಾ? ಅಂಥ ಕೇಳೋಣ್ವಾ..’

‘ಅಯ್ಯೊ .. ಅದೇನು ಅವರಿಗೆ ಅರ್ಥವಾಗುತ್ತಾ? ಅವು ಹೆಂಗೆ ತೊಗೊಳುತ್ವೋ ಗೊತ್ತಿಲ್ಲ.. ಅವರಿಗೆ ಹರ್ಟ್ ಆಗದ ಹಾಗೆ, ಸರಳವಾಗಿ ಹೇಳೋದು ಹೇಗೆ..?’

ಇಬ್ಬರು ಈ ಜಿಜ್ಞಾಸೆಯಲ್ಲೆ ಕಳೆದು ಹೋಗಿದ್ದಾಗ ಶುಭ, ಕ್ಷೇಮ ತಮ್ಮೊಡನಿದ್ದ ಚೆಂಡಿನ ಜೊತೆ ಆಟವಾಡುತ್ತ ಸ್ವಲ್ಪ ದೂರ ಬಂದಿದ್ದರು..

‘ನಿನ್ನೆ ಜೂ ಚೆನ್ನಾಗಿತ್ತ..ಕ್ಷೇಮಾ….?’

‘ಹೂಂ.. ಚೆನ್ನಾಗಿತ್ತು .. ನಿನ್ನ ಮಮ್ಮಿ ಒಳ್ಳೆ ಮಮ್ಮಿ.. ನನ್ನ ತುಂಬಾ ಮುದ್ದು ಮಾಡ್ತಾರೆ .. ನೀನು ಎಲ್ಲಿಗೆ ಹೋಗಿದ್ದೆ, ಪಪ್ಪಾ ಜೋತೆಲಿ?’

‘ನಾನು ವಾಟರ್ ಪಾರ್ಕಲ್ಲಿ ಎಂಜಾಯ್ ಮಾಡಿದೆ.. ನಿಮ್ ಪಪ್ಪನು ಗ್ರೇಟ್ ಡ್ಯಾಡ್.. ನಂಗೆ ಸ್ವಿಮ್ಮಿಂಗ್ ಕಲಿಸಿಕೊಟ್ರು ಗೊತ್ತಾ..?’

‘ಅದು ಸರಿ.. ಅವರು ಯಾಕೆ ಜೊತೆ ಬರದೆ ನಮ್ಮನ್ನ ಬೇರೆ ಬೇರೆ ಕಳಿಸಿದ್ರು?’

‘ಅಯ್ಯೊ ಪೆದ್ದು.. ನೀನು ಆ ಕಾರ್ಟೂನು ಟೀವಿಲಿ ನೋಡಿಲ್ವಾ.. ಹಂಗೇನೆ ಅವರಿಬ್ರು ಲವ್ ಮಾಡ್ತಾ ಇದಾರೆ…!’

‘ಲವ್ ಅಂದ್ರೆ?’

‘ಲವ್ ಅಂದ್ರೆ ? ಅಪ್ಪ ಅಮ್ಮ ತರ ಇರೋದು.. ‘

‘ಹೌದಾ.. ? ಅವರು ಲವ್ ಮಾಡ್ತಿದ್ರೆ ನಿಮ್ ಮಮ್ಮಿ ನಂಗು ಮಮ್ಮಿ ಆಗ್ಬೋದಾ?’

‘ಹೂಂ.. ಹಂಗೇನೆ .. ನಿಮ್ ಪಪ್ಪ ನಂಗು ಪಪ್ಪಾ ಆಗ್ಬೋದು..’

’ಓಹ್.. ಎಷ್ಟೊಂದು ಚೆನ್ನಾಗಿರುತ್ತೆ ಅವರು ಅಪ್ಪ ಅಮ್ಮ ಆದ್ರೆ.. ! ಆಗ ಒಂದೆ ಮನೆಲಿ ಅಪ್ಪ ಅಮ್ಮ ಜೊತೆ ಇರ್ಬೋದು..!’

‘ನಾವೊಂದು ಕೆಲ್ಸ ಮಾಡೋಣ್ವಾ..?’

‘ಏನು..?’

‘ನಾವಿಬ್ರು ಹೋಗಿ ಅವರಿಬ್ಬರನ್ನ ಅಪ್ಪ ಅಮ್ಮ ಅಂತ ಕರೇಯೋಕೆ ಶುರು ಮಾಡೋಣ..’

‘ಹಾಗೆ ಕರೀತಾ ಇದ್ರೆ ಅವರು ಪಪ್ಪ ಮಮ್ಮಿ ಆಗ್ಬಿಡ್ತಾರಾ..?’

‘ಹೂಂ.. ಮತ್ತೆ..’

‘ಸರಿ ಬಾ ಹೋಗಿ ಕರೆಯೋಣ.. ಅವರು ಅಪ್ಪ ಅಮ್ಮ ಆಗೋತನಕ ಬಿಡೋದೇ ಬೇಡ..’

ಇಬ್ಬರು ಪುಟ್ಟರಿಗೆ ಹೇಗೆ ವಿಷಯ ಹೇಳುವುದು ಎನ್ನುವ ಜಿಜ್ಞಾಸೆಯಿಂದ ಇನ್ನು ಹೊರಬರದೆ ಅಲ್ಲೆ ಮುಳುಗಿ ಹೋಗಿದ್ದವರ ಕಿವಿಗೆ ‘ಅಪ್ಪ , ಅಮ್ಮಾ‘ ಎಂಬ ಜೋರಾದ ಕೂಗು ತಟ್ಟನೆ ಬಿದ್ದಿತ್ತು. ಮೊದ ಮೊದಲು ಏನು ಅರಿವಾಗದ ಗೊಂದಲತೆಯಿದ್ದರು ತಟ್ಟನೆ ಇಬ್ಬರು ಮಕ್ಕಳು ತಮ್ಮನ್ನೆ ಪದೇ ಪದೇ ಅಪ್ಪ.. ಅಮ್ಮಾ.. ಎಂದು ಕರೆಯುತ್ತಿದ್ದಾರೆಂದು ಗೋಚರವಾಗಿ, ನಂಬಲಸಾಧ್ಯವಾದ ಅನೂಹ್ಯತೆಯೊಂದು ತಾನೇ ತಾನಾಗಿ ಎದುರು ನಿಂತಂತೆನಿಸಿತು..

‘ಇನ್ಮೇಲೆ ನೀವು ಅಪ್ಪ ಅಮ್ಮ ಆಗಿ ನಾವು ಅಣ್ಣ ತಂಗಿ ಆಗ್ತೀವಿ – ಗೊತ್ತಾಯ್ತ?’ ಎಂದ ಕ್ಷೇಮಳ ಮುದ್ದು ಮುದ್ದಾದ ಮಾತಿಗೆ ಏನು ಹೇಳಬೇಕೊ ಅರಿವಾಗದೆ, ತಮ್ಮ ಸಮಸ್ಯೆ ತಾನಾಗೆ ಬಗೆಹರಿದ ಖುಷಿಯನ್ನು ಮಾತಲ್ಲೆ ವ್ಯಕ್ತಪಡಿಸುತ್ತ -‘ಆಯ್ತು ಕಂದ‘ ಎಂದರು, ಇಬ್ಬರು ಒಟ್ಟಾಗಿ..

ಅದನ್ನು ಕೇಳುತ್ತಿದ್ದ ಹಾಗೆ ‘ಹುರ್ರೆ..’ ಎಂದು ಜಿಗಿದರು ಮಕ್ಕಳಿಬ್ಬರು..

ತಾವೇನು ಕಮ್ಮಿ ಎಂಬಂತೆ ಕೈ ಕೈ ಹಿಡಿದುಕೊಂಡೆ ತಾವೂ ಜಿಗಿದರು ವಿದೂಷಿ, ಜೀಮೂತರು..!

(ಮುಕ್ತಾಯ)

  • ನಾಗೇಶ ಮೈಸೂರು
    ೧೫.೦೭.೨೦೨೩

ಸಣ್ಣಕಥೆ: ಸ್ವಪ್ನೇಶ್ವರಿ!



ಮತ್ತೆ ಥಟ್ಟನೆ ಎಚ್ಚರವಾಗಿ ಹೋಯ್ತು..!

ನಿದಿರೆಯ ಮಂಪರಿನ ಕುರುಹೆ ಇಲ್ಲದಂತೆ, ಅತ್ಯಂತ ಲವಲವಿಕೆಯ ಜಾಗೃತ ಸ್ಥಿತಿಯಲ್ಲಿರುವಂತೆ ಭಾಸವಾಗಿ, ಆಯಾಚಿತವಾಗಿ ಗಡಿಯಾರದತ್ತ ಕಣ್ಣು ಹಾಯಿಸಿದ.. ಸರಿಯಾಗಿ ಬೆಳಗಿನ ಜಾವ ೩ ಗಂಟೆಯ ಬ್ರಾಹ್ಮಿ ಮುಹೂರ್ತದ ಸಮಯ. ವಿಚಿತ್ರವೆಂದರೆ ಪ್ರತಿ ದಿನವು ಇದೇ ಹೊತ್ತಿಗೆ ತಟ್ಟನೆ ಎಚ್ಚರವಾಗಿಬಿಡುತ್ತದೆ – ಜೀವದೊಳಗದಾವುದೊ ಕಾವಲಿನ ಗಂಟೆ ಬಾರಿಸಿದಂತೆ.. ಹಾಗೆ ಎಚ್ಚರವಾಗುವ ಮೊದಲು, ದಿನವೂ ಅದೇ ಕನಸು ಬೀಳುತ್ತದೆ.. ಸರಿಯಾಗಿ ಅದದೆ ಘಟನಾವಳಿಯ ಪುನರಾವರ್ತನೆಯಾಗುತ್ತದೆ. ನಿಖರವಾಗಿ ಮೂರು ಗಂಟೆಗೆ ಸರಿಯಾಗಿ , ಕನಸಿನ ಲೋಕದ ಅದೇ ಬಿಂದುವಿನಲ್ಲಿ, ಅದೇ ಅನುಕ್ರಮದ ಘಟಾನಾವಳಿಯ ನಂತರ, ನಿರ್ದಿಷ್ಠವಾಗಿ ಅದೇ ಸಂಧರ್ಭ, ಸನ್ನಿವೇಶಕ್ಕೆ ಸರಿಯಾಗಿ ತಟ್ಟನೆ ಎಚ್ಚರವಾಗಿಬಿಡುತ್ತದೆ..

ಆಮೇಲೇನು ಮಾಡಿದರು ಮತ್ತೆ ನಿದ್ದೆ ಬರುವುದೆ ಇಲ್ಲ – ಐದಾರು ಗಂಟೆಯ ತನಕ.. ಆ ಮೇಲೆ ಬೇಡವೆಂದರು ಬರುವ ನಿದಿರೆಯಲ್ಲಿ, ಆಫೀಸಿಗೆ ಹೋಗಲು ತಡವಾಗುತ್ತಿದ್ದರು ಎಚ್ಚರವಾಗುವುದಿಲ್ಲ. ಎದ್ದರು ಮೇಲೇಳಲು ಆಗದಂತೆ, ಕಣ್ಣೆ ಬಿಡಲು ಆಗದಂತೆ ಆಲಸಿಕೆ, ಆಯಾಸ, ನಿರುತ್ಸಾಹ.. ಮೂರು ಗಂಟೆಯ ಆ ಜಾವದಲ್ಲಿ ಎಚ್ಚರವಾದಾಗ, ಅದು ಹೇಗೊ ಏನೊ ಮಿಂಚಿನ ಸಂಚಾರವಾದಂತೆ ದಢಕ್ಕನೆ ಎಚ್ಚರವಾಗಿ ಬಿಡುತ್ತದೆ. ಸಾಲದ್ದಕ್ಕೆ ಮತ್ತೆ ನಿದ್ದೆಯೂ ಬರುವುದಿಲ್ಲ..

‘ನಾನು ಎರಡು ಐಡಿಯಾ ಹೇಳ್ತಿನಿ.. ಪ್ರಯತ್ನಿಸಿ ನೋಡು..’ ಅವನ ವಿವರಣೆಯನ್ನೆಲ್ಲ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಂಡ ಮಾರುತಯ್ಯ ಹೇಳಿದ.

‘ಏನು ಐಡಿಯಾ..?’ ಕೇಳಿದ ಅಂಜನಾದ್ರಿ..

‘ಒಂದು.. ಯಾವುದಾದರು ಸೈಕಾಲಜಿಸ್ಟನ್ನೊ, ಸೈಕ್ರಿಯಾಟಿಸ್ಟನ್ನೊ ಭೇಟಿಯಾಗಿ, ಎಲ್ಲಾ ವಿವರಿಸಿ ಅವರ ಒಪಿನಿಯನ್ ತೊಗೊ…’ ಎಂದವನ ಮುಖ ದಿಟ್ಟಿಸಿದ ಮಾರುತಯ್ಯ.. ಅವನ ಮಾತು ಕೇಳುತ್ತಿದ್ದಂತೆ ಅಂಜನಾದ್ರಿಯ ಮುಖ ಕೆಂಪಗಾಗುತ್ತಿರುವುದು ಅವನಿಗು ಕಾಣುತ್ತಿತ್ತು..

‘ಎರಡನೆಯದು ಏನಂತೊ?’ ತುಸು ವ್ಯಂಗ್ಯವಾಗಿಯೆ ಕೇಳಿದ್ದ ಅಂಜನಾದ್ರಿಯನ್ನು ಸಮಾಧಾನಿಸುತ್ತ.., ‘ ಕೋಪ ಮಾಡ್ಕೋಬೇಡ ಅಂಜಿ..ಐ ಯಾಮ್ ಸೀರಿಯೆಸ್.. ಸೆಕೆಂಡ್ ಒನ್ ಇಸ್ ಟು ಮೀಟ್ ಎ ಸ್ಪಿರಿಚುವಲ್ ಡಾಕ್ಟರ್ ಆರ್ ಎ ಮಂತ್ರವಾದಿ… ಇಬ್ಬರನ್ನು ಮೀಟ್ ಮಾಡಿ ಒಪಿನಿಯನ್ ತೊಗೊ.. ನಿನಗೆ ಲಾಜಿಕಲ್ ಉತ್ತರ ತಾನೆ ಬೇಕಾಗಿರೋದು? ಅವರು ಹೇಳೊದನ್ನ ಕೇಳು.. ಇಬ್ಬರೂ ಆಪೋಸಿಟ್ ವ್ಯೂಸ್ ಕೊಡ್ತಾರೆ ಅನ್ನೊದು ಗ್ಯಾರಂಟಿ.. ಬಟ್ ಅದರ ಮಧ್ಯೆ ನಿನಗೊಂದು ದಾರಿ ಕಾಣುತ್ತೆ.. ಟ್ರೈ ಮಾಡಿ ನೋಡು.. ‘ ಎಂದ.

ಮಾರುತಯ್ಯನ ಮಾತಿಗೆ ಕೆಲಗಳಿಗೆ ಮಾತನಾಡದೆ ಮೌನವಾಗಿ ಕುಳಿತ ಅಂಜನಾದ್ರಿ.. ಒಂದೆರಡು ಕ್ಷಣ ಹಾಗೆಯೆ ಉರುಳಿದ ನಂತರ, ಆ ಮೌನವನ್ನು ಭರಿಸಲಾಗದ ಅಸಹನೀಯತೆಗೋ ಏನೊ ಎಂಬಂತೆ ಮತ್ತೆ ಮಾತಾಡಿದವನು ಮಾರುತಯ್ಯನೆ..

‘ ಇವೆರಡೂ ಬೇಡಾ ಅನ್ನೋದಾದ್ರೆ, ಬಾ ನಮ್ಮೂರಿಗೆ ಹೋಗೋಣ.. ಅಲ್ಲೊಬ್ಬಳು ಹಳೆಯ ಕಾಲದ ಅಜ್ಜಿ ಇದಾಳೆ ಸ್ವಪ್ನೇಶ್ವರಿ ಅಂಥ.. ಹಿಂದೆಲ್ಲ ಏನು ಕನಸು ಬಿದ್ರು ಅದರ ಅರ್ಥ ಏನು ಅಂಥ ಅವಳನ್ನೆ ಕೇಳೋರಂತೆ.. ಅವಳು ಏನು ಹೇಳಿದ್ರು ನಿಜವೆ ಆಗಿರ್ತಿತ್ತಂತೆ..! ತುಂಬಾ ಫೇಮಸಾಗಿದ್ದವಳು ಅಂತಿದ್ರು ನಮ್ಮಪ್ಪ, ನಮ್ತಾತ ಎಲ್ಲಾರು.. ಅವಳ ಹತ್ರ ನಿನ್ನ ಸ್ವಪ್ನನೆಲ್ಲ ಹೇಳಿ ಏನದರ ಅರ್ಥ ಅಂಥ ಕೇಳ್ಬೋದೇನೊ.. ಆದ್ರೆ..’

‘ಆದ್ರೆ..?’

‘ಅವಳಿಗೆ ಈಗಾಗ್ಲೆ ನೂರು ವರ್ಷದ ಮೇಲಾಗಿದೆ ಅಂತಾರೆ.. ಹೆಚ್ಚು ಮಾತಾಡಲ್ವಂತೆ ಈಗ.. ಯಾರು ಬಂದು ಏನು ಹೇಳಿದ್ರು ಸುಮ್ನೆ ಕೇಳಿಸ್ಕೊಂಡು ನಗ್ತಾಳಂತೆ.. ಇಲ್ಲಾ ಗೊಳೋ ಅಂಥ ಅಳ್ತಾಳಂತೆ.. ಇಷ್ಟು ವರ್ಷದಲ್ಲಿ ಅವಳು ಮಾತಾಡಿದ್ದೆ ವರ್ಷಕ್ಕೊಂದೆರಡು ಸಲ ಮಾತ್ರ ಅಂತಿದ್ರು ನಮ್ಮಮ್ಮ..’

ಈ ಬಾರಿ ಅಂಜನಾದ್ರಿ ಯಾಕೊ ಮೌನದ ಪಕ್ಷ ವಹಿಸದೆ, ಗಂಭೀರವಾಗಿಯೆ ಚಿಂತಿಸುವಂತೆ ಕಂಡಿತು.. ‘ಮಾರುತಿ..ಆ ಅಜ್ಜಿ ನಿಜವಾಗಿಯು ಆ ತರದ ಪವಾಡದವಳೇನೊ?’ ಎಂದ ಅನುಮಾನದ ದನಿಯಲ್ಲೆ..

‘ಅಂಜಿ.. ಚಿಕ್ಕವನಾಗಿದ್ದಾಗ ನಾನೆ ಕಣ್ಣಾರೆ ಕಂಡಿದ್ದೀನಿ ಕಣೊ.. ಅವಳು ದುಡ್ಡು ಕಾಸಿಗೆ ಅಂಥ ಮಾಡ್ದೋಳಲ್ಲ.. ಅವಳನ್ನ ನೋಡಿದಾಗೆಲ್ಲ ಆ ಕಾರಂತರ ಮೂಕಜ್ಜಿಯದೆ ನೆನಪಾಗೋದು.. ಆದ್ರೆ ಈಗ ಹೇಗಿದಾಳೊ ಗೊತ್ತಿಲ್ಲ..’ ಎಂದ

‘ಸರಿ ಮಾರುತಿ.. ಒಂದು ಸಾರಿ ಹೋಗಿ ಬಂದುಬಿಡೋಣ ಬಾ.. ಏನಿಲ್ಲಾ ಅಂದ್ರು ಅವಳನ್ನ ನೋಡಿದ ಹಾಗಾದ್ರು ಆಗುತ್ತೆ.. ಮಿಕ್ಕಿದ್ದು ಅದೃಷ್ಟಕ್ಕೆ ಬಿಡೋಣ.. ಲೆಟ್ ಅಸ್ ಸೀ ಇಫ್ ಶಿ ಸೇ ಸಂಥಿಂಗ್ ಇಂಟರೆಸ್ಟಿಂಗ್..’ ಎಂದು ಮಾತು ಮುಗಿಸೆದ್ದ ಅಂಜನಾದ್ರಿ..


ಆ ಹಾದಿಯಲ್ಲಿದ್ದದ್ದೆಲ್ಲ ಬಹುತೇಕ ಮಣ್ಣಿನ ಗುಡಿಸಲುಗಳೆ.. ರಸ್ತೆ ಕೂಡ ಮಣ್ಣಿನದೆ ಆದರು ಸಗಣಿಯಲ್ಲಿ ಸಾರಿಸಿದ್ದಕ್ಕೊ ಏನೊ ಒಪ್ಪವಾಗಿಯೆ ಇತ್ತು.. ಅಲ್ಲಿನ ಗಲ್ಲಿ ಬೀದಿಗಳ ಚಕ್ರವ್ಯೂಹವನ್ನು ಸುಲಲಿತವಾಗಿ ಭೇಧಿಸಿಕೊಂಡು ನಡೆಯುತ್ತಿದ್ದ ಮಾರುತಯ್ಯನನ್ನು ಹಿಂಬಾಲಿಸುವುದು ತುಸು ಕಠಿಣವೆ ಆಗಿತ್ತು ಅಂಜನಾದ್ರಿಗೆ.. ಅಂತು ಕೊನೆಗು ಆ ಓಣಿ ಬೀದಿಯ ಕೊನೆಯಲ್ಲಿದ್ದ ಮನೆಯೊಂದರ ಹತ್ತಿರ ಬಂದು ನಿಂತ ಮಾರುತಯ್ಯ… ‘ ಹನುಮಂತೂ…’ ಎಂದು ಜೋರಾಗಿ ಕೂಗಿದ..

ಹನುಮಂತು ಆ ಮುದುಕಿಯ ಮೊಮ್ಮಗ, ಮಾರುತಯ್ಯನ ಚಡ್ಡಿ ದೋಸ್ತಾಗಿದ್ದವನು.. ಆ ಕನೆಕ್ಷನ್ನಿನಲ್ಲಿ ಅವಳ ಭೇಟಿಯ ಪರವಾನಗಿಯನ್ನು ಸುಲಭವಾಗಿಸಿಕೊಂಡಿದ್ದ ಮಾರುತಯ್ಯ..

‘ಇವರೆ ನಾನು ಹೇಳಿದ ನನ್ನ ಫ್ರೆಂಡ್ ಅಂಜನಾದ್ರಿ.. ಇವರಿಗೆ ಆ ಸ್ವಪ್ನಗಳು ಕಾಡ್ತಾ ಇರೋದು..’ ಎಂದು ಪರಿಚಯ ಮಾಡಿಸಿದ..

‘ನಮಸ್ಕಾರ.. ಬನ್ನಿ ಸಾರ್.. ಈ ಮುದುಕಿ, ಈಗ ಜಾಸ್ತಿ ಮಾತಾಡಲ್ಲ.. ಆದ್ರು ನಿಮ್ಮ ಅದೃಷ್ಟ ಟ್ರೈ ಮಾಡೋರಂತೆ.. ಅವಳ ಮುಂದೆ ಕೂತು ಎರಡು ಎಲೆ ಅಡಿಕೆ ಜೊತೆ ಎರಡು ಬಾಳೆಹಣ್ಣು ನಾಕಾಣೆ ಇಟ್ಟು, ನಿಮಗೇನಾಗುತ್ತೊ ಎಲ್ಲ ಹೇಳ್ಕೊಳಿ.. ಅವಳು ಕೇಳ್ತಾ ಇರಲಿ, ಬಿಡಲಿ ನಿಮ್ಮ ಪಾಡಿಗೆ ನೀವು ಹೇಳ್ಕೊಂಡು ಹೋಗ್ಬೇಕು ಆಯ್ತಾ.. ಅವಳು ಮಧ್ಯೆ ಮಧ್ಯೆ ನಕ್ರೆ, ಅತ್ರೆ ನೀವದಕ್ಕೆ ಗಮನ ಕೊಡಬೇಡಿ.. ಸುಮ್ನೆ ಹೇಳ್ತಾ ಹೋಗಿ..’

‘ಆಯ್ತು.. ಹಾಗೆ ಮಾಡ್ತೀನಿ..’ ನುಡಿದ ಅಂಜನಾದ್ರಿ..

‘ನಿಮ್ಮ ಅದೃಷ್ಟ ಚೆನ್ನಾಗಿದ್ದು ಅವಳಿಗೆ ಮಾತಾಡ್ಬೇಕು ಅನಿಸಿದ್ರೆ, ನಿಮ್ಮ ಎಲೆ ಅಡಿಕೆ ನಾಕಾಣೆ ಜೊತೆ ಬಾಳೆಹಣ್ಣನ್ನ ಕೈಗೆತ್ತಿಕೊತಾಳೆ.. ಅದರ ಅರ್ಥ ಅವಳು ನಿಮಗೇನಾದ್ರು ಹೇಳ್ತಾಳೆ ಅಂಥ.. ಅವಳೇನಾದ್ರು ಬಾಳೆಹಣ್ಣು ಎತ್ತಿಕೊಂಡಳು ಅಂದ್ರೆ, ನಿಮಗೇನೊ ತುಂಬಾ ಒಳ್ಳೆಯ ಶುಭಕರ ಸುದ್ಧಿ ಹೇಳ್ತಾಳೆ ಅಂತ ಅರ್ಥ.. ಬರಿ ಎಲೆ ಅಡಿಕೆ ತಿಂದ್ರೆ ಶುಭಸುದ್ಧಿ ಇರೋಲ್ಲ.. ಕೆಟ್ಟದಾದ್ರು ಇರಬಹುದು ಅಥವ ಮಾಮೂಲಿದಾದ್ರು ಇರಬಹುದು.. ಅವಳು ಏನೇ ಹೇಳಿದ್ರು ಸುಮ್ನೆ ಕೇಳಿಸ್ಕೊಳಿ.. ಮಧ್ಯೆ ಬಾಯಿ ಹಾಕ್ಬೇಡಿ..’

‘ಆಯ್ತು ಹನುಮಂತೂ.. ನಾನಾಗ್ಲೆ ಎಲ್ಲಾ ಹೇಳಿದಿನಿ.. ಇಕೊ ಇಲ್ಲೆ ಇದೆ ನೋಡು ಎಲೆ ಅಡಿಕೆ ಹಣ್ಣು ಮತ್ತೆ ನಾಕಾಣೆ ಪಾವಲಿ..’ ಎಂದು ಪುಟ್ಟ ಪ್ಲಾಸ್ಟಿಕ್ ಚೀಲದ ಪೊಟ್ಟಣವನ್ನು ಮುಂದೊಡ್ಡಿದ ಮಾರುತಯ್ಯ..

ಅದನ್ನು ಕೈಗೆತ್ತಿಕೊಂಡವನೆ, ‘ ಸರಿ ಬನ್ನಿ ಹೋಗೋಣ.. ಆ ಊರಾಚೆ ಮರದ ಕೆಳಗೆ ಆಕಾಶ ನೋಡ್ತಾ ಕೂತಿರ್ತಾಳೆ ಮುದುಕಿ..ಅಂದ ಹಾಗೆ ಮತ್ತೊಂದು ಮಾತು .. ಅವಳು ಹೇಳೋದು ಕೆಲವೊಮ್ಮೆ ನಿಗೂಢವಾಗಿರುತ್ತೆ.. ಅರ್ಥ ಸುಲಭವಾಗಿ ಗೊತ್ತಾಗಲ್ಲ ಒಗಟಿನ ರೀತಿ ಇರುತ್ತೆ.. ಅದಕ್ಕೆಲ್ಲ ವಿವರಣೆ ಕೇಳಿದ್ರೆ ಅವಳು ಬಾಯಿ ಬಿಡಲ್ಲ.. ಅವಳು ಹೇಳಿದ್ದನ್ನ ಕೇಳಿಸ್ಕೊಂಡು ನೀವೆ ಅರ್ಥ ಮಾಡ್ಕೋಬೇಕು.. ಎಷ್ಟೊ ಜನಕ್ಕೆ ಹೇಳಿದ್ರು ಏನೂಂತ ಗೊತ್ತಾಗದೆ ಶಾಪ ಹಾಕ್ಕೊಂಡು ಹೋಗಿದ್ದುಂಟು.. ಅದಕ್ಕೆ ಮೊದಲೇ ಹೇಳಿಬಿಡ್ತಾ ಇದೀನಿ ..’ ಎಂದ ಹನುಮಂತು ಮೊದಲೆ ಎಚ್ಚರಿಕೆ ಕೊಡುವವನಂತೆ..

ಅಂಜನಾದ್ರಿ ಒಂದು ಚಣ ನಿಂತಲ್ಲೆ ನಿಂತು ಕೇಳಿದ, ‘ಹನುಮಂತು , ಅವರು ಮಾತಾಡಿದ್ದನ್ನೆಲ್ಲ ನಾನು ಮೊಬೈಲಿನಲ್ಲಿ ರೆಕಾರ್ಡ್ ಮಾಡ್ಕೋಬೋದಾ?’..

ಅವನ ಮಾತಿಗೆ ಏನುತ್ತರಿಸಬೇಕೊ ಗೊತ್ತಾಗದ ಗಲಿಬಿಲಿಯಲ್ಲೆ ನುಡಿದಿದ್ದ ಹನುಮಂತು..’ ಟ್ರೈ ಮಾಡಿ ಸಾರ್.. ನಿಮ್ಮ ಅದೃಷ್ಟ..’ ಎಂದವನೆ ಊರಾಚೆ ಅರಳಿ ಮರದತ್ತ ಹೆಜ್ಜೆ ಹಾಕತೊಡಗಿದ. ಅವನ ವೇಗವನ್ನು ಸರಿಗಟ್ಟಲು ಹೆಚ್ಚು ಕಡಿಮೆ ಓಡಿಕೊಂಡೆ ಅವನ ಹಿಂದೆ ನಡೆದರು ಅವರಿಬ್ಬರು..


ನೂರಕ್ಕು ಮೀರಿದ ವಯಸಾದರು , ಆ ಸುಕ್ಕಿದ ಮುಖದಲ್ಲೇನೊ ಕಳೆಯಿತ್ತು.. ಓಲೆಯ ಭಾರಕ್ಕೆ ಹರಿದಂತಿದ್ದ ಕಿವಿಯೂ ಭಾರ ಹೊತ್ತ ಗಂಭೀರ ಯೋಧನ ಹಾಗೆ ಕಂಡಿತ್ತು. ಚಾಪೆಯ ಮೇಲೆ ಕೂತು ಎದುರಿನ ಮರದಲ್ಲೇನೊ ದಿಟ್ಟಿಸುತ್ತ ಕೂತವಳ ಮುಂದೆ ಎಲೆ ಅಡಿಕೆ ಬಾಳೆಹಣ್ಣು ಪಾವಲಿಯ ದಕ್ಷಿಣೆಯಿತ್ತು ಕೂತು ಹತ್ತು ನಿಮಿಷವಾದರು ಇವರು ಮೂವರು ಬಂದ ಗಮನವೆ ಇಲ್ಲದವಳಂತೆ ಅಲ್ಲೆ ನೋಡುತ್ತ ಕೂತಿತ್ತು ಮುದುಕಿ.

ಹೀಗೆ ಸರಿ ಸುಮಾರು ಅರ್ಧ ಗಂಟೆಯಾದರು ಅವಳೀ ಕಡೆ ತಿರುಗಿಯೂ ನೋಡದಿದ್ದಾಗ, ಹನುಮಂತುವಿನ ಮಾತು ನೆನಪಾಗಿ ನಿರಾಶೆಯ ಪಸೆ ಆವರಿಸತೊಡಗಿತು ಅಂಜನಾದ್ರಿಯ ಮನದಲ್ಲಿ.. ಇತ್ತ ತಿರುಗಿ ನೋಡಿದರೆ ಗಮನ ಹರಿಸಿಯಾಳು ಎನ್ನುವ ಆಸೆಯಲ್ಲೆ ಜಾತಕ ಪಕ್ಷಿಯಂತೆ ಕಾದು ಕೂತಿದ್ದರು ಮಾರುತಯ್ಯ, ಅಂಜನಾದ್ರಿ..

ಹೀಗೆ ಸುಮಾರು ಹೊತ್ತು ಕಳೆದಿತ್ತೇನೊ.. ತಾನು ಕೂತ ಭಂಗಿಯಿಂದ ಒಂದು ಚೂರು ವಿಚಲಿತವಾಗದೆ, ಇತ್ತ ಕಡೆ ತಿರುಗಿಯೂ ನೋಡದೆ, ತಟ್ಟನೆ ಮಾತಾಡತೊಡಗಿದಳು ಮುದುಕಿ..

‘ ಏನೊ ಮಾರುತಿ.. ಗೆಣೆಯನ್ನ ಕರ್ಕೊಂಡು ಬಂದಿದಿಯಾ..?’ ಎಂದಾಗ ಮಾರುತಯ್ಯ ಬೆಚ್ಚಿ ಬಿದ್ದಿದ್ದ – ಇತ್ತ ಕಡೆ ನೋಡೆ ಇಲ್ಲ, ಆದರು ತಾನೆ ಎಂದವಳಿಗೆ ಹೇಗೆ ಗೊತ್ತಾಯಿತು ಎನ್ನುವ ವಿಸ್ಮಯದಲ್ಲಿ..

‘ಹೂ ಅಂಜವ್ವ.. ಏನೊ ಪ್ರಶ್ನೆ ಇತ್ತು ಅದಕ್ಕೆ ಕರ್ಕೊಂಡು ಬಂದೆ..’ ಎಂದು ಮಾರುತಯ್ಯ ಉತ್ತರಿಸುತ್ತಿದ್ದಂತೆ ಗಹಿಗಹಿಸಿ ನಗುತ್ತ ಅಂಜನಾದ್ರಿಯ ಕಡೆ ತಿರುಗಿ ನೋಡಿದಳು.. ಅಂಜನಯ್ಯ ಮೈಯೆಲ್ಲ ಕಣ್ಣಾದವನಂತೆ ಹಿಡಿಯಷ್ಟಾಗಿ ನಮಸ್ಕರಿಸಿದ.. ಆ ಹೊತ್ತಿನಲ್ಲು ಅವನ ಕುಶಾಗ್ರಮತಿ ಕೆಲಸ ಮಾಡಿ ಮೊಬೈಲಿನ ರೆಕಾರ್ಡರನ್ನು ಆನ್ ಮಾಡಿತು – ಅವಳೇನಾದರು ಹೇಳಿದರೆ? ಎನ್ನುವ ಮುನ್ನೆಚ್ಚರಿಕೆಯಲ್ಲಿ..

‘ ದಿನಾ ಮೂರ್ಗಂಟೆಗೆ ಕನ್ಸ್ ಬೀಳ್ತಾದಲ್ವಾ ಮಗಾ?’ ಎಂದಳು ಅಂಜವ್ವ.. ಅವಳು ಎಲೆ ಅಡಿಕೆ ಹಣ್ಣಿಗೆ ಕೈ ಹಾಕುವಳೇನೊ ಎಂದು ಕಾದಿದ್ದ ಅಂಜನಾದ್ರಿಗೆ ತುಸು ನಿರಾಸೆಯಾದರು ತೋರಗೊಡದೆ, ‘ಹೌದಜ್ಜಿ..’ ಎಂದ..

‘ನೀನು ಕುದುರೆ ಹತ್ತೋಕೆ ಹೋದ್ರು ಯಾರೋ ಕಾಲೆಳೆದು ಮಣ್ಣಿನ ನೆಲಕ್ಕೆ ಬೀಳಿಸ್ತಾರೆ.. ನೀನು ಹೆಂಗೊ ಎದ್ದು ಆ ಕುದುರೆ ಬಾಲ ಹಿಡಿಯೋಕ್ ಹೋದ್ರೆ, ಅದ್ಯಾರೊ ಕೆನ್ನೆಗೆ ‘ರಪ್‘ ಅಂಥ ಏಟು ಹಾಕಿ ಆ ಮಣ್ಣಿನ ಮೇಲೆ ನೂಕ್ತಾರೆ.. ಅಲ್ವಾ..?’ ಎಂದವಳ ಮಾತಿಗೆ ಗರ ಬಡಿದಂತೆ ಕೂರುವ ಸರದಿ ಅಂಜನಾದ್ರಿ, ಮಾರುತಯ್ಯನಾದಾಗಿತ್ತು.. ತಾನೇ ಕಂಡವಳ ಹಾಗೆ ಅಷ್ಟು ಖರಾರುವಾಕ್ಕಾಗಿ ಅದು ಹೇಗೆ ಹೇಳುತ್ತಿದ್ದಾಳೆ ಅಂಜವ್ವ?

‘ಅಜ್ಜಿ ನೀವೆ ಕಂಡವರ ಹಾಗೆ ಎಷ್ಟು ಸರಿಯಾಗಿ ಹೇಳ್ತಿದಿರಿ.. ಅದ್ಭುತ… ಅದ್ಭುತ ..’ ಎಂದು ಉದ್ಗರಿಸಿದ ಅಂಜನಾದ್ರಿಯ ಮಾತನ್ನು ಗಮನಿಸದೆ ತನ್ನ ಪಾಡಿಗೆ ತನ್ನ ಮಾತು ಮುಂದುವರೆಸಿದಳು ಅಂಜವ್ವ..

‘.. ಆ ಮಣ್ಣಿನ ಮೇಲೆ ಅದ್ಯಾರೊ ಹೆಣ್ಣೆಂಗ್ಸು, ಬಿದ್ದಿರೊ ನಿನ್ನ ಒದ್ಕೊಂಡು ಒದ್ಕೊಂಡು ಉರುಳಿಸ್ಕೊಂಡು ಆ ಹಳೆ ಮನೆ ಹತ್ರ ಕರ್ಕೊಂಡು ಹೋಗ್ತಾಳೆ..ಬಾಗಿಲು ಮುಚ್ಚಿದ್ರು ನೀನು ಅದೆಂಗೊ ಒಳಗೆ ಹೋಗಿ ಬೀಳ್ತಿಯಾ.. ಆಚೆ ಬರೋಕೆ ಏನೇನೊ ಮಾಡ್ತೀಯಾ ಆದರೆ ಆಗಲ್ಲ – ಪ್ರತಿ ಸಾರಿನು ಯಾರೊ ಬಂದು ಕೆನ್ನೆಗೆ ಹೊಡಿತಾರೆ.. ನೀನು ಹೋಗಿ ಆ ದೇವ ಮೂಲೆಲಿರೆ ಕಟ್ಟೆ ಮೇಲೆ ಬೀಳ್ತಿಯಾ..ಹಾಗೆ ಬಿದ್ದದ್ದಕ್ಕೆ ಸರಿಯಾಗಿ ನಿನಗೆ ತಟ್ಟನೆ ಎಚ್ಚರಿಕೆಯಾಗುತ್ತೆ.. ಅಲ್ವಾ..?’ಎಂದಳು ಮುದುಕಿ ಅವನ ಮುಖವನ್ನೆ ನೋಡುತ್ತ..

‘ಅಜ್ಜಿ …! ನೂರಕ್ಕೆ ನೂರು ಪಾಲು ಇದೇ ಸ್ವಪ್ನ ದಿನಾ ಬೀಳುತ್ತೆ ಅಜ್ಜಿ… ಏಟು ನಿಜವಾಗಿ ಬಿತ್ತೇನೊ ಅನ್ನೊ ಹಾಗೆ ಕೆನ್ನೆ ಚುರುಗುಡುತ್ತಿರುತ್ತೆ..ನಿಂಗಿದೆಲ್ಲ ಹೆಂಗೆ ಗೊತ್ತಾಯ್ತಜ್ಜಿ..?!’ ಎಂದ ಅಂಜನಾದ್ರಿ – ವಿಸ್ಮಯ ಅಚ್ಚರಿ ತುಂಬಿದ ನಂಬಲಾಗದ ದನಿಯಲ್ಲಿ..

ಮದುಕಿ ಮತ್ತೆ ಕೆಲ ಹೊತ್ತು ಮಾತಾಡಲಿಲ್ಲ… ಆಮೇಲೆ ಇದ್ದಕ್ಕಿದ್ದಂತೆ, ಆ ಬಾಳೆಹಣ್ಣಿನ ಜೋಡಿಯಲ್ಲಿ ಒಂದು ಹಣ್ಣನ್ನು ತಾನೆತ್ತಿಕೊಂಡು ಮತ್ತೊಂದನ್ನು ಅಂಜನಾದ್ರಿಯ ಕೈ ಮೇಲೆ ಹಾಕಿ ನುಡಿದಳು..

‘ ವೋಗು ಮಗ ವೋಗು.. ಹಳ್ಳಿ ಮನೆ ಅಂಥ ಉಢಾಫೆ ಮಾಡ್ಬಾರದು.. ಅದೃಷ್ಟದವ್ವ ಒದ್ಕೊಂಡು ಬಂದಾಗ ಬಿಟ್ಟು ಹೋದ್ರೆ ನಿಂಗೆ ನಷ್ಟ, ಅವಳಿಗಲ್ಲ..’ ಎಂದಳು..

ಅಂಜನಾದ್ರಿಗಾಗಲಿ, ಮಾರುತಯ್ಯನಿಗಾಗಲಿ, ಹನುಮಂತುವಿಗಾಗಲಿ ಅದರ ತಳಬುಡ ಅರ್ಥವಾಗಲಿಲ್ಲ… ‘ ಹಂಗಂದ್ರೇನವ್ವ?.. ವಸಿ ಬಿಡ್ಸೇಳು..’ ಎಂದು ಬಾಯಿ ಹಾಕಿದ ಅದುವರೆಗು ಸುಮ್ಮನಿದ್ದ ಹನುಮಂತು.

ಅವನ ಕಡೆ ಗಮನವನ್ನೆ ಕೊಡದೆ ಮತ್ತೆ ನುಡಿದಿದ್ದಳು ಅಂಜವ್ವ..’ ಜ್ವಾಕೆ .. ಮರೀಬೇಡ.. ದೇವಮೂಲೆ.. ಆಮೇಲೆ ಗುಡಿ ಕಟ್ಟೋದು ಐತೆ.. ಮೋಸ ಗೀಸ ಮಾಡ್ದೋ , ಸರ್ವನಾಸ ಆಗೋಯ್ತೀಯಾ..’ ಅಂದವಳೆ ಮಾತು ನಿಲ್ಲಿಸಿ ಆಕಾಶದತ್ತ ದೃಷ್ಟಿ ನೆಟ್ಟುಬಿಟ್ಟಳು ಅಂಜವ್ವ..

ಆ ಮೇಲೆ ಇವರೆಲ್ಲ ಅದೆಷ್ಟೇ ಪ್ರಯತ್ನಿಸಿದರು ಮತ್ತೆ ಮಾತಾಡದೆ ಮೌನಶಿಲೆಯಂತೆ ಕೂತುಬಿಟ್ಟಳು ಮುದುಕಿ.. ಕೊನೆಗೆ ಹನುಮಂತುವೆ, ‘ನಡೀರ್ರಪ್ಪ ಇನ್ನವಳು ಮಾತಾಡಕಿಲ್ಲ..’ ಎಂದಾಗ ಭಾರವಾದ ಎದೆಯೊಡನೆ ಎದ್ದು ನಡೆದಿದ್ದರು ಅಂಜನಾದ್ರಿ ಮತ್ತು ಮಾರುತಯ್ಯರಿಬ್ಬರು.


ಗುಡಿಯ ಮುಂದೆ ಹಾಕಿದ್ದ ರಂಗೋಲೆಗೆ ಬಣ್ಣ ತುಂಬುತ್ತಿದ್ದ ಕಮಲಮ್ಮನ ಕರ ಕೌಶಲ್ಯವನ್ನು ನೋಡುತ್ತಲೆ ಕೇಳಿದ ಮೊಮ್ಮಗ ಪವನ ಕುಮಾರ .. ‘ಆಮೇಲೇನಾಯ್ತಜ್ಜಿ ಕಥೆ..?’

‘ಆಮೇಲೇನಾಗುತ್ತೆ..? ಅಂಜನಾದ್ರಿ ಮಾರುತಯ್ಯ ಹನುಮಂತು ಮೂರು ಜನ ಸೇರಿ ತಲೆ ಕೆಡಿಸ್ಕೊಂಡ್ರು ಮುದುಕಿ ಒಗಟಿನ ಮಾತು ಅರ್ಥ ಆಗಲಿಲ್ಲ.. ಕೊನೆಗೆ ‘ಹಳ್ಳಿ ಮನೆ ಅಂಥ ಉಢಾಫೆ ಮಾಡ್ಬಾರದು..’ ಅಂದಿದ್ದು ಜ್ಞಾಪಕಕ್ಕೆ ಬಂದು, ಹಳ್ಳಿಲಿರೊ ಪಾಳು ಬಿದ್ದಿದ್ದ ಮನೆಗೆ ಬಂದು ಹುಡುಕುದ್ರು.. ಆ ಮನೆ ಅಂಜನಾದ್ರಿ ತಾತನದು.. ಎಲ್ಲ ಸಿಟಿಗೆ ಹೋದ್ಮೇಲೆ ಪಾಳು ಬಿದ್ದೋಗಿತ್ತು..’

‘ಆಮೇಲೆ..?’

‘ಆಮೇಲೇನು? ಆ ಮನೆಲಿದ್ದ ಪೂಜೆ ರೂಮಿತ್ತಲ್ಲ.. ಅದೇ ದೇವ ಮೂಲೆಲಿದ್ದಿದ್ದು.. ಆ ಗೋಡೆಯೆಲ್ಲ ಬಿದ್ದೋಗಿದ್ದುದು ನೋಡಿ ಅದನ್ನ ಸ್ವಲ್ಪ ಸಮ ಮಾಡೋಣ ಅಂಥ ಕೆತ್ತೋಕೆ ಶುರು ಮಾಡಿದ್ರಂತೆ..’

‘ಆಗ..?’

‘ಆಗ ಅಗೆಯೋವಾಗ ಹಾರೆಗೆ ಏನೊ ‘ಟಣ್’ ಅಂಥ ಬಡಿತಂತೆ ..!’

‘ಹಾ…! ನಿಧಿ ಗಿಧಿ ಏನಾದ್ರು ಸಿಕ್ಬಿಡ್ತಾ ಅಜ್ಜಿ..?!’ ಅಚ್ಚರಿಯಿಂದ ಕೇಳಿದ ಹುಡುಗ..

‘ಹೂ ಮತ್ತೆ..! ಅಲ್ಲಿ ನೆಲದಲ್ಲಿ ಬಿಂದಿಗೆ ಬಿಂದಿಗೆ ತುಂಬ ಚಿನ್ನದ ನಾಣ್ಯ ಒಡವೆ ವಜ್ರ ವೈಢೂರ್ಯಗಳು ಸಿಕ್ತಂತೆ.. ಯಾವ ರಾಜರ ಕಾಲದ್ದೊ ಏನೊ? ಅಂಜನಾದ್ರಿ ತಾತ, ಮುತ್ತಾತನ ಕಾಲದವರು ರಾಜವಂಶದವರೊ, ಅವರ ಸೇವೆಲಿದ್ದವರೊ ಆಗಿದ್ರೂಂತ ಕಾಣುತ್ತೆ..’

‘ಆಮೇಲೇನಾಯ್ತು..?’

‘ಇನ್ನೇನಾಗುತ್ತೆ…? ಅದರ ಜೊತೆಗೆ ಅವರಿಗೊಂದು ತಾಮ್ರ ಪತ್ರನು ಸಿಕ್ತಂತೆ.. ಆ ದುಡ್ಡಲ್ಲಿ ಅರ್ಧ ಭಾಗದಲ್ಲಿ ಒಂದು ದೊಡ್ಡ ದೇವಸ್ಥಾನ ಕಟ್ಟಿಸಬೇಕು.. ಆಗ ಮಿಕ್ಕಿದ್ದನ್ನ ಆ ಕಟ್ಟಿಸಿದವನ ಕುಟುಂಬದವರು ತೊಗೊಂಡು ಬಳಸ್ಕೋಬಹುದು ಅಂಥ ಇತ್ತಂತೆ..’

‘ವಾರೆ..ವಾ! ಎಷ್ಟೊಂದು ದುಡ್ಡು..!?’

‘ಅಲ್ಲಿ ಬರೆದಿದ್ದಂಗೆ ಅಂಜನಾದ್ರಿ ದೊಡ್ಡದೊಂದು ಗುಡಿ ಕಟ್ಸಿ , ಜೊತೆಗೆ ಅಂಜವ್ವಂಗು ಪಕ್ಕದಲ್ಲೆ ಒಂದು ಗುಡಿ ಮಾಡಿಸಿದನಂತೆ.. ಜೊತೆಗೆ ಮಿಕ್ಕಿದ ದುಡ್ಡಲ್ಲಿ ಸ್ವಲ್ಪ ಹನುಮಂತುಗೆ, ಸ್ವಲ್ಪ ಮಾರುತಯ್ಯನಿಗು ಕೊಟ್ಟು ಮಿಕ್ಕಿದ್ದನ್ನ ತೊಗೊಂಡು ದೊಡ್ಡ ಶ್ರೀಮಂತನಾಗಿ ನೆಮ್ಮದಿಯಿಂದ ಇದ್ನಂತೆ.. ಅಷ್ಟೆ ಕಥೆ..’ ಎಂದು ನಕ್ಕು ಮತ್ತೆ ರಂಗೋಲಿಗೆ ಬಣ್ಣಾ ಹಾಕುವುದರಲ್ಲಿ ಮಗ್ನರಾದರು ಕಮಲಮ್ಮ..

ಅವರ ಮಾತು ಮುಗಿಯುತ್ತಿದ್ದಂತೆ ಮತ್ತೆ ಗುಡಿಯ ಸುತ್ತ ರೌಂಡ್ ಹಾಕುತ್ತ ಆಡಿಕೊಳ್ಳುತ್ತ ಬಂದ ಪವನ ಆ ಗುಡಿಯ ಎಡಭಾಗಕ್ಕೆ ಬಂದಾಗ ಅಲ್ಲಿ ಕಂಡ ‘ಸ್ವಪ್ನೇಶ್ವರಿ‘ ಮೂರ್ತಿಗೊಮ್ಮೆ ನಮಸ್ಕರಿಸಿ, ಮತ್ತೆ ಮುಖ್ಯ ಗರ್ಭಗುಡಿಯ ಹನುಮಂತನ ಸುಂದರ ಮೂರ್ತಿಗೆ ಅಡ್ಡಬಿದ್ದು ಮತ್ತೆ ಅಜ್ಜಿ ಬಣ್ಣ ಹಾಕುತ್ತಿದ್ದ ರಂಗೋಲೆಯ ಹತ್ತಿರ ಬಂದ.

‘ಏನೊ.. ತಿರುಗಾ ಬಂದೆ? ಕಥೆ ಮುಗಿದೋಯ್ತಲ್ಲಾ?’

‘ಒಂದು ಅನುಮಾನ ಬಂತು ಅಜ್ಜಿ..’

‘ಏನನುಮಾನನೊ?’

‘ಅಜ್ಜಿ ಆ ಕಥೆಲಿ ಹೇಳಿದ ಗುಡಿ ಇದೇನಾ? ಆ ಕಡೆ ಎಡಗಡೆ ಇರೊ ಸ್ವಪ್ನೇಶ್ವರಿನೆ ಆ ಅಂಜವ್ವನಾ? ಈ ಗುಡಿ ಕಟ್ಟಿಸಿದ್ದು ನಮ್ ಅಂಜಯ್ಯ ತಾತನಾ?’ ಎನ್ನುತ್ತ ಪ್ರಶ್ನೆಗಳ ಮಳೆ ಸುರಿಸಿದ..

‘ಮುಂಡೇದು, ಛೋಟುದ್ದ ಇದ್ರು ಎಷ್ಟೊಂದು ಪ್ರಶ್ನೆ ಕೇಳುತ್ತೆ ನೋಡು? ಸುಮ್ನೆ ಆಡ್ಕೊ ಹೋಗೊ .. ನಾನು ಕಥೆ ಹೇಳು ಅಂದ್ಯಲ್ಲ ಅಂಥ ಕಥೆ ಹೇಳಿದೆ ಅಷ್ಟೆ ..’ ಎಂದವರೆ ಮುಗುಳ್ನಗೆಯೊಂದಿಗೆ ಮೌನವಾದರೂ, ಅವರ ಕೈಲಿದ್ದ ವಜ್ರದ ಹರಳಿದ್ದ ಬಂಗಾರದ ಬಳೆಗಳು ಮಾತ್ರ, ‘ನಮಗೇಕೆ ಮೌನ?’ ಎನ್ನುವಂತೆ ಗಲಗಲ ಸದ್ದು ಮಾಡುವುದನ್ನು ಮುಂದುವರೆಸಿದ್ದವು..

ಅಜ್ಜಿಯ ಮಾತು ಕೇಳಿ ಮತ್ತೆ ಪ್ರಶ್ನಿಸದೆ ಆಟವಾಡಲು ಆ ಕಡೆ ಓಡಿ ಹೋದ ಪವನ..

ದೇವಸ್ಥಾನದ ಸುತ್ತಲ ಬಯಲು ಪ್ರದೇಶದಿಂದ ತಂಗಾಳಿ ಮಾತ್ರ ಮಂದವಾಗಿ ಬೀಸುತ್ತ, ಹತ್ತಿರದಲ್ಲಿದ್ದ ಕೊಳವನ್ನು ನೇವರಿಸುತ್ತಲೆ ಇತ್ತು – ಅದರ ತಂಪನ್ನು ಹೀರಿ ತಂಪಾಗಿಯೆ ಇರಲೇನೊ ಎಂಬಂತೆ..

(ಮುಕ್ತಾಯ)

  • ನಾಗೇಶ ಮೈಸೂರು
    ೦೮.೦೭.೨೦೨೩

( picture source : internet / social media)

ಸಣ್ಣಕಥೆ: ಜೇನಟ್ಟಿ ಐಕಳು


ಸಣ್ಣಕಥೆ: ಜೇನಟ್ಟಿ ಐಕಳು
______________________

‘ಬೇಡ ಅಂದ್ರು ಕೇಳ್ಲಿಲ್ಲ.. ಈಗ್ನೋಡಿ ಎಂಥಾ ಮಳೇಲಿ ಸಿಕ್ಕೊಂಡ್ವಿ..’ ರಚ್ಚೆ ಹಿಡಿದಂತೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೆ ತಾವು ಮರೆಯಾಗಿ ಹಿಡಿದಿದ್ದ ಬಾಳೆ ಎಲೆಯ ಛತ್ರಿಯಡಿಯಿಂದಲೆ ಇಣುಕಿ ನೋಡುತ್ತ ಹೇಳಿದ ಕುಂಡೆ ರಾಮ..

‘ಸುಮ್ಕಿರಲೆ ಕಂಡಿವ್ನಿ.. ಹೇಳಿ ಕೇಳಿ ಬಂದ್ಹೋಗೊ ಹಾಳ್ಮಳೆ.. ಒಂಚೂರು ಜಾಸ್ತಿ ಸುರಿತಿದ್ದಂಗೆ ಚಡ್ಡಿಲೇ ಎಲ್ಲಾ ಆದಂಗೆ ಆಡ್ತಿರಲ್ಲೊ.. ಇದೂ ಒಂಥರ ಮಜಾ ಕಣ್ರೊ.. ಖುಸಿ ಪಡ್ರೊ ಖರ್ಚಿಲ್ದೆ ಸ್ನಾನ ಆಯ್ತು ಅಂಥ..’ ಎಂದವನೆ ಕುಂಡೆ ರಾಮನ ಕುಂಡಿಯ ಮೇಲೊಂದು ಏಟು ಹಾಕಿ ಪಕಪಕನೆ ನಕ್ಕ ಬೀಡಿ ಬಸ್ಯಾ..

ಅವರಿಬ್ಬರ ಮಾತಿಗೆ ಚೂರು ಗಮನ ಕೊಡದೆ ಬಾಳೆಲೆಯಿಂದ ತೊಟ್ಟಿಕ್ಕುತ್ತಿದ್ದ ಮಳೆ ನೀರಿಗೆ ನಾಲಿಗೆ ಚಾಚಿ ಹನಿ ಹನಿಯಾಗಿ ಚಪ್ಪರಿಸುತ್ತ ತನ್ನದೆ ಆನಂದಮಯ ಲೋಕದಲ್ಲಿ ಮೈ ಮರೆತಿದ್ದ ಮಂಡಿ ನಾಗ.. ವಾಸ್ತವದಲ್ಲಿ ಅವನೇ ಅವರಿಬ್ಬರನ್ನು ‘ಬನ್ರೋ .. ಕಾಡಲ್ಲಿ ಜೇನು ಹುಟ್ಟು ಕಟ್ಟಿರೊ ಜಾಗ ಪತ್ತೆ ಮಾಡ್ಕೊಂಡು ಬಂದಿದೀನಿ.. ಕಮ್ಮಿ ಅಂದ್ರು ಐದಾರು ಸೇರು ಜೇನು ಸಿಕ್ತೈತೆ.. ಈ ವಾರ ಎಲ್ಲ ಟೆಂಟು, ಸಿನಿಮಾ, ಸಂತೆ ಅಂಥ ಮಜಾ ಮಾಡೋಷ್ಟು ಕಾಸು ಸಿಗುತ್ತೆ, ಸರಿಯಾದ ಗಿರಾಕಿನ ಹುಡುಕಿ ಮಾರಿದ್ರೆ..’ ಎಂದು ಯಾವುದೆ ಆಲೋಚನೆಯಿರದ ಅವರಿಬ್ಬರ ಮನಸಿನಲ್ಲಿ ತಟ್ಟನೆ ಪ್ರಲೋಭನೆಯುದಿಸುವಂತೆ ಮಾಡಿದ್ದ.. ಮೊದಮೊದಲು ಹಿಂದೇಟಾಕಿದರು, ಆ ಜಾಗ ತುಂಬಾ ದೂರವೇನು ಇಲ್ಲವೆಂದು, ಜೇನು ಕಟ್ಟಿರುವ ಮರದ ಕೊಂಬೆಯು ತೀರ ಎತ್ತರದಲ್ಲಿರದೆ ಸಮೀಪದಲ್ಲೆ ಇರುವ ಗುಡ್ಡದ ಬಂಡೆಗೆ ಆತುಕೊಂಡಂತೆ ಇರುವುದರಿಂದ, ದೊಂದಿಯೊಂದನ್ನು ಹಚ್ಚಿ ಜೇನು ಓಡುವಂತೆ ಮಾಡಿ, ಉದ್ದ ಕೋಲಿಂದ ಚುಚ್ಚಿದರೆ ಸಾಕು – ಬೇಡ ಬೇಡ ಅನ್ನುವಷ್ಟು ಜೇನು ಹುಟ್ಟು ಸಿಗುತ್ತದೆ ಎಂದು ರಂಜಿತವಾಗಿ ವರ್ಣಿಸಿದ ಮೇಲೆ ಇವರಿಬ್ಬರ ಮನಸು ಸ್ವಲ್ಪ ಡೋಲಾಯಮಾನವಾದಂತೆ ಕಂಡಿತು..

‘ಲೇ .. ನಾಗ.. ಆಗ್ಲೆ ಮಧ್ಯಾಹ್ನ ಆಗೋಯ್ತು.. ಈ ಹಾಳು ಬಿಸ್ಲು ನೋಡಿದ್ರೆ, ಇವತ್ತು ಜೋರು ಮಳೆ ಬಂದ್ರೂ ಬಂತೆ.. ಇವತ್ತು ಬ್ಯಾಡ ಬುಡ್ಲಾ .. ನಾಳಿಕ್ ಹೋಗಮ ಬೇಕಾದ್ರೆ..’ ಎಂದು ರಾಗ ಎಳೆದಿದ್ದ ಕುಂಡೆ ರಾಮ.

‘ತತ್ತೆರೀಕೆ… ಯಾವಾಗ್ಲು ಏನಾದ್ರು ಸಕುನ ಹೇಳ್ತಿಯಲ್ಲೊ ಕುಂಡ್ರಾಮ..? ನಾನು ನೋಡ್ಕೊಂಡು ಬರುವಾಗ್ಲೆ ಅದೇ ದಾರಿಲಿ ಚಂದ್ರಣ್ಣ ಹೋಯ್ತಿದ್ದ.. ಗೊತ್ತಲ್ಲ ಚಂದ್ರಣ್ಣ? ಅವನ ಕಣ್ಗೇನಾದ್ರು ಆ ಗೂಡು ಬಿದ್ರೆ ಅಷ್ಟೆ.. ಇನ್ನರ್ಧ ಗಂಟೇಲ್ ಹೋದ್ರು ಅಲ್ಲಿ ಖಾಲಿ ಕೊಂಬೆ ನೋಡ್ಕಂಡ್ ಬರ್ಬೇಕಾಯ್ತದೆ.. ಈಗ ಬತ್ತೀರೊ ಇಲ್ವೊ ಅಷ್ಟೇಳಿ ಬಡ್ಡೇತವಾ.. ನಾನೊಬ್ನೆ ಆದ್ರು ಸೈ, ನಾನು ಹೋಗೋನೆ.. ಆ ಮೇಲೆ ಟೆಂಟು ಸಿನಿಮಾ ಸಂತೆ ಅಂಥೇನಾದ್ರು ಅತ್ರ ಬಂದ್ರೊ, ಮೂಸೂ ನೋಡಾಕಿಲ್ಲ..’ ಎನ್ನುತ್ತ ಎಣ್ಣೆ ಹಚ್ಚಿದ ಬಟ್ಟೆ ಸುತ್ತಿದ್ದ ದೊಂದಿಯ ಜೊತೆ, ಚೂಪುಗತ್ತಿಯಂತೆ ಮೊನೆಚಾದ ತುದಿಯಿದ್ದ ಉದ್ದದ ಕೋಲನ್ನೆತ್ತಿಕೊಂಡು ಹೊರಟೇ ಬಿಟ್ಟಿದ್ದ ಮಂಡಿ ನಾಗ..

‘ಲೋ.. ಈ ಬಡ್ಡಿ ಹೈಕ ಹೇಳ್ದಂಗೆ ಮಾಡೋನೆ.. ಅವ್ನು ಹೇಳೋದ್ ನೋಡಿದ್ರೆ ಇಲ್ಲೆ ಹತ್ರದಲ್ಲೆ ಇರೋ ಅಂಗೆ ಐತೆ.. ಒಂದ್ ಕೈ ನೋಡೇಬಿಡಾಣ ನಡಿಯೋ ರಾಮ..’ ಎನ್ನುತ್ತ ಶಿಫಾರಸು ಮಾಡುತ್ತಲೆ ಹುರಿದುಂಬಿಸಿದ್ದ ಬಸ್ಯಾನ ಮಾತಿಗೆ ಓಗೊಡುವಂತಾಗಿ ಅರೆಬರೆ ಒಪ್ಪಿಗೆಯಿಂದಲೆ, ‘ಸರಿ ನಡಿರ್ರೋ ಹಾಳಾಗೋಗ್ಲಿ.. ಬಿರ್ನೆ ವೋಗಿ ಬಿರ್ನೆ ಬನ್ಬಿಡವ..’ ಎಂದ ಮೇಲೆ ಹೆಚ್ಚು ಕಮ್ಮಿ ದಾಪುಗಾಲಿಕ್ಕುತ್ತಲೆ ಆ ಜಾಗದತ್ತ ನಡೆದಿದ್ದರು ಮೂವರು..

ಆವತ್ತು ಅದೇನು ವಿಚಿತ್ರವೊ.. ರಪರಪನೆ ಮುಖಕ್ಕೆ ಬಡಿಯುವಂತಿದ್ದ ಉರಿ ಬಿಸಿಲು ಅದೇಕೊ ಅವರು ಹೊರಡುವ ಹೊತ್ತಿಗೆ ಮುನಿಸಿಕೊಂಡ ಮದನಿಕೆಯಂತೆ, ಕಪ್ಪು ಮೋಡದ ರಾಶಿಯ ಬೆಟ್ಟಗಳನ್ನು ಪೇರಿಸುತ್ತ, ಆ ಇಳಿ ಮಧ್ಯಾಹ್ನದ ಹೊತ್ತಲ್ಲು ಸಂಜೆಯ ಮುಸುಕನ್ನು ಹೊದಿಸಿಬಿಟ್ಟಿತ್ತು.. ಇವರು ಹೆಜ್ಜೆಯ ವೇಗವನ್ನು ಹೆಚ್ಚಿಸಿದಂತೆ, ಬೀಸುತ್ತಿದ್ದ ಗಾಳಿಯ ವೇಗವೂ ಹೆಚ್ಚಾಗುತ್ತಾ ಹೋಗಿ, ನಡುನಡುವೆ ಪುಡಿಗಲ್ಲಿನೆಸೆತದಂತೆ ಮಳೆ ಹನಿಯ ತುಣುಕುಗಳನ್ನೆರಚುತ್ತ ದೊಡ್ಡ ಮಳೆಯಾಗಬಹುದಾದ ಮುನ್ಸೂಚನೆ ನೀಡತೊಡಗಿತ್ತು.. ಮೊದಲೆ ಮಳೆಯೆಂದು ಗೊತ್ತಿದ್ದರೆ ಬಿದುರಿನ ಕಾವಡಿಯನ್ನೊ, ಛತ್ರಿಯನ್ನೊ ತರಬಹುದಿತ್ತು.. ಯಾವುದೇ ಮುನ್ಸೂಚನೆಯಿಲ್ಲದೆ ಬಿರುಸಾಗುವ ಲಕ್ಷಣ ಕಾಣಿಸಿಕೊಂಡು ಅವರ ಲೆಕ್ಕಾಚಾರವೆಲ್ಲ ಏರುಪೇರಾಗುವಂತೆ ಮಾಡತೊಡಗಿತ್ತು..

‘ಲೋ ನಾಗ, ಬಸ್ಯಾ.. ನನ್ ಮಾತ್ ಕೇಳ್ರೋ.. ಇವತ್ ಬ್ಯಾಡ ಬನ್ರೋ .. ಜೋರ್ ಮಳೆ ಬರೋ ಅಂಗೈತೆ.. ನಾಳಿಗಂಟ ಇದ್ರೆ ವೊತ್ತಾರೆ ಬಂದು ಕಿತ್ಕಳಣ..’ ಎಂದ ಕುಂಡೆ ರಾಮನ ಮಾತನ್ನು ಒಂದೆ ಏಟಿಗೆ ತುಂಡು ಹಾಕುವಂತೆ..’ ಲೇ .. ಪುಕ್ಲ್ ಮುಂಡೇದೆ.. ಮಳೇಗ್ ಎದುರ್ತಿಯಲ್ಲೊ..? ಇದು ಇರೋದು ಆ ಗುಡ್ಡದ ಬಂಡೆಗೆ ಅಂಟ್ಕೊಂಡಂಗೆ.. ಅಲ್ಲಿ ಗವಿನೊ, ಗುಹೆನೊ ಇರ್ತದೆ ಬನ್ರೋ.. ಮಳೆ ನಿಲ್ಲಗಂಟ ಅಲ್ಲೆ ಚೌಕಾಬಾರ ಆಡ್ಬೋದು..’ ಎನ್ನುತ್ತ ಚಡ್ಡಿ ಜೇಬಿನಲ್ಲಿದ್ದ ಕವಡೆಗಳನ್ನು ಮುಟ್ಟಿ ನೋಡಿಕೊಂಡಿದ್ದ ಮಂಡಿ ನಾಗ..

ಅಂತೂ ಇಂತೂ ಎದ್ದು ಬಿದ್ದು ಆ ಜಾಗ ಸೇರಿಕೊಳ್ಳೊ ಹೊತ್ತಿಗೆ ಮಳೆ ನಿಜವಾಗಿಯು ಜೋರಾಗಿಯೆ ಹೋಯ್ತು.. ಪುಣ್ಯಕ್ಕೆ ಅದು ಜೋರಾದ ಮುಸಲಧಾರೆಯಾಗುವ ಹೊತ್ತಿಗೆ ಮೂವರು ಆ ಮರದಡಿಯ ಬೊಡ್ಡೆಯನ್ನು ಸೇರಿಕೊಂಡಿದ್ದರು.. ಆದರೆ ಅಲ್ಲೆ ಎಡವಟ್ಟಾಗಿದ್ದು.. ನಾಗನೆಂದಂತೆ ಅದು ಗುಡ್ಡದ ಹೆಬ್ಬಂಡೆಗಂಟಿದ ಮರವೆ ಆಗಿದ್ದರು, ಅಲ್ಲಾವ ಗವಿಯಾಗಲಿ, ಗುಹೆಯಾಗಲಿ ಇರಲಿಲ್ಲ.. ಆ ಹೆಬ್ಬಂಡೆ ಬೃಹದಾಕಾರವಾಗಿ ಎಷ್ಟು ವಿಶಾಲವಾಗಿತ್ತೆಂದರೆ, ಅದರ ನಡುವೆ ಸೀಳುಗಳು ಇರದೆ, ಆ ಬಿರುಕಿಂದುಂಟಾಗುವ ಮರೆಗಳೂ ಇಲ್ಲವಾಗಿ , ಅದರ ಮೇಲೆ ಬಿದ್ದ ಮಳೆ ನೀರು ನೇರವಾಗಿ ಜಾರಿ ಇವರು ನಿಂತಿದ್ದ ಕಡೆಯೆ ಮಡುಗಟ್ಟಿ ಪುಟ್ಟ ಕೆರೆಯಾಗತೊಡಗಿತ್ತು..

‘ ಲೋ.. ನಾಗ.. ಈ ಮರದ್ ಕೆಳ್ಗೆೆಷ್ಟೊತ್ತು ಅಂಥ ನಿಂತ್ಕೊಳೊದೊ? ಇಲ್ ನೋಡುದ್ರೆ ಯಾವ್ದು ನೆರಳಿರೊ ಜಾಗಾನೆ ಇಲ್ವಲ್ಲೊ.. ಇನ್ನೊಂದು ಗಳಿಗೆ, ಮರದಿಂದಾನು ನೀರು ತೊಟ್ಟೋಕ್ ಶುರುವಾದ್ರೆ ನಾವು ಪೂರ್ತಿ ನೆನೆದು ತೊಪ್ಪೆ ಆಗೋಯ್ತಿವಲ್ಲೊ.. ಮೊದ್ಲೆ ನಮ್ಮವ್ವ ಸಿದ್ಲಿಂಗಿ, ‘ಪೋಲಿ ಅಲ್ಕೊಂಡು ಬತ್ತೀಯಾ ಬೇವರ್ಸಿ..?’ ಅಂಥ ದೋಸೆ ಮೊಗಚೊ ಕೈಲೆ ಬರೆ ಆಕ್ತಾಳೆ.. ಮಳೆ ಏನು ನಿಲ್ಲೊ ಅಂಗೆ ಕಾಣ್ತಾನೆ ಇಲ್ಲ.. ಈಗೇನ್ರೊ ಮಾಡದು..’ ಎಂದ. ಅವ್ವನ ಕೈನ ಕಬ್ಬಿಣದ ಮೊಗಚುವ ಕೈನ ಹಿಡಿಯನ್ನು ನಿಗಿನಿಗಿ ಉರಿಯುವ ಕೆಂಡದೊಲೆಯೊಳಗೆ ಇಟ್ಟು , ಅದು ಕೆಂಪಾದಾಗ ಎತ್ತಿ – ಕೊಸರಾಡುತ್ತ ಓಡಲೆತ್ನಿಸುವ ಅವನ ಮುಂದಲೆ ಹಿಡಿದು ತೊಡೆಯ ಮೇಲೊ, ತೋಳಿನ ಮೇಲೊ – ಎಲ್ಲಿ ಸಿಕ್ಕರಲ್ಲಿ ಇಟ್ಟು ‘ಪರ್ಮನೆಂಟ್ ನಾಮದ ಬರೆ‘ ಹಾಕುವ ಅವಳ ಕರ ಕುಶಲತೆಯ ನೆನಪಾಗಿ ಸರಕ್ಕನೆ ನಖಶಿಖಾಂತ ಅದುರಿದಂತಾಗಿ, ಆ ಜೋರು ಮಳೆಯ ಚಳಿಯಲ್ಲು ಲಘುವಾಗಿ, ಆಯಾಚಿತವಾಗಿ ಕಂಪಿಸಿತ್ತು ಅವನ ದೇಹ..

ಅದನ್ನು ಕಣ್ಣಾರೆ ಕಂಡಿದ್ದ ನಾಗನಿಗು ‘ಅಯ್ಯೋ.. ಪಾಪ.. ಔದಲ್ವ..’ ಅನಿಸಿತು. ‘ಲೇ ಬಸ್ಯಾ ಎದ್ರುಕೊಬ್ಯಾಡ ಕಣ್ಲ.. ನೋಡು ಎಂಗಿದ್ರು ಈ ಮರದ ಬೊಡ್ಡೆನಾಗೆ ದೊಡ್ಡ ಪೊಟರೆ ಐತೆ.. ನಮ್ಮ ಅಂಗಿ ಬನೀನು ಕಳಚಿ ಒಳಗಿಡಾಣ.. ಆಗ ಅಂಗಿ ಒದ್ದೆ ಆಗಲ್ಲ .. ನೋಡ್ರೊ ಅಲ್ಲಿ ದೊಡ್ಡ ಬಾಳೇಗಿಡಾ? ಅದರೆಲೆ ಕತ್ತರಿಸ್ಕೊಂಡು ಬಂದ್ರೆ ಅದೇ ದೊಡ್ಡ ಛತ್ರಿ ತರ ಹಿಡ್ಕೊಂಡು ಇಲ್ಲೆ ಕೂತಿರ್ಬೋದು.. ಮಳೆ ಸ್ವಲ್ಪ ‘ಉಸ್’ ಅನ್ಲಿ, ನಮ್ ಕೆಲ್ಸ ಮುಗಿಸ್ಕೊಂಡ್ ವೋಯ್ತಿರೋಣ..’ ಎಂದವನೆ, ತನ್ನ ಅಂಗಿ ಬನೀನು ಬಿಚ್ಚಿ ಮುದ್ದೆ ಮಾಡಿ ಆ ಪೊಟರೆಯೊಳಗೆ ತೂರಿಸಿ, ಬಾಳೆ ಗಿಡದತ್ತ ಓಡಿದ. ಅವನ ಹಿಂದೆಯೆ ಬಸ್ಯಾನು, ರಾಮನೂ ಅಂಗಿ, ಬನೀನು ಕಳಚಿ ಪೊಟ್ಟಣ ಕಟ್ಟಿ ಪೊಟರೆಯೊಳಗಿಡುವಷ್ಟರಲ್ಲಿ, ಅವರು ಮೂವರಿಗು ಆಗಿ ಮಿಕ್ಕುವಷ್ಟು ಉದ್ದವಾಗಿದ್ದ ದೊಡ್ಡದೊಂದು ಬಾಳೆಲೆ ಹಿಡಿದು ಬಂದ ನಾಗ. ಅವನು ಬರುವಷ್ಟು ಹೊತ್ತಿಗಾಗಲೆ ಎರಚಲು ಎರಚಿ ಮೈಯೆಲ್ಲ ವದ್ದೆಯಾಗಿ, ಚಡ್ಡಿಯೂ ಮೈಗಂಟಿಕೊಳ್ಳಲು ಆರಂಭವಾಗಿದ್ದರು, ಅದರ ನೆರಳಡಿ ತಲೆಗೆ ಬೀಳುವ ಹನಿಗಳಿಂದ ರಕ್ಷಣೆ ದೊರೆತಂತಾಗಿ, ತುಸು ಗಳಿಗೆಯ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಮೂವರು..

ನಿಜದಲ್ಲಿ ಮಳೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿರಲಿಲ್ಲ.. ಹಾಗು ಹೀಗು ಮಾಡಿ ಆ ಮಳೆಯಲ್ಲೆ ಕುಕ್ಕರಗಾಲಲ್ಲಿ ಕೂತು ಚಡ್ಡಿಯಿಂದ ಒದ್ದೆ ಬೀಡಿಯೊಂದನ್ನು ಹುಡುಕಿ ತೆಗೆದು, ಹರ ಸಾಹಸದಿಂದ ಹಚ್ಚಿ ಬೆಚ್ಚಗಾಗಲು ಯತ್ನಿಸತೊಡಗಿದ್ದ ಬಸ್ಯ.. ಮಂಡಿ ನಾಗ ಹೆಸರಿಗೆ ಸರಿಯಾಗಿ ನೆಲದ ಮೇಲೊಂದಷ್ಟು ಎಲೆ, ತರಗೆಲೆ ಕೂಡಿಸಿ ಮಂಡಿಯನ್ನು ಅದರ ಮೇಲಿರಿಸಿಕೊಂಡು ಕೂತಿದ್ದ ಒಂದು ರೀತಿಯ ಯೋಗಾಸನದ ಭಂಗಿಯಲ್ಲಿ.. ಮೊಲದ ಬಿಲಗಳಲ್ಲಿ ಹಾಗೆ ಮಂಡಿಯೂರಿ ಕೂತೆ ಮೊಲ ಹಿಡಿಯುವ ಅವನ ಚಾಕಚಾಕ್ಯತೆ ಸುತ್ತ ಮುತ್ತೆಲ್ಲ ಹೆಸರುವಾಸಿಯಾಗಿದ್ದಕ್ಕೆ ಅವನಿಗೆ ಮಂಡಿ ನಾಗ ಎಂಬ ಬಿರುದು ಬಂದಿದ್ದು.. ಅವರ ಹಾಗೆ ಕೂರುವುದಕ್ಕಾಗದೆ, ತನ್ನ ದೊಡ್ಡ ಹಂಡೆಯಂತಹ ಕುಂಡಿಯ ಮೇಲೆ ಕೂತಿದ್ದ ಕುಂಡೆ ರಾಮನಿಗೆ ಮಾತ್ರ ಮುಖ ಮೇಲೆ ಬಿದ್ದು ಜಾರುವ ಮಳೆ ಹನಿ ಯಾವುದೊ ಹಿತವಾದ, ಸುಖಾನುಭೂತಿ ನೀಡಿದಂತೆನಿಸಿ ಅದನ್ನೆ ಆಸ್ವಾದಿಸುವವನಂತೆ ಕಣ್ಮುಚ್ಚಿ ಕುಳಿತುಬಿಟ್ಟಿದ್ದ – ತಾನೆಲ್ಲಿರುವೆನೆಂಬ ಪರಿವೆಯನ್ನೆ ಮರೆತವನಂತೆ.. ಯಾವುದೊ ಧ್ಯಾನಲೋಕದಲ್ಲಿದ್ದವನಂತೆ ಅದೆಷ್ಟು ಹೊತ್ತು ಹಾಗೇ ಇದ್ದನೊ.. ಬಾಳೆಲೆಯ ಮೇಲಿಂದ ಜಾರಿದ ಹನಿಯನ್ನು ನಾಲಿಗೆ ಚಾಚಿ ತುಟಿಯೊಳಗೆಳೆದುಕೊಳ್ಳುತ್ತ, ಎರಚಲಲಿ ಬರುವ ಹನಿಗಳ ಮೆದು ಘರ್ಷಣೆಯ ಸ್ಪರ್ಶದಿಂದುಂಟಾಗುವ ಪುಳಕವನ್ನು ಅನುಭವಿಸುತ್ತಿದ್ದವನನ್ನು ತಟ್ಟನೆ ಭೂಮಿಗೆ ತಂದಿತ್ತು – ಎದೆ ನಡುಗಿಸುವಂಥಹ ಮಿಂಚು ಗುಡುಗಿನ ಸದ್ದು..! ಆ ಸದ್ದಿನ ಹಿಂದೆಯೆ ತುಸು ದೂರದ ಆಕಾಶದಿಂದ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಮರವೊಂದು ಹೊತ್ತಿಕೊಂಡ ದೃಶ್ಯ ಕಣ್ಣಿಗೆ ಬಿದ್ದು ಬೆಚ್ಚಿ ಬಿದ್ದರು ಮೂವರು ಗೆಳೆಯರು..

‘ ಲೋ.. ಸಿಡ್ಲು ವೊಡ್ಯೋಕ್ ಸುರುವಾಯ್ತಲ್ರೊ.. ಸಿಡ್ಲು ಬಂದಾಗ ಮರದ್ ಕೆಳ್ಗೆ ಇರಬಾರದಂತೆ ಕಣ್ರೊ.. ಬನ್ರೊ ಮಳೆನೊ ಗಿಳೆನೊ ಓಡೋಗ್ ಬುಟ್ ಅಟ್ಟಿಗ್ ಸೇರ್ಕೊಳವ..’ ಎನ್ನುತ್ತ ಪೊಟರೆಯಲ್ಲಿದ್ದ ಅಂಗಿಯ ಗಂಟಿನತ್ತ ಕೈ ಹಾಕಿದ್ದ ಬಸ್ಯಾ… ಆ ಸಿಡಿಲು ಬಡಿದ ದೃಶ್ಯ ಹುಟ್ಟು ಹಾಕಿದ್ದ ಹೆದರಿಕೆ ಅವನ ಕಣ್ಣಿನಲ್ಲಿ ಭಯಂಕರ ಭೀತಿಯ ರೂಪದಲ್ಲಿ ನಾಟ್ಯವಾಡುತ್ತಿದ್ದುದು ಎದ್ದು ಕಾಣುತ್ತಿತ್ತು.. ಅದೇ ಹೊತ್ತಿಗೆ ರಾಮನು ಹೆಚ್ಚು ಕಡಿಮೆ ಅದೇ ನಿರ್ಧಾರಕ್ಕೆ ಬಂದವನಂತೆ ಕೈಲಿ ಹಿಡಿದಿದ್ದ ಬಾಳೆಲೆ ತುದಿಯನ್ನು ಬಿಟ್ಟು ಪೊಟರೆಯತ್ತ ಧಾವಿಸಿದ.. ‘ಇನ್ನಿವರಿಬ್ಬರು ತಾನೇನು ಹೇಳಿದರು ಹೋಗುವವರೇನೆ’ – ಎಂದರಿವಾಗಿ, ನಾಗನು ಮರಕ್ಕಾನಿಸಿದ್ದ ಜೇನುಗೂಡಿನ ಹುಟ್ಟಿಗೆ ಚುಚ್ಚಿ ಕತ್ತರಿಸಲು ತಂದಿದ್ದ ಉದ್ದನೆಯ ಕೋಲನೆತ್ತಿಕೊಳ್ಳಲು ನಡೆದ.. ಹೀಗೆ ಹೆಚ್ಚು ಕಡಿಮೆ ಮೂವರು ಮರದ ಕಾಂಡದ ಹತ್ತಿರಕ್ಕೆ ಏಕಕಾಲಕ್ಕೆ ನಡೆದಿರುವಾಗಲೆ, ಮತ್ತೊಮ್ಮೆ ಇಡಿ ಆಕಾಶವನ್ನೆ ಬೆಳಗುವಂತೆ ಮಿಂಚಿನ ಸಾಕ್ಷಾತ್ಕಾರವಾಗಿ, ಅದರ ಬೆನ್ನಲ್ಲೆ ಎದೆ ಜಿಲ್ಲೆನಿಸುವಂತಹ ಗುಡುಗಿನ ಸದ್ದು ಮೂಡಿ ಬಂದು ಮೂವರನ್ನು ಅರೆಚಣ ಅಧೀರರನ್ನಾಗಿಸಿ ವಿಚಲಿತಗೊಳಿಸಿಬಿಟ್ಟಿತು.. ಅಷ್ಟೆ ಆದರೆ ಹೇಗೊ ಸುಧಾರಿಸುತ್ತಿದ್ದರೇನೊ..? ದುರದೃಷ್ಟವಶಾತ್ – ಆ ಹೊತ್ತಿಗೆ ಮತ್ತೊಂದು ಭಯಂಕರ ಸಿಡಿಲು ಅವರಿರುವೆಡೆಯಲ್ಲೆ ಬಂದಪ್ಪಳಿಸಿ, ಆ ಸುತ್ತಲಿನ ಪ್ರದೇಶವನ್ನೆಲ್ಲ ಅರೆಗಳಿಗೆ ಜಗಮಗಿಸುವ ಯಕ್ಷ ಲೋಕವನ್ನಾಗಿಸಿಬಿಟ್ಟಿತು.. ಆ ಕ್ಷಣದಲ್ಲಿ ಆ ಸಿಡಿಲು ಬಂದಪ್ಪಳಿಸಿದ್ದು ತಾವಿರುವ ಮರಕ್ಕೊ, ತಮಗೊ, ತಮ್ಮ ಹತ್ತಿರದ ಜಾಗಕ್ಕೊ – ಅರಿವಾಗದ ಅಯೋಮಯತೆಯಲ್ಲಿ ಮೂವರು ಸ್ತಂಭಿಭೂತರಾದಂತಾಗಿ, ತಾವೇನು ಬದುಕಿದ್ದೇವೊ, ಸತ್ತೆ ಹೋದೆವೊ? ಎಂದು ಗೊಂದಲ, ಗಲಿಬಿಲಿಯಲ್ಲಿರುವಾಗ .. ಏನೊ ತಟ್ಟನೆ ಬಂದು, ಮುಖದ ಮೇಲೆ ಪಟ್ಟನೆ ಹೊಡೆದು ಹೋದಂತೆ ಅನಿಸಿ ಏನಿರಬಹುದೆಂದು ಮುಟ್ಟಿ ನೋಡಿಕೊಳಲು ಯತ್ನಿಸುತ್ತಿರುವಂತೆ, ಒಂದರ ಹಿಂದೆ ಒಂದರ ಹಾಗೆ ಬಂದು ಪಟಪಟನೆ ಹೊಡೆತ ಬೀಳತೊಡಗಿದವು. ಮೊಟ್ಟ ಮೊದಲಿಗೆ ಅದೇನೆಂದು ತಟ್ಟನೆ ಅರಿವಾಗಿ ಜೋರಾಗಿ ಕಿರುಚಿದ್ದ ನಾಗ.. ‘ ಲೋ ಬಿರ್ನೆ ಓಡ್ರಲಾ.. ಜೇನುಳ ಬಂದು ವೊಡಿತಾವೆ ಓಡ್ರಲಾ..’ ಎನ್ನುತ್ತ ಪೊಟರೆಯಲ್ಲಿದ್ದ ಅಂಗಿಯನ್ನು ಮರೆತವನಂತೆ, ಒಂದೇ ಏಟಿಗೆ ನಾಲ್ಕಾರು ಹೆಜ್ಜೆ ಜಿಗಿಯುತ್ತ, ಅಲ್ಲಿಂದ ಪೇರಿ ಕಿತ್ತಿದ್ದ.. ಅವನು ಓಡುವ ಪರಿ ಕಂಡು ಬೆರಗಾಗಲು ಬಿಡದ ಹಾಗೆ, ಜೇನು ಹುಳಗಳು ಎಡಬಿಡದೆ ಎಡಾಬಲ ನೋಡದೆ ಮುಖಾಮೂತಿಯೆನ್ನದೆ ರಪರಪನೆ ಹೊಡೆಯುತ್ತ ಕಚ್ಚತೊಡಾಗಿದಾಗ, ‘ಯಾಕಾದರು ಅಂಗಿ ತೆರೆದೆವೊ..’ ಎಂದುಕೊಳ್ಳುತ್ತ, ಸಿಕ್ಕಸಿಕ್ಕಲ್ಲಿ ಪರಪರನೆ ಕೆರೆಯುತ್ತ ತಾವೂ ನಾಗ ಓಟ ಕಿತ್ತ ದಿಕ್ಕಿಗೆ ದೌಡಾಯಿಸಿದ್ದರು..

ತಮ್ಮ ಪಾಡಿಗೆ ತಾವಿದ್ದ ಜೇನುಹುಟ್ಟನ್ನು ಆ ಮಿಂಚು-ಗುಡುಗು-ಸಿಡಿಲು ಬಡಿದ ಗಲಿಬಿಲಿಯಲ್ಲಿ , ತಾನು ಹಿಡಿದಿದ್ದ ಉದ್ದ ಕೋಲಿನ ಚೂಪು ತುದಿಯಿಂದ ತನಗರಿವಿಲ್ಲದಂತೆ ಬಲವಾಗಿ ಚುಚ್ಚಿ ಆ ಜೇನುಗಳನ್ನು ರೊಚ್ಚಿಗೆಬ್ಬಿಸಿಬಿಟ್ಟಿದ್ದ-ನಾಗ! ಸಾಲದ್ದಕ್ಕೆ, ಕೋಲ್ಯಾಕೊ ಮರಕ್ಕೆ ಸಿಕ್ಕಿಕೊಂಡಿದೆ ಎಂದು ಭಾವಿಸಿ, ಅದನ್ನು ಮರಳಿ ಸೆಳೆಯುವ ಹುನ್ನಾರದಲ್ಲಿ ಮತ್ತಷ್ಟು ಬಾರಿ ಅದೇ ಜೇನುಹುಟ್ಟಿಗೆ ಚುಚ್ಚಿ ಅವುಗಳ ರೋಷ ಬಹುಗುಣವಾಗುವಂತೆ ಮಾಡಿಬಿಟ್ಟಿದ್ದ.. ಹಾಗಾಯಿತೆಂದು ಅವನಿಗರಿವಾಗಿದ್ದು, ಮೊದಲ ಜೇನುಹುಳ ಬಂದು ಅವನ ಮುಖಕ್ಕೆ ‘ರಪ್ಪೆಂದು’ ಹೊಡೆದಾಗಲೆ.. ಚಾಣಾಕ್ಷನಾದ ಅವನಿಗೆ ತಟ್ಟನೆ ತಾನೇನು ಮಾಡಿದೆನೆಂದು ಅರಿವಾಗಿ, ಜೋರಾಗಿ ಕಿರುಚಿಕೊಂಡು ಮೊದಲು ತನ್ನ ಕಾಲಿಗೆ ಬುದ್ದಿ ಹೇಳಿದ್ದ..

ಆ ಜೇನು ಹುಳಗಳು ಅದೆಷ್ಟು ರೋಷ ತಪ್ತವಾಗಿದ್ದವೆಂದರೆ, ಬಿರುಸಾದ ಮಳೆಯನ್ನು ಲೆಕ್ಕಿಸದೆ ಅವರ ಹಿಂದೆಯೆ ಅಟ್ಟಿಸಿಕೊಂಡು ಬಂದು ಸಿಕ್ಕ ಸಿಕ್ಕಲ್ಲಿ ಕಚ್ಚಿ ಬೊಬ್ಬೆಯೆಬ್ಬಿಸಿಬಿಟ್ಟವು.. ಅಂಗಿಯಿಲ್ಲದ ಬರಿ ಮೈನ ದೆಸೆಯಿಂದ ಬರಿ ಮುಖ ಮಾತ್ರವಲ್ಲದೆ ಮೈ ಕೈಯೆಲ್ಲ ಜೇನಿನ ಹಚ್ಚೆ ಹಾಕಿದಂತಾಗಿ ಎಲ್ಲಿ ಕೆರೆಯುವುದೊ, ಎಲ್ಲಿ ಬಿಡುವುದೊ ಅರಿವಾಗದೆ ‘ಉರಿ…ಉರಿ…’ ಎಂದು ಬೊಬ್ಬಿಡುತ್ತಲೆ ಕೇರಿಯ ತುದಿ ತಲುಪಿಕೊಂಡಿದ್ದರು.. ಅಲ್ಲಿಗು ಬಿಡದೆ ಅಟ್ಟಿಕೊಂಡು ಬಂದಿದ್ದ ಅಳಿದುಳಿದ ಜೇನು ಹುಳಗಳನ್ನು ಕಾರಜ್ಜ, ಸೋಮಣ್ಣ ಮತ್ತಿತರರು ಆ ಮಳೆಯಲ್ಲೆ ಬೆಂಕಿಯ ದೊಂದಿ ಬೀಸಿ ಓಡಿಸಿದರೂ, ಅವರಲ್ಲಿಯು ಒಂದಿಬ್ಬರಿಗೆ ಸಣ್ಣಪುಟ್ಟ ಕಡಿತಗಳಾಗುವುದನ್ನು ತಡೆಯಲಾಗಲಿಲ್ಲ..

ಅಂತು ಇಡಿ ರಾತ್ರಿ ಬಿಡದೆ ಸುರಿದ ಮಳೆ ಬೆಳಗಿನ ಹೊತ್ತಿಗೆ ಸ್ವಲ್ಪ ತಣ್ಣಗಾಗಿತ್ತು.. ಆದರೆ ರಾತ್ರಿಯಿಡಿ ನರಳುತ್ತ ಮಲಗಿದ್ದ ಮೂವರ ಜೊತೆ ಅವರ ಅಟ್ಟಿಯವರಿಗು ಎಲ್ಲಿ ಮದ್ದು ಹಚ್ಚುವುದು, ಎಲ್ಲಿ ಬಿಡುವುದು ಎಂದೆ ಅರಿವಾಗದ ರಣಗಾಯಗಳ ಜೊತೆ ಹೆಣಗಾಡುವುದರಲ್ಲೆ ನಿದಿರೆಯಿಲ್ಲದೆ ಬೆಳಗಾಗಿತ್ತು. ವಾರಗಟ್ಟಲೆ ಸುಧಾರಿಸಿಕೊಂಡಿದ್ದು ಸಾಲದೆಂಬಂತೆ, ಹನುಮಂತರಂತೆ ಊದಿದ ಮುಖಗಳಿಂದಾಗಿ ಯಾರಿಗು ಮುಖ ತೋರಿಸಲಾಗದೆ ಬಟ್ಟೆ ಸುತ್ತಿಕೊಂಡು ಓಡಾಡುವಂತಾಗಿತ್ತು ಮೂವರ ಪರಿಸ್ಥಿತಿ… ಇದೆಲ್ಲದರ ನಡುವೆಯು ಬಸ್ಯಾ ಮಾತ್ರ.. ’ಕಂಡಾಪಟ್ಟೆ ಜೇನು ಕಚ್ಚೈತೆ ಅಂತ ನಮ್ಮವ್ವ ಈ ಸಾರಿ ದೋಸೆ ಕೈಲಿ ಬರೆ ಆಕ್ಲಿಲ್ಲ ಕಣ್ರೊ ..’ ಎಂದು ಖುಷಿಪಟ್ಟಿದ್ದ..!

ಅದೇ ಕೊನೆ – ಅವರ್ಯಾರು ಮತ್ತೆ ಜೇನಿನ ಸಾವಾಸಕ್ಕೆ ಹೋಗಬಾರದೆಂದು ಮಾತಾಡದೆಯೊ ತೀರ್ಮಾನಿಸಿಕೊಂಡುಬಿಟ್ಟಿದ್ದರು.. ಆದರೆ ಇವರ ಸಾಹಸದ ಕಥೆ ನಿಧಾನವಾಗಿ ಸುತ್ತಮುತ್ತಲೆಲ್ಲ ಪ್ರಚಾರವಾಗಿ ಬೇಡ ಬೇಡವೆಂದರು ಅವರನ್ನು ಕಂಡವರೆಲ್ಲ, ‘ಏನ್ರಲಾ ಜೇನಟ್ಟಿ ಐಕ್ಳಾ? ಎಂಗೆ ಜೇನ್ತುಪ್ಪ ರೇಟು?’ ಎಂದು ಹಂಗಿಸುವುದನ್ನು ಮಾತ್ರ ನಿಲಿಸಲಿಲ್ಲ.. ದಿನ ಕಳೆದಂತೆ ಆ ಹಳೆಯ ಕಥೆಯೆಲ್ಲ ಮರೆತುಹೋದರು ‘ಜೇನಟ್ಟಿ ಐಕಳು..’ ಎಂಬ ಬಿರುದು ಮಾತ್ರ ಅವರ ಹೆಸರಿನ ಹಿಂದೆ ಶಾಶ್ವತವಾಗಿ ನಿಂತು ಹೋಯ್ತು – ದಂತ ಕಥೆಗಳಲ್ಲಿ ಕಥೆ ಮರೆತು ಹೋದರು ಹೆಸರು ಮಾತ್ರ ಉಳಿದುಕೊಳ್ಳುವ ಹಾಗೆ!

(ಮುಕ್ತಾಯ)

– ನಾಗೇಶ ಮೈಸೂರು
೦೧.೦೭.೨೦೨೩

ಸಣ್ಣ ಕಥೆ : ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ..


‘ಈ ಗಾಯ ನಿನ್ನೆ ಆಗಿದ್ದಾ?’

ಹೊಲಿಗೆ ಹಾಕಿದ್ದ ಕಣ್ರೆಪ್ಪೆಯ ಮೇಲ್ಭಾಗವನ್ನೆ ದಿಟ್ಟಿಸಿ ನೋಡುತ್ತ ಕೇಳಿದರು ಜಾಧವ್..

ಪ್ಯಾಂಟ್ರಿಯ ಟೇಬಲಿನಲ್ಲಿ ಎದುರಾಗಿ ಕುಳಿತ ಪ್ರತೀಕ್, ಬಾಸಿನ ಮಾತು ಕೇಳುತ್ತಲೆ ಆಯಾಚಿತವಾಗಿ ಆ ಗಾಯದ ಸುತ್ತ ಲಘುವಾಗಿ ಬೆರಳಾಡಿಸಿ, ಅದನ್ನು ಕೆರೆಯಬೇಕೆಂಬ ತುಡಿತವನ್ನು ಕಷ್ಟಪಟ್ಟು ನಿಗ್ರಹಿಸುತ್ತ, ‘ಹೌದು ಸಾರ್.. ನಿನ್ನೆ ರಾತ್ರಿ ಆಗಿದ್ದು..’ ಎಂದರು, ಆ ಗಾಯದ ಸುತ್ತ ಇದ್ದ ನೋವುಂಟುಮಾಡಿದ ಬಿಗಿತವನ್ನು ಅನುಭವಿಸುತ್ತ.

ಬಾಸ್ ಜಾಧವ್ ಮಿಲಿಟರಿ ಹಿನ್ನಲೆಯಿಂದ ಬಂದವರು. ನೇರ ನಡೆ ನುಡಿಯ ಶಿಸ್ತಿನ ಮಾತಿಗೆ ಹೆಸರಾದವರು. ಮಾತು ಕಠಿಣವಾದರು ಮೀನಾ ಮೇಷ ಎಣಿಸದ ಸ್ವಭಾವದಿಂದಾಗಿ ಅವರ ಕಾರ್ಯಗಳೆಲ್ಲ ತಟ್ಟನೆ ಫಲಿತಾಂಶ ಕೊಡುವಂಥ ಚಟುವಟಿಕೆಗಳೆ.. ಧನಾತ್ಮಕವೊ ಋಣಾತ್ಮಕವೊ – ಒಟ್ಟಾರೆ ಶೀಘ್ರದಲ್ಲಿ ವಿಲೇವಾರಿ ಮಾಡಿ ಆ ಕಡೆಗೊ, ಈ ಕಡೆಗೊ ಎಂದು ಖಚಿತವಾಗಿ ನಿರ್ಧರಿಸುವುದು ಅವರ ಕಾರ್ಯ ವೈಖರಿಯ ವಿಧಾನ. ಪ್ರತೀಕ್ ಹೆಚ್ಚು ಕಡಿಮೆ ಅವರಷ್ಟೆ ವಯಸಿನವರಾದರು, ಅವರೆಂದರೆ ಸ್ವಲ್ಪ ಭೀತಿ, ಗೌರವ.

‘ ಇನ್ನು ಸ್ವಲ್ಪ ಕೆಳಗೆ ಬಿದ್ದಿದ್ದರೆ ಕಣ್ಣಿಗೆ ಎಡವಟ್ಟಾಗುತ್ತಿತ್ತಲ್ರಿ? ಅಲ್ಲಾ ಇನ್ನು ಎಷ್ಟು ದಿನಾಂತ ಅವನನ್ನ ಟಾಲರೇಟ್ ಮಾಡ್ತಿರ? ಯಾವುದಾದರು ಮೆಂಟಲ್ ಹೋಂ ನೋಡಿ ಸೇರಿಸಿಬಿಡೋದಲ್ವಾ? ನಿಮ್ಮ ಲೈಫೆಲ್ಲ ಇವನ ಜೊತೆ ಏಗೋದಾದ್ರೆ ನೀವು ಯಾವತ್ತು ಸುಖ, ಸಂತೋಷ ಕಾಣೋದು? ಈಗ ಎಷ್ಟಾಯ್ತು ವಯಸ್ಸು ಮಗನಿಗೆ?’ ಕಾಳಜಿ ಬೆರೆತ ಆತಂಕದ ದನಿಯಲ್ಲಿ ಕೇಳಿದರು ಜಾಧವ್.

‘ ಇಪ್ಪತ್ಮೂರಾಯ್ತು ಸಾರ್..’

‘ ನಾನು ನೋಡಿದ ಹಾಗೆ ಹೆಚ್ಚು ಕಡಿಮೆ ಹದಿನೈದು ವರ್ಷದಿಂದ ಸಫರ್ ಮಾಡ್ತಾ ಇದೀರಾ.. ಯೌ ಆರ್ ನಾಟ್ ಲಿವಿಂಗ್ ಯುವರ್ ಲೈಫ್ ಅಟ್ ಆಲ್.. ಈ ಕಂಪನಿಯಲ್ಲೆ ಮೂವತ್ತು ವರ್ಷ ಸರ್ವೀಸ್ ಆಗಿದೆ ನಿಮಗೆ.. ನಿಮ್ಮ ಮಗ ಅವನು ನಿಜ.. ಆದರೆ ನೀವು ನಿಮ್ಮ ಬಗ್ಗೆನು ಯೋಚಿಸ್ಬೇಕು.. ವಯಸಾದ ಹಾಗೆ ನೀವೇನು ಹುಡುಗರಾಗೋಲ್ಲ… ನಿಮ್ಮ ಆರೋಗ್ಯಾನು ಒಂದೇ ತರ ಇರೋಲ್ಲ… ಡೋಂಟ್ ಬೀ ಇಮೋಶನಲ್ ಇನ್ ದಿಸ್ ರಿಗಾರ್ಡ್.. ನೀವು ಮನಸು, ಹೃದಯ ಗಟ್ಟಿ ಮಾಡ್ಕೊಂಡು ಡಿಸಿಶನ್ ತೊಗೋಬೇಕು.. ಈ ಗಾಯ ಇದೇ ಮೊದಲ ಸಲದ್ದಲ್ಲ.. ಹಾಗೇನೆ ಕೊನೆಯದೂ ಅಲ್ಲಾ.. ಗಿವ್ ಏ ಸೀರಿಯೆಸ್ ಥಾಟ್ ‘ ಎಂದರು ಜಾಧವ್ ಕಕ್ಕುಲತೆಯಿಂದ..

‘ನಾವು ಮಾಡೊ ಪ್ರಯತ್ನವೆಲ್ಲ ಮಾಡ್ತಾ ಇದೀವಿ ಸಾರ್.. ಅವನು ಇಂಡಿಪೆಂಡೆಂಟಾಗಿ ಬದುಕೋಕೆ ಸಾಧ್ಯವಾಗೋ ಅಷ್ಟು ಹುಷಾರಾದ್ರೆ ಸಾಕು.. ವೀ ಆರ್ ನಾಟ್ ಎಕ್ಸ್ ಪೆಕ್ಟಿಂಗ್ ಮಿರಾಕಲ್ಸ್.. ಅದಕ್ಕೆ ನನಗಿನ್ನು ಶಕ್ತಿಯಿರುವಾಗಲೆ, ಏನೇನು ಮಾಡಲು ಸಾಧ್ಯವಿದೆಯೊ ಅದನ್ನೆಲ್ಲ ಪ್ರಯತ್ನಿಸಿ ನೋಡಿಬಿಡಬೇಕು ಅಂಥ. ಆಮೇಲೆ ರಿಗ್ರೆಟ್ಸ್ ಇರಬಾರದು ಅಲ್ವಾ – ಅದು ಟ್ರೈ ಮಾಡಬಹುದಿತ್ತೇನೊ, ಇದು ಟ್ರೈ ಮಾಡಬಹುದಿತ್ತೇನೊ ಅಂಥ..’


‘ಒಂದು ವೇಳೆ ಅದೂ ಸೋಲೆ ಆದರೆ..?’

‘ ಸೋಲೆ ಆಗಬಹುದು ಸಾರ್.. ಆದರೆ ಆಗ ಕನಿಷ್ಠ ಪ್ರಯತ್ನ ಮಾಡಿದೆವು ಅನ್ನೊ ತೃಪ್ತಿಯಾದರು ಇರುತ್ತಲ್ಲವೆ? ಪ್ರಯತ್ನವೇ ಪಡದೆ ಇರೋಕಿಂತ, ಯತ್ನಿಸಿ ಸೋತರು – ಟ್ರೈ ಮಾಡಿದೆವು ಅನ್ನೊ ಸಮಾಧಾನವಾದರು ಇರುತ್ತಲ್ಲವೆ?’

ಜಾಧವ್ ಒಂದರೆಗಳಿಗೆ ಮಾತಾಡದೆ ಮೌನವಾದರು. ಬಹುಶಃ ಮನದಲ್ಲಿಯೆ ಏನೋ ಮಥನ ನಡೆಸಿರಬೇಕು…. ಕೆಲವು ಕ್ಷಣಗಳ ನಂತರ ಮೌನ ಮುರಿದು, ‘ನೋಡು ಪ್ರತೀಕ್.. ಪರ್ಸನಲ್ ವಿಷಯ ಏನೇ ಇದ್ದರು ಕಂಪನಿ ನೋಡುವುದು ದಕ್ಷತೆ, ಕ್ಷಮತೆ, ಸಾಧನೆಗಳನ್ನ.. ನಿನಗೇ ಗೊತ್ತಿರೊ ಹಾಗೆ ಕೋವಿಡ್ ನಂತರ ಕಂಪನಿಗಳು ನಡೆಯುವ ರೀತಿ, ಅದರ ಅರ್ಥಿಕ ಪರಿಸ್ಥಿತಿ, ಕೆಲಸ ಮಾಡಬಹುದಾದ ರೀತಿ – ಎಲ್ಲವು ಬದಲಾಗಿ ಹೋಗಿದೆ.. ಎಷ್ಟೊ ಕೆಲಸಗಳು ಮಾಯವಾಗಿ ಹೋಗಿವೆ, ಮಿಕ್ಕವೆಷ್ಟೊ ಅದರ ಮೂಲರೂಪವನ್ನು ಬದಲಿಸಿಕೊಂಡು ಹೈ ಕಾಸ್ಟ್ ದೇಶಗಳಿಂದ, ಲೋ ಕಾಸ್ಟ್ ದೇಶಗಳಿಗೆ ವರ್ಗಾವಣೆಯಾಗಿ ಹೋಗಿವೆ.. ಸರ್ವೈವಲ್ ಇಸ್ ದ ಓನ್ಲಿ ಗೋಲ್ ನೌ.. ಆ ಕಾರಣಕ್ಕೆ ನಮ್ಮಲ್ಲು ರೀ ಆರ್ಗನೈಸೇಶನ್ ಆಗಿ, ಅನೇಕ ಬದಲಾವಣೆಗಳು ಬರಲಿವೆ. ಆ ಬದಲಾವಣೆಯಲ್ಲಿ ಯಾರ ಕೆಲಸ ಉಳಿಯುವುದೊ, ಯಾರದು ಮಾಯವಾಗುವುದೊ, ಮತ್ತಾರದು ಒಲ್ಲದ ಬದಲಾವಣೆ ಬಯಸುವುದೊ – ಹೇಳಲಾಗದು.. ಇಟ್ ಇಸ್ ಬೆಟರ್ ಯು ಗಾರ್ಡ್ ಯುವರ್ಸೆಲ್ಫ್  ನೌ..’ ಎಂದರು..

‘ ಜಾಧವ್ ಸಾರ್ ..ಈಚೆಗೆ ನಾನು ಅದನ್ನೆ ಚಿಂತಿಸುತ್ತಿದ್ದೇನೆ.. ನನ್ನ ವೈಯಕ್ತಿಕ ಕಾರಣವು ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನನಗು ಇಷ್ಟವಿಲ್ಲ.. ಅದು ನೈತಿಕವಾಗಿಯು ನನ್ನನ್ನು ಭಾಧಿಸುತ್ತದೆ.. ಅದೇ ಹೊತ್ತಿಗೆ ನನ್ನ ಮನೆಯ ಸ್ಥಿತಿಯನ್ನು ನಾನು ನಿರ್ಲಕ್ಷಿಸುವಂತಿಲ್ಲ..’

‘ಅದಕ್ಕೆ?’

‘ಅದಕ್ಕೆ ಇದನ್ನೆಲ್ಲ ಚಿಂತಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇನೆ.. ಆದರೆ ಅದಕ್ಕೆ ನಿಮ್ಮ ಸಹಕಾರ, ಆಶೀರ್ವಾದ ಬೇಕು..’

‘ಏನು ತೀರ್ಮಾನ?’ 

‘ ಸಾರ್ .. ನಿಮಗೆ ತಿಳಿದ ಹಾಗೆ ಕಂಪನಿಯು ವೆಚ್ಛ ಕಡಿತದ (ಕಾಸ್ಟ್ ಸೇವಿಂಗ್) ಆಶಯದೊಂದಿಗೆ ಈ ವರ್ಷ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದೆಯಂತೆ..’

‘ ಹೌದು ..ಅದು ಹೆಡ್ಡಾಫಿಸಿನಲ್ಲಿ ನಡೆಯುತ್ತಿದೆಯೆಂಬ ಗುಸು ಗುಸು ನಾನು ಕೇಳಿದ್ದೇನೆ.. ಅದಕ್ಕು ನಿನ್ನ ವಿಷಯಕ್ಕು ಏನು ಲಿಂಕು?’

‘ಇದೆ ಜಾಧವ್ ಸಾರ್.. ಹೆಡ್ಡಾಫಿಸಲ್ಲಿ ಒಂದಷ್ಟು ಹೆಡ್ ಕೌಂಟ್ ರಿಟ್ರೆಂಚ್ ಮಾಡುವ ಇರಾದೆ ಇದೆಯಂತೆ..(ಉದ್ಯೋಗ/ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ / ಬದಲಾವಣೆ ಮಾಡಿ ಕಂಪನಿಯ ವೆಚ್ಛವನ್ನು ಕಡಿಮೆ ಮಾಡುವುದು ಅಥವಾ ಹದ್ದುಬಸ್ತಿನಲ್ಲಿಡುವುದು..). ಅದನ್ನು ಅನ್ವಯಿಸಲು ಸಾಧ್ಯವಾದರೆ, ಅದರಡಿ ಬರುವ ಉದ್ಯೋಗಿಗಳಿಗೆ ಒಂದಷ್ಟು ಪರಿಹಾರ ರೂಪದ ಹಣ ಸಿಗುತ್ತದೆಯಂತೆ.. ಅದು ನಿಜವಾದಲ್ಲಿ, ನನಗದನ್ನು ಅನ್ವಯಿಸಲು ಸಾಧ್ಯವೆ?  ನಾನದನ್ನು ಬಳಸಿಕೊಂಡು, ನನ್ನ ಮಗನ ಗುಣಪಡಿಸುವ ಸಾಧ್ಯತೆಗಳನ್ನೆಲ್ಲ ಅನ್ವೇಷಿಸ ಬಹುದು.. ಅದೊಂದು ವೇಳೆ ಸಫಲವಾದರೆ, ಮತ್ತೆ ಯಾವುದಾದರು ಬೇರೆ ಸರಿ ಹೊಂದುವ ಕೆಲಸ ಹುಡುಕಿಕೊಳ್ಳಬಹುದು..ಆಗದಿದ್ದರೆ ಈ ಹಣದೊಂದಿಗೆ ಊರಿಗೆ ಹೋಗಿ ಮಗನ ಆರೋಗ್ಯದ ಉಸ್ತುವಾರಿಯ  ಜೊತೆಗೆ, ಸರಳ-ನಿವೃತ್ತ ಜೀವನ ನಡೆಸುತ್ತೇನೆ.. ನನ್ನನ್ನು ಆ ಸ್ಕೀಮಿನಡಿ ಸೇರಿಸಲು ಸಾಧ್ಯವಿದೆಯೆ ಎಂದು ಪರಿಶೀಲಿಸುತ್ತೀರಾ?’ ಎಂದು ಜಾಧವ್ ರ ಮೊಗವನ್ನೆ ದಿಟ್ಟಿಸಿದ  ಪ್ರತೀಕ್.


ಜಾಧವ್ ಮತ್ತೆ ಆಲೋಚನೆ ಬಿದ್ದವರಂತೆ ಕಂಡರು, ಅರೆಗಳಿಗೆಯ ನಂತರ ನುಡಿದರು – ‘ಪ್ರತೀಕ್ .. ಲೆಟ್ ಮಿ ಚೆಕ್ ಆನ್ ದಿಸ್ ಪಾಸಿಬಿಲಿಟಿ.. ಇದಕ್ಕೆ ಹೆಡ್ಡಾಫೀಸ್ ಗ್ರೀನ್ ಸಿಗ್ನಲ್ ಕೊಟ್ಟರೆ ನೀನು ಮತ್ತೆ ಹಿಂದೆ ಸರಿಯುವುದಿಲ್ಲ ತಾನೆ? ಚೆನ್ನಾಗಿ ಯೋಚಿಸಿ ನಿರ್ಧಾರಕ್ಕೆ ಬಂದಿರುವೆಯಷ್ಟೆ?’ ಎಂದರು ಪ್ರತೀಕನ ನಿರ್ಧಾರದ ಗಟ್ಟಿತನವನ್ನು ಖಚಿತಪಡಿಸಿಕೊಳ್ಳಲು..

‘ಇಲ್ಲಾ ಸಾರ್.. ಚೆನ್ನಾಗಿ ಯೋಚಿಸಿಯೆ ಮಾಡಿದ ನಿರ್ಧಾರವಿದು. ಇಫ್ ಇಟ್ ವರ್ಕ್ಸ್  ಔಟ್ ನೋ ಬ್ಯಾಕಿಂಗ್ ಫ್ರಮ್ ಮೈ ಸೈಡ್ ..’ ಎಂದು ಗ್ಯಾರಂಟಿ ನೀಡಿದ ಪ್ರತೀಕ್..

‘ಓಕೆ.. ಗಿವ್ ಮಿ ಒನ್ ವೀಕ್ ಟೈಮ್.. ಐ ವಿಲ್  ಗೆಟ್ ಬ್ಯಾಕ್ ಟು ಯು ‘ ಎಂದು ಮೇಲೆದ್ದರು ಜಾಧವ್.

********

ಬಂದದ್ದೆಲ್ಲ ಬರಲಿ….

‘ಏನಪ್ಪ ದೊರೆ ಏನ್ಸಮಾಚಾರ?’ ಎಂದ ಶ್ರೀವತ್ಸರ ಮೊಗವನ್ನೊಮ್ಮೆ ಪೆಚ್ಚಾಗಿ ನೋಡುತ್ತ ನಕ್ಕ ಪ್ರತೀಕ..

‘ಹೀಗೆ ಇದೀನಿ ದೊಡ್ಡಪ್ಪ.. ನೀವು ಹೇಗಿದ್ದೀರಾ?’ ಎಂದವನ ದನಿಯಲ್ಲಿದ್ದ ನಿರಾಶೆ, ಖೇದ, ವಿಷಾದದ ಪಸೆಯನ್ನು ಗಮನಿಸಿದ ಶ್ರೀವತ್ಸರು, ಹತ್ತಿರಕ್ಕೆ ಬಂದು ತುಸು ಕಕ್ಕುಲತೆಯಿಂದ, ‘ಯಾಕೆ? ಎನಿ ಥಿಂಗ್ ರಾಂಗ್..? ಯು ಮೇಡ್ ಲಾಟ್ ಆಫ್ ಪ್ರೋಗ್ರೆಸ್ ವಿತ್ ಯುವರ್  ಸನ್ಸ್ ಹೆಲ್ತ್ .. ಅಟ್ಲೀಸ್ಟ್, ಮೆಡಿಸಿನ್ನುಗಳೆಲ್ಲ ತುಸು ಪರವಾಗಿಲ್ಲ ಅನ್ನುವ ಹಾಗೆ ಕೆಲಸ ಮಾಡ್ತಾ ಇರೋ ಹಾಗಿದೆಯಲ್ಲ?.. ಎನೀ ಅದರ್ ಇಶ್ಯೂ?’ ಎಂದರು. 


ಜಾಧವ್ ರ ಸಹಕಾರದಿಂದ ಕೆಲಸದಿಂದ ಹೊರಗೆ ಬಂದು ಈಗಾಗಲೆ ಎರಡು ವರ್ಷ ಕಳೆದಿತ್ತು. ಅದರಲ್ಲಿ ಮೊದಲ ವರ್ಷ ಪೂರ್ತಿ, ಮಗನ ಸಲುವಾಗಿ ಬೇರೆ ಬೇರೆ ಡಾಕ್ಟರುಗಳ ಹಿಂದೆ ಬಿದ್ದು , ವಿಭಿನ್ನ ಔಷಧಿಗಳ ಪ್ರಯೋಗ ಮಾಡಿ ಕೊನೆಗು ಸುಮಾರು ಒಂದು ವರ್ಷಕ್ಕೆ, ಸರಿ ಸುಮಾರಾಗಿ, ‘ಪರವಾಗಿಲ್ಲ‘ ಎನ್ನುವ ರೀತಿ ಕೆಲಸ ಮಾಡುವ ಔಷಧಿಗಳನ್ನು ಕಂಡುಕೊಂಡಿದ್ದರಿಂದ, ಮೊದಲಿದ್ದ ಮಗನ ಆಕ್ರಮಣದ ಭೀತಿ, ತೊಡಕುಗಳು ಸಾಕಷ್ಟು ಕಮ್ಮಿಯಾಗಿ , ಮ್ಯಾನೇಜಬಲ್ ಅನ್ನುವ ಮಟ್ಟಕ್ಕೆ ಬಂದಿದ್ದವು. ಸಂಪೂರ್ಣ ಗುಣವಾಗುವ ಪರಿಹಾರ ಕಾಣಿಸದಿದ್ದರು, ಮೊದಲಿನ ಪರಿಸ್ಥಿತಿಗೆ ಹೋಲಿಸಿದರೆ ಬಹುತೇಕ ಪ್ರಗತಿಯಾಗಿ ದೈನಂದಿನ ಕಾರ್ಯಗಳತ್ತ ತುಸು ನಿರಾಳವಾಗಿ ಗಮನ ಹರಿಸಬಹುದಾದ ಮಟ್ಟ ತಲುಪಿತ್ತು. ಶ್ರೀ ವತ್ಸರು ಹೇಳುತ್ತಿದ್ದುದು ಆ ಪರಿಸ್ಥಿತಿಯನ್ನು ಕುರಿತೆ..

‘ನಿಜ ದೊಡ್ಡಪ್ಪ.. ಆ ಕಡೆಯೇನೊ ಸ್ವಲ್ಪ ಸುಧಾರಿಸಿತೇನೊ ನಿಜ.. ಆದರೆ ಈಗ ಹೊಸತೊಂದು ಸಮಸ್ಯೆ ಹುಟ್ಟಿಕೊಂಡಿದೆ..’

‘ಅದ್ಯಾವ  ಸಮಸ್ಯೆ?’ 

‘ದೊಡ್ಡ, ಕೆಟ್ಟ ಧೈರ್ಯ ಮಾಡಿ ಕೆಲಸವನ್ನೇನೊ ಬಿಟ್ಟು ಬಿಟ್ಟೆ ದೊಡ್ಡಪ್ಪ.. ಮಗ ಹುಷಾರಾದ್ರೆ ಮತ್ತೆ ಹೇಗೊ ಯಾವುದಾದರು ಸಣ್ಣಪುಟ್ಟ ಕೆಲಸಕ್ಕಾದರು ಸೇರಬಹುದು ಅನ್ಕೊಂಡಿದ್ದೆ.. ಆದರೆ ಯಾಕೊ ಒಂದೂ ವರ್ಕೌಟ್ ಆಗುತ್ತಿಲ್ಲ.. ‘

‘ಯಾಕೆ ಜಾಬ್ ಮಾರ್ಕೆಟ್ ಚೆನ್ನಾಗಿಲ್ವ?’

‘ ಈ ಕೊವಿಡ್ ಗಲಾಟೆ ಆದ ಮೇಲೆ ಜಾಬ್ ಮಾರ್ಕೆಟ್ ಚೆನ್ನಾಗಿಲ್ಲ ಅನ್ನೋದೇನೊ ನಿಜವೆ.. ಆದರೆ ಇರೋ ಕೆಲಸಗಳಲ್ಲೆ ನನಗೆ ನನ್ನ ಅನುಭವಕ್ಕೆ ಹೊಂದೊ ಅಂಥ ಕೆಲಸಗಳಿಗೆ ಅಪ್ಲೈ ಮಾಡಿದರು ಯಾಕೊ ಮೂವ್ ಆಗುತ್ತಿಲ್ಲ..’ 

‘ಯಾಕೆ?’

‘ದೊಡ್ಡಪ್ಪ .. ನಾನು ಕೆಲಸ ಬಿಡುವಾಗ ಇದರ ಬಗ್ಗೆ ಅಷ್ಟು ಸೀರಿಯಸ್ಸಾಗಿ ಯೋಚಿಸಲಿಲ್ಲ.. ಆಗ ಮತ್ತೆ ಕೆಲಸಕ್ಕೆ ಸೇರ್ತಿನೊ ಇಲ್ವೊ ಅನ್ನೊ ಕ್ಲಾರಿಟಿ ಇರಲಿಲ್ಲ.. ಆದರೆ ಒಂದು ವಯಸು ದಾಟಿದ ಮೇಲೆ ಮತ್ತೆ ಕೆಲಸಕ್ಕೆ ಸೇರಬೇಕಂದ್ರೆ ಸುಲಭವಲ್ಲ..’

‘ಯಾಕೆ? ಅನುಭವ, ಜ್ಞಾನವೆಲ್ಲ ಲೆಕ್ಕಕ್ಕೆ ಬರೋದಿಲ್ವ? ವಯಸು ಜಾಸ್ತಿನೆ ಆದ್ರು ಅನುಭವನೂ ಜಾಸ್ತಿ ಇರುತ್ತಲ್ಲವೆ? ಸಾಲದ್ದಕ್ಕೆ, ಸಂಬಳ ಕಮ್ಮಿ ಕೊಟ್ರು, ಲೋ ಲೆವೆಲ್ ಜಾಬ್ ಸಿಕ್ಕಿದ್ರು ಹೋಗೋಕೆ ರೆಡಿಯಿದಿಯಲ್ಲ?’

‘ಇನ್ ಥಿಯರಿ ನಿಜ.. ಆದರೆ ಈ ಐಟಿ ಜಗದಲ್ಲಿ ಜಾಸ್ತಿ ವಯಸಾದಷ್ಟು ಮುದಿ ಕುದುರೆಯ ತರ ಆಗ್ಬಿಡ್ತೀವಿ ದೊಡ್ಡಪ್ಪ. ಅದರಲ್ಲು ಮಧ್ಯೆ ಜಾಬ್ ಬ್ರೇಕ್ ಇದ್ದರೆ ಇನ್ನೂ ಕಷ್ಟ.. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನನ್ನ ತರ ಐವತ್ತು ದಾಟಿದವರ ಸ್ಥಿತಿ ಸುಲಭವಲ್ಲ.. ನಾನೆ ಇದುವರೆಗು ಐನೂರಕ್ಕು ಮೇಲೆ ಅಪ್ಲೈ ಮಾಡಿದ್ದೇನೆ.. ಒಂದೂ ಕೂಡ ಸಕ್ಸಸ್ ಆಗಲಿಲ್ಲ ಅಂದ್ರೆ ಯೋಚನೆ ಮಾಡಿ – ಎಷ್ಟು ಕಷ್ಟ ಇದೆ ಅಂಥ..!’

‘ ಹೋಗ್ಲಿ ಪಾರ್ಟ್ ಟೈಂ, ಕಾಂಟ್ರಾಕ್ಟ್ ರೋಲ್ಗಳೇನಾದರು ಸಿಗುತ್ತ ಅಂಥ ನೋಡಬೇಕಾಗಿತ್ತು.. ಅದಕ್ಕಾದರೆ ಸ್ವಲ್ಪ ಸುಲಭವಾಗಿ ಸಿಗುತ್ತೇನೊ..’

‘ಅದೂ ನೋಡ್ತಾ ಇದೀನಿ.. ಆದರು ಪ್ರೋಗ್ರೆಸ್ ಆಗುತ್ತಿಲ್ಲ..’

‘ಓಕೆ ವರಿ ಮಾಡ್ಕೋಬೇಡ.. ರಾಯರನ್ನ ಕೇಳ್ಕೊ ಯಾವುದಾದರು ದಾರಿ ತೋರಿಸಿ ಅಂಥ.. ಪರಿಹಾರಾರ್ಥ ದಾರಿ ಕಂಡ್ರೆ ಒಮ್ಮೆ ಮಂತ್ರಾಲಯಕ್ಕು ಹೋಗಿ ಬರುವೆಯಂತೆ..ಹಾಗೆ ನನಗು ನಿನ್ನ ಒಂದು ರೆಸ್ಯೂಮ್ ಕಳಿಸು.. ನನ್ನ ಹಳೆ ಕೊಲೀಗುಗಳಿಗೆ ಕಳಿಸಿ ನೋಡುತ್ತೇನೆ.. ಏನಾದರು ಮಾಡೋಕಾಗುತ್ತಾ ಅಂಥ..’

‘ಆಗಲಿ ದೊಡ್ಡಪ್ಪ ಹಾಗೆ ಮಾಡ್ತೀನಿ..’ ಎಂದವನೆ ಮೇಲೆದ್ದಿದ್ದ ಪ್ರತೀಕ.. 

********

ಗೋವಿಂದನ ದಯೆಯೊಂದಿರಲಿ..!

ಯಾಕೊ ಅಂದು ಬೆಳಗ್ಗೆ ವಿಪರೀತ ನಿದ್ದೆ.. ಐದಾರರ ಒಳಗೆಲ್ಲ ಎದ್ದು ಒಂದು ರೌಂಡ್ ವಾಕಿಂಗ್ ಮುಗಿಸಿ ಬರುತ್ತಿದ್ದ ಪ್ರತೀಕನಿಗೆ ಏಳಲು ಏನೊ ಆಲಸಿಕೆ.. ರಾತ್ರಿಯೆಲ್ಲ ಚೆನ್ನಾಗಿ ನಿದ್ದೆ ಮಾಡಿದ್ದರಿಂದ ಆಯಾಸವಾಗಲಿ, ನಿದ್ರಾರಾಹಿತ್ಯತೆಯ ತೊಳಲಾಟವಾಗಲಿ ಇರಲಿಲ್ಲ. ಬದಲಿಗೆ ವಿಚಿತ್ರವೆಂಬಂತೆ, ಏನೋ ಪ್ರಪುಲ್ಲ ಭಾವ ಮನದುಂಬಿಕೊಂಡಂತೆ ಕಾಣುತ್ತಿತ್ತು. ಆ ಹಿತವಾದ ಸುಖಾನುಭೂತಿಯ ಕಾರಣಕ್ಕೊ ಏನೊ, ಮೇಲೆದ್ದರೆಲ್ಲಿ ಆ ಅನುಭೂತಿಯ ಕಳುವಾಗಿ ಹೋದಿತೊ ಎನ್ನುವಂತಾಗಿ ಮೇಲೇಳಲೊಲ್ಲದ ಸೋಮಾರಿತನದಲ್ಲಿ ಹಾಗೆ ಕಣ್ಮುಚ್ಚಿಕೊಂಡ. ಈ ಪರಿ ಅವನಿಗೇ ವಿಚಿತ್ರವೆನಿಸಿತ್ತು – ನಿನ್ನೆ ಮೊನ್ನೆ ತನಕವು ದಿನದಿನ ಒಂದಲ್ಲ ಒಂದು ಆತಂಕ ಮನೆ ಮಾಡಿಕೊಂಡು ಕಾಡುವುದು ಸಾಮಾನ್ಯವಾಗಿರುವಾಗ, ಇಂದೇನೊ ವಿನಾಕಾರಣ ಹೀಗೇಕೆ ಮನೋಲ್ಲಾಸದ, ಆಹ್ಲಾದತೆಯ ಭಾವ ಮೂಡುತ್ತಿದೆ? ಎಂದು ಚಿಂತಿಸುತ್ತಿರುವಾಗಲೆ, ಅಡಿಗೆ ಮನೆಯಿಂದ ಬಂದ ಹೆಂಡತಿ, ಕೈಲಿದ್ದ ಕಾಫಿ ಕಪ್ಪನ್ನು ಬಗಲಲಿಟ್ಟು, ‘ರೀ ಏಳ್ರಿ.. ಕಾಫಿ ಲೋಟ ಇಟ್ಟಿದ್ದೀನಿ.. ಇದೇನಿವತ್ತು? ವಾಕಿಂಗ್ಹೋಗಲ್ವಾ..?’ ಎಂದವಳು ಮಾರುತ್ತರಕ್ಕು ಕಾಯದೆ ಮತ್ತೆ ಮರಳಿ ಹೋದಳು.

ಪಕ್ಕದಲಿಟ್ಟ ಕಾಫಿಯ ಘಮ್ಮೆನುವ ಪರಿಮಳಕ್ಕೊ ಏನೊ, ಮೇಲೇಳಲು ತುಸು ಮೂರ್ತ ಚೇತನ ದೊರಕಿದಂತೆನಿಸಿ, ಹಾಗೆಯೆ ದಿಂಬಿಗೊರಗಿಕೊಂಡು ಕೂತವನೆ ಕಾಫಿ ಕಪ್ಪಿಗೆ ಕೈ ಹಾಕಿದ. ಅದೇ ಹೊತ್ತಿಗೆ ಸರಿಯಾಗಿ ಆಯಾಚಿತವೆಂಬಂತೆ, ಕೈ ಬದಿಯ ಟೇಬಲ್ ಮೇಲಿದ್ದ ಮೊಬೈಲ್ ಕಡೆ ಹೋಗಿ ಅಲ್ಲಿ ರಾತ್ರಿ ನೋಡಲಾಗದೆ ಇದ್ದ ವಾಟ್ಸಪ್ ಸಂದೇಶಗಳತ್ತ ಮಾಮೂಲಿನಂತೆ ಗಮನ ಹರಿಸುವಂತೆ ಮಾಡಿತ್ತು… ಇದ್ದಕ್ಕಿದ್ದಂತೆ ಅಲ್ಲಿದ್ದ ಸಂದೇಶವೊಂದು ತಟ್ಟನೆ ಗಮನ ಸೆಳೆದಾಗ , ತುಸು ಕುತೂಹಲದಿಂದ ತೆರೆದು ನೋಡಿದವನೆ – ಅರೆಕ್ಷಣ ನಂಬಲಾಗದವನಂತೆ ಸ್ತಂಭಿಭೂತನಾದ, ಕಾಫಿ ಕುಡಿಯುವುದನ್ನೂ ಮರೆತು..

ಹಿಂದೊಮ್ಮೆ ನಡೆದಿದ್ದ ಇಂಟರ್ವ್ಯೂ / ಸಂದರ್ಶನದಲ್ಲಿ ಆ ಕಂಪನಿಯಿಂದ ಆಯ್ಕೆಯಾಗಿಲ್ಲ ಎಂಬ ಸುದ್ಧಿ ಬಂದು ಒಂದು ತಿಂಗಳಾಗಿತ್ತು. ಆಗ ತುಂಬಾ ನಿರಾಶೆಯು ಆಗಿತ್ತು. ಈಗ ನೋಡಿದರೆ ಅದೇ ಹೆಚ್ ಆರ್ ವ್ಯಕ್ತಿಯಿಂದ ಪುಟ್ಟ ಸಂದೇಶವೊಂದು ಬಂದಿತ್ತು.. ಅವರಲ್ಲೆ ಇರುವ ಮತ್ತೊಂದು ಕೆಲಸಕ್ಕೆ ಆಯ್ಕೆ ಆಗಿರುವುದಾಗಿ, ಅದು ಒಪ್ಪಿಗೆಯಾದಲ್ಲಿ ಆ ಕೆಲಸದ ಆಫರ್ ಕಳಿಸುವುದಾಗಿ ಸಂದೇಶ ಕಳಿಸಿದ್ದರಾಕೆ!

ಓಹೋ, ಅದಕ್ಕೆ ಇರಬೇಕು ಈ ಬೆಳಗ್ಗೆ ಏನೊ ಪ್ರಪುಲ್ಲ ಭಾವನೆ..! ವೇತನದಲ್ಲಿ ಸ್ವಲ್ಪ ಅಂತರವಿದ್ದರು, ಇಂಟರ್ವ್ಯೂ ಮಾಡಿದ್ದ ಕೆಲಸಕ್ಕೆ ಬಲು ಹತ್ತಿರದ ಕೆಲಸವೆ.. ಅದಕ್ಕಿಂತ ಸ್ವಲ್ಪ ಕಮ್ಮಿ ಸಂಬಳವಾದರೂ ಹೆಚ್ಚೇನು ವ್ಯತ್ಯಾಸವಿರಲಿಲ್ಲ.. ಚಕಚಕನೆ, ‘ಶ್ಯೂರ್ ಐ ವಿಲ್ ಅಕ್ಸೆಪ್ಟ್ ದ ಆಫರ್.. ಪ್ಲೀಸ್ ಪ್ರೋಸೀಡ್ ವಿತ್ ಕಾಂಟ್ರಾಕ್ಟ್ ಫಾರ್ಮಾಲಿಟೀಸ್..’ ಎಂದು ಮಾರುತ್ತರ ಕಳಿಸಿದವನೆ, ದೊಡ್ಡಪ್ಪನಿಗೆ ಪೋನ್ ಮಾಡಿದ ಪ್ರತೀಕ್..

‘ದೊಡ್ಡಪ್ಪ.. ಕೊನೆಗು ಕ್ಲಿಕ್ ಆಯ್ತು.. ಆಫರ್ ಕೊಡ್ತೀವಿ ಅಂಥ ಮೇಸೇಜ್ ಬಂತು‘ ಎಂದು ವಿವರಗಳನ್ನು ಹೇಳಿದ..

‘ ಗ್ರೇಟ್.. ಕಂಗ್ರಾಚುಲೇಷನ್ಸ್ ..! ಒಂದು ವರ್ಷದ ಕಾಂಟ್ರಾಕ್ಟ್ ರೋಲ್ ಅಂಥ ತಲೆ ಕೆಡಿಸಿಕೊಬೇಡ. ಮೊದಲು ಈ ಓಪನಿಂಗ್ ಸಿಕ್ಕಲಿ.. ಮಿಕ್ಕದ್ದು ಮುಂದೆ ನೋಡಬಹುದು..’

’ಥ್ಯಾಂಕ್ಸ್ ದೊಡ್ಡಪ್ಪ.. ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.. ಮೊದಲು ಜಾಯಿನ್ ಆಗಿ, ಈಗಿರುವ ಕೆರಿಯರ್ ಬ್ರೇಕಿಗೆ ಬ್ರೇಕ್ ಹಾಕುತ್ತೇನೆ.. ಮಿಕ್ಕಿದ್ದು ಮುಂದೆ ದೇವರಿದ್ದಾನೆ..’

‘ನಿಜ ಕಣೊ.. ನೋಡಿದೆಯ? ರಾಯರು ನಿನ್ನ ಕೈ ಬಿಡಲಿಲ್ಲ.. ಆದಷ್ಟು ಬೇಗ ಒಂದು ಬಾರಿ ಮಂತ್ರಾಲಯಕ್ಕೆ ಹೋಗಿ ಬನ್ನಿ.. ಎಲ್ಲಾ ಒಳ್ಳೇದಾಗುತ್ತೆ..’ ಎನ್ನುವ ಹೊತ್ತಿಗೆ ಸರಿಯಾಗಿ, ದೇವರ ಪೂಜೆಗೆ ಅಣಿ ಮಾಡಿಕೊಳ್ಳುತ್ತ ಮಡಿಯುಟ್ಟು ದೇವರ ನಾಮ ಹಾಡಿಕೊಂಡೆ ಹೊರ ಬಂದಳು ಪತ್ನಿ ಗೋಮತಿ.. ’ ಬಂದದ್ದೆಲ್ಲ ಬರಲಿ, ಗೋವಿಂದನ ದಯೆಯೊಂದಿರಲಿ..’

ಆ ಹಾಡು ತನಗೇ ಹಾಡಿದ್ದೇನೊ ಎನ್ನುವಂತೆ ಹೃದಯ ತುಂಬಿ ದೇವರಿಗೆ ಮನಸಾರೆ ನಮಸ್ಕರಿಸುತ್ತ ಮೇಲೆದ್ದ ಪ್ರತೀಕ, ತನ್ನ ದೈನಂದಿನ ವಾಕಿಂಗಿಗೆ ಹೊರಡಲು.

(ಮುಕ್ತಾಯ)

– ನಾಗೇಶ ಮೈಸೂರು
೨೨.೦೬.೨೦೨೩

ಸಣ್ಣ ಕಥೆ: ಯೋಗಾಯೋಗ


Picture source: internet / social media)

‘ಶುದ್ಧ ಮುಠ್ಠಾಳ ಮುಂಡೇದು.. ಓದೊ ವಯಸಲ್ಲಿ ಓದ್ಲಿಲ್ಲ, ಬರಿಲಿಲ್ಲ.. ವ್ಯಾಯಾಮ, ಯೋಗ, ಆಧ್ಯಾತ್ಮ ಹಾಳೂ ಮೂಳೂಂತ ದೇವರಿಗೆ ಬಿಟ್ಟ ಬಸವನ ಹಾಗೆ ಅಲೆದಾಡ್ಕೊಂಡಿದೆ ನೋಡು.. ಅವನ ವಯಸ್ನೋರೆಲ್ಲ ಒಳ್ಳೊಳ್ಳೆ ಕೆಲ್ಸ ಹಿಡಿದು ಮದುವೆ ಮುಂಜಿಂತ ಮಾಡ್ಕೊಂಡು ಮಕ್ಕಳು , ಮರಿಗಳ ಜೊತೆ ಹಾಯಾಗಿದಾರೆ.. ಇವನು ನೋಡಿದ್ರೆ ತಿರುಬೋಕಿ ತರ ಹಿಂಗೆ ಇದಾನೆ..’ – ವಿಷಾದ, ಸಿಟ್ಟು, ಬೇಸರ ಬೆರೆತ ಮಿಶ್ರ ಭಾವದಲ್ಲಿ ನಿಟ್ಟುಸಿರಿಡುತ್ತ ಹೇಳಿದಳು ಅಂಬತ್ತೆ.

