01636. ಕೃಷ್ಣಭೂಪ, ರಾಧಾಲಾಪ..


01636. ಕೃಷ್ಣಭೂಪ, ರಾಧಾಲಾಪ..

____________________________________

ಕೃಷ್ಣ ಕೃಷ್ಣ ಕೃಷ್ಣಾ ಕೃಷ್ಣಾ..

ಕಂಡಿದ್ದೆ ನಿನ್ನ ತೊಟ್ಟಿಲಿಂದ

ತೊಟ್ಟಿಕ್ಕಿದ ತುಟಿ ಮೊಸರು

ಬೆಣ್ಣೆಯೊಳಗಿತ್ತು ನನ್ನುಸಿರು… || ೦೧ ||

ಹಿರಿಯಾಕೆ ಬರಿ ಐದೇ ವರ್ಷ

ನೀನ್ಯಾಕೆ ನೆಪವಾಗಿಸಿದೆ ?

ಹೌದೆಂದ ಪ್ರೀತಿಯ ಕರಡು

ಹಣ್ಣಾಗದೆ ಬದುಕೆಲ್ಲ ಬರುಡು…! || ೦೨ ||

ದಮನಿಸಿದೆ ದಾನವ ಸೈನ್ಯ

ನೀರಾಟದೆ ಗೋಪಿಕೆ ತಲ್ಲಣ

ನೀರಡಿಸಿ ಬಿಟ್ಟೆ ಬತ್ತಿಸಿ ಪ್ರೀತಿ

ಹೊತ್ತಿಸಿ ಆರಾಧನೆಯ ಪ್ರಣತಿ.. || ೦೩ ||

ಕೊನೆಗೂ ಹೊರಟೆ ತೊರೆದು..

ಜರಿಯಲಾರ? ಬರಿದು ನಾನು

ಗೆಳತಿಯ ಪಟ್ಟ ಕಟ್ಟಿ ವಿದಾಯ

ಕಂಬನಿ ತೊಟ್ಟ ಹೀರಿ ಸೆರಗಂಚು || ೦೪ ||

ಬಿಡಳವಳಬ್ಬೆ ಬೆನ್ನಲಿ ಕಾಡುತ್ತ

ಕಟ್ಟಿ ನಿನ್ನ ನೆನಪಿಗೊಂದು ಗಂಟು

ಗಂಡನೊಬ್ಬ ಪಾತ್ರಗಳು ಹಲವು

ಮಕ್ಕಳು ಮರಿ ಸಂಸಾರದ ಹುತ್ತ || ೦೫ ||

ಮುಗಿಯಿತೆಲ್ಲ ಮುದಿಯಾಯ್ತಲ್ಲಿ

ಹದಿಹರೆಯದ ಬಿಸುಪಿನ್ನು ಮನದೆ

ದಡ ಸೇರಿಸಿದೆನೆಲ್ಲರ ತರುವಾಯ

ಹುಡುಕಿದೆ ಸುಕ್ಕಾದ ಮೊಗ ನಿನ್ನ || ೦೬ ||

ವೇಷದೆ ನಿನ್ನರಮನೆ ಸೇರಿದರೇನು

ಕಾಣಲೆಂತೊ ಮಹಿಷಿಯರ ನಡುವೆ ?

ನನ್ನವನಲ್ಲದ ನನ್ನವನವ-ನಲ್ಲ ಕಠಿಣ

ಬೇಸರಿಸದಿರೊ ನನ್ನ ಹಾದಿ ಹಿಡಿದೆನೆ.. || ೦೭ ||

ಬಂದೆಯಲ್ಲ ಬೆನ್ನಟ್ಟಿ, ಬಿಡಲಿಲ್ಲ ನೀನು

ಕಾಡಿದ್ದೇನು ಪ್ರೀತಿಯೊ ಕಾರುಣ್ಯವೊ?

ನನ್ನಾರಾಧನೆ ನಿಲ್ಲದೊ ಬಿಡು ಚಿಂತೆ

ಕೊಟ್ಟುಬಿಡೊಂದು ಕೊನೆರಾಗ ನನದೆ.. || ೦೮ ||

ಏನೀ ಹೃದಯ ವಿದ್ರಾವಕ ಮುರಳಿನಾದ

ಯುಗಯುಗದ ನೋವೆಲ್ಲ ಕೊಳಲಿಂದ

ಹೊರಟಾಯ್ತೊ ಯಾಕೊ ಮುರುಟೋಯ್ತು?

