01646. ಇದು ಘಜಲ್ಲು, ಇದು ಘಜಲ್ಲು..!


01646. ಇದು ಘಜಲ್ಲು, ಇದು ಘಜಲ್ಲು..!

________________________________________

ಮೂರ್ಖತನದ ಪರಮಾವಧಿ ಯಾವುದು? ಘಜಲೆಂದರೇನೆಂದೇ ಗೊತ್ತಿರದವನು ಘಜಲಿನ ಮೇಲೊಂದು ಘಜಲ್ ಬರೆಯಲು ಹೊರಡುವುದು! ಅಂತದ್ದೊಂದು ಮಹಾಪಾಪವನ್ನು ಮೊದಲೇ ಮನಸಾರೆ ಮನ್ನಿಸಿ ನಂತರ ಓದಿ – ಅರ್ಥವಾದರೆ ಪುಣ್ಯ , ಆಗದಿದ್ದರೆ ನಷ್ಟವೇನಿಲ್ಲ! 😁

ಇದು ಘಜಲ್ಲು, ಇದು ಘಜಲ್ಲು..!

________________________________

ಎರಡು ಸಾಲ ಪಂಕ್ತಿ ಸರಿಸಮದ ಮಾತ್ರೆ ಸಾಲು..ಇದು ಘಜಲ್ಲು ಇದು ಘಜಲ್ಲು

ಪಂಕ್ತಿ ಕೊನೆ ರಿಂಗಣ ಅದದೇ ಅನುರಣ ಅಮಲು.. ಇದು ಘಜಲ್ಲು ಇದು ಘಜಲ್ಲು ||

ಅನುರಣದ್ಹಿಂದೆ ಇರಬೇಕೊಂದೆ ಪ್ರಾಸ ಜಿಗುಟಲು

ಪದ ಮರುಕಳಿಸಬಿಡದ ತ್ರಾಸ ಹೆಣಗಿಸಲು.. ಇದು ಘಜಲ್ಲು ಇದು ಘಜಲ್ಲು ||

ಮೊದಲ ಪಂಕ್ತಿಗೆ ಪ್ರತಿಸಾಲಿಗು ರಿಂಗಣ ಫಸಲು

ಮಿಕ್ಕ ಪಂಕ್ತಿಗೆ ಅನುರಣಿಸೊಮ್ಮೆ ಸಾಕಷ್ಟೆ ಘಜಲ್ಲು.. ಇದು ಘಜಲ್ಲು ಇದು ಘಜಲ್ಲು ||

ಪಂಕ್ತಿಯಿಂದ ಪಂಕ್ತಿಗಿರಬೇಕಿಲ್ಲ ಕೊಂಡಿ ಹೊಸೆಯಲು

ಪ್ರೀತಿ ಪ್ರೇಮ ಮದಿರೆ ವಿರಹ ಮೃದುಬರಹ ಸಿಕ್ಕಲು.. ಇದು ಘಜಲ್ಲು ಇದು ಘಜಲ್ಲು ||

ಕೊನೆ ಪಂಕ್ತಿಗಿರಲಿ ಗುಬ್ಬಿ ಕಾವ್ಯನಾಮದ ಸೊಲ್ಲು

ಪಡಖಾನೆ ಸಾಕಿ ಮತ್ತಿನ ಗಾನದ ಘಮಲು.. ಇದು ಘಜಲ್ಲು ಇದು ಘಜಲ್ಲು ||

– ನಾಗೇಶ ಮೈಸೂರು

೧೧.೦೩.೨೦೧೮

(Picture source: https://goo.gl/images/356iNq)

01645. ಘಜಲ್ (ಬಸಿರೂರು, ಬಾಳೇಕಟ್ಟೆ, ಬೂದಿಗುಂಡಿ)


01645. ಘಜಲ್ (ಬಸಿರೂರು, ಬಾಳೇಕಟ್ಟೆ, ಬೂದಿಗುಂಡಿ)

__________________________________________

(ನನಗೆ ಘಜಲ್ ಬರೆಯಲು ಬರದು, ಸುಮ್ಮನೆ ಪುಟ್ಟದೊಂದು ಆ ಮಾದರಿಯಲ್ಲಿ ಯತ್ನ)

ಹುಡುಕಾಟದ ಕಣ್ಣೇಕೊ ಕಾಣದೆ ಕಂಗಾಲು.. ಇದೆಂತದಿದು ಬದುಕು?

ಮಧುಶಾಲೆಯಿಲ್ಲ ಸಖಿಯಿಲ್ಲ ಮಬ್ಬು ಮತ್ತು ಕತ್ತಲು.. ಇದೆಂತದಿದು ಬದುಕು?