‘ಅಯ್ಯೋ ಹೋಗ್ಲಿ ಬಿಡತ್ತೆ.. ಹುಟ್ಟಿಸಿದ ದೇವರು ಹುಲ್ಲ ಮೇಯ್ಸೋದಿಲ್ಲ.. ಹೆಂಗಾದ್ರು ಬದುಕ್ಕೋತಾನೆ ನಾಣಿ ಮಾವ.. ಓದ್ಲಿಲ್ಲ, ಬರೀಲಿಲ್ಲ ಅಂದ್ರೆ ಏನಂತೆ? ಒಳ್ಳೆ ಬುದ್ಧಿ ಇದೆ.. ಒಳ್ಳೆ ಗುಣ ಇದೆ.. ಹೇಗೊ ಆಗುತ್ತೆ ಬಿಡಿ..’ ಎಂದು ಸಮಾಧಾನಿಸಿದಳು ಕನಕ..

‘ಏನು ಬುದ್ಧಿಯೊ ಏನೊ.. ಈಗಾಗ್ಲೆ ಮೂವತ್ತಾಯ್ತು.. ಇನ್ನು ಮದುವೆ ಇಲ್ದೆ ಓಡಾಡ್ತಾ ಇದಾನೆ.. ಎಲ್ಲರಿಗು ಓದಿ ಕೆಲಸದಲ್ಲಿರೊ ಗಂಡೆ ಬೇಕು.. ಇವನನ್ನ ಯಾರು ಮದ್ವೆ ಆಗ್ತಾರೆ? ನಾನೊ ಊರು ಹೋಗು ಕಾಡು ಬಾ‘ ಅಂತಿರೊ ಜೀವ.. ಎಷ್ಟು ದಿನಗಳು ಬಾಕಿನೊ, ಏನೊ ಯಾರಿಗ್ಗೊತ್ತು..?’ ಎಂದು ಮತ್ತೆ ಅಲವತ್ತುಗೊಂಡರು ಅಂಬತ್ತೆ..

ನಾಣಿ ಮಾಮ ಅಂಬತ್ತೆಯ ಅಕ್ಕನ ಮಗ.. ಮದುವೆಯಾದ ಹೊಸತರಲ್ಲೆ ವಿಧವೆಯಾದಾಗ, ಮಕ್ಕಳಿಲ್ಲ ಅಂಥ ಅಕ್ಕನ ಮಗನನ್ನೆ ಚಿಕ್ಕ ವಯಸಲ್ಲೆ ತಂದಿಟ್ಟುಕೊಂಡು ಸಾಕಿ, ಸಲಹಿ ಬೆಳೆಸಿದವರು ಆಕೆಯೆ.. ಈಗಲು ನಾಣಿ ಮಾಮ ಅಂಬತ್ತೆಯನ್ನೆ ಅಮ್ಮಾ ಅನ್ನೋದು.. ಹೆತ್ತಮ್ಮನೆ ದೊಡ್ಡಮ್ಮನೇನೊ ಅನ್ನುವ ಹಾಗೆ ಅವನ ನಡಾವಳಿ..

‘ಕಂತೆಗೊಂದು ಬೊಂತೆ ಅಂತ ಎಲ್ಲಾದರು ಒಂದು ಇರುತ್ತೆ ಬಿಡಿ ಅತ್ತೆ.. ಇವತ್ತಲ್ಲ ನಾಳೆ ಆಗೆ ಆಗುತ್ತೆ..’ ಎಂದು ಮತ್ತೆ ರಮಿಸಲೆತ್ನಿಸಿದಳು ಕನಕ..

‘ ಅಯ್ಯೊ ಮಾತಲ್ಲೆ ಸಾವರಿಸಬೇಡವೆ ಹುಡುಗಿ.. ನನಗೆಲ್ಲ ಗೊತ್ತಾಗುತ್ತೆ.. ಅಷ್ಟೆಲ್ಲ ಹೇಳ್ತಿಯಲ್ಲ.. ನಿನಗು ಮದುವೆ ವಯಸು ಮೀರ್ತಾ ಇದೆ.. ನೀನ್ಯಾಕೆ ಅವನನ್ನ ಮದ್ವೆ ಮಾಡ್ಕೋಬಾರ್ದು..’ ಎಂದು ಕಿಚಾಯಿಸಿದಾಗ, ನಾಚಿಕೆಯಿಂದ ರಂಗೇರಿದಂತೆ ಅವಳ ಕೆನ್ನೆ ಕೆಂಪಾಯ್ತು.. ಅವಳೂ ಅಂಬತ್ತೆಯ ರೀತಿಯೆ ಕೆಣಕುವ ದನಿಯಲ್ಲಿ, ‘ನಾನು ರೆಡಿ ಆತ್ತೆ.. ನಿಮ್ಮ ತಮ್ಮಾ, ಅದೇ ನಮ್ಮಪ್ಪ – ಅವನನ್ನ ಒಪ್ಪಿಸಿ ಸಾಕು.. ನಾನೆ ಮದುವೆ ಆಗ್ತೀನಿ ನಾಣು ಮಾಮನ ಜೊತೆ..’ ಎಂದಳು, ತುಸು ನಾಚಿಕೆಯೂ ಬೆರೆತ ಮಿಶ್ರ ಭಾವದಲ್ಲಿ..

‘ಆ ನಿಮ್ಮಪ್ಪ ಅವನು ಇನ್ನೊಬ್ಬ ಅಡ್ಡ ಕಸುಬಿ ಬಿಡು.. ಅವನೆಲ್ಲಿ ಒಪ್ತಾನೆ? ಇಂಜಿನಿಯರೊ, ಡಾಕ್ಟ್ರೊ ಹುಡುಕ್ತೀನಿ ಅಂತ ದೇಶ ಸುತ್ತುತಾ ಇದಾನೆ.. ಮಗಳ ವಯಸು ಮೀರ್ತಾ ಇದೆ ಆನ್ನೊ ಪರಿಜ್ಞಾನನೂ ಇಲ್ಲ ಅವನಿಗೆ..’ ಎಂದು ಗೊಣಗುತ್ತಲೆ ಅಡಿಗೆ ಮನೆಯತ್ತ ನಡೆದರು -ಸ್ನಾನ ಮಾಡಿ ಉಟ್ಟ ಮಡಿಗೆ ಯಾವುದೂ ತಗುಲಿ ಅಪಚಾರವಾಗದ ಹಾಗೆ ಸಂಭಾಳಿಸುತ್ತ..

ಗುಡಿಸುತ್ತಿದ್ದ ಹಜಾರದ ಕಸವನ್ನು ಮೊರವೊಂದರಲ್ಲಿ ಸಂಗ್ರಹಿಸಿ ನಾಣು ಮಾಮನ ಕುರಿತೆ ಚಿಂತಿಸತೊಡಗಿದಳು ಕನಕ ಲಕ್ಷ್ಮಿ.. ಅವಳು ಕಂಡಂತೆ ನಾಣು ಮಾಮ ಸುಮ್ಮನೆ ಕೂತವನೆ ಅಲ್ಲ.. ಮೂರು ಹೊತ್ತು ಏನಾದರು ಚಟುವಟಿಕೆಯಲ್ಲಿ ವ್ಯಸ್ತನಾಗಿಯೆ ಇರುತ್ತಾನೆ.. ಹಾಗಂತ ಯಾವ ಕೆಟ್ಟ ಹವ್ಯಾಸಗಳೂ ಇಲ್ಲ.. ಕೆಟ್ಟ ಸಹವಾಸವಾಗಲಿ, ಪೋಲಿ ಸ್ನೇಹಿತರ ಬಳಗವಾಗಲಿ ಇಲ್ಲ.. ಅದೇನೊ ಯೋಗವೆಂದರೆ ಅತೀವ ಪ್ರೀತಿ. ಚಿಕ್ಕ ವಯಸಿನಲ್ಲೆ ಶುರು ಮಾಡಿದವನು ಬಿಡದೆ ಸತತ ಅಭ್ಯಾಸ ಮಾಡಿ, ಈಗಲು ಮುಂದುವರೆಸಿಕೊಂಡು ಬಂದಿದ್ದ.. ತಾನು ಕಲಿತ ಕಡೆಯೆ ಯೋಗದ ಗುರುವಾಗಿ ಬೇರೆಯವರಿಗು ಕಲಿಸುತ್ತಿದ್ದ.. ಈಗ ಒಂದೆರಡು ವರ್ಷಗಳಿಂದ ಮೈಸೂರಿನ ಬಡಾವಣೆಯೊಂದರಲ್ಲಿ ಯೋಗ ಕ್ಲಾಸ್ ನಡೆಸುತ್ತಿದ್ದಾನಂತೆ.. ಅಲ್ಲಿಂದ ಬರುವ ಆದಾಯವೆ ಅವನ ಸಂಪಾದನೆ.. ಅದೆಷ್ಟು ಬರುತ್ತೊ, ಏನೊ – ಆದರೆ ಹೆಸರು ಮಾತ್ರ ಚೆನ್ನಾಗಿಯೆ ಮಾಡಿದ್ದಾನೆ.. ಮೊದಲಿನಿಂದಲು ಎಲ್ಲಾ ಯೋಗ ಸ್ಪರ್ಧೆಗಳಲ್ಲಿ ಅವನಿಗೆ ಬಹುಮಾನ ಕಟ್ಟಿಟ್ಟ ಬುತ್ತಿ.. ರಾಷ್ಟ್ರೀಯ ಮಟ್ಟದಲ್ಲು ಜಯಭೇರಿ ಹೊಡೆದದ್ದು ಅದೆಷ್ಟು ಬಾರಿಯೊ! ಯೋಗಕ್ಕೆ ಸಂಬಂಧಿಸಿದಂತೆ ಏನೇ ನಡೆಯಲಿ, ಅಲ್ಲವನ ಕಾಣಿಸುವಿಕೆ ಶತಃಸಿದ್ಧ.. ಅದೆಷ್ಟೊ ಬಾರಿ ಅವನ ಚಿತ್ರ, ಯೋಗದ ವಿನ್ಯಾಸಗಳ ಸಹಿತ ದಿನ ಪತ್ರಿಕೆಯಲ್ಲಿ ಬಂದಿದೆ.. ಕನಕಳೆ ಎಷ್ಟೋ ಬಾರಿ ನೋಡಿದ್ದಾಳೆ.. ಆದರೆ ಅವನಾಗಿ ಒಂದು ಬಾರಿಯು ಬಂದು ಯಾರಲ್ಲು ಹೇಳಿಕೊಂಡವನಲ್ಲ.. ‘ಅದೇನು ಮಹಾ ಸಾಧನೆ ಬಿಡೆ..’ ಎನ್ನುತ್ತ ಮಾತು ತೇಲಿಸಿ ಬಿಡುತ್ತಾನೆ. ಅದಕ್ಕೊ ಏನೊ ಅವನೆಂದರೆ ಅವಳಿಗೆ ಒಂದು ರೀತಿಯ ಅಕ್ಕರೆ.. ಅದೇನು ಪ್ರೀತಿಯೊ, ಅಲ್ಲವೊ ಅವಳಿಗು ಗೊತ್ತಿಲ್ಲ.. ಅವನೆಂದರೆ ಇಷ್ಟವೆಂದು ಮಾತ್ರ ಅವಳಿಗು ಗೊತ್ತು..

ಗುಡಿಸಿ ಮುಗಿದ ಮೇಲೆ ಮಂಚದ ಬದಿಯ ಕುರ್ಚಿಯಲ್ಲಿ ಕುಳಿತು ಆವತ್ತಿನ ಪೇಪರು ಕೈಗೆತ್ತಿಕೊಂಡಳು ಕನಕ. ಜೂನ್ ೨೧ ರ ವಿಶ್ವ ಯೋಗ ದಿನದ ಸಿದ್ದತೆಯ ವಿವರಗಳೆ ತುಂಬಿದ್ದ ಪುಟ ಕಣ್ಣಿಗೆ ಬಿತ್ತು. ಕುತೂಹಲದಿಂದ ಹುಡುಕತೊಡಗಿದಳು – ನಾಣಿ ಮಾಮನ ಪೋಟೊ ಅಥವ ಸುದ್ಧಿ ಏನಾದರು ಬಂದಿರಬಹುದೆ ಎಂದು.. ಹುಡುಕುವಾಗಲೆ ಆ ವರ್ಷದ ಯೋಗಪಟು ಪ್ರಶಸ್ತಿಯ ವಿವರವೂ ಪ್ರಕಟವಾಗಿದ್ದು ಕಣ್ಣಿಗೆ ಬಿದ್ದು , ಅದರತ್ತ ಗಮನ ಹೋಯ್ತು.. ಓದುತ್ತಿದ್ದಂತೆ ಅವಳ ಮುಖ ರವಿಯನ್ನು ಕಂಡ ನೈದಿಲೆಯಂತೆ ಅರಳಿ ಪ್ರಪುಲ್ಲವಾಗಿ ಹೋಯ್ತು..!

‘ಅಂಬತ್ತೆ.. ಇಲ್ಲಿ ನೋಡಿ ಏನು ಸುದ್ಧಿ ಬಂದಿದೆ..?’

‘ಏನು ಬಂದಿದೆಯೆ?’ ಒಳಗಿಂದಲೆ ಬಂತು ಕಂಚಿನ ಕಂಠದ ದನಿ..

‘ನಾಣು ಮಾಮನಿಗೆ ಈ ವರ್ಷದ ಯೋಗಪಟು ಪ್ರಶಸ್ತಿ ಕೊಡ್ತಿದಾರಂತೆ..! ಜೊತೆಗೆ ನ್ಯಾಶನಲ್ ಯೋಗಾ ಸೆಂಟರ್ ಸ್ಟ್ಯಾಫ್ ಆಗಿ ಸೆಲೆಕ್ಟ್ ಆಗಿದಾನೆ ನಾಣು ಮಾಮ..!’
ತಡೆ ಹಿಡಿಯಲಾಗದ ಸಂತಸದ ದನಿಯಲ್ಲಿ ನುಡಿದಳು..

‘ಹೌದೇನೆ..? ಎಷ್ಟು ದುಡ್ಡು ಕೊಡ್ತಾರಂತೆ ಪ್ರಶಸ್ತಿ ಜೊತೆ? ಇಲ್ಲ ಬರಿ ಹಾರ, ತುರಾಯಿ, ಪ್ರಶಸ್ತಿ ಪತ್ರ ಕೊಟ್ಟು ಕಳಿಸ್ತಾರ ಏನು ಕಥೆ?’ ಎಂದು ಕಟಕಿಯಾಡುತ್ತಿದ್ದಂತೆ ‘ಅಮ್ಮಾ’ ಎನ್ನುವ ಜೋರು ದನಿಯೊಡನೆ ಒಳಗೆ ಬಂದ ನಾಣಿ.

‘ಕಂಗ್ರಾಟ್ಸ್ ನಾಣು ಮಾಮ.. ಪೇಪರ್ ನೋಡಿದೆ.. ಯೋಗ ಟೀಚರ್ ಕೆಲಸಾನು ಕೊಟ್ಬಿಟ್ಟಿದಾರೆ..!’ ಎಂದಳು ಉದ್ವೇಗದ ದನಿಯಲ್ಲಿ..

‘ಹೂಂ ಕಣೆ .. ಕೆಲಸಾನು ಕೊಡ್ತಾರಂತೆ.. ಆದರೆ ನನಗೇ ತೊಗೋಬೇಕೊ ಬೇಡವೊ ಅಂಥ ಇನ್ನೂ ಅನುಮಾನ..’ ಎಂದ ನಾಣಿಯ ಮಾತಿಗೆ ಅವಾಕ್ಕಾದಂತೆ ಅಲ್ಲೆ ಬೆಚ್ಚಿ ಬಿದ್ದಳು ಕನಕ..

‘ಅಲ್ಲಾ ಮಾಮ ಇದೊಂದು ತರ ಗೌರ್ಮೆಂಟು ಕೆಲಸ ಇದ್ದಂಗಲ್ವ? ಅನುಮಾನ ಯಾಕೆ? ಸುಮ್ನೆ ಬಾಯ್ಮುಚ್ಕೊಂಡು ತೊಗೊಳೋದಲ್ವ..? ‘ ಎಂದಳು..

‘ಅಯ್ಯೊ ಅಂಬಮ್ಮಂದೆ ಯೋಚ್ನೆ ಕಣೆ.. ಕೆಲಸಕ್ಕೆ ಅಂಥ ಬೇರೆ ಊರಿಗೆ ಹೋದ್ರೆ ಅವಳು ಜೊತೆ ಬರಲ್ಲ ಅಂತಾಳೆ.. ನಾನು ಇದ್ರೂ ಇಲ್ಲೆ, ಸತ್ರು ಇಲ್ಲೆ ಅಂತಾಳಲ್ಲ? ‘ ಎಂದ ಖೇದ, ವಿಷಾದದ ದನಿಯಲ್ಲಿ..

‘ ಯಾವ ಊರಿಗೆ ಹಾಕ್ತಾರಂತೊ?’

‘ಅಯ್ಯೋ ಐದು ವರ್ಷ ವಿದೇಶಕ್ಕೆ ಹೋಗಿ ಕ್ಲಾಸ್ ಮಾಡಬೇಕಂತೆ ಕಣೆ – ಅಮೇರಿಕಾದಲ್ಲಿ.. ಅದೆಲ್ಲ ಆಗಿ ಹೋಗದ ಮಾತು ಬಿಡು.. ಅವಳನ್ನಂತು ಒಂಟಿ ಬಿಟ್ಟು ನಾನೆಲ್ಲು ಹೋಗಲ್ಲ..’ ಎಂದ ನಾಣಿ ನಿರ್ಧಾರದ ದನಿಯಲ್ಲಿ..

‘ನಾಣು ಮಾಮ ಸಿಕ್ಕಿರೊ ಛಾನ್ಸು ಬಿಡಬೇಡ ಕಣೋ.. ಓದಿದೋರಿಗೆ ಎಲ್ಲರಿಗು ಫಾರೀನ್ ಯೋಗ ಇರಲ್ಲ .. ನಿನಗೆ ತಾನೇ ತಾನಾಗಿ ಬರ್ತಾ ಇದೆ ಯೋಗ.. ಅದನ್ನ ಒದ್ದು ಓಡಿಸಬೇಡ.. ನಂಗು ಫಾರಿನ್ ನೋಡೋಕೆ ಆಸೆ ಇದೆ.. ನೀನು ಅಲ್ಲಿದ್ರೆ ನಾನು ಬರ್ಬೋದು..ಒಂದು ಸಾರಿ..’ ಎಂದಳು ಕನಕ ಆಸೆಯ ದನಿಯಲ್ಲಿ..

ಆ ಹೊತ್ತಿಗೆ ಸರಿಯಾಗಿ ಅಡಿಗೆ ಮನೆಯಿಂದ ಸೌಟು ಕೈಲಿ ಹಿಡಿದುಕೊಂಡೆ ಹೊರಬಂದ ಅಂಬತ್ತೆ, ‘ ಪೆದ್ದು ಮುಂಡೆದೆ, ಪೆದ್ದು ಮುಂಡೆದೆ, ಈ ಹಾಳು ಮುದುಕಿಗೋಸ್ಕರ ಸಿಗೊ ಕೆಲ್ಸಾ ಬೇಡಾಂತಿಯೇನೊ..? ನೋಡು ನೀನು ಫಾರಿನ್ನಿಗೆ ಹೋಗೋದಾದ್ರೆ, ನಾನೂ ಬರೋಕೆ ರೆಡಿ ಕಣೊ.. ಆದರೆ ಒಬ್ಳೆ ಬರಲ್ಲ.. ನಿಮ್ಮ ಮಾವಂಗೆ ಫಾರಿನ್ ಹೋಗ್ತಿಯ ಅಂತ ಗೊತ್ತಾದ್ರೆ ಕೈ ಕಾಲು ಹಿಡಿದು ಮಗಳನ್ನ ಮದುವೆ ಮಾಡಿಕೊಡ್ತಾನೆ.. ಕನಕನ ಜೊತೆ ನಾನು ಬರ್ತಿನಿ.. ಬಾ ಒಂದು ಕೈಯಿ ನೋಡೆ ಬಿಡೋಣ..’ ಎಂದಾಗ ಅವಾಕ್ಕಾಗುವ ಸರದಿ ನಾಣಿಯದು!

‘ ನಿಜ್ಜಾ ಹೇಳ್ತಿದಿಯಾ? ಸುಮ್ನೆ ತಮಾಷೆ ಮಾಡ್ತಿದೀಯಾ?’ ಎಂದ ಅನುಮಾನದ ದನಿಯಲ್ಲಿ..

‘ನಿನ್ನಾಣೆಗು ನಿಜ ಕಣೊ.. ನಿನಗೊಂದು ನೆಲೆ ಆಗುತ್ತೆ ಅಂದರೆ ನನಗೆ ಎಲ್ಲಾದರೆ ಏನೊ? ಬಿದ್ದು ಹೋಗೊ ಜೀವ.. ನಾನ್ಯಾಕೆ ಇನ್ನು ಮೀನಾ ಮೇಷ ಎಣಿಸ್ಲಿ?’ ಅಂದವರೆ ಕನಕನತ್ತ ತಿರುಗಿ,

‘ಏನೆ ಬಂಗಾರಿ.. ಈಗ್ಲಾದರು ಮದ್ವೆ ಆಗ್ತಿಯೇನೆ? ನೋಡು ಫಾರಿನ್ ಗಂಡೆ ರೆಡಿ ಇದೆ..’ ಎಂದರು..

‘ಅಂಬತ್ತೆ ನೀವು ಹೂಂ ಅನ್ನಿ.. ನನ್ನ ಪೆಟ್ಟಿಗೆ ಎತ್ಕೊಂಡು ಇಲ್ಲಿಗೆ ಬಂದು ಬಿಡ್ತೀನಿ.. ನಮ್ಮಪ್ಪ ಒಪ್ಪಲಿ ಬಿಡಲಿ ನಾನಂತು ರೆಡಿ.. ನೀವೂ ಜೊತೆಗಿರ್ತಿರ ಅಂದ್ರೆ ನನಗಂತು ನೂರಾನೆ ಬಲ..’ ಎಂದಳು ..

‘ಒಪ್ತಾನೆ.. ಒಪ್ದೆ ಏನು ಮಾಡ್ತಾನೆ.. ನಾನೇ ಮಾತಾಡ್ತೀನಿ..ಅವನೇನಾದ್ರು ಆಗಲ್ಲ ಅಂದ ಅನ್ಕೊ.. ನೀನು ಪೆಟ್ಟಿಗೆ ತರೋಕು ಹೋಗೋದು ಬೇಡಾ.. ನನ್ನದೆ ಟ್ರಂಕ್ ತುಂಬ ಬಟ್ಟೆಗಳಿವೆ ಬೇಕಾದಷ್ಟು ‘ ಎಂದು ನಕ್ಕರು ಅಂಬಮ್ಮ..

ಆ ನಗುವೆ ಓಂಕಾರ ನಾದದ ಪ್ರತಿಧ್ವನಿಯೆನಿಸಿ ಆರಾಧನಾ ಭಾವದಿಂದ ಕನಕಳತ್ತ ನೋಡಿದ.. ಅವಳು ಅವನನ್ನೆ ನೋಡುತ್ತಿದ್ದಳು ಸಂತೃಪ್ತಿಯ ಭಾವದಿಂದ.

ಅದೇ ಹೊತ್ತಿಗೆ ಪೂಜಾರತಿಯ ಹೊತ್ತಾಯಿತೇನೊ – ದೇಗುಲದ ಗಂಟೆಯ ಸದ್ದು ಮಂಗಳನಾದದಂತೆ ತೇಲಿ ಬರತೊಡಗಿತು – ಅವರಿಬ್ಬರ ಮಧುರ ಮಿಲನಕ್ಕೆ ಮುಹೂರ್ತವಿಡುವಂತೆ!

(ಮುಕ್ತಾಯ)

  • ನಾಗೇಶ ಮೈಸೂರು
    ೧೭.೦೬.೨೦೨೩

ಸಣ್ಣ ಕಥೆ: ಎಲ್ಲರನು ಸಲಹುವನು…


(Picture source: internet / social media)

(ತಲ್ಲಣಿಸದಿರು ಕಂಡ್ಯಾ ತಾಳು ಮನವೆ..)

ಗಳಿಗೆಗೊಮ್ಮೆ ಗಡಿಯಾರದತ್ತ ಆತಂಕದಿಂದ ನೋಡುತ್ತಿದ್ದ ಅಮೋಘ..

ಅವಳು ಹೋಗಿ ಕನಿಷ್ಠ ಎರಡು ಗಂಟೆಗಳಾದರು ಆಗಿರಬೇಕು.. ಹಾಳಾದವಳು ಮೊಬೈಲು ಬೇರೆ ಇಲ್ಲೆ ಬಿಟ್ಟು ಹೋಗಿದ್ದಾಳೆ. ಇಷ್ಟು ಹೊತ್ತಿನ ತನಕ ಹೇಳದೆ ಕೇಳದೆ ಎಲ್ಲಿಗು ಹೋಗುವವಳಲ್ಲ.. ಇಂದು ಹಾಳಾದ ವಿಷಗಳಿಗೆ. ಯಾಕಾದರು ಕೂಗಾಡಿದೆನೊ..?

‘ಇಂಥಾ ಮಾತೆಲ್ಲ ಕೇಳಿದ ಮೇಲೆ ನಾನು ಬದುಕಿರಬೇಕಾ? ಕೆರೆಗೊ, ಬಾವಿಗೊ ಬಿದ್ದು ನಾನು ಸತ್ತು ಹೋಗ್ತಿನಿ.. ಆಗ ಹಾಲು ಕುಡ್ಕೊಂಡು ನೆಮ್ಮದಿಯಾಗಿರಿ‘ ಅಂತ ಗುಡಾಗಾಡಿ ಬೇರೆ ಹೋಗಿದ್ದಾಳೆ.. ‘ಹೋಗೆಲ್ಲಾದರು ಹಾಗೆ ಮಾಡಿಕೊಂಡುಬಿಟ್ರೆ ಏನಪ್ಪಾ ಕಥೆ?’ ಅನಿಸಿ ಭಯವೇಕೊ ಜಾಸ್ತಿಯಾಯ್ತು..

‘ಛೇ.. ಏನೊ ಕೋಪದಲ್ಲಿ ಹಾಗಂದು ಹೋಗಿದ್ದಾಳೆ ಅಷ್ಟೆ.. ಸ್ವಲ್ಪ ಶಾಂತವಾದ ಮೇಲೆ ಮತ್ತೆ ಬರ್ತಾಳೆ.. ಅಲ್ಲಿಯತನಕ ಸಹನೆಯಿಂದಿರಪ್ಪ ಮನಸೆ..’ ಎಂದು ಸಮಾಧಾನಿಸಿಕೊಂಡರು ಮನದೊಳಗೇನೊ ದುಗುಡ, ಕಳವಳ, ಭೀತಿ.. ಒಂದು ವೇಳೆ ಹಾಗೇನಾದರು ಆದರೆ ಅವಳ ಅಪ್ಪ ಅಮ್ಮನಿಗೆ ಏನುತ್ತರ ಕೊಡೋದು..? ಸುತ್ತಮುತ್ತಲವರ ಕಣ್ಣಲ್ಲಿ ವಿಲನ್ ಆಗೋದು ಮಾತ್ರವಲ್ಲದೆ ಪೋಲೀಸು, ಕೋರ್ಟು, ಕಟ್ಲೆ ಅಂಥ ಅಲೆದಾಡೊ ಸ್ಥಿತಿಯಾದ್ರೆ ಹೇಗಪ್ಪ? – ಹೀಗೆ ಏನೇನೊ ಸಲ್ಲದ ಆಲೋಚನೆಗಳೆಲ್ಲ ಧಾಳಿಯಿಡುತ್ತ ಮೊದಲೆ ಕಂಗೆಟ್ಟಿದ್ದ ಮನವನ್ನು ಮತ್ತಷ್ಟು ದುರ್ಬಲವಾಗಿಸತೊಡಗಿದವು..ಆ ಚಡಿಪಡಿಕೆಯಲ್ಲೆ ಕೂತಲ್ಲಿ, ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ ಬಾಲ ಸುಟ್ಟ ಬೆಕ್ಕಿನ ಹಾಗೆ ಎಗರಾಡತೊಡಗಿದ್ದೆ..

ಅಷ್ಟು ಹೊತ್ತು ಸುಮ್ಮನೆ ಎಲ್ಲವನ್ನು ಭೀತಿಯ ಕಂಗಳಿಂದಲೆ ನೋಡುತ್ತಿದ್ದ ಮಗ, ‘ಯಾಕಪ್ಪ ಒಂತರಾ ಆಡ್ತಾ ಇದ್ದಿ? ಅಮ್ಮ ಎಲ್ಲಿಗೆ ಹೋದ್ಲು? ಯಾವಾಗ ಬರ್ತಾಳೆ?’ ಎಂದು ಗಾಯದ ಮೇಲೆ ಉಪ್ಪು ಸುರಿದಂತೆ ಕೇಳಿದಾಗ, ಅವನನ್ನು ಅಲ್ಲೆ ಹಾಗೆ ಹಿಡಿದು ಚಚ್ಚಿ ಬಿಡಲೆ ಎನುವಷ್ಟು ಕೋಪ ಬಂತು.. ಸದ್ಯಕ್ಕೆ ಅವಳ ರಂಪಾಟವೆ ಸಾಕು, ಇವನದನ್ನು ಸೇರಿಸಿಕೊಂಡು ಸಂಕೀರ್ಣವಾಗಿಸುವುದು ಬೇಡವೆನಿಸಿ, ಬಲವಂತವಾಗಿ ತಡೆದಿಟ್ಟುಕೊಂಡೆ – ಉಕ್ಕಿ ಬರುತ್ತಿದ್ದ ಕೋಪದ ಲಾವಾರಸವನ್ನು..

ವಾಸ್ತವದಲ್ಲಿ ಅವಳಿಗದೊಂದು ತರ ಕಾಯಿಲೆ… ಇದ್ದಕ್ಕಿದ್ದಂತೆ ಏನಾದರು ಮಾಡಿಬಿಡುತ್ತಾಳೆ.. ಹಿಂದೆ ಮುಂದೆ ಯೋಚಿಸುವುದೇ ಇಲ್ಲ.. ಸ್ವಂತ ಬುದ್ಧಿಯೂ ಇಲ್ಲ, ಹೇಳಿದ ಮಾತನ್ನೂ ಕೇಳುವುದಿಲ್ಲ.. ಎಲ್ಲಾ ವಿಷಯದಲ್ಲು ಏನಾದರು ಎಡವಟ್ಟು ಮಾಡುತ್ತಲೇ ಇರುತ್ತಾಳೆ.. ಬೇರೆಯವರು ಇಪ್ಪತ್ತು ರೂಪಾಯಿ ಕೊಟ್ಟು ತಂದ ಹಣ್ಣು ತರಕಾರಿಯನ್ನ, ಅದೇ ಆಸಾಮಿ ಐವತ್ತು ರೂಪಾಯಿ ಅಂಥ ಟೋಪಿ ಹಾಕಿದರು ಅವನು ಹೇಳಿದ್ದನ್ನೆ ನಂಬಿ ಕೊಟ್ಟು ಬರುತ್ತಾಳೆ.. ಅದರಲ್ಲು ಅವನು ಸ್ವಲ್ಪ ಹೊಗಳಿ ಅಟ್ಟಕ್ಕೇರಿಸಿಬಿಟ್ಟರಂತು ನೂರು ಕೇಳಿದರು ಕೊಟ್ಟಳೆ! ಮೊನ್ನೆ ನಾನು ಮಗನಿಗೆಂದು ತಂದಿದ್ದ ಟೀಶರ್ಟಿನ ಬೇರೆ ಬಣ್ಣದ ಇನ್ನೊಂದು ಪೀಸ್ ತರುತ್ತೇನೆಂದು ಹೋಗಿ, ನಾನು ತಂದಿದ್ದ ಅಂಗಡಿಯಲ್ಲೆ ನಾನು ಕೊಟ್ಟಿದ್ದ ಎರಡರಷ್ಟು ಬೆಲೆ ಕೊಟ್ಟು ತಂದಿದ್ದಾಳೆ – ‘ನೀವು ತಂದಾಗ ಪ್ರಮೋಶನ್ ಇತ್ತಂತೆ..’ ಎಂದು ರಾಗ ಎಳೆಯುತ್ತ..! ಆಮೇಲೆ ಅದನ್ನೆತ್ತಿ ವಿವರಿಸಿ ಹೇಳಹೊರಟರೆ ‘ಇಗೋ’ ಹರ್ಟಾದಂತೆನಿಸಿ ಜೋರಾಗಿ ಕೂಗಾಡಿ ರಂಪ ಮಾಡಿಬಿಡುತ್ತಾಳೆ.. ತರ್ಕವೆ ಇಲ್ಲದ ಹಾಗೆ ಮಾತಾಡಿ, ಅವಳದು ತಪ್ಪಿದೆಯೆಂದು ಗೊತ್ತಾದರು, ಬೇರೆ ಯಾವುದೊ ಹಳೆ ವಿಷಯ ಕೆದಕಿ, ಎತ್ತಾಡಿ ಕೂಗಾಟದಲ್ಲೆ ಕಣ್ಣೀರು ಬೆರೆಸಿ ದೊಡ್ಡ ಸೀನ್ ಮಾಡಿಬಿಡುತ್ತಾಳೆ..

ಇವತ್ತು ಆಗಿದ್ದಾದರು ಅಷ್ಟೆ.. ಅಂತದ್ದೆ ಒಂದು ಸನ್ನಿವೇಶ.. ಹದಿನೈದು ದಿನದ ಹಿಂದೆ ಮೊಬೈಲು ಡೇಟಾ ರೋಮಿಂಗ್ ಆನ್ ಮಾಡಿಕೊಂಡು ಬೇರೆ ಊರಿನಲ್ಲಿದ್ದ ಯಾರೊ ಹಳೆ ಗೆಳತಿಯ ಜೊತೆ ಗಂಟೆಗಟ್ಟಲೆ ಮಾತನಾಡಿದ್ದಾಳೆ.. ಇವತ್ತು ಬಿಲ್ ಬಂದಾಗ ನೋಡಿದರೆ ನನಗೆ ‘ಶಾಕ್‘! ಇಷ್ಟೊಂದು ಸಾವಿರ ರೂಪಾಯಿಗಳಾಗುವಷ್ಟು ನಾನ್ಯಾರ ಜೊತೆ ಮಾತನಾಡಿದ್ದೆ? ಅಂಥ.. ಸಾಲದ್ದಕ್ಕೆ ಈಗೆಲ್ಲ ವಾಟ್ಸಪ್ , ಮೊಬೈಲಲ್ಲೆ ಮಾತುಕಥೆಯಾಡುವುದರಿಂದ ಇಂಥಹ ದುಬಾರಿ ಕಾಲ್ ಮಾಡುವ ಅವಶ್ಯಕತೆಯೆ ಬರುವುದಿಲ್ಲ.. ಸ್ವಲ್ಪ ಆಳಕ್ಕಿಳಿದು ನೋಡಿದಾಗ ಇವಳ ಕಾಲ್ ಕಥೆಯ ಸತ್ಯ ಹೊರಬಿತ್ತು.. ಇಷ್ಟೂ ಮುಂದಾಲೋಚನೆ, ತಿಳುವಳಿಕೆ ಬೇಡವೆ? ಎನಿಸಿ ನಾನು ರೊಚ್ಚಿಗೆದ್ದು ಸ್ವಲ್ಪ ಖಾರವಾಗಿಯೆ ಮೂದಲಿಸಿದ್ದೆ.. ಅದರ ಪರಿಣಾಮವೆ ಪರ್ಸೆತ್ತಿಕೊಂಡು ದುಡುದುಡನೆ ಮುಖ ಊದಿಸಿಕೊಂಡು ಹೋದವಳು, ಇನ್ನು ಬಂದಿರಲಿಲ್ಲ..

ಮತ್ತೆ ಮತ್ತೆ ಗಡಿಯಾರ ನೋಡಿಕೊಂಡು ಬಾಗಿಲತ್ತ ನೋಡುತ್ತಿದ್ದೆ.. ಹೋಗಿ ಮೂರು ಗಂಟೆಯಾದರು ಸದ್ದಿಲ್ಲ, ಸುಳಿವಿಲ್ಲ.. ಮನಸಿನಲ್ಲೆ ಎಲ್ಲಾ ದೇವರುಗಳಿಗು ಹರಕೆ ಹೊರತೊಡಗಿದೆ ‘ ಆದದ್ದಾಯ್ತು, ಬೇಗ ಬರಿಸಪ್ಪ.. ಇವಳನ್ನ..’ ಎಂದು. ಸಾಲದ್ದಕ್ಕೆ ಮುಸ್ಸಂಜೆಯಾಗುತ್ತ ಕತ್ತಲು ಬೇರೆ ಕವಿಯುತ್ತಿತ್ತು.. ಮಗನನ್ನ ಸುಮ್ಮಸುಮ್ಮನೆ ಗದರಿ ಮಂಚದ ಮೇಲೆ ಕೂರಿಸಿ ‘ಹೋಮ್ವರ್ಕ್’ ಮಾಡಲು ಹೇಳಿ, ನಾನು ಎದುರಿಗಿದ್ದ ಕುರ್ಚಿಯ ಮೇಲೆ ಕೂತು ಕಣ್ಮುಚ್ಚಿದೆ.. ಮುಚ್ಚಿದ ಕಣ್ಮುಂದೆಯು ಏನೇನೊ ಕಲ್ಪನೆಗಳು, ಬೇಡದ ಯೋಚನೆಗಳು.. ತುಂಬಾ ದಣಿದಿದ್ದ ಕಾರಣಕ್ಕೊ ಏನೊ, ಸ್ವಲ್ಪ ಮಂಪರು ಬೇರೆ.. ಎಲ್ಲೊ ತೇಲಿ ಹೋದ ಹಾಗೆ ಯಾವುದೊ ಕಲ್ಪನಾಲೋಕದಲ್ಲಿ ಕಳೆದು ಹೋದ ಹಾಗೆ..

ಹಾಗೆಯೆ ಕುರ್ಚಿಯಲ್ಲೆ ತೂಕಡಿಸಿಬಿಟ್ಟೆನೊಂದು ಕಾಣುತ್ತದೆ..

ಇದ್ದಕ್ಕಿದ್ದಂತೆ ದಿಢೀರನೆ ಎಚ್ಚರವಾಯ್ತು…. ಅದುರಿಬಿದ್ದು ಗಡಿಯಾರದತ್ತ ನೋಡಿದೆ.. ರಾತ್ರಿ ಎಂಟು ಗಂಟೆ.. ..!

ಎದುರಿನಲ್ಲಿ ಮಂಚದ ಮೇಲೆ ಮಗ ಐಸ್ ಕ್ರೀಮ್ ತಿನ್ನುತ್ತಿದ್ದ.. !

ಆಗಲೆ, ಅಡಿಗೆ ಮನೆ ಕಡೆಯಿಂದ ಪಾತ್ರಗಳ ಸದ್ದು ಕೇಳಿಸಿತು..

ತಟ್ಟನೆ ಏನೊ ಜ್ಞಾನೋದಯವಾದವನಂತೆ, ‘ ಅಮ್ಮಾ ಬಂದ್ಲಾ?’ ಎಂದೆ..

ಮಗ ಮಾತನಾಡದೆ ಐಸ್ಕ್ರಿಂ ಕೈಯಲ್ಲೆ ಕಿಚಿನ್ನಿನ್ನತ್ತ ಬೆರಳು ತೋರಿಸಿದ. ದೊಡ್ಡದೊಂದು ಬೆಟ್ಟ ತಲೆಯಿಂದಿಳಿದಂತೆ ನಿರಾಳವಾದ ನಿಟ್ಟುಸಿರೊಂದು ಹೊರಬಿತ್ತು..

ಅದೇ ಹೊತ್ತಿಗೆ ಸರಿಯಾಗಿ ರೇಡಿಯೋದಲ್ಲಿ ಹಾಡು ಮೂಡಿ ಬರುತ್ತಾ ಇತ್ತು…

‘ತಲ್ಲಣಿಸದಿರು ಕಂಡ್ಯಾ ತಾಳು ಮನವೆ.. ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ..’

  • ನಾಗೇಶ ಮೈಸೂರು
    ೧೦.೦೬.೨೦೨೩

ಸಣ್ಣ ಕಥೆ : ಮತ್ತೆ ಮೂಡುವುದೆ ಹಳೆ ಬೆಳಕು?


(Picture source: internet / social media)

ಎಷ್ಟು ದಿನ ಅಂಥ ತಾಳಿಕೊಳ್ಳೋದು?

ಎಷ್ಟು ಅಂತ ಸಹಿಸಿಕೊಳ್ಳೋದು?

ಇದಕ್ಕೇನು ಕೊನೆಯೆ ಇಲ್ಲವೆ ಭಗವಂತ?

ಬಂಗಾರದಂಥ ಗುಣದ ಗಂಡ, ಹಾಲು ಜೇನು ಸೇರಿದಂತೆನಿಸುವ ಸಂಸಾರ, ‘ಸ್ವರ್ಗಕ್ಕೆ ಕಿಚ್ಚು ಹಚ್ಚು’ ಎನ್ನುವಂಥಾ ಸುಖೀ ಜೀವನ – ಇದೆಲ್ಲದರ ನಡುವೆ, ಹೀಗೇಕಾಯ್ತು ದೇವ?

ಸುಂದರ ಸ್ವಪ್ನದಂತಿದ್ದ ಸಂಸಾರವನ್ನು ಕಂಡು ಆ ದೇವರಿಗು ಸಹನೆಯಾಗಲಿಲ್ಲವೊ ಏನೊ? ಯಾರ ಕಣ್ಣು ಬಿತ್ತೊ? ಯಾರ ಈರ್ಷ್ಯೆಯುರಿಯ ಕಾವು ಕೊಡಲಿಯಾಗಿ ಬುಡವನ್ನೆ ಕೊಚ್ಚಿ ಹಾಕಿತೊ?

ಮೊದಮೊದಲು ಎಲ್ಲವು ಚೆನ್ನಾಗಿಯೆ ಇತ್ತು – ಎಲ್ಲಾ ಸುಖಿ ಸಂಸಾರಗಳಂತೆ.. ಅವರು ಕೆಲಸಕ್ಕೆ ಹೋಗುವ ಹೊತ್ತಿಗೆ ಸರಿಯಾಗಿ ಎಲ್ಲಾ ರೆಡಿ ಮಾಡಿಟ್ಟುಬಿಟ್ಟರೆ, ಆಮೇಲೆಲ್ಲ ನನ್ನದೆ ರಾಜ್ಯ..

ಕಸೂತಿ ಹಾಕಿಕೊಂಡೊ, ಟೀವಿ ನೋಡಿಕೊಂಡೊ, ಅಡಿಗೆ ಮುಗಿಸಿ ಬಟ್ಟೆ ಬರೆ ಒಗೆದು ಒಣಗಿಸಲು ಹಾಕಿ, ಮಧ್ಯಾಹ್ನದ ಊಟ ಮುಗಿಸಿಕೊಂಡು – ನೆರೆಹೊರೆಯ ಗೆಳತಿಯರ ಜೊತೆ ಒಂದಷ್ಟು ಹರಟಿ ಮತ್ತೆ ಮನೆಗೆ ಬಂದರೆ , ‘ಅವರಿಗೆ ಕಾಫಿ,ಟಿ ಜತೆ ಏನು ಮಾಡಲಿ?’ ಎಂಬ ಧಾವಂತ; ರಾತ್ರೆಗೇನು ವಿಶೇಷ ಮಾಡಲಿ? ಎನ್ನುವ ಯೋಚನೆ..

ಈ ನಡುವೆ ಇದ್ದಕ್ಕಿದ್ದಂತೆ ಅವರದೊಂದು ಪೋನು – ‘ಚಿನ್ನಾ.. ರಾತ್ರಿ ಅಡಿಗೆ ತಲೆ ಕೆಡಿಸಿಕೊಬೇಡ.. ಫ್ರೆಂಡ್ ಮನೇಲಿ ಬರ್ತಡೇ ಪಾರ್ಟಿಗೆ ಕರೆದಿದ್ದಾರೆ‘ ಅಂತಲೊ, ‘ಅಯ್ಯೊ ದಿನಾ ಇದ್ದದ್ದೆ ಡಾರ್ಲಿಂಗ್.. ಇವತ್ತು ಸಾಯಂಕಾಲ ಬೇಗ ಬರ್ತೀನಿ.. ಮಾಲಲ್ಲಿ ಹಾಗೆ ಸಿನಿಮಾ ನೋಡ್ಕೊಂಡು ಅಲ್ಲೆ ಊಟ ಮಾಡ್ಕೊಂಡು ಬರೋಣ..’,; ‘ ನೆನ್ನೆಯದೆ ಇದೆಯಲ್ಲ ಅದೇ ಸಾಕು ಬಿಡು.. ಬರ್ತಾ ನೆಂಚಿಕೊಳ್ಳೋಕೆ ಏನಾದ್ರು ಕುರುಕಲು ತರ್ತೀನಿ‘ ಅಂತಲೊ ಸರ್ಫ್ರೈಸ್ ಕೊಡೊ ಗಂಡನ ಜತೆ ಜೀವನ ಎಷ್ಟು ಮಧುರ ಅನಿಸಿಬಿಟ್ಟಿತ್ತು.. ದಂಡೆ ಹೂವು ತಂದು ಮುಡಿಸಿ, ‘ಎಷ್ಟು ಚಂದ ಕಾಣ್ತಿಯೆ, ಬಂಗಾರ‘ ಅಂದಾಗ ಸ್ವರ್ಗಲೋಕ ಇನ್ನೆಲ್ಲು ಇಲ್ಲ , ಇಲ್ಲೆ ನಮ್ಮ ಮನೇಲೆ ಇದೆ ಅನಿಸಿಬಿಟ್ಟಿತ್ತು..

ಆ ಹೊಂಗನಸಿನ ನೆರಳಲ್ಲೆ ಮೂರು ತಿಂಗಳು ತುಂಬಿದ ಸುದ್ಧಿ ಪಿಸುಗುಟ್ಟಿದಾಗ ಅವರ ಸಂತೋಷಕ್ಕೆ ಪಾರವೆ ಇರಲಿಲ್ಲ.. – ‘ಲೆಟಸ್ ಗೆಟ್ ರೆಡಿ ಟು ವೆಲ್ಕಂ ದ ಗೆಸ್ಟ್..’ ಎಂದು ಬಿಗಿದಪ್ಪಿಕೊಂಡಾಗ, ಎಂತದ್ದೊ ಧನ್ಯತೆಯ ಭಾವ.. ಆ ತುರುಸಿನಲ್ಲೆ ಗಂಡು ಕೂಸೊಂದು ಕಣ್ಣು ಬಿಟ್ಟಾಗ ಜಗತ್ತನ್ನೆ ಗೆದ್ದ ಹಾಗಿ ಹೆಮ್ಮೆಯಿಂದ ಬೀಗಿದ್ದರಲ್ಲ? ಆ ನಾಮಕರಣದ ಫಂಕ್ಷನ್ ಅದೆಷ್ಟು ಗ್ರಾಂಡ್ ಆಗಿ ಆಗಿತ್ತು? ಚಿಕ್ಕತ್ತೆಯೊಬ್ಬಳು, ‘ಏನೆ ನಿನ್ನ ಮದುವೆಗಿಂತ ನಿನ್ನ ಮಗನ ನಾಮಕರಣವೆ ಜಾಸ್ತಿ ಗ್ರಾಂಡಾಗಿದೆಯಲ್ಲೆ? ಪುಣ್ಯ ಮಾಡಿದ್ದೆ ಬಿಡು – ದೇವರಂಥಾ ಗಂಡ, ಜೇನುಗೂಡಂಥಾ ಕುಟುಂಬ.. ಚೆನ್ನಾಗಿರಿ‘ ಅಂದಾಗ ಹೆಮ್ಮೆಯಿಂದ ಬಿರಿದೆದೆ ಹಿಗ್ಗಿ, ಹರ್ಷದ ಕಂಬನಿಯಿಂದ ಒದ್ದೆಯಾಗಿ ಕಣ್ತುಂಬಿ ಬಂದಿತ್ತು..

ಆದರೆ ಆಗ ಗೊತ್ತಿರಲಿಲ್ಲ – ಬಹುಶಃ ಅದೇ ನಮ್ಮ ಮನೆಯಲ್ಲಾಗಬಹುದಾದ ದೊಡ್ಡ ಫಂಕ್ಷನ್ ಎಂದು..!

ಕೂಸೆನೊ ಹುಟ್ಟಿತ್ತು.. ಆದರೆ ಜೊತೆಗೆ ಬುದ್ಧಿ ಮಾಂದ್ಯತೆಯನ್ನು ತಂದಿತ್ತು..! ಮೊದಮೊದಲು ಗೊತ್ತಾಗದಿದ್ದರು, ನಿಧಾನವಾಗಿ ಗೊತ್ತಾಗುತ್ತಿದ್ದಂತೆ ಅರ್ಥವಾಗಿತ್ತು – ಈ ಕಂದ ಜೀವನವೆಲ್ಲ ಮತ್ತೊಬ್ಬರ ಆಸರೆ, ನೆರವಿನಡಿಯಲ್ಲೆ ಬದುಕಬೇಕು ಎಂದು.. ಮಲಗಿದಲ್ಲೆ ಮಲಗಿದ್ದು ಆ ಕಡೆ ಈ ಕಡೆ ಕಣ್ಣಾಡಿಸುತ್ತ , ಅಪರೂಪಕ್ಕೊಮ್ಮೆ ಕೈ ಕಾಲು ಬಡಿಯುವ ಈ ಕಂದ ಎಲ್ಲ ಮಕ್ಕಳಂತೆ ತೆವಳುವುದಿಲ್ಲ, ಮೊಗಚುವುದಿಲ್ಲ, ಏಳುವುದಿಲ್ಲ, ಕೂರುವುದಿಲ್ಲ, ನಿಲ್ಲುವುದಿಲ್ಲ, ನಡೆಯುವುದಿಲ್ಲ, ಓಡುವುದಿಲ್ಲ.. ಸುಮ್ಮನೆ ಬಿದ್ದಲ್ಲೆ ಬಿದ್ದುಕೊಂಡಿರುತ್ತದೆ.. ಎಲ್ಲವು ಅಲ್ಲೆ ಆಗುತ್ತದೆ.. ಉಣಿಸುವುದು, ತಿನಿಸುವುದು, ಹಿಂದೆ, ಮುಂದೆ – ಎಲ್ಲವೂ ಅಲ್ಲೆ.. ಪಿಳಿಪಿಳಿ ಕಣ್ಣಾಡಿಸುತ್ತ ನೋಡಿದಾಗ, ಅದೇನು ನಮ್ಮಿಬ್ಬರನ್ನಾದರು ಗುರುತು ಹಿಡಿಯುತ್ತಾನೊ, ಇಲ್ಲವೊ ಎಂದೂ ತಿಳಿಯಲಾಗದಷ್ಟು ಖಾಲಿ ನೋಟ..

ಈಗಾಗಲೆ ಆರು ವರ್ಷ ಕಳೆದಿದೆ.. ಹಾಗೆಯೆ ಹಾಸಿಗೆಯ ಕೂಸಾಗೆ ಬಿದ್ದಿದ್ದಾನೆ… ಅಂದಿನಿಂದ ನಾವಿಬ್ಬರು ಅವನನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ.. ಮಾಲು ಸಿನಿಮಾಗಳಿರಲಿ, ಮನೆಗಳವರ ಫಂಕ್ಷನ್ನುಗಳಿಗು ಒಯ್ಯಲು ಮುಜುಗರ.. ಮೊದಲೆಲ್ಲ ಟ್ರಿಪ್ಪು , ಟೂರು ಎಂದು ಹೋಗುವುದಿತ್ತು.. ಈಗ ನಮ್ಮ ಸ್ಥಿತಿ ಅರಿತಂತೆ ಕರೆಯುವುದನ್ನೆ ಬಿಟ್ಟು ಬಿಟ್ಟಿದ್ದಾರೆ.. ! ಹೋಗಿ ಬಂದ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದಾಗ ಮಾತ್ರ ಹೊಟ್ಟೆ ಕಿವುಚಿದಂತಾಗುತ್ತದೆ..

ಸಾಲದ್ದಕ್ಕೆ, ಬೆಸ್ಟ್ ವರ್ಕರ್ ಎನಿಸಿಕೊಂಡಿದ್ದ ಇವರು, ಈ ಯೋಚನೆಯಲ್ಲೆ ಕೊರಗಿ, ಕುಗ್ಗಿ ಅದರ ಪರಿಣಾಮ ಕೆಲಸದ ಮೇಲೂ ಆಗಿ, ಬರಬೇಕಿದ್ದ ಪ್ರಮೋಶನ್, ಇನ್ಕ್ರಿಮೆಂಟು ತಪ್ಪಿದ್ದಷ್ಟೆ ಅಲ್ಲದೆ, ಯಾವುದೊ ಪ್ರಾಮುಖ್ಯವಲ್ಲದ ಡಿಪಾರ್ಟ್ಮೆಂಟಿಗೆ ವರ್ಗಾಯಿಸಿಬಿಟ್ಟಿದ್ದಾರೆ – ಬೆಳವಣಿಗೆಯ ಸಾಧ್ಯತೆಯೆ ಇಲ್ಲದ ಕಡೆ…

ಇದರ ನಡುವೆಯೆ ಕಂಡ ಕಂಡ ದೇವರು, ದೇವಸ್ಥಾನ, ಎಲ್ಲಾ ತರದ ಡಾಕ್ಟರುಗಳು, ಮಾಟ, ಮಂತ್ರ, ತಂತ್ರ ಇತ್ಯಾದಿ ಎಂದುಕೊಂಡು ಕೇಳಿದ್ದೆಲ್ಲ-ಹೇಳಿದ್ದೆಲ್ಲ ಮಾಡುವಂತಾಗಿ ದಿಕ್ಕು ತಪ್ಪಿದ ನಾವೆಯಂತಾಗಿದೆ ಬದುಕು….

ಈ ಬದುಕಿನಲ್ಲಿ ಎಂದಾದರು ಮೂಡುವುದೆ ಹೊಸ ಬೆಳಕು?

ಮತ್ತೆ ಕಾಣುವುದೆ ಅಂದು ಬೆಳಗಿದ್ದ ಹಳೆ ಬೆಳಕು?

  • ನಾಗೇಶ ಮೈಸೂರು
    ೦೩.೦೬.೨೦೨೩

BUSINESS AS USUAL!


#project_stories

I just happened to meet him at airport transit lounge. We worked together in my previous company; as an internal customer, he was one of my key stakeholder in many engagements. Since, I met him after a long time, our conversation automatically shifted to those olden days – triggering a kind of casual exchange of ideas we then used to have and we always loved.. in the middle of our engaging talks, he suddenly asked:

“You had so many projects witnessing smooth transition – almost, always. How did it happened? what was the difference?” 

He was referring to the ERP and Digital transformation programs & projects with all its typical complexities like – countries, business units, region, culture, language, timezone, legal environment etc., posing different kind of challenges and opportunities at the same time. Trying to resist my immediate temptation to answer his question with something like – ‘we didn’t do different things but we did things differently’, I responded to him with another question: 

“What do you mean by difference?  We have more or less standardised approach for all projects, we do have typical goals of Cost, Time line, Scope, Quality, Service etc in all projects… Even if you look beyond project, we would have goals related to post project benefits or benefits management aspects.. Tools, methods, approaches may vary but we deal with same project processes and knowledge areas – don’t we? what kind of difference you are referring to? ” I paused for a moment and looked at him inquisitively.  

He closed his eyes with a thinking stance and then said…“ I agree projects do have a pretty well defined process landscape, but what baffles me is the outcome. If we are following such a standardised approach, why we don’t see the similar kind of results across all projects – especially the desirable results..? why there is no consistent outcome like you had in your projects..?”

“ what you mean by my projects?”

“ I mean when I see all my area projects that you were involved – all of them were ON or BEFORE TIME, ON or BELOW BUDGET, NO SCOPE CREEP,  minimum GO LIVE ISSUES characterising QUALITY DELIVERY and so on.. this was in-spite of typical as well as severe project issues that affect its outcome; what baffles me is – even in extraordinary situations where, external factors such as tripple disaster in Japan, unrelenting floods in Thailand hampered everything, your teams were still able to hit those goal with similar outcomes..; with no compromise on original intent. What made it possible – that too so consistently?” 

His voice did not hide his genuine surprise – especially having observed and witnessed them personally had made him genuinely appreciate and also believe – there should be some secret recipe behind all those outcomes.

I took a moment to think. It was not possible to answer his question without getting into detailed (and perhaps boring) discussion. I decided to just answer it conceptually so as to make it easy for him to grasp the broad idea.  While I was thinking, before I could answer he added : “ rather, tell me that one thing that you would have done consistently different , which helped you most, almost always”

“Ok.. Let me not dwell upon known things – every project handler would anyway know about them. I will tell you one thing that I always did, right from my first project and continued to do so even now. It is rather a simple guiding statement or philosophy which helped me define and set right and pragmatic direction for those projects, almost always bang-on..!”

“what was that…?” He was really curious. 

“my guiding principal was quite simple and obvious – ‘business as usual from day 1’”

“That is an obvious thing – what is so special about it?” he was bit confused but still curious. 

“ See.. any project – small or big, will have its own goals and objectives, but what really differentiates it in the field is the so called ‘stakeholder’s user experience’ – which I rather prefer to call it as ‘stakeholder’s project experience(Px)’. It is the experience, that all the stakeholders would experience throughout the project, especially more strongly at the time when the project goes live.. agree?”

“ right.. especially in projects where you have multi-stack stakeholder – from strategic to operations levels whose varied interests are to be addressed simultaneously..” he nodded his head. 

“ Exactly.. in fact, that is the real challenge in projects – meeting expectations right from Cxx level to the last operating level that is involved in the project. So, I made this basic assumption : each and every one would have their own expectations list, but the common minimum expectation will be – they should be able to run their business or operations / routine tasks comfortably with minimum hinderance and disturbances, just like they were doing it before. Put it simply, if they can run their business as usual from day one, that gives a great Px feeling for everyone involved in the project…”

“So…?”

“ So, during initial stages of the project itself, I tried to figure out and document what ‘business as usual’ means to each and every stake holder, at all levels..” 

”you mean ‘what it means for them to run business as usual from day 1’ right? “

“yes.. it means different things to different stake holders.. for a warehouse, if they can handle shipments and receipts like any other normal day, perhaps that defines their main ‘business as usual’ requirement. Similarly, having clocked-in the average daily turnover figures like they usually did on a normal day, defines the business as usual criteria for a sales stakeholder..”

“ got it.. this means, you collect what each stake holder means by his ‘business as usual’ and integrate into your project requirement?”

“ It is not just project requirement alone; in fact many of them may not qualify as project requirements and some even may look totally unrelated from scope perspective. They need some interpretation and ‘reading between the lines’ to decipher and convert them to project language and assign them to respective project area.  Apart from scope ramifications, these pointers may have influence on many other aspects of project phases – like testing, training, migration, support, service etc. In addition, it may also have pre and post project implications. Also, the potential impact of those expectations on cost and time line can not be overlooked.  So, internalising them all into the project execution is important and key to this approach..”

“..and you did it in all of your projects and it worked..?” 

“ yes.. I did it in all my projects.. at least to the extent the project situation permits.. If there were challenges, at least I did it with pareto’s principle – so that A and B items are addressed. Since it was aimed at delivering better project experience from the very beginning, almost all the time it worked well. Even in compromised situations, we could gain partial benefits. There are anyway, many other factors that are typically taken care in projects using the standard approach that every project manager follows.. but integrating this principle in addition, helped me to enhance the efficiency and effectiveness of project delivery, without compromising on any already stated goals, instead helping deliver more than that..”

“In a way the aspects you integrated are kind of unstated but obvious goals that never seemed to be obvious by default and you made them as part of the normal project execution process..?”

“you can say so.. this one approach helped us figure out right and relevant things to be included in our project tasks primarily with stakeholder or customer view in focus. Implementing any change is always a challenge but with this approach the unpredictable side of change was made more predictable or familiar to all stakeholders – which enabled them to fix it during the project , which in turn enabled them to run their business as usual from day one…That even allowed us to take credit by highlighting them as ‘scope over delivery!’..”

“Sounds interesting.. not sure if everyone do this way always..but the idea makes sense – especially from 360 degree stakeholder point of view…This could be a very useful hint to my junior project managers team, especially moulding them with right business  mindset….!”

“May be intuitively some of this aspects already included – especially in case of experienced project managers, but not sure if it always goes in a structured way or as a structured approach. However, I always took a bold approach to include this as part of project charter..”

“You mean to include it as a written goal in project charter – ‘business as usual from day 1’, right? I remember those slides from your kick-off meetings..”

“Yes.. this was always mentioned as one of the go live goal, along with other key goals like project cost, timeline, project scope, quality etc. Interestingly, the key stakeholder for that goal was myself – the project manager, because it should be the target and aspiration of the project manager to deliver such outcome, even when it is not spelled out as an expectation from any other stakeholder.. ! This, in a way is the commitment as well as measurement for the project manager..”

He smiled and said “ that sounds like,  proactively taking responsibility…”

I returned his smile…“some others may call it stupidity as well..! Anyway, I did it because I was passionate about it; about project, it’s expected outcome, it’s benefits to business and the ‘project experience (Px) factor’ that makes the stakeholder feel the effect of its outcome..”

“ nice idea.. by the way, my flight announcement was just made.. I have to take leave for now.. We should catch up more often and discuss more to see what else you have in your bag of tricks..As always it was a delightful discussion this evening…”

“ haha.. I wouldn’t say bag of tricks. Sure, there will be many who would be practicing such tricks – May be in a tacit way. Yes, any time we could discuss and exchange ideas..I could also learn from your leadership experience… you have my contact and just ping me anytime..!”

His gate again called his name and made a last call announcement. He got up, gave me a warm handshake, pulled his luggage and almost ran towards his departure gate. I downed the last sip of my beer and started walking towards my gate.

– Nagesha Mysore

11.12.2022

#business_as_usual, #project_thoughts, #simple_Ideas

ಆನ್ಲೈನ್ ಹಂಗಾಮ (ಹರಟೆ / ಲಘು ಹಾಸ್ಯ – ಗುಬ್ಬಣ್ಣ)



ಆನ್ಲೈನ್ ಹಂಗಾಮ (ಹರಟೆ / ಲಘು ಹಾಸ್ಯ – ಗುಬ್ಬಣ್ಣ)

ಮಧ್ಯಾಹ್ನದ ಸುಡುಬಿಸಿಲಲ್ಲಿ ಬೋರಾಯ್ತೆಂದು ಬೋರಲಾಗಿ ಬಿದ್ದುಕೊಂಡಿದ್ದೆ.. ಇನ್ನೇನು ತುಸು ಮಂಪರು ಹತ್ತಿತೆನ್ನುವಾಗ ಕಾಲಿಂಗ್ ಬೆಲ್ಲು ಸದ್ದಾಗಿ ಎಚ್ಚರವಾಯ್ತು.. ಮನದಲ್ಲಿ ಶಪಿಸುತ್ತಲೆ ಎದ್ದು ಬಂದು ಬಾಗಿಲು ತೆಗೆದರೆ ಹಾಳಾದ ಗುಬ್ಬಣ್ಣನ ಮುಖ!

‘ಬೇಡ ಅನ್ನೊ ಹೊತ್ತಲ್ಲೆಲ್ಲ ಕಾಲ್ ಮಾಡಿ ತಲೆ ತಿಂತಿಯ.. ಒಂದು ಕಾಲ್ ಮಾಡಿ ಬರೋಕೇನಾಗಿತ್ತು ದಾಢಿ? ‘ ಭಾನುವಾರದ ಸುಖನಿದ್ದೆ ಲಾಸಾದ ಕೋಪದಲ್ಲಿ ಕಷ್ಟಪಟ್ಟು ನಿಯಂತ್ರಿಸಿದ ದನಿಯಲ್ಲಿ ನುಡಿದೆ..

‘ಸಾರ್.. ಸುಮ್ಸುಮ್ನೆ ಬೈಬೇಡಿ.. ಒಂದು ಗಂಟೆಯಿಂದ ಮೂರು ಸಾರಿ ಪೋನಾಯಿಸಿದೆ.. ನೀವು ಎತ್ತಲೇ ಇಲ್ಲ..’ ಎಂದ. ನಾನು ಪೋನತ್ತ ಕಣ್ಣಾಡಿಸಿದರೆ ಮೂರು ಮಿಸ್ಡ್ ಕಾಲ್ಸ್.. ಸೈಲೆಂಟ್ ಮೋಡಿನಲ್ಲಿ ಗೊತ್ತಾಗಿಲ್ಲ..!

‘ಏನಾದ್ರು ಸಂಡೇ ಮಧ್ಯಾಹ್ನ ಬರಬಾರ್ದು ಅಂಥ ಗೊತ್ತಿಲ್ವ..ಒಳ್ಳೆ ನಿದ್ದೆ ಬಂದಿತ್ತು.. ಎಲ್ಲ ಹಾಳ್ಮಾಡ್ಬಿಟ್ಟೆ..’ ಗೊಣಗಿಗೊಂಡೆ. ಬಾಗಿಲಿಗಡ್ಡ ನಿಂತಿದ್ದವನನ್ನು ತಳ್ಳಿಕೊಂಡೆ ಒಳಬಂದ ಗುಬ್ಬಣ್ಣ..

‘ಸಾರ್.. ಹೇಳಿ ಬರೊ ಕಾಲ ಎಲ್ಲಾ ಆಗೋಯ್ತು ಸಾರ್.. ಈಗೇನಿದ್ರು ಕರೋನಾ ಸ್ಟೈಲ್.. ಹೋದ್ಯಾ ಪಿಶಾಚಿ ಅಂದ್ರೆ ಬಂದೇ ನೋಡು ಗವಾಕ್ಷೀಲಿ ಅನ್ನೊ ಡೆಲ್ಟಾ, ಓಮಿಕ್ರಾನ್ ಸ್ಟೈಲೇ ಇನ್ಮುಂದೆ..’ ಎಂದು ತಟ್ಟನೆ ವಿಷಯವನ್ನ ಸೀರಿಯಸ್ ಟಾಪಿಕ್ಕಿಗೆ ತಂದುಬಿಟ್ಟ ಗುಬ್ಬಣ್ಣ.. ಮತ್ತೆ ಓಮಿಕ್ರಾನ್ ಲಾಕ್ಡೌನ್ ಸುದ್ಧಿಯಲ್ಲಿ ಒದ್ದಾಡುತ್ತಿದ್ದ ಮನಸು, ತಟ್ಟನೆ ಮಂಪರಿಂದಾಚೆ ಬಂದು ಸೀರಿಯಸ್ ವಿಚಾರವಾದಿಯ ಪೋಸ್ ಹಾಕಿಕೊಂಡು ಕೂತುಬಿಟ್ಟಿತು.. ಅದೇ ಲಹರಿಯಲ್ಲಿ ಗಹನವಾಗಿ ಚಿಂತಿಸುತ್ತ ಕೇಳಿದೆ..

‘ಏನೋ ಇದು ಗುಬ್ಬಣ್ಣ..? ವರ್ಷದ ಮೇಲೆ ವರ್ಷ ಕಳೆದ್ರು ಈ ಕರೋನಾ ಗಲಾಟೆ ಕಮ್ಮೀನೆ ಆಗ್ತಾ ಇಲ್ವಲ್ಲೊ..?’ ಅಂದೆ..

‘ಹೌದು.. ಈ ಟ್ರೆಂಡ್ ನೋಡಿದ್ರೆ ಇದೇನು ಸದ್ಯಕ್ಕೆ ನಿಲ್ಲೊ ಹಾಗು ಕಾಣ್ತಿಲ್ಲ.. ಒಂದು ಮುಗಿದರೆ ಇನ್ನೊಂದು ಬರ್ತಾನೆ ಇರುತ್ತೆ – ಓಮಿಕ್ರಾನ್ ಆದ್ಮೇಲೆ ಸಾಲ್ಮನ್-ಕ್ರಾನು, ಶಾಲುಕ್-ಕ್ರಾನ್, ಆಕ್ಷೀ-ಕ್ರಾನ್, ದೇವಾ-ಕ್ರಾನ್ – ಅಂಥ ಏನಾದರು ಒಂದು ಬರ್ತಾ ಇರ್ತವೆ ಸಾರ್..’

‘ಮತ್ತೆ ಮುಂದೆ ಲೈಫ್ ಎಂಗೋ ?’

‘ಎಂಗೋ ಏನ್ ಸಾರ್? ಎಲ್ಲಾ ಆನ್ಲೈನ್ ಸಾರ್ , ಆನ್ಲೈನ್..! ನೋಡ್ತಾ ಇದೀರಲ್ಲ ? ಸ್ಕೂಲುಗಳೆಲ್ಲ ಆನ್ಲೈನ್ ಓಡ್ತಾ ಇವೆ.. ವರ್ಕ್ ಫ್ರಮ್ ಹೋಂ ಶುರುವಾಗಿದೆ, ಪುಡ್ ಆರ್ಡರಿಂಗ್ ಆನ್ಲೈನು, ಶಾಪಿಂಗು ಆನ್ಲೈನು, ತಳ್ಳೊ ಗಾಡಿ ತರಕಾರಿ ತಕ್ಕೊಂಡ್ರು ಪೇಮೆಂಟ್ ಆನ್ಲೈನು.. ಸುಮ್ನೆ ವೈರಸ್ಸು ವೈರಸ್ಸು ಅಂಥ ಕೂರದೆ ಜೀವನ ಮುಂದಕ್ಕೆ ಸಾಗಿಸ್ತಾ ಇರಬೇಕು ಸಾರ್.. ನೀವು ಸ್ವಲ್ಪ ಜಾಸ್ತಿ ಆನ್ಲೈನ್ ಆಗ್ಬೇಕು ಸಾರ್ ಇನ್ಮುಂದೆ..’ ಅಂಥ ಲೆಕ್ಚರ್ ಶುರು ಮಾಡಿದ ಗುಬ್ಬಣ್ಣ.. ಹೀಗೆ ಬಿಟ್ಟರೆ ಅದು ನಾನ್ಸ್ಟಾಪ್ ಎಕ್ಸ್ಪ್ರೆಸ್ ಅಂಥ ಗೊತ್ತಿತ್ತಾಗಿ, ನಡುವಲ್ಲೆ ಬ್ರೇಕ್ ಹಾಕಿದೆ….

‘ಲೋ ಗುಬ್ಬಣ್ಣ.. ಅದೆಲ್ಲ ಗೊತ್ತಿರೋದೆ ಕಣೊ… ಹಾಗಂತ ಎಲ್ಲಾರು ಏನು ಆನ್ಲೈನಲ್ಲೆ ಕೊಳ್ತಾ ಇದಾರಾ? ಇನ್ನು ಮುಕ್ಕಾಲು ಪಾಲು ಮಾಮೂಲಿನಂಗೆ ಕೊಳ್ತಾ ಇಲ್ವಾ? ಅದೂ ಇರುತ್ತೆ, ಇದೂ ಇರುತ್ತೆ..’ ಅಂದೆ..ನನಗೆ ಆನ್ಲೈನಲ್ಲಿ ಕಾರ್ಡ್ ಬಳಸಿ ವ್ಯಾವಹಾರ ಅಂದ್ರೆ ಇನ್ನೂ ಬಹಳ ಭಯವೆ..!

ಗುಬ್ಬಣ್ಣ ನನ್ನತ್ತ ಕನಿಕರದ ದೃಷ್ಟಿಯಲ್ಲಿ ನೋಡುತ್ತ.. ’ಸಾರ್.. ನಿಮ್ಮನ್ನ ನೋಡಿದ್ರೆ ಪಾಪ ಅನ್ಸುತ್ತೆ..’ ಅಂದ

‘ಯಾಕೊ..?’

‘ಅಲ್ಲಾ ಸಾರ್.. ನಿಮಗಿನ್ನು ಬಿಜಿನೆಸ್ ಪ್ರಪಂಚದ ಸೀಕ್ರೇಟ್ ಅರ್ಥಾನೆ ಆಗಲಿಲ್ಲವಲ್ಲ ಸಾರ್? ‘

‘ಅಂದ್ರೆ?’

‘ಈ ಗವರ್ಮೆಂಟುಗಳಿಗೆ, ಕಂಪನಿಗಳಿಗೆ ಯಾವುದಿದ್ರೆ ಸುಲಭಾ ಸಾರ್? ಡಿಜಿಟಲ್ ಆನ್ಲೈನೊ, ಆಫ್ ಲೈನೋ?’ ನನಗೆ ಜ್ಞಾನೋದಯ ಮಾಡಿಸುವಂತೆ ಪ್ರಶ್ನಿಸಿದ ಗುಬ್ಬಣ್ಣ..

‘ಅದೇನು ಸೀಕ್ರೇಟ್ಟೆ? ಎಲ್ಲಾ ಡಿಜಿಟಲ್ ಆನ್ಲೈನಿದ್ರೆ ಅವರಿಗು ಸುಲಭ.. ಎಲ್ಲಾ ಪಾರದರ್ಶಕವಾಗಿರುತ್ತೆ.. ಸ್ಪೀಡಾಗಿ ನಡೆಯುತ್ತೆ.. ತಪ್ಪುಗಳು ಕಡಿಮೆ ಇರುತ್ತೆ.. ಅವರ ಸಿಸ್ಟಂ ಎಲ್ಲಾ ಬದಾಲಾಯಿಸಬೇಕಾದ್ರೆ ಟೈಮು ಹಿಡಿಯುತ್ತಾದ್ರು ಅವರು ಎಲ್ಲರಿಗು ಆನ್ಲೈನೇ ಬೇಕು.. ‘

‘ಅಷ್ಟು ಮಾತ್ರವಲ್ಲ ಸಾರ್.. ಎಲ್ಲಾ ಕಂಪನಿಗಳು, ದೇಶಗಳು ಡಿಜಿಟಲ್ ಡಿಜಿಟಲ್ ಅಂಥ ಕೋಟಿಕೋಟಿಗಟ್ಟಲೆ ಇನ್ವೆಸ್ಟ್ ಮಾಡಿವೆ, ಮಾಡ್ತಾ ಇವೆ.. ಅಂದ್ರೆ ಅಲ್ಲಿ ಹಾಕಿದ ಬಂಡವಾಳ ವಾಪಸು ಬರಬೇಕಾದ್ರೆ ಜಾಸ್ತಿ ಜಾಸ್ತಿ ಜನ ಡಿಜಿಟಲ್ ಆಗಬೇಕು, ಆನ್ಲೈನ್ ವ್ಯವಹಾರನೇ ಮಾಡಬೇಕು.. ಅದನ್ನ ಪ್ರಮೋಟ್ ಮಾಡೋಕೆ ಆನ್ಲೈನ್ ಲಿ ಡಿಸ್ಕೌಂಟು , ಕನ್ಸಿಶನ್ ಅಂಥ ಅಟ್ರಾಕ್ಷನ್ಸ್ ಕೊಟ್ಟು ಆನ್ಲೈನ್ ಬೆಲೆ ಕಮ್ಮಿ ಇರೋ ಹಾಗೆ ನೋಡ್ಕೋಬೇಕು..’

‘ಅದು ನಿಜವೆ..’

‘ಆದರೆ ಅವರು ಹಳೆ ಸಿಸ್ಟಂನೂ ಇಟ್ಕೊಂಡು, ಹೊಸ ಡಿಜಿಟಲ್ ಬಂಡವಾಳನು ಹಾಕಿ ನಿಭಾಯಿಸ್ಕೊಂಡು ಹೋಗ್ಬೇಕಾದ್ರೆ ಅವರ ಖರ್ಚು ಡಬ್ಬಲ್ ಆಗುತ್ತೆ.. ಆಗ ಅವರು ಆನ್ಲೈನಲ್ಲು ಸಹ ಕಮ್ಮಿ ರೇಟಲ್ಲಿ ಮಾರೋಕೆ ಆಗಲ್ಲ..’

‘ಹೌದಲ್ವಾ..?’

‘ಅದಕ್ಕೆ ಇರೋ ಒಂದೇ ಒಂದು ಉಪಾಯ ಅಂದ್ರೆ ಆದಷ್ಟು ಬೇಗ ಹೆಚ್ಚೆಚ್ಚು ಜನರನ್ನ ಆನ್ಲೈನ್ ಮಾಡಬೇಕು.. ಆಗ ಹಳೆ ತರ ಬಿಸಿನೆಸ್ ಮಾಡೋರು ಕಮ್ಮಿ ಆಗ್ತಾರೆ.. ಅದಕ್ಕೆ ತಕ್ಕ ಹಾಗೆ ಹಳೆ ಸಿಸ್ಟಂಗಳನ್ನೆಲ್ಲ ನಿಲ್ಲಿಸಿಯೊ, ತುಂಡು ಮಾಡಿಯೊ ಆನ್ಲೈನ್ ಕಡೆ ನಡೆಯೊ ಹಾಗೆ ಮಾಡಿದರೆ, ಆಗ ಡಬ್ಬಲ್ ಖರ್ಚುಗಳು ಇರೋದಿಲ್ಲ.. ಒಂದು ಪಕ್ಷ ಇದ್ದರು ಹೊರೆ ಕಡಿಮೆಯಾಗುತ್ತೆ.. ಹೌದೊ? ಅಲ್ವೊ?’

‘ಅಲ್ಲಿಗೆ ಎಷ್ಟು ಬೇಗ ಎಲ್ಲಾ ಆನ್ಲೈನಾಗುತ್ತೊ, ಅಷ್ಟು ಅವರಿಗೆ ಒಳ್ಳೇದು ಅಂತಾಯ್ತು.. ಅಲ್ವಾ?‘

‘ಗೊತ್ತಾಯ್ತಾ ಸಾರ್..? ಅದಕ್ಕೆ ಎಲ್ಲರನ್ನು ಆದಷ್ಟು ಡಿಜಿಟಲ್ ಮಾಡ್ಬೇಕು ಅಂಥ ಕಂಪನಿಗಳು, ಗರ್ವರ್ಮೆಂಟು ಎಲ್ಲಾರು ಒದ್ದಾಡ್ತಾ ಇರ್ತಾರೆ.. ಬೇರೆದೆಲ್ಲ ಅವರು ಸುಲಭವಾಗಿ ಅವರ ಹತೋಟಿಲೆ ಬದಲಾವಣೆ ಮಾಡ್ಬೋದು – ಒಂದನ್ನು ಬಿಟ್ಟು..’

‘ಯಾವುದದು?’

‘ಅವರು ಏನೇ ಮಾಡಿದ್ರು ಜನರ ಮೈಂಡ್ ಸೆಟ್ ಬದಲಾಯಿಸೋಕೆ ಸುಲಭದಲ್ಲಿ, ಬೇಗದಲ್ಲಿ ಆಗೋದಿಲ್ಲ.. ವರ್ಷಾನುಗಟ್ಲೆ ಆಗುತ್ತೆ .. ಪರಿವರ್ತನೆ ಆಗೋ ತನಕ ಕಾಯ್ತಾ ಇರ್ಬೇಕು.. ಅಲ್ಲಿ ತನಕ ಡಬ್ಬಲ್ ಖರ್ಚ್ ತಾಳ್ಕೋಬೇಕು.. ಕಾಂಪಿಟೇಶನ್ ಅದೂ ಇದು ಅಂಥ ಮೊದಲೆ ನೂರೆಂಟು ತಲೆನೋವಿನ ಜೊತೆ ಇದು ಸೇರ್ಕೊಂಡ್ರೆ ವ್ಯವಹಾರ ಮಾಡೋದೆ ಕಷ್ಟ ಅನ್ನೋ ತರ ಆಗೋಗ್ಬಿಡುತ್ತೆ.. ಅದಕ್ಕೆ ಅವರೆಲ್ಲರು ಆನ್ಲೈನ್ ವ್ಯವಹಾರನ ಪುಶ್ ಮಾಡೋಕೆ ನೋಡ್ತಾ ಇರ್ತಾರೆ.. ಅದಕ್ಕೆ ಎಲ್ಲ ಕಡೆ ಡಿಜಿಟಲೈಸೇಶನ್ ಡಿಜಿಟಲೈಸೇಶನ್ ಅಂಥ ಬಡ್ಕೋಳೋದು..’

ಗುಬ್ಬಣ್ಣನ ಮಾತು ಕೇಳುತ್ತಿದ್ದಂತೆ ನನ್ನ ಟ್ಯೂಬ್ ಲೈಟ್ ತಲೆಗೇನೊ ತಟ್ಟನೆ ಹೊಳೆದಂತಾಯ್ತು..’ ಗುಬ್ಬಣ್ಣ..?’

‘ಏನ್ಸಾರ್..?’

‘ನೀನು ಹೇಳೋದು ಕೇಳಿದ್ರೆ ಲಾಕ್ಡೌನ್ ಮಾಡೋದೆ ಆನ್ಲೈನ್ ಬಿಜಿನೆಸ್ ಹೆಚ್ಚಿಸೋಕೆ ಅನ್ನೊ ಅನುಮಾನ ಬರುತ್ತಲ್ಲೊ..?’

‘ಇರಬಹುದು ಸಾರ್..ಲಾಕ್ಡೌನ್ ಆದಾಗ ತಾನೆ ಜನಗಳ ಸಹನೆ ಟೆಸ್ಟ್ ಆಗೀದು? ಒಬ್ಬೊಬ್ಬರಾಗಿ ಆಗ ತಾನೆ ಜನ ಆನ್ಲೈನ್ ಕಡೆ ಟ್ರೈ ಮಾಡೋಕೆ ಮನಸು ಮಾಡೋದು?’ ಎನ್ನುತ್ತ ನನ್ನ ಅನುಮಾನದ ಮೇಲೊಂದು ಅಡ್ಡಗೋಡೆ ದೀಪದ ಉತ್ತರ ಕೊಟ್ಟ ಗುಬ್ಬಣ್ಣ..

‘ನಿಜವೊ ಸುಳ್ಳೊ – ಲಾಕ್ಡೌನಲ್ಲಿ ಆನ್ಲೈನು ಸ್ಪೀಡನ್ನ ಜಾಸ್ತಿ ಮಾಡ್ಕೋಬೋದು ಅಂಥ ಗೊತ್ತಾದ್ಮೇಲೆ, ಅದನ್ನೆ ಯಾಕೆ ಸ್ಟ್ರಾಟೆಜಿ ತರ ಬಳಸಿರಬಾರದು ಅಂತಿನಿ..?!’ ಎಂದು ನನ್ನ ತರ್ಕವನ್ನು ಮುಂದುವರೆಸುತ್ತ ಬುದ್ಧಿಜೀವಿಯ ಪೋಸ್ ಕೊಟ್ಟಾಗ, ನನ್ನತ್ತ ಮತ್ತೊಮ್ಮೆ ಕನಿಕರದ ದೃಷ್ಟಿ ಬೀರಿದ ಗುಬ್ಬಣ್ಣ..

‘ನೀವು ತುಂಬಾ ನೈವು.. ಅಲ್ಲಾ ಸಾರ್, ಒಂದು ವೇಳೆ ಈ ಕರೋನಾ ಎಲ್ಲಾ ಇಲ್ದೆ ಇದ್ದಿದ್ರೆ, ಡಿಜಿಟಲ್ಲು ಆನ್ಲೈನು ಅವೆಲ್ಲ ಕಾರ್ಯಗತ ಆಗಬೇಕಾಗಿದ್ರೆ ಅಂದಾಜು ಎಷ್ಟು ವರ್ಷ ಆಗ್ತಿತ್ತು..?’

‘ಇಷ್ಟೆ ಅಂಥ ಹೇಳೋದು ಕಷ್ಟ.. ಆದರೆ ಖಂಡಿತ ಅದೊಂದು ಐವತ್ತೋ ನೂರೊ ವರ್ಷದ ಪ್ರಾಜೆಕ್ಟು..!’

‘ಅಲ್ವಾ..? ಈಗೇನಾಯ್ತು ನೋಡಿ.. ಇನ್ನು ಹತ್ತಿಪ್ಪತ್ತು ವರ್ಷಗಳು ಹಿಡಿತಿದ್ದ ಬದಲಾವಣೆ, ಕರೋನ ಕಾರಣದಿಂದ ಒಂದೆರಡೆ ವರ್ಷದಲ್ಲಿ ಆಗೋಯ್ತು..! ಅನಿವಾರ್ಯವಾದಾಗ ಜನರು ವಿಧಿಯಿಲ್ಲದೆ ಗೊಣಗಿಕೊಂಡಾದರು ಆ ಬದಲಾವಣೆಯನ್ನ ಒಪ್ಪಿಕೊಳ್ಳಬೇಕಾಗುತ್ತೆ.. ಹೌದು ತಾನೆ?’

ಸ್ವಿಗ್ಗಿ, ಜೊಮಾಟೊ, ಅಮೇಜಾನ್, ಲಜಾಡಾ ಇತ್ಯಾದಿಗಳೆಲ್ಲ ದಿಢೀರನೆ ಫೇಮಸ್ ಆಗಿದ್ದು , ವಹಿವಾಟು ಹೆಚ್ಚಿಸಿಕೊಂಡಿದ್ದು ಈ ಟೈಮಲ್ಲೆ ತಾನೆ? ಗುಬ್ಬಣ್ಣನ ಮಾತು ನಿಜ ಅನಿಸುವಾಗಲೆ ತಟ್ಟನೆ ಮತ್ತೊಮ್ಮೆ ಟ್ಯೂಬ್ಲೈಟು ಹೊತ್ತಿಕೊಂಡಿತು..!

‘ಗುಬ್ಬಣ್ಣ..! ನಿನ್ನ ಮಾತು ಕೇಳ್ತಿದ್ರೆ ಇಡೀ ಕರೋನಾನೆ ಕಾನ್ಸ್ಪಿರೆಸಿ ಥಿಯರಿ ಅನ್ನೊ ಅನುಮಾನ ಬರ್ತಾ ಇದೆಯಲ್ಲೊ? ಪ್ರಪಂಚವೆಲ್ಲ ಬೇಗ ಡಿಜಿಟಲ್ ಆಗ್ಲಿ ಅಂತ್ಲೆ ಈ ತರ ಏನಾದ್ರು ಪ್ಲಾನು ಮಾಡ್ಬಿಟ್ರಾ ಹೇಗೆ?’ ಎಂದೆ ತುಸು ಗಾಬರಿಯ ದನಿಯಲ್ಲಿ..

‘ಸಾರ್.. ನಿಮಗೆ ಅನುಮಾನ ಬರೋದು ಯಾವಾಗ್ಲು ಸ್ವಲ್ಪ ಲೇಟೇ..! ಯಾರಿಗೆ ಗೊತ್ತು? ಅದೇ ದೊಡ್ಡ ಪ್ಲಾನು ಇರಬಹುದು.. ಅದು ಸಕ್ಸಸ್ಸು ಆಗಿದ್ದು ನೋಡಿ , ಅದೇ ಮಾಡೆಲ್ ಇನ್ನು ಬಳಸೋದಿಕ್ಕೆ ಆಗಲಿ ಅಂಥ ಹೊಸ ಹೊಸ ವೇರಿಯಂಟುಗಳು, ಲಾಕ್ಡೌನುಗಳು ಬರ್ತಾ ಇರಬೋದು.. ಆದರೆ ಯಾವುದನ್ನು ಹೇಳ್ಬೇಕಾದ್ರು ಹಾರ್ಡ್ ಎವಿಡೆನ್ಸ್ ಇರ್ಬೇಕಲ್ಲಾ? ಅದಕ್ಕೆ ಎಲ್ಲಾ ಕಾನ್ಸ್ಪಿರೆಸಿ ಥಿಯೆರಿ ಅನ್ನೊ ಲೇಬಲ್ ಹಾಕಿ ಬಿಟ್ಟು ಬಿಡಬೇಕು ಅಷ್ಟೆ..’ ಎಂದು ಉಗುಳು ನುಂಗಿದ ಗುಬ್ಬಣ್ಣ..

‘ಹಾಗಾದ್ರೆ.. ಈ ವೇವ್ಗಳು ನಿಲ್ಲೋದೆ ಇಲ್ಲಾಂತಿಯಾ ಗುಬ್ಬಣ್ಣ..?’ ನನ್ನ ದನಿಯಲ್ಲಿ ಹೆಚ್ಚಿದ ಆತಂಕವಿತ್ತು..

‘ನಿಲ್ಲಲ್ಲ ಅಂತಲ್ಲ ಸಾರ್.. ನಿಲ್ಲುತ್ತೆ.. ಯಾವಾಗ ಡಿಜಿಟಲ್ಲು, ಆನ್ಲೈನು ಕ್ರಿಟಿಕಲ್ ಮಾಸ್ ತಲುಪುತ್ತೊ, ಯಾವಾಗ ಅದು ಸಾಕಷ್ಟು ಗಾತ್ರದ್ದಾಯ್ತು ಅನಿಸುತ್ತೊ ಆಗ ಇದೆಲ್ಲದರ ಅಗತ್ಯ ಇರೊಲ್ಲ.. ಆಗ ತಂತಾನೆ ನಿಲ್ಲುತ್ತೆ..’

‘ಆಗ ಎಲ್ಲಾ ಸಡನ್ನಾಗಿ ನಿಂತೋದ್ರೆ ಜನಕ್ಕೆ ಅನುಮಾನ ಬರಲ್ವಾ?’

‘ಬಂದ್ರು ತಾನೆ ಏನು ಸಾರ್? ಅವರು ಹೇಗು ಬದಲಾಗಿರ್ತಾರೆ.. ಆನ್ಲೈನ್ ಕಂಫರ್ಟಬಲ್ ಅನಿಸೊ ಮನಸ್ಥಿತಿ ತಲುಪಿರ್ತಾರೆ.. ಸಾಲದ್ದಕ್ಕೆ – ವೈಜ್ಞಾನಿಕ ಪ್ರಗತಿ ಆಗಿ ಆ ವೈರಸ್ ಹರಡದೆ ನಿಲ್ಲೊ ತರ ಮಾಡೋಕೆ ಸಾಧ್ಯ ಆಯ್ತು ಅಂಥ ಹೇಳ್ತಾರೆ.. ಅದಕ್ಕೆ ಸಂಬಂಧಿಸಿದ್ದು ಏನೊ ತೋರಿಸ್ತಾರೆ.. ಅದೂ ಕೂಡ ಬಿಸಿನೆಸ್ಸೆ ಅಲ್ವೆ..?’

‘ಒಟ್ನಲ್ಲಿ ನಾವೇನು ಮಾಡೋಕಾಗೊಲ್ಲ.. ಮುಂದಿನ ದಿನಗಳು ಚೆಂದಾಗಿರ್ತವೆ ಅನ್ನೊ ಭರವಸೆಲಿ, ದೇವರ ಮೇಲೆ ಭಾರ ಹಾಕಿ ಈಗ ಎಲ್ಲಾ ಸಹಿಸ್ಕೋಬೇಕು ಅನ್ನು..’

‘ಚಂದಾಗಿರುತ್ತೊ ಅಥವಾ ಇನ್ನೇನಾದ್ರು ಹೊಸದು ಬರುತ್ತೊ – ಯಾರಿಗೆ ಗೊತ್ತು ಸಾರ್? ಆದ್ರು ಎಚ್ಚರಿಕೆ ಲೇಪಿಸಲ್ಪಟ್ಟ ಆಶಾವಾದಿಯಾಗಿರೋಕೇನು ಅಡ್ಡಿಯಿಲ್ಲ..’ ಎಂದು ಇಡೀ ಕರೋನ ಹಳವಂಡವೆ ದೊಡ್ಡ ಕಾನ್ಸ್ಪಿರೆಸಿ (ಹಗರಣ) ಎನ್ನುವ ಹುಳವನ್ನು ನನ್ನ ತಲೆಗೆ ಬಿಟ್ಟವನೆ, ನನಗೊಂದು ಹೊಸ ವೈರಸ್ ತಗುಲಿ ಹಾಕಿದ ಖುಷಿಯಲ್ಲಿ ಎದೆ ಸೆಟೆಸಿಕೊಂಡು ಕೂತ ಗುಬ್ಬಣ್ಣ..

ನನಗೆ ಅವನ ಮಾತಿಂದ ತಲೆ ನೋವೆ ಹೆಚ್ಚಾಗಿ, ಅವನನ್ನು ಬೇಗನೆ ಸಾಗಹಾಕಿ ಮತ್ತೆ ಸ್ವಲ್ಪ ನಿದ್ದೆ ಮಾಡದಿದ್ದರೆ ಹುಚ್ಚು ಹಿಡಿದಂತಾಗುತ್ತದೆ ಎನಿಸಿ ಕೇಳಿದೆ – ‘ ಅದೆಲ್ಲಾ ಸರಿ ಗುಬ್ಬಣ್ಣ.. ಇದೇನು ಈ ಹೊತ್ತಲ್ಲಿ ಬಂದಿದ್ದು..?’ ಎಂದು ಮಾತು ಬದಲಿಸಿದೆ.

ದೊಡ್ಡದಾಗಿ ದೇಶಾವರಿ ನಗೆ ನಕ್ಕ ಗುಬ್ಬಣ್ಣ ಹಲ್ಲು ಗಿಂಜುತ್ತ ನುಡಿದ.. ‘ ಇಲ್ಲೆ ಲಿಟಲ್ ಇಂಡಿಯಾಗೆ ವೀಕ್ಲಿ ಶಾಪಿಂಗಿಗೆ ಬಂದಿದ್ದೆ ಸಾರ್.. ತಟ್ಟನೆ ನಿಮ್ಮ ಮನೆ ಘಮ್ಮನೆ ಕಾಫಿ ನೆನಪಾಯ್ತು.. ನೀವಿರೊದು ಇಲ್ಲೆ ತಾನೆ? ಅದಕ್ಕೆ ಬಂದೆ..’

ನನಗೊ ಮೈಯೆಲ್ಲಾ ಉರಿದುಹೋಯ್ತು.. ಎಡವಿ ಬಿದ್ದರೆ ನೂರಾರು ಕಾಫಿ ಶಾಪುಗಳಿರೊ ಜಾಗಕ್ಕೆ ಬಂದರು, ಅಲ್ಲೆಲ್ಲಾದರು ಕುಡಿದು ಹಾಳಾಗದೆ, ಇಲ್ಲಿ ಬಂದು ನನ್ನ ನಿದ್ದೆ ಕೆಡಿಸಿದನಲ್ಲ ? ಎಂದು.. ಸಾಲದ್ದಕ್ಕೆ ತಲೆಗೊಂದು ಹೊಸ ಹುಳ ಬಿಟ್ಟು ಇನ್ನೂ ತಲೆ ಕೆಡಿಸಿಬಿಟ್ಟಿದ್ದ.. ಸೇಡು ತೀರಿಸಿಕೊಳ್ಳಲು ಇದೇ ಸದಾವಕಾಶ ಅನಿಸಿತು..

‘ಸಾರಿ.. ಗುಬ್ಬಣ್ಣ.. ಕಾಫಿ ಮಾಡೋಕೆ ಮೇಡಂ ಮನೇಲಿಲ್ಲ.. ಫ್ರೆಂಡ್ ಮನೆಗೆ ಹೋಗಿದಾಳೆ..’

‘ಹೋದ್ರು ಮಾಡಿ ಫ್ಲಾಸ್ಕಲ್ಲಿ ಹಾಕಿಟ್ಟು ಹೋಗಿರ್ತಾರಲ್ಲ ಸಾರ್..?’ ನಮ್ಮ ಮನೆ ಗುಟ್ಟೆಲ್ಲ ಬಲ್ಲ ಗುಬ್ಬಣ್ಣ ಜಾಣತನದಲ್ಲಿ ಕೇಳಿದ.. ಅದು ನಿಜವೆ ಆದರು, ಅವನಿಗೆ ಕೊಟ್ಟ ಮೇಲೆ ನನಗೆ ತಾನೆ ಖೊಟ್ಟಿಯಾಗೋದು? ಅವಳು ರಾತ್ರಿ ವಾಪಸು ಬರುವ ತನಕ ಆ ಫ್ಲಾಸ್ಕ್ ಕಾಫಿಯೆ ಗತಿ.. ಹೀಗಿರುವಾಗ..

‘ಗುಬ್ಬಣ್ಣ.. ಒಂದು ಕೆಲಸ ಮಾಡೋಣ, ಬಾ ನನ್ನ ಜೊತೆ..’ ಎನ್ನುತ್ತ ಬಾಗಿಲಿನತ್ತ ಕರೆದೊಯ್ದೆ.. ಕಾಫಿ ಕೊಡಲು ಕರೆದೊಯ್ಯುತ್ತಿರುವೆನೇನೊ ಎಂದುಕೊಂಡವನಿಗೆ ನಿರಾಶೆಯಾಗುವಂತೆ, ‘ನೋಡೊ ಇಷ್ಟೊತ್ತು ಡಿಜಿಟಲ್ , ಆನ್ಲೈನು ಬಗ್ಗೆ ಪಾಠ ಹೇಳಿದ್ದೀಯಾ.. ಅದನ್ನ ನಾವೂ ಈಗಿನಿಂದಲೆ ಫಾಲೋ ಮಾಡಿಬಿಡೋಣ.. ನೀನೀಗ ಹೊರಡು – ಹೊರಡುವಾಗ್ಲೆ ಒಂದು ಆನ್ಲೈನ್ ಆರ್ಡರ್ ಹಾಕಿಬಿಡು , ಹತ್ತೆ ಹೆಜ್ಜೆ ಹಾಕಿದರೆ ಅಲ್ಲೆ ‘ಗೋವಿಂದಾ, ಗೋವಿಂದಾ‘ ರೆಸ್ಟೋರೆಂಟ್ ಸಿಗುತ್ತೆ.. ಆನ್ಲೈನ್ ಕಾಫೀನೂ ರೆಡಿ ಇರುತ್ತೆ.. ಫಸ್ಟ್ ಕ್ಲಾಸ್ ಕಾಫಿ ಕುಡಿದು ಮನೆಗೆ ಹೋಗು.. ನಾನೀಗ ಕಾಫಿ ಕುಡಿಯೊ ಮೂಡಲ್ಲಿಲ್ಲ.. ಸ್ವಲ್ಪ ನಿದ್ದೆ ಮಾಡ್ಬೇಕು..’ ಎನ್ನುತ್ತ ಬಾಗಿಲಿಂದ ಹೊರ ದಬ್ಬಿದೆ..

ಗುಬ್ಬಣ್ಣ ಗೋಗರೆಯುವ ದಯನೀಯ ದನಿಯಲ್ಲಿ ‘ಸಾರ್..’ ಎಂದ

‘ಸಾರಿ ಗುಬ್ಸ್.. ಬೆಟರ್ ಲಕ್ ನೆಕ್ಸ್ಟ್ ಟೈಮು.. ಮುಂದಿನ ಸಾರಿ ಬರುವಾಗ ಒಂದು ದಿನ ಮೊದಲೆ ಆನ್ಲೈನ್ ಮೆಸೇಜು ಹಾಕಿ ಬಾ – ಕಾಫಿ ಬೇಕು ಅಂಥ.. ಈಗ ಬೈ ಬೈ..!’ ಎಂದವನೆ ಬಾಗಿಲು ಹಾಕಿ ಒಳನಡೆದೆ..!

ಹೋಗಿ ಬಿದ್ದುಕೊಂಡ ನಂತರದ ಪೆಚ್ಚು ಮೋರೆ ಹಾಕಿಕೊಂಡು ನಡೆಯುತ್ತಿರುವ ಗುಬ್ಬಣನ ಆನ್ಲೈನ್ ಚಿತ್ರಗಳೆ ಕಾಣತೊಡಗಿದವು – ಕನಸಿನಲ್ಲು !

  • ನಾಗೇಶ ಮೈಸೂರು
    ೦೯.೦೧.೨೦೨೨

(ಹರಟೆ ಸ್ವಲ್ಪ ಸೀರಿಯಸ್ ಆಯ್ತು ಅನಿಸಿದರೆ ಕ್ಷಮೆ ಇರಲಿ!)

ಸಣ್ಣಕಥೆ: ಪಾಪ ಪ್ರಜ್ಞೆ


(ಸಿಂಗಪುರ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ‘ಸಿಂಗಾರ ಸಾಹಿತ್ಯ ಸ್ಪರ್ಧೆ – ೨೦೨೧’ ರಲ್ಲಿ ಮೊದಲ ಬಹುಮಾನ ಪಡೆದ ಸಣ್ಣ ಕಥೆ)

ಸಣ್ಣಕಥೆ: ಪಾಪ ಪ್ರಜ್ಞೆ


ಕಿಟಕಿಯಾಚೆಯಿಂದ ಅಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಮರವನ್ನು ಎಂದಿನಂತೆ ದಿಟ್ಟಿಸುತ್ತ ನಿಂತಿದ್ದ ಪುಲಿಕೇಶಿ..

ಅದರ ಕೊಂಬೆಗಳ ನಡುವೆ ಈಚೆಗೊಂದು ಕಾಗೆಗೂಡು. ಅದರಲ್ಲೊಂದು ಕಾಗೆ ಸಂಸಾರ ಬೀಡುಬಿಟ್ಟಿದೆ.. ದಿನವು ಅವುಗಳ ಕಲರವದ ಅಭ್ಯಾಸವಾಗಿ, ಸ್ವಲ್ಪ ಹೊತ್ತು ಆ ಸದ್ದು ಕೇಳಸದಿದ್ದರೆ ಏನೊ ಕಳೆದುಕೊಂಡಂತೆ ಭಾಸವಾಗಿ, ಖಾಲಿ ಖಾಲಿಯೆನಿಸುತ್ತದೆ, ಅವನ ಮನಸು. ಆ ರೆಂಬೆ ಕೊಂಬೆಗಳ ಸಂಕೀರ್ಣ ಜಾಲದ ಕೊರಳಲ್ಲೆಲ್ಲಿಂದಲೊ, ಒಂದು ಮರಿ ಕಾಗೆ ನಿತ್ಯವೂ ‘ಕಾ.. ಕಾ..’ ಎನ್ನುತ್ತಿರುತ್ತದೆ. ಅದು ತನ್ನೊಡನೆಯೆ ಮಾತಾಡುತ್ತಿದೆಯೆಂದು ಪುಲಿಕೇಶಿಯ ಅಚಲ ನಂಬಿಕೆ..

‘ಇದೋ.. ಬಂದೆ ತಾಳಪ್ಪ.. ಶುಭೋದಯ ನಿನಗೆ..’ ಇದವನ ನಿತ್ಯದ ಓಪನಿಂಗ್ ಲೈನ್.. ಅದಕ್ಕೆ ಮಾರುತ್ತರವೇನೊ ಎಂಬಂತೆ ಆ ಕಡೆಯಿಂದ ‘ಕಾ.. ಕಾ..’ ದನಿ ಮೊಳಗುತ್ತದೆ..

‘ಬೇಸರ ಮಾಡಿಕೊಳ್ಳಬೇಡಪ್ಪ ಪ್ರಹ್ಲಾದ.. ಇನ್ನು ನಮ್ಮ ಮೇಲೆ ಕೋಪವೇನೊ ನಿನಗೆ? ಇನ್ನು ಕ್ಷಮಿಸಿಲ್ಲವೇನೊ ನಮ್ಮನ್ನು..?’ ಆರ್ತದನಿಯಲ್ಲಿ ಮತ್ತೆ ಮತ್ತೆ ಬೇಡಿಕೊಳ್ಳುತ್ತಾನೆ ಪುಲಿಕೇಶಿ – ಪ್ರತಿ ನಿತ್ಯದಂತೆ..!

ಅದಕ್ಕು ಅದೆ ಬಗೆಯ ಮಾರುತ್ತರ ಆ ಕಡೆಯಿಂದ.. ಯಾವುದೊ ಹಳೆಯ ಯಾತನೆಯೊಂದು ಚುಚ್ಚಿದಂತಾಗಿ ಮನದಲ್ಲೆ ವಿಲಪಿಸುತ್ತಾನೆ.. ಅದೇ ಚಿಂತೆಯ ಮುಖದಲ್ಲೆ ಶತಪಥ ಹಾಕುತ್ತ ರಾಗಿಣಿಯಿರುವ ರೂಮಿನತ್ತ ಬರುತ್ತಾನೆ.. ರಾಗಿಣಿ ಅವನು ಪ್ರೀತಿಸಿ ಕೈ ಹಿಡಿದ ಸಂಗಾತಿ. ಅವಳ ಸುಂದರ ಮುಖವನ್ನೆ ದಿಟ್ಟಿಸುತ್ತ ಮೆಲುದನಿಯಲ್ಲಿ ಪಿಸುಗುಟ್ಟುತ್ತಾನೆ – ‘ರಾಗು.. ಪ್ರಹ್ಲಾದನಿಗೆ ಇನ್ನು ಕೋಪ ಕಡಿಮೆಯಾದಂತಿಲ್ಲ ಕಣೆ .. ನಮ್ಮ ಮೇಲಿನ್ನು ದೇವರಿಗೆ ಕರುಣೆ ಬಂದಂತಿಲ್ಲ..’ ಎಂದ ಮಾತು ಅವಳ ಕಿವಿಗೆ ಬಿದ್ದು ತಟ್ಟನೆ ಎಚ್ಚರವಾಗುತ್ತಾಳೆ.

‘ಯಾಕ್ರಿ ಇಲ್ಲಿ ನಿಂತಿದ್ದೀರಾ? ಯಾಕೆ ಸಪ್ಪಗಿದ್ದೀರಾ?’ ಕಕ್ಕುಲತೆಯಿಂದ ಕೇಳುತ್ತಾಳೆ ರಾಗಿಣಿ. ಮದುವೆಯಾಗಿ ವರ್ಷಗಳಾದರು ಮಕ್ಕಳಾಗಲಿಲ್ಲವೆನ್ನುವ ಖೇದದ ಜೊತೆ, ಯಾವಾವುದೊ ಚಿಂತೆಗಳು ಮನಸನ್ನಾವರಿಸಿಕೊಂಡು ಹತ್ತು ವರ್ಷ ಹೆಚ್ಚೆ ವಯಸ್ಸಾದವಂತೆ ಕಾಣುತ್ತಾಳೆ..

‘ಯಾಕೊ ಪ್ರಹ್ಲಾದನಿಗೆ ನಮ್ಮ ಮೇಲಿನ ಕೋಪ ಆರಿಲ್ಲ ಕಣೆ.. ಅವನು ಕೂಗಿದಾಗೆಲ್ಲ ಮತ್ತೆ ಮತ್ತೆ ದೂರುವ ದನಿಯೆ ಕೇಳಿ ಬರುತ್ತಿದೆಯೆ ಹೊರತು, ಮನ್ನಿಸುವ ದನಿಯೆ ಅಲ್ಲಿಲ್ಲ..’ ಹೆಚ್ಚು ಕಡಿಮೆ ಅಳುವವನಂತೆ ನುಡಿದ.

‘ಪುಶೀ, ಯಾಕೆ ಇಷ್ಟೊಂದು ಸಂಕಟ? ಎಲ್ಲಾ ಕೊಡೋನು ಆ ದೇವ್ರು.. ಅವನು ಮನಸು ಮಾಡದೆ ಇದ್ರೆ ನಾವೇನು ಮಾಡಕಾಗುತ್ತೆ..? ನಾವು ಬೇಡೋದು ಬೇಡ್ತಾ ಇರೋಣ.. ಇಷ್ಟೆಲ್ಲ ಸುಖ, ಸಂಪದ, ಐಶ್ವರ್ಯ ಕೊಟ್ಟವನು, ಇದೊಂದು ವಿಷಯದಲ್ಲಿ ಮೋಸ ಮಾಡ್ತಾನ..? ಸ್ವಲ್ಪ ಕಾಯಿಸ್ತಿದಾನೆ ಅಷ್ಟೆ.. ಎಲ್ಲಾ ಡಾಕ್ಟರ ಹತ್ರ ತೋರಿಸ್ತಾ ಇದೀವಿ.. ಎಲ್ಲಾ ದೇವರಿಗು ಹರಕೆ ಹೊತ್ಕೋತಾ ಇದೀವಿ.. ಸಹನೆಯಿಂದ ಕಾಯೋಣ ಪುಶಿ..’

‘ನಮಗೆ ಮೋಸ ಆಗಲ್ಲ ಅಂತೀಯಾ ರಾಗಿ..? ನಮ್ಮ ವಂಶ ಉಳಿಸೊ ಬೆಳೆಸೊ ಕುಡಿ ನಮ್ಮನೆಲಿ ಅರಳುತ್ತೆ ಅಂತಿಯಾ?’

‘ಖಂಡಿತಾ ಪುಶಿ.. ನನಗೆ ಆ ನಂಬಿಕೆ ಇದೆ.. ನಿನಗೇ ಗೊತ್ತಿದೆ ನಾನೇನು ಬಂಜೆಯಲ್ಲ.. ನಿನ್ನಲ್ಲು ಯಾವುದೆ ದೋಷವಿಲ್ಲ.. ಏನೊ, ಯಾವ ಜನುಮದ ಪಾಪದ ಫಲವೊ, ಸ್ವಲ್ಪ ತಡವಾಗುತ್ತಿದೆಯಷ್ಟೆ..’ ಎಂದಳು ರಾಗಿಣಿ.

ಆ ಮಾತು ಸ್ವಲ್ಪ ನಿರಾಳತೆಯನ್ನು ತಂದಿತು. ಆದರು ಬಾಯಿ ಮಾತ್ರ ಮನದ ಮಾತನ್ನು ಹೊರ ಹಾಕಿತ್ತು… ‘ಇಲ್ವೆ ರಾಗಿ.. ಇದು ದೇವರ ಕರುಣೆಗಿಂತ, ಪ್ರಹ್ಲಾದನ ಶಾಪ ಕಣೆ.. ನಮ್ಮ ಪರಿಸ್ಥಿತಿ ಹೇಗೆ ಇದ್ರು ಅವತ್ತು ಅನ್ಯಾಯವಾಗಿದ್ದು ಮಾತ್ರ , ಅವನಿಗೆ ಅಲ್ವೇನೆ ? ಅದಕ್ಕೆ ನಮ್ಮನ್ನ ಕ್ಷಮಿಸ್ತಿಲ್ಲ.. ಅವನು..’

‘ಪುಶೀ.. ಆವತ್ತು ಪರಿಸ್ಥಿತಿ ಹಾಗಿತ್ತು.. ನಮಗೆ ಬೇರೆ ದಾರಿನೆ ಇರ್ಲಿಲ್ಲ.. ನಾವಾಗ ಅಸಹಾಯಕರಾಗಿದ್ದೆವು.. ಜೊತೆಗೆ ಆ ಕಾರಣಕ್ಕೆ ಈಗಲು ಪಶ್ಚಾತ್ತಾಪದಿಂದ ಕ್ಷಮೆ ಕೇಳ್ತಾನೆ ಇದೀವಿ ಅಲ್ವಾ? ಅವನು ಕ್ಷಮಿಸೋದಿಲ್ಲ ಅನ್ನೊ ಯೋಚನೆ, ಆಲೋಚನೆ ಬಿಡು.. ದೇವರ ಮೇಲೆ ಭಾರ ಹಾಕಿ ಮುಂದಿನದನ್ನು ನೋಡೋಣ..’ ಎಂದಳು ರಾಗಿಣಿ..
‘ಇನ್ನು ಸರಿಯಾಗಿ ಲೆಕ್ಕ ಹಾಕಿದರೆ ಮುಂದಿನ ಸೋಮವಾರಕ್ಕೆ ಸರಿಯಾಗಿ ಹದಿಮೂರು ವರ್ಷ ತುಂಬುತ್ತದೆ…’

‘ಅದಕ್ಕೆ? ನಿನ್ನ ಮನಸಿನಲ್ಲಿ ಏನೊ ಇರುವಂತಿದೆ ?’

‘ಆ ದಿನ ಒಂದು ಸಮಾರಾಧನೆಯ ತರ ಕಾರ್ಯ ಮಾಡಿ, ಏನಾದರು ಶಾಂತಿ ಮಾಡಿಸೋಣವ ಅಂತ? ಆಗಲಾದರು ಅವನಿಗೆ ಸ್ವಲ್ಪ ಸಮಾಧಾನವಾಗಬಹುದು.. ನಮಗು ಸ್ವಲ್ಪ ನೆಮ್ಮದಿ ಸಿಗುತ್ತೆ..’

‘ಪುಶೀ.. ಭೌತಿಕವಾಗಿ ಇರದಿದ್ದವರ ಮರಣೋತ್ತರ ಕ್ರಿಯಾ ಕರ್ಮ ಮಾಡಿಸೋದ? ಏನೊ ಅಸಂಗತ ಅನ್ಸೋಲ್ವಾ? ಈ ಯೋಚನೆ ಯಾಕೆ ಬಂತು ಈಗ..’ ತುಸು ಆತಂಕದ ದನಿಯಲ್ಲಿ ಕೇಳಿದಳು ರಾಗಿಣಿ..

‘ಸರಿಯೊ ತಪ್ಪೊ ನನಗೆ ಗೊತ್ತಿಲ್ಲ ರಾಗಿ.. ನನ್ನ ಮಟ್ಟಿಗೆ ಪ್ರಹ್ಲಾದ ಜೀವವಿದ್ದ ಸೃಷ್ಟಿ.. ಆ ಜೀವದ ಅಂತ್ಯಕ್ಕೆ ಸರಿಯಾದ ಗತಿ ಕಾಣಿಸದೆ ಇದ್ದದ್ದಕ್ಕೋ ಏನೊ, ಅವನು ದಿನಾ ಬಂದು ಕಾಗೆಯ ರೂಪದಲ್ಲಿ ಆರ್ತನಾದ ಮಾಡ್ತಾ ಇರ್ತಾನೆ ಅನ್ಸುತ್ತೆ.. ಆ ಆತ್ಮಕ್ಕೆ ಸ್ವಲ್ಪ ಮುಕ್ತಿ ಸಿಕ್ಕಿದ್ರೆ, ಆಗ ನಮಗೆ ಶಾಪ ಸ್ವಲ್ಪ ಕಮ್ಮಿಯಾಗುತ್ತೆ ಅನ್ನೊ ಆಸೆ ಕಣೆ..’

‘ಹಾಗಲ್ಲ ಪುಶೀ.. ಸಂತರ್ಪಣೆ, ಸಮಾರಾಧನೆ ಮಾಡಬೇಕು.. ಯಾರಿಗು ಗೊತ್ತಿರದ ಎಲ್ಲಾ ಹಿನ್ನಲೆ ವಿವರಿಸಬೇಕು.. ಅದನ್ನೆಲ್ಲ ಯೋಚನೆ ಮಾಡಿದ್ದಿಯಾ?’

‘ಹೂಂ.. ಯೋಚಿಸಿದ್ದೀನಿ ರಾಗಿ.. ಯಾರಾದರು ಪುರೋಹಿತರನ್ನ ಕರೆಸಿ ಮನೆಯಲ್ಲೆ ಶ್ರಾದ್ಧದ ಕಾರ್ಯ ಮಾಡಿಸಿ, ನಂತರ ಅನ್ನ ಸಂತರ್ಪಣೆ ಇಟ್ಕೊಂಡುಬಿಡಬಹುದು.. ಏನಂತೀಯಾ?’ ಕೇಳಿದ ಪುಲಿಕೇಶಿ. ‘ರಾಗಿ.. ನಿನಗೆ ಈಗಲೇ ಸುಸ್ತಾಗಿದೆ.. ಮಲಕ್ಕೊ.. ಸ್ವಲ್ಲ ನಿರಾಳವಾದ ಮೇಲೆ ಯೋಚನೆ ಮಾಡಿ ಹೇಳು..’ ಎನ್ನುತ್ತ ಮೇಲೆದ್ದ..

ಅವನತ್ತ ಹೋಗುತ್ತಲೆ, ಮತ್ತೆ ನಿದ್ರೆಗೆ ಮರಳಲು ಮುಷ್ಕರ ಹೂಡಿದ ಮನಸಿನ ಗಾಲಿ ಹಳೆಯ ನೆನಪುಗಳನ್ನು ಕೆದಕುತ್ತ, ಒಂದೊಂದನ್ನೆ ಮೆಲುಕು ಹಾಕತೊಡಗಿತು..

ಅದೇ ತಾನೆ ಕಾಲೇಜು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ದಿನಗಳು, ಟ್ರೈನಿಯಾಗಿ. ಅಲ್ಲೆ ಪುಲಿಕೇಶಿಯ ಪರಿಚಯವಾಗಿದ್ದು.. ಸದಾ ಯಾವುದಾದರೊಂದು ಚಟುವಟಿಕೆಯಲ್ಲಿ ನಿರತ.. ಆಗಾಗ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಅವನ ಕೈವಾಡ ಎದ್ದು ಕಾಣುತ್ತಿತ್ತು.. ಅಂತದ್ದೊಂದು ಸಂಧರ್ಭದಲ್ಲೆ ರಾಗಿಣಿಗು ಪರಿಚಯವಾಗಿದ್ದು.. ‘ಋತು ಸಂಹಾರ’ ದೃಶ್ಯ ರೂಪಕದ ಹಿನ್ನಲೆ ವ್ಯವಸ್ಥೆಯ ತಂಡದಲ್ಲಿದ್ದ ಇಬ್ಬರು ಒಟ್ಟಾಗಿ ಸಿದ್ದತೆಯ ಉಸ್ತುವಾರಿ ನೋಡಿಕೊಂಡಿದ್ದರು. ಆ ಪರಿಚಯ ಹೆಚ್ಚಿಸಿದ ಸಲಿಗೆ, ಗೆಳೆತನವಾಗಿ, ಗೆಳೆತನ ನಿಧಾನವಾಗಿ ಪ್ರೇಮಾನುರಾಗವಾಗಲು ತಡವಾಗಲಿಲ್ಲ.

ದಿನ ಕಳೆದಂತೆ ಇಬ್ಬರ ಅನ್ಯೋನ್ಯತೆಯು ಬೆಳೆಯುತ್ತ ಹೋಗಿ ನಂಬಿಕೆ, ವಿಶ್ವಾಸ ಬಲವಾದಾಗ ಅದೊಂದು ದಿನ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ ಪುಲಿಕೇಶಿ. ಪ್ರೇಮಾರಾಧನೆಯ ಭಾವದಲ್ಲಿ ಮುಳುಗಿದ್ದ ರಾಗಿಣಿಗು ಆ ನಿರೀಕ್ಷೆಯೇನೊ ಇತ್ತು.. ಜೊತೆಗೆ ತಮ್ಮಿಬ್ಬರಿಗು ಮದುವೆಯಾಗಲು ಇರುವ ಅಡ್ಡಿ ಆತಂಕಗಳ ಕಲ್ಪನೆಯು ಇತ್ತು.. ಎಲ್ಲಕ್ಕಿಂತ ಮುಖ್ಯವಾಗಿ ಜಾತಿಯ ಪ್ರಶ್ನೆ.. ಈಗಾಗಲೆ ಎರಡು ಮೂರು ವರ್ಷದ ಒಡನಾಟದಲ್ಲಿ ಇಬ್ಬರ ಕುಟುಂಬಗಳ ಬಗ್ಗೆಯು ಚೆನ್ನಾಗಿ ಅರಿತಿದ್ದಾರೆ.. ಹೀಗಾಗಿ ಮುಂದಿನ ಹಾದಿ ಸುಗಮವಲ್ಲ ಎಂದವರಿಗೆ ಚೆನ್ನಾಗಿ ಗೊತ್ತಿತ್ತು..

‘ಪುಶೀ.. ಮದುವೆ ವಿಷಯವೇನೊ ಸರಿ.. ಆದರೆ ನಮ್ಮ ಮನೆಯವರಂತು ಇದಕ್ಕೆ ಒಪ್ಪೋದು ಅನುಮಾನ.. ಜಾತಿ ಬೇರೆ ಅಂಥ ಗಲಾಟೆ ಆಗುತ್ತೆ..’ ಎಂದಳು ರಾಗಿಣಿ.

‘ನಮ್ಮ ಮನೇಲು ಅದೇ ಕಥೆ ರಾಗಿ.. ನನ್ನ ಹಿಂದೆ ಮುಂದೆ ಇನ್ನೂ ಮದುವೆಯಾಗದ – ಒಬ್ಬ ಅಕ್ಕ, ಒಬ್ಬಳು ತಂಗಿ.. ಅವರ ಭವಿಷ್ಯ ಸಹ ಆಲೋಚಿಸಬೇಕು.. ಆದರೆ, ನನ್ನ ನಿರ್ಧಾರ -ಮದುವೆಯಾಗೋದಾದ್ರೆ ನಿನ್ನನ್ನು ಮಾತ್ರ..’ ಆ ಮಾತು ಆತ್ಮವಿಶ್ವಾಸವನ್ನು ತುಂಬಿದರು, ವಾಸ್ತವದ ಹಿನ್ನಲೆಯಲ್ಲಿ ತನ್ನ ಅನಿಸಿಕೆಯನ್ನು ಮುಂದಿಟ್ಟಳು..

‘ಪುಶೀ.. ನನಗು ಒಬ್ಬಳು ಅಕ್ಕ ಇದ್ದಾಳೆ.. ನಾನೇನೇ ಹೆಜ್ಜೆ ಹಾಕಿದರು ಅವಳ ಭವಿಷ್ಯಕ್ಕೆ ತೊಡಕಾಗಬಾರದು . ನಾವಿಬ್ಬರು ಸ್ವಲ್ಪ ಕಾದು ನಂತರ ಮದುವೆ ವಿಷಯ ಆಲೋಚಿಸುವುದು ಸರಿಯೆನಿಸುತ್ತದೆ.. ಅವರ ಮದುವೆಯಾದ ಮೇಲೆ, ನಾವಿಬ್ಬರು ಮದುವೆಯಾದರೆ, ಕನಿಷ್ಠ ಮನಸಿನಲ್ಲಿ ಗಿಲ್ಟೀ ಫೀಲಿಂಗ್ ಕಡಿಮೆ ಇರುತ್ತದೆಯೇನೊ..?’

‘ರಾಗೀ.. ಕಾಯುವುದಕ್ಕೇನೊ ನನಗು ಅಡ್ಡಿಯಿಲ್ಲ.. ಹೇಗು ನಾವಿಬ್ಬರು ನಮ್ಮ ಕೆರಿಯರ್ ಮೇಲೆ ಗಮನ ಹರಿಸಬೇಕಲ್ಲ..? ಆದರೆ ಇದಕ್ಕೆಷ್ಟು ಕಾಲ ಕಾಯಬೇಕೊ ಎನ್ನುವ ಆತಂಕ ಅಷ್ಟೆ..’ ನುಡಿದ ಪುಲಿಕೇಶಿ..

‘ಪುಶೀ.. ನಾವಿಬ್ಬರು ಮಾನಸಿಕವಾಗಿ ದಂಪತಿಗಳಾಗಿಬಿಟ್ಟಿದ್ದೇವೇನೊ ಅನಿಸುತ್ತದೆ ಎಷ್ಟೋ ಬಾರಿ.. ಜೊತೆಗೆ, ಈ ದಿನ ನೀನು ಬಂದು ಮದುವೆ ವಿಷಯ ಎತ್ತಿದ್ದೆ, ನನಗೆ ನಿನ್ನ ಮೇಲಿನ ಪ್ರೀತಿ , ನಂಬಿಕೆ ಇನ್ನು ಅಧಿಕವಾದಂತಾಗಿದೆ.. ನಾನಂತು ನಂಬಿ ಕಾಯಲು ಸಿದ್ಧ.. ಆ ಸಮಯದಲ್ಲೆ ಯಾವುದಾದರು ಮನೆ ಆಥವಾ ಅಪಾರ್ಟ್ಮೆಂಟ್ ಖರೀದಿಸಲು ನೋಡೋಣ. ಆಗ ಮದುವೆಯ ಹೊತ್ತಿಗೆ ಒಂದು ನೆಲೆ ಕಂಡುಕೊಂಡಂತಾಗುತ್ತದೆ..’ ಎಂದಳು..

ಅವಳ ಮಾತು ಅವನಿಗು ಸರಿಯೆನಿಸಿ ಆಗಲೆಂಬಂತೆ ಸಮ್ಮತಿ ಸೂಚಿಸಿದ್ದ.. ಇದಾದ ಮೇಲೆ ಎರಡು ವರ್ಷಗಳು ಉರುಳುವ ಹೊತ್ತಿಗೆ ಇಬ್ಬರ ಅಕ್ಕಂದಿರ ಮದುವೆಯು ಮುಗಿದಿತ್ತು.. ಇನ್ನುಳಿದಿದ್ದು ತಂಗಿಯೊಬ್ಬಳ ವಿವಾಹ.. ಅವಳಿನ್ನು ಪದವಿ ಕಾಲೇಜಿನ ಎರಡನೆ ವರ್ಷದಲ್ಲಿದ್ದ ಕಾರಣ, ಇನ್ನು ಎರಡು ವರ್ಷಗಳು ಕಾಯಬೇಕಿತ್ತು.. ಆ ನಡುವೆಯೆ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿಯೂ ಆಗಿತ್ತು.. ಸದ್ಯಕ್ಕೆ ರಾಗಿಣಿ ಅಲ್ಲಿಯೆ ವಾಸ ಮಾಡುವುದೆಂದೂ ನಿರ್ಧರಿಸಿಕೊಂಡಿದ್ದರು.. ಅಪಾರ್ಟ್ಮೆಂಟಿನಲ್ಲಿ ಸ್ವತಂತ್ರವಾಗಿದ್ದ ರಾಗಿಣಿಯನ್ನು ಬೇಕೆಂದಾಗ ಸಂಧಿಸಬಹುದಿತ್ತು. ವಾರಾಂತ್ಯದಲ್ಲಿ ಅವರಿಬ್ಬರು ಅಪಾರ್ಟ್ಮೆಂಟಿನಲ್ಲಿ ಆರಾಮವಾಗಿ ಕಾಲ ಕಳೆಯುವುದು ಸಾಧ್ಯವಾಗಿತ್ತು..

ನಿಜವಾದ ಎಡವಟ್ಟಾದದ್ದು ಅಲ್ಲಿಂದಲೆ..!

ಯಾವಾಗ ಅಪಾರ್ಟ್ಮೆಂಟಿನ ಏಕಾಂತದ ಭೇಟಿ ಸಾಧ್ಯವಾಯಿತೊ, ಅದು ಹೆಚ್ಚಿನ ಖಾಸಗಿ ಸಾಮೀಪ್ಯವನ್ನು ಒದಗಿಸಿತ್ತು.. ಅದೊಂದು ದಿನ, ನಿಯಂತ್ರಣದ ಗೆರೆಯನ್ನು ಮೀರಿ ದೈಹಿಕ ಸಾಂಗತ್ಯ ನಡೆದು ಹೋಯ್ತು – ಸತಿಪತಿಗಳೆಂದೆ ಅಂದುಕೊಂಡಿದ್ದ ಅವರ ಮಾನಸಿಕ ಸ್ಥಿತಿಯಿಂದಾಗಿ. ವಾಸ್ತವವಾಗಿ ಆಮೇಲೆ ಅವರಿಬ್ಬರ ಒಲವಿನ ಬಂಧ ಇನ್ನಷ್ಟು ಬಲವಾಯಿತೆನಿಸತೊಡಗಿ, ಆಗಾಗ ಸೇರುವ ಪ್ರಕ್ರಿಯೆಗೆ ನಾಂದಿ ಹಾಡಿಬಿಟ್ಟಿತ್ತು.. ಅಂದೊಂದು ಭಾನುವಾರ ಬಿಜಿನೆಸ್ ಟ್ರಿಪ್ ಮುಗಿಸಿ ಅಪಾರ್ಟ್ಮೆಂಟಿಗೆ ನೇರ ಬಂದಿದ್ದ ಪುಲಿಕೇಶಿ..

‘ಪುಶೀ.. ಸ್ವಲ್ಪ ಅವಸರದ ಮಾತಿದೆ. ವಿಷಯ ಸ್ವಲ್ಪ ಸಿರಿಯಸ್..’

‘ಏನದು ರಾಗಿ?’

‘ನನ್ನ ಮಂಥ್ಲಿ ನಿಂತು ಹೋಗಿದೆ.. ಮೂರು ತಿಂಗಳಿಂದ. ನಿನ್ನೆ ಕನ್ಫರ್ಮ್ ಆಯ್ತು…’

‘……..’ ಮಾತಿಲ್ಲದೆ ಅವಾಕ್ಕಾಗಿ ನಿಂತುಬಿಟ್ಟಿದ್ದ ಪುಲಿಕೇಶಿ!

ಆ ಗಳಿಗೆಯಲ್ಲಿ ಮದುವೆಯ ಹೆಜ್ಜೆ ಇಡುವಂತಿರಲಿಲ್ಲ.. ಮಗುವನ್ನು ಮುಕ್ತವಾಗಿ ಹೆರುವಂತೆಯು ಇರಲಿಲ್ಲ.. ದೂರದಲ್ಲಿದ್ದ ಮುಖ ಪರಿಚಯವಿರದ ಡಾಕ್ಟರೊಬ್ಬರನ್ನು ಭೇಟಿಯಾಗಿ ಚರ್ಚಿಸಿದಾಗ ‘ನೀವಿಬ್ಬರು ವಿದ್ಯಾವಂತರು.. ವಯಸಿಗೆ ಬಂದವರು.. ಹೆಣ್ಣಿನ ದೇಹಕ್ಕೆ ಅನಿವಾರ್ಯವಲ್ಲದ ಹೊರತು ಗರ್ಭಪಾತ ಒಳ್ಳೆಯದಲ್ಲ..ನೀವು ಮಗುವಿಗೆ ಜನ್ಮ ಕೊಡುವುದು ಒಳ್ಳೆಯದು.. ಗರ್ಭಪಾತವನ್ನೆ ನಿರ್ಧರಿಸುವ ಮುನ್ನ ಮತ್ತೊಮ್ಮೆ ಆಲೋಚಿಸಿ ನೋಡಿ’ ಎಂದಿದ್ದರು ಆ ವೈದ್ಯೆ

ಆ ಮಾತು ಅವರನ್ನ ಮತ್ತೊಮ್ಮೆ ಚಿಂತಿಸಲು ಪ್ರೇರೇಪಿಸಿತ್ತು.. ಆದರೆ ಆವೇಶದ ಉತ್ಸಾಹವೆಲ್ಲ ಇಳಿದ ಮೇಲೆ, ಮನೆಯ ವಾಸ್ತವದ ಸ್ಥಿತಿ ಎದುರು ನಿಂತಾಗ, ಮತ್ತೆ ಗರ್ಭಪಾತದ ನಿರ್ಧಾರಕ್ಕೆ ಮರಳಿದ್ದರು. ಮುಂದಿನ ಕೆಲವು ವಾರದಲ್ಲಿ ಆ ಪ್ರಕ್ರಿಯೆಯು ನಡೆದು ಹೋಗಿತ್ತು.. ಆದರೆ, ಆ ನಂತರ , ಬೆಳೆಯುತ್ತಿದ್ದ ಪಿಂಡವನ್ನು ತಾವೇ ಕಿವುಚಿ ಹಾಕಿದೆವೆಂಬ ಪಾಪ ಪ್ರಜ್ಞೆ ಮಾತ್ರ ಇಬ್ಬರನ್ನು ಭಾಧಿಸತೊಡಗಿತು..

ಕಾಲವುರುಳಿದಂತೆ ಇಬ್ಬರ ತೊಡಕುಗಳು ನಿವಾರಣೆಯಾದ ನಂತರ ತಮ್ಮ ಮದುವೆ ಪ್ರಸ್ತಾಪವನ್ನು ಮುಂದಿಟ್ಟರು.. ಅಂದುಕೊಂಡಂತೆ, ಎರಡು ಕಡೆಯು ನಕಾರಾತ್ಮಕವಾದ ಪ್ರತಿಕ್ರಿಯೆ ಬಂದಾಗ, ಅವರಿಬ್ಬರೆ ಕೆಲವು ಮಿತ್ರರ ಸಹಯೋಗದಿಂದ ಸರಳವಾಗಿ ವಿವಾಹವಾಗಿ ವಿಧ್ಯುಕ್ತವಾಗಿ ಹೊಸ ಬದುಕನ್ನು ಆರಂಭಿಸಿದ್ದರು.. ಆದರೆ ವಿಧಿ ಈಗ ಅವರ ಜೊತೆಗೆ ಆಟವಾಡಲು ಆರಂಭಿಸಿತ್ತು..ಮದುವೆಯ ನಂತರ ಎಷ್ಟೆ ಪ್ರಯತ್ನ ಪಟ್ಟರು ರಾಗಿಣಿಗೆ ತಾಯಾಗಲು ಸಾಧ್ಯವಾಗಿರಲಿಲ್ಲ.. ಪುಲಿಕೇಶಿಯಂತು ತಾವು ಮಾಡಿಸಿದ ಗರ್ಭಪಾತದ ಪಾಪವೆ, ತಮ್ಮನ್ನು ಹೀಗೆ ಕಾಡುತ್ತಿದೆಯೆಂದು ಪದೇ ಪದೇ ದುಃಖಿಸತೊಡಗಿದ.. ಅವನ ಮಾತು ಕೇಳುತ್ತ ರಾಗಿಣಿಗು ಭ್ರೂಣ ತೆಗೆಸಿದ ಪಾಪದ ಪರಿಣಾಮ ಎನ್ನುವುದೊಂದೆ ಸರಿ ಹೊಂದುವ ಉತ್ತರವಾಗಿ ಕಂಡು, ಅವಳೂ ಅನಾರೋಗ್ಯದಿಂದ ಹಾಸಿಗೆ ಹಿಡಿಯುವಂತೆ ಆಗಿತ್ತು. ಇದನ್ನೆಲ್ಲ ನೆನೆದ ರಾಗಿಣಿ, ಕೊನೆಗೆ ‘ಪುಶೀ ಅವನಿಷ್ಟದಂತೆ ಮಾಡಿಕೊಳ್ಳಲಿ’ ಎಂದು ನಿರ್ಧರಿಸಿಕೊಂಡಳು..

ಅಂದುಕೊಂಡಂತೆ ಶ್ರಾದ್ಧದ ಕಾರ್ಯಕ್ರಮವನ್ನೆಲ್ಲ ಮುಗಿಸಿ ನಿಟ್ಟುಸಿರು ಬಿಟ್ಟ ದಂಪತಿಗಳಿಬ್ಬರು ತುಸು ನಿರಾಳವಾದರು. ಈ ನಡುವೆ ಒಮ್ಮೆ ಮಹಡಿಯಿಂದ ಇಳಿಯುವಾಗ ಜಾರಿ ಬಿದ್ದ ರಾಗಿಣಿ ಅದರಿಂದ ಚೇತರಿಸಿಕೊಳ್ಳಲು ಹಲವಾರು ದಿನಗಳು ಹಿಡಿದಿತ್ತು.. ಜೊತೆಗೆ ಗರ್ಭಕೋಶದ ತೊಂದರೆಗಳು ಗೋಚರವಾಗಿ ಅದಕ್ಕು ಚಿಕಿತ್ಸೆ ಶುರುವಾಗಿತ್ತು.. ಅದೊಂದು ದಿನ ವೈದ್ಯರನ್ನು ಭೇಟಿಯಾಗಲು ಹೋದ ಪುಲಿಕೇಶಿಗೆ ತುಸು ಆಘಾತವೇ ಕಾದಿತ್ತು.. ಗರ್ಭಕೋಶದ ಸ್ಥಿತಿ ಹದಗೆಟ್ಟಿರುವುದರಿಂದ,, ಅದನ್ನು ತೆಗೆಸಿಬಿಡುವ ಸಲಹೆ ನೀಡಿದ್ದರು ವೈದ್ಯರು. ಅದರರ್ಥ ಅವರು ಮಕ್ಕಳಾಗುವ ಆಸೆಯನ್ನು ಸಂಪೂರ್ಣವಾಗಿ ತೊಡೆಯಬೇಕಿತ್ತು. ಅನಾಥಾಶ್ರಮದ ಮಗುವನ್ನು ದತ್ತು ಪಡೆಯುವ ಎಂದು ಮನವೊಲಿಸಿ ಅವಳನ್ನು ಒಪ್ಪಿಸಿದ್ದ ಅಂದು ರಾಗಿಣಿ ಅತ್ತಷ್ಟು, ಮತ್ತೆಂದು ಅತ್ತಿರಲಿಲ್ಲ..

ಅದನ್ನೆಲ್ಲ ಪ್ರಹ್ಲಾದನ ಮುಂದೆ ಹೇಳಿಕೊಂಡು ತಾನೂ ಅತ್ತಿದ್ದ ಪುಲಿಕೇಶಿ.. ಆ ಮಾತಿಗೆ ಎಂದಿನಂತೆ, ಪ್ರಹ್ಲಾದನ ‘ಕಾ ಕಾ..’ ಕಾಗುಣಿತವೆ ಉತ್ತರವಾಗಿತ್ತು.. ‘ಯಾಕೊ ಪ್ರಹ್ಲಾದ.. ಇನ್ನು ನಮ್ಮನ್ನ ಕ್ಷಮಿಸೊದಿಲ್ಲವೇನೊ..’ ಎಂದು ಕಣ್ಣೀರಿಟ್ಟಿದ್ದ ಪುಲಿಕೇಶಿ. ಈ ನಡುವೆಯೆ ಅನಾಥಾಶ್ರಮದ ಮಕ್ಕಳನ್ನು ನೋಡಲಾರಂಭಿಸಿದ್ದ.

ಅದಾಗಿ ಒಂದೆರಡು ತಿಂಗಳಲ್ಲೆ ಅನಾಥಶ್ರಮದಿಂದ ಕರೆ ಬಂದಿತ್ತು – ಆರು ತಿಂಗಳ ಹೊಸದೊಂದು ಹಸುಗೂಸು ದತ್ತಕ್ಕೆ ಸಿದ್ದವಿದೆಯೆಂದು.. ಹೆಚ್ಚು ಸಮಯ ವ್ಯರ್ಥ ಮಾಡದೆ ಅಲ್ಲಿಗೆ ಪ್ರಯಾಣಿಸಿ, ಮುದ್ದಾದ ಮಗುವನ್ನು ತನ್ನೊಡನೆ ಕರೆದುಕೊಂಡು ಬಂದ.. ಅದನ್ನು ಕಂಡೊಡನೆ ಮೊದಲಿಗೆ ಹೂವಿನಂತೆ ಅರಳಿದ್ದು ರಾಗಿಣಿಯ ಮುಖ..!