ಮುಗಿವ ಮೊದಲೆ ಕೊಳಲೆ ಮುರಿದೊಯ್ತೊ ! || ೦೯ ||

ಕಟ್ಟಿದರೊ ಕಟ್ಟಿಹರೊ ರಂಜನೀಯ ಕಥೆ

ನಮ್ಮ ಹೊರತೆಲ್ಲಗು ನಮ್ಮ ಸ್ವಗತದ ಮಾತು

ನೀನಾದೆಯೊ ನಾನಾದೆನೊ ನಮ್ಮೊಳಗೈಕ್ಯ

ಯಾರೆಲ್ಲ ಹಾಡಿಹ ಚರಿತೆ ನಮ್ಮನಧಿಗಮಿಸುತ್ತ || ೧೦ ||

ಇದು ಯುಗ ಇದು ಕೊರಗು ಯಾರಿಗೆ ಪ್ರೀತಿ?

ಹೋಗಲಿ ಬಿಡು ಪಂಚಭೂತಗಳಿಗಾಗಲಿ ತೃಪ್ತಿ

ನಿನದೊಂದಿರಲಿ ಮೌನ ನನದೊಂದು ಮೋಹ

ತುಟಿಯಂಚಲಿ ನಕ್ಕು ಜಗವ, ಹೀಗೆ ವಂಚಿಸೋಣ ! || ೧೧ ||

– ನಾಗೇಶ ಮೈಸೂರು

೦೩.೦೩.೨೦೧೮

Advertisements

01635. ಒತ್ತಾಯಿಸದಿರೊ…


01635. ಒತ್ತಾಯಿಸದಿರೊ…

______________________________

ಏಕೆ ಬಿಡು ಗೊಂದಲದ ಮಾತು

ಅದು ತಾನೆ ಹೃದಯದ ಪೋಷಾಕು?

ಗಳಿಗೆಗೊಂದು ಗಂಟೆಗೊಂದು ಮನಸು

ಮುನಿಸೇಕೊ ಅದು ಚಂಚಲತೆಯ ಕೂಸು || ೦೧ ||

ನೀನೇನೊ ಕೇಳಿಬಿಟ್ಟೆ ಸುಲಭ

ಕೊಡಲೆಂತೊ ಜಾಣತನದ ಕಾಟ

ಮಾತಲ್ಲ ಬರಿ ಮಾತಿನ ಹುಸಿ ತೋಪು

ಕೊಟ್ಟ ಮೇಲೆ ತಪ್ಪಿ ಹಚ್ಚಲೆಂತೊ ಮತಾಪು ? || ೦೨ ||

ನೀನಿನ್ನೂ ನಿನ್ನೆ ಮೊನ್ನೆ ಗೆಳೆಯ

ಹೆತ್ತು ಹೊತ್ತು ಸಾಕಿಹರು ಗೊತ್ತಿದೆಯ?

ಡವ ಡವ ಎದೆ ಬಡಿತ ಮಿಡಿತ ಸೆಳೆದಾಟ

ಅತ್ತಲು ಇತ್ತಲು ತೊನೆಯುವ ಹೊಯ್ದಾಟ || ೦೩ ||

ಯಾಕೆ ನೀ ಹಾಕುತಿರುವೆ ಶರತ್ತು ?