ಯಾರಿಟ್ಟ ಬಿತ್ತನೆ ಬೀಜ ಬಸರೂರ ಬಗಲು

ಬಾಣಂತಿ ಆರೈಕೆ ಕಂದನಾಕ್ರಂದನ ಮುಗಿಲು.. ಇದೆಂತದಿದು ಬದುಕು?

ಒಗೆದರಲ್ಲ ಬಾಳೇಕಟ್ಟೆ ದಾರಿಗೆ ಬರಿ ಕಲ್ಲು

ಹೂವಿನ ಎಸಳಿಲ್ಲದ ರೆಂಬೆ ಮೊನೆ ತರಚಿ ಗುಲ್ಲು.. ಇದೆಂತದಿದು ಬದುಕು?

ಹೊತ್ತಾಯ್ತು ಬೂದಿಗುಂಡಿಗೆ ಹಾಕಿ ಮುಚ್ಚುವ ಮೊದಲು

ಮದಿರೆ ಕುಡಿದು ಸೇರಲಿಲ್ಲ ಮಣ್ಣಾಗಿ ಮಡಿಲು.. ಇದೆಂತದಿದು ಬದುಕು?

ಬಸಿರೂರಿತ್ತು ಬಾಳಕಟ್ಟೆ ಜೀಕಿತ್ತೆ ಮತ್ತಲು

ಬೂದಿಗುಂಡಿ ನಿನ್ನ ಪ್ರೀತಿ ಗುಬ್ಬಿ ನೆನಪು ತಬ್ಬಲು.. ಇದೆಂತದಿದು ಬದುಕು?

– ನಾಗೇಶ ಮೈಸೂರು

೧೧.೦೩.೨೦೧೮

(Picture source : Wikipedia)

01644. ನೀರ್ನೆಲದೀ ಅಳಲು..


01644. ನೀರ್ನೆಲದೀ ಅಳಲು..

________________________________

ನೋಡತ್ತ, ನೋಡಿತ್ತ, ನೋಡೆತ್ತ ?

ನೋಡಲ್ಲಿ ಇಲ್ಲಿ ಹಿಂದೆ ಮುಂದೆ..

ಸಾಗರವೊ ಸಾಗರ ! ನಿಲಿಸಿದೆ

ಗರ ಬಡಿಸಿ ತೋರದೆ ನೆಲೆ ತೀರ || ೦೧ ||

ಏಕಾಂಗಿ ಒಬ್ಬಂಟಿ ಏಕಾಂತ

ಸುತ್ತುವರೆದ ಜಲರಾಶಿ ಆದ್ಯಂತ

ಮುತ್ತುವ ಪರಿ ಧಾಳಿ ಮೋಡದ ಖುದ್ಧು

ಮಳೆಯಾಗಿ ಮತ್ತೇರಿಸಿ ನೀರಲೆ ಪಾತಾಳ || ೦೨ ||

ಯಾರುಂಟು? ಯಾರಿಲ್ಲ? ಸುತ್ತೆಲ್ಲ

ಇದ್ದರು ಇರದ ಜೀವರಾಶಿ ಗದ್ದಲ ಸದ್ದು

ಬಂದೆರಗುತ ಕಚ್ಚುತ ಮುಳುಗೇಳಿಸುತ

ನೆಂಟರಿಷ್ಟಸಖ ಬಂಧುಗಳಿದ್ದು ಅವ್ಯಕ್ತ || ೦೩ ||

ಹುಡುಕಲೆಂತವನೊ ಅವಳೊ ಅದು

ಮುಳುಗಲುಸಿರು ಕಟ್ಟಿಸೊ ತಕರಾರು

ಮುಟ್ಟಬಿಡದು ತಲೆಯೆತ್ತಿ ಮೊರೆಯಿತ್ತರು

ಗಗನದ ಬಯಲೆ ಅಡಚಣೆ ಅಡೆತಡೆ ಶೋಧ || ೦೪ ||

ಅಸಹಾಯಕತೆಯೊ ಅರಾಜಕತೆಯೊ

ನಿಂತೊಂದೆ ಜೀವ ಮಿಸುಕಾಡುವ ಪರಿ

ಪರಿಕಿಸಲೊ, ಇರುಕಿಸಲೊ ಬಿಕ್ಕಟ್ಟಲಿ

ನಿರಂತರ ಅನ್ವೇಷಣೆ ಶೋಧ ನೀರ್ನೆಲದೆ || ೦೫ ||

– ನಾಗೇಶ ಮೈಸೂರು

೧೧.೦೩.೨೦೧೮

(Photo source: taken from a FB post of Anvesha Anu – thank you 🙏😊👍)