ಎಂದಿನಂತೆ ಮಾರನೆಯ ಬೆಳಿಗ್ಗೆ ಆ ಮಗುವನ್ನು ಕೈಯಲ್ಲಿ ಎತ್ತಿಕೊಂಡೆ, ಕಿಟಕಿಯ ಎದುರಿನ ಮರದತ್ತ ಬಂದು ನಿಂತ ಪುಲಿಕೇಶಿ, ತನ್ನ ಕರ್ತವ್ಯವೆಂಬಂತೆ ವರದಿಯನ್ನೊಪ್ಪಿಸತೊಡಗಿದ.. ‘ನೋಡೊ ಪ್ರಹ್ಲಾದ.. ಈ ಮಗು ನಿನ್ನ ಪ್ರತಿರೂಪ. ನಿನ್ನದೆ ಹೆಸರಿಟ್ಟಿದ್ದೀವಿ. ನೀನೆ ಇದ್ದಿದ್ದರೆ ಹೇಗೆ ನೋಡ್ಕೊತಿದ್ವೊ ಹಾಗೆ ನೋಡ್ಕೋತಿವಿ.. ಇನ್ನಾದರು ನಮ್ಮನ್ನ ಕ್ಷಮಿಸಿಬಿಡಪ್ಪ..’ ಎಂದ, ಎಂದಿನ ಹಾಗೆ ‘ಕಾ ಕಾ‘ ಮಾರುತ್ತರವನ್ನು ನಿರೀಕ್ಷಿಸುತ್ತ..

ಆದರೆ ಅಂದೇಕೊ ಯಾವ ಮಾರುತ್ತರವು ಬರಲಿಲ್ಲ.. ಬದಲಿಗೆ ಕೈಲಿದ್ದ ಕೂಸು ಇದ್ದಕ್ಕಿದ್ದಂತೆ ಕಿಲಕಿಲನೆ ನಕ್ಕಿತು. ಅಚ್ಚರಿಗೊಂಡ ಪುಲಿಕೇಶಿ ಮತ್ತೆ ಪುನರುಚ್ಚರಿಸಿದ.. ಆದರೆ ಇಂದೇಕೊ ಮಾರುತ್ತರ ಬರುತ್ತಿಲ್ಲ.. ಬದಲಿಗೆ ಪ್ರತಿ ಬಾರಿ ಮಗು ಕಿಲಕಿಲ ನಗುತ್ತಿದೆ – ತಾನೆ ಉತ್ತರಿಸುವಂತೆ.. ಇದೇ ಪುನರಾವರ್ತನೆಯಾದಾಗ ತಟ್ಟನೆ ಏನೊ ಅನಿಸಿತು ಪುಲಿಕೇಶಿಗೆ.. ಈ ಬಾರಿ ಮಾತನಾಡಿ, ಮರದ ಬದಲು ಮಗುವಿನತ್ತ ನೋಡಿದ.. ನಿರೀಕ್ಷಿಸಿದಂತೆ ಆ ಮಗುವಿನ ಕಿಲಕಿಲ ನಗುವೆ ಉತ್ತರ ಕೊಟ್ಟಿತು ಈ ಬಾರಿಯು..!

‘ರಾಗೀ… ಪ್ರಹ್ಲಾದ ನಮ್ಮನ್ನು ಕ್ಷಮಿಸಿಬಿಟ್ಟ ಕಣೆ.. ನಮ್ಮ ಕಂದನೊಳಗೆ ಸೇರಿಕೊಂಡು ಬಿಟ್ಟಿದ್ದಾನೆ.., ನೀನೆ ನೋಡು..’ ಎನ್ನುತ ಉತ್ಕಟಾವೇಶದಿಂದ ರಾಗಿಣಿಯತ್ತ ಓಡಿದ – ಏನನ್ನೊ ಅನ್ವೇಷಿಸಿ, ದಿಗ್ವಿಜಯ ಪಡೆದ ಉತ್ಸಾಹದಲ್ಲಿ..

ಈಗಲು ಪ್ರತಿದಿನ ಅದೇ ಕಿಟಕಿಯ ಮುಂದೆ ಬಂದು ನಿಲ್ಲುತ್ತಾನೆ ಪುಲಿಕೇಶಿ – ಆ ಮಗುವಿನ ಜೊತೆಗೆ.. ಮೊದಲಿನಂತೆ ಈಗಲು ಮಾತನಾಡುತ್ತಾನೆ.. ಆದರೀಗ ಆ ಮರದಿಂದ ಯಾವ ಪ್ರತಿಕ್ರಿಯೆಯು ಬರುವುದಿಲ್ಲ.. ಬದಲಿಗೆ ಪಕ್ಕದಲ್ಲಿದ್ದ ಮಗುವಿನ ಕಿಲಕಿಲ ನಗು ಅಥವಾ ತೊದಲು ಮಾತಿನ ಉತ್ತರ ಬರುತ್ತದೆ..

ಹಾಗಾದಾಗೆಲ್ಲ – ಪುಲಿಕೇಶಿಯ ಮೊಗದಲ್ಲೊಂದು ಸಂತೃಪ್ತಿಯ ಕಿರುನಗೆ ಅರಳುವುದನ್ನು ಗಮನಿಸಿ ತಾನೂ ಮುಗುಳ್ನಗುತ್ತಾಳೆ ರಾಗಿಣಿ.. ಅವರಿಬ್ಬರಿಗು ಉಂಟಾದ ಸಂತಸ ಆ ಮಗುವಿನ ಕೆನ್ನೆಗಳ ಮೇಲೆ ಮುದ್ದಿನ ಮುತ್ತಾಗಿ ಮಾರ್ಪಟ್ಟು ಆ ಮಗು ಮತ್ತೆ ಕುಲುಕುಲು ನಗುತ್ತದೆ – ತಾನು ಕಳೆದುಕೊಂಡುದನೆಲ್ಲ ಮತ್ತೆ ಪಡೆದುಕೊಂಡ ನಿರಾಳತೆಯ ಭಾವದಲ್ಲಿ..!

(ಮುಕ್ತಾಯ)

  • ನಾಗೇಶ ಮೈಸೂರು

ಸಣ್ಣಕಥೆ: ಅರಿವು


ನನ್ನದೊಂದು ಸಣ್ಣ ಕತೆ ‘ಅರಿವು’ – ಇಂದಿನ ವಿನಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ ವಿನಯವಾಣಿಯ ವಾಯ್.ಎಂ. ಕೋಲಕಾರ ಮತ್ತು ಪತ್ರಿಕಾ ಸಿಬ್ಬಂದಿ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು!🙏🙏🙏

ಸಣ್ಣಕಥೆ: ಅರಿವು


ಅವನಿಗೆ ದಿಕ್ಕೆ ತೋಚದಂತೆ ಆಗಿಹೋಗಿತ್ತು. ನಿರಂತರವಾಗಿ ಕಾಡುತ್ತಿದ್ದ ಆ ಅಸಂಖ್ಯಾತ ಪ್ರಶ್ನೆಗಳಿಂದ ಹೊರಬರಲಾಗದೆ ತತ್ತರಿಸಿಹೋಗಿದ್ದ..

ಎಲ್ಲಕ್ಕಿಂತ ದೊಡ್ಡ ತೊಡಕೆಂದರೆ, ಆ ಆಲೋಚನೆಯನ್ನು ಬೇಡದ್ದೆಂದು ಬದಿಗೆ ಸರಿಸಲು ಸಹ ಸಾಧ್ಯವಿರಲಿಲ್ಲ.. ಅದೇನು ಕಾರಣಕ್ಕೊ ಏನೊ – ಅದು ಪದೇ ಪದೇ ಗಿರಕಿ ಹೊಡೆಯುತ್ತ, ಅವನ ಚಿತ್ತವನ್ನು ಆವರಿಸಿಕೊಂಡು ಕಾಡುತ್ತಿತ್ತು.. ದೂರ ದೂಡಲೆತ್ನಿಸಿದಷ್ಟು, ಆ ಯತ್ನದ ಗುರುತ್ವವೆ ಅದರ ಸಾಂದ್ರತೆಯನ್ನು ವೃದ್ಧಿಸಿ ಮತ್ತಷ್ಟು ತೀವ್ರವಾಗಿ ಕಾಡುವಂತೆ ಮಾಡುತ್ತಿತ್ತು.. ಹೊರಬರಲಾಗದ ಚಕ್ರತೀರ್ಥವೊಂದರ ಸುಳಿಗೆ ಸಿಕ್ಕಂತ ಪಾಡಾಗಿ ತಲೆಯೆ ಸಿಡಿದು ಹೋಗುವುದೇನೊ ಅನಿಸಿ, ಆ ಒತ್ತಡವೆ ಮತ್ತಾರದೊ ಮೇಲಿನ ಆಕ್ರೋಶವಾಗಿಯೊ, ಸುತ್ತಲಿನ ವಸ್ತುಗಳ ಮೇಲಿನ ಅಬ್ಬರದ ಧಾಳಿಯಾಗಿಯೊ ಪರಿಣಮಿಸಿ – ಬದುಕೆ ಬೇಸರವೇನಿಸುವಷ್ಟರ ಮಟ್ಟಿಗೆ ರೋಸಿ ಹೋಗಿತ್ತು..

‘ಗೋಚರ, ನೀನು ನಿನ್ನ ಮೇಲಿನ ಹತೋಟಿ ಕಳೆದುಕೊಳ್ಳುತ್ತಿರುವೆ.. ಇದು ಹೀಗೆ ಮುಂದುವರೆದರೆ, ನಿನಗೆ ಮಾತ್ರವಲ್ಲ ನನಗೂ ಹುಚ್ಚು ಹಿಡಿದುಬಿಡುತ್ತದೆ..’ ಆತಂಕದ ದನಿಯಲ್ಲಿ ಹೇಳಿದಳು ನಿಷ್ಕಲ. ಇದು ಅದೆಷ್ಟನೆ ಬಾರಿಯೊ ಅವಳು ಹೇಳುತ್ತಿರುವುದು..

‘ನಿಷ್ಕಲಾ, ನಿನ್ನ ಕಾಳಜಿ ನನಗು ಅರ್ಥವಾಗುತ್ತದೆ.. ಆದರೆ ಇದೇಕೊ ನನ್ನ ಹತೋಟಿಗೆ ಸಿಗುತ್ತಿಲ್ಲ.. ನನಗು ಈ ಚಕ್ರಕ್ಕೆ ಸಿಕ್ಕಿಕೊಳಲು ಇಷ್ಟವಿಲ್ಲ.. ಆದರೆ ನನ್ನ ಮನಸು ತಂತಾನೆ ಆ ಹಾದಿ ಹಿಡಿದು ನಡೆದುಬಿಡುತ್ತದೆ.. ಅದು ಆರಂಭವಾಯ್ತೆಂದರೆ ಅಷ್ಟೆ – ಮುಂದೆ ಅದು ನನ್ನ ಹತೋಟಿಗೆ ಸಿಕ್ಕುವುದಿಲ್ಲ.. ಒಂದರ ಹಿಂದೆ ಒಂದರಂತೆ ಪುಂಖಾನುಪುಂಖವಾಗಿ, ಪ್ರವಾಹದಂತೆ ಹರಿಯತೊಡಗುತ್ತದೆ.. ಅದನ್ನು ತಾರ್ಕಿಕವಾಗಿ ಮುಗಿಸುವ ತನಕ ಮರಿ ಹಾಕಿದ ಬೆಕ್ಕಿನಂತೆ ಚಡಪಡಿಸುತ್ತಿರುತ್ತದೆ ಮನಸು.. ಅದನ್ನು ಮುಗಿಸಿ ನಿರಾಳವಾಯ್ತೆನ್ನುತ್ತಿದ್ದಂತೆ, ಮತ್ತೊಂದು ಹರಿದುಕೊಂಡು ಬಂದಿರುತ್ತದೆ, ಮೊದಲಿನದರ ಜಾಗದಲ್ಲಿ.. ಹೀಗೆ ಮುಂದುವರೆವ ಪ್ರಕ್ರಿಯೆಯ ಚಕ್ರದಲ್ಲಿ ಸಿಲುಕಿಬಿಟ್ಟರೆ ಹೊರಬರಲೆ ಆಗುವುದಿಲ್ಲ..’ ತನ್ನ ಅಳಲನ್ನು ಮತ್ತೆ ತೋಡಿಕೊಂಡ ಗೋಚರ..

‘ಆ ಮನಶಾಸ್ತ್ರಜ್ಞರ ಭೇಟಿಯಿಂದ ಏನು ಪ್ರಯೋಜನವಾಗಲಿಲ್ಲವಾ ? ಇದೇನೊ ‘ಒಸಿಡಿ’ ಅರ್ಥಾತ್ ‘ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸ್ಸಾರ್ಡರ್’ ತರದ ನ್ಯೂನತೆ ಅಂಥ ಹೇಳಿ, ಕೌನ್ಸಲಿಂಗ್ ಸೆಶನ್ಸ್, ಥೆರಪಿ ಎಲ್ಲಾ ಶುರು ಮಾಡಿದ್ದರಲ್ಲ..? ಅದ್ಯಾವುದು ಉಪಯೋಗಕ್ಕೆ ಬರಲಿಲ್ಲವೆ?’

‘ಅಯ್ಯೊ ಅದ್ಯಾವುದೊ ಮಾತ್ರೆ ಕೂಡ ಕೊಟ್ಟಿದ್ದರು – ಅದನ್ನು ತೆಗೆದುಕೊಳ್ಳುತ್ತಿದ್ದ ಹಾಗೆ ಬೇರೆ ತರದ ಸೈಡ್ ಎಫೆಕ್ಟುಗಳು ಶುರುವಾದವು.. ಅಲ್ಲೆ ಆಸ್ಪತ್ರೆಯಲ್ಲಿ ಒಂದು ತಿಂಗಳು ಅಡ್ಮಿಟ್ಟು ಆಗಿದ್ದು ಬಂದೆ – ಆದರು ಸುಖವಿಲ್ಲ..’ ನಿರಾಶೆಯ ದನಿಯಲ್ಲಿ ತನ್ನ ದುಃಖ ತೋಡಿಕೊಂಡ ಗೋಚರ..

ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ನಿಷ್ಕಲ, ಏನೋ ಯೋಚಿಸಿದವಳಂತೆ ತಟ್ಟನೆ ನುಡಿದಳು..

‘ಗೋಚರ.. ನಾನೊಂದು ಮಾತು ಹೇಳ್ತಿನಿ .. ಹಾಗೆ ಮಾಡೋಣವಾ..?’

‘ಏನದು..?’

‘ನನ್ನ ಮೇಲೆ ನಂಬಿಕೆ ಇದೆಯಲ್ಲವೆ ನಿನಗೆ? ಲಾಜಿಕ್ ಇಲ್ಲ, ಅದೂ ಇದೂ ಅಂಥ ನಿರಾಕರಿಸುವುದಿಲ್ಲ ಎಂದರೆ ಮಾತ್ರ ಹೇಳುತ್ತೇನೆ..’

‘ಸರಿ ಹೇಳು.. ನನಗೆ ನಿನ್ನ ಬಿಟ್ಟು ಬೇರೆ ಯಾರು ತಾನೆ ಇದಾರೆ?’

‘ನನ್ನ ಸ್ನೇಹಿತರೊಬ್ಬರ ಮಗನಿಗೆ ಇದೇ ರೀತಿ ಬಗೆಹರಿಸಲಾಗದ ಸಮಸ್ಯೆ ಕಾಡಿತ್ತಂತೆ.. ಅವರು ಎಲ್ಲಾ ಚಿಕಿತ್ಸೆ ಪ್ರಯತ್ನ ಮಾಡಿದರು ಸಫಲವಾಗದೆ, ಕೊನೆಗೆ ಹಿಮಾಲಯದ ತಪ್ಪಲ ಆಶ್ರಮವೊಂದರ ಗುರುಗಳೊಬ್ಬರನ್ನು ಭೇಟಿ ಮಾಡಿ ಪ್ರಯತ್ನಿಸಿದರಂತೆ.. ಅದಾದ ಕೆಲವೆ ದಿನಗಳಲ್ಲಿ ಪೂರ್ಣ ಗುಣವಾಯಿತಂತೆ..’

‘ಓಹ್.. ಆ ಗುರುಗಳ ಹತ್ತಿರ ನಾವೂ ಹೋಗಬೇಕೆನ್ನುತ್ತಿಯಾ? ನಾವು ಹಿಮಾಲಯಕ್ಕೆ ಹೋಗಿ ಅವರನ್ನು ನೋಡಲು ನಿಜಕ್ಕು ಸಾಧ್ಯವೆ..? ಅದೆಲ್ಲ ಆಗದ ಹೋಗದ ಮಾತು..’

‘ಇಲ್ಲ ಗೋಚರ.. ಮುಂದಿನ ವಾರ ಅವರೆ ಇಲ್ಲಿಗೆ ಬರುತ್ತಿದ್ದಾರಂತೆ ಯಾವುದೊ ಪೂಜೆಯ ಸಲುವಾಗಿ.. ಆಗ ಸಂಧಿಸಿ ಮಾತನಾಡಬಹುದು ಅನ್ನೊ ಆಸೆ.. ಅಪಾಯಿಂಟ್ಮೆಂಟು ಕೊಡಿಸ್ತೀನಿ ಬೇಕಾದ್ರೆ ಅಂಥ ಪ್ರಾಮೀಸ್ ಮಾಡಿದಾಳೆ ನನ್ನ ಗೆಳತಿ?’

ಗೋಚರ ಅರೆಗಳಿಗೆ ಮಾತಾಡದೆ ತಲೆ ತಗ್ಗಿಸಿಕೊಂಡು ಯೋಚಿಸುತ್ತಿದ್ದ.. ನಂತರ ‘ಸರಿ.. ಇದೂ ಆಗಿಬಿಡಲಿ ಬಿಡು.. ಹೇಗೂ ಎಲ್ಲಾ ಸಿದ್ದ ಮಾಡಿಕೊಂಡೆ ಬಂದಿದ್ದಿಯಾ ಅನಿಸುತ್ತೆ..’ ಎಂದು ಮಾತು ಮುಗಿಸಿದ್ದ..


ಹೆಸರು ಬಾಬಾ ಗುರು ಗಂಭೀರನಾಥ್ ಎಂದಿದ್ದರು ಸದಾ ನಗುತ್ತಲೆ ಇರುವ ಹಸನ್ಮುಖಿ ಆ ಗುರೂಜಿ.. ಎದುರಿಗೆ ಕುಳಿತಿದ್ದ ಗೋಚರ, ನಿಷ್ಕಳರತ್ತ ತಮ್ಮ ಸಮ್ಮೋಹಕ ಮಂದಹಾಸವನ್ನು ಬೀರುತ್ತಲೆ, ತಮ್ಮ ಮಾತು ಆರಂಭಿಸಿದರು..

‘ಗೋಚರನಿಗು ಅಗೋಚರ ವಿಷಯಗಳು ಕಾಡುತ್ತಿವೆಯೆ? ವಿಚಿತ್ರವಲ್ಲವೆ..? ನೋಡೋಣ, ನಮ್ಮಿಂದೇನಾದರು ಪರಿಹಾರ ಸಾಧ್ಯವೆ ಎಂದು.. ಮೊದಲಿಗೆ ಸಮಸ್ಯೆ ಏನೆಂದು ವಿಷದವಾಗಿ ವಿವರಿಸಿ..’ ಎಂದರು..

ಈ ಸಾರಿ ಗೋಚರನೆ ತನಗಾಗುವುದನ್ನೆಲ್ಲ ಸಾದ್ಯಂತವಾಗಿ ವಿವರಿಸಿದ.. ಸುಮಾರು ಹದಿನೈದು ಇಪ್ಪತ್ತು ನಿಮಿಷ ಅವನು ಹೇಳುವುದನ್ನೆಲ್ಲ ಕೇಳಿಸಿಕೊಂಡರು ಗುರೂಜಿ.. ನಡುವೆ ಮಾತಾಡದೆ ಬರಿಯ ಮುಖಭಾವದ ಅಂಗಚರ್ಯೆಯಲ್ಲೆ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತ, ಅವನಿಗೇ ಮಾತಾಡಲು ಬಿಟ್ಟರು.. ಅದಾದ ಮೇಲೆ ಅವನೊಡನೆ ಕೆಲವು ಹೆಚ್ಚುವರಿ ಪ್ರಶ್ನೆಗಳನ್ನು ಕೇಳಿದರು – ಅವನ ಮಾತಿನಿಂದ ಉದ್ಭವಿಸಿದ್ದ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ..

‘ಒಟ್ಟಾರೆ ನಿಮಗೆ ಇದ್ದಕ್ಕಿದ್ದಂತೆ ಎಲ್ಲ ವಿಷಯದ ಮೇಲು ಭೀತಿ, ಕಳವಳ ಉಂಟಾಗುತ್ತದೆ.. ಅಸಂಗತ ಊಹೆಗಳು, ಭೀಕರ ಕಲ್ಪನೆಗಳು ಹತೋಟಿ ಮೀರಿ ಧಾಳಿ ಮಾಡುತ್ತ ಆಕ್ರಮಿಸತೊಡಗುತ್ತವೆ.. ಅಲ್ಲವೆ..?’

‘ಹೌದು ಗುರೂಜಿ.. ಅಲ್ಲೆಲ್ಲೊ ಪ್ರವಾಹವಾದಾಗ, ಭೂಕಂಪವಾದಾಗ, ಚಂಡಮಾರುತವೆದ್ದಾಗ – ತಟ್ಟನೆ ‘ಅದು ಇಲ್ಲಿಯು ಆಗಿಬಿಡುತ್ತದೇನೊ?’ ಎನ್ನುವ ಕಲ್ಪನೆ ಸುಳಿಯುತ್ತದೆ.. ಅದು ಹಾಗೆ ಬೆಳೆಯುತ್ತ ಹೋಗಿ ಆ ದುರಂತ ನಮ್ಮನ್ನೆಲ್ಲ ನಾಶ ಮಾಡಿಬಿಡುವುದೇನೊ ಅನ್ನೊ ಭೀತಿ ಆರಂಭವಾಗಿ, ಸ್ವಲ್ಪ ಹೊತ್ತಿನ್ಸ್ ನಂತರ – ಅದು ನಡೆದೇ ತೀರುತ್ತದೆ ಎನಿಸಲು ಆರಂಭವಾಗುತ್ತದೆ.. ಆಮೇಲೆ , ಈ ಪ್ರಕೃತಿಯೇಕೆ ಇಷ್ಟು ದುರ್ಬಲ? ಹೇಗೆ ಇಂಥದ್ದೆಲ್ಲ ಸಂಭವಿಸಲು ಬಿಡುತ್ತದೆ ಈ ಪ್ರಕೃತಿ? ಯಾಕದನ್ನೆಲ್ಲ ತಡೆಯುವುದಿಲ್ಲ? ಎಂದೆಲ್ಲ ಆಲೋಚನೆ ಶುರುವಾಗುತ್ತದೆ.. ಹೀಗೆ ಆರಂಭವಾದ ಚಿಂತನೆ ಕೊನೆಯಿಲ್ಲದ ಚಕ್ರದಂತೆ ಕಾಡತೊಡಗಿ ತಲೆಚಿಟ್ಟು ಹಿಡಿಸಿಬಿಡುತ್ತದೆ – ತಲೆಯೊಳಗ್ಯಾರೊ ಕುಳಿತು ಒಂದೇ ಸಮನೆ ಗಂಟೆ ಬಾರಿಸಿದಂತೆ..’ ವಿವರಿಸಿದ ಗೋಚರ..

‘ಇದು ಬರಿ ಅವಘಢಗಳು ಆದಾಗ ಮಾತ್ರ ಆಗುತ್ತದೆಯೆ? ‘

‘ಹಾಗೇನು ಇಲ್ಲ.. ಅವಘಢವಾದಾಗ ಅದೊಂದು ನೆಪವಾಗಿ ಈ ಪ್ರಕ್ರಿಯೆ ಶುರುವಾಗುತ್ತದೆ.. ಅದಿಲ್ಲದಿದ್ದಾಗ ಈ ಬ್ರಹ್ಮಾಂಡ ಇದ್ದಕ್ಕಿದ್ದಂತೆ ನಾಶವಾಗಿ ಹೋದರೆ? ನಾನು ಕುಳಿತಿರುವ ಕಟ್ಟಡ ಕುಸಿದು ಹೋದರೆ? ಹಾರುತ್ತಿರುವ ವಿಮಾನ ಸಿಡಿದು ಹೋದರೆ? ಯೋಜಿತವಾಗಿ ಕಾರ್ಯ ನಿರ್ವಹಿಸಬೇಕಾದ ಯಂತ್ರ ಹಾಗೆ ಮಾಡದೆ ಏರುಪೇರಾದರೆ..? ಹೀಗೆ ಅಸಂಖ್ಯಾತ ವಿಷಯಗಳು..’

‘ನೀನು ಮಾಡುತ್ತಿರುವ ಕೆಲಸವು ಯಶಸ್ವಿಯಾಗಿ ಮುಗಿಯುವುದೊ, ಇಲ್ಲವೊ ಎನ್ನುವ ಸಂಶಯವೂ ಬರುತ್ತದೇನು? ತಪ್ಪಾಗಿಬಿಟ್ಟರೆ? ಅಂದುಕೊಂಡ ಹಾಗೆ ನಡೆಯದಿದ್ದರೆ? ಸರಿಯಾದ ಗಳಿಗೆಯಲ್ಲಿ ನಂಬಿದವರು ಕೈ ಕೊಟ್ಟರೆ..? – ಹೀಗೆಲ್ಲ ಅನಿಸುತ್ತದೆಯೆ?’ ಕೇಳಿದರು ಗುರೂಜಿ..

‘ಹೌದು.. ಅದರಲ್ಲು ಪ್ರಾಜೆಕ್ಟಿನ ಕೆಲಸದಲ್ಲಂತು ಇನ್ನು ಹೆಚ್ಚು ಅನಿಸುತ್ತದೆ.. ನನ್ನ ಸಾಮರ್ಥ್ಯದ ಬಗೆಯೆ ಸಂಶಯ ಬರುವಂತೆ ಮಾಡುತ್ತದೆ..’ ಉತ್ತರಿಸಿದ ಗೋಚರ..

ಗುರುಗಳಿಗೆ ಅರ್ಥವಾಯ್ತು – ಇವನ ಮುಖ್ಯ ಸಮಸ್ಯೆ ನಂಬಿಕೆ ಮತ್ತು ಸಂಶಯಗಳಿಗೆ ಸಂಬಂಧಿಸಿದ್ದು.. ತನ್ನ ಪರಿಸರ ಮತ್ತು ತನ್ನ ಮೇಲೆ ಅವನಿಗೆ ನಂಬಿಕೆ ಬರಬೇಕು – ತನ್ಮೂಲಕ ಅದು ಹುಟ್ಟಿಸುವ ಸಂಶಯಗಳಿಗೆ ತಡೆ ಹಾಕಬಹುದು.. ಆದರೆ ಇದನ್ನು ಅವನ ಮನಸಿಗೆ ಸರಳವಾಗಿ ಅರ್ಥ ಮಾಡಿಸುವುದು ಹೇಗೆ ?

‘ಗೋಚರ, ನೋಡು ಆ ಕಲ್ಲಿದೆಯಲ್ಲ ? ಅದನ್ನೆತ್ತಿಕೊಂಡು ಆ ಮರದ ಮೇಲಿರುವ ಹಣ್ಣಿನತ್ತ ಎಸೆಯುತ್ತಿಯಾ?’ ಎಂದರು, ಎದುರಿಗೆ ಹಣ್ಣುಗಳಿಂದ ತುಂಬಿದ್ದ ಮರವನ್ನು ತೋರಿಸಿ. ಅದೇಕೆಂದು ಗೊತ್ತಾಗದಿದ್ದರು, ಅವರು ಹೇಳಿದಂತೆ ಮಾಡಿದ. ಆ ಕಲ್ಲು ಕೊಂಬೆಯೊಂದಕ್ಕೆ ತಗುಲಿ ಒಂದಷ್ಟು ಎಲೆಗಳ ಜೊತೆಗೆ ಒಂದೆರಡು ಸಣ್ಣ ಹಣ್ಣುಗಳನ್ನು ಕೆಳಗೆ ಬೀಳಿಸಿತ್ತು..

‘ ಸರಿ.. ಈ ಬಾರಿ ನೀನು ಕೂತಿರುವ ಭಂಗಿ ಬದಲಿಸಬೇಡ.. ಹಾಗೆಯೆ ನಡೆದುಕೊಂಡು ಹೋಗಿ ಆ ಹಣ್ಣು ಎತ್ತಿಕೊಂಡು ಬರುವೆಯಾ?’

‘ಅದು ಹೇಗೆ ಸಾಧ್ಯ ಗುರೂಜಿ? ಕೂತ ಭಂಗಿಯಲ್ಲಿ ಎದ್ದು ನಿಲ್ಲದೆ ನಡೆಯಲಾದರು ಹೇಗೆ ಸಾಧ್ಯ? ನಾನು ಕೂತ ಕಡೆಯಿಂದ ಎದ್ದು ನಡೆದು ಹೋದಲ್ಲದೆ ಅದನ್ನು ತರಲು ಸಾಧ್ಯವಾಗದು’ ಎಂದ ಗೋಚರ..

‘ಓಹ್ ಹೌದಲ್ಲವೆ? ಸರಿ ಹೇಗಾದರು ಆಯ್ತು.. ಆ ಹಣ್ಣು ಇಲ್ಲಿ ತಂದಿಡು..’ ಎಂದರು. ಕೂತಲ್ಲಿಂದ ಎದ್ದು ಹೋಗಿ ಅವರ ಮುಂದೆ ತಂದಿಟ್ಟ ಗೋಚರ..

‘ಗೋಚರ.. ಇದನ್ನು ಎತ್ತಿ ತಂದಿದ್ದು ಯಾರು? ಅರ್ಥಾತ್ ಯಾವ ಅಂಗ?’

‘ನನ್ನ ಕೈಗಳು ಗುರುಗಳೆ..’

‘ಕೈಗಳು ಅಲ್ಲಿಗೆ ನಡೆದು ಹೋದವೆ ?’

‘ಇಲ್ಲ.. ನಡೆದಿದ್ದು ಕಾಲುಗಳು..’

‘ಕಾಲು ಕೈಗಳಿಗೆ ಹಣ್ಣು ಕಾಣಿಸಿತೆ?’

‘ಕಾಣಿಸಿದ್ದು ಕಣ್ಣಿಗೆ, ಆಲೋಚಿಸಿದ್ದು ಮನಸು, ಅಲ್ಲಿಗೆ ಹೋಗಿ ತರುವಂತೆ ಲೆಕ್ಕಾಚಾರ ಮಾಡಿ ಆದೇಶ ನೀಡಿದ್ದು ಬುದ್ಧಿ, ಚಿತ್ತ ಇತ್ಯಾದಿ.. ನೀವು ಏನು ಹೇಳಲು ಹೊರಟಿರೊ ಗೊತ್ತಾಗಲಿಲ್ಲ ಗುರೂಜಿ..?’ ಸ್ವಲ್ಪ ಅಸಹನೆಯ ದನಿಯಲ್ಲಿ ನುಡಿದ ಗೋಚರ..

ಅವನ ಮಾತಿಗೆ ಸುಮ್ಮನೆ ಮುಗುಳ್ನಕ್ಕರು ಗುರೂಜಿ.. ‘ಗೋಚರ.., ನೀನೊಂದು ಹಣ್ಣು ಕೆಡವಿ ತರಬೇಕೆಂದರು ಎಷ್ಟೆಲ್ಲ ಅಂಗಗಳು ಕೆಲಸ ಮಾಡಬೇಕಾಯ್ತು? ಅದೂ ನಿನಗೆ ಗೊತ್ತಿಲ್ಲದ ಹಾಗೆ.. ನಿನ್ನನ್ನು ಒಂದು ಮಾತನ್ನು ಕೇಳದಲೆ.. ಒಂದು ಅಂಗ ಇನ್ನೊಂದಕ್ಕೆ ಸಹಕರಿಸು ಎಂದು ಕೇಳಿದ್ದನ್ನು ನೋಡಿದ್ದೀಯಾ? ಆ ಕೆಲಸ ಮಾಡುವಾಗ ನೀನು ಯಾವುದಾದರು ಒಂದು ಅಂಗವನ್ನು ಸಂಶಯಿಸಿದೆಯಾ? ನಂಬಿಕೆಯಿಲ್ಲವೆಂದು ಹಿಂದಡಿಯಿಟ್ಟೆಯಾ..?’

‘ಇಲ್ಲಾ..!’

‘ಯಾಕೆ..? ನಿನಗೆ ಎಲ್ಲದರಲ್ಲು ಅನುಮಾನ ಬರಬೇಕಲ್ಲವೆ..? ನಿನ್ನ ಪ್ರತಿ ಚರ್ಯೆಯಲ್ಲಿ , ಚಟುವಟಿಕೆಯಲ್ಲಿ..’

‘……’

‘ಹಾಗೆ ಅನುಮಾನ ಬರಲಿಲ್ಲ.. ಕಾರಣ, ನಿನಗದರ ಮೇಲಿರುವ ನಂಬಿಕೆ.. ಸ್ವಲ್ಪ ಯೋಚಿಸಿ ನೋಡು? ಅದೆಂಥಹ ಅದ್ಭುತ ಎಂಜಿನಿಯರ್ ಇರಬಹುದು ಆ ಸೃಷ್ಟಿಕರ್ತ..? ದೇಹದ ಭಾಗಗಳನ್ನೆಲ್ಲ ಸೃಜಿಸಿ, ಅವನ್ನೆಲ್ಲ ಸಮನ್ವಯದಲ್ಲಿ ವರ್ತಿಸುವಂತಹ ಬುದ್ಧಿವಂತಿಕೆಯನ್ನು ಅದರೊಳಗಿಟ್ಟು ನಡೆಸುತ್ತಿದ್ದಾನೆ.. ಬರಿ ನಮಗೆ ಮಾತ್ರವಲ್ಲ ಎಲ್ಲಾ ಪಶು ಪ್ರಾಣಿ ಪಕ್ಷಿಗಳಲ್ಲಿ.. ನರವ್ಯೂಹ, ಜೀರ್ಣಾಂಗ ವ್ಯೂಹ, ಉಸಿರಾಟದ ವ್ಯವಸ್ಥೆ, ಅಸ್ತಿ ವ್ಯವಸ್ಥೆ, ಮಾಂಸ ಖಂಡಗಳ ವ್ಯವಸ್ಥೆ, ಮೆದುಳು , ಹೃದಯ, ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು – ಎಲ್ಲವು ತಂತಾನೆ ಸಮತೋಲನದಲ್ಲಿ ನಡೆಯುವಂತೆ ವಿನ್ಯಾಸಗೊಳಿಸಿದ್ದಾನೆ ಆ ವಿಧಾತ.. ಹೌದಲ್ಲವೆ..?’

‘ನಿಜಾ ಗುರೂಜಿ.. ಅದು ಕೆಲಸ ಮಾಡುವುದರ ಬಗ್ಗೆ, ಸಾಮರಸ್ಯ ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ನನಗೆಂದು ಸಂಶಯವಾಗಲಿ, ಅನುಮಾನವಾಗಲಿ ಬಂದಿಲ್ಲ.. ಸುಭಧ್ರ ವ್ಯವಸ್ಥೆ ಅದು..’

‘ಅದನ್ನು ಸೃಜಿಸಿದವನೆ ಈ ವಿಶ್ವವನ್ನ , ಪ್ರಕೃತಿಯನ್ನ ಸೃಜಿಸಿದವನು.. ಅಂದ ಮೇಲೆ ಅಲ್ಲಿಯು ಅವನು ಇದೇ ರೀತಿಯ ಸುಭಧ್ರ ವ್ಯವಸ್ಥೆಯನ್ನು ಇರಿಸಿರಬೇಕಲ್ಲವೆ..?’

‘ಇರಬಹುದು.. ಹಾಗಿದ್ದರೆ ಈ ಪ್ರಕೃತಿ ವಿಕೋಪ, ಅವ್ಯವಸ್ಥೆಗಳು?’

‘ಅದು ಅವನು ಸೃಜಿಸಿದ್ದಲ್ಲ… ನಾವು ಅವನಿರಿಸಿದ ಸಮತೋಲನವನ್ನು ಏರುಪೇರು ಮಾಡಿದಾಗ, ಇಂಥಹ ಅಚಾತುರ್ಯಗಳು ಸಂಭವಿಸುತ್ತವೆ.. ವಾಸ್ತವದಲ್ಲಿ ಅವು ಎಚ್ಚರಿಕೆಯ ಕರೆಗಂಟೆಗಳು – ಮತ್ತಷ್ಟು ಅನಾಹುತಕ್ಕೆಡೆಗೊಡಬೇಡಿರೆಂದು ಪ್ರಕೃತಿ ಎಚ್ಚರಿಸುವ ಪರಿ.. ನೀನು ತಿನ್ನುವ ಆಹಾರದಲ್ಲಿ ಹೆಚ್ಚು ಕಡಿಮೆಯಾದರೆ, ಈ ದೇಹದ ಆರೋಗ್ಯ ತಾತ್ಕಾಲಿಕವಾಗಿ ಕೆಡುವುದಿಲ್ಲವೆ? ಹಾಗೆಯೆ.. ಮದ್ದು ತೆಗೆದುಕೊಂಡು ಮುನ್ನೆಚ್ಚರಿಕೆ ವಹಿಸಿಕೊಂಡರಾಯ್ತು.. ಆ ಸಮಸ್ಯೆ ಪರಿಹಾರವಾದಂತೆ.. ಅದಕ್ಕೆ ಭೀತಿ ಪಡುವ ಅಗತ್ಯವೇನಿದೆ..?’ ಎನ್ನುತ್ತ ಅವನ ಮುಖ ನೋಡಿದರು ಗುರೂಜಿ..

ಅವನ ಮನದಲ್ಲೇನೊ ಮಥನ ಆರಂಭವಾಗಿದ್ದು ಅವರಿಗೆ ಅರಿವಾಗುತ್ತಿತ್ತು.. ಅವನು ಅದುವರೆವಿಗು ಆಲೋಚಿಸದ ವಿಭಿನ್ನ ದೃಷ್ಟಿಕೋನವೊಂದನ್ನು ತೆರೆದಿಟ್ಟಿತ್ತು ಅವರ ಮಾತು..

‘ಅಂದರೆ.. ನಮ್ಮ ಸುತ್ತ ಏನೇ ನಡೆದರು, ಅದು ಇದೇ ತತ್ವದನುಸಾರ ಇರುತ್ತದೆಯೆ..?’

‘ಅನುಮಾನವೇ ಬೇಡ.. ಈ ಸೃಷ್ಟಿಯಲ್ಲಿ ನಾವು ಕೇವಲ ಯಕಃಶ್ಚಿತ್ ಜೀವಿಗಳು.. ಅದಕ್ಕೆ ಇಷ್ಟೆಲ್ಲ ಅನುಮಾನ, ಸಂಶಯ ಬರುವುದು ಸಹಜ.. ಆದರೆ, ಇದನ್ನು ನಿಯೋಜಿಸಿದವ ನಮ್ಮಂತೆ ಯಕಃಶ್ಚಿತ್ ಅಲ್ಲವಲ್ಲ..? ಅವನ ಮೇಲೆ ನಂಬಿಕೆಯಿರಿಸಿ ಮುನ್ನಡೆಯಬೇಕು.. ವಿಕೋಪ, ಪ್ರಕೋಪ, ಅವಘಡಗಳಿಗು ಏನೊ ಕಾರಣವಿರುತ್ತದೆಂದು ಅರಿತಾಗ, ಅವುಗಳಿಂದುಂಟಾಗುವ ಭೀತಿ, ಉದ್ವಿಘ್ನತೆಗಳು ಇಲ್ಲವಾಗುತ್ತವೆ..’

‘ಅರ್ಥವಾಯಿತು ಗುರೂಜಿ.. ನನಗು ಹೌದೆನಿಸುತ್ತದೆ.. ಆದರೆ, ಇದು ನನ್ನ ತೊಡಕನ್ನು ನಿವಾರಿಸುತ್ತದೆಯೊ, ಇಲ್ಲವೊ ನಾನು ಹೇಳಲಾರೆ..’ ಎಂದ ಗೋಚರ..

‘ಅದರ ಚಿಂತೆ ಬಿಡು ಗೋಚರ.. ನೀನು ಇಂದಿನಿಂದ ನ್ಯೂನತೆಯನ್ನು ನಿವಾರಿಸುವ ಋಣಾತ್ಮಕ ಚಿಂತನೆಯನ್ನು ಮಾಡಬೇಡ.. ಬದಲಿಗೆ, ನಂಬಿಕೆ ವಿಶ್ವಾಸ ಹೆಚ್ಚಿಸುವ ಧನಾತ್ಮಕ ಅಂಶಗಳನ್ನು ಅರಿಯುತ್ತಾ ಹೋಗು.. ಇದಕ್ಕೆ ಸಹಾಯಕವಾಗುವಂತೆ ನಾನೊಂದಷ್ಟು ಪುಸ್ತಕಗಳನ್ನು ಕೊಡುತ್ತೇನೆ.. ಬಿಡುವಿದ್ದಾಗ ಸುಮ್ಮನೆ ಓದುತ್ತಾ ಹೋಗು.. ಹಾಗೆಯೆ , ಇನ್ನು ಮುಂದೆಯು ಯಾವುದೆ ಋಣಾತ್ಮಕ ಆಲೋಚನೆ ಬಂದರು ಅದನ್ನು ತಡೆ ಹಿಡಿಯಲು ಯತ್ನಿಸಬೇಡ.. ಬದಲು ಅದನ್ನು ಆಹ್ವಾನಿಸಿಕೊ.. ಅದಕ್ಕೆ ಏನು ವಿವರಣೆ ಸಿಗಬಹುದೆಂದು ಈ ಪುಸ್ತಕಗಳಲ್ಲಿ ಹುಡುಕು.. ನೀನು ಪ್ರಶ್ನಿಸುತ್ತಾ ಹೋದಂತೆ ಉತ್ತರಗಳು ದೊರಕುವುದು .. ಆದರೆ ಅಷ್ಟೆ ಹೊಸ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.. ಇದೆ ಪ್ರಕ್ರಿಯೆಯನ್ನು ಮುಂದುವರೆಸುತ್ತಾ ಹೋಗು.. ಅದು ಭೀತಿಯದಾದರು ಆಗಲಿ, ಪ್ರೇರಣೆಯದಾದರು ಆಗಲಿ – ಒಂದೆ ದೃಷ್ಟಿಯಲ್ಲಿ ನೋಡುವ ನಿರ್ಲಿಪ್ತತೆ ನಿನಗೆ ಸಿದ್ಧಿಸುತ್ತದೆ – ನಾನು ಹೇಳಿದಂತೆ ಮಾಡಿದರೆ..’ ಎನ್ನುತ್ತ ಭಗವದ್ಗೀತೆಯ ಸಮೇತ ಹಲವಾರು ಪುರಾಣ ಸಂಬಂಧಿತ ಪುಸ್ತಕಗಳಿದ್ದ ಕಟ್ಟೊಂದನ್ನು ತರಿಸಿಕೊಟ್ಟರು ಗುರೂಜಿ..

ಅವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟಾಗ, ಗೋಚರನಿಗೆ ಅದೆಂಥದ್ದೊ ನಿರಾಳತೆ ಆವರಿಸಿಕೊಂಡಂತೆ , ಮನಸು ಪ್ರಶಾಂತವಾದಂತೆ ಅನಿಸಿತು.. ಅದುವರೆವಿಗು ಆ ರೀತಿಯ ಪ್ರಶಾಂತತೆಯ ಅನುಭವ ಅವನಿಗೆ ಆಗಿರಲೆ ಇಲ್ಲ..!

ಹೊರಬರುತ್ತ ಕೇಳಿದಳು ನಿಷ್ಕಲ.. ‘ಏನನಿಸಿತು ಗೋಚರ..?’

‘ನಿಷ್ಕಲಾ.. ಅವರು ಹೇಳಿದ ಮಾತಲ್ಲಿ ತಥ್ಯವಿದೆಯೆನಿಸಿತು.. ಅದೇನು ನನ್ನ ಡಿಸ್ಸಾರ್ಡರ್ ವಾಸಿ ಮಾಡುವುದೊ ಇಲ್ಲವೊ ಗೊತ್ತಿಲ್ಲ.. ಆದರೆ ಈಗ ಇದ್ದಕ್ಕಿದ್ದಂತೆ, ನಾನು ಆ ಆಲೋಚನೆಗಳನ್ನ ನಿಯಂತ್ರಿಸಬಲ್ಲೆ ಎನಿಸುವ ಅನುಭೂತಿ ಮೂಡುತ್ತಿದೆ.. ಅವರು ಹೇಳಿದಂತೆ ಪ್ರಯತ್ನಿಸುತ್ತೇನೆ.. ಈ ಪುಸ್ತಕಗಳನ್ನು ಓದುತ್ತೇನೆ.. ನನಗೆ ಅವರು ತಾರ್ಕಿಕವಾಗಿ ವಿವರಿಸಿದ ರೀತಿ ತುಂಬಾ ಹಿಡಿಸಿತು.. ನಮಗೆ ಅರಿವಿಲ್ಲದಂತೆ ಅದೆಷ್ಟೊ ವ್ಯವಸ್ಥೆಗಳು ಯುಗಾಂತರದಿಂದ ಕಾರ್ಯ ನಿರ್ವಹಿಸುತ್ತಿವೆ.. ಅದನ್ನು ನಾನು ಸಂಶಯಿಸುವುದೆ ಕ್ಷುಲ್ಲಕತನವೇನೊ ಅನಿಸುತ್ತಿದೆ.. ಬಹುಶಃ ಗುರೂಜಿ ಮಾತಿನ ಇಂಗಿತವು ಅದೇ ಏನೊ – ‘ಮೊದಲು ನಂಬಿಕೆ ಬೆಳೆಸಿಕೊಳ್ಳಲು ಯತ್ನಿಸಬೇಕು’ ಎಂದು.. ಅಂದಹಾಗೆ, ಈ ಪ್ರಯತ್ನದಲ್ಲಿ ನಾನೊಬ್ಬನೆ ಏಗಬಲ್ಲೆನೊ, ಇಲ್ಲವೊ ಗೊತ್ತಿಲ್ಲ.. ಅದಕ್ಕೆ ನಿನ್ನ ಸಹಕಾರ ಹಸ್ತ ಬೇಕು.. ನಿನ್ನ ಜೊತೆ ಇರುತ್ತೆ ತಾನೆ?’ ಎಂದ ಗೋಚರ..

ನಿಷ್ಕಲಾ ಮಾತಾಡದೆ ಮುಗುಳ್ನಗುತ್ತ ಅವನ ಹಸ್ತಕ್ಕೆ ತನ್ನ ಹಸ್ತವನ್ನು ಸೇರಿಸಿ ಮೃದುವಾಗಿ ಅದುಮುತ್ತ, ಕಣ್ಣಲ್ಲೆ ಅವನೊಡನೆ ತಾನಿರುವೆನೆಂಬ ಸಂದೇಶವನ್ನು ರವಾನಿಸಿದಳು..

ಅದನ್ನು ಕಂಡು, ತಾನೂ ನೆಮ್ಮದಿಯ ನಗೆ ನಕ್ಕ ಗೋಚರ.

(ಮುಕ್ತಾಯ)

– ನಾಗೇಶ ಮೈಸೂರು

ಸಣ್ಣಕಥೆ / ಮಿನಿಕತೆ : ನಮ್ಮ ದೇವರ ಸತ್


ಸಣ್ಣ ಕಥೆ / ಮಿನಿಕತೆ : ನಮ್ಮ ದೇವರ ಸತ್ಯ

ಗಂಭೀರ ತನ್ನತ್ತ ಮಾತಿನ ಚಾಟಿಯೆಸೆದ ಅದಿತಿಯತ್ತ ಮತ್ತೆ ವಿಸ್ಮಯದಿಂದ ನೋಡುತ್ತಾ ನುಡಿದ ..

‘ಆಲ್ರೈಟ್ ಅದಿತಿ… ಲೆಟ್ಸ್ ಸ್ಟಾಪ್ ಇಟ್. ನಾನು ನಿನ್ನ ಮಾತಿಗೆ ಇಲ್ಲಾ ಅಂದನಾ ? ಅಥವಾ ನೀನ್ಹೇಳಿದ್ದು ಸುಳ್ಳು ಅಂತೇನಾದ್ರೂ ಹೇಳಿದ್ನಾ ?’

ಅದು ಹೆಚ್ಚುಕಡಿಮೆ ಅವರಿಬ್ಬರ ನಡುವೆ ನಡೆಯುವ ದಿನನಿತ್ಯದ ವಾಗ್ವಾದ – ಅದು ಇಬ್ಬರು ತಮ್ಮ ಬೆಳಗಿನ ವ್ಯಾಯಾಮ ಮುಗಿಸಿ ಬರುವ ಹೊತ್ತಲ್ಲಿ..

‘ ಮಾತು ಒಪ್ಕೋತೀನಿ ಅಂತೀಯಾ? ಮತ್ಯಾಕೆ ಅನುಸರಿಸೋಕೆ ಆಗಲ್ಲ ಅಂತೀಯಾ? ನನ್ನ ವಾದ ಒಪ್ಪಿಗೆ ಆದ್ಮೇಲೆ ಅದನ್ನೇ ಫಾಲೋ ಮಾಡಬೋದು ತಾನೆ ?’ ಮಾತಿನಲ್ಲಿ ಮತ್ತೆ ಜಗ್ಗಿದಳು ಅದಿತಿ.

‘ ನಿನ್ನ ವಾದ ಒಪ್ಕೋಳೋದು ಅಂದ್ರೆ ನಾನದನ್ನು ಒಪ್ಪಿ ಸ್ವೀಕರಿಸಿದೆ ಅಂತ ಅಲ್ಲ.. ಅದನ್ನು ನಂಬಿ ಅನುಕರಿಸೊ ನಿನ್ನ ಹಕ್ಕನ್ನ ಗೌರವಿಸ್ತೀನಿ ಅಂತ ಅರ್ಥ.. ನೀನ್ಹೇಳೋ ಫ್ಯಾಕ್ಟ್ಸ್ ಎಲ್ಲಾ ಸರಿಯಿದ್ರು, ನನಗೆ ನನ್ನದೆ ಆದ ನಂಬಿಕೆಗಳಿವೆ, ಆಚರಣೆಗಳಿವೆ.. ಅದನ್ನ ನಾನು ಬಿಡಕಾಗಲ್ಲ.. ಹಾಗಂತ ನಿನ್ನ ನಂಬಿಕೇನಾ ಬಿಡು ಅಂತ ಬಲವಂತಾನು ಮಾಡಲ್ಲ. ನೀನು ನಿನ್ನ ನಂಬಿಕೆಯನ್ನ ಅನುಸರಿಸೋಕೆ ಪೂರ್ತಿ ಸ್ವತಂತ್ರಳು. ಹಾಗೆ ನನ್ನ ನಂಬಿಕೆಗೆ ನನ್ನ ಬಿಡು’

‘ಬಿಡು.. ಬಿಡು ಅಂತೀಯ.. ದಿನಾ ನಾನೊಬ್ಬಳೆ ಹೋಗಿ ಬರಬೇಕು ಜಿಮ್ಮು , ಜಾಗಿಂಗಿಗೆ… ಆ ಹಾಳು ಮೂಗು ಹಿಡಿದು ಕೂರೋ ಯೋಗಾನ ಬಿಟ್ಟು ನನ್ನ ಜತೆ ಬರಬಾರದೆ ? ಒಳ್ಳೆ ಫಿಜಿಕ್ ಬರುತ್ತೆ, ಹೆಲ್ತಿಯಾಗಿ ಕಟ್ಟುಮಸ್ತಾಗಿಯೂ ಇರ್ತೀಯಾ… ಹೋಗ್ತಾ ಹೋಗ್ತಾ ಆರೋಗ್ಯ ಜತೆಗೆ ದೇಹದಾರ್ಢ್ಯ ಎರಡು ಕಾಪಾಡ್ಕೋಬೋದು.. ನನಗು ಒಬ್ಬಳೆ ಹೋಗೊ ಕಿರಿಕ್ಕು ಇರಲ್ಲ’

‘ ಐಯಾಮ್ ಸಾರಿ ಅದಿತಿ.. ವಿ ಡಿಸ್ಕಸ್ಡ್ ಮೆನಿ ಟೈಮ್ಸ್.. ನೀನು ಜತೆಯಾಗೆ ಯೋಗ ಮಾಡ್ತೀನಿ ಅಂದ್ರೆ ನನಗೇನು ಅಭ್ಯಂತರವಿಲ್ಲ.. ಬಟ್ ಡೋಂಟ್ ಎಕ್ಸ್ಪೆಕ್ಟ್ ಮೀ ಟು ಜಾಯಿನ್ ಯು..’ ಎಂದವನೆ ಮಾತು ನಿಲ್ಲಿಸಿ ಮುನ್ನಡೆದ ಗಂಭೀರ.

ಅಲ್ಲಿಂದ ಮುಂದೆ ಮನೆ ಸೇರುವ ತನಕ ಇಬ್ಬರ ನಡುವೆಯೂ ಮಾತಿಲ್ಲ….

ಹಾಗೆ ಮಾತಾಡದೆ ಇಬ್ಬರು ಡೈನಿಂಗ್ ಟೇಬಲ್ಲಿನ ಸುತ್ತ ಎದುರುಬದುರಾಗಿ ಕೂತರು. ಅಡಿಗೆ ಮನೆಯಿಂದ ಬಂದ ದೇವಮ್ಮ ಅವರಿಬ್ಬರ ಮುಂದೆ ಕಾಫಿಯ ಲೋಟದ ಜತೆಗೆ ಒಂದೊಂದು ಮೊಟ್ಟೆಯನ್ನು ಇಟ್ಟಳು. ಅದು ಅವರ ದಿನನಿತ್ಯದ ಪರಿಪಾಠ. ಸ್ಫೂನಿನಿಂದ, ಬೇಯಿಸದ ಮೊಟ್ಟೆಯ ಚಿಪ್ಪಿನ ತುದಿ ಒಡೆದು, ಹಾಗೆಯೆ ಕುಡಿಯುವುದು ಅವಳ ಅಭ್ಯಾಸ. ಬೇಯಿಸದ ಮೊಟ್ಟೆಯೇ ಪುಷ್ಟಿಕರ ಮತ್ತು ಶ್ರೇಷ್ಠ ಎಂದವಳ ವಾದ. ಅವನು ಯಾವಾಗಲೂ ಬೇಯಿಸಿದ ಮೊಟ್ಟೆಯನ್ನೇ ತಿನ್ನುವುದು. ಮೊಟ್ಟೆಯ ಚಿಪ್ಪು ಬಿಡಿಸಿ ಹೋಳಾಗಿ ಕತ್ತರಿಸಿ ಉಪ್ಪು ಮೆಣಸಿನ ಪುಡಿ ಉದುರಿಸಿಕೊಂಡು ತಿನ್ನುವುದು ಅವನಿಗೆ ಬಂದ ಅಭ್ಯಾಸ. ಅದಕ್ಕೂ ಅವರಿಬ್ಬರೂ ಪರಸ್ಪರ ವಾದಿಸಿದ್ದಿದೆ.

ಅಂದು ಅವಳು ಎಂದಿನಂತೆ ಮೊಟ್ಟೆ ಹೊಡೆಯುವತ್ತ ಗಮನ ಹರಿಸದೆ ಖಿನ್ನವಾದನೆಯಾಗಿ ಹೇಳಿದಳು.

‘ ನೀನ್ಯಾಕೆ ನನ್ನ ಮಾತನ್ನ ನಂಬೋದಿಲ್ವೋ ಗೊತ್ತಾಗ್ತಿಲ್ಲ.. ಯೋಗದಲ್ಲಿ ನಿನಗೆ ಸಿಕ್ಸ್ ಪ್ಯಾಕ್ , ಕಟ್ಟುಮಸ್ತು ಶರೀರ ಎಲ್ಲಾ ಬರೋದಿಲ್ಲ.. ಯು ನೀಡ್ ಮೊರ್ ಎಕ್ಸರ್ಸೈಜ್.. ಟು ಬಿ ಸ್ಟ್ರಾಂಗ್ ಅಂಡ್ ಹೆಲ್ತಿ..’

‘ಯೋಗದಲ್ಲಿ ಸ್ಟ್ರಾಂಗ್ ಅಂಡ್ ಹೆಲ್ತಿ ಆಗಲ್ಲ ಅಂತ ಯಾರು ಹೇಳಿದ್ದು ?’

‘ ಹೆಲ್ತಿ ಇದ್ರುನು ಜಿಮ್ಮಿನ ಹಾಗೆ ಸ್ಟ್ರಾಂಗ್ ಬರಲ್ಲ.. ಜಿಮ್ ಮಾಡಿ ಸ್ಟ್ರಾಂಗ್ ಆದ್ರೆ ಹೆಲ್ತಿಯಾಗು ಇರಬಹುದು..’

‘ಜಿಮ್ ಬರಿ ಹೊರಗಿನಿಂದ ಗಟ್ಟಿ ಮಾಡುತ್ತೆ… ಇಟ್ ಕ್ಯಾನ್ ನಾಟ್ ಫೆನಿಟ್ರೇಟ್ ಇನ್ಸೈಡ್… ಹೊರಗಿಂದ ಗಟ್ಟಿ ಮಾಡುದ್ರು ಒಳಗಿನ ಹೆಲ್ತ್ ಹೀಗೆ ಅಂತ ಹೇಳೋ ಆಗಿಲ್ಲ..’

‘ ಅದು ಹೇಗೆ ಹೇಳ್ತೀಯಾ?’

‘ ನೀನೇ ನೋಡು.. ವಯಸಾದ ಹಾಗೆ ಜಿಮ್ಮು ಗಿಮ್ಮು ಜಾಗು ಗೀಗೂ ಅಂತ ಪ್ರಾಯದಲ್ಲಿ ಮಾಡಿದ್ದೆಲ್ಲ ಮಾಡೋಕಾಗಲ್ಲ… ಮೂಳೆ ವೀಕು, ಸ್ನಾಯು ವೀಕು ಅಂತ ಸುಲಭವಾಗಿರೊ ವಯಸ್ಸಿಗೆ ಹೊಂದೋದನ್ನ ಮಾತ್ರ ಮಾಡ್ಬೇಕು.. ಆದರೆ ಯೋಗದಲ್ಲಿ ಹಾಗಲ್ಲ ಎಷ್ಟೇ ವಯಸಾದ್ರು ಎಲ್ಲಾ ಆಸನಾನು ಮಾಡ್ತಾ ಹೋಗ್ಬಹುದು… ತೀರಾ ವಯಸಾದ ಮೇಲು ಅಷ್ಟೇ ಆರೋಗ್ಯವಾಗಿ ಇರಬಹುದು..’

‘ ಅದು ಸರಿ.. ಹಾಗೆ ಯಾಕೆ ಆಗುತ್ತೆಂತ ನಾ ಕೇಳಿದ್ದು..’

‘ ಲಾಜಿಕ್ಕು ತುಂಬಾ ಸುಲಭ.. ಯೋಗ ಒಳಗಿಂದ ಕೆಲಸ ಮಾಡೋದು. ಅದರ ಪರಿಣಾಮ ಒಳಗಿಂದ ಹೊರಕ್ಕೂ ಸ್ವಾಭಾವಿಕವಾಗಿ ಹರಡಿಕೊಳ್ಳುತ್ತೆ – ಲೈಕ್ ನ್ಯಾಚುರಲ್ ಪ್ರೋಸೆಸ್.. ಯಾಕೆಂದರೆ ದೇಹದ ಮುಖ್ಯ ನಿಯಂತ್ರಣ ಕಾರ್ಯಗಳೆಲ್ಲ ಒಳಗಿಂದ ತಾನೆ ಆಗೋದು ? ಆದರೆ ಜಿಮ್ ಮಾಡಿದಾಗ ನಾವು ಹೊರಗಿನ ಸ್ನಾಯುಗಳನ್ನ ಗುರಿಯಿಟ್ಟುಕೊಂಡು ಮಾಡೋದು.. ಅದು ಒಳಗೆ ತಲುಪಲ್ಲ.. ಬರಿ ಹೊರಗಿನ ಪದರಕ್ಕಷ್ಟೇ ಅದರ ವ್ಯಾಪ್ತಿ..’

‘ ಓಹೋಹೋ.. ಒಳಗಿನಿಂದ ಹೊರಗೆ ವ್ಯಾಪಿಸೋದು ಸುಲಭ.. ಅದೇ ಹೊರಗಿನಿಂದ ಒಳಗೆ ಪ್ರಸರಿಸೋದು ಕಷ್ಟ … ಚೆನ್ನಾಗಿದೆ ಲಾಜಿಕ್..’ ದನಿಯಲ್ಲಿದ್ದ ವ್ಯಂಗ್ಯವನ್ನು ಅವನು ಗಮನಿಸಿದ. ಆಗ ಅವಳ ಮುಂದೆ ಇಟ್ಟಿದ್ದ ಬೇಯಿಸದ ಮೊಟ್ಟೆ ಕಣ್ಣಿಗೆ ಬಿತ್ತು.

‘ ಸರಿ ಒಂದು ಕೆಲಸ ಮಾಡೋಣ.. ಲೆಟ್ ಐಸ್ ಟ್ರೈ ದಿಸ್… ಆವಾಗಲಾದರೂ ನಿನಗೆ ನಂಬಿಕೆ ಬರುತ್ತಾ ನೋಡುವ.. ನೀನು ದಿನಾ ಈ ಮೊಟ್ಟೆ ತುದಿಯನ್ನ ಸ್ಫೂನಿನಲ್ಲಿ ಒಡೆದು ಕುಡಿತೀಯಾ ಅಲ್ವಾ..?’

‘ ಹೂಂ.. ಹೌದು.. ಅದರಲ್ಲೇನು ಮಾಡಬೇಡ ? ‘

‘ ಏನಿಲ್ಲ.. ಇವತ್ತು ಸ್ಫೂನ್ ಉಪಯೋಗಿಸದೆ, ಕೆಳಕ್ಕೆ ಕುಕ್ಕದೆ , ಬರಿ ಹಸ್ತ ಬೆರಳು ಮಾತ್ರ ಬಳಸಿ ಮೊಟ್ಟೆಯನ್ನು ಪೂರ್ಣ ಒಡೆಯದೆ ತುದಿ ಮಾತ್ರ ಬಿರಿಯುವಂತೆ ಮಾಡುತ್ತೀಯಾ ?’

ಅವಳಿಗೇನನಿಸಿತೋ ? ‘ ಮಾಡದೆ ಏನು?’ ಎನ್ನುವಂತೆ ದೃಷ್ಟಿ ಕೊಂಕಿಸಿ ಮೊಟ್ಟೆಯನ್ನು ಎರಡು ಹಸ್ತಗಳ ನಡುವೆ ಹಿಡಿದು ಎರಡು ಕಡೆಯಿಂದ ತುಸುತುಸುವೆ ಒತ್ತಡ ಹಾಕತೊಡಗಿದಳು – ಅದು ಒಡೆದುಹೋಗದ ಹಾಗೆ ಜಾಗರೂಕತೆಯಿಂದ ಅದುಮುತ್ತ. ಹಾಗೆ ಮಧ್ಯಭಾಗದಲ್ಲಿ ಒತ್ತಡ ಹಾಕಿ ಅದುಮಿದರೆ ತುದಿಯಲ್ಲಿ ಬಾಯಿಬಿಡುತ್ತದೆ.. ಆಮೇಲಿಂದ ಉಗುರಲ್ಲಿ ತುದಿಯ ಚಿಪ್ಪು ತೆಗೆಯಬಹುದೆಂಬ ಹವಣಿಕೆಯಲ್ಲಿದ್ದಂತಿತ್ತು.

ಆದರೆ ಅದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಚಿಪ್ಪಿನ ಹೊದಿಕೆ ಗೋಡೆಯ ಹಾಗೆ ಗಟ್ಟಿಯಿದ್ದು ಬಡಪೆಟ್ಟಿಗೆ ಸಂಕುಚಿಸಿ ಕುಸಿಯುವ ಹಾಗೆ ಕಾಣಲಿಲ್ಲ. ಬದಲಿಗೆ ಒತ್ತಡದ ಭಾರಕ್ಕೋ, ಅಸಮತೋಲನಕ್ಕೊ ಒಂದು ಹಂತದಲ್ಲಿ ಪಟ್ಟನೆ ಮುರಿದು ಒಳಕುಸಿದು , ಅದನ್ನು ನಿರೀಕ್ಷಿಸಿರದಿದ್ದ ಹಸ್ತಗಳೆರಡೂ ವೇಗವಾಗಿ ಒಂದನ್ನೊಂದು ಚಪ್ಪಾಳೆ ಹೊಡೆದಂತೆ ಸಂಧಿಸಿ, ನಡುವಲ್ಲಿದ್ದ ಮೊಟ್ಟೆಯ ಲೋಳೆಯೆಲ್ಲ ಸೋರಿಹೋಗುವಂತೆ ಅಪ್ಪಚ್ಚಿಯಾಗಿಹೋಯ್ತು. ಮಾತ್ರವಲ್ಲ, ಆ ಹೊತ್ತಲಿ ಮೊಟ್ಟೆಯ ಚಿಪ್ಪಿನ ಬಿರುಕೆದ್ದ ಚೂರುಗಳ ತೀಕ್ಷ್ಣವಾದ ತುದಿಗಳು ಚರ್ಮವನ್ನು ಬೇಧಿಸಿ ರಕ್ತವು ಹೊರಬಂದಿತ್ತು.

ಅದನ್ನು ನೋಡುತ್ತಿದ್ದಂತೆ ಫಸ್ಟ್ ಏಡ್ ಬಾಕ್ಸಿನತ್ತ ಓಡಿದ ಗಂಭೀರ ಗಾಯವಾಗಿದ್ದ ಕೈಗೆ ಪಟ್ಟಿ ಸುತ್ತತೊಡಗಿದ, ಅವಳ ಮುಖವನ್ನೇ ನೋಡುತ್ತಾ..

‘ಡೋಂಟ್ ಲುಕ್ ಲೈಕ್ ದಟ್.. ಜಿಮ್ ಮಾಡಿಯೂ ಅಷ್ಟು ಶಕ್ತಿ ಇಲ್ಲವೇ ಎನ್ನುವ ಹಾಗೆ.. ನೀನು ಮಾಡಿದ್ದರು ಅಷ್ಟೇ ಆಗುತ್ತಿದ್ದುದು..’ ಎಂದಳು ಸಾವರಿಸಿಕೊಳ್ಳುತ್ತ.

‘ ವಿಷಯ ಅದಲ್ಲ..’

‘ಮತ್ತೆ..?’

‘ ಇದೇ ಮೊಟ್ಟೆಯನ್ನ ಒಳಗಿನಿಂದ ಇನ್ನು ಕಣ್ಣು ಬಿಡುತ್ತಿರುವ ಮರಿ ಅದೆಷ್ಟು ಸುಲಭವಾಗಿ ಒಡೆದುಕೊಂಡು ಬರುತ್ತದೆ ನೋಡಿದೆಯಾ? ಅದನ್ನೇ ಹೊರಗಿನಿಂದ ಒಡೆಯಬೇಕಾದರೆ ಅದೆಷ್ಟು ಕಷ್ಟಪಡುತ್ತೇವೆ ! ಅದನ್ನು ಒಂದು ಚಿಳ್ಳೆಮರಿ ಒಳಗಿನಿಂದ ಸುಲಭವಾಗಿ ಮುರಿದುಕೊಂಡು ಬರಬೇಕಾದರೆ ಅದು ನಿಜಕ್ಕೂ ಅಚ್ಚರಿಯ ವಿಷಯವಲ್ಲವೇ..?’

‘ ಹೌದು.. ಅದರೇನೀಗ?’

‘ ಯೋಗವು ಹಾಗೆಯೆ.. ಒಳಗಿನಿಂದ ಹೊರಕ್ಕೆ ತನ್ನ ಪ್ರಭಾವ ಬೀರುವುದು ಆ ಕೋಳಿ ಮರಿ ಹೊರಬಂದ ಹಾಗೆ ಬಹು ಸುಲಭ. ಹಾಗೆ ಬರುವಾಗ ಚಿಪ್ಪು ಒಡೆದುಕೊಂಡೆ ಬಂದರು ಒಂದು ಚೂರು ಘಾಸಿಯಾಗದ ಹಾಗೆ ಕ್ಷೇಮವಾಗಿ ಬರಿ ಚಿಪ್ಪನ್ನು ಮಾತ್ರ ಬೇಧಿಸಿಕೊಂಡು ಬರುತ್ತದೆ.. ಅಂತೆಯೇ ಯೋಗದ ಪ್ರಭಾವವು ಯಾವುದಕ್ಕೂ ಘಾಸಿಯಾಗದ ಹಾಗೆ ಒಳಗಿನಿಂದ ಹೊರಗಿನತನಕ ವ್ಯಾಪಿಸುತ್ತದೆ – ಅರ್ಥಾತ್ ಒಳಗಿನ ಆರೋಗ್ಯ ಜತೆಜತೆಗೆ ಹೊರಗಿನ ಕ್ಷೇಮ..’

‘ ನೀ ಹೇಳ ಹೊರಟಿದ್ದಾದರೂ ಏನು..?’

‘ ಜಿಮ್ ಮಾಡುವುದು ನೀನು ಹೊರಗಿನಿಂದ ಮೊಟ್ಟೆ ಒಡೆದ ಹಾಗೆ… ಹೆಚ್ಚುಕಡಿಮೆಯಾದರೆ ಒಳಗು ಘಾಸಿ, ಹೊರಗೂ ಘಾಸಿ..’

‘ ಸರಿ.. ಸರಿ.. ಈ ಕೆಲಸಕ್ಕೆ ಬಾರದ ಲಾಜಿಕ್ಕಿಗೆಲ್ಲ ನಾನು ಮರುಳಾಗಿ ನಿನ್ನ ವಾದ ಒಪ್ಪುವೆ ಅಂದುಕೊಳ್ಳಬೇಡ.. ಇಟ್ ವಾಸ್ ಜಸ್ಟ್ ಎ ಆಕ್ಸಿಡೆಂಟ್.. ನಾಳೆ ಬೇಕಾದರೆ ಮತ್ತೆ ಮಾಡಿ ತೋರಿಸುತ್ತೇನೆ..’

ಗಂಭೀರ ಏನು ಮಾತಾಡಲಿಲ್ಲ.. ಸುಮ್ಮನೆ ಮುಗುಳ್ನಕ್ಕು ಪಟ್ಟಿ ಕಟ್ಟುವುದನ್ನು ಮುಂದುವರೆಸಿದ.

ಅವನು ಪಟ್ಟಿ ಕಟ್ಟಿ ಮುಗಿಸುವುದನ್ನೆ ಕಾಯುತ್ತ ಇದ್ದವಳು ನಂತರ ಮುಂದಿದ್ದ ಕಾಫಿ ಕೈಗೆತ್ತಿಕೊಂಡಳು.

‘ ನಾಳೆ ಎಷ್ಟೊತ್ತಿಗೆ ಹೊರಡಬೇಕು ಯೋಗಾಭ್ಯಾಸಕ್ಕೆ ?’

‘ ಯಾಕೆ?’ ಎಂದ ತುಸು ಛೇಡಿಸುವ ದನಿಯಲ್ಲೇ..

‘ ಅದೇನ್ ಇನ್ಸೈಡ್ ಔಟ್ ಅಂತ ನಾನು ನೋಡೇಬಿಡ್ತೀನಿ.. ಡೋಂಟ್ ಥಿಂಕ್ ಐ ಬಿಲೀವ್ ಇಟ್ ನೌ.. ಹೀಗಾದರೂ ನಿನ್ನ ಜತೆಗಿರುವ ಅಂತಷ್ಟೇ.. ನೀನು ಅಡಾಮೆಂಟು ಎಷ್ಟು ಹೇಳಿದ್ರು ಬಗ್ಗಲ್ಲಾ….’

‘ ಓಹ್ ಹಾಗೆ..ಸರಿಸರಿ… ಶೂರ್.. ಆರುಗಂಟೆಗೆ ರೆಡಿಯಾಗು ‘ ಎಂದು ಅವಳಿಗೆ ಕಾಣದಂತೆ ಮುಖ ತಿರುಗಿಸಿಕೊಂಡು ಮುಗುಳ್ನಕ್ಕ ಮನಸೊಳಗೆ ತನಗೆ ತಾನೆ ಹೇಳಿಕೊಳ್ಳುತ್ತಾ..

‘ ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೆ …?!’

‘ಹಾಳು ಗಂಡಸರೇ ಹೀಗೆ.. ಯಾವಾಗಲೂ ತನ್ನ ಹಠಾನೇ ಗೆಲ್ಲಿಸ್ಕೊತಾನೆ…’ ಎಂದವಳು ಮೆತ್ತಗೆ ಗೊಣಗಾಡಿಕೊಂಡಿದ್ದು ಅವನ ಕಿವಿಗೆ ಬೀಳಲಿಲ್ಲ…

– ನಾಗೇಶ ಮೈಸೂರು

26.09.2016


(Picture from Internet / Facebook)

ನಿಗೂಢ ಕಥೆ: ದೊಡ್ಡ ಮನೆ


ನಿಗೂಢ ಕಥೆ: ದೊಡ್ಡ ಮನೆ


ದಟ್ಟ ಕಾಡಿನ ನಡುವೆ ಹಾಸಿಕೊಂಡಂತಿದ್ದ ಆ ಹಳೆಯ ಟಾರು ರಸ್ತೆಯ ಮೇಲೆ ಧೂಳೆಬ್ಬಿಸದೆ ಡ್ರೈವ್ ಮಾಡುವುದು ಸಾಧ್ಯವೇ ಇರಲಿಲ್ಲ.. ಅದರಲ್ಲು ಮುಟ್ಟಿದರೆ ಪಾರ್ಟುಗಳೆಲ್ಲ ಉದುರಿಹೋಗುವಂತಿದ್ದ ಈ ಪ್ರೈವೇಟ್ ಬಸ್ಸಲ್ಲಿ ಕೂತು ಬರುವ ಶಿಕ್ಷೆ ಈ ಜನ್ಮಕ್ಕೆ ಸಾಕು ಅನಿಸಿಬಿಟ್ಟಿತ್ತು.. ಬೈಕಲ್ಲಿ ಬಂದು ಕರೆದೊಯ್ಯುವೆ ಎಂದಿದ್ದ ಶಂಕರನಿಂದ ಕೊನೆಗಳಿಗೆಯಲ್ಲಿ, ಬೈಕು ಕೆಟ್ಟಿರುವ ಕಾರಣ ಬರಲಾಗುತ್ತಿಲ್ಲವೆಂದು ಮೆಸೇಜ್ ಬಂದ ಕಾರಣ, ವಿಧಿಯಿಲ್ಲದೆ ಈ ಬಸ್ಸನ್ನೆ ಹಿಡಿಯಬೇಕಾಯ್ತು.. ಯಾವಾಗ ಅವನೂರು ಬರುತ್ತದೊ ಎಂದು ಕಾತರ, ಅಸಹನೆಯಿಂದ ಕಿಟಕಿಯಿಂದ ಪದೇಪದೇ ನೋಡುತ್ತಿದ್ದಾಗ, ಕೊನೆಗು ದೂರದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಶಂಕರ ಕಾಣಿಸಿದ..

ಊರಿನಲ್ಲಿದ್ದುದಕ್ಕೊ ಏನೊ ಪಂಚೆಯ ಮೇಲೊಂದು ಜುಬ್ಬಾ ಹಾಕಿಕೊಂಡು ನಿಂತಿದ್ದ ಶಂಕರ ಸ್ವಲ್ಪ ವಿಚಿತ್ರವಾಗಿಯೆ ಕಾಣಿಸಿದ – ಅವನ ಎಂದಿನ ಪ್ಯಾಂಟು – ಶರಟಿನ ಅವತಾರವಿಲ್ಲದೆ. ಆದರು ಅವನ ಟ್ರೇಡ್ ಮಾರ್ಕ್ ಕ್ಯಾಪನ್ನು ಮಾತ್ರ ಬಿಟ್ಟಿರಲಿಲ್ಲ.. ಪಂಚೆ-ಜುಬ್ಬದ ಮೇಲು ಹಾಕಿಕೊಂಡಿದ್ದ – ಅದೊಂದು ರೀತಿಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದರು.. ಮಟ ಮಟ ಮಧ್ಯಾಹ್ನವಾದ ಕಾರಣ ಬಿಸಿಲಿಗೆ ತಡೆಯಾಗಲೆಂದು ಕ್ಯಾಪ್ ಧರಿಸಿರಬೇಕೆಂದು ಅಂದುಕೊಂಡು, ಬಸ್ಸಿನಿಂದಿಳಿದು ಅವನ ಕಡೆಗೆ ನಡೆದೆ.

ಶಂಕರ ಬೆಂಗಳೂರಲ್ಲೆ ಕೆಲಸದಲ್ಲಿದ್ದವ.. ಈ ಕೋವಿಡ್ ಮಾರಿಯ ಧಾಳಿ ಆರಂಭವಾಗುತ್ತಿದ್ದಂತೆ ಅವನು ಮಾಡುತ್ತಿದ್ದ ಕೆಲಸಕ್ಕು ಸಂಚಕಾರ ಬಂದು, ಊರಲ್ಲೆ ಹೊಲಗದ್ದೆ ಮಾಡುತ್ತೇನೆಂದು ಊರಿಗೆ ಬಂದಿದ್ದ.

‘ಸಾರಿ ಕಣೋ.. ಸರಿಯಾದ ಟೈಮಲ್ಲಿ ಬೈಕು ಕೈ ಕೊಟ್ಟುಬಿಡ್ತು.. ವಾಪಸ್ಸು ಹೋಗುವಾಗ ಬೈಕಲ್ಲೆ ಹೋಗುವೆಯಂತೆ.. ಮತ್ತೆ ಈ ಡಕೋಟ ಬಸ್ಸನ್ನು ಹತ್ತಿಸುವುದಿಲ್ಲ..’ ಎನ್ನುತ್ತ ನಡೆಯತೊಡಗಿದವನನ್ನು , ನನ್ನ ಲಗೇಜ್ ಜೊತೆ ಹಿಂಬಾಲಿಸಿದೆ.. ನನ್ನ ಕೈಲಿದ್ದ ಲಗೇಜಲ್ಲಿ ಒಂದು ಪೀಸನ್ನಾದರು ಕೈಗೆತ್ತಿಕೊಳ್ಳಬಹುದೆಂದುಕೊಂಡಿದ್ದೆ.. ಆದರೆ ಮಾತಿಗು ಅದನ್ನು ಕೇಳದೆ ಮುನ್ನಡೆಯುತ್ತಿದ್ದವನನ್ನು ಆತಂಕದಿಂದ ದಿಟ್ಟಿಸಿದೆ – ನಾನು ಹೊತ್ತಿರುವುದನ್ನು ಸಹ ತಾನೇ ಹೊರಬೇಕೆನ್ನುವ ಮನೋಭಾವದ ವ್ಯಕ್ತಿತ್ವ ಅವನದು. ಇಂದೇಕೊ ವಿಚಿತ್ರವಾಗಿದೆಯಲ್ಲ? ಎಂದುಕೊಳ್ಳುತ್ತಲೆ ಲಗೇಜು ಕೈ ಬದಲಿಸಿ ಅವನತ್ತ ಮತ್ತೊಮ್ಮೆ ಆಳವಾಗಿ ನೋಡಿದಾಗ ತೋಳಲ್ಲಿ ಸುತ್ತಿದ್ದ ಬ್ಯಾಂಡೇಜು ಕಣ್ಣಿಗೆ ಬಿತ್ತು.. ಆಗ ಕಾರಣವೂ ಗೊತ್ತಾಯ್ತು – ಅವನೇಕೆ ನನ್ನ ಲಗೇಜು ಮುಟ್ಟಲಿಲ್ಲ ಎಂದು..

‘ಏಯ್ ಶಂಕರ.. ಕೈಗೇನಾಯ್ತೊ, ಬ್ಯಾಂಡೇಜು ಸುತ್ತಿದೆ?’ ಎಂದೆ..

‘ಅದೇ ಕಥೆ ಹೇಳ್ಬೇಕಂತ ಹೊರಟಿದ್ದೆ ನೋಡು.. ಬೈಕ್ ಓಡಿಸುವಾಗ ಆಕ್ಸಿಡೆಂಟ್ ಆಗಿ ಬಿದ್ದಾಗ ಆದ ಗಾಯ.. ಇದರಿಂದಾನೆ ಗಾಡಿ ಓಡಿಸದ ಹಾಗೆ ಆಯ್ತು..’ ಎನ್ನುತ್ತ ಅಲ್ಲಿದ್ದ ಕಾಲು ಹಾದಿಯೊಂದರ ತುಸು ಒಳಬದಿಗೆ ಸರಿದು ನಡೆದ.. ಇವನೇಕೆ, ಈ ಕಾಲು ಹಾದಿ ಹಿಡಿಯುತ್ತಿದ್ದಾನೆ ? ಎಂಬ ಗೊಂದಲದಲ್ಲೆ ಅವನನ್ನು ಹಿಂಬಾಲಿಸಿದೆ.. ವಾಸ್ತವದಲ್ಲಿ , ಅಲ್ಲಿ ಪೊದೆಗಳ ಹಿಂದಿನ ಗಿಡ ಮರಗಳ ಸಂದಿಯಲ್ಲಿ ಅವಿತುಕೊಂಡಿದ್ದ ಹಳೆಯ ಕಾಲದ ಹೆಂಚಿನ ಮನೆಯೊಂದರ ಬಳಿ ಕರೆದು ತಂದಿತ್ತು ಆ ಹಾದಿ.. ‘ಇಲ್ಲೇಕೆ ಕರೆತಂದ?’ ಎನ್ನುವ ಪ್ರಶ್ನೆ ನನ್ನ ತುಟಿಯಿಂದ ಹೊರಡುವ ಮೊದಲೆ, ಅಲ್ಲಿ ಮನೆಯ ಗೋಡೆಗೊರಗಿಸಿದ್ದ ಬೈಸಿಕಲ್ಲೊಂದರ ಕಡೆಗೆ ಬೊಟ್ಟು ಮಾಡಿ ತೋರಿಸಿದ.. ಆಗ ಅರ್ಥವಾಯ್ತು, ನನ್ನ ಲಗೇಜನ್ನಿಟ್ಟುಕೊಂಡು ತಳ್ಳಿಕೊಂಡು ಹೋಗಲು ಈ ವ್ಯವಸ್ಥೆ ಮಾಡಿದ್ದಾನೆ ಎಂದು. ಹೆಚ್ಚು ಭಾರವಾಗುತ್ತಿದ್ದ ಬ್ಯಾಗುಗಳನ್ನು ಸೈಕಲ್ಲಿಗೆ ನೇತುಹಾಕಿ ಹಣೆಯ ಮೇಲಿನ ಬೆವರೊರೆಸಿಕೊಳ್ಳುತ್ತ ಅರೆಗಳಿಗೆ ಅಲ್ಲೆ ನಿಂತೆ. ನಾನು ಸುಧಾರಿಸಿಕೊಳ್ಳಲೆಂಬಂತೆ ತಾನೂ ಸಹ ಆ ಮನೆಯ ಮುಂದಿನ ಜಗುಲಿ ಕಟ್ಟೆಯ ಮೇಲೆ ಕುಳಿತ ಶಂಕರ..

ಊರಿನೊಳಗೆ ಅವರದೊಂದು ದೊಡ್ಡ ಮನೆಯೆ ಇದೆ. ಬರಿ ಮನೆಯಲ್ಲ ಅದು ಬಂಗಲೆಯೆ ಎನ್ನಬೇಕು – ಹಳೆಯ ಕಾಲದ್ದು.. ಹಿಂದೊಮ್ಮೆ ಅಲ್ಲಿಗೆ ಕರೆದೊಯ್ದಿದ್ದ ಶಂಕರ. ಆದರೆ ಅಲ್ಲಿಗೆ ತಲುಪಲು ಸುಮಾರು ಎರಡು ಕಿಲೊಮೀಟರ್ ನಡೆಯಬೇಕು.. ಬೈಕಿದ್ದಾಗ ಆ ಕಷ್ಟ ಗೊತ್ತಾಗುತ್ತಿರಲಿಲ್ಲ. ಆದರೀಗ ನಡೆದೊ, ಸೈಕಲ್ ತುಳಿದೊ ಸಾಗಬೇಕು – ಆ ರಸ್ತೆಯಲ್ಲಿ ಲಗೇಜಿನ ಜೊತೆ ಡಬ್ಬಲ್ ರೈಡಂತ್ ಸಾಧ್ಯವೆ ಇರಲಿಲ್ಲ.. ಬಹುಶಃ ಬರಿ ತಳ್ಳಿಕೊಂಡೆ ಹೋಗಬೇಕೇನೊ..

‘ಸುಧಾಕರ, ನೀನು ಸೈಕಲಿನಲ್ಲಿ ಲಗೇಜ್ ಕಟ್ಟಿಕೊಂಡು ಮನೆಗೆ ಹೋಗಿಬಿಡು .. ಹೇಗು ಇದು ಒಂದೇ ದಾರಿ ಇರುವುದು.. ನನಗೆ ಇಲ್ಲೆ ಸ್ವಲ್ಪ ಕೆಲಸವಿದೆ, ಅದನ್ನು ಮುಗಿಸಿ ನಾನು ನಂತರ ಬರುತ್ತೇನೆ.. ಅಲ್ಲಿಯವರೆಗೆ ನೀನು ಊಟ ಮುಗಿಸಿಬಿಡು.. ನನಗೆ ಕಾಯಬೇಡ.. ಅಮ್ಮನಿಗೆ ನೀನು ಬರುವುದು ಗೊತ್ತು, ಕಾಯುತ್ತಿರುತ್ತಾಳೆ..’ ಎಂದ.

ಅದು ಹೇಗೆ ನನ್ನಲ್ಲಿ ಮೂಡುತ್ತಿರುವ ಆಲೋಚನೆಗಳು ಇವನಿಗೆ ತಟ್ಟನೆ ಗೊತ್ತಾದವನಂತೆ ಉತ್ತರಿಸುತ್ತಿದ್ದಾನಲ್ಲ? ಎನಿಸಿ ಕೊಂಚ ಗಲಿಬಿಲಿಯಾಯ್ತು.. ಅವನೂ ತಾರ್ಕಿಕವಾಗಿ ನನ್ನಂತೆಯೆ ಯೋಚಿಸುತ್ತಿರುವುದರಿಂದ ಅದರಲ್ಲಿ ಅಚ್ಚರಿಯೇನು ಇಲ್ಲ – ಎಂದು ಸಮಾಧಾನ ಮಾಡಿಕೊಂಡೆ. ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತಾಡಿಕೊಂಡು ನಂತರ ನಾನು ಸೈಕಲ್ ಪೆಡಲ್ ತುಳಿದು ಬಂಗಲೆ ಮನೆಯತ್ತ ಹೊರಟೆ.. ವಾಸ್ತವವಾಗಿ ಆ ಲಗೇಜಿನೊಳಗಿದ್ದ ಸಾಮಾನುಗಳೆಲ್ಲ ಶಂಕರನಿಗೆ ಸೇರಿದ್ದೇ.. ಅವನು ತರಲಾಗದೆ ಬೆಂಗಳೂರಲ್ಲೆ ಬಿಟ್ಟು ಬಂದಿದ್ದನ್ನು, ನನ್ನ ಮೂಲಕ ತರಿಸಿಕೊಂಡಿದ್ದನಷ್ಟೆ.. ಅದರ ಜೊತೆಗಿದ್ದ ಪುಟ್ಟ ಬ್ಯಾಗಿನ ಲಗೇಜಷ್ಟೆ ನನ್ನದು.. ಒಂದೆರಡು ಒಳ ಉಡುಪುಗಳು , ಶರಟು, ಪ್ಯಾಂಟು, ಲುಂಗಿ, ಟವೆಲ್, ಶೇವಿಂಗ್ ಸೆಟ್, ಪೇಸ್ಟು, ಬ್ರಷ್ಷಿನ ಜೊತೆ ಮೊಬೈಲು ಚಾರ್ಜರು.. ಅದನ್ನು ಹೊರಲು ಸೈಕಲ್ಲಿನ ಅಗತ್ಯವೇನೂ ಇರಲಿಲ್ಲ..

ಶಂಕರನ ಕುಟುಂಬವಿದ್ದ ಆ ಬಂಗಲೆ ಊರಿನ ಆರಂಭದಲ್ಲೆ ಪ್ರತ್ಯೇಕವಾಗಿ ಫಾರ್ಮ್ ಹೌಸಿನಂತೆ ಇತ್ತು. ಊರಿನ ಮಿಕ್ಕ ಮನೆಗಳು ಇರುವೆಡೆಗೆ ಸುಮಾರು ಅರ್ಧ ಕಿಲೊಮೀಟರ್ ದೂರ.. ಇವರ ಮನೆಯ ಹತ್ತಿರದಲ್ಲೆ ಆ ಊರಿನ ಮುಖ್ಯ ಲ್ಯಾಂಡ್ ಮಾರ್ಕ್ ಎನ್ನಬಹುದಾದ ಹನುಮಂತನ ದೇವಸ್ಥಾನ.. ಅಲ್ಲಿ ಸುತ್ತಮುತ್ತಲು ನಿಸರ್ಗದತ್ತವಾದ ರಮಣೀಯ ಪರಿಸರ. ನನಗಂತು ಅದೊಂದು ಅತಿ ಪ್ರಿಯವಾದ ವಾತಾವರಣ. ಸೈಕಲ್ ತುಳಿಯುತ್ತಲೆ, ಅಂಜನೇಯನ ಗುಡಿಯ ಮೂರ್ತಿಗೆ ನಮಸ್ಕರಿಸಿ , ನಾನು ಶಂಕರನ ಮನೆಯೊಳಗೆ ಹೊಕ್ಕೆ.

ಆ ದೊಡ್ಡ ಮನೆಯಲ್ಲಿ ಒಂದು ಕಾಲದಲ್ಲಿ ಅದೆಷ್ಟು ಜನ ವಾಸವಾಗಿದ್ದರೊ? ಕಾಲಾಂತರದಲ್ಲಿ ಒಂದಲ್ಲ ಒಂದು ನೆಪದಲ್ಲಿ ನಗರಗಳಿಗೆ ವಲಸೆ ಹೋದ ಕಾರಣ, ಅವಿಭಕ್ತ ಕುಟುಂಬದ ಆಲದ ಮರದಲ್ಲಿ ಕೇವಲ ಆರೇಳು ಬಿಳಿಲುಗಳಷ್ಟೆ ಅಲ್ಲುಳಿದುಕೊಂಡಿದ್ದುದು. ಅದೂ ವಯಸಾದ ಕಾರಣ ಮತ್ತೆಲ್ಲು ಹೋಗಲಾಗದ ಅಸಹಾಯಕತೆ.. ಜೊತೆಗೆ ಹುಟ್ಟಿದ ಕಡೆಯೆ ಕೊನೆಯುಸಿರೆಳೆಯಬೇಕೆಂಬ ಭಾವನಾತ್ಮಕ ಬಂಧ.. ನಾನು ಗೇಟು ತೆರೆದು ಅಂಗಳ ದಾಟಿ ಮನೆಯ ಬಾಗಿಲಿನ ಹತ್ತಿರ ಬರುತ್ತಿದ್ದಂತೆ ನಗುಮೊಗದಲ್ಲಿ ಸ್ವಾಗತಿಸಿದರು ಶಂಕರನ ಅಮ್ಮ..

‘ಬಾ ಸುಧಾಕರ.. ಹೇಗಿದ್ದಿಯಪ್ಪ..?’ ಎಂದು ಕಕ್ಕುಲತೆಯಿಂದ ವಿಚಾರಿಸಿ ಒಳಗೆ ಕರೆದೊಯ್ದರು.. ಹಜಾರದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ಶಂಕರನ ಅಪ್ಪಾ ಕೂಡ ಮುಗುಳ್ನಕ್ಕು ಸ್ವಾಗತಿಸಿದರು..

‘ಬಾರಪ್ಪ.. ಬಾ.. ಸಾವಿತ್ರಿ, ಮೊದಲು ನೀರು ಕೊಟ್ಟು ಊಟಕ್ಕಿಡೆ.. ದಣಿದು ಬಂದಿದಾರೆ..’ ಎನ್ನುತ್ತಿದ್ದಂತೆ ಕೊಚ್ಚಿದ ಎಳನೀರೊಂದನ್ನು ತಂದು ಕೈಗಿತ್ತ ಅವರ ಮನೆಯಾಳು ಬ್ಯಾಲ.. ಹಿಂದೆ ನೋಡಿದ ಮುಖ ಎನ್ನುವ ಆತ್ಮೀಯತೆ ಅವರೆಲ್ಲರ ಚರ್ಯೆಯಲ್ಲು ಹೊರಸೂಸುತ್ತಿತ್ತು. ನಾನು ಊಟ ಮುಗಿಸಿ ಅಂಗಳದಲ್ಲಿ ಬಂದು ಕೂರುವ ಹೊತ್ತಿಗೆ ಸರಿಯಾಗಿ ಶಂಕರನೂ ಬಂದ.. ಅವನಾದಾಗಲೆ ಊಟವಾಗಿತ್ತಾಗಿ ಅವನು ನೇರ ಬಂದು ಮಾತಿಗೆ ಕುಳಿತ, ಹತ್ತಿರದಲ್ಲಿದ್ದ ಸ್ಟೂಲೊಂದರ ಮೇಲೆ ಆಸೀನನಾಗುತ್ತ.. ನನದಿನ್ನು ಬಾಳೆ ಹಣ್ಣಿನ ಸೇವನೆ ನಡೆದಿದ್ದಾಗಲೆ, ಮೆತ್ತಗಿನ ದನಿಯಲ್ಲಿ ಕೇಳಿದ..

‘ಶಾಂತಿ ಹೇಗಿದಾಳೆ? ನೀನಿಲ್ಲಿ ಬರುತ್ತಿರುವುದು ಅವಳಿಗೆ ಗೊತ್ತೆ?’

‘ಚೆನ್ನಾಗಿದ್ದಾಳೆ.. ಎಲ್ಲಿಗೆ ಹೋಗುತ್ತಿರುವುದು ಅಂತ ಕೇಳಿದ್ಲು.. ನಿನ್ನನ್ನ ನೋಡೋಕೆ ಅಂತ ಹೇಳಿದೆ..’

‘ಏನಾದ್ರು ಹೇಳಿದ್ಲಾ?’ ತನಗೇನಾದರು ಸಂದೇಶ ಇರಬಹುದೆನ್ನುವ ಆಶಾಭಾವದಲ್ಲಿ ಕೇಳಿದರು, ದನಿಯಲ್ಲಿ ನಿರಾಸೆಯ ಛಾಯೆಯಿತ್ತು..

ಬೆಂಗಳೂರಿನಲ್ಲಿದ್ದಾಗ ಬೆಳೆದ ಅವರಿಬ್ಬರ ಸ್ನೇಹ, ಒಡನಾಟ ಸಮಾನ ಆಸಕ್ತಿಯ ನಾಟಕದ ಅಭಿರುಚಿಯಿಂದಾಗಿ, ಆತ್ಮೀಯ ಸಖ್ಯದ ಹಂತ ತಲುಪಿತ್ತು.. ಇಬ್ಬರು ಒಟ್ಟೊಟ್ಟಾಗಿ ನಾಟಕಗಳಲ್ಲಿ ಅಭಿನಯಿಸುವುದು, ಸಂಬಂಧಿತ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಇತ್ಯಾದಿಯಿಂದಾಗಿ ಸಾಮಾನ್ಯ ಗೆಳೆತನವನ್ನು ಮೀರಿದ ಹೆಚ್ಚಿನ ಸಖ್ಯದ ಘಮಲು ಪಸರಿಸಿಕೊಂಡು ಅವರಿಬ್ಬರನ್ನು ಹತ್ತಿರಕ್ಕೆ ತಂದಿತ್ತು.. ಜೊತೆಗೆ ಅವಳು ನೃತ್ಯ ಪ್ರವೀಣೆ, ಹಾಡುಗಾರ್ತಿ, ನಾಟಕದ ನಿರ್ದೇಶಕಿಯಾಗಬೇಕೆಂಬ ಆದರ್ಶ, ಕನಸುಗಳ ಬೆನ್ನು ಹತ್ತಿದ್ದವಳು.. ತನ್ನದೆ ಒಂದು ನಾಟಕ ಅಕಾಡೆಮಿಯನ್ನು ಕಟ್ಟಬೇಕೆಂಬ ಕನಸು ಕಾಣುತ್ತಿದ್ದವಳು.. ಅವಳ ಬಹುಮುಖಿ ಪ್ರತಿಭೆಯ ಮತ್ತು ಅಪರೂಪದ ವ್ಯಕ್ತಿತ್ವದ ಕಡೆ ಆಕರ್ಷಿತನಾಗಿದ್ದ ಶಂಕರ, ಅವಳ ಹಂಬಲಕ್ಕೆ ನೀರೆರೆದು ಪೋಷಿಸಲು ಸದಾ ತಯಾರಾಗಿರುತ್ತಿದ್ದ.. ನಿಜದಲ್ಲಿ, ಅವಳಿಗೆ ಹೇಳದೆಯೆ ಅವಳನ್ನು ಮನದಲ್ಲೆ ಪ್ರೇಮಿಸಲು ಆರಂಭಿಸಿಬಿಟ್ಟಿದ್ದ! ಅದರಿಂದಲೆ ಅವಳ ಕನಸುಗಳನ್ನು ಸಾಕಾರಗೊಳಿಸುವ ವಕ್ತಾರ ತಾನೇ ಎನ್ನುವ ಹಾಗೆ ವರ್ತಿಸುತ್ತಿದ್ದ – ಅಪ್ರಜ್ಞಾಪೂರ್ವಕವಾಗಿ..

ಎಲ್ಲವು ಚೆನ್ನಾಗಿಯೆ ನಡೆದಿತ್ತು – ಅದೊಂದು ದಿನ ಅವಳಲ್ಲಿ ತನ್ನ ಮನಸನ್ನು ಬಿಚ್ಚಿಡುವ ತನಕ.. ಅಂದು ಮಾತ್ರ ಅಗ್ನಿ ಪರ್ವತವೆ ಸ್ಪೋಟವಾದಂತಾಗಿಹೋಯ್ತು.. ಮನದಲ್ಲಿ ತೀರಾ ಮಹತ್ವಾಕಾಂಕ್ಷೆಯಿದ್ದ ಹುಡುಗಿ ಶಾಂತಿ – ಈ ಪ್ರೀತಿ, ಪ್ರೇಮ, ವಿವಾಹದ ಬಂಧನಗಳೆಲ್ಲ ತನ್ನ ಗುರಿ ಸಾಧನೆಯ ಅಡಚಣೆಗಳೆಂದು ನಂಬಿದವಳು.. ತಾನು ತೀರಾ ಹಚ್ಚಿಕೊಂಡಿದ್ದ ಶಂಕರನ ಬಾಯಲ್ಲಿ ಈ ಅನಿರೀಕ್ಷಿತ ನಿವೇದನೆಯನ್ನು ಕೇಳಿ , ತೀರಾ ಆಘಾತಕ್ಕೆ ಒಳಗಾದವಳಂತೆ ಅದುರಿ ಬಿದ್ದಿದ್ದಳು.. ಕೋಪದಿಂದ ಕೆಂಪಾದ ಮುಖದಲ್ಲಿ ಅವನೊಡನೆ ತಾರಾಮಾರಿ ಜಗಳ ಮಾಡಿಕೊಂಡು, ಅವನ ಸ್ನೇಹವನ್ನು ಹರಿದುಕೊಂಡು ಹೊರಟು ಹೋಗಿದ್ದಳು. ಅದೇ ಕೊನೆ, ಅವರಿಬ್ಬರು ಮತ್ತೆಲ್ಲು ಒಟ್ಟಾಗಿ ಕಾಣಿಸಿಕೊಳ್ಳಲೆ ಇಲ್ಲ.. ಶಂಕರ ಮತ್ತೆ ಊರಿಗೆ ವಾಪಸಾಗಲು ಕೋವಿಡ್ ಮಾರಿಯ ಜೊತೆಗೆ ಅವಳ ನಿರಾಕರಣೆಯಿಂದಾದ ಆಘಾತವೂ ಕಾರಣವಾಗಿತ್ತು – ಅವನದನ್ನು ಬಾಯಿ ಬಿಟ್ಟು ಹೇಳದಿದ್ದರು.. ಆ ಹಿನ್ನಲೆಯಲ್ಲೆ ಶಂಕರನ ದನಿಯಲ್ಲಿ ನಿರಾಸೆ ಇಣುಕಿದ್ದುದು..

‘ಅವಳು ಅವಳ ಪ್ರಾಜೆಕ್ಟಿನಲ್ಲಿ ಮುಳುಗಿಹೋಗಿದ್ದಾಳೆ.. ಗೊತ್ತಲ್ಲ, ಇಂಥಹ ಕೆಲಸಕ್ಕೆ ಫಂಡ್ಸ್ ಎಷ್ಟು ಕಷ್ಟ ಅಂಥ? ಅವಳು ಸರಿಯಾದ ಮೂಡಲ್ಲಿ ಇರಲಿಲ್ಲ.. ಸುಮ್ಮನೆ ‘ಹೂಂ’ ಗುಟ್ಟಿದಳಷ್ಟೆ..’ ಎಂದೆ..

ಶಂಕರ ಮತ್ತೆ ಮಾತಾಡಲಿಲ್ಲ.. ಅವನ ಮನಸಿಗೆಷ್ಟು ನೋವಾಗಿರಬಹುದೆಂದು ನನಗರಿವಿತ್ತಾಗಿ ನಾನು ಮಾತಾಡಲಿಲ್ಲ.. ಅವನಿಗೆ ಅವಳೆಲ್ಲ ಪ್ರಾಜೆಕ್ಟುಗಳ ಕುರಿತು ಚೆನ್ನಾಗಿಯೆ ಗೊತ್ತಿತ್ತು; ನಾನು ವಿವರಿಸುವ ಅಗತ್ಯವಿರಲಿಲ್ಲ.. ನಾನೆ ವಿಷಯ ಬದಲಿಸಿದೆ..

‘ಅದು ಸರಿ.. ಈಗ ಅವಸರದಲ್ಲಿ ಬರಲು ಹೇಳಿದ್ದೇಕೆ? ಎಲ್ಲಾ ಸರಿಯಿದೆ ತಾನೆ ಇಲ್ಲಿ?’ ಎಂದೆ

ಇಲ್ಲವೆನ್ನುವಂತೆ ತಲೆಯಾಡಿಸುತ್ತ ನುಡಿದ ಶಂಕರ – ‘ಇಲ್ಲಾ ಸುಧಾಕರ.. ನೀನೆ ನೋಡುತ್ತಿದ್ದೀಯಲ್ಲ..ನೋಡು ಇಷ್ಟು ದೊಡ್ಡ ಮನೆ.. ಜನರಿಂದ, ನೆಂಟರಿಷ್ಟರಿಂದ ತುಂಬಿ ತುಳುಕುತ್ತಿತ್ತು.. ಈಗ ನೋಡು? ನಾವಾರು ಜನ ಬಿಟ್ಟರೆ ಮತ್ತಾರು ಇಲ್ಲ.. ವಯಸಾದ ಅಪ್ಪ ಅಮ್ಮ ಬ್ಯಾಲನ ಜೊತೆ ಹೆಣಗಿಕೊಂಡು ಹೇಗೊ ನಿಭಾಯಿಸುತ್ತಿದ್ದಾರೆ.. ಆದರೆ ಅವರಿಗು ಈ ವಯಸಲ್ಲಿ ಇದನ್ನ ನಿಭಾಯಿಸೋದು ಕಷ್ಟ.. ಅಪ್ಪನ ಸ್ವಯಾರ್ಜಿತ ಆಸ್ತಿಯಾದ ಕಾರಣ ಬೇರೆ ಯಾರಿಗು ಇದರಲ್ಲಿ ಇಂಟ್ರೆಸ್ಟು ಇಲ್ಲ.. ನೋಡಿದರೆ ನಾನೊಬ್ಬ ನೋಡ್ಕೋಬೇಕಷ್ಟೆ.. ಆದರೆ ನನಗು ಯಾಕೊ ಇದನ್ನು ನಿಭಾಯಿಸೊ ಹುಮ್ಮಸ್ಸು, ಉತ್ಸಾಹ ಬರುತ್ತಿಲ್ಲ..’ ಎಂದು ಧೀರ್ಘ ನಿಟ್ಟುಸಿರೆಳೆದುಕೊಂಡ.

ನನಗು ಅವನ ಪರಿಸ್ಥಿತಿಯ ಅರಿವಿತ್ತು.. ‘ಹಾಗಾದ್ರೆ ಈಗೇನು ಮಾಡೋದು ಅಂಥ ನಿನ್ನ ಐಡಿಯಾ?’ ಎಂದು ಕೇಳಿದೆ..

‘ಇಷ್ಟು ದೊಡ್ಡ ಮನೆ ಇಟ್ಟುಕೊಂಡು ಒದ್ದಾಡುವುದರ ಬದಲು ನಾವು ಆ ತೋಟದ ಚಿಕ್ಕ ಮನೆಯಲ್ಲಿ ಇದ್ದುಬಿಡೋದು ಅಂಥ.. ಈ ಮನೇನ ಮಾರಿಬಿಡುವ ಯೋಚನೆ ಇದೆ.. ಅದಕ್ಕೆ ನಿನ್ನನ್ನು ಬರ ಹೇಳಿದ್ದು.. ನಿನ್ನ ನೆಟ್ವರ್ಕಿನ ಮೂಲಕ ಯಾರಾದರು ಹೊರಗಿನವರು ಕೊಳ್ಳೋಕೆ ಸಾಧ್ಯ ಇದೆಯಾ ? ಅಂಥ. ಆಗ ಸ್ವಲ್ಪ ಒಳ್ಳೆ ರೇಟ್ ಬರಬಹುದೇನೊ..? ನಿನಗೆ ಹೆಲ್ಪ್ ಮಾಡೋಕೆ ಸಾಧ್ಯವಾಗುತ್ತ..?’ ಎಂದ.

ಅದೇ ಫೀಲ್ಡಿನಲ್ಲಿದ್ದ ನನಗೆ ಅದೇನು ಕಷ್ಟವಿರಲಿಲ್ಲ .. ಸಮಯದ ಒತ್ತಡವಿಲ್ಲದಿದ್ದರೆ ಸರಿಯಾದ ಪಾರ್ಟಿಯನ್ನು ಹುಡುಕಬಹುದಿತ್ತು.. ‘ಶ್ಯೂರ್.. ಪ್ರಯತ್ನಿಸಬಹುದು..’ ಎಂದೆ..

‘ಅದಕ್ಕೆ ಮೊದಲು ಮತ್ತೊಂದು ಆಲೋಚನೆನು ಇದೆ..’

‘ಏನು..?’

‘ಶಾಂತಿ ಒಪ್ಪಿಕೊಂಡ್ರೆ ಇದನ್ನ ಅವಳ ಪ್ರಾಜೆಕ್ಟ್ ಕೆಲಸಕ್ಕೆ ಬಳಸಿಕೊಳ್ಳಬಹುದು.. ಟ್ರೈನಿಂಗ್, ವರ್ಕಶಾಪ್ಸ್, ಪ್ರಾಕ್ಟೀಸ್ ಮಾಡೋಕೆ ಒಳ್ಳೆ ಜಾಗ ಇದು.. ಅಪ್ಪನ ಹೆಸರಲ್ಲಿ ಇದನ್ನೆ ಒಂದು ಇನ್ಸ್ಟಿಟ್ಯೂಟಾಗಿ ಮಾಡಿಬಿಡಬಹುದು.. ಅವಳಿಗು ಫಂಡಿಂಗ್ ಪ್ರಾಬ್ಲಮ್ಸ್ ಕಮ್ಮಿ ಆಗುತ್ತೆ’ ಎಂದ..

ಅವನ ಮನದಿಂಗಿತ ಅರ್ಥವಾಯ್ತು.. ಅವನು ನೇರ ಕೇಳಿದರೆ ಶಾಂತಿ ಒಪ್ಪುವುದಿಲ್ಲ.. ನನ್ನ ಮೂಲಕ ಪ್ರಯತ್ನಿಸಲು ನೋಡುತ್ತಿದ್ದಾನೆ ಅವಳಿಗೆ ನೆರವಾಗಲು..

‘ಆಯ್ತು.. ಮಾತಾಡಿ ನೋಡ್ತಿನಿ..’ ಎಂದೆ..

‘ಸರಿ.. ಇದು ಈ ಮನೆಗೆ ಸಂಬಂಧಿಸಿದ ಕಾಗದ ಪತ್ರಗಳ ಕಂತೆ.. ನಿನ್ನ ಹತ್ತಿರವಿದ್ದರೆ ಒಳಿತು ತಗೊ..’ ಎಂದವನೆ ಒಂದು ಹಳದಿ ಮಿಶ್ರಿತ ಬಿಳುಪಿನ ಚೀಲವೊಂದನ್ನು ನನ್ನತ್ತ ದೂಡಿದ.. ಅದರ ಹೊರಗೆ ಒಂದು ಪ್ರತ್ಯೇಕ ಪತ್ರವನ್ನು ಇರಿಸಿದ್ದ – ಚೀಲದಾಚೆಗೆ ಅಂಟಿದಂತೆ..

‘ಇದೇನು ಈ ಪತ್ರ.. ಮನೆಯ ಕಾಗದ ಇದ್ದಂತಿಲ್ಲ…’ ಎಂದದನ್ನು ಕೈಗೆತ್ತಿಕೊಂಡೆ..

‘ಸುಧಾಕರ.. ಇದು ಶಾಂತಿಗೆ ಕೊಡಬೇಕಾದ ಪತ್ರ.. ಅವಳ ಜೊತೆಯಲ್ಲೆ ನೀನು ಕೂಡ ಓದು.. ಈಗ ಬೇಡ..’ ಎಂದ ಶಂಕರ. ಮಾತಾಡದೆ ಅದನ್ನೆತ್ತಿಟ್ಟುಕೊಂಡೆ.. ನಾನು ಕೆಲಸ ಮಾಡುವ ಕಂಪನಿಯು ರಿಯಲ್ ಎಸ್ಟೇಟ್ ಫೀಲ್ಡಿನದೇ ಆದ ಕಾರಣ ಅವನ ಕೋರಿಕೆಗೊಂದು ಸರಿ ದಾರಿ ತೋರಿಸುವುದೇನು ಕಷ್ಟವಿರಲಿಲ್ಲ..

ಅಂದು ರಾತ್ರಿ ಅಲ್ಲೆ ಇದ್ದು , ಮಾರನೆ ಬೆಳಿಗ್ಗೆ ಹೋಗುವುದೆಂದು ಮೊದಲೆ ನಿರ್ಧಾರವಾಗಿತ್ತು.. ಸಂಜೆಯೆಲ್ಲ, ಅಲ್ಲೆಲ್ಲ ಸುತ್ತಾಡಿ ಸುತ್ತಮುತ್ತಲ ಬೇಕಾದ ವಿವರಗಳನ್ನು ಸಂಗ್ರಹಿಸುತ್ತ, ಬೇಕಾದ ಒಂದಷ್ಟು ಪೋಟೊಗಳನ್ನು ಕ್ಲಿಕ್ಕಿಸಿಕೊಂಡೆ ಮೊಬೈಲಿನಲ್ಲಿ.. ಯಾಕೊ ಈ ಬಾರಿ ರಾತ್ರಿಯಲ್ಲಿ ಶಂಕರ ಹೆಚ್ಚು ಮಾತಾಡಲಿಲ್ಲ.. ಪುಸ್ತಕಗಳನ್ನು ಹಿಡಿದು ಕೂತಿದ್ದಾಗ ಮಲಗುವ ಮೊದಲು ಒಂದೆ ಒಂದು ಮಾತಾಡಿದ..

‘ಅಂದ ಹಾಗೆ ಬೈಕ್ ಕೀ ತೊಗೊ.. ಬೆಳಿಗ್ಗೆ ಬೈಕ್ ತೊಗೊಂಡು ನೀನು ಬೆಂಗಳೂರಿಗೆ ಹೊರಟುಬಿಡು.. ಬೈಕು ಅಲ್ಲೆ ಇರಲಿ.. ನೀನೆ ಓಡಿಸ್ತಾ ಇರು, ನಾನು ಬರೋ ತನಕ..’ ಎಂದವನೆ ಮಗ್ಗುಲಾದ. ಆ ರಾತ್ರಿಯೆಲ್ಲ ಏನೇನೊ ವಿಚಿತ್ರ ಕನಸುಗಳು.. ಆದರೆ ನಿದ್ದೆ ಮಾತ್ರ ಗಾಢವಾಗಿ ಬಂದಿತ್ತು – ಮೈ ಮೇಲೆ ಎಚ್ಚರವಿಲ್ಲದ ಹಾಗೆ..

ಬೆಳಿಗ್ಗೆ ಎಚ್ಚರವಾದಾಗ ಏಳಾಗಿ ಹೋಗಿತ್ತು.. ಶಂಕರ ಎದ್ದು ಪಕ್ಕದೂರಿಗೆ ಹೋದನೆಂದು ಹೇಳುತ್ತ ಕಾಫಿ ಕೊಟ್ಟರು ಅವನಮ್ಮ.. ಇನ್ನು ಸಂಜೆಗೆ ಬರುವುದೆಂದು ಹೇಳಿ, ನನ್ನನ್ನು ಅವನಿಗಾಗಿ ಕಾಯದೆ ತಿಂಡಿ ತಿಂದು ಹೊರಟುಬಿಡಲು ಹೇಳಿದ್ದಾಗಿ ಸಂದೇಶ ರವಾನಿಸಿದರು.. ನಾನು ಲಗುಬಗೆಯಿಂದ ಸ್ನಾನಕ್ಕೆ ಹೊರಟೆ, ಬಿಸಿಲೇರುವ ಮೊದಲೆ ಹೊರಟುಬಿಡುವ ಉದ್ದೇಶದಿಂದ..


ಬೈಕಿದ್ದ ಕಾರಣ ನಾನು ಬಸ್ಸಿನಿಂದಿಳಿದ ಅದೇ ಜಾಗಕ್ಕೆ ಶೀಘ್ರವಾಗಿ ತಲುಪಿಕೊಂಡೆ.. ಅಲ್ಲಿಂದಾಚೆಗೆ ಸ್ವಲ್ಪ ಟಾರು ರಸ್ತೆ ಇರುವ ಕಾರಣ ಬೈಕು ಓಡಿಸುವುದು ಸುಲಭವಾಗುತ್ತಿತ್ತು.. ಅದಕ್ಕೆ ಮುನ್ನ ಒಂದೆರಡು ನೀರಿನ ಬಾಟಲಿ ಕೊಂಡಿಟ್ಟು ಕೊಳ್ಳೋಣವೆಂದು ಅಲ್ಲಿದ್ದ ಚಿಕ್ಕ ಪೆಟ್ಟಿಗೆ ಅಂಗಡಿಯತ್ತ ಗಾಡಿ ಓಡಿಸುವುದರಲ್ಲಿದ್ದೆ.. ಆಗ ತಟ್ಟನೆ ಅರಿವಾಯ್ತು, ನನ್ನ ಪುಟ್ಟ ಬ್ಯಾಗನ್ನು ಹೊರಡುವ ಅವಸರದಲ್ಲಿ ಅಂಗಳದ ಜಗುಲಿಯ ಮೇಲೆ ಬಿಟ್ಟು ಬಂದುಬಿಟ್ಟಿರುವೆ ಎಂದು.. ಪುಣ್ಯಕ್ಕೆ ಊರು ಬಿಡುವ ಮೊದಲೆ ನೆನಪಾಗಿತ್ತು – ದಾರಿಯ ಮಧ್ಯದಲ್ಲಾಗಿದ್ದರೆ, ಮತ್ತೆ ಹಿಂದಿರುಗುವ ಸಾಧ್ಯತೆ ಇರುತ್ತಿರಲಿಲ್ಲ.. ಗಾಡಿ ತಿರುಗಿಸಿ ಮತ್ತೆ ಆ ಕಚ್ಛಾ ರಸ್ತೆಯಲ್ಲಿ ಓಡಿಸುತ್ತ ಐದೆ ನಿಮಿಷಗಳಲ್ಲಿ ದೊಡ್ಡ ಮನೆಗೆ ತಲುಪಿಕೊಂಡೆ.. ನನ್ನ ಬ್ಯಾಗು ನನಗೆ ಕಾದಿದ್ದಂತೆ ಅಲ್ಲೆ ಅಂಗಳದ ಕಂಬಕ್ಕೊರಗಿ ಕೂತಿತ್ತು.. ಅದನ್ನೆತ್ತಿ ಬೈಕಿನ ಬಾಕ್ಸಿಗೆ ಸೇರಿಸಿದೆ – ಮೊಬೈಲ್ ಚಾರ್ಜರನ್ನು ಮಾತ್ರ ಪೆಟ್ರೋಲ್ ಟ್ಯಾಂಕಿನ ಮೇಲಿನ ಚೀಲದಲ್ಲಿ ಹೊರಗಿರಿಸಿಕೊಳ್ಳುತ್ತ.. ಮತ್ತೊಮ್ಮೆ ಹೇಳಿ ಹೊರಟುಬಿಡೋಣವೆಂದು ತಲೆಯೆತ್ತಿ ನೋಡಿದರೆ – ಅರೆ.. ಬಾಗಿಲಿಗೆ ದೊಡ್ಡದೊಂದು ಬೀಗ ಬಿದ್ದಿದೆ..! ಅವರಪ್ಪ, ಅಮ್ಮ, ಬ್ಯಾಲ ಯಾರು ಕಾಣಿಸುತ್ತಿಲ್ಲ.. ‘ಸ್ವಲ್ಪ ಮುಂಚೆ ಇಲ್ಲೆ ಇದ್ದವರು , ಇಷ್ಟು ಬೇಗ ಎಲ್ಲಿಗೆ ಮಾಯವಾಗಿ ಹೋದರು? ಬಹುಶಃ ಹೊಲ ತೋಟದತ್ತ ಹೋದರೇನೊ?’ಎಂದುಕೊಂಡು ನಾನು ಬೈಕ್ ತಿರುಗಿಸಿ ಮತ್ತೆ ಆ ಚಿಕ್ಕ ಪೆಟ್ಟಿಗೆ ಅಂಗಡಿಯತ್ತ ನಡೆದೆ..

ನಾನಂದುಕೊಂಡ ಹಾಗೆ – ಅಲ್ಲಿ ಬೇರೇನು ಸಿಗದೆ ಇದ್ದರು, ಮಿನರಲ್ ವಾಟರ್, ಪಾನೀಯಗಳು, ಚಿಪ್ಸ್, ಕುರುಕಲು ತಿಂಡಿ, ಬೀಡಿ , ಸಿಗರೇಟು ಮಾತ್ರ ದಂಡಿಯಾಗಿತ್ತು.. ಜೊತೆಗೆ ಅಂಗಡಿಯವ ಮಾರುತ್ತಿದ್ದ ಟೀ, ಕಾಫಿ, ಬಿಸ್ಕೆಟ್ಟು.. ನೇತುಹಾಕಿದ್ದ ಗೊನೆಯೊಂದರಿಂದ ಒಂದಷ್ಟು ಬಾಳೆಹಣ್ಣು ಕಿತ್ತುಕೊಂಡು, ನೀರಿನ ಬಾಟಲಿ, ಬಿಸ್ಕತ್ತಿನ ಜೊತೆ ಖರೀದಿಸಿದೆ – ದಾರಿಯಲ್ಲಿ ಬೇಕಾದರೆ ಇರಲಿ ಎಂದು.. ಅದನ್ನೆಲ್ಲ ಪ್ಲಾಸ್ಟಿಕ್ಕಿನ ಚೀಲವೊಂದರಲ್ಲಿ ಹಾಕಿಕೊಟ್ಟ ಅಂಗಡಿಯವ ಅದೇಕೊ ನನ್ನ ಬೈಕನ್ನೆ ಗಾಢವಾಗಿ ದಿಟ್ಟಿಸಿ ನೋಡುತ್ತಿದ್ದ.. ಅದೇ ಹೊತ್ತಿಗೆ ಅಲ್ಲಿಗೆ ಬಂದ ಮತ್ತೊಬ್ಬ ಗಿರಾಕಿಯೂ ಅದನ್ನೆ ದಿಟ್ಟಿಸುತ್ತಿದ್ದುದನು ಕಂಡು , ಯಾಕೆಂದು ಗೊತ್ತಾಗದೆ ಸ್ವಲ್ಪ ಗಲಿಬಿಲಿಯಾಯ್ತು.. ಆಗ ಅಂಗಡಿಯವನೆ ತಟ್ಟನೆ ಕೇಳಿದ..

‘ಸಾರ್.. ಈ ಬೈಕ್ ಶಂಕ್ರಣ್ಣಂದಲ್ವಾ? ಪಾಪ..’ ಎಂದ..

ಆಕ್ಸಿಡೆಂಟು ಆಗಿದ್ದು ಗೊತ್ತಿರುವ ಕಾರಣಕ್ಕೆ ‘ಪಾಪ’ ಅನ್ನುತ್ತಿರಬೇಕು ಅನಿಸಿ, ‘ಹೌದಪ್ಪ.. ಅವನದೆ.. ನನ್ನ ಸ್ನೇಹಿತ ಅವನು.. ಬೆಂಗಳೂರಿಗೆ ತೊಗೊಂಡು ಹೋಗೋಕೆ ಹೇಳಿದಾನೆ.. ಅದಕ್ಕೆ ತೊಗೊಂಡು ಹೋಗ್ತಾ ಇದೀನಿ.. ಅವನು ಬಂದಾಗ ಅಲ್ಲೆ ಓಡಿಸ್ತಾನೆ..’ ಎಂದಾಗ ಅವರಿಬ್ಬರು ಮುಖಾ ಮುಖಾ ನೋಡಿಕೊಂಡರು.. ನಾನು ಯಾಕೆಂದು ಗೊತ್ತಾಗದೆ ಪ್ರಶ್ನಾರ್ಥಕವಾಗಿ ಅವರಿಬ್ಬರ ಮುಖ ನೋಡಿದೆ..

‘ಹಾಗಂತ ಅವರೆ ಹೇಳಿ ಬೈಕು ಕೊಟ್ರಾ?’ ಎಂದ ಆ ಎರಡನೆ ವ್ಯಕ್ತಿ..

ಇದೇನಿದು? ಕದ್ದ ಮಾಲು ವಿಚಾರಿಸುವವರಂತೆ ಕೇಳುತ್ತಿದ್ದಾರಲ್ಲ ? ಆಂದುಕೊಳ್ಳುತ್ತಲೆ ಹೇಳಿದೆ.. ‘ಹೌದು ಅವನೆ ಗಾಡಿ ಕೀ ಕೊಟ್ಟಿದ್ದು – ನಿನ್ನೆ ರಾತ್ರಿ.. ನಿನ್ನೆ ಮಧ್ಯಾಹ್ನದಿಂದ ಅವರ ಮನೆಯಲ್ಲೆ ತಂಗಿದ್ದೆನಲ್ಲ? ಅಲ್ಲೆ ಊಟ ತಿಂಡಿ ನಿದ್ದೆ ಎಲ್ಲಾ ಆಯ್ತು.. ಈಗ ಗಾಡಿ ಎತ್ತಿಕೊಂಡು ಹೊರಟೆ..’ ಎಂದು ಅನುಮಾನ ಪರಿಹರಿಸುವವನಂತೆ ಒಂದು ಪುಟ್ಟ ವಿವರಣೆಯನ್ನು ಕೊಟ್ಟೆ..

‘ಊಟ ಮಾಡಿದ್ದಲ್ಲದೆ ರಾತ್ರಿ ಅಲ್ಲೆ ಮಲಗಿದ್ದರಾ?’ ಎಂದ ಅಂಗಡಿಯವ..

‘ಹೌದಪ್ಪ..’ ಎಂದೆ ಮತ್ತೆ ಗೊಂದಲದಲ್ಲಿ.. ಅವರಿಬ್ಬರು ಮತ್ತೆ ಮುಖಾಮುಖಾ ನೋಡಿಕೊಂಡರು..

‘ಸರಿ ಸಾರ್.. ನೀವು ಹೊರಡಿ.. ನಿಮಗೆ ಲೇಟ್ ಆಗುತ್ತೆ.. ದೂರದ ಪ್ರಯಾಣ ಬೇರೆ’ ಎಂದು ಅರ್ಧದಲ್ಲೆ ಮಾತು ಮುಗಿಸಲು ಯತ್ನಿಸಿದಾಗ ನನಗೆ ಏನೊ ಅನುಮಾನ ಹುಟ್ಟಿತು..

‘ಯಾಕ್ರಪ್ಪ..? ನಿಮ್ಮ ಮಾತು ಒಗಟಿದ್ದ ಹಾಗಿದೆ..? ಏನಾದ್ರು ಹೆಚ್ಚುಕಮ್ಮಿ ಇದೆಯಾ ನಾ ಹೇಳಿದ್ದರಲ್ಲಿ..?’ ಎಂದೆ

‘ಪಾಪ.. ಇವರಿಗೆ ವಿಷಯ ಗೊತ್ತಿಲ್ಲ ಅಂತ ಕಾಣುತ್ತೆ..’ ಎಂದು ಎರಡನೆಯವನು ಮತ್ತೆ ಲೊಚಗುಟ್ಟಿದ..

‘ಏನು ವಿಷಯಾ..?’ ಎಂದೆ ಸ್ವಲ್ಪ ಜೋರಾದ ದನಿಯಲ್ಲಿ.. ಈ ಬಾರಿ ಅಂಗಡಿಯವನೆ ಹೇಳಿದ..

‘ಸಾರ್.. ತಪ್ಪು ತಿಳ್ಕೋಬೇಡಿ.. ಈಗೊಂದು ವಾರದ ಹಿಂದೆ ಕೊರೋನ ವೈರಸ್ ನಿಂದ ಆ ಮನೆಯಲ್ಲಿದ್ದ ಆರು ಜನರು ತೀರಿಕೊಂಡರು ಸಾರ್.. ಕರೋನಾ ಭಯಕ್ಕೆ ಎಲ್ಲ ಅಲ್ಲಿಗೆ ಹೋಗಲಿಕ್ಕು ಹೆದರುತ್ತಿದ್ದರು.. ಸ್ವಲ್ಪ ತಡವಾಗಿ ಅಂಬ್ಯುಲೆನ್ಸೊಂದು ಬಂದು ಅವರೆಲ್ಲರನ್ನು ಹೊತ್ತೊಯ್ದಿತಂತೆ ಆಸ್ಪತ್ರೆಗೆ.. ಆದರೆ ಪ್ರಯೋಜನವಾಗಲಿಲ್ಲ.. ಅಷ್ಟೂ ಜನವು, ಎರಡೆ ದಿನದಲ್ಲಿ ಪ್ರಾಣ ಬಿಟ್ಟರಂತೆ.. ಕೊನೆಗೆ ಧಫನ್ ಮಾಡಲು ಯಾರೂ ಇರದೆ, ಆ ಆಸ್ಪತ್ರೆಯವರೆ ಏನೊ ಮಾಡಿ ಕೈ ತೊಳೆದುಕೊಂಡರಂತೆ.. ಶಂಕ್ರಣ್ಣನವರ ತೋಟದಲ್ಲೆ ಸುಟ್ಟು ಹಾಕಿದ್ರು ಅಂತಾರೆ.. ಇಲ್ಲಾ ಎಲ್ಲೊ ಒಂದ್ಕಡೆ ಸಾಮೂಹಿಕ ಹೆಣಗಳ ಜೊತೆ ಸುಟ್ಟು ಹಾಕಿದ್ರು ಅಂತಾರೆ.. ಯಾವುದು ನಿಜವೊ ಸುಳ್ಳೊ ಗೊತ್ತಿಲ್ಲ.. ನೀವು ನೋಡಿದ್ರೆ ನಿನ್ನೆ ಮಾತಾಡ್ದೆ , ಅಲ್ಲೆ ಮಲಗಿದ್ದೆ ಅಂತಿದೀರಿ.. ಕರೋನ ಭಯಕ್ಕೆ ನಾವ್ಯಾರು ಆ ಕಡೆ ಹೋಗೋದೆ ಇಲ್ಲ.. ಅದಕ್ಕೆ ನೀವು ಮೊದಲು ಹೋಗಿ ಊರು ಸೇರ್ಕೊಳಿ..’ ಎಂದು ಮಾತು ನಿಲ್ಲಿಸಿದ..

ಅವನ ಮಾತು ಕೇಳುತ್ತಲೆ ನನಗೆ ಹಣೆಯಲ್ಲಿ ಬೆವರಲು ಆರಂಭವಾಗಿತ್ತು.. ನನ್ನ ಚೀಲ ತರಲು ಹೋದಾಗ ಬೀಗ ಹಾಕಿದ್ದ ಬಾಗಿಲು, ಸುಮಾರು ದಿನದಿಂದ ಓಡಾಟವಿಲ್ಲದೆ ಮಂಕು ಬಡಿದಂತಿದ್ದ ವಾತಾವರಣ, ಏನೋ ಹಾಳು ಸುರಿಯುತ್ತಿರುವ ಅವ್ಯಕ್ತ ಭಾವ – ಎಲ್ಲವು ನೆನಪಾಗಿ, ಮೈಯೆಲ್ಲ ಕಂಪನದಲ್ಲಿ ಅದುರಿ ನಖಶಿಖಾಂತ ಜಲಿಸಿಹೋಯ್ತು.. ಮತ್ತೆ ಅಲ್ಲಿಗೆ ಹೋಗಿ ನೋಡಲು ಧೈರ್ಯ ಸಾಲದೆ ಬೈಕ್ ಓಡಿಸಿಕೊಂದು ಆದಷ್ಟು ಶೀಘ್ರ ವೇಗದಲ್ಲಿ ಅಲ್ಲಿಂದ ಹೊರಬಿದ್ದೆ..!


ನನ್ನೆದುರಿಗೆ ಮೌನವಾಗಿ ಕೂತು ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಳು ಶಾಂತಿ..

‘ಅವರು ನಿಜವಾಗಿ ಕರೋನದಿಂದ ಸತ್ತರು ಅಂಥ ಕನ್ಫರ್ಮ್ ಆಯ್ತಾ?’ ಕೇಳಿದಳು..

‘ಹೂಂ.. ಆಸ್ಪತ್ರೆ ರೆಕಾರ್ಡ್ಸಲ್ಲಿ ಇವರೆಲ್ಲರ ಹೆಸರಿದೆ.. ನಾನೇ ಪೋನ್ ಮಾಡಿದ್ದೆ..’

ಅದಕ್ಕೆ ಸ್ವಲ್ಪ ಮೊದಲು ನಾವಿಬ್ಬರು ಶಂಕರ ಕೊಟ್ಟಿದ್ದ ಪತ್ರವನ್ನು ಒಟ್ಟಾಗಿಯೆ ಓದಿದ್ದೆವು.. ಅದರಲ್ಲಿ ದೊಡ್ಡ ಮನೆಯನ್ನು ಶಾಂತಿ ತನ್ನ ಗುರಿ ಸಾಧನೆಗೆ ಬಳಸಿಕೊಳ್ಳಬೇಕೆಂದು ಬರೆದಿದ್ದ ಶಂಕರ – ಮಾರಿಯಾದರು ಸರಿ ಅಥವ ಅದನ್ನೆ ರಂಗಮಂಚದಂತೆ ಬಳಸಿಕೊಂಡಾದರು ಸರಿ.. ಯಾವ ಹಾದಿ ಹಿಡಿದರು ಅದಕ್ಕೆ ಬೇಕಾದ ಕಾನೂನು ಬದ್ಧ ಪ್ರಕ್ರಿಯೆಯನ್ನು ನಿಭಾಯಿಸುವ ಹೊಣೆಯನ್ನು ನಮ್ಮಿಬ್ಬರಿಗೆ ವಹಿಸಿದ್ದ – ನಮ್ಮನ್ನು ಅವನ ಆ ಊರಿನ ಆಸ್ತಿಯ ಟ್ರಸ್ಟಿಗಳಾಗಿಸಿ..

ಜೊತೆಗೆ ತನ್ನ ಬೈಕನ್ನು ನನಗೆ ಉಡುಗೊರೆಯಾಗಿ ಕೊಟ್ಟಿರುವುದಾಗಿ ಸಹ ಸೇರಿಸಿದ್ದ.. ಅದರ ಸಂಬಂದಿತ ಎಲ್ಲಾ ಕಾಗದ ಪತ್ರಗಳು ಸಹ ಜೊತೆಯಲ್ಲಿದ್ದವು..

‘ನನಗೆ ಇದನ್ನೆಲ್ಲ ನಂಬಲೆ ಆಗುತ್ತಿಲ್ಲ ಸುಧಾ.. ಹೇಗೊ ಸತ್ತು ಹೋದವರ ಮನೆಯಲ್ಲಿ ನೀನಿದ್ದು ಬರೋಕೆ ಸಾಧ್ಯ? ಮಾತಾಡಿದೆ, ಊಟ ಮಾಡಿದೆ, ಅಲ್ಲೆ ಮಲಗಿದ್ದೆ ಅಂತೆಲ್ಲ ಹೇಳ್ತಿದ್ದೀಯಾ – ಒಂದು ಫ್ಯಾಂಟಸಿ ಕಥೆ ಇದ್ದ ಹಾಗಿದೆಯೆ ಹೊರತು ಹೇಳಿದರೆ ಯಾರೂ ನಂಬಲ್ಲ..’

‘ನನಗೂ ಈಗಲು ನಂಬಿಕೆ ಇಲ್ಲ ಶಾಂತಿ.. ಆದರೆ ಈ ಬೈಕು, ಈ ಪತ್ರಗಳು ಇವಕ್ಕೆಲ್ಲ ಏನು ಹೇಳ್ತಿ? ನಾವು ನಂಬದೆ ಇದ್ರು ನಾವು ಅರಿಯಲಾಗದ, ಅರ್ಥ ಮಾಡಿಕೊಳ್ಳಲಾಗದ ಅದೆಷ್ಟೊ ಸಂಗತಿಗಳು ಈ ಜಗತ್ತಿನಲ್ಲಿ ನಡೆಯುತ್ತಾ ಇರುತ್ತವೆ.. ಅದರ ಎಷ್ಟೊ ನಿಗೂಢಗಳು ನಮಗೆ ಅರ್ಥವಾಗೋದಿಲ್ಲ, ಗೊತ್ತಾಗೋದಿಲ್ಲ.. ಇದೂ ಅಂತದ್ದೆ ಒಂದು ಕಥೆ ಅಂಥ ಕಾಣುತ್ತೆ..ನೋಡು? ಆ ಕಾಗದ ಪತ್ರದಲ್ಲಿರುವ ತಾರೀಖು ಸಹ ಸಾಯುವ ಮೊದಲಿನ ದಿನಾಂಕಗಳು.. ಈಟ್ ಇಸ್ ಆಲ್ ಸೋ ಫರ್ಫೆಕ್ಟ್ ಅಂಡ್ ಪೂಲ್ ಪ್ರೂಪ್..!’ ಎಂದೆ.

ಸ್ವಲ್ಪ ಹೊತ್ತು ಮತ್ತೆ ಮೌನವಾಗಿದ್ದ ಶಾಂತಿ, ತನ್ನಲ್ಲೆ ಏನೊ ಯೋಚಿಸುತ್ತ ಕೇಳಿದಳು, ‘ನಾನು ಶಂಕರನ ಪ್ರಪೋಸಲ್ಲಿಗೆ ಒಪ್ಕೋಬೇಕಾಗಿತ್ತಾ ಸುಧಾ..?’

ನನಗವಳ ಸಂದಿಗ್ಧ ಅರ್ಥವಾಗುತ್ತಿತ್ತು.. ಆದರೆ ಎಲ್ಲಾ ಮುಗಿದು ಹೋದ ಕಥೆ, ಕೆದಕಿ ಪ್ರಯೋಜನವಿಲ್ಲ.. ಅದನ್ನೆ ಹೇಳಿದೆ..

‘ಶಾಂತೂ.. ಪಾಸ್ಟ್ ಇಸ್ ಪಾಸ್ಟ್ .. ಯು ಕಾಂಟ್ ಚೇಂಜ್ ಇಟ್.. ನಿನ್ನ ನಿರ್ಧಾರಕ್ಕೆ ನಿನ್ನದೆ ಕಾರಣಗಳಿದ್ದವು.. ಅದನ್ನ ಶಂಕರ ಕೂಡ ಗೌರವಿಸಿದ್ದರಿಂದ ತಾನೆ , ತಾನು ಸತ್ತರು ಇಷ್ಟೆಲ್ಲ ಮಾಡಿ ಹೋಗಿದ್ದಾನೆ..? ಸೋ .. ಥಿಂಕ್ ಆಫ್ ವಾಟ್ ಟು ಡೂ ನೌ.. ಅವನು ಹೇಳಿದ ಹಾಗೆ ಮನೆ ಮಾರೋದ? ಯೂಸ್ ಮಾಡೋದಾ? ಅಥವಾ ಬೇರೆ ಏನಾದ್ರು ದಾರಿ ಹುಡುಕಬೇಕಾ? ನಾನಂತು ಬೈಕ್ ವ್ಯಾಲ್ಯೂನ ಯಾವುದಾದ್ರು ಅನಾಥಾಶ್ರಮಕ್ಕೆ ಡೊನೇಟ್ ಮಾಡಿಬಿಡ್ತೀನಿ ಶಂಕರನ ಹೆಸರಲ್ಲಿ..’ ಎಂದೆ..

