01643. ಮಿಥ್ಯಾವತಾರ..


01643. ಮಿಥ್ಯಾವತಾರ..

___________________________

ಸೂರ್ಯೋದಯ ಅಸ್ತಮಾನ

ದೈನಂದಿನ ಮಿಥ್ಯೋಪಾಖ್ಯಾನ

ಆದರೇಕೊ ಜಗವದರಲೆ ನಿಶ್ಚಿಂತ

ಇದುವೆ ಮಾಯೆಯ ವೃತ್ತಾಂತ ! ||

ದಿನಕರನೆಲ್ಲಿ ಪಯಣಿಸುವ ನಿತ್ಯ ?

ನೆಲೆ ನಿಂತಲ್ಲೆ ನಿಂತವನಾ ಸಾಮರ್ಥ್ಯ

ಮೂಡಿಸಲೆಂತವನ ಮೂಡಣದುದಯ?

ಮುಳುಗಿಸಲೆಂತವನ ಪಡುವಣದಸ್ತಮಯ ? ||

ಸುತ್ತುವುದವನ ಸುತ್ತ ಧರಣಿಯ ಗಿರಕಿ

ಜೂಟಾಟದ ಜೂಜಾಟದೆ ಋತು ಗಿರಾಕಿ

ತನ್ನೆ ಸುತ್ತುತ ಭೂಗೋಳ ಆವರ್ತನ ಬುಗುರಿ

ಪೂರ್ವಾರ್ಧ ಪಶ್ಚಿಮಾರ್ಧ ಸರದಿ ಮೊಗದೋರಿ ||

ರವಿಗಿಲ್ಲದುದಯ ಅಸ್ತಂಗತ ಸ್ಥಿತಿ ಬೊಗಳೆ

ಮೂಡಣ ಪಡುವಣಗಳ ಮುಳುಗೇಳಿಸೊ ಇಳೆ

ಪೂರ್ವೋದಯ ಪೂರ್ವಾಸ್ತಮಾನ ಮೊದಲರ್ಧ

ಪಶ್ಚಿಮೋದಯ ಪಶ್ಚಿಮಾಸ್ತಮಾನ ದ್ವಿತೀಯಾರ್ಧ ||

ಯಾವುದಿಲ್ಲಿ ಸತ್ಯಾವತಾರ? ಮಿಥ್ಯಾವತಾರ?

ಹುಡುಕದಿರು ಮೂಢಮನ ತರ್ಕದ ಲೆಕ್ಕಾಚಾರ

ಭುವಿಗನಿಸಿಕೆ ಹಗಲಿರುಳು ಮುಳುಗೆದ್ದವ ಸೂರ್ಯ

ಪೂರ್ವ ಪಶ್ಚಿಮ ಸರದಿ ದಿನರಾತ್ರಿ ನಿತ್ಯದ ರವಿ ಕಾರ್ಯ ||

– ನಾಗೇಶ ಮೈಸೂರು

೧೦.೦೩.೨೦೧೮

(Picture Source: https://goo.gl/images/TFSoUQ)