01633. ನಿಯಮಬದ್ಧ ನಿಯಮ


01633. ನಿಯಮಬದ್ಧ ನಿಯಮ

________________________________

ಹಾಕಲೆಂತೊ ನಿನಗೆ ಪ್ರೀತಿಯಲಿ

ನಿಯಮಬದ್ಧ ನಿಯಮ ?

ಮುರಿಯುವುದೆ ಪ್ರೀತಿಯ ಕಾನೂನು

ಹೆಸರದಕೆ ಸಂಯಮ ! || ೦೧ ||

ಶಿಸ್ತಿನಾ ಸಿಪಾಯಿ ಬದುಕಿನಲಿ

ಬೇಕಲ್ಲ ಬದುಕನಿವಾರ್ಯ

ಸಿಕ್ಕೆಡೆ ಸಿಕ್ಕಿದುಡುಪು ತೊಡುತ

ಮುಖವಾಡ ಸುಲಭೋಪಾಯ || ೦೨ ||

ಸಿಕ್ಕಿದರೆ ಸುಲಭದಲಿ ಸರಕು

ಬದಿಗೊತ್ತುವುದೆ ಹೆಚ್ಚು

ಸಿಕ್ಕದ್ದ ಬೆನ್ನಟ್ಟುವ ತೊಳಲಾಟ

ಬಿಡಿಸಲಾಗದಾ ಹುಚ್ಚು || ೦೩ ||

ಬಯಸಿದುದರಾ ಹಿಂದೆ ನಡೆ

ಬೇಕಷ್ಟಿಷ್ಟು ಸಡಿಲತೆ

ಇರಬೇಕು ಎಚ್ಚರಿಕೆ ಇನಿತು

ಆಗದಂತೆ ದುರ್ಬಲತೆ || ೦೪ ||

ನಿಯಮಗಳೆ ಬದುಕಾಗೆ ಕಠಿಣ

ಇರದಿರೆ ಬಾಳೆ ನಿತ್ರಾಣ

ಎಷ್ಟಿರಲು ಸರಿ ತಪ್ಪು ಸಂವಾದ

ಕೊನೆಯಾಗದಲ್ಲ ವಿವಾದ || ೦೫ ||

– ನಾಗೇಶ ಮೈಸೂರು

(Picture source:

Pic1: https://goo.gl/images/EE4ryh

Pic2: https://goo.gl/images/1wdqMD)

01632. ಹೋಲಿ, ಬಂದು ಹೋಗಲಿ..


01632. ಹೋಲಿ, ಬಂದು ಹೋಗಲಿ..

__________________________________

ಹೋಲಿಗೆ ಬಣ್ಣ ಹಚ್ಚಲೆ ?

ಹಚ್ಚದಂತೆ ಮೊಗವನು ಮುಚ್ಚಲೆ ?

ರಂಗಿಲ್ಲದೆ ಕೆನ್ನೆ ಹೋಲಿಯಾಗಿಸಲೆ ?

ರಂಗಿ ರಂಗಿನಾ ಹಂಗು ನಿನಗೇಕೆ ಬೇಕಲೆ ? || ೦೧ ||

ಬರಿ ಹಾಳು ಮಾತಿನ ಧೀರ

ನೀ ಆಗಲೆಂದು ಬಂದೆ ಸರದಾರ

ನಿಜ ಹಚ್ಚೆಂದೆ ಬಣ್ಣ ಬದುಕಿಗೆ ಲೇಪನ

ಹಚ್ಚೆಲ್ಲ ಉಡುಗೆ ಮೈಯಾಗಿಸಿದೆ ಮಲಿನ || ೦೨ ||

ಮಲಿನವಲ್ಲ ಅಮಲಿನಾ ಆಟ

ಕುಲೀನರಲ್ಲು ಸಹಜದ ಕುಣಿದಾಟ

ಮಕ್ಕಳಂತಾಗೆ ವರ್ಷಕ್ಕೊಮ್ಮೆ ಮನಸಾ

ಒಪ್ಪುತ್ತೆಲ್ಲ ಎಗರಾಡದೆ ತೋರೆ ಅವಕಾಶ || ೦೩ ||

ಇದು ಹುಡುಗಾಟದ ವಯಸಲ್ಲ

ಎರಚಿ ಅರಚೊ ಮಂಗನಾಟ ಸಲ್ಲ

ಬೇಕಿದ್ದರೆ ಬಾರೊ ಬರಿಸೊ ಮನದಲ್ಲಿ

ಸಂತಸದ ಹೋಲಿ ನೋವೆಲ್ಲಾ ಹೋಗಲಿ || ೦೪ ||

ಹೆಸರೇನಾಗಲಿ ಬೇಕು ಒಡನಾಟ

ಹೋಲಿ ನೆಪ ಜತೆಗಿರಲೆ ರಸದೂಟ

ಮರೆತೆಲ್ಲ ಮೈ ಮರೆಯಲೊಂದು ಕ್ಷಣ

ನೆನೆದರೆ ಸಾಕೆ ನೆನಪಲ್ಲೆ ನಗುವ ಮನ || ೦೫ ||

– ನಾಗೇಶ ಮೈಸೂರು

೦೨.೦೩.೨೦೧೮