‘ನಾನೊಂದು ಐಡಿಯಾ ಹೇಳ್ತಿನಿ .. ಹಾಗೆ ಮಾಡೋಕೆ ಸಹಕರಿಸ್ತೀಯಾ?’ ಕೇಳಿದಳು ಶಾಂತಿ.

‘ಹೇಳು..’

‘ನಾವು ಮನೆ ಮಾರೋದು ಬೇಡ.. ಅದನ್ನ ನಾನು ನನ್ನ ಪ್ರಾಜೆಕ್ಟಿನ ಚಟುವಟಿಕೆಗೆ ಬಳಸಿಕೊಳ್ತೀನಿ ಶಂಕರನ ತಂದೆಯ ಹೆಸರಲ್ಲಿ.. ಆದರೆ ಅದಕ್ಕೆ ಆಗಾಗ ಹೋಗಿ ಬಂದ್ರೆ ಸಾಕು.. ಯಾವಾಗಲು ಅಲ್ಲೆ ಇದ್ದು ಪ್ರತಿ ದಿನವು ಬಳಸೋಕೆ ಆಗಲ್ಲ.. ವರ್ಷದಲ್ಲೊಂದು ನೂರು ದಿನ ಪ್ರೋಗ್ರಮ್ ಹಾಕಿಕೊಂಡು ಬಳಸಬಹುದಷ್ಟೆ..’

‘……. ?’

‘ಮತ್ತೆ ಸುತ್ತಮುತ್ತ ಹೇಗು ತೋಟದ ಪರಿಸರ ಇದೆ.. ಅದನ್ನೊಂದು ನರ್ಸರಿ ತರ ಡೆವಲಪ್ ಮಾಡೋಣ – ಶಂಕರನ ಹೆಸರಲ್ಲಿ.. ಅಲ್ಲೆ ಯಾರನ್ನಾದ್ರು ಕೆಲಸಕ್ಕೆ ಇಟ್ಕೊಂಡು ಇಲ್ಲಿಂದಲೆ ರನ್ ಮಾಡೋಣ.. ನಾವು ಆಗಾಗ ಹೋಗಿ ಬಂದ್ರೆ ಸಾಕು.. ಅಲ್ಲಿ ಬರೋ ರೆವಿನ್ಯೂ ನೆಲ್ಲ ಪ್ರಾಜೆಕ್ಟಿಗೆ ಮತ್ತೆ ಶಂಕರನ ಹೆಸರಿನಲ್ಲಿ ಯಾವುದಾದರು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳೋಣ.. ಆಗಲಾದರು ಅವನ ಆತ್ಮಕ್ಕೆ ಶಾಂತಿ ಸಿಗಬಹುದೇನೊ..?’

ನನಗು ಅವಳ ಆಲೋಚನೆ ಸರಿಯೆನಿಸಿತು.. ಶಂಕರ ಬದುಕಿದ್ದರೆ ಇದನ್ನೆ ಅನುಮೋದಿಸುತ್ತಿದ್ದ ಎನಿಸಿತು..

‘ಸರಿ ಶಾಂತ ಹಾಗೆ ಮಾಡೋಣ.. ನಾನು ಈ ಪೇಪರ್ಸ್ ರೆಗ್ಯೂಲರೈಸ್ ಮಾಡಿಸೊದರ ಕಡೆ ನೋಡ್ಕೋತಿನಿ.. ಆಮೇಲೆ ಲೀಗಲ್ ಪ್ರಾಬ್ಲಮ್ಸ್ ಬರಬಾರದು.. ಇನ್ನೊಂದಿಬ್ಬರನ್ನ ಹುಡುಕಿ ಟ್ರಸ್ಟಿಗೆ ಸೇರಿಸಿಕೊಳ್ಳೋಣ.. ಇದೆ ದಾರಿ ಶಂಕರನು ಇಷ್ಟ ಪಡುತ್ತಿದ್ದ ಅನಿಸುತ್ತೆ.. ಆ ನಂಬಿಕೆಯಲ್ಲಿ ಮುನ್ನಡೆಯೋಣ. ಹಾಗೇನಾದರು ಬೇರೆ ವಿಚಾರ ಇದ್ದರೆ ಅವನೆ ಯಾವುದಾದರು ಇಂಗಿತ ಕೊಡುತ್ತಾನೆ..’ ಎಂದೆ.

ನನ್ನ ಮಾತು ಕೇಳಿ ಶಾಂತಿಯ ಮುಖವು ಅರಳಿತು.. ‘ಥ್ಯಾಂಕ್ಯೂ ಸುಧಾ..’ ಎನ್ನುತ್ತ ಮೇಲೆದ್ದವಳನ್ನು ನಾನು ನಿರಾಳವಾಗಿ ಹಿಂಬಾಲಿಸಿದೆ – ಆ ಹೊತ್ತಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಕಾಫಿ ಕುಡಿಯುವ ಸಲುವಾಗಿ!

(ಮುಕ್ತಾಯ)

– ನಾಗೇಶ ಮೈಸೂರು
೨೦.೦೯.೨೦೨೧

(Picture source : internet / social media)

ಮಿನಿ ಕಥೆ : ದುಬಾರಿ ಮೊಬೈಲು..


ಮಿನಿ ಕಥೆ : ದುಬಾರಿ ಮೊಬೈಲು..


ಪ್ರತಿ ತಿಂಗಳೂ ಎಣಿಸುತ್ತಿದ್ದ ಲೆಕ್ಕ ಎಷ್ಟಾಯ್ತೆಂದು. ಸಾಕಾಗುವಷ್ಟು ಸೇರಿದ ಕೂಡಲೆ ಆ ಹೊಸ ಮೊಬೈಲ್ ಕೊಂಡುಬಿಡಬೇಕು, ಅದರ ಆಕರ್ಷಕ ಕವರಿನ ಸಮೇತ. ಇನ್ನೂ ಅರ್ಧದಷ್ಟು ದುಡ್ಡು ಸೇರಬೇಕು, ಅರ್ಥಾತ್ ಇನ್ನು ಆರು ತಿಂಗಳು ಕಾಯಬೇಕು. ಒಮ್ಮೊಮ್ಮೆ ದುಡ್ಡು ಹೆಚ್ಚಾದರೂ ಸರಿ ಕಂತಿನಲ್ಲಿ ಕೊಂಡುಬಿಡೋಣವೆ? ಎನಿಸುವಷ್ಟು ಪ್ರಲೋಭನೆಯಾಗುತ್ತದೆಯಾದರು ಬಲವಂತದಿಂದ ನಿಗ್ರಹಿಸಿಕೊಂಡಿದ್ದಾನೆ ಇಲ್ಲಿಯತನಕ.

ಇದ್ದಕ್ಕಿದ್ದಂತೆ ಅವನ ಮೊರೆಯನ್ನಾರೊ ಆಲಿಸಿದಂತೆ ಆಫೀಸಿನಲ್ಲೊಂದು ಅಚ್ಚರಿಯ ಸುದ್ಧಿ – ಹಳೆಯದಾವುದೊ ಪ್ರಾಜೆಕ್ಟಿನ ಯಶಸ್ಸಿನ ಕಾರಣ ಒಮ್ಮಿಂದೊಮ್ಮೆಗೆ ಏನೋ ಸ್ಪೆಷಲ್ ಬೋನಸ್ ಕೊಡುವ ಸುದ್ಧಿ ! ಅದೂ ತಿಂಗಳ ಕೊನೆಗಿನ್ನೊಂದೆ ವಾರವಿರುವಾಗ! ಹೊಸ ಮೊಬೈಲ್ ಆಗಲೇ ಕೈಗೆ ಬಂದಂತೆ, ತಾನಾಗಲೆ ಅದನ್ನು ಹಿಡಿದು ಹೆಮ್ಮೆಯಿಂದ ನಡೆದಾಡುತ್ತಿರುವಂತೆ ಏನೇನೊ ಕನಸು..

ಆ ದಿನವೂ ಬಂದು, ಬಾಗಿಲು ತೆರೆವ ಮೊದಲೆ ಅಂಗಡಿಯ ಮುಂದೆ ಕಾದು ನಿಂತ – ಕೊನೆಗಳಿಗೆಯ ಉದ್ವಿಗ್ನತೆ ತವಕವನ್ನು ತಡೆಹಿಡಿಯಲಾಗದೆ. ತೆರೆದ ಬಾಗಿಲ ಒಳಹೊಕ್ಕವನೆ ತಾನು ಕೊಳ್ಳಬೇಕೆಂದಿದ್ದ ಮೊಬೈಲು ಯಾವುದೆಂದು ಗೊತ್ತಿದ್ದರೂ , ಒಂದೇ ಏಟಿಗೆ ಅದನ್ನು ಖರೀದಿಸಿ ಒಡ್ಡುಗಟ್ಟಿದ್ದ ನಿರೀಕ್ಷೆಯ ಉದ್ವಿಗ್ನತೆಯನ್ನು ಏಕಾಏಕಿ ಶಮನಗೊಳಿಸಲಿಚ್ಚಿಸದೆ, ಅಲ್ಲಿದ್ದ ಬೇರೆ ಬೇರೆ ಮೊಬೈಲುಗಳನ್ನು, ಫಿಚರುಗಳನ್ನು ಆಸ್ಥೆ, ಆಸಕ್ತಿಯಿಂದ ಗಮನಿಸತೊಡಗಿದ.

ನೋಡು ನೋಡುತ್ತಿದ್ದಂತೆ ತಲೆ ಕೆಟ್ಟುಹೋಗುವ ಹಾಗೆ ಆಯಿತು . ತಾನಂದುಕೊಂಡದ್ದೆಲ್ಲ ಇರುವ ಮೊಬೈಲುಗಳು ಮೂರೂ ಕಾಸಿನಿಂದ ಹಿಡಿದು ಆರು ಕಾಸಿನವರೆಗೆ ದಂಡಿದಂಡಿಯಾಗಿ ಬಿದ್ದಿದ್ದವು. ತಾನು ಅಷ್ಟೊಂದು ದುಬಾರಿ ತೆತ್ತು ಕೊಳ್ಳಬೇಕೆಂದುಕೊಂಡಿದ್ದು ಯಾವ ತರದಲ್ಲಿ ಮಿಕ್ಕಿದ್ದಕ್ಕಿಂತ ಶ್ರೇಷ್ಠ ಎಂದು ಗೊತ್ತಾಗಲೇ ಇಲ್ಲ. ಬದಲಿಗೆ ಅದರ ಹತ್ತನೇ ಒಂದು ಭಾಗದ ಬೆಲೆಗೆ ಅದಕ್ಕೂ ಮೀರಿದ ಫೀಚರ್ಗಳುಳ್ಳ ಎಷ್ಟೋ ಮಾಡೆಲ್ಲುಗಳು ಕಣ್ಣಿಗೆ ಬಿದ್ದು ಬರಿಯ ಬ್ರಾಂಡಿನ ಸಲುವಾಗಿ ಅಷ್ಟೊಂದು ತೆರಬೇಕೇ ? ಎಂದು ಸಂಕಟವೂ ಆಯ್ತು. ಜತೆ ಜತೆಗೆ ಅಲ್ಲಿರುವ ಸಾವಿರಾರು ಸಾಧ್ಯತೆಗಳಲ್ಲಿ ತಾನು ಸಾಧಾರಣ ಬಳಸುವುದು ಕೇವಲ ನಾಲ್ಕೈದು ಅಂಶಗಳನ್ನು ಮಾತ್ರ – ಮಿಕ್ಕಿದ್ದೆಲ್ಲ ಮೂಲಭೂತ ಅಗತ್ಯಕ್ಕಿಂತ ಹೆಚ್ಚಾಗಿ ಶೋಕಿ, ಸುವಿಧತೆಯ ಸಲುವಾಗಿಯೆ ಹೊರತು ಜೀವ ಹೋಗುವ ಅನಿವಾರ್ಯಗಳಲ್ಲ ಅನಿಸಿತು.

ಅದೇ ಹೊತ್ತಲ್ಲಿ ಈಚೆಗೆ ಊರಿಗೆ ಹೋಗಿದ್ದಾಗ ಅಮ್ಮ ಹೇಳುತ್ತಿದ್ದ ಮಾತು ನೆನಪಾಗಿತ್ತು – ‘ಹಳೆ ಮನೆಯ ಮಾಡೆಲ್ಲ ಹುಳ ಹಿಡಿದು ತೂತು ಬಿದ್ದು ಆಗಲೊ, ಈಗಲೊ ?ಅನ್ನುವಂತಾಗಿಹೋಗಿದೆ.. ಈ ಸಾರಿಯ ಮಳೆಗಾಲಕ್ಕೆ ಕುಸಿದು ಬೀಳದಿದ್ದರೆ ಸಾಕು’ ಅಂದಿದ್ದು.

ಏನಾಯಿತೊ ಏನೊ.. ಸರಸರನೆ ಅಲ್ಲಿಂದ ಮೊಬೈಲು ಕವರುಗಳನ್ನು ನೇತುಹಾಕಿದ್ದ ಕೌಂಟರಿನತ್ತ ಸರಸರ ನಡೆದವನೆ ನೂರು ರೂಪಾಯಿಗೆ ಸುಂದರವಾಗಿರುವಂತೆ ಕಂಡ ಕವರೊಂದನ್ನು ಖರೀದಿಸಿ, ತನ್ನ ಈಗಿರುವ ಮೊಬೈಲನ್ನು ಅದರೊಳಕ್ಕೆ ತೂರಿಸಿದ.

ಏನೊ ತೃಪ್ತಿಯಿಂದ ಹೊರಬಂದವನ ಮುಖದಲ್ಲಿ ಜಗತ್ತನ್ನೇ ಗೆದ್ದ ಸಂತೃಪ್ತ ಭಾವ; ಕಣ್ಣುಗಳಲ್ಲಿ ಮಾತಲ್ಲಿ ಹೇಳಲಾಗದ ಧನ್ಯತಾ ಭಾವ.

– ನಾಗೇಶ ಮೈಸೂರು
(Picture from Internet)

ಸಣ್ಣ ಕಥೆ : ಬಾಂದವ್ಯ


ಸಣ್ಣ ಕಥೆ : ಬಾಂದವ್ಯ
_________________

‘ನಮಗಿಲ್ಲಿ ಅಜ್ಜಿ ತಾತಾ ಯಾವಾಗಲು ಇರುವುದೇ ಇಲ್ಲವಲ್ಲ?’

ಸುಧೀರ್ಘವಾಗಿ ಆಲೋಚಿಸುತ್ತ ಚಿಂತೆಯ ದನಿಯಲ್ಲಿ ನುಡಿದಳು ಸ್ಮೃತಿ.. ವಿದೇಶದಲ್ಲಿರುವ ಅವಳಿಗೆ ಆ ಪ್ರಶ್ನೆ ಸಹಜವೆ ಆಗಿತ್ತು.. ಅಪ್ಪ ಅಮ್ಮನ ಹೊರತಾಗಿ ಬೇರಾವ ಬಂಧುಗಳ ಸಾಂಗತ್ಯವು ಇಲ್ಲದ ಕಡೆ ಅವಳಿಗೆ ಈ ಪ್ರಶ್ನೆ ಬರಲು ಕಾರಣ ಸಹ ಅಪ್ಪ ಹೇಳುತ್ತಿದ್ದ ಕಥಾನಕಗಳು.. ಹಳ್ಳಿ ಮನೆಯಲ್ಲಿ ಅದು ಹೇಗೆ ತಾವೆಲ್ಲ ಸಂಜೆಯ ಮಬ್ಬುಗತ್ತಲಲ್ಲಿ ಕೂತು ಅಜ್ಜಿ , ತಾತಂದಿರ ಹತ್ತಿರ ಬ್ರಹ್ಮರಾಕ್ಷಸರ, ಪುರಾಣ ಪುರುಷರ, ಇತಿಹಾಸದ, ರೋಚಕ ದಂತ ಕಥೆಗಳನ್ನು ಕೇಳಿ ರೋಮಾಂಚಿತ ಗೊಳ್ಳುತ್ತಿದ್ದರೆಂದು ವರ್ಣಿಸುವಾಗ ತಾನೇನೊ ಕಳೆದುಕೊಂಡೆನೆನ್ನುವ ಭಾವ ಅವಳಲ್ಲಿ ಉದಿಸಿ, ಈ ಮಾತಾಗಿ ಹೊರಬಿದ್ದಿತ್ತು..

‘ಅದೇನೊ ನಿಜಾ ಪುಟ್ಟಿ.. ಆದರೆ ಈಗ ಮುಂದಿನ ತಿಂಗಳ ರಜೆಗೆ ನಾವೆಲ್ಲ ಊರಿಗೆ ಹೋಗುತ್ತಿದ್ದೀವಲ್ಲ..? ಅಲ್ಲೆ ಒಂದು ತಿಂಗಳತನಕ ಇದ್ದಾಗ ನಿನಗೆ ಬೇಕಾದ ಕಥೆಯಲ್ಲ ಕೇಳ್ಕೋಬಹುದು.. ಅದರಲ್ಲು ನಿನ್ನಜ್ಜಿ ಕಥೆ ಹೇಳೋದ್ರಲ್ಲಿ ಎಕ್ಸ್ ಪರ್ಟು..!’ ಎಂದು ಅವಳನ್ನು ಉತ್ತೇಜಿಸಲು ಯತ್ನಿಸಿದ ಮೋಹನ..

ಅವಳಿಗದೇನನಿಸಿತೊ.. ‘ಸರಿಯಪ್ಪ.. ಆಯ್ತು.. ಆದರೆ..’ ಎಂದು ರಾಗವೆಳೆದು ಸುಮ್ಮನಾದಳು..

‘ಆದರೆ..? ಏನಾದರೆ..?’ ಕೆದಕಿದ ಮೋಹನ..

‘ಅಜ್ಜಿ ತಾತಂಗೆ ಇಂಗ್ಲೀಷ್ ಬರುತ್ತಾ..?’

‘ಓಹೋ.. ದಿವೀನಾಗಿ ಬರುತ್ತೆ.. ಇಬ್ರೂ ಟೀಚರ್ ಆಗಿ ರಿಟೈರ್ ಆದೋರು.. ನನಗಿಂತ ಚೆನ್ನಾಗಿ ಮಾತಾಡ್ತಾರೆ.. ನನಗೆ ಕಲಿಸಿದ್ದೇ ಅವರು ಪುಟ್ಟಾ..’

ಒಂದು ಕ್ಷಣ ಸುಮ್ಮನಿದ್ದವಳು, ನಂತರ ‘ಇಲ್ಲ ಪಪ್ಪಾ.. ಅವರು ಕನ್ನಡದಲ್ಲೆ ಹೇಳಿದ್ರೆ ಚಂದ.. ಆಗ ನಾನೂ ಸಹ ಕನ್ನಡ ಮಾತಾಡೋದು ಕಲಿಬೋದು ಅಷ್ಟಿಷ್ಟು.. ಐ ವಿಲ್ ಆಸ್ಕ್ ಹರ್ ಟು ಸ್ಪೀಕ್ ಇನ್ ಕನ್ನಡ ಓನ್ಲಿ..’ ಎಂದಳು..

ಮನೆಯಲ್ಲಿ ಮಾತ್ರ ಅಷ್ಟಿಷ್ಟು ಮಾತಾಡುವ ಭಾಷೆಗೆ, ಕಲಿಯಲೇಬೇಕಾದ ಅನಿವಾರ್ಯ ಪರಿಸರವಿಲ್ಲದೆಯು ಕಲಿಯುವ ಆಸಕ್ತಿ ಹೇಗೆ ಬಂತೊ ಗೊತ್ತಾಗಲಿಲ್ಲ ಮೋಹನನಿಗೆ.. ಆದರು ಅವಳಿಗೆ ಮೂಡಿರುವ ಆಸಕ್ತಿ ಕಂಡು ಒಳಗೊಳಗೆ ಹಿಗ್ಗೇ ಆಯಿತು.. ಮನೆಯಲ್ಲಿ ಇಂಟರ್ನೆಟ್ ಟಿವಿಯಲ್ಲಿ ಕನ್ನಡ ಸಿನೆಮಾ ನೋಡುತ್ತ, ಅವಳಿಗೆ ತಟ್ಟನೆ ಕಲಿಯಬೇಕೆನಿಸಿದೆ ಎಂದು ಅವನಿಗೆ ಗೊತ್ತಾಗುವಂತಿರಲಿಲ್ಲ.. ಅವಳು ನೋಡುವುದೆಲ್ಲ ಏನಿದ್ದರು ಮಧ್ಯಾಹ್ನದ ಹೊತ್ತಲ್ಲಿ – ಅವನಿನ್ನು ಆಫೀಸಿನ ಕೆಲಸದಲ್ಲಿ ವ್ಯಸ್ತನಾಗಿರುವಾಗ.. ಹೀಗಾಗಿ ಅವಳ ಆ ಹೊಸ ಆಸಕ್ತಿ ಅವನಿಗೆ ಅಷ್ಟಾಗಿ ಗೊತ್ತಿಲ್ಲ..

ಅಂದುಕೊಂಡಿದ್ದಂತೆ ಈ ಬಾರಿಯ ಇಂಡಿಯಾ ಟ್ರಿಪ್ ಸ್ಮೃತಿಯ ಪಾಲಿಗೆ ‘ಗ್ರೇಟೇ’ ಆಯಿತು.. ಅವಳೆಂದು ಹಳ್ಳಿಯಲ್ಲಿ ಅಷ್ಟು ದಿನ ಇದ್ದವಳೆ ಅಲ್ಲ.. ಈ ಸಾರಿ ಅಜ್ಜಿ, ತಾತನ ಜೊತೆ ಎಲ್ಲರು ಊರಿನ ತೋಟದ ಮನೆಯಲ್ಲೆ ಇರುವುದೆಂದು ನಿರ್ಧರಿಸಿದ್ದರಿಂದ, ಅವಳಿಗೆ ಆ ಪ್ರಕೃತಿಯ ನಡುವೆ, ಹಳ್ಳಿಯ ಜನರೊಡನೆ ಒಡನಾಡುತ್ತ ಸ್ವಚ್ಚಂದವಾಗಿ ನಲಿಯುವ ಅವಕಾಶ ಸಿಕ್ಕಿತು.. ಇಲ್ಲಿ ಯಾವ ಸಮಯದಲ್ಲು ಅವಳಿಗೆ ಬೋರ್ ಎನಿಸಲೇ ಇಲ್ಲ. ಸದಾ ಯಾರಾದರೊಬ್ಬರು ಬಂದು ಹೋಗುತ್ತಲೆ ಇರುವ ಮನೆ.. ಅವಳೆಂದು ರುಚಿ ನೋಡಿರದ ಬಗೆಬಗೆಯ ತಿಂಡಿ ತಿನಿಸು ಮಾಡಿಕೊಡುವ ಅಜ್ಜಿ, ಸಂಜೆಯಾಗುತ್ತಲೆ ಸುತ್ತಮುತ್ತಲ ಹಲವಾರು ಪುಟಾಣಿಗಳನ್ನು ಸೇರಿಸಿಕೊಂಡು ರಮ್ಯವಾದ ಕಥೆಯನ್ನು, ಭಾವಾಭಿನಯದೊಂದಿಗೆ ಹೇಳುವ ಅಜ್ಜ, ಆಗೀಗೊಮ್ಮೆ ಜೊತೆಯಾಗುವ ಅಜ್ಜಿ, ನಡುನಡುವೆ ಬಯಲಾಟ – ಯಕ್ಷಗಾನ ಪ್ರಸಂಗಗಳ ವೀಕ್ಷಣೆ.. ಎಲ್ಲವು ಸೇರಿಕೊಂಡು ತಾನೊಂದು ಹೊಸ ಅದ್ಭುತ ಲೋಕಕ್ಕೆ ಬಂದಂತೆನಿಸಿತ್ತು ಸ್ಮೃತಿಗೆ.. ಬಂದ ಕೆಲವೇ ದಿನಗಳಲ್ಲಿ ಚೆನ್ನಾಗಿ ಕನ್ನಡ ಮಾತನಾಡಲು ಕಲಿಯುತ್ತ, ಅವರ ಮಾತುಕಥೆಗಳನ್ನು ಹೆಚ್ಚಿನ ಇಂಗ್ಲೀಷಿನ ವಿವರಣೆಯಿಲ್ಲದೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ವೃದ್ಧಿಸತೊಡಗಿತ್ತು.. ಜೊತೆಗೆ ತನ್ನ ಅಮೇರಿಕನ್ ಶೈಲಿಯ ಮಾತಾಡುವಿಕೆಯನ್ನು ಅವರಿಗು ಕಲಿಸುತ್ತ ಅಲ್ಲಿಯ ದಿನಗಳನ್ನು ಸಂತಸದಿಂದ ಕಳೆಯತೊಡಗಿದಳು.. ಇದೇ ಸಮಯದಲ್ಲಿ ಅವಳನ್ನು ಅಜ್ಜಿ ತಾತನ ಬಳಿ ಹಳ್ಳಿ ಮನೆಯಲ್ಲಿ ಬಿಟ್ಟು, ತಾವು ಬೆಂಗಳೂರಿಗೆ ಬಂದು ಅಲ್ಲಿಂದ ತಾವು ಬಾಕಿಯಿರಿಸಿದ್ದ ಕೆಲಸಗಳತ್ತ ಗಮನ ಹರಿಸಿದ್ದರಿಂದ, ಸ್ಮೃತಿಯ ಪೂರ್ತಿ ಸಮಯವೆಲ್ಲ ಅಜ್ಜ ಅಜ್ಜಿಯರ ಜೊತೆಯಲ್ಲೆ ಕಳೆಯುವಂತಾಗಿತ್ತು..

‘ಅಜ್ಜಾ.. ನೀವು ಯಾವಾಗ್ಲು ಇದೇ ಹಳ್ಳಿ ಮನೇಲೆ ಇದ್ದಿದ್ದಾ..?’ ಒಂದು ದಿನ ಕುತೂಹಲದಲ್ಲಿ ಪ್ರಶ್ನಿಸಿದಳು ತಾತನನ್ನು.. ಅದಕ್ಕೆ ಉತ್ತರ ನೀಡಿದ್ದು ಮಾತ್ರ ಅಜ್ಜಿ..

‘ಇಲ್ಲಾ ಪುಟಾಣಿ.. ಈಗ ನಿಮ್ಮಪ್ಪ, ಅಮ್ಮಾ ಇದಾರಲ್ಲ ಬೆಂಗಳೂರು ಮನೆ? ನಾವಿಬ್ಬರು ಅಲ್ಲೆ ಇದ್ದದ್ದು.. ಇಬ್ಬರು ಅಲ್ಲಿಂದಲೆ ಕೆಲಸಕ್ಕೆ ಹೋಗ್ತಾ ಇದ್ವಿ.. ನಿಮ್ಮಪ್ಪ ಬೆಳೆದದ್ದೆಲ್ಲ ಆ ಮನೇಲೆ ಅನ್ನು.. ಈಗ ರಿಟೈರಾದ ಮೇಲೆ ಅಲ್ಲಿ ಇರೋಕೆ ಬೇಜಾರಾಯ್ತು.. ಅದಕ್ಕೆ ಇಲ್ಲಿಗೆ ಬಂದು ಬಿಟ್ವಿ.. ಇಲ್ಲಿ ಬೇರೆ ಯಾರು ನೋಡ್ಕೊಳೋರು ಇರಲಿಲ್ಲವಲ್ಲ..?’ ಎನ್ನುತ್ತ ಉದ್ದದ ವಿವರಣೆ ಕೊಟ್ಟ ಅಜ್ಜಿಯ ಮುಖವನ್ನೆ ನೋಡುತ್ತ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದಳು..

‘ಈ ಪ್ಲೇಸು ತುಂಬಾ ಚೆನ್ನಾಗಿದೆ ಅಜ್ಜಿ.. ಆ ಪಾಂಡಲ್ಲಿ ಮೀನಿದೆ, ಲೋಟಸ್ ಇದೆ, ಎಷ್ಟೊಂದು ತೆಂಗಿನ ಮರ, ಮಾವಿನ ಮರ ಎಲ್ಲಾ ಇದೆ.. ದಿನಾ ಎಷ್ಟೊಂದು ಜನ ಆಟ ಆಡೋಕೆ ಸಿಗ್ತಾರೆ.. ಮೊನ್ನೆ ನಾವು ಗಣೇಶನ್ನ ಕೂರಿಸಿ ಹಬ್ಬ ಮಾಡಿದ್ವಲ್ಲ..? ಎಷ್ಟು ಚೆನ್ನಾಗಿತ್ತು! ಅಮೇರಿಕಾದಲ್ಲಿ ನಾವು ಯಾವತ್ತು ಈ ತರ ಹಬ್ಬ ಅಂಥ ಮಾಡಿದ್ದೇ ಇಲ್ಲ.. ಈ ತರಹ ಅಡಿಗೆ, ತಿಂಡಿ ನಾನ್ಯಾವತ್ತೂ ತಿಂದಿರಲಿಲ್ಲ..’ ಕಣ್ಣಲ್ಲಿ ಮಿಂಚಿನ ಕಾಂತಿ ಸೂಸುತ್ತ ನುಡಿದಳು ಸ್ಮೃತಿ..

ಅದುವರೆಗು ಅವರಿಬ್ಬರ ಮಾತು ಕೇಳಿಸಿಕೊಳ್ಳುತ್ತಿದ್ದ ಅಜ್ಜ ತಮಾಷೆಯ ದನಿಯಲ್ಲಿ ಕೇಳಿದರು.., ‘ ಅಲ್ಲಾ ಪುಟ್ಟಿ.. ಈಗೇನೊ ಸರಿ.. ಆದರೆ ಇನ್ನೊಂದು ಸ್ವಲ್ಪ ದಿನಕ್ಕೆ ನೀನು ವಾಪಸ್ ಹೊರಟು ಹೋಗ್ತಿಯಲ್ಲ.. ಆಗ ಏನು ಮಾಡ್ತಿ? ಅಲ್ಲಿ ಬೇಕಂದ್ರು ಇವೆಲ್ಲ ಇರೋದಿಲ್ವೆ..?’

ಆ ಮಾತು ಕೇಳುತ್ತಿದ್ದಂತೆ ಅವಳ ಮುಖ ಕಳಾಹೀನವಾಗಿ ಹೋಯ್ತು.. ಅದನ್ನು ಗಮನಿಸಿದ ಅಜ್ಜಿ ಕಣ್ಣಲ್ಲೆ ಅಜ್ಜನನ್ನು ಗದರುವಂತೆ ನೋಡುತ್ತ, ‘ಅಯ್ಯೊ ಬಿಡು ಕಂದ.. ಅಲ್ಲೆಲ್ಲ ಮಾಡ್ರನ್ನಾಗಿ ಇರೋವಾಗ ಇದೆಲ್ಲ ಯಾಕೆ ನೆನಪಾಗುತ್ತೆ.. ಬೇಕು ಅಂದಾಗ ಪೋನಂತು ಮಾಡೆ ಮಾಡ್ತೀವಿ.. ವರ್ಷಕೊಂದು ಸಲ ಹೇಗೂ ಇಲ್ಲಿಗೆ ಬರ್ತೀರಲ್ಲ..’ ಎಂದು ವಾತಾವರಣವನ್ನು ತಿಳಿಯಾಗಿಸಿದರು, ಸ್ಮೃತಿಯ ಮುಖ ಮೊದಲಿನಂತೆ ಅರಳದೆ ಸ್ವಲ್ಪ ಮಂಕಾಗಿರುವುದನ್ನು ಅವರ ಸೂಕ್ಷ್ಮ ದೃಷ್ಟಿ ಗಮನಿಸದೇ ಇರಲಿಲ್ಲ..

ಅದಾದ ಮೇಲೆ ಒಂದೆರಡು ದಿನ ಸ್ವಲ್ಪ ಮಂಕಾಗಿಯೆ ಇದ್ದಳು.. ನಡುವಲ್ಲೊಂದೆರಡು ಬಾರಿ, ತಾತನ ಪೋನಿನಲ್ಲಿ ಪಪ್ಪನ ಜೊತೆ ಅದೇನೊ ಸುಧೀರ್ಘವಾಗಿ ಮಾತನಾಡಿದಳು ಬೇರೆ.. ಪಾಪ! ಅಪ್ಪ, ಅಮ್ಮನ ನೆನಪಾಗಿರಬೇಕು, ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾಳೇನೊ ಅಂದುಕೊಂಡು ಸುಮ್ಮನಾದರು ಅವಳಜ್ಜಿ ತಾತ.. ಅದಾದ ಒಂದೆರಡು ದಿನದ ನಂತರ ಮತ್ತೆ ಮೊದಲಿನಂತೆ ಚಟುವಟಿಕೆಯಿಂದ ತುಂಬಿಕೊಂಡ ಮೊಮ್ಮಗಳನ್ನು ಕಂಡು ಅವರಿಬ್ಬರಿಗು ಸಮಾಧಾನವಾಯ್ತು..

ಅವಳು ಮತ್ತೆ ವಾಪಸ್ಸು ಹೊರಡುವ ದಿನವೂ ಹತ್ತಿರವಾಯ್ತು.. ಹೊರಡುವ ಎರಡು ದಿನ ಮುಂಚೆ ಸ್ಮೃತಿಯ ಅಪ್ಪ ಅಮ್ಮ ಇಬ್ಬರು ಹಳ್ಳಿ ಮನೆಗೆ ಬಂದರು. ಕಡೆಯ ಎರಡು ದಿನ ಅಲ್ಲಿದ್ದು ಅಲ್ಲಿಂದ ನೇರ ವಿಮಾನ ಹತ್ತುವುದೆಂದು ಮೊದಲೆ ನಿರ್ಧಾರವಾಗಿತ್ತು.. ಇಷ್ಟು ದಿನ ಮೊಮ್ಮಗಳಿಂದ ತುಂಬಿಕೊಂಡಂತಿದ್ದ ಮನೆ ಮತ್ತೆ ಭಣಗುಡುವುದೆಂದು ಅರಿವಾಗುತ್ತಿದ್ದಂತೆ ಅಜ್ಜ, ಅಜ್ಜಿಯರು ಸಹ ಸ್ವಲ್ಪ ಮಂಕು ಬಡಿದವರಂತೆ ಆಗಿಹೋದರು.. ತಿಂಗಳು ಪೂರ್ತಿ ಇದ್ದ ಮೊಮ್ಮಗಳ ಸಖ್ಯ ಅವರ ಬದುಕಿನಲ್ಲೆ ಏನೋ ಒಂದು ಹೊಸತನವನ್ನು ತಂದು ಕೊಟ್ಟಿತ್ತು.. ಆದರೆ ಅದೀಗ ಇನ್ನು ಕೆಲವು ದಿನಗಳು ಮಾತ್ರ..

ಆದರೆ ಅಪ್ಪ ಅಮ್ಮ ಬಂದ ಗಳಿಗೆಯಿಂದಲೆ, ಸ್ಮೃತಿ ಮಾತ್ರ ಸ್ವಲ್ಪ ಹೆಚ್ಚು ಖುಷಿಯಲ್ಲೆ ಇದ್ದಂತಿತ್ತು.. ಅವರು ಬರುತ್ತಿದ್ದ ಹಾಗೆ ಓಡಿ ಹೋಗಿ ಪಪ್ಪನ ಕತ್ತಿಗೆ ಜೋತು ಬಿದ್ದು , ‘ ನಾನು ಕೇಳಿದ್ದೆಲ್ಲ ತಂದ್ಯಾ ಪಪ್ಪಾ..?’ ಎಂದು ಮುದ್ದಿನಿಂದ ಕೇಳಿದಾಗ ತನ್ನ ಕೈಲಿ ಹಿಡಿದಿದ್ದ ದೊಡ್ಡ ಪ್ಯಾಕೆಟೊಂದನ್ನು ಅವಳ ಕೈಗಿತ್ತು, ಕೆನ್ನೆ ಚಿವುಟಿ ಮುಗುಳ್ನಕ್ಕಿದ್ದ ಮೋಹನ.. ಅದನ್ನು ಹಿಡಿದುಕೊಂಡವಳೆ ತಾಯಿ ಅಪರ್ಣಳತ್ತ ಒಮ್ಮೆ ಕಣ್ಣು ಮಿಟುಕಿಸಿ ತನ್ನ ರೂಮಿನತ್ತ ಓಡಿ ಹೋಗಿದ್ದಳು , ಅಪ್ಪನ ಕೈ ಹಿಡಿದೆಳೆದುಕೊಂಡು.. ದೊಡ್ಡದೊಂದು ರಟ್ಟಿನ ಪೆಟ್ಟಿಗೆಯನ್ನು ತಳ್ಳಿಕೊಂಡು ಜೊತೆಗೆ ನಡೆದಿದ್ದಳು ಅಪರ್ಣ .

ಅಂದು ರಾತ್ರಿ ಅಪ್ಪನ ಜೊತೆ ರೂಮಿನಲ್ಲೆ ಏನೊ ಮಾಡುವುದರಲ್ಲಿ ನಿರತಳಾದ ಮೊಮ್ಮಗಳು ತಮ್ಮ ಮಾಮೂಲಿ ಕಥಾ ಕಾಲಕ್ಷೇಪದ ಹೊತ್ತಲ್ಲು ಬರದಿದ್ದನ್ನು ಕಂಡು ಅಜ್ಜ ಅಜ್ಜಿಯರಿಗೆ ಕೊಂಚ ನಿರಾಶೆಯೆ ಆಯ್ತು.. ಇರುವ ಇನ್ನೆರಡು ದಿನಗಳಾದರು ಸ್ವಲ್ಪ ಹೆಚ್ಚು ಕಾಲ ಕಳೆಯಬೇಕೆಂದುಕೊಂಡರೆ, ಅವಳು ಅವರಪ್ಪ, ಅಮ್ಮ ಬರುತ್ತಿದ್ದ ಹಾಗೆ ಅವರತ್ತ ಓಡಿಹೋಗಿದ್ದಾಳೆ.. ಸಹಜ – ನಾವೆಷ್ಟೆ ಪ್ರೀತಿ, ಅಕ್ಕರೆ ತೋರಿಸಿದರು ಕಡೆಗೆ ಮಕ್ಕಳಿಗೆ ಅವರ ಹೆತ್ತವರು ತಾನೇ ಮುಖ್ಯ? ಎಂದುಕೊಂಡು ಸಣ್ಣ ನಿಟ್ಟುಸಿರೊಂದನ್ನು ಬಿಟ್ಟು ಸುಮ್ಮನಾಗಿದ್ದರು ಅವರಿಬ್ಬರು.. ಅಂದೇಕೊ ರಾತ್ರಿಯಿಡಿ ಅವರಿಬ್ಬರಿಗು ಸರಿಯಾಗಿ ನಿದ್ದೆಯಿಲ್ಲ.. ಏನೊ ಚಡಪಡಿಕೆ, ಆತಂಕ, ಖೇದವೊ ವಿಷಾದವೊ ಹೇಳಲಾಗದ ಖಾಲಿ ಖಾಲಿ ಭಾವ.. ಆ ತಲ್ಲಣದಲ್ಲಿ ಸ್ವಲ್ಪ ನಿದ್ದೆ ಹತ್ತಿದ್ದೇ ಬೆಳಗಿನ ಜಾವದಲ್ಲಿ..

ಹೀಗಾಗಿ ಅವರಿಬ್ಬರು ಬೆಳಗಿನ ಏಳಾದರು ಎದ್ದೇ ಇರಲಿಲ್ಲ.. ಐದಕ್ಕೆಲ್ಲ ಎದ್ದು ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದವರು, ಇಂದು ಇನ್ನು ಮಲಗಿದ್ದರು. ಅದೇ ತಾನೆ ಎದ್ದ ಸ್ಮೃತಿಗೆ, ಅವರಿನ್ನು ಎದ್ದಿಲ್ಲವೆಂದು ಗೊತ್ತಾಗುತ್ತಲೆ, ಅವರು ಮಲಗಿರುವ ರೂಮಿಗೆ ಓಡಿಬಂದು ಅವರಿಬ್ಬರನ್ನು ಅಲುಗಾಡಿಸುತ್ತ ಮೇಲೆಬ್ಬಿಸಿದಳು..

ಗಡಿಬಿಡಿಯಿಂದ ಮೇಲೆದ್ದ ಅವರ ಅಜ್ಜಿ, ‘ಅಯ್ಯೋ ದೇವ್ರೆ..! ಏನಾಯ್ತಿವತ್ತು, ಇಂಥಾ ಹಾಳು ನಿದ್ದೆ? ಬೆಳಗಾಗೆದ್ದು ಅವರಿಗೊಂದು ಕಾಫಿ ಕೂಡ ಕೊಡಲಿಲ್ಲವಲ್ಲ..’ ಎಂದು ಪೇಚಾಡಿಕೊಳ್ಳುತ್ತಿರುವ ಹೊತ್ತಿಗೆ, ಸೊಸೆ ಅಪರ್ಣ ಎರಡು ಕಾಫಿ ಲೋಟ ಹಿಡಿದು ಒಳಬಂದವಳೆ, ‘ಅಯ್ಯೊ.. ದಿನಾ ಮಾಡ್ತಾನೆ ಇರ್ತೀರಾ.. ಇವತ್ತಾದರು ಮಲಗಿರಲಿ ಅಂಥ ನಾವೆ ಎಬ್ಬಿಸಲಿಲ್ಲ ಅಮ್ಮಾ.. ತೊಗೊಳಿ ನೀವಿಬ್ಬರು ಮೊದಲು ಕಾಫಿ ಕುಡೀರಿ.. ಆಮೇಲೆ ಮಿಕ್ಕಿದ್ದು..’ ಎಂದಳು..

‘ಅಯ್ಯೊ ಅಪರ್ಣಾ, ನೀವು ಹೊರಡೋ ಮುಂಚೆ ಎಲ್ಲಾ ತಿಂಡಿ ಕರಿದಿಡಬೇಕು ಕಣೆ.. ಅದೆಲ್ಲ ಅರ್ಜೆಂಟಲ್ಲಿ ಆಗಲ್ಲ.. ಮೊದಲು ಅದಕ್ಕಿಷ್ಟು ಕಾಳುಗಳನ್ನ ನೆನೆಸಿ ಬರ್ತಿನಿ.. ಕಾಫಿ ಆಮೇಲೆ ಕುಡಿದರಾಯ್ತು..’ ಎಂದು ಮೇಲೆದ್ದವರನ್ನು ಮತ್ತಲ್ಲೆ ಕೂಡಿಸಿದ ಮೊಮ್ಮಗಳು, ‘ಇಲ್ಲಾ ಅಜ್ಜಿ.. ಇವತ್ತು ನಿಮಗೆ ಬೇರೆ ಕೆಲಸ ಇದೆ.. ಅದು ಮುಗಿದ ಮೇಲಷ್ಟೆ ನಿಮ್ಮ ತಿಂಡಿ ಗಿಂಡಿ ಎಲ್ಲ.. ಈಗ ಕಾಫಿ ಕುಡಿದ ಮೇಲೆ ನಿಮ್ಮಿಬ್ಬರಿಗು ಒಂದು ಕೋಚಿಂಗ್ ಕ್ಲಾಸ್ – ಪೂರ್ತಿ ಒಂದು ಗಂಟೆ! ಆಮೇಲೆ ಮಿಕ್ಕಿದ್ದು..’ ಎಂದಳು ಗತ್ತಿನ ದನಿಯಲ್ಲಿ.

‘ಕೋಚಿಂಗ್ ಕ್ಲಾಸಾ..?’ ಎನ್ನುತ್ತ ಮುಖಾಮುಖ ನೋಡಿಕೊಂಡರು ಅವರಿಬ್ಬರು..

‘ಅಯ್ಯೋ ಅಪ್ಪ ಮಗಳು ಸೇರಿಕೊಂಡು ರಾತ್ರಿಯೆಲ್ಲ ಅದೇನೇನೊ ಮಾಡಿಟ್ಟುಕೊಂಡಿದಾರೆ.. ನಿಮಗೆ ಟ್ರೈನಿಂಗ್ ಕೊಡಬೇಕಂತೆ.. ಅವಳು ಅವಳ ಕ್ಲಾಸ್ ಮುಗಿಯೋತನಕ ಬಿಡೋದಿಲ್ಲ.. ಅವಳು ಹೇಳಿದ ಹಾಗೆ ಕೇಳಿ..’ ಎಂದಳು ಅಪರ್ಣ..

ಕಾಫಿ ಕುಡಿದು ಮೊಮ್ಮಗಳನ್ನು ಕುತೂಹಲದಿಂದಲೆ ಹಿಂಬಾಲಿಸಿದರು ಅವರಿಬ್ಬರು – ಅದೇನು ಟ್ರೈನಿಂಗ್ ಕಾದಿದೆ ತಮಗೇ ಎನ್ನುತ್ತ.. ಅವಳ ಜೊತೆ ಸದ್ಯಕ್ಕೆ ಅವಳಿದ್ದ ರೂಮಿನೊಳಕ್ಕೆ ಬರುತ್ತಿದ್ದಂತೆ ಅವಕ್ಕಾಗಿ ನಿಂತುಬಿಟ್ಟರು ಅವರಿಬ್ಬರು..

ಆ ರೂಮಿನಲ್ಲಿ ನೀಟಾಗಿ ಜೋಡಿಸಿದ್ದ ಪುಟ್ಟ ಮೇಜೊಂದರ ಮೇಲೆ ದೊಡ್ಡ ಪರದೆಯ ಟೀವಿ ಮಾನಿಟರ್ ಸ್ಕ್ರೀನ್ ನಗುತ್ತ ಕುಳಿತಿತ್ತು.. ಅದರ ಜೊತೆಗೆ ಅದನ್ನು ಇಂಟರ್ನೆಟ್ಟಿಗೆ ಜೋಡಿಸಿದ್ದ ಕೇಬಲ್ಲುಗಳು, ವೈರ್ಲೆಸ್ ನೆಟ್ವರ್ಕ್ ಪಾಯಿಂಟ್, ರೌಟರ್ ಇತ್ಯಾದಿಗಳನ್ನು ನೀಟಾಗಿ ಜೋಡಿಸಿಟ್ಟಿದ್ದಲ್ಲದೆ, ಹತ್ತಿರದಲ್ಲಿದ್ದ ರೈಟಿಂಗ್ ಪ್ಯಾಡೊಂದರ ಮೇಲಿನ ಶೀಟುಗಳಲ್ಲಿ ಸರಳ ಸೂಚನೆಗಳ ಪಟ್ಟಿ..

‘ಅಜ್ಜಿ ತಾತ.. ನಾನು ಹೋದ ಮೇಲೆ ನಾವು ಹೇಗೆ ಮಾತುಕಥೆ ಆಡೋದು, ಈಗಿನ ಹಾಗೆ ಚಟುವಟಿಕೆ ಮಾಡೋದು? ಅಂಥ ಕೇಳಿದ್ರಲ್ಲ..? ನೋಡಿ ಇಲ್ಲಿದೆ ಅದಕ್ಕೆ ಉಪಾಯ.. ಅಪ್ಪನಿಗೆ ಹೇಳಿ ಇಡೀ ವರ್ಷದ ಇಂಟರ್ನೆಟ್ ಕನೆಕ್ಷನ್ ಜೊತೆ, ಈ ಕಂಪ್ಯೂಟರನ್ನ ತರಿಸಿ ಇನ್ಸ್ಟಾಲ್ ಮಾಡಿದ್ದೀವಿ.. ಇದನ್ನ ಹೇಗೆ ಯೂಸ್ ಮಾಡಬೇಕು, ಪ್ರಾಬ್ಲಮ್ ಆದ್ರೆ ಹೇಗೆ ಹ್ಯಾಂಡಲ್ ಮಾಡಬೇಕು ಅಂತ ನಾನೀಗ ನಿಮಗೆ ಟ್ರೈನಿಂಗ್ ಕೊಡ್ತೀನಿ.. ಪಪ್ಪನು ಹೆಲ್ಪ್ ಮಾಡ್ತಾರೆ.. ಇದಾದ ಮೇಲೆ ನಾವು ದಿನಾ ಬೇಕೂಂದಾಗೆಲ್ಲ ವಿಡಿಯೊ ಕಾಲಲ್ಲಿ ಬಂದು ಮಾತಾಡಬಹುದು.. ಹಾಗೇನೆ, ನಿಮ್ಮ ಸಾಯಂಕಾಲದ ಕಥೆ ಪ್ರೋಗ್ರಮನ್ನು ಇಲ್ಲಿಂದಲೆ ಮಾಡಬಹುದು, ಆ ಮಕ್ಕಳನ್ನು ಜೊತೆಗೆ ಸೇರಿಸಿಕೊಂಡು.. ಆಗ ಈಗೇನೇನೆಲ್ಲ ಮಾಡಿದ್ವೊ ಅದನ್ನೆಲ್ಲಾನು ಇಲ್ಲಿಂದ್ಲೆ ಮಾಡಬಹುದು.. ನಮ್ದು ಟೈಮ್ ಜೋನ್ ಬೇರೆ ಆದ ಕಾರಣ ಅದನ್ನ ಮಾತ್ರ ಅಡ್ಜೆಸ್ಟ್ ಮಾಡಿಕೊಂಡ್ರೆ ಆಯ್ತು.. ಆಗ ನಾವು ಈಗಿನ ಹಾಗೆ ಮಾತುಕಥೆ ಆಡೊಕಂತು ಸಾಧ್ಯವಾಗುತ್ತೆ.. ಆಗ ತುಂಬಾ ಮಿಸ್ ಮಾಡ್ಕೊಳಲ್ಲ ಇಬ್ರೂನು.. ಪಪ್ಪ ಆಗ್ಲೆ ವರ್ಷದ ಪೂರ್ತಿ ಕನೆಕ್ಷನ್ನಿಗೆ ದುಡ್ಡು ಕಟ್ಟಿದಾರೆ.. ನೀವು ಬರಿ ಹೇಗೆ ಯೂಸ್ ಮಾಡೋದು ಅಂಥ ಕಲಿತುಕೊಂಡ್ರೆ ಸಾಕು..’ ಎಂದಳು ಸೊಂಟದ ಮೇಲೆ ಕೈಯಿಟ್ಟುಕೊಂಡು..

ಅವಳ ಮಾತಿಗೆ ಏನುತ್ತರ ಕೊಡಬೇಕೊ ಗೊತ್ತಾಗದೆ ಕಕ್ಕುಲತೆಯಿಂದ ಅವಳ ಮುಖವನ್ನೆ ದಿಟ್ಟಿಸಿ ನೋಡಿದರು ವೃದ್ಧ ದಂಪತಿಗಳಿಬ್ಬರು..

‘ಅಂದ ಹಾಗೆ ಮರೆತಿದ್ದೆ.. ನೋಡಿ ಇದು ವೈರ್ಲೆಸ್ ಹ್ಯಾಂಡ್ ಸೆಟ್.. ನೀವು ಸುತ್ತಾಡುವಾಗ ಇದರ ಜತೆಯಿದ್ದರೆ, ಅಲ್ಲಿಂದಲೆ ಮಾತಾಡಬಹುದು, ವೀಡಿಯೊ ತೋರಿಸಬಹುದು.. ಎಲ್ಲ ಇದಕ್ಕೆ ಕನೆಕ್ಟ್ ಆಗಿರುತ್ತೆ.. ಹಾಗೆ ಪಪ್ಪಗೆ ಹೇಳಿದಿನಿ ನಮ್ಮ ನೆಕ್ಸ್ಟ್ ರಜಾಗೆ ನಿಮ್ಮಿಬ್ಬರನ್ನ ಅಲ್ಲಿಗೆ ಕರೆಸಿಕೊಳ್ಳಬೇಕು ಅಂಥ.. ಆಗ ನಾವು ಫೇಸ್ ಟು ಫೇಸ್ ಮೀಟ್ ಮಾಡಬಹುದು.. ಕ್ರಿಸ್ಮಸ್ ರಜೆಗೆ ನಾವೇ ಇಲ್ಲಿಗೆ ಬರ್ತಿವಿ.. ಹೇಗಿದೆ ಐಡಿಯಾ?’ ಎಂದು ಕತ್ತು ಕೊಂಕಿಸಿ , ಕಣ್ಣು ಮಿಟುಕಿಸಿದಳು.

ಆ ಚಿಕ್ಕ ವಯಸಿನಲ್ಲೆ ಹೀಗೆಲ್ಲ ಚಿಂತಿಸಿ, ಪರ್ಯಾಯ ವ್ಯವಸ್ಥೆ ಮಾಡಿದ ಮೊಮ್ಮಗಳಿಗೆ ಏನುತ್ತರಿಸಬೇಕೆಂದು ಗೊತ್ತಾಗದೆ ಅವಳನ್ನು ಬಾಚಿ ತಬ್ಬಿಕೊಂಡರು ದಂಪತಿಗಳು..

ಬಾಗಿಲಾಚೆಯಿಂದ ಅದನ್ನು ನೋಡುತ್ತಿದ್ದ ಮೋಹನ , ಅಪರ್ಣ ಹರ್ಷದಿಂದ ಜಿನುಗಿದ ಕಂಬನಿಯನ್ನು ಒರೆಸಿಕೊಳ್ಳುತ್ತ ಅಜ್ಜಿ, ತಾತ, ಮೊಮ್ಮಗಳನ್ನು ಅವರ ಲೋಕದಲ್ಲಿರಲು ಬಿಟ್ಟು ತಾವು ಸದ್ದು ಮಾಡದೆ ಅಡಿಗೆ ಮನೆಯತ್ತ ಸರಿದು ಹೋದರು..

ಕಳಚುವ ಕೊಂಡಿಗಳನ್ನು ಹಿಡಿದಿಟ್ಟು, ಸ್ವಪ್ರೇರಣೆಯಿಂದ ಬೆಸುಗೆ ಹಾಕ ಹೊರಟ ಮಗಳ ಚರ್ಯೆ ಅವರಿಗೆ ಆತ್ಯಂತ ತೃಪ್ತಿ ನೀಡಿತ್ತು.

(ಮುಕ್ತಾಯ)

– ನಾಗೇಶ ಮೈಸೂರು
೧೭.೦೯.೨೦೨೧

(Picture source: internet / social media)

ಪ್ರಾಜೆಕ್ಟ್ ‘ಕಸಂ!’(ಗುಬ್ಬಣ್ಣ ಎಗೈನ್! )


ಲಘು ಪ್ರಹಸನ / ಹರಟೆ: (ಗುಬ್ಬಣ್ಣ ಎಗೈನ್! )

ಪ್ರಾಜೆಕ್ಟ್ ‘ಕಸಂ!’


‘ಏನ್ ಸಾರ್.. ಅಷ್ಟೊಂದು ಬರೀತಿರಲ್ಲ.. ಎಷ್ಟು ಬುಕ್ ಬಂದಿದೆ..?’ ಎನ್ನುವ ಪ್ರಶ್ನೆಯನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದುಹೋಗಿತ್ತು.. ಬುಕ್ಕಾಗಿಸದವ ಬರಹಗಾರನೆ ಅಲ್ಲ ಎಂಬ ಅಲಿಖಿತ ನಿಯಮವೆ ಇದೆಯೇನೊ ಅಂದುಕೊಂಡೆ ಪರಮ ಪಾಪಿ ಸನ್ಮಿತ್ರ ಗುಬ್ಬಣ್ಣನನ್ನು ಕೇಳಿದ್ದೆ..

‘ಈಗ ಏನ್ ಮಾಡೋದೊ ಗುಬ್ಬಣ್ಣ?’

‘ಮಾಡೋದೇನು ಅಂತ ಕೇಳ್ತಿರಲ್ಲ ಸಾರ್? ಒಂದಷ್ಟು ಖರ್ಚು ಮಾಡಿ ಪುಸ್ತಕ ಮಾಡಿಸಿಬಿಡಿ.. ನಿಮ್ದು ಒಂದು ಹೆಸರು ನೇತಾಡ್ಲಿ ಗುಂಪಲ್ ಗೋವಿಂದ ಅಂತ..’ ಡಿಸಿಶನ್ ಕೊಟ್ಟೆಬಿಟ್ಟ ಗುಬ್ಬಣ್ಣ..

‘ಈಗ ಕವಿತೆಗಳನ್ನ ಯಾರು ಕೊಂಡುಕೊಂಡು ಓದ್ತಾರೊ ಗುಬ್ಬಣ್ಣ? ಪಬ್ಲಿಷರ್ಸ್ ಅಂತು ನಮ್ಕಡೆ ತಲೇನೆ ಹಾಕ್ಬೇಡಿ ಅಂತಾರೆ.. ನಾವೆ ಪಬ್ಲಿಷ್ ಮಾಡೊದಂದ್ರೆ ಅದಕ್ಕೆ ಬೇಕಾದ ನೆಟ್ವರ್ಕ್ ಇಲ್ವೊ.. ಸುಮ್ನೆ ಕಾಸು ಹಾಕಿ ಕೈ ಸುಟ್ಕೊಳೊ ವ್ಯವಹಾರ ಆಗುತ್ತೇನೊ ಅಂತ..?’

‘ಸಾರ್ ಈ ಅಂತೆ ಕಂತೆಗಳ ರಾಗ ಎಳೆಯೋದು ಬಿಟ್ಟು, ‘ಒಂದಷ್ಟು ಕಾಸು ಕೈ ಬಿಡ್ತು’ ಅಂತ ಮನಸು ಗಟ್ಟಿ ಮಾಡ್ಕೊಂಡು ಪ್ರಾಜೆಕ್ಟಿಗೆ ಕೈ ಹಾಕಿ.. ಚೀಪ್ ಅಂಡ್ ಬೆಸ್ಟ್ ಆಗಿ ಮಾಡಿ ಕೈ ತೊಳ್ಕೊಳಿ..’ ಎಂದು ಮತ್ತಷ್ಟು ಪುಕ್ಕಟೆ ಸಲಹೆ ಕೊಟ್ಟ.. ಅವನು ಪ್ರಾಜೆಕ್ಟ್ ಅನ್ನುತ್ತಿದ್ದ ಹಾಗೆ, ಯಾಕೆ ಇದನ್ನೊಂದು ಪ್ರಾಜೆಕ್ಟ್ ಹಾಗೆ ಮ್ಯಾನೇಜು ಮಾಡಿ ಪ್ರಯತ್ನಿಸಬಾರದು ಅನಿಸಿತು..

‘ಹೌದೊ ಗುಬ್ಬಣ್ಣ.. ಇದೊಂದು ಪ್ರಾಜೆಕ್ಟ್ ಅಂತ್ಲೆ ಟ್ರೈ ಮಾಡ್ಬೇಕು, ಪ್ರೊಫೆಶನಲ್ಲಾಗಿ ಹ್ಯಾಂಡಲ್ ಮಾಡಿ ನೋಡ್ಬೇಕು.. ನಿನಗೆ ಹೆಂಗಿದ್ರು ಅದರ ಅನುಭವನು ಇದೆ.. ಸ್ವಲ್ಪ ಐಡಿಯಾಸ್ ಕೊಡು..’

‘ಸರಿ ಹಾಗಾದ್ರೆ ಎಲ್ಲಾದಕ್ಕು ಮೊದಲು ನಿಮ್ಮ ಪ್ರಾಜೆಕ್ಟಿಗೊಂದು ಹೆಸರು ಕೊಡಿ ಸಾರ್.. ತೊಗೊಳಿ ಅದನ್ನ ನಾನೆ ಸಜೆಸ್ಟ್ ಮಾಡ್ತೀನಿ.. ‘ಪ್ರಾಜೆಕ್ಟ್ ಕಸಂ’ ಅಂತಿಡಿ..’

‘ಲೋ.. ಲೋ.. ಏನು ಹೆಸರೊ ಇದು? ಮೊದಲನೆ ಪುಸ್ತಕದ ಪ್ರಾಜೆಕ್ಟು .. ಅದಕ್ಕೆ ಕಸ ಕಡ್ಡಿ ಅಂತ ಅಶುಭಗಳನ್ನೆ ಸೇರಿಸ್ತಾ ಇದ್ದಿಯಲ್ಲೊ?’

‘ಛೇ.. ಛೇ ಹಾಗಲ್ಲ ಸಾರ್.. ನೀವು ಸ್ವಲ್ಪ ಅರ್ಜೆಂಟೇಶ್ವರರು.. ಮೊದಲು ಕಸಂ ಅಂದ್ರೆ ಏನು ಅಂತ ಕೇಳಿದ್ರಾ? ಇಲ್ಲ! ಎಲ್ಲಕ್ಕು ಮೊದಲೆ ಜಡ್ಜ್ ಮಾಡಿಬಿಡ್ತೀರಲ್ಲ?’

‘ಸರಿ.. ಕಸಂ ಅಂದ್ರೆ ಏನು?’

‘ಸಿಂಪಲ್ಲಾಗಿ ಕನ್ನಡದಲ್ಲಿ ‘ಕವನ ಸಂಕಲನ’ದ ಶಾರ್ಟ್ ಫಾರ್ಮ್ – ಕ.ಸಂ …! ಹಿಂದಿಯಲ್ಲು ‘ಕಸಂ’ ಅಂತ ಪದ ಇದೆ ಗೊತ್ತಲ್ಲ? ‘ಸನಂ ತೇರಿ ಕಸಂ’, ‘ಕಸಂ ತೇರಾ ವಾದ’, ‘ಮೇರಾ ಮಾಕಿ ಕಸಂ’ ಅಂತೆಲ್ಲ ಪ್ರಾಮೀಸ್ ಮಾಡೋದನ್ನ ಕೇಳಿದ್ದಿರಲ್ಲ? ಇದು ನೀವು ನಿಮ್ಮ ಓದುಗ ಅಭಿಮಾನಿಗಳಿಗೆ ಮಾಡ್ತಿರೊ , ನೀಡ್ತಿರೊ ಮೊದಲನೆ ‘ಕಸಂ’ ಅರ್ಥಾತ್ ‘ಕವನ ಸಂಕಲನ’ ದ ಪ್ರಾಮೀಸ್ ಅಂತಲು ಆಗುತ್ತೆ.. ಶಾರ್ಟ್ ಅಂಡ್ ಸ್ವೀಟಾಗಿ ‘ಪ್ರಾಜೆಕ್ಟ್ ಕಸಂ’ ಅನ್ನೊ ಹೆಸರು ಕ್ಯಾಚೀ ನೇಮ್ ಕೂಡ ಆಗುತ್ತೆ..’ ತನ್ನ ಲಾಜಿಕ್ ಮುಂದಿಟ್ಟ ಗುಬ್ಬಣ್ಣ.. ಯಕಃಶ್ಚಿತ್ ಒಂದು ಕವನ ಸಂಕಲನದ ಯತ್ನವನ್ನೆ, ಇವನು ಪ್ರಾಮೀಸಿನಿಂದ ಪ್ರಾಮೀಸರಿ ನೋಟ್ ನ ಮಟ್ಟಕ್ಕೇರಿಸುತ್ತಿರುವುದನ್ನು ಕಂಡು ತುಸು ಭಯವೆ ಆಯ್ತು..

‘ಹಾಳಾದವನೆ.. ಮೊದಲೆ ಹಿಂದಿ ಹೇರಿಕೆ, ಅದೂ ಇದೂ ಅಂತ ಚರ್ಚೆ ನಡೀತಾ ಇರುತ್ತೆ, ಸೋಶಿಯಲ್ ಮೀಡಿಯಾಲಿ. ನೀನು ಪ್ರಾಜೆಕ್ಟಿಗೆ ಹಿಂದಿ ಹೆಸರು ಇಡುಂತಿಯಲ್ಲ ? ಸಾಲದ್ದಕ್ಕೆ ಕನ್ನಡದಲ್ಲಿ ಕಸಂ ಅಂಥ ಓದಿದಾಗ ಗುಡಿಸಿ ಎಸೆಯೊ ಕಸವನ್ನ ನೆನಪಿಸಿದ ಹಾಗೆ ಆಗಲಿಲ್ವಾ? ಕಸದ ಬುಟ್ಟಿಯನ್ನ ನೆನೆಸಿಕೊಳ್ಳೊ ಹಾಗೆ ಆಗಲ್ವಾ..? ಬುಕ್ ಬಗ್ಗೆ ಮಾತಾಡ್ದೆ ಹೆಸರಿನ ಬಗ್ಗೆ ಟೀಕಿಸ್ತಾರೊ..!’ ನಾನು ಕಷ್ಟದಿಂದ ಕೋಪ ತಡೆದುಕೊಳ್ಳುತ್ತ ಹೇಳಿದೆ..

ಇಷ್ಟಕ್ಕೆಲ್ಲ ಹೆದರುವ ಅಸಾಮಿಯೆ ಗುಬ್ಬಣ್ಣ? ಹೇಳಿ, ಕೇಳಿ ‘ಕನ್ಸಲ್ಟೆಂಟು’ .. ‘ಕನಸಲ್ಲು ಬಿಡದೆ ಟೆಂಟು’ ಹಾಕಿಕೊಂಡು ಕಾಡುವ ದೆವ್ವದಂಥ ಕನ್ಸಲ್ಟೆಂಟು ನಾನು – ಅಂತ ಅವನೇ ಹೇಳಿಕೊಳ್ತಾ ಇರ್ತಾನೆ…

‘ಏನು ಮಾತಾಡ್ತೀರಿ ಸಾರ್ ನೀವು? ಇವತ್ತು ಏನೇ ಸೇಲ್ ಆಗ್ಬೇಕಿದ್ರು ಮೊದ್ಲು ಸುದ್ಧಿ ವೈರಲ್ ಆಗ್ಬೇಕು ಸಾರ್ ವೈರಲ್..! ನೆಟ್ಟಗಿದ್ರೆ ನೆಟ್ಟಿನಲ್ಲಿ ಯಾವ ಸುದ್ಧಿ ವೈರಲ್ ಆಗುತ್ತೆ ಹೇಳಿ? ಹೀಗೆ ಸ್ವಲ್ಪ ಸೊಟ್ಟಂಬಟ್ಟ ಇದ್ರೇನೆ ಜನರ ಗಮನ ಸೆಳೆಯೋದು.. ಆ ಕ್ಯೂರಿಯಾಸಿಟಿ ಬಂದ್ರೆ ಆಮೇಲೆ ಡೀಟೈಲ್ಸ್ ನೋಡ್ತಾರೆ.. ಇಲ್ಲಿ ಹಿಂದಿ – ಕನ್ನಡ ಆಂಗಲ್ ಬಂದ್ರೆ ಇನ್ನೂ ವಾಸಿ! ಜಾಸ್ತಿ ಧೂಳೆದ್ದಷ್ಟು ಜಾಸ್ತಿ ಪಬ್ಲಿಸಿಟಿ..! ಇಲ್ದಿದ್ರೆ ಯಾರೂನು ಮೂಸೂ ಕೂಡ ನೋಡಲ್ಲ ಗೊತ್ತ? ಗುಂಪಲ್ಲಿ ಗೋವಿಂದ ಆಗೋಗುತ್ತೆ.. ಇಷ್ಟಕ್ಕು ನಾನೇನು ಬುಕ್ ನೇಮ್ ‘ಕಸಂ’ ಅಂತಿಡಿ ಅಂದ್ನಾ? ಬರಿ ಪ್ರಾಜೆಕ್ಟ್ ನೇಮ್ ಅಷ್ಟೆ ತಾನೆ? ಪ್ರಾಜೆಕ್ಟ್ ಹೆಸರೇನು ನೀವು ಊರಿಗೆಲ್ಲ ಢಂಗೂರ ಸಾರಿಸಬೇಕಾಗಿಲ್ಲವಲ್ಲ? ನಿಮಗೆ, ನನಗೆ ಗೊತ್ತಿದ್ರೆ ಸಾಕು..’ ಎಂದು ಮತ್ತೊಂದು ಪುಟ್ಟ ಭಾಷಣವನ್ನೆ ಬಿಗಿದ.. ಹಾಳಾಗಿ ಹೋಗಲಿ ಎಂದು ನಾನು ಮೌನವಾಗಿ ತಲೆಯಾಡಿಸಿದೆ – ಹಾಗಾದರು ಬುಕ್ಕಿಗೆ ಪಬ್ಲಿಸಿಟಿ ಸಿಗುವುದಾದರೆ ಯಾಕೆ ಬೇಡ ಎನ್ನಬೇಕು ? ಎಂದು ಲಾಜಿಕ್ಕಿಸುತ್ತ..

ಅನಂತರ ಸುಮಾರು ಹೊತ್ತು ‘ಬಿಸಿಬಿಸಿ’ ಚರ್ಚೆ ನಡೆಯಿತು ‘ಕಸಂ’ ನ ಮುಂದಿನ ಹೆಜ್ಜೆಗಳನ್ನು ಕುರಿತು.. ಕೊನೆಗೆ ತಕ್ಷಣದಲ್ಲಿ ಮಾಡಬೇಕಾದ ಒಂದೆರಡು ಅವಸರದ ಕಾರ್ಯಗಳನ್ನು ಗುರುತಿಸಿಕೊಟ್ಟ ಗುಬ್ಬಣ್ಣ..

‘ಸಾರ್.. ನಿಮಗೇ ಗೊತ್ತು.. ಪ್ರಿಂಟಿಂಗ್ ಅಂತ ಹೋದರೆ, ಮಿನಿಮಮ್ ಕ್ವಾಂಟಿಟಿ ಮಾಡಿಸಬೇಕಾಗುತ್ತೆ.. ರೇಟು ಎಲ್ಲಾ ಅದರ ಮೇಲೆ ಅವಲಂಬಿಸಿರುತ್ತೆ.. ನೀವು ಜಾಸ್ತಿ ಮಾಡಿಸಿದಷ್ಟು ‘ಚೀಪ್’ ಆಗಿ ವರ್ಕೌಟ್ ಆಗುತ್ತೆ.. ಆಗ ನೀವು ಮಾರೋ ದರನು ಕಡಿಮೆ ಇಡಬಹುದು – ಜನ ರೇಟು ನೋಡಾದ್ರು ತೊಗೊಬಹುದು.. ಕಡಿಮೆ ವಾಲ್ಯೂಂ ಅಂದ್ರೆ ಬುಕ್ ರೇಟು ಜಾಸ್ತಿಯಾಗುತ್ತೆ , ಆದರೆ ಕೊಳ್ಳೊ ಜನ ಕಮ್ಮಿ ಆಗ್ತಾರೆ..’

‘ಹಾಗಾದ್ರೆ ಇಷ್ಟು ಕಾಪಿ ಅಂತ ಹೇಗೆ ಡಿಸೈಡ್ ಮಾಡೋದೊ ಗುಬ್ಬಣ್ಣ..?’

‘ಸಿಂಪಲ್ ಸಾರ್.. ಒಂದು ಮಾರ್ಕೆಟ್ ಸರ್ವೆ ಮಾಡಿಬಿಡೋಣ.. ನಿಮ್ಮ ಸೋಶಿಯಲ್ ಮೀಡಿಯಾಲೆ ಒಂದು ಸರ್ವೆ ಮಾಡಿ ಕೇಳೋಣ – ಬುಕ್ ಮಾಡಿದ್ರೆ ತೊಗೋತಾರ? ಎಷ್ಟು ರೇಟು ಒಳಗಿದ್ರೆ ತೊಗೋತಾರೆ? ಇತ್ಯಾದಿ.. ಅದು ಗೊತ್ತಾದ ಮೇಲೆ ಅಷ್ಟು ವಾಲ್ಯೂಮಿಗೆ ಒಳ್ಳೆ ರೇಟಲ್ಲಿ ಪ್ರಿಂಟು ಮಾಡೊ ಮುದ್ರಕರು, ಪ್ರಕಾಶಕರು ಸಿಗ್ತಾರ ನೋಡ್ಬೇಕು – ಅದು ಸೆಕೆಂಡ್ ಸ್ಟೆಪ್. ಅಲ್ಲಿಂದಾಚೆಗೆ ಎಲ್ಲಾ ತಂತಾನೆ ಆಗುತ್ತೆ..’

ಅವೆರಡನ್ನು ಮೊದಲು ಮಾಡೋದು ಅನ್ನೊ ನಿರ್ಧಾರದೊಂದಿಗೆ, ‘ಪ್ರಾಜೆಕ್ಟ್ ಕಸಂ’ ನ ಮೊದಲ ದುಂಡು ಮೇಜಿನ ಕಾನ್ಫರೆನ್ಸ್ , ಮುಂದಿನ ಮೀಟಿಂಗಲ್ಲಿ ‘ಗುಂಡಿರಬೇಕೆಂಬ’ ಕಂಡಿಶನ್ನಿನೊಂದಿಗೆ ಮುಕ್ತಾಯವಾಯ್ತು..

ಅದಾದ ಒಂದೆರಡು ವಾರದ ನಂತರ ಮತ್ತೆ ಮುಂದಿನ ದುಂಡು ಮೇಜಿನ ಪರಿಷತ್ತಿನಲ್ಲಿ ಭೇಟಿಯಾದ ಗುಬ್ಬಣ್ಣ – ಪ್ರಾಮೀಸ್ ಮಾಡಿದ್ದಂತೆ – ಬೀರಿನ ಸೇವಾರ್ಥದೊಡನೆ.. ಅಂದ ಹಾಗೆ, ದುಂಡು ಮೇಜೆಂದರೆ ನಮ್ಮ ಹಾಕರ್ ಸೆಂಟರುಗಳಲ್ಲಿ ಇರುವ ರೌಂಡ್ ಟೇಬಲ್ ಅಷ್ಟೆ.. ಓಫನ್ ಏರಲ್ಲಿ ಕೂತು ಬೀರಬಲ್ಲರು ಬೀರೇಳಿಸುವ ಜಾಗವೇ ಹೊರತು, ಬೀರಮ್ಮಂದಿರು ತಮ್ಮ ಮೈಮಾಟ, ಮಾದಕ ಭಂಗಿಗಳಿಂದ ನವಿರೇಳಿಸುವ ತಾಣಗಳಲ್ಲ.. ಹೀಗಾಗಿ ಯಾವುದೆ ‘ಸೀರಿಯಸ್’ ಡಿಸ್ಕಶನ್ನಿಗೆ ಅದು ಸೂಕ್ತ ಜಾಗ.. ಬೀರನ್ನು ಮೀರಿಸಿದ ಕಿಕ್ಕ್ ಬೇಕೆಂದವರಿಗು ಅವರ ಶಕ್ತಾನುಸಾರ ‘ಹಾಟ್ ಡ್ರಿಂಕ್ಸ್’ ಲಭ್ಯ.. ಬೀರಾಗದವರಿಗು ನೀರೊ, ಮತ್ತೊಂದೊ ಸಿಗುವುದರಿಂದ ಅದೊಂದು ಸರ್ವ ಸಮ್ಮತ ತೀರ್ಥ ಕ್ಷೇತ್ರವೆಂದೆ ಹೇಳಬಹುದು.. ಅಲ್ಕೋಹಾಲೊ, ಬರಿ ಹಾಲೊ – ಬೇಕಾದ ಆಯ್ಕೆಯ ಸಾಧ್ಯತೆಯಿರುವುದರಿಂದ ಅಲ್ಲಿ ಜನ ಜಂಗುಳಿಯು ಹೆಚ್ಚು.. ಕುಡಿಯುತ್ತ ತಿನ್ನುತ್ತ ಮಾತಾಡಲು ಅನುಕೂಲವಾಗುವ ಹಾಗೆ ಬರಿಯ ದುಂಡು ಮೇಜುಗಳೆ ಇರುವುದರಿಂದ ಆ ಹೆಸರು..

‘ಎಲ್ಲಿಗೆ ಬಂತು ಸಾರ್ ನಿಮ್ಮ ‘ಕಸಂ’?’ ಬೀರನ್ನು ಸಿಪ್ಪಿಸುತ್ತ ಕೇಳಿದ ಗುಬ್ಬಣ್ಣ.. ಕಸಂ ಎಂದಿದ್ದಕ್ಕೆ ಕೋಪ ಬಂದರು ಜಗಳವಾಡುವ ಮೂಡಿಲ್ಲದೆ, ನುಂಗಿಕೊಂಡು ಹೇಳಿದೆ..

‘ಗುಬ್ಬಣ್ಣ.. ಸರ್ವೆನಲ್ಲಿ ಸುಮಾರು ೫೦೦ ಜನ ರೆಸ್ಪಾಂಡ್ ಮಾಡಿದಾರೊ.. ಇನ್ನೂರು ರೂಪಾಯಿ ಒಳಗಿದ್ರೆ ಅವ್ರಲ್ಲಿ ಶೇಕಡ ತೊಂಬತ್ತರಷ್ಟು ಜನ ಬುಕ್ ತೊಗೋತಾರಂತೊ..!’

‘ಗ್ರೇಟ್ ಸಾರ್..! ಹಾಗಾದ್ರೆ ಮೊದಲೆ ಯಾಕೆ ದುಡ್ಡು ತೊಗೊಂಡು ಅಡ್ವಾನ್ಸ್ ಬುಕಿಂಗ್ ಮಾಡಿಬಿಡಬಾರದು? ಆಗ ನಿಮ್ಮ ಕೈಯಿಂದ ಖರ್ಚಿಲ್ಲದೆ ಬುಕ್ ಮಾಡಿಸಿ, ಅವರಿಗೆ ದಾಟಿಸಿ ನೀವು ಪ್ರಾಫಿಟ್ ಜೋಬಿಗಿಳಿಸಬಹುದು..’ ಎಂದ ಗುಬ್ಬಣ್ಣ ‘ಗ್ರೇಟ್ ಡಿಸ್ಕವರಿ’ ಮಾಡಿದವನಂತೆ..

‘ಗುಬ್ಬಣ್ಣ.. ದಟ್ ಇಸ್ ಗ್ರೇಟ್ ಬಿಜಿನೆಸ್ ಮಾಡೆಲ್.. ಬಟ್ ಇಟ್ ನೆವರ್ ಫ್ಲೈ..! ನಮ್ಮಲ್ಯಾರೊ ಮೊದಲೆ ದುಡ್ಡು ಕೊಟ್ಟು ಬುಕ್ಕನ್ನ ಬುಕ್ ಮಾಡ್ತಾರೆ – ಅದು ಹಿಂದು ಮುಂದು ಗೊತ್ತಿಲದ ಲೇಖಕನ ಮೊದಲನೆ ಪುಸ್ತಕವನ್ನ? ಸದ್ಯ ತೊಗೊತಿವಿ ಅಂಥ ಹೇಳ್ತಿರೋದೆ ದೊಡ್ಡದು..!’ ನಾನು ಉವಾಚಿಸಿದೆ.

‘ಹೋಗ್ಲಿ ಬಿಡಿ ಸಾರ್ .. ಅಲ್ಲಿಗೆ ಒಂದು ನಾನೂರು – ಐನೂರು ಬುಕ್ಸ್ ಮಾಡಿಸಿದರೆ ಸಾಕಲ್ವ? ಅದನ್ನ ಚೀಪಾಗಿ ಮಾಡೋ ಪ್ರಕಾಶಕರು ಯಾರಾದ್ರು ಗೊತ್ತಾದ್ರ?’

‘ಒಬ್ಬರು ಲೋ ವಾಲ್ಯೂಂ ಪಬ್ಲಿಷರ್ ಸಿಕ್ಕಿದಾರೊ.. ಮಾರ್ಕೆಟಿಂಗ್ ಕೂಡ ಮಾಡ್ತಾರಂತೆ.. ಕಡಿಮೆ ವಾಲ್ಯೂಮ್ ಆದ್ರೆ ಪರ್ ಪೀಸ್ ರೇಟು ಜಾಸ್ತಿ ಆಗುತ್ತೆ ಅಂದ್ರು..’

‘ಐನೂರಕ್ಕೆ ಕೇಳಿದ್ರ ಸಾರ್..?’

‘ಹೂಂ ಕೇಳಿದೆ.. ಆದ್ರೆ ಆ ರೇಟಲ್ಲಿ ಮಾಡಿಸಿದ್ರೆ ಮಾರೊ ರೇಟು ಮುನ್ನುರರ ಹತ್ರ ಬರುತ್ತೆ.. ನಮಗೆ ಇನ್ನೂರರ ಒಳಗೆ ಇರಬೇಕು..’

‘ಓಹೋ..!’

‘ಆದರೆ ಅದೇ ಸಾವಿರ ಪ್ರತಿ ಮಾಡಿಸಿದ್ರೆ ಪ್ರತಿ ಪುಸ್ತಕನು ನೂರು ರೂಪಾಯಿ ಆಸುಪಾಸಲ್ಲಿ ಮಾರ್ಬೋದಂತೆ..! ಆ ವಾಲ್ಯೂಮಲ್ಲಿ ತುಂಬಾ ಚೀಪ್ ಆಗಿ ವರ್ಕೌಟ್ ಆಗುತ್ತೆ ಅಂದ್ರು..’

‘ಅದಕ್ಕೆ..?’

‘ನೂರು ರೂಪಾಯಿ ರೆಂಜಲ್ಲಿ ಮಾರೋದಾದ್ರೆ ಇನ್ನು ಜಾಸ್ತಿ ಜನ ತೊಗೊಬೋದು ಅಲ್ವಾ? ಅದಕ್ಕೆ ಸಾವಿರ ಪ್ರತಿಗೆ ಆರ್ಡರ್ ಕೊಟ್ಟುಬಿಟ್ಟೆ ಗುಬ್ಬಣ್ಣಾ..!!’

‘ಆಹ್..! ಆರ್ಡರ್ ಕೊಟ್ಟಾಗೋಯ್ತ..?’ ನನ್ನ ಮಾತಿಗೆ ಬೆಚ್ಚಿ ಬಿದ್ದವನಂತೆ ಕೇಳಿದ ಗುಬ್ಬಣ್ಣ..

‘ಹೂಂ ಕಣೊ.. ಈಗ ಪ್ರಮೋಶನ್ ಟೈಮ್ ಅಂತೊ.. ನಾನು ಸೆಲೆಕ್ಟ್ ಮಾಡಿರೊ ಕವನಗಳು ಒಂದು ಬುಕ್ಕಲ್ಲಿ ಸಾಲೋದಿಲ್ವಂತೆ.. ಅದಕ್ಕೆ ಎರಡು ಬುಕ್ ಮಾಡಿಸಿಬಿಡಿ ಅಂದ್ರು .. ಆಗ ಒಂತರ ಇನ್ನೂರರ ರೇಂಜಲ್ಲೆ ಮಾರಿದ ಹಾಗಾಗುತ್ತೆ.. ನಿಮಗೂ ಲಾಸಾಗಲ್ಲ ಅಂತ ಸಜೆಸ್ಟ್ ಮಾಡಿದ್ರು..’

‘ಆಮೇಲೆ..?’ ತುಸು ಗಾಬರಿ, ಕೋಪ ಮಿಶ್ರವಾದ ದನಿಯಲ್ಲೆ ಕೇಳಿದ ಗುಬ್ಬಣ್ಣ.. ಅವನ ಕನ್ಸಲ್ಟಿಂಗ್ ಸಹಾಯವಿಲ್ಲದೆ ಎಲ್ಲಾ ನಾನೇ ಡೀಲ್ ಮಾಡಿಬಿಟ್ಟೆನೆಂಬ, ಅವನ ಅಹಮ್ಮಿಗೆ ಪೆಟ್ಟು ಬಿದ್ದ ರೋಷಕ್ಕಿರಬಹುದು.. ನಾನು ಅದನ್ನು ನಿರ್ಲಕ್ಷಿಸಿ ಮುಂದುವರೆಸಿದೆ..

‘ಆಯ್ತು ಅಂತ ಜೋಡಿ ಸಂಕಲನ, ‘ಥೌಸೆಂಡ್ ಕಾಫಿಸ್ ಈಚ್’ – ಆರ್ಡರು ಕೊಟ್ಟುಬಿಟ್ಟೆ.. ನಮ್ಮ ಲೆಕ್ಕದಂತೆ ಐನೂರೆ ಸೆಟ್ ಸೇಲ್ ಆದರು ಸಾಕು , ನಮ್ಮ ಬಂಡವಾಳದ ಮೇಲೆ ಇಪ್ಪತ್ತು ಪರ್ಸೆಂಟ್ ಲಾಭ.. ಅದರಾಚೆಗೆ ಮಾರಿದ್ದೆಲ್ಲವು ಲಾಭದ ಲೆಕ್ಕಕ್ಕೇನೆ..!‘ ಎಂದು ಕಣ್ಣಲ್ಲೆ ನಕ್ಷತ್ರ ಲೋಕ ಅರಳಿಸುತ್ತ ಹೇಳಿದೆ.. ಗುಬ್ಬಣ್ಣನಿಗೆ ಅದೇನನಿಸಿತೊ ಏನೊ?

‘ಸರಿ ಸಾರ್.. ಇನ್ನು ನಿಮ್ಮ ಪ್ರಾಜೆಕ್ಟಿಗೆ ಕನ್ಸಲ್ಟೆಂಟು ಅವಶ್ಯಕತೆ ಏನೂ ಬೇಡ.. ನೀವು ಪಬ್ಲಿಷರ್ ಜೊತೆ ಮಿಕ್ಕಿದ ಕೆಲಸ ಮುಂದುವರೆಸಿಕೊಂಡು ಹೋಗಿ.. ‘ಅಲ್ ದಿ ಬೆಸ್ಟ್’‘ ಎಂದವನೆ, ದುರ್ದಾನ ತೆಗೆದುಕಂಡವನಂತೆ ಎದ್ದು ಹೋಗಿಬಿಟ್ಟ..! ನಾನು ‘ಈ ಗುಬ್ಬಣ್ಣನಿಗೆ ಎಲ್ಲಾ ನಾನೆ ಮ್ಯಾನೇಜ್ ಮಾಡಿಕೊಂಡೆ ಅಂಥ ಹೊಟ್ಟೆಕಿಚ್ಚು ಜಾಸ್ತಿ..’ ಎಂದು ಗೊಣಗುತ್ತ ಮೇಲೆದ್ದೆ – ಪೆಂಡಿಂಗ್ ಇದ್ದ ಬುಕ್ಕಿನ ಕಂಟೆಂಟ್ ಸೆಲೆಕ್ಷನ್, ಎಡಿಟಿಂಗ್, ಟೈಪಿಂಗ್ ಇತ್ಯಾದಿ ಕೆಲಸಗಳತ್ತ ಗಮನ ಹರಿಸಲೆಂದು..


ಸುಮಾರು ತಿಂಗಳುಗಳೆ ಕಳೆದಿತ್ತು ಗುಬ್ಬಣ್ಣ ಸಿಕ್ಕಿ..

ಇವತ್ತೆ ಮತ್ತೆ ಭೇಟಿಯಾಗಿದ್ದು – ‘ಗುಂಡಿನ ಸಮೇತ‘ ದುಂಡು ಮೇಜಿನಲ್ಲಿ.. ಮತ್ತೆ ಗುಂಡಿನ ಆಸೆ ತೋರಿಸದಿದ್ದರೆ ಅವನು ಬರುತ್ತಿದ್ದುದ್ದೆ ಅನುಮಾನವಿತ್ತು! ಮಹಾನುಭಾವ ಬುಕ್ ರಿಲೀಸಿಗು ಬರದೆ ತನ್ನ ಕೋಪ ತೋರಿಸಿದ್ದ..

‘ಆಗಿದ್ದಾಯ್ತೊ ಗುಬ್ಬಣ್ಣ.. ಸಮಾಧಾನ ಮಾಡ್ಕೊಂಡು ಏನಾದ್ರು ಐಡಿಯಾ ಹೇಳೊ..’ ಎಂದೆ ಬೀರಿನ ಮೊದಲ ಗ್ಲಾಸು ಖಾಲಿಯಾದ ಮೇಲೆ..

‘ಏನು ಐಡಿಯಾ ಹೇಳಬೇಕು ಸಾರ್.. ಎಲ್ಲಾ ನೀವೆ ಮಾಡಿಕೊಂಡ್ರಲ್ಲ..?’ ಎಂದ ವ್ಯಂಗ್ಯದ ದನಿಯಲ್ಲೆ..

‘ಗುಬ್ಬಣ್ಣ.. ನೋವನ್ ಇಸ್ ಪರ್ಫೆಕ್ಟ್..! ನನಗು ಹೊಸದು .. ಅನುಭವ ಸಾಲದು.. ತಪ್ಪು ಹೆಜ್ಜೆ ಇಟ್ಟೆ.. ಈಗ ಸ್ನೇಹಿತ ಅಂತ ಬಂದಿದೀನಿ.. ಹೆಲ್ಪ್ ಮಾಡ್ತಿಯೊ ಇಲ್ವೊ ಅಷ್ಟು ಹೇಳು ..’ ಅಂದಾಗ ಸ್ವಲ್ಪ ಮೆತ್ತಗಾದ..

‘ಸರಿ ಏನಾಯ್ತು ಅಂತ ಹೇಳಿ..’

‘ಸುಮಾರು ಒಂಭೈನೂರೈವತ್ತು ಜೊತೆ ಪುಸ್ತಕಗಳು ಕೈಲಿ ಬಂದು ಕೂತಿವೆ ಕಣೊ.. ಏನಾದರು ದಾರಿ ತೋರಿಸಬೇಕು ಅವಕ್ಕೆ..’

‘ಮಾಡಿಸಿದ್ದೆ ಸಾವಿರ ಸಾವಿರ ಅಲ್ವಾ? ಐನೂರು ಖಾಲಿಯಾಗಬೇಕಿತ್ತಲ್ಲ, ಸರ್ವೆ ಪ್ರಕಾರ..?’ ಕೂತಲ್ಲೆ ಎಗರಿ ಬಿದ್ದವನಂತೆ ಭುಜ ಅದುರಿಸಿ ಕೇಳಿದ ಗುಬ್ಬಣ್ಣ..

ನಾನು ಅವನು ಅದುರಿಬಿದ್ದಿದ್ದು ಬೀರಿನ ಕಿಕ್ಕಿಗೆ ಅಂತ ನನ್ನನ್ನು ನಾನೆ ಸಂತೈಸಿಕೊಂಡು ಮುಂದುವರೆಸಿದೆ..‘ಗುಬ್ಬಣ್ಣ, ಸರ್ವೇನೆ ಬೇರೆ, ಜೀವನಾನೆ ಬೇರೆ..’

‘ಅಂದ್ರೆ..?’

‘ಆಗ ತೊಗೋತೀನಿ ಅಂದವ್ರಲ್ಲಿ ತೊಗೊಂಡೋರು ಐವತ್ತು ಜನ ಮಾತ್ರ..! ಅದೂ ಫಾಲೋ ಅಪ್ ಮಾಡಿ ಮಾಡಿ ಬಲವಂತ ಮಾಡಿದ್ದಕ್ಕೆ..’

‘ಭಗವಂತ..! ಹತ್ತೆ ಪರ್ಸೆಂಟ್ ಅಕ್ಯುರೆಸಿ…!’

‘ಮಿಕ್ಕಿದ್ದು ಮನೇಲಿ ಇಡೋಕು ಜಾಗವಿಲ್ದೆ ಕಾರಿನ ಡಿಕ್ಕಿಲಿ ತುಂಬಿಸಿಟ್ಟುಕೊಂಡಿದ್ದೇನೆ..’

‘ದೇವ್ರೆ..! ಆ ಗೌರ್ಮೆಂಟ್ ಲೈಬ್ರರಿಗೆ ೩೦೦ ಜೊತೆ ಕೊಡ್ಬೋದು ಅಂದಿದ್ರಲ್ಲ ಅದೇನಾಯ್ತು..?’

‘ಆಯ್ಯೊ ಈ ಗೌರ್ಮೆಂಟ್ ಬಿದ್ದು ಹೋದ ಗಲಾಟೇಲಿ ಆ ಕಡೆ ಯಾರು ಗಮನಾನೆ ಕೊಡಲಿಲ್ಲ.. ಆಮೇಲೆ ಲಿಸ್ಟಿಂಗ್ ಮಾಡೋಕೆ ಟೈಮ್ ಬಾರ್ ಆಗೋಯ್ತು, ಮರೆತುಬಿಟ್ಟೆ ಅಂದ್ರು ಪಬ್ಲಿಷರ್..’

ಕಣ್ಣಲ್ಲೆ ನನ್ನನ್ನೆ ನುಂಗುವಂತೆ ನೋಡಿದ ಗುಬ್ಬಣ್ಣ.. ವೆಂಡರ್ ಇವ್ಯಾಲ್ಯೂಯೇಶನ್ ಮಾಡದೆ ಸಪ್ಲೈಯರ್ ಆರಿಸಿಕೊಂಡೆನೆಂದು ಈಗಾಗಲೆ ಟೀಕಿಸಿದ್ದ ಬೇರೆ..

‘ಸರಿ.. ಈಗೇನು ಮಾಡ್ತೀರ ಹಾಗಾದ್ರೆ..’

‘ಅದೆ.. ಅದರ ಐಡಿಯಾಸ್ ಕೇಳೋಕೆ ನಿನ್ನ ಹತ್ರ ಬಂದಿದ್ದು..’

‘ನಾನೇನು ಸುಡುಗಾಡು ಐಡಿಯಾಸ್ ಕೊಡಲಿ ಈಗ? ಒಂದೊ ತೂಕಕ್ಕೆ ಹಾಕಿ ಮಾರಿಬಿಡಿ.. ಅದ್ರಲ್ಲು ಜಾಸ್ತಿಯೇನು ಗಿಟ್ಟೋಲ್ಲ.. ಪೊಟ್ಟಣ ಕಟ್ಟೋಕು ಆಗಲ್ಲ ಈ ಸೈಜಲ್ಲಿ.. ಇಲ್ಲಾಂದ್ರೆ ಲೈಫ್ ಲಾಂಗ್ ಸಿಕ್ಕಿದೊರ್ಗೆಲ್ಲ ಒಂದೊಂದೆ ಕಾಪಿ ಮಾರ್ತಾ ಹೋಗಿ ಡಿಸ್ಕೌಂಟಲ್ಲಿ.. ಒಂದಲ್ಲ ಒಂದಿನ ಖಾಲಿಯಾಗುತ್ತೆ.. ಫ್ರೀ ಕೊಟ್ರೆ ಬೇಗ ಖಾಲಿಯಾಗ್ಬೋದು.. ಇಲ್ಲಾಂದ್ರೆ ಯಾವ್ದಾದ್ರು ಗ್ರೂಪಲ್ಲಿ ಸ್ಪರ್ಧೆ ಗಿರ್ಧೆ ಅಂತ ಮಾಡಿ ಪ್ರೈಜಾಗಿ ಈ ಬುಕ್ಸನ್ನೆ ಕೊಡಿ.. ಜೊತೆಗೆ ಸ್ವಲ್ಪ ಕ್ಯಾಶ್ ವೋಚರ್ ತರ ಏನಾದ್ರು ಸೇರಿಸಿ ಕೊಟ್ರೆ ತೊಗೋತಾರೆ ಜನಾ.. ಓದಲುಬಹುದು..’ ಎಂದು ಪುಂಖಾನುಪುಂಖ ಐಡಿಯಾಗಳನ್ನ ವಾಂತಿಸಿದ ಗುಬ್ಬಣ್ಣ..

‘ಏನೊ ಗುಬ್ಬಣ್ಣ ಇದರಲ್ಲಿ ಒಂದಾದರು ಹಾಕಿದ ಕಾಸು ವಾಪಸ್ಸು ತರಿಸೊ ಐಡಿಯಾನೆ ಇಲ್ವಲ್ಲೊ..? ಸಾಲದ್ದಕ್ಕೆ ನಾನೇ ಕ್ಯಾಶ್ ಓಚರ್ ಲಂಚಾ ಕೊಟ್ಟು ಓದಿ ಅಂತ ಹೇಳ್ಬೇಕಾ? ಕನಿಷ್ಠ ಬಂಡವಾಳನಾದ್ರು ಬರ್ಬೇಕಲ್ವೇನೊ?’ ಎಂದೆ ಅಳುವ ದನಿಯಲ್ಲಿ..

‘ಬಿಲ್ಕುಲ್ ಬರಲ್ಲ ಸಾರ್.. ಬರ್ಕೊಡ್ತಿನಿ.. ಹಾಗೇನಾದ್ರು ಬರ್ಬೇಕಾದ್ರೆ ಒಂದೇ ಒಂದು ದಾರಿ ಇದೆ .. ಆದ್ರೆ ಅದು ಬುಕ್ ಮಾರೋದ್ರಿಂದ ಅಲ್ಲಾ..!’

‘ಮತ್ತೆ..?’

‘ಹೇಗಿದ್ರು ಕೈ ಸುಟ್ಕೊಂಡು ಅನುಭವ ಆಗಿದೆ ನಿಮಗೆ.. ನಿಮ್ತರಾನೆ ಬುಕ್ ಮಾಡ್ಸೊ ಮಹಾನುಭಾವರು ಸುಮಾರು ಜನ ಇರ್ತಾರೆ.. ಅವರಿಗೆ ಕನ್ಸಲ್ಟಿಂಗ್ ಸರ್ವಿಸ್ ಕೊಟ್ಟು ಕಮೀಷನ್ ತೊಗೊಳ್ಳಿ.. ಅಷ್ಟೊ ಇಷ್ಟೊ ಬರುತ್ತೆ ಅದ್ರಲ್ಲಿ..’

ಗುಬ್ಬಣ್ಣ ಖಾರವಾದ ವ್ಯಂಗದಲ್ಲಿ ಹೇಳಿದರು, ನಾನದನ್ನ ಸೀರಿಯಸ್ಸಾಗಿಯೆ ತೆಗೆದುಕೊಂಡೆ..

‘ಬೇರೆ ಇನ್ನಾವ ದಾರಿಯೂ ಇಲ್ಲಾಂತಿಯಾ?’

‘ಬಿಲ್ಕುಲ್ ಇಲ್ಲಾ.. ಸರಿ ಸಾರ್ ನಾನು ಬರ್ತಿನಿ.. ಕ್ಲೈಂಟ್ ಮೀಟಿಂಗ್ ಇದೆ’ ಎಂದವನೆ ಗ್ಲಾಸಿನಲ್ಲಿದ್ದ ಮಿಕ್ಕ ಬೀರನ್ನು ಒಂದೆ ಗುಕ್ಕಿನಲ್ಲಿ ಖಾಲಿ ಮಾಡಿ ಎದ್ದು ಹೊರಟು ಹೋದ..!

ಅಂದಹಾಗೆ, ಅವನು ಕೊಟ್ಟ ಐಡಿಯಾ ವ್ಯರ್ಥವಾಗಬಾರದೆಂದು ನಾನಂತು ಕನ್ಸಲ್ಟಿಂಗ್ ಆರಂಭಿಸಿದ್ದೇನೆ.. ನಿಮಗೇನಾದರು ನಿಮ್ಮ ಸಾಹಿತ್ಯವನ್ನ ಬುಕ್ ಮಾಡಿಸುವ ಆಲೋಚನೆ ಇದ್ದರೆ ನನ್ನನ್ನು ಸಂಪರ್ಕಿಸಿ.. ನೇರ ಕೈ ಸುಟ್ಟುಕೊಂಡ ಅನುಭವ ಇರುವುದರಿಂದ, ನಿಮ್ಮನ್ನು ಸುಡದಂತೆ ಕಾಪಾಡಬಲ್ಲೆನೆನ್ನುವ ವಿಶ್ವಾಸವಿದೆ.. ಸೋಲು ತಾನೆ ಗೆಲುವಿನ ಮೆಟ್ಟಿಲು..? ಕನ್ಸಲ್ಟಿಂಗಿಗೆ ಸಿದ್ದನಾಗಿ ‘ ಕನಸಲ್ಲು-ಟೆಂಟು’ ಹಾಕಿಕೊಂಡು ಕಾಯುತ್ತಿದ್ದೇನೆ – ನಿಮ್ಮ ಪ್ರಾಜೆಕ್ಟನ್ನು ಯಶಸ್ವಿಯಾಗಿಸಲು..

ಅಂದ ಹಾಗೆ ಈ ನನ್ನ ಹೊಸ ಪ್ರಾಜೆಕ್ಟಿಗು ಹೊಸದೊಂದು ಹೆಸರು ಕೊಟ್ಟಿದ್ದೇನೆ.. ಪ್ರಾಜೆಕ್ಟ್ ‘ಯಾಯಾ’ ಅಂತ.. ‘ಯಾಯಾ’ ಅಂದರೆ – ‘ಯಾರಿಗುಂಟು? ಯಾರಿಗಿಲ್ಲ?‘ (ಇಂಥಾ ಅದೃಷ್ಟ?) ಅನ್ನುವುದರ ಸಂಕ್ಷಿಪ್ತ ರೂಪ.. ಕೊನೆಯಲ್ಲಿ ನೀವು ಸಕ್ಸಸ್ ಆಗದಿದ್ದರು, ಈ ಹೆಸರು ನೋಡಿಯಾದರು ಸಮಾಧಾನವಾಗುತ್ತೆ – ನಿಮಗು ಇಲ್ಲ ನನಗು ಇಲ್ಲ ಅಂಥ.. ಸಕ್ಸಸ್ ಆದರೆ ಆ ಮಾತೇ ಬೇರೆ ಬಿಡಿ – ‘ಯಾರಿಗುಂಟು, ಯಾರಿಗಿಲ್ಲ ಇಂಥಾ ಭಾಗ್ಯ?‘ ಅಂಥ ಇಬ್ಬರೂ ಡ್ಯುಯೆಟ್ ಆಡಬಹುದು..! ನೋಡಿ ‘ಕಸಂ’ ದಿಂದ ‘ರಸಂ’ ಅನ್ನುವುದಕ್ಕೆ ಎಷ್ಟು ಒಳ್ಳೆಯ ಉದಾಹರಣೆ ನನ್ನ ಪ್ರಾಜೆಕ್ಟ್!

ಬರ್ತೀರಾ ತಾನೆ ಕನ್ಸಲ್ಟಿಂಗಿಗೆ..? ಸ್ಟಾರ್ಟಿಂಗಲ್ಲಿ ಪ್ರಮೋಷನಲ್ ಆಫರ್ ಕೂಡಾ ಇದೆ – ನಿಮಗೆ ನನ್ನ ಐದು ಜೊತೆ ಪುಸ್ತಕಗಳು ‘ಫ್ರೀ ಗಿಫ್ಟ್..!’ ಅದು ಮೊದಲ ಐದು ಕಸ್ಟಮರ್ಸಿಗೆ ಮಾತ್ರ.. ಜೊತೆಗೆ ನನ್ನ ಪುಸ್ತಕಗಳನ್ನು ಹೆಚ್ಚುವರಿಯಾಗಿ ಅರ್ಧ ಬೆಲೆಗೆ ಖರೀದಿಸಿ, ನೀವು ಪೂರ್ತಿ ಬೆಲೆಗೆ ಮಾರಿಕೊಳ್ಳಬಹುದು.. ನಿಮ್ಮ ಪುಸ್ತಕ ಮಾರುವ ಅನುಭವಕ್ಕೆ ಇದರಿಂದಲೆ ತರಬೇತಿಯ ಆರಂಭವಾಗುತ್ತೆ..!

ಬಂದರೆ ಈ ಅಡ್ರೆಸ್ಸಿಗೆ ಬರುವುದನ್ನ ಮರೆಯಬೇಡಿ – ‘ಯಾಯಾ ಎಂಟರ್ಪ್ರೈಸಸ್’ ಕೇರಾಫ್ ‘ಕಸಂ ಸೇ ರಸಂ ತಕ್’, ನಂಬರ್ ೪೨೦, ಬರ್ನ್ಟ್ ಹ್ಯಾಂಡ್ ಎಕ್ಸ್ಪರ್ಟ್ ಕನ್ಸಲ್ಟಿಂಗ್ ಸರ್ವೀಸಸ್, ಕಾಣದ ದಾರಿ ಮಾರ್ಗ, ದೇವರೆ ಗತಿ – ೯೯೯೯೯೯, ಮೊಬೈಲ್ ಸಂಖ್ಯೆ : ೯೮೭೬೫೪೩೨೧೦

ಏನಂತೀರಾ..? ಬರ್ತೀರಾ ತಾನೆ?

(ಮುಕ್ತಾಯ)

  • ನಾಗೇಶ ಮೈಸೂರು
    ೧೮.೦೯.೨೦೨೧

ಸಣ್ಣಕಥೆ: ಗಣಪತಿ ಚಪ್ಪರ..


ಸಣ್ಣಕಥೆ: ಗಣಪತಿ ಚಪ್ಪರ..


‘ಸಿದ್ರಾಜಣ್ಣ.. ಯಾರೂ ಕಾಣ್ತಾ ಇಲ್ಲ..’ ಬೀದಿಯ ಎರಡೂ ಕೊನೆಗೆ ಕಣ್ಣು ಹಾಯಿಸಿ ಮೆಲ್ಲಗೆ ಪಿಸುಗುಟ್ಟಿದ ಚಿಕ್ಕಣ್ಣ..

ರಾತ್ರಿ ಹನ್ನೊಂದು ದಾಟಿಯಾಗಿತ್ತು.. ಕತ್ತಲು ಮುಸುಕಿ ಏನೂ ಕಾಣುತ್ತಿರಲಿಲ್ಲ.. ಜೊತೆಗೆ ಬೀದಿ ದೀಪಗಳಿಲ್ಲದೆ ‘ಗವ್ವೆನ್ನುವ’ ಗಾಢ ಕತ್ತಲ ರಾತ್ರಿ..

ಅದರ ಹಿಂದಿನ ದಿನ ರಾತ್ರಿಯಷ್ಟೆ ಆ ರಸ್ತೆಗೆ ಬಂದು, ಅಲ್ಲಿದ್ದ ಒಂದೇ ಒಂದು ಬೀದಿ ದೀಪದ ಬಲ್ಬಿಗೆ ಲಗೋರಿಯಂತೆ ಗುರಿಯಿಟ್ಟು ಕಲ್ಲು ಹೊಡೆದು ಪುಡಿ ಮಾಡಿದನೆಂಬ ಸಾಹಸವನ್ನು ಯಾರೊಡನೆಯು ಹೇಳುವಂತಿರಲಿಲ್ಲ ಸಿದ್ರಾಜು.. ಅವತ್ತು ಜೊತೆಗೆ ಬಂದಿದ್ದ ದೇವ್ರಾಜನಿಗು ಸಹ, ಯಾರಲ್ಲಾದರು ಬಾಯ್ಬಿಟ್ಟರೆ ಪೋಲಿಸರ ಕೈಗೆ ಸಿಕ್ಕಿ ಲಾತ ತಿನ್ನಬೇಕಾಗುತ್ತದೆಂದು ಹೆದರಿಸಿದ್ದು ಮಾತ್ರವಲ್ಲದೆ, ಅವನು ಬಲವಾಗಿ ನಂಬಿದ್ದ ಶನಿದೇವರ ಹೆಸರಿನಲ್ಲಿ ಆಣೆ ಮಾಡಿಸಿಕೊಂಡುಬಿಟ್ಟಿದ್ದ ಕಾರಣ ಅವನ ಬಾಯಿಯನ್ನು ಕಟ್ಟಿಹಾಕಿದಂತಾಗಿತ್ತು..

ಹಾಗೇನಾದರು ಬಾಯ್ಬಿಟ್ಟರೆ, ರಾಜಾ ವಿಕ್ರಮಾದಿತ್ಯನಿಗೆ ಕಾಡಿದ ಹಾಗೆ ಸಾಕ್ಷಾತ್ ಶನಿದೇವರೆ ದೇವ್ರಾಜನನ್ನು ಮತ್ತವನ ಕುಟುಂಬವನ್ನು ಕಾಡದೆ ಬಿಡುವುದಿಲ್ಲ ಎಂಬ ಹೆದರಿಕೆಯೆ ಅವನ ಹರಕು ಬಾಯನ್ನು ಮುಚ್ಚಿಸುವುದರಲ್ಲಿ ಯಶಸ್ವಿಯಾಗಿತ್ತು..

ಅವನ ಆ ಹರಕು ಬಾಯಿಯ ಕಾರಣದಿಂದಲೆ ಇವತ್ತಿನ ಸಾಹಸಕ್ಕೆ ಅವನಿರುವುದು ಬೇಡ ಎಂದು ನಿರ್ಧರಿಸಿ , ಅವನಿಗೆ ಗೊತ್ತಾಗದಂತೆ ಬಂದಿದ್ದರು – ಮಿಕ್ಕ ಮೂವರೊಡನೆ.. ಆದರೆ ಈ ಜಾಗದಲ್ಲಿ ಮಾತ್ರ ಚಿಕ್ಕಣ್ಣನೊಬ್ಬನೆ ಜೊತೆಯಾಗಿ ಬಂದಿದ್ದ.. ಮಿಕ್ಕವರು ರಾಜ, ಕುಮಾರ, ಸ್ವಾಮಿ – ಒಂದು ಫರ್ಲಾಂಗ್ ದೂರದಲ್ಲಿ ರಸ್ತೆ ಬದಿಯಲ್ಲಿ ಗುಟ್ಟಾಗಿ ಕಾಯುತ್ತಿರಬೇಕೆಂದು ತಾಕೀತು ಮಾಡಲಾಗಿತ್ತು.. ಅವರಿಗು ತಾವು ಮಾಡಹೊರಟಿರುವ ಸಾಹಸದ ಸಂಪೂರ್ಣ ವಿವರದ ಅರಿವಿರಲಿಲ್ಲ.. ಚಿಕ್ಕಣ್ಣ ಬಂದು ಏನೋ ಹೇಳುತ್ತಾನೆ, ಅದರಂತೆ ನಡೆದುಕೊಳ್ಳಬೇಕೆಂದಷ್ಟೆ ಗೊತ್ತಿದ್ದುದ್ದು..

‘ಸರಿ ಚಿಕ್ಕಣ್ಣ.. ನಾನು ಹೇಳಿದ್ದೆಲ್ಲ ಗ್ಯಾಪ್ಕ ಐತೆ ತಾನೆ..?’ ಕೇಳಿದ ಸಿದ್ರಾಜಾ..

‘ಹೂ ಕಣಣ್ಣ.. ಚೆನ್ನಾಗಿ ಗ್ಯಾಪ್ಕ ಐತೆ..’

‘ಎಲ್ಲಿ ಒಂದ್ಸಾರಿ ವದರ್ಬಿಡು ನೋಡೋಣ..?’

‘ಹೂಂ.. ನಾನು ಇಲ್ಲಿ ನಿಂತ್ಕಂಡು ಯಾರಾದ್ರು ವೊಯ್ತಾರ, ಬತ್ತಾರ ನೋಡ್ಕೊಂಡು ಹೇಳ್ತಾ ಇರ್ಬೇಕು.. ಯಾರೂ ಇಲ್ಲ ಅಂದಾಗ ಸಿಗ್ನಲ್ ಕೊಡಬೇಕು.. ಆಗ ನೀನು ಮೇಲಿಂದ ಗರಿ ಕಟ್ ಮಾಡಿ ಎಸಿತೀಯಾ.. ಅದನ್ನ ಕೆಳಗೆ ಬೀಳ್ತಾ ಇದ್ದಂಗೆ ಇಡ್ಕೊಂಡು, ಎಳ್ಕೊಂಡೋಗಿ ಅವ್ರು ಮೂರು ಜನಾನು ನಿಂತಿರೊ ಕಡೆ ಅವರ ಕೈಗೆ ಕೊಟ್ಬುಟ್ಟು, ‘ತಕ್ಕೊಂಡ್ ಮನೆ ಕಡೆ ಓಡ್ರುಲಾ’ ಅಂತ ಹೇಳಿ ವಾಪಸ್ ಬರ್ಬೇಕು..’ ತಾನು ಮನವರಿಕೆ ಮಾಡಿಕೊಂಡಿದ್ದನ್ನು ಚಾಚೂ ತಪ್ಪದ ಹಾಗೆ ಪುನರುಚ್ಚರಿಸಿದ ಚಿಕ್ಕಣ್ಣ..

ಎಲ್ಲ ಸರಿಯಾಗಿ ನೆನಪಿಟ್ಟುಕೊಂಡಿದಾನೆ ಎಂದು ನಿರಾಳವಾಯ್ತು ಸಿದ್ರಾಜನಿಗೆ.. ಚಿಕ್ಕವನಾದರು ಕಿಲಾಡಿ ಮತ್ತು ಧೈರ್ಯವಂತ ಅನ್ನುವ ಕಾರಣದಿಂದಾಗಿಯೆ ಅವನನ್ನು ಕರೆದುಕೊಂಡು ಬಂದಿದ್ದ..

‘ಏಯ್ ಚಿಕ್ಕಾ..’

‘ಸರೀಗ್ ಹೇಳಿದ್ನಾ ಸಿದ್ರಾಜಣ್ಣ..?’

‘ಸರೀಗೆ ಹೇಳಿದ್ದೀಯಾ.. ಒಂದ್ ಗ್ಯಾಪ್ಕ ಇಟ್ಕೊ..’

‘ಏನು?’

‘ನಾನು ತೆಂಗಿನ ಮರದ ಮೇಲೆ ಹತ್ತಿ ಗರಿ ಕಟ್ ಮಾಡೋವಾಗ ಯಾರಾದ್ರು ಓಡ್ಸೋಕೆ ಬಂದ್ರೆ, ನಾನು ಇಳಿಯೋತನ್ಕ ಕಾಯ್ಬೇಡ..’

‘ಮತ್ತೆ?’

‘ಮೊದ್ಲು ನೀನು ಪೋಟ್ ವೊಡುದ್ಬುಡು.. ವೋಗ್ತಾ ಆ ಮೂರು ಜನಕ್ಕು ಸಿಗ್ನಲ್ ಕೊಟ್ಟು , ಎಲ್ಲಾ ರಾಮಂದ್ರದತ್ರ ಓಡೋಗ್ಬುಡಿ..’

‘ನೀನು..?’

‘ನಾನು ಅಲ್ಲಿಗೆ ಬತ್ತೀನಿ ಆಮ್ಯಾಕೆ..’

‘ಸರಿ ಸಿದ್ರಾಜಣ್ಣ.. ಶುರು ಅಚ್ಕಳವಾ?’ ಎಂದು ಮುಖ್ಯ ಕಾರ್ಯಕ್ಕೆ ನಾಂದಿ ಹಾಡಿದ ಚಿಕ್ಕಣ್ಣ..

ಮತ್ತೊಮ್ಮೆ ಸುತ್ತ ಮುತ್ತ ನೋಡಿದ ಸಿದ್ರಾಜ, ‘ಸರಿ ಬಾ’ ಎನ್ನುತ್ತ ಆ ಪುಟ್ಪಾತಿನ ಬದಿಯಲ್ಲೆ ಅಂಟಿಕೊಂಡಂತಿದ್ದ ಕಾಂಪೌಡಿನ ಪಕ್ಕದಲ್ಲೆ ನಡೆಯತೊಡಗಿದ.. ಕಾಂಪೌಂಡಿನ ಆಚೆ ಬದಿಯಲ್ಲಿ ಉದ್ದಕ್ಕು , ಎತ್ತರವಾಗಿ ಬೆಳೆದಿದ್ದ ತೆಂಗಿನ ಮರಗಳು.. ಗಾಜಿನ ಮೊನೆಗಳನ್ನು ಹರಡಿದ್ದ ಕಾಂಪೌಂಡಿನ ಮೇಲಿಂದ ಯಾವುದನ್ನು ಹತ್ತಿದರೆ, ಗರಿಗಳನ್ನು ಸುಲಭವಾಗಿ ತರಿದು ರಸ್ತೆಯ ಕಡೆ ಎಸೆಯಬಹುದೊ, ಅಂಥಹ ಮರವನ್ನೆ ಆರಿಸಿಕೊಳ್ಳಬೇಕಿತ್ತು.. ಗರಿ ಕಾಂಪೌಂಡಿನ ಒಳಗೇ ಬಿದ್ದರೆ ಸುಖವಿರಲಿಲ್ಲ.. ಅದಕ್ಕಾಗೆ ಸರಿಯಾದ ಮರವನ್ನು ಹುಡುಕುತ್ತಿತ್ತು ಸಿದ್ರಾಜನ ಹದ್ದಿನ ಕಣ್ಣು..

‘ಅಣ್ಣೋ.. ಇಲ್ನೋಡಣ್ಣ.. ಮೂರ್ನಾಲ್ಕು ಮರದ ಗರಿಗಳು ಇತ್ಕಡೆಗೆ ವಾಲ್ಕೊಂಡವೆ.. ಇವುನ್ನತ್ಬೌದಾ ನೋಡಣ್ಣ..’ ಎಂದು ಒಂದು ಗುಂಪಿನತ್ತ ಬೆಟ್ಟು ಮಾಡಿ ತೋರಿಸಿದ ಚಿಕ್ಕ.. ಸಿದ್ರಾಜನಿಗು ಅವು ಸೂಕ್ತವಾಗಿವೆ ಅನಿಸಿತು.. ‘ಸರಿ ಕಣ್ಲಾ.. ಆ ಮರಕ್ಕೆ ಅತ್ತವಾ..’ ಅಂದವನೆ ಹನುಮಂತನ ಹಾಗೆ ಲಾಘವದಲ್ಲಿ, ಕಾಂಪೌಂಡಿನ ಮೇಲ್ತುದಿಯ ಬದಿಯಲ್ಲಿ ಕೈಯಿಟ್ಟವನೆ, ಒಂದು ಸಣ್ಣ ‘ಹೈ ಜಂಪ್’ ಹೊಡೆದು ಕಾಂಪೌಂಡಿನ ಆ ಬದಿಗೆ ಸೇರಿಕೊಂಡ.. ಹಾಗೆ ಜಿಗಿಯುವಾಗಲು, ಸೊಂಟದ ಮೇಲೆ ಒಂದು ಕೈಯಿ ಬಿಗಿಯಾಗಿ ಇಟ್ಟುಕೊಂಡೆ ನೆಗೆದಿದ್ದ – ಅಲ್ಲಿ ಸೊಂಟಕ್ಕೆ ಕಟ್ಟಿಕೊಂಡಿದ ಗರಿ ಕತ್ತರಿಸುವ ಮಚ್ಚು ಬಿದ್ದು ಹೋಗದ ಹಾಗೆ..

ಅಲ್ಲಿಂದ ಮುಂದಿನ ಕೆಲಸ ಸರಾಗವಾಯ್ತು.. ಇಂಥಹ ನೂರಾರು ಮರ ಹತ್ತಿ ಅನುಭವವಿದ್ದ ಸಿದ್ರಾಜ, ಉಡದಂತೆ ತೆಂಗಿನ ಮರದ ಕಾಂಡವನ್ನು ಅಪ್ಪಿ ಹಿಡಿದವನೆ, ಕಪ್ಪೆಯಂತೆ ಕುಪ್ಪಳಿಸಿಕೊಂಡು ಮರದ ಮೇಲಕ್ಕೆ ಸಾಗತೊಡಗಿದ.. ಕೆಲವೇ ನಿಮಿಷಗಳಲ್ಲಿ ಮೇಲ್ತುದಿ ತಲುಪಿದವನೆ, ಸೊಂಟದಿಂದ ಮಚ್ಚಿನಿಂದ ಅಲ್ಲಿದ್ದ ಗರಿಯ ಬುಡದತ್ತ ಸಾಧ್ಯವಾದಷ್ಟು ನಿಶ್ಯಬ್ಧವಾಗಿ ಕೊಚ್ಚಿ ಬೇರ್ಪಡಿಸತೊಡಗಿದ.. ಮೊದಲೆ ಹರಿತವಾಗಿದ್ದ, ಕೊಡಲಿಯಂಥಹ ಮಚ್ಚು.. ಜೊತೆಗೆ ಸಾಮು ಮಾಡಿ ಶಕ್ತಿಯುಕ್ತವಾಗಿದ್ದ ತೋಳುಗಳು.. ಎರಡು, ಮೂರೇಟಿಗೆ ಗರಿ ತನ್ನ ಬುಡ ಕತ್ತರಿಸಿಕೊಂಡು ಗುರುತ್ವದ ಸೆಳೆತಕ್ಕೆ ಸಿಕ್ಕಿ ನೆಲದತ್ತ ಧಾವಿಸಿ, ಕಾಂಪೌಂಡನ್ನು ತರಚಿಕೊಂಡೆ ಕೆಳಗೆ ಬಂದು ಬಿತ್ತು.. ಮೊದಲ ಗರಿಯ ಅಂದಾಜು ಸಿಕ್ಕುತ್ತಿದ್ದಂತೆ ಮುಂದಿನ ಕೆಲಸ ಇನ್ನೂ ಸುಲಭವಾಗಿ, ಮಿಕ್ಕ ಗರಿಗಳನ್ನು ಕಚಕಚನೆ ಕೊಚ್ಚತೊಡಗಿದ ಸಿದ್ರಾಜ..

ಎರಡನೆ ಗರಿಯೂ ಕೆಳಗೆ ಬೇಳುತ್ತಿದ್ದಂತೆ, ಅವೆರಡನ್ನು ಅದರ ಹಾವಿನ ಹೆಡೆಯಾಕಾರದ ಬುಡದಲ್ಲಿ ಹಿಡಿದು ಕಂಕುಳಲ್ಲಿ ಸಿಕ್ಕಿಸಿಕೊಂಡವನೆ, ಸಾಧ್ಯವಾದಷ್ಟು ಸದ್ದಾಗದಂತೆ ಓಡತೊಡಗಿದ ಚಿಕ್ಕಣ್ಣ.. ಹಸಿರು ಗರಿಯಾದ ಕಾರಣ ಅದರ ಚರಪರ ಸದ್ದನ್ನು ನಿಲ್ಲಿಸುವಂತಿರಲಿಲ್ಲ.. ಹೀಗಾಗಿ ಓಡುವುದನ್ನೆ ಸ್ವಲ್ಪ ನಿಧಾನಗತಿಯಲ್ಲಿ ನಡೆಸಬೇಕಿತ್ತು.. ಆದಷ್ಟು ಬೇಗನೆ ಆ ಮೂವರು ನಿಂತಿದ್ದ ಕಡೆಗೆ ನಡೆದವನೆ ಕುಮಾರನನ್ನು ಕರೆದು, ಅವೆರಡು ಗರಿಗಳನ್ನು ಎಳೆದುಕೊಂಡು ರಾಮಂದ್ರದ ಹಿಂದಿರುವ ಗಲ್ಲಿಯಲ್ಲಿ ಹಾಕಿ ಬರಲು ಸೂಚಿಸಿದ ನಂತರ, ಅಲ್ಲೆ ಇದ್ದ ರಾಜಾ, ಸ್ವಾಮಿಯನ್ನು ಜತೆಗೆ ಕರೆದುಕೊಂಡು ಹೊರಟ..

ಅವರು ಮತ್ತೆ ವಾಪಸ್ಸು ಬರುವ ಹೊತ್ತಿಗೆ ಈಗಾಗಲೆ ಮತ್ತೆ ಆರು ಗರಿಗಳು ಕತ್ತರಿಸಿ ಬಿದ್ದಿದ್ದವು.. ತುಂಬಿಕೊಂಡಂತಿದ್ದ ಆ ಮರಗಳು ಪೂರ್ತಿ ಖಾಲಿ ಕಾಣಬಾರದೆಂದು ಇದ್ದ ಹದಿನಾರು ಗರಿಗಳಲ್ಲಿ ಎಂಟನ್ನು ಮಾತ್ರ ತರಿದು ಬೀಳಿಸಿದ್ದನಾದರು, ಅದಾಗಲೆ ಬೋಳು ಬೋಳಾದಂತೆ ಅನಿಸುತ್ತಿತ್ತು , ಆ ಕತ್ತಲಲ್ಲು.. ಇವರು ಬರುವ ಹೊತ್ತಿಗೆ ಸರಿಯಾಗಿ ಆ ಮೊದಲ ಮರದಿಂದ ಕೆಳಗಿಳಿದು ಬಂದ ಸಿದ್ರಾಜ, ಗರಿಯ ಜೊತೆಗೆ ತಾನು ಕೆಡವಿದ್ದ ಒಂದಷ್ಟು ಎಳನೀರನ್ನು ಹುಡುಕಿ ತಂದು ಗರಿಯ ಹತ್ತಿರ ಪೇರಿಸಿಟ್ಟ.. ಈಗ ಆ ಮೂವರಿಗು ಏನು ಮಾಡಬೇಕೆಂದು ಗೊತ್ತಾಗಿತ್ತು.. ಒಬ್ಬೊಬ್ಬರು ಎರಡೆರಡು ಗರಿಯ ಜೊತೆಗೆ ಗಂಟು ಕಟ್ಟಿದ ಎರಡೆರಡು ಎಳನೀರನ್ನು ಕುತ್ತಿಗೆಗೆ ನೇತು ಹಾಕಿಕೊಂಡವರೆ ಅಲ್ಲಿಂದ ಹೊರಡಲನುವಾದರು..

‘ಬಡ್ಡೆತ್ತವಾ.. ಹುಸಾರು.. ಎಳ್ನೀರು ಅಂತ ಕುಡ್ದುಗಿಡ್ದು ಬಿಟ್ಟೀರಾ! ಎಲ್ಲಾ ಲೆಕ್ಕ ಐತೆ ನನ್ನತ್ರ.. ನಾ ಬರೊಗಂಟಾ ಹಂಗೆ ಮಡ್ಗಿರಬೇಕು..ಗರಿ ಆ ಗಲ್ಲಿಲಿ ಎಸೆದು ತಿರ್ಗಾ ಬನ್ನಿ..’ ಎಂದ ಸಿದ್ರಾಜನ ಮಾತಿಗೆ ತಲೆಯಾಡಿಸಿ ರಸ್ತೆಯಲ್ಲಿ ಚರಪರ ಸದ್ದಾಗಿಸುತ್ತ ಗರಿಯೆಳೆದುಕೊಂಡು ಕತ್ತಲಲ್ಲಿ ಮಾಯವಾದರು..

ಅವರತ್ತ ಹೋದಂತೆ , ಚಿಕ್ಕಣ್ಣನ ಜೊತೆ ಮತ್ತೊಂದು ಹತ್ತಡಿ ದೂರದಲ್ಲಿದ್ದ ಇನ್ನೊಂದು ಮರವನ್ನು ಹುಡುಕಿ, ಅದರ ಮೇಲೆ ಹತ್ತಿದವನೆ ಮತ್ತಷ್ಟು ಗರಿಗಳನ್ನು , ಎಳನೀರನ್ನು ಕೆಡವತೊಡಗಿದ.. ಕೆಡವಿದಂತೆಲ್ಲ, ಅದನ್ನೆಳೆದುಕೊಂಡು ಎದುರು ಬದಿಯ ಪುಟ್ಪಾತಿನಲ್ಲಿ ತಂದು ಹಾಕತೊಡಗಿದ ಚಿಕ್ಕಣ್ಣ.. ಅಲ್ಲು ಎಂಟು ಗರಿಗಳು ಮತ್ತು ಹತ್ತು ಎಳನೀರು ಬುರುಡೆಗಳನ್ನು ಕಡಿದು ಹೆಚ್ಚು ಸದ್ದಾಗದಂತೆ ಮಣ್ಣಿನ ಗುಡ್ಡೆಯೊಂದರ ಮೇಲೆ ಎಸೆದ ಸಿದ್ರಾಜ, ‘ಇನ್ನು ಹೆಚ್ಚು ಕೀಳಲಾಗದು ಆ ಮರದಿಂದ’ ಎನಿಸಿದಾಗ , ಅಲ್ಲಿಂದ ಕೆಳಗಿಳಿದು ಬಂದವನೆ ಎಳನೀರನು ಜೋಡಿ ಕಟ್ಟತೊಡಗಿದ..

‘ಸಾಕಲ್ವೇನ್ಲಾ ಗರಿಗಳು?’

‘ಹು ಕಣಣ್ಣ.. ಚಪ್ರ ಆಕಕ್ ಇನ್ನೆಷ್ಟು ಬೇಕು..? ಇದುನ್ನೆ ಸರ್ಯಾಗಿ ಎಣ್ದು ಹಾಕುದ್ರೆ ಪೆಂಡಾಲ್ ಪೂರ್ತಿ ಆಗಿ, ಬಾರ್ಡರ್ಗು ಅರ್ಧರ್ಧ ಕಟ್ಕೊಬೋದು.. ಮುಂದಾಗಡೆ ಕಮಾನು ತರನು ಕಟ್ಕೋಬೋದು..’

‘ಸರಿ ಸರಿ.. ಎಲ್ಲಾ ಜೋಡಿಸ್ಕೊ.. ಅವ್ರು ಬರ್ತಿದ್ದಂಗೆ ತೊಗೊಂಡು ವೋಗವಾ.. ಬೊಂಬೆಲ್ಲ ರೆಡಿಯಾಯ್ತಾ?’

‘ಶಿವಣ್ಣ ಮಾಲಿಂಗಣ್ಣಂಗೆ ಹೇಳಿ ಇಪ್ಪತ್ ಬೊಂಬು ಕೊಡುಸ್ದಾ ಸಿದ್ರಾಜಣ್ಣ.. ಮಾಲಿಂಗಣ್ಣ ದಿನುಕ್ಕೆಂಟಾಣೆ ಬಾಡ್ಗೆ ಕೇಳುದ್ನಂತೆ.. ಅದುಕ್ಕೆ ಶಿವಣ್ಣ ಇದ್ಕೊಂಡು, ಬಾಡ್ಗೆ ಗೀಡ್ಗೆ ಬ್ಯಾಡ – ಇದುನ್ನೆ ನಿನ್ನ ಸೇವಾರ್ಥ ಅಂಥ ಬರ್ಕೋತೀವಿ.. ದೇವುರ್ ಕೆಲಸ.. ಇಲ್ಲ ಅನ್ನಬ್ಯಾಡ..ಆಂದಿದ್ದುಕ್ಕೆ ಒಪ್ಕೊಂಡ್ನಂತೆ..’ ಚಿಕ್ಕಣ್ಣ ತನಗೆ ಗೊತ್ತಿದ್ದ ವರದಿಯ ಸಾರಾಂಶವನ್ನು ಒಪ್ಪಿಸಿದ..

‘ಸರಿ ಬುಡು.. ಅಲ್ಲಿಗೆ ಸರಿ ಹೋಯ್ತಲ್ಲ..? ಇನ್ನೇನು ಬೇಕಂತೆ..?’

‘ದೊಡ್ದೆರಡು ಚಿಕ್ದೆರಡು ಬಾಳೆ ಕಂಬ ಬೇಕಂತೆ.. ಸಣ್ಣಕ್ಕ ಅವಳ ತೋಟದಲ್ಲೈತೆ ಕೊಡ್ತೀನಿ ಅಂದವಳೆ..’

‘ಸರಿ.. ಈ ಎಳ್ನೀರ್ನೆಲ್ಲ ಪೂಜೆಗಿಡವ.. ತೀರ್ಥ ಕೊಟ್ಟಂಗೆ ಕೊಡಬೌದು.. ಎಲ್ಲಾ ಸರಿ ಗಣ್ಪತಿ ವಿಗ್ರಹದ್ದು ಸೇವಾರ್ಥಾ ಯಾರದು?’

‘ಅಣ್ಣೋ ಗಣೇಶನ್ನ ಆಗ್ಲೆ ಕುಂಬಾರ್ ಕೊಪ್ಲಲ್ಲಿ ಬುಕ್ ಮಾಡವ್ರೆ.. ತಿಂಗ್ಳಾ ಮೊದಲೆ ಅಡ್ವಾನ್ಸ್ ಕೊಟ್ ಬಂದಿದ್ರು.. ಕಲೆಕ್ಸನ್ ದುಡ್ಡಲೆ ತತ್ತೀವಿ ಅಂತಿದ್ರು.. ಈ ಸಾರಿ ದೊಡ್ ಗಣ್ಪತಿನೆ ಮಾಡುಸ್ತಾವ್ರಂತೆ ಕಣಣ್ಣ.. ಹೋದ್ಸಾರಿಗಿಂತ ಎರಡಡಿ ಜಾಸ್ತಿನೆ ಅಂತೆ..’ ಉದ್ವೇಗ, ಉತ್ಸಾಹದಲ್ಲಿ ನುಡಿದ ಚಿಕ್ಕ..

‘ಸರಿ ಬಿಡು .. ಅಲ್ಲಿಗೆ ಎಲ್ಲ ಇದ್ದಂಗಾಯ್ತು.. ಮೈಕ್ ಬೇಕಾದ್ರೆ ನಾನು ವಯಿಸ್ಕೋತೀನಿ.. ದಿನ್ದಿನದ ಪೂಜೆಗು ಯಾರ್ದಾದ್ರು ಸೇವಾರ್ಥ ಇರುತ್ತೆ.. ಈ ಸಾರಿ ಗ್ರಾಂಡಾಗೆ ಮಾಡಾಣ, ಗಣೇಸುನ್ನಾ..’ ಎನ್ನುತ್ತ ಬೀಡಿ ಹಚ್ಚಿಕೊಂಡ ಸಿದ್ರಾಜ..

ಅಷ್ಟು ಹೊತ್ತಿಗೆ ಮಿಕ್ಕ ಆ ಮೂವರು – ರಾಜಾ, ಕುಮಾರ, ಸ್ವಾಮಿ, ವಾಪಸ್ಸು ಬರುತ್ತಿರುವುದು ಕಾಣಿಸಿತು. ಅಲ್ಲಿಗೆ ಐದು ಜನರಾಯ್ತು – ಹತ್ತು ಗರಿಗೆ ಸರಿಹೋಯ್ತು.. ಎಳನೀರ ಬುರುಡೆಗಳು ಹೇಗು ಕತ್ತಲ್ಲಿ ನೇತಾಡುತ್ತವೆ..

ಎಲ್ಲರು ಬಂದು ಗರಿಗಳನ್ನು ಬುರುಡೆಯನ್ನು ಎತ್ತಿಕೊಳ್ಳುವ ಹೊತ್ತಿಗೆ ನಡುನಡುವೆ ಒಂದೆರಡು ವಾಹನಗಳು ಹಾದು ಹೋಗಿದ್ದವು.. ಸಿದ್ರಾಜ ಬೇಗ ಹೊರಡಲು ಅವಸರಿಸತೊಡಗಿದ.. ಅಷ್ಟೊತ್ತಿಗಾಗಲೆ ಮಧ್ಯರಾತ್ರಿಯೂ ದಾಟಿತ್ತು.. ಅದೇ ಹೊತ್ತಿಗೆ ಅಲೆಲ್ಲಿಂದಲೊ ದೂರದಿಂದ ಬೀಟ್ ಪೋಲಿಸಿನವರ ಸಿಳ್ಳೆಯ ಸದ್ದು ಕೇಳಿಸಿತು..

‘ಏಯ್ ಬಡ್ಡೆತ್ತವಾ.. ಬೀಟ್ ಪೋಲಿಸ್ ಬತ್ತಿರಂಗಯ್ತೆ… ಎತ್ಕೊಂಡ್ ಓಡ್ರೋ ಬಿರ್ಬಿರ್ನೆ..’ ಎಂದದ್ದೆ ತಡ ಎಲ್ಲಾ ಎಡ ಬಲ ನೋಡದೆ ತಂತಮ್ಮ ಗರಿಗಳನ್ನು ಎಳೆದುಕೊಂಡು, ಎಳನೀರು ಬುರುಡೆಗಳನ್ನು ನೇತು ಹಾಕಿಕೊಂಡವರೆ ವಾಟೆ ಕಿತ್ತರು.. ಆ ಗಡಿಬಿಡಿಯಲ್ಲಿ ಅವರಲ್ಲೆ ಬಿಟ್ಟು ಹೋದ ಒಂದೆರಡು ಬುರುಡೆಗಳನ್ನು ಎತ್ತಿ ನೇತು ಹಾಕಿಕೊಂಡು, ತಾನು ಎರಡು ಗರಿಗಳನ್ನು ಎಳೆದುಕೊಂಡು ಅವರನ್ನು ಹಿಂಬಾಲಿಸಿದ ಸಿದ್ರಾಜ..


‘ಏನ್ರಲಾ ಈ ಸಾರಿ ಭಾರಿ ದೊಡ್ ಗಣ್ಪತಿ ಕೂರುಸುಬುಟ್ಟಿವ್ರಿ.. ಯಾರುದ್ಲ ಇವತ್ ಪೂಜೆ ಸೇವಾರ್ಥಾ..’ ಚಂದವಾಗಿ ಸಿಂಗರಿಸಿದ ಚಪ್ಪರದೊಳಗೆ ಬರುತ್ತ ಕೇಳಿದ ಶಿವಣ್ಣ.. ಅಲ್ಲಿದ್ದವರಲ್ಲಿ ಅವನೇ ಸ್ವಲ್ಪ ಸೌಂಡ್ ಪಾರ್ಟಿ ‘ಹಣಕಾಸಲ್ಲಿ’.. ಕೊನೆಯಲ್ಲೇನೆ ಹೆಚ್ಚು ಕಮ್ಮಿಯಾದರು ಧಾರಾಳವಾಗಿ ಖರ್ಚು ಮಾಡುವವನೆಂದರೆ ಅವನೆ.. ಚೆನ್ನಾದ ಚಪ್ಪರ, ಹೂವಿನ ಅಲಂಕಾರ, ಎಳನೀರು ತೀರ್ಥದ ಸೇವೆ, ಬಾಳೆ ದಿಂಡು-ಮಾವಿನೆಲೆಯ ತೋರಣ – ಇದೆಲ್ಲದರ ಮಧ್ಯೆ ‘ಗಜಮುಖನೆ ಗಣಪತಿಯೆ..’ ಎಂದು ಮೊಳಗುತ್ತಿರುವ ಮೈಕಾಸುರನ ವೈಭವ..

ಅವತ್ತಿನ ಪೂಜಾರಿಕೆಯ ಜವಾಬ್ದಾರಿ ವಹಿಸಿಕೊಂಡಿದ್ದ ನಿಂಗರಾಜ, ‘ಇವತ್ತು ದೊಡ್ಡವಂದೆ ಪೂಜೆ ಸಿವಣ್ಣ.. ವುಳಿಯನ್ನ, ಮೊಸರನ್ನ, ವಡೆ , ವುಸ್ಲಿ, ಕಡುಬು ಎಲ್ಲಾ ಮಾಡ್ಸವ್ಳೆ.. ಕೆಲ್ಸ ಮುಗಿಸ್ಕಂಡ್ ಸಂಜೀಗ್ ಬಂದು ಪೂಜೆ ಮಾಡ್ಸಿ ಪ್ರಸಾದ ಅಂಚ್ತೀನಿ ಅಂದ್ಲು.. ಇನ್ನೇನು ಬತ್ತಾಳೆ ಕಣಣ್ಣೊ..’ ಅನ್ನುತ್ತಿದ್ದಂತೆ ಸ್ಕೂಲೊಂದರಲ್ಲಿ ಆಯಾ ಆಗಿ ಕೆಲಸ ಮಾಡುವ ದೊಡ್ಡವ್ವ ಬರುತ್ತಿರುವುದು ಕಾಣಿಸಿತು.. ಬರುತ್ತಲೆ ಯಾರನ್ನೊ ಬೈದುಕೊಂಡೆ ಬಂದಳು..

