00763. ಪ್ರೀತಿಪಾತ್ರರಿಗೆ, ಪ್ರೀತಿಯಿಂದರ್ಪಿತ..


00763. ಪ್ರೀತಿಪಾತ್ರರಿಗೆ, ಪ್ರೀತಿಯಿಂದರ್ಪಿತ..
___________________________________

ಪ್ರೀತಿಪಾತ್ರರನ್ನು ಸಂಕಟ ಕಾಡುವ ಹೊತ್ತಲ್ಲಿ ಅನಿಸುವುದೊಂದೆ ಅನಿಸಿಕೆ – ಅವರನ್ನು ಬಿಟ್ಟು ನಮ್ಮನ್ನು ಕಾಡಬಾರದಿತ್ತೆ ಆ ಯಾತನೆ ? ಎಂದು. ಅದು ಪ್ರೀತಿಯ ರೀತಿ.. ಆದರೆ ಹಾಗೇನಾದರು ಆಗಿದ್ದರೆ, ಅದೇ ಪ್ರೀತಿಪಾತ್ರರೆ ನಮ್ಮನ್ನು ಕಾಪಿಡುವ ಸಂಕಷ್ಟದಲ್ಲಿ ಸಿಕ್ಕಂತಾಗುತ್ತಿತ್ತಲ್ಲವೆ ? ಯಾವುದೆ ಕೋನದಲ್ಲಿ ನೋಡಿದರು ಅದರದರದೆ ಕೊರಕಲು, ಓರೆಕೋರೆಗಳು.. ಅದೇ ಜಗದ ಅಲಿಖಿತ ನಿಯಮವಿರಬಹುದು.. ಆದರೆ ಕೊನೆಮುಟ್ಟದ ಆಶಾವಾದ, ಅದಮ್ಯ ಜೀವನ ಪ್ರೀತಿಗಳು ಎಂದೆಂದಿಗು ಜೊತೆಯಲಿರುವಂತೆ ನೋಡಿಕೊಳ್ಳುವ ಪ್ರೀತಿ, ವಾತ್ಸಲ್ಯ, ಮೋಹಗಳ ಮಾಯೆ ಈ ಬದುಕಿನ ಜೀವಸೆಲೆಯ ಚೈತನ್ಯವನ್ನು ನಿರಂತರವಾಗಿಡಿಸುತ್ತವೆ – ಕೊನೆಯುಸಿರಿನ ಛಲ ಕೈ ಕೊಡುವ ತನಕ.

ಅದೆಲ್ಲದರ ನಡುವೆ ಕಾಡುವ ಯಾತನೆ – ಏನೂ ಮಾಡಲಾಗದ ಅಸಹಾಯಕತೆಯ ‘ಗಿಲ್ಟಿ’ ಫೀಲಿಂಗ್ ಅರ್ಥಾತ್ ತಪ್ಪಿತಸ್ತ ಭಾವನೆ.


ನನ್ನ ಪ್ರೀತಿಯ ಮಗುವೆ…
______________________________

ನನ್ನ ಪ್ರೀತಿಯ ಮಗುವೆ, ಕಾದಿರುವೆ ನಿನ್ನಾ ನಗುವಿಗೆ
ಎಲ್ಲ ಮರೆತಂತಿರುವೆ, ಯಾರ ಶೋಧನೆಗೆ ?
ನಿನ್ನ ನೀನರಿಯದೆ ಸಕಲ, ನೀನಾಗುವುದುಂಟೇನು ?
ನೀರಿನ್ಹೊದಿಕೆಯನ್ಹೊದ್ದ ಮೀನಾಗಿ ಬರಲೇನು ತಡೆ ?

ಕಾಣದಪರಿಮಿತ ನಿನ್ನ, ಚಿಂತನೆಯ ವ್ಯಾಪ್ತಿಯಲಿ
ಮೂಡಿ ಬರುತಿವೆ ಚಿತ್ರ, ಚಿತ್ತಾರಗಳ ಜಾತ್ರೆ ಖಾತ್ರಿ
ಹಿಡಿಯಲ್ಹಿಡಿದು ಬೊಗಸೆ, ತುಂಬಿಸಬಹುದು ಆಗಸ
ನೀನು ನೀನಾಗಿ ಧರೆಗೆ, ಬಂದಿಳಿದ ಆ ದಿವಸ ಕ್ಷಣದೆ..

ನೋಡದಿರು ನಿನ್ನಾ ನೋಟ, ಕಾಡುತಿರೆ ಅತಂತ್ರ ನಾ
ತಪ್ಪಿತಸ್ಥನ ಹಾಗೆ ನಿಲಿಸಿ, ಕಟಕಟೆಯಲಿ ವಿಚಾರಿಸುತ
ಕೇಳಿದರೆ ಪ್ರಶ್ನೆಯ ರಭಸ, ಉತ್ತರಿಸಲೇನು ತಬ್ಬಿಬ್ಬಲಿ ?
ತಬ್ಬಲಿಯಾದಂತೆನಿಸೆ, ವಾದಿಸಲೇನು ತಗ್ಗಿಸಿ ತಲೆಯ..

ತಬ್ಬುವೆ ಮೌನ ಪ್ರತಿಗಳಿಗೆ, ಕಾಡುವ ಮಾತಿಗದೆ ಜಾಗ
ಮೌನ ಮೌನದ ಸಂವಾದ, ಪ್ರಶ್ನೋತ್ತರ ಜಗ ನಿರುತ್ತರ
ಹುಡುಕುತಿಹೆ ಒಳಗೆ ಹೊರಗೆ, ಕಂಡ ಕಂಡ ಕಲ್ಲುಗಳಲಿ
ಅಡಗಿರಬಹುದೇನೊ ನಿನ್ನ, ಸರಳ ಸಹಜ ನಗೆಯದಿರು..

ಹೆದರದಿರು ಬಿಡು ತಲ್ಲಣ, ಮುಡಿಪಿಡುವೆ ನನ್ನ ಜೀವನ
ನೀನಾಗುವಂತೆ ಮುಗಿಲ, ಮಡಿಲಿನ ತಾರೆಯ ಸಂಭ್ರಮ
ಇಂದಿದ್ದರೇನಂತೆ ಮಗು, ನಲಿವು ಸಂಕಟದ ಸೆರಗಲಿ
ಬಂದೆ ಬರಿಸುವೆ ನಾಳೆ, ಹೊಸತಲಿ ನಗುವಿನ ಹಾಳೆ..

– ನಾಗೇಶ ಮೈಸೂರು

(Picture source : http://kleinmeli.deviantart.com/art/Father-and-Son-180403612)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮ ಟಿಪ್ಪಣಿ ಬರೆಯಿರಿ