01668. ಯಾಕೊ ಈ ಋತು..


01668. ಯಾಕೊ ಈ ಋತು..

__________________________________

ಯಾಕೊ ಈ ಋತು, ಮಾತಿಗು ಸಿಗುತಿಲ್ಲ

ಅದೇಕೊ ಈ ಪ್ರಕೃತಿ, ಒಡನಾಟಕು ಒಲವಿಲ್ಲ

ಸಿಕ್ಕದೆಡೆ ಬದುಕಲಿ, ಮೂಡಲೆಂತು ಪ್ರೀತಿ ?

ನಿಸರ್ಗದ ಹೆಸರಲಿ, ಸರಿಯೇನೇ ಈ ರೀತಿ ? ||

ಅರಳಿದವೆ ಹೂಗಳು, ಗುಟ್ಟಲಿ ನಟ್ಟಿರುಳಲಿ

ಕಾಣಲೆಂತೆ ಕಂಗಳು, ನಿಶೆಯ ಕರಿ ನೆರಳಲಿ

ನಿನ್ನ ಸೆರಗಲೆಷ್ಟು ಬೆರಗು, ಯಾರಿಟ್ಟರೆ ಯಂತ್ರ ?

ಸಾಗಿಸಿರುವೆ ಪ್ರತಿ ಕ್ಷಣ, ನಿಭಾಯಿಸೆಲ್ಲ ಕುತಂತ್ರ! || ಯಾಕೊ ||

ಬಿಸಿಲಲ್ಲಿ ಬಾಡುವ, ಜಗದಲಿ ಬಿಸಿಲೆ ಮಳೆ

ಕುಡಿದದನೆ ಪಾಕವ, ಮಾಡುವ ನೀನೆಂಥ ಜಾಣೆ

ಬೆವರುತ ನಿಡುಸುಯ್ಯುತ, ಶಪಿಸುತಲೆ ಕಾಲ

ಕಳೆದುಹೋಯಿತೆ ಬೆಸುಗೆ, ದಣಿಸಲು ಬಿಸಿಲಿಲ್ಲ || ಯಾಕೊ ||

ಬಂತಲ್ಲೆ ಬಸವಳಿದ, ಭುವಿಗಿಕ್ಕುತ ಸುರಿಮಳೆ

ಒಣಗಿ ನಿಂತ ತರುನಿಕರ, ಮೊಗೆದು ಕುಡಿವ ವೇಳೆ

ನೋಡುತ ಮಾಡಿನ ಕಿಂಡಿ, ಕಳೆದುಹೋಯ್ತೆ ಗಳಿಗೆ

ನೆನೆಯದೆ ಹನಿ ನೆನೆದು ದನಿ, ಒದ್ದೆಮುದ್ದೆ ಕಚಗುಳಿಗೆ || ಯಾಕೊ ||

ಬೇಡವೆನ್ನಲೆಂತೆ ನಡುಕ, ಚಳಿ ತಾನೆ ಅಮಾಯಕ

ಅಪ್ಪಿದರೇನೊ ಹೊದಿಕೆ, ಬೆಚ್ಚಗಿರಿಸೊ ನೆನಪ ಪುಳಕ

ಅಚ್ಚರಿಯದನೆಲ್ಲ ಮೆಚ್ಚಿ, ಆಸ್ವಾದಿಸೆ ಬಿಡಬಾರದೆ ?

ಕಟ್ಟಿ ಕೂರಿಸೆ ಜಡ್ಡಿನ, ನೆಪದಲಿ ಕಾಲವೆಲ್ಲಾ ಬರಿದೆ ! || ಯಾಕೊ ||

ನೀನೊಬ್ಬಳೆ ನಿಜದಲಿ, ಪ್ರಕೃತಿಯೆ ನಿಸರ್ಗ ಸಹಜ

ಹೂವು ಕಾಯಿ ಹಣ್ಣು ಋತು, ಕಾಲಮಾನದ ತಾಜ

ಜೋಡಿಸಿಟ್ಟ ವಿಭುವವನೆ, ಮರೆತುಬಿಟ್ಟ ಗಡಿಯಾರ

ನೀನಿದ್ದೂ ಚಂಚಲಿನಿ, ಬೇಕಾದ ಋತುವ ತರುವ ವರ || ಯಾಕೊ ||

– ನಾಗೇಶ ಮೈಸೂರು

೨೪.೦೩.೨೦೧೮

(Picture source : internet social media)

01667. ರಾಮಾನಿಗೇನಿತ್ತನಿವಾರ್ಯ….?


01667. ರಾಮಾನಿಗೇನಿತ್ತನಿವಾರ್ಯ….?

——————————————–

ರಾಮನಿಗೇನಿತ್ತನಿವಾರ್ಯ ?

ಭೂಲೋಕ ವ್ಯಾಪಾರ..

ಅವತಾರವೆತ್ತಿದ ತರಹ

ಏನೀ ಹಣೆಬರಹ? || 01 ||

ಬಿಟ್ಟು ಕ್ಷೀರ ಸಾಗರ ಕಲ್ಪ

ಆದಿಶೇಷನ ಮೃದು ತಲ್ಪ

ನಾರುಮಡಿ ಉಟ್ಟು ವೇಷ

ಕಾಡಿನಲಿ ವನವಾಸ! || 02 ||

ಕಾಲೆತ್ತ ಬಿಡದ ನಲುಮೆ

ಕಾಲೊತ್ತಿ ವಕ್ಷಸ್ಥಳಸ್ಥೆ ಲಕುಮಿ

ಬಿಟ್ಟವಳಾಶೋಕವೃಕ್ಷದಡಿ

ಪಟ್ಟ ಪಾಡೇನು ಗಡಿಬಿಡಿ? || 03 ||

ಹೊತ್ತೊಯ್ಯಲು ಗರುಡ

ಕೈಂಕರ್ಯಕೆ ದೇವಗಣ ನಿಭಿಢ

ಯಾಕಪ್ಪ ಕಾಡಮೇಡಲೆದಾಟ

ನರವಾನರರೊಡನೇಕೊ ಕೂಟ? || 04 ||

ಯೋಗ ಮಾಯಾ ನಿದ್ರೆ

ಹರ ಬ್ರಹ್ಮ ಸಂವಾದ ಮುದ್ರೆ

ಬಿಟ್ಟೇಕೀ ಅವತಾರ ಶ್ರದ್ದೆ..

ಈ ಹುಲು ಮಾನವರ ಮಧ್ಯೆ !? || 05 ||

ಆ ಲೋಕ ಗಾಢಾವಲೋಕನ

ಮೋಕ್ಷಾನಂದ ಸಂಕೀರ್ತನ

ವಿಯೋಗದೊಬ್ಬಂಟಿಯ ಜೀವನ

ನಿನಗೇಕೀ ಇಹದಾ ಬಂಧನ? || 06 ||

ಹುಡುಕಿ ಕಾರಣ ರಾಮ

ಮರ್ಯಾದಾಪುರುಷೋತ್ತಮನಾ

ಪ್ರಶ್ನಾರ್ಥಕಗಳ ಪರಿಭ್ರಮಣ,

ರಾಮಾ, ಹೇಳೆಯಾ ಕಾರಣ? || 07 ||

————————————————————-

ನಾಗೇಶ ಮೈಸೂರು

————————————————————-

(ವರ್ಷಗಳ ಹಿಂದೆ ಬರೆದದ್ದು , ಸ್ವಲ್ಪ ತಿದ್ದಿದ್ದೇನೆ)

(ಚಿತ್ರ : https://kn.m.wikipedia.org/wiki/ರಾಮ)