‘ಅವುಕ್ ಬರ್ಬಾರದ್ ಮೊಲ್ಲಾಗ್ರ ಬರಾ.. ಇಂಗಾ ಮಾಡಾದು ಅಬ್ಬುದ್ ದಿನಾ? ಸ್ವಲ್ಪಾದ್ರು ಧರ್ಮ ಕರ್ಮ ನ್ಯಾಯ ನೀತಿ ನೋಡ್ಬಾರ್ದ? ಹಾಳ್ ನನ್ ಮಕ್ಳು ಅಬ್ಬದ್ ದಿನಾನು ನನ್ ಕೈಲಿ ಕೆಟ್ ಮಾತಾಡುಸ್ತಾವೆ..’ ಎಂದು ಮಂತ್ರಾರ್ಚನೆಯೊಂದಿಗೆ ಚಪ್ಪರದೊಳಗೆ ಬಂದವಳ ವಾಗ್ಜರಿಗೆ ತಡೆ ಹಾಕುತ್ತ ಕೇಳಿದ ಶಿವಣ್ಣ.. ‘ಅಯ್ಯೊ ಅಬ್ಬದ್ ದಿನ ಸುಮ್ಕಿರು ದೊಡ್ಡವ್ವಾ.. ಏನಾಯ್ತು ಅಂತ ಇಂಗ್ ಬೈತಾ ಇದೀಯಾ? ಯಾರಿಗ್ ಬೈತಿದಿಯಾ?’

‘ಅಯ್ಯೊ ಯಾರ್ಗೆಂಥಾ ಬೈಲೊ ಸಿವಣ್ಣ..? ಗೊತ್ತಿದ್ರೆ ಇಡ್ದು ಚಚ್ಚಾಕ್ ಬುಡ್ತಿದ್ದೆ.. ಅವ್ಯಾವೊ ಕಳ್ ಮುಂಡೇವು ರಾತ್ರಿ ನಮ್ ಇಸ್ಕೂಲ್ ಕಾಂಪೌಂಡಲ್ ನುಗ್ಗಿ ನಾನೇ ನೀರ್ ಆಕಿ ಬೆಳ್ಸಿದ್ದ ತೆಂಗಿನ ಮರದ್ ಗರಿನೆಲ್ಲ , ಎಳ್ನೀರು ಸಮೇತ ಕೊಚ್ಕೊಂಡ್ ವೋಗ್ಬುಟ್ಟವ್ರೆ ಕಣಪ್ಪಾ.. ತುಂಬ್ಕೊಂಡ್ ಬಸ್ರಿ ಇದ್ದಂಗಿದ್ ಮರ್ಗಳು ಈಗ ಬೋಳ್ಬೋಳಾಗಿ ಗಂಡ್ ಸತ್ತ ಮುಂಡೆ ನನ್ನಂಗಾಗ್ಬುಟ್ಟವೆ ಕಣೋ.. ಅವ್ರು ಕೈ ಸೇದೋಗಾ..’ ಎನ್ನುತ್ತ ತನ್ನ ನಾಮಾರ್ಚನೆಯನ್ನು ಮುಂದುವರೆಸುವುದರಲ್ಲಿದ್ದಾಗ, ತಮ್ಮ ಚಪ್ಪರದ ಗರಿಯ ಕಥೆ ಅರಿತಿದ್ದ ನಿಂಗರಾಜ, ‘ಅಯ್ ಸುಮ್ಕಿರು ದೊಡ್ಡವ್ವ.. ಗಣೇಶನ್ ಚಪ್ರ ಅಂದ್ರೆ ದೇವಸ್ಥಾನ ಇದ್ದಂಗೆ ಇಲ್ಲಿ ಕೆಟ್ ಮಾತ್ ಆಡ್ಬಾರ್ದು.. ನೀ ಹೇಳ್ದಂಗೆ ಪೂಜೆಗ್ ರೆಡಿ ಮಾಡಿವ್ನಿ.. ಪ್ರಸಾದನು ರೆಡಿ ಐತೆ.. ನಿ ‘ವೂ’ ಅಂದ್ರೆ ಪೂಜೆ ಮಾಡದೇಯಾ.. ಇಲ್ದಿದ್ರೆ ಟೈಮ್ ಮೀರೊಯ್ತದೆ ನೋಡು’ ಎಂದು ಅವಳ ಮಾತಿನ ‘ಠೀವಿ’ ಚಾನೆಲ್ ಬದಲಿಸಿದ..

‘ವೂ.. ಅದು ಸರಿಯೆ ನೀ ಮಾಡಪ್ಪ ಪೂಜೆ.. ಏಳು ಮಂತ್ರಾವ.. ಎಲ್ಲಾ ಆ ಗಣ್ಪತಪ್ಪಾನೆ ನೋಡ್ಕೊಳ್ಲಿ..’ ಎನ್ನುತ್ತಿದ್ದಂತೆ, ನಿಂಗರಾಜ , ‘ ಏಯ್ , ಎಲ್ಲಾ ಬನ್ರೊಲೈ.. ಪೂಜೆ ಸುರುವಾಗ್ತೈತೆ ‘ ಎಂದವನೆ ‘ಶುಕ್ಲಾಂ ಬರಧರಂ ವಿಷ್ಣುಂ..’ ಎಂದು ಶ್ಲೋಕವನ್ನಾರಂಭಿಸುತ್ತಿದ್ದಂತೆ ಸಿದ್ರಾಜಾ, ಚಿಕ್ಕಣ್ಣ, ರಾಜಾ, ಕುಮಾರ, ಸ್ವಾಮಿಯೂ ಸೇರಿದಂತೆ ಸುತ್ತಮುತ್ತಲವರೆಲ್ಲ ತೊಳೆದುಕೊಂಡ ಮುಖದಲ್ಲಿ ದೊಡ್ಡದಾಗಿ ವಿಭೂತಿ ಗಟ್ಟಿ ಧರಿಸಿ, ನಡುವೆ ಕುಂಕುಮ ಹಚ್ಚಿಕೊಂಡು, ಒಬ್ಬೊಬ್ಬರಾಗಿ ಆ ಹಸಿರು ಚಪ್ಪರದ ಆವರಣದೊಳಗೆ ಕಾಲಿಡತೊಡಗಿದರು – ಅಲ್ಲಿ ದೊನ್ನೆಗಳಲ್ಲಿರಿಸಿದ್ದ ಹುಳಿಯನ್ನ, ಮೊಸರನ್ನ, ಉಸ್ಲಿ , ವಡೆ, ಸಿಹಿಗಡಬುಗಳನ್ನೆ ತುದಿಗಣ್ಣಲ್ಲಿ ತುಂಬಿಕೊಳ್ಳುತ್ತ..!

(ಶುಭಂ)

– ನಾಗೇಶ ಮೈಸೂರು
೧೨.೦೯.೨೦೨೧

(Picture: Singapore Veeramma Kaliamman Temple)

ಆ ಮನೆ !ಹಾರರ್ ಕಥೆ :


ಹಾರರ್ ಕಥೆ : ಆ ಮನೆ !


ಕಣ್ಣು ಹಾಯಿಸಿದಷ್ಟೂ ದೂರ ಬರಿ ಆ ಕಾಲು ಹಾದಿಯ ಹೊರತು ಮತ್ತೇನು ಕಾಣುತ್ತಿರಲಿಲ್ಲ.. ಅದರ ಎರಡು ಬದಿಗು ದಟ್ಟವಾಗಿ ಬೆಳೆದುಕೊಂಡು ಹೋಗಿದ್ದ ಎತ್ತರದ ಮರಗಳಿಂದ ಹಗಲಲ್ಲು ಕಪ್ಪು ಕವಿದ ಸಂಜೆಮಬ್ಬಿನ ಭಾವ.

‘ಇನ್ನೂ ಎಷ್ಟು ದೂರ ನಡೆಯಬೇಕು ಗುರಾಣಿ..?’ ತುಸು ಏದುಸಿರು ಬಿಡುತ್ತ ಕೇಳಿದೆ.. ಅವಳ ಹೆಸರು ರಾಣಿ ಅಂತ.. ಇದೇ ಕಾಡಿನ ತಾಂಡ್ಯದಲ್ಲಿ ವಾಸವಿರುವ ಲಂಬಾಣಿ ಬುಡಕಟ್ಟಿಗೆ ಸೇರಿದ ಹೆಣ್ಣು.. ಮೂಗಿನ ತುದಿಯಲ್ಲೆ ಇರುವ ಕೋಪದ ದೆಸೆಯಿಂದ ಯಾವಾಗಲು ‘ಗುರ್ರ್’ ಅನ್ನುವ ಅವಳ ಚರ್ಯೆಯನ್ನು ಕಂಡು ನಾನೆ ‘ಗುರ್ರಾಣಿ’ ಎಂದು ಹೊಸ ಹೆಸರಿಟ್ಟಿದ್ದೆ.. ಬಹುಶಃ ನಾನು ಹೊರಗಿನಿಂದ ಬಂದವನೆಂದೊ ಅಥವಾ ನಾನು ಫೀಸು ಕೊಟ್ಟು ಅವಳ ಸೇವೆಯನ್ನು ಬಳಸಿಕೊಳ್ಳುತ್ತಿರುವ ದಣಿ ಎನ್ನುವ ಕಾರಣಕ್ಕೊ – ನನ್ನ ಮೇಲೆ ಸಿಟ್ಟಾಗದೆ ಅದನ್ನು ನಗುನಗುತ್ತಲೆ ಸ್ವೀಕರಿಸಿದ್ದಳು..

ಆ ತಾಂಡದಲ್ಲೆಲ್ಲ ಅವಳೊಬ್ಬಳೆ ಸ್ವಲ್ಪ ಓದಿಕೊಂಡ ಚುರುಕಾದ ಹುಡುಗಿ.. ಅಲ್ಪ ಸ್ವಲ್ಪ ನಾಗರೀಕತೆಯ ಸ್ಪರ್ಶವಿದ್ದವಳು.. ಅದರಿಂದಾಗಿಯೆ ಅವಳನ್ನು ನೋಡಿದಾಗ ನನಗೆ ಅಚ್ಚರಿಯು ಆಗಿತ್ತು.. ಮಿಕ್ಕೆಲ್ಲ ಸಾಂಪ್ರದಾಯಿಕ ಲಂಬಾಣಿ ಮೇಲುಡುಪು ಧರಿಸಿದ್ದರು, ಜೀನ್ಸ್ ಪ್ಯಾಂಟೊಂದನ್ನು ತೊಟ್ಟುಕೊಂಡು ಪಕ್ಕಾ ಆಧುನಿಕ ಹುಡುಗಿಯಂತೆ ಕಾಣುತ್ತಿದ್ದಳು.. ಜೊತೆಗೆ ಅವಳ ಸ್ವಾಭಾವಿಕ ಸೌಂದರ್ಯದ ದೆಸೆಯಿಂದ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಆಕರ್ಷಕ ರೂಪವು ಅವಳದಾಗಿತ್ತು..

‘ಹೀಗೆ ನನ್ನ ನೋಡ್ತಾ ನಿಂತ್ಕೋತಿರೊ ಅಥವಾ ಮುಂದುಕ್ಕೋಗೋಣ್ವಾ?’ ಬಾಣದಂತೆ ಬಂದ ಪ್ರಶ್ನೆಗೆ ಬೆಚ್ಚಿ ಅವಳತ್ತ ನೆಟ್ಟಿದ್ದ ದೃಷ್ಟಿಯನ್ನು ಕಿತ್ತು ಬೇರೆಡೆಗೆ ತಿರುಗಿಸಿಕೊಂಡೆ..

‘ಸ್ವಲ್ಪ ಹೊತ್ತು ಕೂತಿದ್ದು ಹೋಗೋಣ್ವಾ? ಇನ್ನು ಎಷ್ಟು ದೂರ ನಡೆಯಬೇಕು..?’ ಎಂದು ಕೇಳಿದೆ..

‘ನನಗೇನು ಅವಸರವಿಲ್ಲ.. ಆದರೆ ನೀವು ಹೋಗಬೇಕಾದ ಜಾಗದಲ್ಲಿ ಕಡಿಮೆ ಸಮಯ ಕಳೆಯಬೇಕಾಗುತ್ತದೆ.. ನಿಮಗೆ ಹೇಗೆ ಬೇಕೊ ಹಾಗೆ – ನಾನು ರೆಡಿ..’ ಎಂದಳು ರಾಣಿ..

ನನಗೆ ಮುಂದೆ ಹೆಜ್ಜೆ ಇಡಲು ಆಗದಷ್ಟು ಆಯಾಸವಾದಂತೆನಿಸಿ, ಅಲ್ಲೆ ಪಕ್ಕದಲ್ಲಿದ್ದ ಕಲ್ಲೊಂದರ ಮೇಲೆ ಕುಳಿತೆ.. ಅವಳು ಅಲ್ಲೆಲ್ಲು ಕೂರದೆ, ‘ಸರಿ ಸ್ವಾಮ್ಯೊರೆ ನೀವು ಕೂತಿರಿ.. ನಾನು ಇಲ್ಲೆ ಹೋಗಿ ಬರುತ್ತೀನಿ ಐದು ನಿಮಿಷ..’ ಎಂದಳು.. ಅವಳು ನನ್ನೊಬ್ಬನನ್ನೆ ಬಿಟ್ಟು ಹೋಗುತ್ತೀನಿ ಅಂದಾಗ ಸ್ವಲ್ಪ ಭಯವಾಯಿತು.. ‘ನೀನೆಲ್ಲಿಗೆ ಹೋಗುವೆ? ಇಲ್ಲೆ ಇರು.. ಇನ್ನು ಸ್ವಲ್ಪ ಹೊತ್ತಷ್ಟೆ ಹೊರಟುಬಿಡೋಣ..’ ಎಂದೆ.

ಅವಳು ಕಿಲಕಿಲನೆ ನಗುತ್ತ ‘ಅಯ್ಯೊ ಸ್ವಲ್ಪ ಜಲಭಾಧೆ ತೀರಿಸಿಕೊಂಡು ಬಂದುಬಿಡ್ತೀನಿ ಇರಿ ಸ್ವಾಮ್ಯೋರೆ.. ಅದನ್ನು ಬಿಡಿಸಿ ಹೇಳ್ಬೇಕಾ?’ ಎಂದಾಗ ನನ್ನ ‘ಸಾಮಾನ್ಯ’ ಅಜ್ಞಾನಕ್ಕೆ ನನಗೇ ನಾಚಿಕೆಯಾಗಿ, ‘ಸರಿ ಬೇಗ ಹೋಗಿ ಬಂದು ಬಿಡು , ತುಂಬಾ ದೂರ ಹೋಗಬೇಡ..’ ಎಂದೆ.. ಹತ್ತಿರದಲ್ಲೆ ಹರಿಯುತ್ತಿರುವ ತೊರೆಯ ಸದ್ದಿನ ಹತ್ತಿರದಲೆಲ್ಲೊ ಹೋಗಿ ಬರಬೇಕೆಂದರೆ ಕನಿಷ್ಠ ಹತ್ತು ನಿಮಿಷವಾದರು ಬೇಕಿತ್ತೆಂದು ನನಗೂ ಅರಿವಿತ್ತು..

ಅವಳು ಅತ್ತ ನಡೆಯುತ್ತಿದ್ದಂತೆ ನನ್ನ ಮನಸು ನಾನು ಬಂದ ಉದ್ದೇಶವನ್ನು ಮೆಲುಕು ಹಾಕತೊಡಗಿತು.. ವಾಸ್ತವವಾಗಿ ನಾನು ನಡೆಸುತ್ತಿದ್ದ ಅಧ್ಯಯನ , ಪುರಾತನ ಐತಿಹ್ಯಗಳ ಸಂಶೋಧನೆಯ ಸಲುವಾಗಿ ಹತ್ತಿರದ ಗೆಸ್ಟ್ ಹೌಸಿಗೆ ಬಂದು ಉಳಿದುಕೊಂಡು ಒಂದೆರಡು ವಾರಗಳಷ್ಟೆ ಉರುಳಿತ್ತು.. ಅಲ್ಲಿಗೆ ಹತ್ತಿರದಲೆಲ್ಲೊ ಕಾಡಿನಲ್ಲಿ ಕಣ್ಮರೆಯಾಗಿದ್ದ ಅರಮನೆಯಂತಹ ನಿಗೂಢ ಮಹಲೊಂದರ ಸುದ್ದಿಯ ಬೆನ್ನಟ್ಟಿ ನಾನಲ್ಲಿಗೆ ಬಂದಿದ್ದುದು.. ಅದು ನಿಜಕ್ಕು ಇದೆಯೆ? ಇದ್ದರೆ ಅದರ ಕಥೆಯಾದರು ಏನು? ಎಂಬುದು ನನ್ನ ಮೊದಲ ಕುತೂಹಲವಾಗಿತ್ತು.. ವಾಸ್ತವದಲ್ಲಿ ಹಾಗೊಂದು ಪುರಾತನ ಅವಶೇಷ ಇದೆಯೆಂಬುದೆ ಅಲ್ಲಿರುವ ಯಾರಿಗು ಗೊತ್ತಿರಲಿಲ್ಲ.. ಕೊನೆಗೆ ಈ ಬಾರಿಯ ಯತ್ನ ನಿರರ್ಥಕವಾಯಿತೆಂದು ತರ್ಕಿಸಿ ಕನಿಷ್ಠ, ಕಾಡಿನ ತಾಂಡ್ಯಗಳ, ಬುಡಕಟ್ಟುಗಳ ವಾತಾವರಣವನ್ನಾದರು ಒಮ್ಮೆ ನೋಡಿ ನಂತರ ಹಿಂತಿರುಗೋಣವೆಂದುಕೊಂಡು ರಾಣಿಯಿದ್ದ ಆ ತಾಂಡ್ಯಕ್ಕೆ ಭೇಟಿಯಿತ್ತಿದ್ದು..

ಅಲ್ಲಿ ನನಗೊಂದು ಅಚ್ಚರಿ ಕಾದಿತ್ತು.. ನಾನು ಔಪಚಾರಿಕವಾಗಿ ತಾಂಡ್ಯದ ಮುಖಂಡನೊಡನೆ ಆ ಸುದ್ದಿಯೆತ್ತಿದಾಗ ಅವನಿಗು ಅದರ ಅರಿವಿಲ್ಲವೆಂದು ಗೊತ್ತಾಗಿ ನಿರಾಶೆಯಾಗಿತ್ತು.. ಆದರೆ ಆಗ ಅಲ್ಲೆ ಇದ್ದು ನಮ್ಮ ಮಾತನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ರಾಣಿ, ತಟ್ಟನೆ.. ‘ಸ್ವಾಮ್ಯೋರೆ.. ಇಲ್ಲಿಂದಾಚೆಗಿರೊ ದೊಡ್ಡ ಗುಡ್ಡದ ಹಿಂದೆ ಒಂದು ಪಾಳು ಬಿದ್ದಿರೊ ಅರಮನೆ ತರನೆ ಇರೊ ದೊಡ್ಮನೆ ಐತೆ.. ನಾನು ಚಿಕ್ಕೊಳಿದ್ದಾಗ ದಾರಿ ತಪ್ಪಿ ಗುಡ್ಡದ ಮೇಲೆ ಹತ್ತಿ ಹೋಗಿದ್ದೆ.. ಅಲ್ಲಿಂದ ಕೆಳಗೆ ಕಾಡಿನ ಮರೇಲಿ ಚೆನ್ನಾಗಿ ಕಾಣಿಸಿತ್ತು ಆ ಮನೆ.. ಆದರೆ ಅದೇ ನೀವೇಳೊ ಅರಮನೆನಾ, ಬೇರೇದಾ ನಂಗೊತ್ತಿಲ್ಲಾ..’ ಎಂದು ತಟ್ಟನೊಂದು ಹೊಸ ಆಶಾಕಿರಣ ಉದಿಸುವಂತೆ ಮಾಡಿದ್ದಳು..

ಆ ನಂತರವೆ ಅವರಪ್ಪಯ್ಯನನ್ನು ಒಪ್ಪಿಸಿ ಅವಳ ಜೊತೆ ಅಲ್ಲಿಗೆ ಹೋಗಿ ಬರುವುದೆಂದು ನಿರ್ಧರಿಸಿದ್ದು.. ಆ ಗುಡ್ಡದ ಮೇಲಿಂದಲೆ ನೋಡಿಕೊಂಡು ವಾಪಸ್ಸು ಬಂದು ಬಿಡಬೇಕೆಂದು ತಾಕೀತು ಮಾಡಿಯೆ ಅನುಮತಿ ಕೊಟ್ಟಿದ್ದ ಅವರ ಅಪ್ಪಯ್ಯ.. ಅದರ ಜೊತೆಗೆ ಒಂದಷ್ಟು ಸಿಗರೇಟು ಪ್ಯಾಕ್ ಮತ್ತು ಬ್ರಾಂದಿ ಬಾಟಲುಗಳ ‘ಪಾರಿತೋಷಕ’ವನ್ನು ಕೊಡಬೇಕಾಗಿ ಬಂತು.. ರಾಣಿ ಮಾತ್ರ ಪ್ರೊಫೆಷನಲ್ಲಾಗಿ ನಗದು ರೂಪದ ಶುಲ್ಕವನ್ನು ವಿಧಿಸುವ ಒಪ್ಪಂದ ಮಾಡಿಕೊಂಡು ತನ್ನ ನಾಗರೀಕತೆಯ ದರ್ಶನ ಮಾಡಿಸಿದ್ದಳು..!

ಹತ್ತು ನಿಮಿಷ ಸುಧಾರಿಸಿಕೊಳ್ಳುವ ಹೊತ್ತಿಗೆ ಸ್ವಲ್ಪ ನಿರಾಳವಾಗಿತ್ತು.. ಆಗ ರಾಣಿಯೂ ಆ ಬದಿಯಿಂದ ಬರುತ್ತಿರುವುದು ಕಾಣಿಸಿತು.. ಈಗ ತಲೆಗೆ ಪೇಟದಂತೊಂದು ಬಟ್ಟೆಯನ್ನು ಸುತ್ತಿಕೊಂಡು ವಿಭಿನ್ನವಾಗಿ ಕಾಣುತ್ತಿದ್ದಳು.. ಕಟ್ಟಿದ್ದ ಜಡೆಯನ್ನು ಸಹ ಬಿಚ್ಚಿ ಹಾಕಿದ್ದರಿಂದ ಮತ್ತಷ್ಟು ಮೋಹಕವಾಗಿ ಕಾಣುತ್ತಿದ್ದಳು – ಬಹುಶಃ ಅದಕ್ಕೆ ಆ ಬಟ್ಟೆಯ ಕಿರೀಟ ಕಟ್ಟಿಕೊಂಡಿದ್ದಳೇನೊ? ಜೊತೆಗೆ ದಾರಿಯಲ್ಲಿ ಸಿಕ್ಕಿದ್ದ ಒಂದಷ್ಟು ಕಾಡು ಹೂಗಳನ್ನು ಮುಡಿದುಕೊಂಡು ಸಾಕ್ಷಾತ್ ವನದೇವತೆಯೆ ನಡೆದು ಬಂದಳೇನೊ ಅನಿಸುವಂತೆ ನಡೆದು ಬರುತ್ತಿದ್ದಳು. ಇವಳು ಇಲ್ಲಿರದೆ ನಾಗರೀಕ ಜಗದಲ್ಲಿದ್ದಿದ್ದರೆ ಬಹುಶಃ ಅಪ್ರತಿಮ ಸೌಂದರ್ಯವತಿಯಾಗಿ ಮೆರೆಯುತ್ತಿದ್ದಳೇನೊ ಅನಿಸಿತು.. ಬರುತ್ತಲೇ, ನಾನಾಗ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತ ಬಂದಳು..

‘ಇನ್ನೇನು ಹತ್ರ ಬಂದ್ಬುಟ್ಟಿದ್ದೀವಿ ಸ್ವಾಮ್ಯೊರೆ.. ಇನ್ನು ಅರ್ಧಗಂಟೆಲಿ ಗುಡ್ಡದ ಮೇಲಿನ ತುದಿಗೆ ಸೇರಿಕೊಬೋದು.. ಅಲ್ಲಿಂದಾನೆ ನಿಮಗಾ ಮನೆ ಕಾಣಿಸೋದು.. ಆ ಮನೆ ಹತ್ರಾನೆ ಹೋಗ್ಬೇಕಂದ್ರೆ ಮಾತ್ರ ಎರಡು ಗಂಟೆ ಹಿಡಿಯುತ್ತೆ..’ ಎಂದಳು

ನಾನು ಬೆಚ್ಚಿದವನಂತೆ ತಲೆಯೆತ್ತಿ ನೋಡಿ. ‘ನೀನಾಗಲೆ ಆ ಮನೆ ಹತ್ರ ಹೋಗಿದ್ದೀಯಾ? ಅಲ್ಲೆಲ್ಲ ಸುತ್ತಾಡಿದ್ದೀಯಾ?’ ಎಂದು ಕೇಳಿದೆ.. ಅವಳು ಹತ್ತಿರಕ್ಕೆ ಬಂದವಳೆ.. ‘ ಅಯ್ಯೊ .. ಅಪ್ಪಯ್ಯಂಗೆ ಗೊತ್ತಾದ್ರೆ ಕೊಂದು ಹಾಕಿಬಿಡ್ತಾನೆ.. ಅದಕ್ಕೆ ಅವನ ಮುಂದೆ ಹೇಳ್ಲಿಲ್ಲ..! ನಾನು ಅಲ್ಲೆಲ್ಲ ಓಡಾಡಿದೀನಿ.. ಆದರೆ ಮನೆ ಒಳಗೆ ಹೋಗಿಲ್ಲ.. ತುಂಬಾ ದೊಡ್ಡ ಮನೆ.. ಅರಮನೆನೆ ಅದು.. ಯಾವ ರಾಜರ ಕಾಲದ್ದೊ ಏನೊ.. ಪಾಳು ಬಿದ್ದು ಕಂಬಗಳೆಲ್ಲ ಅರ್ಧಕ್ಕರ್ಧ ಉರುಳಿ ಹೋಗಿವೆ.. ಒಂದು ಕಡೆ ಮಾತ್ರ ಸ್ವಲ್ಪ ಚೆನ್ನಾಗಿ ಹಾಗೆ ಉಳ್ಕೊಂಡಿದೆ.. ಅಲ್ಲಿ ಮಾತ್ರ ಸ್ವಲ್ಪ ಓಡಾಡಿದೀನಿ.. ಅಂಗಳದ ಆಚೀಚೆ ಸುತ್ತಾಡಿದೀನಿ..’ ಎಂದಳು..

ನನಗೊಂದು ಕಡೆ ಭೀತಿಯಿದ್ದರು , ಆಸೆಯೂ ಚಿಗುರಿದಂತಾಯ್ತು.. ಬಹುಶಃ ಅಲ್ಲಿ ಹೋದರೆ ಬಲು ಅಮೂಲ್ಯವಾದ, ರಸವತ್ತಾದ, ರೋಚಕವಾದ ಕಥಾನಕವೊ , ಚರಿತ್ರೆಯೊ ಗೊತ್ತಾಗಬಹುದೇನೊ ಅನಿಸಿತು..

‘ಹೇ ಗುರಾಣಿ.. ನಿನ್ನ ಫೀಸ್ ಡಬ್ಬಲ್ ಮಾಡ್ಕೊ.. ನನ್ನ ಇವತ್ತು ಅಲ್ಲಿಗೇ ಕರ್ಕೊಂಡು ಹೋಗ್ತಿಯಾ?’ ಎಂದೆ..

ಅವಳು ಮತ್ತೆ ಕಿಲಕಿಲ ನಕ್ಕಳು.. ‘ಅಯ್ಯೋ ರೊಕ್ಕದ ವಿಚಾರ ಬುಡಿ.. ಜಾಸ್ತಿ ಕೊಡೋದೇನು ಬ್ಯಾಡಾ.. ಆದರೆ ಅಲ್ಲಿಗೆ ಹೋಗೋದಂದ್ರೆ ಟೈಮು ಜಾಸ್ತಿ ಹಿಡಿಯುತ್ತೆ.. ನನಗೇನೊ ಅಪ್ಪಯ್ಯ ಕೇಳಲ್ಲ.. ಬೇಗ ಹೋಗದಿದ್ರು ನಡೆಯುತ್ತೆ.. ನಿಮಗೆ ಹೆಂಗೋ?’ ಅಂದಳು ಪ್ರಶ್ನಾರ್ಥಕವಾಗಿ.. ನನಗು ಬೇಗ ಹೋಗಿ ಕಡಿದು ಕಟ್ಟಿಹಾಕುವುದೇನು ಇರಲಿಲ್ಲ.. ‘ನಾನೂ ಸಿದ್ದವೆ..!’ ಎಂದೆ.

ಆ ಹೊಸ ಆಯಾಮಕ್ಕೆ ಮೂಡಿದ ಕುತೂಹಲಕ್ಕೊ ಏನೊ, ಅಲ್ಲಿಂದ ಮುಂದಿನ ಹಾದಿ ಸ್ವಲ್ಪ ವೇಗವಾಗಿ ಕ್ರಮಿಸುತ್ತಿರುವಂತೆ ಭಾಸವಾಯ್ತು.. ಸರಸರನೆ ನಡೆದು ಗುಡ್ಡವನ್ನೇರಿ ನಿಂತು, ಆ ತುದಿಯಿಂದ ಕೆಳಗೆ ನೋಡಿದಾಗ, ಅಲ್ಲಿನ ದಟ್ಟ ಕಾಡಿನ ಹಸಿರಿನ ನಡುವಲ್ಲಿ ಕಪ್ಪು ಬಿಳಿ ಮಿಶ್ರಿತವಾದ ಪಟ್ಟೆಯಂತಹ ಆಯತಾಕಾರದ ಆಕಾರವನ್ನು ತೋರಿಸುತ್ತ – ‘ಅದೇ ಆ ಮಹಲು..’ ಎಂದಳು.. ನನಗಲ್ಲಿ ಆ ಪಟ್ಟಿಯ ಆಕಾರದ ಹೊರತು ಯಾವ ಮನೆಯ ವಿವರವೂ ಗೋಚರಿಸಲಿಲ್ಲ.. ಬಹುಶಃ ಆ ಕಾರಣದಿಂದಲೆ ಅದು ಅಷ್ಟಾಗಿ ಯಾರ ಗಮನವನ್ನು ಸೆಳೆದಿಲ್ಲ.. ಏನೊ ಪಟ್ಟೆಯಾಕಾರದ ಬಂಡೆಗಲ್ಲಿರಬಹುದೆಂದು ನಿರ್ಲಕ್ಷಿಸಿಬಿಡುತ್ತಾರೆ.. ರಾಣಿ ಅಲ್ಲೆಲ್ಲ ಓಡಾಡಿರುವ ಕಾರಣದಿಂದಷ್ಟೆ ಅಷ್ಟು ನಿಖರವಾಗಿ ಹೇಳುತ್ತಿದ್ದಾಳೆ..

‘ನನಗೆ ದೊಡ್ಡ ಪಟ್ಟೆಯಾಕಾರದ ಬಂಡೆಕಲ್ಲಿನ ಗುಡ್ಡದಂತೆ ಕಾಣುತ್ತಿದೆಯಷ್ಟೆ.. ಮತ್ತೇನು ಕಾಣುತ್ತಿಲ್ಲ ..’ ಎಂದೆ..

‘ ನಿಜದಲ್ಲಿ ಅದು ದೊಡ್ಡ ಬಂಡೆಗಳ ಗುಂಪೆ.. ಅದರಡಿಯಲ್ಲಿ ಈ ಮಹಲು ಅಡಗಿಕೊಂಡಿದೆ.. ಅದಕ್ಕೆ ಅಷ್ಟು ಸುಲಭದಲ್ಲಿ ಯಾರ ಕಣ್ಣಿಗು ಬೀಳಲ್ಲ..’ ಎಂದು ವಿವರಿಸಿದಳು ರಾಣಿ..

‘ಸರಿ ಇನ್ನೇಕೆ ತಡ.. ನಡೆ ಹೋಗೋಣ.. ಅಂದ ಹಾಗೆ ಅಲ್ಲ್ಯಾರಾದರು ಜನರು ಇದ್ದುದ್ದನ್ನು ಕಂಡಿದ್ದೆಯಾ? ಅಲ್ಲಿನ ಕಥೆ ಚರಿತ್ರೆ ಏನಾದ್ರು ಗೊತ್ತಾಯ್ತಾ?’ ಎಂದು ಕೇಳಿದೆ ಸಂಶೋಧಕನ ಕುತೂಹಲದಲ್ಲಿ..

‘ಒಂದೇ ಒಂದು ಸಾರಿ ಅಲ್ಯಾರೊ ಗಡ್ಡ ಮೀಸೆ ಬಿಳಿಯಾಗಿದ್ದ ಹಣ್ಣು ಹಣ್ಣು ಮುದುಕಪ್ಪನೊಬ್ಬ ಬಂದಿದ್ದ.. ಅವನು ಮೊದಲ್ಲು ಅಲ್ಲೆ ಇದ್ದವನೊ, ಅದಕ್ಕೆ ಸಂಬಂಧಿಸಿದವನೊ ಇರಬೇಕು.. ನಾನು ತುಂಬಾ ಬಲವಂತವಾಗಿ ಮಾತಾಡಿಸಿದ ಮೇಲೆ ಅದೇನೊ ಒಂಚೂರು ಕಥೆ ಹೇಳಿದ.. ಅಲ್ಲಿದ್ದ ರಾಜಕುಮಾರಿ ಅದಾರೊ ಯುವಕನನ್ನ ಪ್ರೀತಿಸಿದ್ದಳಂತೆ.. ಅದು ಯಥಾ ರೀತಿ ರಾಜಾರಾಣಿಯರಿಗೆ ಇಷ್ಟವಾಗದೆ ದೊಡ್ಡ ಗಲಾಟೆ ಆಯ್ತಂತೆ.. ಆಗ ನಡೆದ ಗಲಾಟೆಯಲ್ಲಿ ಅವಳು ಆ ಯುವಕ ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದರಂತೆ.. ಆ ದುಃಖ ತಾಳಲಾಗದೆ ರಾಜ ರಾಣಿಯು ತೀರ್ಕೊಂಡು ಆ ಅರಮನೆ, ರಾಜ್ಯ ಎಲ್ಲಾ ಆನಾಥವಾಗೋಯ್ತಂತೆ.. ಇದು ಅವರು ವಿಹಾರಕ್ಕೆಂದು ಬಂದಾಗ ಇರಲು ಕಟ್ಟಿಸಿದ್ದ ಅರಮನೆ.. ಅದಕ್ಕೆ ಕಾಡಿನ ವನದ ಮಧ್ಯೆ ಗುಟ್ಟಾಗಿ ಇದ್ದದ್ದು.. ಇದು ನಡೆದು ಸಾವಿರಾರು ವರ್ಷಗಳೆ ಕಳೆದುಹೋಗಿದೆಯೇನೊ – ಅವನು ಸಹ ಇದನ್ನು ಕಂಡಿದ್ದಲ್ಲ .. ಯಾರ್ಯಾರದೊ ಬಾಯಿ ಮಾತಲ್ಲಿ ಕೇಳಿದ್ದಷ್ಟೆ..’ ಎಂದು ತನಗೆ ಗೊತ್ತಿದ್ದಷ್ಟನ್ನು ಚೊಕ್ಕವಾಗಿ ವಿವರಿಸಿದಳು ರಾಣಿ.. ಇವಳನ್ನು ಲಂಬಾಣಿ ತಾಂಡ್ಯದ ಬುಡಕಟ್ಟು ಜನಾಂಗದ ಹುಡುಗಿ ಎಂದು ಯಾರು ಹೇಳುತ್ತಾರೆ? ಎಂದುಕೊಳ್ಳುತ್ತ , ಅವಳತ್ತ ಮೆಚ್ಚುಗೆಯ ನೋಟ ಬೀರಿ ಅವಳನ್ನು ಹಿಂಬಾಲಿಸತೊಡಗಿದೆ..

ಆ ದಾರಿ ಅವಳಿಗೆ ಸಾಕಷ್ಟು ಸುಪರಿಚಿತವಿದ್ದಂತೆ ನಿರಾಯಾಸವಾಗಿ ನಡೆಯುತ್ತಿದ್ದಳು.. ಹೊರಗಿನ ಜಗದ ತಕ್ಷಣದ ನೋಟಕ್ಕೆ ಕಾಣದಿದ್ದ ಕಾಲು ಹಾದಿಯೊಂದನು ಹಿಡಿದು, ನಿತ್ಯವು ಓಡಾಡುವಷ್ಟು ಸಲೀಸಾಗಿ ನಡೆಯುತ್ತಿದ್ದವಳನ್ನು ಹಿಂಬಾಲಿಸಲು ನಾನು ಸಾಕಷ್ಟು ಹೆಣಗಬೇಕಾಯ್ತು.. ಸಾಲದ್ದಕ್ಕೆ ದಾರಿಯ ನಡುವಲ್ಲೆ ಮಳೆ ಹನಿಯಲು ಶುರುವಾಗಿ ನಾವು ಹೆಚ್ಚು ಕಮ್ಮಿ ಓಡುವ ಹಾಗೆ ನಡೆಯತೊಡಗಿದೆವು. ಇಳಿಜಾರಿನಲ್ಲಿ ನಡೆಯುತ್ತಿದ್ದ ಕಾರಣ ಜಾರುವ ಸಾಧ್ಯತೆ ಹೆಚ್ಚಿತ್ತಾಗಿ , ಅಲ್ಲಿ ಹೇರಳವಾಗಿ ಬಿದ್ದಿದ್ದ ತರಗೆಲೆಗಳ ಮೇಲೆ ಎಚ್ಚರಿಕೆಯಿಂದ ಹೆಜ್ಜೆಯಿಕ್ಕುತ್ತ ಸಾಗತೊಡಗಿದೆವು.. ಸುದೈವವಶಾತ್ ಬರಿಯ ತುಂತುರು ಹನಿಯ ಮಳೆಯಾಗಿದ್ದ ಕಾರಣ, ಹೆಚ್ಚು ನೆನೆಯದೆ ಗುಡ್ಡದ ಬುಡ ತಲುಪಿ, ನೇರ ಹಾದಿಯಲ್ಲಿ ನಡೆಯತೊಡಗಿದೆವು.. ಅವಳು ಹೇಳಿದ್ದಂತೆ ಚಿಕ್ಜ ಯಾಣದ ಪ್ರತಿಕೃತಿಯಂತಿದ್ದ ಬಂಡೆಗಲ್ಲಿನ ಸಮೂಹಕ್ಕೆ ಬರುವ ಹೊತ್ತಿಗಾಗಲೆ ಹತ್ತಿರ ಹತ್ತಿರ ಎರಡು ಗಂಟೆ ಹಿಡಿದಿತ್ತು.. ಈಗ ಆ ಬಂಡೆಗಳ ಸಮೂಹವನ್ನೆ ಸುತ್ತಿಕೊಂಡು, ಅದರ ನಡುವಲಿದ್ದ ಒಳದಾರಿಗಳಲ್ಲಿ ನಡೆಯತೊಡಗಿದ ಕಾರಣ ಮಳೆಯಿಂದ ತಾತ್ಕಾಲಿಕ ರಕ್ಷಣೆಯೂ ಸಿಕ್ಕಂತಾಯ್ತು.. ಆದರೆ ಆ ಬಂಡೆಗಳ ಸಮುಚ್ಛಯ ಮುಗಿದು ಮತ್ತೆ ಸಮತಟ್ಟಾದ ಹಸಿರು ನೆಲ ಶುರುವಾದಾಗ ಮಳೆಯೂ ಜೋರಾಯ್ತು.. ಕಾಕತಾಳೀಯವೆಂಬಂತೆ ಆ ಅರಮನೆ ಮಹಲಿನ ದ್ವಾರವೂ ತಟ್ಟನೆ ಗೋಚರಿಸಿತು.. ಇಬ್ಬರು ಅದರತ್ತ ದೌಡಾಯಿಸಿಕೊಂಡು ನಡೆದರು, ಅದರ ಆವರಣ ಹೊಕ್ಕು ಮಳೆ ಬೀಳದ ಜಾಗದಲ್ಲಿ ನಿಲ್ಲುವ ಹೊತ್ತಿಗೆ ಇಬ್ಬರು ಪೂರ್ತಿ ಒದ್ದೆಮುದ್ದೆಯಾಗಿ ಹೋಗಿದ್ದೆವು..

ಮಳೆ ಈಗ ಇನ್ನೂ ಜೋರಾಗಿ ಧಾರಾಕಾರವಾಗಿ ಸುರಿಯತೊಡಗಿತು.. ಅದು ನಾವು ನಿಂತಿದ್ದೆಡೆಯೆಲ್ಲ ಸೋರತೊಡಗಿದಾಗ, ಇನ್ನಷ್ಟು ಮೂಲೆಗೊತ್ತರಿಸಿಕೊಂಡು ನಿಂತರು ಅದರಿಂದ ತಪ್ಪಿಸಿಕೊಳಲು ಆಗದೆ, ಇಷ್ಟಿಷ್ಟೆ ಸರಿಯುತ್ತ ನಾವು ನಿಂತಿದ್ದ ಭಾಗದ ಪ್ರವೇಶದ ಬಾಗಿಲಿನತ್ತ ತಲುಪಿಕೊಂಡಿದ್ದೆವು.. ಬಹುಶಃ ಆ ಭಾಗವೆ ಇರಬೇಕು ಅವಳು ಹೇಳಿದ ಇನ್ನು ಸುಮಾರಾಗಿ ಉಳಿದುಕೊಂಡಿರುವ ಭಾಗ.. ಮಿಕ್ಕೆಲ್ಲ ಕಡೆ ಪಾಳು ಬಿದ್ದ ಕುರುಹುಗಳ ಜೊತೆ ಹೇರಳವಾಗಿ ಬೆಳೆದುಕೊಂಡ ಗಿಡ ಮರಗಳೆ ಮೂಲ ಕಟ್ಟಡವನ್ನು ಮರೆಮಾಡಿಬಿಟ್ಟಂತೆ ಕಾಣುತ್ತಿತ್ತು.. ಮತ್ತಷ್ಟು ನೆನೆಯದಂತಿರಲು ಏನು ಮಾಡುವುದೆಂದು ಚಿಂತಿಸುತ್ತಿರುವಾಗ ತಟ್ಟನೆ ನುಡಿದಿದ್ದಳು ರಾಣಿ..

‘ಸ್ವಾಮ್ಯೋರೆ ಇಲ್ಲೆ ನಿಂತ್ರೆ ಈ ಮಳೆಯಿಂದ ತಪ್ಪುಸ್ಕೊಳೊಕೆ ಆಗಲ್ಲ.. ಹೇಗು ಈ ಬಾಗ್ಲ ಹತ್ರ ಬಂದಿದಿವಿ.. ತೆಗೆದು ಒಳಗೆ ಹೋದರೆ ವಾಸಿ ಅನ್ಸುತ್ತೆ..’ ಎಂದಳು..

ನಾನು ಅದನ್ನೆ ಯೋಚಿಸುತ್ತಿದ್ದೆ – ಈ ನೆಪದಲ್ಲಿ ಒಳಗನ್ನು ನೋಡಿದಂತಾಗುತ್ತದೆ ಎನುವ ಜತೆಯಾಸೆಯಲ್ಲಿ.. ‘ನೀನು ಈ ಮೊದಲು ಒಳಗೆ ಹೋಗಿ ನೋಡಿದ್ದೆಯಾ?’ ಎಂದೆ.. ಇಲ್ಲವೆನ್ನುವಂತೆ ತಲೆಯಾಡಿಸಿದಳು.. ‘ಸರಿ ಹೋಗಿ ನೋಡಿಯೆ ಬಿಡುವ ನಡಿ..’ ಎನ್ನುತ್ತಿದ್ದ ಹಾಗೆ ಆ ಕದವನ್ನು ದೂಕಿ ತಾನೆ ಮೊದಲು ಒಳಗೆ ನಡೆದಳು ರಾಣಿ.

ಅದೊಂದು ವಿಶಾಲವಾದ ಕೊಠಡಿ – ಹಜಾರವಿದ್ದ ಹಾಗೆ ಕಾಣುತ್ತಿತ್ತು.. ನಡುವಿನಲ್ಲಿ ತೆರೆದ ತೊಟ್ಟಿಯ ಹಾಗಿದ್ದ ಜಾಗದ ಮೇಲು ಭಾಗ ತೆರೆದುಕೊಂಡಿದ್ದ ಗವಾಕ್ಷಿಯಂತಿದ್ದ ಕಾರಣ ಅಲ್ಲಿಯು ಮಳೆ ಸುರಿಯುತ್ತಿದ್ದರು, ಮಿಕ್ಕೆಲ್ಲ ಕಡೆ ಸುರಕ್ಷಿತವಾಗಿತ್ತು.. ಜೊತೆಗೆ ಅದೇ ಕಾರಣದಿಂದಲೆ ಅಲ್ಲಿ ಚೆನ್ನಾಗಿ ಬೆಳಕು ಹರಡಿಕೊಂಡಿತ್ತು.. ಆ ಬೆಳಕಿನ ದೆಸೆಯಿಂದ ಅಲ್ಲಿದ್ದ ಎಲ್ಲ ವಸ್ತುಗಳು ಚೆನ್ನಾಗಿ ಗೋಚರಿಸಿದೆವು.. ಮುರಿದು ಬಿದ್ದ ಮರದ ಆಸನಗಳು , ಮೇಜುಗಳು, ಅಪಾರದರ್ಶಕವಾಗಿ ಹೋಗಿದ್ದ ದೊಡ್ಡ ಕನ್ನಡಿಗಳಿದ್ದ ಅಲಂಕರಣ ಪೀಠೋಪಕರಣಗಳು.. ಇದೆಲ್ಲವನ್ನು ಮೀರಿ ನಮ್ಮ ಗಮನ ಸೆಳೆದದ್ದು ಅಲ್ಲಿದ್ದ ಮತ್ತೊಂದು ಮುಚ್ಚಿದ ಕೊಠಡಿಯ ಕದ.. ನನ್ನನ್ನು ಕಣ್ಸನ್ನೆಯಿಂದಲೆ ಅದರತ್ತ ಹೋಗೋಣವೆಂದು ಕರೆದ ರಾಣಿ, ನನ್ನ ಉತ್ತರಕ್ಕೆ ಕಾಯದೆ ಅದರತ್ತ ಹೋಗತೊಡಗಿದಳು.. ನಾನು ಸಹ ಅದೇನಿರಬಹುದೆಂದು ಕುತೂಹಲದಿಂದಲೆ ಹಿಂಬಾಲಿಸಿದೆ -..

ಅದರ ಬಾಗಿಲು ತೆಗೆಯುತ್ತಲೆ ಅದರೊಳಗೆ ನಮ್ಮ ಕಣ್ಣಿಗೆ ಬಿದ್ದದ್ದು ಎದುರಿನ ಗೋಡೆಯ ಮೇಲಿದ್ದ ಎರಡು ಪೈಂಟಿಂಗುಗಳು.. ಅದಾವ ಚಿತ್ರವೆಂದು ಗೊತ್ತಾಗದ ಹಾಗೆ ಅದರ ಮೇಲೆಲ್ಲ ಕಸ, ಜೇಡ ಮುಸುಕಿಕೊಂಡಿತ್ತು.. ಅಲ್ಲಿದ್ದ ಕಡ್ಡಿಯೊಂದರ ಸಹಾಯದಿಂದ ಅದನ್ನು ಹಾಗೆಯೆ ಅಷ್ಟಿಷ್ಟು ಚದುರಿಸಿ ಅದಾವ ಚಿತ್ರಗಳೆಂದು ನೋಡಲು ಪ್ರಯತ್ನಿಸಿದೆ.

ಆ ಚಿತ್ರಗಳನ್ನು ನೋಡುತ್ತಲೆ ಜೀವಮಾನದ ಶಾಕ್ ಹೊಡೆದಂತೆ ಬೆಚ್ಚಿ ಬಿದ್ದೆ..!

ಅಲ್ಲಿದ್ದ ಮೊದಲ ಚಿತ್ರದಲ್ಲಿದ್ದುದ್ದು, ಆ ರಾಜಕುಮಾರಿಯ ಪೋಷಾಕಿನಲ್ಲಿ ನಿಂತಿದ್ದವಳು ಬೇರಾರು ಅಲ್ಲ – ಸಾಕ್ಷಾತ್ ರಾಣಿಯೆ! ಒಂದು ಚೂರು ವ್ಯತ್ಯಾಸವಿರದ ಅದೇ ಮುಖ – ಪೋಷಾಕಷ್ಟೆ ಬೇರೆ..

ಹಾಗೆಯೆ ತಿರುಗುತ್ತ ಮತ್ತೊಂದು ಚಿತ್ರವನ್ನು ನೋಡುತ್ತಿದ್ದಂತೆ, ನನಗಾದ ಆಘಾತವನ್ನು ಮೀರಿ ಪ್ರಜ್ಞೆ ತಪ್ಪಿ ಬೀಳುವ ಹಾಗೆ ಆಯಿತು.. !

ಅಲ್ಲಿದ್ದುದು ಸಾಕ್ಷಾತ್ ನನ್ನದೆ ಚಿತ್ರ – ಯುವಕನೊಬ್ಬನ ಪೋಷಾಕಿನಲ್ಲಿ..!

‘ನೋಡಿದೆಯಾ ಪ್ರಿಯಾ..? ಕೊನೆಗು ಆ ವಿಧಿ ನಮ್ಮಿಬ್ಬರನ್ನು ಅದು ಹೇಗೆ ತಂದು ಸೇರಿಸಿಬಿಟ್ಟಿತು? ಜನ್ಮ ಜನ್ಮಾಂತರ ಕಳೆದರು ಬಿಡಲಿಲ್ಲ ಆ ಪ್ರೇಮದ ಬಂಧ.. ಬಾ ಪ್ರಿಯ, ನಾವೀಗಲಾದರು ಒಂದಾಗೋಣ..’ ಎನ್ನುತ್ತ ನನ್ನ ಹತ್ತಿರ ಬರತೊಡಗಿದಳು ರಾಣಿ.. ಅವಳ ದನಿ ಈಗ ಮೊದಲಿನಂತಿರಲಿಲ್ಲ.. ಅವಳ ಕಣ್ಣಲ್ಲಿ ಅದಾವುದೊ ಆವೇಶದ, ವರ್ಣಿಸಲಾಗದ ಅಘೋರ ಭಾವನೆಯೊಂದು ಒಡಮೂಡಿದಂತಿತ್ತು.. ನಾನು ಹೆದರಿಕೆಯಿಂದ ಬಿಳಿಚಿಕೊಂಡವನೆ ಹಿಂದೆ ಹಿಂದೆ ಹೆಜ್ಜೆ ಹಾಕತೊಡಗಿದೆ.. ಅವಳು ನಿಧಾನವಾಗಿ ಗಹಗಹಿಸಿ ನಗುತ್ತಲೆ ನನ್ನತ್ತ ನಡೆದು ಬರತೊಡಗಿದಳು.. ನಾನು ಹೆಚ್ಚು ದೂರಕ್ಕೆ ನಡೆಯಲು ಸಾಧ್ಯವಾಗದಂತೆ ಅಲ್ಲಿದ್ದ ಮರದ ದೇವರ ಮಂಟಪದಂತಹ ಪೀಠೋಪಕರಣವೊಂದು ಅಡ್ಡ ಬಂದು, ನಾನು ಎಡವಿದವನಂತೆ ಹಿಮ್ಮುಖವಾಗಿ ಅದರ ಮೇಲೆ ಬಿದ್ದೆ.. ಇನ್ನು ನನ್ನ ಕಥೆ ಮುಗಿಯಿತು.. ಇವಳಾರೊ ದೆವ್ವವೊ, ಭೂತವೊ ಇದ್ದಂತೆ ಕಾಣುತ್ತಿದೆ – ನನ್ನನ್ನಿವಳು ಉಳಿಸುವುದಿಲ್ಲ ಎನ್ನುವ ಭಾವದಲ್ಲಿ ಹೆದರಿಕೆಯಿಂದ ಕಣ್ಮುಚ್ಚಿಕೊಂಡು ದೇವರ ನಾಮ ಜಪಿಸತೊಡಗಿದೆ.. ಹಾಗೆ ಜಪಿಸುತ್ತಲೆ ಮರದ ಮಂಟಪದೊಳಗೆ ಕೈಗೇನೊ ಸಿಕ್ಕಿದಂತಾಗಿ ಅದನ್ನು ಭಧ್ರವಾಗಿ ಹಿಡಿದುಕೊಂಡೆ.. ಆ ಹೊತ್ತಿಗೆ ಸರಿಯಾಗಿ ಅವಳ ಮುಖ ನನ್ನ ಮುಖದ ನೇರಕ್ಕೆ ಹತ್ತಿರವಾಗಿ ಬಂದದ್ದು ಗೊತ್ತಾಗಿ ಭೀತಿಯಲ್ಲಿ ಪೂರ್ತಿಯಾಗಿ ರೆಪ್ಪೆ ಬಿಗಿದು ಕಣ್ಮುಚ್ಚಿಕೊಂಡೆ.. ಅವಳು ನನ್ನ ಕೈಯನ್ನು ಮುಟ್ಟುತ್ತಿರುವುದು ಅನುಭವಕ್ಕೆ ಬರುತ್ತಿದ್ದಂತೆ, ಮುಂದೇನಾಯಿತೆಂದು ಅರಿವಿಗೆ ನಿಲುಕದಂತೆ ಪ್ರಜ್ಞೆ ತಪ್ಪಿ ಹೋಯ್ತು..


ಭಾರವಾಗಿ ಸಿಡಿಯುವಂತಿದ್ದ ಹಣೆಯನ್ನು ಅಲುಗಿಸುತ್ತ ನಿಧಾನವಾಗಿ ಕಣ್ತೆರೆದೆ.. ಹಗ್ಗದ ಮಂಚವೊಂದರ ಮೇಲೆ ಮಲಗಿದ್ದು ಅನುಭವಕ್ಕೆ ಬಂತು.. ‘ಅಪ್ಪಯ್ಯ.. ಕಣ್ ತೆಗಿತಾ ಇದಾರೆ.. ಗ್ಯಾನ ಬಂತು ಅಂತ ಕಾಣುತ್ತೆ..’ ಎನ್ನುತ್ತಿದ್ದ ರಾಣಿಯ ದನಿ ಕೇಳಿ ಎದೆ ಧಸಕ್ಕೆಂತು – ಇವಳೆ ಅಲ್ಲವೆ ನನ್ನನ್ನಲ್ಲಿಗೆ ಕರೆದೊಯ್ದವಳು ಎಂದು ನೆನಪಾಗಿ‍‍.. ಈಗೇನು ನಾಟಕವೊ ನೋಡೋಣವೆಂದು ಮೇಲೆದ್ದು ಕೂರಲು ಯತ್ನಿಸಿದೆ.. ಆದರೆ, ಕೂರಲಾಗದೆ ದೊಪ್ಪನೆ ಕುಸಿದು ಬಿದ್ದೆ.. ಆಗ ಸುತ್ತಲು ಹತ್ತಾರು ಜನರಿರುವುದು ಗಮನಕ್ಕೆ ಬಂತು – ರಾಣಿಯ ಅಪ್ಪಯ್ಯನು ಸೇರಿದಂತೆ.. ಆಗ ನಾನು ಅವರ ತಾಂಡದ ಹಾಡಿಯಲ್ಲೆ ಇರುವೆನೆಂದು ಸಹ ಅರಿವಾಯ್ತು..

ಆ ಅರಮನೆಯ ಮಹಲಿನ ಜಾಗದಿಂದ ನಾನಿಲ್ಲಿಗೆ ಹೇಗೆ ಬಂದೆ? ಯಾರು ಕರೆ ತಂದರು?

‘ಸ್ವಾಮಿ .. ತುಂಬಾ ಸುಸ್ತಾಗಿದೀರಾ.. ಹಂಗೆ ಮಲಕ್ಕೊಳಿ ನಿಮಗೆ ವಿಶ್ರಾಂತಿ ಬೇಕು..’ ಎಂದ ರಾಣಿಯ ಅಪ್ಪನ ದನಿ ಕೇಳಿಸಿತು..

ನಾನು ಕ್ಷೀಣದನಿಯಲ್ಲೆ, ‘ನಾನಿಲ್ಲಿಗೆ ಹೇಗೆ ಬಂದೆ?’ ಎಂದು ಕೇಳಿದೆ ಏನು ಅರ್ಥವಾಗದ ಗೊಂದಲದಲ್ಲಿ…

ನನಗೆ ಉತ್ತರಿಸುವ ತನಕ ನಾನು ನಿದ್ರಿಸುವುದಿಲ್ಲವೆಂದೊ ಏನೊ, ಸ್ವಲ್ಪ ಚಿಕ್ಕ ವಿವರಣೆಯನ್ನೆ ಕೊಟ್ಟರವರು..

‘ಅಲ್ಲಾ ಸ್ವಾಮಿ.. ಜಲಭಾಧೆ ತೀರಿಸಿ ಬರ್ತೀನಿ ಅಂತ ಹೇಳಿ ಹೋದ ನನ್ನ ಮಗಳು ವಾಪಸ್ಸು ಬರೋತನಕ ನೀವು ಕಾಯಬಾರದ? ಒಬ್ಬರೆ ಹೊರಟು ಹೋಗಿದ್ದೀರಲ್ಲ? ಏನಾದ್ರು ಎಚ್ಚು ಕಮ್ಮಿ ಆಗಿದ್ರೆ ಏನು ಗತಿ? ನಮ್ ಕೂಸು ರಾಣಿ ಅಲ್ಲೆಲ್ಲ ಹುಡ್ಕಾಡಿ ನೀವು ಸಿಗ್ದೆ ಇದ್ದದ್ದಕ್ಕೆ , ಹೆದರ್ಕೊಂಡು ಅಳ್ತಾ ಓಡ್ಬಂದ್ಲು.. ನಾನು ತಕ್ಷಣ ಒಂದಷ್ಟು ಕಟ್ಟುಮಸ್ತು ಆಳುಗಳನ್ನ ವುಡುಕ್ಕೊಂಡು ಬನ್ನಿ ಅಂಥ ಕಳಿಸ್ದೆ.. ಅಲ್ಲಾ ಹೋಗಿ ಹೋಗಿ ಆ ಮಶಾಣದ ಭೂಮಿಗೆ ಯಾಕ್ ವೋದ್ರಿ ನೀವು? ಮೊದ್ಲೆ ಅಲ್ಲಿ ಎಷ್ಟೊಂದು ಜನ ರಕ್ತಾ ಕಾರ್ಕೊಂಡು ಸತ್ತವ್ರೆ.. ನಿಮ್ ಪುಣ್ಯ ಚೆನ್ನಾಗಿತ್ತು .. ಅಲ್ಲಿದ್ದ ಮಂಟಪದಲ್ಲಿ ಶಿವಲಿಂಗ ಹಿಡ್ಕೊಂಡು ‘ಬೇಡ ಬಿಟ್ಬಿಡು ಬೇಡ ಬಿಟ್ಬಿಡು’ ಅಂಥ ಕಿರುಚ್ತಿದ್ರಂತೆ.. ನಮ್ಮ ವುಡ್ಗುರ ಜೊತೆ ಮಾಟ ಮಂತ್ರ ಮಾಡೊ ಮೋಟಪ್ಪನು ಇದ್ದದಕ್ಕೆ ಬಚಾವ್ ನೀವು.. ಅಲ್ಲೆ ತಡೆ ಮಂತ್ರ ಹಾಕಿ ನಿಮ್ಮನ್ನ ಎತ್ಕೊಂಡು ಓಡಿ ಬಂದವ್ರೆ.. ಅವರೇನಾದ್ರು ಒಂಚೂರು ತಡ ಆಗಿದ್ರೆ ದೇವರೆ ಗತಿ.. ಸದ್ಯ ನೀವು ಸಿಕ್ಕಿದ ವೊತ್ನಲ್ಲಿ ಮಳೆನು ಇರ್ಲಿಲ್ಲ.. ಇಲ್ದಿದ್ರೆ ಇನ್ನೆಷ್ಟು ಪಾಡಾಗ್ತಿತ್ತೊ ಏನೊ? ಮಳೆ ಸುರುವಾಗೋಕೆ ಮೊದ್ಲೆ ಹಾಡಿ ತಲುಪ್ಕೊಂಡ್ರಿ..’

ಅವರ ವಿವರಣೆ ಕೇಳುತ್ತಿದ್ದಂತೆ ನಾನು ಇನ್ನೂ ಬೆಚ್ಚಿ ಬಿದ್ದೆ.. ಹಾಗಾದ್ರೆ ಜಲಭಾಧೆ ತೀರಿಸಿಕೊಂಡು ಬಂದ ಆ ರಾಣಿ ಯಾರು?

ನಖಶಿಖಾಂತ ನೆನೆವ ಮಳೆಯಲ್ಲಲ್ಲವೆ ಅಲ್ಲಿಗೆ ಹೋಗಿದ್ದು? ಇವರು ನೋಡಿದರೆ ಆಮೇಲೆ ಮಳೆ ಬಂತು ಅನ್ನುತ್ತಿದ್ದಾರೆ..

ಸಾಲದ್ದಕ್ಕೆ ಸ್ಮಶಾನದಲ್ಲಿ ಸಿಕ್ಕಿದೆ ಅನ್ನುತ್ತಿದ್ದಾರೆ.. ಎಲ್ಲವು ಅಯೋಮಯವಾಗಿದೆಯಲ್ಲ? ನಾನು ಹೋಗಿದ್ದು ಆ ಅರಮನೆಯ ಮಹಲಿನೊಳಗಲ್ಲಗಲ್ಲವೆ…?

‘ಸರಿ ಸರಿ ಎಲ್ಲಾ ನಡೀರಿ.. ಅವರು ಮಲಕ್ಕೊಂಡು ನಿದ್ದೆ ಮಾಡ್ಲಿ ..ರಾಣಿ ನೀನು ಇಲ್ಲೆ ಇದ್ದು ಅವರಿಗೇನು ಬೇಕೊ ನೋಡ್ಕೊ ತಾಯಿ..’ ಎನ್ನುತ್ತಿದ್ದಂತೆ ರಾಣಿಯ ಅಪ್ಪಯ್ಯನೊಂದಿಗೆ ಮಿಕ್ಕವರೆಲ್ಲ ಹೊರ ನಡೆದರು..

ನಾನು ಇನ್ನು ಬಗೆಹರಿಯದ ಪ್ರಶ್ನೆಗಳ ಗೊಂದಲದಲ್ಲೆ ಚಡಪಡಿಸುತ್ತ, ಸಿಕ್ಕಿ ಬಿದ್ದಿದ್ದೆ.. ಅದನ್ನೆ ಚಿಂತಿಸುತ್ತ ರಾಣಿಯತ್ತ ಕಣ್ತೆರೆದು ನೋಡುತ್ತ ಕೇಳಿದೆ..

‘ಹಾಗಾದರೆ ನೀನು ಜಲಭಾಧೆ ತೀರಿಸಿಕೊಂಡು ಬಂದು ನನ್ನ ಮುಂದಕ್ಕೆ ಕರೆದೊಯ್ಯಲೆ ಇಲ್ಲವೆ?’

‘ಅಯ್ಯೊ ಅದ್ಯಾಕೆ ಹಂಗೆ ಕೇಳ್ತೀರಾ? ನಾನೇ ಅಲ್ವೆ ನಿಮ್ಮನ್ನ ಅಲ್ಲಿಗೆಲ್ಲ ಕರೆದುಕೊಂಡು ಹೋಗಿ ತೋರಿಸಿದ್ದು – ಅದೂ ಆ ಮಳೇಲಿ.. ಆ ಪಾಳು ಬಿದ್ದ ಮನೇಲಿ..ಎಲ್ಲಾ ಮರೆತುಬಿಟ್ರಾ..?’ ಎಂದಳು ತಲೆಗೆ ಆ ಹೆಣ್ಣು ಕಟ್ಟಿದ್ದ ರೀತಿಯದೆ ರುಮಾಲನ್ನು ಕಟ್ಟಿಕೊಂಡಿದ್ದ ತನ್ನ ಮುಖವನ್ನು ಹತ್ತಿರಕ್ಕೆ ತರುತ್ತ..

ಚೀರುವ ಶಕ್ತಿಯೂ ಇಲ್ಲದವನಂತೆ, ನಾನು ಮತ್ತೆ ಪ್ರಜ್ಞೆ ತಪ್ಪಿ ಬಿದ್ದೆ!

(ಮುಕ್ತಾಯ)

– ನಾಗೇಶ ಮೈಸೂರು
೦೭.೦೯.೨೦೨೧

ಹಾರರ್_ಕಥೆಗಳು

(Picture source: internet / social media)

ಸಣ್ಣಕಥೆ : ಫ್ಯಾನಾಯಣ (ಲಘು ಲಹರಿ)


ಫ್ಯಾನಾಯಣ (ಲಘು ಲಹರಿ)


‘ಸಾರ್ ನಾನು ನಿಮ್ಮ ಕವಿತೆಗಳ ದೊಡ್ಡ ಫ್ಯಾನ್..’

ಅಪರೂಪವಾಗಿ ಕಿವಿಯ ಮೇಲೆ ಬಿದ್ದ ಆ ಮಾತಿಗೆ ನಖಶಿಖಾಂತ ಬೆವರಿ ಹೋಗಿದ್ದೆ – ರೋಮಾಂಚನದಿಂದ..! ಮೊಟ್ಟ ಮೊದಲಿಗೆ ಫ್ಯಾನುಗಳಿದ್ದಾರೆನ್ನುವುದೆ, ಎವರೆಸ್ಟು ಮೇಲೇರಿದಷ್ಟು ಖುಷಿಗೆ ಕಾರಣವಾಗಿತ್ತು..

ದೊಡ್ಡ ಸಾಹಿತಿಯೊಬ್ಬರ ಪುಸ್ತಕ ಬಿಡುಗಡೆ ಸಮಾರಂಭವೊಂದು ನಡೆಯುತ್ತಿದ್ದ ಸ್ಟಾರ್ ಹೋಟೆಲಿನಲ್ಲಿ ಇದ್ದಕ್ಕಿದ್ದಂತೆ ಪಕ್ಕದಲ್ಲಿದ್ದವರು ಹಾಗೆಂದಾಗ ಹೇಗನಿಸಿರಬೇಡ ? ಅದರಲ್ಲು, ಮೂಲೆಯೊಂದರಲ್ಲಿ ಕೂತವನನ್ನು ಗುರುತಿಸಿ ಹೊಗಳಿದಾಗ, ಮೈಯ ರೋಮಗಳ ಮಾತಿರಲಿ, ಶರಟಿನ ಕಾಲರುಗಳು ಕೂಡ ತಂತಾನೆ ನಿಮಿರಿ ಎದ್ದು ನಿಂತವೇನೊ ಅನಿಸಿಬಿಟ್ಟಿತ್ತು..

ಆ ಸ್ವಪ್ನ ಲೋಕದಲ್ಲಿ ತೇಲುತ್ತಿರುವಾಗಲೆ ಆತ ಕೇಳಿದ್ದರು – ‘ತಿಂಡಿ ಆಯ್ತಾ ಸಾರ್?’

‘ಹೂಂ.. ಆಯ್ತಲ್ಲಾ? ಪ್ರೋಗ್ರಾಮ್ ಶುರು ಆಗೋಕೆ ಮೊದ್ಲೆ ಉಪ್ಪಿಟ್ಟು , ಕೇಸರಿಬಾತು ಇತ್ತಲ್ಲ? ನೀವು ತೊಗೊಳ್ಳಿಲ್ವಾ?’ ಎಂದೆ..

‘ಅಯ್ಯೊ, ಹಾಳು ಬಸ್ ಲೇಟ್ ಆಗೋಯ್ತು ಸಾರ್.. ಪರವಾಗಿಲ್ಲ ಬಿಡಿ.. ಇಲ್ಲೆ ರೆಸ್ಟೋರೆಂಟಿದೆಯಲ್ಲ , ಅಲ್ಲೆ ಹೋಗಿ ಏನಾದ್ರು ತಿನ್ಕೊತೀನಿ… ನೀವು ಬನ್ನಿ ಸಾರ್, ಕಾಫಿನಾದ್ರು ಕುಡಿಯೋಣ ..’ ಎಂದರಾತ..

ಮೊಟ್ಟ ಮೊದಲ ಬಾರಿಗೆ, ಫ್ಯಾನಂತ ಹೇಳಿಕೊಂಡು ಬಂದಿದಾನೆ – ಅವನಿಗೆ ನಾನೇ ಕಾಫಿ ಕೊಡಿಸಿದ್ರು ಮೋಸವಿಲ್ಲ ಅನಿಸಿತು.. ಜೊತೆಗೆ, ಖರ್ಚಾಗದೆ ಕೊಳೆಯುತ್ತಿರೊ ನನ್ನ ಕವನ ಸಂಕಲನಗಳನ್ನ ಅಲ್ಲೆ ತಗುಲಿ ಹಾಕಲೂಬಹುದೇನೊ ಅನಿಸಿ ಬುದ್ಧಿ ಸ್ವಲ್ಪ ಚುರುಕಾಯ್ತು..

‘ಅದಕ್ಕೇನು ಬನ್ನಿ ಹೋಗೋಣ.. ನನಗು ನಿಮ್ಮ ಜೊತೆ ಸ್ವಲ್ಪ ಕಾಲ ಕಳೆಯೋ ಅವಕಾಶ ಸಿಗುತ್ತೆ.. ಹೇಗೂ ಬುಕ್ ಲಾಂಚ್ ಫಂಕ್ಷನ್ ಮುಗಿದಾಯ್ತಲ್ಲ.. ಹಾಗೆ ಅಲ್ಲೆ, ನನ್ನ ಪುಸ್ತಕಗಳನ್ನೂ ನಿಮಗೆ ತೋರಿಸ್ಬಹುದು..’ ಎಂದವನೆ ಆ ಭವ್ಯ ಹೋಟೆಲಿನ ವೈಭವೋಪೇತ ರೆಸ್ಟೊರೆಂಟಿನತ್ತ ಹೆಜ್ಜೆ ಹಾಕಿದೆ.. ಆತ ಜೊತೆಯಲ್ಲೆ ಹಿಂಬಾಲಿಸಿದ್ದಾರೆಂಬ ಅರಿವಿನಿಂದ, ಸ್ವಲ್ಪ ಗತ್ತಿನಲ್ಲೆ ನಡೆದಿದ್ದೆ..

ಅಲ್ಲೊಂದು ಮೂಲೆಯ ಟೇಬಲ್ ಹಿಡಿದು ಕೂರುತ್ತಿದ್ದಂತೆ, ‘ಸಾರ್, ನನಗೆ ತುಂಬಾ ಹಸಿವಾಗುತ್ತಿದೆ.. ಏನಾದರು ತಿಂಡಿ ತಿನ್ನಬೇಕೆನಿಸುತ್ತಿದೆ.. ನಿಮಗೆ ತಿಂಡಿ ತಿನಿಸಿದ ಸೌಭಾಗ್ಯ ಕೂಡ ನನ್ನದಾಗಲಿ.. ನೀವೇನು ತೆಗೆದುಕೊಳ್ಳುತ್ತೀರಿ?’ ಎಂದರು.. ತಕ್ಷಣವೆ ನನ್ನ ‘ಸೆಲಬ್ರಿಟಿ’ ಪ್ರಜ್ಞೆ ಜಾಗೃತವಾಯಿತು..

‘ಅರೆರೆ.. ನೀವು ತೊಗೊಳಿ ಪರವಾಗಿಲ್ಲ..ನನಗೆ ಬರಿ ಕಾಫಿ ಸಾಕು.. ಅಂದ ಹಾಗೆ ನೀವು ನನ್ನ ಅಭಿಮಾನಿ ಅಂದಿರಿ.. ಅದಕ್ಕೆ ಇವತ್ತು ನನ್ನದೆ ಟ್ರೀಟ್..! ಆರ್ಡರ್ ಮಾಡಿ..’ ಎಂದೆ ದಾನ ಶೂರ ಕರ್ಣನ ಪೋಸಿನಲ್ಲಿ..

ಆತ ‘ಥ್ಯಾಂಕ್ಯೂ ವೆರಿ ಮಚ್ ಸಾರ್..! ನಿಮ್ಮೊಡನೆ ತಿನ್ನುವುದಲ್ಲದೆ , ನೀವೆ ಕೊಡಿಸಿದ್ದನ್ನು ತಿನ್ನುವ ಭಾಗ್ಯ ನನ್ನದು, ನೋಡಿ..’ ಎನ್ನುತಾ ಮೆನು ಕಾರ್ಡ್ ನೋಡತೊಡಗಿದ.. ನಾನೂ ಹಾಗೆಯೆ ಮತ್ತೊಂದು ಮೆನು ಕಾರ್ಡು ತೆಗೆದುಕೊಂಡು ಸುಮ್ಮನೆ ಕಣ್ಣಾಡಿಸಿದೆ .. ಆ ರೇಟುಗಳನ್ನು ನೋಡುತ್ತಿದ್ದಂತೆ ಎದೆ ಧಸಕ್ಕೆಂದಿತು..! ಸ್ವಲ್ಪ ದುಡುಕಿದೆನೇನೊ ಅನಿಸಿತು.. ಬಾಯಿ ಬಿಟ್ಟು ಕೆಟ್ಟಾಗಿತ್ತು.. ಈಗೇನೂ ಮಾಡುವಂತಿರಲಿಲ್ಲ..

ಆತ ಮಾತ್ರ ಯಾವುದೆ ದಾಕ್ಷಿಣ್ಯ, ಸಂಕೋಚವಿಲ್ಲದೆ ತನಗೆ ಬೇಕಾದ್ದನ್ನೆಲ್ಲ ಆರ್ಡರಿಸತೊಡಗಿದ.. ಚೌಚೌ ಬಾತಿನಿಂದ ಆರಂಭಿಸಿ, ರವಾ ಇಡ್ಲಿ, ಮಸಾಲೆ ದೋಸೆ, ವಡೆ, ಜಾಮೂನು ಇತ್ಯಾದಿಗಳನ್ನು ಪಟ್ಟಾಗಿ ಇಳಿಸಿದ ಮೇಲೆಯೆ, ಅವನ ಜಠರಾಗ್ನಿ ಶಾಂತವಾದಂತೆ ಕಂಡಿತು. ಪುಣ್ಯಕ್ಕೆ ಅವನು ಕೇಳಿದ ಕೆಲವು ಐಟಂಗಳು ಇಲ್ಲದೇ ಇದ್ದ ಕಾರಣ ಬಚಾವಾದೆ.. ಇಲ್ಲದಿದ್ದರೆ ಇನ್ನೂ ದೊಡ್ದ ಬ್ಲೇಡೇ ಬೀಳುತ್ತಿತ್ತು ಅನಿಸಿತು..! ಈಗ ಕಬಳಿಸಿದ್ದೇನೂ ಕಡಿಮೆಯದಾಗಿರದ ಕಾರಣ, ಕನಿಷ್ಠ ಒಂದೆರಡು ಪುಸ್ತಕಗಳನ್ನಾದರು ‘ದಾಟಿಸಿ’ ಅಷ್ಟಿಷ್ಟಾದರು ‘ರಿಕವರಿ’ ಮಾಡಿಕೊಳ್ಳಬೇಕೆಂದು ಯೋಜನೆ ಹಾಕಿ, ನಡುವೆಯೆ ಮಾತಿಗೆಳೆದೆ..

‘ಅಂದ ಹಾಗೆ, ನನ್ನ ಯಾವ ಕವಿತಾ ಸಂಕಲನ ಓದಿದ್ದೀರಿ ನೀವು? ಹೇಗನಿಸಿತು ?’ ಎಂದೆ.. ಸೆಲೆಬ್ರಿಟಿಗಳನ್ನು ಮೀರಿಸಿದ ಗತ್ತಿನಲ್ಲಿ..

‘ಸಾರ್.. ಬೇಜಾರು ಮಾಡಿಕೋಬೇಡಿ.. ನಾನು ಇನ್ನು ನಿಮ್ಮ ಯಾವ ಪುಸ್ತಕವನ್ನು ಓದಿಲ್ಲ.. ಹೇಳಬೇಕೆಂದರೆ, ಈಗ ನಾನೆ ನಿಮ್ಮನ್ನ ಕೇಳೋಣ ಅಂದುಕೊಂಡಿದ್ದೆ, ಯಾವುದಾದರು ಪುಸ್ತಕ ಇಲ್ಲಿಗೆ ತಂದಿದ್ದೀರಾ ಅಂತ..’ ಎಂದ!

‘ಮತ್ತೆ.. ನಾನು ಬರೆಯುವುದು ನಿಮಗೆ ಹೇಗೆ ಗೊತ್ತು..?’ ಎಂದೆ ತುಸು ಗೊಂದಲದಲ್ಲಿ..

‘ಎಲ್ಲಾ ಸೋಶಿಯಲ್ ಮೀಡಿಯಾ ಮಾಯೆ ಸಾರ್.. ನೀವು ಫೇಸ್ಬುಕ್, ವಾಟ್ಸಾಪ್ಪಿನಲ್ಲಿ ಹಾಕಿದ್ದು, ಅವರಿವರು ಶೇರ್ಮಾಡಿದ್ದು – ಎಲ್ಲಾ ಅಲ್ಲೆ ನೋಡಿದ್ದು.. ಸೂಪರ್ ಅಂದ್ರೆ ಸೂಪರ್ ಸಾರ್! ನೋಡಿ ಸಾರ್ , ಕೆಲವನ್ನ ನನ್ನ ಮೊಬೈಲಲ್ಲೆ ಸೇವ್ ಮಾಡಿ ಇಟ್ಕೊಂಡಿದೀನಿ.. ಆಗಾಗ ಗುನುಗೋಕೆ.. ಏನ್ ಸಾರ್ ! ಎಲ್ಲಾ ಭಾವಗೀತೆ ತರ ಹಾಡೋಕು ಸಿಗಬೇಕು – ಹಾಗೆ ಬರೀತೀರಲ್ಲ! ಏನ್ ಬರಿತೀರಾ ಸಾರ್..? ಅದ್ಭುತ ಸಾರ್, ಅದ್ಭುತ..’

ನಾನಾಗಲೆ ನೆಲದಿಂದ ಮೂರಡಿ ಮೇಲೇರಿದ್ದೆ.. ಓದಿದ್ದೇನೆ ಅನ್ನುವವರೆ ಸಿಕ್ಕಿರಲಿಲ್ಲ.. ಅಂಥಾದ್ರಲ್ಲಿ ಮೊಬೈಲಲ್ಲಿ ಸೇವ್ ಮಾಡಿಟ್ಟುಕೊಳ್ಳುವಷ್ಟು ಪ್ರೀತಿ, ಅಭಿಮಾನ ಅಂದ್ರೆ, ಈತ ಪುಸ್ತಕ ಕೊಳ್ಳೋದು ಗ್ಯಾರಂಟಿ ಅನಿಸಿತು.. ಇರೊ ಎಲ್ಲಾ ಐದು ಪುಸ್ತಕಾನು ಗಂಟು ಹಾಕಬಹುದು ಅನಿಸಿ ಸ್ವಲ್ಪ ಖುಷಿಯು ಆಯ್ತು – ತಿಂಡಿ ಬಿಲ್ಲು ಹೆಚ್ಚು ಕಮ್ಮಿ ಪೂರ್ತಿ ರಿಕವರಿ ಮಾಡಬಹುದು ಅನ್ನುವ ವಿಶ್ವಾಸದಲ್ಲಿ..!

‘ಓಹ್.. ಸೇವ್ ಮಾಡಿಟ್ಕೊಂಡು ಓದ್ತೀರಾ? ಎಂಥಾ ಅಭಿಮಾನ ಸಾರ್ ನಿಮ್ಮದು.. ನಿಮ್ಮಂತೋರಿಂದ್ಲೆ ನಮ್ಮಂತೋರು ಅಷ್ಟಿಷ್ಟು ಬರೆಯೋಕೆ ಸಾಧ್ಯ ಆಗ್ತಿರೋದು.. ಸರಿ ಬಿಡಿ ಸಾರ್, ನಿಮಗೆ ನನ್ನ ಎಲ್ಲಾ ಪುಸ್ತಕದ ಪ್ರತಿಗಳನ್ನ ಕೊಟ್ಟುಬಿಡ್ತೀನಿ..’ ಎಂದು ಐದು ಪುಸ್ತಕಗಳ ಕಟ್ಟನ್ನು ಬ್ಯಾಗಿನಿಂದ ಹೊರಗೆ ತೆಗೆದೆ..

‘ಓಹ್ ಸೋ ಕೈಂಡ್ ಆಫ್ ಯೂ ಸಾರ್.. ದಯವಿಟ್ಟು ಎಲ್ಲ ಪುಸ್ತಕದ ಮೇಲೂ ನಿಮ್ಮ ಹಸ್ತಾಕ್ಷರ ಹಾಕಿ ಕೊಡಿ ಸಾರ್..’ ಎಂದರು. ನಾನು ಒಂದೊಂದಾಗಿ ಪುಸ್ತಕ ತೆಗೆದು ಸಂದೇಶ ಸಹಿತ ಹಸ್ತಾಕ್ಷರ ಹಾಕಲು ಆರಂಭಿಸುತ್ತ, ಆತನ ಹೆಸರು ಕೇಳಿದೆ..

‘ಸುರೇಶ್ ಟೋಪಿವಾಲ ಸಾರ್.. ಪುಸ್ತಕದಲ್ಲಿ ಸುರೇಶ್ ಅಂಥ ಬರೀರಿ ಸಾರ್, ಸಾಕು..’ ಎಂದ..

ನಾನು ಹಸ್ತಾಕ್ಷರ ಹಾಕುತ್ತಲೆ, ‘ಏನ್ರಿ ವಿಚಿತ್ರವಾಗಿದೆ ಹೆಸರು – ‘ಅಂತ’ ಪಿಕ್ಚರಿಂದ ತೊಗೊಂಡ ಹಾಕಿದೆ.. ಫ್ಯಾಮಿಲಿ ನೇಮಾ?’ ಎಂದು ಕೇಳಿದೆ..

ಅವನು ಸಣ್ಣದಾಗಿ ನಗುತ್ತ, ‘ಫ್ಯಾಮಿಲಿ ನೇಮ್ ಅಂತೇನು ಇಲ್ಲ ಸಾರ್.. ನಮ್ಮಪ್ಪ ಟೈಗರ್ ಪ್ರಭಾಕರ್ ಫ್ಯಾನು.. ಅವರ ಮೇಲಿನ ಪ್ರೀತಿಗೆ ‘ಅಂತ’ ಚಿತ್ರದ ಆ ಅಡ್ಡ ಹೆಸರಿಟ್ರು ಅಷ್ಟೆ..’ ಎಂದವನೆ, ನಾನಿತ್ತ ಅಷ್ಟೂ ಪುಸ್ತಕಗಳನ್ನು ಒಂದೊಂದಾಗಿ ನೋಡುತ್ತ, ತಿರುವಿ ಹಾಕತೊಡಗಿದ.. ನಾನು ಕ್ಯಾಶ್ ಕೊಡಿ ಅನ್ನುವುದೊ? ಅಥವಾ ಆನ್ಲೈನ್ ಟ್ರಾನ್ಸಾಕ್ಷನ್ನಾ? ಎನ್ನುವ ಗೊಂದಲದಲ್ಲೆ ಹೇಳಿದೆ.. ‘ನೇರ ಪರ್ಚೇಸ್ ಮಾಡಿದ್ರೆ ೨೫% ಡಿಸ್ಕೌಂಟ್.. ಬುಕ್ ಶಾಪಿಗಿಂತ ಸ್ವಲ್ಪ ಚೀಪ್ ಇರಬೇಕು ನೋಡಿ..’ ಎಂದು ಮೆದುವಾಗಿ ನಕ್ಕೆ – ಪರೋಕ್ಷವಾಗಿ ಬೆಲೆಯನ್ನು ಸೂಚಿಸುತ್ತ..

ಅಷ್ಟರಲ್ಲಿ ಯಾರೊ ‘ಸುರೇಶ್’ ಎಂದು ಕೂಗಿದ್ದು ಕೇಳಿಸಿತು.. ಅಲ್ಲೆ ಮೂಲೆಯೊಂದರಿಂದ ಎದ್ದು ಬಂದ ವ್ಯಕ್ತಿಯೊಬ್ಬ, ನಮ್ಮ ಟೇಬಲ್ಲಿನತ್ತ ಬಂದು ‘ಏನ್ರಿ ಟೋಪಿವಾಲರೆ, ಇಲ್ಲಿ?’ ಎಂದರು ಅಚ್ಚರಿಯ ಮುಖಭಾವದಲ್ಲಿ..

‘ಓಹೋ.. ನಾಮಧಾರಿ ಸಾಹೇಬ್ರು.. ಇದೇನು ಸಾರ್ ನೀವು ಇಲ್ಲಿ ..? ನಾನು ಬುಕ್ ರಿಲೀಸ್ ಫಂಕ್ಷನ್ನಿಗೆ ಬಂದಿದ್ದೆ…’ ಎಂದವರೆ ನನ್ನತ್ತ ತಿರುಗಿ, ‘ನನ್ನ ಚಡ್ಡಿ ದೋಸ್ತು ಸಾರ್.. ನಮ್ಮ ಪಕ್ಕದ ಮನೆಯೋರೆ..’ ಎಂದು ಎಕ್ಸ್ಪ್ರೆಸ್ ಪರಿಚಯ ಮಾಡಿಸಿದರು.

‘ನನಗೂ ಇಲ್ಲೆ ಕೆಲಸವಿತ್ತು ಬಂದಿದ್ದೆ.. ಅಂದ ಹಾಗೆ ಮನೆಗೆ ಹೊರಟಿದ್ದೇನೆ.. ತಕ್ಷಣವೆ ಹೊರಡೋದಾದ್ರೆ ಡ್ರಾಪ್ ಕೊಡ್ತೀನಿ ಬನ್ನಿ.. ಆದರೆ ತಡ ಮಾಡುವಂತಿಲ್ಲ.. ನನಗೊಂದು ಕಸ್ಟಮರ್ ಮೀಟಿಂಗಿದೆ..’ ಎಂದ ಆ ಆಸಾಮಿ.

ಆತ ಹಾಗೆಂದದ್ದೆ ತಡ, ಶ್ರೀ ಮಾನ್ ಟೋಪಿವಾಲರು ತಡಬಡಾಯಿಸುತ್ತ ಮೇಲೆದ್ದು, ‘ಸಾರ್ ನಾನೀಗ ಜೊತೆಯಲ್ಲಿ ಹೋದರೆ, ಈ ಟ್ರಾಫಿಕ್ಕಲ್ಲು ಅರ್ಧ ಟೈಮಲ್ಲಿ ಮನೆ ಸೇರ್ಕೋತೀನಿ.. ಮತ್ತೊಂದು ಸಾರಿ ಸಿಕ್ಕಿದಾಗ ಮಾತಾಡೋಣ.. ಭರ್ಜರಿ ತಿಂಡಿಗೆ, ಈ ಆಟೋಗ್ರಾಫ್ಡ್ ಪುಸ್ತಕಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್ ಸಾರ್.. ತೊಗೊಳ್ಳಿ, ಇದೇ ನನ್ನ ಕಾರ್ಡ್.. ವಿ ವಿಲ್ ಕ್ಯಾಚ್ ಅಪ್ ’ ಎಂದು ಕೈಗೊಂದು ವಿಸಿಟಿಂಗ್ ಕಾರ್ಡ್ ಕೊಟ್ಟವರೆ ಅಷ್ಟು ಬುಕ್ ತೆಗೆದುಕೊಂಡು, ನಾನು ‘ಸಾರ್ ಸಾರ್ .. ಬುಕ್ಕುಂದು ಸೆಟ್ಲು ಮಾಡ್ಬಿಟ್ಟಿದ್ರೆ ಚೆನ್ನಾಗಿರ್ತಿತ್ತು..’ ಎನ್ನುತ್ತಿದ್ದುದ್ದನ್ನು ಗಮನಿಸದೆ ಆ ಆಸಾಮಿಯ ಜೊತೆ ದೌಡಾಯಿಸಿಕೊಂಡು ಹೊರಟೇ ಹೋದರು..!

ನಾನೂ ಸಹ ಅವಸರದಲ್ಲಿರುವನೆಂದು ಸಮಾಧಾನಿಸಿಕೊಳ್ಳುತ್ತ.. ಪೋನಿನಲ್ಲಿ ಸೆಟಲ್ ಮಾಡಿದರಾಯ್ತು ಎಂದುಕೊಂಡು ಕಾರ್ಡ್ ಜೇಬಿಗಿಳಿಸಿದೆ – ಒಬ್ಬರಿಗಾದರು ಒಂದೇ ಏಟಿಗೆ ಐದು ಪುಸ್ತಕ ಮಾರಿದೆನಲ್ಲ ಎನ್ನುವ ಸಂತೃಪ್ತ ಭಾವದಲ್ಲಿ..

ಮನೆಯಲ್ಲಿ ಬಿಡುವಾದಾಗ ಆ ಕಾರ್ಡ್ ತೆಗೆದು ಅದರಲ್ಲಿದ್ದ ನಂಬರಿಗೆ ಪೋನ್ ಮಾಡಿದೆ – ಫೈನಾನ್ಸ್ ಸೆಟಲ್ ಮಾಡಿಬಿಡುವ ಎಂದುಕೊಂಡು.

ಆ ಕಡೆಯಿಂದ ಮಾತಾಡಿದವರು ಯಾರೊ ‘ಹಲೋ, ಕಮಲೇಶ್ ಹಿಯರ್..’ ಎಂದರು.

‘ಸಾರಿ, ರಾಂಗ್ ನಂಬರ್’ ಎಂದು ಹೇಳಿ ಕಾಲ್ ಕಟ್ ಮಾಡಿ, ಮತ್ತೆ ಕಾರ್ಡಿನತ್ತ ನೋಡಿದೆ, ನಂಬರ್ ಏನಾದರು ತಪ್ಪಾಗಿ ಓದಿಕೊಂಡೆನಾ? ಎನ್ನುವ ಅನುಮಾನದಲ್ಲಿ.. ನಂಬರ್ ಸರಿಯಾಗಿಯೆ ಇತ್ತು.. ಜೊತೆಗೆ ಅದರ ಮೇಲಿರುವ ಹೆಸರು ಸರಿಯಾಗಿಯೆ ಇತ್ತು – ‘ಕಮಲೇಶ್’ ಎಂದು.. ಆದರೆ ಅಲ್ಲೆಲ್ಲು ಆ ‘ಟೋಪಿವಾಲನ’ ಹೆಸರೆ ಇರಲಿಲ್ಲ..!

ನಾನೀಗ, ಅದೇನು ಟೋಪಿವಾಲ ಹಾಕಿ ಹೋದ ಟೋಪಿಯೊ ಅಥವ ಅವಸರದಲ್ಲಿ ತಪ್ಪು ಕಾರ್ಡ್ ಕೊಟ್ಟು ಹೋದನೊ ಗೊತ್ತಾಗದ ಸಂದಿಗ್ಧದಲ್ಲಿ ಬಿದ್ದೆ – ಅವನನ್ನು ಬೈಯುವುದೊ ಬಿಡುವುದೊ ಗೊತ್ತಾಗದೆ.. ಆವತ್ತು ಬರಿ ರೆಸ್ಟೋರೆಂಟಿನ ಬಿಲ್ ಮಾತ್ರವಲ್ಲ – ಐದು ಪುಸ್ತಕಗಳನ್ನು ಸಹ ಕಾಂಪ್ಲಿಮೆಟರಿಯಾಗಿ ಹೊತ್ತುಕೊಂಡು ಹೋಗಿಬಿಟ್ಟಿದ್ದ ಟೋಪಿವಾಲ..! ಹೊಲ್ಸೇಲಾಗಿ ಟೋಪಿ ಹಾಕಿಸಿಕೊಂಡನೇನೊ ಎನ್ನುವ ದುಃಖ, ದುಗುಡದಲ್ಲಿ ದುಮುಗುಡುತ್ತಲೆ ರೂಮಿಗೆ ಹೋಗಿ ಮುಸುಕೆಳೆದು ಮಲಗಿದೆ..

ಸ್ವಲ್ಪ ಹೊತ್ತಿಗೆ ಯಾಕೊ ಚಳಿ ಜಾಸ್ತಿಯಾದಂತೆ ಅನಿಸಿ ಮುಸುಕೆಳೆದು ನೋಡಿದರೆ, ಮೇಲೆ ಫ್ಯಾನ್ ತಿರುಗುತ್ತಿತ್ತು.. ನನ್ನ ಶ್ರೀಮತಿ ಬಂದು ಟೀವಿ ಆನ್ ಮಾಡುತ್ತಿದ್ದಳು.. ಅವಳಿಗೆ ಮೈನೆಸ್ ಡಿಗ್ರಿ ಚಳಿಯಲ್ಲು ಫ್ಯಾನ್ ಇರಬೇಕು.. ನನಗೆ ಮರಳುಗಾಡಿನ ಸೆಕೆಯಲ್ಲು ರಗ್ಗಿನ ಹೊದಿಕೆ ಇರಬೇಕು.. ಆದರೆ ಇವತ್ತು ಮಾತ್ರ ಯಾಕೊ ‘ಫ್ಯಾನಿನ’ ವಿಷಯದಲ್ಲಿ ಎಂದಿನಂತೆ ಜಗಳವಾಡಲು ಮನಸಾಗಲಿಲ್ಲ – ಆ ಟೋಪಿವಾಲ ‘ಫ್ಯಾನಿ’ನಿಂದ ತಿಂದ ಏಟಿನ ತೀವ್ರತೆಗೊ ಏನೊ..?

ಜತೆಗೆ ನಡೆದದ್ದನ್ನ ಅವಳಿಗೆ ಹೇಳುವಂತೆಯು ಇರಲಿಲ್ಲ.. ಹೇಳಿದರೆ ಮತ್ತಷ್ಟು ಸಹಸ್ರ ನಾಮಾರ್ಚನೆ , ಮಂಗಳಾರತಿಯ ಭಾಗ್ಯ ಕರುಣಿಸುತ್ತಾಳೆ.. ಅವಳು ಕೂತಲ್ಲಿಂದಲೆ ಚಾನೆಲ್ ಬದಲಿಸುತ್ತ ಯಾವುದೊ ಸಿನಿಮಾ ಬರುತ್ತಿರುವ ಚಾನೆಲ್ ಹಾಕಿದಳು.. ತಟ್ಟನೆ ಅಲ್ಲಿಂದ ‘ಟೋಪಿವಾಲ..’ ಅನ್ನುವ ಹೆಸರು ಕೇಳಿ ಬೆಚ್ಚಿ ಬಿದ್ದು ಮುಸುಕು ತೆರೆದು ನೋಡಿದರೆ.. ಅಲ್ಲೂ ‘ಅಂತ’ ಸಿನಿಮಾವೇ ಬರುತ್ತಿರಬೇಕೆ?

ಮತ್ತೆ ಮುಖ ಪೂರ್ತಿ ಮರೆಯಾಗುವಂತೆ ಮುಸುಕು ಹಾಕಿಕೊಂಡು ಮನಸಲ್ಲೆ ಲಲಿತಾ ಸಹಸ್ರ ನಾಮ ಜಪಿಸಲು ಯತ್ನಿಸುತ್ತ ಆ ಟೋಪಿವಾಲನಿಗೆ ಹಿಡಿಶಾಪ ಹಾಕತೊಡಗಿದೆ, ಫ್ಯಾನಿನ ಸದ್ದು, ಟೀವಿಯ ಸದ್ದು – ಎರಡೂ ಕಿವಿಗೆ ಬೀಳದ ಹಾಗೆ!

ಹಾಗೆಯೆ, ಸದ್ಯ ಕರೆದುಕೊಂಡು ಹೋದ ಆ ಎರಡನೆ ವ್ಯಕ್ತಿಗೆ ಇನ್ನೊಂದು ಸೆಟ್ ಕೊಟ್ಟು ಡಬಲ್ ಇಂಗು ತಿಂದ ಮಂಗನಂತಾಗಲಿಲ್ಲವಲ್ಲ – ಎಂದು ನನಗೆ ನಾನೆ ಸಮಾಧಾನಿಸಿಕೊಳ್ಳತೊಡಗಿದೆ..

– ನಾಗೇಶ ಮೈಸೂರು
೧೧.೦೯.೨೦೨೧

02060.ನಾಕುತಂತಿಯೊಂದು ಸಾಲು (ಸಾಲು ಸಾಲಿನ ವಿವರಣೆ – ನನಗೆ ತೋಚಿದಂತೆ)- ಕೊಂಡಿ


ನಾಕುತಂತಿಯೊಂದು ಸಾಲು (ಸಾಲು ಸಾಲಿನ ವಿವರಣೆ – ನನಗೆ ತೋಚಿದಂತೆ) – ಕೊಂಡಿ

Introduction:https://nageshamysore.wordpress.com/2017/06/08/02060-%e0%b2%a8%e0%b2%be%e0%b2%95%e0%b3%81-%e0%b2%a4%e0%b2%82%e0%b2%a4%e0%b2%bf%e0%b2%af-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%9f%e0%b2%bf%e0%b2%aa%e0%b3%8d%e0%b2%aa%e0%b2%a3%e0%b2%bf/


Line 1https://nageshamysore.wordpress.com/2017/05/01/02029-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81/


Line 2https://nageshamysore.wordpress.com/2017/05/02/02030-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-2/


Line 3.1https://nageshamysore.wordpress.com/2017/05/04/02031-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a9-%e0%b3%a7/

Line3.2:https://nageshamysore.wordpress.com/2017/05/04/02032-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a9-%e0%b3%a8/


Line 04: https://nageshamysore.wordpress.com/2017/05/07/02034-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%ab/


Line 05:https://nageshamysore.wordpress.com/2017/05/07/02034-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%ab/


Line 06:https://nageshamysore.wordpress.com/2017/05/13/02039-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%ab/


Line 07: https://nageshamysore.wordpress.com/2017/05/17/02042-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%ad/


Line 08:https://nageshamysore.wordpress.com/2017/05/19/02043-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%ae/


Line 09: https://nageshamysore.wordpress.com/2017/05/24/02046-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%af/


Line 10:https://nageshamysore.wordpress.com/2017/05/25/02047-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%a6/


Line 11: https://nageshamysore.wordpress.com/2017/05/27/02048-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%a7/


Line 12: https://nageshamysore.wordpress.com/2017/05/28/02050-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%a8-%e0%b2%ad%e0%b2%be/


Line 13:https://nageshamysore.wordpress.com/2017/05/30/02053-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%a9/


line 14:https://nageshamysore.wordpress.com/2017/06/03/02054-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%aa/


Line 15:https://nageshamysore.wordpress.com/2017/06/03/02056-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%ab/


Line 16:https://nageshamysore.wordpress.com/2017/06/04/02057-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%ac/


Line 17: https://nageshamysore.wordpress.com/2017/06/07/02059-%e0%b2%a8%e0%b2%be%e0%b2%95%e0%b3%81%e0%b2%a4%e0%b2%82%e0%b2%a4%e0%b2%bf%e0%b2%af%e0%b3%8a%e0%b2%82%e0%b2%a6%e0%b3%81-%e0%b2%b8%e0%b2%be%e0%b2%b2%e0%b3%81-%e0%b3%a7%e0%b3%ad/

1769. ಯಾರೀ ನಾರಿ..!


ಯಾರೀ ನಾರಿ..!

ದಾಟಬಲ್ಲೆಯ ಹೆಣ್ಣ ಮನವನು ?
ತಂತಿ ಮೇಲೆ ನಡೆದಂತೆ
ಮೀಟಬಲ್ಲೆಯ ಹೊನ್ನ ತನುವನು ?
ತಂತಿ ಮಾಲೆ ಮಿಡಿದಂತೆ ||

ದೇವ ಲೋಕದ ಯಕ್ಷ ಕಿನ್ನರಿ
ಬಂದೆ ವಿಹರಿಸೆ ಭುವನದೆ
ಗಾನ ನಾಟ್ಯದ ಮುಕ್ತ ವಲ್ಲರಿ
ಚಂದ ಸುಮಧುರ ದನಿಯಿದೆ
ಹಿಂದೆ ಬರುವೆಯ ಪ್ರೇಮ ಕಾವ್ಯದ
ನಾವೆಯೇರುತ ನಾವಾಗುವ
ಒಂದೆ ತನುವಿನ ಜೀವ ಜಾಡ್ಯದ
ನುಲಿತದಪ್ಪುಗೆ ಹಾವಾಗುವ || ದಾಟ ||

ಗಗನ ಬಯಲಲಿ ತೇಲಿ ನಡೆಸುವೆ
ಹಾರೆ ಜತೆಯಲಿ ಸಡಗರ
ಮೋಡ ಕಡಲದು ಕಾಲ ತಣಿಸುವೆ
ಧಾರೆ ಸವಿಯಲು ಸಹಚರ
ವನದ ಕುಸುಮದ ನಡುವ ಮಾರ್ಮಿಕ
ಮಾಲಿಯಾಗಲು ಸಮಾಗಮಾ
ಇಹದ ಲೌಕಿಕ ಪರದ ದೈವೀಕ
ಜೋಡಿಯಾಗಲು ಘಮಾಘಮಾ || ದಾಟ ||

ನಾಗೇಶ ಮೈಸೂರು
೧೯.೦೭.೨೦೨೦

1768. ಅವಸರ


ಅವಸರ

ತಾಳೆ ನೋಡುವ ಕೊಂಚ ತಾಳೆ ನೋಡುವ
ಸರಿಯೊ ಬೆಸವೊ, ಗಣಿತ ಗುಣಿತ, ಬಾರೆ ನೋಡುವ
ಬಾಳ ಹಾಳೆ ನೋಡುವ ||

ತಾಳೊ ನೋಡುವ ಕೊಂಚ ತಾಳೊ ನೋಡುವ
ತಾಳಿದವನು ಬಾಳಿಯಾನು, ನಾಳೆ ನೋಡುವ
ಮೊದಲು ಕಡತ ಬರೆಯುವ ||

ತಾಳೆ ನೋಡಲು ದಿನವು ಬಾಳೆ ಸುಗಮವು
ತಾಳ ತಪ್ಪಿಲು, ಗೋಳು ಅಪ್ಪಲು, ಕಾಣೆ ಮೊದಲವು
ಮದ್ದ ಹಚ್ಚೆ ಸಿಗಲವು ||

ತಾಳೆ ನೋಡಲು ನಿಜದೆ ಇಹುದೊ ಸಮಯವು
ಏರು ಪೇರು, ದಿನದ ತೇರು, ಬಂದೆ ಬರಲವು
ಇಡುವ ಮಾಸದ ಗಡುವು ||

ತಾಳೆ ಆಗದೆ ತಾಳೆ ಬದುಕ ಕ್ಷಣಿಕತೆ
ತಾಳ ಮೇಳ, ಜಗದ ಜಾಲ, ಬಿಡಲು ಅದೆ ಕಥೆ
ನಾವೆ ತಪ್ಪುವ ಮಾತೆ ||

ತಾಳ ತಪ್ಪಿದೆ ತಾಳೆ ದಿಕ್ಕ ಮರೆಸಿದೆ
ತಾಳೆಯೆಂದು, ಆಗದೆಂಬ, ಸತ್ಯ ಮರೆತಿದೆ
ತಾಳೆಯಾಚೆ ಬದುಕಿದೆ ||

ತಾಳೆ ಹಿಡಿದೆವು ನಾವು ತಾಳ ಜಡಿದೆವು
ತಾಳೆ ಮಾಡೆ, ತಾಳೆ ನೋಡೆ, ಓಟಕಿಳಿದೆವು
ಕುರಿಯ ಮಂದೆ ಆದೆವು ! ||

ನಾಗೇಶ ಮೈಸೂರು
೧೯.೦೭.೨೦೨೦

(Picture source: internet / social media)

1767. ಸ್ವಚ್ಛಂದ ಮುಂಗುರುಳು !


1767. ಸ್ವಚ್ಛಂದ ಮುಂಗುರುಳು !


ಕಿಕ್ಕಿರಿದು ನೆರೆದಾವೆ, ನೋಡಲವಳಂದಾವ
ಮುಕ್ಕರಿದು ಬಂದಾವೆ, ಕಾಣಲವಳ ಚಂದವ!
ಏನ ಹೇಳಲೆ ಕಥೆಯ, ಮುಂಗುರುಳ ವ್ಯಥೆಯನು
ಚಡಪಡಿಸಿ ನರಳಾವೆ, ಮುಟ್ಟಿ ಮುಟ್ಟಿ ಕದಪನು ||

ಕಟ್ಟಿ ಹಾಕೆ ಹವಣಿಕೆ, ಹಾಕಿರೆ ಸತತ ಮುತ್ತಿಗೆ
ಎಡದಿಂದ ಬಲದಿಂದ, ಹಣೆ ತುಟಿ ಗಲ್ಲ ಕುತ್ತಿಗೆ
ಬಿಡದೆ ನಕ್ಷತ್ರ ನಯನ, ಬಿಲ್ಲಿನ ಹುಬ್ಬನು ಸವರೆ
ಕಚಗುಳಿಯಲಿ ಅಳಿಸುತೆ, ನಾಸಿಕವೇರಿದ ಬೆವರೆ ||

ತಂಗಾಳಿ ತೂಗಿದವೆ, ಅಂಬೆಗಾಲಿಕ್ಕಿದವೆ
ತಳ್ಳುಗಾಳಿ ನೆಪದಲಿ, ಮೊಗವೆಲ್ಲ ಸವರಿದವೆ
ಮೆಲ್ಲುಸಿರ ಮೆಲ್ಲಿದವೆ, ಬಿಡದೆ ಮುಡಿದ ಮಲ್ಲೆಗು
ಸ್ಪರ್ಶದೋಕುಳಿಯಲಿ, ಮೀಯಿಸಲು ನಾಚಿ ನಗು ! ||

ಸಾಕಾಯಿತವಳ ಮುಂಗೈ, ಹಿಂತಳ್ಳಿ ಒಂದೆ ಸಮನೆ
ಬಿಡದ ತುಂಟಾಟ ಮುನಿದು, ಶಪಿಸಿರೆ ಮುಂಗುರುಳನೆ
ನುಡಿ ಕೇಳದ ಫಟಿಂಗರ, ಕುಟಿಲತೆಗೆ ಬೇಸತ್ತಳು
ಜಂಬದ ಚೀಲದೊಳಿಂದ, ಪಿನ್ನೊಂದರಲಿ ಬಿಗಿದಳು ! ||

ಎಲ್ಲಿದ್ದನೊ ಸಂಗಾತಿ? ತಟ್ಟನೋಡಿ ಬಂದನೆ
ಮಾತಿಗು ಮೊದಲೆ ತಟ್ಟನೆ, ಹೇರುಪಿನ್ನ ಕಿತ್ತನೆ
ಮತ್ತೆ ಕೆದರಿತು ಜೋಳಿಗೆ, ಹಾರುತೆಲ್ಲೆಡೆ ಚಳಕ
’ಕಟ್ಟಿ ಹಾಕದಿರೆ ನಲ್ಲೆ, ಹಾರಾಟವೆನಗೆ ಪುಳಕ !’ ||

  • ನಾಗೇಶ ಮೈಸೂರು
    ೨೭.೦೩.೨೦೨೦

(Picture source: internet / social media)

1766. ವೀಣೆ ಹಿಡಿದ ವೀಣೆ ನೀನು


1766. ವೀಣೆ ಹಿಡಿದ ವೀಣೆ ನೀನು

ಚೆಲುವೆ ನೀನು ವೀಣೆ ನುಡಿಸೆ, ಮನದಲೇಕೊ ವೇದನೆ
ಮಿಡಿದ ಬೆರಳು ನಾದ ಉಣಿಸೆ, ತುಂಬಿತೇನೊ ಯಾತನೆ
ಗುನುಗುತಿರಲು ಅಧರ ಹೊನಲು, ಚಡಪಡಿಸಿತೆ ಭಾವನೆ
ಮಾತೆ ಬರದೆ ಬರಿಯ ತೊದಲು, ಉಣಬಡಿಸಿತೆ ನೋವನೆ ||

ಜೇಂಕಾರವೊ ಹೂಂಕಾರವೊ, ಗೊಂದಲದಲಿ ಮನವಿರೆ
ಸಿಂಗಾರವೊ ಬಂಗಾರವೊ, ಎವೆಯಿಕ್ಕದೆ ನೋಡಿರೆ
ಏನೊ ಕಳೆದುಕೊಂಡ ಹಾಗೆ, ಒಳಗೇತಕೊ ಕಾಡಿದೆ
ಬಿಟ್ಟು ಹೋಗಲೆಂತು ಬೆರಗೆ, ನಡುಗುತಲಿದೆ ನನ್ನೆದೆ ||

ಅಂದವೆನಲೆ ? ಚಂದವೆನಲೆ ? ದೇವಲೋಕ ಬುವಿಯಲಿ
ಗಾನ ಸುಧೆಯ ಮಧುರ ಶಾಲೆ, ಮಧುವಿನ ಸಿಹಿ ಅಮಲಲಿ
ಬೇಡುತಿಹುದು ಮನವದೇನೊ, ಹೇಳಲಾಗದ ಪದದಲಿ
ಕಾಡುತಿಹುದು ಸೊಗವದೇನೊ, ಮರಳಿ ಹೇಗೆ ಅರುಹಲಿ ? ||

ವೀಣೆ ಹಿಡಿದ ವೀಣೆ ನೀನು, ವೈಣಿಕ ಯಾರೊ ಕಾಣೆನೆ
ನುಡಿಸ ಬರದು ನುಡಿಪೆ ನಾನು, ಕಲಿಸೆ ನೀನೆ ಕಲಿವೆನೆ
ಸರಿಗಮವಿಹ ಸುಪ್ತ ಮನವೆ, ತನುವೆ ತಂತಿ ನಿನ್ನೊಳು
ಮುಟ್ಟಿ ಮಿಡಿವೆ ನಿತ್ಯ ಬರುವೆ, ಮಿಂದು ದಣಿವೆ ನನ್ನೊಳು ||

ಯಾವ ಕವಿಯ ಕವಿತೆ ನೀನು ? ಯಾರು ಕಡೆದ ಶಿಲ್ಪವೆ ?
ಯಾವ ದೇವ ಕುಲದ ಬಾನು ? ಯಾರು ಬೆಸೆದ ಜೀವವೆ ?
ಬೆರೆತು ಸಕಲ ಒಂದೆ ಎಡೆಗೆ, ಬಂದಿತೆಂತೊ ಕಾಣೆನೆ
ಹೇಗಾದರು ಬರಲಿ ಸೊಬಗೆ, ಮೆಲುಕು ಮಧುರ ಶೋಧನೆ ||

  • ನಾಗೇಶ ಮೈಸೂರು
    ೨೮.೦೩.೨೦೨೦

(Picture source: internet / social media)

1765. ಗಜಲ್ (ನಿನ್ನ ಮಡಿಲಲ್ಲಿ)


1765. ಗಜಲ್


(ನಿನ್ನ ಮಡಿಲಲ್ಲಿ)

ಹಾತೊರೆದಿಹೆ ಮಲಗೆ, ನಿನ್ನ ಮಡಿಲಲ್ಲಿ
ಮಗುವಂತಾಗೆ ಸೊಬಗೆ, ನಿನ್ನ ಮಡಿಲಲ್ಲಿ ||

ಮಡಿಲಲೆಣಿಸುತ ತಾರೆ, ಬಾನ ಸೇರೆ
ಮನದಣಿಯದ ಬೆರಗೆ, ನಿನ್ನ ಮಡಿಲಲ್ಲಿ ||

ತುದಿಬೆರಳಲಿ ಸೆರಗ, ಸುರುಳಿ ಸುತ್ತುತ್ತ
ಮೈಮರೆಯಲಿದೆ ನನಗೆ, ನಿನ್ನ ಮಡಿಲಲ್ಲಿ ||

ಜನ್ಮಾಂತರದ ನೋವು, ಮಾಗಿ ಗಾಯ
ತೊಲಗಲೆಲ್ಲಿದೆ ಬೇಗೆ, ನಿನ್ನ ಮಡಿಲಲ್ಲಿ ||

ವ್ರಣವಾಗಿ ರಣಹದ್ದು, ಕುಕ್ಕುವ ಹೊತ್ತಲು
ಸಂತೈಸುತಿರೆ ಕಿರುನಗೆ, ನಿನ್ನ ಮಡಿಲಲ್ಲಿ ||

ನೆಮ್ಮದಿಯ ನಿರಾಳತೆ, ಎಲ್ಲ ಕನಸಂತೆ
ಕೊರಗ ಮಂಜೆಲ್ಲ ಕರಗೆ, ನಿನ್ನ ಮಡಿಲಲ್ಲಿ ||

ಬಿಟ್ಟೆಲ್ಲ ಲೌಕಿಕ ಜಗವ, ನೋಡೆ ಮೊಗವ
ತುಂಬಿತೆ ಕಣ್ಣ ಕಾಡಿಗೆ, ನಿನ್ನ ಮಡಿಲಲ್ಲಿ ||

ಹಸ್ತದೆ ಬೆರಳು ಬೆಸೆದು, ಸ್ಪರ್ಶ ಮಂತ್ರದಲೆ
ಕಟ್ಟುತಿರುವೆ ಮಾಳಿಗೆ, ನಿನ್ನ ಮಡಿಲಲ್ಲಿ ||

ಗುಬ್ಬಿಗದೇನೊ ಹುಚ್ಚಿದೆ, ನಿನ್ನಲಿ ಮದ್ದಿದೆ
ಕಂಡ ಬದುಕ ಜೋಳಿಗೆ, ನಿನ್ನ ಮಡಿಲಲ್ಲಿ ||

  • ನಾಗೇಶ ಮೈಸೂರು
    ೧೧.೦೨.೨೦೨೦

(picture source: internet / social media)

1764. ನೇಗಿಲ ಯೋಗಿ


1764. ನೇಗಿಲ ಯೋಗಿ


ನಸುಕಲೆದ್ದ ಅರುಣ ಶುದ್ಧ
ಮುಸುಕ ತೆರೆದ ಬಾನಿನುದ್ಧ
ಹಾಡುತಿತ್ತೆ ಹಕ್ಕಿ ಬೀಗಿ
ನೇಗಿಲೆತ್ತಿ ನಡೆದ ಯೋಗಿ ||

ಭುಜದಲಿಟ್ಟ ಹೆಣದ ಭಾರ
ಮನದಲಿತ್ತೆ ಋಣದ ಖಾರ
ಸಾಲ ತೀರೆ ಸಾಲದಲ್ಲಿ
ಗಿರಿವಿಯಿಟ್ಟು ಖಾಲಿ ಕತ್ತಲಿ ||

ಬೆಳಗ ಸೊಬಗ ಬಂಧ ಮೋಹ
ತಣಿಯಲೆಂತು ಮನದ ದಾಹ ?
ಉತ್ತಿ ಬಿತ್ತಿ ಬೆಳೆಯೆ ಫಸಲು
ತೀರಿ ಬಿಟ್ಟರೆ ಸಾಕು ಅಸಲು ! ||

ಸಾಲ ಚಕ್ರ ನಿಲದ ಧೂರ್ತ
ಕಾಲ ಚಕ್ರ ಅಣಕ ಮೂರ್ತ
ಭೂತ ಇರಿತ ಭವಿತ ಮರೆತ
ವರ್ತಮಾನದೆ ಮತ್ತೆ ದುಡಿತ ||

ಮುಗಿಯದಲ್ಲ ನಿಲದ ಯಾನ
ಮುಗಿವುದೆಲ್ಲ ಒಳಗ ತ್ರಾಣ
ಚಿತೆಗು ಚಿಂತೆ ಸುಡಲು ಕಟ್ಟಿಗೆ
ಇರಲು ಸಾಕು ನಡೆವ ನೆಟ್ಟಗೆ ||

  • ನಾಗೇಶ ಮೈಸೂರು
    ೧೭.೦೨.೨೦೨೦

(Picture source: Internet / social media)

ನೇಗಿಲ ಯೋಗಿ

1763. ಗಜಲ್ (ಜುಟ್ಟಿಗೆ ಮಲ್ಲಿಗೆ ಹೂವು)


1763. ಗಜಲ್

______________________

(ಜುಟ್ಟಿಗೆ ಮಲ್ಲಿಗೆ ಹೂವು)

ಹೊಟ್ಟೆಗಿಲ್ಲ ಬಟ್ಟೆಗಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು

ಕಟ್ಟಲಿಲ್ಲ ಕೆಡವಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಮುಟ್ಟಲಿಲ್ಲ ತಟ್ಟಲಿಲ್ಲ, ಸಗಣಿ ಬೆರಣಿ ಗಂಜಲ

ಮಾತಂತು ಕಮ್ಮಿಯಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಮಾತಿಲ್ಲ ಕಥೆಯಿಲ್ಲ, ನಂಟ ಗಂಟು ಬೇಕೆಲ್ಲಾ

ಕಿಸೆಯಲ್ಲಿ ಕಾಸಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಒಡವೆ ವಸ್ತ್ರಗಳಿಲ್ಲ, ನಕಲಿ ನಗ ಹೇರೆಲ್ಲ

ಬಿನ್ನಾಣ ಮುಗಿದಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಗುಬ್ಬಿಯಿನ್ನು ಮರೆತಿಲ್ಲ, ಕಷ್ಟದ ದಿನದ ಬೇನೆ

ಒಣ ಪ್ರತಿಷ್ಠೆ ಗೆಲ್ಲೊಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

– ನಾಗೇಶ ಮೈಸೂರು

೧೫.೦೨.೨೦೨೦

(Picture source: internet / social media)

1762. ಗಜಲ್ (ಮುಕ್ತ ನಗುವಿನಂಚಲಿ ಏನೊ ಅಮಲಿದೆ)


1762. ಗಜಲ್

___________________________________

(ಮುಕ್ತ ನಗುವಿನಂಚಲಿ ಏನೊ ಅಮಲಿದೆ)

ನಶೆಯದೆಂತು ಬಣ್ಣಿಸಲಿ ನಗುವ ತುಟಿಯದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ

ಅಧರ ತುಂಬ ಹುಟ್ಟ ಕಟ್ಟಿ ಜೇನ ಸಿಹಿಯಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ಕಮಲ ದಳದ ಕಣ್ಣ ರೆಪ್ಪೆ ಕದವ ಮುಚ್ಚಿದೆ, ನಾಚಿದ ಶಿರ ಹೆಣ್ಣಾಗಿ ತನ್ನೆ ಹುಡುಕಿದೆ

ಕೆಂಪಲದ್ದಿ ಮತ್ತದೇನೊ ನವಿರ ಹಚ್ಚಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ನಾಸಿಕ ಸೊಗ ಕಣ್ಣ ಮಧ್ಯ ತನ್ನನ್ನೆ ನೆಟ್ಟಿದೆ, ಸುಮವಲ್ಲಿ ಅರಳಿ ತನ್ನ ಕಾಲನಿಟ್ಟಿದೆ

ಜಗಮಗಿಸಿದ ನತ್ತ ಸುತ್ತ ಏನೊ ಗುಟ್ಟಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ತುಂಬು ಕದಪ ರಂಗ ಬಳಪ ಮಾತಿನಲ್ಲಿದೆ, ತುಂಬುಗೆನ್ನೆ ಜೇನದೊನ್ನೆ ಕರೆಯನಿತ್ತಿದೆ

ಚಂದ ಮೊಗ ಅಂದ ಜಗದ ದಾರಿ ಕಾದಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ಗುಬ್ಬಿ ಹಿಡಿದು ನಿಂತ ಕುಂಚ ಕೈ ಮತ್ತೆ ನಡುಗಿದೆ, ಚಿತ್ತ ತುಂಬ ಚಿತ್ರವವಳು ಕೈಯೆ ಓಡದೆ

ಬರೆದ ಗೆರೆಯ ಕುಂದ ಕಂಡು ನಕ್ಕ ನೆನಪಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

– ನಾಗೇಶ ಮೈಸೂರು

೧೪.೦೨.೨೦೨೦

(Picture source: internet / social media)

1761. ಗಜಲ್ (ಚಂದದ ಅಪರಾಧವಿದು)


1761. ಗಜಲ್

_______________________

(ಚಂದದ ಅಪರಾಧವಿದು)

ಮುನಿಯದಿರು ತರಳೆ ಮುನಿಸಲ್ಲಿ, ಚಂದದ ಅಪರಾಧವಿದು

ದೂಷಿಸದಿರು ಮರುಳೆ ಮನಸಲ್ಲಿ, ಚಂದದ ಅಪರಾಧವಿದು ||

ನಿದಿರೆ ಹೊದ್ದು ಮಲಗಿದ ಹೊತ್ತದು, ಚಂದಿರ ಮೊಗವೇರೆ ಖುದ್ಧು

ತುಂಟ ಕಿರುನಗೆ ಕದ್ದೆ ಮೊಗದಲ್ಲಿ, ಚಂದದ ಅಪರಾಧವಿದು ||

ನಗೆಯ ಕದ್ದ ಅರಿವಿಲ್ಲ ನಿದಿರೆ, ಗಾಳಿಗೆ ಮುಂದಲೆ ಚದುರೆ

ಗುಟ್ಟೆ ಮೆಲ್ಲ ಸವರಿದೆ ಬೆರಳಲ್ಲಿ, ಚಂದದ ಅಪರಾಧವಿದು ||

ಫಳಫಳನೆ ಹೊಳೆವ ಬೊಟ್ಟಿನಲಿ, ಚಂದ್ರನೊಳ್ಚಂದ್ರನ ತರದಲ್ಲಿ

ಕಾಣೊ ಹಣೆ ಮುದ್ದಿಸಿದೆ ಕಣ್ಣಲ್ಲಿ, ಚಂದದ ಅಪರಾಧವಿದು ||

ಕಮಲದೊಳ ಕಮಲ ಕಣ್ಣೆರಡು, ಅಮಲದ ಹುಬ್ಬಿನ ಕಾಡು

ಚುಂಬಕತೆ ಬಿಲ್ಲ ಹೆದೆ ರೆಪ್ಪೆಯಲ್ಲಿ, ಚಂದದ ಅಪರಾಧವಿದು ||

ಸಂಪಿಗೆಯ ನಾಸಿಕ ಕೈಚಳಕ, ತಿದ್ದಿದ ದೇವನು ರಸಿಕ

ಪರವಶದೆ ಮುಟ್ಟಿದೆ ಕರದಲ್ಲಿ, ಚಂದದ ಅಪರಾಧವಿದು ||

ಗಲ್ಲದೊಳ ಬೆಲ್ಲದ ಕಥೆ ಕವನ, ಕೆನ್ನೆ ಗುಳಿ ಹಾವಳಿ ತಣ್ಣ

ವಿಧಿಯಿಲ್ಲ ಕದಿಯದೆ ಮನದಲ್ಲಿ, ಚಂದದ ಅಪರಾಧವಿದು ||

ಮೃದುವಧರ ಬೆಳಕಲ್ಲಿ ಮಿನುಗೆ, ಸ್ವಪ್ನಕೇನೊ ಮೆಲ್ಲ ಗುನುಗೆ

ತುಟಿ ಕದ್ದು ಚುಂಬಿಸಿದೆ ಕನಸಲ್ಲಿ, ಚಂದದ ಅಪರಾಧವಿದು ||

ಗುಬ್ಬಿಯಾದೆ ತಪ್ಪಿದೆ ಮೈಮರೆತು, ಕದ್ದು ಚುಂಬಿಸಬಾರದಿತ್ತು

ಅದ್ಭುತ ರೂಪು ಕದ್ದೆ ಅಮಲಲ್ಲಿ, ಚಂದದ ಅಪರಾಧವಿದು ||

– ನಾಗೇಶ ಮೈಸೂರು

೧೫.೦೨.೨೦೨೦

(picture source: internet / social media)

1760. ಅಯೋಮಯ ಭಾವ


1760. ಅಯೋಮಯ ಭಾವ

________________________

ಗಲಿಗಲಿರೆಂದೆದ್ದವಲ್ಲ ಬಚ್ಚಿತ್ತೆ ಎದೆಗೂಡಲ್ಲಿ ?

ಹಾರಿದವೆಲ್ಲ ಹಕ್ಕಿ ಗರಿ ಬಿಚ್ಚಿ ಚಿಂವ್ಗುಟ್ಟುತಲಿ

ಪುಳಕ ಎಬ್ಬಿಸಿ ಹೃದಯದ ಕದ ತೆರೆದು ಮುಕ್ತಾ

ಹಾರಿದವೆಲ್ಲಿಗೊ ಕಾಣೇ ಹಾರಿಸಿ ಜತೆ ಮನಸಾ ! ||

ಅವನೊ ಇವನೊ ಯಾವನೊ ಕಣ್ಣಲಿ ಆತಂಕ

ತಂದು ಸುರಿದರೊ ಶಿರಕೆ ಎಲೆ ಹೂಬನ ವಸಂತ

ನಾಚಿಕೆ ಲೇಪನ ಕೆನ್ನೆ ತುಟಿ ಗಲ್ಲ ಕೆಂಪಿನ ಕೆಸರು

ಕರಗಿತೆ ಹಣೆಯಲಿ ಕುಂಕುಮ ಅರಿಶಿನದ ಬೆವರು ||

ಏನೀ ಜಟಾಪಟಿ ಸೂತ್ರ ? ಬೆವರಾಗುತ ಪ್ರಾಯ

ತರುಣಿಯಲರುಣೋದಯ ಯೌವನ ಕೌಮಾರ್ಯ

ಜಲಜಲಿಸುತ ಜಲಧಾರೆ ತುಟ್ಟತುದಿಗೇರಿಸಿ ಸೌಖ್ಯ

ಯಾವ ಲೋಕದ ಯಾನಕೊ ಕೊಂಡೊಯ್ದ ಮಾಯ ||

ಫ್ರೌಡಿಮೆ ಗಾಢ ಜಂಜಡ ಕನ್ಯಾಸೆರೆ ಬಯಕೆ ನಿಗೂಢ

ಬೇಕು ಬೇಡದ ಯಾತನೆ ದೂಡಿದಷ್ಟು ಹತ್ತಿರ ಜಾಡ

ಜಾರುವ ಭೀತಿ ಜಾರದೆ ಜಾರುವ ಪ್ರಲೋಭನೆ ಸತ್ಯ

ನೆರಳಿನ ತಂಪಲಿ ನೀರಡಿಕೆ ದಣಿವಾರದ ದಾಹದ ನಿತ್ಯ ||

ಗೊಂದಲ ಗದ್ದಲದ ನಡುವೆ ಪುಕಪುಕನರಳಿದ ಕಾಲ

ಪ್ರಪುಲ್ಲತೆ ಮುದ ಸಂತಸ ಕಾತರ ಭೀತಿಯ ಸಮಯ

ಮಾಡಲೇನರಿಯದೆಯು ಮಾಡುತೇನನೊ ದಿಗ್ವಿಜಯ

ಭ್ರಮಿಸುತ ಸಾಗಿದೆ ಕಲ್ಪನೆಯಲಿ ಕಟ್ಟುತ ಹವಾ ಮಹಲ ! ||

ನಾ ಪ್ರಕೃತಿ ವಿಕೃತಿ ಸುಕೃತಿ ಪುರುಷದರ್ಧ ನಾರೀಕುಲ

ಹಾವಭಾವ ನವರಸ ಬಲ ಚಂಚಲ ಮನ ಕೋಲಾಹಲ

ಹೂ ಗಿಡ ಮರ ಬಳ್ಳಿ ಕಾಯಿ ಹಣ್ಣು ಹೆಣ್ಣ ಮನ ದ್ಯೂತ

ಜಯಿಸಲದುವೆ ಹೋರಾಟ ಸರಿದಾರಿ ಮೂರ್ತಾಮೂರ್ತ ||

– ನಾಗೇಶ ಮೈಸೂರು

೧೨.೦೨.೨೦೨೦

Picture Source: Internet / social media taken from a post of ನಾ ಮೌನಿ – thank you madam 🙏😊👍)

1759. ಗಜಲ್ (ಇರಿದಂತಿದೆ)


1759. ಗಜಲ್

________________

(ಇರಿದಂತಿದೆ)

ನೀನೊರಗಿರಲು ಅವನೆದೆಗೆ, ಇರಿದಂತಿದೆ ನನ್ನೆದೆಗೆ

ನೀನಪ್ಪಿರೆ ಯಾರನೊ ಹೀಗೆ, ಇರಿದಂತಿದೆ ನನ್ನೆದೆಗೆ ||

ನಿನ್ನ ಮೊಗದಲಿರೆ ಮಂದಹಾಸ, ಸಂತೃಪ್ತ ಭಾವ ಸಂತಸ

ನನ್ನ ನಗೆ ಮುಖವಾಡ ಸೋಗೆ, ಇರಿದಂತಿದೆ ನನ್ನೆದೆಗೆ ||

ನಿನ್ನ ಸೇರಲಾಗದ ನೋವು, ತಗ್ಗದ ಮನದ ಕಾವು

ಕಾಡುತಲಿದೆ ಮತ್ತದೆ ಕೊರಗು, ಇರಿದಂತಿದೆ ನನ್ನೆದೆಗೆ ||

ಹಂಚಿಕೆ ಸಂಚು ಹೊಂಚಾಟ ಸೋತು, ಆದೆ ಯಾರದೊ ಸ್ವತ್ತು

ಯಾರಿಗ್ಹೇಳಲಿ ಎದೆ ಬೇಗೆ ? ಇರಿದಂತಿದೆ ನನ್ನೆದೆಗೆ ||

ಗುಬ್ಬಿಯ ಎದೆಯಿನ್ನು ಖಾಲಿಯಿದೆ, ಯಾರು ಇಲ್ಲದೆ ಭಾಧೆ

ಇನ್ನು ಎಷ್ಟು ದಿನ ಇರಲಿ ಹೀಗೆ ? ಇರಿದಂತಿದೆ ನನ್ನೆದೆಗೆ ||

– ನಾಗೇಶ ಮೈಸೂರು

೧೩.೦೨.೨೦೨೦

1758. ಮುಟ್ಟ ಹೊತ್ತಲಿ..


1758. ಮುಟ್ಟ ಹೊತ್ತಲಿ..

________________________

ಮುಟ್ಟಿಗೆಲ್ಲಿದೆ ಸಹನೆ

ಜುಟ್ಟು ಹಿಡಿದು ತಾನೆ

ಆಡಿಸುವ ಹೊತ್ತಲಿ ಸಿಟ್ಟು

ಬಂದಾಗ ಮುನಿಯದಿರೊ ! ||

ಮುಟ್ಟಬಾರದು ಅನ್ನುವೆ

ಸೊಂಕಿನ ಭೀತಿ ನಿಜವೆ

ಉದರದೆ ಅದನೆ ಭರಿಸೊ

ಪಾಡೆನ್ನದು ಮರೆಯದಿರೊ ! ||

ಸ್ರಾವವೆಂದರೆ ಜೀವ

ಹಿಂಡುತಲಿಹ ನೋವ

ಭರಿಸುವ ಗಳಿಗೆ ವಿಹ್ವಲ

ಕೂಗಾಡೆ ತಾಳ್ಮೆ ತೋರೊ ! ||

ಮುಟ್ಟಿನಲ್ಲಿದೆ ಹುಟ್ಟು

ಜೀವತಳೆವ ಗುಟ್ಟು

ಮುಟ್ಟು ನಿಲದೆ ಫಲಿಸದು

ಮುಟ್ಟ ಸೂತಕ ಎನದಿರೊ ! ||

ಮುಟ್ಟಲಿದ್ದಾಗ ಮುಟ್ಟು

ಮನದೊಳಗೆ ಕಾಲಿಟ್ಟು

ಅರಿಯೆ ತಳಮಳ ಕಳವಳ

ಮುಟ್ಟ ಮೆಟ್ಟಿ ನಿಲಬಹುದೊ ! ||

– ನಾಗೇಶ ಮೈಸೂರು

೧೨.೦೨.೨೦೨೦

(Picture source: internet / social media)

1757. ಗಜಲ್ (ಆಯ್ತೇನು ಬೆಳಗಿನ ಕಾಫಿ ?)


1757. ಗಜಲ್

___________________________

(ಆಯ್ತೇನು ಬೆಳಗಿನ ಕಾಫಿ ?)

ತಮದೊಡಲ ಹರಿದಿದೆ ಬೆಳಗು, ಆಯ್ತೇನು ಬೆಳಗಿನ ಕಾಫಿ ?

ಚುಮುಚುಮು ನಸುಕಿನದೆ ಸೊಬಗು, ಆಯ್ತೇನು ಬೆಳಗಿನ ಕಾಫಿ ? ||

ಸುಪ್ರಭಾತಕೆದ್ದ ದ್ಯುತಿ ಕಿರಣ, ಬುವಿಯ ಒಲೆ ಹಚ್ಚೆ ಆಗಮನ

ನಡುಕ ನಿಲ್ಲೆ ಕರಗಲಿದೆ ಹಿಗ್ಗು, ಆಯ್ತೇನು ಬೆಳಗಿನ ಕಾಫಿ ? ||

ಸೌರ ಮಂಡಲದಲೆಲ್ಲೆಡೆ ಉದಯ, ಆದರೇನು ಇಲ್ಲದ ಸೌಭಾಗ್ಯ

ಭೂ ಜನ್ಮ ಮಾತ್ರಕಿದೆ ಬೆರಗು, ಆಯ್ತೇನು ಬೆಳಗಿನ ಕಾಫಿ ? ||

ಕೊಡವಲಿದೆ ಆಲಸಿ ಭಾವ, ಬಡಿದೆಬ್ಬಿಸೆ ಚೇತನ ಜೀವ

ಉಲ್ಲಾಸದ ದಿನಕಿದೆ ಪುನುಗು, ಆಯ್ತೇನು ಬೆಳಗಿನ ಕಾಫಿ ? ||

ಗುಬ್ಬಿ ಹಾಳು ಚಟದಾಸಾಮಿ, ಕುಡಿಯದಿರೆ ಬಂದಂತೆ ತ್ಸುನಾಮಿ

ನಿತ್ಯ ಸತ್ಯ ಹಾಡಲದೆ ಗುನುಗು, ಆಯ್ತೇನು ಬೆಳಗಿನ ಕಾಫಿ ? ||

– ನಾಗೇಶ ಮೈಸೂರು

೧೧.೦೨.೨೦೨೦

(Picture source: Internet / social media)

1756. ಗಜಲ್ (ತಾಳೊ ಕಳಚಿರುವೆ ಓಲೆ !)


(ಇದೇ ಚಿತ್ರಕ್ಕೆ ಗಜಲಿನ ರೂಪದಲ್ಲಿ ಶೃಂಗಾರ ಕವಿತೆ)

1756. ಗಜಲ್

_________________________

(ತಾಳೊ ಕಳಚಿರುವೆ ಓಲೆ !)

ಕೂಗದಿರೊ ಮತ್ತೆ ಮತ್ತೆ ಬಿಡದೆ, ತಾಳೊ ಕಳಚಿರುವೆ ಓಲೆ !

ಬಿಚ್ಚಲೆಂತೊ ಕೂಗೆ ಎಡಬಿಡದೆ, ತಾಳೊ ಕಳಚಿರುವೆ ಓಲೆ ! ||

ಗೊತ್ತೊ ಕಾದಿಹೆ ಹಾಸಿಗೆಯಲ್ಲಿ, ತಣ್ಣಗಾಗುತಿದೆ ಹಾಲಲ್ಲಿ

ಬರಲೆಂತೊ ಕಟ್ಟುಗಳ ಬಿಚ್ಚಿಡದೆ, ತಾಳೊ ಕಳಚಿರುವೆ ಓಲೆ ! ||

ಹೌದೊ ಕಾಯುವುದು ಕಠಿಣ ಕಲೆ, ಕುಣಿಸುತಿದೆ ಕಾಮನ ಬಲೆ

ಸುತ್ತಿದ ಒಡವೆಯಿದೆ ವಸ್ತ್ರವಿದೆ, ತಾಳೊ ಕಳಚಿರುವೆ ಓಲೆ ! ||

ಕೊರಳ ಸರ -ಕೈ ಬಳೆ -ನಾಗರ, ರೇಶಿಮೆ ಸೀರೆಯ ಭಾರ

ಬಿಚ್ಚಿಡಲಿದೆ ಕಾಯೊ ಸಂಯಮದೆ, ತಾಳೊ ಕಳಚಿರುವೆ ಓಲೆ ! ||

ಗುಬ್ಬಿಯಂತೆ ಹಗುರಾಗಿ ಬರುವೆ, ಕೆಂಪಿನ ತುಟಿ ನಗೆಯ ತರುವೆ

ಹುಣ್ಣಿಮೆ ಬೆಳದಿಂಗಳು ಕಾದಿದೆ, ತಾಳೊ ಕಳಚಿರುವೆ ಓಲೆ ! ||

– ನಾಗೇಶ ಮೈಸೂರು

೦೮.೦೨.೨೦೨೦

(picture source: internet / social media)

1755. ಕಾಯಬಾರದೆ ?


1755. ಕಾಯಬಾರದೆ ?