ಜತೆ ಬಿಡಿಸಲಲ್ಲ ಬಂಧಿಸಲು ಬರಬೇಕು

ನಿ ಬೆಸೆವ ಬಂಧ ನನ್ನಾಚೆಗು ದಾಟಿರೆ ಚಂದ

ನೀರಲ್ಲಿ ನೀರಾಗಿ ಬೆರೆತ ಬದುಕೆ ಮಾಧುರ್ಯ || ೦೪ ||

ದೂರದಿರೊ ಹೆಚ್ಚಿಸಿದೆ ಮನ ಸದ್ದ

ದೂರಾಗುವ ಮಾತ ಯತ್ನವು ವಿಫಲ

ಕಂಬನಿ ಜಿನುಗಿಸದ ಆವರಣ ನೀನಾಗೆ

ಏಗುವೆನು ಹುಡುಕೆ ದಾರಿ ಸರಿಯುತ್ತರವ || ೦೫ ||

– ನಾಗೇಶ ಮೈಸೂರು

೦೩.೦೩.೨೦೧೮

(ಚಿತ್ರ: ಫೆಸ್ಬುಕ್ ಪೋಸ್ಟೊಂದರಿಂದ ತೆಗೆದುಕೊಂಡಿದ್ದು , ಯಾರ ಪೋಸ್ಟೆಂದು ಮರೆತುಹೋಗಿದೆ, ಕ್ಷಮಿಸಿ. ನೆನಪಿಸಿದರೆ ಹೆಸರು ಸೇರಿಸುತ್ತೇನೆ)

01634. ಬೆಳಗಾಯ್ತೇಳು..


01634. ಬೆಳಗಾಯ್ತೇಳು..

__________________________________

ಮುಂಜಾನೆ ಮಂಜಲಿ ಕೋಳಿ

ಕೂಗಾಯ್ತು ಬೆಳಗಾಯ್ತೇದ್ದೇಳಿ..

ಮಬ್ಬಿನ ಚಳಿ ಮುಸುಕ ಹೊದ್ದು

ಎದ್ದೇಳವ್ವ ಸಕ್ಕರೆ ನಿದ್ದೆ ಕಡಿದು.. || ೦೧ ||

ಚುಮುಚುಮು ಬೆಳಕಾಯ್ತ ಹರಿದು

ನುಂಗೈತೆ ಕತ್ತಲ ಸೊಕ್ಕ ಮುರಿದು

ಎದ್ದೇಳವ್ವ ತೊಳಕೊಂಡು ಮೋರೆ

ಅಂಬಲಿ ಗಂಜಿ ಒಲೆ ಹಚ್ಚಿಟ್ಟು ಬಾರೆ || ೦೨ ||

ಒಟ್ಟೂ ಭೂಸ ತೊಟ್ಟಿಯಲಿ ಕಲಸೆ

ಒಣಹುಲ್ಲಿನ ಪಿಂಡಿ ರಾಸಿಗೆ ಹಾಸೆ

ಗಂಗೇ ಗೌರಿ ಕಾವೇರಿ ಕರೆ ಕರೆದಲ್ಲೆ

ಕರುವಿನ ಹಾಲಷ್ಟು ಬಿಟ್ಟು ಕೆಚ್ಚಲಲೆ || ೦೩ ||

ಹೊಲದಾ ನೀರ ಹರಿಸಾನು ಅಪ್ಪಯ್ಯ

ದಣಿದು ಬೆವರುತ್ತ ಬರುವಾ ಸಮಯ

ಬಿರಬಿರನೆಲ್ಲ ಮುಗಿಸವ್ವಾ ದಿನಗೆಲಸ

ಮರಿಬ್ಯಾಡ ನಾಯಿಗು ಇಕ್ಕಷ್ಟು ತಿನಿಸ || ೦೪ ||

ಮೀಯೊ ಹೊತ್ತಾಗೋಯ್ತು ಕಾಣೆ

ತಾಳೊ ಬಂದೆ ಪೂಜೆಗೆ ಪರಶಿವನೆ

ಕಾಯಕವೆ ಕೈಲಾಸ ನಿನ ಕೈಂಕರ್ಯ

ಇರಲಪ್ಪಾ ಕರುಣೆ ನೆಮ್ಮದಿಯ ಕಾಯ || ೦೫ ||

– ನಾಗೇಶ ಮೈಸೂರು

೦೩.೦೩.೨೦೧೮

(ಈ ಚಿತ್ರ ಕನ್ನಡತಿ ಕನ್ನಡ ರವರ ಪೋಸ್ಟಿನಲ್ಲಿತ್ತು – ಅದನ್ನೆ ಬಳಸಿ ಹೆಣೆದ ಕವನ. ಧನ್ಯವಾದಗಳು ಮೇಡಂ🙏👍😊)