01640. ಹೇಗವಳ ಸಂತೈಸಲಿ..?


01640. ಹೇಗವಳ ಸಂತೈಸಲಿ..?

_______________________________________

ಕೂಗಳತೆಯಲಿ ಕೂತಿಹಳವಳು

ಕೂಗಲವಳ, ಮುನಿಸದೇಕೊ ಕಾಣೆ

ಬೇಡದ ಮಾತು, ಬಂದು ಹೋಗುವ ನೆಂಟ

ಮಾತು ಸುಟ್ಟಾಗ ಮೌನ, ಏನೊ ಸೀದ ವಾಸನೆ || ೦೧ ||

ದುಮ್ಮಾನ ಹಮ್ಮು ಬಿಗುಮಾನ

ಬಿಗಿದ ಮೊಗ, ಸಡಿಲಾಗದದೇಕೊ

ಊದಿದ ವದನ , ಬರೆದು ಕಥೆ ವಿಸ್ತಾರ

ಧಾರಾವಾಹಿಯಾಗೆ ಕಾದು ಕಣ್ರೆಪ್ಪೆ ಕಟ್ಟೆ ಕಂಬನಿ || ೦೨ ||

ನೇಸರನುದಯದ ಕದಪಲಿ

ಬೇಸರದುದಯ ಕೆನ್ನೆ ಕೆಂಪು ತಾರೆ

ಅಸ್ತಮಯ ಮುಗುಳ್ನಗು, ಅಸ್ತ್ಯವ್ಯಸ್ತ ಸೆರಗು

ತುಟಿಯದುರಿ ಕಂಪನ, ದಂತ ಭಕ್ಷಿಸುತ ನಖ ವ್ಯಗ್ರ || ೦೩ ||

ಬಿಚ್ಚಿ ಚೆಲ್ಲಾಡಿದ ಕೇಶದ ಕ್ಲೇಷ

ಹಾರಾಡಿಸೆ ಬೆದರಿ, ತಂಗಾಳಿಯೂ ಸ್ತಬ್ಧ

ಅವಳುಸಿರಿಗೆದುರಾಡಲುಂಟೇನು ಪ್ರಕೃತಿ ?

ಸಂಭಾಳಿಸಲೆಂತವಳ, ಕೋಪಕೆಂತು ಉಪಶಮನ ? || ೦೪ ||

ಮುಟ್ಟಿ ಮಾತಾಡಿಸೆ ಭಯ ಭೀತಿ

ಮೆಟ್ಟುವ ಕೂರಲುಗ ನೋಟದಲಿರಿತ

ಕಾಯುವುದೇ ಸರಿ, ಮೊದಲಾಗಲಿಸುರಿಮಳೆ

ಮೋಡ ಕರಗಲಿ ಚದುರಲಿ ಸ್ವಚ್ಛ ಬಾನಾಗೇ ಸಂತೈಕೆ || ೦೫ ||

– ನಾಗೇಶ ಮೈಸೂರು

೦೭.೦೩.೨೦೧೮

(Picture source: Internet / social media received via FB friends – thank you 🙏👍😊)

Advertisements