___________________________

ಕಳಚಿಟ್ಟು ಬರುವತನಕ ಕಾಯೊ

ನಿನ್ನವಸರವ ನಾ ಬಲ್ಲೆ ಸಿಟ್ಟಾಗದೆ

ಧರಿಸಿದ ಭಾರದೊಡವೆ ವಸ್ತ್ರವೊ

ಬಿಚ್ಚಿಡಲೆಂತು ಆತುರ ಒರಟಾಟದೆ ? ||

ಹುಣ್ಣಿಮೆ ಚಂದ್ರನವ ಕಾಯಲಿ ಬಿಡು

ಅವಿತರು ಮೋಡದ ಸೆರಗಡಿ ಇರುವ

ಕಿವಿಯೋಲೆ ಜುಮುಕಿ ಸರ ಜತನ

ತೆಗೆದು ಬಹತನಕ ಕಾಯಲಿ ಕಾಯ ! ||

ಚಂದದ ರೇಶಿಮೆ ಸೀರೆ ನವಿರು

ಸುತ್ತಿಡಬೇಕೊ ಸುಕ್ಕಾಗದಂತೆ ಮಡಚಿ

ಕಾದು ಹದವಾಗೆ ತನು ಮನದೆ

ಮುದ ಶೃಂಗಾರಕಾವ್ಯದ ಬರವಣಿಗೆ ! ||

ಜಡೆಯಿದು ಜಲಪಾತದ ಸೊಬಗು

ಬಿಚ್ಚಿದ ತುರುಬದ ಬಾಚಲಿದೆ ನಯದೆ

ಸದ್ದಾಗುತ ಚಂಚಲಿಸುವ ಬಳೆಯ

ಮೌನ ಕಪಾಟಿನಲಿರಿಸದಿರೆ ಗದ್ದಲವೆ ! ||

ನಿರಾಡಂಭರ ಸುಂದರಿ ನಾನೆಂದೆ

ಸಹನೆ ತೋರದೆ ಹೋಗೆ ಸೊಗವೆಲ್ಲಿದೆ ?

ದಣಿವ ತೋರದೆ ಮುಗುಳ್ನಗೆ ಹೊದ್ದು

ನಿನ್ನ ಮುನಿಸ ತಣಿಪೆ, ಕಾಯಬಾರದೆ ? ||

– ನಾಗೇಶ ಮೈಸೂರು

೦೮.೦೨.೨೦೨೦

(picture source: Internet / social media)

1754. ಗಜಲ್ (ಇದು ಅಂತದ್ದೊಂದು ರಾತ್ರಿ)


1754. ಗಜಲ್

___________________________

(ಇದು ಅಂತದ್ದೊಂದು ರಾತ್ರಿ)

ಮಳೆಯಾಗಿ ಬಿಕ್ಕಳಿಸುವ ಮುಗಿಲು, ಇದು ಅಂತದ್ದೊಂದು ರಾತ್ರಿ

ಧಾರಾಕಾರ ತುಂಬಿದ ದಿಗಿಲು, ಇದು ಅಂತದ್ದೊಂದು ರಾತ್ರಿ ||

ಎದೆಯೊಳಗೆ ಹರಿದಂತೆ ಪ್ರವಾಹ, ಕೊಚ್ಚುತ ಎಲ್ಲ ಸಂದೇಹ

ಮನಸೆಲ್ಲ ಖಾಲಿ ಖಾಲಿ ಬಯಲು, ಇದು ಅಂತದ್ದೊಂದು ರಾತ್ರಿ ||

ಉಮ್ಮಳಿಸಿ ಬರುವ ದುಃಖದ ರಾಶಿ, ನೆನಪಿಗಿಲ್ಲ ಚೌಕಾಶಿ

ಅಲೆಯಲೆ ತೀರ ಹುಡುಕೊ ಕಡಲು, ಇದು ಅಂತದ್ದೊಂದು ರಾತ್ರಿ ||

ಯಾರಿಗೆಂದು ಹೇಳಲಿ ಯಾತನೆ, ನೀನಿಲ್ಲದ ವೇದನೆ

ಎದುರಲಿದೆ ಕಹಿ ಮದಿರೆ ಬಟ್ಟಲು, ಇದು ಅಂತದ್ದೊಂದು ರಾತ್ರಿ ||

ಗುಬ್ಬಿಗೆ ಎರವಾಗಿ ಹೋದೆ ಸಖಿ, ಇನ್ನೆಲ್ಲಿ ಬಿಡು ಚಂದ್ರಮುಖಿ

ಕೃಷ್ಣಪಕ್ಷದ ಕತ್ತಲೆ ಹುಣ್ಣಿಮೆಯಲು, ಇದು ಅಂತದ್ದೊಂದು ರಾತ್ರಿ ||

– ನಾಗೇಶ ಮೈಸೂರು

೦೯.೦೨.೨೦೨೦

(Picture source: internet / social media)

1753. ನಿದಿರಾದೇವಿ


1753. ನಿದಿರಾದೇವಿ

____________________

ಯಾಕಿನ್ನು ಬಾರದೊ ನಿದ್ದೆ

ನೀರವತೆ ಕಾಡುವ ಸದ್ದೆ

ಬರಳೇಕೊ ರಾಜಕುಮಾರಿ

ನಿದಿರೆಯ ಮದಿರೆ ಸವರೆ ! ||

ಬರಲೇನೊ ಅವಸರವಿದೆ

ಹವಣಿಸಿ ರೆಪ್ಪೆ ಮುದುಡಿದೆ

ಬಿಡನಲ್ಲ ಬದಿಗೆ ಕುಮಾರ

ಕೂತು ಕತೆ ಹೇಳುತಲಿಹ ! ||

ಅವನಿಗಿನ್ನು ಬಾರದ ನಿದ್ದೆ

ಅವನಿ ಮೌನಕವನದೆ ಸದ್ದೆ

ನಿರ್ಜನ ನಿರ್ವಾತ ನಿಶ್ಚಿತಕು

ಬಿಡದೆ ಪಠಿಸಿ ಮಂತ್ರದಂತೆ ||

ಅವನದೇನೊ ಅವಿರತ ಕಥನ

ಮುಗಿಯದ ಯುಗದಾಚೆ ಗಾನ

ಏರುತವನ ಕಲ್ಪಾಶ್ವದ ಬೆನ್ನಲಿ

ಹುಡುಕಬೇಕು ಅವನ ನಿಧಿಯ ! ||

ಪಯಣವವನದೇಕೊ ಸತತ

ನಿಲ್ಲದೆ ನಿರಂತರ ಉಸುರುತ

ಕೊನೆಗವನ ನಿಕ್ಷೇಪ ಎಟುಕಿರೆ

ನಿದಿರಾದೇವಿಗಾಗಲೆ ಆಹ್ವಾನ ! ||

– ನಾಗೇಶ ಮೈಸೂರು

೩೧.೦೧.೨೦೨೦

(picture source: internet / social media)

1752. ಗಜಲ್ (ಮನದಲೇನಿದೆ ಹೇಳು ?)


1752. ಗಜಲ್

_______________________

(ಮನದಲೇನಿದೆ ಹೇಳು ?)

ಬರಿ ಕುಡಿಗಣ್ಣ ನೋಟ ಸಾಕೆ ? ಮನದಲೇನಿದೆ ಹೇಳು

ಕದ್ದು ಕದ್ದು ನೋಡುವೆ ಅದೇಕೆ ? ಮನದಲೇನಿದೆ ಹೇಳು ||

ಕಣ್ಣಲ್ಲೆ ನೀಡುತ ಕರೆಯೋಲೆ ಕೆಣಕಿ ಸೆಳೆದವಸರದೆ

ಮಾತಾಡದೆ ಸರಿಯಲೇಕೆ ? ಮನದಲೇನಿದೆ ಹೇಳು ||

ಆಸೆಗಳಿದ್ದರು ನೂರಾರು ಬಿಚ್ಚಿ ಹಾರಿಸದೆ ಹಕ್ಕಿಯ

ಸೆರಗಡಿಯಲಿ ಬಚ್ಚಿಡಲೇಕೆ ? ಮನದಲೇನಿದೆ ಹೇಳು ||

ಹೇಳ ಬಂದರೆ ಓಡಿ ಹೋಗಿ ಕೈಗೆಟುಕದಾಟ ಆಡಿ

ಕದದ ಹಿಂದೆ ಇಣುಕುವುದೇಕೆ ? ಮನದಲೇನಿದೆ ಹೇಳು ||

ಗುಬ್ಬಿ ಶರಣಾಗಿ ಹೋಗಾಯ್ತು ಕೂತಿದೆ ನಿನ್ನ ಅಂಗೈಯಲ್ಲೆ

ಮತ್ತೇಕೆ ಹೇಳದೆ ಕಾಡುವೆ ? ಮನದಲೇನಿದೆ ಹೇಳು ||

– ನಾಗೇಶ ಮೈಸೂರು

೦೭.೦೨.೨೦೨೦

(Picture source: internet / social media)

1751. ಸುಳಿದಾಡೆ ನೀ ಗಾಳಿಯಂತೆ..


1751. ಸುಳಿದಾಡೆ ನೀ ಗಾಳಿಯಂತೆ..

___________________________________

ಗಾಳಿಯಾಡದೆ ಬೆವರಿದೆ ಮೈಯೆಲ್ಲ

ಸುಳಿದಾಡಬಾರದೇನೆ ಅತ್ತಿತ್ತ ?

ನಿನ್ನ ಮುಂಗುರುಳ ಬೀಸಣಿಗೆ ಮೆಲ್ಲ

ಬೀಸಬಾರದೇನೆ ಹಿತಕರ ಸಂಗೀತ ? ||

ಬಿರುಸದೇಕೊ ನಡುಹಗಲ ಸೂರ್ಯ

ನೀನಿದ್ದರಿಲ್ಲಿ ಮೃದುಲ ತಾನಾಗುವ

ನಿನ್ನಾರವಿಂದದ ವದನಕೆ ಮಾತ್ಸರ್ಯ

ಬೆವರಹನಿಯಾಗಿ ತಾನೆ ತಂಪಾಗುವ || ಗಾಳಿಯಾಡದೆ ||

ಬಂದು ಸುಳಿಯೆ ನಿನ್ನ ಸೆರಗಿನ ಗಾಳಿ

ನೇವರಿಸುತ ಚಂದ ಮಾರುತನ ಲಗ್ಗೆ

ತುಟಿಯ ತುಂಬಿ ನಗೆ ತುಳುಕೆ ಕಣ್ಣಲ್ಲಿ

ಹಿತವದೇನೊ ಗಂಧ ಮನಸಾರೆ ಹಿಗ್ಗೆ || ಗಾಳಿಯಾಡದೆ ||

ನೀನಿಲ್ಲದೆಡೆಯಲಿ ಉಸಿರುಗಟ್ಟಿ ಮೌನ

ಸದ್ದಿಲ್ಲದೆ ಮಲಗೀತೆ ಮಾತಿನ ಯಾನ

ಗೆಜ್ಜೆಯಲುಗಿಗು ಜೀಕಿ ತಂಗಾಳಿ ಭ್ರೂಣ

ಆವರಿಸೀತು ಬಾರೆ ಸುಳಿದಾಡೆ ನಿರ್ವಾಣ || ಗಾಳಿಯಾಡದೆ ||

– ನಾಗೇಶ ಮೈಸೂರು

೧೨.೦೮.೨೦೧೯

(Picture source: internet / social media)

1750. ವೈನಿನ ಬಾಟಲು !


1750. ವೈನಿನ ಬಾಟಲು !

________________________

ವೈನು ವೈನಾಗಿ ತುಂಬಿ

ಬಾಟಲು ಪೂರ

ಖಾಲಿಯಾದ ಹೊತ್ತಲಿ

ಮತ್ತಾಗಿ ಅಪಾರ ! ||

ಬಾಟಲಿ ಬಿರಡೆ ಸೀಲು

ತುಂಬಿಸೆ ಸರಳ

ಸುತ್ತಿ ಬ್ರಾಂಡು ಲೇಬಲ್ಲು

ಬೆಲೆಯಾಗ ಜೋರ ||

ಅಲ್ಲಿಂದ ಹೊರಟ ಸರಕು

ಅಂಗಡಿ ಸಾಲು

ತೆತ್ತು ಕೊಂಡವರು ಚುರುಕು

ಸಂಭ್ರಮಿಸೆ ಡೌಲು ||

ಆಚರಣೆ ಆರಂಭ ಬಿರಡೆ

ತೆರೆದಾಗ ಗ್ಲಾಸು

ತುಟಿಗಿಟ್ಟ ಹೊತ್ತಲಿ ಮತ್ತು

ನೆನಪೆಲ್ಲ ಲಾಸು ||

ಗ್ಲಾಸಿಂದ ಬಾಡಿಗೆ ರವಾನೆ

ಬಿಸಿಯೇರಿ ಕಣ ಕಣದಲು

ಹಾರಿ ತೂರಾಡಿ ತನುಮನ

ವೈನಿಗದೆ ಹೊಸ ಬಾಟಲು ! ||

– ನಾಗೇಶ ಮೈಸೂರು

೧೧.೦೮.೨೦೧೯

(Picture source : internet / social media)

1749. ಅಪರಿಚಿತ..


1749. ಅಪರಿಚಿತ..

_______________________

ಬಹುದಿನದ ತರುವಾಯ

ಎಚ್ಚೆತ್ತಂತಾಗಿ ತಟ್ಟನೆ

ಕಣ್ಣುಬಿಟ್ಟು ನೋಡಿದರೆ

ಎಲ್ಲ ಯಾಕೊ ಅಪರಿಚಿತ ! ||

ಅದೆ ನೆಲ ಜಲ ಆಕಾಶ

ಯುಗಾಂತರ ಮೂಲದ್ರವ್ಯ

ಕಟ್ಟಿಕೊಂಡ ಬದುಕು ಮಾತ್ರ

ದಿನದಿಂದ ದಿನಕೆ ಅಪರಿಚಿತ ||

ಅದೆ ಸುಕ್ಕಿದೆ ಮುದಿತನಕೆ

ಹಿರಿತನದ ಯಜಮಾನಿಕೆಗೆ

ಬೇಕಿಲ್ಲ ಹೊರೆ ಯುವಪ್ರಾಯಕೆ

ಭಾರವೆಣಿಸಿ ಜನ ವೃದ್ಧಾಶ್ರಮದತ್ತ ||

ಅದೆ ಇಂಗಿತವಿದೆ ಬದುಕಿಗೆ

ಹೊಟ್ಟೆ ಬಟ್ಟೆ ನೆರಳಿನ ಧಾವಂತ

ಬಯಕೆ ರುಚಿಗೆ ಓಲುತ ತುಟ್ಟಿ

ಅಭಿರುಚಿಯಡಿ ಹೋಲಿಕೆ ಮುಟ್ಟಿ ! ||

ನೆರೆಹೊರೆ ಬದಲಾಗಿಹೋಗಿದೆ

ನೆರೆ ಪ್ರವಾಹ ಕಾಡುವ ಪರಿ ಕೂಡ

ನಿಸರ್ಗದ ಜತೆ ನಾವಾಗಲಿಲ್ಲ ಮಾನ್ಯ

ನಮ್ಮಂತಾಗುತ ಪ್ರಕೃತಿ ಖಾಜಿ ನ್ಯಾಯ ! ||

– ನಾಗೇಶ ಮೈಸೂರು

೧೧.೦೮.೨೦೧೯

(Picture source: Internet / social media)

01748. ನೀ ನನ್ನೊಳಗಿನ ಗೀತೆ


01748. ನೀ ನನ್ನೊಳಗಿನ ಗೀತೆ

______________________________

ನೆನೆದೆ ನೆನೆದೆ ನಿನ್ನ ನೆನೆದೆ ಮನದೆ

ನಿನ್ನ ನೆನಪ ಮಳೆಯಲಿ ಮನಸೊದ್ದೆಮುದ್ದೆ

ಮೌನದಲಿ ಕೂತರು ಬರಿ ನಿನ್ನ ಸದ್ದೆ

ರಿಂಗಣಿಸುತಿದೆ ಜಪಿಸಿ ಎದೆ ನಿನ್ನ ಸರಹದ್ದೆ ||

ಇತ್ತೇನೇನೊ ಕೊಚ್ಚೆ ಕೆಸರ ರಾಡಿಯೆ

ಬಿದ್ದಿತ್ತಾರದೊ ಕಣ್ಣ ದೃಷ್ಟಿ ಮಂಕು ಮಾಯೆ

ನೀ ಬಂದೆ ಬಾಳಿಗೆ ಗುಡಿಸೆಲ್ಲ ನಕಲಿ

ನಿನ್ನ ನೆನಪ ತುಂತುರಲೆ ಹನಿಸಿ ರಂಗೋಲಿ ||

ತುಟಿಯ ತೇವದೆ ಮಾತಾಗಿ ಮೃದುಲ

ಗುಣುಗುಣಿಸುತೆಲ್ಲ ದನಿ ಇಂಪಾಗಿ ಹಂಬಲ

ಚಡಪಡಿಸುತಿದ್ದ ಹೃದಯ ಕದ ಮುಗ್ಧ

ನೋಡಿಲ್ಲಿ ಮಲಗಿದೆ ಹಸುಗೂಸಂತೆ ನಿಶ್ಯಬ್ಧ ||

ಬಿರುಗಾಳಿಯಿತ್ತು ತಂಗಾಳಿ ನೀನಾದೆ

ತಂಗಳಾಗಬಿಡದೆ ಭಾವನೆ ಬೆಚ್ಚಗಾಗಿಸಿದೆ

ಹುಚ್ಚು ಪ್ರೀತಿ ರೀತಿ ಗೊಣಗಾಟ ಸದಾ

ನಕ್ಕು ನಲಿದಾ ಮನ ಮೆಲುಕು ಹಾಕಿ ಸ್ವಾದ ||

ನೆನೆಯಲೇನಿದೆ ಬಿಡು ನೀನಲ್ಲಿ ನೆಲೆಸಿ

ಗರ್ಭಗುಡಿಯ ದೈವ ಪ್ರಾಣಮೂರ್ತಿ ಅರಸಿ

ಕೂತಾದ ಮೇಲೇನು ಕೊಡುತಿರೆ ವರವ

ಅಂತರಂಗಿಕ ಭಕ್ತ ನಾನಿಹೆ ಬೇಡುವ ಜೀವ ||

– ನಾಗೇಶ ಮೈಸೂರು

೩೦.೦೫.೨೦೧೮

(Picture source: internet / social media)

01747. ಬರ್ದಾಕು ಮನಸಾದಾಗ..


01747. ಬರ್ದಾಕು ಮನಸಾದಾಗ..

____________________________

ಬಿಡು ಬರೆಯೋಣ ಮನಸಾದಾಗ

ಅಂದರಾಯ್ತ? ಆಗೋದ್ಯಾವಾಗ ?

ಅನಿಸಿದಾಗಲೆ ಬರಕೊ ಮರುಳೆ

ಯಾರಿಗ್ಗೊತ್ತು, ಏನಾಗುತ್ತೊ ನಾಳೆ ?! ||

ಬರೆಯೋಕಂತ ಬಂದಾಗ ಸ್ಪೂರ್ತಿ

ಹಿಡಿದಿಟ್ಕೋಬೇಕು ಕೈಯಲ್ಲಿ ಪೂರ್ತಿ

ಪದ ಮರೆಯೋದುಂಟು ಆಗಿ ಕಗ್ಗಂಟು

ಆಗೋಕೆ ಮುಂಚೆ ಬರೆದಾದ್ರೆ ನಂಟು ||

ಎಲ್ಲಾರಿಗು ಸಿಕ್ಕೊ ಸೌಭಾಗ್ಯ ಇದಲ್ಲ

ಸಾಲು ಬರೆಯೋದಕ್ಕು ತಿಣುಕ್ತಾರೆಲ್ಲ

ಬರೆಯೋಕೆ ಮನಸು ಇರಲಿ ಬಿಡಲಿ

ಗೀಚ್ತಾ ಇರ್ಬೇಕು ತೋಚಿದ್ ಗೀಚ್ಕೊಳ್ಲಿ! ||

ಸರಿಯೊ ತಪ್ಪೊಂತ ಯಾಕಪ್ಪ ಚಿಂತೆ?

ಬರೆದಿದ್ದನ್ಯಾರು ನೋಡೋದಿದೆ ಮತ್ತೆ?

ಬರ್ಕೊಳ್ಳೊ ತೆವಲು ನಮ್ಮನಸಿನ ಡೌಲು

ಮಳೆಗೆ ಗರಿ ಬಿಚ್ಚಿ ಕುಣಿದಾಡ್ದಂಗೆ ನವಿಲು ||

ಮನಸಾದಾಗ ಬರಿಯೋಕೆದೆ ಜಾಗ

ಇದ್ರೂನು ಭಾವನೆ ಬರದಿದ್ರೆ ಸರಾಗ

ಗೀಚಿದ್ದ ಮುದುರಿ ಎಸೆಯೋಲ್ವ ಕಾಣ್ದಂಗೆ

ಬರ್ದಾಕು ಈಗ್ಲೂನು ಎಸೀಬೋದು ಹಂಗೆ ! ||

– ನಾಗೇಶ ಮೈಸೂರು

೨೮.೦೫.೨೦೧೮

(Picture source: internet / social media)

01746. ಸೃಷ್ಟಿ ಧರ್ಮಾಕರ್ಮ..


01746. ಸೃಷ್ಟಿ ಧರ್ಮಾಕರ್ಮ..

______________________________

ನಾ ಪರಬ್ರಹ್ಮ

ಸೃಷ್ಟಿ ನನ್ನ ಧರ್ಮ

ಅಹಂ ಬ್ರಹ್ಮಾಸ್ಮಿ ಪರಮ

ಮಾಡಿದ್ದೆಲ್ಲ ಅವರವರ ಕರ್ಮ ! ||

ನಾನೆ ಮೂಲ ಬೀಜ

ಬಿತ್ತಿದೆ ಮೊದಲ ತಾಜ

ಬೆಳೆದ ಪೈರಲಿತ್ತು ಹೊಸತು

ಮತ್ತದೆ ಬಿತ್ತುತ ಸೃಷ್ಟಿ ಕಸರತ್ತು ||

ಮೊದಲಿತ್ತು ಉತ್ಕೃಷ್ಟ

ಮರುಕಳಿಸಲದೆ ಅದೃಷ್ಟ

ಮಾಡುವ ಮಂದಿ ನೂರಾರು

ಗುಣಮಟ್ಟದಲದಕೆ ತಕರಾರು ||

ಆಗೀಗೊಮ್ಮೆ ಫಸಲು

ಬಡ್ಡಿಯ ಜತೆಗೆ ಅಸಲು

ಅತಿವೃಷ್ಟಿ ಜತೆ ಅನಾವೃಷ್ಟಿ

ಹಿಗ್ಗಲು ಬಿಡ ವಿನಾಶ ಸಮಷ್ಟಿ ||

ಪ್ರಯೋಗದೆ ಬೇಸತ್ತು

ಅರಿವಾದಾಗೆಲ್ಲ ಕೊಳೆತು

ಮಾಡುತ್ತೆ ವಿನಾಶ ಪ್ರಳಯ

ಮತ್ತೆ ಮಾಡೆ ಹೊಸ ಪ್ರಣಯ ||

– ನಾಗೇಶ ಮೈಸೂರು

೩೦.೦೫.೨೦೧೮

(Picture source : internet / social media)

01745. ಕನ್ನಡ ತಾಯೆ, ನೀಡೆ ಭಿಕ್ಷೆ..


01745. ಕನ್ನಡ ತಾಯೆ, ನೀಡೆ ಭಿಕ್ಷೆ..

_________________________________

ನೀಡು ಭಿಕ್ಷವ ತಾಯಿ ನೀಡು ಮಾತೆ ಭಿಕ್ಷ

ಅನ್ನ ಬೇಡೆನು ಮಾಡು ಕನ್ನಡವ ಸುಭೀಕ್ಷ

ತಪ ಜಪದ ಹಂಗಿರದೆ ನೀಡಮ್ಮ ಮೋಕ್ಷ

ದೊರಕುವಂತಿರಲಿ ನಿನ್ನ ಕರುಣಾ ಕಟಾಕ್ಷ ||

ಮಾತಾಳಿ ವಾಚಾಳಿ ಮನಸಾರೆ ನುಡಿವ

ಪರಭಾಷೆಯ ಚಾಳಿ ಅಮ್ಮನಾ ಕೊಲುವ

ಮಾತಾಟದಲಿ ಬೇಕೆ ಪರಕೀಯತೆ ಹಂಗು ?

ಮರೆತರೂ ಸರಿಯೆ ಮಾವು ಹಲಸು ತೆಂಗು ? ||

ಇತಿಹಾಸ ಚರಿತೆಯಲಿ ಅಮರವಾಗಿಸಿದೆ

ಅಷ್ಟ ದಿಗ್ಗಜರಂತೆ ಜ್ಞಾನಪೀಠ ಕರುಣಿಸಿದೆ

ಹಲ್ಮಿಡಿ ಶಾಸನ ನಲ್ನುಡಿ ದಾಸ ಶರಣತನ

ಪದ ವಚನ ಸಾಮಾನ್ಯನಧಿಗಮಿಸೆ ಅಜ್ಞಾನ ||

ನವಿರಲಿ ನಯ ನುಡಿ ಕನ್ನಡಿಗರೆದೆಗೆ ಶಿಖರ

ಕುಸುಮ ಪೋಣಿತ ಹಾರ ಸುಂದರಾ ಅಕ್ಷರ

ಹಿರಿಮೆ ಪಡಲೆನಿತಿದೆಯೊ ಅಗಣಿತ ಕೋಟಿ

ಸುಮ್ಮನಿಹನೇಕೊ ಕಂದ ಆದಾಗಲೂ ಲೂಟಿ ? ||

ಎಚ್ಚರಿಸಬೇಕೇಕೊ ಮುಚ್ಚಳಿಕೆ ಬರೆದುಕೊಡು

ಎಚ್ಚರ ತಪ್ಪದ ಕಟ್ಟೆಚ್ಚರದೆ ಕಾವಲು ಸೊಗಡು

ಮಲಗಲಿ ಹೆಮ್ಮೆಯಲವಳು ನೆಮ್ಮದಿ ನಿದಿರೆ

ನಮ್ಮ ಜೋಗುಳದಲಿ ಸ್ವಾವಲಂಬನೆ ಕುದುರೆ ||

– ನಾಗೇಶ ಮೈಸೂರು

೩೦.೦೫.೨೦೧೮

(Picture source: https://goo.gl/images/Kw2YLo)

01744. ಸುಲೋಚನಧಾರಿಣಿ..


01744. ಸುಲೋಚನಧಾರಿಣಿ..

_____________________________

ಚಂದದ ಮುಖ-ಕೊಂದು

ಬಂತು ಬಂಧದ ಆವರಣ

ಕಾಣದಕ್ಷರ ದೂರದ ತಾಣ

ನಾಸಿಕ ಜೊತೆ ಸುಲೋಚನ ||

ಸಿಗ್ಗು ಸಂಕೋಚ ತುಸು ತಲ್ಲಣ

ಅಂತರಾಳ ಭೀತಿ ಅವಲಕ್ಷಣ

ಸೌಂದರ್ಯಕೆ ಕುಂದು ಅನಿಸಿಕೆ

ಗುಟ್ಟಲಿ ಧರಿಸುವ ಚಿಟ್ಟು ಮನಕೆ ||

ಸಿಕ್ಕೆ ತಂಪು ಕನ್ನಡಕದ ದಾಯಾದಿ

ತುಸು ಸಾಂತ್ವನ ಕರಗಿದ ಬೇಗುದಿ

ಹಚ್ಚಿ ಅದರದೆ ಬಣ್ಣ ಮುಚ್ಚೆ ಗಾಜನು

ಬಿಸಿಲಲಿ ಕಪ್ಪು ಕನ್ನಡಕ ತಾನಾದನು ||

ಮೊದಮೊದಲವತಾರ ಗೊಂದಲ

ನಡು ನಡುವಲಿ ಇಣುಕುತ ಸಾಕಾರ

ನಿಧನಿಧಾನವಾಗಿ ಸರಾಗ ಸಲೀಸು

ಗೊತ್ತಾಗೆ ಅಕ್ಕಪಕ್ಕದವರದದೆ ಕೇಸು ||

ಕಾಲಕ್ರಮೇಣ ಅಭ್ಯಾಸವಾಗಿ ಸಮಸ್ತ

ಸಹಜತೆ ನೈಸರ್ಗಿಕವಾಗಿ ಮನ ಸ್ವಸ್ಥ

ಚಂದ ಕಾಣೆ ಚಾಳೀಸಲಿ ನಗೆ ಮುಖ

ನಿರಾಳ ಆತ್ಮವಿಶ್ವಾಸ ಮತ್ತದೆ ಪುಳಕ ||

– ನಾಗೇಶ ಮೈಸೂರು

೨೯.೦೫.೨೦೧೮

(Picture source :

https://goo.gl/images/h7DCQ1

https://goo.gl/images/7cGCf6

https://goo.gl/images/qhZUr1)

01743. ಅನುಸಂಧಾನ


01743. ಅನುಸಂಧಾನ

__________________________

ಅದಮ್ಯ ಚೇತನ ಮಿಡಿತ ದುಡಿತ

ನಿಲುಕದಿಹ ಕಾಣ್ಕೆ ಎನಿತದೆಷ್ಟೊ…

ಚೇತೋಹಾರಿ ವಿವಶತೆ ಪರವಶ

ತನ್ಮಯ ಚಿತ್ತ ನೇವರಿಸುತಿಹ ಪರಮ ||

ಪ್ರಾಣವಾಯು ಸ್ತಂಭನ ಆವರ್ತನ

ಉಚ್ವಾಸ ನಿಶ್ವಾಸ ಮರೆತ ಪರ್ಯಾಯ

ಜಾಗೃತ ಸ್ವಪ್ನ ಸುಷಿಪ್ತ ತುರ್ಯಾವಸ್ಥೆ

ತುರ್ಯಾತೀತ, ಸಮಾಧಿ ಪ್ರಶಾಂತತೆ ||

ನಾಡಿಚಕ್ರ ಬಂಧ ವಿಮುಕ್ತ ಕುಂಡಲಿನಿ

ಬ್ರಹ್ಮರಂಧ್ರಾಭಿಮುಖ ಆರೋಹಣಾವೃತ

ಉನ್ಮತ್ತ ಉತ್ಕಟ ಉದ್ದೀಪಿತ ಶಕ್ತಿ ಗೋಳ

ಸಂವಹನ ಸಂಪರ್ಕ ಅಗೋಚರ ಲೋಕ ||

ಪರಮಾನಂದ ಸ್ರಾವ ಅತೀತ ಮಕರಂದ

ಸಂಯೋಗ ಸುಯೋಗ ಸಾಧಕ ದಿಗ್ಮೂಢ

ವಾಕ್ಚತುರ ಮೂಕತೆ ಕಂಬನಿ ಧಾರಾಕಾರ

ಹರಿದು ಭಾಷ್ಪ, ತುಂಬಿ ಹೃದಯ ಸಮುದ್ರ ||

ವಿವಶ ಗಳಿಗೆ ಮೌನ, ಪರವಶತೆ ತನ್ನೊಳಗೆ

ಕಲುಷಿತಾ ಕಷ್ಮಲ ಅಮಲ ಕೆಸರ ಕಮಲ

ನಖಶಿಕಾಂತ ಸ್ಖಲನ ವಿದ್ಯುಲ್ಲತೆ ಸಂಧಾನ

ಕಣಕಣದೊಳವನೆ ಪರಿಣಮಿಸುವ ಬೆರಗಿಗೆ ||

– ನಾಗೇಶ ಮೈಸೂರು

೨೮.೦೫.೨೦೧೮

(Picture source : Internet / social media)

01742. ನಿಮಗೇನಾದರೂ ಗೊತ್ತಾ?


01742. ನಿಮಗೇನಾದರೂ ಗೊತ್ತಾ?

______________________________

ನನಗೇನು ಬೇಕಿದೆ ಅಂತ

ನಿಮಗೇನಾದರೂ ಗೊತ್ತಾ?

ಗೊತ್ತಾದರೆ ಹೇಳಿಬಿಡಿ ಸ್ವಾಮಿ

ಹಾಳು ಕೀಟ ದಿನನಿತ್ಯ ಕೊರೆತ ||

ಮೂರ್ಹೊತ್ತಿನ ಕೂಳ ಮಾತಲ್ಲ

ಮತ್ತೇನದೇನೇನೊ ಸಮಾಚಾರ

ಉಣ್ಣುಡುವುದಲ್ಲ ಸಣ್ಣ ವಿಷಯ

ದೊಡ್ಡದಿದೆ ಸರಿ ಗೊತ್ತಾಗುತ್ತಿಲ್ಲ ||

ಕೆಲಸವಿದೆ ಸಂಬಳ ಸಿಗುತಿದೆ

ಸಮಯವೆಲ್ಲ ಮುಗಿದಲ್ಲೆ ಚಿತ್ತ

ಹನಿಹನಿಗೂಡಿ ಹಳ್ಳವೆ ಹೊಂಡ

ಬೇಕೇನಿದೆ ಯಾಕೊ ಅರಿವಿಲ್ಲ ||

ಕಸುವೆಲ್ಲ ಅಲ್ಲಿ ತುಂಬಿಟ್ಟ ನೀರು

ತೋಳ ಕಸು ಬುದ್ಧಿಗೆ ತಕರಾರು

ತುತ್ತನ್ನಕಿಲ್ಲ ತತ್ವಾರ, ಮನಸಿಲ್ಲ

ಬಹುದು ಬಾರದು ಗೊಂದಲಕರ ||

ದಾಟಾಯ್ತು ಆ ದಿನಗಳ ಸಮರ

ಯಾಕೊ ಮುಂದಿದೆ ಖಾಲಿ ನೆಲ

ಅದೇ ಸಂಸಾರ ಮನೆ ಮಕ್ಕಳಾಟ

ಮನಕೇನೊ ಬೇಕಿದೆ ಗೊತ್ತಾಗುತ್ತಿಲ್ಲ ||

– ನಾಗೇಶ ಮೈಸೂರು

೨೮.೦೫.೨೦೧೮

(Picture source : https://goo.gl/images/tEU7KC)

01741. ನೀನಾಗೆ ಮಳೆಯಂತೆ : ಸುರಿದರೂ, ನಿಂತರೂ..


01741. ನೀನಾಗೆ ಮಳೆಯಂತೆ : ಸುರಿದರೂ, ನಿಂತರೂ..

_________________________________________________

ನಾಚಿಕೆಗೆಡೆಗೊಡದೆ ಮಳೆ ನೋಡೆ

ನಿಲದೆ ಸುರಿಯುತಿದೆ ಹೇಗೆ ಎಡಬಿಡದೆ !

ಬಿಡು, ನೀನೇಕೆ ನಾಚುವೆ ಹೀಗೆ ?

ತುಟಿ ಬಿರಿದು ಸುರಿದಿರಲಿ ಮುಗುಳ್ನಗೆ ||

ನೋಡಾಗಿಗೊಮ್ಮೆ ಮೋಡದ ಕಿಟಕಿ

ಕದ ತೆರೆದೇನೊ ಮಿಂಚಿನ ಬಿಳಿ ಹೂವೆರಚಿ

ಬಂದು ಹೋದಂತೆ ನಡುವೆ ಗುಡುಗು

ತುಟಿ ಬಿಚ್ಚಿ ನಕ್ಕರದೆ ಸದ್ದಲಿ ಮಿಂಚು ನಗೆಯೆ ||

ನೋಡಿದೆಯ ಕೊಟ್ಟರು ಗಗನದೊಡಲು

ಹನಿ ಹನಿ ಧಾರೆ ದಾರದೆಳೆ ನೇಯ್ದ ನೂಲು

ಸೀರೆ ಸೆರಗಂತೆ ಮುಸುಕಿದೆ ಇಳೆ ಶಿರದೆ

ನೀನ್ಹೊದ್ದ ಸೆರಗ ಮರೆಯ ಮಲ್ಲಿಗೆ ನಗುತಿದೆ ||

ನೋಡೀ ನೆಲವೆಲ್ಲ ಒದ್ದೆಮುದ್ದೆ ಮಳೆಗೆ

ನಿಂತ ಮೇಲೂ ಕುರುಹುಳಿಸುವ ಕೈ ಚಳಕ

ಒಣಗಿದರು ಇಂಗಿ ಕರಗುವುದೊಳಗೆಲ್ಲೊ

ನೀನಿಂಗಬಾರದೆ ಎದೆಯ ಬಂಜರಲಿ ಹಾಗೆ ? ||

ಅದೆ ಮಳೆಯ ಮಹಿಮೆ- ನಿಂತ ಹೊತ್ತಲು

ಉಳಿಸಿಹೋಗುವ ಘಮಲು ಒಲುಮೆ ಸದಾ ಹಿತ್ತಲು

ನಶಿಸುವಾ ಮುನ್ನ ಮತ್ತೆ ಹೊಸ ಹನಿಯ ಅಮಲು

ನೀನಾಗು ಬೇಕೆನಿಸಿದಾಗ ಸುರಿವ ಮಳೆ ದನಿ ಕೊರಳು ||

– ನಾಗೇಶ ಮೈಸೂರು

೨೭.೦೫.೨೦೧೮

(Picture source: Internet / social media)

01740. ಭಾನುವಾರದ ಮಂಡೆ


01740. ಭಾನುವಾರದ ಮಂಡೆ

_____________________________

ಭಾನುವಾರದ ಮಂಡೆ

ಸೋಮಾರಿ ಕಲ್ಲುಗುಂಡೆ

ಮಿಸುಕದತ್ತಿತ್ತ ಮಿಂಚಂತೆ

ಮೆದ್ದ ಹೆಬ್ಬಾವಿನ ಹಾಗಂತೆ ||

ಜಾಗೃತ ಮನ ಧೂರ್ತ

ಆಲಸಿಕೆಯದೇನೊ ಸುತ್ತ

ಇಚ್ಚಿಸೊಂದೆ ಗಳಿಗೆ ವಿಸ್ತರಣೆ

ನೋಡ ನೋಡುತೆ ದಿನ ಮಧ್ಯಾಹ್ನೆ ! ||

ಕೆಲವರಿಗಿಲ್ಲದ ಭಾಗ್ಯ

ಬೇಗನೆ ಎಚ್ಚರ ಅಯೋಗ್ಯ!

ದಿನನಿತ್ಯ ಮೇಲೇಳೆ ಸತ್ಯಾಗ್ರಹ

ಬೇಡದಿದ್ದರು ರವಿವಾರದೆ ಶನಿಗ್ರಹ ||

ಹಗಲಿಗು ಏನೊ ವೇಗ

ದಿನವುರುಳಿ ಎಂತೊ ಬೇಗ

ಕೂತಲ್ಲೆ ಮಾತಾಟ ನೋಡಾಟ

ನಡುರಾತ್ರಿ ದಾಟಿದರು ಪರದಾಟ ||

ಸೋಮವಾರದ ಜಾವ

ಕಣ್ಣಿನ್ನೂ ಮಲಗದ ಜೀವ

ಮೇಲೇಳೊ ಹೊತ್ತಲಿ ತೂಗಿ

ತಟ್ಟಿ ಮಲಗಿಸುವ ಮನ ಜೋಗಿ ||

– ನಾಗೇಶ ಮೈಸೂರು

೨೦.೦೫.೨೦೧೮

(Picture source : Wikipedia)

01739. ಅತೃಪ್ತಾತ್ಮ…


01739. ಅತೃಪ್ತಾತ್ಮ…

_________________________

ಯಾಕೆ ಹೀಗೆ ಸುರಿವೆ ಮಳೆಯೆ?

ಗುಡಿ ಗೋಪುರ ಶಿಖರ ತೊಳೆಯೆ..||

ಯಾಕೆ ಹೀಗೆ ಸುರಿವೆ ಮಳೆಯೆ?

ನಾನಲ್ಲ ರವಿ ಮಜ್ಜನ ಮೈ ತೊಳೆಯೆ! ||

ಯಾಕೆ ಹೀಗೆ ಸುರಿವೆ ಮಳೆಯೆ?

ಅದು ಒಣಗಿದ ಭುವಿಯಿತ್ತ ಕರೆಯೆ.. ||

ಯಾಕೆ ಹೀಗೆ ಸುರಿವೆ ಮಳೆಯೆ?

ಬೆವರಲಿ ಜನ ಶಪಿಸುವರಲ್ಲ ಸರಿಯೆ..? ||

ಯಾಕೆ ಹೀಗೆ ಸುರಿವೆ ಮಳೆಯೆ?

ಸುರಿಯದಿರೆ ಶಪಿಸುವೆಯಲ್ಲ ನೀನೆ ! ||

ಯಾಕೆ ಹೀಗೆ ಸುರಿವೆ ಮಳೆಯೆ?

ಕವಿ ಪ್ರೇಮಿಗಳು ಬಿಡರಲ್ಲ ಉಳಿಯೆ ! ||

ಯಾಕೆ ಹೀಗೆ ಸುರಿವೆ ಮಳೆಯೆ?

ತೀರಿಸೆ ಋಣ ಜನ್ಮದ ಕರ್ಮ ಕಳೆಯೆ ||

ಯಾಕೆ ಹೀಗೆ ಸುರಿವೆ ಮಳೆಯೆ?

ಸುರಿವುದೆನ್ನ ಹಣೆಬರಹದ ಪರಿಯೆ ||

ಯಾಕೆ ಹೀಗೆ ಸುರಿವೆ ಮಳೆಯೆ?

ಯಾಕ್ಹೀಗೆ ನಿನ್ನ ಪ್ರಶ್ನೆಯ ಸುರಿಮಳೆಯೆ? ||

– ನಾಗೇಶ ಮೈಸೂರು

೨೬.೦೫.೨೦೧೮

01738. ನಡೆದಿರು ಸುಮ್ಮನೆ..


01738. ನಡೆದಿರು ಸುಮ್ಮನೆ..

________________________

ನಡೆದೆ ನಡೆದೆ ನಡೆದೆ

ನಡೆಯುತ್ತಲೆ ಇದ್ದೇನೆ

ನಡಿಗೆಗಾಗಿದೆ ನಡು ವಯಸು

ನಿತ್ರಾಣವೆನಿಸಿ ಕುಸಿವ ಹಂಬಲ.. ||

ಓಡು ಓಡೆಂದರು ವ್ಯಾಯಾಮ

ಎಲ್ಲರದೊಂದೊಂದು ಆಯಾಮ

ಅದಕೆಂದೆ ಖರೀದಿಸಿದ ಶೂಸು ಲೇಸು

ಹೊಚ್ಚ ಹೊಸದಿನ್ನು ಕೂತು ವರ್ಷವಾಯ್ತು ||

ಆಡೆಂದರಾಟ ಎಂಥ ಕುಣಿದಾಟ

ಎಷ್ಟಿತ್ತು ಬಿರು ಬಿಸಿಲ ಹುಡುಗಾಟ ?

ಮನವೀಗ ಇಡುವ್ಹೆಜ್ಜೆ ಜಿಗಿತ ಆರಡಿ ದೂರಕೆ

ಕಾಲಿನ್ನು ಏಕೊ ದಾಟದೆ ನಿಂತಿದೆ ಮೊದಲಲ್ಲೆ ! ||

ನರ್ತಿಸುತ ಬೆವರಾದವರಲ್ಲಿ

ಯೋಗ ಶಿಬಿರ, ಕಸರತ್ತ ಕಂಸಾಲೆ

ಜಿಮ್ಮುಗಳಲಿ ಬೆವರಿಸಿ ಭಾರವೆತ್ತಿ ಗಟ್ಟಿ

ಮುಟ್ಟಾದವರ ನಡುವೆ ಕಾಡಿ ಅನಾಥ ಪ್ರಜ್ಞೆ ||

ಬಿಟ್ಟೆಲ್ಲ ಹೊಸತರದ ಗೀಳು

ನಡೆವುದೆ ಸರಿ ಗೊತ್ತಿರುವ ಹಾದಿ

ಪಾದದಡಿಯ ನರವ್ಯೂಹ ನೆಲ ಮುಟ್ಟೆ

ನಖಶಿಖಾಂತ ಮರ್ದನವಾದಂತೆ ಸಕ್ರೀಯ |

– ನಾಗೇಶ ಮೈಸೂರು

೨೬.೦೫.೨೦೧೮

(Picture 1 from : Internet / social media; Picture 2,3 from Wikipedia)

01737. ನಾನವಳಲ್ಲ, ನಾನವಳು!


01737. ನಾನವಳಲ್ಲ, ನಾನವಳು!

____________________________

ಬಾಯಲಿ ಜಗ ತೋರಿದ ಅವನಲ್ಲ ನಾನು

ಬರಿ ಸನ್ನೆ ಮಾತಲ್ಲೆ ಜಗವ ಕುಣಿಸುವೆನು !

ಕಣ್ಣಂಚಲೆ ತೋರುವೆನೆಲ್ಲ ಮಿಂಚಿನ ದಾಳ

ಇಣುಕಿದರಲ್ಲೆ ಕಾಣುವ ಹೆಣ್ಣಿನ ಮನದಾಳ ||

ನೋಡಿದೆಯಾ ಕಣ್ಣು? ಕಣ್ಣೊಳಗಿನ ದೋಣಿ

ನಯನ ದ್ವೀಪದ ಬಿಳಿ ನಡುಗಡ್ಡೆ ವನರಾಣಿ

ತಂದಿಕ್ಕಿದರಾರೊ ಹೊಳೆವ ಚಂದಿರ ಚಂದ

ಹೆಣ್ಣಿಗು ಸೌಂದರ್ಯಕು ಎಲ್ಲಿಯದಪ್ಪ ಬಂಧ ! ||

ಅಕ್ಷಯ ಸಂದೇಶ ಅಕ್ಷಿಯೊಳಡಗಿದೆ ಸತ್ಯ

ಅರಿಯಬಿಡದ ತೇಲಾಟ ಗಾಜ ನೀರ ಮತ್ಸ್ಯ

ಚಂದನ ವನ ವದನ ತೀಡಿದ ತುಟಿ ಸಾಂಗತ್ಯ

ಕಡೆದಿಟ್ಟ ಶಿಲ್ಪ ನಾಸಿಕ ಸಂಪಿಗೆ ನಾಚಿಕೆ ಸಾಹಿತ್ಯ ||

ರಂಗುರಂಗು ದೃಷ್ಟಿಬೊಟ್ಟು ಬಿರಿದಾ ದಾಳಿಂಬೆ

ಅರೆಪಾರ್ಶ್ವದನಾವರಣ ಧರೆಗಿಳಿದಂತೆ ರಂಭೆ

ಚೆಲ್ಲುವ ಸುಧೆಯಂಗಳದೆ ಅವಳಾಗುವಳಂಬೆ

ಹೆಸರಿಸಲೆಂತೂ ಹೆಸರೆ ಕೋಟಿನಾಮ ಶೋಭೆ ||

ಸೌಮ್ಯ ನೋಟದೆ ಜಗ ಪ್ರತಿಫಲಿಸಿ ಅಂತರಾಳ

ಒಂದೇ ಕದ ಹಾದಿ ಒಳಗ್ಹೊಕ್ಕಲಿದೆ ಹೊರಗಲ್ಲ

ಬಲೆಗೆ ಸಿಕ್ಕ ಮೀನಲ್ಲೆ ಬಿದ್ದು ಒದ್ದಾಡುತ ಮುಗ್ಧ

ಮುಕ್ತಿ ಮೋಕ್ಷ ಕೈವಲ್ಯ ಸಿಗಲಿಬಿಡಲಿ ಸಂದಿಗ್ಧ ||

– ನಾಗೇಶ ಮೈಸೂರು

೨೩.೦೫.೨೦೧೮

(Picture source : internet / social media received via Madhu Smitha – thank you 🙏😊👍)

01736. ಯಾಕೊ ಮಾಧವ ಮೌನ?


01736. ಯಾಕೊ ಮಾಧವ ಮೌನ?

_________________________________

ಯಾಕೊ ಮುನಿದೆ ಮಾಧವ ?

ಮಾತಾಡದೆ ಕಾಡುವೆ ಯಾದವ ?

ಮರೆಯಲೆಂತೊ ನೀ ವಿನೋದ

ಕಂಡು ಗೋರಾಜನು ಮೂಕಾದ ! ||

ನೋಡಿಲ್ಲಿ ಸುತ್ತಮುತ್ತಲ ನಿಸರ್ಗ

ಮಾಡಿದೆಯಲ್ಲಾ ನಂದನ ಸ್ವರ್ಗ

ನಂದ ಕಿಶೋರ ಇನ್ನೇನು ದೂರು ?

ಹೇಳಬಾರದೆ ಅದೇನಿದೆ ತಕರಾರು ? ||

ಮುನಿಸಲೇಕೆ ಕೂತೆ ತುಟಿ ಬಿಗಿದು ?

ರಾಧೆ ನಾ ಒರಗಿದರು ಅಪ್ಪುತ ಖುದ್ಧು

ಎಂದಿನಂತೆ ಮೀರೆಯೇಕೊ ಸರಹದ್ದು ?

ಹುಸಿ ಬೇಡೆನ್ನುತ ಕಾದ ಮನ ರಣಹದ್ದು ! ||

ಸಿಂಗರಿಸಿಕೊಂಡು ಬಂದೆ ನಿನಗೆಂದೆ

ನೀನಿಂತು ಕೂರೆ ನನಗೇನಿದೆ ದಂಧೆ ?

ಮೌನ ಸಲ್ಲದೊ ನೀ ಮಾತಾಡೆ ಚಂದ

ಮರೆತುಹೋಯ್ತೇನು ನಮ್ಮಾ ಚಕ್ಕಂದ ? ||

ಭಾವದ ಲಹರಿಯಡಿ ತೆರೆದಿಟ್ಟೆ ನನ್ನನೆ

ನಿನ್ನ ಹಿರಿಯಾಕೆ ಅನುಭವಿ ಜ್ಞಾನಿ ನಾನೆ

ನನ್ನೊಳಗೆ ನಿನಗೆಂದೆ ಮೀಸಲು ಕೋಣೆ

ಬೆಳಗುವ ಜ್ಯೋತಿ ನೀ ಮಂಕಾಗೆ ಬೇನೆ ||

– ನಾಗೇಶ ಮೈಸೂರು

೨೩.೦೫.೨೦೧೮

(Picture source : internet / social media received via Manasa Mahadev Govardhan – thank you 🙏👍😊💐)

01735. ವೀಣಾಪಾಣಿ, ಬ್ರಹ್ಮನ ರಾಣಿ


01735. ವೀಣಾಪಾಣಿ, ಬ್ರಹ್ಮನ ರಾಣಿ

__________________________________

ವೀಣೆ ನುಡಿಸುತಿಹಳೆ ಸರಸಿ

ಸರ್ವಾಲಂಕೃತೆ ಬ್ರಹ್ಮನರಸಿ

ಮೀಟೆ ಬೆರಳಲಿ ಝೇಂಕಾರ

ಮರುಳಾದರೊ ಲೋಕಪೂರ ||

ಮಂದಸ್ಮಿತೆ ತಾ ಜ್ಞಾನದಾತೆ

ವಿದ್ಯಾ ಬುದ್ಧಿಗೊಡತಿ ವನಿತೆ

ಮಣಿಹಾರ ತಾಳೇಗರಿ ಕರದೆ

ಮೊಗೆದಲ್ಲೆ ಕೊಡುವ ಶಾರದೆ ||

ಕಮಲ ಕುಸುಮ ಸಿಂಹಾಸನ

ಹೇಮಾ ಕಿರೀಟ ಶಿರ ಭೂಷಣ

ನವರತ್ನ ನಗ ಸರ್ವಾಲಂಕೃತೆ

ನಖಶಿಖಾಂತ ವೈಭವ ಮಾತೆ ||

ಮಾತಿಗಿಂತ ಕೃತಿಯಾದವಳು

ಮೌನದೇ ವರವೀವ ಮುಗುಳು

ಸಾಧಕನಿರೆ ಹೆಜ್ಜೆಜ್ಜೆಗು ಬೆಂಬಲ

ಮುಗ್ಧಳಂತೆ ವೀಣೆಯ ಹಂಬಲ ||

ದೊರಕಲೊಮ್ಮೆ ಕೈ ಬಿಡದವಳು

ಲಕುಮೀ ಚಂಚಲೆ ಓಡಾಡುವಳು

ಪ್ರಕಟಿಸಳು ಭಾವ ಉಮೆಯಂತೆ

ಶಾಶ್ವತ ನೆಲೆಸಿ ಕಾಯುವ ಘನತೆ ! ||

– ನಾಗೇಶ ಮೈಸೂರು

೨೩.೦೫.೨೦೧೮

(Painting by : Rekha Sathya, thank you very much! 🙏😊👍💐🌹)

01734. ಅವಳಾದ ಬಗೆ..


01734. ಅವಳಾದ ಬಗೆ..

________________________________________

ಗಗನದ ಬಿಲ್ಲಿಂದ ಬಿಟ್ಟ ಬಾಣಗಳೆ ಮಿಂಚಾಗಿ

ನಿನ್ನ ಕಣ್ಣಂಚ ಸೇರಿ ಮಿನುಗುವ ಹೂವಾಯ್ತಲ್ಲೆ

ಜಾರಿ ತುದಿಯಿಂದ ಬಿದ್ದ ಬಿಂದು ತುಟಿ ಸೇರಿ

ತೇವದೆ ತೆರೆದಧರದ ಕದ ಬೆಳ್ಳಿ ನಗುವಾಯ್ತಲ್ಲೆ ||

ಜಲಪಾತಗಳಾದವೆ ಕೆನ್ನೆ ಪರ್ವತದ ನುಣುಪಲಿ

ಕೆಂಪಾಗಿಸಿದ ಕದಪ ಕನ್ನೆತನ ರಂಗಿನ ಹಂಗಲಿ

ಹೆದರಿಸಲೆಂಬಂತೆ ಗಗನ ಗುಡುಗಿನ ಸದ್ದಾದರು

ಪರವಶ ಗಾನ ಕೊರಳಲಿ ಹೊರಟಿತಲ್ಲ ಜೋರು ||

ಮುತ್ತಿನ ಮಳೆ ಹನಿ ಸರದಿ ಸುರಿಯಿತಲ್ಲ ಭರದೆ

ತಟ್ಟುತ ನೆತ್ತಿಯ ದಾಟಿ ಹಣೆ ಧಾರೆ ಸಂಭ್ರಮದೆ

ಸೇರುತ ನಯನ ಕೊಳ ತುಂಬಿಸಿ ಕಂಬನಿ ನೌಕೆ

ಅಳಿಸಿದರು ಹರ್ಷದ ನೀರು ಕುಸಿಯದ ಹೆಣ್ಣಾಕೆ ||

ಸೋತವಲ್ಲ ಹೆದರಿಸಿ ಬೆದರಿಸಿ ಕಾಡೆ ಪ್ರಕೃತಿಯ

ಗೆಲ್ಲುವ ಸುಲಭದ ಹಾದಿ ಶರಣಾಗುವ ಸಮಯ

ಅವಿರ್ಭವಿಸುತವಳಲ್ಲೆ ಭಾವದ ಝರಿ ತಾವಾಗಿ

ಅವಳಾ ಚಂಚಲ ಪ್ರವೃತ್ತಿಗೆ ಮುನ್ನುಡಿ ಸರಕಾಗಿ ||

ಅದಕವಳಲಿದೆ ಮೋಡ ಮಿಂಚು ಮಳೆ ನಿಗೂಢ

ಅವಳ ವರ್ತನೆ ಪ್ರವರ್ತನೆ ಊಹೆಗೆಟುಕದ ಜಾಡ

ಅರಿಯಲೆಲ್ಲಿ ಅಳೆಯಲೆಲ್ಲಿ ಅಮೇಯದ ವಿಸ್ಮೃತಿ

ಸರಿಯರಿತರೆ ತಹಳಂತೆ ದಿಕ್ಕೆಟ್ಟ ಮನಕು ಜಾಗೃತಿ ||

– ನಾಗೇಶ ಮೈಸೂರು

೨೨.೦೫.೨೦೧೮

(Picture source : Internet / social media received via FB friends like Madhu Smitha – thank you !!😍😊🙏🙏💐🌷)

01733. ಸಮರ್ಪಣೆ..


01733. ಸಮರ್ಪಣೆ..

_____________________

ಹನಿಸಿಬಿಟ್ಟೆ ಸುಖದ ಬೆವರಲಿ

ನಾ ಲೀನ ತಲ್ಲೀನ ನೀರಾಜನ

ಹನಿ ಮಾರ್ದನಿ ತೊಟ್ಟಿಕ್ಕಿಸಿ ಸ್ಪರ್ಶ

ಸಂಘರ್ಷ ತುಳುಕಿ ಹರ್ಷ ಪಲುಕು..||

ನಿರ್ಗಮಿಸಿತದೆಂತೊ ಮನದ ಭೀತಿ

ಅಹೋರಾತ್ರಿ ಸುರಿದಾ ಜಡಿಮಳೆಯಡಿ

ಮಿಕ್ಕ ಸದ್ದೆಲ್ಲ ಮೌನ ಶರಣು ವರ್ಷಕೆ

ಲಯಬದ್ಧ ಸಂಗೀತ ಮಿಲನದುತ್ಸವದೆ ||

ಏಕತಾನಕೆ ಬೆತ್ತಲೆ ಪುರುಷ ಪ್ರಕೃತಿ ಶ್ರುತಿ

ಹಾಸಿಹೊದ್ದ ಕತ್ತಲ ಮಿಂಚಾಗಿಸಿ ನಿರ್ವಾಣ

ಬೆಳಕ ಕೋಲ ಕೋಲದೆ ಅಸ್ಪಷ್ಟ ನೆರಳಾಟ

ಜುಮ್ಮೆನಿಸಿತಲ್ಲಾ ಮದನ ಹಿತದ ನರಳಾಟ ||

ಮಾತು ಬಣ್ಣಿಸದು, ಬಿಡು ಮೌನ ಬಿಚ್ಚಿಡದು

ವೇಗಾವೇಗದ ಪಯಣ ಮಾಯೆಗು ಮಯಕ

ಸ್ಪಂದನ ತಾಡನ ಕದನ ಪಿಸುಗುಟ್ಟಿ ಕಾರಣ

ಏನೆಲ್ಲ ಮೇಳೈಸಿ ತನ್ಮಯ ತನು ತಾನೇ ಜಾಣ! ||

ಮನದ ಭ್ರೂಣ ನಿಜ ಶಿಶುವಾದ ಗಳಿಗೆಯಿದು

ಕೂಡಿಟ್ಟಿದ್ದೆಲ್ಲ ಕಳೆದ ಸುಖ ಲೆಕ್ಕಾಚಾರ ಶುದ್ಧ

ಗುಣಿಸಿ ಭಾಗಿಸಿ ಲೌಕಿಕ ಪಡೆದದ್ದೆಲ್ಲ ನೆನೆಯೆ

ಲೆಕ್ಕಿಸಲಾಗದಾಲೌಕಿಕ ಸಮರ್ಪಿಸಿದೆ ತನ್ನನ್ನೆ ||

– ನಾಗೇಶ ಮೈಸೂರು

೨೨.೦೫.೨೦೧೮

(Picture source: internet / social media- ಇದೇ ಚಿತ್ರಕ್ಕೆ ‘ಪರವಶ’ ಕವಿತೆ ಬರೆದಿದ್ದೆ.. ಇದು ಮತ್ತೊಂದು ಭಾವದಲ್ಲಿ ಬರೆದ ಕವಿತೆ)

01732. ಪರವಶ..


01732. ಪರವಶ..

_______________________

ಪರವಶ ಗಾನ

ಮನ ಪರವಶ ಲೀನ

ಏನೇನೆಲ್ಲಾ ವ್ಯಾಖ್ಯಾನ?!

ಏನೇನಲ್ಲಾ ಅದರಾಚೆಯ ಗೌಣ!? ||

ಅದ್ಭುತ ಸಹಜ

ನಿಸರ್ಗದಲಿಟ್ಟ ಕಣಜ

ಏನೇನಿದೆಯೊ ಅಯೋನಿಜ?!

ಇನ್ನೇನೇನಿದೆಯೊ ಸಂಯೋಜ!? ||

ಸರಳಾತಿಪ ಸರಳ

ಕೂಡಿಟ್ಟ ಸಂಕೀರ್ಣಗಳ

ಏನೇನೆಲ್ಲಾ ಸಂಭ್ರಮಗಳ ಕೋಶ

ಇನ್ನೇನೇನಿದೆಯೊ ಸಂಗಮ ಘೋಷ ! ||

ಎಲ್ಲಕು ಮೂಲ ಅಂಡ

ಸಂಕಲಿಸುತೆಲ್ಲ ಬ್ರಹ್ಮಾಂಡ

ಏನೇನೆಲ್ಲ ವಿಶ್ವಗರ್ಭದ ಬಸಿರೊ?

ಇನ್ನೇನೆಲ್ಲವಿದೆಯಲ್ಲಿ ಬಲ್ಲವರಾರೊ ? ||

ಪರವಶದಲಿದೆ ಆಕರ್ಷ

ತೆರೆದಿಡಲದ ತರ ಸಂಘರ್ಷ

ಸೃಷ್ಟಿಚಿತ್ತ ಸೌಂದರ್ಯದ ಮೊತ್ತ

ಕುರೂಪದೆಬೆಸೆದ ಪೊರೆಯೆ ಸಮಸ್ತ ||

– ನಾಗೇಶ ಮೈಸೂರು

೨೧.೦೫.೨೦೧೮

(Photo source: internet / social media)

01731. ನಿದಿರೆ


01731. ನಿದಿರೆ

_________________

ವರವೋ? ಶಾಪವೊ? ನಿದಿರೆ

ಯಾಕೊ ಬೇಕೆಂದಾಗ ಬಳಿ ಬರದೆ

ಕಾಡಿಸುವ ಬಗೆ ಬಗೆ ನೂರಾಟ

ಅರೆಬರೆಯಾಗೆ ಮನದಾ ಹಾರಾಟ ||

ಮುಂಜಾವಿಂದ ಮುಸ್ಸಂಜೆತನಕ

ಸಾಲುಗಟ್ಟಿ ಕೂತಿವೆ ಮಾಡದ ಲೆಕ್ಕ

ಸರಿ ನಿದಿರೆಯಾಗದಿರೆ ಚಡಪಡಿಕೆ

ಮಾಡಿದ್ದೆಲ್ಲಾ ಅರೆಬರೆ ಬುಡುಬುಡಿಕೆ ||

ಕಾಡುವ ಯಾತನೆ ಚಿಂತೆ ನೂರು

ಮಾಡುವುದೇನೇನೆಲ್ಲ ತರ ತಕರಾರು

ಮಲಗಬಿಡದಲ್ಲ ತನುವಾ ನಿದಿರೆಗೆ

ನೆಮ್ಮದಿಯಿರದೆಡೆ ಮನ ಕುದುರೆ ಲಗ್ಗೆ ||

ಮಾಡಲಿ ಬಿಡಲಿ ಕೆಲವರಿಗುಂಟು

ಕೂತಲ್ಲೆ ಮಲಗಿಬಿಡಬಲ್ಲ ಇಡುಗಂಟು

ಸಂತೆಯಲು ನಿದಿರಿಸುವ ಧೀರರು

ಮಿಕ್ಕಿದ್ದೆಲ್ಲ ಗಣಿಸದೆ ಪಟ್ಟಾಗಿ ಮಲಗುವರು! ||

ಸಾಧಿಸಲೇನೇನೊ ಇದ್ದವರಿಗೆ ನಿದ್ರೆ

ವರವೂ ಹೌದು ಶಾಪವೂ ಅದುವೆ ದೊರೆ

ಇರದಿದ್ದರು ಕರ್ಮದ ಬೆನ್ನಟ್ಟಿ ಓಡುವರೆ

ಸಮತೋಲಿಸಿದರೆ ಬದುಕಲೊತ್ತೊ ಮುದ್ರೆ! ||

– ನಾಗೇಶ ಮೈಸೂರು

೨೦.೦೫.೨೦೧೮

(Picture source: https://goo.gl/images/ygfD75)

01730. ಸಾಗರ ತಟದಲೊಂದು ಗಳಿಗೆ….


01730. ಸಾಗರ ತಟದಲೊಂದು ಗಳಿಗೆ….

________________________________________

ಸಾಗರದ ತಟದಲಿ

ಕೂತ ಮಬ್ಬಿನ ಹೊತ್ತಲಿ

ಅಲೆಗಳದೇನೊ ಸಂಗೀತ

ಹೇಳಿತೇನೊ ಮಾತು ಗೊತ್ತಾ ? ||

ಕೂತಲ್ಲಿ ಕಾಡಿ ವರುಣ

ಮಾಡಿಹನೆ ಹನಿ ಮರ್ದನ

ಮುಚ್ಚಿದ ಕಣ್ಣಿಗೆ ಪವನದ ಬೇಲಿ

ಮೆಲ್ಲಗೆ ಸವರಿ ಆಹ್ಲಾದ ತಂಗಾಳಿ ||

ತೆರೆಯಪ್ಪಳಿಸಿದ ಸದ್ದಲಿದೆ

ಎದ್ದು ಬಂದಾವರಿಸುವಾ ಭೀತಿ

ಕೊರೆವ ಕೀಟ ವರಿಸದಲ್ಲ ವಿಶ್ರಾಂತಿ

ಅಪರಿಮಿತ ಅಪರಿಚಿತ ಮನದನುಭೂತಿ ||

ಪೇರಿಸಿಟ್ಟ ಕಲಾಕೃತಿ ಮೋಡ

ತುಂಬುಗರ್ಭದ ಶಿಶು ಗಗನ ನಾಡ

ಹುಸಿನೋವು ನಡುವಿನ ಮಿಂಚ ರೇಖೆ

ಕಾಮನಬಿಲ್ಲಲಿ ಬಂಗಾರ ಹೊನ್ನಿನ ಬೆಳಕೆ! ||

ಅನಂತಯಾನ ಪರಿಭ್ರಮಣ

ಯಾಕೊ ಗಡಿಬಿಡಿಗಲ್ಲೆ ನಿಲ್ದಾಣ

ಹೊಯ್ದಾಟದ ನಡುವಿನ ಸುಖ ತಲ್ಲಣ

ಬಿಡಿಸುತಿದೆ ಚಿತ್ತಾರವದೇನನೊ ವಿಲಕ್ಷಣ ||

– ನಾಗೇಶ ಮೈಸೂರು

೧೯.೦೪.೨೦೧೮

01729. ಐಪಿಎಲ್* ಬಲಾಬಲ ಪರೀಕ್ಷೆ..!


01729. ಐಪಿಎಲ್* ಬಲಾಬಲ ಪರೀಕ್ಷೆ..!

_______________________________________

ಮೊಗಸಾಲೆಯಲ್ಲಿ ಬಲಾಬಲ

ತೋರಲಿಂದು ಸಿದ್ದತೆ ಸಕಲ

ಯಾರಿಗಿದೆ ಯಾರ ಬೆಂಬಲ ?

‘ಮುಗಿಸಪ್ಪ ಸಾಕು’ ಜನ ಹಂಬಲ! ||

ಗುಂಪಲಾರು ಇಹರೊ ಶಕುನಿ ?

ಅನುಮಾನ ಮಾಡುತಿದೆ ಖೂನಿ !

ಯಾರನ್ಯಾರು ನಂಬದಾ ತಂಡ

ಕಾಯಬೇಕು ಹಿಡಿದು ಉದ್ದಂಡ ! ||

ಸುವಿಹಾರಿ ಬಸ್ಸಿಗವರ ತುಂಬಿ

ಐಷಾರಾಮಿ ರಿಸಾರ್ಟಲಿ ದೊಂಬಿ

ಅಸುರಕ್ಷಿತ ಸಲ್ಲ ವಿಮಾನ ಯಾನ

ಬಿಡಬಾರದಲ್ಲ ಬಿಗಿ ಹಿಡಿತವನ್ನ ! ||

ಅಂತೂ ಇಂತೂ ಬದ್ಧ ರಣರಂಗಕೆ

ಸೈನ್ಯ ಸಮೇತ ಸಿದ್ಧ ಹೊಡೆದಾಟಕೆ

ಅಸ್ಪಷ್ಟ ಯಾರ ಮುಸುಕಲಿಹರಾರೊ?

ಕಡೆಗಳಿಗೆ ತನಕ ಗದ್ದಲವೆ ಜೋರೊ ||

ತೆರೆ ಬೀಳುವುದೊ? ಏಳುವುದೊ?

ತಂತ್ರ ಕುತಂತ್ರ ಏಮಾರುವುದೊ?

ಸತ್ಯ ಮೇವ ಜಯತೆ ಜನಮನದಾಸೆ

ಅತಂತ್ರ ತೀರ್ಪಫಲವ ಅನುಭವಿಸೆ! ||

– ನಾಗೇಶ ಮೈಸೂರು

೨೦.೦೫.೨೦೧೮

(* ಐಪಿಎಲ್ = ಇಂಡಿಯನ್ ಪೊಲಿಟಿಕಲ್ ಲೀಗ್)

(picture sources : adopted from news portals)

01728. ಪ್ರೇಮಿಗಳ ಭೇಟಿಗಿಲ್ಲ ಹೊತ್ತು ಗೊತ್ತು.. !


01728. ಪ್ರೇಮಿಗಳ ಭೇಟಿಗಿಲ್ಲ ಹೊತ್ತು ಗೊತ್ತು.. !

____________________________________________

ಯಾಕವಸರ ? ಯಾಕವಸರ ?

ಪದೆ ಪದೇ ನೋಡುವೆ ಗಡಿಯಾರ !

ಮಾಡಲೆಷ್ಟೊಂದಿದೆ ಸ್ವೈರ ವಿಹಾರ..

ಮಾತಾಡಲಿದೆ ಕಲ್ಪನೆಯಾಚೆ ದೂರ ! ||

ಬಿಡೆಯಾ ಕಿರಿಕಿರಿ? ಬಾರಿ ಬಾರಿ

ಹೇಳದೆ ಕೇಳದೆ ಬಂದ ಗುಟ್ಟ ಸವಾರಿ

ಮತ್ತೆ ಸುಳ್ಳು ಕಾರಣ ಹೇಳೆ ಅದುರಿ

ಬಡಿದುಕೊಂಡು ಎದೆಯಾಗಿದೆ ನಗಾರಿ ! ||

ಏನಾದರೊಂದು ನೆಪ ಹೇಳಿ ಮಣಿಸು

ಒಡೆಯಬೇಡ ಈ ಗಳಿಗೆ ಸುಂದರ ಕನಸು

ಹೀಗೆ ಬಂದು ಹಾಗೆ ಹೋಗೆ ಕೈ ತಿನಿಸು

ಬಾಯಿಗಿಲ್ಲದೆ ಹೋದರೆ ಮನಸೆ ಮುನಿಸು ||

ನೋಡಬೇಡ ಈ ಕ್ಷಣದ ಸೌಖ್ಯ ಕ್ಷಣಿಕ

ಚಿಂತಿಸೊಮ್ಮೆ ನಾಳೆಗು ಬೇಕಿಲ್ಲವೆ ಈ ಸುಖ ?

ಹೋಗಲೊಲ್ಲದ ಮನಸಹುದು ಕ್ಷುಲ್ಲಕ

ಎರವಾಗಬಾರದಲ್ಲವೆ ನಾಳೆಗಿಂದಿನ ಪುಳಕ ? ||

ನಾಳೆ ನಾಳೆಗಿರಲಿ ಇಂದಿನ ಮಾತಾಡು

ನಿಜ ಪ್ರೀತಿಯ ದಾರಿಗಿದೆ ನೂರಾರು ಜಾಡು

ಮರೆತೆಲ್ಲವ ಜತೆಗಿರಬಾರದೆ ಅರೆಗಳಿಗೆ ?

ಹಂಬಲಿಸಿದೆ ಜೀವ ನಿನಗೆ, ಲೆಕ್ಕಿಸದಿರೆ ಹೇಗೆ ? ||

ಇನ್ಹೇಗೆ ಹೇಳಲೊ ಕಾಣೆ, ನಿನಗರ್ಥವಾಗದಲ್ಲ

ಸರಿ, ಇನ್ನೈದೇ ನಿಮಿಷ ಮೀರಿ ನಾ ನಿಲ್ಲುವುದಿಲ್ಲ

ದೂಷಿಸೀಯಾ ಜೋಕೆ ಬರದಂತಾದರೆ ಮತ್ತೆ

ನಿನ್ನದೇ ಹೊಣೆ ಬಲವಂತದೆ ದಾಟಿಸಿರುವೆ ಸಂಹಿತೆ ||

ಐದಾಗಿ ಐವತ್ತು ಪ್ರೇಮಿಗಳದೇನೊ ಜಗತ್ತು

ಕೊನೆಗೇನೊ ಕಾರಣ ಹುಡುಕೆ ಚತುರ ಕಸರತ್ತು

ಸುಳ್ಳ ಮನೆ ದೇವರಾಗಿಸೆ ಇದುವೆ ತರಬೇತಿ

ಸರಿ ತಪ್ಪು ಜಿಜ್ಞಾಸೆ ಕಂಗೆಡಿಸಿಯೂ ಬಿಡದಲ್ಲ ಪ್ರೀತಿ! ||

– ನಾಗೇಶ ಮೈಸೂರು

೧೭.೦೫.೨೦೧೮

(Picture source: internet / social media)

01727. ಇಣುಕು ನೋಟದ ಹಿಂದೆ


01727.

__________________________________

ಇಣುಕು ನೋಟದ ಭಾಷೆ

ಸಂವಹನ ನೂರಾಸೆ ವರಸೆ

ನೀ ಓದಬಲ್ಲೆಯ ಮರುಳೆ ?

ಧೀರನ ಕಾದಿಹಳು ತರಳೆ ||

ಅರೆನೋಟದಲಿಹ ಭಾವ

ಕಣ್ಮುಚ್ಚಿದ ಬೆಕ್ಕಿನ ಹಾಲು

ತುಂಬಿಕೊಳಲಪರಿಚಿತನ

ಮುಂದೊಂದಾಗಿಸೆ ಕಲ್ಯಾಣ ||

ಸೆಳೆಯುವಸ್ತ್ರವದಾ ಬೆರಗು

ರಂಗುರಂಗಿನೊಡ ಮೆರುಗು

ಒಡವೆ ವಸ್ತ್ರ ಬಿನ್ನಾಣ ಖುದ್ಧು

ನೋಡಲ್ಹವಣಿಸುತಿಹೆ ಕದ್ದು ||

ನೋಡುವನೇನು ಒಳಹೊಕ್ಕು?

ಅಂತರಾಳದಲಡಗಿಹ ಬೆಳಕು

ಕಾಣುವರ್ಧವೆ ಹೊರಗೆ ಅವ್ಯಕ್ತ

ಕಾಣದರ್ಧನಾರಿಶ್ವರಿ ಸಂಯುಕ್ತ ||

ಕಣ್ಣು ತುಟಿ ಮೂಗು ಗಲ್ಲವೆಣಿಸಿ

ನಲ್ಲನಾಗುವೆನೆನದಿರು ಇನಿಯ

ನಲ್ಲೆಯೊಡಲಾಳದ ಕವಿತೆಯ

ಓದಬಲ್ಲವನಾದರೆ ಸಹನೀಯ ||

– ನಾಗೇಶ ಮೈಸೂರು

೦೪.೦೫.೨೦೧೮

(Picture source: internet / social media / FB friends)

01726. ಚುನಾವಣಾ ಪುರಾಣ..


01726. ಚುನಾವಣಾ ಪುರಾಣ..

___________________________

ನಮ್ಮ ಚುನಾವಣೆಗಳ ಜಾತಕ

ಬರೆವವನವ ಪ್ರಳಯಾಂತಕ

ಪಟ್ಟುಗಳೆಲ್ಲ ಕರತಲಾಮಲಕ

ಕೊನೆಗನಿಸಿದ್ದೆಲ್ಲ ತಳ್ಕಂಬಳಕ ! ||

ಜೋತಿಷಿ ಪಂಡಿತ ಲೆಕ್ಕಾಚಾರ

ಜಾತಿಮತಧರ್ಮ ಸಮಾಚಾರ

ಕೂಡು ಕಳಿ ಗುಣಿಸೂ ಭಾಗಿಸು

ಸಮೀಕ್ಷೆಯಲಿ ಭವಿತ ಊಹಿಸು ||

ಪ್ರಚಾರದಲೆಲ್ಲಾ ಕುಯುಕ್ತಿ ಪಟ್ಟು

ಆರೋಪ ದೂಷಣೆ ಗೆಲ್ಲಲೆ ಜುಟ್ಟು

ಯಾರ ಕಾಲ್ಯಾರೆಳೆದರೊ ಭರಾಟೆ

ವೇದಿಕೆ ಭಾಷಣ ಮಾತಲೆ ತರಾಟೆ ||

ಕೊನೆಗವನೇ ಮತದಾರ ಪ್ರಭುವೆ

ಮತ ಹಾಕುತ ದ್ವಂದ್ವಗಳ ನಡುವೆ

ಆಸೆ ಆಮಿಷ ನೈತಿಕಾನೈತಿಕ ಗುದ್ಧಿ

ಆ ಗಳಿಗೆಯಲಿ ತೋಚಿದಂತೆ ಬುದ್ಧಿ ||

ಮಾಡಲಿಲ್ಲವಲ್ಲ ಯಾರಿಗು ನಿರಾಶೆ

ಪೂರೈಸುತ ಅವರವರ ಅಭಿಲಾಷೆ

ಒಬ್ಬಗೆ ಬಹುಮತ ಮತ್ತೊಬ್ಬ ಮಂತ್ರಿ

ಮಗದೊಬ್ಬಗಾಯ್ತು ಅಧಿಕಾರ ಖಾತ್ರಿ ||

ವಿಶಾಲ ಹೃದಯಿ ಕನ್ನಡಿಗನೇ ಸಹೃದಯಿ

ಮೆಚ್ಚಿಸಿದನೆಲ್ಲರ ತಾನಾದರು ಬಡಪಾಯಿ

ಶುರು ಯಾದವೀ ಕಲಹ ಕಚ್ಚಾಟ ಹುಚ್ಚಾಟ

ಯಾರ ಗೆಲುವೊ ಕೊನೆಗೆ ಅತಂತ್ರ ಕೂಟ ||

ನೀತಿ ಅನೀತಿ ನೈತಿಕಾನೈತಿಕ ಹೋರಾಟ

ಬಲಾಬಲ ಚಪಲ ದೇಶೋನ್ನತಿ ಮಾತಾಟ

ಕಲಸುಮೇಲೋಗರ ಅಲ್ಲೋಲಾ ಕಲ್ಲೊಲ್ಲ

ಚಂಚಲತೆಯಲ್ಲೂ ಪ್ರಜಾಪ್ರಭುತ್ವ ಅಚಲ! ||

– ನಾಗೇಶ ಮೈಸೂರು

೧೬.೦೫.೨೦೧೮

(Picture source: internet / social media / news portals)

01725. ಸಹಚರ..


01725. ಸಹಚರ..

_________________________________

‘ಇದೇ ದಾರಿ ತಾನೆ?’ ನಾನು ಕೇಳಿದೆ

ನಕ್ಕನವ ತಲೆಯಾಡಿಸುತ…

ಹೌದೊ, ಅಲ್ಲವೊ ಗೊತ್ತಾಗದ ರೀತಿಯಲ್ಲಿ;

‘ಎಡಕೊ? ಬಲಕೊ? ನೇರಕೊ?’ ನಾ ಬಿಡಲಿಲ್ಲ.

ಮತ್ತೆ ನಕ್ಕನದೇ ತಲೆಯಾಟ ಸೊಗದಲಿ..

‘ಹೋಗಲಿ ಹೇಳು ನಡಿಗೆ ಹಿಂದಕೊ? ಮುಂದಕೊ?’

ಮತ್ತದೆ ಮಂತ್ರಮುಗ್ಧ ನಗು, ಮಾತಿಲ್ಲ..

‘ಸರಿಯಪ್ಪ ದೊರೆ, ನಡೆಯಲೆ, ಓಡಲೆ ಹೇಳು‘

ಆಸಾಮಿ ಕಿಲಾಡಿ – ಮತ್ತದೆ ನಗೆಯಾಟ..

‘ನಡೆಯಲೇನು ಒಬ್ಬನೆ? ಯಾರೊ ಜತೆಗಿರಬೇಕೇನು?’

ಈ ಬಾರಿ ಮಾತ್ರ ಮೌನದೆ ನನ್ನೆ ದಿಟ್ಟಿಸಿದ..

ಕಿರುನಗೆಯ ಬದಲು ಆತಂಕದ ಗೆರೆಯಿತ್ತು..

ಮತ್ತೇನು ತೋಚದೆ ಹೊರಟೆ ನಮಿಸುತ್ತ

ಮನದಲೆ ನೂರೆಂಟು ಬಾರಿ ಶಪಿಸುತ್ತ

ಹೆಜ್ಜೆಯೆತ್ತಿಕ್ಕುತ ಅದೆ ಜಿಜ್ಞಾಸೆಯಲಿ ನಡೆದೆ

ಮನ ತೋಚಿದತ್ತ ನಡೆದರೂ ಅಯೋಮಯ

ಆತಂಕ ತುಂಬಿದೆದೆಯಲೇನೊ ಭಾರ..

ಯಾರೊ ಕರೆದಂತಾಯ್ತು..

ತಿರುಗಿ ನೋಡಿದರವನೆ ನಗುತಿದ್ದ

‘ಯಾವ ದಾರಿಯಾದರೂ ಹಿಡಿ, ಯಾವ ದಿಕ್ಕಿಗಾದರು ಸರಿ..

ಹಿಂದೆ,ಮುಂದೆ ಹೇಗಾದರು ನಡೆ, ಓಡು..

ಮರೆಯದಿರು ನೀನೆಂದು ಏಕಾಂಗಿಯಲ್ಲ

ನಿನ್ನ ಜತೆಗಿರುವೆ ನಾನು ಹಿಂದೆ, ಇಂದೂ, ಮುಂದೆ..’

ತಟ್ಟನೆ ಮಾಯವಾಗಿಬಿಟ್ಟ ಮಾಯಾವಿ

ನನ್ನೊಳಗೇನೊ ಹೊಕ್ಕಂತೆ ಅನುಭೂತಿ..

ಮತ್ತೆ ನಡೆದೆ ದಿಕ್ಕು ದೆಸೆ ಯೋಚಿಸದೆ..

ಏನಿರಬಹುದವನ ಮಾತಿನರ್ಥ ಮಥಿಸುತ್ತ!

– ನಾಗೇಶ ಮೈಸೂರು

೧೫.೦೫.೨೦೧೮

(Picture source : https://goo.gl/images/CxAA9C)

01724. ಹೆಣ್ಣ ನೋಡೆ ಬಂದನಲ್ಲ..!


01724. ಹೆಣ್ಣ ನೋಡೆ ಬಂದನಲ್ಲ..!

____________________________

ನೋಡಲು ಬಂದವನೆ

ಹೆಣ್ಣ ನೋಡಲು ಬಂದವನೆ

ನೋಡಲೆಂತೆ ನಾ ತಗ್ಗಿಸೆ ಶಿರವ ?

ಕದ್ದು ನೋಡಿದರು ಮಬ್ಬಾಗಿ ಕಾಣುವ ||

ಸೂಟುಬೂಟಲಿ ಠಾಕುಠೀಕು

ಗತ್ತಿನಪ್ಪ ಅಮ್ಮನ ಜತೆಗೆ ನಾಕು

ಸುರ ಸುಂದರಾಂಗ ಚಿಗುರು ಮೀಸೆ

ನನ್ನ ನೋಡಬಂದ ಮೊಗ ನೋಡುವಾಸೆ ||

ಹೆಬ್ಬಾಗಿಲ ಹಾದು ಅಂಗಳ ದಾಟಿ

ಬಂದು ಕೂತನಲ್ಲ ಸಿನಿಮೀಯ ಧಾಟಿ

ಅಡಿಗೆ ಮನೆಯ ಕಿಟಕಿಯಲಿ ಇಣುಕಾಟ

ಕಾಣಲೊಲ್ಲನವ ಬೆನ್ನು ಹಾಕಿ ಕೂತಾ ನಗುತ ||

ನಡುಗಿತ್ತಲ್ಲೆ ಕಾಲ ಹೆಜ್ಜೆ ನಡಿಗೆ

ಗಮನವೆಲ್ಲ ಹಾಲ ಲೋಟದೆಡೆಗೆ

ನೋಡಲೆಲ್ಲಿ ಧೈರ್ಯ ಕೊಟ್ಟಿದ್ದೆ ಅರಿಯೆ

ಹೇಗೋ ನೋಡಿದ್ದು ಕಂಡದ್ದು ಅರೆಬರೆಯೆ! ||

ಈ ಬಾಗಿಲಿಂದೀಗ ಕಾದಿಹೆನು ಇಣುಕೆ

ಹೊರಟವನ ಗುಟ್ಟಲಿ ಕಾಣುವ ಹವಣಿಕೆ

ನಿಂತೆ ತುದಿಗಾಲಲಿ ಕಾತರದ ಚಂದ್ರಮುಖಿ

ಎದೆಯ ಕುತೂಹಲ ತಣಿದಾಗ, ನಿರ್ಧಾರ ಬಾಕಿ! ||

– ನಾಗೇಶ ಮೈಸೂರು

೧೩.೦೫.೨೦೧೮

(Picture source : internet / social media received via Bhaskaraks Ksbhaskara – thank you 🙏👍😊💐🌹)

01723. ನೋಡು ಪುಟಿದೇಳುವೆನು


01723. ನೋಡು ಪುಟಿದೇಳುವೆನು

_________________________

ನೋಡು ಪುಟಿದೇಳುವೆನು

ನಿನ್ನಾ ಹೆಸರ ನೆರಳಲೆ ನಾನು

ನೀನಲ್ಲವೆ ಅಂತರ್ದರ್ಪಣ ಚತುರ ?

ಕಾಣಿಸುವೆ ನನ್ನೊಳಗಿನದೆ ಆಕಾರ ||

ತಪ್ಪಾಗಿಹೋಯಿತು ನೋಡು

ನಿನ್ನೆಯ ತನಕ ಹಿಡಿದ ಜಾಡು

ನನ್ನೆ ದುರ್ಬಲನಾಗಿಸುತ ನಡೆದೆ

ಮಂಕು ಹಿಡಿಸುತ ನನ್ನನ್ನೆ ಕಡೆದೆ ||

ಧುತ್ತೆಂದೆದುರಾಯ್ತೊಂದು ಸತ್ಯ

ಅನಿಸಿದ್ದೆಲ್ಲ ನಿಜವಾಗುತ ಪ್ರತಿನಿತ್ಯ

ಏನೇನೊ ಭೀತಿ ಹೆದರಿಕೆ ಕಲ್ಪಿತವೆ

ನೈಜದ ದಿರುಸುಟ್ಟು ಕಾಡೆ ಬಂದಿವೆ ||

ಅನಿಸಿರಲಿಲ್ಲ ಎದ್ದು ನಿಲ್ಲುವ ಹಂಬಲ

ಅನಿಸಿದ್ದರು ಬದಿಗೊತ್ತಿ ಮನ ಖೂಳ

ಬಹುಮತವಿಲ್ಲದೆ ನಡೆದೀತೆ ಆಡಳಿತ ?

ಕೈಯಲಿದೆ ಹಿಡಿದು ನಾವ್ಬೆನ್ನಟ್ಟುವ ಪಥ ||

ನಿರ್ಧರಿಸಿದೆನಿಂದು ನಡೆಸುವೆ ನಡಿಗೆ

ಹೆಜ್ಜೆಯೊ ಓಟವೊ ಲೆಕ್ಕಿಸದೆ ಅಡಿಗಡಿಗೆ

ಉರುಳಿಸುವೆನು ಉದ್ದಿನಮೂಟೆ ಅವನೆಡೆಗೆ

ತಪ್ಪಿದ ದಾರಿಗೆ ದಿಕ್ಕುತಪ್ಪಿಸಿ ಸರಿಯ ಕಡೆಗೆ ||

– ನಾಗೇಶ ಮೈಸೂರು

೧೧.೦೫.೨೦೧೮

(Picture source: wiktionary)

01722. ಅಮ್ಮಾ…


01722. ಅಮ್ಮಾ…

___________________

ಅಮ್ಮನ ಮನ

ಅಂಬರ ಕಣ

ಅಮೇಯ ಋಣ

ಅಮ್ಮಾ ನಮನ! ||

ಅಮ್ಮನಿಗೆ ದಿನ

ನಾಚುತಿದೆ ಮನ

ಬೇಡವೆ ದಿನ ದಿನ ?

ಸಾಕೇ ಒಂದೇ ದಿನ ||

ಅದು ಹೆತ್ತ ಕರುಳು

ಈಗರುಳುಮರುಳು

ವಯಸಾಗುವ ಗೋಳು

ಅದಕಾಸರೆ ಜತೆ ಗೀಳು ||

ಅವಿಭಕ್ತ ಕುಟುಂಬ

ವಿಭಜನೆ ಪ್ರಾರಂಭ

ಯಾರಮ್ಮ ಯಾರಪ್ಪ ?

ಬಂಧಗಳೇ ಬಿಸಿ ತುಪ್ಪ ||

ಅಮ್ಮನ ದಿನ

ಕ್ರೋಧ ದ್ವಿಗುಣ

ಮಾಡಲಾಗದ ನೂರಣ್ಣ

ಅದ ಕೇಳುವವರಾರಣ್ಣ ?

ಖೇದವ ಬಿಡು ತಾಯೆ

ಇದು ಜೀವನ ಮಾಯೆ

ನೆಲೆ ಕಾಣೆ ನಿನ್ನಾ ಕುಡಿ

ತೆರುವ ಕರವಿ ಗಡಿಬಿಡಿ ||

ಆದರು ಅನಿವಾರ್ಯ

ನಿಭಾಯಿಸಲೆ ಕರ್ತವ್ಯ

ನಿನ್ನ ದಿನವಿರೆ ಶುಭಕರ

ತುಸು ನೆಮ್ಮದಿ ಸಾಕಾರ ||

– ನಾಗೇಶ ಮೈಸೂರು

೧೨.೦೫.೨೦೧೮

(Picture source : internet / social media)

01721. ನೀ ಚಾಟಿ, ನಾ ಬುಗುರಿ..


01721. ನೀ ಚಾಟಿ, ನಾ ಬುಗುರಿ..

__________________________________________

ನಗಿಸಿ ಮರೆಸಯ್ಯ ದುಃಖ

ಅಳಿಸುವುದೇ ನಿನ್ನ ಹಕ್ಕಾ?

ಅಳಿಸಿದರೇನು ಅತ್ತೇನೆ ?

ಜಿಗಿದೇಳುವೆ ನನಗೆ ನಾನೆ ! ||

ನೀ ಸುರಿಸೋ ಮಳೆಯಲ್ಲು

ಕಾಮನ ಬಿಲ್ಲಿನ ಕಮಾನು

ತೋಯುವೆ ಜಳಕದ ಹಾಗೆ

ಕೊಚ್ಚಿಹೋಗುವ ಹುಚ್ಚ ನಾನಲ್ಲ ||

ಚಾಟಿಯಿದೆಯಂದು ನಿನ ಕೈಲಿ

ಬುಗುರಿ ನನ್ನಾಡಿಸುವೆ ಕುಣಿಸಿ

ತಲೆ ಸುತ್ತಿ ಬೀಳುವತನಕ ಬಿಡೆ

ಸುತ್ತುವೆ ನಿನ್ನಾಜ್ಞೆ ಧಿಕ್ಕರಿಸುತ್ತ ||

ಸೋತು ಬಿದ್ದರು ಬಿಡದೆ ಎತ್ತಿ

ಮತ್ತೆ ಸುತ್ತಿ ಆಡಿಸುವೆ ಹೊಸತು

ಸೊರಗಿದರು ಬಿಡದೆ ಸೊರಗಿಸೊ

ನಿನ್ನಾಟವನರಿತೂ ಸುತ್ತುವೆನು ||

ನಗುವೆ ನಿನ್ನಂತೆ ಆಡಿ ಬಿದ್ದರು

ಸಂತಸವೆ ಅತ್ತು ಕೊರಗಿದರು ?

ಗೊತ್ತಾಗದೊ ನಿನ್ನಾ ಹವಣಿಕೆ

ಎಣಿಸದೆ ಗಣಿಸದೆ ನಾ ಸುತ್ತಿರುವೆ ! ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: wiktionary)

01720. ಚುನಾವಣೆ ಮಳೆ


01720. ಚುನಾವಣೆ ಮಳೆ

______________________

ಕಾವೇರಿದ ಚುನಾವಣೆಯ

ತಣಿಸಬಹುದೆ ಮಳೆರಾಣಿ ?

ಹರ್ಷಕೊ ಖೇದಕೊ ಸುರಿದು

ಮೀರದೆ ನೀತಿಯ ಸರಹದ್ದು ||

ಮಳೆಯಾಗಬಾರದು ದಿನವೆಲ್ಲ

ಮತದಾನಕು ಬಿಡದಾ ಹಾಗೆ

ಬಿಡುವಿತ್ತ ಹೊತ್ತಲಿ ಚಲಾವಣೆ

ನಿನ್ನೆ ಚಲಾಯಿಸಿಕೊ ತರುವಾಯ ||

ಯಾರಿಗಾದರು ಹಾಕಲಿ ಓಟು

ಆಯ್ದು ಸರಿಯಾದ ಹುರಿಯಾಳ

ನೋಯುವ ಸಂತಾಪ ಬೇಡ

ಜರಡಿಯಾಡೀಗಲೆ ಎಳ್ಳುಜೊಳ್ಳು ||

ಮುಗಿದೆಲ್ಲ ಭಾಷಣ ಕೂಗಾಟ ಸ್ತಬ್ಧ

ವಿರಮಿಸು ಚಿಂತನೆಯಲಿ ತೆರೆದು

ಆಮಿಷಗಳಿಲ್ಲದ ಆಯ್ಕೆಯ ಹಾದಿ

ನಾಂದಿ ಸ್ವಚ್ಚತೆ ಅಭಿಯಾನ ಸಿದ್ಧ ||

ಚುನಾವಣೆ ನಾವೆ ನಡೆಸಿ ನಾವ್ನಾವೆ

ಚುನಾಯಿಸೋಣ ಭವಿತಕೆ ಮೇನೆ

ಮಳೆಯಾದರು ತೊಳೆಯಲಿ ಕಲ್ಮಷ

ಬಿಸಿಲ ಬೆವರಾದರು ಹರಿದು ಸಾರ್ಥಕ ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: Wikipedia)

01719. ಚೋರಾಗ್ರೇಸರ ಕವಿ! (ವೃತ್ತಿ ಧರ್ಮ)


01719. ಚೋರಾಗ್ರೇಸರ ಕವಿ! (ವೃತ್ತಿ ಧರ್ಮ)

_______________________________________

ಕವಿಯ ಮೀರಿಸಿದ ಚೋರರಿನ್ನಾರಿಹರು?

ತನ್ನ ಮನಸನೂ ಬಿಡದ ಚೋರಾಗ್ರೇಸರ

ಅಕ್ಕನ ಸರವನು ಬಿಡದಕ್ಕಸಾಲಿ ಹಾಗೆ

ಆಳದಲೊಕ್ಕು ಪದ ಕದಿವ ವೃತ್ತಿಧರ್ಮ ! ||

ನೋಡಲಾಗದ ತನ್ನಾಳವ ಬಿಡದೆ ಸೋಸಿ

ತನ್ನದೇ ಸಿದ್ದಾಂತ ತತ್ವಗಳ ಕಸಿಯೆರಚಿ

ತೆಗಳಿಯೊ ಹೊಗಳಿಯೊ ರಗಳೆ ರಂಪಾಟ

ಪದದರಿವೆ ಹೊದಿಸಿ ಕೈತೊಳೆದುಬಿಡುವ ! ||

ತನ್ನದೆ ಮಾಲು ಬೇಸತ್ತಾಗ ಪರದಾಟ ಕಾಲ

ಚಡಪಡಿಸುತಾ ಹುಡುಕಿ ಸ್ಪೂರ್ತಿಗೆ ಮೂಲ

ಇಣುಕಲ್ಲಿಲ್ಲಿ ಅವರಿವರ ಅಂತರಾಳದ ಬಣ್ಣ

ಅವರಿಗೂ ಕಾಣದ್ದ ಕದ್ದು ಕವಿತೆಯಾಗಿಸಿಬಿಟ್ಟ ! ||

ಪ್ರೇಮಿ ಮನಸ ಕದಿವ ತಾತ್ಕಲಿಕ ಕವಿ ನೂರು

ಕವಿಗಳಂತೆ ಭಾವದ ಮೇನೆ ಕದಿವಾ ಜರೂರು

ಯಾರದಿಲ್ಲ ತಕರಾರು ಕದ್ದದ್ದನೆ ಕದಿಯೆ ಮತ್ತೆ

ಮತ್ತೆ ಬರೆವದೆ ಸರಕು ಹಳೆಮದ್ಯ ಹೊಸಶೀಷೆ ! ||

ಕವಿ ಸಂಭಾವಿತ ಕಳ್ಳ ಕದ್ದು ನಗಿಸೆ ಒಮ್ಮೊಮ್ಮೆ

ಕಣ್ಣೀರ ಹಾಕಿಸುವ ಗೋಳ ಸರದಾರನ ಜಾಣ್ಮೆ

ಕಲಿವ ಕಲಿಸುವ ಸಭ್ಯ, ಹಗರಣಕೆಳೆವ ಅವಜ್ಞ

ಕದ್ದಾದ ಬುದ್ಧಿಗೆ ಭಾವಿಸದಿರಲಿ ಕವಿ ಸರ್ವಜ್ಞ ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: internet / social media)

01718. ಪಥದಲವಳ ಹೆಜ್ಜೆ ಗುರುತು..


01718. ಪಥದಲವಳ ಹೆಜ್ಜೆ ಗುರುತು..

_________________________________

ಹರೆಯದ ಚಿಗುರಲಿ ಪ್ರೀತಿಯ ಕನಸ

ಸಸಿಯ ಮೊಟ್ಟ ಮೊದಲು ಚಿಗುರಿಸಿದಳವಳು

ಮುರುಟಬಿಡದೆ ತೊಟ್ಟು ತೊಟ್ಟೆ ಹನಿಸಿದವಳು;

ಅವಳಿದ್ದಳೊಂದು ಸುಂದರ ಕಾವ್ಯದಂತೆ ||

ಇದ್ದಳೆನ್ನುವ ಭೂತಕಾಲದಾಲಾಪ ವಿಚಿತ್ರ

ಪ್ರಸ್ತುತದ ನೆನಪಲ್ಲವೆ ಇನ್ನೂ ಇರುವಿಕೆಯ ಸಾಕ್ಷಿ ?

ಅದೇ ಮಹಾಕಾವ್ಯವಿಂದು ಕವಿತೆಗಳಾಗಿ ಒಸರುತ

ಹನಿಮಳೆ ಸದ್ದು ಜೀವಂತ ಚಿಗುರಿಸಿ ಹೊಸತ ||

ಇದ್ದಳೊ ಬಿಟ್ಟಳೊ ಅನುಮಾನ ಅನಂತ

ಶಂಕೆಗಳಾಚೆಯ ಅಂತರಂಗಕೆಲ್ಲಿತ್ತಲ್ಲಿ ಹೊಲಬು ?

ಎಡಬಿಡದೆ ಕಾಡುವ ಚಿತ್ರವಾಗುಳಿದಳಲ್ಲಿ ಉತ್ತರ

ಮಾಸಿದರು ಚಿತ್ತಾರದ ವೈಭವ ಸಮೃದ್ಧ ||

ಕೂಡುದಾರಿಗಳಿತ್ತನೇಕ ಬಾರಿಬಾರಿ ದಾಟಿ

ಹಾದುಹೋದವದೆಷ್ಟೊ ಮುಗುಳುನಗೆ ಆಪ್ಯಾಯ

ಹಠಮಾರಿ ಅಲೆಮಾರಿ ಬಿಗುಮಾನ ಮೌನದ ಬೀಗ

ಸಂಧಿಸಿದ ಬಿಂದು ಚೆದುರೆಲ್ಲೊ ಪ್ರತಿಫಲನ ||

ಉರುಳಿಹೋದವದೆಷ್ಟೊ ಸಾಲುಮರಗಳಡಿ

ನೆರಳಾಗಿ ಹೋದಳು ತಂಪಿತ್ತರು ಕೈಗೆ ಸಿಗದಂತೆ

ಎದುರಾಗುತ್ತಾಳೀಗಲು ಪಥದೆ ಜಾತ್ರೆ ರಥದಂತೆ

ಎಸೆದುತ್ತತ್ತಿ ತಲೆಬಾಗಿ ನಮಿಸಿ ಸರಿವೆ ನಕ್ಕು ||

– ನಾಗೇಶ ಮೈಸೂರು

೧೦.೦೫.೨೦೧೮

(Picture source : internet / social media via FB friends)

01717. ಕವನ ಚೋರರಿಗೆ..


01717. ಕವನ ಚೋರರಿಗೆ..

___________________________

ಕವಿತೆ ಕದಿಯುವ ಕಳ್ಳ

ನಿನಗೆಂದೇ ಬರೆದ ಕವಿತೆ

ಕದ್ದು ಬಿಡು ಮನಸಾರೆ

ಸದ್ದು ಮಾಡದೆ ಕನಸಂತೆ ! ||

ಕದ್ದ ಮಾಲಾದರೇನು ಬಿಡು

ಘಮಘಮಿಸುತಿದೆ ಸುಗಂಧ

ಚಂದದ ಕೂಸ ಮುದ್ದಿಸಲು

ಯಾರಾದರೇನು ಎತ್ತಾಡಿಸೆ ||

ಕದಿಯುವುದಿಲ್ಲವೆ ಮನಸನು ?

ಬರೆಯುವುದಿಲ್ಲವೆ ಹೆಸರಲ್ಲಿ ?

ಮಾಡದಿರಲೇನಂತೆ ಒಲವ ಸಹಿ

ಕಡೆಗಣಿಸಿದರಾಯ್ತು ಕದ್ದ ಕಸಿವಿಸಿ ||

ಕದ್ದ ಮೇಲಧಿಕಾರ ಕದ್ದವನದೆ…

ಗಣಿಕೆ ತನ್ನವಳು ತೆತ್ತಷ್ಟು ಹೊತ್ತಿಗೆ

ಮನಸಾಕ್ಷಿ ಅತ್ಮಾಭಿಮಾನ ಸವಕಲು

ಕೆಟ್ಟರು ಸುಖಪಡಬೇಕು ಈ ಯುಗದೆ ||

ಕದ್ದವ ಕವಿತೆಗೆ ಕೊಡುವ ಪ್ರಚಾರ

ತನ್ನದೆ ಬಸಿರೆನುವಷ್ಟು ಕಕ್ಕುಲತೆ

ಸಾಕುತಾಯ್ತಂದೆಯೆನುವಭಿಮಾನ

ತನ್ನದೆ ಹೆಸರನಲ್ಲಿಕ್ಕುವ ಅಪ್ಯಾಯತೆ ||

ತೆರುವುದೇನವನೇನೆಂದೆಣಿಸದಿರಿ

ಕರ್ಮದ ಲೆಕ್ಕದಲೆಲ್ಲಾ ಸಂದಾಯ

ಅಪಮಾನ ಕೀಳರಿಮೆ ಕಾಡದವರ

ಕಾಡಲಿಹುದೇನೊ ಕಾಣದ ಕೈವಾಡ ||

ಕವನ ಚೋರರಿಗೊಂದು ನಮನ

ಅರಿವಿರಲಿಲ್ಲ ನಮದೇ ಮೌಲ್ಯ !

ಕದಿಯುವಷ್ಟು ಚಂದದ ಸರಕು

ಬರೆವ ನೈಪುಣ್ಯ ಗಳಿಸಿದ ಖುಷಿ ! ||

– ನಾಗೇಶ ಮೈಸೂರು

೧೦.೦೫.೨೦೧೮

(Picture credit / source: https://goo.gl/images/Akffa8)

01716. ಏನೆಂದು ಹೆಸರಿಡಲಿ?


01716. ಏನೆಂದು ಹೆಸರಿಡಲಿ?

__________________________________

ಎಂಥಾ ಕೆಳೆತನವಿದು ಗೆಳೆಯ

ಬಾಲ್ಯದ ಸಖಿ ನೆನಪಿದೆಯಾ ?

ಎಂಥಾ ಮುದವಿತ್ತೊ ಹುರುಪು..

ಒಂದೇ ಹರೆಯ ನೆರೆಹೊರೆಗಿತ್ತು.. ! ||

ಥೂ! ನಾಚಿಕೆಯಿಲ್ಲದ ಹುಡುಗ

ಕುಂಟಾಬಿಲ್ಲೆ ಜತೆಗಾಡಿದ ಗುಗ್ಗು..

ಗೋಲಿಯಾಡದೆ ಹುಡುಗರ ಜತೆ

ಚೌಕಾಭಾರಕೆ ಛೇಡಿಕೆ ಲೆಕ್ಕಿಸದೆ ! ||

ತಲೆ ಬಾಚಿ ಹೂಮುಡಿಸಿ ನಟಿಕೆ

ತೆಗೆವಜ್ಜಿಯೂ ಆದ ರಸ ಗಳಿಗೆ

ಕೊಡದಲಿ ಹೊತ್ತೆ ನೀರೆನಗಾಗಿ

ಎಡಬಿಡದೆ ಜತೆ ನಿಂತೆ ನೆರಳಾಗಿ ||

ತಲೆಗ್ಹತ್ತದ ಲೆಕ್ಕಕೆ ನಿನ್ನ ಪಾಠ

ನಿನಗೊಗ್ಗದ ವಿಜ್ಞಾನ ನನ್ನಾಟ

ನಿದಿರಿಸಬಿಡದೆ ತಲೆಗೆ ಬಡಿದೆ

ಪುಸ್ತಕ ಬದನೆ ಆಗಲು ಬಿಡದೆ.. ||

ಹೊರಗಡಿಯಿಟ್ಟೆಡೆ ಕಾವಲಂತೆ

ಕಾದೆಯಲ್ಲ ಬಲ ಭೀಮನಂತೆ

ಕಿರಾಣಿಯಂಗಡಿ ದಿನಸಿ ಸಂತೆ

ಪಟ್ಟಣದೆ ಬರೆದ ಪರೀಕ್ಷೆಗು ಜತೆ ! ||

ಗೆಳತಿಯರ ಕಣ್ಣ ಈರ್ಷೆಗೆ ಮೂಲ

ಯಾರಿಗಿಲ್ಲದ ಕೆಳೆ ಹಿರಿಮೆ ಗರಿಮೆ

ಅತ್ತಾಗ ಸಂತೈಸಿ ನಕ್ಕಾಗ ಜೊತೆಗೆ

ಹೆತ್ತವರಿಗಿಂತ ಹತ್ತಿರದ ನಂಟಿನವ ||

ನಿನ್ನೊಡನೆ ಹೊರಡೆ ಅಪ್ಪನ ಒಪ್ಪಿಗೆ

ನೀನಿರೆ ಜೊತೆಗೆ ಅಮ್ಮನಿಗು ನಿರಾಳ

ನೀನಾವ ಜನುಮದ ಬಂಧುವೊ ಕಾಣೆ

ಜಗಳ ತುಂಟಾಟ ದಿನನಿತ್ಯ ಸಿಹಿ ಬೇನೆ ||

ಬಾಳ ಗೆಳೆಯನನ್ನು ನೀನೆ ಹುಡುಕಿದೆ

ನಿನ್ನಾ ಸಂಭ್ರಮದೆ ನಾ ಮೂಕವಿಸ್ಮಿತೆ

ನೀನಿರದ ಆ ಊರನೆಂತು ಉಹಿಸಲಿ ?

ಈಗದೇ ನೋವು ಹೇಳೆಂತು ನೀಸಲಿ ? ||

ಹೆಸರೇನಿಡಲ ಹೇಳು ಇಂಥಾ ಗೆಳೆತನಕೆ

ನಿನ್ನ ಕೆಳೆದಿ ನಾನೆಂಬ ಹೆಮ್ಮೆ ಸಡಗರಕೆ

ನೆನೆಸುವೆ ನಿನ್ನ ತುಟಿಯಂಚಲಿ ಕಿರುನಗುತ

ನಿರ್ಭೀತೆ ಹಳಿ ತಪ್ಪೆ ನೀನಿಹ ಭರವಸೆ ನನಗೆ ||

– ನಾಗೇಶ ಮೈಸೂರು

(೦೮.೦೫.೨೦೧೮)

(@ Manjunath Bansihalli ಕೋರಿಕೆಯನುಸಾರ ಬರೆದ ಕವಿತೆ; Picture Source : Internet / social media; Picture 2 received via Madhu Smitha ; Picture 3 received via Muddu Dear- thank you both 🙏😊👍💐🌷)

01715. ನೀಲಾಂಬರಿ


01715. ನೀಲಾಂಬರಿ

________________________

ನೀಲಾಂಬರಿ ಕಾದಂಬರಿ

ಅಂಬರ ಚುಂಬನ ದಾರಿ

ಅಗೋಚರ ಅಗಮ್ಯ ಕೊನೆ

ತುದಿ ಮೊದಲಿಲ್ಲದ ಗೊನೆ ||

ದಿಗ್ದಿಗಂತ ವಿಲಾಸ ಲಾಸ್ಯ

ನೀಲಮೂಲ ಅದೃಶ್ಯ ಭಾಷ್ಯ

ಮುಟ್ಟಲೆಲ್ಲ ವರ್ಣಹೀನ ಪಸೆ

ಬಂತೆಂತೊ ನೀಲಾವೃತ ದೆಸೆ ||

ಪದಕ ಉದಕ ವಿಸ್ತಾರ ಜಗ

ಚೆಂಡಾಟಿಕೆ ಕುಣಿಕೆ ಸೋಜಿಗ

ವ್ಯೂಹಾದ್ಭುತ ಬೃಹತ್ಸಮೂಹ

ತೇಲಲೆಂತೊ ಅತಿ ತಾರಾಗ್ರಹ ||

ಇರುಳ ಕರಾಳ ನಿಷಾರಾಣಿ

ತೇಪೆ ಹಚ್ಚಿದಂತೆ ಬಾನಗಣಿ

ನಿದಿರೆ ಹೊತ್ತು ನೀಲಾಂಬರಿಗೆ

ಕರಿಮುಸುಕಲು ಜಗಮಗ ನಗೆ ||

ಸಾದೃಶ್ಯದಲಿಹಳೆ ನೀಲಾಂಬರಿ

ಸ್ಪರ್ಷಾಸ್ಪರ್ಷ ಸಹಿ ಶ್ವೇತಾಂಬರಿ

ನೈಜದಲವಳುಡುಗೆ ದಿಗಂಬರಿ

ವಿಶ್ವಾತ್ಮಕವಳೆ ಅವರಣ ಕುಸುರಿ ||

– ನಾಗೇಶ ಮೈಸೂರು

೦೫.೦೫.೨೦೧೮

01714. ನಾಗರ ಹೆಡೆ, ತಿರುಗದೆ ನಡೆ!


01714. ನಾಗರ ಹೆಡೆ, ತಿರುಗದೆ ನಡೆ!

____________________________

ಅಡಿಯನಷ್ಟೆ ಮುಟ್ಟಲಿಲ್ಲ ಜಡೆ

ದಾಟಿ ಪಾದದತ್ತ ಹಾವಿನ ಹೆಡೆ !

ಶಿರದಲೊಂದು ತಳದಲೊಂದು

ಹೆಡೆಯೆತ್ತಿಹ ಸರ್ಪರಾಜ ಖುದ್ಧು ||

ಲೀಲಾಜಾಲ ಸುಲಲಿತ ಮೇನೆ

ಬೆನ್ನಾಟ ನೋಟ ಮಾಣಿಕ್ಯ ವೀಣೆ

ಕೇಶ ಧಾರೆ ತಂತಿಯಾಗಿ ನೀರೆ

ಪುಳಕವೆಬ್ಬಿಸಿ ಅವಳುಟ್ಟ ಸೀರೆ ||

ಲಾಲಿತ್ಯವದು ಚಂದದ ನಡಿಗೆ

ಕಳ್ಳಸೂರ್ಯನ ಕಾಂತಿ ಮುಡಿಗೆ

ಹೂವಿರದೆಡೆ ರವಿ ನಗುವ ತೊಟ್ಟ

ಮೈ ಕಾಂತಿ ಹೊಳಪಲಿ ಬಚ್ಚಿಟ್ಟ ||

ಕೆತ್ತಿ ಮಾಡಿದ ತನು ನೀಳಕಾಯ

ದಕ್ಕೆ ಪಾಲಿಗೆ ನಿತ್ಯ ಕವಿ ಸಮಯ

ಯಾರ ಮುಡಿಗೆ ಹೂವೊ ಮೊತ್ತ

ಕವಿಗೆ ಕಾವ್ಯ ಭಾವ ಸಂಚಲಿಸುತ್ತ ||

ಸೀರೆಯೊ ನೀರೆಯೊ ಶೈಲಿ ಗತ್ತು

ಕಾಣದ ಮೊಗವೆ ನಿಗೂಢ ಸುತ್ತು

ಮರೆಮಾಚಿತೆಲ್ಲ ಕುತೂಹಲ ನೋಡೆ

ಚಡಪಡಿಸಲಿ ಮನತಿರುಗದೆ ನೀ ನಡೆ ||

– ನಾಗೇಶ ಮೈಸೂರು

೦೬.೦೫.೨೦೧೮

(Picture source: internet / social media received via Prasanna Prasanna thank you sir🙏😊👍💐🌹)

01713. ಅತಿಶಯ ಸೌಂದರ್ಯ..


01713. ಅತಿಶಯ ಸೌಂದರ್ಯ..

______________________________

ಏನೀ ಬ್ರಹ್ಮನಾ ಕಲಾ ಕುಸುರಿ ?!

ಕಂಡವಳ ಸೊಬಗ, ಕಾವ್ಯವೆ ಪರಾರಿ !

ಪದಗಳೆ ಸಿಗದೆ ಮಾತು ಮರೆತು ಸ್ತಬ್ಧ

ಸುಮ್ಮನಿದ್ದುಬಿಡಿ ಅವಳ ಬಣ್ಣಿಸಲಿ ನಿಶಬ್ಧ ! ||

ತಿದ್ದಿ ತೀಡಿದ ಜೋಡಿ ಕಂಗಳ ಕೊಳ

ಪ್ರತಿಬಿಂಬವಾಗಿಸುತ ಬಂಧಿಸುವ ಜಾಲ

ಕಣ್ಣ ದೋಣಿಯಾಟ ಅಲ್ಲೋಲಕಲ್ಲೋಲ

ಜೀವಾವಧಿ ಶಿಕ್ಷೆ ನೆಟ್ಟ ನೋಟವದೆ ಕೋಳ ||

ಸಂಪಿಗೆ ಮೂಗಿನ ಕಥೆ ಕಡಿಮೆಯೇನಲ್ಲ

ಉಸಿರಾಟದ ನೆಪದೆ ತಪ್ಪಿಸುತಲಿದೆ ತಾಳ

ಉಸಿರಲುಸಿರಾಗಿ ಸೆರೆ ಬೆರೆತವಳ ಒಳಗೆ

ಉಸಿರಾಗುವ ಹುಚ್ಚಿಗೆ ದ್ವಾರಪಾಲರವರಾಗೆ ||

ಹವಳ ತೊಂಡೆ ಚೆಂದುಟಿ ಬಿರಿದು ಗಿಲಕಿ

ನಗೆಮಲ್ಲಿಗೆಯ ಸೊಗಡು ದಂತದಿಂದಿಣುಕಿಣುಕಿ

ಮಂದಹಾಸ ಗುಂಗಲಿ ಮೊಗವಾಗಿ ಪ್ರಪುಲ್ಲ

ರವಿ ನಯನ ಹಿಡಿದಿಡಲು ಪೂರ್ಣಚಂದ್ರ ಸಫಲ ||

ಗುಳಿ ಗಲ್ಲದ ಕೆನ್ನೆ ರಂಗಲೇನೊ ಮೆಲುಕು

ಮತ್ತೆ ಮತ್ತೆ ಮೂಡಿ ಮಾಯಾವಾಗುವ ಪಲುಕು

ಬಿದ್ದ ಗಳಿಗೆಯೆ ದಬ್ಬಿ ದೂಡುತಾಚೆಗೆ ಕಾಡಿ

ಹಗಲ ಬಾವಿಗೆ ಇರುಳಲಿ ಮರುಕಳಿಸಿ ಮೋಡಿ ||

ತೂಗಾಡಿ ಕಿವಿಯೋಲೆ ಲೋಲಾಕು ಸದ್ಧು

ಆಡುವಾ ಮಾತ ಸಂಗೀತವಾಗಿಸುವ ಸರಹದ್ದು

ಉಲಿದುಲಿವ ಇಂಚರ ಕರ್ಣಾನಂದ ಸಾರ

ಗಾನವಾಗವಳೊಳಗೆ ಹೊಕ್ಕಲ್ಲಿ ನೆಲೆ ಮನಸಾರ ||

ನಾಗವೇಣಿ ನಡಿಗೆ ಅಡಿ ಮುಟ್ಟೊ ಜಡೆಗೆ

ಉದ್ಯಾನದೆಲ್ಲಾ ಕುಸುಮ ಸಾಲದಲ್ಲ ಮುಡಿಗೆ

ಜೋತಾಡುತ ಜೊಂಪೆ ಮುಂಗುರಳ ಲೀಲೆ

ಅಣಕದೆ ಕೆಣಕುತಿದೆ ಯಾರಿಗೊಲಿವಳೊ ಬಾಲೆ ||

ನೀಳಕೊರಳ ಶಂಖ ಬೆಡಗಿನಲಿ ಬಿನ್ನಾಣ

ರಾಜಮಾರ್ಗ ಬೈತಲೆ ಇಕ್ಕೆಲ ಸಿಂಗಾರ ಘನ

ಬೆಕ್ಕಸ ಬೆರಗಲವಾಕ್ಕಾಗಿ ಮಾತೆಲ್ಲ ಮೌನ

ನಿಂತವರವಳೆದುರಲಿ ಮಹಾಪ್ರಾಣ ಅಲ್ಪಪ್ರಾಣ ||

ಇಂಥ ಮಾಟದ ಬೆಡಗಿ ಬ್ರಹ್ಮನುದ್ದೇಶ ಕಾಣೆ

ಅಪರೂಪದತಿಶಯ ಮಾತ್ರ ದಕ್ಕುವಳೊಬ್ಬಗೆ ಎನ್ನೆ

ಮೋಸವಲ್ಲವೆ ಸೃಷ್ಟಿ ಮಾಡಲಿಂತನಾವೃಷ್ಟಿ ?

ಅತಿವೃಷ್ಟಿಗೂ ಮೋಸ ಬೀಳದಲ್ಲ ಯಾರದು ದೃಷ್ಟಿ ! ||

– ನಾಗೇಶ ಮೈಸೂರು

೦೬.೦೫.೨೦೧೮

(Picture source: Internet / social media: last pictures received via Tejaswini Kesari – thanks madam !!🙏😊👍💐🌹)

01712. ಅಸಹಾಯಕತೆ..


01712. ಅಸಹಾಯಕತೆ..

______________________

ಎದೆಯ ಮೇಲೇನೊ ಕೂತು

ಕಾಡುತಲಿದೆ ಭಾರದ ದಿಮ್ಮಿ

ಬದಿಗಿರಿಸಲೆಂತು ಹೆಣ ಭಾರ

ಹೆಗಲೇರಿದ ನೊಗ ಬಿಡದಲ್ಲ ||

ಕನಸಲ್ಲು ಬಿಡದೆ ಕಾಡುವಾಟ

ದಿಟವೊ ಸುಳ್ಳೊ ಧರ್ಮಸಂಕಟ

ಕೂತೊತ್ತುತಿದೆ ಉಸಿರುಕಟ್ಟಿಸಿ

ಕತ್ತು ಹಿಸುಕುವ ಭೂತದ ಪ್ರೇತ ||

ಕಂಗಾಲು ಕನವರಿಕೆ ಶೂನ್ಯ ಚಿತ್ತ

ಬಸವಳಿದ ಏದುಸಿರಲಿ ಕುಹಕ

ಅಲುಗಬಿಡದು ಪಾಶ ಬಂಧನದೆ

ಪಾರಾಗಲೆಲ್ಲಿ ತನು ಸ್ತಂಭೀಭೂತ ||

ಇಂಚಿಂಚೆ ಕೊಲುತಲೆಲ್ಲಾ ಸ್ವಾಹ

ಕಿತ್ತು ಕಿತ್ತು ತಿನ್ನೊ ಪೆಡಂಭೂತ

ನೋವಲ್ಲಿ ಅರಚಿ ಕಿರುಚಾಟವಿತ್ತ

ಯಾಕೊ ದನಿಯೆ ಬಾರದೆಲೆ ಸ್ತಗಿತ ||

ಅಸಹಾಯಕತೆಯ ಕೂಗಲ್ಲಿ ಬೆವರು

ಯಾಕಲ್ಲಿ ಯಾರು ಬರರು ನೆರವಿಗೆ ?

ಮುಗಿಯಿತಿನ್ನು ಕಥೆ ಕಣ್ಣೀರ ಧಾರೆಬೆಚ್ಚಿ ಬಿದ್ದೆದ್ದೆ ಕಿರುಚಿ, ಹಾಳು ದುಸ್ವಪ್ನ ! ||

– ನಾಗೇಶ ಮೈಸೂರು

೦೫.೦೫.೨೦೧೮

(Picture: The Nightmare (Henry Fuseli, 1781) https://goo.gl/images/pXqebq )

01712. ಕದ್ದು ಓದುವ ಸುಖ


01712. ಕದ್ದು ಓದುವ ಸುಖ

_____________________________

ಪರರ ಪತ್ರವ ಕದ್ದು

ಗುಟ್ಟಾಗಿ ಓದುವ ಖುದ್ಧು

ಬಣ್ಣಿಸಲಸದಳ ಸುಖ

ವರ್ಣಿಸಲಾಗದ ಪುಳಕ ||

ಯಾರದೊ ಒಲವಿನ ಓಲೆ

ಯಾರದೊ ಪದ ಲೀಲೆ

ಯಾರದೊ ಭಾವದ ತೆವಲು

ಯಾಕಷ್ಟು ಉತ್ಸಾಹ ಓದಲು ? ||

ವಿನಿಮಯ ದಂಪತಿ ಚರಿತೆ

ಹೊಸ ಬಿರುಸ ಪತ್ರದ ಮಾತೆ

ಗುಟ್ಟಲೋದಿ ನಗುವ ಚಾಕರಿ

ತಿಂದಂತೆ ಹನಿ ಕೇಕಿನ ಬೇಕರಿ ! ||

ಫಲಿಸದ ಪ್ರೇಮದ ಕಥನದೆ

ವಿಷಾದ ವ್ಯಥೆಗಳ ತರದೂದೆ

ಮುದುರೆಸೆಯಲು ಮನಸಾಗದೆ

ಬಚ್ಚಿಟ್ಟ ದಾಖಲೆ ಗುಟ್ಟಲೆ ಓದದೆ ||

ಮರೆತಲ್ಲಿ ಇಟ್ಟ ಗುಟ್ಟಿನ ಪೆಠಾರಿ

ಸಿಗಬಾರದಾರದೊ ಕೈಗೆ ಜಾರಿ

ಕ್ರೂರವಿರೆ ಗ್ರಹಚಾರ ಆಪತ್ತಲಿ

ನಿರಪಾಯ ಸಹೃದಯಿಯ ಕೈಲಿ ||

– ನಾಗೇಶ ಮೈಸೂರು

೦೪.೦೫.೨೦೧೮

(ಪತ್ರದ ಚಿತ್ರ : ಅಂತರ್ಜಾಲದ್ದು ; Picture source : https://goo.gl/images/cedrMp)

01711. ಮುನಿಸಿನೊಂದು ಪ್ರಸಂಗ..


01711. ಮುನಿಸಿನೊಂದು ಪ್ರಸಂಗ..

___________________________________

ಮುನಿಸಿಕೊಂಡವಳು ಕೂತಾಗ ಮುದ್ದು

ದಾಟಬೇಕೆನಿಸುತ ಮಿಕ್ಕೆಲ್ಲ ಸರಹದ್ದು

ಕಿಡಿಗೇಡಿ ಕೀಟಲೆ ಚತುರತೆ ಸಿಪಾಯಿ

ಮಾಡಿಸುವುದೇನೆಲ್ಲ, ಅತ್ತಳಾ ಮಹತಾಯಿ ||

ಕಂಬನಿ ಧಾರೆಧಾರೆ ಬಿಕ್ಕುವ ಸಂಗೀತ ಬೇರೆ

ಹತ್ತಿರ ಸರಿಯೆ ದೂರ ದೂಕುವ ಕರಗಳ ಜೋರೆ

ರಮಿಸುವ ಮಾತಿಗಿಲ್ಲ ಪ್ರತಿಕ್ರಿಯೆ ನಕಾರ ನಿಕೃಷ್ಟ

ಆಡುವ ಮಾತೆಲ್ಲ ಕಲಸು ಮೇಲೋಗರ ಅಸ್ಪಷ್ಟ ||

ಶರಣಾಗತ ಭಾವ ಮತ್ತೆ ಮತ್ತೆ ಮುದ್ದಿನೊಲುಮೆ

ಕ್ಷಮೆ ಯಾಚಿಸುವ ಭಾವ ಮಂಡಿಯೂರಿ ಒಮ್ಮೆ

ಬಡಿಯುತ ಗಲ್ಲ ಕಿವಿ ಹಿಡಿದು ಶಿರ ಸಾಷ್ಟಾಂಗ

ತುಸು ಇಳಿದರು ಕೋಪ ಬಿಡದ ಬಿಕ್ಕಳಿಕೆ ಬೀಗ ||

ನಡೆಸೇನೆಲ್ಲ ರಮಿಸಾಟ ಆಸೆ ಅಮಿಷ ನೂರೆಂಟು

ಕೊಡಿಸುವ ಭರವಸೆ ಏನೆಲ್ಲ ಮುಖವಿನ್ನೂ ಗಂಟು

ನಗೆಯುಕ್ಕಿಸುವ ಚಟಾಕಿಗು ನಗಲು ಚೌಕಾಸಿ ದನಿ

ಬಿಡದೆ ನಗಿಸೆ ರಂಜನೆ ಅಳುವಿನ ನಡುವೆ ನಗೆ ಹನಿ ||

ಕೊನೆಗೆಲ್ಲಾ ಶಾಂತ ಪ್ರಸನ್ನವದನ ಸಮಾಧಾನ ಚಿತ್ತ

ನಡುನಡುವೆ ಮುಸುಮುಸುವಿದ್ದರು ನಗೆಯ ಕಿರುಹಸ್ತ

ಅಳು ನಗು ಸಮ್ಮಿಶ್ರ ಒಡಲು ನಾಚಿದ ವದನ ಕಡಲು

ಮರೆತೆಲ್ಲ ಗುದ್ದಾಟ ಅಪ್ಪಿರೆ ಅರಸುತ್ತ ನೆಮ್ಮದಿ ಮಡಿಲು ||

– ನಾಗೇಶ ಮೈಸೂರು

೦೪.೦೫.೨೦೧೮

(Picture : https://goo.gl/images/aNKYee)

01710. ಎಲ್ಲೆ


01710. ಎಲ್ಲೆ

___________________________

ವಿಸ್ತರಿಸಿಕೊ ನಿನ್ನಾ ಎಲ್ಲೆ

ವಿಸ್ತಾರವಿದೆ ನಿನ್ನೊಳಗಲ್ಲೆ

ವಿಭಿನ್ನ ಸ್ತರ ಬೆಳೆಸೆ ಮೆಟ್ಟಿಲು

ವಿಧ ವಿವಿಧ ಹೆಜ್ಜೆ ಅದ ಮುಟ್ಟಲು ||

ಮುಟ್ಟುವನೆ ಕವನದಂತ ?

ಮುಟ್ಟಾಗುವನೆ ಕವಿ ಸಂತ ?

ದಾಟಲಿಲ್ಲವಿನ್ನೂ ವಸಂತ

ದಾಟುವ ದೂರ ಅನಂತಾನಂತ ||

ಮಡಿ ಮೈಲಿಗೆ ಗಡಿಯಾಚೆಗೆ

ತೊಡುವುಡುಗೆ ಮರೆ ನಾಚಿಕೆಗೆ

ಪದ ಸಾಂತ ಮನ ವಿಭ್ರಾಂತ

ಸಾಂತದೆರಡು ತುದಿಯನಂತ ||

ಸುತ್ತುವರಿದವೆ ಮುಳ್ಳುಬೇಲಿ

ತರುನಿಕರ ಗಣ ಹೂಮಳೆ ಚೆಲ್ಲಿ

ಹಾದಿಗ್ಹಾಸಿ ಮರೆಸಿ ನಿಜಪಥ

ಪಥಿಕ ಹಿಡಿವನೇನು ಹೊಸತ ? ||

ಹಾದಿ ಹಿಡಿದರದೆ ಸೀಮಿತ

ಮಾಡಿ ನಡೆಯೆ ಹೊಸತು ಪಥ

ನಿನಗಿಲ್ಲ ಎಲ್ಲೆ ನಿನ್ನ ಹೊರತು

ನೀನೇ ಇತಿಮಿತಿ ನಿನದೆ ಶಿಸ್ತು ||

– ನಾಗೇಶ ಮೈಸೂರು

೦೧.೦೫.೨೦೧೮

(Picture source : social media/ internet )

01709. ಒಮ್ಮೊಮ್ಮೆ ವಿಹ್ವಲ ಮನ


01709. ಒಮ್ಮೊಮ್ಮೆ ವಿಹ್ವಲ ಮನ

__________________________

ಕೂತು ಸುಮ್ಮನೆ ಹೊಸೆದಿದೆ ಮನ

ಏನೋ ಕವಿತೆ, ಯಾವುದೋ ಗಾನ

ಯಾವ ರಾಗಕೆ ಮಿಡಿದ ಶೃತಿ ಲಯ

ಯಾರು ಬರೆದರೊ ಹೊಸ ಅಧ್ಯಾಯ ? ||

ಸದ್ದು ಗದ್ದಲ ಸುತ್ತೆಲ್ಲ ಮನಸಂತೆ

ಒಳಗೊಳಗೆ ಬಿಕ್ಕುತ ಮೌನದೊರತೆ

ಮಾತು ಬೇಸರ ಸಾಂಗತ್ಯ ನೀರಸ

ಕೂತೆಡೆ ಕೂರದ ನಿಲದ ನಿರುತ್ಸಾಹ ||

ಚಡಪಡಿಕೆಯೇನೊ ವರ್ಣನಾತೀತ

ಮೋಡ ಮುಸುಕಿದ ಬಾನ ಸಂಕೇತ

ಕಸಿವಿಸಿಯದೇಕೊ ಅದೇನೊ ಅಕಟ

ಮಾತು ಬರಹಕೆ ಸಿಗದ ಆತ್ಮಸಂಕಟ ||

ವ್ಯಕ್ತವಾಗದದೇಕೊ ಅವ್ಯಕ್ತ ಭವ ಚಿತ್ತ

ಸ್ಪರ್ಶಕೆಟುಗದಮೂರ್ತ ಕಾಡಿ ಸತತ

ಸಂಗತಾಸಂಗತ ಆಂತರ್ಯದಲಿತ್ತ

ಅಂತರಂಗಸೂತ್ರ ಪಟದಂತೆ ಗೋತ ||

ಮೇಯ ಅಮೇಯ ಪ್ರಮೇಯ ಸತ್ವ

ಕಲಬೆರಕೆ ಸಿದ್ಧಾಂತ ಸಮ್ಮಿಶ್ರ ತತ್ತ್ವ

ಏನೊ ಹುಡುಕುವ ಬವಣೆ ಅನನ್ಯತೆ

ಕಣ್ಣಿಗೆ ಪಟ್ಟಿ ಬಿಗಿದು ಕಾಡಲಿ ಬಿಟ್ಟಂತೆ ||

– ನಾಗೇಶ ಮೈಸೂರು

೦೧.೦೫.೨೦೧೮

(Picture source: internet / social media)

01708. ಯಾವಳಿವಳು ?


01708. ಯಾವಳಿವಳು ?

________________________

ಯಾವಳಿವಳು ಕಾಡುವಳು

ಎಡಬಿಡದೆ ಹಗಲಿರುಳು

ಚಿತ್ತಕೆ ಹಾಕಿ ಮುತ್ತಿಗೆ ಧಾಳಿ

ನೆತ್ತಿಯ ಮೇಲೆ ಕೂತ ಕಾಳಿ ||

ಕೂತೆಡೆ ನಿಂತೆಡೆ ಇರಬಿಡಳು

ತಟ್ಟನುದಿಸಿ ತಲೆ ಕುಕ್ಕುವಳು

ಲಕ್ಷಿಸದವಳ ಕಡೆಗಣಿಸೆ ಜತೆ

ಜಾರಿಬಿಡುವಳು ಮುನಿದವಳಂತೆ ||

ಅಲಕ್ಷ್ಯ ನಿರ್ಲಕ್ಷ್ಯ ಸಹಿಸಳಲ್ಲ

ತೆತ್ತರೆ ಗಮನ ಕೈ ಬಿಡಳಲ್ಲ

ಸರಸ ವಿರಸ ಕುಣಿದಾಡಿ ಪದ

ಮೂಡಿಬಂದ ಸಾಲಿನ ಮೋದ ||

ಹೊತ್ತು ಗೊತ್ತಿಲ್ಲ ಸರಸಕೆ ಕರೆ

ಅವಳಾ ಅಣತಿಯಂತೆ ಸೇರೆ

ನಿಂತ ನಿಲುಕಲ್ಲೆ ಪ್ರಸವ ಬೇನೆ

ಪುಂಖಾನುಪುಂಖ ಕಾವ್ಯ ತಾನೆ ||

ಅಹುದವಳೆ ಹೃದಯ ಸಾಮ್ರಾಜ್ಞಿ

ಕಾವ್ಯರಾಣಿ ಸ್ಪೂರ್ತಿಯ ತರುಣಿ

ಅವಿರತ ಜತೆಗಿದ್ದು ಕಾಡುವ ಚಟ

ಕಾಡಿ ಜಗಳಾಡಿದ ಹೊತ್ತಲ್ಲಿ ಕವಿತ ||

– ನಾಗೇಶ ಮೈಸೂರು

೦೧.೦೫.೨೦೧೮

(Picture source : internet / social media)

01707. ದಿಗ್ದಿಗಂತ ನೀನನಂತ


01707. ದಿಗ್ದಿಗಂತ ನೀನನಂತ

___________________________

ದಿಗ್ದಿಗಂತ ನೀನನಂತ

ನಿನ್ನೊಡಲಲಿ ಬ್ರಹ್ಮಾಂಡ ಪೂರ್ತ

ವಿಸ್ತರಿಸುತಲೆ ನಿನ್ನಾ ಅಂಚ

ಬೆಳೆದ ಸಾಮ್ರಾಜ್ಯ ಯಾರ ಕುಂಚ ? ||

ದಿಕ್ಕು ದಿಕ್ಕಿನೆಡೆ ಹರವು

ಸಿಕ್ಕಸಿಕ್ಕೆಡೆ ಪಸರಿಸಿ ನಿನ ಗೆಲುವು

ಜಗ್ಗುತಲಿರೆ ಅಂಬರ ವಸ್ತ್ರ

ವ್ಯೋಮಕಾಯ ದೂರ ಹೆಚ್ಚಿದಂತರ ! ||

ಹಿಗ್ಗಿ ಹಿಗ್ಗಿ ಹಿರಿದಾಗೆ ಜಗ್ಗಿ

ನಿನ್ನಂತರಾಳ ಕೈಗೆಟುಕದ ಮಗ್ಗಿ

ನೇಯ್ದೆಯೆಂತಲ್ಲಿ ಕಾಲ ಜತೆ

ಊಹಿಸಲಾಗದ ಆಯಾಮ ಸೋತೆ ! ||

ನೀ ದ್ಯೋತಕ ಮಿತಿಯಿಲ್ಲ

ಬೆಳೆವ ಮನಕೆ ನಿನ್ನಂತೆ ಕೊನೆಯಿಲ್ಲ

ಬೆಳೆದವರಾಗುವ ದೂರದೂರ

ಸಾಂಕೇತಿಸುವ ನಿನ್ನ ಚಾದರ ವಿಸ್ತಾರ ||

ಬೆಳೆಯಲು ನಡೆ ದಿಗಂತದತ್ತ

ಬೆಳೆಸುವ ಕೊಡೆ ಬದುಕಿನ ಪೂರ್ತ

ಏನೊ ಪಡೆಯೆ ಏನೊ ಬಿಡುವೆ

ನಿನ್ನ ದಿಗಂತ ಜತೆ ದಿಗಂತದೊಳಿರುವೆ ||

– ನಾಗೇಶ ಮೈಸೂರು

೩೦.೦೪.೨೦೧೮

(Picture source : internet / social media)

01706. ಪ್ರಿಯವೆ ನೀ ನನಗೆ…!


01706. ಪ್ರಿಯವೆ ನೀ ನನಗೆ…!

________________________________________

ತುಂಬಿಕೊಳಲೆಂತೆ ನಿನ್ನ ಕಣ್ತುಂಬಾ ?

ನೋಟವಾ ಮರೆಸಿ ಎಡವಿಸಿ ಬೀಳಿಸೆ ನನ್ನ

ಬಿದ್ದಾಗ ನೋಯುವೆ ನೀನೆಂಬ ಭೀತಿ ನನಗೆ ! ||

ತುಟಿಯಲೆಂತಿರಿಸಲಿ ಸದಾ ನಿನ್ನ ಹೆಸರ ?

ಮಾತಿನ ಭರದೆ ಜಾರಿ ಸಿಕ್ಕರೆ ದಂತದಡಿ

ಹೆಸರು ಚೂರಾಗಿಬಿಡುವ ಆತಂಕವೆ ನನಗೆ ! ||

ಮನದ ತುಂಬ ನಾ ತುಂಬಿಕೊಳಲೆಂತೆ ನಿನ್ನ ?

ನೀ ತುಂಬಿ ತುಳುಕಿ ಹೊರದೂಡೆ ನನ್ನ ಮನಸಾ

ನಿನ್ನೊಬ್ಬಂಟಿ ಮನಸ ಕಾಯಲಾಗದ ದುಃಖ ನನಗೆ ||

ಮೀಸಲಿಡಲೆಂತೆ ನನ್ನೆಲ್ಲ ಪ್ರೀತಿ ನಿನಗೊಬ್ಬಳಿಗೆ?

