01157. ಬದುಕಿನ ಪಾಕಶಾಲೆ


01157. ಬದುಕಿನ ಪಾಕಶಾಲೆ
_________________________


ಕೊಚ್ಚುತ್ತಿದೆ ಬದುಕು ಮಚ್ಚಲಿ
ಎಳೆಕಾಯ ಎಳನೀರನು ಸುಲಿವಂತೆ
ಬಿಚ್ಚಿದರು ಜುಂಗಿನ ಪದರ ಕಾಯ
ಚಿಪ್ಪೆಲ್ಲೊ ಮಾಯ ತರಿದೆಲ್ಲ ತಿರುಳ..

ಬಿಚ್ಚುತಿದೆ ಉಳ್ಳಾಗಡ್ಡೆಯ ಹಾಗೆ
ಪದರ ಪದರ ಸಿಪ್ಪೆ ಬೆತ್ತಲೆ ಸೇವೆ
ಯಾರಾರ ಮುಂದಿನ ಸರಕಾಗಿ ನಿತ್ಯ
ಸಂಭಾಳಿಸಬೇಕಿದೆ ಕಣ್ಣೀರಿನ ಸಾಂಗತ್ಯ

ಹೆಚ್ಚುತ್ತಿದೆ ಸೊಪ್ಪು ತರಕಾರಿಯ ಹಾಗೆ
ಒಟ್ಟು ಬಿಡದೆ ಜುಟ್ಟು ಕತ್ತರಿಸಿ ಒತ್ತಟ್ಟಿಗಿರಿಸಿ
ಬಿಡುವಂತಿಲ್ಲ ನಿಟ್ಟುಸಿರು ಮುಗಿದಾಯ್ತೆಂದು
ತಬ್ಬೆತ್ತಿಕೊಂಡು ಕುದಿವ ನೀರಲಿ ಬೇಯಿಸುತ..

ನಿಲುವುದಿಲ್ಲ ಅಷ್ಟಕೆ ಬದುಕ ಅಟ್ಟಹಾಸ
ಕಟ್ಟೆತ್ತಿಕೊಂಡು ಬೀಸುಕಲ್ಲು ರುಬ್ಬುಗುಂಡಲಿ
ಜಬ್ಬಿ ಗುದ್ದಿ ಕುಟ್ಟಿ ಒನಕೆಯ ಒರಳಾಡಿಸಿ
ಪುಡಿಗುಟ್ಟಿಸಿ ಜಾಡಿ ಬಂಧನದೆ ದಬ್ಬಿ ಅಮುಕ್ತ..


ಆಧುನಿಕ ಯುಗದಲ್ಲಿನ್ನೂ ಅಧ್ವಾನ
ಮಿಕ್ಸಿ ಗ್ರೈಂಡರ್ ಕಟ್ಟರು ಸ್ಲಯ್ಸರು ಇತ್ಯಾದಿ
ಮೋಟಾರಿನ ನೂರುಪಟ್ಟು ವೇಗದ ತೇಜಿ
ಪಾನೀಯವಾಗಿ ಯಾರದೊ ತುಟಿಪಾಲು !


– ನಾಗೇಶ ಮೈಸೂರು
೨೭.೦೨.೨೦೧೭

(Picture source: internet / social media)

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

2 thoughts on “01157. ಬದುಕಿನ ಪಾಕಶಾಲೆ”

ನಿಮ್ಮ ಟಿಪ್ಪಣಿ ಬರೆಯಿರಿ