01639. ಸಮನ್ವಯ


01639. ಸಮನ್ವಯ

______________________

ಮಂತ್ರ ಹೇಳುವ ಬಾಯಿ

ಮನಸೆಲ್ಲೊ ಬಡಪಾಯಿ

ನೀನೆಲ್ಲೊ ಅವನೆಲ್ಲೊ ?

ಗಮನ ಐಹಿಕಕೆ ತುರಾಯಿ ||

ಮಣಮಣಿಸುತ ಶ್ಲೋಕ

ತಲ್ಲೀನ ನಾಲಿಗೆ ಲೆಕ್ಕ

ಮನದ ಕೊಂಡಿ ನಿದಿರೆ

ತಾಳಮೇಳ ಅನ್ಯಮನಸ್ಕ ||

ಉಚ್ಚಾರದ ನಡುವೆ ಕೋವಿ

ಸಿಡಿಸುವ ಮನ ಮನವಿ

ಲೌಕಿಕದೆಲ್ಲ ಚಿಂತೆ ಚಿಂತನೆ

ತಳ ಕಾಣದ ಹಾಳು ಬಾವಿ ||

ನಡುವೆ ತಟ್ಟನಾಗಿ ಎಚ್ಚರ

ಹಳಿ ತಪ್ಪಿದ್ದಾಗಿ ಗೋಚರ

ಅಗೋಚರ ತಪ್ಪಿದ್ದೆಲ್ಲಿ ಮಧ್ಯೆ

ಮತ್ತೆ ಮೊದಲಿಂದುಚ್ಚಾರ ||

ಮತ್ತೆ ಮತ್ತೆ ಮರುಕಳಿಕೆ

ದಾರಿ ತಪ್ಪಿಸುವಾಕಳಿಕೆ

ಸಾಧಿಸಲೆಂತೊ ಸಮನ್ವಯ

– ಸಂಯೋಜಿತ ನಡುವಳಿಕೆ ? ||

– ನಾಗೇಶ ಮೈಸೂರು

೦೬.೦೩.೨೦೧೮

(Picture sourc: https://goo.gl/images/bte3NY)

01638. ಪರ್ಣ-ಸಂಕಟ


01638. ಪರ್ಣ-ಸಂಕಟ

______________________

ಭೃಂಗ ಸಖ ಅನಂಗ ಮುಖ

ಎಲೆಯತ್ತದೇನು ಅಭಿಮುಖ ?

ಬೆನ್ನಟ್ಟುವವ ನೀ ಹೂವಿನ ಸಂಗ

ಮುನಿಸೇನೊ ದೊರೆ ಅವಳತ್ತ ? ||

ನೀ ಕಾಲೂರಿದೆಡೆ ಕಾವೇರಿತ್ತಾ

ಪರಾಗ ರೇಣು ಕಣ ಕಣ ಕಣಜ

ಕಾಲೂರಿದರೆನ್ನ ಮೇಲೇನು ಸುಖ?

ಊರಬಾರದೆ ಕಾದಿಹಳು ಕುಸಮಕ್ಕ ? ||

ಬಿಡುಬಿಡು ಭ್ರಮೆ ನಾನಲ್ಲ ಉಣಿಸು

ನೀ ಬಿತ್ತೆ ಬೀಜ ಸೃಷ್ಟಿಯ ಗುನುಗು

ಹೀರಲ್ಲಿ ಮಧು ಪಾನೀಯ ಸವಿ ಸವಿ

ಕಹಿಯುಂಡಿಲ್ಲಿ ಕಿವುಚಲೇಕೊ ಮುಸುಡಿ ? ||

ನಾ ಪರ್ಣ-ಕುಟಿ ಒಲೆಯನ್ಹೊತ್ತಿಸುವೆ

ಪಂಚಭೂತ ಸತ್ವ ಉಡುಗೆ ತೊಡಿಗೆ

ಮಾಡಿದಡಿಗೆಯುಣಿಸುತಲಿ ಜಗಕಾಧಾರ

ಬಿಟ್ಟೆನ್ನ ಪಾಡಿಗೆ ನಡೆ ದುಂಬಿ ದೊರೆ ದೂರ ! ||

ದೊಂಬಿಯೆಬ್ಬಿಸದಿರೊ ಭೃಂಗರಾಜ..

ಜಗದರಿವಲಿದೆ ನಮ್ಮಿಬ್ಬರದು ಪಾತ್ರ.

ಬಾ ನೆರಳಿಗೆ ಬಾ ವಿಶ್ರಮಿಸೆ ತುಸುವೆ

ಕಬಳಿಸುವಾಲೋಚನೆ ಸಲ್ಲದು ಮಡಿವೆ ||

– ನಾಗೇಶ ಮೈಸೂರು

೦೬.೦೩.೨೦೧೮

(ಬೇಂದ್ರೆ ಬದುಕು-ಬರಹ ದಲ್ಲಿ ಹಾಕಿದ್ದ ಚಿತ್ರಕ್ಕೆ Vishalakshi NM ರವರು ಕವಿತೆ ಬರೆಯಲು ಪ್ರೇರೇಪಿಸಿದಾಗ ಹೊಸೆದ ಕವನ! ಧನ್ಯವಾದಗಳು ವಿಶಾಲಾಕ್ಷಿ ಮೇಡಂ)