ನಿನ್ನ ಹೆತ್ತವರು ಸುತ್ತವರು ಭವಿತ ಸಂತತಿ ತಕರಾರು

ಸ್ವಾರ್ಥಿ ನೀನೆಂದು ದೂರುವರೆಂಬ ಚಿಂತೆಯೆ ನನಗೆ !||

ಅದಕೆ ನೀ ನೀನಾಗಿರು ಸಾಕು ಇದ್ದರು ಬರಿ ಜತೆಗೆ

ಆವರಣವಿರಲಿ ಸಡಿಲ ತಂಗಾಳಿ ಆಹ್ಲಾದದ ಹಾಗೆ

ಬೇಕೆಂದಾಗ ಸುಳಿದಾಡೆ ಸಾಕು, ಪ್ರಿಯವೆ ನೀನೆನಗೆ! ||

– ನಾಗೇಶ ಮೈಸೂರು

೨೨.೦೪.೨೦೧೮

(Picture source : Internet / Social media)

01705. ಚಂದಿರನುಯ್ಯಾಲೆಯಲಿ..


01705. ಚಂದಿರನುಯ್ಯಾಲೆಯಲಿ..

__________________________________

ಗಗನದೂರಲಿ ಚಂದ

ಚಂದಿರನ ತೂಗುಯ್ಯಾಲೆ

ಕೂರೆ ಜೀಕುವೆ ನಿನ್ನ ಮನಸಾರೆ

ಹೇಳೆ ನಿನ್ನ ಅಂದಕೆ ಸಮನಾರೆ ||

ವಿಶಾಲ ಚಪ್ಪರವಲ್ಲಿ

ಗ್ರಹತಾರೆ ಕಾಯದ ಮೇಳ

ಜೀಕುತಲೆ ಮುಟ್ಟಿ ನೋಡೊಮ್ಮೊಮ್ಮೆ

ಸಿಕ್ಕೆ ಬಾಚೆ ಸಿಕ್ಕಷ್ಟ ಹಿಡಿ ಮಡಿಲಿನ ಹೆಮ್ಮೆ ||

ಶ್ವೇತಾಂಬರ ಶಶಿಯೆ

ಪಂಥದೆ ಸೋತ ವಿಷಯ

ಬರೆವೆ ನಾ ಪ್ರಣಯ ಕಾದಂಬರಿ

ನೀನದರ ನಾಯಕಿಯೆ ಶ್ವೇತಾಂಬರಿ ||

ಬಿಡು ಭೀತಿ ಬಾನಲಿ

ನೇತು ಹಾಕಿದ ಸರಪಳಿ

ಕಾಣದದೃಶ್ಯ ಕೊಂಡಿ ವಿಶ್ವವೆ

ಬ್ರಹ್ಮಾಂಡದಲದೆಂದಿಗು ವಿಶಿಷ್ಠವೆ ||

ಮರೆಯದಿರು ಮುಟ್ಟಿರೆ

ಸುರಲೋಕದ ಬಾಗಿಲ ಗೆರೆ

ಇಣುಕೊಮ್ಮೆ ತಂದುಬಿಡು ಸರಕ

ನಿನ್ನ ಸೆರಗಿಗಂಟಿಸಿ ಬೆರಗು ಪುಳಕ ||

ಕ್ಷಯದಿಂದಕ್ಷಯ ಮತ್ತೆ

ಅಕ್ಷಯದಿಂದಾಗುತ ಕ್ಷಯ

ಸಂಕುಚನ ವಿಕಸನ ಚಂದ್ರಮನ

ಕೊರೆ ನೀಗಿಸಿಹೆ ನೀನಾಗಿ ಪರಿಪೂರ್ಣ ||

– ನಾಗೇಶ ಮೈಸೂರು

೨೮.೦೪.೨೦೧೮

(Picture source: https://goo.gl/images/qdj8WK)

01704. ಚಿಕ್ಕ ಚಿಕ್ಕ ಆಸೆ..


01704. ಚಿಕ್ಕ ಚಿಕ್ಕ ಆಸೆ..

_________________________

ನಿನ್ನ ಜತೆ ಜತೆಯಲ್ಲಿ

ಬೆಸೆದ ಕರ ಹಿತದಲ್ಲಿ

ಸುಖವಾಗಿ ತೂಗಿ ನಡೆವಾಸೆ

ನಡುನಡುವೆ ಓಡುತ್ತ ನಲಿವಾಸೆ ||

ಗಗನ ಚಾಮರದಡಿಯ

ದೃಶ್ಯ ಮೋಹಕ ಭುವಿಯ

ಗಾಳಿ ಮಳೆ ನೀರಲಿ ತೊಯ್ವಾಸೆ

ನಿನ್ನೊಡನೆ ನಡೆನಡೆದು ಮೀಯ್ವಾಸೆ ||

ಎದುರು ಬಂದವಗೆಲ್ಲಾ ನಕ್ಕು

ಕರ ಬಿಡದ ಥಳುಕು ಬಳುಕು

ತೋಳ ಮೇಲೆತ್ತಿ ಬಿಲ್ಲ ಹೆಣೆವಾಸೆ

ಹಾದು ಹೋಗೆ ಹಾರವಾಗಿಸುವಾಸೆ ||

ಬಯಲುದ್ಯಾನ ಗಿಡಮರದೆ

ಬಿರಿದ ಕುಸುಮಗಳ ಭರದೆ

ಹೆಕ್ಕಿ ಮುಡಿಗೆಲ್ಲಾ ಮುಡಿಸುವಾಸೆ

ಮಿಗಿಸಿ ನಿನ್ನ ಬೊಗಸೆ ತುಂಬಿಸುವಾಸೆ ||

ಬಾನಿಗೊಂದು ಸೇತುವೆ ಕಟ್ಟಿ

ಬಯಲಿಗೊಂದು ಕವಿತೆ ಬುಟ್ಟಿ

ಹೃದಯ ಸಿಂಹಾಸನ ನಿನ್ನನಿಡುವಾಸೆ

ನೋಡೆ ಬಾಂದಳ ದೊರೆಗಳ ಕರೆವಾಸೆ ||

– ನಾಗೇಶ ಮೈಸೂರು

೨೮.೦೪.೨೦೧೮

(picture source : internet / social media)

01703. ತವರಾಗುಳಿಯದ ತವರಿಗೆ..


01703. ತವರಾಗುಳಿಯದ ತವರಿಗೆ..

______________________________________

ಏನೀ ತವರಿನ ತಕರಾರು

ಏನೆಂದು ಹಾಡಲೊ ಶಿವನೆ

ಕಳಚಿಕೊಂಡಿತಲ್ಲೊ ಕೊಂಡಿ..

ಕರೆದುಕೊಂಡೆ ಹೆತ್ತವರವರಿಬ್ಬರ..||

ಕಷ್ಟಸುಖಕೆ ಮರುಗೊ ಜೀವಗಳು

ಅಳುವ ತಲೆಗೆ ಹೆಗಲಾಗಿದ್ದವರು

ಮಡಿಲ ಹಾಸುವವರಿಬ್ಬರು ತಟ್ಟನೆ

ಏಕಾಏಕಿ ಎಲ್ಲಿಗೆ, ಹೋದರೊ ಕಾಣೆ..||

ಬಿಕೋ ಎನ್ನುತಿದೆ ಹುಟ್ಟಿದ ಮನೆ

ಬಿಂಕ ಬಿನ್ನಾಣ ಸಂಭ್ರಮ ಸುರಿದಿತ್ತಲ್ಲ !

ಮಲ್ಲಿಗೆ ಮುಡಿದಮ್ಮ, ಗಿರಿಜಾಮೀಸೆಯಪ್ಪ

ಭರಿಸಲೆಲ್ಲಿ ನೋವು ಹಚ್ಚಿಕೊಂಡಿದ್ದೆ ತಪ್ಪಾ? ||

ಹೋಗಲೆಲ್ಲಿಗೊ ಮತ್ತೆ ತವರ ಹೆಸರಲ್ಲಿ ?

ಯಾರನು ಅಜ್ಜಿ ತಾತ ಎಂದು ತೋರಿಸಲೊ?

ಯಾರು ತೆರೆವರೊ ಕದವ ‘ಬಾ ಮಗಳೆ’ ಎಂದು ?

ಯಾರಿಗೆ ಯಾರುಂಟು ಎರವಿನ ಸಂಸಾರ ಪ್ರಭುವೆ? ||

ತವರಿನ ಸದ್ದೆಲ್ಲ ಕರಗಿ ಗಲಿಬಿಲಿ ಗುದ್ದಾಟ..

ಶುರು ಮುಖವಾಡದ ಮಂದಿ ಆಸ್ತಿಗೆ ಬಡಿದಾಟ..!

ಕಾದವರಂತೆ ಸಾವಿಗೆ, ಕಾದಿಹರಲ್ಲ ಸೋದರ ವೀರರು

ಯಾರ ಮೊಗವ ಹುಡುಕಿಕೊಂಡು ಹೋಗಲೇಳೊ, ತವರಿಗೆ? ||

– ನಾಗೇಶ ಮೈಸೂರು

೨೭.೦೪.೨೦೧೮

(Picture source : internet / pinterest)

01702. ನಮೋ ನಮೋ ನರಸಿಂಹಂ


01702. ನಮೋ ನಮೋ ನರಸಿಂಹಂ

___________________________________

ನಾನಾವತಾರ ದರ್ಶನ ಭಾಗ್ಯಂ

ಲೋಕೋದ್ದಾರ ಮನೋ ಇಂಗಿತಂ

ನಮಾಮಿ ಸಕಲ ಸ್ವರೂಪ ಸಮಸ್ತಂ

ನಮೋ ನಾರಾಯಣ ನೃಸಿಂಹ ಬಲಂ ||

ಹರಿ ಸ್ವಯಂ ಉಗ್ರರೂಪ ಧಾರಣಂ

ಶಾಪ ವಿಮೋಚನಾರ್ಥ ಸಕಾರಣಂ

ಮೃದುಲಾ ಕಠೋರ ವಿಷ್ಣು ರೂಪಂ

ನರ ಮಿಶ್ರ ಕೇಸರ ಭೀಕರಾಕಾರಂ ||

ನರನಲ್ತು ಕರುಣಾ ಸುವಿಶ್ವರೂಪಂ

ಪಶುವಲ್ತು ಕ್ರೂರಾ ದಂಡಿತಾರ್ಹಂ

ಪಾಮರ ಪಂಡಿತ ವಂದಿತೇ ದಿವ್ಯಂ

ಆಜಾನುಬಾಹು ಆಕಾರ ಭಲೆ ಭವ್ಯಂ ||

ಬ್ರಹ್ಮಾಂಡವ್ಯಾಪಿ ಸ್ಥಿತಿ ಪಾಲನಾರ್ಥಂ

ಭೂಗೋಳಪಾಲ ಪಾಪನಾಶ ಸ್ವಾರ್ಥಂ

ಪ್ರಹ್ಲಾದ ಪ್ರಿಯ ತನುಮನದಾವರಿತಂ

ಧರ್ಮವಿಜಯ ತೃಣ ಬೃಹತ್ಕಣ ಸ್ವಸ್ಥಂ ||

ಭಯಭೀತ ಅಸುರ ಸುರಭಜಿತ ಸ್ತೋತ್ರಂ

ನಿರ್ಭೀತ ಮನುಜ ದಿವ್ಯಮಂತ್ರ ಪಠನಂ

ಸುಪ್ರೀತ ಶಾಂತ ಕೃಪಾಕಟಾಕ್ಷಂ ಸುಭೀಕ್ಷಂ

ನರಸಿಂಹ ಜಯತು ಜಯಜಯ ಜೈಕಾರಂ ||

– ನಾಗೇಶ ಮೈಸೂರು

೨೮.೦೪.೨೦೧೮

(Picture source : Wikipedia)

01701. ನನಗೂ ಅವಳಿಗೂ….


01701. ನನಗೂ ಅವಳಿಗೂ….

_______________________

(ವೈಮನಸ್ಯ)

ನಾವುತ್ತರದಕ್ಷಿಣ ಇಲ್ಲ ಇಡುಜೋಡು

ಎತ್ತು ಏರಿಗೆ ಕೋಣ ನೀರಿಗೆ ನಂಪಾಡು

ಅದಕೆ ನನಗೂ ಅವಳಿಗೂ ವೈಮನಸ್ಯ

ವಿಷಯ ಒಂದಲ್ಲ ಎರಡಲ್ಲ ನೂರಾರು || ಅದಕೆ ನನಗೂ ||

ನನಗಾಗದು ಅತಿ ಫಂಖ ಏಸಿ ಸಾಂಗತ್ಯ

ಅವಳಿಗೊ ಚಳಿಗಾಲಕು ಬೇಕದರ ಸಖ್ಯ

ಬೇಸಿಗೆ ಬೆವರಲಿ ಹಚ್ಚಿದರೆ ದುಂದೆನುತ

ಆರಿಸುವಳು ಬೀಸಣಿಗೆ ಪುಸ್ತಕ ನೀಡುತ್ತಾ || ಅದಕೆ ನನಗೂ ||

ಬರದೆನಗೆ ಚೌಕಾಸಿ ತರಕಾರಿ ದಿನಸಿ

ಬಿಡಿಗಾಸಿಗು ವ್ಯರ್ಥ ಚರ್ಚೆ ತಪರಾಕಿ

ಬಿಳಿ ಸರಕಿಗೆ ನಾ ರಿಯಾಯ್ತಿ ಗಿರಾಕಿ

ಒಡವೆ ವಸ್ತ್ರ ಎಲ್ಲ ಕೇಳಿದಷ್ಟು ಕೊಟ್ಟಾಕಿ || ಅದಕೆ ನನಗೂ ||

ಬೇಕೆನಗೆ ಬೆಳಗಿನ ಬಿಸಿಕಾಫಿ ಸಂಜೆಗೆ ಚಹ

ಹುಣ್ಣಿಮೆ ಅಮಾವಾಸೆಗೆ ನೀಡುವಳಲ್ಲ ಚಟ

ಹೊತ್ತುಹೊತ್ತಿಗೆ ನಾ ತುತ್ತು ತಿನ್ನುವ ನಿಯಮಿತ

ಅತಿವೃಷ್ಠಿ ಅನಾವೃಷ್ಠಿ ಮೃಷ್ಟಾನ್ನ ಉಪವಾಸ ದಿಟ || ಅದಕೆ ನನಗೂ ||

ವೈನಾದ ಸಂಸಾರ ವೈಮನಸ್ಯ ಸರ್ವದಾ

ಬಂಧಿಸಿಟ್ಟಿದೆ ನಮ್ಮ ಬಡಿದಾಟದ ಸಂಪದ

ಮುಗಿಸೆಲ್ಲಾ ತರ ಯುದ್ಧ ಕಾಳಗ ಉಂಡಾಟ

ಮಲಗೊ ಹೊತ್ತಲಿ ತೇಪೆ ನಗಿಸಿ ಪರದಾಟ || ಅದಕೆ ನನಗೂ ||

– ನಾಗೇಶ ಮೈಸೂರು

೨೬.೦೪.೨೦೧೮

(Picture source : internet / social media)

01700. ಅಚಲನವ ನಿಶ್ಚಲ..


01700. ಅಚಲನವ ನಿಶ್ಚಲ..

________________________

ಕಲಿಯುಗದಲವ ಅಚಲ ನಿಶ್ಚಲ

ಗುಡಿ ಕಲ್ಲಾಗಿ ಕೂರುವ ಚಪಲ

ಏನಿದೆಯೊ ಕಾಣದವನ ಹಂಬಲ

ಅವನಾಟದೆ ಬಂಧಿ ಜಗ ಸಕಲ ||

ಕಲ್ಲ ತೊಳೆದರು ಜಲದಲಿ ನಿಶ್ಚಲ

ಕ್ಷೀರಧಾರೆ ಎಳ ನೀರಿಗು ಅಚಲ

ಅರಿಶಿನ ಕುಂಕುಮ ಚಂದನ ಧಾರೆ

ಅಭಿಷೇಕವೇನಿರಲಿ ಕದಲದ ತೇರೆ ||

ಕುಸುಮ ಹಾರ ಗರಿಕೆ ಬಿಲ್ವ ತಂತ್ರ

ಬಡಿದೆಬ್ಬಿಸೊ ಘಂಟನಾದ ಮಂತ್ರ

ಸುತ್ತಲು ಮುತ್ತಿಗೆ ಭಕ್ತ ಪುರೋಹಿತ

ಮಾಡೇನೆಲ್ಲ ಹುನ್ನಾರ ಕದಲನಾತ ||

ಅವ ನಿಶ್ಚಿಂತ ನಿಶ್ಚಲ ಜಡ ಸ್ವರೂಪ

ಕಾಲಮಹಿಮೆ ಕಲಿಯುಗ ಪ್ರತಾಪ

ಸತ್ಯಕೊಂದೆ ಪಾದ ಹೇಗಾದೀತು ಬಲ

ಆಸಂಗತದಲಿ ಸಂಗತ ತತ್ತ್ವವೆ ನಿಶ್ಚಲ ||

ಚಲಿಪ ಕಾಲ ನಿಶ್ಚಲ ಸಾಪೇಕ್ಷದೆ ಚಲಿತ

ಕಾಲ ದೇಶ ಅವಕಾಶದಾಚೆಗೆಲ್ಲ ಅನಂತ

ಹುಟ್ಟಾಗಿ ನಿಶ್ಚಿತ ಸಾವಲಾಗುತ ನಿಶ್ಚಲ

ಶೋಧಿಸೆ ಬ್ರಹ್ಮಾಂಡ ಪರಿಧಿ ದಾಟೊ ಕರಾಳ ||

– ನಾಗೇಶ ಮೈಸೂರು

೨೫.೦೩.೨೦೧೮

(Picture source: wikipedia)

01699. ಹೊತ್ತಗೆ…


01699. ಹೊತ್ತಗೆ…

_________________________

ಪುಸ್ತಕ ಸೇರಿದರೆ ಮಸ್ತಕ

ಬದುಕಾಗುವುದು ಸಾರ್ಥಕ

ಪುಸ್ತಕದ ಬದನೆಕಾಯಿ ಪಾಯ

ಅನುಭವದ ಜೊತೆ ಹೊಸ ಅಧ್ಯಾಯ ||

ಹೊತ್ತಗೆ ಹೊರುವ ಹೊತ್ತಿಗೆ

ಹೊರದಿರೆ ಬದುಕೆಲ್ಲ ಮುತ್ತಿಗೆ

ಭಾರ ಹೊರುವ ಪ್ರಾಯದೆ ಎತ್ತು

ಹೊತ್ತರೆ ಬಲಿಷ್ಠ ಸ್ನಾಯು ಬಾಳ್ವೆ ಗತ್ತು ||

ಗ್ರಂಥಗಳೋದಿ ಆಗರೆ ಸಂತ

ಕಲಿಕೆ ಸಾಗರ ಸಮವೆ ಅನಂತ

ಅಹಮಿಕೆಗೆಡೆಮಾಡದೆ ಕಲಿತಾಡು

ಹನಿ ವಿನಯದಿ ಕೂಡಿಡೆ ಜೇನುಗೂಡು! ||

ಚಂದದ ಹೊದಿಕೆ ಇರೆ ಸಾಕೆ?

ತಥ್ಯ ಸತ್ವ ವಿಷಯ ಒಳಗಿರಬೇಕೆ

ಗ್ರಹಿಸಿರೆ ಸಾಲಲಿ ಹುದುಗಿರುವ ಸತ್ಯ

ದೈನಂದಿನ ಬದುಕಾಗುವುದು ಸಾಹಿತ್ಯ ||

ತಾಳೆಗರಿಯಲಡಗಿದೆ ಮರುಳೆ

ಜೀವನ ಅನುಭವವೂ ಪುಸ್ತಕಗಳೆನೋಡಿ ಕಲಿ ಮಾಡಿ ತಿಳಿ ಜತೆಯಾಗೆ

ಓದರಿತದ್ದೆಲ್ಲ ಸಫಲ ಕರವಾಳದ ಹಾಗೆ ||

– ನಾಗೇಶ ಮೈಸೂರು

೨೩.೦೪.೨೦೧೮

(Picture source: internet / social media)

01698. ಸ್ಮೃತಿ-ವಿಸ್ಮಯ -ವಿಸ್ಮೃತಿ


01698. ಸ್ಮೃತಿ-ವಿಸ್ಮಯ -ವಿಸ್ಮೃತಿ

__________________________________

ಸ್ಮೃತಿ-ವಿಸ್ಮಯ -ವಿಸ್ಮೃತಿ

__________________________________

ವಿಸ್ಮಯ ವಿಸ್ಮೃತಿ ಸ್ಮೃತಿಯಾಟ ಸದಾ ಸಂಗಾತಿ

ಒಗರು ಮಧುರ ಒರಟು ನವಿರು ಸಮ್ಮಿಳಿತ ಛಾತಿ

ಕಾಡಲೇನೊ ಪುಳಕ, ಕವಿಯಲೇನೊ ಮುಸುಕು

ಪಲುಕು ಮೆಲುಕು ಆಹ್ಲಾದ, ಕಂಬನಿ ಕುಯಿಲೆ ಸಿಕ್ಕು ||

ಜಾಗೃತ ಮನಸೇನೊ ಆಟ, ಹುನ್ನಾರ ಪರವಶ

ಜಮೆಯಾಗುತ ಪ್ರತಿಕ್ಷಣ, ನವೀನ ಸ್ಮೃತಿ ಕೋಶ

ವರ್ತಮಾನ ಭೂತವಾಗಿ, ಭವಿತದತ್ತ ಮುನ್ನೋಟ

ಋತುಮಾನ ಸರಕಂತೆ ಸ್ಮೃತಿ, ವಿಹ್ವಲಾಗ್ನಿ ಚಿತ್ತ ||

ಯಾರಿಲ್ಲ? ಯಾರೆಲ್ಲ? ಯಾರಾರೊ ಅತಿಥಿಗಳು

ಬಂದು ಹೋದವರೆಲ್ಲ, ಇತ್ತು ಸ್ಮೃತಿ ಮಹನೀಯರು

ಅದ್ಭುತ ಸಂಚಯ ಅನಂತ, ಜೀವಕೋಶದ ಚೀಲ

ಭಾವಕೋಶಕೆ ಲಗ್ಗೆ, ಅಂತಃಕರಣ ಜಗ್ಗಿ ಮಾರ್ಜಾಲ ||

ಸ್ಮೃತಿ ಪ್ರಕೃತಿ ಚಂಚಲೆ, ಬಿಟ್ಟರೂ ಬಿಡದ ಮಾಯೆ

ಜಡ ಪುರುಷ ಪರುಷ, ಸಮ್ಮೋಹಕ ಸಿಹಿನೆನಪ ಛಾಯೆ

ಕರಾಳ ನೆನಪೆ ಕಠೋರ, ಬದಿಗಿಡು ಬೇಡೆನ್ನಲುಂಟೇನು ?

ಹರಿದಾಡಲಿ ಸ್ಮೃತಿ ತಂಗಾಳಿಯಂತೆ, ಬೆಲೆ ಕಟ್ಟಲುಂಟೇನು ! ||

– ನಾಗೇಶ ಮೈಸೂರು

೨೪.೦೪.೨೦೧೮

(Picture source : Internet / social media)

01697. ಶಿವನುಟ್ಟನೆ ಉಮೆಯ..


01697. ಶಿವನುಟ್ಟನೆ ಉಮೆಯ..

________________________________

ಶಿವನುಡಲು ತನ್ನಲಿ ಸತಿಯ

ವರಿಸಿಹನೆ ದಾಕ್ಷಾಯಿಣಿಯ

ಕೈ ಹಿಡಿದ ಬೆರಗದು ಪ್ರಳಯ

ಲಯದೊಡೆಯನ ಗೆದ್ದ ಪ್ರಣಯ ||

ಆಜಾನುಬಾಹು ಫಾಲನೇತ್ರ

ಕೊರಳಲಂಕರಿಸಿ ಫಣಿ ಪಾತ್ರ

ಜಟೆಗೆ ಮುಕುಟ ಶಿವ ಗೋತ್ರ

ಚರ್ಮಾಂಬರಗು ಕಟ್ಟಿ ಧೋತ್ರ ! ||

ಅವಳು ಸರ್ವಮಂಗಳ ಗೌರಿ

ಒಲಿಸಲೇನೆಲ್ಲ ಹಿಡಿದ ದಾರಿ

ಅಪರ್ಣೆ ಕೊನೆಗು ಛಲಕೆ ಬದ್ಧ

ಸುಟ್ಟರು ಕಾವನ ಶಿವ ಶರಣಾದ ||

ಹಿಮಸುತೆ ಶೈಲತನಯೆ ಮಾತೆ

ಕುಮಾರ ಜನನ ಕಾರಣ ಘನತೆ

ಭರಿಸುತ ಭವನ ತೇಜ ಘನಸತ್ವ

ದಾನವ ಕುಲಕೆ ಕೊಡಲಿ ಮಹತ್ವ ||

ವಿನೋದ ಜಗನ್ಮಾತಪಿತ ಕಲ್ಯಾಣ

ಅಗ್ನಿಕುಂಡ ಸುತ್ತಿ ಸಪ್ತಪದಿ ಚರಣ

ಹೋಮ ಹವನ ಅಗ್ನಿಸಾಕ್ಷಿ ಪವಿತ್ರ

ಆದಿದಂಪತಿಗು ಬೇಕಿತ್ತೇನಿ ಶಾಸ್ತ್ರ ?||

– ನಾಗೇಶ ಮೈಸೂರು

೨೪.೦೪.೨೦೧೮

(picture source : WhatsApp)

01696. ಅಮ್ಮನಿಗೊಂದು ಶುಭಾಶಯವಿಂದು..


01696. ಅಮ್ಮನಿಗೊಂದು ಶುಭಾಶಯವಿಂದು..

____________________________________________

ಜಾನಕಿ ಎಸ್ ಜಾನಕಿ

ಕುಹೂ ಕೋಗಿಲೆ ಸ್ವರದ ಹಕ್ಕಿ

ಹಾಡಿದ ಭಾಷೆಗಳ್ಹದಿನೇಳು

ನಲವತ್ತೆಂಟು ಸಾವಿರ ಹಾಡುಗಳು ! ||

ಸಾಲದೆನ್ನುವಂತೆ ಭಾರತೀಯ

ಜಪಾನಿ ಜರ್ಮನಿ ಪರಕೀಯ !

ಆರು ದಶಕಗಳ ಸೇವೆ ಮೊತ್ತ

ಹಾಡಿಯು ದಣಿಯದ ದನಿ ಸಂಪತ್ತ ! ||

ದಕ್ಷಿಣದಾ ಕೋಕಿಲ ಕಲವಾಣಿ

ಬರೆದದ್ದೂ ಉಂಟು ಸುಮವೇಣಿ

ತೇಜಸ್ಸಿನ ವಿಭೂತಿ ಹಣೆಯ ತುಂಬ

ಗೌರವದೆ ನಮಿಸೊ ಮಾತೆಯ ಪ್ರತಿಬಿಂಬ ! ||

ರಾಷ್ಟ್ರ ರಾಜ್ಯ ಪ್ರಶಸ್ತಿಗಳ ಸಗಟು

ಡಾಕ್ಟರೇಟು ಕಲೈಮಾಮಣಿ ಉಟ್ಟು

ಪಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಪದ್ಮಭೂಷಣ ಬೇಡೆಂದಾ ಛಲಗಾತಿ ! ||

ಇಂದಮ್ಮನಿಗೆ ಶುಭ ಜನುಮ ದಿನ

ಹಾಡಿ ಹೊಗಳೆ ಪದ ಸಾಲದು ಗೌಣ

ಎಂಭತ್ತರ ಹರೆಯ ದಾಟಿ ನೂರಾರು

ಜಯಭೇರಿ ಬಾರಿಸುತ ಸಾಗಲಿ ತೇರು ! ||

– ನಾಗೇಶ ಮೈಸೂರು

೨೩.೦೪.೨೦೧೮

(ಚಿತ್ರ / ಮಾಹಿತಿ ಮೂಲ : ವಿಕಿಪಿಡಿಯಾ; thanks to Vishalakshi NM for reminding and inspiring me to write this poem 🙏😊👍💐🌹)

01695. ‘ಅವನಿ’ಗವನೆ..


01695. ‘ಅವನಿ’ಗವನೆ..

_______________________

ಅವನಿಗವನೆ ಒಡೆಯ

‘ಅವನಿ’ಗವನೆ ಒಡೆಯ

ಅವನಿಗವನೆ ‘ಅವನಿ’ಯಾದರೆ

ಅವನೆ ಅವನಾಗಿ ಯುಗೆಯುಗೇ ಸಂಭವ ||

ಅವನಿಗವನೆ ಶತ್ರು ಮಿತ್ರ

‘ಅವನಿ‘ಗವನೆ ಆಡೋ ಪಾತ್ರ

ಅವನನರಿತರೆ ಅವನೆ ಪರಬ್ರಹ್ಮ

‘ಅವನಿ’ಗಾಗುತ ಸಾಕ್ಷಾತ್ಕಾರ ಮರ್ಮ ||

ಅವನಿಗವನೆ ಧರ್ಮ ಕರ್ಮ

‘ಅವನಿ’ಗವನೆ ನಡೆಸೊ ಪರಮ

ಅವನಾಗದೆ ಕೊರಮ ಪಾಲಿಸೆ ನ್ಯಾಯ

‘ಅವನಿ’ಗದೆ ತಾನೆ ಮುಕ್ತಿ ಮೋಕ್ಷ ಕೈವಲ್ಯ ||

ಅವನಿಗವನೆ ಗುರು ಶಿಷ್ಯ ಬಂಧ

‘ಅವನಿ’ಗವನ ಜತೆಗದೇ ಅನುಬಂಧ

ಅವನಾಗದೆ ಪದ ಪದವಿ ದುರಹಂಕಾರಿ

‘ಅವನಿಗದೆ’ ಭೂಷಣ ತಿಲಕಪ್ರಾಯ ಕುಸುರಿ ||

ಅವನಿಗವನೆ ಜೀವಾತ್ಮ ಪರಮಾತ್ಮ

‘ಅವನಿ’ಗವನೆ ಅದ ಸಾರುವ ಭೂತಾತ್ಮ

ಅವನಾಗದಿರೆ ದ್ರೋಣ, ಐಹಿಕ ಲೌಕಿಕ ತಲ್ಲೀನ

‘ಅವನಿ’ಗದೆ ಅಳಲು ಪಂಚಭೂತ ಲೀನಕೆ ಮುನ್ನ ||

– ನಾಗೇಶ ಮೈಸೂರು

೧೯.೦೪.೨೦೧೮

(Picture source: internet / social media)

01694. ಶಂಕರ..


01694. ಶಂಕರ..

___________________

ಆರ್ಯ ಆಚಾರ್ಯ

ಅದ್ವೈತದ ಪರ್ಯಾಯ

ಅವನೀಸುತನಾಗಿ ಧ್ಯೇಯ

ಅವರಲ್ಲವೆ ಶಂಕರಾಚಾರ್ಯ ! ||

ನೀರಲಿಟ್ಟಾ ಪಾದ

ಮಕರವಿಡಿದಿತ್ತಾಮೋದ

ಅಮ್ಮನಿಗದುವೆ ತಾನೆ ಶೋಧ

ವಚನವಿತ್ತಳಾಗೆ ಅವ ಜಯಪ್ರದ ||

ಅದ್ಭುತವಿತ್ತಾ ವಾಗ್ಜರಿ

ಕಾವ್ಯವಾಗೆ ಸೌಂದರ್ಯ ಲಹರಿ

ಲಲಿತೆಯಾಗಿ ಸುಲಲಿತ ಗೀತ

ಶಂಕರನಾಗಿ ಕಿಂಕರ ಶ್ರೀಮಾತ ||

ವಾದ ವಿವಾದ ಕುಸುರಿ

ಬಾರಿಸುತೆಲ್ಲೆಡೆ ಜಯಭೇರಿ

ತ್ರಿವಿಕ್ರಮನಾಗಿಯು ವಾಮನ

ಸೋಲೊಪ್ಪಿಕೊಳ್ಳುವ ಹಿರಿ ಗುಣ ! ||

ಬದರಿ ಶೃಂಗೇರಿ ಪುರಿ ದ್ವಾರಕ ಪೀಠ

ಸಂಸ್ಥಾಪನಾಚಾರ್ಯನವನಿಹ ದಿಟ

ತತ್ತ್ವ ಬೇರೂರಿಸಿದ ಪರಮಗುರು

ಹಿಡಿ ಆಯುಷ್ಯದಲೆ ಮಾಡಿ ನೂರಾರು ||

– ನಾಗೇಶ ಮೈಸೂರು

೧೯.೦೪.೨೦೧೮

(Picture source : Wikipedia)

01693. ತೂಗಿದನಿವ..


01693. ತೂಗಿದನಿವ..

______________________

ಜೋಕಾಲಿ ವನಮಾಲಿ

ರಾಧಾ ಮಾಧವ ಚಾಳಿ

ನಭಕೆ ಕಟ್ಟಿದ ಉಯ್ಯಾಲೆ

ತೂಗೊ ಹಗ್ಗದ ಹೂಮಾಲೆ ||

ಅವನೊ ಮಾನವ ಸಂತ

ಅವನಿಗು ಅವನೆ ಸ್ವಂತ

ಅವನಾರೆಂದರಿವವಸರದೆ

ಅವಳವನಾಗಿ ತೂಗೆ ಭರದೆ ||

ಕೂತವನವನೆ ಸಚಿತ್ರ

ತೂಗುವನವನೆ ವಿಚಿತ್ರ !

ಶಾಮಲ ತನು ನೆಪಮಾತ್ರ

ಅವನೆ ಭೂಮಿ, ಗಗನ ಪಾತ್ರ ||

ಜೋಕಾಲಿಯೆ ಲೀಲಾಜಾಲ

ಎಲ್ಲವವನದೆ ಮಾಯಾಜಾಲ

ರಾಧೆ ರುಕ್ಮಿಣಿ ಸತ್ಯಭಾಮೆ ನೆಪ

ತೋರಲೆಂದು ತನದು ವಿಶ್ವರೂಪ! ||

ಭೂಗೋಳವನವ ಜೀಕಿದವನು

ಜೋಕಾಲಿ ಕಟ್ಟಿ ತೂಗಿದ ತನ್ನನು

ಹರಿಯದಂತೆ ಬಿಗಿದಾಡಿಸು ಬಂಧ

ಅರಿಸೆಲ್ಲ ಕಾರ್ಯಕಾರಣ ಸಂಬಂಧ ||

– ನಾಗೇಶ ಮೈಸೂರು

೧೮.೦೪.೨೦೨೮

(Picture source internet / social media received viaChandrashekar Hs – thank you 🙏👍😊💐)

01692. ನಿನ್ನೆ ಇಂದು ನಾಳೆ


01692. ನಿನ್ನೆ ಇಂದು ನಾಳೆ

______________________________

ಬದಲಿಸಲಾರೆ ನೆನ್ನೆಗಳ

ಊಹಿಸಲಾರೆ ನಾಳೆಗಳ

ಇವತ್ತಿನದಷ್ಟೆ ಬಿಳಿ ಹಾಳೆ

ಬರೆದುಕೊ ಬೇಕಾದ್ದು ಮರುಳೆ ||

ನಿನ್ನೆಯ ಸಂಭ್ರಮ ಜಾತ್ರೆ

ನಾಳೆಯ ಭವಿತ ಕನಸು

ಇಂದಿದೆ ಕಣ್ಣಾ ಮುಂದೆ

ಇಡು ಹೆಜ್ಜೆ ಒಂದೊಂದೆ ||

ನಿನ್ನೆಯೆಲ್ಲ ಇನ್ನು ಬರಿ ಜಡ

ನಾಳೆಗಿಲ್ಲ ಖಾತರಿ ಬಿಡ

ಇಂದಾಗಲಿ ಆರಂಭ ಸರಿ

ಸಾವಿರವಿದೆ ಮೆಟ್ಟಿಲ ದಾರಿ ||

ನಿನ್ನೆಯಿತ್ತು ಪುಳಕ ದುಃಖ

ನಾಳೆಗೇನೊ ಅವನ ಚಳಕ

ಇಂದಾಗುತ ನಿನಗೆ ನೀನೆ

ಮುನ್ನಡೆ ಜತೆ ಬರುವ ಸೇನೆ ||

ಇಂದಲ್ಲಾ ನಾಳೆ ನಿಶ್ಚಿತ ಜಯ

ಸೋಲು ಗೆಲುವೆಲ್ಲ ನಿರ್ಭಯ

ನಡೆ ನಡೆ ನಡೆ ಜಗ್ಗದೆ ಮುಂದೆ

ನೀ ನಡೆಯೆ ನೋಡು ಜಗ ಹಿಂದೆ ||

– ನಾಗೇಶ ಮೈಸೂರು

೧೭.೦೪.೨೦೧೮

01691. ಕೋಕಿಲ ಗಾನ


01691. ಕೋಕಿಲ ಗಾನ

______________________

ಕುಹು ಕುಹು ಕುಹು ಕೋಕಿಲ

ತೆರೆ ನಿನ್ನ ಎದೆಯ ಬಾಗಿಲ

ನನ್ನ ಮನವಿತ್ತಲ್ಲ ಚಂಚಲ

ನಿನ್ನ ದನಿಗಾಯಿತೆ ಮೃದುಲ ||

ಯಾವ ಮರದ ಚಿಗುರಲಿ

ದನಿಯಾಗದೇನೊ ಇಂಪಲಿ

ಯಾವ ಕವಿಯ ಕವನವದೆ ?

ನೀನೋದುತೆ ಹಾಡಾಗಿದೆ ! ||

ಏನಿದೇನು ಮತ್ತೆ ಮತ್ತೆ

ಘಳಿಗೆ ಘಳಿಗೆ ಮತ್ತೇರಿತೆ ?

ಎಡಬಿಡದೆಲೆ ಕಾಡುವ ಸ್ವರ

ಕೊರಳಲಿಹರೆ ಸುರ, ಕಿನ್ನರ ? ||

ನಿಶ್ಯಬ್ಧವಿದು ಸುತ್ತಮುತ್ತ

ಬೆರಳಿಟ್ಟಿದೆ ಮೌನ ಸೂಕ್ತ

ತೊಡಕಾಗೆ ನಿಂತೀತೊ ಗಾನ

ಅಲುಗಾಡದ ಮರದೆಲೆ ಜಾಣ ||

ನೀನೆಬ್ಬಿಸಿದ ಭಾವದ ಭೃಂಗ

ಏನೇನೊ ವೀಣೆ ಮೀಟಿ ತರಂಗ

ಒಳಗೇನೇನೊ ಅನುಭೂತಿ ಪದರ

ಮನಸಾಗಿ ನಿನ್ನ ಹಾಡಿನದೆ ಸಡಗರ ||

– ನಾಗೇಶ ಮೈಸೂರು

೧೭.೦೪.೨೦೧೮

(Picture source: Wikipedia)

01690. ಮಾತಾಡಿತು ಮಳೆ


01690. ಮಾತಾಡಿತು ಮಳೆ

___________________________

ಸದ್ದಿಲ್ಲದೆ ಮಳೆ ಮಾತಾಡುತಿದೆ

ಕಿಟಕಿಯಾಚೆ ನಭದಲ್ಲಿ ಅವಿರತ

ಸಂದೇಶವೇನೊ, ಯಾರ ಪರವೊ

ತಂದೆರಚುತಿದೆ ಹನಿಹನಿ ಕಾಗುಣಿತ ||

ಸುತ್ತೆಲ್ಲ ಗಾಢ ನಿಗೂಢ ನೀರವ

ಮಬ್ಬು ಕವಿದ ಪರಿ ಮಂಕು ಆವರಣ

ನುಸುಳುತಲ್ಲಿಲ್ಲಿ ನಸು ಬೆಳಕ ಕಿಂಡಿ

ಹಗಲೆ ಇರುಳಾಗೊ ಮೋಹ ಮಾಯೆ ||

ಆಲಿಸುತಿಹರೆಲ್ಲ ಧಾರೆಗೇನೊ ಆವೇಗ

ಚಡಪಡಿಕೆ ಮನದಲಿ, ಮಳೆಯದೆ ತರ

ನಿಂತುಹೋಗಿಬಿಡುವ ಭೀತಿ ಧಾವಂತ

ಅವಸರದಲೇನು ತೋಚದಾ ಮೊರೆತ ! ||

ಏನೋ ಘಳಿಗೆ ಬಿರಿದ ಗಗನ ತನ್ನೊಡಲು

ಬಾನ ಕಡಲಲಿ ಏನೇನೊ, ತುದಿಮೊದಲು

ಮನದೇನೊ ಉತ್ಕರ್ಷ ಹೇಳುತಿದೆ ಅಸ್ಪಷ್ಟ

ಮಾಡಲೇನೊ ಇದ್ದೂ, ಅರಿವಿರದೆ ಚಂಚಲಿತ ||

ಯಾಕೀ ಉದ್ಘೋಷ, ಮಳೆಯಾಗೊ ಹೊತ್ತಲಿ?

ಮನಸೇಕೊ ತಡಬಡಿಸಿ ಹುಡುಕುವ ಗೋಜಲು..

ಏನಿಹುದಿ ಬಂಧ ಸಂಬಂಧ ಭಾವನೆ ಬೆಸುಗೆ ?

ಬದಿಗಿತ್ತು ಕೂರೆ ಚಂದ ಸುರಿವ ಮಳೆ ನೋಡುತ ! ||

– ನಾಗೇಶ ಮೈಸೂರು

೧೫.೦೪.೨೦೧೮

(Picture source : Internet / social media)

01689. ಪ್ರೇಮದಾ ಜಗದಲಿ…


01689. ಪ್ರೇಮದಾ ಜಗದಲಿ…

_________________________________

(ಭಾನುವಾರಕ್ಕೊಂದು ಚಿತ್ರ-ಕವನ)

ಎಂಥ ಆಘಾತ, ಚಂದ ನವಿರಾದ ಹೊಡೆತ

ಹಾರಾಡುವ ಕೇಶ, ಕೊಟ್ಟ ಕಚಗುಳಿ ಗೊತ್ತ?

ಪರವಶ ನಾನಾದೆ ಮೈಮರೆತು ಹೋದೆ ಗಳಿಗೆ

ಮುಚ್ಚಿದ ಕಣ್ಣಲು ಯಾಕೊ, ಅವಳದೆ ಮುಗುಳ್ನಗೆ ||

ಲೀನ ತಲ್ಲೀನ, ಅವಲೋಕನದಲಿದೆ ಮನಸು

ಕಾಡಿದರು ಹಗಲಿರುಳು ಬಾರದಲ್ಲಾ ಮುನಿಸು

ಅವಳೊಮ್ಮೆ ತಿರುಗಿ, ಚೆಲ್ಲಿದಾ ನೋಟದ ಸೊಗಸು

ಮಿಕ್ಕೆಲ್ಲ ಮನ್ನಾ, ಅಪರಾಧಕೆ ಶಿಕ್ಷೆ ಬರಿ ಹೊಂಗನಸು ||

ಮೊಗದಲೇನೊ ಸಂತೃಪ್ತಿ, ನಿರಾಳತೆ ಮುಕುರ

ತೆಗೆದೇನೇನೊ ವರಸೆ, ಮನಕದ್ದ ಜೀವಾಳ ಸ್ವರ

ನೀನಪ್ಪಿದ ಪುಸ್ತಕ ತುಂಬ, ನಾ ಬರೆದ ಕವನಗಳೆ

ಮುತ್ತಿಗೆ ಹಾಕಲಿವೆ ಕನಸಲು, ಬಿಚ್ಚಿಟ್ಟು ತರ ರಗಳೆ ||

ಸುಳಿದುಹೋದೆ ನೀನು, ನಿನ್ನೆ ಬೀಸುತ ಬೀಸಣಿಗೆ

ಯಾವ ರಾಗ ಕಟ್ಟಲೆ, ನಿನ್ನ ಮಾತಾಗುವ ಲಾವಣಿಗೆ

ನಿನ್ನಾ ಬಣ್ಣಿಸಲೂ ಭೀತಿ, ಸಾಲದಲ್ಲ ಫಲ ಕುಸುಮ

ಸಿಕ್ಕರು ಪದಗಳೆ ಸೋತು, ಶರಣಾಗುವ ಸಂಗ್ರಾಮ ||

ನೋಡಿದೆಯ ಬಂಧವಿದು, ಬಂಧನವಾಗೆ ಹಿತಕರ

ಬರುವಾ ಹತ್ತಿರ ಹತ್ತಿರ, ಇರಲಿ ನಡುವೆ ಸರಿ ದೂರ

ಮುಗ್ದತೆಗಿರೆ ಮಾದಕತೆ, ಸಹಜವಿರೆ ಬಾಳುವೆ ಗೀತೆ

ಹಾಡುವ ಇಬ್ಬರು ಜಗ ಮರೆತು, ನಾವೇ ನಾವಾಗುತೆ ||

– ನಾಗೇಶ ಮೈಸೂರು

೧೪.೦೪.೨೦೧೮

(Picture source : internet / social media)

01688. ಪಿಸುಮಾತು..


01688. ಪಿಸುಮಾತು..

________________________

ಪಿಸುಮಾತಿದು ಗುಟ್ಟಲ್ಲ

ರಟ್ಟಾಗಿಸೊ ಮನಸಿಲ್ಲ

ಮೆಲುದನಿಸುತ್ತ ಹಾಡಾಗುತಿದೆ

ಹಾಡಿನ ಭಾವ ಮನದೆ ಕುದುರೆ ||

ಮೆಲುಕು ಹಾಕುತ ಮಾತು

ಒಳಗೇನೇನೊ ಅನುರಣಿಸಿತ್ತು

ಅರಿವಾಗುತಿದೆಯೆ ಏನೊ ತಿಲ್ಲಾನ ?

ಬಡಿದೆಬ್ಬಿಸಿದಂತೆ ಏನೇನೊ ತಲ್ಲಣ ||

ಏನಿದು ಪದ, ಶಬ್ಧದಾ ಶಕ್ತಿ ?!

ಕೃತಿಗು ಮುನ್ನವೆ ಫಲಿತ ರೀತಿ

ಯಾರಿಗೂ ಸೋಲದ ಭೀಮಕಾಯ

ಕಣ್ಮುಚ್ಚಿ ಹಾಲು ಮಾರ್ಜಾಲ ನ್ಯಾಯ ||

ಮಾತಿದು, ಮಾತಲ್ಲ ಸಂವಹನ

ಹೇಳಲಾಗದ್ದು, ತಾನಾಗುತ ಕವನ

ಬಿಟ್ಟಪದಗಳ ತುಂಬಿಕೊಳುವೆ ತಾನೆ ?

ಅನುಮಾನವಿಲ್ಲ, ನಾ ಬಲ್ಲೆ ನೀ ಜಾಣೆ ||

ನೀನಾಡದ ಮಾತು, ಮೌನ ಸೊಗಡು

ಪಿಸುಮಾತಿನ ಬದಲಿ ಕಿರುನಗೆ ಕಾಡು

ಬಿಡಿಸಿಒಗಟ, ಇರಲಿ ಬಿಡಲಿ ಮೊತ್ತ

ಬಿಟ್ಟುಬಿಡು ಹಠ, ನಿನ್ನಾಗಿಸುವೆ ನನ್ನ ಚಟ ||

– ನಾಗೇಶ ಮೈಸೂರು

೧೩.೦೪.೨೦೧೮

(Picture source: Internet / social media)

01687. ಉದಾಸೀನ ತನುಮನ…


01687. ಉದಾಸೀನ ತನುಮನ…

_________________________

ಏಕೋ ಉದಾಸಿ ಮನ

ನಿರುತ್ಸಾಹವಾಗಿ ದ್ವಿಗುಣ

ಯಾಕೊ ಖಾಲಿತನ ಅನುರಣ

ಏನೂ ಬೇಡದ ವಿರಾಗಿ ತಲ್ಲಣ ||

ಕೂತಲ್ಲೆ ಕೂರಲೂ ಬಿಡ

ಆಲಸಿಕೆ ಆವರಿಸಿ ಜಡ

ಮುದುರಿ ಕಟ್ಟೆಸೆದ ಪೊಟ್ಟಣ

ಮೂಲೆಗುಂಪಾದಂತೆ ನಿತ್ರಾಣ ||

ಜಡ್ಡಾದಂತೆ ನೋವೆಲ್ಲೆಲ್ಲೊ

ಮೀನಖಂಡ ಹಿಂಡಿದ ಗುಲ್ಲೊ

ಜ್ವರವೇರಿ ತಲೆಭಾರ ತನು ಅಸ್ಥಿರ

ಹೀರಿ ಹಿಪ್ಪೆಯಾದಂತೇನೊ ನಿಸ್ಸಾರ ||

ಒಳಗ್ಹೊರಗೇನೊ ನಡುಕ, ನಿಸ್ತೇಜ

ಹೇಳಲಾಗದದೇನೊ ಭಾವದಸಹಜ

ಮಾತಾಗೆ ಮುನಿಸು ಮೌನ ಕ್ರೋಧ

ಯಾಕೀ ಗಳಿಗೆ ಕ್ರೂರ ಅಸ್ಪಷ್ಟ ಶೋಧ ||

ಏಕೀ ಕಾರಣವಿಲ್ಲದ ಮನ ಚಾರಣ ?

ದಿಕ್ಕುದೆಸೆಯಿರದ ಚರ್ಯೆಯನಾವರಣ

ಚಂಚಲ ಪ್ರಕೃತಿಯೆನದಿರು ಅನುಭೂತಿ

ಅನುಭಾವ ಅನುಭವ ಗೊಂದಲ ಅಪಶೃತಿ ||

– ನಾಗೇಶ ಮೈಸೂರು

೧೨.೦೪.೨೦೧೮

(Picture source : internet / social media)

01688. ನಕ್ಕುಬಿಡೆ


01688. ನಕ್ಕುಬಿಡೆ

_____________________

ನಕ್ಕುಬಿಡೆ ಮನಸಾರೆ

ದುಃಖವಿರದವರಾರೆ ?

ನಗೆಯರಳಿಸೆ ಮನ ಮಲ್ಲೆ

ಸಮತೋಲಿಸಲದೆ ಮೊದಲೆ ||

ಯಾಕ್ಹೀಗೆ ಬಿಕ್ಕುವೆ ಬಿಡುಬಿಡು

ಸಂತೈಸೆ ಬಹರಾರು ನೋಡು

ಗಡುವಿಲ್ಲ ಸುಖದುಃಖ ಬಿಡದು

ಒಂದರ ತರುವಾಯ ಮತ್ತೊಂದು ||

ಬಂದವರ ಮಾತಿನ ನಿಂದೆ

ಹುನ್ನಾರವೇನಿದೆಯೊ ಹಿಂದೆ

ಛಲ ಬಿಡದೆ ಕುಗ್ಗದೆ ನೀ ನಿಲ್ಲೆ

ತೊಡು ನಿರ್ಲಿಪ್ತತೆ ವಿಷಾದವ ಗೆಲ್ಲೆ ||

ಕಾಣಲೆಂದು ನೋವಿನ ಗಿರಣಿ

ಬಂದಾಗುವರು ಚಕಿತ ಸರಣಿ

ನಗುವನುತ್ಪಾದಿಸೆ ಮನ ಕಾರ್ಖಾನೆ

ನೋವ ಮರೆಸಿ ಆತ್ಮವಿಶ್ವಾಸ ತಂತಾನೆ! ||

ನಕ್ಕುಬಿಡೆ ಮೆಲ್ಲ, ಆಗಲಿ ಕಿಲಕಿಲ

ಮಾರ್ಜಾಲ ಜಗವನೇಮಾರಿಸೆಜಾಲ

ನೀನಾಗು ನೀನು, ನಿನ್ನ ಹಿಂಬಾಲಿಸೆ

ಬರುವ ಜನಕೆ ನಾಯಕಿ, ನೀನಾಗಿ ಲೇಸೆ ||

– ನಾಗೇಶ ಮೈಸೂರು

೧೨.೦೪.೨೦೧೮

(Picture source: internet / social media)

01687. ಗಿಳಿ ಕಚ್ಚಿದ ಹಣ್ಣು


01687. ಗಿಳಿ ಕಚ್ಚಿದ ಹಣ್ಣು

__________________________

ಮಾವ ಬೆಳೆ ಮಾವ

ನವ ವಸಂತದ ಭಾವ

ಮಾವ ನವವಾಗೆ ಮಾನವ

ಮಾವನವ ಹೆತ್ತ ಹೆಣ್ಣ ಕೊಟ್ಟವ ||

ಅನುಭಾವ ಪ್ರಣತಿ

ಉದ್ದೀಪನ ಅನುಭೂತಿ

ಅನುಭವ ರೂಪಿಸಿ ಜಗದೆಲ್ಲ

ಮಾವು ಹಣ್ಣಾಗಿ ಮಾಗೊ ಕಾಲ ||

ಜೀವಜಾಲ ಸರಪಳಿ

ಮಾವಿಂದ ಜೀವಕೆ ಪಾಳಿ

ಗಿಳಿ ಹಸಿರಲಿ ಶುಭಾರಂಭ

ಮಾವಿಗೆ ಕೊಕ್ಕಲಿ ಸಮಾರಂಭ ||

ಯಾರು ಸುಖಿಯಿಲ್ಲಿ ?

ಕುಕ್ಕಿ ತೃಪ್ತ ಸಂತೃಪ್ತ ಗಿಳಿ

ಕೊಟ್ಟು ಸಿಹಿಯಾಗುವ ಮಾವು

ಬೀಗಿ ನಾಚಿ ಕೆಂಪಾಗುತ ಒಲವು ||

ಮಾವ ಹಣ್ಣಿತ್ತ ಮರ ಗಣ್ಯ

ಹೆಣ್ಣಿತ್ತ ಮಾವನಂತೆ ಕಾರುಣ್ಯ

ಕುಕ್ಕಿ ರುಚಿ ನೋಡೊ ಗಿಳಿಹಿಂಡು

ಆಗದಿದ್ದರೆ ಸರಿ ಪೋಕರಿ ಪುಂಡು ||

– ನಾಗೇಶ ಮೈಸೂರು

೧೦.೦೪.೨೦೧೮

(Picture source : Karnataka vishesha – kaviputa :

01686. ಬಿಡುವಿಲ್ಲ


01686. ಬಿಡುವಿಲ್ಲ

____________________

ಕೂರಲಿದೆ ಆರಾಮ ಸೋಫಾ

ಕೂರಲಿಲ್ಲ ಸಮಯ

ನೂರೆಂಟಿವೆ ಟೀವಿ ಚಾನೆಲ್ಲು

ನೋಡಲಿಲ್ಲ ಬಿಡುವು ||

ಮನೆಯೊಳಗಿದೆ ಕೈತೋಟ

ಹೊತ್ತಿಲ್ಲ ಗಮನಿಸಲು

ವಾಕಿಂಗಲು ಅವಸರ ಸುತ್ತ

ನೋಡದೆ ನಡೆದಿರಲು ||

ಜನರಿಂದಾವೃತ್ತ ಸುತ್ತಲು

ನಗೆ ಮಾತಿಲ್ಲ ಹೊನಲು

ಮಾತು ನಿಂತಿಲ್ಲ ಅರೆಕ್ಷಣವು

ಮಾತಾಡಿಸುತಿದೆ ಮೊಬೈಲು ||

ಎಷ್ಟೊಂದಿದೆ ಐಷಾರಾಮ

ಟೈಮಿಲ್ಲ ಲೆಕ್ಕಿಸಲು

ತಂದಿಟ್ಟಾಯ್ತು ದೇವಮೂಲೆ

ಉಳಿಯದೆ ನೆನಪಲ್ಲು ||

ಅವಸರವೆ ಏರಿದ ಕುದುರೆ

ಅವರವರದೆ ಮೈದಾನ

ಕೊಳುವ ಶಕ್ತಿ ಹೆಚ್ಚಿಸೆ ಧಾವಂತ

ಅನುಭವಿಸೊ ಶಕ್ತಿ ನಿದಿರೆ ||

– ನಾಗೇಶ ಮೈಸೂರು

೦೯.೦೪.೨೦೧೮

(Picture source: http://www.shutterstock.comhttps://goo.gl/images/dsyx9j)

01685. ಅವಳಾಗಿ ಸಂಗೀತ


01685. ಅವಳಾಗಿ ಸಂಗೀತ

______________________________

ಕಂಡೆ ಅವಳ ಮೊಗದ ತುಂಬ

ಸರಿಗಮಪದನಿ ಸಂಗೀತ ನಾದ

ನಿಂತ ನಿಲುವೆ ರಾಗ ತಾಳ ಪಲ್ಲವಿ

ಮಧುರ ವಾದ್ಯ ವದನವೆ ಸಾಹಿತ್ಯ ||

ಸಂಗೀತವೆ ದನಿಯಾದವಳವಳು

ಹಾಡಲು ಸುತ್ತ ನೆರೆದವೆ ಕೋಗಿಲೆ

ಆಲಿಸುವಳು ತನ್ಮಯಳಾಗಿ ತಾನೆ

ಬರಿ ಸುರರಾಗಗಳದೆ ಪರಿಭ್ರಮಣೆ ||

ದನಿ ತಾಳಬದ್ಧ ಲಯಬದ್ಧ ಏರಿಳಿತ

ಸಂಗೀತದ ಜತೆಗೂಡಿರಲೂ ನಾಟ್ಯ

ಸುಶ್ರಾವ್ಯದಲವಳ ಮನ ಹಾಡಿರಲೆ

ಧರೆಗಿಳಿದ ಸೊಬಗಲ್ಲಿ ಕಿನ್ನರ ಲೋಕ ||

ಹಚ್ಚಿದ ರಂಗು ಉಟ್ಟ ದಿರಿಸಲ್ಲ ಛವಿ

ಉಲ್ಲಾಸದ ಮನ ಪ್ರಪುಲ್ಲತೆ ಅರಳಿ

ಹೂವಂತೆ ತನುಮನವರಳೆ ಹಿಗ್ಗಲಿ

ಸಲ್ಲಿಸಿ ಸೇವೆ ಕಲೆಯಾರಾಧಿಸಿ ಬಾಲೆ ||

ಗುಣುಗುಣಿಸುತ್ತ ರಿಂಗಣ ದೇಗುಲ

ಘಂಟಾನಾದ ಮೊಳಗೆಬ್ಬಿಸಿ ದೈವ

ಮುಂಜಾವು ಮುಸ್ಸಂಜೆ ಎಲ್ಲ ವೈಭವ

ಪ್ರತಿಧ್ವನಿಸಿದ್ದೆಲ್ಲ ಮೊಗದೆ ಪ್ರತಿಫಲನ ||

– ನಾಗೇಶ ಮೈಸೂರು

೦೮.೦೪.೨೦೧೮

(Picture source : social media/internet)

01684. ಬದುಕಾಗಿ ಕ್ರಿಕೆಟ್ಟಿನ ಹಾಗೆ..


01684. ಬದುಕಾಗಿ ಕ್ರಿಕೆಟ್ಟಿನ ಹಾಗೆ..

____________________________________________

ಆಗೊಂದಿತ್ತು ಕಾಲ

ಲೈಫಾಗಿತ್ತು ಟೆಸ್ಟ್ ಮ್ಯಾಚ್

ಐದು ದಿನದ ಆಟ

ಹುಟ್ಟಿಗೊಂದು ದಿನ

ಬಾಲ್ಯ ಯೌವನಕೊಂದೊಂದು

ಗೃಹಸ್ಥ ವೃದ್ಧಾಶ್ರಮಕಿನ್ನೆರಡು

ಒಮ್ಮೆ ತಪ್ಪಿದರು ಹೆಜ್ಜೆ

ಎರಡನೆ ಇನಿಂಗ್ಸಲಿ ಮೋಜೆ

ಇರಲಿಲ್ಲ ಹರಿಬರಿ ಜಗದೆ

ಹತ್ತರಿಂದ ಐದರ ತರದೆ… ! ||

ಆಮೇಲಾಯ್ತು ಒನ್ ಡೇ

ಐದು ದಿನವಾಗಿ ಐವತ್ತು ಓವರ್

ಒಂದೊಂದೆ ಇನಿಂಗ್ಸಿನ ಲೆಕ್ಕ

ಅಲ್ಲೆ ಬಾಲ್ಯ ಹರೆಯ ವೃದ್ಧಾಪ್ಯ..

ಓಡಿಸಿ ಕುದುರೆ ನಾಗಲೋಟ..

ನಡುನಡುವೆ ಅನಿಶ್ಚಿತತೆ ಯೋಗ

ಪವರ್ ಪ್ಲೈ ಕೊಟ್ಟೇನೊ ಆವೇಗ

ಒತ್ತಡದಲುದುರಿಸೆ ಹಣ್ಣು ಗಟ್ಟಿ

ಒಂದೇ ದಿನದಲುತ್ತರ ಮುಟ್ಟಿ

ವ್ಯಾಪಾರಕೆ ಹಗಲಿರುಳಾಟದುದ್ವೇಗ.. ||

ಸಾಲದೇ ಬದುಕಿಗೆ ಉನ್ಮಾದ

ಕಾಯುವ ಸಹನೆಗಿಲ್ಲ ಯೋಗ

ಆಗಬೇಕೆಲ್ಲ ಬಾಲ್ಯ ಪ್ರಾಯ ಮುಕ್ತಾಯ

ಒಂದೇ ಗಳಿಗೆಯಲೆಲ್ಲ ಅನಿವಾರ್ಯ !

ಇಪ್ಪತ್ತೆ ಓವರಿನಾಟ ಮೊತ್ತ

ಮಿಂಚಿ ಮರೆಯಾಗೆ ಸಾಕೆನ್ನುತ

ಬಾಚಿಕೊ ದಕ್ಕಿದ್ದೆಲ್ಲ ಅರೆಗಳಿಗೆ

ನಾಳೆ ಇದೆಯೊ ಇಲ್ಲವೊ ಮಳಿಗೆ

ಮರುಕಳಿಸಳಿಸಿ ತನು ಕುಗ್ಗೆ ಬೆಂದು

ಮಾಯವಾದವರ ಹೆಸರೆ ಅಪರಿಚಿತ.. ||

ಬದುಕಿಂದಾಗಿ ಹೋಗಿದೆ ಅಂತೆ

ಟೆಸ್ಟು ಒನ್ ಡೆ ಟ್ವೆಂಟಿ ಟ್ವೆಂಟಿ

ಅವಸರ ಕಾಲಕೊ ಕಾಲನಿಗೊ

ಬೆನ್ನಟ್ಟುವ ಜನ ಮನ ಪದಕೊ..

ಕಳುವಾಗಿ ಹೋದ ಇತಿಹಾಸ

ದಾಖಲೆ ಮುರಿದು ಬರೆದಾಟ

ಘಟಿಸುತಿದೆ ಎಲ್ಲ ಪಟಪಟನೆ

ಕಾಣಿಸದೆಲೆ ಗುರಿ ಸಂಘಟನೆ

ಬೇಕಿತ್ತೆ ಪ್ರಶ್ನೆ – ಯಾಕವಸರವಿದು ?

ಉತ್ತರವಿಲ್ಲ ಬಿಜಿ ಆಟದಲೆಲ್ಲರು ! ||

– ನಾಗೇಶ ಮೈಸೂರು

೦೮.೦೪.೨೦೧೮

(Picture source : https://goo.gl/images/kfkYTV)

01683. ಪ್ರೇಮ ಸಮರ


01683. ಪ್ರೇಮ ಸಮರ

___________________________

ಅವಳ ಕಣ್ಣ ಬತ್ತಳಿಕೆ ತುಂಬ

ಕೋಲ್ಮಿಂಚ ಬಾಣ ಬಿತ್ತರಿಸೆ ಪ್ರೇಮ

ಗಾಳಕೆ ಸಿಕ್ಕ ಮೀನಂತೆ ಹೃದಯ

ಚಡಪಡಿಸಿ ಬಲೆಗೆ ಬಿದ್ದು ಗೋಳಾಟ ||

ಕಾಣದಾ ಬಾಣ ಸಿಗದಲ್ಲ ಲೆಕ್ಕ

ಜೊಂಪೆ ಜೊಂಪೆ ಮುಂಗುರುಳ ತರಹ

ಜೋತಾಡೊ ಮನದೆ ನೇತವಳ ಚಿತ್ರ

ಬರಿ ಕಂಗಾಲು ಚಿತ್ತ ಭ್ರಮಿಸುತ್ತ ಪರವಶ ||

ಜೊಂಪೆ ಸ್ಪರ್ಷ ಕೆನ್ನೆ ನೇವರಿಸೆ ಸದ

ದಾಳಿಂಬೆಯಂತೆ ಬಿಚ್ಚಿಟ್ಟ ಕನ್ನೆಯಧರ

ದಂತಕಾಂತಿ ಬರೆದ ಪ್ರಣಯಪತ್ರಕೆ

ಉತ್ತರಿಸಲಾಗದೆ ತತ್ತರಿಸಿ ಶರಣಾಗತ ||

ತುಟಿ ತೆರೆದ ಕದ ಮುಗುಳ್ನಗೆ ಸಿದ್ಧ

ಮೌನದ ಪ್ರಹಾರ ಅದೃಶ್ಯ ಪ್ರತಿರೋಧ

ನೀಡಿ ಕೈ ಯೋಧ ಬೇಡಿದ ಬೇಡಿ

ಬೊಗಸೆಯಲ್ಹಿಡಿದು ಬರೆದಳಲ್ಲೆ ಮುನ್ನುಡಿ ||

ಶರವರ್ಷವಲ್ಲ ಸುಮಬಾಣ ಧಾರೆ

ಘಾತಿಸಿದವಲ್ಲ ಕುಸುಮ ಕಂತುಕದಲೆ ಭಲೆ

ಯಾವ ಸಮರಕೆ ಕಮ್ಮಿ ಪ್ರೇಮ ಯುದ್ಧ

ಕಾವ್ಯ ಬರೆಸಿತೊ ಬಿಟ್ಟಿತೊ ಸಂಗಮ ಧನ್ಯ ||

– ನಾಗೇಶ ಮೈಸೂರು

೦೭.೦೪.೨೦೧೮

(Picture source: Internet / social media)

01682. ಘಟ-ಸಿದ್ಧ


01682. ಘಟ-ಸಿದ್ಧ

_____________________

ಸಾಲುತಿಲ್ಲ ಸಾಲು ಬಿಡ

ಬೇಕಿನ್ನು ಪಾಪದ ಕೊಡ

ತುಂಬಿಸಿಡಲಿದುವೆ ಉಗ್ರಾಣ

ಮಂಕೆರಚೆ ರಂಗೋಲಿ ಜಾಣ ||

ಸಾಲದಲ್ಲ ನೆಲದ ಸಾಲು

ಒಂದರ ಮೇಲೊಂದು ಸೂಲು

ಮಾಯೆಯವಳು ಮರೆಸಿದರು

ಮಾಯವವನು ತೆರೆಸೆ ಜರೂರು ||

ಘಟ ಘಟ ಘಟ ಭಲೆ ಮಾಟ

ಕಾಣದಲ್ಲ ತಿದಿ ಮಣ್ಣ ಸಂಕಟ

ಚಿತ್ತಾರ ತೊಡಿಸಿ ಮಾರಾಟ

ಯಾರಿಗಿಲ್ಲ ಕೊಳ್ಳುವ ಚಟ ! ||

ಮಡಿಕೆ ಹೊತ್ತ ಮಡಿಕೆ ಮೇಲೆ

ಹೊಣೆ ಹೊತ್ತ ಬದುಕ ಲೀಲೆ

ಹೊರುವೆತ್ತರ ಇರಲವ್ವ ಮಿತಿ

ಹೊರದೆ ನೆಲದೆ ನಗುವ ಧೂರ್ತಿ ||

ಘಟವಾದನ ಪುಟಿಯುವ ಸದ್ದು

ಚೆಂಡಾಗಿ ಪುಟಿವನೆ ತಾ ಖುದ್ಧು ?

ಪುಟಿಸಿದನೆ ಗೋರ ಕುಂಬಾರ

ಪುಟಿಯಲೆಂತು ತನು ಹೆಣಭಾರ ? ||

– ನಾಗೇಶ ಮೈಸೂರು

೦೭.೦೪.೨೦೧೮

(Picture source: ೩ಕೆ ನಮ್ಮ ಚಿತ್ರ ನಿಮ್ಮ ಕವನ ೫೩ಕ್ಕಾಗಿ ಬರೆದ ಕವನ)

01681. ಧಾರಾಕಾರ..!


01681. ಧಾರಾಕಾರ..!

______________________

ಬಿಚ್ಚಿದರೆ ಜಲಪಾತ

ಕಪ್ಪು ನೀರು ಗೊತ್ತಾ?

ಕಪ್ಪು ನೀರಲ್ಲ ನೀರೆ

ಶಿರವದು ಬಿಚ್ಚಿದ ಸೀರೆ ! ||

ನೀಲವೇಣಿಯ ಪ್ರವರ

ಜಾರಿ ಪದಾತಲ ಜಾಲ

ನಖಶಿಖಾಂತ ಅನಂತ

ಮೀರಿ ವ್ಯೋಮ ಪಾತಾಳ ! ||

ನಾಗರ ಸಂತತಿ ಯೋಗ

ನಾಗರಾಣಿಯ ಸೊಗಡು

ಸುತ್ತಿದ ಸಿಂಬಿ ಸೊಬಗು

ಬಿಚ್ಚಿದಲೆ ಮನವವಳದು ! ||

ಕರ ಬಾಚಲಾಗದ ಅಗಾಧ

ಬಾಚಣಿಗೆ ಹೆಣಗುವ ಯೋಧ

ಬಾಚಲೊಲ್ಲದ ಅಪರಿಮಿತ

ಬಾಚಿ ಕಟ್ಟುವುದಷ್ಟೆ ಉಚಿತ ! ||

ಕೇಶದೆಳೆ ನೂಲ ಬಲೆಯದು ಕಲೆ

ನೇಯ್ದರದೆ ವಸ್ತ್ರ ತರುಣಿಗೆ ಭಲೆ!

ಲಾಸ್ಯ ಲಾಲಿತ್ಯ ಸಾಹಿತ್ಯ ಘಮಲು

ನೀಳಕೇಶದೊಡತಿ ನಿತ್ಯದ ಅಮಲು ||

ಜಲಲ ಸಲಿಲ ಮನ ನೀಲ ಚಿಕುರ

ನಭವವಳ ಅಗಲ ವ್ಯಾಪ್ತಿ ವಿಶಾಲ

ಮುಡಿಯಂತೆ ಬಚ್ಚಿಟ್ಟ ಕೋಟಿ ಸತ್ಯ

ಎದೆ ಕೋಟೆ ಬಿಚ್ಚೆ ಗುಟ್ಟೆಲ್ಲ ಬಯಲಿಗೆ ! ||

– ನಾಗೇಶ ಮೈಸೂರು

೦೪.೦೪.೨೦೧೮

(Another version wrote for the same video – from Internet / social media received via Yamunab Bsy – thank you !🙏👍💐😊)

01680. ಉದ್ದ ಕೇಶದ ಕ್ಲೇಷ! (ಲಘು ಹಾಸ್ಯ)


01680. ಉದ್ದ ಕೇಶದ ಕ್ಲೇಷ! (ಲಘು ಹಾಸ್ಯ)

_____________________________________________

ಬೇಡಪ್ಪ ಸಾಕು, ಸಾಕೀ ನೀಳ ಕೇಶ !

ಎರಡು ಗಳಿಗೆ ಹರ್ಷ, ಮಿಕ್ಕಂತೆ ಕ್ಲೇಷ

ನೀಳವೇಣಿ ಪಾದದಾಚೆಗೂ ನೂಲೇಣಿ

ನಿಭಾಯಿಸೆ ನೆಲಕೆ ಹಾಕಲೆಂತು ಏಣಿ ? ||

ಮೋಟು ಜಡೆಗುಂಟು ಮಾರುದ್ದ ಹೂವು

ಇಷ್ಟುದ್ದ ಕೇಶವಿರೆ ಹೊರೆ ಹೊತ್ತ ನೋವು!

ತರಲೆಂತು ಆನೆಗೆ ಅರೆ ಕಾಸ ಮಜ್ಜಿಗೆ ?

ಸಾಕಾಗದಲ್ಲ ತಂದಿಟ್ಟರು ಹೂ ಮಳಿಗೆ ! ||

ಬಾಚಲ್ಹೊರಡೆ ವೈಭವ, ಸೋತ ಕರವೆ

ಸಿಕ್ಕು ಬಿಡಿಸದೆ ಸಿಕ್ಕ ಸಿಕ್ಕಲಿ ಮಾಯವೆ..

ಉಪಚಾರಕದಕೆ ಬೇಕೊಬ್ಬ ಚಾರಿಣಿ ಸಖ್ಯ

ತರಲೆಂತು ಪರರ, ತನ್ನ ಸಾಕುವುದೆ ಅಶಕ್ಯ ! ||

ಸಾಲದೇನು, ಬದುಕಿತ್ತ ಸಾಲದ ಹೊರೆ ?

ಹೊರಲೆಂತು ಮೇಲೆ ಕೇಶ ಭಾರ ಭಳಿರೆ..

ಹೊತ್ತ ಬೇನೆ, ತಲೆ ನೋವಾಗಿ ಮುತ್ತಿದರು

ತೋರದೆ ನಗುತ, ಪ್ರದರ್ಶಿಸುವ ಜರೂರು ! ||

ಯಾರಿಗ್ಹೇಳುವುದು, ಮಜ್ಜನ ಚಿತ್ರಹಿಂಸೆ

ಎಣ್ಣೆ ಸೀಗೆ ಚುಜ್ಜಲಪುಡಿ ಸೋಪಿನ ವರಸೆ

ಒದ್ದೆ ತಲೆಯೊಣಗಲು ಕ್ಷಣಗಣನೆ ಮೊತ್ತ

ಸುರುಳಿ ಸುತ್ತಲೇ ಹಗೆ, ಜಡೆ ಹೆಣೆಯಲೆಂತ ? ||

ನೋಡುಗರ ಕಣ್ಣು, ಊರವರ ಮಾತಾಟ

ಕತ್ತರಿಸಲೆಂತು, ಬಿಸಿ ತುಪ್ಪದ ನುಂಗಾಟ

ಅರೆಗಳಿಗೆಯಾ ಹೊಗಳಿಕೆ, ಮೆಚ್ಚಿಗೆ ಮುದಕೆ

ಎಷ್ಟಪ್ಪ ಸಂಕಟ ಪ್ರಭುವೆ, ಇಷ್ಟುದ್ದ ಕೇಶಕೆ ! ||

– ನಾಗೇಶ ಮೈಸೂರು

೦೫.೦೪.೨೦೧೮

(ವಿಡಿಯೋ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಮೂಲ, Yamunab Bsyರವರು ಕಳಿಸಿದ್ದು – ಧನ್ಯವಾದಗಳು 👍😊🙏💐)

01679. ಸೀಳು ನಾಲಿಗೆ ಸತ್ಯ!


01679. ಸೀಳು ನಾಲಿಗೆ ಸತ್ಯ!

___________________

ನಾಗಲೋಕವ ದೋಚಿ

ಬಂದೆ ನಾ ಉಲೂಪಿ

ಭೂಲೋಕದೆ ಹುಡುಕಿ

ಮಾಡಬೇಕಿದೆ ಖೂನಿ ! ||

ನಾನೆ ಚಿತ್ರಾಂಗದೆ

ಮಣಿಪುರದ ವನಿತೆ

ಶಾಪದ ನೆಪದೆ ಮರೆತ

ಹುಡುಕಲಿದೆ ಅವನನ್ನ ||

ನಾನಹುದಲ್ಲ ಸುಭಧ್ರೆ

ವಾಸುದೇವನ ಅನುಜೆ

ಕಳ್ಳ ಸನ್ಯಾಸಿಯ ಆಟ

ಬಯಲಾಗಿಸೆ ಹಾಜರಿ ||

ಹೌದು ನಾ ಪಾಂಚಾಲಿ

ಐವರಲಿ ಅವನೇ ಸರಿ

ಸರತಿ ಕಾದ ಕುಹುಕ

ಕೊಚ್ಚಬೇಕಿದೆ ಅವನ ||

ಯಾರು ನಂಬರೆ ನನ್ನ

ಎರಡು ನಾಲಿಗೆಯಂತೆ

ನಿಜ ನುಡಿದರು ಸುಳ್ಳು

ಎನುತ ಕ್ಲಿಕ್ಕಿಸಿಹರು ಚಿತ್ರ ||

– ನಾಗೇಶ ಮೈಸೂರು೨೯.೦೩.೨೦೧೮

(ಸುಮ್ನೆ ವಿಡಿಯೊಗೊಂದು ಕವನ 😛 source : internet / social media received via Chandrashekar Hs – thank you 🙏👍😊💐)

01678. ಕೂಸೇ ಬೀಸಣಿಗೆ..!


01678. ಕೂಸೇ ಬೀಸಣಿಗೆ..!

______________________________

ಬಾರವ್ವ ತಾರವ್ವ

ತಾರೆ ಯಾವೂರವ್ವ?

ಕಣ್ಣೆ ತುಟಿಯಾಗ್ಯಾವ

ತುಟಿಗೆ ಹವಳ ನಾಚ್ಯಾವ ! ||

ಬೊಚ್ಚು ಬಾಯಿ ಅಚ್ಚಚ್ಚು

ನಕ್ಕಾಗ ನೀ ಬೆಲದಚ್ಚು

ತಲೆಯೆತ್ತೊ ಹೆಡೆಯೆತ್ತೊ

ನಾಗರ ಮಣಿ ಹೊಳೆದಿತ್ತೊ ||

ತೆವಳೊ ಬಂಗಾರ ಮುದ್ದು

ಹೊಸಿಲಲ್ಲೆ ಸಿಕ್ಕಿ ಬಿದ್ದು

ಹೊರಳಾಡಿಯು ಬಿಡಲೊಲ್ಲೆ

ಉದರ ಜೋಪನಾ ಒರಟಲ್ಲೆ ||

ನೋಡಿದೆಯ ನಿನ್ನಾ ಗತ್ತು !

ನಿನಗಾಗದೇನು ಸುಸ್ತು?

ಬಡಿದಾ ತನು ರೆಕ್ಕೆಯ ಗತಿ

ನೆಲದಲೆ ಹಾರೊ ಹಕ್ಕಿ ರೀತಿ ||

ನೋಡೆಂಥ ಛಲವೆ ನಿನದು

ಬಿಡದೆ ದಾಟಿಬಿಟ್ಟೆ ಸರಹದ್ದು !

ನಿನ್ನಂತಾಗೆ ತುಸು ನನ್ನಿ ಮನಸು

ಸಪ್ತಸಾಗರವೂ ಕಿರುಬೆರಳ ಕೂಸು! ||

– ನಾಗೇಶ ಮೈಸೂರು

೦೩.೦೪.೨೦೧೮

(Video source : internet / social media received via Chandrashekar Hs – thank you 👍🙏💐😊)

01677. ಅವಳೂರಿನ ಚೆಲುವು


01677. ಅವಳೂರಿನ ಚೆಲುವು

_____________________________

ಅವಳೇ ಅವಳೂರಿನ ಚೆಲುವು

ಬಿಸಿಲು ತಂಪು ಮಳೆ ಕೊಳ ತಂಪು

ಬಿತ್ತಿ ಬೆಳೆದ ಬೆಳೆಯಾಗುತಲವಳೆ

ಸೊಂಪಾಗಿ ಬೆಳೆದು ಕಾಡುವ ಇಂಪು ||

ಕೈಬುಟ್ಟಿಯಲ್ಲೆ ಕೋಳ ಹಿಡಿದವಳು

ನಗುವಲ್ಲೆ ಮೋಡಿ ಹಾಕಿ ಕದ್ದವಳು

ಕಣ್ಣೆರಡು ಗಾಳ ತಿಳಿಯದಾಳ ಹೊಕ್ಕು

ಮಿಡಿಸಿತೇನೊ ನೂರೆಂಟು ಕುಮ್ಮುಕ್ಕು ||

ಸುತ್ತಮುತ್ತಲೆಷ್ಟು ನಿಸರ್ಗ ಸೊಗಡು

ಹಿಡಿದಂತಿದೆ ಅವಳ ಸೊಗದ ಜಾಡು

ಸ್ಪರ್ಧೆಯವರಲಿ ಯಾರಿಗೊ ಗೆಲುವು

ಯಾರೇ ಗೆಲಲಿ ಬೆರಗಾಗುವ ಜಗವು ||

ಪ್ರಕೃತಿಗಿಲ್ಲ ಹಂಗು ಶಿಸ್ತುಡುಗೆ ತೊಡುಗೆ

ಒಪ್ಪ ಓರಣವವಳ ಚಂದಕಿಟ್ಟ ಮೆರುಗೆ

ಚಂದನದಂತೆ ಪಸರಿಸಿಹಳೆ ಸುಗಂಧ

ಕುಂದಿಲ್ಲದವಳ ಸೊಬಗದೆ ಮಕರಂದ ||

ಅವಳೂರಿಗವಳೆ ಸೌಂದರ್ಯದ ಅರಸಿಊರಿನೆಲ್ಲ ಸೊಗಡೆ ತಾನಾಗಿಹೆ ಪಸರಿಸಿ

ಯಾರನೆಲ್ಲ ಯಾರಾಗಿಸಿ ಯಾರಾದಳೊ

ಏಮಾರಿಸಿ ಜಗ ಮರೆಸೆಲ್ಲ ಆವರಿಸಿಹಳೊ ||

– ನಾಗೇಶ ಮೈಸೂರು

೦೧.೦೪.೨೦೧೮

(Picture source : WhatsApp / social media )

01676. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)


01676. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)

________________________________________________

ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್ಬದ ಕುರಿತು. ಈ ಬಾರಿಯಾದರೂ ಸ್ವಲ್ಪ ‘ಜೋರಾಗಿ’ ಆಚರಿಸಿ ಪಾರ್ಟಿ ಕೊಡಿಸಲಿ ಎಂಬುದು ಅವನಾಸೆ. ನನಗೊ ಹುಟ್ಟಿದಾಗಿನಿಂದ ಇಲ್ಲಿಯತನಕ ಹುಟ್ಟಿದ ಹಬ್ಬ ಆಚರಿಸಿಕೊಂಡ ನೆನಪೆ ಇಲ್ಲ ಅನ್ನುವುದು ಬೇರೆ ಮಾತು ಬಿಡಿ – ಪ್ರಾಯಶಃ ನನಗೆ ಗೊತ್ತಾಗದ ವಯಸಿನಲ್ಲಿ ಹೆತ್ತವರು ಮಾಡಿಕೊಂಡ ‘ನಾಮಕರಣದ’ ಆಚರಣೆಯನ್ನು ಹೊರತುಪಡಿಸಿದರೆ! ನಾವು ಬೆಳೆದ ವಾತಾವರಣ ಎಷ್ಟು ಸೊಗಡಿನದಾಗಿತ್ತು ಎಂದರೆ, ಹುಟ್ಟಿದ ದಿನವೆನ್ನುವುದೆ ಯಾರಿಗು ನೆನಪಿನಲ್ಲಿರುತ್ತಿರಲಿಲ್ಲ. ಹೈಸ್ಕೂಲಿನ ಮಟ್ಟಕ್ಕೆ ಬಂದು ‘ಹ್ಯಾಪಿ ಬರ್ತಡೆ ಟು ಯೂ’ ಎಂದು ಇಂಗ್ಲೀಷಿನಲ್ಲಿ ಹೇಳಿ ಎಲ್ಲರ ಮುಂದೆ ‘ಗ್ರೇಟ್’ ಅನಿಸಿಕೊಳ್ಳಬಹುದು ಎಂದು ಅರಿವಾಗುವತನಕ ಅದರ ಹೆಚ್ಚುಗಾರಿಕೆಯ ಕಡೆ ಗಮನವೆ ಹರಿದಿರಲಿಲ್ಲ ಎನ್ನಬೇಕು… ಹಾಗೆ ಗ್ರೀಟು ಮಾಡುತ್ತಲೆ ಹುಡುಗಿಯರಿಗೊಂದು ‘ಗ್ರೀಟಿಂಗ್ ಕಾರ್ಡ್’ ಕೊಡಬಹುದಲ್ಲವ? ಎನ್ನುವ ಜ್ಞಾನೋದಯವಾಗುವ ವಯಸ್ಸಲ್ಲಿ ಈ ಹುಟ್ಟುಹಬ್ಬದ ತಿಳುವಳಿಕೆಯೂ ಸ್ವಲ್ಪ ಹೆಚ್ಚಾಗಿದ್ದು ನಿಜವೆ ಆದರು, ಅದು ಹುಟ್ಟುಹಬ್ಬದ ಸ್ವಯಂ ಆಚರಣೆಯ ಮಟ್ಟಕ್ಕಾಗಲಿ ಅಥವಾ ಇತರರಿಗೆ ಗ್ರೀಟಿಂಗಿಗೆ ಕಾಸು ಖರ್ಚು ಮಾಡಿ ‘ಹ್ಯಾಪಿ ಬರ್ತಡೆ’ ಹೇಳುವಂತಹ ಧಾರಾಳತನದ ಮಟ್ಟಕ್ಕಾಗಲಿ ಬೆಳೆಯಲಿಲ್ಲ. ಆದರೆ ಆ ರೀತಿ ಗ್ರೀಟಿಂಗ್ ಕಾರ್ಡ್ ಕೊಡುವುದನ್ನೆ ಜೀವನದ ಧನ್ಯತೆಯ ಪರಮಗುರಿ ಎಂದುಕೊಂಡಿದ್ದ ಗೆಳೆಯರು ಸುತ್ತಮುತ್ತ ಬೇಕಾದಷ್ಟಿದ್ದರು. ಬರಿ ಹುಟ್ಟುಹಬ್ಬಕ್ಕೇನು? ಹೊಸವರ್ಷ, ಸಂಕ್ರಾಂತಿ, ದೀಪಾವಳಿ ಎಂದೆಲ್ಲ ನೆಪ ಹುಡುಕಿ ಗ್ರೀಟಿಂಗ್ ಖರೀದಿಸಲು ಅವರಲ್ಲಿ ಸಾಕಾಗುವಷ್ಟು ದುಡ್ಡಿರುತ್ತಿದ್ದರು, ಅದರಲ್ಲಿ ಏನು ಬರೆಯಬೇಕೆಂದು ಮಾತ್ರ ಗೊತ್ತಾಗದೆ ತಿಣುಕಾಡುತ್ತಿದ್ದರು. ಈ ಹನುಮಾಚಾರಿಯೂ ಆ ಗುಂಪಿನಲ್ಲೊಬ್ಬನಾಗಿದ್ದು, ನನಗೆ ಇದ್ದಕ್ಕಿದ್ದಂತೆ ಪರಮಾಪ್ತ ಗೆಳೆಯನಾಗಲಿಕ್ಕೆ ಇದು ಒಂದು ಮುಖ್ಯ ಕಾರಣವಾಗಿತ್ತು. ಗ್ರೀಟಿಂಗ್ ಸೀಸನ್ ಬರುತ್ತಿದ್ದಂತೆಯೆ ಎಲ್ಲಿದ್ದರೂ ಸರಿ ದೊಡ್ಡದೊಂದು ಕಂತೆ ಹಿಡಿದು ಬಂದುಬಿಡುತ್ತಿದ್ದ ‘ಗುರೂ, ಏನಾದರೂ ಬರೆದುಕೊಡು..ತುಂಬಾ ಅರ್ಜೆಂಟು’ ಎಂದು ದುಂಬಾಲು ಬೀಳುತ್ತ. ಅವನ ಅರ್ಜೆಂಟು ಯಾವ ತರದ್ದೆಂದು ಗೊತ್ತಿದ್ದರು ನನ್ನ ಕಲಾ ಪ್ರದರ್ಶನಕ್ಕೆ ಸಿಗುತ್ತಿದ್ದ ಅವಕಾಶಗಳೆಲ್ಲ ಅಂತದ್ದೆ ಆಗಿದ್ದ ಕಾರಣ, ನಾನೂ ಏನೊ ಒಂದು ಕವನವನ್ನೊ, ಕೋಟೇಷನ್ನೊ ಗೀಚಿ ಕಳಿಸುವುದು ನಡೆದೆ ಇತ್ತು ಅನ್ನಿ.

ಹನುಮಾಚಾರಿ ‘ಹುಟ್ಟುಹಬ್ಬದ ಪಾರ್ಟಿ’ ಎಂದಾಗ ಇವೆಲ್ಲ ಹಳೆಯ ಸರಕೆಲ್ಲ ಮತ್ತೆ ನೆನಪಾಗಿತ್ತು – ‘ಎಷ್ಟು ಬೆಳೆದುಬಿಟ್ಟಿದ್ದಾನೆ ಹನುಮಾಚಾರಿ’ ಎಂಬುದನ್ನು ಎತ್ತಿ ತೋರಿಸುವ ಹಾಗೆ. ನಲವತ್ತೈದರ ಗಡಿ ದಾಟಿದ ಮೇಲೆ ಬೆಳೆಯಬೇಕಾದ್ದೆ ಬಿಡಿ, ಇನ್ನು ಬೆಳೆಯದಿದ್ದರೆ ಬೆಳೆಯುವುದಾದರೂ ಯಾವಾಗ? ಅಂದಹಾಗೆ, ನಾನು ಬೆಳೆದಿದ್ದಾನೆ ಎಂದು ಹೇಳಿದ್ದು ಈಗ ‘ಗ್ರೀಟಿಂಗಿನಲ್ಲಿ ಏನಾದರೂ ಬರೆದುಕೊಡು’ ಎಂದು ದುಂಬಾಲು ಬೀಳದಷ್ಟು ಬೆಳೆದಿದ್ದಾನೆ ಎನ್ನುವರ್ಥದಲ್ಲಿ… ಆದರು ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಅವನಿಗೆ ಭಯಂಕರ ಕೋಪವಂತೂ ಇದೆ. ಯಾಕೆಂದರೆ ಅವನ ಪ್ರೆಂಡ್ ಸರ್ಕಲ್ಲಿನಲ್ಲಿ ಹುಟ್ಟು ಹಬ್ಬದ ಆಚರಣೆಯೆಂದರೆ ‘ಸಕತ್ ಗುಂಡು ಪಾರ್ಟಿ’ ಎಂದೆ ಅರ್ಥ..! ಹುಟ್ಟುಹಬ್ಬದ ದಿನ ‘ವಿಷ್’ ಮಾಡಿಸಿಕೊಂಡ ತಪ್ಪಿಗೆ ಇಡೀ ಗುಂಪನ್ನು ಹೊರಗಿನ ರೆಸ್ಟೋರೆಂಟಿಗೊ, ಬಾರಿಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ತಿನಿಸಿ, ಕುಡಿಸಿ ಸಾವಿರಗಟ್ಟಲೆಯ ಬಿಲ್ಲನ್ನು ಭರಿಸಬೇಕು. ನಾನು ಆ ಚಕ್ರವ್ಯೂಹಕ್ಕೆ ಸಿಕ್ಕಿಕೊಳ್ಳುತ್ತಿಲ್ಲವಲ್ಲ ಎಂಬ ದೊಡ್ಡ ಸಂಕಟ ಅವನಿಗೆ. ‘ಕನಿಷ್ಠ ಅವನೊಬ್ಬನನ್ನಾದರೂ ಕರೆದುಕೊಂಡು ಹೋಗಿ ಗುಂಡು ಹಾಕಿಸಬಹುದಲ್ಲ?’ ಎಂಬ ಪರಮ ಖೇದವಿದೆ ಅವನಿಗೆ. ನಾನು ಕುಡಿತವನ್ನು ಮುಟ್ಟುವುದಿರಲಿ, ಮೂಸಿಯೂ ನೋಡುವುದಿಲ್ಲವೆಂದು ಗೊತ್ತಿದ್ದರು ‘ಅದಕ್ಕೇನಂತೆ, ನೀವು ಕೊಡಿಸಿ, ನಾನು ಕುಡಿಯುತ್ತೇನೆ..ಒಬ್ಬರಾದರೂ ಎಂಜಾಯ್ ಮಾಡಬಹುದಲ್ಲಾ’ ಎನ್ನುತ್ತಾನೆ. ಆದರೆ ಅವನ ಮನದಾಳದಲ್ಲಿರುವುದು ‘ಹೀಗಾದರೂ ಸ್ವಲ್ಪ ಪರ್ಸು ಬಿಚ್ಚಲಿ ಇಂತಹ ಶೋಕಿ ಐಟಮ್ಮುಗಳ ಮೇಲೆ’ ಅಂದಷ್ಟೆ.. ‘ಸರಿ ಅದೆಷ್ಟಾಗುವುದೊ ಹೇಳಿಬಿಡು, ದುಡ್ಡು ಕೊಡುತ್ತೇನೆ, ಹೋಗಿ ನೀನೊಬ್ಬನೆ ಕುಡಿದುಕೊ’ ಎನ್ನುತ್ತೇನೆ ನಾನು. ಇದುವರೆವಿಗು ನಾವು ಒಂದು ಪಾರ್ಟಿಗೂ ಹೋಗಿಲ್ಲವೆನ್ನುವುದು ಎಷ್ಟು ಸತ್ಯವೊ, ಅವನೂ ಒಂದು ಬಾರಿಯೂ ನನ್ನ ‘ದುಡ್ಡು ಕೊಡುವ ಆಫರನ್ನು’ ಒಪ್ಪಿಕೊಂಡಿಲ್ಲವೆನ್ನುವುದು ಅಷ್ಟೆ ಸತ್ಯ..!

ಆದರೆ ಈ ಬಾರಿ ಹನುಮಾಚಾರಿ ಹುಟ್ಟುಹಬ್ಬವನ್ನು ನೆನಪಿಸಿದಾಗ ಮಾತ್ರ ಯಾಕೊ ಸ್ವಲ್ಪ’ಚುಳ್’ ಅಂದ ಹಾಗಾಯ್ತು. ಅವನೇನೊ ರೂಢಿಗತವಾಗಿ, ಅಭ್ಯಾಸದಂತೆ ನೆನಪಿಸಿದ್ದನೆ ಹೊರತು ಬಲವಂತದಿಂದ ಪಾರ್ಟಿ ಮಾಡಿಸಿಕೊಳ್ಳುವ ಉತ್ಸಾಹ, ಹುಮ್ಮಸ್ಸೆಲ್ಲ ಅರ್ಧ ಖಾಲಿಯಾಗಿಹೋಗಿತ್ತು – ಅದರಲ್ಲೂ ಇತ್ತಿಚೆಗೆ ಡಯಾಬಿಟೀಸ್ ಅದೂ ಇದೂ ಎಂದು ಕೆಲವು ‘ಟಿಪಿಕಲ್’ ಕಾಯಿಲೆಗಳ ಶುಭಾರಂಭವಾದ ಮೇಲೆ. ನನಗು ಸ್ವಲ್ಪ ಕಸಿವಿಸಿಯಾದದ್ದು ಪಾರ್ಟಿ ಕೊಡಿಸಲಾಗದ ಕಾರಣಕ್ಕಿಂತ ಹೆಚ್ಚು, ‘ಅಯ್ಯಯ್ಯೊ …ನಲವತ್ತರ ಗಡಿಯನ್ನು ದಾಟಿ ಐವತ್ತರತ್ತ ಹೋಗಿ ಬಿಡುತ್ತಿದೆಯಲ್ಲ ಜೀವನದ ಬಂಡಿ ?’ ಎಂಬ ಭೀತಿಯೊ, ಕಳವಳವೊ ಅಥವಾ ಹೇಳಿಕೊಳ್ಳಲಾಗದ ಇನ್ನಾವುದೊ ಅನುಭೂತಿಯ ಪ್ರೇರಣೆಯಿಂದ ಉದ್ಭವಿಸಿದ್ದು. ನಲವತ್ತರ ಮೆಟ್ಟಿಲು ದಾಟುತ್ತಿದ್ದಂತೆ ಎಲ್ಲೊ ಸಣ್ಣ ಸ್ತರದಲ್ಲಿ ಈ ಅನಿಸಿಕೆ ಆರಂಭವಾಗುತ್ತದಾದರು ಅದು ನಿಜಕ್ಕು ತನ್ನ ಗುರುತ್ವವನ್ನು ಹೆಚ್ಚಿಸಿಕೊಂಡ ಮಹತ್ವದ ಸಂಗತಿಯಾಗುವುದು ನಲವತ್ತೈದರ ಆಸುಪಾಸಿನಲೆಲ್ಲೊ ಎಂದೆ ಹೇಳಬೇಕು. ಅದರಲ್ಲೂ ಐವತ್ತರ ಗಡಿಯ ಹತ್ತಿರ ಹತ್ತಿರ ಮುಟ್ಟಿಬಿಡುತ್ತಿದ್ದರಂತೂ ಹೇಳಿಕೊಳ್ಳಲಾಗದ ಅಸಾಧಾರಣ ಕಳವಳವೆ ಮನೆ ಮಾಡಿಕೊಂಡುಬಿಡುತ್ತದೆ. ಆಯಸ್ಸಿನ ಅರ್ಧ ಗಡಿ ದಾಟಿ ಆ ಬದಿಗೆ ಕಾಲಿಕ್ಕುತ್ತಿದ್ದೇವಲ್ಲ ಎನ್ನುವ ಭಾವನೆಯೆ ಏನೇನೊ ಕಸಿವಿಸಿ, ಆತಂಕಗಳ ಹೊರೆಯಾಗಿ ಕಾಡಲು ಆರಂಭಿಸುವ ಸಂಕ್ರಮಣದ ಹೊತ್ತು ಅದು. ಆದರೆ ನಿಜಕ್ಕೂ ಅದು ಅಷ್ಟೊಂದು ಗಲಿಬಿಲಿಗೊಳ್ಳುವ , ಗಾಬರಿಪಡುವ ವಯಸ್ಸೆ ಎಂದು ಪ್ರಶ್ನಿಸಿಕೊಳ್ಳಲು ಹೊರಟರೆ ಸಿಗುವ ಉತ್ತರವೂ ಅಷ್ಟೆ ತಳಮಳ , ಸಂಶಯ, ಗೊಂದಲಗಳ ಗೂಡಾಗಿ ಕಾಡುವ ಸಂಕ್ರಮಣದ ಸಂಧಿ ಕಾಲವದು ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ನಲವತ್ತರ ಮೆಟ್ಟಿಲು ಹತ್ತುವ ಮೊದಲೆ ತಲೆಯೆಲ್ಲ ಬೋಡಾಗಿ ‘ಬೊಕ್ಕ ತಲೆ’ಯಾಗಿ ಹೋದಾಗ ಗಾಬರಿಯಿಂದಲೆ ಓಡಿಬಂದಿದ್ದ ಹನುಮಾಚಾರಿಯನ್ನು ಛೇಡಿಸಿ, ರೇಗಿಸಿದ್ದರೂ ಒಳಗೊಳಗೆ ‘ಏನಪ್ಪ ಇದು ? ನನಗೂ ಏನಾದರೂ ಅವನಂತೆಯೆ ಆಗಲು ಶುರುವಾಯಿತೆ, ಏನು ಕಥೆ ? ಆಗಲೆ ಕೂದಲಿಲ್ಲದ ವಯಸಾದ ಮುದುಕನಂತೆ ಕಾಣಿಸಿಬಿಡುತ್ತೇನೆಯೆ?’ ಎಂಬ ಆತಂಕದಲ್ಲಿ ಓಡಿ ಹೋಗಿ ಗುಟ್ಟಾಗಿ ಕನ್ನಡಿ ನೋಡಿಕೊಂಡಿದ್ದು ಉಂಟು..!

ಹನುಮಾಚಾರಿ ಹಾಗೆ ಅಳುಮೊಗ ಹೊತ್ತುಕೊಂಡು ಓಡಿಬಂದಾಗ ಅವನೇನೂ ಇನ್ನು ಪೂರ್ತಿ ಬೊಕ್ಕತಲೆಯವನಾಗಿರಲಿಲ್ಲವೆನ್ನಿ. ಮಧ್ಯದ ಬಯಲು ಮತ್ತು ಮುಂದಲೆಯ ಕಡೆಯೆಲ್ಲ ಪಾಲಿಷ್ ಹೊಡೆದಂತೆ ನುಣ್ಣಗೆ ಮಿರುಗುತ್ತಿದ್ದರು ತಲೆಯ ಎರಡು ಬದಿಗಳಲ್ಲಿ ಮತ್ತು ಹಿಂದಲೆಯಲ್ಲಿ ಇನ್ನು ಸಾಕಷ್ಟು ಮಿಕ್ಕಿತ್ತು. ಅದನ್ನು ನೋಡುತ್ತಲೆ, ‘ ನೀನೇನೆ ಹೇಳು ಆಚಾರಿ, ನಿಜ ಹೇಳಬೇಕಾದರೆ ನೀನು ನಿನ್ನ ಮಿಕ್ಕಿರುವ ಕೂದಲನ್ನು ಬೋಳಿಸಿ ಪೂರ್ತಿ ‘ಬೊಕ್ಕ’ವಾಗಿಸಿಕೊಂಡರೆ ವಾಸಿ..’ ಎಂದಿದ್ದೆ. ಅವನು ಅಳು ಮೊಗದಲ್ಲೆ, ‘ಯಾಕೆ ಸಾರ್ ನೀವು ತಲೆ ತಿನ್ನುತ್ತೀರಾ ? ಮೊದಲೆ ಅವಳು ತಲೆ ತಿಂದು ತಿಂದೆ ಈ ಗತಿ ತಂದಿಟ್ಟಿದ್ದಾಳೆ, ಈಗ ನೀವು ಬೇರೆ ಸೇರಿಕೊಂಡು ಕಾಲು ಎಳೆಯುತ್ತಿರಲ್ಲಾ..?’ ಎಂದಿದ್ದ. ನಾನು ಅವನಿಗಿಂತ ಎರಡು ಮೂರು ವರ್ಷಕ್ಕೆ ದೊಡ್ಡವನು ಅನ್ನುವುದಕ್ಕಿಂತ ಗ್ರೀಟಿಂಗಿನ ದಿನಗಳಲ್ಲಿ ಅಂಟಿಸಿಕೊಂಡಿದ್ದ ಆ ‘ ಸಾರ್..’ ಎನ್ನುವ ಪಟ್ಟ , ಒಂದೆ ಕಡೆ ಕೆಲಸಕ್ಕೆ ಸೇರಿದ ಮೇಲೆ ‘ಹಿರಿಯ ಆಫೀಸರ’ ಎಂಬ ಮರ್ಯಾದೆಯ ಜತೆ ಸೇರಿ ಶಾಶ್ವತವಾಗಿಹೋಗಿತ್ತು. ಅದೇ ರೀತಿ ಕಾಲೇಜು ದಿನಗಳಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ‘ ಆಚಾರಿ’ ನಾಮಧೇಯವೂ ಹನುಮಾಚಾರಿಗೆ ಪ್ರಿಯವಾದ, ಆತ್ಮೀಯತೆಯ ಸಂಕೇತವಾಗಿ ಉಳಿದುಕೊಂಡುಬಿಟ್ಟಿತ್ತು. ಇಬ್ಬರಿಗೂ ಅದು ಅಭ್ಯಾಸವಾಗಿ ಅದೊಂದು ‘ಫಾರ್ಮ್ಯಾಲಿಟಿ’ಯಾಗಿ ಬದಲಾಗಿ ಹೋಗಿತ್ತೆ ವಿನಃ ಅದರ ಬಗ್ಗೆ ಇಬ್ಬರಿಗೂ ಸೀರಿಯಸ್ ನೆಸ್ ಇರಲಿಲ್ಲ… ‘ ಹಾಗಲ್ಲಾ ಆಚಾರಿ, ಈಚೆಗೊಂದು ಲೇಖನ ಓದುತ್ತಿದ್ದೆ, ಬಾಲ್ಡ್ ಹೆಡೆಡ್ ವ್ಯಕ್ತಿಗಳ ಕುರಿತು ಬರೆದಿದ್ದು.. ಅಲ್ಲೊಂದು ಕಡೆ ಬರೆದಿತ್ತು – ‘ಗಾಡ್ ಕ್ರೀಯೇಟೆಡ್ ಸೋ ಫಿವ್ ಪರ್ಫೆಕ್ಟ್ ಹೆಡ್ಸ್, ದಿ ರೆಸ್ಟ್ ಹೀ ಕವರ್ಡ್ ವಿದ್ ಹೇರ..(ದೇವರು ಕೇವಲ ಎಷ್ಟು ಪರಿಪಕ್ವ ತಲೆಗಳನ್ನು ಸೃಷ್ಟಿಸಿದನೆಂದರೆ, ಮಿಕ್ಕ ತಲೆಗಳ ಹುಳುಕು ಮುಚ್ಚಲೆಂದೆ ಅವನ್ನು ಕೂದಲಡಿ ಮರೆಯಾಗಿಸಿಬಿಟ್ಟ ) ‘ ಅಂತಿತ್ತು.. ಅದು ನೆನಪಾಗಿ ಹಾಗೆಂದೆ ಅಷ್ಟೆ..’ ಎಂದೆ. ಅದೊಂದು ಜೋಕ್ ಎಂದು ಮಾತ್ರ ಅವನಿಗೆ ಬಿಡಿಸಿ ಹೇಳಿರಲಿಲ್ಲವಾದರು, ಮಿಕ್ಕೆಲ್ಲದ್ದಕ್ಕಿಂತ ಅವನ ತಲೆಯನ್ನು ‘ಪರ್ಫೆಕ್ಟ್ ಹೆಡ್ಡಿಗೆ’ ಹೋಲಿಸಿದ್ದು ಅವನಿಗೆ ಬಲು ಖುಷಿಯೆನಿಸಿ ‘ಹೌದಾ..ಸಾರ್..? ಹಾಗಾದರೆ ಅದಕ್ಕೇನಂತೆ? ಮಾಡಿಸೋಣ ಬಿಡಿ ‘ ಎಂದು ಬೊಕ್ಕ ತಲೆಯ ಕುರಿತಾಗಿ ಬಂದಿದ್ದ ಚಿಂತೆಯ ವಿಷಯವನ್ನೆ ಮರೆತು ನಗುತ್ತ ಹೋಗಿದ್ದ…!

ಅವನಿಗೇನೊ ಹಾಸ್ಯ ಮಾಡಿ ಏಮಾರಿಸಿ ಓಡಿಸಿದ್ದರು ಮುಂದಿನ ಕೆಲವು ದಿನಗಳಲ್ಲೆ ಅದೆ ಭೀತಿ ಮತ್ತೊಂದು ರೂಪದಲ್ಲಿ ಧುತ್ತನೆ ನನ್ನೆದುರೆ ಅವತರಿಸಿಕೊಂಡಿತ್ತು ಬಿಳಿಕೂದಲ ರೂಪದಲ್ಲಿ..! ಅದುವರೆವಿಗೂ ‘ಒಂದೂ ಬಿಳಿ ಕೂದಲಿಲ್ಲದ ಅಚ್ಚ ತರುಣನಂತೆ’ ಎಂದೆಲ್ಲ ‘ಶಾಭಾಷ್ ಗಿರಿ’ ಗಿಟ್ಟಿಸಿಕೊಳ್ಳುತ್ತಿದ್ದ ನಾನು, ಇದೆಲ್ಲಿಂದ ಬಂದವಪ್ಪ ಈ ಬಿಳಿ ಜಿರಲೆಗಳು ಎಂದು ಗಾಬರಿ ಪಡುವಂತಾಗಿತ್ತು… ಮೊದಮೊದಲು ಅಲ್ಲೊಂದು ಇಲ್ಲೊಂದು ಕಂಡಾಗ, ಹೇಗೊ ಪೊದೆಯಂತಿದ್ದ ಕಪ್ಪು ಕೂದಲಿನ ಮಧ್ಯೆ ಅವಿಸಿಟ್ಟರೂ, ಅವುಗಳು ಪಾರ್ಥೇನಿಯಮ್ಮಿನಂತೆ ಹೆಚ್ಚುಹೆಚ್ಚಾಗಿ ಚಿಗಿತು ಎಲ್ಲೆಂದರಲ್ಲಿ ಒಂದೊಂದೆ ಬೆಳ್ಳಿರೇಖೆಯಂತೆ ಕಾಣಿಸಿಕೊಳ್ಳತೊಡಗಿದಾಗ ಇನ್ನು ಬೇರೆ ದಾರಿಯಿಲ್ಲವೆಂದರಿವಾಗಿ ‘ಡೈಯ್’ ನ ಮೊರೆ ಹೋಗಬೇಕಾಗಿ ಬಂದಿತ್ತು – ತಾರುಣ್ಯದ ಅದೇ ‘ಲುಕ್ಕನ್ನು’ ಉಳಿಸಿಕೊಳ್ಳಲು. ಆದರೆ ಅದೆ ನೊರೆಗೂದಲಿನ ಬಿಳಿ ಬಂಗಾರ ಮೊದಲೆ ಕುರುಚಲಂತಿದ್ದ ಗಡ್ಡ, ಮೀಸೆಗಳಲ್ಲು ನಡುನಡುವೆ ಪ್ರಕಟವಾಗಿ ತನ್ನ ಪ್ರತಾಪ ತೋರಿಸಲಾರಂಭಿಸಿದಾಗ, ಅವಕ್ಕೊಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿ, ಅವನ್ನು ಬೆಳೆಯುವ ಮುನ್ನವೆ ತರಿದು ‘ಕ್ಲೀನ್ ಫೇಸ್ ಶೇವ್’ ಮಾಡಿಕೊಳ್ಳುವ ಹೊಸ ಪರಿಪಾಠ ಆರಂಭಿಸಬೇಕಾಗಿ ಬಂದಿತ್ತು. ಹಾಗೆ ಬಂದ ಹೊಸದರಲ್ಲೆ ಕೆಲವು ಸಹೋದ್ಯೋಗಿಗಳು, ‘ ಸಾರ್ ಗಡ್ಡ ಮೀಸೆ ಇರದಿದ್ರೆ ತುಂಬಾ ಯಂಗ್ ಆಗಿ ಕಾಣುತ್ತೀರ.. ನಾರ್ತ್ ಇಂಡಿಯನ್ ತರ ಕಾಣುತ್ತೀರ..’ ಎಂದೆಲ್ಲ ಕಾಮೆಂಟ್ ಕೊಟ್ಟ ಮೇಲೆ ಆ ಅವತಾರವೆ ಪರ್ಮನೆಂಟ್ ಆಗಿಹೋಗಿತ್ತು. ಈಗ ತಲೆಗೆ ಡೈ ಹಾಕುವುದು ನಿಲ್ಲಿಸಿಯಾಗಿದೆ ಎನ್ನಿ, ಅರ್ಧಕ್ಕರ್ಧ ಬೊಕ್ಕತಲೆಯಾಗಿ ಖಾಲಿಯಾದ ಮೇಲೆ… ಆದರು ಮುನ್ನೆಚ್ಚರಿಕೆಯಾಗಿ ತಲೆಗೂದಲನ್ನು ತೀರಾ ತುಂಡಾಗಿ ಕತ್ತರಿಸಿಕೊಳ್ಳುತ್ತೇನೆ, ಯಾವುದೂ ಎದ್ದು ಕಾಣದ ಹಾಗೆ. ನನ್ನ ಚೌರದ ಪಟ್ಟಾಭಿಷೇಕಕ್ಕೆ ಹೋದಾಗಲೆಲ್ಲ, ನನ್ನ ನಾಪಿತನಿಗೆ ತುಂಬ ಸುಲಭದ ಕೆಲಸ. ನಾನು ‘ನಂಬರ್ ಮೂರು’ ಎನ್ನುವುದಕ್ಕೂ ಕಾಯದೆ ತನ್ನ ಕೆಲಸ ಆರಂಭಿಸಿಬಿಡುತ್ತಾನೆ… ಒಂದು ನಿಮಿಷದ ಮಿಷಿನ್ ಕಟ್, ಅರ್ಧ ನಿಮಿಷದ ಕತ್ತರಿ ಸೇವೆ, ಕೊನೆಯರ್ಧ ನಿಮಿಷ ಬ್ಲೇಡಿನ ಕೆರೆತ, ಒಟ್ಟು ಎರಡು ನಿಮಿಷಕ್ಕೆ ಐವತ್ತು ರೂಪಾಯಿ ಸಂದಾಯವಾದಾಗ ಅವನಿಗೆ ‘ಪ್ರತಿ ಗಿರಾಕಿಯೂ ಹೀಗೆ ಇರಬಾರದೆ’ ಅನಿಸಿದ್ದರೆ ಆಶ್ಚರ್ಯವೇನೂ ಇಲ್ಲ…! ನನಗೊ ದುಡ್ಡು ಕೀಳಬೇಕೆಂದು ಕತ್ತರಿಯಾಡಿಸುವಂತೆ ನಟಿಸುತ್ತ ಹೆಚ್ಚು ಸಮಯ ವ್ಯಯಿಸದೆ ಎರಡೆ ನಿಮಿಷದಲ್ಲಿ ಮುಗಿಸಿಬಿಡುತ್ತಾನಲ್ಲ ಎಂದು ಅಭಿಮಾನ (ದುಡ್ಡು ಮಾತ್ರ ಮಾಮೂಲಿ ಚಾರ್ಜೆ ಕಿತ್ತುಕೊಂಡರು..) ! ಒಟ್ಟಾರೆ ಈ ನಲವತ್ತರ ಆಸುಪಾಸಿನ ಕಾಟ ಯಾರನ್ನು ಬಿಟ್ಟಿದ್ದಲ್ಲ ಬಿಡಿ – ಕೆಲವರಿಗೆ ಸ್ವಲ್ಪ ಮೊದಲು, ಕೆಲವರಿಗೆ ನಂತರ ಅನ್ನುವ ವ್ಯತ್ಯಾಸ ಬಿಟ್ಟರೆ.

ಈ ವಯಸಿನ ಗಡಿ ಮತ್ತದರ ಅಂಚಿನಲ್ಲಿ ಅಡ್ಡಾಡುತ್ತಿದ್ದಂತೆ ಎದುರಾಗುವ ‘ಶಾಕ್’ ಗಳು ಒಂದೂ ಎರಡಲ್ಲ. ಅಲ್ಲಿಯತನಕ, ಮೊನ್ನೆ ಮೊನ್ನೆಯವರೆಗೆ ‘ಸಾರ್’ ನ ಜತೆ ಹೆಸರಿಡಿದು ಕರೆಯುತ್ತಿದ್ದವರೆಲ್ಲ ಏಕಾಏಕಿ ‘ಅಂಕಲ್’ ಎಂದು ಶುರು ಹಚ್ಚಿಕೊಂಡು ಬಿಡುತ್ತಾರೆ… ಜತೆಗೆ ಆಗಾಗೆ ಅಪ್ಡೇಟ್ ಮಾಡುವ ‘ಬಯೋಡೇಟ’, ‘ರೆಸ್ಯೂಮು’ಗಳಲ್ಲಿ ‘ಅಬ್ಬಬ್ಬಾ ಇಷ್ಟೊಂದು ವಯಸಾಗಿ ಹೋಯಿತೆ? ಇನ್ನು ಮುಂದೆಯೂ ಸುಲಭದಲ್ಲಿ ಕೆಲಸ ಸಿಗುವುದೊ ಅಥವಾ ತೀರಾ ವಯಸಾಗುವ ಮೊದಲೆ ಬೇರೆ ಕಡೆ ಬದಲಾಯಿಸಿಕೊಂಡುಬಿಡುವುದು ಒಳಿತ?’ ಎಂಬೆಲ್ಲ ದ್ವಂದ್ವಗಳು ಕಾಡತೊಡಗುತ್ತವೆ. ಅದರಲ್ಲೂ ಅಲ್ಲಿಯತನಕ ಕೆಲಸ ಬದಲಿಸದೆ ಒಂದೆ ಕಡೆ, ಒಂದೆ ಕಂಪನಿಯಲ್ಲಿ ದುಡಿಯುತ್ತಿದ್ದವರಿಗಂತು ಅದೊಂದು ದೊಡ್ಡ ಧರ್ಮಯುದ್ಧವೆ ಸರಿ. ಕೆಲಸ ಬದಲಿಸಿ ಅನುಭವವಿರದೆ ಇಂಟರ್ವ್ಯೂ ಅಟೆಂಡು ಮಾಡಲು ಅನುಭವವಿಲ್ಲದ ಪರಿಸ್ಥಿತಿ..! ಅಲ್ಲಿಯತನಕ ಬೇರೆಯವರಿಗೆ ಇಂಟರ್ವ್ಯೂ ಮಾಡಿ ಅಭ್ಯಾಸವಿರುತ್ತದೆಯೆ ಹೊರತು ತಾವೆ ಹೋಗಿ ‘ಹಾಟ್ ಸೀಟಿನಲ್ಲಿ’ ಕೂತು ಬಂದ ಅನುಭವವಿರುವುದಿಲ್ಲವಲ್ಲ? ಜತೆಗೆ ಇಷ್ಟು ವರ್ಷ ಕಳೆದ ಕಂಪನಿಯನ್ನು ಬಿಟ್ಟು ಹೋಗಲಾಗದ ‘ಪತ್ನಿ’ ವ್ಯಾಮೋಹ ಬೇರೆ.. ಅದೆಷ್ಟೆ ಜಗಳ, ಅಸಹನೆ, ಅತೃಪ್ತಿಗಳಿರಲಿ ಕಟ್ಟಿಕೊಂಡ ಮೇಲೆ ಸತಿ ಶಿರೋಮಣಿಯ ಜತೆ ಏಗುವುದಿಲ್ಲವೆ ? ಎನ್ನುವ ಪರಮ ತತ್ವವನ್ನು ಕೆಲಸಕ್ಕೂ ಹೊಂದಿಸಿಕೊಂಡು ಮುಂದುವರೆವ ಅಸೀಮ ನಿಷ್ಠೆ ಹಾಗು ಭಕ್ತಿ. ಆದರೂ ‘ಮುಂದೆ ಏನೊ ಎಂತೊ?’ ಎಂಬ ಚಿಂತೆ ಕಾಡದೆ ಬಿಡುವುದಿಲ್ಲ. ‘ಹೇಗಿದ್ದರೂ ಕೆಲಸ ಬಿಟ್ಟು ಹೋಗುವುದಿಲ್ಲ, ಪ್ರಮೋಶನ್ ಕೊಡದಿದ್ದರೂ ನಡೆಯುತ್ತದೆ’ ಎಂದೆ ತನ್ನನ್ನು ನಿರ್ಲಕ್ಷಿಸಿದ್ದಾರೇನೊ ಎನ್ನುವ ಅನುಮಾನ ಕಾಡುತ್ತಲೆ ಇರುತ್ತದೆ. ‘ಯಾರು ಯಾರೆಲ್ಲ ಬಂದು ಬಡ್ತಿ ಪಡೆದು ಮುಂದೆ ಹೋದರೂ ನಾನು ಮಾತ್ರ ಇಲ್ಲೆ ಕೊಳೆಯುತ್ತಿರುವೆನಲ್ಲ, ಕತ್ತೆಯ ಹಾಗೆ ದುಡಿಯುತ್ತಿದ್ದರು?’ ಎಂಬ ಸಿಟ್ಟು, ಆಕ್ರೋಶ ರೊಚ್ಚಿಗೆಬ್ಬಿಸಿದಾಗ ಏನಾದರೂ ಸರಿ, ಈ ಬಾರಿ ಬೇರೆ ಕಡೆ ಅಪ್ಲೈ ಮಾಡಿ ನೋಡಿಬಿಡಲೆಬೇಕು ಎಂಬ ಹುಮ್ಮಸ್ಸೆದ್ದರೂ, ಒಂದು ರೆಸ್ಯುಮ್ ಸಿದ್ದಮಾಡುವಷ್ಟರಲ್ಲಿ ಅರ್ಧ ಉತ್ಸಾಹವೆಲ್ಲ ಇಳಿದುಹೋಗಿರುತ್ತದೆ. ಎರಡು ಪೇಜೆಂದುಕೊಂಡು ಹೊರಟಿದ್ದು ಹತ್ತಾಗಿ, ಅದನ್ನು ಎರಡಕ್ಕಿಳಿಸಲಾಗದೆ ಹಾಗೂ ಹೀಗೂ ಒದ್ದಾಡಿ ಎಂಟಾಗಿಸಿದರೂ ತೃಪ್ತಿಯಾಗದೆ ಯಾರದಾದರು ರೆಸ್ಯೂಮ್ ತಂದು ಫಾರ್ಮ್ಯಾಟ್ ಕಾಪಿ ಮಾಡಿಯಾದರು ಚಿಕ್ಕದಾಗಿಸಬೇಕು ಎಂದುಕೊಂಡು ಎಲ್ಲೊ ಮೂಲೆಯಲ್ಲಿ ಸೇವಾಗಿಸಿ ಕೂತುಬಿಟ್ಟರೆ ಆ ಫೈಲನ್ನು ಮತ್ತೆ ತೆಗೆಯುವುದು ಮುಂದಿನ ಬಾರಿಯ ಪ್ರಮೋಶನ್ ಮಿಸ್ಸಾದಾಗಲೆ…

ಹಾಗೆಯೆ ಒದ್ದಾಡುತ್ತಲೆ ನೋಡು ನೋಡುತ್ತಿದ್ದಂತೆ ಐವತ್ತರ ಆಚೀಚಿನ ಗಡಿ ತಲುಪುತ್ತಿದ್ದ ಹಾಗೆಯೆ, ಇನ್ನು ಹುಡುಕಿ ಪ್ರಯೋಜನವಿಲ್ಲ ಎಂದು ಮನವರಿಕೆಯಾಗತೊಡಗುತ್ತದೆ. ಮೊದಲೆ ಸಿಗುವುದು ಕಷ್ಟ, ಸಿಕ್ಕರೂ ಈಗಿರುವ ಸಂಬಳ, ಸ್ಥಾನಮಾನದ ಆಸುಪಾಸಿನಲಷ್ಟೆ ಸಿಗುವುದು ಅಂದಮೇಲೆ ಹೊಸ ಜಾಗದಲ್ಲಿ ಹೋಗಿ ಒದ್ದಾಡುವುದೇಕೆ ? ಹೇಗೂ ಇಷ್ಟು ವರ್ಷ ಇಲ್ಲೆ ಏಗಿದ್ದಾಯ್ತು..ಇನ್ನುಳಿದ ಹತ್ತು ಹದಿನೈದು ವರ್ಷ ಇಲ್ಲೆ ಹೇಗೊ ಕಳೆದುಬಿಟ್ಟರಾಯ್ತು ಅನ್ನುವ ಸ್ಮಶಾನ ವೈರಾಗ್ಯ ಆರಂಭವಾಗುವ ಹೊತ್ತಿಗೆ, ಸ್ವಂತಕ್ಕಿಂತ ಹೆಚ್ಚಾಗಿ ವಯಸಿಗೆ ಬರುತ್ತಿರುವ ಮಕ್ಕಳು, ಅವರ ವಿದ್ಯಾಭ್ಯಾಸ, ಮದುವೆಗಳ ಚಿಂತೆ ಆರಂಭವಾಗಿರುವುದು ಒಂದು ಕಾರಣವೆನ್ನಬಹುದು. ಆದರೆ ಹಾಗೆಂದು ‘ಶಸ್ತ್ರಸನ್ಯಾಸ’ ತೊಟ್ಟ ಮಾತ್ರಕ್ಕೆ ಆ ಕೆಲಸಕ್ಕೆ ಸಂಬಂಧಿಸಿದ ಚಿಂತೆಯೆಲ್ಲ ಮಾಯವಾಯ್ತೆಂದು ಹೇಳಲಾಗುವುದೆ ? ಹಿತೈಷಿಗಳೊ, ಹಿತಶತ್ರುಗಳೊ ಯಾರಾದರೊಬ್ಬರೂ ಆಗಾಗ್ಗೆ ಕೆಣಕುತ್ತಲೆ ಇರುತ್ತಾರೆ – ‘ಏನ್ ಸಾರ್ ..ಈ ಸಾರಿನಾದ್ರೂ ಪ್ರಮೋಶನ್ ಬಂತಾ?’ ಪೆಚ್ಚಾಗಿ ಹುಸಿನಗೆಯಷ್ಟನ್ನೆ ಉತ್ತರವಾಗಿತ್ತು ಮನೆಗೆ ಬಂದರೆ ಶ್ರೀಮತಿಯದು ಅದೇ ರಾಗ – ‘ಏನ್ರೀ… ವನಜನ ಗಂಡ ಕೋದಂಡರಾಮಯ್ಯನವರಿಗೆ ಈ ಬಾರಿ ಪ್ರಮೋಶನ್ ಸಿಕ್ಕಿತಂತಲ್ಲ..? ನಿಮಗೆ ಹೋಲಿಸಿದರೆ ಅವರು ಮೊನ್ನೆ ಮೊನ್ನೆ ಸೇರಿದವರಲ್ವಾ ನಿಮ್ಮ ಕಂಪೆನಿಗೆ ? ಅದು ಹೇಗ್ರಿ ಅವರಿಗೆ ಇಷ್ಟು ಬೇಗ ಬಡ್ತಿ ಸಿಕ್ಕಿಬಿಡ್ತು..?’ ಎನ್ನುತ್ತಾಳೆ. ಅದೇನು ಹಂಗಿಸುತ್ತಿದ್ದಾಳೊ, ಮುಗ್ದವಾಗಿ ಪ್ರಶ್ನಿಸುತ್ತಿದ್ದಾಳೊ ಗೊತ್ತಾಗದೆ ಒದ್ದಾಡುತ್ತಿರುವಾಗಲೆ ಪಕ್ಕದಲ್ಲಿದ್ದ ಮಗ, ‘ ಅಪ್ಪಾ ಆಫೀಸಿನಲ್ಲಿ ನೀನು ಬಾಸಾ ಅಥವಾ ಎಂಪ್ಲಾಯೀನಾ?’ ಎಂದು ಕೇಳಿ ಉರಿವ ಗಾಯಕ್ಕೆ ಉಪ್ಪೆರಚುತ್ತಾನೆ. ಇದ್ದುದರಲ್ಲಿ ಮಗಳೆ ವಾಸಿ, ‘ ಕಾಫಿ ಮಾಡ್ಕೊಂಡು ಬರ್ಲಾಪ್ಪ?’ ಅನ್ನುತ್ತ ಮಾತು ಬದಲಿಸುತ್ತಾಳೆ. ಇವರೆಲ್ಲರ ಬಾಯಿಗೆ ಪದೆಪದೆ ಬೀಳುವುದನ್ನು ತಪ್ಪಿಸಿಕೊಳ್ಳಲು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಿ ಈ ಬಾರಿಯಾದರು ಪ್ರಮೋಶನ್ ಗಿಟ್ಟಿಸೋಣವೆಂದು ಯತ್ನಿಸುತ್ತಿದ್ದರೆ ‘ಈ ಸಾರಿ ಖಂಡಿತ ಸಿಗುತ್ತದೆ’ ಎಂದು ವಾಗ್ದಾನ ಮಾಡಿದ್ದ ಬಾಸೆ ಬದಲಾಗಿ ಮತ್ತೆ ಹತಾಶೆಯ ಹೊಸ ಚಕ್ರ ಗಿರಕಿ ಹೊಡೆಯತೊಡಗುತ್ತದೆ…

ಇದೆಲ್ಲಕ್ಕು ಮೀರಿದ ಹೆಚ್ಚಿನ ಗಂಡಾಂತರದ್ದು ಸ್ವಯಂ ಆತ್ಮಾಭಿಮಾನದ ಕುರಿತಾದದ್ದು.. ಇದೆಲ್ಲಾ ಏಟುಗಳು ಒಳಗೊಳಗೆ ಪೂರ್ತಿಯಾಗಿ ಕುಗ್ಗಿಸಿ ‘ನಾನು ಸಾಧಿಸಿದ್ದಾದರು ಏನು?’ ಎಂಬ ದೊಡ್ಡ ಭೂತಾಕಾರದ ಪ್ರಶ್ನೆಯನ್ನು ಹುಟ್ಟಿಸಿ ಅನಾಥ ಪ್ರಜ್ಞೆಯಲ್ಲಿ ತೊಳಲಾಡಿಸುವ ಬಗೆ ಅವರ್ಣನೀಯ. ಆ ಸಂಧಿಕಾಲದಲ್ಲಿ ಇರುವ ಗೊಂದಲ ಎಷ್ಟು ಕ್ಲಿಷ್ಟಕರವೆಂದರೆ ‘ ಏನೆಲ್ಲ ಆಯ್ತೆಂದು ಹಿಂದಕ್ಕೆ ತಿರುಗಿ ನೋಡುತ್ತ, ಗೋಳಾಡಿಕೊಂಡು ಮುಂದಿನ ಪಾಠಕ್ಕಾಗಿ ಅವಲೋಕಿಸುತ್ತ ಕೂರಬೇಕೆ? ಅಥವಾ ಹಿಂದಿನದೆಲ್ಲ ಮರೆತು ಆದದ್ದಾಯ್ತೆಂದು ಮುಂದಿನ ಭವಿತದತ್ತ ನೋಡುತ್ತ ಕೂರಬೇಕೆ?’ ಎನ್ನುವ ಗೊಂದಲದಿಂದ ಹೊರಬರಲೆ ಆಗದ ಚಕ್ರವ್ಯೂಹವಾಗಿ ಕಾಡತೊಡಗಿರುತ್ತದೆ. ಹಳತನ್ನು ಬಿಟ್ಟೊಗೆಯಲಾಗದಷ್ಟು ದೂರ ಬಂದು ಆಗಿಬಿಟ್ಟಿರುವುದರಿಂದ, ಸಾರಾಸಗಟಾಗಿ ಬಿಟ್ಟುಬಿಡಲೂ ಭಯ; ಹೊಸದಾಗಿ ಹೊಸತನ್ನು ನಿರಾತಂಕವಾಗಿ ಅಪ್ಪಲೂ ಭೀತಿ – ಅದರಲ್ಲಿನೇನೇನಡಗಿದೆಯೋ? ಎಂದು. ಅಲ್ಲದೆ ಎಲ್ಲ ಹೊಸದಾಗಿ ಮೊದಲಿಂದ ಆರಂಭಿಸಿದರೆ ಇದುವರೆವಿಗೆ ಗಳಿಸಿದ ಅನುಭವ, ಪರಿಣಿತಿಯನ್ನೆಲ್ಲ ಗಾಳಿಗೆ ತೂರಿದಂತಲ್ಲವೆ ? ಎಂಬ ಗಳಿಸಾಗಿರುವ ವೃತ್ತಿಪರತೆಯ ಆಸ್ತಿಯನ್ನು ನಷ್ಟವಾಗಿಸದಿರುವ ಗೊಡವೆ ಬೇರೆ. ಒಟ್ಟಾರೆ ಏನೆ ಆದರು ಮೊತ್ತದಲ್ಲಿ ಮಾತ್ರ ಬರಿ ಗೊಂದಲ. ಇದು ಸಾಲದಕ್ಕೆ ಹೊರಗಿನ ದೇಹಕ್ಕೆ ವಯಸಾಗುತ್ತಿದ್ದರೂ ಒಳಗಿನ ಮನವಿನ್ನು ‘ಯೌವ್ವನ’ದಲ್ಲೆ ಅಡ್ಡಾಡಿಕೊಂಡು ತನ್ನದೆ ಲೋಕದಲ್ಲಿ ವಿಹರಿಸಿಕೊಂಡ ಕಾರಣದಿಂದಾಗಿ ಈ ವಯಸಾಗುತಿರುವ ದೇಹದ ಅಸಹಾಯಕತೆ ತಟ್ಟನೆ ಅರಿವಾಗುವುದಿಲ್ಲ. ‘ಇದೇನು ಮಹಾ?’ ಎಂದು ಭರದಲ್ಲಿ ದಿನವೂ ಹತ್ತಿ ಮೇಲೇರುತ್ತಿದ್ದ ಮೆಟ್ಟಿಲುಗಳೆ, ಅರ್ಧ ಹತ್ತುತ್ತಿದ್ದಂತೆ ಏದುಸಿರು ಕೊಡಲಾರಂಭಿಸಿದಾಗಷ್ಟೆ ‘ಎಲ್ಲೊ, ಏನೊ ಎಡವಟ್ಟಾಗಿರಬಹುದೆ?’ ಎನ್ನುವ ಅನುಮಾನದ ಸುಳಿವು ಸಿಗುವುದು. ಅದು ಕಾಲುನೋವಾಗೊ, ಏದುಸಿರಾಗೊ, ಧಾರಾಕಾರದ ಬೆವರಾಗೊ ಹರಿಯುತಿದ್ದರೂ ನಾನಿನ್ನು ಪ್ರಾಯದ, ಯೌವ್ವನದ, ಬಿಸಿರಕ್ತದ ಎಳೆಗರು ಎನ್ನುವ ಮನದ ಮಾಯೆಯ ಮುಸುಕು ತುಸುತುಸುವಾಗಿ ಹಿಂಜರಿಯುತ್ತ, ನೇಪಥ್ಯಕ್ಕೆ ಸರಿಯುತ್ತ, ನಂಬಿಕೆಗಳ ಬಲ ಸಡಿಲವಾಗುವ ಕಾಲ. ಆದರೆ ಈ ಹೊಸ್ತಿಲಲ್ಲಿರುವ ಪ್ರತಿಶತ ಎಲ್ಲರೂ ಇದೆ ಪರಿಸ್ಥಿತಿಯಲ್ಲಿ ಸಿಕ್ಕಿ ನರಳುವರೆಂದೆ ಹೇಳಬರುವುದಿಲ್ಲ. ಇದಾವ ತೊಡಕೂ ಇರದೆ ಮಿಂಚಿನ ವೇಗದಲ್ಲಿ ಸಂಚರಿಸುತ್ತ ಮುನ್ನಡೆವ ಭಾಗ್ಯಶಾಲಿಗಳೂ ಇಲ್ಲದಿಲ್ಲ – ಆದರೆ ಅವರ ಸಂಖ್ಯೆ ಅಷ್ಟು ದೊಡ್ಡದಿರದು ಅನ್ನುವುದನ್ನು ಬಿಟ್ಟರೆ .

ನೈಜದಲ್ಲಿ ಈ ಹಂತವನ್ನು ದಾಟುವ ಎಲ್ಲರೂ ಇದೊಂದು ರೀತಿಯ ‘ಮಿಡ್ ಲೈಫ್ ಕ್ರೈಸಿಸ್’ ಅನ್ನು ಅನುಭವಿಸಿಯೆ ತೀರುತ್ತಾರೆನ್ನುವುದರಲ್ಲಿ ಸಂದೇಹವೆ ಇಲ್ಲ. ಆದರೆ ಪ್ರತಿಯೊಬ್ಬರು ಅನುಭವಿಸುವ ಮಟ್ಟ ಒಂದೆ ರೀತಿ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ. ಕೆಲವರಲದು ತೀವ್ರತರವಾಗಿ ಕಾಡಿದರೆ ಮತ್ತೆ ಕೆಲವರಲ್ಲಿ ಮಾಮೂಲಿನಂತೆ ಬಂದು ಸಾಗಿಹೋಗುವ ಸಾಮಾನ್ಯ ಪ್ರಕ್ರಿಯೆಯಾಗಿಬಿಡಬಹುದು. ಅದೇನೆ ಆದರೂ ಆ ಆತಂಕ, ಗೊಂದಲ, ಕಸಿವಿಸಿಗಳ ಐವತ್ತರ ಹತ್ತಿರವಾಗುತ್ತಿರುವ ಅಥವಾ ಅದರ ಹೊಸಿಲು ದಾಟುತ್ತಿರುವ ಭೀತಿಯೆ ಅದರ ಮುಂದಿನ ಪರ್ವಕ್ಕೆ ಬೇಕಾದ ಪರಿಪಕ್ವತೆಯನ್ನೊದಗಿಸುವ ಬುನಾದಿಯಾಗುತ್ತದೆಯೆಂಬುದು ಅಷ್ಟೆ ನಿಜ. ಅಲ್ಲಿಯತನಕ ಬರಿಯ ಲಾಜಿಕ್, ಸೈಂಟಿಫಿಕ್ ಎಂದು ತಾರ್ಕಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನತ್ತಿತ್ತಲೆ ಸುಳಿದಾಡುತ್ತಿದ್ದ ಮನ ಇದ್ದಕ್ಕಿದ್ದಂತೆ ತಾತ್ವಿಕದತ್ತ, ದೈವಿಕದತ್ತ, ಶಾಸ್ತ್ರ, ಪೂಜೆ, ಪುನಸ್ಕಾರಗಳತ್ತ ಗಮನ ಹರಿಸತೊಡಗುವುದು ಆ ಪಕ್ವತೆಯ ಪ್ರೇರಣೆಯ ಪರಿಣಾಮದಿಂದಲೆ. ಪ್ರತಿಯೊಂದು ಮನಸು ತನಗೆ ಸೂಕ್ತವಾದ ಏನೊ ಸಾಧಿಸಿ ತೋರಿಸಲು ಸಾಧ್ಯವಿರುವಂತಹ ಹಾದಿಯೊಂದನ್ನು ಹುಡುಕಿಕೊಂಡು ಮುನ್ನುಗ್ಗುವುದು ಅದೆ ಕಾರಣದಿಂದಲೆ. ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಲಿ, ಮರೆತೆ ಹೋದಂತಿದ್ದ ಹವ್ಯಾಸವನ್ನು ಮತ್ತೆ ರೂಢಿಸಿಕೊಳ್ಳಲೆತ್ನಿಸುತ್ತ ಬೆಳೆದು ಪ್ರಬುದ್ಧವಾಗಲೆತ್ನಿಸುವುದಾಗಲಿ, ಜವಾಬ್ದಾರಿಯ ನಿಭಾವಣಿಕೆಯ ವಿಧಾನವನ್ನೆ ಬದಲಿಸಿಕೊಳ್ಳುವ ತರದಲ್ಲಾಗಲಿ, ಒಟ್ಟಾರೆ ತಮ್ಮ ವ್ಯಕ್ತಿತ್ವದ ನಿಲುವಿಗೆ ಒಂದು ಹೊಸ ರೂಪುರೇಷೆಯನ್ನು ಕೊಡುವ ಯಾವುದೆ ಯತ್ನವಾಗಲಿ – ಎಲ್ಲವೂ ಈ ಪರಿಪಕ್ವತೆಯತ್ತ ನಡೆಸಲ್ಹವಣಿಸುವ ಮನದ ಆಯಾಚಿತ ಯತ್ನಗಳೆ ಎನ್ನಬಹುದು. ಆ ಮೂಲಕವೆ ಈ ವಯೋ ಸಂಕ್ರಮಣದ ಸಂಧಿಕಾಲವನ್ನು ದಾಟಿ ಮುನ್ನಡೆಯಲು ಬೇಕಾದ ಕಸುವನ್ನು, ಮನೋಸ್ಥೈರ್ಯವನ್ನು ಒಗ್ಗೂಡಿಸಿಕೊಡುತ್ತದೆ, ಈ ಪಕ್ವತೆಯತ್ತ ನಡೆಸುವ ಪ್ರಕ್ರಿಯೆ. ಆ ಪಕ್ವತೆಯ ಹತ್ತಿರವಾದಂತೆಲ್ಲ ಮತ್ತೆ ಮನ ಶಾಂತಿಯತ್ತ ಚಲಿಸತೊಡಗುತ್ತದೆ – ಹೊಸತಿನ ಸಮತೋಲನದಲ್ಲಿ; ಕೆಲವರು ಅಲ್ಲಿಗೆ ಬೇಗ ತಲುಪಿದರೆ ಮತ್ತೆ ಕೆಲವರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ಸೇರುತ್ತಾರೆನ್ನುವುದಷ್ಟೆ ವ್ಯತ್ಯಾಸ.

