01642. ಕೊಡತಿ..


01642. ಕೊಡತಿ..

_______________________

ಕೊಡತಿ ಕೊಡತಿ ಕೊಡತಿ

ಕೊಡಲೊಲ್ಲೆ ಅಂತ್ಯಾಕಂತಿ ?

ಕೊಡವಳ ದಿರುಸಲಿ ಚಂದ ಕಾಣ್ತಿ

ಕೊಡಲಿಲ್ಲದ ಮೇಲೆ ಕೊಡತಿ ಹೇಗಾಗ್ತಿ ? ||

ಹೊಲದೊಳಗೆ ಕಟ್ಟೈತೆ ನೀರು

ನೆಲದಾಗೆ ನೆಟ್ಟೈತೆ ಕಿರು ಪೈರು

ನೆಡದಾ ಪೈರು ನಡೆದಾಡೊ ತೇರು

ನೆಟ್ಟೈತೆ ನೋಟ, ಗುಟ್ಟಾಗಿ ಕಾಲ್ಕೆಸರು ! ||

ಕಟ್ಟೆತ್ತಿದುಡುಗೆ ತಳ ನೆನೆಯೋಲ್ಲ

ಎಡಗೈಲ್ಹಿಡಿದಂಚ ನಡೆ ಬರಿ ಡೌಲಾ ?

ಬಲಗೈ ಪೈರು ಬಿತ್ತೊ ಬಯಕೆ ಅಸಲು

ಬಾನ್ಮೋಡ ಛತ್ರಿ ಮಳೆಯಾಸೆ ಫಸಲು ! ||

ಚಂದಾ ಮೈಕಟ್ಟು, ಬಾಗೈತೆ ತಲೆಕಟ್ಟು

ಹೆಜ್ಜೆಯಿಕ್ಕಿ ಲಜ್ಜೆ ಮರೆ, ಶಿಸ್ತಾಗಿ ಕಣ್ಕಟ್ಟು

ನಡಿಗೆ ನವಿಲಾಟ, ಅವಳುಟ್ಟು ಬಳುಕು

ನೆಲಗನ್ನಡಿ ಪ್ರತಿಬಿಂಬ, ಒಡತಿ ಚಾಲೂಕು ! ||

ಯಾರಾದ್ರು ಆಗು ನೀ, ನಿಸರ್ಗದ ಫಸಲೆ

ನಿನದೀ ಸ್ವರೂಪ, ತೆರೆದಪರೂಪ ಶಾಲೆ

ಸಾಲಾಗಿ ದಂಡಲಿ,ಬರುವರು ತಣಿಯೆ

ಜೊತೆಯಾಗಲಿರೆ ಸಹಜ, ಕೃಷಿಗೆ ಮಣಿಯೆ ||

– ನಾಗೇಶ ಮೈಸೂರು

೦೬.೦೩.೨೦೧೮

(Picture source : Internet / social media received via Muddu Dear – thank you madam! 🙏👍😊)

01641. ಸ್ವರ್ಗ-ನರಕ


01641. ಸ್ವರ್ಗ-ನರಕ

________________________

ಸುರರಿದ್ದೆಡೆ ಸ್ವರ್ಗ

ನರರಿದ್ದೆಡೆ ನರಕ

ಭೂರ್ಭುವಃಸ್ವಃ ಸೂತ್ರ

ನಿರ್ಬಂಧಿಸುತವರರ ಪಾತ್ರ ||

ಲೋಕವಂತೆ ಏಳು

ಮೆಟ್ಟಿಲಂತೆ ಏಳು ಬೀಳು

ಜನ್ಮಾಂತರ ಜಾರು ಬಂಡೆ

ಹತ್ತಿಳಿಯುತ ಜನ ದಂಡು ದಂಡೆ ||

ಎಲ್ಲಾ ಗುಣಾವಗುಣ

ಆವರಣ ಕಟ್ಟಿದ ಬೇಲಿ

ಪಾರಾದರೊಂದು ಲೋಕದೆ

ಅನುಮತಿ ಮುಂದಣ ಸ್ತರದೆ ||

ಮೇಲ್ಹತ್ತುವವರು ಕೆಲವು

ಸುಳಿ ಸುತ್ತುವರಲ್ಲೆ ಹಲವು

ತ್ರಿಶಂಕುಗಳದೆ ಅಸಂಖ್ಯಾತ

ಕೆಳ ಬಿದ್ದವರದೆಷ್ಟೊ ಅನಂತ ||

ನರಸುರರದಿದೆ ಯಾತ್ರೆ

ಲೆಕ್ಕಿಸದೆ ನಡೆದ ಜಾತ್ರೆ

ಜನ್ಮಾಂತರ ಶೇಷ ಸೊಗ ನಾಮ

ಅವರವರ ಕರ್ಮದ ಪರಿಣಾಮ ! ||

– ನಾಗೇಶ ಮೈಸೂರು

೦೯.೦೩.೨೦೧೮

Pictures: ಸ್ವಯಂಕೃತಾಪರಾಧ (ಮೊಬೈಲಲಿ) 😛