ಮೊನ್ನೆ ಆಫೀಸಿಗೆ ಬಂದಾಗ ಯಾಕೊ ಅಂದು ತಡವಾಗಿ ಬಂದ ಹನುಮಾಚಾರಿ ಸ್ವಲ್ಪ ಮಂಕಾದಂತೆ ಕುಳಿತಿದ್ದ. ನಾನು ಅವನ ಮುಖವನ್ನೆ ನೋಡುತ್ತ,’ಆಚಾರೀ.. ಈ ಸಾರಿ ನನ್ನ ಬರ್ತಡೆ ಸೆಲಬ್ರೇಟ್ ಮಾಡೋಣ ಅಂದ್ಕೊಂಡಿದ್ದೀನಿ ಕಣೊ , ನಿಂಜೊತೆಗೆ..’ ಎಂದೆ. ಅವನೊಂದು ಅರೆಗಳಿಗೆ ನನ್ನ ಮುಖವನ್ನೆ ನೋಡುತ್ತ ಪಕಪಕನೆ ನಗತೊಡಗಿದ. ನಾನು, ‘ಇಲ್ಲಾ ಆಚಾರಿ.. ಐಯಾಂ ಸೀರಿಯಸ್..ಐ ವಿಲ್ ಡ್ರಿಂಕ್ ವಿತ್ ಯೂ’ ಎಂದೆ. ಅವನು ಒಂದರೆಗಳಿಗೆ ನನ್ನ ಮುಖವನ್ನು ಮತ್ತೆ ನೋಡಿದವನೆ, ‘ ಸರಿ.. ಸಾರ್… ಆದರೆ ಒಂದ್ ಚೇಂಜ್.. ನೋ ಡ್ರಿಂಕ್ಸ್.. ನಾನೀಗ ಕುಡಿಯೋದು ನಿಲ್ಲಿಸಿಬಿಟ್ಟಿದ್ದೇನೆ.. ಯಾವುದಾದರೂ ಒಳ್ಳೆ ಹೆಲ್ತಿ ರೆಸ್ಟೋರೆಂಟಿಗೆ ಹೋಗೋಣ, ಫ್ಯಾಮಿಲಿ ಜೊತೆಲಿ..’ ಎಂದುಬಿಡುವುದೆ?

ಒಟ್ಟಾರೆ, ಎಲ್ಲಾ ಸೇರಿಸಿ ‘ಕಾಲಾಯ ತಸ್ಮೈ ನಮಃ’ ಅಂದುಬಿಡಬಹುದಲ್ಲವೆ?

– ನಾಗೇಶ ಮೈಸೂರು

(ಸಿಂಗಪುರ ಕನ್ನಡ ಸಂಘದ ‘ಸಿಂಗಾರ 2015’ ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು)

(Picture source: internet/ social media)

01675. ಯಾರೊ ಕರೆದಾ ಹಾಗೆ, ಏನೋ ಹೇಳಿದ ಹಾಗೆ..


01675. ಯಾರೊ ಕರೆದಾ ಹಾಗೆ, ಏನೋ ಹೇಳಿದ ಹಾಗೆ..

_________________________________________

(ನಿಮಗೂ ಯಾವಾಗಲಾದರೂ ಹೀಗೆ ಆಗಿದೆಯೆ? ಅನಿಸಿದೆಯೆ? ನನಗೊಮ್ಮೊಮ್ಮೆ ಆದಂತನಿಸಿದ ಅನಿಸಿಕೆಗೆ ಇಲ್ಲಿ ಪದ ರೂಪ ನೀಡಲು ಯತ್ನಿಸಿದ್ದೇನೆ – ಅದು ಪೂರ್ಣ ಸಫಲವಾಗದ ಯತ್ನವೆಂಬ ಪ್ರಜ್ಞಾಪೂರ್ವಕ ಅರಿವಿನಿಂದಲೆ. ಆ ಪ್ರಜ್ಞೆಯಲ್ಲೆ ಕಟ್ಟಿದ ಈ ಕೆಳಗಿನ ಕವನ ಕೂಡ ಅಸಂಪೂರ್ಣವೆನಿಸಿದರೂ ಅಸಂಗತವೆನಿಸಲಾರದೆಂಬ ಆಶಯದ ಮೊತ್ತ….ಇದೂ ಕೂಡ ಎಲ್ಲಿಂದಲೋ, ಯಾರೋ ಹೇಳಿ ಬರೆಸಿದ ಹಾಗೆ….!)

………….ಏನೊ ಓದುತ್ತಲೊ ಬರೆಯುತ್ತಲೊ ಅಥವಾ ಏನೂ ಮಾಡದೆ ಸುಮ್ಮನೆ ವಿಶ್ರಮಿಸುತ್ತಲೊ, ಇಲ್ಲವೆ ಯಾವುದೊ ಅಂತರಂಗದ ವಾಗ್ವಾದದಲ್ಲಿ ಪರ ವಿರೋಧಗಳ ಪಾತ್ರ ವಹಿಸುತ್ತ ಮಂಡಿಗೆ ತಿನ್ನುತ್ತಿರುವ ಹೊತ್ತು. ಅದು ಬಿರು ಬಿಸಿಲಿನಲಿ ಬೆವರ ಧಾರೆಯೆರೆದು ಬಳಲಿಸುತ್ತಿರುವ ಹೊತ್ತೊ, ಮುಂಜಾವಿನ ಮೊದಲೆ ವಿನಾಕಾರಣ ಎಚ್ಚರವಾಗಿ ವಿಸ್ಮೃತಿಯ ವಿಸ್ಮಯದಲ್ಲಿ ಜಳಕಿಸುತಲೆ ತಲ್ಲೀನವಾದ ಹೊತ್ತೊ, ದಿನದೆಲ್ಲ ಜಂಜಾಟ ಮುಗಿಸಿ ಒಂದು ಕಾಫಿ ಲೋಟ ಹಿಡಿದು ಕುರ್ಚಿಗೊರಗಿದ ವಿರಾಮದ ಹೊತ್ತೊ, ಅಥವಾ ದಿನದೆಲ್ಲ ಶ್ರಮದ ಲೆಕ್ಕ ಚುಕ್ತಾ ಮಾಡಲು ಶಯನೋತ್ಸವಕೆ ಅನುವಾಗುವ ಮೊದಲು ಪುಸ್ತಕೊವೊಂದನು ಹಿಡಿದಾ ಹೊತ್ತೊ….. ಒಟ್ಟಾರೆ ಯಾವುದೊ ಒಂದು ಕ್ರಿಯಾನಿರತ ಸಂಸರ್ಗದ ಹೊತ್ತಲ್ಲಿ ಏನೊ ಅರಿವಾಗದ ಏಕಾಗ್ರತೆ, ಮನ ಪದರದಲ್ಲಿ ಪ್ರಪುಲ್ಲತೆಯನ್ನೊ, ಪ್ರಶಾಂತತೆಯನ್ನೊ ಆರೋಪಿಸಿದಂತಹ ಅನುಭೂತಿ. ಆ ಭಾವದ ಅನುಭಾವವನ್ನು ಅನುಭವವೆಂದನುಭವಿಸಿ ವಿವರಿಸಲಾಗದಂತೆ, ಅನುಭವವೆ ಗಮ್ಯಕೆ ನಿಲುಕದ ಚಮತ್ಕಾರವಾದಂತೆ ಪ್ರಕ್ಷೇಪವಾದ ಸಮಯ… ಅದೊಂದು ಅರೆಗಳಿಗೆ, ಅರೆಕ್ಷಣ ಎಲ್ಲೊ ಇರುವಂತಹ , ತೇಲಿ ಹೋದಂತಹ, ಇಡಿ ಲೌಕಿಕ ಪ್ರಪಂಚದಿಂದ ಬೇರೆಯೆ ಆದಂತ ಅಲೌಕಿಕವಾದ ದಿವ್ಯ ಭಾವ….

ಆಗ ಇದ್ದಕ್ಕಿದ್ದಂತೆ ತಟ್ಟನೆ ಕಿವಿ ನಿಮಿರಿದ ಹಾಗೆ… ಕಣ್ಣಿಗೆ ಕಾಣದ ಯಾವುದೊ ಅಲೆಗಳ ಕ್ಷೀಣ ಪ್ರವಾಹವೊಂದು ಸದ್ದಿನ ರೂಪದಲ್ಲಿ ಸಾಂದ್ರವಾಗಿ ಕೇಂದ್ರಿಕೃತಗೊಳ್ಳುತಿರುವ ರೀತಿಯ ಕಲ್ಪನೆ… ಹತ್ತಿರದಲ್ಲಿ ಯಾವ ಸದ್ದೂ ಇರದ ನಿಶ್ಯಬ್ದತೆ ಸುತ್ತಲೂ ಹಾಸಿಕೊಂಡು ಬಿದ್ದಿದ್ದರೂ, ಎಲ್ಲಿಂದಲೊ ತೇಲಿ ಬಂದಂತೆ ಘಂಟಾನಾದದ ತೆಳುವಾದ ಅಲೆಯೊಂದು ಕಿವಿಯ ಹತ್ತಿರಕ್ಕೆ ಬಂದು ‘ಗುಂಯ್’ಗುಟ್ಟಿದ ಹಾಗೆ.. ಅಷ್ಟಕ್ಕೆ ನಿಲ್ಲದೆ, ತೀರಾ ಮಂದ್ರ ಸ್ಥಾಯಿಯಲ್ಲಿ ಆರಂಭವಾದ ಲಹರಿ ಕ್ರಮಕ್ರಮೇಣ, ಹಂತಹಂತವಾಗಿ ಶಕ್ತಿಯನ್ನು ಶೇಖರಿಸಿಕೊಂಡಂತೆ ಗಟ್ಟಿಯಾಗುತ್ತಾ ಹೋಗುವ ಅನುರಣಿತ ದನಿ… ಕ್ಷೀಣದಿಂದ ತಾರಕಕ್ಕೇರುವ ದನಿ, ಹಾಗೆ ಮುಂದುವರೆದರೆ ಸಿಡಿಲ ಘೋಷವೆ ಆಗಿಬಿಡುವುದೋ ಏನೊ ಎನ್ನುವ ದಿಗಿಲುಟ್ಟಿಸುವ ಕಳವಳ… ಅದೇನು ನಿಜವಾದ ದನಿಯೊ, ಮನೋಭ್ರಮೆಯೊ ಹೇಳಲಾಗದ ಅತಂತ್ರ ಸ್ಥಿತಿ… ಏಕೆಂದರೆ ಆ ಕೇಳುತ್ತಿರುವ ದನಿ ಸ್ಪಷ್ಟವಾಗಿದ್ದರೂ ಅದರ ಸದ್ದಾಗಲಿ, ಶಬ್ದವಾಗಲಿ ಜಾಗೃತ ಪ್ರಪಂಚದಲ್ಲಿ ಭೌತಿಕವಾಗಿ ಅನಾವರಣಗೊಂಡಂತೆ ಕಾಣುತ್ತಿಲ್ಲ… ವಿಚಿತ್ರವೆಂದರೆ ಅಷ್ಟು ಸುಸ್ಪಷ್ಟವಾಗಿ ಕೇಳುತ್ತಿರುವ ದನಿ, ವಾಸ್ತವದಲ್ಲಿ ಪ್ರಕ್ಷೇಪಿಸಿಕೊಳ್ಳದೆ ಬರೀ ಸ್ವಾನುಭವಕ್ಕೆ ಮಾತ್ರ ದಕ್ಕುತ್ತಿದೆಯೆಂಬ ಅರಿವು ಅಂತರಂಗದದಾವುದೊ ಮೂಲೆಗೆ ವೇದ್ಯವಾಗುತ್ತಿದೆ… ಆ ಗೊಂದಲ, ಸಂಶಯಗಳ ತಾಕಲಾಟದಲ್ಲಿರುವ ಬಾಹ್ಯ ಮನಕ್ಕರಿವೆ ಬಾರದ ಹಾಗೆ, ಅದರೊಳಗೆ ಜಾರಿ ಹೋಗಿ ಕುತೂಹಲ – ಉತ್ಸಾಹದಿಂದ ಅನ್ವೇಷಣೆ ನಡೆಸಿರುವ ಒಳಮನದ ವ್ಯಾಪಾರ ಪ್ರಜ್ಞೆಗೆ ನಿಲುಕದ ಸರಕಿನಂತೆ ಕಾಣುತ್ತದೆ…

ಆದರೆ ಆ ಹೊತ್ತಿಗಾಗಲೆ ಸಂಧರ್ಭದ ಸಂಪೂರ್ಣ ಹತೋಟಿಯನ್ನು ಕೈಗೆತ್ತಿಕೊಂಡ ಒಳಮನಸಿನ ಚಟುವಟಿಕೆ ತನ್ನಾವುದೊ ಮೂಲೆಯ ನಿಷ್ಕ್ರಿಯವಾಗಿದ್ದ ಕ್ರಿಯಾಶೀಲತೆಗೆ ಕೀಲಿ ಕೊಟ್ಟಂತೆ ಮಿಂಚಿನ ಸಂಚಾರದಲ್ಲಿ ನಿರತ… ಏನೇನೊ ಹೊಸತರ, ಹೊಸತನ ಆವರಿಸಿಕೊಂಡ, ಅಪರಿಚಿತತೆಯೆಲ್ಲ ಮಾಯವಾದ ಸುಪರಿಚಿತವಾದ ಭಾವ. ಆ ಗಳಿಗೆಯಲ್ಲಿ ಬಾಹ್ಯದಲ್ಲಿ ತನು ಏನು ಮಾಡುತ್ತಿದೆಯೊ – ಓದೊ, ವಿರಾಮವೊ, ಕಾಫಿಯ ಕುಡಿತವೊ, ಮಾತಾಟವೊ – ಅದೆಲ್ಲವು ಹಿಂದೆಂದೊ ಒಮ್ಮೆ ಅದೇ ಕ್ರಮದಲ್ಲಿ, ಅದೇ ರೀತಿಯಲ್ಲಿ ನಡೆದಿದ್ದಂತೆ ಮಸುಕು ಭಾವ. ಆಗ ನಡೆದಿದ್ದೆ ಈಗ ಮತ್ತೆ ಪುನರಾವರ್ತನೆಯ ರೂಪದಲ್ಲಿ ಘಟಿಸುತ್ತಿದೆಯೆಂಬ ವಿಚಿತ್ರ ಅರಿವು… ಅದೇ ಪುಟದ, ಅದೇ ಸಾಲು ಓದಿದ್ದಂತೆ, ಅದೇ ಮಾತು ಸಾಕ್ಷಾತ್ ಅದೇ ರೀತಿಯೆ ಆಡಿದ್ದಂತೆ, ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಕೂತಿದ್ದಂತೆ – ಅದೆ ತಾರಸಿ, ಅದೇ ಹೆಂಚಿನ ಮನೆ, ಅದೇ ಗೋಡೆ, ಅದೇ ಹೆಣ್ಣು ಗಂಡುಗಳು – ಕೊನೆಗೆ ತೊಟ್ಟಿದ್ದ ಅದೆ ಬಟ್ಟೆಯೂ ವಿಸ್ಮಯದ ಕಡಲಲ್ಲಿ ಮುಳುಗಿಸೇಳಿಸುತ್ತಿದ್ದಂತೆ ಅನಿಸಿಕೆ, ತದ್ಭಾವ. ಆ ಕ್ಷಣದ ಆ ನಂಬಿಕೆಯ ತೀವ್ರತೆ ಎಷ್ಟೆಂದರೆ – ಅದು ಸತ್ಯವೊ, ಸುಳ್ಳೊ ಎಂಬ ಅನುಮಾನ ಕೂಡ ಕಾಡದಷ್ಟು. ಅನುಮಾನಗಳಿಗೆಡೆಯಿಲ್ಲದೆ ಅನಿರ್ವಚನೀಯತೆಯ ಪರಮ ದರ್ಶನವಾದ ಅನಿಸಿಕೆ…

ಆ ಹೊತ್ತಿನಲ್ಲೆ ಮತ್ತೊಂದು ವಿಸ್ಮಯದ ಜಾದೂವು ಸಹ ಗಮ್ಯಕ್ಕೆ ನಿಲುಕಿಯೂ ನಿಲುಕದಂತೆ ಭಾಸವಾಗುವ ಧೂರ್ತ – ಅಲ್ಲಿಯ ತನಕ ಆವರಿಸಿಕೊಂಡಿದ್ದ ‘ಹಿಂದೆ ನಡೆದಿತ್ತೆಂಬ’ ರೀತಿಯ ಪರಿಚಿತ ಪರಿಧಿಯನ್ನು ದಾಟಿಸಿ, ಆ ‘ಹಿಂದೆ’ ಯ ಬದಲಿಗೆ ಇಂದಿನ್ನು ನಡೆದಿಲ್ಲದ, ಇನ್ನೇನೇನು ನಡೆದೀತೆಂಬ ಚಿತ್ರಗಳನ್ನು ಮೂಡಿಸುವ ‘ ಅಪರಿಚಿತ ಬದಿ’. ಒಂದು ರೀತಿಯಲ್ಲಿ ಬಾಹ್ಯದಲ್ಲಿ, ಇಂದೇನು ನಡೆಯಲಿದೆ ಎನ್ನುವುದನ್ನು ಭವಿಷ್ಯ ಹೇಳುವ ರೀತಿಯಲ್ಲಿ ಕಟ್ಟಿಕೊಡುವ ಮಸುಕು ಮಸುಕಾದ ಅಸ್ಪಷ್ಟ ಚಿತ್ರಗಳು… ಯಾವಾಗ ಈ ಪರಿಧಿ ಭವಿಷ್ಯತ್ತಿನೆಡೆಗೆ ತನ್ನ ಕೈ ಚಾಚಿ ವಿಸ್ತಾರವಾಗಲ್ಹವಣಿಸತೊಡಗುತ್ತದೆಯೊ, ಆಗ ಅಲ್ಲಿಯವರೆಗೆ ಅಸಹಾಯಕನಂತೆ ಬಿದ್ದಿದ್ದ ಬಾಹ್ಯ ಪ್ರಜ್ಞೆಯ ವಕ್ತಾರ ಇದ್ದಕ್ಕಿದ್ದಂತೆ ಗಾಬರಿಯಿಂದ ಮೇಲೆದ್ದವನಂತೆ ಮೂಗು ತೂರಿಸತೊಡಗುತ್ತಾನೆ. ಅಂತರಾತ್ಮಕ್ಕೆ ನೇರವಾಗಿ ಏನೂ ಕಾಣದಿದ್ದರೂ ಅಡ್ಡಿಯನ್ನೊಡ್ಡುವ ಬಾಹ್ಯ ಪ್ರಜ್ಞೆಯ ಕಂಪನಗಳು ಒಳಗಿನ ಪ್ರಶಾಂತ ಕಂಪನಗಳನ್ನು ಪ್ರಕ್ಷುಬ್ದಗೊಳಿಸಿ ಅಸ್ತ್ಯವ್ಯಸ್ತಗೊಳಿಸುತ್ತಿರುವುದು ಗಮನಕ್ಕೆ ಬಂದರೂ ಅದು ಅಸಹಾಯಕ. ಅದರ ನಿಯಂತ್ರಣ ವ್ಯಕ್ತಿಗತಾತ್ಮದ ಹೊಣೆಯೆ ಹೊರತು ನಿರ್ಲಿಪ್ತ ಅಂತರಾತ್ಮದ್ದಲ್ಲ. ಹತೋಟಿಯಲಿದ್ದು ಪ್ರಶಾಂತವಾಗಿರುವ ಚಿತ್ತ ಪಟಲದಲ್ಲಿ ಅದು ಭೂತ, ಪ್ರಸ್ತುತ, ಭವಿತಗಳನ್ನು ಪ್ರಕ್ಷೇಪಿಸಬಲ್ಲುದೆ ಹೊರತು, ಜಂಜಾಟದಲ್ಲಿ ಸಿಲುಕಿ ಹೋರಾಡದು. ಬಾಹ್ಯ ಕಂಪನದ ಸತತ ವರ್ಷೋದ್ಘಾತ ಹೆಚ್ಚಿದಂತೆ ಆ ಆಂತರ್ಯ ಮತ್ತೆ ನಿಷ್ಕ್ರಿಯತೆಯೆಡೆಗೆ ಸಾಗುತ್ತಿರುವುದು ಅನುಭವಕ್ಕೆ ಬರಲಾರಂಭಿಸುತ್ತದೆ. ತಾರ್ಕಿಕವಾಗಿ ಅನಾವರಣಗೊಳ್ಳುತ್ತಿದ್ದ ಭವಿತ ಸಹ ಕೊಂಡಿಗಳಿಲ್ಲದ ಅತಾರ್ಕಿಕ ಸಂಕಲನದಂತೆ ಅನಿಸಿಬಿಡುತ್ತದೆ. ಮೊದಲ, ಮಧ್ಯದ, ಕೊನೆಯ ಯಾವ್ಯಾವುದೊ ದೃಶ್ಯಗಳೆಲ್ಲ ಮಿಶ್ರವಾಗಿ, ಕಲಸುಮೇಲೋಗರವಾಗಿ ಅಲ್ಲಿಯವರೆಗೂ ಅದನ್ನು ಪರಮಾನಂದಲಹರಿಯೆಂಬಂತೆ ಅನುಭವಿಸಿ, ಆನಂದಿಸುತ್ತಿದ್ದ ಮಸ್ತಿಷ್ಕದ ಇಂದ್ರಿಯ ಪ್ರಜ್ಞೆಗಳು ‘ಇದೇನಿದು ಅಸಂಗತ’ ಎನ್ನುವ ಹಾಗೆ ಎಚ್ಚರಗೊಳ್ಳತೊಡಗುತ್ತವೆ. ಆ ಎಚ್ಚರ ತುರ್ಯಾನುಭವದಲಿದ್ದ ಮನವನ್ನು ಯಾವುದೊ ಸ್ವಪ್ನ ಲೋಕದಿಂದಿಳಿಸಿ ತಟ್ಟನೆ ಜಾಗೃತಾವಸ್ಥೆಗೆ ತಂದಿರಿಸಿಬಿಡುತ್ತದೆ – ವಾಸ್ತವ ಪರಿಸರದ ಅನುಭೂತಿಗಳನ್ನೆಲ್ಲ ಮತ್ತೆ ಕ್ರೋಢಿಕರಿಸಿ. ಯಾವುದೊ ಉನ್ಮೇಷದಿಂದ ಮತ್ತೆ ಲೌಕಿಕಕಿಳಿದ ಅಲೌಕಿಕ ಅನುಭವದ ನೆರಳು ಮಾತ್ರ ‘ಇದೇನು, ಕನಸೊ, ನನಸೊ?’ ಎಂಬ ಅನುಮಾನದಲ್ಲೆ ಆದ ಅನುಭವವನ್ನು ಮರಳಿ ನೆನಪಿನ ಚೀಲದಿಂದೆತ್ತಿ ಅದೆ ರೀತಿಯಲ್ಲಿ ಮರಳಿ ಕಟ್ಟುವ ವಿಫಲ ಯತ್ನ ನಡೆಸಿರುತ್ತದೆ…ಎಲ್ಲವೂ ಅಯೋಮಯ, ಗೊಂದಲಮಯ… ಯಾರೋ ಕರೆದ ಹಾಗೆ..ಏನೋ ಹೇಳಿದ ಹಾಗೆ…ನೆನಪಿನೋಲೆ ಕೊಟ್ಟು ಹೋದ ಹಾಗೆ…..

————————————————

ನಾಗೇಶ ಮೈಸೂರು, ೩೦. ಮಾರ್ಚಿ. ೨೦೧೪

————————————————

01674. ಏಪ್ರಿಲ್ ಪೂಲ್ ಗುಬ್ಬಣ್ಣ..! (ಲಘು ಹರಟೆ)


01674. ಏಪ್ರಿಲ್ ಪೂಲ್ ಗುಬ್ಬಣ್ಣ..! (ಲಘು ಹರಟೆ)

___________________________________

(ನಾಗೇಶ ಮೈಸೂರು)

‘ಟ್ರಿನ್… ಟ್ರಿನ್..’ ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ‘ ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?’ ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು ‘ ಹಲೊ..’ ಎಂದೆ. ಯಾರಿರಬಹುದೆನ್ನುವ ಅನುಮಾನ ನಿಸ್ಸಂಶಯವಾಗಿ ತೊಲಗಿ ಹೋಗುವ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ಗುಟುರು ದನಿ ಕೇಳಿಸಿತ್ತು.

‘ ಸಾರ್.. ನಾನು ಗುಬ್ಬಣ್ಣ.. ನಮಸ್ಕಾರ ಸಾರ್.. ನಿದ್ದೆಯಿಂದೆಬ್ಬಿಸಿಬಿಟ್ಟೆಂತ ಕಾಣುತ್ತೆ..’ ಎಂದ ಪೆಚ್ಚು ನಗೆ ನಟಿಸುತ್ತ. ನನ್ನ ‘ ಹಲೊ’ ಎನ್ನುವ ಮಾತಿಂದಲೆ ನಿದ್ದೆಯಾಳದಿಂದೆದ್ದು ಬಂದದ್ದನ್ನು ಗಮನಿಸಿ, ಅದಕ್ಕೆ ನನ್ನಿಂದ ಬೆಂಡು ಎತ್ತಿಸಿಕೊಳ್ಳುವ ಮೊದಲೆ ತಾನೆ ಆಡಿ ತಪ್ಪಿಸಿಕೊಳ್ಳುವ ಸ್ಕೆಚ್ ಹಾಕುತ್ತಾ ಇದ್ದಾನೆ ಖದೀಮ…

‘ ಕಾಣುತ್ತೆ ಏನು ಬಂತು ? ಖಡಾಖಂಡಿತವಾಗಿ ನಿದ್ದೆ ಕೆಡಿಸಿಬಿಟ್ಟೆ ನಕ್ಷತ್ರಿಕನ ಹಾಗೆ.. ಹಾಳಾದ್ದು ಪೋನಿಂದ ಏನು ಮಾಡುವ ಹಾಗಿಲ್ಲ. ಇಲ್ಲಾಂದ್ರೆ ಮೊದಲು ಎರಡು ಬಿಗಿದು ಆಮೇಲೆ ಮಿಕ್ಕಿದ ಮಾತಾಡುತ್ತಿದ್ದೆ..’ ಗಡದ್ದಾಗಿ ತಿಂದು ಡೀಪ್ ಸಮಾಧಿ ಸ್ಥಿತಿಯಲ್ಲಿದ್ದವನ ನಿದ್ದೆಗೆಡಿಸಿದ ಕೋಪವೆಲ್ಲ ಧಾರಾಕಾರವಾಗಿ ಗುಬ್ಬಣ್ಣನ ಮೇಲೆ ಮುಸಲಧಾರೆಯಾಗಲಿಕ್ಕೆ ಸಿದ್ದವಾಗುತ್ತಿರುವಂತೆ.

‘ಸಾರಿ ಸಾರ್..ಬೇಜಾರು ಮಾಡಿಕೊಳ್ಳಬೇಡಿ… ಮ್ಯಾಟರು ತುಂಬಾ ಇಂಪಾರ್ಟೆಂಟು.. ಅದಕ್ಕೆ ಮಟಮಟ ಮಧ್ಯಾಹ್ನಾಂತ ಗೊತ್ತಿದ್ದೂ ತಡ್ಕೊಳ್ಳೊಕಾಗ್ಲಿಲ್ಲ….’ ಎಂದ ಗುಬ್ಬಣ ಸಂತೈಸುವ ದನಿಯಲ್ಲಿ.

ಅವನ ಏಮಾರಿಸುವ ಗುಣ ಗೊತ್ತಿದ್ದ ನಾನು ಸುಲಭದಲ್ಲಿ ಬಲೆಗೆ ಬೀಳದೆ ಇರುವಂತೆ ಎಚ್ಚರಿಕೆ ವಹಿಸುತ್ತ ,’ ಅದೆಲ್ಲಾ ಪೀಠಿಕೆ ಬೇಡ.. ಸುಖ ನಿದ್ದೆಯಿಂದ ಎಬ್ಬಿಸಂತು ಆಯ್ತಲ್ಲ..? ಆ ಪಾಪವೇನು ಸುಮ್ಮನೆ ಬಿಡಲ್ಲ.. ತಿಗಣೆ ಜನ್ಮವೆ ಗ್ಯಾರಂಟಿ ನಿನಗೆ.. ಅದು ಬಿಟ್ಟು ಮ್ಯಾಟರಿಗೆ ಬಾ’ ಎಂದೆ ಮೀಟರಿನ ಮೇಲೆ ಕಣ್ಣಿಟ್ಟ ಆಟೋ ಗಿರಾಕಿಯ ಹಾಗೆ.

‘ ತಿಗಣೆಯಾದ್ರೂ ಸರೀನೆ ನಿಮ್ಮ ಹಾಸಿಗೇಲೆ ಸೇರ್ಕೊಳ್ಳೊ ದೋಸ್ತಿ ನಮ್ಮದು ಸಾರ್…ಸುಮ್ನೆ ಯಾಕೆ ಕೋಪ ನಿಮಗೆ?’ ತಿಗಣೆಯಾದರೂ ಕಾಡುವವನೆ ಹೊರತು ಬಿಡುವವನಲ್ಲ ಎನ್ನುವ ವಿಕ್ರಮನ ಭೇತಾಳದಂತೆ ಪಟ್ಟು ಬಿಡದೆ ನುಡಿದ ಗುಬ್ಬಣ್ಣ..

‘ ಗುಬ್ಬಣ್ಣಾ… ನಾನೀಗ ಪೋನ್ ಇಟ್ಟು ಮತ್ತೆ ನಿದ್ದೆಗೆ ಹೋಗಿ ಬಿಡ್ತೀನಿ ನೋಡು..ಬೇಗ ವಿಷಯಕ್ಕೆ ಬಾ…’ ಹೆದರಿಸುವ ದನಿಯಲ್ಲಿ ಗದರಿಸಿದೆ.

‘ ಆಯ್ತು.. ಆಯ್ತು ಸಾರ್.. ಬಂದೆ… ಆದರೆ ಮ್ಯಾಟರು ಪೋನಲ್ಲಿ ಹೇಳೊದಲ್ಲ… ಶಕುಂತಲಾ ರೆಸ್ಟೋರೆಂಟಲ್ಲಿ ಮೀಟ್ ಮಾಡಿ ಆರ್ಡರ ಮಾಡಿ ತಿಂತಾ ಜತೆಜತೆಯಲ್ಲೆ ವಿಷಯ ಹೇಳ್ತೀನಿ..’

‘ ಅಯ್ಯೊ ಪೀಡೆ..! ಹಾಗಿದ್ದ ಮೇಲೆ ಮನೆ ಹತ್ತಿರ ತಲುಪಿದ ಮೇಲಲ್ಲವ ಪೋನ್ ಮಾಡೋದು ? ಇನ್ನೊಂದು ಸ್ವಲ್ಪ ಹೊತ್ತು ನೆಮ್ಮದಿಯ ನಿದ್ದೆ ತೆಗೀತಿದ್ನಲ್ಲಾ ? ಊರಿಗೆ ಮುಂಚೆ ಯಾಕೆ ಪೋನ್ ಮಾಡ್ಬೇಕಿತ್ತೊ?’ ಮತ್ತೆ ಮನಸಾರೆ ಬೈಯುತ್ತ ಯಥೇಚ್ಛವಾಗಿ ಮಂತ್ರಾಕ್ಷತೆ ಹರಿಸಿದ್ದೆ ಗುಬ್ಬಣ್ಣನ ಮೇಲೆ.

‘ ತಾಳಿ ಸಾರ್ ಸ್ವಲ್ಪ… ಸುಮ್ನೆ ಕೂಗಾಡ್ಬೇಡಿ… ಈಗ ನಿಮ್ಮ ಮನೆಗೆ ಮೂರು ಸ್ಟೇಷನ್ ದೂರದಲ್ಲಿದ್ದೀನಿ.. ಅಲ್ಲಿಗೆ ಬರೋಕೆ ಹತ್ತು ನಿಮಿಷ ಸಾಕು.. ಅಷ್ಟರಲ್ಲಿ ಎದ್ದು ರೆಡಿಯಾಗಲಿ ಅಂತ್ಲೆ ಈಗ ಪೋನ್ ಮಾಡಿದ್ದು..’ ಎಂದು ಬಾಯಿ ಮುಚ್ಚಿಸಿಬಿಟ್ಟ.

‘ ಸರಿ ಹಾಳಾಗ್ಹೋಗು .. ನಂದು ರೆಡಿಯಾಗೋದು ಸ್ವಲ್ಪ ಲೇಟಾಗುತ್ತೆ, ಬಂದು ಕಾಯಿ..’ ಎಂದು ಉರಿಸುವ ದನಿಯಲ್ಲಿ ಹೇಳಿ ಪೋನ್ ಇಡುವುದರಲ್ಲಿದ್ದೆ.. ಆಗ ಮತ್ತೆ ಗುಬ್ಬಣ್ಣನೆ, ‘ಸಾರ್..ಒಂದೆ ನಿಮಿಷ… ಅಪರೂಪಕ್ಕೆ ನಮ್ಮೆಜಮಾನತಿ ಇವತ್ತು ‘ದಂರೂಟ್’ ಮಾಡಿದ್ಲು.. ನಿಮಗು ಸ್ವಲ್ಪ ಸ್ಯಾಂಪಲ್ ತರ್ತಾ ಇದೀನಿ… ಶುಗರು ಗಿಗರು ಅಂತೆಲ್ಲ ನೆಪ ಹೇಳ್ಬೇಡಿ ಸಾರ್..’ ಅಂದ.

‘ದಂರೂಟ್’ ಅಂದರೆ ನನ್ನ ‘ಪಕ್ಕಾ ವೀಕ್ನೇಸ್’ ಅಂತ ಚೆನ್ನಾಗಿ ಗೊತ್ತು ಗುಬ್ಬಣ್ಣನಿಗೆ. ಶುಗರು ಇರಲಿ ಅದರಪ್ಪನಂತಹ ಕಾಯಿಲೆಯಿದ್ದರೂ ಬಿಡುವವನಲ್ಲ ಅಂತ ಗೊತ್ತಿದ್ದೆ ಗಾಳ ಹಾಕುತ್ತಿದ್ದಾನೆ ಕಿಲಾಡಿ.. ಅಲ್ಲದೆ ಸಿಂಗಪುರದಲ್ಲಿ ಬೇರೆಲ್ಲಾ ಸಿಕ್ಕಬಹುದಾದರು ‘ದಂರೂಟ್’ ಮಾತ್ರ ಎಲ್ಲಿಯೂ ಸಿಕ್ಕುವುದಿಲ್ಲ; ನನ್ನ ಶ್ರೀಮತಿಗೆ ಅದನ್ನು ಮಾಡಲು ಬರುವುದಿಲ್ಲ ಅಂತ ಅವನಿಗೂ ಗೊತ್ತು… ಆ ಹೆಸರು ಎತ್ತುತ್ತಿದ್ದ ಹಾಗೆ ನಾನು ಅರ್ಧ ಶಾಂತವಾದ ಹಾಗೆ ಎಂದು ಲೆಕ್ಕಾಚಾರ ಹಾಕಿಯೆ ಕಾಳು ಹಾಕುತ್ತಿದ್ದಾನೆ.. ಅಥವಾ ಕೂಲಾಗಿಸಲು ಸುಖಾಸುಮ್ಮನೆ ಬರಿ ಹೋಳು ಹೊಡೆಯುತ್ತಿದ್ದಾನೆಯೊ , ಏನು ?

‘ ಗುಬ್ಬಣ್ಣಾ… ಈ ವಿಷಯದಲ್ಲಿ ಮಾತ್ರ ರೀಲು ಬಿಡಬೇಡ ನೋಡು… ನೀನು ತಿನ್ನ ಬೇಕೂಂತಿರೊ ಜಾಗದಲ್ಲಿ ನೀನೆ ಕಿಚನ್ ಸೇರುವ ಹಾಗೆ ತದುಕಿ ಹಾಕಿಬಿಡುತ್ತೇನೆ’ ಎಂದೆ ವಾರ್ನಿಂಗ್ ದನಿಯಲ್ಲಿ..

‘ ಸಾರ್.. ದಂರೂಟಿನ ವಿಷಯದಲ್ಲಿ, ಅದರಲ್ಲೂ ನಿಮ್ಮ ಜತೆ ಹುಡುಗಾಟವೆ? ಖಂಡಿತ ಇಲ್ಲ ಸಾರ್..ನಮ್ಮಪ್ಪರಾಣೆ, ಗೂಗಲೇಶ್ವರನಾಣೆ ಕಟ್ಟಿಸಿಕೊಂಡು ಬರ್ತಾ ಇದೀನಿ.. ಆದ್ರೆ ಈ ಟ್ರೈನು ಏಸಿಗೆ ಅರ್ಧ ಬಿಸಿಯೆಲ್ಲ ಹೋಗಿ ತಣ್ಣಗಿದ್ರೆ ನನ್ನ ಬೈಕೋಬೇಡಿ….’. ಮೊದಲಿಗೆ ಅವರಪ್ಪ ಈಗಾಗಲೆ ‘ಗೊಟಕ್’ ಅಂದಿರೋದ್ರಿಂದ ಆ ಅಣೆ ಹಾಕೋದಕ್ಕೆ ಯಾವ ತಾಪತ್ರಯವೂ ಇರಲಿಲ್ಲ. ಇನ್ನು ಗೂಗಲೇಶ್ವರ ಸತ್ತವನೊ, ಬದುಕಿದವನೊ ಎಂದು ಗೂಗಲ್ ಮಾಡಿಯೆ ಹುಡುಕಿ ನೋಡಬೇಕೇನೊ?

ಅಲ್ಲಿಗೆ ನನ್ನ ನಿದ್ರೆಯೆಲ್ಲ ಪೂರ್ತಿ ಹಾರಿ ಹೋಗಿ, ನಾಲಿಗೆ ಆಗಲೆ ಕಡಿಯತೊಡಗಿತ್ತು.. ‘ಸರೀ ಗುಬ್ಬಣ್ಣ.. ಸೀಯೂ ಇನ್ ಟೆನ್ ಮಿನಿಟ್ಸ್ ..’ ಎನ್ನುತ್ತ ಬಚ್ಚಲು ಮನೆಗೆ ನಡೆದಿದ್ದೆ.. ಶಕುಂತಲಾಗೆ ಹೋಗುವ ದಾರಿಯಲ್ಲೆ ಟ್ರೈನ್ ಸ್ಟೇಷನ್ನಿನ ಹತ್ತಿರ ಕಾದು, ಹೊರಬರುತ್ತಿದ್ದಂತೆ ಹಿಡಿಯಲು ಸಿದ್ದನಾಗಿ ನಿಂತಿದ್ದವನನ್ನು ನಿರಾಶೆಗೊಳಿಸದಂತೆ ಎಸ್ಕಲೇಟರ್ ಹತ್ತಿ ಬರುತ್ತಿರುವ ಗುಬ್ಬಣ್ಣ ಕಾಣಿಸಿದ. ಬಹಳ ಮುಂಜಾಗರೂಕತೆ ವಹಿಸಿದವನ ಹಾಗೆ ಬಲದ ಕೈಯಲೊಂದು ಪುಟ್ಟ ಸ್ಟೀಲು ಡಬರಿ ಹಿಡಿದುಕೊಂಡೆ ಬರುತ್ತಿರುವುದನ್ನು ಗಮನಿಸಿ ಈ ಬಾರಿ ಬರಿ ಹೋಳು ಹೊಡೆದಿಲ್ಲ, ನಿಜವಾಗಿಯೂ ‘ದಂರೋಟು’ ತಂದಿರುವನೆಂದು ಖಾತ್ರಿಯಾಗಿ ಬಿಗಿದಿದ್ದ ನರಗಳೆಲ್ಲ ಸಡಿಲಾಗಿ ಮುಖದಲ್ಲಿ ಕಂಡೂಕಾಣದ ತೆಳು ನಗೆ ಹರಡಿಕೊಂಡಿತು – ಸ್ವಲ್ಪ ಮೊದಲು ಗುಬ್ಬಣ್ಣನ ಜೊತೆಯೆ ವಾಗ್ಯುದ್ಧಕ್ಕಿಳಿದಿದ್ದೆ ಸುಳ್ಳೇನೊ ಎನ್ನುವ ಹಾಗೆ.

ಇಬ್ಬರೂ ನಡೆಯುತ್ತಿದ್ದ ಪುಟ್ಪಾತಿನ ಪೂರ್ತಿ ಅಗಲವನ್ನು ನಮ್ಮ ವಿಶಾಲ ‘ತನು’ಮನಗಳಿಂದ ಈಗಾಗಲೆ ಧಾರಾಳವಾಗಿ ಆಕ್ರಮಿಸಿಕೊಂಡು ಮಿಕ್ಕವರೆಲ್ಲ ನಮ್ಮ ಹಿಂದೆ ಪೆರೇಡ್ ಬರುವಂತೆ ಮಾಡಿದ್ದರು, ಏನೂ ಗೊತ್ತಿರದವರಂತೆ ಪಕ್ಕಕ್ಕೆ ಸರಿದು ರೆಸ್ಟೋರೆಂಟ್ ಒಳಗೆ ಹೊಕ್ಕೆವು. ಊಟದ ಸಮಯ ಮೀರಿ ಬಹಳ ಹೊತ್ತಾಗಿದ್ದ ಕಾರಣ ಹೆಚ್ಚು ಜನರಿರಲಿಲ್ಲವಾಗಿ ನಮಗೆ ಮಾತಿಗೆ ಬೇಕಿದ್ದ ದೇವಮೂಲೆ ಸರಾಗವಾಗಿ ಸಿಕ್ಕಿತ್ತು. ಅಲ್ಲಿದ್ದ ಐ ಪ್ಯಾಡಿನ ಮೂಲಕ ಆರ್ಡರ ಮಾಡಿದ ಮೇಲೆ ನನಗೊಂದು ಪ್ಲೇಟ್ ಪಕೋಡ / ಬಜ್ಜಿ ಜತೆ ಸೇರಿಸಿ ಮಾತಿಗಾರಂಭಿಸಿದ.

‘ ಸಾರ್.. ನೀವ್ ಹೇಗು ಕಥೆ, ಕವನಾ ಅಂತ ಬರ್ಕೊಂಡ್ ಸುಮ್ನೆ ಟೈಮ್ ವೇಸ್ಟ್ ಮಾಡ್ತಿರ್ತೀರಾ.. ಅದರ ಬದಲು ಈಗ ನಾನು ಹೇಳೊ ಥೀಮಲ್ಲಿ ಒಂದು ಫರ್ಸ್ಟ್ ಕ್ಲಾಸ್ ಇಂಗ್ಲೀಷ್ ಆರ್ಟಿಕಲ್ ಬರೆದುಕೊಡಿ..ಸಮಾನತೆ – ಈಕ್ವಾಲಿಟಿ ಕುರಿತು .. ಯಾವುದೊ ಇಂಟರ್ನ್ಯಾಶನಲ್ ಲೆವೆಲ್ ಮ್ಯಾಗಜೈನಿಗೆ ಅರ್ಜೆಂಟ್ ಬೇಕಂತೆ’ ಎಂದ.

ಗುಬ್ಬಣ್ಣ ಬಿಲ್ಕುಲ್ ರೆಡಿಯಾಗಿ ಬಂದಂತಿತ್ತು.. ನಾನು ಬರೆದದ್ದು ಇಂಟರನ್ಯಾಶನಲ್ ಲೆವಲ್ಲಲ್ಲಿರಲಿ, ಯಾವುದೊ ಒಂದು ನಾಲ್ಕೈದು ಜನ ಓದೊ ಬ್ಲಾಗಿನಲ್ಲಿ ಬರುತ್ತೆ ಅಂದರು ನಾನು ಬರೆದುಕೊಡುವವನೆ ಅಂತ ಅವನಿಗೆ ಚೆನ್ನಾಗಿ ಗೊತ್ತು.. ನನ್ನ ವೀಕ್ ಏರಿಯ ಅದು.. ಏನಾದರು ಬರೆದು, ಪಬ್ಲಿಷ್ ಮಾಡಿ ಫೇಮಸ್ ಆಗ್ಬೇಕನ್ನೋದು ನನ್ನ ವೀಕ್ನೆಸ್ ಅಂತ ಗುಬ್ಬಣ್ಣನಿಗೂ ಚೆನ್ನಾಗಿ ಗೊತ್ತು..

‘ಗುಬ್ಬಣ್ಣಾ ಕಥೆ ಅನ್ನು ಕವನ ಅನ್ನು, ಊಹೆ ಮಾಡಿ ಹುಟ್ಟಿಸ್ಕೊಂಡು ಏನೊ ಬರೆದುಬಿಡಬಹುದು..ಇದು ಸೀರಿಯಸ್ ಆರ್ಟಿಕಲ್.. ಅಲ್ದೆ ಸರಿಯಾದ ಥೀಮಿನ ಐಡಿಯಾನೂ ಇಲ್ದೆ ನಾನು ಏನೂಂತ ಬರೀಲಿ?’ ನಾನಿನ್ನು ಅರ್ಥವಾಗದ ಗೊಂದಲದಲ್ಲೆ ನುಡಿದೆ.. ಒಂದು ಕಡೆ ಓವರ್ನೈಟ್ ಹೆಸರಾಗಿಬಿಡುವ ಛಾನ್ಸ್ ಎಂದು ಎಗ್ಸೈಟ್ ಆಗುತ್ತಿದ್ದರೆ, ಮತ್ತೊಂದೆಡೆ ‘ಸರಿಯಾದ ಹೂರಣ’ವಿಲ್ಲದೆ ಇದೆಲ್ಲಾ ಅಗುವ ಮಾತಾ ?’ ಎನ್ನುವ ಅನುಮಾನದ ಜಿಜ್ಞಾಸೆ.

‘ ಏನಿಲ್ಲ ಸಾರ್, ಒಂದಷ್ಟು ಆರ್ಗ್ಯುಮೆಂಟ್ ಒಟ್ಟಾಗಿಸಿ ನೀವೊಂದು ಅದ್ಬುತ ಲೇಖನ ಬರೆದುಕೊಡಿ ಸಾಕು.. ಮಿಕ್ಕಿದ್ದು ನನಗೆ ಬಿಡಿ.. ನೋಡ್ತಾ ಇರಿ ಹೇಗೆ ನಿಮ್ಮನ್ನ ಸ್ಟಾರ್ ಮಾಡಿಬಿಡ್ತೀನಿ ಅಂತ’ ಎಂದ.

ನನಗೆ ಅದರ ಬಗೆ ಅನುಮಾನವಿದ್ದರೂ, ಹಾಳು ಕೀರ್ತಿಕಾಮನೆಯ ಶನಿ ಯಾರನು ತಾನೆ ಬಿಟ್ಟಿದ್ದು? ಪ್ರಲೋಭನೆಗೊಳಗಾದವನಂತೆ ಆಯಾಚಿತವಾಗಿ ತಲೆಯಾಡಿಸಿದ್ದೆ…

‘ ಆದರೆ ಒಂದೆ ಒಂದು ಕಂಡೀಷನ್ನು ಸಾರ್..’

ಇದೋ ‘ ಕ್ಯಾಚ್’ ಈಗ ಬಂತು ಅಂದುಕೊಂಡೆ – ‘ಕಂಡೀಷನ್ನಾ? ಏನಾ ಕಂಡೀಷನ್ನು?’

‘ ಏನಿಲ್ಲಾ ಸಾರ್ ಗಾಬರಿಯಾಗಬೇಡಿ.. ಈ ಲೇಖನ ನಾಳೆ ಬೆಳಿಗ್ಗೆಯೆ ಕಳಿಸಬೇಕಂತೆ.. ಅಂದರೆ ಇವತ್ತು ರಾತ್ರಿಯೆ ನೀವಿದನ್ನ ಬರೆದುಕೊಡಬೇಕು..’

‘ ಗುಬ್ಬಣ್ಣಾ ಈಗಾಗಲೆ ಸಾಯಂಕಾಲ..!’

‘ ಸಾರ್.. ಇಂಟರ ನ್ಯಾಶನಲ್ ಎಕ್ಸ್ ಪೋಷರ್.. ಸುಮ್ಮನೆ ಬಿಟ್ಟುಕೊಡಬೇಡಿ’ ಗುಬ್ಬಣ್ಣ ಮತ್ತೆ ಪ್ರಲೋಭಿಸಿದ..

‘ ಸರಿ ಹಾಳಾಗಲಿ.. ಏನೊ ಬರೆದು ರಾತ್ರಿಯೆ ಕಳಿಸುತ್ತೀನಿ… ಏನಾಯ್ತು ಅಂತ ಬೆಳಿಗ್ಗೆ ಹೇಳು’ ಎಂದು ಮಾತು ಮುಗಿಸಿದ್ದೆ.

‘ ಸಾರ್.. ಇವತ್ತೆ ಲಾಸ್ಟ್ ಡೇಟ್ ಆಗಿರೋದ್ರಿಂದ ಡೈರೆಕ್ಟಾಗಿ ಈ ಇ-ಮೇಲ್ ಅಡ್ರೆಸ್ಸಿಗೆ ಕಳಿಸಿ ಅಂತ ಹೇಳಿದ್ದಾರೆ, ತಗೊಳ್ಳಿ’ ಅಂತ ಒಂದು ಮಿಂಚಂಚೆ ವಿಳಾಸವಿದ್ದ ಚೀಟಿ ಜೇಬಿಂದ ತೆಗೆದುಕೊಟ್ಟ..

ಮನೆಗೆ ಬಂದವನೆ ನೇರ ಕಂಪ್ಯೂಟರಿನ ಮುಂದೆ ಕುಳಿತು ‘ಕಾಂಟ್ರೊವರ್ಸಿ’ ಆಗದ ಹಾಗೆ, ಈಕ್ವಾಲಿಟಿಯ ಎರಡು ಕಡೆಯ ಪಾಯಿಂಟುಗಳು ಹೈ ಲೈಟ್ ಆಗುವ ಹಾಗೆ, ಒಂದು ಲೇಖನ ಬರೆದು, ತಿದ್ದಿ ತೀಡಿ, ಮಧ್ಯರಾತ್ರಿ ಹನ್ನೆರಡಾಗುವ ಮೊದಲೆ ಇ-ಮೇಲಲ್ಲಿ ಕಳಿಸಿ ಮೇಲೆದ್ದಿದ್ದೆ. ಸುಸ್ತಾಗಿ ನಿದ್ದೆ ಎಳೆಯುತ್ತ ಇದ್ದುದರ ಜತೆಗೆ ಬರೆದ ಆಯಾಸವೂ ಸೇರಿಕೊಂಡು ಹಾಸಿಗೆಗೆ ಬಿದ್ದಂತೆ ಗಾಢ ನಿದ್ದೆಗೆ ಜಾರಿಕೊಂಡ್ದಿದ್ದೆ.. ರಾತ್ರಿಯೆಲ್ಲಾ ಇಂಟರ್ ನ್ಯಾಶನಲ್ ಮ್ಯಾಗಜೈನಿನಲ್ಲಿ ಪಬ್ಲಿಷ್ ಆದ ಹಾಗೆ, ಫರ್ಸ್ಟ್ ಪ್ರೈಜು ಹೊಡೆದ ಹಾಗೆ… ಏನೇನೊ ಕನಸು…

ಮರುದಿನ ಎದ್ದಾಗಲೆ ಮಟಮಟ ಮಧ್ಯಾಹ್ನವಾಗಿ ಹಿಂದಿನ ದಿನದ್ದೆಲ್ಲ ಮರೆತೆ ಹೋದಂತಾಗಿತ್ತು. ಪೂರ್ತಿ ಎಚ್ಚರವಾಗುತ್ತಿದ್ದಂತೆ ಹಿಂದಿನ ರಾತ್ರಿ ಕಳಿಸಿದ್ದ ಮಿಂಚಂಚೆ ನೆನಪಾಗಿ ಗುಬ್ಬಣ್ಣನಿಗೆ ಪೋನಾಯಿಸಿದೆ.

ಲೈನಿನಲ್ಲಿ ಸಿಕ್ಕಿದರು ಯಾಕೊ ಗುಬ್ಬಣ್ಣನ ದನಿ ಸ್ವಲ್ಪ’ಡೌನ್’ ಆದಂತಿತ್ತು..

‘ ಸಾರ್..ಈಗ ತುಂಬ ಬಿಜಿ.. ಆಮೇಲೆ ಪೋನ್ ಮಾಡ್ತೀನಿ.. ‘ ಎಂದ

‘ಯಾಕೊ ವಾಯ್ಸ್ ಡಲ್ಲೂ ಗುಬ್ಬಣ್ಣ? ಹುಷಾರಾಗಿದ್ದಿಯಾ ತಾನೆ ? ಇವತ್ತು ಆಫೀಸಿಗೆ ರಜೆಯಲ್ವ – ಇವತ್ತೆಂತಾ ಬಿಜಿನಯ್ಯ..?’ ಎಂದೆ.

‘ ಸಾರ್.. ಎಲ್ಲಾ ಆಮೇಲೆ ಹೇಳ್ತೀನಿ… ಸ್ವಲ್ಪ ಅರ್ಜೆಂಟು’ ಅಂದಾಗ ನನಗೇಕೊ ಮೆಲ್ಲಗೆ ಅನುಮಾನ ಶುರುವಾಯ್ತು.

‘ ಗುಬ್ಬಣ್ಣಾ.. ನೀನು ಹೇಳಿದ್ದ ಇ-ಮೇಲ್ ಅಡ್ರೆಸ್ಸಿಗೆ ಆರ್ಟಿಕಲ್ ಬರೆದು ಕಳಿಸಿಬಿಟ್ಟೆ ಕಣೊ, ರಾತ್ರಿ ಹನ್ನೆರಡಾಗೊ ಮೊದಲೆ… ಇನ್ನೊಂದು ಐದು ನಿಮಿಷ ತಡವಾಗಿದ್ರು ಡೇಡ್ ಲೈನ್ ಮಿಸ್ ಆಗಿಬಿಡ್ತಿತ್ತು..’ ಎಂದೆ.

‘ ಕಳಿಸಿಯೆಬಿಟ್ರಾ..? ಕಳಿಸದೆ ಇದ್ರೆ ಚೆನ್ನಾಗಿತ್ತೇನೊ..?’ ಗುಬ್ಬಣ್ಣ ಏನೊ ಗೊಣಗುಟ್ಟಿದ್ದು ಕೇಳಿಸಿತು…

‘ ಗುಬ್ಬಣ್ಣಾ… ಯಾಕೊ ನಿನ್ನೆಯೆಲ್ಲ ಅಷ್ಟೊಂದ್ ಅರ್ಜೆಂಟ್ ಮಾಡಿದವನು ಇವತ್ತು ಪೂರ್ತಿ ಟುಸ್ ಬಲೂನಿನ ಹಾಗೆ ಮಾತಾಡ್ತಾ ಇದ್ದೀ..?’

‘ಸಾರ್…’ ರಾಗವಾಗಿ ಎಳೆದ ಗುಬ್ಬಣ್ಣನ ದನಿ ಕೇಳಿಯೆ ಏನೊ ಎಡವಟ್ಟಿರುವಂತೆ ಅನಿಸಿತು…

‘ಏನೊ..?’

‘ನಾವಿಬ್ಬರು ಏಮಾರಿಬಿಟ್ವಿ ಸಾರ್…’

ನಾನು ಕೂತಲ್ಲೆ ಬಾಂಬ್ ಬಿದ್ದವರಂತೆ ಅದುರಿಬಿದ್ದೆ ಅವನ ಮಾತು ಕೇಳುತ್ತಿದ್ದಂತೆ, ಆ ಗಾಬರಿಯಲ್ಲೆ ‘ಯಾಕೊ.. ಏನಾಯ್ತೊ..?’ ಎಂದು ಹೆಚ್ಚು ಕಡಿಮೆ ಕಿರುಚಿದ ದನಿಯಲ್ಲಿ…..

‘ ಸಾರ್ …ಇವತ್ತು ಬೆಳಿಗ್ಗೆ ಇನ್ನೊಂದು ಇ-ಮೇಲ್ ಬಂದಿತ್ತು ಸಾರ್.. ನಿನ್ನೆ ನಾವು ಕಳಿಸಿದ ಇ-ಮೇಲ್ ಎಲ್ಲ ಹೋಕ್ಸ್ ಸಾರ್, ಬರಿ ಫೇಕೂ..’ ಎಂದ…

‘ವಾ….ಟ್…? ಇಂಟರ ನ್ಯಾಶನಲ್ ಮ್ಯಾಗಜೈನ್..? ಅರ್ಟಿಕಲ್ ಪಬ್ಲಿಷಿಂಗ್.. ? ಎಲ್ಲಾ ಹೋಕ್ಸಾ…?’

‘ ಹೌದು ಸಾರ್.. ಇವತ್ತು ಬೆಳಿಗ್ಗೆ ಬಂದ ಮೆಸೇಜಲ್ಲಿ ಥ್ಯಾಂಕ್ಸ್ ಫಾರ್ ದ ಪಾರ್ಟಿಸಿಪೇಷನ್ ಅಂಡ್ ಸಪೋರ್ಟ್ ಅಂತ ಥ್ಯಾಂಕ್ಯೂ ಕಾರ್ಡ್ ಬೇರೆ ಕಳಿಸಿದ್ದಾರೆ ಸಾರ್..’ ಅಂದ.

ನನಗೆ ಗುಬ್ಬಣ್ಣನ ಮೇಲೆ ಪೂರ್ತಿ ಉರಿಯುತ್ತಿದ್ದರು ಕೋಪವನ್ನು ಹಾಗೆಯೆ ಬಿಗಿ ಹಿಡಿದವನೆ, ‘ ಯಾಕೆ ಹೋಕ್ಸ್ ಮಾಡಿದ್ದು ಅಂತೇನಾದ್ರೂ ಬರೆದಿದ್ದಾರಾ?’ ಎಂದೆ.

‘ ಸಾರ್.. ಇವ್ವತ್ತೆಷ್ಟು ಡೇಟು ಹೇಳಿ..?’

‘ ಈಗ ನನ್ನ ಪ್ರಶ್ನೆಗೆ ಉತ್ತರ ಹೇಳೂಂದ್ರೆ ಡೇಟ್ ಗೀಟೂ ಅಂತ ಡೈವರ್ಟ್ ಮಾಡೋಕ್ ಟ್ರೈ ಮಾಡ್ತಾ ಇದೀಯಾ ?’

‘ ಮೊದ್ಲು ಹೇಳಿ ಸಾ.. ಆಗ ನಿಮ್ಗೆ ಗೊತ್ತಾಗುತ್ತೆ..’

‘ ಇವತ್ತು ಏಪ್ರಿಲ್ ಎರಡೂ..’

‘ ಅಂದ ಮೇಲೆ ನಿನ್ನೆ ಡೇಟು ಎಷ್ಟು ಸಾರ್..’

‘ ಇವತ್ತು ಎರಡಾದ್ರೆ ನಿನ್ನೆ ಎಷ್ಟೂಂತ ಗೊತ್ತಿಲ್ವೆ.. ಏಪ್ರಿಲ್ ಫಸ್ಟ್..’

ಹಾಗೆನ್ನುತ್ತಿದ್ದಂತೆ ತಟ್ಟನೆ ನನಗೆ ಜ್ಞಾನೋದಯವಾಯ್ತು – ಇದು ಯಾರೊ ಏಪ್ರಿಲ್ ಪೂಲ್ ಮಾಡಲು ನಡೆಸಿದ ಫ್ರಾಂಕ್ ಎಂದು…!

‘ ಗುಬ್ಬಣ್ಣಾ..? ಅಂದ್ರೆ…..’

‘ ಹೌದು ಸಾರ್… ನಾವಿಬ್ರೂ ಯಾರೊ ಮಾಡಿದ ಫ್ರಾಂಕಿಗೆ ಏಪ್ರಿಲ್ ಪೂಲ್ ಆಗಿ ಹೋದ್ವಿ – ಸೊಫಿಸ್ಟಿಕೇಟ್ ಆಗಿ..’ ಗುಬ್ಬಣ್ಣನ ದನಿಯಲ್ಲಿದ್ದುದ್ದು ಖೇದವೊ, ಹಾಸ್ಯವೊ ಗೊತ್ತಾಗಲಿಲ್ಲ. ಹಾಗೆ ನೋಡಿದರೆ ನಿಜಕ್ಕು ಪೂಲ್ ಆಗಿದ್ದು ಅವನಲ್ಲ, ನಾನು.. ಅದಕ್ಕೆ ಅವನೂ ಒಳಗೊಳಗೆ ನಗುತ್ತಿರಬೇಕು..

‘ ಇವತ್ತು ಕಳಿಸಿದ ಮೇಸೇಜಲ್ಲಿ ಅದೇ ಬರೆದಿತ್ತು ಸಾರ್.. ಥ್ಯಾಂಕ್ ಫಾರ್ ದಿ ಎಫರ್ಟ್ ಅಂಡ್ ಪಾರ್ಟಿಸಿಪೇಶನ್ ಅಂತ.. ಜತೆಗೆ ಗುಡ್ ಲಕ್ ಫಾರ್ ದಿ ಆರ್ಟಿಕಲ್ ಅಂತ..’

ಮಿಂಚಂಚೆ ಕಳಿಸುವಾಗ, ರೆಕಮೆಂಡ್ ಮಾಡಿದವರ ಹೆಸರು, ಇ-ಮೇಲ್ ವಿಳಾಸವನ್ನು ಜತೆಗೆ ಸೇರಿಸಿ ಕಳಿಸಬೇಕೆಂದು ಯಾಕೆ ಹೇಳಿದ್ದರೆಂದು ಈಗರಿವಾಗಿತ್ತು. ನನ್ನ ಇ-ಮೇಲ್ ತೆಗೆದು ನೋಡಿದ್ದರೆ ಗುಬ್ಬಣ್ಣನ ಥ್ಯಾಂಕ್ಯೂ ಮೇಲ್ ನನ್ನ ಮೇಲ್ ಬಾಕ್ಸಲ್ಲೂ ಇರುತ್ತಿತ್ತೆಂದು ಖಚಿತವಾಗಿತ್ತು.

‘ ಗುಬ್ಬಣ್ಣಾ… ಇವತ್ತು ಸಾಯಂಕಾಲ ಫ್ರೀ ಇದೀಯಾ? ಜಗ್ಗಿಸ್ ರೆಸ್ಟೊರೆಂಟಲ್ಲಿ ಬಟರ್ ಚಿಕನ್ ತುಂಬಾ ಚೆನ್ನಾಗಿರುತ್ತೆ..’

ಗುಬ್ಬಣ್ಣಾ ಕಿಲಾಡಿ.. ಅವನಿಗೆ ಚಿಕನ್ನಿನ ಯಾವ ಸೈಡಿಗೆ ಬಟರು ಹಾಕಿರುತ್ತೆಂದು ಚೆನ್ನಾಗಿ ಗೊತ್ತು.. ‘ ಸಾರ್ ಇವತ್ತು ಪೂರ್ತಿ ಬಿಜಿ ನೆಕ್ಸ್ಟ್ ವೀಕ್ ನೋಡೋಣಾ … ಅಂದಹಾಗೆ ಇಬ್ಬರು ಹೀಗೆ ಏಮಾರಿದ್ದು ಯಾರಿಗು ಗೊತ್ತಾಗೋದು ಬೇಡಾ.. ನಾನೂ ಬಾಯ್ಬಿಡೊಲ್ಲಾ, ನೀವೂ ಸುಮ್ಮನಿದ್ದುಬಿಡಿ…’ ಎಂದು ಅವನೆ ಪೋನಿಟ್ಟುಬಿಟ್ಟ – ಮೊದಲ ಬಾರಿಗೆ…!

ನನಗೆ ಮಾತ್ರ ಕೋಪ ಇಳಿದಿರಲಿಲ್ಲ – ಅದರಲ್ಲು ಗುಬ್ಬಣ್ಣನ ಮೇಲೆ, ‘ಅವನು ಏಮಾರಿದ್ದಲ್ಲದೆ, ನನ್ನನ್ನು ಸಿಕ್ಕಿಸಿದನಲ್ಲಾ’ ಎಂದು. ಆ ಕೋಪಕ್ಕೆ ಮತ್ತೊಮ್ಮೆ ಕಂಪ್ಯೂಟರಿನ ಮುಂದೆ ಕುಳಿತೆ, ಇಡೀ ಎಪಿಸೋಡನ್ನೆ ಈ ಬರಹದ ರೂಪಕ್ಕಿಳಿಸಿ ಅವನನ್ನು ಎಕ್ಸ್ ಪೋಸ್ ಮಾಡಲು – ಹೀಗಾದರು ಅವನ ಮೇಲೆ ಸೇಡು ತೀರಿಸಿಕೊಳ್ಳುವವನ ಹಾಗೆ. ಬರೆದು ಪ್ರಕಟಿಸಿದ ಮೇಲೆ ಅವನಿಗೂ ಓದಿಸಬೇಕೆಂದಿದ್ದೇನೆ, ನಾನೆ ಕೂತು ಓದಿದರೂ ಸರಿಯೆ….

ಆದರೆ ಅದರಲ್ಲಿನ ದೊಡ್ಡ ಸಿಕ್ರೇಟ್ – ಓದಿದವರು ಏಮಾರಿದ್ದು ಅವನೆಂದುಕೊಳ್ಳುವ ಹಾಗೆ – ಎಪಿಸೋಡನ್ನ ಅವನ ಹೆಸರಲ್ಲಿ ಬರೆದು ಪ್ರಕಟಿಸುತ್ತಿದ್ದೇನೆಂದು ಮಾತ್ರ ಯಾರಿಗು ಹೇಳುವುದಿಲ್ಲ – ಕನಿಷ್ಠ ಈ ಏಪ್ರಿಲ್ ತಿಂಗಳು ಮುಗಿಯುವವರೆಗಾದರೂ..!

– ಗುಬ್ಬಣ್ಣ

01673. ಹುಲು ಮನವಿದು ಅಮುಕ್ತ


01673. ಹುಲು ಮನವಿದು ಅಮುಕ್ತ

_______________________________________

ಯಾರೋ ಕರೆದಂತೆನಿಸದೆ ಆಗೀಗೊಮ್ಮೆ ?

ಘಂಟಾ ನಿನಾದ ಸದ್ದಾಗಿ ಅನುರಣಿಸುತ

ಕಿವಿಯಿಂದಾಚೆಗೆ ಕೆಣಕುವ ಅಲೆ ದೂತ

ಎಲ್ಲಿಂದಲೋ ಧುತ್ತನೆ ಬಂದಾವರಿಸಿದಂತೆ..||

ಬಡಿದೆಬ್ಬಿಸಿದಂತೆ ಅಚೇತನ ವಿಚಲಿತನ

ಮೈ ಮರೆತು ಮಲಗಿದ್ದವನ ಎಚ್ಚರಿಸಿದಂತೆ

ಜನ್ಮಾಂತರದಾವುದೊ ವಾಸನೆ ಹಿಡಿದ ಜಾಡು

ಎಂದಾವುದೊ ಜನ್ಮದ ಮಸುಕು ನೆನಪಲೆ ಕಾಡಿ ||

ಮಾಯೆಯೊ ಮರೆವೊ ಯಾಕೊ ಕೂಡದೆ ಚಿತ್ರ

ಚಿತ್ತಾದಾವುದೀ ಭ್ರಮೆಯೊ ಬೆರೆಯದ ವಿಚಿತ್ರ

ನನ್ನದೆನ್ನುವ ಭಾವ ಅನುಭೂತಿ ಸತ್ಯದ ನುಣುಪ

ನನ್ನದಲ್ಲವಿರಬಹುದೆಂಬೀ ಅನುಮಾನದ ಭೂತ ||

ಅಂತರಂಗಕೆ ಗೊತ್ತು ಕಳುವಾದ ಕರೆಯಲ್ಲವಿದು

ಬಹುಶಃ ಕರೆದಿರಬೇಕು ಯುಗಾಂತರ ಮೊರೆ ಹೊತ್ತು

ಹೂತು ಹೋದ ಆಳದಲಿ ಹುಡುಕಾಡಿಸಿ ಯಾರೊ

ಕಳಿಸಿರಬೇಕು ನೆನಪೋಲೆ ಮಿಂಚಾಗೊ ಮುನ್ನ ಸಿಗಲೆ ||

ಯಾರಿರಬಹುದೀ ಯಾಕಿನಿ ಡಾಕಿನಿ ರಾಕಿನಿ ಯೋಗಿನಿ?

ಕೂತಿಹರೇಕೆ ಮೌನದಿ ಗುಲ್ಲೆಬ್ಬಿಸದೆ ಅಂತರಾತ್ಮದಿ?

ಚಕ್ರಗಳಾವರ್ತನದಲಿ ನಿರತ ನಿಯತಿಯ ಸಂಗೀತ

ಒಳಗಿಂದೆದ್ದು ಪ್ರಕಟವಾಗದೆ ಹುಲು ಮನವಿದು ಅಮುಕ್ತ ||

————————————————

ನಾಗೇಶ ಮೈಸೂರು, ೩೦. ಮಾರ್ಚಿ. ೨೦೧೪

————————————————

(Picture source 1 : internet / social media received via Yamunab Bsy – Thank you 🙏👍😊💐; picture source 2: https://goo.gl/images/zSjxgL)

01672. ಕಂತು ಪೀಳಿಗೆ..!


01672. ಕಂತು ಪೀಳಿಗೆ..!

_______________________

ನೋಡಯ್ಯ ಈ ಬಾಳು

ಕಂತುಗಳದೇ ಲೆಕ್ಕ

ಕಂತು ಕಂತಲೆ ಎಲ್ಲ

ಕಟ್ಟಬೇಕು ತರ ಶುಲ್ಕ ! ||

ಕೊಳ್ಳಬೇಕೆಲ್ಲ ಬಯಕೆ

ಬೇಕಲ್ಲ ತುಟ್ಟಿ ಧನ

ಕೊಳ್ಳಲಿಲ್ಲದ ಜನರ

ಮಾಡಿಸುತ ಕಂತುಸುತ ||

ಕಂತುಪಿತರದೆ ಕಾಟ

ಹುಡುಕುತ ಕುರಿಯ

ಕಂತುಜನಕರವತಾರ

ಬಲಿಹಾಕಿ ಮುಕ್ತಾಯ.. ||

ಬಿಡು ಸಂಸಾರವೆ ಕಂತು

ಸಾಲ ಕಟ್ಟುವ ಯಾದಿ

ಬೆಳೆ ಹುಲ್ಲ ಸವರಿದರು

ತಂತಾನೆ ಬೆಳೆವ ತರದಿ ! ||

ಯಾವ ಕರ್ಮದ ಕಂತೊ ?

ಜನ್ಮಾಂತರ ಕಂತಿನ ಕಡ

ತೀರಿಸಿಹ ಜನಪದ ನೈಜ

ಕಂತುಪಿತ ಸಂತಾನ ಬಿಡ ! ||

– ನಾಗೇಶ ಮೈಸೂರು

೩೦.೦೩.೨೦೧೮

(ಕಂತು ಎಂದರೆ ಕಾಮ, ಮನ್ಮಥ ಎನ್ನುವ ಅರ್ಥವೂ ಇದೆ. ದಾಸರ ಪದದಲ್ಲಿ ಬಳಕೆಯಾಗಿರುವ ಕಂತುಜನಕ = ಮನ್ಮಥನತಂದೆ ವಿಷ್ಣು. ನಮ್ಮ ಕಾಲದ ಕಂತು ನಿಮಗೆಲ್ಲ ಗೊತ್ತೇ ಇದೆ – ಯಾವುದಾದರೊಂದು ತರ ಸಾಲಕ್ಕೆ ಕಂತು ಕಟ್ಟಿಕೊಂಡೆ ಬದುಕುವ ಕಾಲವಿದು!)

(picture source: https://goo.gl/images/UGp8Aj)

01671. ನೀ ನನಗಂಟಿದ ವ್ಯಾಧಿ..! (ಲಘು ಹಾಸ್ಯ)


01671. ನೀ ನನಗಂಟಿದ ವ್ಯಾಧಿ..! (ಲಘು ಹಾಸ್ಯ)

______________________________________________

ಹೇಗಿದಿಯಾ ನನ್ನ ಪ್ರೀತಿಯ ತಲೆ ನೋವೆ?

ಅಂದರೇಕೆ ಹೀಗೆ ಸಿಡುಕು ಮೋರೆ, ತರವೆ ?||

ನನಗೆ ನೀ ನಿಜಕು ತಲೆನೋವೆ ನಿರಂತರ

ನೆನಪಿಸಲದೆ ನಿನ್ನ ಮರೆಯಬಿಡದ ಸಹಚರ ! ||

ನೀ ನನ್ನ ಬಾಳಿಗಂಟಿದ ನೆಗಡಿ ನಿನ್ನಾಣೆಗು

ಸೀನಿದರು ಸಿಡಿಸಿ ಸುತ್ತೆಲ್ಲ ನಿನದೆ ಗುನುಗು ||

ಎಡಬಿಡದೆ ಕಾಡುವ ವಿಷಮಶೀತ ಜ್ವರ ನೀನೆ

ಸೊರಗಿ ಬೆವರಿ ತನು ಚಂಚಲ ಚಿತ್ತ ನಿನದೇನೆ ||

ಬಿಡು ಬೇರೆ ಮಾತೇಕೆ, ಸತ್ಯ ನೀ ಜೀವಕಂಟಿದ ಅರ್ಬುಧ

ಬಿಡದೆ ಕಾಡುತಿದ್ದರೆ ತಾನೆ ನಿತ್ಯ ಸ್ಮರಣೆ, ಗಟ್ಟಿ ಸಂಬಂಧ ? ||

– ನಾಗೇಶ ಮೈಸೂರು

೨೮.೦೩.೨೦೧೮

(Picture source: internet / social media)

01670. ಸುಡುವ ಚಂದಿರವವಳು..


01670. ಸುಡುವ ಚಂದಿರವವಳು..

_________________________

ನೋಡದೆಷ್ಟು ಚಂದಿರ ಸುಡು

ನನ್ನೊಳಗಡಗಿ ಕೂತ ಸೊಗಡು

ಎಣಿಕೆಗಿಳಿಯೆ ಗಣನೆ ದ್ಯೂತ

ತಪ್ಪಿ ಹೋದೀತು ಎದೆ ಬಡಿತ ! ||

ಹಿನ್ನಲೆ ಚಂದಿರನೇ ಮಂಕು

ಸರಿಗಟ್ಟನೆ ನನ್ನಂಕುಡೊಂಕು

ನೋಡೆನ್ನ ಮುಖ ಚಂದ್ರ ಕಣ

ಬಿಳಿಚಿ ಆದನವ ಅರಕ್ತವರ್ಣ ! ||

ನೋಡೆನ್ನ ನಯನದಾ ಬೊಗಸೆ

ಜೋಡಿ ನೈದಿಲೆಗಳೊಳ ಭಾಷೆ

ಕಪ್ಪುಚಂದಿರದದ್ವಯ ಸಂಚಾರ

ಕೃಷ್ಣಪಕ್ಷದಲವನ ಕಾಣುವ ತರ !||

ಯೌವ್ವನ ಕಲಶ ಶಿಖರ ಪ್ರಾಯ

ಚಂದ್ರಮಂಡಲಗಳಾಗಿ ಸೂರ್ಯ

ಕೊಡ ಜತೆಗೆ ಹೆಚ್ಚುವರಿ ಹೊರಲು

ನಿಂತ ತರುಣಿ ನನ್ನ ಗತ್ತೆ ಅಮಲು ! ||

ಬಿಡು ಲೆಕ್ಕಾಚಾರ ಚಂದಿರ ನೂರು

ದಿನನಿತ್ಯದ ಪೌರ್ಣಿಮೆ ಯಾರಿಹರು ?

ಸೋತ ಚಂದ್ರ ತನ್ನ ಚಂದ್ರಿಕೆ ನನಗಿತ್ತ

ಚಕೋರಿ ಬೆನ್ನಲಿ ನಾಚಿ ಮಂಕಾಗವಿತ ! ||

– ನಾಗೇಶ ಮೈಸೂರು

೨೮.೦೩.೨೦೧೮

(picture source : internet / social media)

01669. ‘ಯಾಕೊ ಗೊತ್ತಿಲ್ಲ!’


01669. ‘ಯಾಕೊ ಗೊತ್ತಿಲ್ಲ!’

___________________________

ಕವಿ ಕೇಳಿದ ಅವನ

ಯಾಕೊ ಸೃಜಿಸಿದೆ ಭುವನ?

ಅವ ನೋಡಿದನೊಮ್ಮೆ ಸುತ್ತೆಲ್ಲ

ನುಡಿದ ಮೆತ್ತಗೆ ‘ಯಾಕೊ ಗೊತ್ತಿಲ್ಲ‘ ! ||

ಕವಿಗಿನ್ನೂ ಅದೆ ಜಿಜ್ಞಾಸೆ

ಪಟ್ಟು ಬಿಡದೆ ಉತ್ತರದಾಸೆ

ಹೋಗಲಿ ತಂದೆಯೇಕೆ ನರನ ?

ಹೇಳು ಯಾಕಿಲ್ಲಿ ಇಹ ಜೀವನ ? ||

ಅವ ಕೆರೆದುಕೊಂಡ ತಲೆ

ಉತ್ತರಿಸಲೊಲ್ಲ ಭವ ಲೀಲೆ

ನೂರೆಂಟಿವೆ ಪ್ರಶ್ನೆ ನನಗೂ ಅರಿವಿಲ್ಲ

ಉತ್ತರಕಿನ್ನೂ ಹುಡುಕಾಟ ‘ಯಾಕೊ ಗೊತ್ತಿಲ್ಲ‘ ||

ಗೊಂದಲ ಚಿತ್ತ ಮೊತ್ತ ಕವಿಗೆ

ಗೊಂದಲಿಸಿದ ಖುಷಿಯವನಿಗೆ

ಬಂಧಿಸಲಿಂತು ಜಗದ ಮಾಯಾಜಾಲ

ಅವನಾಟ ತೊಳಲಾಟ ‘ಯಾಕೊ ಗೊತ್ತಿಲ್ಲ‘ ||

ಗೊತ್ತಾಯಿತೊಂದಷ್ಟೆ ಕವಿಗೆ

ಬರೆದನಷ್ಟು ತರ ಬರವಣಿಗೆ

ಮನೆ ಮನ ಸುತ್ತಿ ಕೇಳುತ್ತಿದ್ದಾನೆಲ್ಲ

ಹಂಚೆಲ್ಲರಿಗು ಅನುಮಾನ ‘ಯಾಕೊ ಗೊತ್ತಿಲ್ಲ!’ ||

– ನಾಗೇಶ ಮೈಸೂರು

೨೪.೦೩.೨೦೧೮

(Picture credit :Suma Kalasapura – thank you madam 🙏👍😊)

01668. ಯಾಕೊ ಈ ಋತು..


01668. ಯಾಕೊ ಈ ಋತು..

__________________________________

ಯಾಕೊ ಈ ಋತು, ಮಾತಿಗು ಸಿಗುತಿಲ್ಲ

ಅದೇಕೊ ಈ ಪ್ರಕೃತಿ, ಒಡನಾಟಕು ಒಲವಿಲ್ಲ

ಸಿಕ್ಕದೆಡೆ ಬದುಕಲಿ, ಮೂಡಲೆಂತು ಪ್ರೀತಿ ?

ನಿಸರ್ಗದ ಹೆಸರಲಿ, ಸರಿಯೇನೇ ಈ ರೀತಿ ? ||

ಅರಳಿದವೆ ಹೂಗಳು, ಗುಟ್ಟಲಿ ನಟ್ಟಿರುಳಲಿ

ಕಾಣಲೆಂತೆ ಕಂಗಳು, ನಿಶೆಯ ಕರಿ ನೆರಳಲಿ

ನಿನ್ನ ಸೆರಗಲೆಷ್ಟು ಬೆರಗು, ಯಾರಿಟ್ಟರೆ ಯಂತ್ರ ?

ಸಾಗಿಸಿರುವೆ ಪ್ರತಿ ಕ್ಷಣ, ನಿಭಾಯಿಸೆಲ್ಲ ಕುತಂತ್ರ! || ಯಾಕೊ ||

ಬಿಸಿಲಲ್ಲಿ ಬಾಡುವ, ಜಗದಲಿ ಬಿಸಿಲೆ ಮಳೆ

ಕುಡಿದದನೆ ಪಾಕವ, ಮಾಡುವ ನೀನೆಂಥ ಜಾಣೆ

ಬೆವರುತ ನಿಡುಸುಯ್ಯುತ, ಶಪಿಸುತಲೆ ಕಾಲ

ಕಳೆದುಹೋಯಿತೆ ಬೆಸುಗೆ, ದಣಿಸಲು ಬಿಸಿಲಿಲ್ಲ || ಯಾಕೊ ||

ಬಂತಲ್ಲೆ ಬಸವಳಿದ, ಭುವಿಗಿಕ್ಕುತ ಸುರಿಮಳೆ

ಒಣಗಿ ನಿಂತ ತರುನಿಕರ, ಮೊಗೆದು ಕುಡಿವ ವೇಳೆ

ನೋಡುತ ಮಾಡಿನ ಕಿಂಡಿ, ಕಳೆದುಹೋಯ್ತೆ ಗಳಿಗೆ

ನೆನೆಯದೆ ಹನಿ ನೆನೆದು ದನಿ, ಒದ್ದೆಮುದ್ದೆ ಕಚಗುಳಿಗೆ || ಯಾಕೊ ||

ಬೇಡವೆನ್ನಲೆಂತೆ ನಡುಕ, ಚಳಿ ತಾನೆ ಅಮಾಯಕ

ಅಪ್ಪಿದರೇನೊ ಹೊದಿಕೆ, ಬೆಚ್ಚಗಿರಿಸೊ ನೆನಪ ಪುಳಕ

ಅಚ್ಚರಿಯದನೆಲ್ಲ ಮೆಚ್ಚಿ, ಆಸ್ವಾದಿಸೆ ಬಿಡಬಾರದೆ ?

ಕಟ್ಟಿ ಕೂರಿಸೆ ಜಡ್ಡಿನ, ನೆಪದಲಿ ಕಾಲವೆಲ್ಲಾ ಬರಿದೆ ! || ಯಾಕೊ ||

ನೀನೊಬ್ಬಳೆ ನಿಜದಲಿ, ಪ್ರಕೃತಿಯೆ ನಿಸರ್ಗ ಸಹಜ

ಹೂವು ಕಾಯಿ ಹಣ್ಣು ಋತು, ಕಾಲಮಾನದ ತಾಜ

ಜೋಡಿಸಿಟ್ಟ ವಿಭುವವನೆ, ಮರೆತುಬಿಟ್ಟ ಗಡಿಯಾರ

ನೀನಿದ್ದೂ ಚಂಚಲಿನಿ, ಬೇಕಾದ ಋತುವ ತರುವ ವರ || ಯಾಕೊ ||

– ನಾಗೇಶ ಮೈಸೂರು

೨೪.೦೩.೨೦೧೮

(Picture source : internet social media)

01667. ರಾಮಾನಿಗೇನಿತ್ತನಿವಾರ್ಯ….?


01667. ರಾಮಾನಿಗೇನಿತ್ತನಿವಾರ್ಯ….?

——————————————–

ರಾಮನಿಗೇನಿತ್ತನಿವಾರ್ಯ ?

ಭೂಲೋಕ ವ್ಯಾಪಾರ..

ಅವತಾರವೆತ್ತಿದ ತರಹ

ಏನೀ ಹಣೆಬರಹ? || 01 ||

ಬಿಟ್ಟು ಕ್ಷೀರ ಸಾಗರ ಕಲ್ಪ

ಆದಿಶೇಷನ ಮೃದು ತಲ್ಪ

ನಾರುಮಡಿ ಉಟ್ಟು ವೇಷ

ಕಾಡಿನಲಿ ವನವಾಸ! || 02 ||

ಕಾಲೆತ್ತ ಬಿಡದ ನಲುಮೆ

ಕಾಲೊತ್ತಿ ವಕ್ಷಸ್ಥಳಸ್ಥೆ ಲಕುಮಿ

ಬಿಟ್ಟವಳಾಶೋಕವೃಕ್ಷದಡಿ

ಪಟ್ಟ ಪಾಡೇನು ಗಡಿಬಿಡಿ? || 03 ||

ಹೊತ್ತೊಯ್ಯಲು ಗರುಡ

ಕೈಂಕರ್ಯಕೆ ದೇವಗಣ ನಿಭಿಢ

ಯಾಕಪ್ಪ ಕಾಡಮೇಡಲೆದಾಟ

ನರವಾನರರೊಡನೇಕೊ ಕೂಟ? || 04 ||

ಯೋಗ ಮಾಯಾ ನಿದ್ರೆ

ಹರ ಬ್ರಹ್ಮ ಸಂವಾದ ಮುದ್ರೆ

ಬಿಟ್ಟೇಕೀ ಅವತಾರ ಶ್ರದ್ದೆ..

ಈ ಹುಲು ಮಾನವರ ಮಧ್ಯೆ !? || 05 ||

ಆ ಲೋಕ ಗಾಢಾವಲೋಕನ

ಮೋಕ್ಷಾನಂದ ಸಂಕೀರ್ತನ

ವಿಯೋಗದೊಬ್ಬಂಟಿಯ ಜೀವನ

ನಿನಗೇಕೀ ಇಹದಾ ಬಂಧನ? || 06 ||

ಹುಡುಕಿ ಕಾರಣ ರಾಮ

ಮರ್ಯಾದಾಪುರುಷೋತ್ತಮನಾ

ಪ್ರಶ್ನಾರ್ಥಕಗಳ ಪರಿಭ್ರಮಣ,

ರಾಮಾ, ಹೇಳೆಯಾ ಕಾರಣ? || 07 ||

————————————————————-

ನಾಗೇಶ ಮೈಸೂರು

————————————————————-

(ವರ್ಷಗಳ ಹಿಂದೆ ಬರೆದದ್ದು , ಸ್ವಲ್ಪ ತಿದ್ದಿದ್ದೇನೆ)

(ಚಿತ್ರ : https://kn.m.wikipedia.org/wiki/ರಾಮ)

01666. ಇವನಲ್ಲ ಬರಿ ಕಂದ..


01666. ಇವನಲ್ಲ ಬರಿ ಕಂದ..

________________________________

ಬಂಗಾರ ಸಿಂಗಾರ

ಇಳಿಸೋಕೆ ಭೂ ಭಾರ

ಬಂದಾ ನನ ಕಂದಾ

ಕಸ್ತೂರಿ ಮಕರಂದ ||

ಕಂಕುಳಾಗಿನ ಕೂಸು

ಮಾಡೇ ಜಗಕೆ ಲೇಸು

ಅವನಂತೆ ಜಗದ ಅಂಡ

ನಾ ಭರಿಸಲೆಂತೆ ಬ್ರಹ್ಮಾಂಡ ? ||

ಹೆತ್ತವಳೆಂತೊ ಭರಿಸೆ

ಹೊತ್ತವಳು ನಾ ಆದರಿಸೆ

ಬತ್ತದ ನಗೆ ಬೆಣ್ಣೆ ಗೋಪಾಲ

ನಂಬಲೆಂತೆ ಇವ ಬರಿ ಬಾಲ ? ||

ಜಾರುವ ಏರುವ ಅವಿತಾಡಿ

ದುಗುಡ ದುಃಖವೆ ತಡಕಾಡಿ

ಸಿಕ್ಕಾಗ ಬಿಗಿಯುವ ಬಯಕೆ

ಮರೆತೆಲ್ಲ ಅಪ್ಪುವುದಲ್ಲ ಏಕೆ ? ||

ನಾನಲ್ಲವೊ ನಿನ್ನ ಮಾತೆ

ನೀನೆಲ್ಲರ ಮಾತು ಕಥೆ

ನಿನದಷ್ಟೆ ನಡೆವಾ ಜಗ ಸುತ್ತ

ನೀನೊ ಅನಂತ ನಾ ನಿಮಿತ್ತ ||

– ನಾಗೇಶ ಮೈಸೂರು

೨೪.೦೩.೨೦೧೮

(Picture source : Internet / social media)

01665. ಪಸರಿಸೆ ಪದ ಕನ್ನಡದ..


01665. ಪಸರಿಸೆ ಪದ ಕನ್ನಡದ..

_____________________________

ಬಂದುದ ಬರೆದುದೇನೊ ಚಿತ್ತ

ಬರೆಯುತ ಮನದ ಮಾತನು..

ಕವನವೊ ಕಾವ್ಯವೊ ಪದಗಣವೊ

ತುಡಿತಕೊಂದಾಯ್ತು ಹೊರ ಹರಿವು.. || ೦೧ ||

ಯಾರಿಲ್ಲಿ ವಿದ್ವಾಂಸ ಪರಿಪೂರ್ಣ ?

ಪಾಂಡಿತ್ಯದಂಗಡಿಗ್ಯಾರೊಡೆಯ ?

ಎಲ್ಲರು ಸೇವಕರೆ, ನುಡಿ ನಮನ

ತಟ್ಟಿರೆ ಹೃದಯ ಮುದದೆ ಹೂವು ! || ೦೨ ||

ಬೆನ್ನಟ್ಟಲಲ್ಲ ಕೀರ್ತಿ-ಕಿರೀಟ-ಪ್ರಶಸ್ತಿ

ಪ್ರಸವ ಶಿಶು ಭರಿಸಲಷ್ಟೆ ಉದ್ಗಾರ

ಜನಿಸಿದಾಗ ಕೂಸಿಗಿಷ್ಟು ಸಿಂಗರಿಸೆ

ಮುದ್ದಿಸೊ ಮಂದಿ ಶುದ್ಧ ಅಕ್ಕರಾಸ್ತೆ || ೦೩ ||

ಸಹೃದಯರೆ ಹಸಿರು ಸುತ್ತಮುತ್ತ

ಮೆಚ್ಚದೆ ಚುಚ್ಚೊ ಜ್ಞಾನಿ ವಂದನಾರ್ಹ

‘ನಾನೇನಲ್ಲ’ ಅರಿಸೊ ಗುರುವಿನ ರೀತಿ

ಸಾಮಾನ್ಯನ ಮುಟ್ಟಲಷ್ಟೆ ಕವಿಯ ಕುಸ್ತಿ ! || ೦೪ ||

ಪದವಲ್ಲ ಕಥೆ ಕಾವ್ಯ ಕವನವಲ್ಲ..

ಹೆಸರಿಲ್ಲದ ಏನೊ ಒಂದು ವಿಧ.

ಪಸರಿಸಿರೆ ಸಾಕು ಕನ್ನಡ ಸೊಗಡ

ಸಾಕು ಬಿಡು ಮಿಕ್ಕಿದ್ದೆಲ್ಲ ನಿರ್ಬಂಧ ! || ೦೫ ||

– ನಾಗೇಶ ಮೈಸೂರು

(Picture source : Internet / social media)

01664. ಯಾಕೊ…


01664. ಯಾಕೊ…

_________________________

ಯಾಕೊ ಕೂತು ಮಾತಿಗು ಸಿಗುತಿಲ್ಲ

ಯಾಕೊ ಭೇಟಿಯಾಗಲು ಬಿಡುವಿಲ್ಲ

ಯಾಕೊ ಸಮಯ ಇದ್ದು ಇಲ್ಲವಲ್ಲ

ಯಾಕೊ ಜತೆಗೆ ಇದ್ದರು ಜೊತೆಯಿಲ್ಲ ||

ಯಾಕೊ ಬೆಳಗು ಬೈಗು ಏನೊ ನಿರತ

ಯಾಕೊ ನಿಲದೆ ತಲೆಗದೇನೊ ಮೊರೆತ

ಯಾಕೊ ಕಾಣೆ ಒಂದೊಂದಾಗಿ ಸ್ಖಲನ

ಯಾಕೊ ಅಲೆಯಂತಪ್ಪಳಿಸಿ ಸಂಕಲನ ||

ಯಾಕೊ ಇರದಾಗ ಬೇಕೆನಿಸೊ ಭಾವ

ಯಾಕೊ ಇದ್ದಾಗ ಉದಾಸೀನ ಸ್ವಭಾವ

ಯಾಕೊ ಕಾಣೆ ಕಾಣದ ಕಡಲಿನ ಗದ್ದಲ

ಯಾಕೊ ಮಸುಕು ಗೊತ್ತಾಗದ ಹಂಬಲ ||

ಯಾಕೊ ಮುಸುಕೊಳಗ ಪೆಟ್ಟು ಅನುದಿನ

ಯಾಕೊ ಮುಜುಗರ ಎಡವಟ್ಟು ಸಂಧಾನ

ಯಾಕೊ ಸಿಗದಲ್ಲ ಮರೀಚಿಕೆ ಸಮಾಧಾನ

ಯಾಕೊ ಚಂಚಲತೆಗು ಗೊತ್ತಾಗದ ಕಾರಣ ||

ಯಾಕೊ ಯಾಕೆಂದು ಕೇಳುವರಿಲ್ಲ ಒಳಗೆ

ಯಾಕೊ ಯಾಕೆಂದು ಹೇಳುವರಿಲ್ಲ ಹೊರಗೆ

ಯಾಕೊ ಹೀಗೇಕೆಂದು ಯಾರೂ ಬರೆದಿಲ್ಲ

ಯಾಕೊ ಪ್ರಶ್ನಿಸದೆ ನಡೆದಿದೆ ಜಗದೆ ಸಕಲ ||

– ನಾಗೇಶ ಮೈಸೂರು

(Picture source : Internet / social media)

01663. ಕಲ್ಲಿಗೊರಗಿ ಕಾಲದ ಮೆಲುಕು


01663. ಕಲ್ಲಿಗೊರಗಿ ಕಾಲದ ಮೆಲುಕು

______________________________

ಕವಿ ಪುಟದ ‘ಪಂಚ್ – ಕಾವ್ಯ’ ಕ್ಕಾಗಿ

ಕವಿ ನಾಗೇಶ್ ಮೈಸೂರ ರು ಬರೆದ ಕವನ

‘ಕಲ್ಲಿಗೊರಗಿ ಕಾಲದ ಮೆಲುಕು’ ನಿಮ್ಮೆಲ್ಲರ ಓದಿಗೆ..

*ಸಂಪೂರ್ಣ ಸ್ವಾಮ್ಯಗಳು ಲೇಖಕರವು*

– ಕರ್ನಾಟಕ ವಿಶೇಷ

(https://www.facebook.com/KarnatakaVisheshaPuta/posts/181166815940831)

01662. ತಲೆ ಹರಟೆ : ಬಾಗಿಲು ಹಾಕೊ..!


01662. ತಲೆ ಹರಟೆ : ಬಾಗಿಲು ಹಾಕೊ..!

____________________________________________

ಮೇಷ್ಟ್ರು ಪಾಠ ಹೇಳಿಕೊಡ್ತಾ ಇದ್ರು. ತರಗತಿಯ ಬಾಗಿಲು ತೆರೆದೆ ಇತ್ತು.

ಇದ್ದಕ್ಕಿದ್ದಂತೆ ಹೊರಗೆ ಗಾಳಿ ಜೋರಾಗಿ ಮಳೆ ಬರುವ ಸೂಚನೆ ಕಾಣಿಸಿಕೊಂಡಿತು. ಟೇಬಲ್ ಮೇಲಿದ್ದ ಪುಸ್ತಕದ ಹಾಳೆಗಳು ಪಟಪಟನೆ ಹೊಡೆದುಕೊಳ್ಳತೊಡಗಿದಾಗ ಬೋರ್ಡಿನತ್ತ ಮುಖ ಮಾಡಿದ್ದ ಮೇಸ್ಟ್ರು ಹಿಂದೆ ತಿರುಗದೆ, ಬಾಗಿಲ ಹತ್ತಿರ ಕೂತಿದ್ದ ಗುಬ್ಬಣ್ಣನಿಗೆ ಹೇಳಿದರು..

‘ಲೋ..ಗುಗ್ಗಣ್ಣ , ಸ್ವಲ್ಪ ಬಾಗಿಲು ಮುಂದಕ್ಕೆ ಹಾಕೊ..’

‘ಅಯ್ಯಯ್ಯೊ..! ಬಿಲ್ಕುಲ್ ಆಗಲ್ಲ ಸಾರ್‘ ಬಾಣದಂತೆ ತಿರುಗಿ ಬಂದ ಉತ್ತರಕ್ಕೆ ಮೇಸ್ಟ್ರಿಗೆ ನಖಶಿಖಾಂತ ಉರಿದುಹೋಯ್ತು.. ಬೋರ್ಡಿಂದ ತಿರುಗಿದವರೆ ಮೇಜಿನ ಮೇಲಿದ್ದ ಬೆತ್ತದತ್ತ ಕೈ ಚಾಚುತ್ತ..

‘ ಯಾಕೊ… ಯಾಕೊ ಆಗಲ್ಲಾ..ಹಾಂ..’ ಎಂದರು

‘ ಸಾರ್.. ಕಟ್ಟುವಾಗಲೆಗೋಡೆ ಜೊತೆ ಸೇರಿಸಿ ಕಟ್ಟಿಬಿಟ್ಟಿದ್ದಾರೆ.. ಮುಂದಕ್ಕೆ ಹಾಕ್ಬೇಕಾದ್ರೆ ಕಿತ್ತು ಹಾಕಿದ್ರಷ್ಟೆ ಆಗುತ್ತೆ..’

ಹುಡುಗರೆಲ್ಲ ‘ಗೊಳ್ಳ್‘ ಅಂದ್ರು ; ಮೇಷ್ಟ್ರು ಮಾತ್ರ ಗಪ್ಚಿಪ್ ಆಗಿ ಬಂದು ಬಾಗಿಲು ಮುಚ್ಚಿ ಪಾಠ ಮುಂದುವರೆಸಿದ್ರು.

– ನಾಗೇಶ ಮೈಸೂರು

೨೩.೦೩.೨೦೧೮

#ತಲೆಹರಟೆ

01661. ಮತಿ


1661. ಮತಿ

________________

ಮತಿಗಿಲ್ಲ ಇತಿಮಿತಿ

ಲೆಕ್ಕಿಸದಲ್ಲ ಪರಿಮಿತಿ

ಅದಕೆಲ್ಲಿ ಭಯ ಭೀತಿ ?

ಏತಿ ಅಂದರೆ ಪ್ರೇತಿ ||

ಸುಮತಿ ಇರಬೇಕೆಲ್ಲ

ಕುಮತಿ ಬಿಡಬೇಕಲ್ಲ ?

ಸಹಮತಿ ಬರದಲ್ಲ

ಶ್ರೀಮತಿ ಇರೆ ಬೆಂಬಲ ||

ನಡಿಗೆ ಬೆನ್ನಟ್ಟೆ ಸದ್ಗತಿ

ಕಂಗಾಲು ವಿಹ್ವಲ ಮತಿ

ಅಂತಃಕರಣ ಪ್ರಣತಿ

ಹಚ್ಚಿದರೆ ಸರಿ ಜ್ಯೋತಿ ||

ಮತಿಗಿತ್ತರೆ ಅನುಮತಿ

ಗತಿ ಪ್ರಗತಿ ಅಧೋಗತಿ

ಮತಿ ತೋರೆ ಸರಿ ದಾರಿ

ಮತಿಗಿರಬೇಕು ಸಹಚರಿ ||

ಮತಿ ಅದ್ಭುತ ಸಂಗತಿ

ಅರಿತವರಿಲ್ಲ ಪೂರ್ತಿ

ಕೊಡಲೆಂದು ಸನ್ಮತಿ

ಮಾಡಲಷ್ಟೆ ವಿನಂತಿ ||

– ನಾಗೇಶ ಮೈಸೂರು

೨೩.೦೩.೨೦೧೮

(Picture : mobile click)

01660. ಘಜಲ್ (ನಮ್ಮಿಬ್ಬರ ನಡುವಿನ ಗುಟ್ಟು )


01660. ಘಜಲ್

____________________________

(ನಮ್ಮಿಬ್ಬರ ನಡುವಿನ ಗುಟ್ಟು )

ಎದೆಯ ಗೋದಾಮಿನಲಿ ಬಚ್ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು

ನನ್ನ ಕನಸಿನಲಿ ಮಾತ್ರ ಬಿಚ್ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೧ ||

ಬೆದರದಿರೆ ಹೇಳೆನು ಯಾರಿಗು

ನನ್ನ ನಿನ್ನ ನಡುವಿನ ಪ್ರೇಮ ಗುಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೨ ||

ಬಚ್ಚಿಡಲೆಂತೆ ತುಂಬಿ ತುಳುಕಿ ಚೀಲ

ಕಟ್ಟಿದರು ಬಿಚ್ಚಿ ಹಾರಿ ಮನ ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೩ ||

ಬಿಡು ಚಿಂತೆ ಹಾರಿದರು ಗಾಳಿಪಟವ

ಬಾನ ಖಾಲಿ ಬಯಲು ಇಲ್ಲ ತಂಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೪ ||

ಬಿಡು ಭೀತಿ ಹುಚ್ಚು ಮನ ರಟ್ಟು ಮಾಡೆ

ಹಾಡಾಗಿ ಗುನುಗಿ ಗುಟ್ಟ ಮುಚ್ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೫ ||

ಗುಬ್ಬಿಗದು ಮುತ್ತೆ ಕಾವಲೆ ಹೃದಯ

ಜತನ ಕಾಪಿಟ್ಟು ತೋರುವ ಮುಚ್ಚಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೬ ||

– ನಾಗೇಶ ಮೈಸೂರು

೧೯.೦೩.೨೦೧೮

(Picture source : Internet / social media)

01659. ಎಚ್ಚರ..


01659. ಎಚ್ಚರ..

_____________________

ಚುಮುಚುಮು ನಸುಕಲಿ

ಕತ್ತಲ ಹೊದಿಕೆ ಸರಿಸಿ ಸೂರ್ಯ

ಮೈ ಮುರಿದೇಳುವ ಹೊತ್ತು

ಹಗಲ ಜಗವಾಗಲಿದೆ ಆರ್ಯ ..||

ಮಲಗಿ ತಂಪಿದ್ದ ದಿನಕರ

ಬೆಚ್ಚಗಾಗಲು ಬೇಕು ಕುಲುಮೆ

ತನ್ನೊಳಗೆ ತನ್ನನದ್ದಿಕೊಳುತ

ಕೆಂಪಾಗುತಿಹ ಕಾವಿನೊಲುಮೆ ||

ಮಂಕಾಗಲಿವೆ ದೀಪಗಳೆಲ್ಲ

ಕೊಬ್ಬಿ ಮೆರೆದ ಇರುಳ ಗಟಾರ

ವಟಾರದ ಮೂಲೆಗು ಹಿಂಡಿ

ಸುರಿವ ರವಿ ಬೆಳಕಿನ ಆಚಾರ್ಯ ||

ಮಾಡು ಮಹಡಿ ಗುಡಿಸಲು

ಹಾದಿಬೀದಿಗು ದ್ಯುತಿ ಪೊರಕೆ

ತಮಲೋಕದ ಪಾಪವನೆಲ್ಲ

ಜಾಡಿಸೊಂದೆ ಸಲ ತೊಡೆವ ಬಯಕೆ ||

ತನುಮನವಿನ್ನು ಅಸ್ತಂಗತ

ಉದಯವಾಗಲೇನೊ ಆಲಸಿಕೆ

ಬಿಡದು ಜಗ ವ್ಯಾಪಾರ ಗುದ್ದಿ

ಮೇಲೆಬ್ಬಿಸಿ ಕೊಟ್ಟೋಡಿಸೊ ಲಸಿಕೆ ||

– ನಾಗೇಶ ಮೈಸೂರು

೨೧.೦೩.೨೦೧೮

(Picture courtesy: Anvesha Anu – thanks madam! 🙏😊👍👌)

01658. ಘಜಲ್ (ಅವಳೆಡೆಗೊ? ಇವಳೆಡೆಗೊ? )


01658. ಘಜಲ್

__________________________________

(ಅವಳೆಡೆಗೊ? ಇವಳೆಡೆಗೊ? )

ಗೊಂದಲದ ಗೂಡಾಗಿ ಹೋಗಿದೆ ತಾಳು

ಅವಳೆಡೆಗೊ? ಇವಳೆಡೆಗೊ?

ಚಂದದೆ ಕದ್ದವಳು, ಮಾತಲೆ ಗೆದ್ದವಳು

ಅವಳೆಡೆಗೊ? ಇವಳೆಡೆಗೊ? ||

ಸುರಲೋಕದಾ ಸೊಬಗು ಭಟ್ಟಿಯವಳು

ಮಂತ್ರಮುಗ್ಧತೆ ಮಾತಲಿ ಸೆಳೆದಳಿವಳು

ಅವಳೆಡೆಗೊ? ಇವಳೆಡೆಗೊ? ||

ನಿನ್ನೆ ಮೊನ್ನೆ ಕೆಳೆಯಲಿ ಧಾಳಿಯಿಟ್ಟವಳು

ಬಾಲ್ಯದ ಸಲಿಗೆ ಕಿವಿ ಹಿಂಡುವಳಿವಳು

ಅವಳೆಡೆಗೊ? ಇವಳೆಡೆಗೊ? ||

ತರುವಳು ಸಂಪತ್ತು ಕುಬೇರನ ಮಗಳು

ಬರುವಳು ಸರಸ್ವತಿಯ ವೀಣೆ ಮುಗುಳು

ಅವಳೆಡೆಗೊ? ಇವಳೆಡೆಗೊ? ||

ಗುಬ್ಬಿ ಸಂದಿಗ್ಧ ಎಡತಾಕಿ ಮನ ಅಗುಳು

ಆಯ್ಕೆಯಾದರೆ ಭೀತಿ ಬಾಳ ತೆಗಳು

ಅವಳೆಡೆಗೊ? ಇವಳೆಡೆಗೊ? ||

– ನಾಗೇಶ ಮೈಸೂರು

೧೫.೦೩.೨೦೧೮

(Picture source : Internet / social media)

01657. ಘಜಲ್ (ಬಡಪಾಯಿ ಪಡಖಾನೆ)


01657. ಘಜಲ್

__________________________

(ಬಡಪಾಯಿ ಪಡಖಾನೆ)

ಬಂದು ಹೋದವರೆಲ್ಲ ಕಕ್ಕುವರೆಲ್ಲಾ ವ್ಯಥೆ

ಬಡಪಾಯಿ ಪಡಖಾನೆ

ಯಾರ ಮಡಿಲಿಗು ಸೇರದ ಸರಕ ಸಂತೆ

ಬಡಪಾಯಿ ಪಡಖಾನೆ || ೦೧ ||

ಸುಖ ದುಃಖ ಬರಿ ಲೆಕ್ಕ ಹೇಳಲೆಲ್ಲ ಅಳುಕ

ಕೇಳದಿದ್ದರು ಯಾರು ಕೇಳಬೇಕಂತೆ

ಬಡಪಾಯಿ ಪಡಖಾನೆ || ೦೨ ||

ಸಾಕಿ ಸುರಿದ ಸುರೆ ಹೆಚ್ಚಿ ಬೇಗೆ ಕುದುರೆ

ಅದ ಮೆಚ್ಚಿ ವಾ ವಾ ಎನ್ನೊ ಹುಚ್ಚು ಜಗವಂತೆ

ಬಡಪಾಯಿ ಪಡಖಾನೆ || ೦೩ ||

ತೂರಾಟ ಹಾರಾಟ ಎಲ್ಲಾ ತರಕು

ಮೌನದೆ ವೇದಿಕೆ ಹಾಸಿಗೆ ಹೊದಿಕೆ ಮೆತ್ತೆ

ಬಡಪಾಯಿ ಪಡಖಾನೆ || ೦೪ ||

ಗುಬ್ಬಿ ರಣಹದ್ದು ಹಾವು ಹಲ್ಲಿ ಹಂಸ ಬಳಗ

ಅವರವರ ಚಿಂತೆಯಲಿ ಅವರವರು ವ್ಯಸ್ತ

ಬಡಪಾಯಿ ಪಡಖಾನೆ || ೦೫ ||

– ನಾಗೇಶ ಮೈಸೂರು

೧೯.೦೩.೨೦೧೮

(Picture source 1. https://goo.gl/images/6yW3gq

Picture source 2: https://goo.gl/images/HzAzEz)

01656. ಮಾಡಿಕೊಂಡೆವು ನಾವೂ ಹಬ್ಬ


01656. ಮಾಡಿಕೊಂಡೆವು ನಾವೂ ಹಬ್ಬ

_______________________________

(ಘಜಲ್ ಮಾದರಿ)

ಹಾಗೆ ಹೀಗೆ ಹೇಗೋ ಬಿಡಿ

ಮಾಡಿಕೊಂಡೆವು ನಾವೂ ಹಬ್ಬ

ಇದ್ದಷ್ಟರಲ್ಲೇ ಮಡಿ ಗಡಿಬಿಡಿ

ಮಾಡಿಕೊಂಡೆವು ನಾವೂ ಹಬ್ಬ || ೦೧ ||

ಸೂಪರ್ ಮಾರ್ಕೆಟ್ ತರ್ಕಾರಿ

ಬೊಕೆ ಕಿತ್ತು ಹೂವ ಜತೆ ಮಾಡಿ

ಮಾಡಿಕೊಂಡೆವು ನಾವೂ ಹಬ್ಬ || ೦೨ ||

ಸಿಕ್ಕಿದ್ದಷ್ಟು ಸಿಗದಿದ್ದು ಬದಿಗಿಟ್ಟು

ಎಡವಟ್ಟು ಮಾಡಿ ತಡಕಾಡಿ

ಮಾಡಿಕೊಂಡೆವು ನಾವೂ ಹಬ್ಬ || ೦೩ ||

ಇಲ್ಲಿ ಹುಡುಕಲೆಲ್ಲಿ ಬೇವ ಹೂ

ದುಡ್ಡು ಕೊಟ್ಟರು ಸಿಗದ ಜಾಗವಿಡಿ

ಮಾಡಿಕೊಂಡೆವು ನಾವೂ ಹಬ್ಬ || ೦೪ ||

ಇತ್ತಲ್ಲ ಕರ್ಪೂರ ಸಾಂಬ್ರಾಣಿ

ಊದುಬತ್ತಿ ಜೊತೆಗುರಿದಾಡಿ

ಮಾಡಿಕೊಂಡೆವು ನಾವೂ ಹಬ್ಬ || ೦೫ ||

ಸದ್ಯ ಇತ್ತು ರಜೆ ಭಾನುವಾರ

ಮಾಡದೆ ಅವಸರ ದಾಂಗುಡಿ

ಮಾಡಿಕೊಂಡೆವು ನಾವೂ ಹಬ್ಬ || ೦೬ ||

ಇ-ಶುಭಾಶಯ ವಿನಿಮಯದಲೆ

ದೂರವಾಣಿಯ ಕರೆ ನೀಡಿ

ಮಾಡಿಕೊಂಡೆವು ನಾವೂ ಹಬ್ಬ || ೦೭ ||

ದೂರದಿಂದಲೆ ಬಿದ್ದಡ್ಡ ಜನಕೆ

ಕೊಟ್ಟು ಆಶೀರ್ವಾದ ಮೋಡಿ

ಮಾಡಿಕೊಂಡೆವು ನಾವೂ ಹಬ್ಬ ||೦೮ ||

ಗುಬ್ಬಿಗದೆ ನಿರಾಳ ಮನದಲಿ

ಹಾಗ್ಹೀಗೊ ಹೇಗೊ ಹೆಣಗಾಡಿ

ಮಾಡಿಕೊಂಡೆವು ನಾವೂ ಹಬ್ಬ || ೦೯ ||

– ನಾಗೇಶ ಮೈಸೂರು

೨೦.೦೩.೨೦೧೮

(ವಿದೇಶ ಅಥವಾ ಹೊರನಾಡುಗಳಲಿದ್ದವರ ಅನುಭವಕ್ಕೆ ಹೆಚ್ಚು ಸಮೀಪ)

(Picture source : Internet / social media)

01655. ಮತ್ತೆ ಹೊಸತು..!


01655. ಮತ್ತೆ ಹೊಸತು..!

__________________________

ಮರೆಯಾಗಿ ಹಳತು

ಮೆರೆಯಲಿದೆ ಹೊಸತು

ಸೇತು ಬಂಧ ಸಂಬಂಧ

ಯುಗಾದಿಯ ಮೋದ ||

ಸುಮ್ಮನಲ್ಲ ಹೊಸವರ್ಷ

ಋತುಗಾನ ಸಹರ್ಷ

ಬದಲಾಗಿ ಪ್ರಕೃತಿ

ಬದಲಾಗೊ ಪ್ರವೃತ್ತಿ ||

ತಳಿರಲ್ಲಿ ತೋರಣ

ಮಾವು ಬೇವು ಬಣ್ಣ

ಬೆಲ್ಲದೆ ಬೇವ ಹೂ

ಮೆಲ್ಲದೆ ಅಪೂರ್ಣವು ||

ವಸಂತವಿಹ ಹೃದಯ

ಪ್ರೀತಿ ಕ್ರಯ ವಿಕ್ರಯ

ಚಿಗುರೆ ನಲುಮೆ ಬಲ

ಒಂದೆನ್ನೆ ಮನುಜ ಕುಲ ||

ತರಲಿಂತು ತನ್ನೊಡನೆ

ಹರ್ಷೋಲ್ಲಾಸ ಗೊನೆ

ಸಿಹಿಕಹಿಯ ಬಾಳಲಿ

ಸಮಚಿತ್ತ ಮನದಲಿ||

– ನಾಗೇಶ ಮೈಸೂರು

(Picture source – Wikipedia : https://goo.gl/images/9S8j6h)

01654. ಯುಗಾದಿಗಿದು ಹೊಸತು !


01654. ಯುಗಾದಿಗಿದು ಹೊಸತು !

________________________________

(ರಚನೆ ಘಜಲ್ ಮಾದರಿಯಲ್ಲಿ)

ಇದು ಹೊಸತು ಇದು ಹೊಸತು

ಯುಗಾದಿಗಿದು ಹೊಸತು

ಹೊಸತಲ್ಲ ಹೊಸತ ಕುರಿತು

ಯುಗಾದಿಗಿದು ಹೊಸತು || ೦೧ ||

ಚೈತ್ರಕಿದು ಮೊದಲ ತೇದಿ

ಪ್ರಕೃತಿ ಬಾಗಿನ ತಂದಿತ್ತು

ಯುಗಾದಿಗಿದು ಹೊಸತು || ೦೨ ||

ನಿಸರ್ಗದ ದರಬಾರಲಿ

ಧರೆ ಬಾಗಿಲ ತೆರೆದಿತ್ತು

ಯುಗಾದಿಗಿದು ಹೊಸತು || ೦೩ ||

ಭೃಂಗ ಸಂಗದೆ ಸಂತ ಕುಸುಮ

ವಿಹಂಗಮದೆ ವಿಹರಿಸಿತ್ತು

ಯುಗಾದಿಗಿದು ಹೊಸತು || ೦೪ ||

ಚಂದಿರ ವಿರಾಜಮಾನ

ಚಂದ್ರಮಾನ ಬಿರುದ ಗತ್ತು

ಯುಗಾದಿಗಿದು ಹೊಸತು || ೦೫ ||

ಜಂಬದ ಹೂ ಬಿಗುಮಾನ

ಬಿಂಕ ಬಿಡದೆಲೆ ನಲಿದಿತ್ತು

ಯುಗಾದಿಗಿದು ಹೊಸತು || ೦೬ ||

ಮಾವು ಬೇವು ನಿಸರ್ಗ ಸಹಜ

ಬೆಲ್ಲದಡಿಗೆ ಮನ ಬೆರೆತು

ಯುಗಾದಿಗಿದು ಹೊಸತು || ೦೭ ||

ಇಳೆ ಶೃಂಗಾರ ಸಂಭ್ರಮಕೆ

ನಾಚಿ ಮೋಡ ಮಳೆಯಾಯ್ತು

ಯುಗಾದಿಗಿದು ಹೊಸತು || ೦೮ ||

ನಲ್ಲ ನಲ್ಲೆ ಹೃದಯ ಸಂಗಮ

ಮೆದ್ದ ನೆನಪು ನಗೆ ತಂದಿತ್ತು

ಯುಗಾದಿಗಿದು ಹೊಸತು || ೦೯ ||

ಜೇಡದ ಮನ ಆಸೆಯ ಬಲೆ

ನೇಯ್ದ ಜಗ ಮದಿರೆ ಮತ್ತು

ಯುಗಾದಿಗಿದು ಹೊಸತು || ೧೦ ||

ಯುಗದಾದಿ ಮರುಕಳಿಕೆ

ಗಾದಿಗೇರಿಳಿವ ತುರ್ತು

ಯುಗಾದಿಗಿದು ಹೊಸತು || ೧೧ ||

ಹದ್ದು ಮೀರದಿರೆ ಗೆಲುವು

ಗುಬ್ಬಿ ಮನ ಸಹಿ ಹಾಕಿತ್ತು

ಯುಗಾದಿಗಿದು ಹೊಸತು || ೧೨ ||

– ನಾಗೇಶ ಮೈಸೂರು

(ಎಲ್ಲರಿಗು ಯುಗಾದಿ ಹೊಸ ಸಂವತ್ಸರದ ಶುಭಾಶಯಗಳು!)

(Picture source: https://goo.gl/images/CJdCtR)

01653. ಘಜಲ್ (ಹೋರಾಟ ನಿತ್ಯ ಹೋರಾಟ)


01653. ಘಜಲ್ (ಹೋರಾಟ ನಿತ್ಯ ಹೋರಾಟ)

__________________________________________

ತುಟ್ಟಿ ಕಾಲದಲೊಂದು ಗಟ್ಟಿ ಬದುಕಾಗೆ

ಹೋರಾಟ ನಿತ್ಯ ಹೋರಾಟ

ಗಟ್ಟಿ ಬದುಕಿಗೆ ಮೆಟ್ಟಿ ನಡೆವ ಪಥ ಬೇಗೆ

ಹೋರಾಟ ನಿತ್ಯ ಹೋರಾಟ ||

ಸಾಲು ಕುರಿ ಸಂತೆ ಹೋಲಿದರೇನಂತೆ

ಬಿದ್ದವರ ತುಳಿದು ನಡೆವ ಕತ್ತಿ ಅಲುಗೆ

ಹೋರಾಟ ನಿತ್ಯ ಹೋರಾಟ ||

ಚೌಕಟ್ಟಿಲ್ಲದ ಚಿತ್ರ ಬಿಡದೆ ಹಾಕಿ ಸುತ್ತ

ಆವರಣದಲ್ಲೆ ತೊಳಲಾಟ ಸೋಗೆ

ಹೋರಾಟ ನಿತ್ಯ ಹೋರಾಟ ||

ಅನಾವರಣಕೆಂಥ ಅದ್ಭುತದ ಭೀತಿ

ಸೃಜನ ಪ್ರವೃತ್ತಿ ಅನುಮಾನದ ಕಾಗೆ

ಹೋರಾಟ ನಿತ್ಯ ಹೋರಾಟ ||

ಗುಬ್ಬಿ ಚಡಪಡಿಕೆ ನೀರಾಚೆ ಮೀನು

ಸ್ವಂತಿಕೆ ತುಟ್ಟಿ ಜೀವಂತಿಕೆ ಕುಗ್ಗಿ ಕೊರಗೆ

ಹೋರಾಟ ನಿತ್ಯ ಹೋರಾಟ ||

– ನಾಗೇಶ ಮೈಸೂರು

೧೫.೦೩.೨೦೧೮

(Picture source : Internet / social media received via Yamunab Bsy – Thanks! 🙏👍😊)

01652. ಘಜಲ್ (ಮಳೆ ಮೊದಲ ಮಳೆ)


01652. ಘಜಲ್ (ಮಳೆ ಮೊದಲ ಮಳೆ)

_______________________________

ಹನಿ ಹನಿ ಮುತ್ತು ಉದುರಿಸಿತ್ತಂತೆ ಬಾನು

ಮಳೆ ಮೊದಲ ಮಳೆ

ಉದುರಿದೊಂದೊಂದರಲು ಘಜಲಿನ ಜೇನು

ಮಳೆ ಮೊದಲ ಮಳೆ ||

ಋತುಮತಿ ಪ್ರಕೃತಿ ಕಾದ ಹೆಂಚಾಗಲು

ನೆನೆದ ವಸ್ತ್ರ ಹಿಡಿದು ನೆನೆಸೆ ಬಂತೇನು

ಮಳೆ ಮೊದಲ ಮಳೆ ||

ಫಸಲು ಟಿಸಿಲಾಗೆ ಸಸಿ ಗಿಡ ಮರ

ಗೊಬ್ಬರದುಣಿಸಿಡೆ ಖುದ್ದಾಗಿ ಚೆಲ್ಲಿದನು

ಮಳೆ ಮೊದಲ ಮಳೆ ||

ಮರೆ ರವಿ ಚಂದ್ರ ತಾರೆ ಮೇಘ ಬಿತ್ತರ

ಹರವಿ ಭುವಿ ಪೂರ ಮೆತ್ತೆ ಮಿಂಚಿಸಿ ಬೆನ್ನು

ಮಳೆ ಮೊದಲ ಮಳೆ ||

ಗುಬ್ಬಿಗೂಡಲಿ ಬೆಚ್ಚಗೆ ಹೊದ್ದು ಮಲಗಿಸೆ

ಇನಿಯನನ್ನರಸಿ ಅಭಿಸಾರಿಕೆ ಏನು ?

ಮಳೆ ಮೊದಲ ಮಳೆ ||

– ನಾಗೇಶ ಮೈಸೂರು

(Picture source via internet :

Picture 1 – https://goo.gl/images/VK4DBh

Picture 2 – https://goo.gl/images/ZbgUxj )

01651. ಜರಾಸಂಧ ಪ್ರೀತಿ..


01651. ಜರಾಸಂಧ ಪ್ರೀತಿ..

____________________________

ಎದೆ ಮುಟ್ಟಿ ಹೇಳುವೆ ಸತ್ಯ

ನೀನಷ್ಟೇ ಅಲ್ಲಿ ಅನಂತ

ಬೆರಳ್ಹಾಕಿದೆ ಎದೆಗೂ ಗೀಟು

ದಾಟಲಿಲ್ಲ ಮನ ಲಕ್ಷ್ಮಣ ರೇಖೆ ||

ಎದೆ ತಟ್ಟಿ ಹೇಳುವೆ ಸತ್ಯ

ನಿನ್ನ ಬಿಟ್ಟರಾರಿಲ್ಲವಲ್ಲಿ

ನಿನಗಷ್ಟೆ ನುಡಿದ ಬಿದಿರ ಕೊಳಲು

ನೀನಷ್ಟೆ ಕೇಳೊ ಮೋಹನ ರಾಗ ||

ಯಾಕೊ ಮಾತಷ್ಟೆ ಭಾಗ್ಯ

ಬರಿದಾಗಿ ಸದ್ದಿನೊಡಲು

ಎದೆಯೊಳಗೊತ್ತರಿಸಿ ಕೂತೇನು

ತುಂಬಲಿಲ್ಲ ಮಡಿಲು ಪ್ರೀತಿ ಕಡಲು ||

ತತ್ತರಿಸಿಯು ಉತ್ತರವಿಲ್ಲ

ಒತ್ತರಿಸಿ ಮಾತಿಗು ಮೌನ

ನಿನಗಿತ್ತರು ಅಪಾರ ಸಾಗರ

ಕ್ಷಮಿಸೆ ಸುತ್ತಾ ಲವಣದ ಕಡಲು ! ||

ಸಾಗರ ಸರೋವರವೆ

ಎದುರು ಬದುರಿನ ಪಥವೆ

ಸೀಳಿ ಜರಾಸಂಧ ಪ್ರೀತಿ ಗೌಣ

ಕಡಿದರು ಭಾಗ ಸೇರದ ಕರ್ಮ ||

– ನಾಗೇಶ ಮೈಸೂರು

೧೪.೦೩.೨೦೧೮

(Pic: from a FB post of Shylaja Ramesh – thanks madam 🙏👍😊)

01650. ಘಜಲ್ (ಅವನೆಲ್ಲೊ? ಅವನಿಲ್ಲ)


01650. ಘಜಲ್ (ಅವನೆಲ್ಲೊ? ಅವನಿಲ್ಲ)

_____________________________________

ಹುತ್ತದಾ ಬಯಕೆ ಬತ್ತದಾ ಕೊರೆತ

ಅವನೆಲ್ಲೊ? ಅವನಿಲ್ಲ

ಕಾಮನೇ ಬೆಂಕಿ ತಂಪಾಗಿಸುವ ಧೂರ್ತ

ಅವನೆಲ್ಲೊ? ಅವನಿಲ್ಲ ||

ಕುಣಿವ ಕಾಲ ಯಂತ್ರಕಿಲ್ಲ ಮಾಂತ್ರಿಕತೆ

ಕೊತಕೊತನೆ ಕುದಿತ ಮನದೊಳಸ್ವಸ್ಥ

ಅವನೆಲ್ಲೊ? ಅವನಿಲ್ಲ ||

ಸುರಿದ ಮದಿರೆ ಪ್ರತಿಬಟ್ಟಲ ಮುಖದೆ

ಹುಡುಕಿದೆ ಕಣ್ಣು ಅವನೇನೊ ಎನುತ

ಅವನೆಲ್ಲೊ? ಅವನಿಲ್ಲ ||

ಸಂತೆಯೊಳಗೆ ಬಿಚ್ಚಿದ ಗಂಟು ಬದುಕು

ಕಟ್ಟಿಕೊಡುವೆನೆಂದ ಮುಕ್ಕನ ಹುಡುಕುತ

ಅವನೆಲ್ಲೊ? ಅವನಿಲ್ಲ ||

ಗುಬ್ಬಿ ಹೃದಯದೆ ಅಲ್ಲೋಲಕಲ್ಲೋಲ

ಹಳಸಿತಲ್ಲೊ ತನು ಅಪ್ಪುಗೆಗೆ ಕಾಯುತ

ಅವನೆಲ್ಲೊ? ಅವನಿಲ್ಲ ||

– ನಾಗೇಶ ಮೈಸೂರು

೧೪.೦೩.೨೦೧೮

01649. ಘಜಲ್ (ಹೇಗೆ ಸೇರಲೆ ನಿನ್ನ ?)


01649. ಘಜಲ್ (ಹೇಗೆ ಸೇರಲೆ ನಿನ್ನ ?)

______________________________________

ಪಡಖಾನೆ ಬೀದಿ ತುಂಬಾ ಕುಡುಕರದೇ ಕಾಟ..

ಹೇಗೆ ಸೇರಲೆ ನಿನ್ನ ?

ಪಡ್ಡೆ ಹುಡುಗರ ಮಧ್ಯೆ ಸರಿ ನಡಿಗೆಯೆ ತೂರಾಟ..

ಹೇಗೆ ಸೇರಲೆ ನಿನ್ನ ? ||

ಕೊಟ್ಟ ಮಾತಿಗೆ ತಪ್ಪದೆಲೆ ಹೊತ್ತು ಮೀರದ ಹಾಗೆ

ಸೇರಲೆಂತೆ ನಿನ್ನ ತಡವರಿಸೊ ಕಾಲ ಚೆಲ್ಲಾಟ..

ಹೇಗೆ ಸೇರಲೆ ನಿನ್ನ ? ||

ಹೇಗೆ ಹುಡುಕಲೆ ಮಬ್ಬು ಕತ್ತಲಲಿ ನಿನ್ನಯ ಮಹಲು

ಮದಿರೆ ಮತ್ತಲಿ ಮಂಕು ದೀಪಕು ಅಮಲು ಪರದಾಟ..

ಹೇಗೆ ಸೇರಲೆ ನಿನ್ನ ? ||

ದಾರಿ ಕೊಡದು ಹಾಳು ಮಳೆ ಕೆಸರ ರಾಡಿ ಕೊಚ್ಚೆ

ರಚ್ಚೆ ಮನದುಪಶಮನಕೆ ನಿನ್ನ ತುಟಿ ಮದ್ದೇ ಉತ್ಕೃಷ್ಟ..

ಹೇಗೆ ಸೇರಲೆ ನಿನ್ನ ? ||

ಸೇರಿ ನಿನ್ನ ಬೆಚ್ಚನೆ ಮಡಿಲು ಮಳೆಯಾಗುವಾಸೆ

ಗುಬ್ಬಿ ಗೂಡಿಗೆ ಕಾತರಿಸಿ ಬೆರೆಸೆ ಉಸಿರಾಟ..

ಹೇಗೆ ಸೇರಲೆ ನಿನ್ನ ? ||

– ನಾಗೇಶ ಮೈಸೂರು

೧೪.೦೩.೨೦೧೮

(Picture source : Internet / social media)

01648. ಘಜಲ್


01648. ಘಜಲ್

_______________________

ನಿನ್ನ ನೆನಪ ಮದಿರೆ ಕುಡಿದೆ..

ಬರಲೆಂತು ಹೇಳೆ ನಿದಿರೆ?

ನಶೆ ಕಾಡಿ ನಿದಿರೆ ಕದ್ದಿದೆ..

ಬರಲೆಂತು ಹೇಳೆ ನಿದಿರೆ? ||

ನೆನಪಿರದ ಹೊತ್ತು ಕಣ್ಣ ನಶೆ

ಕೊಲ್ಲುವ ಮತ್ತಲ್ಲೆ ಇತ್ತು ಕುಡಿದೆ..

ಬರಲೆಂತು ಹೇಳೆ ನಿದಿರೆ? ||

ನಿದಿರೆ ಕದ್ದು ಮುಚ್ಚಲೆಲ್ಲಿ ಕಣ್ಣು

ಕನಸಲಿ ನಿನ್ನನ್ನೆ ಹೀರಿದ್ದೆ..

ಬರಲೆಂತು ಹೇಳೆ ನಿದಿರೆ? ||

ಸಿಕ್ಕೆ ಸಿಗುವೆಯೆಂದು ಬಿಡದೆಲೆ

ನಿನ್ನ ಜಾಡಲಿ ನಡೆದಿದ್ದೆ..

ಬರಲೆಂತು ಹೇಳೆ ನಿದಿರೆ? ||

ಗುಬ್ಬಿ ಎಂತೊ ಸೇರಿ ಪಡಖಾನೆ

ನಿನ್ನ ನೆನೆದು ಮದಿರೆ ಕುಡಿದೆ..

ಬರಲೆಂತು ಹೇಳೆ ನಿದಿರೆ? ||

– ನಾಗೇಶ ಮೈಸೂರು

೧೩.೦೩.೨೦೧೮

(Picture source : Internet / social media – received via FB friends – thank you 🙏😊👍)

01647. ಘಜಲ್(ಹಾಳು ಶರಾಬಾದರು ಸುರಿ ಬಾ..)


01647. ಘಜಲ್(ಹಾಳು ಶರಾಬಾದರು ಸುರಿ ಬಾ..)

________________________________________________

ಪ್ರೇಮದ ಬಟ್ಟಲು ಬರಿದಾಗಿದೆ ಸಖಿ ನೀ ತುಂಬಿಕೊ ಬಾ.. ಹಾಳು ಶರಾಬಾದರು ಸುರಿ ಬಾ

ಬರಿದಾಗಿಸದಿರು ಮನಸೆಂತು ಬರಿದಾದೀತು ಸುಲಭ..? ಹಾಳು ಶರಾಬಾದರು ಸುರಿ ಬಾ ||

ಮದಿರೆಯಲ್ಲ ಮದಿರೆ ಮತ್ತೇರಿಸದಲ್ಲ ಅಪಶಕುನವೆ

ನೀ ಬಂದೊರಗಿದ ಗಳಿಗೆ ಮದಿರೆಗು ಮತ್ತು ಕೊಡು ಸೌರಭ.. ಹಾಳು ಶರಾಬಾದರು ಸುರಿ ಬಾ ||

ಬಟ್ಟಲ ತುಂಬಿದ ದ್ರವ ದ್ರವಿಸಿದೆ ಎದೆಯ ಗುಡಿಯಲಿ ಬೆಂಕಿ

ಕನ್ನಡಿ ಕಾಣಿಸಿದೆ ನಿನ್ನದೆ ಮೊಗವ ಹುಸಿ ಬಿಂಬಕು ಹಬ್ಬ .. ಹಾಳು ಶರಾಬಾದರು ಸುರಿ ಬಾ ||

ನೆನಪುಗಳ ರಾಶಿ ಕಾಶಿ ಯಾತ್ರೆ ಮನ ಖಾಲಿ ಚಿಟ್ಟೆ

ಬರಿ ಸದ್ದಾಗುತ ತಿರುಳಿಲ್ಲ ಒಳಗೆ ಗಾಳಿಗಿಟ್ಟ ಡಬ್ಬ.. ಹಾಳು ಶರಾಬಾದರು ಸುರಿ ಬಾ ||

ಮರೆಯಲೆಂದೆ ಕುಡಿದ ಮದಿರೆ ನನಗೆ ಹಿಡಿಸಿತೆ ಮರುಳು

ಕಂಗೆಟ್ಟ ಗುಬ್ಬಿ ಖಾಲಿ ಬಟ್ಟಲಲು ಹುಡುಕಿ ನಿನ್ನದೆ ಹೊಲಬ.. ಹಾಳು ಶರಾಬಾದರು ಸುರಿ ಬಾ ||

– ನಾಗೇಶ ಮೈಸೂರು

೧೧.೦೩.೨೦೧೮

(Last Picture source : Internet / social media)

01646. ಇದು ಘಜಲ್ಲು, ಇದು ಘಜಲ್ಲು..!


01646. ಇದು ಘಜಲ್ಲು, ಇದು ಘಜಲ್ಲು..!

________________________________________

ಮೂರ್ಖತನದ ಪರಮಾವಧಿ ಯಾವುದು? ಘಜಲೆಂದರೇನೆಂದೇ ಗೊತ್ತಿರದವನು ಘಜಲಿನ ಮೇಲೊಂದು ಘಜಲ್ ಬರೆಯಲು ಹೊರಡುವುದು! ಅಂತದ್ದೊಂದು ಮಹಾಪಾಪವನ್ನು ಮೊದಲೇ ಮನಸಾರೆ ಮನ್ನಿಸಿ ನಂತರ ಓದಿ – ಅರ್ಥವಾದರೆ ಪುಣ್ಯ , ಆಗದಿದ್ದರೆ ನಷ್ಟವೇನಿಲ್ಲ! 😁

ಇದು ಘಜಲ್ಲು, ಇದು ಘಜಲ್ಲು..!

________________________________

ಎರಡು ಸಾಲ ಪಂಕ್ತಿ ಸರಿಸಮದ ಮಾತ್ರೆ ಸಾಲು..ಇದು ಘಜಲ್ಲು ಇದು ಘಜಲ್ಲು

ಪಂಕ್ತಿ ಕೊನೆ ರಿಂಗಣ ಅದದೇ ಅನುರಣ ಅಮಲು.. ಇದು ಘಜಲ್ಲು ಇದು ಘಜಲ್ಲು ||

ಅನುರಣದ್ಹಿಂದೆ ಇರಬೇಕೊಂದೆ ಪ್ರಾಸ ಜಿಗುಟಲು

ಪದ ಮರುಕಳಿಸಬಿಡದ ತ್ರಾಸ ಹೆಣಗಿಸಲು.. ಇದು ಘಜಲ್ಲು ಇದು ಘಜಲ್ಲು ||

ಮೊದಲ ಪಂಕ್ತಿಗೆ ಪ್ರತಿಸಾಲಿಗು ರಿಂಗಣ ಫಸಲು

ಮಿಕ್ಕ ಪಂಕ್ತಿಗೆ ಅನುರಣಿಸೊಮ್ಮೆ ಸಾಕಷ್ಟೆ ಘಜಲ್ಲು.. ಇದು ಘಜಲ್ಲು ಇದು ಘಜಲ್ಲು ||

ಪಂಕ್ತಿಯಿಂದ ಪಂಕ್ತಿಗಿರಬೇಕಿಲ್ಲ ಕೊಂಡಿ ಹೊಸೆಯಲು

ಪ್ರೀತಿ ಪ್ರೇಮ ಮದಿರೆ ವಿರಹ ಮೃದುಬರಹ ಸಿಕ್ಕಲು.. ಇದು ಘಜಲ್ಲು ಇದು ಘಜಲ್ಲು ||

ಕೊನೆ ಪಂಕ್ತಿಗಿರಲಿ ಗುಬ್ಬಿ ಕಾವ್ಯನಾಮದ ಸೊಲ್ಲು

ಪಡಖಾನೆ ಸಾಕಿ ಮತ್ತಿನ ಗಾನದ ಘಮಲು.. ಇದು ಘಜಲ್ಲು ಇದು ಘಜಲ್ಲು ||

– ನಾಗೇಶ ಮೈಸೂರು

೧೧.೦೩.೨೦೧೮

(Picture source: https://goo.gl/images/356iNq)